ಇಂದಿರಾ ಗಾಂಧಿ ನೃತ್ಯ ಕಾರಂಜಿ

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಬೆಂಗಳೂರಿನ ಪ್ಲಾನೆಟೋರಿಯಂನ ಎದುರಿನ ವಿಶಾಲ ಉದ್ಯಾನವನದಲ್ಲಿ ಈ ಸಂಗೀತ ನೃತ್ಯ ಕಾರಂಜಿ ಇದೆ. ಸಮಯ ಸಂಜೆ ೭.೦೦ ರಿಂದ ೭.೩೦ರ ವರೆಗೆ ಮತ್ತು ೮.೦೦ ರಿಂದ ೮.೩೦ರ ವರಗೆ ಇಲ್ಲೂ ಪ್ರವೇಶ ದರ ಇದೆ. ಸೋಮವಾರ ಮತ್ತು ಎರಡನೆಯ ಮಂಗಳವಾರ ರಜಾ ದಿನ. ಇದೊಂದು ಪ್ರವಾಸಿಗರಿಗೆ ಅತ್ಯಂತ ಸುಂದರ ಅನುಭವದ ತಾಣ. ಮೈಸೂರಿನ ಬೃಂದಾವನ ನೀಡುವ ಸಂತಸವನ್ನು ಇದು ನೀಡುತ್ತದೆ.

 

ಸ್ವಾತಂತ್ರ್ಯ ಉದ್ಯಾನವನ:

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಉದ್ಯಾನವನವು ಹಳೆಯ ಸೆಂಟ್ರಲ್ ಜೈಲ್ ಇದ್ದ ಜಾಗದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಕಾರಾಗೃಹವನ್ನು ಸ್ವಾತಂತ್ರ್ಯ ಉದ್ಯಾನವನವನ್ನಾಗಿ ಪರಿವರ್ತಿಸಿದೆ. ಕಾರಾಗೃಹದ ಕಲ್ಪನೆಯನ್ನು ಕನಸಿನಲ್ಲೂ ಎಣಿಸದಿರುವಂತ ಜನಸಾಮಾನ್ಯರಿಗೆ ಕಾರಾಗೃಹದ ರೂಪುರೇಷೆಯ ಕಲ್ಪನೆ ಮೂಡಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರ-ಹೋರಾಟ ಬಲಿದಾನ ಮತ್ತು ಪ್ರಕೃತಿ ಸೌಂದರ್ಯ ಒದಗಿಸುವ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ೨೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಉದ್ಯಾನವನದಲ್ಲಿ ಬಂದಿಗಳ ಆರು ಸಾಲು ಮನೆಗಳನ್ನು ಮತ್ತು ಎತ್ತರವಾದ ಗೋಡೆಗಳ ವಿನ್ಯಾಸವನ್ನು ಒಳಗೊಂಡಿದೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಮನರಂಜನಾ ಸ್ಥಳವನ್ನಾಗಿ ಮಾರ್ಪಡಿಸಲಾಗಿದೆ. ಹಳೆಯ ಕಟ್ಟಡದಲ್ಲಿ ಹಲವಾರು ಬದಲಾವಣೆ ಮಾಡಿದ್ದಾಗ್ಯೂ, ಕಾವಲುಗೋಪುರ ಮತ್ತು ಮುಖ್ಯ ವಾರ್ಡ್‌ನ್‌ನ ಕಛೇರಿಯನ್ನು ಹಳೆಯ ನೆನಪಿಗಾಗಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉದ್ಯಾನವನದಲ್ಲಿ ವಸ್ತು ಸಂಗ್ರಹಾಲಯ, ಕೆಫೆ ಪಾಯಿಂಟ್, ವಾಟರ್ ಟವರ್ ಹಾಗೂ ಕಾರಂಜಿ, ಆಧುನಿಕ ನೀರಿನ ಕೊಳ, ಮನರಂಜನಾ ಸ್ಥಳಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನವನವನ್ನು ಇನ್ನೂ ಅಭಿವೃದ್ಧಿಗೊಳಿಸುವ ಯೋಜನೆಯಿದೆ.

