ನೆಲ್ಲಿ ಸಮಶೀತೋಷ್ಣವಲಯದ ಹಣ್ಣಿನ ಬೆಳೆ ಆದಾಗ್ಯೂ ಸಹ ಉಷ್ಣಪ್ರದೇಶದಲ್ಲಿ ಚೆನ್ನಾಗಿ ಬೆಳೆದು ಫಲಿಸುತ್ತದೆ. ಇದು ಪ್ರತಿಕೂಲ ಹವಾಗುಣದ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಬಲ್ಲದು. ಬಿಸಿಗಾಳಿ ಅಥವಾ ಹಿಮ ಅಷ್ಟಾಗಿ ಹಾನಿಮಾಡಲಾರವು. ಆದರೆ ವಯಸ್ಸಾದ ಮರಗಳು ಬಹಳಷ್ಟು ಶೈತ್ಯಹವೆ ಇದ್ದರೆ ತಡೆದುಕೊಳ್ಳಲಾರವು. ಅದೇ ರೀತಿ ಬಿಸಿಗಾಳಿ ಮತ್ತು ಬಹುದೀರ್ಘಕಾಲ ಹಿಮ ಸುರಿಯುವುದು ಇದ್ದಲ್ಲಿ ಈ ಬೆಳೆಗೆ ಹಾನಿಯಾಗುವುದು ಖಂಡಿತ. ಇಂಥಹ ಪರಿಸ್ಥಿತಿಗಳು ಉತ್ತರ ಭಾರತದಲ್ಲಿ ಕಂಡುಬರುತ್ತವೆ. ಇಲ್ಲಿ ಎಳೆಯ ಗಿಡಗಳಿಗೆ ರಕ್ಷಣೆ ಒದಗಿಸುವುದು ಲಾಭದಾಯಕ.

ಹವಾಗುಣ

ಈ ಹಣ್ಣಿನ ಮರಗಳು ಬೇಸಿಗೆಯಲ್ಲಿ ಉಷ್ಣತೆ ೪೦º ರಿಂದ ೪೬º ಸೆಂ. ವರೆಗೆ ಇದ್ದರೂ ಸಹಿಸಬಲ್ಲವು. ಹೂವು ಬಿಡುವ ದಿನಗಳಲ್ಲಿ ಬೆಚ್ಚಗಿನ ಹವಾಗುಣ ಇದ್ದಲ್ಲಿ ಸೂಕ್ತ. ನಿಶ್ಚಿತವಿರುವ ಚಳಿಗಾಲ ಮತ್ತು ಬೇಸಿಗೆಗಳು ಇದ್ದಲ್ಲಿ ಇದು ಬಹುಚೆನ್ನಾಗಿ ಫಲಿಸುತ್ತದೆ. ವಾರ್ಷಿಕಮಳೆ ೩೫೦ ರಿಂದ ೫೦೦ ಮಿ.ಮೀ. ಇದ್ದರೆ ಸಾಕು. ಇದನ್ನು ಸಮುದ್ರ ಮಟ್ಟದಿಂದ ೧೫೦೦ ಮೀ. ಎತ್ತರದ ವರೆಗೆ ಬೆಳೆಯಬಹುದು. ಬೆಟ್ಟಗುಡ್ಡಗಳಲ್ಲಿನ ಕಾಡುಬಗೆಗಳು ಸುಧಾರಿತ ತಳಿಗಳಿಗಿಂತ ಶೈತ್ಯ ಹವಾಗುಣವನ್ನು ಹೆಚ್ಚು ಸಮರ್ಥವಾಗಿ ತಡೆದುಕೊಳ್ಳಬಲ್ಲವು.

ಭೂಗುಣ

ಇದರ ಬೇಸಾಯಕ್ಕೆ ಮರಳು ಹಣ್ಣಿನ ಭೂಮಿ ಸೂಕ್ತವಿರುವುದಿಲ್ಲ. ನೀರು ಬಸಿಯುವ ಆಳವಿರುವ, ಫಲವತ್ತಾದ ಮರಳುಮಿಶ್ರಿತ ಗೋಡು ಮಣ್ಣಿನ ಭೂಮಿಯಾದಲ್ಲಿ ಅತ್ಯತ್ತಮ. ಕಲ್ಲುಗುಂಡುಗಳಿಂದ ಕೂಡಿದ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಸಹ ಚೆನ್ನಾಗಿ ಫಲಿಸುತ್ತದೆ. ಸಾಧಾರಣ ತೇವ ಹಿಡಿದಿಡುವ ಮರಳು ಮಿಶ್ರಿತ ಜೇಡಿಮಣ್ಣೂ ಸಹ ಉತ್ತಮವೇ. ಚೌಳು ಮಣ್ಣಿನ ಭೂಮಿ ಅಥವಾ ಕ್ಷಾರಯುತ ಮಣ್ಣಿನ ಭೂಮಿಗಳಲ್ಲಿ ಸಹ ಬೆಳೆಯಬಹುದು. ಲವಣಗಳಿಂದ ಕೂಡಿದ ಮಣ್ಣಾದರೆ ಅಡ್ಡಿಯಿಲ್ಲ. ಆದರೆ ಅವುಗಳ ಪ್ರಮಾಣ ಬಹಳಷ್ಟು ಇರಬಾರದು. ಒಂದು ವೇಳೆ ಲವಣಾಂಶ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಎಲೆಗಳಲ್ಲಿ ಕ್ಲೋರಿನ್ ಅಂಶ ಕ್ರೋಡೀಕೃತಗೊಳ್ಳುತ್ತದೆ.

ಈ ಹಣ್ಣಿನ ಮರಗಳಿಗೆ ಅನಾವೃಷ್ಟಿಯನ್ನು ತಡೆದುಕೊಳ್ಳುವ ಸಾಮರ್ಥ್ಯವಿದೆ. ಕಡಿಮೆ ಮಳೆಯಾಗುವ ಹಾಗೂ ಪದೇ ಪದೇ ಬರಗಾಲಕ್ಕೆ ತುತ್ತಾಗುವ ಒಣಪ್ರದೇಶಗಳಲ್ಲಿ ಇದನ್ನು ಯಶಸ್ವಿಯಾಗಿ ಬೆಳೆಯಬಹುದು. ಮಣ್ಣು ಆಳವಾಗಿದ್ದರೂ ಅಡ್ಡಿಯಿಲ್ಲ. ಕೃಷಿಗೆ ಯೋಗ್ಯವಲ್ಲದ ಗರಜು, ಬಂಜರು, ಕೊರಕಲು, ಹಳ್ಳಕೊಳ್ಳಗಳ ಪ್ರದೇಶಗಳು, ಕಡಿಮೆ ತೇವಾಂಶ ಹಿಡಿದಿಢುವ ಮಣ್ಣಿನ ಭೂಮಿ ಮುಂತಾದವನ್ನು ಈ ಹಣ್ಣಿನ ಗಿಡಗಳನ್ನು ನೆಡಲು ಬಳಸಿಕೊಳ್ಳಬಹುದು. ಕ್ಷಾರಯುತ ಮಣ್ಣಿಗೆ ಸೂಕ್ತ ಪ್ರಮಾಣದ ಜಿಪ್ಸ್‌ಂ ಸೇರಿಸಿದರೆ ಸಾಕು. ಚಳಿಗಾಲ ಮುಗಿದು ಬೇಸಿಗೆ ಕಾಲಿಡುತ್ತಿದ್ದಂತೆ ಮರಗಳು ಎಲೆಗಲನ್ನುದುರಿಸಿ ವಿಶ್ರಾತಿ ಪಡಿಯುತ್ತವೆ. ಇದು ತೇವಾಂಶದ ಕೊರತೆಯನ್ನು ಎದುರಿಸುವ ನೈಸರ್ಗಿಕ ಉಪಾಯವಿರಬಹುದು. ಈ ಗಿಡಮರಗಳ ಬೇರು ಸಮೂಹ ಮಣ್ಣಿನ ಪದರಗಳಲ್ಲಿ ಆಳಕ್ಕೆ ಇಳಿಯುತ್ತದೆ. ಹಾಗಾಗಿ ತಳಪದರಗಳಲ್ಲಿನ ತೇವಾಂಶವನ್ನು ಹೀರಿ ಬೆಳೆಯಬಲ್ಲದು. ಅಂತರ್ಜಲದ ಮಟ್ಟ ಒಂದೇ ತೆರನಾಗಿದ್ದರೆ ಸೂಕ್ತ. ಹಾಗಲ್ಲದೆ ಅದು ಇದ್ದಕ್ಕಿದಂತೆ ಏರುವುದಾಗಲೀ ಅಥವಾ ಕುಸಿಯುವುದಾಗಲೀ ಇರಕೂಡದು.

