ಮುತ್ಯಾಲ ಮಡುವು :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೪೦ ಕಿ.ಮೀ

ಬೆಂಗಳೂರಿನಿಂದ ೪೦ ಕಿ.ಮೀ ಹಾಗೂ ಆನೇಕಲ್ ನಿಂದ ೪ ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲ ಮಡುವು. ೯೦ ಮೀಟರ್ ಎತ್ತರದಿಂದ ನೀರು ಮುತ್ತಿನರೀತಿಯಲ್ಲಿ ಬಂಡೆಗಳ ಮೇಲೆ ಬೀಳುವ ದೃಶ್ಯ ನೋಡಲು ನಯನ ಮನೋಹರ. ಪರ್ಲ್‌ವ್ಯಾಲಿ ಎಂದೂ ಸಹ ಕರೆಯಲಾಗುವ ಇಲ್ಲಿನ ಹಸುರಿನ ಕಣಿವೆಯು ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೂ ನೋಡಲು ಅತ್ಯಂತ ಸುಂದರವಾಗಿರುತ್ತದೆ. ಮುತ್ಯಾಲಮಡುವಿನ ಸೌಂದರ್ಯ ಸವಿಯಬೇಕಾದರೆ ಮೆಟ್ಟಿಲು ಇಳಿದು ಕೆಳಭಾಗಕ್ಕೆ ಹೋಗಬೇಕು. ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಶಂಖುಚಕ್ರ ಜಲಪಾತ ಮತ್ತೊಂದು ಆಕರ್ಷಣೆ.

 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೫ ಕಿ.ಮೀ

ಬೆಂಗಳೂರಿನಿಂದ ಕೇವಲ ೨೫ ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ, ೭೪೩ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ನಾಡಿನಂಚಿನ ಕಾಡಾಗಿದೆ. ಇಲ್ಲಿಯ ಸಸ್ಯಹಾರಿ ಪ್ರಾಣಿಗಳ ಸಫಾರಿ, ಜಂಗಲ್ ಲಾಡ್ಜ್, ಹುಲಿ ಸಿಂಹಗಳ ಸಫಾರಿ, ಕರಡಿ ಸಫಾರಿ, ಹಾವುಗಳ ಪಾರ್ಕ್ ಮಕ್ಕಳಿಗೆ ಅತ್ಯಾಕರ್ಷಣೀಯ. ಇಲ್ಲಿಯ ಆನೆ ಸವಾರಿ ಸಹ ಮಕ್ಕಳಿಗೆ ಅಚ್ಚುಮೆಚ್ಚು. ಜೈವಿಕ ಉದ್ಯಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಚಿಟ್ಟೆ ಪಾರ್ಕ್‌ನ ಪಾತರಗಿತ್ತಿಗಳು ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಚಿಟ್ಟೆಯಾಕಾರದಲ್ಲಿ ನಿರ್ಮಿಸಿರುವ ಇಲ್ಲಿಯ ಕಟ್ಟಡದ ಒಳಗೆ ಚಿಟ್ಟೆಯ ಜೀವನ ಚರಿತ್ರೆಯ ವಿವಿಧ ದೃಶ್ಯಾವಳಿಗಳು ಕಂಡುಬರುತ್ತವೆ. ಪಾರ್ಕಿಗೆ ಪ್ರತಿ ಮಂಗಳವಾರ ರಜೆ ಇರುತ್ತದೆ. ಬನ್ನೇರುಘಟ್ಟದಲ್ಲಿರುವ ಪ್ರಾಚೀನ ಚಂಪಕಧಾಮಸ್ವಾಮಿ ದೇವಾಲಯ ಹಾಗೂ ಬೆಟ್ಟದ ಮೇಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ೧೨ನೇ ಶತಮಾನಕ್ಕೂ ಹಿಂದಿನವು. ಚಾರಣ ಪ್ರಿಯರಿಗೆ ಇಲ್ಲಿಯ ಬೆಟ್ಟ ಉತ್ತಮ ಆಕರ್ಷಣೆ.