 

ಸೇಂಟ್ ಬೆಸಿಲಿಕಾ ಚರ್ಚ್ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨ ಕಿ.ಮೀ

೧೮೧೬ ರಲ್ಲಿ ಕಲ್ಕತ್ತಾದ ಬಿಷಪ್‌ರವರಿಂದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಉದ್ಘಾಟನೆಗೊಂಡಿತು. ಈ ಚರ್ಚ್ ಶಿವಾಜಿನಗರದಲ್ಲಿದೆ. ಆದರೆ ಇದನ್ನು ಗಾಥಿಕ್ ಶೈಲಿಯ ಚರ್ಚ್ ಆಗಿ ಮುಂದೆ ಪರಿವರ್ತಿಸಲಾಗಿದೆ. ೧೮೦೦ ಇಸವಿಯಷ್ಟು ಹಿಂದೆಯೇ ಫ್ರಾನ್ಸ್ ನಗರದಿಂದ ಆಮದು ಮಾಡಲ್ಪಟ್ಟ, ಗಾಜಿನ ಹಾಳೆಗಳಿಂದ ಇದರ ವಿಶಾಲಕಿಟಕಿಗಳು ಅಲಂಕೃತವಾಗಿವೆ. ಪೋಪ್‌ಜಾನ್‌ಪಾಲ್-೬ ಇವರಿಂದ ಆದೇಶಿಸಲ್ಪಟ್ಟು ೧೮೭೩ರಲ್ಲಿ ಭಾರತದಲ್ಲಿ ೬ನೆಯದಾಗಿ ಈ ಚರ್ಚ್‌ಗೆ ‘ಬೆಸಿಲಕಾ’ದ ಸ್ಥಾನ ದೊರೆಯಿತು.

 

ಗವಿಗಂಗಾಧರೇಶ್ವರ ದೇವಾಲಯ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧೦ ಕಿ.ಮೀ

ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವ ಗವಿಗಂಗಾಧರೇಶ್ವರ ದೇವಾಲಯವನ್ನು ೧೬ನೇ ಶತಮಾನದಲ್ಲಿ ಕೆಂಪೇಗೌಡರು ಗವಿಪುರಂನಲ್ಲಿನ ನೈಸರ್ಗಿಕ ಗುಹೆಯಲ್ಲಿ ನಿರ್ಮಿಸಿರುತ್ತಾರೆ. ರಾಮರಾಯನಿಂದ ಐದು ವರ್ಷಗಳ ಸೆರೆವಾಸವನ್ನು ಅನುಭವಿಸಿ ಬಿಡುಗಡೆಯಾದ ಸ್ಮರಣಾರ್ಥವಾಗಿ ಈ ದೇವಾಲಯವನ್ನು ಕೆಂಪೇಗೌಡನು ನಿರ್ಮಿಸಿದನೆಂಬ ಐತಿಹ್ಯವಿದೆ. ಸೂರ್ಯ ಮತ್ತು ಚಂದ್ರರನ್ನು ಪ್ರತಿನಿಧಿಸುವ ಚಿತ್ರಾಕಾರಗಳಿಗೆ ಬೆಂಬಲವಾಗಿ ಇಲ್ಲಿ ಎರಡು ಬೃಹತ್ ಗಾತ್ರದ ಗ್ರಾನೈಟ್ ಕಲ್ಲುಗಳ ಸ್ತಂಭಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಇಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯನ ಕಿರಣಗಳು ನಂದಿಯ ಕೊಂಬುಗಳ ನಡುವಿನಿಂದ ಹಾಯ್ದು ಗುಹೆಯ ಒಳಗಿರುವ ಶಿವಲಿಂಗದ ಮೇಲೆ ನೇರವಾಗಿ ಬೀಳುವ ವಿಸ್ಮಯಕಾರಿ ಘಟನೆ ನಡೆಯುತ್ತದೆ.

