ಕಾಯಿಗಳು ಪೂರ್ಣ ಬಲಿತು ಪಕ್ವಗೊಳ್ಳಲು ಸುಮಾರು ೯ ತಿಂಗಳ ಸಮಯ ಬೇಕು. ಅವು ತಿಳಿಹಸಿರಿನಿಂದ ಮಾಸಲು ಹಸುರು ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬಹುದು. ಬಣ್ಣದ ತಳಿಗಳಾದಲ್ಲಿ ಅವು ಇಟ್ಟಿಗೆ ಕೆಂಪು ಬಣ್ಣ ಪಡೆಯುತ್ತವೆ. ಪ್ರಧಾನ ಕೊಯ್ಲುಗಾಲ ಇರುವುದು ಚಳಿಗಾಲದಲ್ಲಿ ಅಂದರೆ ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ. ಆದಾಗ್ಯೂ ಇತರ ದಿನಗಳಲ್ಲಿಯೂ ಸಹ ಅಲ್ಪಸ್ವಲ್ಪ ಹಣ್ಣು ಸಿಗುತ್ತಿರುತ್ತವೆ. ಪೂರ್ಣಬಲಿತು ಪಕ್ವಗೊಂಡಾಗ ಕೈಯ್ಯಲ್ಲಿ ಹಿಡಿದು ಅದುಮಿದರೆ ಅವು ಗಡುಸಾಗಿರುತ್ತವೆ. ಹಣ್ಣನ್ನು ಬಿಡಿಸಲು ಮರದ ಮೇಲೆ ಹತ್ತುವುದಾಗಲೀ ಇಲ್ಲವೇ ರೆಂಬೆಗಳನ್ನು ಹಿಡಿದು ಜಗ್ಗಿ ಅಲ್ಲಾಡಿಸುವುದಾಗಲೀ ಮಾಡಬಾರದು. ಹಾಗೆ ಮಾಡಿದಲ್ಲಿ ರೆಂಬೆಗಳು ಮುರಿಯುವುದು ಖಂಡಿತ. ಈ ಉದ್ದೇಶಕ್ಕೆ ಮಡಚಬಹುದಾದ ಏಣಿಗಳನ್ನು ಬಳಸುವುದು ಒಳ್ಳೆಯದು. ಬಿಡಿಸಿ ತೆಗೆದ ಹಣ್ಣನ್ನು ಹೆಗಲಿಗೆ ನೇತುಹಾಕಿದ ಚೀಲಗಳಲ್ಲಿ ತುಂಬಿ ಕೆಳಕ್ಕಿಳಿಸಬೇಕು. ಅದರಿಂದ ಹಣ್ಣು ಜಜ್ಜಿ ಹಾಳಾಗುವದಿಲ್ಲ. ದಿನದ ತಂಪು ಹೊತ್ತಿನಲ್ಲಿ ಹಣ್ಣನ್ನು ಬಿಡಿಸಿ ತೆಗೆದು ಶುಭ್ರವಿರುವ ಈಚಲು ಚಾಪೆ ಅಥವಾ ಟಾರ್ಪಾಲಿನ್‌ ಹಾಳೆಯ ಮೇಲೆ ತೆಳ್ಳಗೆ ಹರಡಿ ಅವುಗಳೊಂದಿಗೆ ಬೆರೆತ ಸೊಪ್ಪು, ಕಸಕಡ್ಡಿ, ಹಾಳಾಗಿರುವಂತಹ ಹಣ್ಣು ಮುಂತಾಗಿ ಆರಿಸಿ ತೆಗೆಯಬೇಕು. ಅದರಿಂದ ಅವುಗಳಲ್ಲಿನ ಬಿಸಿಯೆಲ್ಲಾ ಆರಿ ಅವು ತಣ್ಣಗಾಗುತ್ತವೆ. ಎಲ್ಲಾ ಹಣ್ಣು ಒಮ್ಮೆಲೆ ಪಕ್ವಗೊಳ್ಳುವುದಿಲ್ಲ ಹಾಗಾಗಿ ಅವುಗಳನ್ನು ಎರಡು ಮೂರು ಸುತ್ತುಗಳಲ್ಲಿ ಕೊಯ್ಲು ಮಾಡಬೇಕಾಗುತ್ತದೆ. ಸುಧಾರಿತ ತಳಿ ಮತ್ತು ಉತ್ತಮ ನಿರ್ವಹಣೆಗಳಿದ್ದಲ್ಲಿ ಹತ್ತು ವರ್ಷವಯಸ್ಸಿನ ಮರಗಳಿಂದ ಕೂಡಿದ ತೋಟದಲ್ಲಿ ಹೆಕ್ಟೇರಿಗೆ ವರ್ಷಕ್ಕೆ ೧೮ ರಿದ ೨೦ ಟನ್‌ಗಳಷ್ಟು ಹಣ್ಣು ಸಿಗುವುದರಲ್ಲಿ ಸಂಶಯವಿಲ್ಲ. ಮಾರಾಟ ಬೆಲೆ ಕಿ.ಗ್ರಾಂ ಒಂದಕ್ಕೆ ೪ ರೂ ಗಳಷ್ಟಿದ್ದರೂ ಹೆಕ್ಟೇರಿಗೆ ೭೨,೦೦೦ ರಿಂದ ೮೦,೦೦೦ ರೂಪಯಿಗಳಷ್ಟು ಒಟ್ಟು ಆದಾಯ ಸಾಧ್ಯವಾಗುತ್ತದೆ. (ಕೋಷ್ಟಕ ೭). 

ಕೋಷ್ಟಕ : ಒಂದು ಹೆಕ್ಟೇರು ನೆಲ್ಲಿ ಬೇಸಾಯಕ್ಕೆ ತಗಲುವ ಅಂದಾಜು ಮತ್ತು ನಿರೀಕ್ಷಿಸಬಹುದಾದ ಆದಾಯ

ಹಣ್ಣಿನ ವರ್ಗೀಕರಣ, ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟ

ಕೊಯ್ಲು ಮಾಡಿದ ನಂತರ ಹಣ್ಣುಗಳನ್ನು ವರ್ಗೀಕರಿಸುವ ಪದ್ದತಿ ನಮ್ಮಲ್ಲಿ ಇಲ್ಲ. ಅವುಗಳಲ್ಲಿ ದೊಡ್ಡ ಗಾತ್ರದ, ಮಧ್ಯಮ ಗಾತ್ರದ  ಹಾಗೂ ತೀರಾ ಸಣ್ಣವಿರುವ ಹಣ್ಣುಗಳು ಬೆರೆತಿರುತ್ತವೆ. ಈ ವಿಧದಲ್ಲಿ ಸರಕಿಗೆ ಉತ್ತಮ ಬೆಲೆ ಸಿಗಲಾರದು. ಹಣ್ಣುಗಳನ್ನು ತಳಿ, ಗಾತ್ರ, ಆಕಾರ ಅಥವಾ ತೂಕದ ಆಧಾರದ ಮೇಲೆ ಬೇರೆ ಬೇರೆ ದರ್ಜೆಗಳಾಗಿ ವರ್ಗೀಕರಿಸಿ ಮಾರಾಟ ಮಾಡಿದಲ್ಲಿ ನಿರೀಕ್ಷಿತ ಬೆಲೆ ಸಾಧ್ಯ. ಬೇರೆ ಬೇರೆ ದರ್ಜೆಯ ಸರಕಿಗೆ ಬೇರೆ ಬೇರೆ ಮಾರಾಟ ಬೆಲೆಯನ್ನು ನಿಗದಿಪಡಿಸಬಹುದು. ಇತರ ತೋಟಗಾರಿಕಾ ಸರಕನ್ನು ವರ್ಗೀಕರಿಸುವ ಯಂತ್ರಗಳನ್ನು ಈ ಹಣ್ಣಿಗೂ ಬಳಸಬಹುದು. ಸ್ವಯಂಚಾಲಿತ ವರ್ಗೀಕರಣ ಯಂತ್ರಗಳು ಈಗ ಬಳಕೆಯಲ್ಲಿವೆ.

