ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸದ್ಗುರು ಶ್ರೀ ತ್ಯಾಗರಾಜರ ಆರಾಧನೆ ಎಂದೊಡನೆ, ಕಾವೇರಿ ತೀರದ ಪವಿತ್ರಕ್ಷೇತ್ರ-ಸಂಗೀತ ಕಾಶೀ ಎನಿಸಿರುವ ತಿರುವಯ್ಯಾರು, ತ್ಯಾಗರಾಜಸ್ವಾಮಿಗಳ ಸಮಾಧಿ ಸ್ಥಳ ಮತ್ತು ಬೆಂಗಳೂರು ನಾಗರತ್ನಮ್ಮನವರ ನೆನಪು ಬಾರದಿರದು. ಸುಮಾರು ೧೮೯೦ ನೇ ಇಸವಿಯಿಂದ ೧೯೩೦ರ ವರೆಗೆ ದಕ್ಷಿಣ ಭಾರತದ ತೆಲುಗು, ಕನ್ನಡ ಹಾಗೂ ತಮಿಳು ನಾಡುಗಳಲ್ಲಿ ಬೆಂಗಳೂರು ನಾಗರತ್ನಮ್ಮನವರ ಸಂಗೀತವನ್ನು ಕೇಳಿ ಸಂತೋಷಪಡದ ರಸಿಕರಿರಲಿಲ್ಲವೆನ್ನಬಹುದು. ಆಕೆಯ ಕಲಾಪ್ರತಿಭೆ, ಭಾಷಾಪಾಂಡಿತ್ಯ, ಸಂಸ್ಕೃತ ಜ್ಞಾನ, ದೀನ ದಲಿತರ ಬಗ್ಗೆ ಇದ್ದ ಕಳಕಳಿ, ಧರ್ಮಸಂಸ್ಕೃತಿಗಳಲ್ಲಿ ಆಕೆಗಿದ್ದ ಶ್ರದ್ಧೆ, ತ್ಯಾಗಬುದ್ಧಿಗಳಿಂದಾಗಿ ನಾಗರತ್ನಮ್ಮನವರ ಜೀವನ ಚರಿತ್ರೆಯನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದೆ.

ಕೋಲಾರದ ನಾಗರತ್ನಮ್ಮ ಮತ್ತು ಬೆಂಗಳೂರು ನಾಗರತ್ನಮ್ಮ ಎಂಬ ಇಬ್ಬರು ಸುಪ್ರಸಿದ್ಧ ಸಂಗೀತ ನಾಟ್ಯ ಕಲಾವಿದರು ಸಮಕಾಲೀನರಾಗಿದ್ದುದು ಕೆಲವೊಮ್ಮೆ ಜಿಜ್ಞಾಸೆಗೆ ದಾರಿಮಾಡಿಕೊಟ್ಟಿದೆ. ಕೋಲಾರದ ನಾಗರತ್ನಮ್ಮ ನಂಜುಂಡ ಸಾನಿ ಎನ್ನುವರ ಮಗಳು. ತನ್ನಪ್ರತಿಭೆಯಿಂದ ಸಂಗೀತ ಪ್ರಪಂಚದಲ್ಲಿ ಹೆಸರು ಮಾಡಿದ್ದರು. ಈಕೆಯನ್ನು ಕೆ.ಎನ್‌.ಆರ್. ಎಂದೂ, ಬೆಂಗಳೂರು ನಾಗರತ್ನಮ್ಮನವರನ್ನು ಬಿ.ಎನ್‌.ಆರ್. ಎಂದೂ ಕರೆಯುವುದು ವಾಡಿಕೆಯಾಗಿತ್ತು. ಬೆಂಗಳೂರು ನಾಗರತ್ನಮ್ಮ ನಂಜನಗೂಡಿನ ಹೆಣ್ಣು ಮಗಳು. ಆದರೆ ಬಾಲ್ಯದಿಂದಲೂ ಅವರು ಹೆಚ್ಚುದಿನಗಳನ್ನು ಬೆಂಗಳೂರಿನಲ್ಲೇ ಕಳೆದು, ನಂತರ ಮದರಾಸಿಗೆ ಹೋಗಿ ಪ್ರಸಿದ್ಧರಾಗಿ ಕೊನೆಯವರೆಗೂ ಕನ್ನಡನಾಡಿನ ಹೊರಗೇ ಇದ್ದುದರಿಂದ ಅವರನ್ನು ಬೆಂಗಳೂರು ನಾಗರತ್ನಮ್ಮ/ಬಿ.ಎನ್‌.ಆರ್. ಎಂದು ಕರೆಯಲಾಗುತ್ತಿತ್ತು. ದೇವದಾಸಿ ಜನಾಂಗಕ್ಕೆ ಸೇರಿದ ಅವರ ತಾಯಿ ಪುಟ್ಟಲಕ್ಷಮ್ಮ ನಂಜನಗೂಡಿನ ವಕೀಲರಾಗಿದ್ದ ಸುಬ್ಬರಾಯರ ಆಶ್ರಯದಲ್ಲಿದ್ದರು. ಪುಟ್ಟಲಕ್ಷ್ಮಿ ಸುಬ್ಬರಾಯರಿಗೆ ನಾಗರತ್ನ ಜನಿಸಿದಳು. ಆಕೆಯ ಜನನ ೧೮೭೮ನೇ ಇಸವಿಗೆ ಸಲ್ಲುವ ಬಹುಧಾನ್ಯ ಸಂವತ್ಸರಲ್ಲಿ ನವೆಂಬರ್ ಮೂರನೇ ದಿನಾಂಕ. ಕೆಲವು ವಿದ್ವಾಂಸರು ಆಕೆಯ ಜನನ ೧೮೭೦-೭೩ರಮಧ್ಯೆ ಆಗಿರಬೇಕೆಂದೂ ಅಭಿಪ್ರಾಯ ಪಡುತ್ತಾರೆ. ಮಗುವಿಗೆ ಒಂದುವರೆ ವರ್ಷ ತುಂಬುವುದರಲ್ಲಿ ಕಾರಣಾಂತರಗಳಿಂದ ಪುಟ್ಟಲಕ್ಷ್ಮಿ ಸುಬ್ಬರಾಯರಿಂದ ದೂರಾಗಿ, ನಾಗರತ್ನಳೊಡನೆ ಮೈಸೂರು ಸೇರಬೇಕಾಯಿತು. ಕೆಲಕಾಲಾನಂತರ ಗಿರಿಭಟ್ಟರ ತಮ್ಮಯ್ಯ ಎಂಬ ಪ್ರಸಿದ್ಧ ವಿದ್ವಾಂಸರ ಬಳಿ ಸಂಗೀತ, ಸಾಹಿತ್ಯ ಸಂಸ್ಕೃತ ಭಾಷೆಗಳಲ್ಲಿ ನಾಗರತ್ನಳ ಶಿಕ್ಷಣ ಪ್ರಾರಂಭವಾಯಿತು. ಅವಳಿಗೆ ಒಂಬತ್ತು ವರ್ಷಗಳು ತುಂಬುವವರೆಗೆ ವಿದ್ಯಾಭ್ಯಾಸ ನಿರ್ವಿಘ್ನವಾಗಿ ಸಾಗಿತು. ದೈವದತ್ತವಾದ ಕಲಾಪ್ರತಿಭೆಯನ್ನು ಹೊಂದಿ, ಕುಶಾಗ್ರಮತಿಮುಳ್ಳ ನಾಗರತ್ನಳಿಗೆ ಈ ವೇಳೆಗಾಗಲೇ ಒಳ್ಳೆಯ ಜ್ಞಾನ ಸಂಪಾದನೆಯಾಗಿತ್ತು.ಅವರ ಸಂಸ್ಕೃತ ಭಾಷಾಜ್ಞಾನ ಅವರು ಹಾಡುತ್ತಿದ್ದ ಶ್ಲೋಕಗಳಲ್ಲಿ ಎದ್ದು ಕಾಣುತ್ತಿತ್ತು.ಕಾವ್ಯ, ಅಲಂಕಾರ, ವ್ಯಾಕರಣಗಳನ್ನು ಅಭ್ಯಾಸಮಾಡಿದ್ದರಿಂದ,ಸಂಗೀತ, ಗಮಕ,ಶ್ಲೋಕಗಳಲ್ಲಿ ಸ್ಪಷ್ಟ ಉಚ್ಚಾರ, ಪದಚ್ಛೇದ, ಧ್ವನಿ ವಿಶೇಷಗಳನ್ನು ಅರಿತು ಅತ್ಯಂತ ಪರಿಣಾಮಕಾರಿಯಾಗಿ ಹಾಡಬಲ್ಲವರಾಗಿದ್ದರು. ಕನ್ನಡ ಸಾಹಿತ್ಯದಲ್ಲೂ ಪಾಂಡಿತ್ಯಗಳಿಸಿ, ಜೈಮಿನಿ ಭಾರತ, ರಾಜ ಶೇಖರ ವಿಲಾಸ, ಕುಮಾರವ್ಯಾಸ ಭಾರತದಿಂದ ಪದ್ಯಗಳನ್ನು ಆರಿಸಿ, ಸೂಕ್ತರಾಗಗಳಲ್ಲಿ ವಿದ್ವತ್ಪೂರ್ಣವಾಗಿ ಅರ್ಥೈಸಿ ಹಾಡುತ್ತಿದ್ದರು. ಆದರೆ ದುರದೃಷ್ಟವಶಾತ್‌ ಗಿರಿಭಟ್ಟರ ತಮ್ಮಯ್ಯನವರಲ್ಲಿ ಮನಸ್ತಾಪ ಮೂಡಿ ನಾಗರತ್ನಳ ಶಿಕ್ಷಣ ನಿಂತುಹೋಯಿತು.

ಪುಟ್ಟಲಕ್ಮಮ್ಮ, ಮಗಳ ವಿದ್ಯಾಭ್ಯಾಸ ಕಲಾಸಾಧನೆಯೇ ತಮ್ಮ ಜೀವನದ ಏಕೈಕ ಗುರಿಯನ್ನಾಗಿ ಪರಿಗಣಿಸಿದವರು. ನಾಗರತ್ನಳನ್ನು ಕಾಂಚೀಪುರದ ಧನಕೋಟಿ ಅಮ್ಮಾಳ್‌ ಎಂಬ ಸುಪ್ರಸಿದ್ಧ ವಿದ್ವಾಂಸರಲ್ಲಿ ಸಂಗೀತ ನೃತ್ಯಗಳಲ್ಲಿ ಹೆಚ್ಚಿನ ಶಿಕ್ಷಣ ಕೊಡಿಸಬೇಕೆಂದು ಕರೆದೊಯ್ದರಾದರೂ, ಅವರ ಪ್ರಯತ್ನ ಫಲಿಸಲಿಲ್ಲ. ಪುಟ್ಟಲಕ್ಷ್ಮಿ ನಿರಾಶರಾಗಿ ಮಗಳೊಡನೆ ಬೆಂಗಳೂರಿಗೇ ಹಿಂದಿರುಗಿದರು.