 

ಮಹಾತ್ಮಗಾಂಧಿ ಉದ್ಯಾನವನ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨ ಕಿ.ಮೀ

ಮಹಾತ್ಮಗಾಂಧಿ ಉದ್ಯಾನವನವು ಎಂ.ಜಿ.ರಸ್ತೆಯ ಪ್ರಾರಂಭದಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಆಟದ ಮೈದಾನದ ಪಕ್ಕದಲ್ಲಿ ಸ್ಥಾಪಿತವಾಗಿದ್ದು, ಉತ್ತಮ ನಿರ್ವಹಣೆಯಿಂದ ಕೂಡಿದ ಸಾರ್ವಜನಿಕ ಉದ್ಯಾನವನವಾಗಿದೆ. ಋತುಕಾಲಿತ ’ಹೂ’ ಗಳಿಂದ ಮತ್ತು ಗಿಡಗಳಿಂದ ಕೂಡಿದ ಇದು ಬಹು ಆಕರ್ಷಕ ಉದ್ಯಾನವನವಾಗಿದೆ. ಉದ್ಯಾನವನದ ಮಧ್ಯಭಾಗದಲ್ಲಿ ಮಹಾತ್ಮಗಾಂಧಿಯ ಪ್ರತಿಮೆ ಇದೆ. ಇದು ರಾತ್ರಿಯ ವೇಳೆಯಲ್ಲಿ ದೀಪಾಲಂಕಾರದ ಸೊಬಗಿನಲ್ಲಿ ಬಹುಸುಂದರವಾಗಿ ಕಾಣುತ್ತದೆ.

 

ಗಾಂಧಿಭವನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೩ ಕಿ.ಮೀ

ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ ಬೆಂಗಳೂರಿನ ಗಾಂಧಿ ಭವನವು ಸಮರ್ಪಿತವಾಗಿದೆ. ಗಾಂಧೀಜಿಯವರ ಜೀವನ ಹಾಗೂ ಬೋಧನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಭವನವನ್ನು ನಿರ್ಮಿಸಲಾಗಿದ್ದು, ಆಗಿನ ಭಾರತದ ರಾಷ್ಟ್ರಪತಿಯವರಾಗಿದ್ದ ಡಾ|| ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಗಾಂಧಿ ಸ್ಮಾರಕ ನಿಧಿಯಾಗಿ ಈ ಭವನವನ್ನು ಪ್ರಾರಂಭಿಸಲಾಗಿದೆ. ಗಾಂಧೀಜಿಯವರ ಬಾಲ್ಯದಿಂದ ಕೊನೆಯ ದಿನದವರೆಗೆ ನಡೆದ ಘಟನೆಗಳ ಸಮಗ್ರ ಚಿತ್ರಗಳು ಹಾಗೂ ಸ್ವತಃ ಗಾಂಧೀಜಿಯವರಿಂದ ಬರೆದ ಪತ್ರದ ನಕಲುಗಳನ್ನು ಇಲ್ಲಿ ನೋಡಬಹುದು.

 

ಲುಂಬಿನಿ ಉದ್ಯಾನವನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧೦ ಕಿ.ಮೀ

ಲುಂಬಿನಿ ಉದ್ಯಾನವನವು ಮನೋರಂಜನೆಗಾಗಿ ನಿರ್ಮಿತವಾದ ಉದ್ಯಾನವನವಾಗಿದ್ದು, ಹೆಬ್ಬಾಳದ ಮೇಲು ಸೇತುವೆಯ ಹತ್ತಿರದಲ್ಲಿನ ವರ್ತುಲ ಹೊರವಲಯ ರಸ್ತೆಯ ಬದಿಯಲ್ಲಿ ನಿರ್ಮಿತವಾಗಿದೆ. ಉದ್ಯಾನವನವು ನಾಗವಾರ ಕೆರೆಯ ಮುಂಭಾಗದಲ್ಲಿದೆ ಮತ್ತು ದೋಣಿ ವಿಹಾರವನ್ನು ಹೊಂದಿದೆ. ಉದ್ಯಾನವನದಲ್ಲಿನ ಇತರೆ ಆಕರ್ಷಣೆಗಳೆಂದರೆ – ತರಂಗಕೊಳ, ಮಕ್ಕಳ ಆಟದ ಪ್ರದೇಶ, ಮಕ್ಕಳ ಸವಾರಿ, ಬಂಗೀ ನೆಗೆತ, ಆಹಾರ ಮಳಿಗೆಗಳು ಇತ್ಯಾದಿಗಳು ಇವೆ.