 

ಪ್ರಶಾಂತಿ ಕುಟೀರ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೮ ಕಿ.ಮೀ

ಆನೇಕಲ್-ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿಗಣಿಯಿಂದ ೪ ಕಿ.ಮೀ ದೂರದಲ್ಲಿ ಕಲ್ಲುಬಾಳು ಸಮೀಪ ಇರುವ ಪ್ರಶಾಂತಿ ಕುಟೀರವು ದೇಶ-ವಿದೇಶಗಳ ಜನರನ್ನು ಆಕರ್ಷಿಸುವ ಅಂತರರಾಷ್ಟ್ರೀಯ ಯೋಗ ಕೇಂದ್ರವಾಗಿದೆ. ಇಲ್ಲಿನ ಮಂಗಳಮಂದಿರ, ವಿವೇಕಾನಂದರ ಪ್ರತಿಮೆಗಳು ನೋಡುವಂತಿವೆ. ಯೋಗದ ಬಗ್ಗೆ ಹಲವಾರು ತರಬೇತಿ ಹಾಗೂ ಕೋರ್ಸ್‌ಗಳು ಇಲ್ಲಿ ನಡೆಯುತ್ತವೆ. ಇತ್ತೀಚೆಗೆ ಈ ಕೇಂದ್ರವನ್ನು ವಿವೇಕಾನಂದ ಯೋಗ ವಿಶ್ವವಿದ್ಯಾಲಯವೆಂದು ಮಾನ್ಯ ಮಾಡಲಾಗಿದೆ. ಇಲ್ಲಿಯ ವಾತಾವರಣ ಹೆಸರಿಗೆ ತಕ್ಕಂತೆ ಪ್ರಶಾಂತವಾಗಿದೆ.

 

ಶ್ರೀ ಪಾರ್ಶ್ವ ಸುಶೀಲಧಾಮ್ (ಜೈನ್ ದೇವಾಲಯ) :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೦ ಕಿ.ಮೀ


ರಾಷ್ಟ್ರೀಯ ಹೆದ್ದಾರಿ -೭ರ ಅತ್ತಿಬೆಲೆ-ಚಂದಾಪುರ ನಡುವಿನ ಗುಡ್ಡಹಳ್ಳಿ ಕ್ರಾಸ್ ಬಳಿ ಇರುವ ಜೈನ್ ಮಂದಿರ ಆಕರ್ಷಣೀ‌ಯವಾಗಿದೆ. ಸುಮಾರು ೭ ಕೋಟಿ ರೂಗಳವೆಚ್ಚದಲ್ಲಿ ಸಂಪೂರ್ಣ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಿರುವ ಮಂದಿರವು ಆಕರ್ಷಕ ಕುಸುರಿ ಕೆಲಸದಿಂದ ಕೂಡಿದೆ. ದೇವಾಲಯದೊಳಗಿನ ಶಿಲಾಬಾಲಕಿಯರು, ಆನೆಗಳು ಇತರೆ ಮೂರ್ತಿಗಳು ಕಣ್ಮನ ಸೆಳೆಯುವಂತಿವೆ.

 