ಭೂಮಿಯನ್ನು ಸಿದ್ಧಗೊಳಿಸುವುದು

ಸಸಿಗಳನ್ನು ನೆಡುವ ಮುಂಚೆ ಭೂಮಿಯನ್ನು ಒಂದೆರಡು ಸಲ ಆಳವಾಗಿ ಉಳುಮೆ ಮಾಡಿ ಸಮಮಾಡಬೇಕು. ಒಂದು ವೇಳೆ ಅದು ಇಳಿಜಾರಿನಿಂದ ಕೂಡಿದ್ದಲ್ಲಿ ಅಗತ್ಯ ಅಂತರದಲ್ಲಿ ಸಮಪಾತಳಿ ಬದುಗಳನ್ನು ಇಲ್ಲವೇ ಜಗಲಿ ಕಟ್ಟೆಗಳನ್ನು ಹಾಕಬೇಕು. ಮುಳ್ಳು ಗಿಡಗಳು, ಕುರುಚುಲು ಪೊದೆ, ಕಲ್ಲುಗಳನ್ನು ಕಿತ್ತು ಅಥವಾ ಆರಿಸಿ ತೆಗೆಯಬೇಕು. ಅನಂತರ ೧೦ ಮೀ. ಗೊಂದರಂತೆ ೧ ಘನ ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಮಣ್ಣು ಸಡಿಲವಿದ್ದು ಆಳವಾಗಿದ್ದಲ್ಲಿ ಗುಂಡಿಗಳ ಗಾತ್ರವನ್ನು ೬೦ ಘನ ಸೆಂ.ಮೀ. ಗಳಿಗೆ ಸೀಮಿತಗೊಳಿಸಬಹುದು. ಈ ಕೆಲಸಕ್ಕೆ ಜೂನ್ ತಿಂಗಳ ಮೊದಲ ವಾರ ಹೆಚ್ಚು ಸೂಕ್ತವಿರುತ್ತದೆ.

ಒಂದೆರಡು ವಾರಗಳ ನಂತರ ಗುಂಡಿಗಳಿಗೆ ಸಮಪ್ರಮಾಣದ ಕೊಳೆತ ಕೊಟ್ಟಿಗೆ ಗೊಬ್ವರ ಮತ್ತು ಮೇಲ್ಮಣ್ಣುಗಳನ್ನು ಹರಡಿ ತುಂಬಬೇಕು. ಕೊಟ್ಟಿಗೆ ಗೊಬ್ಬರ ಸಾಕಷ್ಟು ಇಲ್ಲದಿದ್ದರೆ ಹಸಿರೆಲೆಗಳನ್ನು ಸೇರಿಸಬಹುದು. ಮಳೆಯಾದಲ್ಲಿ ಆ ಮಿಶ್ರಣ ಚೆನ್ನಾಗಿ ಕುಸಿದು. ಕುಳಿತುಕೊಳ್ಳುತ್ತದೆ. ನೀರಾವರಿ ಸೌಲಭ್ಯವಿದ್ದಲ್ಲಿ ತೆಳ್ಳಗೆ ನೀರು ಹಾಯಿಸಬಹುದು. ತೋಟ ಎಬ್ಬಿಸುವ ಪ್ರದೇಶ ಎತ್ತರದಲ್ಲಿದ್ಲು ಇಲ್ಲವೇ ಬಯಲು ಪ್ರದೇಶವಿದ್ದಲ್ಲಿ ಬಲವಾದ ಗಾಳಿ ಬೀಸುವಂತಿದ್ದರೆ ಗಿಡಮರಗಳು ಮುರಿದುಬೀಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ತೊಟದ ಸುತ್ತ ಒಂದು ಇಲ್ಲವೇ ಎರಡು ಸಾಲುಗಳಲ್ಲಿ ಸರ್ವೆ, ಸಿಲ್ವರ್ ಓಕ್ ಮುಂತಾದವುಗಳ ಬೀಜ ಸಸಿ ನೆಟ್ಟು ಬೆಳೆಸಬೇಕು. ಈ ಕೆಲಸವನ್ನು ತೋಟ ಎಬ್ಬಿಸುವ ಒಂದೆರಡು ವರ್ಷ ಮೊದಲೇ ಮಾಡಬೇಕು. ಇದನ್ನು ‘ಗಾಳಿ ತಡೆ’ ಎನ್ನುತಾರೆ. ಗಾಳಿ ತಡೆ ಬೇಲಿಯ ಒಳ ಅಂಚಿನಲ್ಲಿದ್ದು ಎತ್ತರಕ್ಕೆ ಬೇಗ ಬೆಳೆದು ದಟ್ಟ ತಡೆಯನ್ನು ಒದಗಿಸಬೇಕು. ಗಾಳಿ ತಡೆ ಎಷ್ಟು ಎತ್ತರವಿರುತ್ತದೆಯೋ ಅದರ ನಾಲ್ಕುಪಟ್ಟು ದೂರದವರೆಗೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ತೋಟ ಬಹಳಷ್ಟು ದೊಡ್ಡದಿದ್ದರೆ, ತಾಕುಗಳನ್ನಾಗಿ ವಿಂಗಡಿಸಿ, ಅವುಗಳ ಸುತ್ತ ಗಾಳಿ ತಡೆ ಮರಗಳನ್ನು ನೆಟ್ಟು ಬೆಳೆಸಬಹುದು. ಗಾಳಿ ತಡೆಯ ಮರಗಳ ಸಾಲು ನೆಲ್ಲಿ ಮರಗಳ ಸಾಲಿನಿಂದ ಸಾಕಷ್ಟು ದೂರವಿರಬೇಕು. ಅನಿವಾರ್ಯವಾದಲ್ಲಿ ಅವೆರಡರ ಮಧ್ಯೆ ೩೦-೪೫ ಸೆಂ.ಮೀ. ಅಗಲ ಮತ್ತು ೧ ಮೀ. ಆಳ ಇರುವಂತೆ ಚರಂಡಿ ತೆಗೆದರೆ ಬೇರುಗಳಿಂದ ಅಷ್ಟೊಂದು ಹಾನಿಯಾಗುವುದಿಲ್ಲ.

