‘ನೆಲ್ಲಿ ಮರಕ್ಕೆ ದೊಣ್ಣೆ ಬೀಸಿದಂಗೆ’, ‘ನೆಲ್ಲಿಕಾಯಿ ತಿಂದು ನೀರು ಕುಡಿದರೆ ಮೆಲ್ಲಗೆ ಬಂತು ಚಳಿಜ್ವರ’ ಮುಂತಾಗಿ ಈ ಹಣ್ಣನ್ನು ಕುರಿತ ಹಲವಾರು ನಾಣ್ಣುಡಿ ಹಾಗೂ ಗಾದೆಗಳು ಪ್ರಚಲಿತದಲ್ಲಿವೆ.

ಕಾಯಿ-ಹಣ್ಣುಗಳಿಂದ ತುಂಬಿದ ನೆಲ್ಲಿ ಮರಕ್ಕೆ ಸ್ವಲ್ಪ ಪೆಟ್ಟುಬಿದ್ದರೂ ಸಾಕು ಒದಿಂಷ್ಟು ಉದುರುವುದು ಖಂಡಿತ. ಅದೇ ರೀತಿ ನೆಲ್ಲಿಯನ್ನು ಇತರ ಹಣ್ಣುಗಳಂತೆ ತಿನ್ನಲಾಗುವುದಿಲ್ಲ. ಹಾಗೆಯೇ ತಿಂದಲ್ಲಿ ಹುಳಿ, ಒಗರು ಮತ್ತು ಕಹಿಗಳ ಅನುಭವವಾಗುತ್ತದೆ. ಅದಾದ ಸ್ವಲ್ಪ ಹೊತ್ತಿನ ನಂತರ ಬಾಯೆಲ್ಲಾ ಸಿಹಿಯಾಗುವುದು. ಅವುಗಳನ್ನು ತಿಂದ ಮೇಲೆ ನೀರುಕುಡಿದರೆ ಮತ್ತಷ್ಟು ಸಿಹಿಯ ಅನುಭವವಾಗುತ್ತದೆ.

ದೊಡ್ಡನೆಲ್ಲಿ ಅಥವಾ ಬೆಟ್ಟದನೆಲ್ಲಿ ಎಲ್ಲರಿಗೂ ತಿಳಿದಿರುವಂಥ ಮತ್ತು ಹೆಚ್ಚು ಬಳಕೆಯಲ್ಲಿರುವ ಫಲ. ಇದರ ಬಳಕೆ ಬಹು ಪ್ರಾಚೀನ ಕಾಲದಿಂದಲೂ ಇದೆ. ಭಾರತದಲ್ಲಿ ಈ ಹಣ್ಣಿಗೆ ವಿಶಿಷ್ಟ ಸ್ಥಾನ. ಹಣ್ಣನ್ನು ಹಾಗೆಯೇ ತಿನ್ನುವುದು ಕಡಿಮೆ. ಅದಕ್ಕಿಂತ ಮುರಬ್ಬಾ, ಕ್ಯಾಂಡಿ, ಉಪ್ಪಿನಕಾಯಿ, ಚಟ್ನಿ, ರಸ, ಪುಡಿ, ಒಣಹೋಳು, ಗುಳಿಗೆ, ಚಿಪ್ಸ್ ಮುಂತಾಗಿ ತಯಾರಿಸುವುದೇ ಹೆಚ್ಚು. ನೆಲ್ಲಿಯಲ್ಲಿ ಐದು ಬೇರೆ ಬೇರೆ ರುಚಿಗಳಿರುತ್ತವೆ. ಹಾಗಾಗಿ ಅದನ್ನು ‘ಪಂಚರಸ’ ಎಂದಿರುವರು.