 

ಫನ್‌ವರ್ಲ್ಡ್ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೫ ಕಿ.ಮೀ

 ಫನ್‌ವರ್ಲ್ಡ್ ಡಿಸ್ನಿಲ್ಯಾಂಡ್ ಮಾದರಿಯದ್ದಾಗಿದೆ. ಈ ಉದ್ಯಾನದಲ್ಲಿ ವ್ಯಾಪಕ ಸವಾರಿ ಅನುಭವವನ್ನು ಪಡೆಯಬಹುದು. ಅಟ್‌ಲಾಂಟಾ ರೋಲರ್ ಕೋಸ್ಟರ್, ಕ್ಯಾಟರ್‌ಪಿಲ್ಲರ್ ಸವಾರಿ ಮತ್ತು ಸುತ್ತು ರೈಲು ಸವಾರಿಗಳನ್ನು ಹೊಂದಿದ್ದು ಪ್ರೇಕ್ಷಕರಿಗಾಗಿ ನಿರ್ದಿಷ್ಟ ವಿನೋದವನ್ನು ಒದಗಿಸುತ್ತದೆ. ಎಲ್ಲ ವಯಸ್ಸಿನ ಮಕ್ಕಳಿಗೂ ಸಾಕಷ್ಟು ವಿಸ್ಮಯ ಮೂಡಿಸುವಲ್ಲಿ ಈ ಫನ್ ವರ್ಲ್ಡ್ ಯಶಸ್ವಿಯಾಗಿದೆ.

 

ಸರ್ಕಾರಿ ಮತ್ಸ್ಯಾಲಯ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಮೀನುಗಳು ಎಲ್ಲಾ ಜಲಚರಗಳಲ್ಲೇ ಅತ್ಯಂತ ಮನಮೋಹಕವೂ ಸುಂದರವೂ ಆಗಿದೆ. ಇವುಗಳ ಶೋಭೆ ಮತ್ತು ಸೌಂದರ್ಯವನ್ನು ಇತಿಹಾಸ ಪೂರ್ವದಿಂದಲೂ ಪೂರ್ವಿಕರು ಗುರುತಿಸಿದ್ದಾರೆ. ಮತ್ಸ್ಯಾಲಯ ಹವ್ಯಾಸವು ಶತಮಾನಗಳ ಹಿಂದೆಯೇ ಚೀನಾದಲ್ಲಿ ಪ್ರಾರಂಭಗೊಂಡು, ಇಂದು ಪ್ರಪಂಚದಾದ್ಯಂತ ಬೃಹದಾಕಾರವಾಗಿ ಬೆಳೆದು, ಒಂದು ಜನಪ್ರಿಯವಾದ ಹವ್ಯಾಸಗಳಲ್ಲೊಂದಾಗಿದೆ. ವಿವಿಧ ಬಗೆಯ ಮತ್ತು ಬಣ್ಣಗಳ ಮೀನುಗಳು ಮತ್ತು ವಿವಿಧ ಜಾತಿಯ ಜಲಸಸ್ಯಗಳಿಂದ ಅಲಂಕೃತವಾದ ಅಕ್ವೇರಿಯಂ ಮನೆಗೆ ಅಂದವನ್ನೂ, ಮನಕ್ಕೆ ಸಂತೋಷವನ್ನುಂಟುಮಾಡುವುದಲ್ಲದೆ, ಇದರ ನಿರ್ವಹಣೆಯು ಅತ್ಯಂತ ಉತ್ಸಾಹದಾಯಕವೂ ಆಗಿರುತ್ತದೆ.