ಇಳಿಜಾರು ಪ್ರದೇಶಗಳಲ್ಲಿ ತಗ್ಗು ಕಾಲುವೆಗಳನ್ನು ಮಾಡಿ, ಅವುಗಳಲ್ಲಿ ಗಿಡಗಳನ್ನು ನೆಡುವುದುಂಟು. ಈ ಪದ್ದತಿಯನ್ನು ಅರಣ್ಯ ಇಲಾಖೆಯವರು ಹೆಚ್ಚಾಗಿ ಅನುಸರಿಸುತ್ತಾರೆ.

ಸಸಿಗಳನ್ನು ನೆಡುವುದು

ಸಸಿಗಳನ್ನು ನೆಡಲು ಮುಂಗಾರಿನ ಪ್ರಾರಂಭ ಅಂದರೆ ಜೂನ್-ಜುಲೈ ಸೂಕ್ತವಿರುತ್ತದೆ. ಈ ಸಮಯದಲ್ಲಿ ನೆಟ್ಟಿದ್ದೇ ಆದರೆ ಅವುಗಳಿಗೆ ಮಳೆಗಾಲದ ಸಂಪೂರ್ಣ ಲಾಭ ಸಿಕ್ಕಿ, ಮಳೆಗಾಲ ಮುಗಿಯುವ ಹೊತ್ತಗೆ ಅವು ಚೆನ್ನಾಗಿ ಬೇರುಬಿಟ್ಟು ಸ್ಥಿರಗೊಳ್ಳುತ್ತವೆ. ನೆಡುವ ಸಮಯಕ್ಕೆ ಅವುಗಳ ವಯಸ್ಸು ಒಂದರಿಂದ ಒಂದೂವರೆ ವರ್ಷದಷ್ಟಿದ್ದರೆ ಸಾಕು. ತೀರಾ ಎಳಸಾದ ಅಥವಾ ಬಹಳಷ್ಟು ವಯಸ್ಸಾದ ಗಿಡಗಳನ್ನು ನೆಡಬಾರದು.

ಗಿಡಗಳನ್ನು ಹೆಪ್ಪು ಸಮೇತ ನೆಡುವುದು ಒಳ್ಳೆಯ ಪದ್ಧತಿ. ಸಂಜೆಯ ಇಳಿ ಹೊತ್ತಿನಲ್ಳಿ ಅಥವಾ ಮೋಡಕವಿದ ದಿನ ನೆಟ್ಟಿದ್ದೇ ಆದಲ್ಲಿ ಅವು ಬಾಡುವುದಿಲ್ಲ. ಹೆಪ್ಪನ್ನು ಆವರಿಸಿರುವ ಕುಂಡ ಅಥವಾ ಪ್ಲಾಸ್ಟಿಕ್ ಚೀಲವನ್ನು ಜೋಪಾನವಾಗಿ ಬಿಡಿಸಿ ಪ್ರತಿ ಗುಂಡಿಯ ಮಧ್ಯೆ ಹೆಪ್ಪು ಹಿಡಿಸುವಷ್ಟೇ ತಗ್ಗು ತೆಗೆದು, ಅದರಲ್ಲಿ ಗಿಡವನ್ನು ನೆಟ್ಟಗೆ ನಿಲ್ಲಿಸಿ, ಬುಡದ ಸುತ್ತ ಹಸಿ ಮಣ್ಣನ್ನು ಹರಡಿ, ಅದುಮಿ, ನಂತರ ಭದ್ರವಾಗಿ ತುಳಿಯಬೇಕು. ಕಸಿಗಿಡಗಳಾದಲ್ಲಿ ಕಸಿಗಂಟು ನೆಲಮಟ್ಟದಿಂದ ೧೫-೨೨ ಸೆಂ.ಮೀ. ಎತ್ತರದಲ್ಲಿರುವುದು ಅಗತ್ಯ ನೆಟ್ಟ ನಂತರ ಆಸರೆ ಕೋಲು ಸಿಕ್ಕಿಸಿ ಕಟ್ಟಿದಲ್ಲಿ ಅವು ಗಾಳಿಗೆ ಅಲುಗಾಡುವುದಿಲ್ಲ. ಸ್ವಲ್ಪ ಕೈನೀರು ಹಾಕಿ, ಪಾತಿಯನ್ನು ಸರಿಪಡಿಸಿ, ಅದರ ಅಗಲಕ್ಕೆ ೨೫-೫೦ ಗ್ರಾಂಗಳಷ್ಟು ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೧೦೦ ಗ್ರಾಂ ಬೇವಿನ ಹಿಂಡಿ ಉದುರಿಸಿದರೆ ಗೆದ್ದಲು, ಹೊಣ್ಣೆಹುಳು ಮುಂತಾದವುಗಳ ಬಾಧೆ ಇರುವುದಿಲ್ಲ. ಒಂದು ಹೆಕ್ಟೇರ್ ವಿಸ್ತೇರ್ಣಕ್ಕೆ ೧೦೦ ಗಿಡಗಳು ಬೇಕಾಗುತ್ತದೆ.

ಗೊಬ್ಬರ

ಮಣ್ಣು ಎಷ್ಟೇ ಫಲವತ್ತಾಗಿದ್ದರೂ ಗಿಡಗಳು ಚೆನ್ನಾಗಿ ಬೆಳೆದು, ಬೇಗ ಹಾಗೂ ತೃಪ್ತಿಕರ ಫಸಲು ಬಿಡುವಂತೆ ಮಾಡಲು ಅವುಗಳಿಗೆ ಪ್ರತೀ ವರ್ಷ ಗೊಬ್ಬರಗಳನ್ನು ಕೊಡಬೇಕು. ಗಿಡಗಳ ವಯಸ್ಸು ಹೆಚ್ಚಾದಂತೆಲ್ಲಾ ಗೊಬ್ವರಗಳ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಎಳೆಯವಿರುವಾಗ ಗಿಡಗಳ ಬೇರುಸಮೂಹ ಅಷ್ಟೊಂದು ದೂರಕ್ಕೆ ಹರಡಿರುವುದಿಲ್ಲ. ಆದ್ದರಿಂದ ಅಂತಹ ಗಿಡಗಳಿಗೆ ಗೊಬ್ಬರಗಳನ್ನು ಬುಡದಿಂದ ೩೫-೪೦ ಸೆಂ.ಮೀ. ದೂರದಲ್ಲಿ ಕೊಟ್ಟರೆ ಸಾಕಾಗುತ್ತದೆ. ಅವು ಬೆಳದು ದೊಡ್ಡವಾದಂತೆಲ್ಲಾ ಗೊಬ್ಬರಗಳನ್ನು ದೂರ ದೂರಕ್ಕೆ ಹಾಕಬೇಕು. ಪ್ರಾಯದ ಮರಗಳಲ್ಲಿ ರೆಂಬೆಗಳು ಹರಡಿ ಚಾಚಿರುವಷ್ಟು ದೂರದಲ್ಲಿ ಹಾಕಬೇಕು.