ಬೆಂಗಳೂರಿನಲ್ಲಿ ತಮ್ಮ ವಾವೆಯಲ್ಲಿ ಅಣ್ಣನವರಾದ ವಿದ್ವಾನ್‌ ವೆಂಕಟಸ್ವಾಮಪ್ಪನವರಲ್ಲಿ ಆಶ್ರಯ ಪಡೆದರು. ಬಾಲಕಿ ನಾಗರತ್ನಳ ವಿದ್ಯಾಭ್ಯಾಸಕ್ಕೆ ಅನುಕೂಲವಾಯಿತು. ಬೆಂಗಳೂರಿನ ಸುಪ್ರಸಿದ್ಧ ವಿದ್ವಾಂಸರೆನಿಸಿದ್ದ ಮುನಿಸ್ವಾಮಪ್ಪನವರಲ್ಲಿ ಸಂಗೀತ ಶಿಕ್ಷಣ ಮುಂದುವರೆಯಿತು. ತ್ಯಾಗರಾಜರ ಪ್ರಮುಖ ಶಿಷ್ಯರಲ್ಲಿ ಒಬ್ಬರಾಗಿದ್ದ ವಾಲಾಜಪೇಟೆ ವೆಂಕಟರಮಣ ಭಾಗವತರ ಮಗ, ವಾಲಾಜ ಪೇಟೆ ಕೃಷ್ಣಸ್ವಾಮಿ ಭಾಗವತರು ವಿದ್ವಾನ್‌ ಮುನಿಸ್ವಾಮಪ್ಪನವರ ಗುರುಗಳು. ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿಹೋಗುವ ಪುಣ್ಯ ನಾಗರತ್ನಮ್ಮನವರಿಗೆ ಆ ವಯಸ್ಸಿನಲ್ಲೇ ಲಭಿಸಿತ್ತು. ಮುನಿಸ್ವಾಮಪ್ಪನವರು ಒಳ್ಳೆಯ ಪಿಟೀಲು ವಾದಕರೂ ಆಗಿದ್ದರು. ಸಂಗೀತದೊಂದಿಗೆ ಆಂಗ್ಲ, ತೆಲುಗು, ತಮಿಳು ಭಾಷೆಗಳಲ್ಲಿಯೂ ಶಿಕ್ಷಣ ಪ್ರಾರಂಭವಾಯಿತು. ಜೊತೆಜೊತೆಯಲ್ಲೇ ಮದರಾಸಿನವರಾಗಿದ್ದ ತಿರುವೆಂಕಟಾಚಾರ್ಯರಲ್ಲಿ ಅಭಿನಯವನ್ನೂ, ಬೆಂಗಳೂರು ಕಿಟ್ಟಣ್ಣನವರಲ್ಲಿ ನಾಟ್ಯವನ್ನು ನಾಗರತ್ನಮ್ಮ ಕಲಿಯುತ್ತಿದ್ದರು. ಎಲ್ಲ ಗುರುಗಳ ಕೃಪಾ ಕಟಾಕ್ಷ ದೊರೆಯಿತು. ಸುಮಾರು ನಾಲ್ಕು ವರ್ಷಗಳ ಶಿಸ್ತಿನ ಕಠಿಣ ವಿದ್ಯಾಭ್ಯಾಸ ಶಿಕ್ಷಣಗಳ ನಂತರ ಅವರಲ್ಲಿ ಸುಪ್ತವಾಗಿದ್ದ ಸಂಗೀತ ಸಾಹಿತ್ಯ ನೃತ್ಯ ಕಲಾಪ್ರತಿಭೆಯು ಸರ್ವತೋಮುಖವಾಗಿ ವಿಕಾಸಗೊಂಡು ಪ್ರಕಾಶಿಸಲಾರಂಭಿಸಿತು. ಕಿಟ್ಟಣ್ಣನವರ ಅನೇಕ ಶಿಷ್ಯರ ಪೈಕಿ ಬೆಂಗಳೂರು ನಾಗರತ್ನಮ್ಮ ಮತ್ತು ಬೆಂಗಳೂರು ವರಲಕ್ಷ್ಮಿ ಹೆಸರಾಂತ ಕಲಾವಿದೆಯರು ಎನ್ನಿಸಿಕೊಂಡಿದ್ದರು. ಆಗ ನಾಗರತ್ನಮ್ಮನವರಿಗೆ ಹದಿಮೂರರ ಬಾಲಪ್ರಾಯ. ಮತ್ತೊಂದು ವರ್ಷಕಳೆಯುವುದರೊಳಗೆ, ಮಗಳ ಏಳಿಗೆಗಾಗಿ ಜೀವನದುದ್ದಕ್ಕೂ ಹೋರಾಡಿ ಸೊರಗಿದ್ದ ಪುಟ್ಟಲಕ್ಷ್ಮಿ ಯಾವುದೋ ಅನಾರೋಗ್ಯದಿಂದ ಬಳಲಿ ಅಸುನೀಗಿದರು. ತನ್ನವರಾಗಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ನಾಗರತ್ನಮ್ಮನಿಗೆ ಅತಿ ದೊಡ್ಡ ಆಘಾತವಾಯಿತು. ಆಗ ಗುರುಗಳಾದ ಮುನಿಸ್ವಾಮಪ್ಪನವರು ಅವರಿಗೆ ಎಲ್ಲ ರೀತಿಯಲ್ಲೂ ಬೆಂಬಲವಾಗಿ ನಿಂತು, ಸಮಾಧಾನ ಪಡಿಸಿ, ಧೈರ್ಯತುಂಬಿ ಮಗಳಂತೆ ಆದರಿಸಿದರು. ಕಲೆಯಲ್ಲಿ ಹೆಸರನ್ನು ಸಾಧಿಸಬೇಕೆಂಬ ಅವರ ತಾಯಿಯ ಪ್ರತಿಜ್ಞೆಯನ್ನು ನೆನಪುಮಾಡಿ, ಮತ್ತೆಕಾರ್ಯಪ್ರವೃತ್ತಳಾಗಿ ಕಲಾಸಾಧನೆಯಲ್ಲಿ ತೊಡಗುವಂತೆ ಮಾಡಿದರು. ಮುಂದಿನ ಎರಡು ವರ್ಷಗಳು ಸರಿದುಹೋದುವು.

ಆಗ ಮೈಸೂರಿನಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡಿ ಆದರಿಸುತ್ತಿದ್ದ ಚಾಮರಾಜ ಒಡೆಯರ ಕಾಲ. ನಾಗರತ್ನಮ್ಮನ ಕಲಾ ಪ್ರೌಢಿಮೆಯಲ್ಲಿ ಭರವಸೆಹೊಂದಿದ್ದ ಮುನಿಸ್ವಾಮಪ್ಪನವರು, ೧೮೯೨ನೇ ಇಸವಿಯ ನವರಾತ್ರಿ ಉತ್ಸವದಲ್ಲಿ ಆಕೆಯ ರಂಗಪ್ರವೇಶ ಮಾಡಿಸಲು ಉದ್ದೇಶಿಸಿ, ಮೈಸೂರಿಗೆ ಕರೆತಂದರು. ವೀಣೆ ಶೇಷಣ್ಣನವರ ಮನೆಯಲ್ಲಿ, ನವರಾತ್ರಿ ಉತ್ಸವಕ್ಕಾಗಿ ಸೇರಿದ್ದ ಘನ ವಿದ್ವಾಂಸರು, ನಗರದ ಗಣ್ಯ ವ್ಯಕ್ತಿಗಳು ಮತ್ತು ರಸಿಕರ ಎದುರಿನಲ್ಲಿ ಮೊದಲ ಕಚೇರಿ ನಡೆಯಿತು. ಆಕೆಯ ಗಾನಮಾಧುರ್ಯ, ಶೈಲಿ, ಮನೋಧರ್ಮ ಸಂಪ್ರದಾಯ, ಸಾಹಿತ್ಯ ಭಾವಗಳಿಗೆ ಶ್ರೋತೃಗಳಿಂದ ಪ್ರಶಂಸೆಯ ಸುರಿ ಮಳೆಯಾಯಿತು. ನಮಿಸಿದ ನಾಗರತ್ನಳಿಗೆ ಶೇಷಣ್ಣನವರು ಶಾಲುಹೊದ್ದಿಸಿ ಯಶೋವಂತಳಾಗೆಂದು ಹೃತ್ಪೂರ್ವಕವಾಗಿ ಹರಸಿದರು. ಸುದ್ದಿ ಅರಮನೆಗೆ ತಲುಪಲು ತಡವಾಗಲಿಲ್ಲ. ಕೆಲವೇ ದಿನಗಳಲ್ಲಿ ಯಾವುದೋ ಶುಭ ಸಂದರ್ಭಒದಗಿ, ಮಹಾರಾಜರ ದರ್ಬಾರಿನಲ್ಲಿ ಸಂಗೀತ ಕಚೇರಿ ನೀಡಬೇಕೆಂದು ಅರಮನೆಯಿಂದ ಆಮಂತ್ರಣ ಬಂತು. ಗೊತ್ತಾದ ದಿನ ಗುರುಗಳಾದ ಮುನಿಸ್ವಾಮಪ್ಪನವರೇ ಪಕ್ಕವಾದ್ಯಕ್ಕೆ ಪಿಟೀಲು ಹಿಡಿದರು. ದರ್ಬಾರಿನ ಕಚೇರಿಯಲ್ಲಿ ನಾಗರತ್ನಮ್ಮನ ಸಂಗೀತ ವಿಜೃಂಭಿಸಿತು. ನೆರೆದಿದ್ದ ಗಣ್ಯರ ಪೈಕಿ ಗಿರಿಭಟ್ಟರ ತಮ್ಮಯ್ಯನವರೂ ಇದ್ದರು. ವಿದ್ಯಾ ಪಕ್ಷಪಾತಿಗಳಾದ ಒಡಯರು ಎಲ್ಲರೆದುರು ನಾಗರತ್ನಮ್ಮನವರ ಸಂಗೀತ ಪ್ರೌಢಿಮೆಯನ್ನು ಮೆಚ್ಚಿ ಬೆಳ್ಳಿ ತಟ್ಟೆಯಲ್ಲಿ ಅನೇಕ ಕಾಣಿಕೆಗಳನ್ನು ಕೊಟ್ಟು ಸನ್ಮಾನಿಸಿದರು.

