ದೊಡ್ಡ ಆಲದ ಮರ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೫ ಕಿ.ಮೀ

ಇದು ಬೆಂಗಳೂರಿನ ಪಶ್ಚಿಮಕ್ಕೆ ೨೫ ಕಿ.ಮೀ ದೂರದಲ್ಲಿದೆ. ಈ ವಿಶ್ವವಿಖ್ಯಾತ ದೊಡ್ಡ ಆಲದ ಮರದ ಬಿಳಲುಗಳು ಬೆಳೆದು ವಿಶಾಲಗೊಂಡಂತೆ, ೪ ಎಕರೆ ಪ್ರದೇಶಕ್ಕೆ ಹಬ್ಬಿಕೊಂಡು, ಸುಮಾರು ೪೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಡೀಕರ್ನಾಟಕದಲ್ಲಿ ಇದಕ್ಕಿಂತ ದೊಡ್ಡ ಮರ ಬೇರೊಂದಿಲ್ಲ. ಸಸ್ಯ ಶಾಸ್ತ್ರಜ್ಞರಿಗಂತೂ ಇದರ ಬೆಳವಣಿಗೆಯು ಕುತೂಹಲಕಾರಿಯಾಗಿ ಪರಿಣಮಿಸಿದ್ದು, ಇದರ ಮೂಲ ಬೇರನ್ನು ಇದುವರೆಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಪ್ರವಾಸಿಗರಿಗೆ ಸಮಯ ಕಳೆಯಲು ಸುಂದರ ತಾಣವಾಗಿದೆ. ಈ ಮರದ ಪರಿಸರದಲ್ಲಿ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ.

 

ಶ್ರೀ ರಾಮಲಿಂಗೇಶ್ವರ ಗುಹಾಂತರ ದೇವಾಲಯ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೫ ಕಿ.ಮೀ

ಪ್ರಸ್ತುತ ಗುಹಾಂತರ ದೇವಾಲಯವು ಬೆಂಗಳೂರು ಹೊರ ವಲಯದ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಸಮೀಪದಲ್ಲಿ ೧೫ ಕಿ.ಮೀ ಅಂತರದಲ್ಲಿದೆ. ಸುಮಾರು ೨ ಸಾವಿರ ವರ್ಷಗಳ ಹಿಂದಿನ ಪುರಾತನ ಇತಿಹಾಸವುಳ್ಳ ದೇವಸ್ಥಾನವಾಗಿದೆ. ಹಿಂದೆ ಈ ಪ್ರದೇಶವು ಕಾಡಿನಿಂದ ಆವೃತವಾಗಿದ್ದು, ಅಜ್ಞಾತ ಋಷಿಯೊಬ್ಬರು ಕಾಶಿಯಿಂದ ಬಂದು ತಪಸ್ಸನ್ನಾಚರಿಸಿ ಜೀವಂತ ಸಮಾಧಿಯಾದ ಐತಿಹ್ಯವಿದೆ. ನಂತರದ ದಿನಗಳಲ್ಲಿ ಶ್ರೀ ರಾಮಾನಂದ ಸ್ವಾಮೀಜಿಯವರು ಈ ಗುಹಾಂತರದಲ್ಲಿ ತಪಸ್ಸು ಮಾಡಿ/ಸಾಕ್ಷಾತ್ಕಾರ ಹೊಂದಿ ಭಕ್ತಾದಿಗಳ ನೆರವಿನಿಂದ ಈ ಪುಣ್ಯ ಕ್ಷೇತ್ರದ ಮಹಿಮೆ ಜನರಿಗೆ ತಿಳಿಯಪಡಿಸಿದರು. ಇಲ್ಲಿ ಈಶ್ವರ ಹಾಗೂ ನಂದಿ ವಿಗ್ರಹ ಆಕರ್ಷಣೀಯವಾಗಿವೆ. ಸುಮಾರು ೭೫ ವರ್ಷಗಳ ಹಿಂದೆ ಭಕ್ತಾದಿ ಮರಿಯಪ್ಪನವರಿಗೆ ಈಶ್ವರ ನಂದಿ ಸಿಕ್ಕ ಪ್ರಭಾವದಿಂದ ತಮ್ಮ ವೈಭವಪೂರಿತ ಜೀವನ ತೊರೆದು ಸತಿ ಪತಿಗಳಿಬ್ಬರೂ ಸನ್ಯಾಸ ದೀಕ್ಷೆ ಪಡೆದು ದೇವರ ಸೇವೆ ಮಾಡಿದರು. ನಿರ್ವಹಣೆ ಕಷ್ಟವಾದಾಗ ದೇವಸ್ಥಾನದ ಆಡಳಿತವನ್ನು ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಅರ್ಪಣೆ ಮಾಡಿರುತ್ತಾರೆ. ಈ ಮಾಹಿತಿಯನ್ನು ಅರ್ಚಕರಾದ ಶ್ರೀ ಪಾರ್ಥಸಾರಥಿಯವರು ನೀಡಿರುತ್ತಾರೆ.

