ಜನನ : ೩೧-೧೦-೧೮೯೮ ರಂದು ತಮಿಳುನಾಡಿನಲ್ಲಿ

ಮನೆತನ : ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನ. ಪ್ರಸಿದ್ಧ ಗಾಯಕರೂ, ಕೀರ್ತನಕಾರರೂ ಆಗಿದ್ದ ಪಾಲ್ಘಾಟ ಅನಂತರಾಮ ಭಾಗವತರ ಹತ್ತಿರದ ಸಂಬಂಧಿಗಳು.

ಗುರುಪರಂಪರೆ : ಪ್ರಸಿದ್ಧ ಕೀರ್ತನ ಕಾರಿಣಿಯರಾದ ತಿರುವಾಂಕೂರು ಸೋದರಿಯರೆಂದೇ ಖ್ಯಾತರಾದ ಲಕ್ಷ್ಮಿ ಮತ್ತು ಸುಬ್ಬುಲಕ್ಷ್ಮಿ ಅವರ ಹರಿಕಥೆಗಳನ್ನು ಕೇಳಿ ಪ್ರಭಾವಿತರಾದವರು. ಅಲ್ಲದೆ ಶ್ರೀ ವೆಂಕಟ ವಿಠಲದಾಸರ ಅನುಗ್ರಹಕ್ಕೆ ಪಾತ್ರರಾದವರು. ಆ ಕಾಲಕ್ಕೆ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ.