ದರ್ಬಾರಿನ ಸಂಗೀತ ಕಚೇರಿ ನಡೆದು ಎರಡೇ ದಿನಗಳ ತರುವಾಯ ನಾಗರತ್ನಮ್ಮನವರಿಗೆ ಮತ್ತೆ ಅರಮನೆಯಿಂದ ಆಮಂತ್ರಣ ಬಂದಿತು. ಈ ಬಾರಿ ನಾಗರತ್ನಮ್ಮನವರ ನಾಟ್ಯ ಪ್ರದರ್ಶನ ಏರ್ಪಾಡಾಗಿತ್ತು. ನಾಟ್ಯ ಗುರುಗಳಾದ ಕಿಟ್ಟಪ್ಪನವರ ನಟ್ಟುವಾಂಗ, ನಾಟ್ಯಕಚೇರಿಗೆ ಮತ್ತಷ್ಟು ಗೌರವ ತಂದಿತು. ಅವರ ಅಭಿನಯ, ನೃತ್ಯ ನೃತ್ಯದಲ್ಲಿದ್ದ ನಿರ್ಣಯ, ರಸಭಾವಗಳನ್ನು ವ್ಯಕ್ತಪಡಿಸುವ ರೀತಿ, ಅಲ್ಲಿ ಸೇರಿದ್ದ ರಸಿಕರೆಲ್ಲ ಮೆಚ್ಚುಗೆ ಗಳಿಸಿತು. ಸಂಪ್ರದಾಯದತೆ ಚಾಮರಾಜ ಒಡೆಯರೂ, ಮಹಾರಾಣಿ ಕೆಂಪು ನಂಜಮ್ಮಣ್ಣಿಯವರೂ ವಸ್ತ್ರಾಭರಣಗಳು ತುಂಬಿದ್ದ ಸನ್ಮಾನದ ಬೆಳ್ಳಿ ಹರಿವಾಣಗಳನ್ನಿತ್ತು ಗೌರವಿಸಿದರು. ದರ್ಬಾರಿನ ಸಂಗೀತ ನೃತ್ಯ ಕಚೇರಿಗಳ ನಂತರ ಕೇವಲ ೧೪-೧೫ ರ ಪ್ರಾಯದ ನಾಗರತ್ನಮ್ಮನವರು ಒಬ್ಬ ಪ್ರಬುದ್ಧ ಕಲಾವಿದೆಯಾಗಿ ಎಲ್ಲರ ಗಮನ ಸೆಳೆದರು. ಮಹಾರಾಜರ ಕೃಪೆಯು ಆಗಿ ದರ್ಬಾರಿನಲ್ಲಿಯೇ ಉದ್ಯೋಗವಾಗಿ ಮೈಸೂರಿನಲ್ಲಿ ನೆಲೆಸಿದರು. ಮೈಸೂರಿನಲ್ಲಿ ಶಿಷ್ಯಳ ಅಭಿವೃದ್ಧಿ ಕಂಡು ಮುನಿಸ್ವಾಮಪ್ಪನವರಿಗೆ ಎಲ್ಲಿಲ್ಲದ ಹಿಗ್ಗು. ಮುಂದೆ ಒಂದು ವರ್ಷದಲ್ಲಿ ಮುನಿಸ್ವಾಮಪ್ಪನವರು ಕಾಲವಾದರು. ತಂದೆಯಂತೆ ಬೆಂಬಲವಾಗಿದ್ದ ಗುರುವಿನ ನಿಧನದಿಂದ ನಾಗರತ್ನಮ್ಮನವರಿಗೆ ದಿಕ್ಕು ತಪ್ಪಿದಂತಾಯಿತು. ಮತ್ತೆ ಚೇತರಿಸಿಕೊಂಡು, ಆಸ್ಥಾನ ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಸಂಗೀತ ಶಿಕ್ಷಣ ಪ್ರಾರಂಭಿಸಿದರು.

೨೮-೧೨-೧೮೯೪ರಲ್ಲಿ ಆಶ್ರಯದಾತರೂ ದಯಾಳುವೂ ಆಗಿದ್ದ ಚಾಮರಾಜ ಒಡಯರು ಕಲ್ಕತ್ತೆಯಲ್ಲಿ ಹಠಾತ್ತನೆ ಮರಣ ಹೊಂದಿದರು. ೧೦ ವರ್ಷದ ಬಾಲಕ ಕೃಷ್ಣರಾಜ ಒಡೆಯರು ಪಟ್ಟಕ್ಕೆ ಬಂದುದರಿಂದ ಅರಮನೆಯ ಆಡಳಿತ ಸ್ಥಿತಿಗತಿಗಳು ಏರುಪೇರಾಯಿತು. ಈ ಸಂದರ್ಭದಲ್ಲಿ ನಾಗರತ್ನಮ್ಮನವರು ಮತ್ತೆ ಬೆಂಗಳೂರಿಗೇ ಹಿಂದಿರುಗಿದರು. ಈ ಬಾರಿ ನಗರದ ನಗರ್ತಪೇಟೆಯ ಒಂದು ಮನೆಯಲ್ಲಿ ವಾಸ. ಸಂಜೆಯ ವೇಳೆ ವಿದ್ವಾಂಸರು ಹಾಗೂ ರಸಿಕರಿಗಾಗಿ ಸಂಗೀತ ಸಮಯಗಳು. ಹಾಗೆ ಅವರ ಸಂಗೀತಕ್ಕಾಗಿ ಸೇರುವ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿ ಒಳ್ಳೆಯ ಪ್ರೋತ್ಸಾಹ ಸಿಗುತ್ತಿತ್ತು. ಅವರ ಪೈಕಿ ಕೆ.ಪಿ. ಪುಟ್ಟಣ್ಣ ಶೆಟ್ಟರು, ಜಸ್ಟಿಸ್‌ ಚಂದ್ರಶೇಖರ ಅಯ್ಯರ್, ಚೀಫ್‌ ಜಡ್ಜ್‌ ನರಹರಿರಾಯರು ಮುಂತಾದ ಗಣ್ಯರೂ ಇದ್ದರು.

ಬೆಂಗಳೂರಿನಲ್ಲಿ ನೆಲೆಸಿದ ಮೇಲೆ, ಅವರ ಸಂಗೀತ, ಸಾಹಿತ್ಯ, ನೃತ್ಯ, ಲಾವಣ್ಯ, ಸುಸ್ವಭಾವಗಳನ್ನು ಮೆಚ್ಚಿಕೊಂಡ ಚೀಫ್‌ ಜಸ್ಟಿಸ್‌ ನರಹರಿರಾಯರು ಆಕೆಯ ಆಶ್ರಯದಾತರಾದರು. ಸಂಗೀತ ಸಾಹಿತ್ಯಗಳಲ್ಲಿ ಸ್ವತಃ ಉತ್ತಮ ಅಭಿರುಚಿಯುಳ್ಳವರೂ ಗೌರವಾನ್ವಿತರೂ ಆಗಿದ್ದ ರಾಯರು ಇತರ ಅಭಿಮಾನಿಗಳೊಡನೆ ಪ್ರತಿದಿನ ಸಾಯಂಕಾಲ ನಾಗರತ್ನಮ್ಮನವರ ಮನೆಗೆ ಬಂದು ದೈವೀಕವಾದ ಅವರ ಸಂಗೀತ ಸುಧೆಯನ್ನು ಸವಿದು ಮನೆಗೆ ಹಿಂದಿರುಗುತ್ತಿದ್ದರು. ಕೆಲವು ಸಮಯದ ನಂತರ, ನಾಗರತ್ನಮ್ಮನವರ ಸಂಗೀತ ಸಂಜೆಗಳಿಗೆ ಈಗಿನ ನರಿಹರಿರಾಯನ ಗುಡ್ಡವನ್ನು, ಸೂಕ್ತವಾದ ಸ್ಥಳವೆಂದು ಆರಿಸಿ, Mount of Joy (ಆನಂದ ಶೈಲ) ಎಂದು ಹೆಸರಿಟ್ಟು, ಆಗಾಗ್ಗೆ ರಸಿಕರೊಡನೆ ಬಂದು ಸಂಗೀತ ಸಮಾರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ದಿವ್ಯವಾದ ಸಂಗೀತವನ್ನು ಒಮ್ಮೆ ಕೇಳಿದವರು ಮತ್ತೆಂದೂ ಮರೆಯಲು ಸಾಧ್ಯವಿರಲಿಲ್ಲವೆಂದು ಅನೇಕ ರಸಿಕರು ನೆನಪುಮಾಡಿಕೊಳ್ಳುತ್ತಿದ್ದರು.

ನರಹರಿರಾಯರು ಕೆಲಸದಿಂದ ನಿವೃತ್ತರಾಗುವ ದಿನಗಳು ಹತ್ತಿರವಾದಂತೆ ರಾಯರು ಚಿಂತಾಕ್ರಾಂತರಾದರು. ಸಂಗೀತಸಂಜೆಗಳಲ್ಲಿ ಕೆಲವಾರು ದಿನಗಳು ಕಳೆದರೂ ರಾಯರು ಮೌನಿಯಾಗಿ ವಿಮುಖರಾಗಿರುವ ಕಾರಣ ತಿಳಿಯದೆ ನಾಗರತ್ನಮ್ಮ ಗೊಂದಲಕ್ಕೀಡಾದರು. ಒಂದು ಸಂಜೆ ಸಂಗೀತ ಸಮಯದಲ್ಲಿ ಕಮಾಚ್‌ರಾಗದಲ್ಲಿ ‘ಮಾತಾಡಬಾರದೇನೋ ಮಾರಮಣನೆ’, ಎಂಬ ಕನ್ನಡ ಜಾವಳಿಯನ್ನು ಸಮಯಸ್ಪೂರ್ತಿಯಿಂದ ರಚಿಸಿ, ಕುಳಿತಲ್ಲೇ ಅಭಿನಯಿಸುತ್ತಾ ಅದ್ಭುತವಾಗಿ ಹಾಡಿಯೇ ಬಿಟ್ಟರಂತೆ. ಈ ಜಾವಳಿ, ನಂತರ ಎಲ್ಲೆಲ್ಲೋ ಪ್ರಸಿದ್ಧವಾಯಿತು. ನಾಗರತ್ನಮ್ಮನವರ ಸಂಗೀತ ಮತ್ತೂ ಬೆಳೆಯಬೇಕು, ಹೆಚ್ಚು ಹೆಚ್ಚು ಜನರನ್ನು ತಲುಪಬೇಕು, ಅವರ ಪ್ರತಿಭೆ ಬೆಳಗಬೇಕು ಎಂಬ ದೂರಾಲೋಚನೆಯಿಂದ, ರಾಯರು, ಸಂಗೀತ ನೃತ್ಯ ವಿದ್ವಾಂಸರ ಕೇಂದ್ರವಾಗಿರುವ ಮದರಾಸು ಇದಕ್ಕೆ ತಕ್ಕ ವಾತಾವರಣವುಳ್ಳ ಸ್ಥಳವೆಂದು ನಿರ್ಧರಿಸಿ, ಮದರಾಸಿನ ಆಗರ್ಭ ಶ್ರೀಮಂತರಾದ ಸಾಹುಕಾರ್ ಸಿ.ಎಸ್‌. ರಾಜರತ್ನಂ ಮೊದಲಿಯಾರ್ ಎಂಬುವವರಲ್ಲಿ ಆಕೆಗೆ ಆಶ್ರಯ ಕಲ್ಪಿಸಿಕೊಟ್ಟರು. ಅವರ ನಿರ್ಧಾರ ಸೂಕ್ತವಾದುದೆಂದು ತಿಳಿದು ನಾಗರತ್ನಮ್ಮನವರು ಮದರಾಸಿಗೆ ೧೯೦೩ ರಲ್ಲಿ ಹೋಗಿ ನೆಲೆಸಿದರು. ವಾಸ, ಸಂಗೀತ ಪ್ರದರ್ಶನಗಳ ಏರ್ಪಾಟೂ ಆಯಿತು. ಎಂದಿನಂತೆ ಸಂಗೀತ ಸಂಜೆಗಳಿಗಾಗಿ ಅನೇಕ ಗಣ್ಯರು, ವಿದ್ವಾಂಶರು, ರಸಿಕರು ಬರುತ್ತಿದ್ದರು. ಆ ಪೈಕಿ ಘನ ವಿದ್ವಾಂಸರಾಗಿದ್ದ ರಾಮನಾಡದ್ ಶ್ರೀನಿವಾಸ ಅಯ್ಯಂಗಾರ್ಯರ ಪರಿಚಯವಾಗಿ, ಅವರೇ ನಾಗರತ್ನಮ್ಮನವರ ಮುಂದಿನ ಸಂಗೀತ ವಿದ್ಯಾ ಗುರುಗಳಾದರು. ಅತ್ಯುತ್ತಮವಾಗಿ ಸಂಗೀತ ಶಿಕ್ಷಣ ಮುಂದುವರೆಯಿತು. ಕಾಲಾನಂತರದಲ್ಲಿ ನಾಗರತ್ನಮ್ಮನವರು ಪ್ರಸಿದ್ಧ ವಿದ್ವಾಂಸರುಗಳಾದ ತಿರುಕ್ಕೋಡಿ ಕಾವಲ್‌ ಕೃಷ್ಣ ಅಯ್ಯರ್, ಕೋನೇರಿ ರಾಜಪುರಂ ವೈದ್ಯನಾಥ ಅಯ್ಯರ್, ಪಿಟೀಲು ವಿದ್ವಾಂಸರಾದ ತಿರುಚ್ಚಿ ಗೋವಿಂದ ಸಾಮಿ ಪಿಳ್ಳೆಯವರುಗಳಲ್ಲೂ ಸಂಧರ್ಭಾನುಸಾರ ಸಂಗೀತದಲ್ಲಿ ಮಾರ್ಗದರ್ಶನ ಪಡೆದಂತೆ ತಿಳಿದು ಬರುತ್ತದೆ.