 

ವೆಂಕಟಪ್ಪ ಕಲಾಭವನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಬೆಂಗಳೂರಿನಲ್ಲಿ ಬಹಳಷ್ಟು ಕಲಾಭವನಗಳಿವೆ. ಆದರೆ, ಕಲೆಯ ಪ್ರತಿಯೊಬ್ಬ ಆರಾಧಕರು ತಮ್ಮ ಗರಿಷ್ಠ ಮಾಹಿತಿ ತಿಳುವಳಿಕೆಗಾಗಿ ವೆಂಕಟಪ್ಪ ಕಲಾಭವನಕ್ಕೆ ತಪ್ಪದೇ ಸಂದರ್ಶನ ನೀಡಬೇಕು. ಕಲಾಮಂದಿರವು ಸುಮಾರು ೬೦೦ ವರ್ಣಚಿತ್ರಗಳನ್ನು ಹೊಂದಿದ್ದು, ವರ್ಷಪೂರ್ತಿ ಅವುಗಳನ್ನು ಪ್ರದರ್ಶಿಸಲಾಗುತ್ತದೆ. ಕೆಳಮಹಡಿಯಲ್ಲಿ, ಆಸ್ಥಾನ ಚಿತ್ರಕಲಾ ಕುಟುಂಬದಲ್ಲಿ ೧೮೮೭ ರಲ್ಲಿ ಜನಿಸಿದ ಕೆ.ವೆಂಕಟಪ್ಪ ಅವರ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಊಟಿ ಸರೋವರದ ಭವ್ಯ ದೃಶ್ಯಾವಳಿಗಳು, ಚರ್ಚ್-ಹಿಲ್-ಊಟಿಯ ದೃಶ್ಯ, ನೀಲಗಿರಿ ಬೆಟ್ಟಗಳು, ಕೊಡೈಕೆನಾಲ್, ಊಟಿಯಲ್ಲಿನ ಸೂರ್ಯೋದಯ ದೃಶ್ಯಗಳು ಇವೆ. ಮುಂಗಾರಿನ ಮೋಹಕ ವರ್ಣಚಿತ್ರಗಳು ಮತ್ತು ಇತರೆ ಅನೇಕ ರೇಖಾಚಿತ್ರಗಳನ್ನು ಒಳಗೊಂಡಂತೆ ಅವರ ಅನೇಕ ಕಲಾಚಿತ್ರಗಳ ಪ್ರದರ್ಶನ ಮಾಡಲಾಗಿದೆ.