ನೆಲ್ಲಿ ‘ಸಿ’ ಜೀವಸತ್ವದ ಒಳ್ಳೆಯ ಮೂಲ. ಹಣ್ಣನ್ನು ಬೇಯಿಸಿ ಸಂಸ್ಕರಿಸಿದಾಗಲೂ ಸಹ ಅದರಲ್ಲಿನ ‘ಸಿ’ ಜೀವಸತ್ವ ನಷ್ಟಗೊಳ್ಳುವುದಿಲ್ಲ. ಹಿತ್ತಲಿನಲ್ಲಿ, ಮನೆಯ ಹಿಂಭಾಗದಲ್ಲಿ, ಕೈತೋಟಗಳಲ್ಲಿ ಅಥವಾ ಇತರ ಹಣ್ಣಿನ ತೋಟಗಳಲ್ಲಿ ಒಂದೆರಡು ಗಿಡವಾದರೂ ಇರಲೇಬೇಕು. ಇದುವರೆಗೆ ತಮಷ್ಟಕ್ಕೆ ತಾವೇ ಹುಟ್ಟಿ ಬೆಳೆದು ಇಲ್ಲವೇ ಬೀಜ ಸಸಿಗಳನ್ನು ನೆಟ್ಟು ಬೆಳೆಸಿ ಅವುಗಳಿಂದ ಫಸಲನ್ನು ಪಡೆಯಲಾಗುತ್ತಿತ್ತು. ಈಗಲೂ ಸಹ ಪಶ್ಚಿಮ ಘಟ್ಟಗಳು ಮುಂತಾಗಿ ಇಂತಹ ಮರಗಳಿಂದ ಸಂಗ್ರಹಿಸಿದ ಫಸಲೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವಂತಾದ್ದು. ಈಗ ಕಂಡು ಬರುವ ಬಹುತೇಕ ಮರಗಳು ಬೀಜ ಸಸಿಗಳೇ ಆಗಿವೆ. ಕೆಲವು ವರ್ಷಗಳಿಂದೀಚಿಗೆ ಇದನ್ನು ನಿರ್ಲಿಂಗ ಪದ್ಧತಿಯಲ್ಲಿ ವೃದ್ಧಿಪಡಿಸಿ ಉತ್ತಮ ದರ್ಜೆಯ ಹಣ್ಣು ಸಿಗುವಂತೆ ಮಾಡಲಾಗಿದೆ. ಈಗೀಗ ವಾಣಿಜ್ಯವಾಗಿ ವೈಜ್ಞಾನಿಕ ರೀತಿಯಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ. ಈಗ ಒಳ್ಳೆಯ ತಳಿಗಳೂ ಸಹ ಬೇಸಾಯಕ್ಕೆ ಬಂದಿವೆ. ಪ್ರಮುಖ ಕಿರುಹಣ್ಣುಗಳಲ್ಲಿ ಇದೂ ಒಂದು. ಇದಕ್ಕೆ ಅಷ್ಟೊಂದು ಹೆಚ್ಚಿನ ಆರೈಕೆ ಬೇಕಾಗಿಲ್ಲ. ಇದರ ಮರಗಳು ಗಡುತರವಿದ್ದು, ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಬಲ್ಲವು. ಫಸಲು ಯಥೇಚ್ಚವಿದ್ದು ಕೈತುಂಬಾ ಆದಾಯನ್ನು ಕೊಡಬಲ್ಲ ಹಣ್ಣಿನ ಬೆಳೆಯಾಗಿದೆ.

ಬಹುಪಯೋಗಿ ಮರ: ಇದರ ಹಣ್ಣುಗಳಿಂದ ತಯಾರಿಸಿದ ಚ್ಯವನಪ್ರಾಶ ಲೇಹ್ಯ ಎಲ್ಲಾ ಕಡೆ ಪ್ರಸಿದ್ದ. ಅದೇ ರೀತಿ ಭೃಂಗಾಮಲಕ ತೈಲ, ಕೇಶವರ್ಧಿನಿ ಮುಂತಾದ ಸುಗಂಧದೆಣ್ಣೆಗಳೂ ಸಹ ಪ್ರಸಿದ್ಧವೇ. ಇವುಗಳನ್ನು ಮುಂಬಯಿ, ದೆಹಲಿ ಮುಂತಾದೆಡೆ ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ಈ ಹಣ್ಣುಗಳಿಂದ ತಯಾರಿಸಿದ ಪ್ರಿಸರ್ವ್‌ಬಾರ್, ಶರಬತ್ತು, ಸ್ಕ್ಯಾಷ್, ಜೆಲ್ಲಿ, ಗ್ಲೇಸ್ಡ್‌ಫ್ರೂಟ್, ಕ್ರಿಸ್ಟಲೈಸ್ಡ್ ಪ್ರೋಟ್ ಸೇವಿಸಲು ಬಲು ಸೊಗಸಾಗಿರುತ್ತವೆ.

