ಬಿಚ್ಚಿದ ಬೆಳಗಿನ ದಾರಿಯಲ್ಲಿ ನಮ್ಮ ಪಯಣ ಹರಿದ್ವಾರದ ಕಡೆಗೆ ಪ್ರಾರಂಭವಾಯಿತು. ಸಂಜೆಯೊಳಗೆ (೨೩.೫.೧೯೮೪) ಹರಿದ್ವಾರವನ್ನು ತಲುಪಿದರೆ, ನಮ್ಮ ಹತ್ತು ದಿನಗಳ ಒಪ್ಪಂದದ ಟ್ಯಾಕ್ಸಿಯ ಪ್ರಯಾಣ ಮುಗಿದಂತೆಯೇ. ಬದರಿಯಿಂದ ಹಿಂದಿನ ದಿನ ಎಂಬತ್ತು ಕಿಲೋಮೀಟರ್ ದೂರ ಬಂದು ತಂಗಿದ ನಾವು ಇನ್ನೂ ೨೪೩ ಕಿಲೋಮೀಟರ್ ದಾರಿಯನ್ನು ತುಳಿಯಬೇಕಾಗಿತ್ತು. ಮತ್ತೆ ಬಂದ  ದಾರಿಯುದ್ದಕ್ಕೂ ಚಮೋಲಿ, ನಂದಪ್ರಯಾಗ, ಕರ್ಣಪ್ರಯಾಗಗಳನ್ನು ದಾಟಿ ರುದ್ರಪ್ರಯಾಗದ ಕಡೆಗೆ ಹೊರಟಿದ್ದೆವು. ಪ್ರಯಾಗ ಎಂದು ಹೆಸರಿರುವ ಈ ಊರುಗಳೆಲ್ಲಾ ಎರಡು ನದಿಗಳ ಸಂಗಮ ಸ್ಥಾನವಾಗಿದೆ. ಈ ನದೀ ತೀರಗಳ ಉದ್ದಕ್ಕೂ ಏರಿಳಿಯುವ ಬೆಟ್ಟದ ದಾರಿಗಳಲ್ಲಿ ಬದರಿಯ ಕಡೆಗೆ ನಡೆದು ಬರುವ ಎಷ್ಟೋ ಜನ ಸಾಧುಗಳು ಗೋಚರಿಸಿದರು. ಒಂದೆಡೆ ನದೀ ದಡದಲ್ಲಿ ಮೂವರು ಸಾಧುಗಳು ಕಲ್ಲುಗಳ ಒಲೆಹೂಡಿ ಅನ್ನ ಬೇಯಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವೆಡೆ, ಮರದ ಕೆಳಗೆ ಕೂತು, ತಮ್ಮ ದಂಡ – ಕಮಂಡಲಗಳನ್ನು ಬದಿಗಿರಿಸಿ ಹಲವರು ವಿಶ್ರಮಿಸಿಕೊಳ್ಳುತ್ತಿದ್ದರು. ಇನ್ನೊಂದೆಡೆ ಇಬ್ಬರು ಸಾಧುಗಳು ಚಿಲುಮೆಯೊಂದನ್ನು ಕೈಯಿಂದ ಕೈಗೆ ಬದಲಾಯಿಸಿಕೊಳ್ಳುತ್ತ ಸೇದುತ್ತಿದ್ದರು. ಇನ್ನೂ ಕೆಲವರು ಏಕಾಂಗಿಗಳಾಗಿ ಕೋಲೂರಿಕೊಂಡು ನಡೆದು ಬರುತ್ತಿದ್ದರು. ಈ ಎಲ್ಲ ಸಾಧುಗಳೂ ನಿಂತಲ್ಲಿ ನಿಲ್ಲದೆ ಸಂಚರಿಸುವಂಥವರು. ಯಾತ್ರೆಗೆ ಅನುಕೂಲವಾದ ಈ ಕಾಲಗಳಲ್ಲಿ ಅವರವರ ಗುರುಗಳ ಅಥವಾ ಅಂತರಂಗದ ನಿರ್ದೇಶನದ ಮೇರೆಗೆ ಬದರಿಗೋ ಕೇದಾರಕ್ಕೋ ಹೋಗಿ ಬರುವುದು, ಅವರ ಸಾಧನೆಯ ಒಂದು ಭಾಗವೇ. ಈ ಸಾಧುಗಳ ಉಡುಗೆ-ತೊಡಿಗೆಯಲ್ಲಾಗಲೀ, ಹೊದರು ಹೊದರಾಗಿ ಬೆಳೆದ ಗಡ್ಡ-ಮೀಸೆ ಜಟೆಗಳು ತುರುಗಿದ ಮುಖದಲ್ಲಾಗಲೀ, ಬಿಸಿಲಿಗೆ ಗಾಳಿಗೆ ಮಳೆಗೆ ಮೈಯೊಡ್ಡಿದ ಅವರ ಆಕೃತಿಗಳಲ್ಲಾಗಲೀ, ನಮ್ಮ ಮಠಾಧಿಪತಿ ಮಹಾಸ್ವಾಮಿಗಳ ಅಥವಾ ಜಗದ್ಗುರುಗಳ ಮುಖದಲ್ಲಿ ರಾರಾಜಿಸುವಂಥ ತೇಜಸ್ಸನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಆದರೆ, ಈ ಸಾಧುಗಳ ನಿಲುವು, ಆ ಏಕಾಕಿತನ, ನಿಜವಾಗಿಯೂ ಎಲ್ಲವನ್ನೂ ಬಿಟ್ಟಂತೆ ತೋರುವ ನಿರ್ಲಕ್ಷ್ಯಭಾವ, ಎಲ್ಲಕ್ಕಿಂತ ಮಿಗಿಲಾಗಿ ಕೆಲವರ ಕಣ್ಣಿನಲ್ಲಿ ಮಿಂಚುವ ಆ ಹೊಳಪು ಬೆರಗುಗೊಳಿಸವಂಥದು. ಶ್ರೀನಗರವನ್ನು ದಾಟಿ ನಮ್ಮ ಟ್ಯಾಕ್ಸಿ ವೇಗವಾಗಿ ಬೆಟ್ಟದ ಬಳಸುದಾರಿಯಲ್ಲಿ ಹೋಗುತ್ತಿರುವಾಗ, ಎದುರಿಗೆ, ರಸ್ತೆ ಅಂಚಿನಲ್ಲಿ ಬಿಳೀ ಬಟ್ಟೆಯ ಬೆಳ್ಳಿಗಡ್ಡದ ಸಾಧುಗಳೊಬ್ಬರು, ಒಂದು ಕ್ಷಣ ನಿಂತು, ಅತ್ಯಂತ ಕರುಣೆಯ ಮುಖಮುದ್ರೆಯಿಂದ ಆಶೀರ್ವಾದ ಭಂಗಿಯಲ್ಲಿ ಕೈಯನ್ನು ಎತ್ತಿದರು. ನಮ್ಮ ಟ್ಯಾಕ್ಸಿಯ ಚಾಲಕ ವಾಹನವನ್ನು ನಿಧಾನಿಸಿ, ಆ ಸಾಧುಗಳಿಗೆ ಕೈ ಮುಗಿದ. ಈ ಘಟನೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. ಏನು ಇದರರ್ಥ? ಬಹುಶಃ ಈ ಬೆಟ್ಟದ ಇಂಥ ಅಪಾಯಕಾರಿಯಾದ ದಾರಿಗಳಲ್ಲಿ ಹೋಗಿ ಬರುವ ಜನರಿಗೆ ಅಥವಾ ಜನರನ್ನು ತುಂಬಿಕೊಂಡ ವಾಹನಗಳಿಗೆ, ಒಳ್ಳೆಯದಾಗಲಿ ಎಂದೋ, ಸುರಕ್ಷಿತವಾಗಿ ಹಿಂದಿರುಗಲಿ ಎಂದೋ ಅವ್ಯಾಜವಾಗಿ ಮತ್ತು ಅನುಕಂಪದಿಂದ ಮಾಡಿದ ಆಶೀರ್ವಾದವಿರಬಹುದು.