ಜೆ.ಪಿ.ಉದ್ಯಾನವನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೭ ಕಿ.ಮೀ

ಜಯಪ್ರಕಾಶ ನಾರಾಯಣರ ಹೆಸರಿನಲ್ಲಿರುವ ಈ ಉದ್ಯಾನವನವು ಜೆ.ಪಿ. ಪಾರ್ಕೆಂದೆ ಹೆಸರುವಾಸಿ. ಈ ಉದ್ಯಾನವನವನ್ನು ಬೆಂಗಳೂರು ನಗರ ಪಾಲಿಕೆಯು ಅಭಿವೃದ್ಧಿಪಡಿಸಿದ್ದು, ಯಶವಂತಪುರದ ಮತ್ತಿಕೆರೆಯ ಹತ್ತಿರ ನಿರ್ಮಿಸಲಾಗಿದೆ. ಇದೊಂದು ನಿಸರ್ಗ ಪ್ರಿಯರ ಮನೋಹರ ಹಸಿರ್ದಾಣವಾಗಿದೆ. ಈ ಉದ್ಯಾನವನದ ವಿಶೇಷವೆಂದರೆ ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ದೃಶ್ಯಾವಳಿವೆ. ಹಾಗೂ ಕಾಡಿನ ಮಾದರಿಯನ್ನು ನಿರ್ಮಿಸಿ ಅದರಲ್ಲಿ ಕೋತಿಗಳು, ಹುಲಿಗಳ ಪ್ರತಿಮೆಗಳಿವೆ. ಹಕ್ಕಿ ಪಕ್ಷಿಗಳ ವಾಸಸ್ಥಳವಾಗಿದೆ. ಈ ಉದ್ಯಾನವನದಲ್ಲಿ ಬೆಳೆದ, ಬೆಳೆಯುತ್ತಿರುವ ಮರಗಳಿಂದಾಗಿ ಕಾಡಿನ ಪರಿಸರವನ್ನು ಕಾಣಬಹುದು. ರಾಜ್‌ಕುಮಾರ್ ರವರ ಹೆಸರಿನಲ್ಲೊಂದು ಥಿಯೇಟರ್ ನಿರ್ಮಿಸಲಾಗುತ್ತಿದೆ.

ಅಲ್ಲದೆ ಉದ್ಯಾನವನದಲ್ಲಿ ಸುಂದರ ಮರಗಳು ಹಾಗೂ ಅಲಂಕಾರಿಕ ವೃಕ್ಷ ಜಾತಿ ಮರಗಳಿವೆ. ಸುಂದರ ಕೆರೆಯೊಂದಿಗೆ ಕುಟುಂಬದವರೆಲ್ಲ ಕೆರೆಯ ದಡದಲ್ಲಿ ಕುಳಿತು ಉದ್ಯಾನವನದ ಸೌಂದರ್ಯ ವೀಕ್ಷಿಸಬಹುದಾಗಿದೆ. ರಜಾದಿನ ಹಾಗೂ ವಿಶೇಷ ದಿನಗಳಲ್ಲಿ ನಿಸರ್ಗ ಪ್ರಿಯರು ಕಾಲಕಳೆಯಲು ಪ್ರಶಸ್ತ ಸ್ಥಳವಾಗಿದೆ. ಉದ್ಯಾನವನದ ಹಿಂಭಾಗದಲ್ಲಿ ಕುಳಿತು ಯಶವಂತಪುರ ರೈಲು ನಿಲ್ದಾಣ ಹಾಗೂ ರೈಲುಗಳ ಆಗಮನ/ನಿರ್ಗಮನ ವೀಕ್ಷಿಸಬಹುದು.

ಉದ್ಯಾನವನದ ಮುಖ್ಯ ವಿಶೇಷವೆಂದರೆ ಸದಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಲಾಗಿದೆ.

 