ಇದರ ಕಾಯಿ, ತೊಗಟೆ ಮತ್ತು ಎಲೆಗಳಲ್ಲಿ ಅನುಕ್ರಮವಾಗಿ ಶೇ. ೨೮, ೨೧ ಮತ್ತು ೨೨ರಷ್ಟು ಟ್ಯಾನಿನ್ ಅಂಶವಿರುತ್ತದೆ. ಅವುಗಳನ್ನು ಚರ್ಮ ಹದ ಮಾಡಲು ಬಳಸುವುದುಂಟು. ಸೊಪ್ಪನ್ನು ದನಕರಗಳ ಮೇವಾಗಿ ಬಳಸುತ್ತಾರೆ. ಎಲೆಗಳಿಂದ ಕಂದುಹಳದಿ ಬಣ್ಣ ತಯಾರಿಸುತ್ತಾರೆ. ಇದನ್ನು ರೇಷ್ಮೆ ಬಟ್ಟೆಗಳಿಗೆ ಬಣ್ಣ ಕೊಡಲು ಬಳಸುತ್ತಾರಿ. ಸೊಪ್ಪು ಉತ್ತಮ ಹಸಿರುಗೊಬ್ಬರವೂ ಹೌದು. ಅದನ್ನು ಅಡಿಕೆ, ಏಲಕ್ಕಿ ಮುಂತಾದ ಬೆಳಿಗಳಿಗೆ ಬಳಸುತ್ತಾರೆ. ಕ್ಷಾರಯುತ ಮಣ್ಣುಗಳನ್ನು ಸರಿಪಡಿಸಲು ಇದರ ಸೊಪ್ಪನ್ನು ಹಾಕುವ ರೂಢಿ ಇದೆ. ಫಲಭರಿತ ಮರಗಳನ್ನು ನೋಡಲು ಬಲು ಆಕರ್ಷಕ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿದಲ್ಲಿ ಉತ್ತಮ.

ಇದರ ಮರ ಗಟ್ಟಿಮುಟ್ಟು, ಒಳಮರ ಬಲು ಪೆಡಸು. ಅದು ಕೆಂಪು ಬಣ್ಣದ್ದಿರುತ್ತದೆ. ಅದು ಒಡೆದು ಸೀಳುವ ಸಂಭವವಿರುತ್ತದೆ. ಕೃಷಿ ಉಪಕರಣಗಳು, ತೊಲೆ, ಜಂತೆ, ಸಾಧಾರಣ ಕಟ್ಟಡಗಳ ಕೆಲಸಗಳಿಗೆ ಹಾಗೂ ಪೀಠೋಪಕರಣಗಳಿಗೆ ಬಳಸುತ್ತಾರೆ. ನೀರಿನಲ್ಲಿಟ್ಟರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಅದನ್ನು ಬಾವಿ ಕೆಲಸಗಳಿಗೆ ಉಪಯೋಗಿಸುವುದುಂಟು. ಹಳ್ಳಿಗಾಡುಗಳಲ್ಲಿ ಸೌದೆಗಾಗಿ ಮತ್ತು ಇದ್ದಿಲನ್ನು ಸುಡಲು ಬಳಸುತ್ತಾರೆ. ದೊಡ್ಡನೆಲ್ಲೆಗೆ ಹಲವಾರು ಹೆಸರುಗಳಿವೆ. ನೆಲ್ಲಿ, ಬೆಟ್ಟದ ನೆಲ್ಲಿ, ಗುಂಡುನೆಲ್ಲಿ ಮುಂತಾದುವು ಕನ್ನಡದ ಹೆಸರುಗಳು.