ದೇವಪ್ರಯಾಗವನ್ನು ತಲುಪುವ ಹೊತ್ತಿಗೆ ಹನ್ನೆರಡು ಬಡಿದಿತ್ತು. ಬಿಸಿಲಿನ ಕಾವು ಚುರುಗುಟ್ಟತೊಡಗಿ, ಇದುವರೆಗೂ ನಮ್ಮ ಜತೆಗಿದ್ದ ತಂಪು ಮಾಯವಾಗಿತ್ತು. ಟ್ಯಾಕ್ಸಿಗೆ ಒಂದಷ್ಟು ವಿಶ್ರಾಂತಿ ಕೊಟ್ಟು, ದಾರಿ ಬದಿಯ ಅಂಗಡಿಯವನಿಂದ ಒಂದಷ್ಟು ನಿಂಬೆಹಣ್ಣಿನ ಷರಬತ್ತು ಮಾಡಿಸಿಕೊಂಡು ಕುಡಿದು, ಕೆಳಗಿನ ಆಳ ಪಾತಾಳದಲ್ಲಿ ನೊರೆಗರೆದು ಪ್ರವಹಿಸುವ ಗಂಗಾನದಿಯನ್ನು ನೋಡುತ್ತಾ ನಿಂತುಕೊಂಡೆವು. ಗಂಗೆಗೆ ಇಲ್ಲಿ ಭಾಗೀರಥಿ ಅನ್ನುತ್ತಾರೆ. ರುದ್ರಪ್ರಯಾಗದ ಬಳಿ, ಅತ್ತ ಬದರಿಯ ಕಡೆಯಿಂದ ಬರುವ ಅಲಕನಂದಾ, ಇತ್ತ ಕೇದಾರದ ಕಡೆಯಿಂದ ಬರುವ ಮಂದಾಕಿನೀ – ಎರಡೂ ಸಂಗಮಿಸಿ, ಅದೇ ಪ್ರವಾಹ ಮುಂದೆ ಬಂದು ಇಲ್ಲಿ, ದೇವಪ್ರಯಾಗದಲ್ಲಿ ಭಾಗೀರಥಿಯನ್ನು ಸೇರುತ್ತದೆ. ಇಲ್ಲಿಂದ ಮುಂದೆ ‘ಭಾಗೀರಥಿ’, ಗಂಗಾ ಎಂದು ಹೆಸರಾಗಿ, ಹೆಚ್ಚು ರಭಸದಿಂದ ಗಿರಿಕಂದರಗಳ ನಡುವೆ ತೂರಿಕೊಂಡು ಮುಂದೆ ಹೃಷಿಕೇಶದಲ್ಲಿ ಮೊಟ್ಟ ಮೊದಲಿಗೆ ಬಯಲನ್ನು ಪ್ರವೇಶಿಸುತ್ತದೆ. ದೇವಪ್ರಯಾಗದಿಂದ ನಮ್ಮ ಮುಂದಿನ ಪಯಣವೆಲ್ಲಾ ಈ ಗಂಗೆಯ ದಡದಲ್ಲೆ. ಗಂಗೆ ಕೆಲವೆಡೆ ಆಳಗಳಲ್ಲಿ, ಕೆಲವೆಡೆ ಪಕ್ಕದಲ್ಲಿ ಮತ್ತೆ ಕೆಲವೆಡೆ ದೂರದಲ್ಲಿ ಕಣ್ಣಿಗೆ ಬೀಳುತ್ತದೆ. ಗಂಗೆಯ ಪ್ರವಾಹದ ಉದ್ದಕ್ಕೂ, ಅದರಾಚೆಯ ಬೆಟ್ಟಗಳು, ಥಟ್ಟನೆ ಮೇಲೆದ್ದು, ಬೃಹದಾಕಾರದ ಪಿರಮಿಡ್ಡುಗಳಂತೆ ತೋರುತ್ತಿದ್ದವು. ಕೆಲವೆಡೆ, ಬಿಸಿಲು ಕಾಯಿಸುತ್ತ ತಮ್ಮ ಕಾಲುಗಳನ್ನು ಕೆಳಗೆ ಹರಿಯುವ ನೀರಿನಲ್ಲಿ ಇಳಿಯಬಿಟ್ಟುಕೊಂಡು ಕೂತ ಪೆಡಂಭೂತಗಳಂತೆ ತೋರಿದವು. ಮತ್ತೆ ಕೆಲವೆಡೆ, ಪರ್ವತ ಮಂಡಲಗಳ ನಡುವೆ ಭೋರ್ಗರೆಯುವ ಗಂಗೆ, ಶತಶತಮಾನಗಳಿಂದಲೂ ನಿಶ್ಚಲವಾಗಿ ತಪಸ್ಸಿಗೆ ಕುಳಿತ ಪರ್ವತರೂಪಿಯಾದ ಯೋಗಿಗಳ ಕಾಲುಗಳನ್ನು ತೊಳೆಯುತ್ತಾ ಮುಂದುವರಿಯುತ್ತಿರುವಂತೆ ಭಾಸವಾಯಿತು. ಮುಂದೆ ಮುಂದೆ, ಈ ಕಾಡು-ಕಣಿವೆಗಳ ತೊಟ್ಟಿಲಲ್ಲಿ, ಜುಳು ಜುಳು ಸದ್ದು ಮಾಡಿ ಹರಿಯುವ ಗಂಗೆಯನ್ನು ಎರಡೂ ಕಡೆ ನಿಂತ ಪರ್ವತಗಳು, ತಾಯಿಯಂತೆ ಅತ್ಯಂತ ಪ್ರೀತಿವಾತ್ಸಲ್ಯಗಳಿಂದ ವೀಕ್ಷಿಸುವಂತೆ ತೋರುತ್ತಿತ್ತು.