ಮದರಾಸಿನಲ್ಲಿ ನೆಲೆಸಿದ ಸ್ವಲ್ಪ ಸಮಯದಲ್ಲಿಯೇ ನಾಗರತ್ನಮ್ಮನವರು ಪಾಂಡಿತ್ಯ ಪೂರ್ಣವೂ, ಭಾವಭಕ್ತಿಯಿಂದ ಪರಿಪಕ್ವವೂ ಆದ ತಮ್ಮ ಗಾಯನದಿಂದ, ಸಂಗೀತ ಪ್ರಪಂಚದಲ್ಲಿ ತಮ್ಮ ಆಸ್ಥಿತ್ವವನ್ನು ಸ್ಥಿರಗೊಳಿಸಿಕೊಂಡರು. ಸಾಹಿತ್ಯದಲ್ಲಿ ಪ್ರಬುದ್ಧೆಯಾಗಿ ಬೆಳೆದು, ಸಂಗೀತದಲ್ಲಿ ಪ್ರೌಢರಾಗಿ, ಕಲಾ ಪರಿಪೂರ್ಣೆಯಾದ ಆಕೆ ಯಾರೊಬ್ಬರ ಆಶ್ರಯವೂ ಇಲ್ಲದೆ ಸ್ವತಂತ್ರವಾಗಿ ಬಾಳಿ ಬೆಳಗುವಂತಾದರು. ದಕ್ಷಿಣಭಾರತದ ಉತ್ತರತುದಿ ಬೊಬ್ಬಿಲಿ ಸಂಸ್ಥಾನದಿಂದ ಕೇರಳದ ಅನಂತ ಶಯನದವರೆಗೂ ಅಸಂಖ್ಯಾತ ಕಚೇರಿಗಳನ್ನು ಮಾಡಿ ಸಹಸ್ರಾರು ಮಂದಿ ರಸಿಕರನ್ನೂ ವಿದ್ವಜ್ಜನರನ್ನೂ ರಂಜಿಸಿದರು. ಯಶಸ್ಸು ಕೀರ್ತಿಗಳು ಅವರನ್ನು ಅರಸಿ ಬರಲು ಪ್ರಾರಂಭವಾಯಿತು. ಬಿರುದು ಪ್ರಶಸ್ತಿಗಳು ಸಾಲುಗಟ್ಟಿನಿಂತವು. ಧನಸಂಗ್ರಹಣೆಯೂ ಆಯಿತು. ಅವರ ಸಂಗೀತಾಭಿಮಾನಿಯಾಗಿದ್ದ ಕೃಷ್ಣಮಾಚಾರ್ಯರೆಂಬ ವಕೀಲರು ಎಲ್ಲ ಕಚೇರಿಗಳಲ್ಲೂ ತಪ್ಪದೆ ಹಾಜರಾಗುತ್ತಿದ್ದರು. ಆಕೆ ೧೯೦೫ರಿಂದ ೧೯೩೪೫ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಮಾಡಿದ ೧೨೩೫ ಕ್ಕೂ ಮೀರಿ ಶ್ರೇಷ್ಠ ಕಚೇರಿಗಳನ್ನು ದಾಖಲಿಸಿ ಇಟ್ಟಿದ್ದರಂತೆ. ಆ ಪೈಕಿ ಸುಮಾರು ನೂರು ಕಚೇರಿಗಳಲ್ಲಿ ದಿಗ್ವಿಜಯ ಸಾಧಿಸಿ, ಜಯಪತ್ರ ಸಂಪಾದಿಸಿದ್ದರು.

ಮದರಾಸಿನಲ್ಲಿ ಪ್ರತಿವರ್ಷವೂ ತಾವು ನಡೆಸುತ್ತಿದ್ದ ತ್ಯಾಗರಾಜ ಸ್ವಾಮಿಗಳ ಆರಾಧನೆಯನ್ನು, ಇನ್ನೂ ವೈಭವವಾಗಿ ನಡೆಸಲು ತೀರ್ಮಾನಿಸಿ, ಅದಕ್ಕೆ ಸೂಕ್ತವಾದ, ವಿಶಾಲವಾಗಿದ್ದು ಅಂದವಾದ ಮನೆಯನ್ನು ಶ್ರೀನಿವಾಸ ಅಯ್ಯರ್ ರಸ್ತೆಯಲ್ಲಿ ಖರೀದಿಸಿದರು. ಗಾಯಕಿ ತಿರುವಳಂದೂರು ರಾಜಾಯಿ, ಪ್ರಸಿದ್ಧವಾದಕಿ ವೀಣಾ ಧನಂ ಕೊಯಮತ್ತೂರು ತಾಯಿ, ಕೋಲಾರ ನಾಗರತ್ನ, ಸೇಲಂ ಗೋದಾವರಿ, ಗಾಯಕಿ ಹಾಗೂ ನರ್ತಕಿ ವನಜಾಕ್ಷಿ, ಏನಾಡಿ ಸಹೋದರಿಯಂತಹ ಸುಪ್ರಸಿದ್ಧ ಸಂಗೀತ ನೃತ್ಯ ಕಲಾ ಕೋವಿದರು ಅವರ ನೆರೆಹೊರೆಯವರಾಗಿದ್ದರು. ತಮ್ಮ ನೂತನ ಗೃಹ ಪ್ರವೇಶದ ಸಮಾರಂಭಕ್ಕೆ ಗುರುಗಳಾದ ಬಿಡಾರಂ ಕೃಷ್ಣಪ್ಪನವರಿಂದ ಕನ್ನಡ ಕೃತಿಗಳ ವಿಶೇಷ ಕಚೇರಿ ಏರ್ಪಡಿಸಿದ್ದರು. ಬಿಡಾರಂರವರನ್ನು ಮದರಾಸಿಗೆ ಮೊಟ್ಟಮೊದಲ ಬಾರಿಗೆ ಪರಿಚಯಿಸಿದವರೇ ನಾಗರತ್ನಮ್ಮನವರು. ಆ ಕಚೇರಿಗೆ ಬಂದಿದ್ದ ಮದರಾಸಿನ ವಿದ್ವಾಂಸರು, ಗಣ್ಯರು, ರಸಿಕರು ಮೆಚ್ಚಿ ಕೊಂಡಾಡಿದರು. ಆ ಸಂದರ್ಭದಲ್ಲಿ ದೇವರನಾಮಗಳಲ್ಲೇ ಅನೇಕ ಕಚೇರಿಗಳನ್ನು ಮಾಡಿ ಬಿಡಾರಂ ರವರು ತಮಿಳುನಾಡಿನಲ್ಲಿ ಜಯಭೇರಿ ಹೊಡೆದರೆಂದು ತಿಳಿದುಬರುತ್ತದೆ.

೧೯೩೫ರ ಹೊತ್ತಿಗೆ ಒಳ್ಳೆಯ ಸ್ಥಿತಿವಂತರಾಗಿದ್ದ ನಾಗರತ್ನಮ್ಮ ಧರ್ಮಕಾರ್ಯಗಳಕಡೆಗೆ ಗಮನ ಹರಿಸಿದ್ದರು. ಬಡಬಗ್ಗರಿಗೆ ದಾನಧರ್ಮ, ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ, ತಾಯಿಯ ಸ್ಮರಣಾರ್ಥ ಬೆಂಗಳೂರಿನ ಶ್ರೀರಾಮರ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ, ಮದರಾಸಿನ ತಾತ ಮುತ್ತಯ್ಯಪ್ಪನ್‌ ಬೀದಿಯ ಶ್ರೀಸೀತಾರಾಮ ಪ್ರಸನ್ನ ಆಂಜನೇಯಸ್ವಾಮಿಯ ವಾರ್ಷಿಕ ಉತ್ಸವ, ಮೇಲುಕೋಟೆಯ ವೈರಮುಡಿ ಉತ್ಸವ ಮಾರ್ಗದಲ್ಲಿ ಒಂದು ಮಂಟಪ ನಿರ್ಮಾಣ, ಮದರಾಸಿನ ನಂದುಕೇಶ ದೇವಾಲಯದಲ್ಲಿ ದೀಪೋತ್ಸವ ಮುಂತಾದ ಅನೇಕ ಸತ್ಕಾರ್ಯಗಳನ್ನು ಕೊಡುಗೈಯಿಂದ ಮಾಡುತ್ತಿದ್ದರು. ಆದರೆ ಅವರು ಜೀವನದಲ್ಲಿ ಸಾಧಿಸಿದ ಧರ್ಮಕಾರ್ಯಗಳಲ್ಲೆಲ್ಲ ಕಳಸಪ್ರಾಯವಾದ ಪವಿತ್ರಕಾರ್ಯವೆಮದರೆ ಸದ್ಗುರು ತ್ಯಾಗರಾಜರು ಬಾಳಿ ಬದುಕಿದ ತಿರುವಯ್ಯಾರಿನಲ್ಲಿ ಅವರ ಸಮಾಧಿ ಸ್ಥಳದ ಪುನರುತ್ಥಾನ ಮಾಡಿ ಮಂಟಪ ಮತ್ತು ಶ್ರೀಸೀತಾರಾಮ ದೇವಾಲಯವನ್ನು ನಿರ್ಮಿಸಿದುದು.