ವಿವಿದ ವರ್ಗಗಳ ಹಣ್ಣನ್ನು ಬೇರೆ ಬೇರೆಯಾಗಿ ತುಂಬಬೇಕು. ಸಡಿಲವಾಗಿ ಹೆಣೆದು ತಯಾರಿಸಿದ ಬಿದಿರಿನ ಬುಟ್ಟಿ, ತೆಳುಹಲಗೆಯ ಪೆಟ್ಟಿಗೆಗಳು, ಪ್ಲಾಸ್ಟಿಕ್‌ ಕ್ರೇಟ್‌ ಮುಂತಾದವುಗಳ ತಳಭಾಗ ಮತ್ತು ಒಳ ಪಾರ್ಶ್ವಗಳಿಗೆ ಮೆತ್ತಗಿರುವ ಒಣಹುಲ್ಲು ಅಥವಾ ಕಾಗದದ ಚೂರುಗಳನ್ನು ಹರಡಿ ಅನಂತರ ಹಣ್ಣನ್ನು ತುಂಬಿದರೆ ಅವು ಜಜ್ಜುವುದಿಲ್ಲ. ಮಧ್ಯೆ ಗಾಳಿಯಾಡುವಂತಿದ್ದರೆ ಬಿಸಿಯೇರುವುದಿಲ್ಲ. ಇದು ಒಳ್ಳೆಯ ಪದ್ಧತಿ. ಹಾಗಲ್ಲದೆ ಗೋಣಿ ಚೀಲಗಳಲ್ಲಿ ತುಂಬಿ, ಮೂತಿ ಕಟ್ಟಿದಲ್ಲಿ ಬಿಸಿ ಉಂಟಾಗಿ ಹಣ್ಣು ಕೆಡುತ್ತವೆ. ಈ ರೀತಿ ತುಂಬಿದ ನಂತರ, ಜೋಪಾನವಾಗಿ ಸಾಗಿಸಬೇಕು. ತೀರಾ ಒರಟಾಗಿ ಅಥವಾ ಕುಲುಕಾಟವಿದ್ದಲ್ಲಿ ಹಣ್ಣು ಜಜ್ಜಬಹುದು. ಸಾಗಾಣಿಕೆಗೆ ತೀರಾ ಕಡಿಮೆ ಅವಧಿ ಇರಬೇಕು. ಸಾಗಾಣಿಕೆಯಲ್ಲಿ ಒತ್ತಡ ಇರಬಾರದು.

ಹಣ್ಣನ್ನು ಆದಷ್ಟು ಬೇಗ ಮಾರಾಟ ಮಾಡುವುದು ಒಳ್ಳೆಯದು. ಅದರಿಂದ ಸಂಗ್ರಹಣೆಯಲ್ಲಾಗುವ ನಷ್ಟದ ಪ್ರಮಾಣ ಅಷ್ಟೊಂದು ಇರುವುದಿಲ್ಲ. ಕೊಠಡಿಯ ಉಷ್ಣತೆಯಲ್ಲಿ ಅವುಗಳನ್ನು ಒಂದು ವಾರದವರೆಗೆ ಇಡಬಹುದು. ಶೈತ್ಯಾಗಾರದಲ್ಲಿ ಸುಮಾರು ೧೨ ದಿನಗಳವರೆಗೆ ಇಟ್ಟು ಜೋಪಾನ ಮಾಡಬಹುದು. ಸಹಕಾರ ಸಂಘಗಳ ಮೂಲಕ ಮಾರಾಟ ಮಾಡುವುದು ಒಳ್ಳೆಯದು.

ಹಣ್ಣನ್ನು ೧.೭º ಸೆ, ಉಷ್ಣತೆ ಮತ್ತು ಶೇ. ೮೦ ಆರ್ದ್ರತೆಗಳಲ್ಲಿ ಸಂಗ್ರಹಿಸಿಟ್ಟರೆ ಅವು ೮ ವಾರಗಳವರೆಗೆ ಸುಸ್ಥಿತಿಯಲ್ಲಿರುತ್ತವೆ. ಅದಿಲ್ಲದಿದ್ದಲ್ಲಿ ೧೫೦ ಪಿಪಿಎಂ ಸಾಮರ್ಥ್ಯದ ಕೈನೆಟಿನ್‌ ದ್ರಾವಣದಲ್ಲಿ ಹತ್ತು ನಿಮಿಷಗಳ ಕಾಲ ಅದ್ದಿ ತೆಗೆದು ೧೮.೫º ± ೫.೮º ಸೆ. ಉಷ್ಣತೆ ಮತ್ತು ಶೇ. ೬೭ ರಷ್ಟು ಸಾಪೇಕ್ಷ ಆರ್ದ್ರತೆಗಳಲ್ಲಿ ಇಡಬಹುದು. ಇದೇ ಉದ್ದೇಶಕ್ಕೆ ೨೫ ಪಿಪಿಎಂ ಜಿಬರ್ಲಿಕ್ ಆಮ್ಲ ಇಲ್ಲವೇ ಶೇ. ೧ರ ಕ್ಯಾಲ್ಷಿಯಂ ನೈಟ್ರೇಟ್‌ ಮತ್ತು ಶೇ. ೦.೧ರ ಟಾಪ್ಸಿನ್‌ಗಳ ಮಿಶ್ರಣವನ್ನು ಶಿಫಾರಸು ಮಾಡಲಾಗಿದೆ.