ಔಷಧೀಯ ಗುಣಗಳು

ಬೆಟ್ಟದ ನೆಲ್ಲಿಕಾಯಿ ಔಷಧಿಗಳ ಆಗರ. ಮನೆ ಔಷಧಿಗಳಲ್ಲಿ, ಅರ್ಯವೇದ ವೈದ್ಯಪದ್ಧತಿ, ಯುನಾನಿ ಮುಂತಾಗಿ ಈ ಹಣ್ಣು ಇದ್ದೇ ಇರುತ್ತದೆ. ಹಸಿ ಹಣ್ಣುಗಳನ್ನು ಬಳಸುವುದರ ಜೊತೆಗೆ ಹಣ್ಣನ್ನು ಜಜ್ಜಿ ಬೀಜವನ್ನು ತೆಗೆದುಹಾಕಿ ಒಣಗಿಸುವುದು, ಉಪ್ಪು ದ್ರಾವಣದಲ್ಲಿ ಅದ್ದಿ ಒಣಗಿಸಿಡುವುದು, ಬಲವರ್ಧಕಗಳನ್ನು ಮತ್ತು ಪದಾರ್ಥಗಳನ್ನು ತಯಾರಿಸಿ ಜೋಪಾನ ಮಾಡುವುದು ಸಾಮಾನ್ಯ. ತ್ರಿಫಲಗಳಿಂದ ತಯಾರಿಸಿದ ಲೇಹ್ಯ, ಬಲವರ್ಧಕಗಳು ಮುಂತಾಗಿ ಬೆಟ್ಟದನೆಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ತಿನ್ನುತ್ತಿದ್ದಲ್ಲಿ ಸ್ಕರ್ವಿ ಕಾಯಿಲೆ ದೂರಗೊಳ್ಳುತ್ತದೆ. ತಾಜಾ ಹಣ್ಣು ಅಥವಾ ಒಣಗಿಸಿಟ್ಟ ಚೂರ್ಣ ಅಥವಾ ಹೋಳುಗಳನ್ನು ತಿನ್ನುತ್ತಿದ್ದಲ್ಲಿ ಒಸಡುಗಳ ಊತ, ಕೀವು ಸೋರುವುದು, ಬಾಯಿಯ ದುರ್ಗಂಧ ಮುಂತಾಗಿ ಸುಲಭವಾಗಿ ದೂರಗೊಳ್ಳುತ್ತವೆ. ಉಪ್ಪು ದ್ರಾವಣದಲ್ಲಿ ಅದ್ದಿ ಒಣಗಿಸಿದ ಹೋಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದರೆ ಬಾಯಿಯ ದುರ್ಗಂಧ ಸುಲಭವಾಗಿ ದೂರಗೊಳ್ಳುತ್ತದೆ. ಅದರಿಂದ ಜೊಲ್ಲುರಸ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ತ್ರಿಫಲಗಳಿಂದ ತಯಾರಿಸಿದ ಲೇಹ್ಯದಲ್ಲಿ ಅಳಲೇಕಾಯಿ, ತಾರೇ ಕಾಯಿ ಮತ್ತು ಬೆಟ್ಟದ ನೆಲ್ಲಿ ಕಾಯಿಗಳ ಮಿಶ್ರಣವಿರುತ್ತದೆ. ಇದರ ಬಳಕೆ ಬಹು ಪೂರ್ವಕಾಲದಿಂದಲೂ ಇದೆ.