ಮುಂದೆ ಮುಂದೆ ದಕ್ಷಿಣಾಭಿಮುಖವಾಗಿ ಹೋದಂತೆ, ಅಸಾಧ್ಯ ಗ್ರೀಷ್ಮಾತಪ ಪರ್ವತಾರಣ್ಯಗಳನ್ನು ದಹಿಸುವಂತೆ ಹಬ್ಬಿಕೊಂಡಿತ್ತು. ಬಿರುಬಿಸಿಲ ಬೇಗೆಗೆ ಬೆಟ್ಟಗಳು – ಕಾಡುಗಳು ಮೂರ್ಛೆಹೋದಂತೆ ಬಿದ್ದುಕೊಂಡಿದ್ದವು. ದಟ್ಟವಾದ ಹಬೆಯೊಂದು, ಮಲಗಿದ ಈ ದೃಶ್ಯಗಳ ಮೇಲೆಲ್ಲಾ ಮುಸುಕಿನಂತೆ ವ್ಯಾಪಿಸಿಕೊಂಡು, ನಾವು ಮೇ ತಿಂಗಳ ನಡುಬೇಸಗೆಯ ಬಯಲಿಗೆ ಬರುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿತು. ಆ ಮಟ ಮಟ ಮಧ್ಯಾಹ್ನದ ವಿಲಕ್ಷಣ ಮೌನದಲ್ಲಿ ನಮ್ಮ ಟ್ಯಾಕ್ಸಿಯ ಚಲನೆಯ ಏಕತಾನತೆಯಿಂದಾಗಿ, ನಾವು ಕೂತಲ್ಲೇ ತೂಕಡಿಸತೊಡಗಿದೆವು. ಹತ್ತು ದಿನಗಳ ಹಿಂದೆ ಪ್ರಯಾಣಕ್ಕೆ ಹೊರಟ ದಿನದ ಆ ಉತ್ಸಾಹ, ಕಂಡ ದೃಶ್ಯಗಳನ್ನೆಲ್ಲಾ ಕುತೂಹಲದಿಂದ ವೀಕ್ಷಿಸುವ ಆಸಕ್ತಿ, ಎಲ್ಲವೂ ಈಗ ಈ ಭಯಂಕರ ಬಿಸಿಲಿನಲ್ಲಿ ಬಾಡಿಹೋದಂತೆ ಭಾಸವಾಯಿತು. ಸದ್ಯ, ಹರಿದ್ವಾರವನ್ನು ತಲುಪಿ, ಧಡಧಡ ಸುರಿಯುವ ತಣ್ಣೀರಿಗೆ ತಲೆಯೊಡ್ಡಿದರೆ ಸಾಕು ಅನ್ನಿಸುವಂತಾಗಿತ್ತು. ದಾರಿಯಲ್ಲಿ ಊಟಕ್ಕೆ ನಿಂತಾಗ ಆಗಲೇ ಮಧ್ಯಾಹ್ನದ ಎರಡೂವರೆ ಗಂಟೆ. ಊಟವಾದ ನಂತರ ಒಂದರ್ಧಗಂಟೆ ಮರವೊಂದರ ನೆರಳಲ್ಲಿ ಮೈಯನ್ನು ಗಾಳಿಗೆ ಒಡ್ಡಿ ಪ್ರಯಾಣ ಮುಂದುವರಿಯಿತು. ಮತ್ತೆ ಕೆಳಕ್ಕೆ ನಾವು ಇಳಿಯತೊಡಗಿದಂತೆ, ಬಿಸಿಲು – ಶೆಖೆ – ಬಾಯಾರಿಕೆಗಳು ನಮ್ಮನ್ನು ಕಾಡುತ್ತಾ, ಹಿಮಾಲಯದ ಆ ತಂಪು ಎತ್ತರಗಳಿಂದ, ಹೃಷಿಕೇಶದ ಹತ್ತಿರದ ಬಯಲಿಗೆ ಬಂದಿದ್ದೇವೆ ಎಂಬ ವಾಸ್ತವಕ್ಕೆ ನಮ್ಮನ್ನು ತಂದಿತು. ಸ್ವಲ್ಪ ಹೊತ್ತಿನಲ್ಲೇ ಹೃಷಿಕೇಶದ ಹತ್ತಿರ ಹರಿಯುವ ವಿಸ್ತಾರವಾದ ಗಂಗೆ, ಅದರಲ್ಲಿ ತೇಲುವ ದೋಣಿಗಳು, ನದಿಯ ಆಚೆಯ ದಡದಲ್ಲಿನ ಗೀತಾಭವನ, ಸ್ವರ್ಗಾಶ್ರಮ ಮತ್ತಿತರ ಕಟ್ಟಡಗಳು ಸೊಗಸಾದ ತೈಲಚಿತ್ರದಂತೆ ಕಾಣಿಸಿದವು. ಮರುದಿನ ನಾವು ಹೃಷಿಕೇಶವನ್ನೊಮ್ಮೆ ನೋಡಿಕೊಂಡು, ಅನಂತರ ನಮ್ಮ ಊರಿನ ದಾರಿಯನ್ನು ಹಿಡಿದರೆ, ಈ ಪ್ರವಾಸ ಮುಗಿದಂತೆಯೇ ಅಂದುಕೊಳ್ಳುತ್ತಾ, ಹೃಷಿಕೇಶವನ್ನು ದಾಟಿ, ಮುಂದಿನ ಮುಕ್ಕಾಲುಗಂಟೆಯೊಳಗೆ ಶಿವಾಲಿಕ ಬೆಟ್ಟಗಳ ನಡುವೆ ಹರಡಿಕೊಂಡ ಹರಿದ್ವಾರವನ್ನು ಪ್ರವೇಶಿಸಿ, ಈ ಕಳೆದ ಹತ್ತು ದಿನಗಳ ಕಾಲ ನಮ್ಮ ಜತೆಗೆ ಟ್ಯಾಕ್ಸಿಯಲ್ಲಿ ಸಹಯಾತ್ರಿಗಳಾಗಿದ್ದವರಿಗೆ ವಂದನೆ ಹೇಳಿ, ಸುಮಾರು ನಾಲ್ಕು ಗಂಟೆಯ ವೇಳೆಗೆ, ಕಂಕಲ್‌ನ ಶ್ರೀ ರಾಮಕೃಷ್ಣಾಶ್ರಮದ ಅತಿಥಿಗೃಹವನ್ನು ಸೇರಿ, ಹಿತವಾದ ತಣ್ಣೀರಿನಲ್ಲಿ ಸ್ನಾನ ಮಾಡಿ, ಹಾಸಿಗೆಯ ಮೇಲೆ ಉರುಳಿಕೊಂಡಾಗ, ನಮ್ಮ ಅತಿಥಿಗೃಹದ ಸುತ್ತ ದಟ್ಟವಾಗಿ ಬೆಳೆದ ಮರ ಮರಗಳ ಕೊಂಬೆಗಳಲ್ಲಿ ಬಹು ಬಗೆಯ ಪಕ್ಷಿಗಳು ವಿವಿಧ ರಾಗಾಲಾಪದಲ್ಲಿ ತೊಡಗಿದ್ದುವು.

***

ಮರುದಿನ ನಾವು (೨೪.೫.೧೯೮೪) ಹೃಷಿಕೇಶವನ್ನು ತಲುಪಿದಾಗ ಆಗಲೇ ನಡುಹಗಲು. ಜನ ಕಿಕ್ಕಿರಿದ ಬಸ್ಸಿನಿಂದ ಇಳಿದು, ಒಂದು ಟಾಂಗಾ ಮಾಡಿಕೊಂಡು ಶಿವಾನಂದಾಶ್ರಮದ ಕಛೇರಿಯ ಬಳಿ ಹೋದಾಗ, ಬಿಸಿಲು ಚಾವಟಿಯಿಂದ ಬಾರಿಸತೊಡಗಿತ್ತು. ನಾವು ಗಂಗೆಯ ದಡವನ್ನು ಸೇರಿ, ದೋಣಿಯೊಂದರಲ್ಲಿ ಆಚೆಯ ದಡಕ್ಕೆ ಹೊರಟೆವು. ಉತ್ತರ-ದಕ್ಷಿಣವಾಗಿ ಹರಿಯುವ, ವಿಸ್ತಾರವಾದ ಗಂಗೆಯಲ್ಲಿ ತೇಲುತ್ತಿದ್ದ ಹಾಗೆ, ಆಚೆಯ ದಡದ  ಆಶ್ರಮಗಳು, ಅವುಗಳ ಹಿನ್ನೆಲೆಗೆ ಹರಹಿಕೊಂಡ ಸುದೀರ್ಘವಾದ ಪರ್ವತ ಪಂಕ್ತಿಗಳೂ ಗೋಚರಿಸತೊಡಗಿದವು.

ಹೃಷಿಕೇಶ ಪ್ರಾಚೀನ ಕಾಲದಿಂದಲೂ ತುಂಬ ಆಕರ್ಷಕವಾದ ಯೋಗಭೂಮಿ. ಹಿಮಾಲಯದ ಆ ಎತ್ತರಗಳಿಂದ ಇಳಿದು ಬರುವ ಗಂಗೆ ಬಯಲನ್ನು ಪ್ರವೇಶಿಸುವಲ್ಲಿ ಇಡುವ ಮೊದಲ ಹೆಜ್ಜೆಯ ನೆಲೆ ಇದು. ಈ ಕಡೆಯಿಂದ ಹಿಮಾಲಯವನ್ನು ಪ್ರವೇಶಿಸುವಾಗಲೂ ಏರಬೇಕಾದ ಮೊದಲ ಮೆಟ್ಟಿಲು ಹೃಷಿಕೇಶ. ಹೃಷೀಕ ಎಂದರೆ ಇಂದ್ರಿಯ; ಹೃಷೀಕೇಶ ಎಂದರೆ ಇಂದ್ರಿಯಗಳ ಒಡೆಯ; ಪರಮಾತ್ಮ – ಎಂದು ಅರ್ಥ. ಈ ಪರಮಾರ್ಥದ ಸಾಧನೆಗೆ ಹೃಷಿಕೇಶ ಒಂದು ತಪೋರಂಗ. ಹಿಂದೆ ಈ ಪ್ರದೇಶದಲ್ಲಿ ದಟ್ಟವಾದ ಅರಣ್ಯ ತುಂಬಿಕೊಂಡು,  ಗಂಗಾತೀರದ ಈ ವಿಪಿನ ಋಷಿ-ಮುನಿಗಳಿಗೆ ತಪೋಯೋಗ್ಯವಾದ ವಿವಿಕ್ತ ಸ್ಥಾನವಾಗಿತ್ತು. ಈಗಲೂ ಗಂಗೆಯ ಆಚೆಯ ದಡದಲ್ಲಿ ಸ್ವರ್ಗಾಶ್ರಮವೆಂದು ಕರೆಯಲಾದ ಪರಿಸರದಲ್ಲಿ ಕುಟೀರಗಳನ್ನು ಕಟ್ಟಿಕೊಂಡು ತಪಸ್ಸು ಮಾಡುವ ಸಾಕಷ್ಟು ಜನರಿದ್ದಾರಂತೆ. ಹಿಂದೆ ರೈಭ್ಯ ಎನ್ನುವ ಋಷಿಯು ಭಗವಂತನನ್ನು ಕುರಿತು ಇಲ್ಲಿ ತಪಸ್ಸು ಮಾಡಿದಾಗ, ಅವನೆದುರು ಭಗವಂತನು ಹೃಷಿಕೇಶನೆಂಬ ಹೆಸರಿನಿಂದ ಅವನಿಗೆ ಕಾಣಿಸಿಕೊಂಡನಂತೆ.