ಅಧಿಕ ಇಳುವರಿಗೆ ಕೆಲವು ಸಲಹೆಗಳು

ಅಧಿಕ ಇಳುವರಿ ಪಡೆಯಲು ನೆಲ್ಲಿ ಬೇಸಾಯದಲ್ಲಿ ಅನುಸರಿಸಬೇಕಾದ ಕೆಲವು ಅಂಶಗಳು ಈ ಮುಂದಿನಂತಿವೆ:

 • ಬೆಟ್ಟದ ನೆಲ್ಲಿ ಉಪಯುಕ್ತವಿರುವ ಹಾಗೂ ಒಳ್ಳೆಯ ವರಮಾನ ತರುವ ಕಿರುಹಣ್ಣಿನ ಬೆಳೆ; ಕಡಿಮೆ ಆರೈಕೆ ಇದ್ದರೂ ಸಹ ಚೆನ್ನಾಗಿ ಫಲಿಸಬಲ್ಲದು.
 • ಕಡಿಮೆ ಮಳೆಯಾಗುವ, ಬರಗಾಲಪೀಡಿತ ಹಾಗೂ ಜಲಾನಯನ ಪ್ರದೇಶಗಳಿಗೆ ಬಹುವಾಗಿ ಒಪ್ಪುವ ಖುಷ್ಕಿ ತೋಟಗಾರಿಕೆ ಬೆಳೆ ಇದಾಗಿದೆ.
 • ಒಮ್ಮೆ ನೆಟ್ಟು ಬೆಳೆಸಿದಲ್ಲಿ ಹಲವಾರು ವರ್ಷಗಳವರೆಗೆ ಫಸಲು ಸಿಗುತ್ತಿರುತ್ತದೆ.
 • ಹಣ್ಣು ಬಲಿತು ಪಕ್ವಗೊಂಡರೂ ಸಹ ಹಕ್ಕಿ ಅಥವಾ ಕಾಡುಪ್ರಾಣಿಗಳಿಂದ ಹಾಳಾಗುವುದಿಲ್ಲ.
 • ಇದನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುವುದಿದ್ದಲ್ಲಿ ಇತರರು ಇದನ್ನು ಹೇಗೆ ಬೆಳೆಸಿದ್ದಾರೆ ಎಂಬುದನ್ನು ಅವರ ತೋಟಕ್ಕೆ ಬೇಟಿ ಇತ್ತು ನೋಡಬೇಕು ಹಾಗೂ ತಿಳಿದುಕೊಳ್ಳ ಬೇಕು, ಅವರ ಅನುಭವ ಸಿಗುತ್ತವೆ.
 • ತೋಟ ಎಬ್ಬಿಸುವ ಮೊದಲು ತಜ್ಞರಿಂದ ಸ್ಥಳ ಪರಿಶೀಲನೆ ಮಾಡಿಸುವುದು ಒಳ್ಳೆಯದು.
 • ಮಣ್ಣು ಮತ್ತು ನೀರುಗಳ ಪರೀಕ್ಷೆ ಅಗತ್ಯ.
 • ಖಾತರಿಯಿಂದ ಕೂಡಿದ ನರ್ಸರಿ ಅಥವಾ ಸರಬರಾಜು ಮಾಡುವವರಲ್ಲಿ ಮುಂಚಿತವಾಗಿ ಅಪೇಕ್ಷಿತ ತಳಿಯ ಗಿಡಗಳಿಗಾಗಿ ಕಾಯ್ದಿರಿಸಿ.
 • ಅಪರಿಚಿತರಿಂದ ಅಥವಾ ದಾರಿಪಕ್ಕ ಇಲ್ಲವೇ ಸಂತೆಗಳಲ್ಲಿ ಮಾರುವ ಗಿಡಗಳನ್ನು ಕರೀದಿಸಬಾರದು.
 • ನೆಡುವ ಉದ್ದೇಶಕ್ಕೆ ಬೀಜಸಸಿಗಳನ್ನು ಬಳಸಬಾರದು.
 • ತೋಟದ ಸುತ್ತ ಭದ್ರವಿರುವ ಬೇಲಿಯನ್ನು ಹಾಕಬೇಕು.
 • ಬೇಲಿಯ ಒಳ ಅಂಚಿನ ಉದ್ದಕ್ಕೆ ಒಂದು ಇಲ್ಲವೇ ಎರಡು ಸಾಲುಗಳಲ್ಲಿ ೨-೩ ಮೀ. ಅಂತರದಲ್ಲಿ ೩೦ ಸೆಂ.ಮೀ ಗಾತ್ರದ ಗುಂಡಿಗಳನ್ನು ತೆಗೆದು ಸರ್ವೆ, ಸಿಲ್ವರ್, ಓಕ್‌ ಮುಂತಾದವುಗಳ ಬೀಜ ಸಸಿಗಳನ್ನು ಮುಂಗಾರಿನಲ್ಲಿ ನೆಟ್ಟು ಬೆಳೆಸಿದರೆ ಅದು ಒಳ್ಳೆಯ ಗಾಳಿ ತಡೆಯಾಗಬಲ್ಲದು.
 • ಜಮೀನಿನಲ್ಲಿ ಅನಗತ್ಯ ಗಿಡಗೆಂಟೆ, ಮುಳ್ಳುಗಿಡಗಳು ಮುಂತಾಗಿ ಬೇರುಸಮೇತ ಕಿತ್ತು ತೆಗೆದು, ಒಂದೆರಡು ಸಾರಿ ಉಳುಮೆ ಮಾಡಬೇಕು.
 • ಸಮಮಾಡಿದಲ್ಲಿ ಉತ್ತಮ. ಒಂದು ವೇಳೆ ಅದು ಇಳಿಜಾರಿನ ಪ್ರದೇಶವಿದ್ದಲ್ಲಿ ಸಮಪಾತಳಿ ಬದುಗಳನ್ನು ಇಲ್ಲವೇ ಜಗಲಿ ಪಾತಿಗಳನ್ನು ಮಾಡಬೇಕು ಅವು ಇಳಕಲಿಗೆ ಅಡ್ಡಲಾಗಿರಬೇಕು.
 • ಶಿಫಾರಸ್ಸು ಮಾಡಿದ ಅಂತರದಲ್ಲಿ ೪೫ ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಈ ಕೆಲಸಕ್ಕೆ ಮೇ-ಜೂನ್‌ ಸೂಕ್ತವಿರುತ್ತದೆ.
 • ಬನಾರಸಿ, ಚಾಕೈಯ, ಹಾಥಿಜೂಲ್‌, ಕೃಷ್ಣ, ಕಾಂಚನ್‌ ಮುಂತಾದವು ಅಧಿಕ ಇಳುವರಿ ಕೊಡುವ ಸುಧಾರಿತ ತಳಿಗಳು.