ಗೊಬ್ಬರಗಳನ್ನು ಹಾಕುವ ವಿಧಾನ ಬಹು ಮುಖ್ಯ. ಸೂಚಿಸಿದ ದೂರದಲ್ಲಿ ಉಂಗುರಾಕಾರದ ತಗ್ಗು ಕಾಲುವೆ ಮಾಡಿ, ಅದರಲ್ಲಿ ಹಾಕಿ ಮಣ್ಣು ಮುಚ್ಚುವುದು ಸರಿಯಾದ ವಿಧಾನ. ಈ ತಗ್ಗು ಕಾಲುವೆ ೧೫ ಸೆಂ.ಮೀ ಅಗಲ ಮತ್ತ ಅಷ್ಟೇ ಆಳ ಇದ್ದರೆ ಸಾಕು. ಗೊಬ್ಬರಗಳನ್ನು ಹಾಕುವ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಬಲು ಅಗತ್ಯ. ಗೊಬ್ಬರಗಳನ್ನು ಪಾತಿಯ ಒಳ ಅಂಚಿನಲ್ಲಿ ಮಾಡಿದ ಉಂಗುರಾಕಾರದ ತಗ್ಗಿನಲ್ಲಿ ಹಾಕುವುದು ಸರಿಯಾದ ವಿಧಾನ. ಸಾವಯವ ಗೊಬ್ಬರ ಅಂದರೆ ತಿಪ್ಪೆಗೊಬ್ಬರ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಅಥವಾ ಎಲೆಗೊಬ್ಬರ ಚೆನ್ನಾಗಿ ಕೊಳೆತಿರಬೇಕು. ಹಸಿಸಗಣಿ ಅಥವಾ ಭಾಗಶಃ ಕೊಳೆತಿರುವ ಗೊಬ್ಬರ, ಕೋಳಿಗೊಬ್ಬರ ಮುಂತಾಗಿ ಹಾಕಬಾರದು. ಹಿಂಡಿಗೊಬ್ಬರ, ಮೂಳೆಗೊಬ್ಬರ ಮುಂತಾದವುಗಳನ್ನೂ ಸಹ ಹಾಕಬಹುದು. ಸಾವಯವ ಗೊಬ್ಬರಗಳ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಕೊಡಬಹುದು. ಗೊಬ್ಬರಗಳನ್ನು ವರ್ಷದಲ್ಲಿ ಎರಡು ಸಾರಿ ಸಮಕಂತುಗಳಲ್ಲಿ ಕೊಡುವುದು ಲಾಭದಾಯಕ. ಮೊದಲನೇ ಕಂತನ್ನು ಬಳೆಗಾಲದ ಪ್ರಾರಂಭದಲ್ಲಿ ಅಥವಾ ಅದಕ್ಕೂ ಮುಂಚೆ ಮತ್ತು ಎರಡನೇ ಕಂತನ್ನು ಮಳೆಗಾಲದ ಕಡೆಯಲ್ಲಿಯೂ ಕೊಡಬೇಕು.

ಗೊಬ್ಬರಗಳ ಪ್ರಮಾಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯಗಳು ಶಿಫಾರಸು ಮಾಡಿರುವ ಗೊಬ್ಬರಗಳ ಪ್ರಮಾಣವನ್ನು ಕೋಷ್ಟಕ ೪ರಲ್ಲಿ ಕೊಟ್ಟಿದೆ.

ಕೋಷ್ಟಕ : ನೆಲ್ಲಿ ಗಿಡಗಳಿಗೆ ಕೊಡಬೇಕಾದ ಗೊಬ್ಬರಗಳ ಪ್ರಮಾಣ (ಕೃ.ವಿ.ವಿ. ಬೆಂಗಳೂರು)

ಗಿಡಗಳ ವಯಸ್ಸು ಕೊಟ್ಟಿಗೆ ಗೊಬ್ಬರ ಸಾರಜನಕ ರಂಜಕ ಪೊಟ್ಯಾಷ್
(ವರ್ಷಗಳಲ್ಲಿ) (ಕಿ.ಗ್ರಾಂ) (ಗ್ರಾಂ) (ಗ್ರಾಂ) (ಗ್ರಾಂ)
೧-೨ ೨೫ ೭೫ ೫೦ ೫೦
೩-೫ ೨೫ ೧೫೦ ೧೦೦ ೧೦೦
೬ ವರ್ಷ ಹಾಗೂ ಅದರ ನಂತರ ೨೫ ೩೦೦ ೨೦೦ ೨೦೦

ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿನ ನರೇಂದ್ರದೇವ್‌ ಕೃಷಿ ಮತ್ತು ತಾಂತ್ರಕ ವಿಶ್ವವಿದ್ಯಾನಿಲಯವು ಶಿಫಾರಸ್ಸು ಮಾಡಿರುವ ಗೊಬ್ಬರಗಳ ಪ್ರಮಾಣವನ್ನು ಕೋಷ್ಟಕ ೫ರಲ್ಲಿ ಕೊಟ್ಟಿದೆ. ಅಲ್ಲಿ ಇವುಗಳ ಒಂದು ಕಂತನ್ನು ಸೆಪ್ಟಂಬರ್ – ಅಕ್ಟೋಬರ್‌ನಲ್ಲಿಯೂ ಮತ್ತು ಇನ್ನೊಂದು ಕಂತನ್ನು ಏಪ್ರಿಲ್ – ಮೇನಲ್ಲಿಯೂ ಕೊಡಲು ಸೂಚಿಸಿದೆ.

ಕೋಷ್ಟಕ : ನೆಲ್ಲಿ ಗಿಡಗಳಿಗೆ ಕೊಡಬೇಕಾದ ಗೊಬ್ಬರಗಳ ಪ್ರಮಾಣ (ಉತ್ತರ ಪ್ರದೇಶ)

ಗಿಡಗಳ ವಯಸ್ಸು
(ವರ್ಷಗಳಲ್ಲಿ)
ಕೊಟ್ಟಿಗೆ ಗೊಬ್ಬರ
(ಕಿ.ಗ್ರಾಂ)
ಸಾರಜನಕ
(ಗ್ರಾಂ)
ರಂಜಕ
(ಗ್ರಾಂ)
ಪೊಟ್ಯಾಷ್
(ಗ್ರಾಂ)
೧೦ ೧೨೫ ೫೦ ೫೦
೨೦ ೨೫೦ ೧೦೦ ೧೦೦
೩೦ ೩೭೫ ೧೫೦ ೧೫೦
೪೦ ೫೦೦ ೨೦೦ ೨೦೦
೫೦ ೬೨೫ ೨೫೦ ೨೫೦
೬೦ ೭೫೦ ೩೦೦ ೩೦೦
೭೦ ೮೭೫ ೩೫೦ ೩೫೦
೮ ಮತ್ತು ಅದರ ನಂತರ ೮೦ ೧೦೦೦ ೪೦೦ ೪೦೦

ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗದಿದ್ದಾಗ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕೊರತೆಯ ಲಕ್ಷಣಗಳು ಬೇರ ಬೇರೆ ಪೋಷಕಾಂಶಗಳಿಗೆ ಬೇರ ಬೇರೆಯಾಗಿರುತ್ತವೆ. ಅವುಗಳನ್ನು ತಿಳಿಯಲು ಎಲೆಗಳು ರಾಸಾಯನಿಕ ವಿಶ್ಲೇಷಣೆ ನೆರವಾಗುತ್ತದೆ. ಕೊರತೆಯ ಲಕ್ಷಣಗಳು ಬೇಗ ಗೋಚರಿಸುವುದು ಎಲೆಗಳಲ್ಲಿ ತಜ್ಙರ ನೆರವನ್ನು ಪಡೆದು ಅವುಗಳನ್ನು ಕೂಡಲೇ ಸರಿಪಡಿಸಬೇಕು. ಕೆಲವೊಂದು ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಕೋಷ್ಟಕ ೬ರಲ್ಲಿ ಕೊಟ್ಟಿದೆ.