ಮೊದಲ ಮಹಡಿಯಲ್ಲಿ ಎಂ.ಎಫ್. ಹುಸೇನ್, ವಾಸುದೇವ, ಹನುಮಯ್ಯ, ಹರಿರಾಂ, ರೇಖಾರಾವ್, ಯೂಸುಫ್ ಅರಾಕ್ಕಾಲ್ ಮತ್ತು ಎನ್.ಎಸ್.ಬೇಂದ್ರೆ ಅವರ ಕಲಾ ಚಿತ್ರಗಳನ್ನು ಇತರೆ ಅನೇಕ ಕಲಾವಿದರ ಚಿತ್ರಗಳೊಂದಿಗೆ ಪ್ರದರ್ಶಿತವಾಗುತ್ತಿವೆ. ಅದೇ ಮಹಡಿಯಲ್ಲಿ, ಒಂದು ಭಾಗವನ್ನು ಸಿ.ಪಿ.ರಾಜಾರಾಂ ಅವರ ವಿಶಿಷ್ಠ ಮರದ ಕೆತ್ತನೆಗಳಿಗಾಗಿ ಮೀಸಲಿರಿಸಲಾಗಿದೆ. ಈ ಮಹಡಿಯಲ್ಲಿ ಇತರೆ ಕಲಾಕಾರರ ಕಲಾಕಾರ್ಯಗಳನ್ನು ಸಹ ಪ್ರದರ್ಶಿಸಲಾಗುತ್ತದೆ ಎರಡನೇ ಮಹಡಿಯನ್ನು ವಿಶೇಷವಾಗಿ ಕೆ.ಕೆ.ಹೆಬ್ಬಾರರಿಗೆ ಮುಡಿಪಾಗಿಡಲಾಗಿದ್ದು ಅದನ್ನು ’ಹೆಬ್ಬಾರ ವಿಭಾಗ’ ಎಂದು ಹೆಸರಿಸಲಾಗುತ್ತಿದೆ. ವಸ್ತು ವಿಷಯಗಳ ಮೇಲಿನ ಅವರ ವರ್ಣಚಿತ್ರಗಳನ್ನು ವಾಯು, ಜಲ, ಪೃಥ್ವಿ, ಸಮುದ್ರತೀರ, ಆಕಾಶ, ನಾಗಮಂಡಲ, ಅಗ್ನಿ, ಅಂತಿಮಕ್ಷಣದರ್ಶನ ಮತ್ತು ಮರಣ (ಲಾಸ್ಟ್ ಗ್ಲಿಮ್‌ಸಸ್ ಅಂಡ್ ಡೆತ್) ಎಂಬ ಶೀರ್ಷಿಕೆಗಳಿಂದ ಕರೆಯಲಾಗಿದೆ. ಈ ಕಲಾಭವನವು ಜಪಾನ್, ಬಾಲಿಗ್ರಾಮ, ತಾಯಿ ಮತ್ತು ಇವೇ ಮುಂತಾದವುಗಳ ಮೇಲಿನ ಅನೇಕ ಬಗೆಯ ರೂಪಚಿತ್ರಗಳನ್ನು ಸಹ ಒಳಗೊಂಡಿದೆ.

 

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಟಾಟಾ ಇನ್ಸ್ಟಿಟ್ಯೂಟ್) :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೫ ಕಿ.ಮೀ

ಸುಪ್ರಸಿದ್ಧ ಭಾರತೀಯ ಸಂಸ್ಥೆ ಟಾಟಾದ ಮೂಲ ವ್ಯಕ್ತಿಯೊಬ್ಬರಾದ ಜೆಮ್‌ಶೆಡ್‌ಜೀ ಟಾಟಾ ಅವರ ನೆನಪಿನಲ್ಲಿ ೧೯೦೯ ರಲ್ಲಿ ನಿರ್ಮಿಸಲಾದ ವಿಜ್ಞಾನ ಸಂಸ್ಥೆ. ಅತ್ಯಾಧುನಿಕ ‘ವಿಜ್ಞಾನ ಮತ್ತು ತಂತ್ರಜ್ಞಾನ’ ವಿಷಯಗಳಲ್ಲಿ ಅಧ್ಯಯನ ಮಾಡುವ ಈ ಸಂಸ್ಥೆಗೆ ಈಗ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ ಎಂದು ಹೆಸರು.