 • ಕಣ್ಣು ಹಾಕಿ ಕಸಿ ಮಾಡಿದ ಗಿಡಗಳಾದಲ್ಲಿ ಉತ್ತಮ. ಅವುಗಳ ವಯಸ್ಸು ಒಂದರಿಂದ ಒಂದೂವರೆ ವರ್ಷದಷ್ಟಿದ್ದರೆ ಸಾಕು.
 • ಗುಂಡಿಗಳಿಗೆ ಮೇಲ್ಮಣ್ಣು ಮತ್ತು ಕೊಳೆತ ಕೊಟ್ಟಿಗೆಗೊಬ್ಬರ ಅಥವಾ ಸಗಣಿ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ತುಂಬಬೇಕು. ಒಂದೆರಡು ಮಳೆಗಳಾದರೆ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ.
 • ಗಿಡಗಳನ್ನು ನೆಡಲು ಜುಲೈ ಹೆಚ್ಚು ಸೂಕ್ತ. ಆದರಿಂದ ಗಿಡಗಳಿಗೆ ಮಳೆಗಾಲದ ಪೂರ್ಣ ಲಾಭ ಸಿಕ್ಕಿ, ಅವು ಮಳೆಗಾಲ ಮುಗಿಯುವಷ್ಟರಲ್ಲಿಯೇ ಚೆನ್ನಾಗಿ ಸ್ಥಿರಗೊಳ್ಳಬಲ್ಲವು.
 • ನೆಡುವ ಕೆಲಸವನ್ನು ಯಾವುದೇ ಕಾರಣಕ್ಕೂ ಬಹಳಷ್ಟು ಮುಂದೂಡಬಾರದು.
 • ಗಿಡಗಳನ್ನು ಒಂದೆರಡು ವಾರ ಮುಂಚಿತವಾಗಿಯೇ ತಂದು ನೆರಳಿನಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವುಗಳಿಗೆ ಸಾಗಾಣಿಕೆ ಆಘಾತ ಇರುವುದಿಲ್ಲ.
 • ಒದೇ ಗಾತ್ರದ ಹಾಗೂ ಒಳ್ಳೆಯ ಬೆಳವಣಿಗೆ ಇರುವ ಗಿಡಗಳನ್ನು ಆರಿಸಿಕೊಳ್ಳಬೇಕು.
 • ಗಿಡಗಳನ್ನು ದಿನದ ತಂಪು ಹೊತಿನಲ್ಲಿ ಇಲ್ಲವೇ ಮೋಡಕವಿದ ದಿನಗಳಲ್ಲಿ ನೆಟ್ಟಿದ್ದೇ ಆದರೆ ಅವು ಬಾಡುವುದಿಲ್ಲ.
 • ಅವುಗಳನ್ನು ಹೆಪ್ಪು ಸಮೇತ ನೆಡಬೇಕು. ನೆಡುವ ಮುಂಚೆ ಹೆಪ್ಪನ್ನು ಅವರಿಸಿರುವ ಪ್ಲಾಸ್ಟಿಕ್‌ ಚೀಲ ಅಥವಾ ಕುಂಡವನ್ನು ಜೋಪಾನವಾಗಿ ಬಿಡಿಸಿ ತೆಗೆಯುವುದನ್ನು ಮರೆಯಬಾರದು.
 • ಪ್ರತಿ ಗುಂಡಿಯ ಮಧ್ಯೆ ಹೆಪ್ಪು ಹಿಡಿಸುವಷ್ಟೇ ಗಾತ್ರದ ತಗ್ಗು ತೆಗೆದು, ಅದರಲ್ಲಿ ಗಿಡವನ್ನು ನೆಟ್ಟಗೆ ನಿಲ್ಲಿಸಿ, ಬುಡದ ಸುತ್ತ ಹಸಿ ಮಣ್ಣನ್ನು ಹರಡಿ, ಚೆನ್ನಾಗಿ ಅದುಮಿ ನಂತರ ತುಳಿಯಬೇಕು.
 • ಕಸಿ ಗಿಡಗಳಾದಲ್ಲಿ ಕಸಿಗಂಟು ನೆಲಮಟ್ಟದಿಂದ ೧೫-೨೨ ಸೆಂ.ಮೀ. ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು.
 • ಕಸಿಗಂಟಿನ ಕೆಳಗೆ ಅಂದರೆ ಬೇರು ಸಸಿಯಲ್ಲಿ ಚಿಗುರುಗಳೇನಾದರೂ ಇದ್ದರೆ ಅವುಗಳನ್ನು ಚಿವುಟಿ ಹಾಕಬೇಕು.
 • ಸಾಲುಗಳ ಮತ್ತು ಸಸಿಗಳ ನಡುವೆ ೧೦ ಮೀ. ಅಂತರ ಕೊಟ್ಟಾಗ ಹೆಕ್ಟೇರಿಗೆ ೧೦೦ ಗಿಡ ಹಿಡಿಸುತ್ತವೆ.
 • ಗೆದ್ದಲು, ಗೊಣ್ಣೆಹುಳು, ಕತ್ತರಿಹುಳು ಮುಂತಾದುವು ಬೇರುಗಳನ್ನು ಕಡಿದು ತಿನ್ನುವುದು ಸಹಜ. ಅದಕ್ಕಾಗಿ ಗಿಡಗಳ ಬುಡದ ಪಾತಿಗಳನ್ನು ಹಿಗ್ಗಿಸಿ, ತಲಾ ೫೦ ಗ್ರಾಂ ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೧೦೦ ಗ್ರಾಂ ಬೇವಿನ ಹಿಂಡಿಯನ್ನು ಅಗಲಕ್ಕೆ ಉದುರಿಸಿ ಕೈನೀರು ಕೊಡಬೇಕು.
 • ಗಿಡಗಳು ಗಾಳಿಗೆ ಅಲುಗಾಡಿ ಮುರಿಯುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಪ್ರತಿ ಗಿಡಕ್ಕೆ ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು.
 • ಬಿದ್ದಂತಹ ಮಳೆ ನೀರು ಆಯಾ ತಾಕುಗಳಲ್ಲಿಯೇ ಸಂಗ್ರಹಗೊಂಡು ಹಿಂಗುವಂತೆ ಮಾಡಲು ಹಾಗೂ ಗಿಡಗಳಿಗೆ ಹೆಚ್ಚಕಾಲ ತೇವ ಸಿಗುವಂತೆ ಮಾಡಲು ಸುತ್ತ ಎತ್ತರದ ಬದುಗಳನ್ನು ಹಾಕಿ. ಅವುಗಳ ಮೇಲೆ ಹುಲ್ಲನ್ನು ಹಚ್ಚಬೇಕು. ಅದರಿಂದ ಮಣ್ಣು ಕೊಚ್ಚಿ ಹೋಗವುದು ತಪ್ಪುತ್ತದೆ.