ಕೋಷ್ಟಕ : ನೆಲ್ಲಿ ಗಿಡಗಳಲ್ಲಿನ ಪೋಷಕಾಂಶಗಳ ಕೊರತೆಯ ಲಕ್ಷಣಗಳು

ಶೇ. ಪೋಷಕಾಂಶ

ಯಾವ ಹಂತದ ಎಲೆಗಳಲ್ಲಿ

ಕೊರತೆಯ ಲಕ್ಷಣಗಳು

ಸಾರಜನಕ ೦.೮೫ ಬಲಿತ ಎಲೆಗಳು ಹಳದಿ ಬಣ್ಣಕ್ಕೆ ಮಾರ್ಪಡುತ್ತವೆ.
ರಂಜಕ ೦.೦೬೫ ಬಲಿತ ಎಲೆಗಳು ತುದಿ ಮತ್ತು ಅಂಚುಗಳಲ್ಲಿ ಹಳದಿ ಬಣ್ಣ
ಪೊಟ್ಯಾಷ್ ೦.೨೦೮ ಬಲಿತ ಎಲೆಗಳು ಹಳದಿಯಾಗುವುದರ ಜೊತೆಗೆ ಅವುಗಳ ತುದಿ ಮತ್ತು ಅಂಚು ಸುಟ್ಟಂತೆ ಕಾಣುತ್ತವೆ.
ಸುಣ್ಣ (ಕ್ಯಾಲ್ಸಿಯಂ) ೦.೪೩೫ ಎಳೆಯ ಎಲೆಗಳು  ತುದಿ ಭಾಗಗಳು ಹಳದಿಯಾಗಿ ಸುಟ್ಟಂತೆ ಕಾಣುತ್ತವೆ ಮತ್ತು ಮಗುಚಿಕೊಳ್ಳುತ್ತವೆ.
ಮೆಗ್ನೀಷಿಯಂ ೦.೨೦೫ ಎಳೆಯ ಎಲೆಗಳು  ಎಲೆಗಳ ಅರ್ಧಭಾಗ ಹಳದಿ ಬಣ್ಣದ್ದಿರುತ್ತದೆ.

ಪೋಷಕಾಂಶಗಳ ರಾಸಾಯನಿಕ ವಿಶ್ಲೇಷಣೆಗೆ ೩ ತಿಂಗಳ ವಯಸ್ಸಿನ ಎಲೆಗಳನ್ನು ಚಿಗುರು ರೆಂಬೆಗಳ ಮಧ್ಯಭಾಗದಿಂದ ಆರಿಸಿಕೊಳ್ಳಬೇಕು. ಈ ಕೆಲಸಕ್ಕೆ ಜುಲೈ ತಿಂಗಳು ಹೆಚ್ಚು ಸೂಕ್ತವೆನ್ನಲಾಗಿದೆ. ಕೆಲವೊಮ್ಮೆ ಗೋರಾನ್‌ನಂತಹ ಸೂಕ್ಷ್ಮಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುವುದುಂಟು. ಅಂತಹ ಸಂದರ್ಭಗಳಲ್ಲಿ ಶೇ. ೦.೬ ಬೋರಾಕ್ಸ ಅನ್ನು ನೀರಿನಲ್ಲಿ ಕರಗಿಸಿ ೧೫ ದಿನಗಳಿಗೊಮ್ಮೆ ಮೂರು ಸಾರಿ ಸಿಂಪಡಿಸಿದರೆ ಸಾಕು. ಈ ಕೆಲಸವನ್ನು ಸೆಪ್ಟಂಬರ್ ಮೊದಲವಾರದಿಂದ ಪ್ರಾರಂಭಿಸಬಹುದು. ಹೀಗೆ ಮಾಡುವುದರಿಂದ ಹಣ್ಣುಗಳ ನೆಕ್ರೋಸಿಸ್ ದೂರಗೊಳ್ಳುತ್ತದೆ. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದಾಗ ಸೂಕ್ತ ಪ್ರಮಾಣದ ಮಲ್ಟಿಪ್ಲೆಕ್ಸ್ ಅಥ್ವವಾ ಟ್ರೇಸೆಲ್ ಅನ್ನು ಒದಗಿಸಿ ಸರಿಪಡಿಸಬಹುದು. ಅವುಗಳನ್ನು ಬಳಸುವಲ್ಲಿ ತಜ್ಞರ ನೆರವನ್ನು ಪಡೆದುಕೊಳ್ಳುವುದು ಒಳ್ಳೆಯದು.