ಉದ್ಯಾನ ನಗರವೆಂದು ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಸುಂದರವಾದ ಮತ್ತು ಪ್ರವಾಸಿಗರನ್ನು ಆಕರ್ಷಿಸುವಂತಹ ಪ್ರೇಕ್ಷಣೀಯ ಸ್ಥಳಗಳಲ್ಲಿ, ಕಬ್ಬನ್ಉದ್ಯಾನವನದಲ್ಲಿರುವ ಸರ್ಕಾರಿ ಮತ್ಸ್ಯಾಲಯವೂ ಒಂದು. ‘ಪ್ರವಾಸಿಗರದ್ವೀಪ’ವೆಂದು ಹೆಸರಾಗಿರುವ ಕಬ್ಬನ್ ಉದ್ಯಾನವನದ ಕಂಗೊಳಿಸುವ ಹಸಿರು ಸಸ್ಯರಾಶಿಯ ಮಧ್ಯೆ ಈ “ವಜ್ರಾಕೃತಿಯ” ಮತ್ಸ್ಯಾಲಯ ತಲೆ ಎತ್ತಿ ನಿಂತಿದ್ದು, “ ಓ ಪ್ರವಾಸಿಗನೇ, ಕೈ ಮುಗಿದು ಒಳಗೆ ಬಾ ನೋಡು ಈ ಮನಮೋಹಕ ಮತ್ಸ್ಯರಾಶಿಯನ್ನು” ಎಂದು ಆಹ್ವಾನಿಸುವಂತಿದೆ. ಈ ಮತ್ಸ್ಯಾಲಯವು “ಸಿಹಿ ನೀರಿನ” ಮತ್ಸ್ಯಾಲಯವಾಗಿದ್ದು, ಇಲ್ಲಿ ಅತ್ಯಧಿಕ ಸಂಖ್ಯೆಯ ವಿವಿಧ ಜಾತಿಯ, ವಿವಿಧ ಬಣ್ಣಗಳ ಸ್ವದೇಶಿ ಮತ್ತು ವಿದೇಶಿ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದೆ.

೧೯೮೩ರ ಆಗಸ್ಟ್ ಎಂಟರಂದು ಪ್ರಾರಂಭವಾದ ಈ ಮತ್ಸ್ಯಾಲಯವು ವಿವಿಧೋದ್ದೇಶ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಸಾರ್ವಜನಿಕ ಮತ್ಸ್ಯಾಲಯಗಳು ಶೈಕ್ಷಣಿಕ ಮತ್ತು ಮನರಂಜನೆಯ ಮೌಲ್ಯಗಳಾಗಿವೆ.

ಮತ್ಸ್ಯಾಲಯದ ಕಟ್ಟಡವು ಮೂರು ಅಂತಸ್ತಿನದ್ದಾಗಿದ್ದು, ಇದರ ನೆಲಮಹಡಿಯಲ್ಲಿ ಕಛೇರಿಯನ್ನು, ಮೊದಲನೆ ಹಾಗೂ ಎರಡನೆ ಮಹಡಿಯಲ್ಲಿ ವಿವಿಧ ಆಕಾರದ ಮತ್ಸ್ಯಾಗಾರಗಳನ್ನೊಳಗೊಂಡ ಮತ್ಸ್ಯಾಲಯವನ್ನು ಹೊಂದಿದೆ. ಈ ಮತ್ಸ್ಯಾಲಯವು ದೇಶದಲ್ಲೇ ಎರಡನೇ ಅತಿ ದೊಡ್ಡ ಮತ್ಸ್ಯಾಲಯವೆಂದು ಖ್ಯಾತಿಯನ್ನು ಪಡೆದಿದೆ.