 • ತಾಕುಗಳ ನಾಲ್ಕೂ ಮೂಲೆಗಳಲ್ಲಿ ಒಂದರಂತೆ ಸೂಕ್ತ ಗಾತ್ರದ ಗುಂಡಿಗಳನ್ನು ತೆಗೆದರೆ ಹೆಚ್ಚುವರಿ ನೀರು ಅವುಗಳಲ್ಲಿ ಸಂಗ್ರಹಗೊಂಡು ತೇವ ಹೆಚ್ಚುಕಾಲ ಸಿಗುವಂತಾಗುತ್ತದೆ.
 • ಇಳಿಜಾರು ಪ್ರದೇಶಗಳಾದಲ್ಲಿ ಇಳುಕಲಿನ ಕಡೆ ಅರ್ಧಚಂದ್ರಾಕಾರದ ಬದುಗಳನ್ನು ಮಾಡುವುದು ಲಾಭದಾಯಕ.
 • ಗಿಡಗಳಿಂದ ಉದುರಿಬಿದ್ದ ಎಲೆ, ಹೂವು ಹಾಗೂ ಇತರ ಸಸ್ಯ ಭಾಗಗಳು ಮತ್ತು ಹುಲ್ಲು ಮೇಲಿನಿಂದ ಕೊಚ್ಚಿ ಬಂದ ಮಣ್ಣಿನೊಂದೆಗೆ ಬೆರೆತು ಗೊಬ್ಬರವಾಗುತ್ತದೆ.
 • ಗಿಡ ಚೆನ್ನಾಗಿ ಬೆಳೆಯುವಲ್ಲಿ ಅವುಗಳಿಗೆ ಪ್ರತೀ ವರ್ಷ ಸಾಕಷ್ಟು ಗೊಬ್ಬರಗಳನ್ನು ಕೊಡಬೇಕು.
 • ಸಾಧ್ಯವಾದಷ್ಟುಮಟ್ಟಿಗೆ ಸಾವಯವ ಗೊಬ್ಬರಗಳನ್ನು ಹೆಚ್ಚು ಹೆಚ್ಚಾಗಿ ಕೊಡುವುದು ಉತ್ತಮ.
 • ಕೊಟ್ಟಿಗೆ ಗೊಬ್ಬರ ಅಥವಾ ಸಗಣಿ ಗೊಬ್ಬರ ಚೆನ್ನಾಗಿ ಕೊಳೆತಿರಬೇಕು.
 • ಹಸಿ ಸಗಣಿಯನ್ನಾಗಲೀ ಅಥವಾ ಆಗತಾನೇ ಗುಡಿಸಿ ತೆಗೆದ ಕೋಳಿ ಹಿಕ್ಕೆಯನ್ನಾಗಲೀ ಹಾಕಬಾರದು.
 • ಗಿಡಗಳು ಎಲ್ಲಿರುತ್ತವೆಯೋ ಅಲ್ಲಿಯೇ ಕಾಂಪೋಸ್ಟ್‌ ತಯಾರಿಸಿ ಅವುಗಳಿಗೆ ಒದಗಿಸುವುದು ಉತ್ತಮ.
 • ಗೊಬ್ಬರಗಳನ್ನು ಬುಡದಿಂದ ಸ್ವಲ್ಪ ದೂರದಲ್ಲಿ ಉಂಗುರದ ತಗ್ಗು ಕಾಲುವೆ ಮಾಡಿ ಅದರಲ್ಲಿ ಸಮನಾಗಿ ಹರಡಿ, ಮಣ್ಣು ಮುಚ್ಚುವುದು ಸರಿಯಾದ ಕ್ರಮ.
 • ಗಿಡಗಳು ಬೆಳೆದು ದೊಡ್ಡವಾದಂತೆಲ್ಲಾ ಈ ಉಂಗುರದ ತಗ್ಗು ಕಾಲುವೆಯನ್ನು ದೂರದೂರಕ್ಕೆ ಮಾಡಬೇಕು.
 • ಗ್ಲರಿಸೀಡಿಯ, ಹೊಂಗೆ ಎಕ್ಕ, ಉಗನಿ ಹಂಬು ಮುಂತಾದವುಗಳ ಸೊಪ್ಪನ್ನು ತಗ್ಗು ಕಾಲುವೆಯಲ್ಲಿ ಗೊಬ್ಬರದ ಜೊತೆಗೆ ಸೇರಿಸುವುದು ಲಾಭದಾಯಕ.
 • ಗೊಬ್ಬರಗಳನ್ನು ಎರಡು ಸಮ ಕಂತುಗಳಲ್ಲಿ ಕೊಡಬೇಕು. ಒಂದು ಕಂತನ್ನು ಮಳೆಗಾಲದ ಪ್ರಾರಂಭದಲ್ಲಿಯೂ ಮತ್ತು ಇನ್ನೊಂದು ಕಂತನ್ನು ಮಳೆಗಾಲದ ಕಡೆಯಲ್ಲಿ ಕೊಡಲು ಸೂಚಿಸಿದೆ.
 • ಗೊಬ್ಬರಗಳನ್ನು ಹಾಕುವ ಕಾಲಕ್ಕೆ ಮಣ್ಣು ಹಸಿ ಇರುವುದು ಅಗತ್ಯ.
 • ಸಾವಯವ ಗೊಬ್ಬರಗಳ ಜೊತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಕೊಡುವುದು ಲಾಭದಾಯಕ.
 • ಬೋರಾನ್‌ನಂತಹ ಪೋಷಕಾಂಶಗಳನ್ನು ದ್ರಾವಣ ರೂಪದಲ್ಲಿ ಎಲೆಗಳ ಮೇಲೆ ಸಿಂಪಡಿಸಿದಲ್ಲಿ ಹೆಚ್ಚು ಪರಿಣಾಮಕಾರಕ.
 • ಮಣ್ಣಿನಲ್ಲಿ ಹೆಚ್ಚು ತೇವಾಂಶ ಇಲ್ಲದಿದ್ದರೆ ಗಿಡಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಇರಲಾರದು. ಗಿಡಗಳು ಎಳೆಯವಿರಲಿ ಅಥವಾ ಬೆಳೆದು ದೊಡ್ಡವಾಗಿರಲಿ ಒಣ ಹವೆ ಇದ್ದಾಗ ಮತ್ತು ಬೇಸಿಗೆಯಲ್ಲಿ ನೀರನ್ನು ಒದಗಿಸಿದ್ದೇ ಆದರೆ ಅವು ಸೊಂಪಾಗಿ ಬೆಳೆಯಬಲ್ಲವು.
 • ನೆಟ್ಟ ನಂತರ ಒಂದು ವರ್ಷದವರೆಗೆ ನೀರನ್ನು ಒದಗಿಸಬೇಕು.