ನೀರಾವರಿ

ಈ ಹಣ್ಣಿನ ಮರಗಳಿಗೆ ಕ್ರಮಬದ್ಧವಾಗಿ ನೀರು ಕೊಡುವ ರೂಢಿ ಇಲ್ಲ. ಸಹಜವಾಗಿ ಇದು ಅನಾವೃಷ್ಟಿಯನ್ನು ತಡಿದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾಗಾಗಿಯೇ ಇದರ ಮರಗಳು ಬೆಟ್ಟಗುಡ್ಡಗಳಲ್ಲಿ ಮಳೆ ಆಸರೆಯಲ್ಲಿಯೇ ಬೆಳೆದು ಸಾಕಷ್ಟು ಫಸಲನ್ನು ಕೊಡುತ್ತವೆ. ಮಳೆಗಾಲದಲ್ಲಿ ನೀರಿನ ಅಗತ್ಯತೆ ಅಷ್ಟೊಂದು ಇರುವುದಿಲ್ಲ. ಆದರೆ ಬಹು ದೀರ್ಘಕಾಲ ಒಣಹವೆ ಇದ್ದಾಗ ಹಾಗೂ ಬೇಸಿಗೆಯಲ್ಲಿ ಸ್ವಲ್ಪ ನೀರನ್ನು ಕೊಡುವುದು ಲಾಭದಾಯಕ. ಎಳೆಯ ಗಿಡಗಳಿಗೆ ಬೇಸಿಗೆಯಲ್ಲಿ ೧೫ ದಿನಗಳಿಗೊಮ್ಮೆ ನೀರು ಒದಗಿಸಿದ್ದೇ ಆದಲ್ಲಿ ಅವು ಚೆನ್ನಾಗಿ ಬೆಳೆಯಬಲ್ಲವು. ಫಸಲು ಬಿಡುತ್ತಿರುವ ಮರಗಳಿಗೆ ಹೂವು ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಹಾಗೂ ಏಪ್ರಲ್‌ನಿಂದ ಜೂನ್‌ವರೆಗೆ ವಾರಕ್ಕೊಮ್ಮೆ ಕೊಟ್ಟಲ್ಲಿ ಹೀಚು ಉದುರುವುದಿಲ್ಲ ಮತ್ತು ಕಾಯಿಗಳ ಗಾತ್ರವೇ ಅಲ್ಲದೆ ಅವುಗಳ ಗುಣಮಟ್ಟ ಸಹ ಸುಧಾರಿಸುತ್ತದೆ. ಹಾಯಿಸಿದ ನೀರು ಕಾಣದ ತೊಗಟೆಗೆ ತಾಕದಂತೆ ಬುಡದಸುತ್ತ ಸ್ವಲ್ಪ ದಿಬ್ಬ ಏರಿಸಬೇಕು. ನೀರನ್ನು ಗೊಬ್ಬರಗಳನ್ನು ಹಾಕಲು ಮಾಡಿದ ಉಂಗುರದ ತಗ್ಗು ಕಾಲುವೆಯಲ್ಲಿ ಹಾಯಿಸುವುದು ಒಳ್ಳೆಯ ಕ್ರಮ. ಬಿದ್ದಂತಹ ಮಳೆಯ ನೀರು ಹೊರಗೋಗದಂತೆ ತಾಕುಗಳಲ್ಲಿಯೇ ತೆಡೆಯಲ್ಪಟ್ಟು ಮಣ್ಣಿನಲ್ಲಿ ಹಿಂಗುವಂತಾಗಬೇಕು. ಅದಕ್ಕಾಗಿ ಪಾತಿಗಳನ್ನು ಹಿಗ್ಗಿಸುವುದು, ಮಣ್ಣನ್ನು ಸಡಲಿಸುವುದು, ಚೌಕಾಕಾರದಲ್ಲಿ ಸುತ್ತ ಎತ್ತರದ ಬದುಗಳನ್ನು ಹಾಕಿ ಅವುಗಳ ಮೇಲೆ ಹುಲ್ಲನ್ನು ಬೆಳೆಸುವುದು, ತಾಕುಗಳ ಮೂಲೆಗಳಲ್ಲಿ ೧ ಘನ ಅಡಿ ಗಾತ್ರದ ಗುಂಡಿಗಳನ್ನು ತೆಗೆದು ಮಳೆಯ ನೀರು ಅವುಗಳಲ್ಲಿ ಸಂಗ್ರಹಗೊಳ್ಳುವಂತೆ ಮಾಡುವುದು ಮುಂತಾಗಿ ಅನುಸರಿಸುವುದರ ಜೊತೆಗೆ ಮಡಕೆ ನೀರಾವರಿ ಪದ್ಧತಿಯನ್ನು ಸಹ ಅಳವಡಿಸಬಹುದು.

ಮಧ್ಯಂತರ ಬೇಸಾಯ ಮತ್ತು ಕಳೆ ಹತೋಟಿ

ಸಾಲುಗಳ ನಡುವಣ ಹಾಗೂ ಪಾತಿಗಳಲ್ಲಿನ ಮಣ್ಣು ಗಡಸುಗೊಳ್ಳುತ್ತದೆ. ಹಾಗೆ ಬಿಡುವುದರ ಬದಲಿಗೆ ಅದನ್ನು ಆಗಾಗ್ಗೆ ಲಘುವಾಗಿ ಸಡಿಲಿಸುತ್ತಿದ್ದಲ್ಲಿ ತೇವ ಹೆಚ್ಚುಕಾಲ ಉಳಿಯುತ್ತದೆ. ಮತ್ತು ಕಳೆಗಳ ಬಾಧೆ ಇರುವುದಿಲ್ಲ. ಹೀಗೆ ಸಡಿಲಿಸುವುದರಿಂದ ಮಣ್ಣಿನ ಕಣಗಳ ನಡುವೆ ಗಾಳಿ ಹರಿದಾಡಲು ಅನುಕೂಲವಾಗುತ್ತದೆ. ಮಧ್ಯಂತರ ಬೇಸಾಯ ಹೆಚ್ಚು ಆಳವಾಗಿರಬಾರದು. ಹಾಗೇನಾದರೂ ಮಾಡಿದ್ದೇ ಆದಲ್ಲಿ ಬೇರುಗಳು ಹರಿದು ಹಾಳಾಗುವ ಸಾಧ್ಯತೆ ಇರುತ್ತದೆ. ವರ್ಷದಲ್ಲಿ ಎರಡು ಸಾರಿಯಾದರೂ ಮಧ್ಯಂತರ ಬೇಸಾಯ ಮಾಡುವುದು ಅಗತ್ಯ.

ಮಧ್ಯಂತರ ಬೆಳೆಗಳು

ಸಾಮಾನ್ಯವಾಗಿ ನೆಲ್ಲಿಯನ್ನು ಬೆಳೆದಾಗ ಚೊಚ್ಚಲು ಫಸಲು ಬಿಡುವ ಮೂರು – ನಾಲ್ಕು ವರ್ಷಗಳ ಅವಧಿಯೂ ಮತ್ತು ವಾಣಿಜ್ಯ ಫಸಲು ಬಿಡಲು ಏಳೆಂಟು ವರ್ಷಗಳ ಅವಧಿಯೂ ಹಿಡಿಯುತ್ತದೆ. ಅದುವರೆಗೆ ಸಾಲುಗಳ ನಡುವೆ ಬಹಳಷ್ಟು ಜಾಗ ಬಳಕೆಯಾಗದೆ ಕಾಲಿಯಾಗಿ ಉಳಿಯುತ್ತದೆ. ಅದನ್ನು ಹಾಗೆ ಬಿಡುವುದರ ಬದಲಾಗಿ ರಾಗಿ, ಅವರೆ, ತೊಗರಿ, ನೆಲಗಡಲೆ, ತರಕಾರಿಗಳು ಮುಂತಾಗಿ ಬೆಳೆದು ಲಾಭ ಹೊಂದಬಹುದು. ಈ ಹಣ್ಣಿನ ಮರಗಳ ರೆಂಬೆಗಳು ಅಷ್ಟೊಂದು ನೆರಳನ್ನುಂಟುಮಾಡುವುದಿಲ್ಲ. ಈ ಬೆಳೆಗಳನ್ನು ಮಳೆಗಾಲದಲ್ಲಿ ಬೆಳೆದು ಒಂದಿಷ್ಟು ಆದಾಯ ಮಾಡಿಕೊಳ್ಳಬಹುದು. ನೀರಾವರಿ ಸೌಲಭ್ಯವಿದ್ದರೆ ವರ್ಷದ  ಇತರ ಕಾಲಗಳಲ್ಲಿ ಸಹ ಮಧ್ಯಂತರ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಇದರಿಂದ ಜಮೀನು ಸಂಪೂರ್ಣ ಬಳಕೆಯಾಗುತ್ತದೆ ಹಾಗೂ ಕೈತುಂಬ ಕೆಲಸವಿರುತ್ತದೆ.