ಭಾರತದ ಪ್ರಮುಖ ವಿಜ್ಞಾನಿಗಳು ರೂಪುಗೊಂಡ ನೆಲೆಯಾಗಿದೆ. ಇಲ್ಲಿ ಸಂಶೋಧನೆ ಮಾಡಿದಂತಹ ಹಲವಾರು ವಿಜ್ಞಾನಿಗಳಲ್ಲಿ ನೋಬಲ್ ಪುರಸ್ಕೃತ ಭೌತಶಾಸ್ತ್ರ ವಿಜ್ಞಾನಿ ಸಿ.ವಿ.ರಾಮನ್ ಹಾಗೂ ಬಾಹ್ಯಾಕಾಶ ವಿಜ್ಞಾನಿ ವಿಕ್ರಂಸಾರಾಬಾಯಿ ಸೇರಿರುತ್ತಾರೆ. ಇಲ್ಲಿನ ಪ್ರತಿಷ್ಠಿತ ಕಟ್ಟಡಗಳು ಪ್ರತಿಷ್ಠಿತ ಪರ್ಷಿಯನ್ ವಿಶಿಷ್ಠ ಶೈಲಿಯೊಂದಿಗೆ ಅಲಂಕೃತಗೊಂಡಿದ್ದು, ಮಧ್ಯದ ಪ್ರಾಂಗಣವು ಸಾಂಪ್ರದಾಯಿಕ ಯುರೋಪಿಯನ್ ಶೈಲಿಯಲ್ಲಿದೆ. ಫೆಬ್ರವರಿ ೧, ೧೯೧೧ ರಂದು ಮುಖ್ಯ ಕಟ್ಟಡದ ಶಂಕುಸ್ಥಾಪನೆಯನ್ನು ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್‌ರವರಿಂದ ನೆರವೇರಿಸಲಾಗಿತ್ತು. ಸಂಸ್ಥೆಯು ವಿಜ್ಞಾನದ ವಿವಿಧ ಶಾಖೆಗಳ ೨೨ ವಿಭಾಗಗಳನ್ನು ಹೊಂದಿದ್ದು, ೨,೬೮,೦೦೦ ಸಂಖ್ಯೆಯನ್ನು ಮೀರಿದ ಪುಸ್ತಕ ಭಂಡಾರವನ್ನು ಹೊಂದಿದೆ.

ಬಹುಶಃ ಭಾರತದಲ್ಲೆ ಪದವಿಯೇತರ ಉನ್ನತ ವ್ಯಾಸಂಗ, ಅಧ್ಯಯನ ಸಂಶೋಧನೆಗಳಿಗೆ ಇಂತಹ ಬೇರೊಂದು ಸಂಸ್ಥೆ ಇರಲಾರದು. ಇದು ಬೆಂಗಳೂರಿನ ಭಾರತದ ಹೆಮ್ಮೆ. ಇಲ್ಲಿ ಒಳಗೆ ಸಂಚರಿಸಲು ಅನುಮತಿ ಬೇಕಾಗಿಲ್ಲ. ಆದರೆ ಸಂಸ್ಥೆಯ ಕಟ್ಟಡಗಳೊಳಗೆ ಪ್ರವೇಶಿಸಿ, ಅಲ್ಲಿನ ಕಾರ್ಯವೈಖರಿ ಗಮನಿಸಲು ಅನುಮತಿ ಪಡೆಯಬೇಕಾಗುತ್ತದೆ.

