ಯಾವ ಬೀಜ ಮೊಳೆತೀತು ಇಲ್ಲಿ
ಈ ಬೆಂಗಾಡಿನಲ್ಲಿ,
ಮಿದುವಿಲ್ಲದಲ್ಲಿ ಹದವಿಲ್ಲದಲ್ಲಿ
ಬಿಸಿಲ ರಣಹದ್ದೆರಗಿ ಸದಾ
ಬೋಳು ಬಂಡೆಯ ಮಂಡೆ ಕುಕ್ಕುವಲ್ಲಿ,
ಯಾವ ಬೀಜ ಮೊಳೆತೀತು – ಇಲ್ಲಿ
ಈ ಬೆಂಗಾಡಿನಲ್ಲಿ.
ಯಾವ ಬೀಜ ಮೊಳೆತೀತು ಇಲ್ಲಿ
ಈ ತೀರದಲ್ಲಿ,
ಉಪ್ಪು ಕಪ್ಪಾದ ಕಡಲಿನಲೆ
ದಡದ ಬಂಡೆಯ ಮೇಲೆ
ಭೀತಿ ಭೂತದ ಶಿಲ್ಪ ಕೊರೆಯುವಲ್ಲಿ,
ಒಡೆದ ಹಡಗಿನ ತುಂಡು
ಹೊಳೆವ ಎಲುಬಿನ ಹಿಂಡು
ಬೆಂಕಿ ಬಿಸಿಲಿನ ಕೆಳಗೆ ಬೇಯುವಲ್ಲಿ,
ಯಾವ ಬೀಜ ಮೊಳೆತೀತು-ಈ
ನಿರ್ಜನಾರಣ್ಯ ಭೂತೀರದಲ್ಲಿ.

ಯಾವ ಬೀಜ ಮೊಳೆತೀತು ಇಲ್ಲಿ
ಹಗಲೂ ಇರುಳು ಬಂಜರು ಗಾಳಿ
ಬೀಸುವಲ್ಲಿ
ದಿನವಿಡೀ ರೊಯ್ಯೋ ಎಂದು ಗೋಳುದನಿ ತೀಡುತ್ತ
ಧೂಳು-ತರಗೆಲೆ ದೆವ್ವ ಕುಣಿಯುವಲ್ಲಿ,
ಒಂದಾದರೂ ಹೂವು ಮಂದಹಾಸವ ತೆರೆದು
ದುಂಬಿಮುತ್ತನು ಬಳಿಗೆ ಸೆಳೆಯದಲ್ಲಿ,
ಎಂದಾದರೂ ಹಸಿರು ಹಬ್ಬಿ ದಿಬ್ಬಗಳೆದೆಯ
ತಬ್ಬದಲ್ಲಿ,
ಯಾವ ಬೀಜ ಮೊಳೆತೀತು ಇಲ್ಲಿ
ಈ ಬಂಜೆ ಭೂಮಿಯಲ್ಲಿ !