ನಮ್ಮ ದೋಣಿ ದಡವನ್ನು ತಲುಪಿದಾಗ, ದೂರದಿಂದ ಕಂಡ ಅನೇಕ ಗುಡಿಗೋಪುರಗಳೂ, ನದೀ ತೀರದಲ್ಲಿ ಸಾಲಾಗಿ ನಿರ್ಮಿತಿಯಾದ ಅಂಗಡಿಗಳೂ, ಹೋಟೆಲಿನ ಜೋಪಡಿಗಳೂ ಪ್ರತ್ಯಕ್ಷವಾದವು. ತೀರದ ಉದ್ದಕ್ಕೂ ಬಂದು ಉಳಿದುಕೊಳ್ಳುವ ಯಾತ್ರಾರ್ಥಿಗಳಿಗಾಗಿ ಅನೇಕ ಧರ್ಮಶಾಲೆಗಳಿವೆ. ಅಷ್ಟೇ ಅಲ್ಲ, ಈ ಕಾಲಗಳಲ್ಲಿ ಈ ಧರ್ಮಶಾಲೆಗಳೆಲ್ಲಾ ಭರ್ತಿಯಾಗಿ, ಇಡೀ ಗಂಗಾ ತೀರ ಒಂದು ಸಂತೆಯಾಗಿತ್ತು. ಅಂಗಡಿಗಳು – ಹೋಟೆಲುಗಳ ನಡುನಡುವೆ, ಪುರಾಣೋಕ್ತವಾದ ದೇವಾಧಿದೇವತೆಗಳ ಗೊಂಬೆಗಳ ಪ್ರದರ್ಶನಗಳು ಬೇರೆ. ಶಿವ – ಪಾರ್ವತಿ- ಗಣಪತಿ; ನಾರದ – ಭಗೀರಥ; ಹಾವಿನ ಹಾಸಿಗೆಯ ಮೇಲೆ ಮಲಗಿದ ಮಹಾವಿಷ್ಣುವಿನ ಪಾದಸೇವೆ ಮಾಡುತ್ತಿರುವ ಶ್ರೀ ದೇವಿ; ಸರಸ್ವತೀ – ಬ್ರಹ್ಮ; ಕೃಷ್ಣ – ರಾಧೆ, ಇತ್ಯಾದಿ ಬಣ್ಣ ಬಣ್ಣದ ಬೊಂಬೆಗಳು. ಹಳ್ಳಿಗಳಿಂದ ಬಂದ ಜನ ಕಣ್ಣುಬಾಯಿ ಬಿಟ್ಟುಕೊಂಡು ಅವುಗಳನ್ನು ನೋಡುತ್ತಾ, ಅವುಗಳಿಗೆ ಕೈ ಮುಗಿದದ್ದೇ ಮುಗಿದದ್ದು; ಕಾಣಿಕೆ ಹಾಕಿದ್ದೇ ಹಾಕಿದ್ದು. ಈ ಗದ್ದಲದ ಹಿನ್ನೆಲೆಗೆ ಗೀತಾಭವನದ ಕಡೆಯಿಂದ ಅಖಂಡ ಭಜನೆ, ಧ್ವನಿವರ್ಧಕಗಳ ಮೂಲಕ, ಇಡೀ ವಾತಾವರಣವನ್ನೇ ಕಾಡುವಂತಿತ್ತು.  ಇದೇ ಧ್ವನಿವರ್ಧಕಗಳ ಮೂಲಕ ಮತ್ತೆ ಮತ್ತೆ, ಭಕ್ತಾದಿಗಳಲ್ಲಿ ಮನವಿಗಳು ಬೇರೆ : ಭಕ್ತಾದಿಗಳೇ ಗೀತಾಭವನಕ್ಕೆ ಕಾಣಿಕೆ ಸಲ್ಲಿಸಿ, ಭಕ್ತಾದಿಗಳೇ ಮಾರುತಿಯ ಸೇವೆಗೆ ಕಾಣಿಕೆ ಸಲ್ಲಿಸಿ – ಇತ್ಯಾದಿ. ಈ ಗೊಂದಲ, ಈ ಭಜನೆ, ದಾನದಕ್ಷಿಣೆಯ ಜಾಹಿರಾತು, ತಲೆಯ ಮೇಲೆ ಬಡಿಯುವ ರಣರಣ ಬಿಸಿಲು, ಇದೆಲ್ಲದರ ನಡುವೆ ಸಿಕ್ಕಿಕೊಂಡ ನಾವು ಆದಷ್ಟು ಬೇಗ ಇಲ್ಲಿಂದ ಓಡಿಹೋದರೆ ಸಾಕು ಅನ್ನುವಂತೆ ಆಯಿತು. ಇದುವರೆಗಿನ ಆ ಹಿಮಾಲಯದ ಎತ್ತರಗಳಲ್ಲಿ ನಾವು ಅನುಭವಿಸಿದ ಪ್ರಶಾಂತ ನಿರುದ್ವಿಗ್ನ ಪರಿಸರಕ್ಕೂ, ಅದರ ತಳದಲ್ಲಿನ ಈ ರಾಜಸ – ತಾಮಸ ಕ್ಷೆಭೆಗೂ ಇರುವ ಅಂತರ ಎದ್ದು ಕಾಣುವಂತಿತ್ತು. ಜನರ ಭಕ್ತಿಯನ್ನು ನಂಬಿಕೆಗಳನ್ನು ಕೇವಲ ಗೊಂಬೆಯಾಟದ ಪ್ರದರ್ಶನಗಳಿಗೆ ಹಾಗೂ ವ್ಯಾಪಾರದ ಮಟ್ಟಕ್ಕೆ ಸೀಮಿತಗೊಳಿಸಿದ್ದನ್ನು ಕಂಡು ಮನಸ್ಸಿಗೆ ಬೇಸರವಾಯಿತು. ಈ ಸಂತೆಯಿಂದ ಪಾರಾದರೆ ಸಾಕೆಂದು, ಗೊಂದಲದ ಈ ಅಂಚಿನಿಂದ ಮೇಲಕ್ಕೆ ಸ್ವರ್ಗಾಶ್ರಮವೆಂದು ಕರೆಯುವ ಕಡೆಗೆ ಹೊರಟೆವು.