ಒಂದು ರಾತ್ರಿ ಸ್ವಪ್ನದಲ್ಲಿ ಅವರ ಆರಾಧ್ಯ ದೈವವಾದ ಶ್ರೀ ತ್ಯಾಗರಾಜರ ಸಮಾಧಿ ಸ್ಥಳವು ಕಂಡಂತಾಯಿತು. ಅಲ್ಲದೆ ತ್ಯಾಗರಾಜರು ತಮ್ಮ ಬೃಂದಾವನದ ಬಳಿ ಮಂಟಪ ದೇವಾಲಯವನ್ನು ನಿರ್ಮಿಸಲು ಆದೇಶಕೊಟ್ಟಂತೆ ಭಾಸವಾಯಿತು. ಒಡನೆಯೇ ಅವರಿಗೆ, ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಮೈಸೂರಿನಲ್ಲಿ ಪ್ರಸನ್ನ ಸೀತಾರಾಮ ಮಂದಿರವನ್ನು ಆಕಾಲದಲ್ಲಿ ಕಟ್ಟಿಸಿದ ತಮ್ಮ ಗುರುಗಳಾದ ಬಿಡಾರಂ ಕೃಷ್ಣಪ್ಪನವರ ನೆನಪಾಯಿತು. ತ್ಯಾಗರಾಜರ ಕೃಪೆಯಿಂದ ಜೀವನದಲ್ಲಿ ಅಪಾರ ಕೀರ್ತಿ, ಧನಕನಕಾದಿಗಳು ಲಭ್ಯವಾಗಿವೆ. ತಾನೂ ಸಹ ತನ್ನ ಗುರುವನ್ನು ಅನುಸರಿಸಿ ತನ್ನ ಸರ್ವಸ್ವವನ್ನೂ ತ್ಯಾಗಯ್ಯನವರಿಗೂ, ಅವರ ಆರಾಧ್ಯ ದೈವವಾದ ಶ್ರೀರಾಮನ ಸೇವೆಗಾಗಿ ಧಾರೆ ಎರೆದು, ಸಮಾಧಿಸ್ಥಳದ ಮಂಟಪ ನಿರ್ಮಿಸಲು ನಿರ್ಧರಿಸಿ ತಕ್ಷಣ ಕಾರ್ಯಪ್ರವೃತ್ತರಾದರು. ಕೆಲವು ಮಿತ್ರರೊಡನೆ ಮದರಾಸಿನಿಂದ ತಿರುವಯ್ಯಾರಿಗೆ ಧಾವಿಸಿದರು. ಕಾವೇರಿ ತೀರದಲ್ಲಿ ಗಿಡಗಂಟೆಗಳ ಮಧ್ಯೆ ಮುಚ್ಚಿಹೋಗಿದ್ದ ಸಮಾಧಿ ಸ್ಥಳವನ್ನು ಗುರುತಿಸಿ, ಆ ಸ್ಥಳದ ಸುತ್ತಮುತ್ತಲ್ಲಿನ ಜಾಗವನ್ನು ಸರಕಾರದಿಂದ ಅಧಿಕೃತವಾಗಿ ಪಡೆಯುವುದರಿಂದ ಹಿಡಿದು, ಅವರ ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಧನ ಸಂಗ್ರಹಣೆಗಾಗಿ ನೂರಾರು ಕಚೇರಿಗಳನ್ನು ಮಾಡಿದರು. ನಾಗರತ್ನಮ್ಮನವರು ಈ ವೇಳೆಗೆ ಇದ್ದ ಒಂದೆರಡು ಮಕ್ಕಳನ್ನು ಕಳೆದುಕೊಂಡು, ಜೀವನದಲ್ಲಿ ನೋವುಂಡು ಒಂಟಿಯಾಗಿದ್ದರು. ಐಹಿಕ ಭೋಗ ಭಾಗ್ಯಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಉಳಿದಿರಲಿಲ್ಲ. ಶ್ರೀತ್ಯಾಗರಾಜರ ಸಮಾಧಿ ಸ್ಥಳದ ಮಂಟಪ ದೇವಾಲಯ ನಿರ್ಮಾಣವೇ ಅವರ ಜೀವನದ ಏಕೈಕ ಗುರಿಯಾಯಿತು. ತಮ್ಮಲ್ಲಿದ್ದ ಸಮಸ್ತ ಧನರಾಶಿಯೊಂದಿಗೆ, ಮದರಾಸಿನ ತಮ್ಮ ಭವ್ಯವಾದ ಮನೆಯನ್ನು ಮಾರಿ ಬಂದ ೩೦,೦೦೦ ರೂಗಳನ್ನು, ಅತ್ಯಮೂಲ್ಯವಾದ ತಮ್ಮ ವಜ್ರವೈಡೂರ್ಯದ ನಿಲುವಾಭರಣಗಳನ್ನು ಮಾರಿ ಬಂದ ಹಣವನ್ನೂ ಕಟ್ಟಡದ ನಿಧಿಗೆ ಸೇರಿಸಿದರು. ಪುಣ್ಯಕಾರ್ಯಕ್ಕೆ ಒದಗಿ ಬಂದ ಜನಸಹಾಯ ಧನ ಸಹಾಯಗಳಿಂದಾಗಿ ೧೯೨೧ರಲ್ಲಿ ಪ್ರಾರಂಭವಾದ ಸಮಾಧಿ ಸ್ಥಳದ ಮಂಟಪ ದೇವಾಲಯದ ನಿರ್ಮಾಣ ಕಾರ್ಯ ೧೯೨೫ರಲ್ಲಿ ಸುಗಮವಾಗಿ ಮುಗಿಯಿತು.

ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಸೇರುವ ಸಹಸ್ರಾರು ಸಂಗೀತ ವಿದ್ವಾಂಸರಿಗೂ ಸಂಗೀತ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ದೇವಾಲಯದ ಕಟ್ಟಡ ನಿರ್ಮಾಣವಾಯಿತು. ಬೃಂದಾವನದ ಮುಂಭಾಗದಲ್ಲಿ ಕರಿಯ ಶಿಲೆಯ ತ್ಯಾಗರಾಜರ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ನಾಗರತ್ನಮ್ಮನವರು ತಮ್ಮಲ್ಲಿದ್ದ ಅಮೂಲ್ಯ ದೇವತಾ ವಿಗ್ರಹಗಳನ್ನೂ, ಅಲಂಕಾರ ಪ್ರಭಾವಳಿಗಳನ್ನು ದೇವಾಲಯಕ್ಕೇ ಕೊಟ್ಟು, ತ್ಯಾಗರಾಜರ ವಂಶಸ್ಥರಾದ ರಾಮುಡು ಭಾಗವತರನ್ನು ದೈನಂದಿನ ಪೂಜೆಗೆ ನೇಮಿಸಿದರು. ಬೃಂಧಾವನದ ದಿನನಿತ್ಯದ ಪೂಜೆ ಮತ್ತು ವಿಶೇಷ ಉತ್ಸವಾದಿ ದಿನಗಳ ಪೂಜಾ ಕೈಂಕರ್ಯಗಳು ನಿರಂತರವಾಗಿ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ, ದೇವಾಲಯದ ಹೆಸರಿನಲ್ಲಿ ಹುಟ್ಟುವಳಿ ಮಾಡಲು ಸ್ವಲ್ಪ ಭೂಮಿಯನ್ನು ಕ್ರಯಿಸಿದುದಲ್ಲದೆ, ತಮ್ಮಲ್ಲಿ ಅಳಿದುಳಿದಿದ್ದ ಚಿನ್ನಾಭರಣಗಳನ್ನೂ ಸ್ವಾಮಿಯ ಸೇವೆಗಾಗಿ ಕೊಟ್ಟುಬಿಟ್ಟರು. ಈ ಏರ್ಪಾಡುಗಳ ಉಸ್ತುವಾರಿಗೆ ವಕೀಲ್‌ ರಾಜಗೋಪಾಲಚಾರ್ಯರು, ನಾಗರಾಜಭಾಗವತರು ಮತ್ತು ಪಿಟೀಲು ವಿದ್ವಾನ್‌ ಸುಬ್ರಹ್ಮಣ್ಯ ಅಯ್ಯರ್ ಅಂತಹ ಗಣ್ಯವ್ಯಕ್ತಿಗಳನ್ನು ಧರ್ಮದರ್ಶಿಗಳಾಗಿ ನೇಮಿಸಿದರು.

ದೇವಾಲಯದ ಕುಂಭಾಭಿಷೇಕದ ದಿನ ಪೂಜಾ ವಿಧಿಗಳು ಮುಗಿದು, ತಾವೇ ರಚಿಸಿದ ತ್ಯಾಗರಾಜ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ, ಕೈಯ್ಯಾರ ಚಾಮರಸೇವೆ ನಡೆಸಿ, ಮಂಗಳ ಮಾಡಿದಾಗ ಅವರಲ್ಲಿ ಧನ್ಯತೆಯ ಭಾವ ಉಕ್ಕಿತು. ಅವರ ಜೀವನದ ಕನಸು ನನಸಾಗಿತ್ತು. ಇಹಪರಗಳೆರಡಕ್ಕೂ ಸಲ್ಲುವಂತಹ ಮಹತ್ಕಾರ್ಯವನ್ನು ನಾಗರತ್ನಮ್ಮನವರು ತ್ಯಾಗ, ಭಕ್ತಿ, ಶ್ರದ್ಧೆ, ನಿಸ್ವಾರ್ಥಸೇವೆ ಮತ್ತು ಕಾರ್ಯಸಾಧನೆಯಿಂದ ನಿರ್ವಹಿಸಿದ್ದರು.