 • ಅವುಗಳಿಗೆ ಮಡಕೆ ನೀರಾವರಿ ಒದಗಿಸಿದರೆ ಹೆಚ್ಚು ನೀರು ಬೇಕಾಗಿರುವುದಿಲ್ಲ. ಶ್ರಮ ಕಡಿಮೆ ಇರುತ್ತದೆ.
 • ನೆಲ್ಲಿ ಸಹಜವಾಗಿ ಅನಾವೃಷ್ಟಿಯನ್ನು ತಡೆದುಕೊಳ್ಳುವ ಹಣ್ಣಿನ ಮರವಾಗಿದೆ.
 • ಸಸಿಗಳನ್ನು ನೆಟ್ಟ ನಂತರ ಸಾಲುಗಳ ನಡುವೆ ಮತ್ತು ಪಾತಿಗಳಲ್ಲಿನ ಮಣ್ಣು ಗಡುಸುಗೊಳ್ಳುತ್ತದೆ. ಕಳೆಗಳು ವಿಜೃಂಭಿಸಿ ಪೋಷಕಾಂಶಗಳನ್ನು ಹಾಗೂ ತೇವಾಂಶಗಳನ್ನು ಬಳಸಿಕೊಳ್ಳುತ್ತವೆ. ಅದಕ್ಕಾಗಿ ಅಂತರ ಬೇಸಾಯ ಮತ್ತು ಕಳೆ ಹತೋಟಿಗಳನ್ನು ಕೈಗೊಳ್ಳಬೇಕು.
 • ಸಾಲುಗಳ ನಡುವೆ ರಾಗಿ, ತೊಗರಿ, ಅವರೆ ಉದ್ದು, ಹೆಸರು, ಅಲಸಂದಿ, ನೆಲಗಡಲೆ ಮುಂತಾಗಿ ಬೆಳೆದು ಲಾಭ ಹೊಂದಬಹುದು.
 • ಫಲವತ್ತತೆ ಸುಧಾರಿಸಲು ಮತ್ತು ಗೊಬ್ಬರಗಳಿಗೆ ತಗಲುವ ಖರ್ಚನ್ನು ಉಳಿಸಲು ಅವರೆ, ಹೆಸರು ಅಪ್ಸೆಣಬು, ಡೈಯಂಚ, ಅಲಸಂದಿ ಮುಂತಾದ ದ್ವಿದಲ ಧಾನ್ಯ ಬೆಳೆಗಳನ್ನು ಮುಂಗಾರಿನಲ್ಲಿ ಬಿತ್ತಿ ಅವು ಹೂವು ಬಿಡುವ ಮಂಚೆ ಉಳುಮೆ ಮಾಡಿ ಮಣ್ಣಿಗೆ ಸೇರಿಸಬೇಕು.
 • ವಾಣಿಜ್ಯ ಫಸಲು ಬಿಡಲು ಏನಿಲ್ಲಾಂದರೂ ಏಳೆಂಟು ವರ್ಷಗಳು ಬೇಕು. ಅದುವರೆಗೆ ಬೇಗ ಫಸಲು ಕೊಡುವ ಸೀಬೆ, ಸೀತಾಫಲ, ಅಂಜೂರ, ದಾಳಿಂಬೆ, ಫಾಲ್ಸ, ಪಪಾಯ, ನುಗ್ಗೆ, ಕರಿಬೇವು ಮುಂತಾದವುಗಳನ್ನು ಸಾಲುಗಳ ನಡುವೆ ಅಥವಾ ನಾಲ್ಕು ಗಿಡಗಳ ಮಧ್ಯೆ ಒಂದರಂತೆ ನೆಟ್ಟು ಬೆಳಸಬಹುದು. ಇದರಿಂದ ಜಮೀನು ಪೂರ್ಣವಾಗಿ ಬಳಕೆಯಾಗುತ್ತದೆ. ಮತ್ತು ಆದಾಯ ಲಭಿಸುತ್ತದೆ.
 • ಮೇಲ್ಮಣ್ಣು ಕೊಚ್ಚಿಹೋಗುವುದನ್ನು ತಪ್ಪಿಸಲು ಅಲಸಂದೆಯಂತಹ ಬೆಳೆಯನ್ನು ಬೆಳೆದು ಹೊದೆಕೆ ಒದಗಿಸಬೇಕು.
 • ಪಾತಿಗಳ ಅಗಲಕ್ಕೆ ಮತ್ತು ಸಾಲುಗಳ ನಡುವೆ ಒಣಹುಲ್ಲು, ಒಣಎಲೆ, ಕಸಕಡ್ಢಿ, ಹೊಟ್ಟು ಸಿಪ್ಪೆ, ಗರಿ, ಕೂಳೆಗಳು ಮುಂತಾಗಿ ಹರಡಿದರೆ ತೇವ ಬಹು ಸಮಯದವರೆಗೆ ಮಣ್ಣಿನಲ್ಲಿ ಉಳಿಯುತ್ತದೆ; ಕಳೆಗಳ ಬಾಧೆ ಇರುವುದಿಲ್ಲ.
 • ಗಿಡಗಳಿಗೆ ಒಳ್ಳೆಯ ಆಕಾರ ಅಗತ್ಯವಿರುತ್ತದೆ. ಕಾಂಡ ನೆಟ್ಟಗಿದ್ದು, ದೃಢವಾಗಿರಬೇಕು. ಪ್ರಧಾನ ರೆಂಬೆಗಳು ಸುತ್ತ ಹರಡಿ, ಬಲಿಷ್ಠವಿರುವ ಹಾಗೂ ಸಮತೋಲನವಿರುವ ಚೌಕಟ್ಟನ್ನು ಒದಗಿಸಬೇಕು. ನೆಲಮಟ್ಟದಿಂದ ೧ ಮೀ. ಎತ್ತರದವರೆಗೆ ಕಾಂಡದಲ್ಲಿ ಪಕ್ಕ ರೆಂಬೆಗಳನ್ನು ಸವರಿ ತೆಗೆಯಬೇಕು. ಆಗ ಅದು ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುದು.
 • ಗಿಡಗಳನ್ನು ಮಾರ್ಪಡಿಸಿದ ಸುಳಿ ಪದ್ದತಿಯಲ್ಲಿ ರೂಪಿಸಬೇಕು.
 • ಫಸಲು ಬಿಡುತ್ತಿರುವ ಮರಗಳಲ್ಲಿ ವರ್ಷಕ್ಕೊಮ್ಮೆ ಒಣಗಿದ, ಮುರಿದು ಹಾಳಾದ, ತೀರಾ ಒತ್ತಾಗಿರುವ, ಬಹಳಷ್ಟು ಕೀಟ ಮತ್ತು ರೋಗಪೀಡಿತ ರೆಂಬೆಗಳು ಮುಂತಾಗಿ ಸವರಿ ತೆಗೆಯಬೇಕು. ಕೆಲಸವನ್ನು ಹಣ್ಣನ್ನು ಕೊಯ್ಲು ಮಾಡಿದನಂತರ ಮಾಡಬೇಕು.