ಶಿವನ ವಿಗ್ರಹ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧೦ ಕಿ.ಮೀ

೬೫ ಅಡಿ ಎತ್ತರವಿರುವ ಶಿವ ವಿಗ್ರಹವು ವಿಮಾನ ನಿಲ್ದಾಣ ರಸೆ  ಬಳಿಯಿರವ ಕೆಂಪ್‌ಫೋರ್ಟ್ ಹಿಂಬದಿಯಲ್ಲಿದೆ . ಶಿವನನ  ಪದ್ಮಾಸನ ಅಥವಾ ಕಮಲದ ಮೇಲೆ ಕುಳಿತಿರುವಂತೆ ನಿರ್ಮಿಸಲಾಗಿದೆ. ಇದು ಭಾರತದಲ್ಲಿಯೇ ಶಿವನ ಬೃಹತ್ ವಿಗ್ರಹವಾಗಿದೆ. ಇದರ ಹಿನ್ನಲೆಯನ್ನು ಕೈಲಾಸವೇ ಧರೆಗಿಳಿದು ಬಂದಂತೆ ಭಾಸವಾಗುವ ರೀತಿಯಲ್ಲಿ ಚಿತ್ರಿಸಲಾಗಿದೆ. ಗಂಗಾ ನದಿಯು ಅಡ್ಡಲಾಗಿರುವ ಕಲ್ಲುಗಳಿಂದ ನುಸುಳಿ ಹರಿಯುವಂತೆ ಕಾಣುತ್ತದೆ. ವಿಗ್ರಹವು ರಾತ್ರಿಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಗಾಂಭೀರ್ಯವಾಗಿ, ನಯನ ಮನೋಹರವಾಗಿ ಕಾಣುತ್ತದೆ. ಇಡಿಯಾಗಿ ಈ ಸ್ಥಳ ಹಾಗೂ ವಿಗ್ರಹ ಪ್ರವಾಸಿಗರಿಗೆ ಪೌರಾಣಿಕ ಕಲ್ಪನೆ ಉಂಟು ಮಾಡುವಂತೆ ಕಾಣುತ್ತದೆ. ವಿಗ್ರಹದ ಮುಂಭಾಗದಲ್ಲಿ ಬಲಕ್ಕೆ ಸುಂದರವಾದ, ನಯನ ಮನೋಹರ ಕೊಳವಿದೆ. ಇದನ್ನು ‘ಕೋರಿಕೆಯ ಪೂರೈಕೆ ತಾಣ’ವೆಂದು ಉಲ್ಲೇಖಿಸಲಾಗಿದೆ. ಜನರು ೭ ಬಾರಿ “ಓಂ ನಮಃ ಶಿವಾಯ” ಎಂದು ಜಪಿಸಿ, ಒಂದು ನಾಣ್ಯ ಕೊಳದಲ್ಲಿ ಹಾಕಿ ಕೋರಿಕೆ ಈಡೇರಿಸುವಂತೆ ಪ್ರಾರ್ಥಿಸಿದರೆ ಕೋರಿಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ.

 

ಜವಾಹರ್ ಬಾಲಭವನ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಇದು ಮಕ್ಕಳಿಗಾಗಿಯೇ ಕಲ್ಪನೆ ಮಾಡಿಕೊಂಡು ಯೋಜಿಸಿದ ವಿಹಾರ ಉದ್ಯಾನ ಹಾಗೂ ಮನೋರಂಜನ ಕೇಂದ್ರ. ಕಬ್ಬನ್ ಉದ್ಯಾನದೊಳಗೆ ಮುಕ್ಕಾಲು ಮೈಲು ದೂರ ಚುಕು-ಬುಕು ಚಲಿಸುವ ಮಕ್ಕಳ ರೈಲು, ಗೊಂಬೆಗಳ ಪ್ರದರ್ಶನಾಲಯ ಬಾಲಭವನದಲ್ಲಿ ಮುಖ್ಯ ಆಕರ್ಷಣೇಯಾಗಿವೆ. ಭಾರತೀಯ ಭೂ ವಿಜ್ಞಾನ ಸಮಿತಿ ಸಂಸ್ಥೆಯಿಂದ ಸಂರಕ್ಷಿಸಿದ ೨೦ ದಶ ಲಕ್ಷ ವರ್ಷಗಳಷ್ಟು ಪುರಾತನವಾದ ಮರದ ಪಳಿಯುಳಿಕೆಯು ಈ ಉದ್ಯಾನದಲ್ಲಿದೆ. ಬಾಲಭವನದಲ್ಲಿ ಅಲ್ಪ ದೂರದ ದೋಣಿ ವಿಹಾರಕ್ಕೂ ಅವಕಾಶವಿದ್ದು, ಒಂದು ಚಿಕ್ಕ ಮಕ್ಕಳ ಉದ್ಯಾನವನವೂ ಇದೆ. ಉದ್ಯಾನದಲ್ಲಿರುವ ವಿಜಯನಗರ ರಂಗಮಂದಿರದಲ್ಲಿ ಮಕ್ಕಳಿಗಾಗಿಯೇ ಚಿತ್ರ ಬರೆಯುವ, ಕರಕುಶಲ ತರಗತಿಗಳು, ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

 