ಇದರ ಹಣ್ಣುಗಳಿಂದ ತಯಾರಿಸಿದ ಆಮ್ಲಕಿ ರಸಾಯನ ಬಗ್ಗೆ ‘ಚರಕ ಸಂಹಿತೆ’ಯಲ್ಲಿ ಉಲ್ಲೇಖವಿದೆ. ಇದನ್ನು ಸೇವಿಸುತ್ತಿದ್ದಲ್ಲಿ ಪೂರ್ವೋತ್ಸಾಹ ಸಾಧ್ಯ. ಹಣ್ಣುಗಳಲ್ಲಿ ವಿರೇಚಕ ಹಾಗೂ ಮೂತ್ರೋತ್ಪಾದಕ ಗುಣಗಳಿವೆ. ಒಣಗಿಸಿಟ್ಟ ಹಣ್ಣುಗಳನ್ನು ರಕ್ತಸ್ರಾವ, ಆಮಶಂಕೆ ಮುಂತಾದುವುಗಳಲ್ಲಿ ನಿರ್ದೇಶಿಸುತ್ತಾರೆ. ನೆಲ್ಲಿಕಾಯಿಗಳ ಪಾಕ ಮತ್ತು ಹಾಲುಗಳನ್ನು ಸೇವಿಸುತ್ತಿದ್ದಲ್ಲಿ ಶರೀರಕ್ಕೆ ಬಲವುಂಟಾಗುತ್ತದೆ. ರಕ್ತ ಹೀನತೆ, ಕಾಮಾಲೆ ಮುಂತಾದುವುಗಳಲ್ಲಿ ಇವುಗಳನ್ನು ಬಳಸಲು ಸೂಚಿಸುತ್ತಾರೆ.

ಇವುಗಳ ಸೇವನೆ ಹೃದಯ ರೋಗಿಗಳಿಗೆ ಲಾಭದಾಯಕ. ಬೇಸಿಗೆ ದಿನಗಳಲ್ಲಿ ತಲೆ ಸುತ್ತುವುದು ಮುತಾದ ತೊಂದರೆಗಳ್ಳಲ್ಲಿ ನೆಲ್ಲಿ ಕಾಯಿಗಳಿಂದ ತಯಾರಿಸಿದ ಸ್ಕ್ವಾಷ್ ಅಥವಾ ಕಾಯಿಗಳನ್ನು ನೆನೆಸಿಟ್ಟು ಸೋಸಿದ ತಿಳಿ ನೀರಿಗೆ ಒಂದು ಚಿಟಿಕೆ ಅಡುಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದಲ್ಲಿ ಅವು ದೂರಗೊಳ್ಳುತ್ತವೆ. ಹಣ್ಣನ್ನು ಜಜ್ಜಿ ಒಣಗಿಸಿದ ಚೂರುಗಳನ್ನು ಬಾಣಂತಿಯರಿಗೆ ತಿನ್ನಲು ಕೊಡುತ್ತಾರೆ. ಕಾಯಿಗಳ ಪುಡಿ ಮತ್ತು ಜೇನುತುಪ್ಪಗಳನ್ನು ಮಿಶ್ರಮಾಡಿ ಸೇವಿಸುತ್ತಿದ್ದಲ್ಲಿ ಮಧು ಮೇಹ ರೋಗಕ್ಕೆ ಒಳ್ಳೆಯದು.

ಬಲಿತ ನೆಲ್ಲಿ ಕಾಯಿಗಳನ್ನು ಎಳ್ಳೆಣ್ಣೆಯಲ್ಲಿ ಇತರ ವಸ್ತುಗಳೊಂದಿಗೆ ಕುದಿಸಿ ತಯಾರಿಸಿದ ವಸ್ತುವೇ ಕೇಶತೈಲ. ಇದನ್ನು ಭ್ರುಂಗಾಮಲಕ ತೈಲ ಎನ್ನುತ್ತಾರೆ. ಇದನ್ನು ಪ್ರತಿ ದಿನ ತಲೆಗೆ ಹಚ್ಚುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ದಟ್ಟ ಹಾಗೂ ಉದ್ದ ಕೂದಲು ಸಾಧ್ಯ. ಅದರಿಂದ ದೃಷ್ಟಿ ದೋಷಗಳು ದೂರಗೊಂಡು ಮೆದಳು ಮತ್ತು ಕಣ್ಣುಗಳಿಗೆ ತಂಪುಂಟಾಗುತ್ತದೆ. ಕಾಯಿಗಳ ಮೇಲಿನ ಗಾಯಗಳಿಂದ ಒಸರುವ ಸೊಸಿಯನ್ನು (ಒಣರಸ) ಕಣ್ಣು ಊದಿದಾಗ ಹೊರಲೇಪನವನ್ನಾಗಿ ಪಟ್ಟು ಹಾಕುವುದುಂಟು. ಎಲೆಗಳನ್ನು ನುಣ್ಣಗೆ ಅರೆದು ಪಟ್ಟುಹಾಕಿದಲ್ಲಿ ಕಣ್ಣು ನೋವಿಗೆ ಒಳ್ಳೆಯದು. ಅವುಗಳನ್ನು ಕುದಿಸಿ ತಯಾರಿಸಿದ ನೀರನ್ನು ಬಾಯಿ ಮುಕ್ಕಳಿಸಲು ನಿರ್ದೇಶಿಸುವುದುಂಟು. ಹೂವು ಶೈತ್ಯಕಾರಕ ಹಾಗೂ ಲಘು ವಿರೇಚಕ.