ಸಿ. ನಾಗಯ್ಯನವರೆಂಬ ತೆಲುಗುಪ್ರಾಂತದ ಹಿರಿಯ ಚಿತ್ರನಟರು, ನಾಗರತ್ನಮ್ಮನವರ ವಾಸಕ್ಕಾಗಿ, ‘ತ್ಯಾಗಬ್ರಹ್ಮನಿಲಯ’ವೆಂಬ ಮನೆಯನ್ನು ಇತ್ತರು. ನಾಗರತ್ನಮ್ಮ ಕೊನೆಯವರೆಗೂ ಈ ಮನೆಯಲ್ಲೇ ಇದ್ದರು. ತ್ಯಾಗರಾರಜರ ಕೃತಿಗಳ ಸಂಪ್ರದಾಯಬದ್ಧ ಶಿಕ್ಷಣಕ್ಕಾಗಿ ತ್ಯಾಗಬ್ರಹ್ಮನಿಲಯದಲ್ಲೇ ಒಂದು ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಬೃಂದಾನವನ್ನು ಸಂದರ್ಶಿಸಲು ಬರುವ ಭಕ್ತಾದಿಗಳಿಗೂ ಇಳಿದುಕೊಳ್ಳಲು ಅಲ್ಲಿಯೇ ಅವಕಾಶ ಕಲ್ಪಿಸಲಾಯಿತು. ಪ್ರತಿದಿನ ತ್ಯಾಗರಾಜರ ಬೃಂದಾವನದ ಪೂಜಾಕೈಂಕರ್ಯಗಳಲ್ಲಿ ಭಾಗವಹಿಸುತ್ತ, ಮೇಲ್ವಿಚಾರಣೆ ನಡೆಸುತ್ತ, ಸಂಗೀತಕಲಿಯುವ ಆಸೆಯುಳ್ಳವರಿಗೆ ವಿದ್ಯಾದಾನ ಮಾಡುತ್ತ, ಸಂದರ್ಶಿಸುವ ಭಕ್ತರು ವಿದ್ವಾಂಸರೊಡನೆ ಸಂಗೀತದ ಬಗ್ಗೆ ಸಂಭಾಷಣೆ ಮಾಡುತ್ತ ತಮ್ಮ ದಿನಗಳನ್ನು ಕಳೆಯುತ್ತಿದ್ದರು. ಪ್ರತಿವರ್ಷ ಆರಾಧನೆಯ ದಿನ ಅವರ ಸಂಭ್ರಮ ಹೇಳತೀರದು. ಬೆಳಗ್ಗೆ ಪ್ರಾರ್ಥನೆಯನ್ನು ಸಲ್ಲಿಸಿ, ನಂತರ ಪಕ್ಕವಾದ್ಯಗಳೊಡನೆ ವೇದಿಕೆಏರಿ, ತ್ಯಾಗರಾಜರ ಹಲವಾರು ಕೃತಿಗಳನ್ನು ಹಾಡುತ್ತಿದ್ದರು. ಬೃಂದಾವನದ ಸುತ್ತಲೂ ಸಾವಿರಾರು ವಿದ್ವಾಂಸರು ಸೇರಿ ಹಾಡುವ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾಯನದಿಂದ ಪುಳಕಿತರಾಗುತ್ತಿದ್ದರು. ಸಂಗೀತಸೇವೆ ಬಗೆ ಬಗೆಯಾಗಿ ನಡೆಯುತ್ತಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ತಿರುವಯ್ಯಾರ್ ಅಣ್ಣಾಸಾಮಿ ಭಾಗವತರ ಹರಿಕಥೆ, ಬನ್ನಿಬಾಯಿಯವರ ಕಥಾ ಕಾಲಕ್ಷೇಪ, ಎಂಬಾರ್ ವಿಜಯರಾಘವಾಚಾರ್ಯರ ಸಂಗೀತರೂಪಕಗಳು ನಾಗರತ್ನಮ್ಮನವರಿಗೆ ಅತ್ಯಂತ ಪ್ರಿಯವಾಗಿದ್ದುವಂತೆ. ಪ್ರತಿವರ್ಷ ಆರಾಧನೆಯಂದು ಪಲ್ಲಡಂ ಸಂಜೀವರಾಯರು ಕೊಳಲಿನಲ್ಲಿ ‘ಚೇತುಲಾರ’ ಮತ್ತು ‘ನೆನೆಂದು ವೆದಕುದುರಾ’ ಕೃತಿಗಳನ್ನು ಇತರ ಕಾರ್ಯಕ್ರಮಗಳಿಗೂ ಮೊದಲು ನುಡಿಸಲೇಬೇಕು. ದೀಪಾರಾಧನೆಗೆ ಮೊದಲು ನಾಗರತ್ನಮ್ಮನವರ ಸ್ವರಚಿತ ತ್ಯಾಗರಾಜ ಅಷ್ಟೋತ್ತರ, ಚಾಮರಸೇವ ನಡೆಸುವ ಸಂಪ್ರದಾಯ ರೂಢಿಯಾಯಿತು. ತ್ಯಾಗರಾಜರ ಉತ್ಸವವು ತ್ಯಾಗ ಬ್ರಹ್ಮನಿಲಯದ ಮುಂದೆ ನಿಂತು ನಾಗರತ್ನಮ್ಮನವರಿಂದ ಆರತಿ ಸ್ವೀಕರಿಸಿ ಮುಂದೆ ಸಾಗುವುದು ಸಂಪ್ರದಾಯವಾಗಿತ್ತು.

ತಿರುವಯ್ಯಾರಿಗೆ ಬರುವ ಕನ್ನಡನಾಡಿನ ವಿದ್ವಾಂಸರಿಗೆ ಪ್ರತ್ಯೇಕವಾಗಿ ಒಂದು ಮೈಸೂರು ಛತ್ರವನ್ನು ಕಟ್ಟಿಸಬೇಕೆಂಬುದು ಅವರ ಹೆಬ್ಬಯಕೆ. ಅದಕ್ಕಾಗಿ ಬಹಳ ಪ್ರಯತ್ನಪಟ್ಟರೂ ಅನುಕೂಲವಾಗಲಿಲ್ಲ. ಕೊನೆಗೂ ಕಾರ್ಯವೇನೋ ಪ್ರಾರಂಭವಾದರೂ, ಸಂಪೂರ್ಣವಾದುದನ್ನು ಅವರು ಕಾಣಲಿಲ್ಲ. ನಾಗರತ್ನಮ್ಮನವರು ೮೦ ವರ್ಷಗಳ ತುಂಬು ಜೀವನ ನಡೆಸಿದರು. ಕೊನೆಯವರೆಗೂ ಸದ್ಗುರು ತ್ಯಾಗರಾಜರ ಭಕ್ತೆ ನಾಗರತ್ನಮ್ಮ ವಿರಕ್ತೆಯಾಗಿ, ಗುರುಭಕ್ತಿ, ಗುರುಧ್ಯಾನಗಳಲ್ಲಿಯೂ, ಭಜನೆ ಸಂಗೀತಗಳಲ್ಲಿಯೂ ದಿನ ಕಳೆಯುತ್ತಿದ್ದರು. ವೈಶಾಖಮಾಸದ ಬಹುಳ ಏಕಾದಶಿ (೧೫ ಮೇ ೧೯೫೨) ಯಂದು ತ್ಯಾಗರಾಜರ ಪೂಜೆಸಲ್ಲಿಸಿ, ಒಂದು ಲೋಟ ಹಾಲಿನ ಪ್ರಸಾದವನ್ನು ಸ್ವೀಕರಿಸಿದ ನಾಗರತ್ನಮ್ಮನವರು, ಮುಂದಿನ ನಿಮಿಷದಲ್ಲಿ ರಾಮನಾಮವನ್ನು ಪಠಿಸುತ್ತ ಕಣ್ಮುಚ್ಚಿ ಅನಂತದಲ್ಲಿ ಲೀನರಾದರು.

ಅವರ ಇಚ್ಛೆಯಂತೆ ತ್ಯಾಗರಾಜಸ್ವಾಮಿಗಳ ಸಮಾಧಿಗೆ ಎದುರಾಗಿ ಸ್ವಲ್ಪ ದೂರದಲ್ಲಿ ಅವರ ಸಮಾಧಿ ಮಾಡಿ ಒಂದು ಪುಟ್ಟಗುಡಿ ಕಟ್ಟಲಾಯಿತು. ಅದರಲ್ಲಿ ಸದ್ಗುರುವಿನ ಬೃಂದಾವನವನ್ನೇ ನೋಡುತ್ತ ಕೈಮುಗಿದು ಕುಳಿತಿರುವ ಮಹಾಭಕ್ತೆ ನಾಗರತ್ನಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಸಂಗೀತ-ನೃತ್ಯಕಲೆ ಗಳೊಡನೆ ಸೌಂದರ್ಯ ಸಿರಿಸಂಪದಗಳ ಸಂಗಮದಂತಿದ್ದ ‘ವಿದ್ಯಾಸುಂದರಿ’ ನಾಗರತ್ನಮ್ಮನವರು ವಿನಯ ವಿದೇಯತೆಗಳ ತೌರು, ವೈರಾಗ್ಯದ ಬೀಡಾಗಿದ್ದರು. ನವಿರಾದ ಸಂಭಾಷಣೆ, ಸೌಮ್ಯವಾದ ನಡುವಳಿಕೆಯಿಂದ ಎಲ್ಲರ ಪ್ರೀತಿ ಗೌರವಾದರಗಳಿಗೆ ಪಾತ್ರರಾಗಿದ್ದರು. ನಾಗರತ್ನಮ್ಮನವರದು ನೋಡಿದವರಲ್ಲಿ ಪೂಜ್ಯಭಾವನೆಯನ್ನು ಮೂಡಿಸುವಂತಹ ಲಕ್ಷಣವಾದ ಸ್ನಗ್ಧ ಸೌಂದರ್ಯ. ಹಾಡುವಗಲೂ ಶಬ್ಧ-ಅರ್ಥಗಳ ಭಾವ ವಿಶೇಷಗಳನ್ನು ತಾವೂ ತಲ್ಲೀನರಾಗಿ ಅನುಭವಿಸಿ ಶ್ರೋತೃಗಳಿಗೂ ವರ್ಗಾಯಿಸುತ್ತಿದ್ದರು. ಯಶಸ್ಸು, ಪ್ರಶಸ್ತಿ, ಧನಸಂಗ್ರಹಣೆಯ ಹೆಮ್ಮೆಯ ಕ್ಷಣಗಳು ಕಳೆಯುತ್ತಲೇ, ಅವರ ಮನಸ್ಸು ಹೆಚ್ಚು ಹೆಚ್ಚು ವೈರಾಗ್ಯ, ದಾನಧರ್ಮ, ಪೂಜೆ ಗುರುಭಕ್ತಿಗಳನ್ನು ಓಲೈಸುತ್ತಿತ್ತು. ಗುರುಹಿರಿಯರಲ್ಲಿ ಭಕ್ತಿ, ದೀನ ದಲಿತರಲ್ಲಿ ಅನುಕಂಪ ಅವರ ಹುಟ್ಟುಗುಣ. ಸಮಾಜದ ಅನೇಕ ಗಣ್ಯರು ಗೌರವಾನ್ವಿತ ಅಭಿಮಾನಿಗಳು, ವಿದ್ವಾಂಸರು, ಸಾಹಿತಿಗಳು, ಕಲಾರಸಿಕರು ನಾಗರತ್ನಮ್ಮನವರ ಕಲೆಯನ್ನೂ ವ್ಯಕ್ತಿತ್ವವನ್ನೂ ಸಮೀಪದಿಂದ ಕಂಡು ಮೆಚ್ಚಿ ಕೊಂಡಾಡಿದ್ದಾರೆ. ಕರ್ನಾಟಕದ ಚೀಫ್‌ ಜಡ್ಜ್‌ ನರಹರಿರಾಯರು, ಜಸ್ಟಿಸ್‌ ಚಂದ್ರಶೇಖರ ಅಯ್ಯರ್, ಪುಟ್ಟಣ್ಣ ಶೆಟ್ಟರು, ವೀಣೆ ಸುಬ್ಬಣ್ಣನವರು, ಮೈಸೂರು ವಾಸುದೇವಾಚಾರ್ಯರು, ಡಿ.ವಿ. ಗುಂಡಪ್ಪನವರು, ಬಿ.ವಿ.ಕೆ ಶಾಸ್ತ್ರಿಗಳು, ರಾಜಶ್ರೀ ಮುಂತಾದ ದಿಗ್ಗಜರು ಆ ಪೈಕಿ ಕೆಲವರೆಂದ ಮೇಲೆ ನಾಗರತ್ನಮ್ಮನವರ ಹಿರಿಮೆ ಎಷ್ಟೆಂದು ಊಹಿಸಬಹುದು. ಅಂತಹ ಒಂದೆರಡು ಭೇಟಿಗಳನ್ನು ಇಲ್ಲಿ ನೆನೆದರೆ ಅಪ್ರಸ್ತುತವಾಗಲಾರದು.