ಕ್ಷೇತ್ರ ಸಾಧನೆ : ತಮಿಳು, ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಏಕಮುಖ ಪ್ರಭುತ್ವವನ್ನು ಹೊಂದಿದ್ದರು. ’ಏಕ ಸಂಧಿಗ್ರಾಹಿ’ಗಳು ಮನೆಯಲ್ಲಿ ಹಿರಿಯರು ಹಾಡುತ್ತಿದ್ದ ದೇವರ ನಾಮಗಳನ್ನು ಕೇಳಿ ಕೇಳಿ ಅದನ್ನು ಕೂಡಲೆ ಹಾಡಿ ತೋರಿಸಿಬಿಡುತ್ತಿದ್ದರು. ಹೀಗಾಗಿ ಇವರಿಗೆ ಕನ್ನಡ ದೇವರ ನಾಮಗಳು ಕಂಠಪಾಠ. ಸುಮಾರು ೧೯೨೩ ಇರಬಹುದು. ಬೆಂಗಳೂರಿನಲ್ಲಿ ತಿರುವಾಂಕೂರು ಸಹೋದರಿಯರಾದ ಲಕ್ಷ್ಮಿ – ಸುಬ್ಬಲಕ್ಷ್ಮಿ ಅವರ ಹರಿಕಥಾ ಮಾಲಿಕೆ ನಡೆಯುತ್ತಿತ್ತು. ಅವರ ಕಥೆಗಳನ್ನು ನಿತ್ಯವೂ ತಪ್ಪದೆ ಕೇಳಿ ಅದರ ಸಾರಗಳನ್ನೆಲ್ಲ ಸಂಗ್ರಹಿಸಿ ಮುಂದೆ ಗುರುಗಳನ್ನು ಅರಸುತ್ತಾ ಮನೆಬಿಟ್ಟು ಸಂಚಾರ ಆರಂಭಿಸಿದರು. ಹೀಗೆ ಸಂಚಾರದಲ್ಲಿರುವಾಗ ಮಣಿ ಮದುರೈ ಎಮಬಲ್ಲಿ ಬೆಳಗಿನ ಝಾವ ಗಂಗಾಸ್ನಾನ ಮಾಡುತ್ತಾ ಕನ್ನಡ ದೇವರ ನಾಮಗಳನ್ನು ಹಾಡಿಕೊಳ್ಳುತ್ತಿದ್ದರು. ಅಲ್ಲೇ ಪಕ್ಕದಲ್ಲಿದ್ದ ಹಿರಿಯರೊಬ್ಬರು ಅಚ್ಚ ತಮಿಳು ದೇಶದಲ್ಲಿ ಕನ್ನಡ ವಾಣಿಯನ್ನು ಕೇಳಿ ಇವರನ್ನು ಮಾತನಾಡಿಸಿದಾಗ ಇರು ಬೆಂಗಳೂರಿನವರೆಂದೂ ಗುರುಗಳನ್ನು ಅರಸುತ್ತ ತಿರುಗುತ್ತಿರುವುದಾಗಿ ಹೇಳಿದಾಗ ಮನೆಗೆ ಕರೆದೊಯ್ದು ತಮ್ಮಲ್ಲೇ ಆಶ್ರಯ ನೀಡಿ ತಮ್ಮಲ್ಲಿದ್ದ ದೇವರ ನಾಮಗಳ ಸಂಗ್ರಹಗಳನ್ನೆಲ್ಲಾ ಧಾರೆಯೆರೆದು ಅನುಗ್ರಹಿಸಿದರು. ಇವರೇ ಹೆಸರಾಂತ ದಾಸ ಪರಂಪರೆಗೆ ಸೇರಿದ ಶ್ರೀ ವೆಂಕಟೇಶ ವಿಠಲದಾಸರು. ಹೀಗೆ ಬಾಲಕನಿಗೆ ಗುರು ಅನುಗ್ರಹವು ಆಯಿತು. ಹರಿಕಥಾ ಕಲೆ ಸಿದ್ಧಿಸಿತು. ತಮಿಳು ನಾಡಿನಲ್ಲೆಲ್ಲಾ ಸಂಚರಿಸಿ ಕಥಾ ಕೀರ್ತನೆಗಳನ್ನು ಮಾಡುತ್ತಾ ಬೆಂಗಳೂರು ಕೃಷ್ಣ ಭಾಗವತರೆಂದೇ ಪ್ರಸಿದ್ಧರಾದರು. ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರರ ಮನೆಯ ಬಳಿಯೇ ಇದ್ದು ಅವರ ಆತ್ಮೀಯ ಗೆಳೆಯರಾಗಿದ್ದರು. ತಮಿಳುನಾಡು, ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ಪ್ರಮುಖವಾಗಿ ಮುಂಬೈ ನಗರಗಳಲ್ಲಿ ಇವರ ಪ್ರವಚನ, ಕಥಾ ಕೀರ್ತನಗಳು ವಿಫುಲವಾಗಿ ನಡೆದಿವೆ. ಬೆಂಗಳೂರಿನ ಶ್ರೀ ರಾಮ ಸೇವಾ ಮಂಡಲಿ, ಮಲ್ಲೇಶ್ವರಂ ಸಂಗೀತ ಸಭಾ ಮುಂತಾದ ಪ್ರತಿಷ್ಠಿತ ಸಭೆಗಳಲ್ಲಿ ಹಲವಾರು ವರ್ಷಗಳ ಕಾಲ ಕೀರ್ತನ ನಡೆಸಿದ ಹೆಗ್ಗಳಿಕೆ ಇವರದು. ರಾಮಚಂದ್ರನ ಪರಮ ಭಕ್ತರು ರೈಟ್ ಆನರೆಬಲ್ ಶ್ರೀನಿವಾಸಶಾಸ್ತ್ರೀ, ಚಕ್ರವರ್ತಿ ರಾಜಗೋಪಾಲಾಚಾರಿ ಮೊದಲಾದ ವಿದ್ವನ್ಮಣಿಗಳು ಇವರ ಕಥೆ ಕೇಳಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಬೆಂಗಳೂರಿನ ಗವೀಪುರ ಬಡಾವಣೆಯಲ್ಲಿ ಕುತ್ತಿಗೆಯಲ್ಲಿ ಮಾಲೆಯಂತೆ ತಾಳವನ್ನು ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿ, ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ಒಂದು ದಿನ ಇದ್ದಕ್ಕಿದ್ದಂತೆ ಕಣ್ಮರೆಯಾದರು ಹರಿಪಾದ ಸೇರಿದರು.

ಪ್ರಶಸ್ತಿ – ಪುರಸ್ಕಾರಗಳು : ಇವರಿಗೆ ಸಂದ ಗೌರವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ಅವರ ಇಳಿ ವಯಸ್ಸಿನಲ್ಲಿ ತನ್ನ ೧೯೮೬ – ೮೭ರ ಸಾಲಿನ ’ಕರ್ನಾಟಕ ಕಲಾತಿಲಕ’ ಪ್ರಶಸ್ತಿ ನೀಡಿ ಗೌರವಿಸಿತು.