 

ಆಧುನಿಕ ಚಿತ್ರನಗರಿ (ಇನ್ನೋವೇಟಿವ್ ಫಿಲಂ ಸಿಟಿ) :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೩೦ ಕಿ.ಮೀ

ಆಧುನಿಕ (ಇನ್ನೋವೇಟಿವ್) ಚಿತ್ರ ನಗರಿಯು (ಪಿಎಫ್‌ಸಿ) ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿಡದಿಯ ಹತ್ತಿರ ಬೆಂಗಳೂರಿನಿಂದ ೩೦ ಕಿ.ಮೀ ದೂರದಲ್ಲಿ ಸ್ಥಾಪಿತವಾಗಿದೆ. ಸುಮಾರು ೫೦ ಎಕರೆಪ್ರದೇಶ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇದು ಬಹುಶಃ ಒಂದು ಅತಿದೊಡ್ಡ ಮನೋರಂಜನಾ ಕೇಂದ್ರ. ಥೀಮ್‌ಪಾರ್ಕ್ ಮತ್ತು ಇನ್ನೂ ಹೆಚ್ಚಿನ ಬಗೆಯವುಗಳನ್ನು ಒಳಗೊಂಡಿದೆ. ಚಿತ್ರನಗರಿಯು ಜಗತ್‌ಪ್ರಸಿದ್ಧ ’ನಂಬಿದರೆ ನಂಬಿ ಬಿಟ್ಟರೆ ಬಿಡಿ’ ವಸ್ತು ಸಂಗ್ರಹಾಲಯ, ಲೂಯಿಸ್ ಟುಸ್ಸಾಡ್ ವ್ಯಾಕ್ಸ್ ವಸ್ತು ಸಂಗ್ರಹಾಲಯ, ಫನ್‌ಪ್ಲೆಕ್ಸ್, ಅಕ್ವೋಕಿಂಗ್‌ಡಮ್ (ಕೃತಕ ಬೀಚ್), ಡೈನೋಸರ್ ವರ್ಲ್ಡ್, ಕಾರ್ಟೂನ್ ಸಿಟಿಗಳಂತ ಸಣ್ಣ ಮನೋರಂಜನಾ ಕೇಂದ್ರಗಳನ್ನು ಹೊಂದಿದೆ. ಇದು ಗೋಕಾರ್ಟಿಂಗ್ ವಲಯ, ಒಂದು ಸಣ್ಣ ಗಾಲ್ಫ್ ಮೈದಾನ, ಒಂದು ೪ ಅಡಿ ವರ್ತುಲ ನಾಟಕ ಶಾಲೆ (ಆಂಫಿಥಿಯೇಟರ್), ಪಳೆಯುಳಿಕೆ ವಸ್ತು ಸಂಗ್ರಹಾಲಯಗಳನ್ನು ಸಹ ಹೊಂದಿದೆ.

 

ಅಲಸೂರಿನ ಸೋಮೇಶ್ವರ ದೇವಾಲಯ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ :೬ ಕಿ.ಮೀ

ಬೆಂಗಳೂರಿನ ಹಲವು ಪ್ರಮುಖ ದೇವಾಲಯಗಳಲ್ಲೊಂದು. ಅಲಸೂರಿನ ಹೃದಯ ಭಾಗದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯವು ದಕ್ಷಿಣ ದ್ರಾವಿಡ ಶೈಲಿಯಲ್ಲಿ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿಸಲಾಗಿದ್ದು ವಾಸ್ತುಶಾಸ್ತ್ರಕ್ಕನುಸಾರವಾಗಿದೆ. ಹಲವು ಸೂಕ್ಷ್ಮ ಕೆತ್ತನೆಗಳಿರುವ ಕಂಬಗಳಿವೆ. ಮುಂಭಾಗದಲ್ಲಿ ಎತ್ತರವಾದ ಶಿಖರವಿದೆ. ಸುತ್ತಲೂ ಪೌಳಿ ಗೋಡೆ ನಿರ್ಮಿಸಲಾಗಿದೆ.