ಅತ್ತ ಕಡೆ ಹೋದಂತೆ ಜನಸಂದಣಿ ಕಡಿಮೆಯಾಗಿತ್ತು. ನಾವು ಅಲ್ಲೇ ಇರುವ ಕಾಲೀ ಕಂಬಳೀವಾಲಾ ಧರ್ಮಶಾಲೆಯನ್ನು ಪ್ರವೇಶಿಸಿದೆವು. ಕಾಲೀ ಕಂಬಳಿವಾಲಾ ಎಂಬ ಹೆಸರು ಹಿಮಾಲಯದ ದಾರಿಯುದ್ದಕ್ಕೂ ಜನರ ಕೃತಜ್ಞತೆಗೆ ಪಾತ್ರವಾಗುವಂಥ ಹೆಸರು. ಇವತ್ತೇನೋ ಹಿಮಾಲಯದ ಯಾತ್ರೆಗಳನ್ನು ಕೈಕೊಳ್ಳುವವರಿಗೆ, ವಾಹನ ಸಂಚಾರಕ್ಕೆ ಯೋಗ್ಯವಾದ ದಾರಿಗಳಿವೆ; ಉಳಿದುಕೊಳ್ಳಲು ಸಾಕಷ್ಟು ಸೌಲಭ್ಯಗಳಿವೆ. ಈ ಎರಡೂ ಇಲ್ಲದ ಹಿಂದಿನ ಕಾಲಗಳಲ್ಲಿ, ಯಾತ್ರಿಕರು ದಾರಿಯುದ್ದಕ್ಕೂ ನಿಲ್ಲಲು ನೆಲೆಯಿಲ್ಲದೆ ತುಂಬ ತೊಂದರೆಗೊಳಗಾಗುತ್ತಿದ್ದರು. ಇದನು ಗಮನಿಸಿದ ಸ್ವಾಮಿ ವಿಶುದ್ಧಾನಂದಜೀ ಮಹಾರಾಜ್ ಎಂಬ ಸಾಧುಗಳು, ಭಕ್ತಾದಿಗಳಿಂದ ಚಂದಾ ಎತ್ತಿ, ಕ್ರಿ. ಶ. ೧೮೮೪ರಲ್ಲಿ ಹಿಮಾಲಯದ ದಾರಿಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಿಸಿದರು. ಅವರು ಮೈಮೇಲೆ ಸದಾ ಕರಿಯ ಕಂಬಳಿಯೊಂದನ್ನು ಹೊದ್ದುಕೊಳ್ಳುತ್ತಿದ್ದ ಕಾರಣ ಜನ ಅವರನ್ನು ಕಾಲೀ ಕಂಬಳೀವಾಲ ಎಂದೇ ಕರೆದರು. ಈಗ ಬದರೀ ಕೇದಾರಗಳ ದಾರಿಯಲ್ಲಿ ಕಾಲೀ ಕಂಬಳೀವಾಲಾ ಧರ್ಮಶಾಲೆಗಳು ಸುಮಾರು ಇನ್ನೂರರಷ್ಟಿವೆ. ಯಾತ್ರಿಕರಿಗೆ ಇಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವುದಲ್ಲದೆ, ಹಿಮಾಲಯದ ದಾರಿಗಳಲ್ಲಿನ ಈ ಧರ್ಮಶಾಲೆಗಳಲ್ಲಿ ಸಾಧುಗಳಿಗೆ ಎರಡು ಹೊತ್ತೂ ಉಚಿತವಾದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆಯಂತೆ. ಕಾಲೀ ಕಂಬಳೀವಾಲಾ ಅವರ ಮೊದಲ ಧರ್ಮಶಾಲೆ ಹಾಗೂ ಈ ಸಂಸ್ಥೆಯ ಪ್ರಧಾನ ಕಛೇರಿ ಹೃಷೀಕೇಶದಲ್ಲಿದೆ. ಇಲ್ಲಿ ಕಾಲೀ ಕಂಬಳೀವಾಲಾ ಅವರ ಗಂಭೀರ ಮುಖಮುದ್ರೆಯ ವಿಗ್ರಹವೊಂದಿದೆ.

ಹೃಷಿಕೇಶದಲ್ಲಿ ರಾಮನ ಇಬ್ಬರು ತಮ್ಮಂದಿರ ನೆನಪು ಸ್ಥಾಯಿಯಾಗಿದೆ. ಒಂದು, ಲಕ್ಷ್ಮಣನ ಹೆಸರಿನ ಸೇತುವೆಯಿಂದ, ಮತ್ತೊಂದು ಭರತನ ವಿಗ್ರಹ ವಿರುವ ದೇವಸ್ಥಾನದಿಂದ ನಾವು ಸ್ವರ್ಗಾಶ್ರಮದ ಹಲವು ಕುಟೀರಗಳ ಕಡೆಯಿಂದ, ಲಕ್ಷ್ಮಣನ ನೆನಪಿನ ತೂಗುಸೇತುವೆಯನ್ನು ತಲುಪಿದೆವು. ಲಕ್ಷಣ ಝೂಲಾ ಎಂದು ಕರೆಯಲಾಗುತ್ತಿರುವ ಈ ತೂಗು ಸೇತುವೆ, ಗಂಗೆಯ ಈ ದಡದಿಂದ ಆ ದಡದವರೆಗೆ, ಹಾಸಿಕೊಂಡಿದೆ. ಇದನ್ನು ೧೯೮೩ರಲ್ಲಿ ನಿರ್ಮಿಸಲಾಯಿತಂತೆ. ಆ ಮೊದಲು ದೋಣಿಯ ಮೂಲಕವೋ ಅಥವಾ ಹಗ್ಗದ ಸೇತುವೆಯ ಮೂಲಕವೋ ನದಿಯನ್ನು ದಾಟಬೇಕಾಗಿತ್ತಂತೆ. ಹಿಂದೆ ರಾಮಾಯಣ ಕಾಲದಲ್ಲಿ ಲಕ್ಷ್ಮಣನೇ, ಗಂಗೆಯನ್ನು ದಾಟಲು ಒಂದು ಹಗ್ಗದ ಸೇತುವೆಯನ್ನು ನಿರ್ಮಿಸಿದನೆಂದು ಸ್ಥಳ ಪುರಾಣ ಹೇಳುತ್ತದೆ. ಈಗಿರುವ ತೂಗುಸೇತುವೆಯ ಮೇಲೆ ನಡೆದು ಹೋಗುವುದೇ ಒಂದು ಸೊಗಸು. ನಡೆದಂತೆ ನಿಜವಾಗಿಯೂ ತೂಗಾಡುವ ಈ ಸೇತುವೆಯ ಮೇಲೆ ನಿಂತು ನೋಡಿದರೆ ಉತ್ತರದ ದೂರದಲ್ಲಿ ತೆರೆ ತೆರೆಯಾಗಿ ಹಬ್ಬಿದ ಪರ್ವತಗಳೂ, ಮತ್ತು ಆ ಕಡೆಯಿಂದ ಇಳಿದು ಬರುವ ಗಂಗೆಯೂ, ದಕ್ಷಿಣಕ್ಕೆ ದೂರ ದೂರದವರೆಗೆ ವಿಸ್ತಾರವಾಗಿ ಪ್ರವಹಿಸುವ ಗಂಗೆಯೂ ಚೇತೋಹಾರಿಯಾಗಿದೆ. ಈ ಸೇತುವೆಯ ಮೇಲಿಂದ ಕೆಳಗೆ ನೋಡಿದರೆ, ಒಂದು ಕಾಲಕ್ಕೆ, ನದೀ ಪಾತ್ರದೊಳಗಿನ ಕಲ್ಲುಗಳೂ ಸ್ಪಷ್ಟವಾಗಿ ಕಾಣುವಷ್ಟು ಗಂಗೆಯ ನೀರು ಶುಭ್ರವಾಗಿತ್ತಂತೆ; ಈಗ ನಾನು ನೋಡಿದಾಗ, ನೀರು ಅತ್ಯಂತ ಶುಭ್ರವಾಗಿಯೇ ಇದ್ದರೂ, ಅದು ಪಾರದರ್ಶಕವಾಗೇನೂ ಇರಲಿಲ್ಲ. ಹಾಗೆಯೇ ಕಣ್ಣು ಹಾಯಿಸಿದಾಗ ಹೃಷಿಕೇಶದ ಎರಡೂ ದಡಗಳಲ್ಲಿ, ಸ್ನಾನ ಮಾಡುವ ನೂರಾರು ಜನ ಕಾಣುತ್ತಿದ್ದರು. ಮುಂದೆ ಹರಿದ್ವಾರದಲ್ಲಿ, ಮತ್ತೆ ಅಲ್ಲಿಂದ ಮುಂದಿನ ಎಷ್ಟೋ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಗಂಗೋತ್ರಿಯಿಂದ ಹಿಡಿದು ಸಾಗರ ಸಂಗಮದವರೆಗೂ ಈ ನೀರಿನಲ್ಲಿ ಸ್ನಾನ ಮಾಡುವವರ ಸಂಖ್ಯೆ ಗಣನೆಗೆ ಸಿಲುಕದಷ್ಟು. ಅಷ್ಟೇ ಅಲ್ಲ, ಈ ನದೀ ನೀರಿನಲ್ಲಿ, ಸತ್ತವರ, ಹಾಗೂ ಚಿತೆಯಲ್ಲಿ ಅರೆಬೆಂದವರ ಶರೀರಗಳನ್ನೂ ಜನ ತೇಲಿ ಬಿಡುತ್ತಾರೆ – ಅವರಿಗೆ ಸದ್ಗತಿ ಒದಗುವುದೆಂಬ ನಂಬಿಕೆಯಿಂದ. ಈ ಗಂಗೆಯ ನೀರು, ನಗರೀಕರಣದ ಕಾರಣಗಳಿಂದ, ಹೃಷಿಕೇಶ ಹರಿದ್ವಾರಗಳಲ್ಲಿನಷ್ಟು ಮುಂದೆಯೂ ಇಷ್ಟೇ ಶುಭ್ರವಾಗಿಲ್ಲ ಅನ್ನುವುದು ಸ್ವಯಂ ವೇದ್ಯವಾದ ಸಂಗತಿ. ಈ ದೇಶದ ನದಿಗಳೆಲ್ಲಾ ನಗರೀಕರಣದ ಕಾರಣದಿಂದ ಮಲಿನಗೊಳ್ಳುತ್ತಿರುವಂತೆಯೇ ಗಂಗಾನದಿಯ ನೀರೂ, ಅದರ ದಡದಲ್ಲಿರುವ ಅನೇಕ ಗ್ರಾಮ – ನಗರಗಳ ಕೊಳಚೆಯಿಂದ, ಮತ್ತು ಕಾರ್ಖಾನೆಗಳಿಂದ ಮಲಿನಗೊಂಡ ನೀರುಗಳಿಂದ, ಕಲುಷಿತವಾಗುತ್ತಿದೆಯೆಂದೂ, ಈ ಮಾಲಿನ್ಯದ ಪರಿಣಾಮವಾಗಿ ಜಲವನ್ನು ಶುದ್ಧವಾಗಿರಿಸುವಲ್ಲಿ ನೆರವಾಗುವ ಮೀನುಗಳು ಅಧಿಕ ಸಂಖ್ಯೆಯಲ್ಲಿ ಸಾಯುತ್ತಿವೆಯೆಂದೂ, ಗಂಗಾನದಿಯ ನೀರು ಎಷ್ಟೋ ಕಡೆ ಕುಡಿಯಲು ಕೂಡಾ ಯೋಗ್ಯವಾಗಿಲ್ಲವೆಂದೂ, ನಮ್ಮ ಭಾರತದ ನದೀ ಜಲದ ಶೇಕಡಾ ಎಪ್ಪತ್ತರಷ್ಟು ಅಂಶ ಮಲಿನವಾಗುತ್ತಿದ್ದು, ಈ ದೇಶದ ರೋಗಗಳಲ್ಲಿ ಮೂರನೆ ಎರಡರಷ್ಟು ಜಲಮಾಲಿನ್ಯದ ಪರಿಣಾಮದಿಂದ ಉಂಟಾಗಿವೆ, ಎಂದೂ ಇತ್ತೀಚೆಗೆ ೧೯೮೨ರಲ್ಲಿ ಪ್ರಕಟವಾದ ವರದಿಯೊಂದು ತಿಳಿಸುತ್ತದೆ.