ಒಮ್ಮೆ ವಾಸುದೇವಾಚಾರ್ಯರು ನಾಗರತ್ನಮ್ಮನವರನ್ನು ಕಾಣಲು ಮದರಾಸಿನಲ್ಲಿ ಅವರ ಮನೆಗೆ ಹೋಗಿದ್ದರು. ಅಲ್ಲಿ ತಂಬೂರಿಯನ್ನು ಕಂಡೊಡನೆ ಆಚಾರ್ಯರು ನಾಗರತ್ನಮ್ಮನವರ ಗಾಯನ ಕೇಳಿ ಬಹಳ ದಿನಗಳಾದುವೆಂದು, ಆಕೆಯ ಸಂಗೀತವನ್ನು ಕೇಳ ಬಯಸಿದರು. ನಾಗರತ್ನಮ್ಮನವರು, ‘ಸೂರ್ಯನಿಗೆ ದೀಪೋತ್ಸವವೇ’ ಎಂದು ಆಚಾರ್ಯರ ಹಿರಿಮೆಯನ್ನು ಜಾಣತನದಿಂದ ಹೊಗಳಿದರಂತೆ. ಆದರೆ ಅಂದು ಅವರು ದಿವ್ಯವಾಗಿ ಹಾಡಿದ ಸದಾಶಿವರಾಯರ ಕಮಾಚ್‌ ರಾಗದ ‘ಪರಮಾದ್ಭುತ ಮೈನ’ ಎಂಬ ಕೃತಿಯನ್ನು ಎಂದೂ ಮರೆಯಲಾಗದು ಎಂದಿದ್ದಾರೆ ಆಚಾರ್ಯರು.

ಮತ್ತೊಮ್ಮೆ ಡಿ.ವಿ. ಜಿಯವರು ವಯಸ್ಸಾದ ನಾಗರತ್ನಮ್ಮನವರನ್ನು ಭೇಟಿಯಾದಾಗ ಆಕೆಯ ಹಾಸ್ಯಪ್ರಜ್ಞೆಯ ಅನುಭವವಾಯಿತು. ಆಕೆ ತನ್ನ ವಿಷಯವನ್ನೇ ತಮಾಷೆಯಾಗಿ ಹೇಳಿಕೊಳ್ಳುತ್ತ, “ಹುಟ್ಟಿನಲ್ಲಿ ನಾಗರತ್ನ, ಆಮೇಲೆ ಭೋಗ ರತ್ನ, ಈಗ ರೋಗ ರತ್ನ” ಎಂದರಂತೆ. ಕವಿವರ್ಯರು ಮಾತಿನಲ್ಲಿ ಸೋಲಲಿಲ್ಲ. “ಮತ್ತೆರಡನ್ನು ಮರೆತುಬಿಟ್ಟಿರಿ. ಒಂದು ರಾಗರತ್ನ, ಇನ್ನೊಂದು ತ್ಯಾಗರತ್ನ. ಭೋಗರೋಗಗಳು ಕ್ಷಣಿಕವಾದುವು. ನಿಮ್ಮ ರಾಗ ಕೇಳಿದವರ ಮನಸ್ಸಿನಲ್ಲಿ …….. ಚಿರಕಾಲ ಉಳಿದುಕೊಂಡಿರುತ್ತದೆ. ನಿಮ್ಮ ತ್ಯಾಗದ ಪ್ರತ್ಯಕ್ಷರೂಪವಾದ ತಿರುವಯ್ಯಾರು ಕ್ಷೇತ್ರದ ದೇವತಾಮಂದಿರಗಳು ಶಾಶ್ವತವಾಗಿ ನಿಂತಿರುತ್ತವೆ” ಎಂದು ಹೃತ್ಪೂರ್ವಕವಾಗಿ ಆಕೆಯ ಕಲೆ ವ್ಯಕ್ತಿತ್ವಗಳನ್ನು ಅಭಿನಂದಿಸಿದರಂತೆ.

ಸಂಪ್ರದಾಯ ಬದ್ಧವಾದ ಶಾಸ್ತ್ರೀಯ ಸಂಗೀತ ನಾಟ್ಯಗಳು ನಾಗರತ್ನಮ್ಮನವರ ನರನಾಡಿಗಳಲ್ಲಿ ಹರಿಯುತ್ತಿದ್ದವು. ಡಿ.ವಿ.ಜಿ.ಯವರು ಬೆಂಗಳೂರಿನಲ್ಲಿ ಅವರನ್ನು ಕಡೆಯಬಾರಿಗೆ ಭೇಟಿಯಾದಾಗ ನಾಗರತ್ನಮ್ಮನವರು ವಯೋಧರ್ಮದಿಂದ ಸ್ವಲ್ಪ ಆಲಸ್ಯವಾಗಿ ಮಲಗಿದ್ದರು. ಮಾತು ನಾಟ್ಯಕಲೆ ಸಂಪ್ರದಾಯದ ಕಡೆ ತಿರುಗಿದಾಗ ನಾಗರತ್ನಮ್ಮನವರಲ್ಲಿ ಸ್ಫೂರ್ತಿ ಉಕ್ಕಿತು. ತಕ್ಷಣ ಎದ್ದು ಕುಳಿತು ಕೈಮುಗಿದುರಾಗಾಲಾಪನೆ ಮಾಡಿ ‘ಸಭಾಕಲ್ಪತರುಂ ವಂದೇ’ ಎಂದು ನಾಟರಾಗದಲ್ಲಿ ಸಭಾವಂದನೆ ಮಾಡಿ, ವಸಂತರಾಗದ ಪದಮಟ್ಟು ವರ್ಣವನ್ನು ನರ್ತನ ಮಾಡಬೇಕೆಂದು ತಿಳಿಸಿ ಹತ್ತು ನಿಮಿಷ ಕುಳಿತಲ್ಲೇ ನಾಟ್ಯ ಪ್ರದರ್ಶನ ಮಾಡಿದರಂತೆ. ಮುಂದುವರಿದು, ‘ಅಲರಿಪು’ ಮಾಡಿ ಸಭಿಕರ ಮನಸ್ಸು ಅರಳಬೇಕು’ ಎಂದರಂತೆ. ಕಲೆಯಲ್ಲಿ ಅವರಿಗೆ ಅವಿನಾಭಾವ. ಅನಂತರ ‘ಯಾಹಿ ಮಾಧವ…. ಯಾಹಿಕೇಶವ’ ಎಂಬ, ಅವರಿಗೆ ಬಹುಪ್ರಿಯವಾದ ಅಷ್ಟಪದಿಯನ್ನು ಮೋಹನರಾಗದಲ್ಲಿ ಹಾಡಿ, ‘ಯಾಹಿ’ ಎಂಬ ಒಂದೇ ಪದಕ್ಕೆ ದೂರಹೋಗು, ಹತ್ತಿರ ಬಾ, ಬೇಸರ, ಆಕ್ಷೇಪಣೆ, ನಿರಾಶೆ ಮುಂತಾದ ಅನೇಕ ಅರ್ಥಗಳನ್ನು ನಾಗರತ್ನಮ್ಮನವರು ಲೀಲಾಜಾಲವಾಗಿ ಅಭಿನಯಿಸುತ್ತ, ಸಂಪ್ರದಾಯ ಬದ್ಧವಾದ ನಾಟ್ಯವನ್ನು ಪರಿಚಯಿಸಿದರಂತೆ.

ಅವರ ಸಂಗೀತ ಪಾಠಕ್ರಮವೂ ವಿಶಿಷ್ಟವೇ. ಸಾಮಾನ್ಯವಾಗಿ ವಿದ್ವಾಂಸರು ಪಾಠಮಾಡಬಹುದಾದ ಸರಳವಾದ ಕೃತಿಗಳನ್ನು ತೆಗೆದುಕೊಳ್ಳದೇ, ಕ್ಲಿಷ್ಟವಾದ ಅಪರೂಪದ ಕೃತಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಗಮಕಗಳನ್ನೂ, ಪಲುಕುಗಳನ್ನೂ, ಜಾರುಗಳನ್ನೂ ಹಾಡಿ ತೋರಿಸಿ ತಿದ್ದುತ್ತ, ಶಿಷ್ಯರಿಗೆ ಸ್ವರಗಳ ಮಾರ್ಗದರ್ಶನ ಮಾಡುತ್ತಿದ್ದರು. ಸಹಜವಾಗಿಯೇ ಅವರಿಗೆ ತ್ಯಾಗರಾಜರ ಕೃತಿಗಳಲ್ಲಿ ಪ್ರೀತಿ. ಯದುಕುಲಕಾಂಭೋದಿ ರಾಗದ ತ್ಯಾಗರಾಜರ ಕೃತಿ ‘ಶ್ರೀ ರಾಮ ಜಯರಾಮ’ ಅವರ ಶಾರೀರದಲ್ಲಿ ಘನವಾಗಿರುತ್ತಿತ್ತೆಂದು ವಾಸುದೇವಚಾರ್ಯರು ನೆನೆಸಿಕೊಳ್ಳುತ್ತಿದ್ದಂತೆ, ಕಚೇರಿಗಳಲ್ಲಿಯೂ ತ್ಯಾಗಯ್ಯನವರ ಕೃತಿಗಳು, ಕನ್ನಡ ದೇವರನಾಮಗಳೇ ಹೆಚ್ಚಾಗಿರುತ್ತಿದ್ದುವು. ದೀಕ್ಷಿತರ ಕೃತಿಗಳು ಕಡಿಮೆ. ಸರಿಯಾದ ಸಾಮರ್ಥ್ಯವಿಲ್ಲದೆ, ಕ್ಲಿಷ್ಟವಾದ ಸಾಹಿತ್ಯವುಳ್ಳ ದೀಕ್ಷಿತರ ಕೃತಿಗಳನ್ನು ಹಾಡಬಾರದೆಂದು ಹೇಳುತ್ತಿದ್ದರು. ಅವರದು ಅಚ್ಚುಕಟ್ಟಾದ ಬಿಗಿಯಾದ ಸಂಗೀತ. ಮಧುರವಾದ ಕಂಠದಲ್ಲಿ ಗಂಭೀರವಾದ ಪುರುಷ ಶೈಲಿಯ ಬಿಕ್ಕಟ್ಟು ಅವರ ಸಂಗೀತದ ವಿಶೇಷ. ಖಚಿತವಾದ ಲಯಜ್ಞಾನ, ಸಂಗೀತಶಾಸ್ತ್ರ ಅಧ್ಯಯನ, ನಾಟ್ಯ ಮತ್ತು ಅಭಿನಯಗಳ ಶಾಸ್ತ್ರೋಕ್ತ ಅಧ್ಯಯನ ನಡೆಸಿದ್ದುದರಿಂದ, ಭಕ್ತಿಭಾವಗಳ ಸಂಗಮವೂ ಆದಾಗ ಅವರ ಸಂಗೀತ ವಿಶೇಷ ಮೆರುಗನ್ನು ಪಡೆಯುತ್ತಿತ್ತು. ಮನೋಧರ್ಮಕ್ಕೆ, ಅದರಲ್ಲೂ ಉನ್ನತ ಮಟ್ಟದ ರಾಗಾಲಾಪನೆಗೆ ತಮ್ಮ ಕಾರ್ಯಕ್ರಮಗಳಲ್ಲಿ ಅಗ್ರಸ್ಥಾನವೀಯುತ್ತಿದ್ದರು. ಕಲ್ಪನಾಸ್ವರಗಳು ವಿದ್ವತ್ಪೂರ್ಣವೂ, ರಂಜನೀಯವೂ ಆಗಿರುತ್ತಿದ್ದವು. ಸಂಗೀತ ನಾಟ್ಯಗಳೆರಡರಲ್ಲೂ ಅಪ್ರತಿಮ ಪಾಂಡಿತ್ಯವಿತ್ತಾದರೂ, ಅವರ ಒಲವು ಗಾಯನದ ಕಡೆಗೇ. ಇವರ ಸಂಗೀತ ಕಚೇರಿಗಳಿಗೆ ಮದರಾಸಿನ ಶಿವ ಸುಬ್ರಹ್ಮಣ್ಯ ಅಯ್ಯರ್‌ ಎಂಬ ವಿದ್ವಾಂಸರು ಪಿಟೀಲು ನುಡಿಸುತ್ತಿದ್ದರು.