೧೫ನೇ ಶತಮಾನದಲ್ಲಿ ನಿರ್ಮಿತವಾಗಿ ಸುಮಾರು ೫೦೦ ವರ್ಷಗಳ ಕಾಲದ ಇತಿಹಾಸವಿದೆ. ಇಂದಿಗೂ ದಿನವಹಿ ಸಾವಿರಾರು ಭಕ್ತರು ದೇವರ ದರ್ಶನಾರ್ಥಿಗಳಾಗಿ ಬರುತ್ತಾರೆ.

ದೇವಾಲಯದ ಸಮುಚ್ಚಯದಲ್ಲಿ (೧) ಶ್ರೀ ಸೋಮೇಶ್ವರ (೨) ನಂಜುಂಡೇಶ್ವರ (೩) ಭೀಮೇಶ್ವರ (೪) ಅರುಣಾಚಲೇಶ್ವರ (೫) ಚಂದ್ರ ಮೌಳೇಶ್ವರರ ಪಂಚಲಿಂಗಗಳಿವೆ. ಜೊತೆಗೆ ನಂದಿಯೂ ಇದೆ. ಇದರೊಂದಿಗೆ ಗೋಪುರ ಗಣಪತಿ ಸುಬ್ರಹ್ಮಣ್ಯೇಶ್ವರ, ನರ್ತನ ಗಣಪತಿ, ವೆಳ್ಳಿದೇವರು, ದಕ್ಷಿಣಮೂರ್ತಿ, ಬ್ರಹ್ಮಸರಸ್ವತಿ, ದುರ್ಗಾದೇವಿ, ಆಂಜನೇಯ, ನವಗ್ರಹಗಳಿವೆ. ೬೪ ನಾಯನ್ ಮಾರ್ಗಗಳಿವೆ.

ಪ್ರತೀ ಚೈತ್ರಮಾಸದ ಶುದ್ಧ ಹುಣ್ಣಿಮೆಯಂದು ಶ್ರೀ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಇದಾದ ಒಂದು ವಾರದಲ್ಲಿ ಅಮ್ಮನವರ ಪುಷ್ಪ ಪಲ್ಲಕ್ಕಿ ಉತ್ಸವ-ನವರಾತ್ರಿಯಲ್ಲಿ ೧೦ ದಿನಗಳ ವಿಶೇಷ ಪೂಜೆ, ಸೋಮವಾರ ಕಾರ್ತಿಕ ಮಾಸದಲ್ಲಿ, ಧನುರ್ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಒಟ್ಟಾರೆ ಭಾರತೀಯ ದ್ರಾವಿಡ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಸಂಸ್ಕೃತಿಯ ಕೇಂದ್ರವಾಗಿದೆ.

 

 ಹೆಸರಘಟ್ಟ ಫಾರಂ :

 

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೮ ಕಿ.ಮೀ

ರಾಷ್ಟ್ರೀಯ ಹೆದ್ದಾರಿ ೪ ರ ೮ನೇ ಮೈಲಿಗಲ್ಲು ತಿರುವಿನಿಂದ ೧೦ ಕಿ.ಮಿ ಕ್ರಮಿಸಿದರೆ ಹೆಸರುಘಟ್ಟ ತಲುಪುವಿರಿ. ಇದು ಪ್ರಶಾಂತವಾದ ಮತ್ತು ೧೨೨೪ ಎಕರೆ ಪ್ರದೇಶವನ್ನೊಳಗೊಂಡ ಬೃಹತ್ ಕೆರೆಯ ತಾಣವಾಗಿದೆ. ಇಲ್ಲಿಯ ತಂಗಾಳಿ ಚುಂಬನವು ರೋಮಾಂಚನವಾದ ಅನುಭವವನ್ನು ನೀಡುತ್ತದೆ. ಈ ಸ್ಥಳವು ಕೋಳಿ ಸಾಕಾಣಿಕೆ, ಪಶುಸಂಗೋಪನೆ, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟಂತೆ ಸಂಶೋಧನೆ ಮತ್ತು ಅಭಿವೃದ್ಧಿ ಫಾರ್ಮ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರಸಿದ್ಧವಾದ ಇಂಡೋ-ಡ್ಯಾನಿಷ್ ಡೈರಿ ಪ್ರಾಜೆಕ್ಟ್, ಡೆನ್ಮಾರ್ಕ್ ಸರ್ಕಾರದ ಸಹಭಾಗಿತ್ವದೊಂದಿಗೆ ಸುಂದರವಾದ ಸರೋವರದ ಹತ್ತಿರ ಸ್ಥಾಪಿತವಾಗಿದ್ದು, ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪ್ರತಿವರ್ಷವು ವಿಶಿಷ್ಠವಾದ ವಿಹಾರ ನೌಕೆ ಕ್ಲಬ್‌ನ ವತಿಯಿಂದ ಪಂದ್ಯಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