ವಂಡರ್ ಲಾ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೩೦ ಕಿ.ಮೀ

ಬೆಂಗಳೂರಿನಿಂದ ಸುಮಾರು ೩೦ ಕಿ.ಮೀಟರ್ ಅಂತರದ ಮೈಸೂರು ರಸ್ತೆಯಲ್ಲಿ ಬಿಡದಿ ಸಮೀಪ ನಿರ್ಮಿಸಲಾಗಿದೆ. ಬೆಂಗಳೂರಿನವರಿಗೆ ಹಾಗೂ ಪ್ರವಾಸಿಗರಿಗೊಂದುವಿನೋದಕರ ಮನರಂಜನಾ ಕೇಂದ್ರವಾಗಿದೆ. ಇದು ಖಾಸಗಿಯವರಿಂದ ನಿರ್ವಹಿಸಲಾಗುತ್ತಿದೆ. ಇಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜಲಕ್ರೀಡೆ ಹಾಗೂ ಜಲೇತರ ಕ್ರೀಡೆಗಳಿವೆ. ಇಲ್ಲಿ ೫೦ ಕ್ಕೂ ಹೆಚ್ಚು ಆಟಗಳಿವೆ. ಸಂಗೀತ ಚಿಲುಮೆಗಳು, ಲೇಸರ್‌ಷೋ, ರೈನ್ ಡಿಸ್ಕೋ, ಭೂತ್‌ಬಂಗಲೆ, ಕಾರ್‌ರೈಡ್ಸ್, ಕಿಡ್ಸ್‌ರೈಡ್ಸ್, ಅಲೆಗಳ ಆಟ, ವಂಡರ್ಸ್ ಸ್ಪೇಸ್, ಡ್ರಾಪ್ ಜೂನ್ ರೈಡ್ ಇನ್ನೂ ಮುಂತಾದ ವಿನೋದ ಕ್ರೀಡೆಗಳನ್ನುಆಡಬಹುದು. ಇಲ್ಲಿಗೆ ಭೇಟಿ ನೀಡುವುದೊಂದು ಅವಿಸ್ಮರಣೀಯ ಅನುಭವವಾಗುವುದು. ಆದರೆ ಪ್ರವೇಶಕ್ಕೆ ಶುಲ್ಕ ಕಡ್ಡಾಯ.

 

ಓಂಕಾರ ಬೆಟ್ಟಗಳು :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧೫ ಕಿ.ಮೀ

ಮೈಸೂರು ರಸ್ತೆಯಿಂದ ಸುಮಾರು ೪-೫ ಕಿ.ಮೀ. ದೂರದಲ್ಲಿರುವ ಓಂಕಾರ ಬೆಟ್ಟವೆಂದು ಕರೆಯಲಾಗಿದ್ದು, ಓಂಕಾರ ಬೆಟ್ಟಗಳು ಬೆಂಗಳೂರು ದಕ್ಷಿಣ ಭಾಗದ ವಿಹಂಗಮನೋಟಕ್ಕೆ ಅದ್ಭುತವಾಗಿವೆ. ಸಮುದ್ರ ಮಟ್ಟದಿಂದ ೩೪೦೦ ಅಡಿಗಳಷ್ಟು ಎತ್ತರವಿದ್ದು, ಬೆಂಗಳೂರು ನಗರದಲ್ಲೇ ಅತೀ ಎತ್ತರದ ಸ್ಥಳವಾಗಿದೆ. ಬೆಂಗಳೂರು ದಕ್ಷಿಣ ಭಾಗದ ವಿಹಂಗಮ ನೋಟಕ್ಕೆ ಪ್ರಶಸ್ತ ಸ್ಥಳವಾಗಿದೆ. ಹೆಚ್.ಎಂ.ಟಿ. ಯವರಿಂದ ತಯಾರಿಸಲಾದ ದೊಡ್ಡ ಗಾತ್ರದ ಗಡಿಯಾರವು ಮತ್ತೊಂದು ಆಕರ್ಷಣೆಯಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡದಾದ ಗಡಿಯಾರಗಳಲ್ಲಿ ಎರಡನೆಯದೆಂದು ಊಹಿಸಲಾಗಿದೆ ಮತ್ತು ಬಿಗ್‌ಬೆನ್‌ಗಿಂತ ದೊಡ್ಡದೆಂದು ಹೇಳುತ್ತಾರೆ. ಲಂಡನ್‌ನಲ್ಲಿರುವ ಈ ಬಿಗ್‌ಬೆನ್ ಜಗತ್ಪ್ರಸಿದ್ಧವಾದ ಗಡಿಯಾರವಾಗಿದೆ. ಎಲ್ಲಾ ಧರ್ಮಗಳಿಗೆ ಸಮಾನ ಅವಕಾಶ ನೀಡುವ ಸರ್ವಧರ್ಮ ಸಮನ್ವಯ ಪೀಎಂಬ ಹೆಸರಿನ ಆಲದ ಮರ ಜಾಗ ಇಲ್ಲಿನ ಮತ್ತೊಂದು ಆಕರ್ಷಕ ಕೇಂದ್ರವಾಗಿದೆ. ಈ ಮರವು ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಪುಟ್ಟ ಮಂದಿರಗಳಿಂದ ಸುತ್ತುಗಟ್ಟಿದೆ. ಈ ಬೆಟ್ಟದಲ್ಲಿ ಸೂರ್ಯಾಸ್ತದ ಸಮಯ ಅತೀ ರಮಣೀಯ ದೃಶ್ಯ.