ಆದರೆ ಅದೇ ವರದಿ ಹೇಳುತ್ತದೆ : ಪ್ರತಿಯೊಂದು ನದಿಗೂ ತನ್ನದೇ ಆದ ಸ್ವಯಂ ಶುದ್ಧೀಕರಣ ಸಾಮರ್ಥ್ಯವಿದೆ; ಅದರಲ್ಲಿಯೂ ಗಂಗಾನದಿಗೆ ಈ ಸಾಮರ್ಥ್ಯ ಉಳಿದೆಲ್ಲ ನದಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು. ಜಗತ್ ಪ್ರಸಿದ್ಧ ವಿಜ್ಞಾನಿಯಾದ ಜಗದೀಶ ಚಂದ್ರಬೋಸ್ ಅವರು, ಗಂಗಾನದಿಯ ನೀರನ್ನು ವಿಶ್ಲೇಷಿಸಿ, ಅದರಲ್ಲಿ ವಿಶಿಷ್ಟವಾದ ರಾಸಾಯನಿಕ ಹಾಗೂ ಖನಿಜದ ಅಂಶಗಳಿದ್ದು, ಈ ನೀರಿಗೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಈ ಗುಣಗಳಿಂದಾಗಿಯೇ ಮೊಗಲ್ ದೊರೆಗಳು ಗಂಗೆಯ ನೀರನ್ನು ಬಳಸುತ್ತಿದ್ದರೆಂದು ಯೂರೋಪಿಯನ್ ಪ್ರವಾಸಿಗಳು ಬರೆಯುತ್ತಾರೆ. ಅಕ್ಬರ್ ಚಕ್ರವರ್ತಿ ತಾನು ಎಲ್ಲಿಗೆ ಹೋದರೂ ಬಳಸುತ್ತ ಇದ್ದದ್ದು ಗಂಗೆಯ ನೀರನ್ನೇ. ಹಿಂದೆ ನಾವಿಕರು ಇಂಡಿಯಾದಿಂದ (ಕಲಕತ್ತಾದಿಂದ) ಲಂಡನ್‌ಗೆ ಹೋಗುವಾಗ, ಹಡಗುಗಳಲ್ಲಿ ದಾರಿಯುದ್ದಕ್ಕೂ ಕುಡಿಯುವುದಕ್ಕಾಗಿ ಗಂಗಾನದಿಯ ನೀರನ್ನು ತುಂಬಿಸಿ ಇರಿಸಿಕೊಳ್ಳುತ್ತಿದ್ದರು. ಅದು ಅನೇಕ ದಿನಗಳ ಪ್ರಯಾಣ ಕಾಲದಲ್ಲಿ ಕೆಡದಂತೆ  ಪಾನಯೋಗ್ಯವಾಗಿಯೇ ಇರುತ್ತಿತ್ತೆಂದು ಹೇಳಲಾಗಿದೆ. ಆದರೆ ಅದೇ ನಾವಿಕರು ಲಂಡನ್‌ನಿಂದ ಇಂಡಿಯಾಕ್ಕೆ ಬರುವಾಗ ತಾವು ತುಂಬಿಸಿ ಇರಿಸಿಕೊಳ್ಳುತ್ತಿದ್ದ ಥೇಮ್ಸ್ ನದಿಯ ನೀರು ಕೆಲವೇ ದಿನಗಳಲ್ಲಿ ಪಾನಯೋಗ್ಯವಲ್ಲದ ಸ್ಥಿತಿಯನ್ನು ತಲುಪುತ್ತ ಇದ್ದುದರಿಂದ, ದಾರಿಯಲ್ಲಿ ಯಾವುದಾದರೂ ದೇಶದ ತೀರಕ್ಕೆ ಬಂದು, ಮತ್ತೆ ಕುಡಿಯುವ ನೀರನ್ನು ಹೊಸದಾಗಿ ತುಂಬಿಸಿಕೊಳ್ಳಬೇಕಾಗುತ್ತಿತ್ತಂತೆ. ಅಂದರೆ ಇದರರ್ಥ, ಗಂಗಾನದಿಯ ನೀರು ಬಹುಕಾಲ ಕೆಡದೆ ಇರುವಂಥ ಗುಣವನ್ನು ಪಡೆದುಕೊಂಡಿದೆ ಎಂದಂತಾಯಿತು. ಈ ಒಂದು ಗುಣವನ್ನೇ ಧಾರ್ಮಿಕ ಭಾವನೆಯುಳ್ಳ ಭಕ್ತಾದಿಗಳು, ದೈವೀಕರಿಸಿ, ಗಂಗೆಯನ್ನು ಪಾವಿತ್ರ್ಯದ ಮೂರ್ತಿ ಎಂದು ಸ್ತುತಿಸಿದ್ದಾರೆ. ಗಂಗೆಯನ್ನು ಕ್ಷೀರಶುಭ್ರಾ, ನಿತ್ಯಶುದ್ಧಾ ಎಂದು ಆಚಾರ್ಯರುಗಳು ಪ್ರಶಂಸಿಸಿದ್ದಾರೆ. ‘ಶಿವನ ಜಡೆಯಿಂದ, ಹರಿಯ ಅಡಿಯಿಂದ’ ಹರಿದು ಬರುವ ಗಂಗೆ, ಪರಮಪಾವನಳೂ ಪವಿತ್ರಳೂ ಆಗಿರುವ ಕಾರಣ, ಗಂಗಾಜಲವನ್ನು ಗಿಂಡಿಗಳಲ್ಲಿ ಪಾತ್ರೆಗಳಲ್ಲಿ ತುಂಬಿಕೊಂಡು ತಮ್ಮ ತಮ್ಮ ಊರುಗಳಿಗೆ ಯಾತ್ರಾರ್ಥಿಗಳು ತೆಗೆದುಕೊಂಡು ಹೋಗುತ್ತಾರೆ; ಮತ್ತು ಹಾಗೆ ತೆಗೆದುಕೊಂಡು ಹೋದ ಈ ಪವಿತ್ರ ಜಲ, ನಿತ್ಯಶುದ್ಧ ರೂಪದಲ್ಲಿಯೇ ಇರುತ್ತದೆಂದು ಈ ದೇಶದ ಜನ ನಂಬಿಕೊಂಡಿದ್ದಾರೆ. ಈ ‘ಶುದ್ಧ ರೂಪ’ ಬಹುಶಃ ಗಂಗಾ ನದಿಯ ನೀರಿಗೆ ಅತ್ಯಧಿಕ ಪ್ರಮಾಣದಲ್ಲಿ ಇರುವ ಸ್ವಯಂ ಶುದ್ಧೀಕರಣ ಸಾಮರ್ಥ್ಯದಿಂದ ಪ್ರಾಪ್ತವಾದದ್ದು. ಈ ಸ್ವಯಂ ಶುದ್ಧೀಕರಣ ಸಾಮರ್ಥ್ಯ, ಯಾವ ನದಿಗಳಲ್ಲಿ ಸದಾ ಕಾಲ ಅಗಾಧ ಪ್ರಮಾಣದ ಜಲ ಸಮೃದ್ಧಿ ಇರುತ್ತದೆಯೋ ಅಂಥ ನದಿಗಳಿಗೆ ಸಾಧ್ಯ. ಗಂಗಾನದಿಗೆ ಈ ಸಾಮರ್ಥ್ಯ ಸಹಜವಾಗಿಯೇ ಇದೆ. ಯಾಕೆಂದರೆ, ಗಂಗೋತ್ರಿಯ ಹಿಮದ ನಿತ್ಯ ನೆಲೆಗಳಲ್ಲಿ, ನಿರಂತರವಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಕರಗುವ ಹಿಮವೇ ಈ ನೀರಿನ ಮೂಲವಾಗಿರುವುದರಿಂದ, ಹಿಮಾಲಯದ ಇತರ ಹಲವೆಡೆಗಳಿಂದ ಹುಟ್ಟುವ ಅಲಕನಂದಾ, ಮಂದಾಕಿನೀ, ಯಮುನಾ ಇಂಥ ಇನ್ನೂ ಹಲವು ನದೀ ಜಲ ಪ್ರವಾಹಗಳು ಗಂಗೆಯನ್ನು ಸೇರುವುದರಿಂದ, ಈ ನದಿಯ ಅಗಾಧ ಜಲಸಮೃದ್ಧಿ ಸ್ವಯಂ ಶುದ್ಧೀಕರಣವನ್ನು ಸಾಧಿಸಿಕೊಂಡು ಸದಾ ಹೊಸದಾಗಿರುತ್ತದೆ. ಗಂಗಾ ನದಿಗಿರುವ ಈ ಅಗಾಧ ಜಲ ಸಮೃದ್ಧಿಯನ್ನು ಕುರಿತು, ನಮ್ಮ ಹಿಂದಿನ ಪುರಾಣಗಳು ಸಾಂಕೇತಿಕವಾಗಿ ಹೀಗೆ ವರ್ಣಿಸಿವೆ : ಹಿಂದೆ ದೇವಾಸುರರ ಸಂಘರ್ಷದಲ್ಲಿ, ಅಸುರರು ದೇವತೆಗಳನ್ನು ಘಾತಿಸಿ ಸಾಗರ ತಳದಲ್ಲಿ ಹೋಗಿ ಬಚ್ಚಿಟ್ಟುಕೊಂಡರು. ಆಗ ದೇವತೆಗಳ ಪ್ರಾರ್ಥನೆಯ ಮೇರೆಗೆ ಅಗಸ್ತ್ಯ ಸಮುದ್ರವನ್ನೇ ಆಪೋಶನವನ್ನಾಗಿ ಕುಡಿಯಲಾಗಿ, ಸಮುದ್ರವೆಲ್ಲಾ ಖಾಲಿಯಾಗಿ ಅದರಲ್ಲಿ ಅಡಗಿಕೊಂಡಿದ್ದ ಅಸುರರನ್ನು ದೇವತೆಗಳು ಸುಲಭವಾಗಿ ಜಯಿಸಲು  ಸಾಧ್ಯವಾಯಿತು. ಈ ನಡುವೆ, ಅಗಸ್ತ್ಯರು ತಾವು ಕುಡಿದ ಕಡಲನ್ನು ಜೀರ್ಣಿಸಿಕೊಂಡು ಬಿಟ್ಟಿದ್ದರಿಂದ, ಬತ್ತಿಹೋದ ಕಡಲುಗಳನ್ನು ಮತ್ತೆ ತುಂಬಿಸಲು ನೀರನ್ನು ಎಲ್ಲಿಂದ ತರುವುದು ಎಂಬ ಸಮಸ್ಯೆ ದೇವತೆಗಳನ್ನು ಕಾಡಿತು. ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿ ಈ ವಿಷಯವನ್ನು ಅವನ ಗಮನಕ್ಕೆ ತಂದರು. ಬ್ರಹ್ಮ ಭಗೀರಥನ ತಪಸ್ಸಿನ ಕಾರಣದಿಂದ ಇಷ್ಟರಲ್ಲೆ ಗಂಗೆ ಭೂಮಿಗೆ ಇಳಿಯುವಳೆಂದೂ, ಅವಳೇ ಬತ್ತಿಹೋದ ಕಡಲುಗಳನ್ನು ತುಂಬುತ್ತಾಳೆಂದೂ ದೇವತೆಗಳಿಗೆ ಭರವಸೆ ನೀಡಿದನು. ಅದರಂತೆ, ಮುಂದೆ ಅವತರಿಸಿದ ಗಂಗೆಯಿಂದ ಬರಿದಾಗಿದ್ದ ಕಡಲುಗಳು ತುಂಬಿಕೊಂಡವು. ಈ ಕಥೆ ಒಂದು ಸಂಕೇತ. ಅಂದರೆ, ಗಂಗೆಯ ನೀರಿನ ಪ್ರಮಾಣ ಎಷ್ಟು ದೊಡ್ಡದೆಂದರೆ, ಬತ್ತಿದ ಸಮದ್ರಗಳನ್ನೂ ತುಂಬುವಷ್ಟು ಎಂದು. ಗಂಗಾ ನದಿಗೆ ಇಂಥ ಆಗಾಧ ಪ್ರಮಾಣದ ಜಲಸಮೃದ್ಧಿ ಇದ್ದರೂ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರಗಳ ಹಾಗೂ ಕೈಗಾರಿಕೀಕರಣದಿಂದ ಆಗುವ ಜಲಮಾಲಿನ್ಯದಿಂದ ಗಂಗಾನದಿಯ ನೀರಿನ ಶುದ್ಧತೆಯನ್ನು ಶಂಕಿಸುವ ಕಾಲ ಆಗಲೇ ಹತ್ತಿರಕ್ಕೆ ಬಂದಿದೆ. ಮಲಿನಗೊಳ್ಳುತ್ತಿರುವ ಗಂಗಾನದಿಯ ನೀರನ್ನು ಶುದ್ಧಗೊಳಿಸಲು, ಇತ್ತೀಚೆಗೆ ಭಾರತ ಸರ್ಕಾರವು ಪ್ರಾಧಿಕಾರವೊಂದನ್ನು ರಚಿಸಿದೆ; ಮೂವತ್ತು ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಾಗಿರಿಸಲಾಗಿದೆ ಎಂದು ವರದಿಯಾಗಿದೆ.