 

ಟಿಪ್ಪು ಸುಲ್ತಾನ್ ಅರಮನೆ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೪ ಕಿ.ಮೀ

ಟಿಪ್ಪುಸುಲ್ತಾನ್ ಕೋಟೆಯು ಬೆಂಗಳೂರಿನಲ್ಲಿನ ಸಿಟಿ ಮಾರುಕಟ್ಟೆಗೆ ತೀರ ಹತ್ತಿರದಲ್ಲಿದೆ ಮತ್ತು ಇದನ್ನು ೧೫೩೭ ರಲ್ಲಿ ಕೆಂಪೇಗೌಡರು ನಿರ್ಮಾಣ ಮಾಡಿದರು.ಕೋಟೆಯ ಕೆತ್ತನೆಯು ವಾಸ್ತುಶಿಲ್ಪದಿಂದ ಕೂಡಿದ್ದು, ಕ್ಲಿಷ್ಟಸ್ವರೂಪದ್ದಾಗಿದ್ದು, ಇಸ್ಲಾಮಿಕ್ ಶೈಲಿಯಲ್ಲಿದೆ. ಈ ಕೋಟೆಯೊಳಗೆ ಒಂದು ಗಣಪತಿಯ ದೇವಸ್ಥಾನವಿದ್ದು, ಅದು ಉತ್ತಮ ಸ್ಥಿತಿಯಲ್ಲಿ ಉಳಿದುಕೊಂಡು ಬಂದಿರುವುದು ಈ ಕೋಟೆಯ ಪ್ರಮುಖ ಅಂಶವಾಗಿದೆ. ಕೋಟೆಯ ಒಳಭಾಗದಲ್ಲಿ ಟಿಪ್ಪುಸುಲ್ತಾನನ ಅರಮನೆ ಇದ್ದು, ಅದನ್ನು ೧೭೯೦ ರಲ್ಲಿ ನಿರ್ಮಾಣ ಮಾಡಲಾಯಿತು.

ಈ ಅರಮನೆಯನ್ನು ಚೌಬೀನೆ ಮರದಿಂದ (ಟೀಕ್‌ವುಡ್) ನಿರ್ಮಿಸಲಾಗಿದೆ. ಟಿಪ್ಪುಸುಲ್ತಾನ್ ಈ ಅರಮನೆಯನ್ನು ಬೇಸಿಗೆಯ ವಾಸಕ್ಕಾಗಿ ಬಳಸುತ್ತಿದ್ದನು. ಇದು ಎರಡು ಮಹಡಿಯಿಂದ ಕೂಡಿದ ಅರಮನೆಯಾಗಿದ್ದು, ಬಾಲ್ಕನಿಗಳೂ, ಕಮಾನುಗಳು ಮತ್ತು ಕಂಭಗಳಿಂದ ಕೂಡಿದೆ. ಈ ಅರಮನೆಯ ಇಕ್ಕೆಲಗಳಲ್ಲೂ ಸುಂದರ ಆಕರ್ಷಕ ತೋಟಗಳನ್ನು ನಿರ್ಮಿಸಲಾಗಿದ್ದು, ಮುಖ್ಯದ್ವಾರಕ್ಕೆ ಪ್ರವೇಶ ಕಲ್ಪಿಸುತ್ತದೆ. ಅರಮನೆಯಲ್ಲಿ, ಗೋಡೆಗಳು ಹಾಗೂ ಒಳಮಾಳಿಗೆಗಳನ್ನು ಸುಂದರವಾದ ಹೂಗಳ ವಿನ್ಯಾಸಗಳೊಂದಿಗೆ ಅಲಂಕರಿಸಿ ಕೆತ್ತಲಾಗಿದೆ. ಮೇಲು ಅಂತಸ್ತಿನ ಪೂರ್ವ ಮತ್ತು ಪಶ್ಚಿಮದ ಬಾಲ್ಕನಿಗಳನ್ನು ಟಿಪ್ಪುಸುಲ್ತಾನನು ರಾಜ್ಯದ ವ್ಯವಹಾರಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಬಳಸುತ್ತಿದ್ದನು.