 • ಸವರು ಗಾಯಗಳಿಗೆ ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ ಬ್ಲೈಟಾಕ್ಸ್‌ ಶಿಲೀಂಧ್ರ ನಾಶಕದ ಸರಿಯನ್ನು ಬಳಿಯಬೇಕು.
 • ಈ ಮರಗಳ ರೆಂಬೆಗಳು ಬಲು ಪೆಡಸು. ಫಸಲಿನ ಭಾರಕ್ಕೆ ಅವು ನೆಲದ ಕಡೆ ಇಳಿಬೀಳುವುಂದುಂಟು. ಅವು ಮುರಿಯುವುದನ್ನು ತಪ್ಪಿಸಲು ಮೇಲಕ್ಕೆಳೆದುಕಟ್ಟಬೇಕು.
 • ಸುಡು ಬೇಸಿಗೆ ಇದ್ದಾಗ ಎಳೆಯ ಗಿಡಗಳಿಗೆ ನೆರಳನ್ನು ಒದಗಿಸುವುದು ಉತ್ತಮ. ದೊಡ್ಡ ಮರಗಳ ಕಾಂಡಭಾಗಕ್ಕೆ ಸುಣ್ಣವನ್ನು ಬಳಿಯಬೇಕು.
 • ಗಂಡು ಮತ್ತು ಹೆಣ್ಣು ಹೂಗಳು ಒಂದೇ ರೆಂಬೆಯ ಬೇರೆ ಬೇರೆ ಭಾಗಗಳಲ್ಲಿರುತ್ತವೆ. ಅನಾರಸಿ ತಳಿಯಲ್ಲಿ ಹೆಣ್ಣು ಹೂಗಳ ಸಂಖ್ಯೆ ಕಡಿಮೆ.
 • ಅರಳಿ, ಪರಾಗ ಉದುರಿಸಿದ ನಂತರ ಗಂಡು ಹೂವು ಉದುರಿಬೀಳುತ್ತವೆ.
 • ಗಣನೀಯ ಸಂಖ್ಯೆಯ ಹೆಣ್ಣು ಹೂವು ಮತ್ತು ಹೀಚು ವಿವಿಧ ಹಂತಗಳಲ್ಲಿ ಉದುರಿ ಬೀಳುತ್ತವೆ.
 • ಇಳುವರಿಯನ್ನು ಹೆಚ್ಚಿಸಲು ಉತ್ತಮ ನಿರ್ವಹಣೆ, ತಳಿ, ಸಸ್ಯಸಂರಕ್ಷಣೆ ಮುಂತಾದುವು ನೆರವಾಗುತ್ತವೆ. ಈ ಉದ್ದೇಶಕ್ಕೆ ಚೋದಕಗಳೂ ಸಹ ನೆರವಾಗಬಲ್ಲವು.
 • ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಕಚ್ಚುವಂತೆ ಮಾಡಲು ಸಮಂಜಸ ಪರಾಗದ ತಳಿಗಳನ್ನು ನೆಟ್ಟು ಬೆಳಸಬೇಕು.
 • ಹೂವು ಬಿಟ್ಟ ದಿನದಿಂದ ಫಸಲು ಕೊಯ್ಲಿಗೆ ಬರುವವರೆಗೆ ಸುಮಾರು ಒಂಬತ್ತು ತಿಂಗಳ ಅವಧಿ ಹಿಡಿಸುತ್ತದೆ.
 • ತೊಗಟೆ ತಿನ್ನುವ ಕಂಬಳಿಹುಳು, ಚಿಗುರನ್ನು ಕಚ್ಚಿ ಗಂಟುಗಳನ್ನುಂಟು ಮಾಡುವ ಕಂಬಳಿಹುಳು, ಹಣ್ಣಿನ ರಸ ಹೀರುವ ಪತಂಗ ಮುಂತಾದವು ಪ್ರಮುಖ ಕೀಟ ಪೀಡೆಗಳು, ತುಕ್ಕು, ನೀಲಿಬೂಷ್ಟು ಮುಂತಾದುವು ಮುಖ್ಯ ರೋಗಗಳು, ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಅವುಗಳನ್ನು ಹತೋಟಿ ಮಾಡಬೇಕು.
 • ಪೂರ್ಣ ಬಲಿತು ಪಕ್ವಗೊಂಡ ಹಣ್ಣನ್ನು ಮಾತ್ರವೇ ಕಿತ್ತು ತೆಗೆಯಬೇಕು.
 • ಮಡಚುವ ಏಣಿಗಳ ನೆರವಿನಿಂದ ಕೊಯ್ಲು ಮಾಡುವುದು ಒಳ್ಳೆಯದು.
 • ಹಣ್ಣನ್ನು ಕಿತ್ತನಂತರ ನೆಲದ ಮೇಲೆ ಎಸೆಯಬಾರದು. ಅದರ ಬದಲಾಗಿ ಅವುಗಳನ್ನು ಹೆಗಲಿಗೆ ತೂಗುಹಾಕಿದ ಚೀಲಗಳಲ್ಲಿ ತುಂಬಿ, ಜೋಪಾನವಾಗಿ ಕೆಳಗಿಳಿಸಿಕೊಂಡು ಸ್ವಚ್ಛವಿರುವ ಈಚಲು ಚಾಪೆ, ಟಾರ್ಪಾಲಿನ್‌ ಮುಂತಾದವುಗಳ ಮೇಲೆ ತೆಳ್ಳಗೆ ಹರಡಿದರೆ ಅವುಗಳಲ್ಲಿನ ಬಿಸಿ ಆರುತ್ತದೆ.
 • ಸೊಪ್ಪು, ಕಸ, ಕೂಳೆ ಮುಂತಾಗಿ ಆರಿಸಿ ತೆಗೆದು, ಹಣ್ಣುಗಳ ಗಾತ್ರವನ್ನನುಸರಿಸಿ ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಬೇಕು.
 • ವರ್ಗೀಕರಿಸಿದ ಹಣ್ಣನ್ನು ಗಾಳಿಯಾಡುವ ಪ್ಲಾಸ್ಟಿಕ್‌ ಕ್ರೇಟ್‌, ಬಿದಿರಿನ ಬುಟ್ಟಿ ಅಥವಾ ಮರದ ಹಲಗೆಯ ಪೆಟ್ಟಿಗೆಗಳಲ್ಲಿ ಮೃದುವಾದ ಮೆತ್ತೆ ಹರಡಿ ತುಂಬಬೇಕು. ಅದರಿಂದ ಅವು ಜಜ್ಜವುದಿಲ್ಲ.