ಹೃಷಿಕೇಶದ ತೂಗು ಸೇತುವೆಯ ಮೇಲೆ ನಿಂತು ಕೆಳಗೆ ಪ್ರವಹಿಸುವ ಗಂಗೆಯ ಶುಭ್ರ ಜಲಕಲ್ಲೋಲವನ್ನು ನೋಡುತ್ತಾ ನಿಂತೆ. ಇಳಿ ಹಗಲಿನ ಸೂರ್ಯನ ತಾಪದಲ್ಲಿ ಥಳಥಳಿಸುವ ನದಿಯನ್ನು ನೋಡುತ್ತಾ ನೋಡುತ್ತಾ ನನಗೆ, ಈ ನದಿ ಹರಿದು ಬರುವ ಪರ್ವತ ಮಂಡಲಗಳ ನೆನಪಾಗುತ್ತದೆ; ನಸುನೀಲಿಯಾಗಿ, ತೆರೆ ತೆರೆಯಾಗಿ ಏರಿಳಿವ ಪರ್ವತ ಪಂಕ್ತಿಗಳಾಚೆ, ಬೆಳಗಿನಲ್ಲಿ ಬಂಗಾರವಾಗುವ, ಮಧ್ಯಾಹ್ನದಲ್ಲಿ ಬೆಳ್ಳಿಯಾಗುವ, ಸಂಜೆಗೆ ಕೆನ್ನೇರಿಲೆಯಾಗುವ ಹಿಮಾಚ್ಛಾದಿತ ಶಿಖರಗಳ ನೆನಪಾಗುತ್ತದೆ; ನಿಮಿಷಕ್ಕೊಮ್ಮೆ ಅದ್ಭುತ ದೃಶ್ಯಗಳನ್ನು ತೆರೆಯುವ ಬೆಟ್ಟದ ಬಳಸುದಾರಿಗಳ ನೆನಪಾಗುತ್ತದೆ; ಪರ್ವತದ ದುರ್ಗಮ ಪಥಗಳಲ್ಲಿ ಒಂದೇ ಸಮನೆ ಏರಿ ಇಳಿದು, ಇಳಿದು ಏರಿ ನಡೆಯುವ ಯಾತ್ರಿಕರ ನೆನಪಾಗುತ್ತದೆ; ಬೆಳ್ಳಿ ಬೆಟ್ಟಗಳ ಮುನ್ನೆಲೆಯಲ್ಲಿ ತಲೆಯೆತ್ತಿದ ಗುಡಿಗೋಪುರಗಳ ನೆನಪಾಗುತ್ತದೆ; ಶಿಖರಗಳ ನಡುವೆ ಹಬ್ಬಿದ ಮಂಜಿನಲ್ಲಿ ತಣ್ಣಗೆ ರಂಜಿಸುವ ಸೂರ್ಯ ಬಿಂಬದ ನೆನಪಾಗುತ್ತದೆ; ದಟ್ಟ ಹಸುರಿನ ಬೆಟ್ಟದ ದಾರಿಗಳಲ್ಲಿನ ಮುಗ್ಧ ಗ್ರಾಮೀಣ ಚೆಲುವೆಯರ ಮುಖ ನೆನಪಾಗುತ್ತದೆ; ಅನಂತತೆಯೊಂದಿಗೆ ನಮ್ಮನ್ನು ಮುಖಾಮುಖಿಯಾಗಿ ನಿಲ್ಲಿಸುವ ಅನುಭವಗಳ ನೆನಪಾಗುತ್ತದೆ. ಆ ನೆನಪು ಇಂದಿಗೂ ನನ್ನ ನಿದ್ದೆ ಎಚ್ಚರಗಳಲ್ಲಿ ಕಾಡುತ್ತಿದೆ; ದೂರದ ಎತ್ತರಗಳಿಗೆ ನನ್ನನ್ನು ಕರೆಯುತ್ತಿದೆ.