ಗ್ರಾಮಫೋನ್‌ ರೆಕಾರ್ಡ್‌‌ಗಾಗಿ ಅವರು ಹಾಡಿದ್ದ ‘ಭಕ್ತಾಪಾಯ ಭುಜಂಗ ಗಾರುಡ ಮನಿಃ ತ್ರೈಲೋಕ್ಯರಕ್ಷಾಮಣಿಃ’, ‘ಶತ್ರುಚ್ಛೇದೆಕ ಮಂತ್ರಂ’ ಮೊದಲಾದ ಮುಕುಂದ ಮಾಲಾ ಸ್ತೋತ್ರದ ಸಂಸ್ಕೃತ ಶ್ಲೋಕಗಳು ಅದ್ವಿತೀಯವಾದುವೆಂದು ವಿದ್ವಾಂಸರಿಂದ ಮೆಚ್ಚುಗೆ ಪಡೆದಿವೆ. ಚಂದ್ರಶೇಖರ ಶಾಸ್ತ್ರಿಗಳ ಅನೇಕ ಜಾವಳಿಗಳನ್ನು ನಾಗರತ್ನಮ್ಮನವರು ಜನಪ್ರಿಯಗೊಳಿಸಿದರು. ಗ್ರಾಮಫೋನ್‌ ರೆಕಾರ್ಡ್‌‌ನಲ್ಲಿ ‘ಜಾಣತನಮು ಮಾಟಲು’ ಎಂಬ ಕಾಪಿರಾಗ, ಮಿಶ್ರ ಛಾಪುತಾಳದ ‘ಗರಳಪುರೀಶ’ ಅಂಕಿತವಿರುವ ಜಾವಳಿಯನ್ನೂ ‘ಬಾರೋಪ್ರಿಯ’ ಎಂಬ ತೋಡಿರಾಗ ರೂಪಕತಾಳದ ಜಾವಳಿಯನ್ನೂ, ‘ತೋರೆ ತೋಯಜನೇತ್ರೆ’ ಎಂಬ ಕಮಾಚ್‌ರಾಗ ಆದಿತಾಳದ ಜಾವಳಿಯನ್ನೂ ಹಾಡಿದ್ದಾರೆ. ಅವರು ವಾಗ್ಗೆಯಕಾರರಲ್ಲದಿದ್ದರೂ ಅವರೇ ರಚಿಸಿದ ಸಮಯ ಸ್ಪೂರ್ತಿಯ ಜಾವಳಿ ‘ಮಾತಾಡ ಬಾರದೇನೋ’(ಕಮಾಚ್‌), ಕೊಯಮತ್ತೂರು ತಾಯಿಯ ಧ್ವನಿಯಲ್ಲಿ ಮುದ್ರಿತವಾಗಿದೆ. ಅವರಿಗಿದ್ದ ಭಾಷಾಪಾಂಡಿತ್ಯ ಅವರ ಹಲವಾರು ಸಾಹಿತ್ಯ ರಚನೆಗಳಲ್ಲಿ ಹೊರಹೊಮ್ಕಿತು. ತ್ಯಾಗಬ್ರಹ್ಮರ ಅಷ್ಟೋತ್ತರ ಶತನಾಮಾವಳಿಯಲ್ಲದೇ ಸಹಸ್ರನಾಮ, ಗಣಪತಿ ಅಷ್ಟೋತ್ತರ, ಆಂಜನೇಯ ಅಷ್ಟೋತ್ತರಗಳನ್ನೂ ರಚಿಸಿದ್ದರೆಂದು ತಿಳಿದುಬರುತ್ತದೆ. ಕನ್ನಡನಾಡಿನಲ್ಲಿ ಇವು ಎಲ್ಲರಿಗೂ ತಲುಪದೇ ಇರುವುದು ಕನ್ನಡಿಗರ ದುರದೃಷ್ಟ. ತಮಿಳಿನಲ್ಲಿ ‘ಪಂಚೀಕರಣ ಚೌಕ್ತಿಕ ವಿವೇಕವಿಳಕ್ಕು’ ಎಂಬ ಗ್ರಂಥವನ್ನೂ, ‘ಮದ್ಯಪಾನಮ್‌’ ಎಂಬ ತೆಲುಗು ಪುಸ್ತಕವನ್ನೂ ಇವರು ಬರೆದಿದ್ದಾರೆ.

ಅವರಿಗೆ ದೊರೆತ ಅನೇಕಾನೇಕ ಬಿರುದುಗಳಲ್ಲಿ ಮೊದಲನೆಯದು ವಿದ್ಯಾಸುಂದರಿ. ಆಂಧ್ರದ ಕವಿಚಕ್ರವರ್ತಿ ಎಂದೇ ಪ್ರಸಿದ್ಧರಾದ ಪುರಾಣಂ ಸೂರ್ಯನಾರಾಯಣ ತೀರ್ಥರು ಈ ಮೇಲಿನ ಬಿರುದಿತ್ತರು. ತಿರುಪತಿ ಸಂಸ್ಥಾನದ ಕವಿಗಳಾದ ಶತಾವಧಾನಿ ಚಲ್ಲಪ್ಪ ವೆಂಕಟೇಶ್ವರ ಕವಿ ಎಂಬುವವರು ನಾಗರತ್ನಮ್ಮನವರ ಪಾಂಡಿತ್ಯ ಪ್ರತಿಭೆಗಳನ್ನು ಪ್ರಶಂಸಿಸಿ ಒಂದು ಚಿಕ್ಕ ಕಾವ್ಯವನ್ನು (ಗಿರಟಮ್‌) ಬರೆದುದಲ್ಲದೆ, ಬೊಬ್ಬಿಲಿ ಮಹಾರಾಜನ ಸಿಂಹಾಸನ ಆರೋಹಣ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆಯಲ್ಲೂ ಆಕೆಯನ್ನು ಪ್ರಶಂಸಿಸಿ ಬರೆದಿದ್ದಾರೆ. ಅಂದು ಆಕೆಗೆ ಅಲ್ಲಿ ಸನ್ಮಾನವಾಯಿತು. ೧೯೨೯ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಸನಾತನ ಧರ್ಮ ಸಮ್ಮೇಳನದಂತಹ ಸಭೆಯಲ್ಲಿ ಅವರು ಪ್ರಾರ್ಥನೆ ಹಾಡಿದ್ದನ್ನು ಮರೆಯಲಾಗದ ಅನುಭವ ಎಂದಿದ್ದಾರೆ. ೧೯೩೨ರಲ್ಲಿ ಮದರಾಸಿನ S.K.P.D. Charities Hall ನಲ್ಲಿ ಸೇರಿದ್ದ ಸಂಗೀತಗಾರರ ಬೃಹತ್‌ಸಭೆಯಲ್ಲಿ, ಕವಿಸಾರ್ವಭೌಮ ಶ್ರೀಪಾದ ಕೃಷ್ಣ ಮೂರ್ತಿ ಶಾಸ್ತ್ರಿಗಳು ನಾಗರತ್ನಮ್ಮನವರಿಗೆ ಗಾನಕಲಾವಿಶಾರದಾ ಎಂಬ ವಿಶೇಷ ಬಿರುದಿತ್ತು ಗೌರವಿಸಿದರು. ಅಂದಿನ ಭಾಷಣ ಸಂಭಾಷಣೆಗಳನ್ನು ಸಂದರ್ಭಕ್ಕೆ ತಕ್ಕಂತೆ ಸಂಸ್ಕೃತ ಭಾಷೆಯಲ್ಲೇ ಮಾಡಿದರಂತೆ. ರಾಜಮಹೇಂದ್ರಿಯಲ್ಲಿ ಸಂಸ್ಕೃತ ಮಹಾಸಮ್ಮೇಳನದಲ್ಲಿಯೂ ಮೇಲೆ ಹೇಳಿದ ಕವಿಸಾರ್ವಭೌಮರ ಮುಂದಾಳತ್ವದಲ್ಲಿ ನಡೆದ ಅಭೂತಪೂರ್ವ ಸನ್ಮಾನ ಸಮಾರಂಭದಲ್ಲಿ ನಾಗರತ್ನಮ್ಮನವರ ಸಂಸ್ಕೃತ ಭಾಷಣ, ಗಾಯನ ಕಚೇರಿಗಳ ನಂತರ ವಜ್ರ ಕೆಂಪುಗಳಿಂದ ಅಲಂಕೃತವಾದ ‘ಗಂಡಪೇರುಂಡ’ ವೆಂಬ ವಿಶೇಷ ಕಾಲಂದುಗೆಯನ್ನು ತೊಡಿಸಿ ಗೌರವಿಸಿದರು.

ಹುಟ್ಟಿದ ತೌರೂರು ನಂಜನಗೂಡನ್ನು ಬಿಟ್ಟುಬಂದ ಒಂದೂವರೆ ವರ್ಷದ ಪುಟ್ಟ ಅಸಹಾಯಕ ಕೂಸಾಗಿ, ಬೆಂಗಳೂರಿನಲ್ಲಿ ಬೆಳೆದು, ದಕ್ಷಿಣದೇಶದಲ್ಲಿ ಸಂಗೀತ ಸರಸ್ವತಿಯಾಗಿ ಮೆರೆದು, B.N.R. ಎಂದು ಪ್ರಸಿದ್ಧರಾಗಿ ಮನೆಮಾತಾಗಿದ್ದ, ಬೆಂಗಳೂರು ನಾಗರತ್ನಮ್ಮನವರು ಕರ್ನಾಟಕ ಸಂಗೀತ ಪ್ರಪಂಚಕ್ಕೆ ಕನ್ನಡ ನಾಡು ಕೊಟ್ಟ ಆಣಿನಮುತ್ತಿನ ಅಪೂರ್ವ ಕೊಡುಗೆ.

ಗ್ರಂಥಋಣ

ಜ್ಞಾಪಕ ಚಿತ್ರಶಾಲೆ: ಡಿ.ವಿ. ಗುಂಡಪ್ಪನವರು

ನಾ ಕಂಡ ಕಲಾವಿದರು: ಮೈಸೂರು ವಾಸುದೇವಾಚಾರ್ಯರು

ಬೆಂಗಳೂರು ನಾಗರತ್ನಮ್ಮ: ಬಿ.ವಿ.ಕೆ. ಶಾಸ್ತ್ರಿಗಳು

ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ():

ವಿ.ಎಸ್‌.ಸಂಪತ್ಕುಮಾರಾಚಾರ್ಯರು