ಘಟವಾದ್ಯಕ್ಕೂ ವೆಂಕಟರಾಂ ಅವರಿಗೂ ಅವಿನಾ ಭಾವವಿತ್ತೆನ್ನುವುದರಲ್ಲಿ ಅತಿಶಯವೇ ಇಲ್ಲ. ೧೦-೧-೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀಯುತರು ಶ್ರೀ ಕೆ.ಎಸ್‌. ಮಂಜುನಾಥನ್‌ ಅವರಲ್ಲಿ ಮೃದಂಗ-ಘಟ ವಾದ್ಯಗಳೆರಡರಲ್ಲೂ ಶಿಕ್ಷಣ ಪಡೆದರು. ಜೊತೆಗೆ ವಿಜ್ಞಾನ ವಿಷಯದಲ್ಲಿ ಪದವೀಧರನೂ ಆದರು. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸಿ ನಿವೃತ್ತರಾದರು. ಆನೂರ್ ಎಸ್‌. ರಾಮಕೃಷ್ಣ ಅವರಲ್ಲಿ ಗಾಯನದಲ್ಲೂ ಶಿಕ್ಷಣ ಪಡೆದಿದ್ದರು. ಇಂತಹ ಪ್ರತಿಭಾನ್ವಿತ ಶ್ರೀಯುತರ ದೂರ ದೃಷ್ಟಿಯುಳ್ಳವರೂ ಕರ್ನಾಟಕದ ಕಲಾವಿದರ ಬಗ್ಗೆ ಹಿರಿದಾದ ಕಳಕಳಿ ಹೊಂದಿದವರೂ ಆಗಿದ್ದರು. ಅದರ ಫಲವಾಗಿ ರೂಪ ತಳೆದುದೇ ಕರ್ನಾಟಕ ಗಾನ ಕಲಾ ಪರಿಷತ್ತು. ಸ್ಥಾಪಕ ಕಾರ್ಯದರ್ಶಿಯಾಗಿ ಅವರು ಪರಿಷತ್ತನ್ನು ಬೃಹತ್ತಾಗಿ ಬೆಳೆಸಿದರು. ನಂತರ ಲಯ ವಾದ್ಯಗಳ ಪ್ರಾಶಸ್ತ್ಯವನ್ನು ಸಾಮಾನ್ಯ ಜನರಿಗೂ ಮನವರಿಕೆ ಮಾಡಿಕೊಡುವ ಸಲುವಾಗಿ ತಾಳವಾದ್ಯ ಕಲಾ ಕೇಂದ್ರವನ್ನು ಸ್ಥಾಪಿಸಿದರು.

ಇವರು ಹುಟ್ಟು ಹಾಕಿದ ‘ಲಯ ಲಹರಿ’ ತಂಡ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಈ ತಂಡದಲ್ಲಿ ವೆಂಕಟರಾಂ ಅವರು ಗೆತ್ತು ವಾದ್ಯವನ್ನು ನುಡಿಸುತ್ತಿದ್ದರು. ಇವರ ಘಟ ವಾದನ ಸಹಕಾರದಲ್ಲಿ ಕ್ಷೇತ್ರದ ಎಲ್ಲಾ ಹಿರಿಯ-ಕಿರಿಯ ವಿದ್ವಾಂಸರೂ ಕಛೇರಿ ನೀಡಿದ್ದಾರೆ. ಹಿರಿಯರಿಂದ ಜ್ಞಾನಾರ್ಜನೆ ಮಾಡುವುದರಲ್ಲಿ, ಕಿರಿಯರನ್ನು ಪ್ರೋತ್ಸಾಹಿಸುವುದರಲ್ಲಿ ವಿಚಕ್ಷಣರಾಗಿದ್ದ ಶ್ರೀಯುತರು ಹಲವಾಋಉ ಸಂಶೋಧನಾತ್ಮಕ ಲೇಖನಗಳನ್ನೂ, ಉಪನ್ಯಾಸಗಳನ್ನೂ ನೀಡಿರುತ್ತಾರೆ. ದೇಶ-ವಿದೇಶಗಳ ಎಲ್ಲಾ ಪ್ರತಿಷ್ಠಿತ ಸಭೆಗಳಲ್ಲೂ ಸಮಾರಂಭಗಳಲ್ಲೂ, ಸಮ್ಮೇಳನಗಳಲ್ಲೂ ಭಾಗವಹಿಸಿದ ಕೀರ್ತಿಗೆ ಪಾತ್ರರು.

ರಾಜ್ಯದ ವಿಶೇಷ ಸಂಗೀತ ಪರೀಕ್ಷೆಗಳ ಪರಿಷ್ಕೃತ ಪಠ್ಯ ವಸ್ತುವುಳ್ಳ ಪಠ್ಯ ಪುಸ್ತಕದ ತಯಾರಿಕೆಯಲ್ಲಿ ಇವರ ಪಾತ್ರ ಹಿರಿದಾದುದು. ‘ಲಯ ಜ್ಞಾನ ವಿಶಾರದ’, ‘ಸಂಗೀತ ವಿದ್ಯಾನಿಧಿ’, ‘ಸಂಗೀತ ಕಲಾರತ್ನ’, ‘ತಾಳವಾದ್ಯ ಕಲಾ ತಿಲಕ’. ‘ಲಯ ಬ್ರಹ್ಮ’ ‘ಕರ್ನಾಟಕ ಕಲಾ ತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳನ್ನು ಗಳಿಸಿದ ಶ್ರೀಯುತರು ಸಂಗೀತ ಕಾರ್ಯಕ್ರಮವೊಂದರಲ್ಲಿ ಘಟವಾದ್ಯ ನುಡಿಸಿ ಕಾರ್ಯಕ್ರಮ ಮುಗಿದ ನಂತರವೇ ನಾದ ಬ್ರಹ್ಮನಲ್ಲಿ ಐಕ್ಯರಾದರು. ೨೦೦೩ರಲ್ಲಿ ಇವರು ಇಹವನ್ನು ತ್ಯಜಿಸಿದ ಮೇಲೂ ಮರಣೋತ್ತರ ಪ್ರಶಸ್ತಿಗಳು ಸಂದುದು ಇವರ ಜನಪ್ರಿಯತೆಗೂ, ಪಾಂಡಿತ್ಯಕ್ಕೂ ನಿದರ್ಶನವಾಗಿವೆ.