ಬೀಜವನ್ನು ಅಸ್ತಮಾ, ಪಿತ್ತರಸಬಾದೆಗಳು ಮುಂತಾಗಿ ಬಳಸುತ್ತಾರೆ ಅವುಗಳಲ್ಲಿ ತೈಲಾಂಶವಿರುತ್ತದೆ. ಹಾಗೂ ಕೇಶತೈಲಗಳನ್ನು ತಯಾರಿಸಲು ಬಳಸುವುದುಂಟು. ಬೀಜವನ್ನು ಸುಟ್ಟು ತಯಾರಿಸಿದ ಮುಲಾಮು ಹಾಗೂ ತೈಲಗಳನ್ನು ಚರ್ಮವ್ಯಾಧಿಗಳಲ್ಲಿ ಬಳಸುತ್ತಾರೆ. ಅವುಗಳಲ್ಲಿ ಕಾಮೋತ್ಪೇಜಕ ಗುಣಗಳಿವೆ. ತೊಗಟೆಯ ರಸ, ಜೇನುತುಪ್ಪ ಮತ್ತು ಅರಿಶಿನದ ಪುಡಿಗಳನ್ನು ಮಿಶ್ರ ಮಾಡಿ ಸಕ್ಕರೆ ಕಾಯಿಲೆ ಪೀಡಿತರಿಗೆ ಸೇವಿಸಲು ಕೊಡುವುದುಂಟು. ತೊಗಟೆಯಲ್ಲಿ ಸ್ತಂಭಕ ಗುಣಗಳಿವೆ. ಆದ್ದರಿಂದ ಆಮಶಂಕೆಯಲ್ಲಿ ಅದನ್ನು ಬಳಸುವುದು ಲಾಭದಾಯಕ. ಈ ಸಸ್ಯದ ರಸಕ್ಕೆ ಆಲೂಗಡ್ಡೆ ಬೆಳೆಗೆ ಮಾರಕವಿರುವ ನಂಜು ರೋಗಾಣುವನ್ನು ತಡೆಯುವ ಗುಣವಿರುವುದಾಗಿ ತಿಳಿದುಬಂದಿದೆ.

ಉಗಮ ಮತ್ತು ಹಂಚಿಕೆ

ನೆಲ್ಲಿಯ ತವರೂರು ಆಗ್ನೇಯ ಏಷ್ಯಾದ ಉಷ್ಣ ಪ್ರದೇಶಗಳು; ಅದರಲ್ಲೂ ಮುಖ್ಯವಾಗಿ ಭಾರತ. ಅದೇ ರೀತಿ ಶ್ರೀಲಂಕಾ, ಮಲೇಶ್ಯಾ ಮತ್ತು ಚೈನಾ ದೇಶಗಳೂ ಸಹ ಇದರ ತವರೂರು ಆಗಿರಬಹುದು. ನಮ್ಮ ದೇಶದ ಕಾಡುಗಳಲ್ಲಿ ಹಾಗೂ ಬೆಟ್ಟಗುಡ್ಡಗಳಲ್ಲಿ ಇದರ ಮರಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಹಿಮಾಲಯದಿಂದ ಹಿಡಿದು ಶ್ರೀಲಂಕಾದವರೆಗೆ ಹಾಗೂ ಮೊಲುಕ್ಕಾದಿಂದ ಹಿಡಿದು ಹಕ್ಶಿಣ ಚೈನಾದವರೆಗೆ ಇದು ಕಾಡುಮರವಾಗಿ ಶೈತ್ಯಹವೆಯನ್ನು ಹೆಚ್ಚು ಸಮರ್ಥವಾಗಿ ಎದುರಿಸಬಲ್ಲವಾದರೂ ಅವುಗಳಲ್ಲಿನ ಫಸಲು ಕಡಿಮೆ ಇದ್ದು ಹಣ್ಣು ಗಾತ್ರದಲ್ಲಿ ಬಲು ಸಣ್ಣವಿರುತ್ತವೆ ಮತ್ತು ಅವುಗಳ ಗುಣಮಟ್ಟ ಸಹ ಅಷ್ಟಕ್ಕಷ್ಟೆ.