 • ತೀರಾ ಸಣ್ಣಗಾತ್ರದ ಹಣ್ಣನ್ನು ಉಪ್ಪಿನಕಾಯಿ, ಹೋಳುಗಳು ಮುಂತಾದವುಗಳನ್ನು ತಯಾರಿಸಲು ಬಳಸಬಹುದು.
 • ಕೊಯ್ಲಿನ ನಂತರ ಹಣ್ಣನ್ನು ಕೈನೆಟಿನ್‌ ಅಥವಾ ಜೆಬ್ಬೆರೆಲ್ಲಿಕ್‌ ಆಮ್ಲದ ದ್ರಾವಣದಲ್ಲಿ ಅದ್ದಿ ಉಪಚರಿಸಿದರೆ ಅವು ಸಂಗ್ರಹಣೆಯಲ್ಲಿ ಹೆಚ್ಚುಕಾಲ ಉಳಿಯುತ್ತವೆ. ಸೂಕ್ತ ಉಷ್ಣತೆ ಮತ್ತು ಸಾಪೇಕ್ಷ ಆರ್ದ್ರತೆಗಳು ಇರುವುದು ಅಗತ್ಯ.
 • ಸರಕನ್ನು ಬೇಗ ಮಾರಾಟ ಮಾಡುವುದು ಒಳ್ಳೆಯದು.
 • ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮಾರಾಟ ಸಂಸ್ಥೆಗಳು, ಹಾಪ್‌ಕಾಮ್ಸ್‌ ಮುಂತಾದುವುಗಳಲ್ಲಿ ಮಾರಾಟ ಮಾಡಿದರೆ ಮಧ್ಯವರ್ತಿಯು ಇಲ್ಲದಂತಾಗಿ ಬೆಳೆದವರಿಗೆ ಹೆಚ್ಚಿನ ಲಾಭ ಸಾಧ್ಯವಾಗುತ್ತದೆ.
 • ಸರಕು ಬಹಳಷ್ಟಿದ್ದು, ಬೆಲೆ ಕಡಿವೆ ಇದ್ದರೆ ಅದನ್ನು ಸಂಸ್ಕರಣೆಗೆ ಬಳಸಬಹುದು ಇಲ್ಲವೇ ಶೀತಲ ಮಳೆಗೆಗಳಲ್ಲಿ ದಾಸ್ತಾನು ಮಾಡಬಹುದು.
 • ಪ್ರಾಯದ ಮರಗಳಿಂದ ಕೂಡಿದ ತೋಟದಲ್ಲಿ ವರ್ಷಕ್ಕೆ ೧೦ ರಿಂದ ೨೦ ಟನ್‌ ಇಳುವರಿ ಸಾಧ್ಯ. ಅಂದರೆ ಮರವೊಂದಕ್ಕೆ ೧೦೦ ರಿಂದ ೨೦೦ ಕಿ.ಗ್ರಾಂ. ಹಣ್ಣು ಸಿಗುವುದು ಖಚಿತ.
 • ಮಾರಾಟ ಬೆಲೆ ಕಿ.ಗ್ರಾಂ ಒಂದಕ್ಕೆ ೪ ರೂ ಇದ್ದರೂ ಸಹ ಹೆಕ್ಟೇರಿಗೆ ೪೦,೦೦೦ ರೂ. ಗಳಿಂದ ೮೦,೦೦೦ ರೂ. ಗಳಷ್ಟು ಒಟ್ಟು ಆದಾಯ ಸಾಧ್ಯ.
 • ಉಪ್ಪಿನಕಾಯಿ, ಮುರಬ್ಬಾ ಮುಂತಾದ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿದ್ದೇ ಆದರೆ ಇನ್ನೂ ಹೆಚ್ಚಿನ ಲಾಭ ಸಾಧ್ಯ.
 • ಕಸಿ ಗಿಡಗಳನ್ನು ಉತ್ಪಾದಿಸಿ ಮಾರಾಟ ಮಾಡಿದಲ್ಲಿ ಮತ್ತಷ್ಟು ಆದಾಯವನ್ನು ಗಳಿಸಬಹುದು.
 • ಈ ಹಣ್ಣಿನ ಬೆಳೆಯನ್ನು ಕುರಿತ ಪ್ರದರ್ಶನಗಳು, ವಿಚಾರಗೊಷ್ಟಿಗಳು, ಸಂಕೀರ್ಣಗಳು ಉಪನ್ಯಾಸ, ಕ್ಷೇತ್ರಭೇಟಿ, ಕೃಷಿ ಮೇಳ ಮುಂತಾಗಿ ಸಕ್ರಿಯವಾಗಿ ಭಾಗವಹಿಸಿ ಹೆಚ್ಚಿನ ವಿಷಯ, ಮಾಹಿತಿ, ಅನುಭವ ಹಾಗೂ ಪ್ರಾತ್ಯಕ್ಷಿಕೆಗಳನ್ನು ಕಂಡು ಲಾಭ ಹೊದಬೇಕು.
 • ಬೇಸಾಯ, ಸಂಸ್ಕರಣೆ ಸೌಲಭ್ಯ, ಸಸ್ಯಾಭವೃದ್ಧಿ ಮುಂತಾಗಿ ತರಬೇತಿ ಹೊಂದಿ ಪರಿಣಿತಿ ಪದೆಯುವುದು ಒಳ್ಳೆಯದು.
 • ವಿವಿಧ ಪದಾರ್ಥಗಳನ್ನು ತಯಾರಿಸುವ ಸಂಸ್ಕರಣಾ ಘಟಕಗಳಿಗೆ ಮಾರಾಟ ಸಂಸ್ಥೆಗಳಿಗೆ ಭೇಟಿ ಕೊಟ್ಟರೆ ಹೆಚ್ಚಿನ ಮಾಹಿತಿ ಸಿಗುತ್ತದೆ.
 • ಈಗಾಗಲೇ ಈ ಹಣ್ಣಿನ ಬೆಳೆಯನ್ನು ಬೆಳೆದು ಸರಕನ್ನು ಮಾರಾಟ ಮಾಡುತ್ತಿರುವ ರೈತರೊಂದಿಗೆ ಸಮಾಲೋಚಿಸುವುದು ಲಾಭದಾಯಕ.
 • ಮುಂಬಯಿಯಲ್ಲಿನ ಚ್ಯವನಪ್ರಾಶ್‌ ಮುಂತಾದ ಸಂಸ್ಥೆಗಳು ಸರಕನ್ನು ಖರೀದಿಸುತ್ತಾರೆ.
 • ತಮಿಳುನಾಡಿನ ಹೊಸೂರಿನಲ್ಲಿ ಮೆಹ್ತಾ ಅನ್ನುವವರು ಈ ಬೆಳೆಯ ತಳಿಗಳ ಸಸಿಗಳನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸಿ, ಮಾರಾಟ ಮಾಡುತ್ತಾರೆ. ಅವರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದು ಸೂಕ್ತ.