ಕಳೆಗಳನ್ನು ಪ್ರಾರಂಭದಲ್ಲಿಯೇ ಹತೋಟಿ ಮಾಡುವುದು ಒಳ್ಳೆಯದು ಹಾಗಲ್ಲದೆ ಅವು ಬೆಳೆದು ತೇವ, ಪೋಷಕಾಂಶಗಳು, ಬೆಳಕು ಮುಂತಾಗಿ ಮುಖ್ಯ ಬೆಳೆಯೊಂದಿಗೆ ಸ್ಪರ್ಧಿಸುವುದಲ್ಲದೆ ಬಹಳಷ್ಟು ಬೀಜವನ್ನು ಉತ್ತತ್ಪಿಮಾಡುತ್ತವೆ. ಕಡೇ ಪಕ್ಷ ವರ್ಷದಲ್ಲಿ ಎರಡು ಸಾರಿಯಾದರೂ ಅಂತರ ಬೇಸಾಯ ಮಾಡಿದಲ್ಲಿ ಮಧ್ಯಂತರ ಬೆಳೆಗಳು ಚೆನ್ನಾಗಿ ಫಲಿಸಬಲ್ಲವು.

ಮಿಶ್ರ ಬೆಳೆಗಳು

ನೆಲ್ಲಿ ಗಿಡಗಳಿಗೆ ೧೦ ಮೀ. ಅಂತರ ಕೊಟ್ಟಾಗ ಮೊದಲು ಏಳೆಂಟು ವರ್ಷಗಳವರಗೆ ಕಡಿಮೆ ಅವಧಿಯ ಹಣ್ಣಿನ ಬೆಳೆಗಳಾದ ಸೀಬೆ, ಸೀತಾಫಲ, ಪಪಾಯ, ಅಂಜೂರ, ದಾಳಿಂಬೆ, ಫಾಲ್ಸ ಮುಂತಾಗಿ ನಾಲ್ಕು ಗಿಡ ಮಧ್ಯೆ ಒಂದರಂತೆ ನೆಟ್ಟು ಬೆಳಸಬಹುದು. ನೀರಾವರಿ ಇದ್ದಲ್ಲಿ ಬಾಳೆಯನ್ನೂ ಸಹ ಬೆಳೆಯಬಹುದು. ತರಕಾರಿಗಳಲ್ಲಿ ನುಗ್ಗೆ, ಕರಿಬೇವುಗಳು ಈ ಉದ್ದೇಶಕ್ಕೆ ಸೂಕ್ತವಿರುತ್ತವೆ. ಮುಖ್ಯ ಬೆಳೆ ವಾಣಿಜ್ಯಫಸಲು ಕೊಡಲು ಪ್ರಾರಂಭಿಸಿದಾಗ ಇತರ ಬೆಳೆಗಳನ್ನು ಕಿತ್ತುಹಾಕಬಹುದು. ಕೆಲವೊಮ್ಮೆ ನೆಲ್ಲಿಯನ್ನು ಮಾವು, ಸಪೋಟ ಮುಂತಾದವುಗಳ ಸಾಲುಗಳಲ್ಲಿ ಮಿಶ್ರಬೆಳೆಯಾಗಿ ಬೆಳೆಯುವುದುಂಟು. ಹೀಗೆ ಮಿಶ್ರಬೆಳೆಗಳನ್ನು ಬೆಳೆದಾಗ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದನ್ನು ಮರೆಯಬಾರದು.

ಹಸುರುಗೊಬ್ಬರದ ಬೆಳಿಗಳು

ಮಣ್ಣು ಸಾರವತ್ತಾಗಿಲ್ಲದಿದ್ದಾಗ ಅಥವಾ ಅಗತ್ಯ ಗೊಬ್ಬರಗಳನ್ನು ಕೊಡಲು ಆಗದಿದ್ದಾಗ ಅದರ ಫಸವತ್ತತೆ ಸುಧಾರಿಸುವಂತೆ ಮಾಡಲು ಹಸುರು ಹೊಬ್ಬರದ ಬೆಳೆಗಳನ್ನು ಬಿತ್ತಿ ಮಣ್ಣಿಗೆ ಸೇರಿಸಬೇಕು. ಈ ಉದ್ದೇಶಕ್ಕೆ ಅಪ್ಸಣಬು, ಡೈಯಂಚ, ಹೆಸರು, ಉದ್ದು, ಹುರುಳಿ, ಅವರೆ, ಅಲಸಂದಿ ಮುಂತಾದ ದ್ವಿದಳಧಾನ್ಯ ಬೆಳೆಗಳು ಬಹುವಾಗಿ ಒಪ್ಪುತ್ತವೆ. ಇವುಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಬಿತ್ತಿ, ಅವು ಹೂವು ಬಿಡುವ ಮುಂಚೆ ಕಿತ್ತು ಮಣ್ಣಿಗೆ ಸೇರಿಸಿದರೆ ಸಾಕು. ಭೂಮಿ ಸಮತಟ್ಟಾಗಿರಲಿ ಅಥವಾ ಇಳಿಜಾರಿನಿಂದ ಕೂಡಿರಲಿ ಈ ಬೆಳೆಗಳು ದಟ್ಟ ಹೊದಿಕೆಯನ್ನುಂಟುಮಾಡಿ, ಬಿದ್ದ ಮಳೆಯ ನೀರನ್ನು ಅಲ್ಲಿಯೇ ತಡೆದು ಮಣ್ಣಿನಲ್ಲಿ ಇಂಗುವಣತೆ ಮಾಡುತ್ತವೆ. ಅದರಿಂದ ಮಣ್ಣು ಕೊಚ್ಚಿ ಹೋಗುವುದಿಲ್ಲ. ಅವುಗಳಲ್ಲಿನ ಬೇರು ಗಂಟುಗಳು ಗಾಳಿಯಲ್ಲಿನ ಸಾರಜನಕವನ್ನು ಹೀರಿ ಮಣ್ಣಿಗೆ ಸೇರಿಸುತ್ತವೆ. ಅವುಗಳ ಬಳ್ಳಿ, ರೆಂಬೆ, ಸೊಪ್ಪು ಮುಂತಾಗಿ ಉತ್ತಮ ಹೊದಿಕೆಯಾಗವಲ್ಲವು. ಅದರಿಂದ ಕಳೆಗಳು ಹತೋಟಿಯಾಗುತ್ತವೆ ಮತ್ತು ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಸುಧಾರಿಸುತ್ತವೆ. ಗೊಬ್ಬರಗಳಿಗೆ ಮಾಡಬೇಕಾದ ಖರ್ಚು ಉಳಿತಾಯವಾಗುತ್ತದೆ. ಗಿಡಗಳ ಪಾತಿಗಳಲ್ಲೂ ಸಹ ಇವುಗಳನ್ನು ಬಿತ್ತಬೇಕು. ಈ ಬೆಳೆಗಳನ್ನು ಇಳುಕಲಿಗೆ ಅಡ್ಡಲಾಗಿ ಬಿತ್ತುವುದು ಅಗತ್ಯ; ಒತ್ತಾಗಿ ಬಿತ್ತಬೇಕು. ಬಿತ್ತುವ ಮುಂಚೆ ಇವುಗಳ ಕಾಳನ್ನು ರೈಜೋಬಿಯಂ, ಅಜಟೋಬ್ಯಾಕ್ಟ್‌ರ‍್ ಮುಂತಾದ ಅಣುಜೀವಿ ಲೇಪನ ಮಾಡಿದರೆ ಹೆಚ್ಚಿನ ಲಾಭ ಸಾಧ್ಯ.