೧೯೮೫

* * *

ಹಿಮಾಲಯದ ಸ್ಮೃತಿ ಸಂಪುಟ

ಕನಸು ಮನಸುಗಳಲ್ಲಿ ಥಟ್ಟನೆ ಎದ್ದು
ಸದಾ ಕರೆಯುತ್ತಿರುವ ಗಿರಿಶಿಖರ ಪಂಕ್ತಿಗಳೆ
ಪರ್ವತ ಪ್ರಪಂಚದಂತರಾಳಗಳಲ್ಲಿ
ಮೂಲರೂಪವ ಕುರಿತು ನಡೆಯುತ್ತಿರುವ ಹೆಜ್ಜೆಗಳೆ,

ಕಗ್ಗಾಡು ಕಣಿವೆಗಳ ಹರಜಟಾಮಂಡಲದೊಳಗೆ
ಭ್ರಮಿಸುತ್ತಿರುವ ನಿತ್ಯಜಲ ಸತ್ವಗಳೆ
ಥಳಿತ್ತಳಿಪ ಧವಳ ಪರ್ವತದ ಹಿನ್ನೆಲೆಯಲ್ಲಿ
ಮುಡಿಯೆತ್ತಿ ನಿಂತ ಗುಡಿಯ ಗೋಪುರಗಳೆ
ಕಿಕ್ಕಿರಿದ ಹೆಮ್ಮರದ ರೋಮರಾಜಿಯ ಮೈಯ್ಯ
ಪ್ರಪ್ರಾಚೀನ ಪೆಡಂಭೂತ ಸಂತಾನವೆ
ಭೈರವನ ಬಾಯ ಪಾತಾಳದಾಕಳಿಕೆಗಳ
ತಳಾತಳದಲ್ಲಿ ನಿದ್ರಿಸುವ ಘನ ಮೌನವೇ,

ತತ್ತರಿಸುವೆತ್ತರದ ಬೃಹದಾಕಾರ ವಿಸ್ತಾರ-
ದಸ್ತವ್ಯಸ್ತ ನಿರ್ಲಕ್ಷ್ಯ ದೃಶ್ಯಾಭಿವ್ಯಕ್ತಿಗಳೆ
ಮುಂಜಾನೆ ಬಂಗಾರವಾಗಿ, ನಡು ಹಗಲು ರಜತಮಯವಾಗಿ
ಸಂಜೆಗೆ ಹೊನ್ನೇರಿಲೆಯ, ಪಾರಿವಾಳದ ಬೂದು ಬಣ್ಣವಾಗಿ
ಶೋಭಿಸುವ ದಿಶಿದೇವತಾತ್ಮ ತೇಜಶ್ಯರೀರಿಗಳೇ,

ಸಂಜೆಗತ್ತಲಿನಲ್ಲಿ ಮರೆವೆಗೆ ಇಳಿವ
ಹಳೆಯ ನೆನಪುಗಳಂತೆ ನಿಂತ ಶಿಖರಕ್ಕೆ
ನಕ್ಷತ್ರದಾರತಿಯೆತ್ತುವಾಕಾಶವೇ,
ದಟ್ಟ ಕತ್ತಲಿನ ನಿದ್ರಾ ಸಮುದ್ರದೊಳಗು –
ದ್ಭುದ್ಧವಾದ ನೀರ‍್ಗಲ್ಲ ಕನಸುಗಳಂತೆ
ಮಬ್ಬಾದ ಗಿರಿಪಂಕ್ತಿ ವಿಸ್ತಾರವೇ,
ಕಣಿವೆಯೊಳಗುಟ್ಟುಗಳಿಟ್ಟ ಕಡೆಗೋಲಂತೆ
ಭೋರಿಡುವ ನೀರುಗಳ ಅನುರಣವೇ
ಜಟಿಲ ಕಾನನದ ಕುಟಿಲ ಕಂದರದ ದಾರಿಯಲಿ
ಹಠಾತ್ತನೆ ಒಂದನ್ನೊಂದು ಸಂಧಿಸಿದ
ನದೀ ಜಲೋಲ್ಲಾಸ ನಿರ್ಘೋಷಗಳೆ
ಬೆಟ್ಟದೆತ್ತರದ ಕೋಡುಗಳಿಂದ ಹಾಲಿಳಿವ
ಅಸಂಖ್ಯಾತ ಜಲಪಾತದುತ್ಸಾಹ ಗೀತಗಳೆ,

ನಿದ್ದೆ ಎಚ್ಚರಗಳಲಿ ನಿಶ್ಯಬ್ದವಾಗಿ
ನನ್ನನು ಕರೆವ ಅದ್ಭುತಗಳೆ
ಕೂತಲ್ಲೆ ನೆನಪಲ್ಲಿ ಪ್ರತ್ಯಕ್ಷವಾಗುತ್ತ
ಮಸ್ತಕದಲ್ಲಿ ಮುದ್ರಿತವಾದ ಸಂಪುಟಗಳೆ
ಅಲ್ಲಿ ಹೇಗೋ ಹಾಗೆ ಇಲ್ಲಿಯೂ ನನ್ನೊಳಗೆ
ಸತ್ಯವಾಗುತ್ತಿರುವ ವಾಸ್ತವಗಳೇ.

೧೯೮೭