 

ದೊಡ್ಡ ಬಸವಣ್ಣನ ದೇವಾಲಯ :

ದೂರ ಎಷ್ಟು ?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೮ ಕಿ.ಮೀ

ಈ ದೇವಾಲಯವು ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟ ದ್ರಾವಿಡ ಶೈಲಿಯ ದೇವಾಲಯವಾಗಿರುತ್ತದೆ. ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯ ಸನಿಹದಲ್ಲಿದೆ. ಇದು ೪.೫ ಮೀಟರ್ ಎತ್ತರ ಮತ್ತು ೬.೫ ಮೀ ಉದ್ದದ ಏಕಶಿಲಾ ಬಸವ ಆಗಿದೆ. ಈ ಬಸವನ ಸುತ್ತ ಹೆಣೆದುಕೊಂಡಿರುವ ಒಂದು ಜನಪ್ರಿಯ ಕತೆಯಪ್ರಕಾರ, ಒಂದು ಗೂಳಿಯು ಸುತ್ತ ಮುತ್ತಲಿನ ಹೊಲಗಳಲ್ಲಿ ನುಗ್ಗಿ ರೈತರು ಬೆಳೆಯುತ್ತಿದ್ದ ಕಡಲೆಕಾಯಿಯನ್ನು ಮೇಯುತ್ತಿತ್ತು. ಗ್ರಾಮಸ್ಥರು ಅದನ್ನು ದೂರವಿಡಲು ಮಾಡಿದ ಎಲ್ಲಾ ಪ್ರಯತ್ನಗಳನ್ನೂ ಮೀರಿ ಕಬಳಿಸುತ್ತಲೇ ಇತ್ತು. ಇಂಥ ಪುಂಡ ಬಸವನ ಶಾಂತಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತಂತೆ. ಈ ಸುಂದರ ಬಸವನ ದೇವಾಲಯವನ್ನು ನಿರ್ಮಿಸಿದ ಮೇಲೆ ಎತ್ತು ತಂತಾನೆ ಕಡೆಲೆಕಾಯಿಯ ತುಡುಗು ಮೇಯುವುದರಿಂದ ದೂರವೇ ಉಳಿಯಿತು. ಕೃತಜ್ಞಾ ರೈತರು ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಪ್ರತಿವರ್ಷ ಈ ದೇವಾಲಯದ ಆವರಣದಲ್ಲಿ ಕಡಲೆಕಾಯಿ ಜಾತ್ರೆ (ಕಡಲೆಕಾಯಿ ಪರಿಷೆ) ಯನ್ನು ನಡೆಸಿಕೊಂಡು ಬಂದಿದ್ದಾರೆ.