ಇದರ ಬೇಸಾಯ ದೇಶದ ಹಲವಾರು ರಾಜ್ಯಗಳಲ್ಲಿ ಇದೆಯಾದರೂ ಉತ್ತರಪ್ರದೇಶದಲ್ಲಿ ಬಲುವ್ಯಾಪಕ. ಈ ಹಣ್ಣಿನ ಬೆಳೆಯನ್ನು ಬೆಳೆಯುತ್ತಿರುವ ಕ್ಷೇತ್ರ ಮತ್ತು ಉತ್ಪಾದನೆಗಳ ಬಗ್ಗೆ ನಿಖರವಾದ ಅಂಕಿಅಂಶಗಳು ಸಭ್ಯವಿಲ್ಲ ಆದಾಗ್ಯೂ ಉತ್ತರ ಪ್ರದೇಶದ ಅಜಾಮಗಢ, ಪ್ರತಾಪಗಢ, ವಾರನಾಸಿ, ಬರೇಲಿ ಮುಂತಾದ ಜಿಲ್ಲೆಗಳಲ್ಲಿ ಇದು ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚಾಗುತ್ತಿದೆ. ಈಗ ದೊಡ್ಡಗಾತ್ರದ ಹಣ್ಣುಗಳಿಂದ ಕೂಡಿದ ಹಾಗೂ ಉತ್ತಮ ಗುಣಮಟ್ಟದ ಮತ್ತು ಅಧಿಕ ಫಸಲು ಬಿಡುವ ತಳಿಗಳನ್ನು ನಿರ್ಲಿಂಗ ವಿಧಾನಗಳಲ್ಲಿ ಅಭಿವೃದ್ಧಿ ಪಡಿಸಿ ಭೇಸಾಯಕ್ಕೆ ಒದಗಿಸಲಾಗುತ್ತಿದೆ.

ಬೀಜಸಸಿಗಳು ಚೊಚ್ಚಲ ಫಸಲು ಬಿಡಲು ಏಳೆಂಟು ವರ್ಷಗಳಷ್ಟು ದೀರ್ಘ ಅವಧಿ ತೆಗೆದುಕೊಳ್ಳುತ್ತವೆ. ಆದರೆ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಪಡಿಸಿದ ಗಿಡಗಳು ನೆಟ್ಟ ಮೂರು ನಾಲ್ಕು ವರ್ಷಗಳಲ್ಲಿಯೇ ಫಲ ಕಚ್ಚಲು ಪ್ರಾರಂಭಿಸುತ್ತವೆ. ಅಂತಹ ಮರಗಳು ಬಲು ಎತ್ತರಕ್ಕೆ ಅಥವಾ ದೊಡ್ಡಗಾತ್ರಕ್ಕೆ ಬೆಳೆಯುವುದಿಲ್ಲ. ಕಾಡುಗಳಲ್ಲಿನ ಮರಗಳಲ್ಲಿ ಹಣ್ಣು ಸಣ್ಣ ಗೋಲಿಗಾತ್ರವಿದ್ದರೆ ಸುಧಾರಿತ ತಳಿಗಳ ಹಣ್ಣು ದೊಡ್ಡ ನಿಂಬೆಹಣ್ಣಿನ ಗಾತ್ರವಿದ್ದು ಹೆಚ್ಚು ತಿರುಳನ್ನು ಹೊಂದಿರುತ್ತದೆ.