ಟಿಪ್ಪು ಸುಲ್ತಾನನ ಮರಣಾ ನಂತರ, ಬ್ರಿಟಿಷರು ಈ ಅರಮನೆಯನ್ನು ಸಚಿವಾಲಯವನ್ನಾಗಿ ೧೮೬೭ ರವರೆಗೂ ಬಳಸಿದರು.

 

ರಾಮಕೃಷ್ಣ ಮಠ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೮ ಕಿ.ಮೀ

೧೯೦೫ ರಲ್ಲಿ ಸ್ವಾಮಿ ವಿವೇಕಾನಂದ ಅವರನ್ನು ಬೆಂಗಳೂರಿನ ನಾಗರಿಕರು ಸಂದರ್ಶಿಸಿದಾಗ ‘ವೇದಾಂತಸಮಾಜ’ವೆಂದು ಕರೆಯಲಾಗುವ ಸಮಾಜವೊಂದನ್ನು ಸ್ಥಾಪಿಸಿದರು. ಶ್ರೀರಾಮಕೃಷ್ಣ ಅವರ ಅನುಯಾಯಿ ಸ್ವಾಮಿ ರಾಮಾಕೃಷ್ಣಾನಂದ ಅವರು, ಬಸವನಗುಡಿ ಪ್ರದೇಶದಲ್ಲಿ ಶ್ರೀರಾಮಕೃಷ್ಣ ಅವರಿಗಾಗಿ ಒಂದು ಖಾಯಂ ಕೇಂದ್ರವನ್ನು ಸ್ಥಾಪಿಸಿದರು. ೧೯೦೯ ರಲ್ಲಿ ಮಠದ ನಿರ್ಮಾಣ ಕಾರ್ಯವು ಪೂರ್ಣಗೊಂಡಿತು. ಪೂಜ್ಯ ಮಾತೆಯವರಾದ ಶ್ರೀ ಶಾರದಾದೇವಿ ಅವರು, ಇಲ್ಲಿ ೧೯೧೧ ರಲ್ಲಿ ಒಂಬತ್ತು ದಿನಗಳು ತಂಗಿದ್ದರು. ದಿನನಿತ್ಯವೂ ಶ್ರೀ ಶ್ರೀರಾಮಕೃಷ್ಣ ಅವರನ್ನು ಪೂಜಿಸುವುದು, ಭಜನೆಗಳು, ಧಾರ್ಮಿಕ ಪ್ರವಚನಗಳು ಮತ್ತು ಧಾರ್ಮಿಕ ಪುಸ್ತಕಗಳ ಪ್ರಕಟಣೆ ಇವೇ ಮುಂತಾದ ಕಾರ್ಯಗಳು ಮಠದ ಕಾರ್ಯಚಟುವಟಿಕೆಗಳಲ್ಲಿ ಒಳಗೊಂಡಿವೆ.