ಹೊದಿಕೆ ಹರಡುವುದು

ಗಿಡಗಳ ಬುಡದ ಪಾತಿಗಳಲ್ಲಿ ಅಗಲಕ್ಕೆ ಮತ್ತು ಸಾಲುಗಳ ನಡುವೆ ಕೃಷಿ ತ್ಯಾಜ್ಯ ವಸ್ತುಗಳಾದ ಒಣಹುಲ್ಲು, ತರಗೆಲೆ, ಕಬ್ಬಿನ ಸೋಗೆ, ಕೊಳೆಗಳು, ಹೊಟ್ಟುಸಿಪ್ಪೆ, ಕಸಕಡ್ಡಿ, ತೆಂಗಿನ ನಾರಿನಪುಡಿ, ಕಣದಲ್ಲಿನ ಹೊಟ್ಟು ಮುಂತಾದವುಗಳನ್ನು ಮಂದವಾಗಿ ಹರಡುವುದು. ಇವು ದಿನಕಳೆದಂತೆ ಕೊಳೆತು ಗೊಬ್ಬರವಾಗುತ್ತವೆ. ಹೀಗೆ ಹರಡುವುದರಿಂದ ತೇವ ಹೆಚ್ಚುಕಾಲ ಮಣ್ಣಿನಲ್ಲಿ ಉಳಿಯುತ್ತದೆ; ಮಣ್ಣು ಕೊಚ್ಚುವುದಿಲ್ಲ ಹಾಗೂ ಕಳೆಗಳ ಬಾಧೆ ಇರುವುದಿಲ್ಲ. ಲವಣಪೀಡಿತ ಮಣ್ಣುಗಳಿಗೆ ಭತ್ತದ ಒಣಹುಲ್ಲನ್ನು ಹೊದಿಕೆಯಾಗಿ ಕೊಡುವುದು ಹೆಚ್ಚು ಉಪಯುಕ್ತವೆನ್ನಲಾಗಿದೆ. ಇವೆಲ್ಲವೂ ಸಾವಯವ ಹೊದಿಕೆ ವಸ್ತುಗಳು. ಈ ಉದ್ದೇಶಕ್ಕೆ ಕಪ್ಪು ಪ್ಲಾಸ್ಟಿಕ್‌ ಹಾಳೆಗಳನ್ನು ನೆಲದ ಮೇಲೆ ಹಾಗೂ ಪಾತಿಗಳ ಅಗಲಕ್ಕೆ ಹರಡಬಹುದು ಆದರೆ ಅದಕ್ಕೆ ತಗಲುವ ಖರ್ಚು ಜಾಸ್ತಿ ಇರುತ್ತದೆ.

ಆಕಾರ ಮತ್ತು ಸವರುವಿಕೆ

ಬೆಟ್ಟದನೆಲ್ಲಿ ಸಡಿಲವಾಗಿ ನೆಲದತ್ತ ಇಳಿಬಿದ್ದಿರುವ ಹಾಗೂ ಪೆಡಸು ರೆಂಬೆಗಳಿಂದ ಕೂಡಿದ ಸಸ್ಯ. ಹಾಗಯೇ ಬೆಳೆಯಲು ಬಿಟ್ಟಲ್ಲಿ ಪೊದೆಯಂತಾಗುತ್ತದೆ. ಕವಲು ರೆಂಬೆಗಳು ನೆಲಮಟ್ಟಕ್ಕೆ ತೀರಾ ಹತ್ತಿರದಲ್ಲಿ ಮೂಡಿ ಬೆಳೆದಿರುತ್ತವೆ. ನೆಲದಮಟ್ಟದಿಂದ ಕನಿಷ್ಟಪಕ್ಷ ೧ಮೀ. ಎತ್ತರದವರೆಗಾದರೂ ಪಕ್ಕ ರೆಂಬೆಗಳಿಲ್ಲದೆ ಕಾಂಡ ನಯವಾಗಿ ನೆಟ್ಟಗಿರಬೇಕು. ಆ ಎತ್ತರದವರೆಗೆ ಮೂಡುವ ಪಕ್ಕ ರೆಂಬೆಗಳನ್ನು ಸವರಿ ತೆಗೆಯಬೇಕು. ಅದರ ನಂತರ ಸುಳಿ ರೆಂಬೆಗಳನ್ನು ಚಿವುಟಿ ನಾಲ್ಕೈದು ರೆಂಬೆಗಳು ಮೂಡಿ, ಸುತ್ತ ಹರಡಿ ಬೆಳೆಯುವಂತೆ ಮಾಡಿದಲ್ಲಿ ಅದು ಸಮತೋಲನವಿರುವ ಹಾಗೂ ಬಲಿಷ್ಟವಿರುವ ಚೌಕಟ್ಟು ಆಗುತ್ತದೆ. ರೆಂಬೆಗಳ ಮತ್ತು ಕಾಂಡದ ನಡುವಣ ಮೂಲೆ ಅಗಲವಾಗಿದ್ದರೆ ಅವು ಸೀಳುವುದು ಕಡಿಮೆ, ಗಿಡಗಳ ನೆತ್ತಿ ಸಮತೋಲನವಿದ್ದು ಬಿಚ್ಚಿ ಹರಡಿದ ಛತ್ರಿಯಂತೆ ಕಾಣಬೇಕು. ತೀರಾ ಒತ್ತಾಗಿರುವ ಹಾಗೂ ಸಣಕಲಾಗಿರುವ ರೆಂಬೆಗಳನ್ನು ಸವರಿ ತೆಳುಗೊಳಿಸಿ ಎಲ್ಲಾ ರೆಂಬೆಗಳಿಗೆ ಬಿಸಿಲು, ಬೆಳಕುಗಳು ಯಥೇಚ್ಛವಾಗಿ ಲಭಿಸುವಂತೆ ಮಾಡಬೇಕು ಕಸಿಗಿಡಗಳಲ್ಲಿ ಕಸಿಗಂಟಿನ ಕೆಳಗೆ ಬೇರುಸಸಿಯಲ್ಲಿ ಮೂಡುವ ಚಿಗುರು, ಬೇರು ಚಿಗುರು, ನೀರ್ಚಿಗುರು, ಬಹಳಷ್ಟು ಕೀಟ ಮತ್ತು ಕೀಟ ಮತ್ತು ರೋಗಪೀಡಿತ ರೆಂಬೆಗಳು, ವಕ್ರವಕ್ರವಾಗಿ ಬೆಳೆದ ರೆಂಬೆಗಳು ಮುಂತಾದವನ್ನು ಸವರಿ ತೆಗೆಯಬೇಕು. ಸವರುವ ಕೆಲಸವನ್ನು ಆಗಿಂದಾಗ್ಗೆ ಮಾಡುತ್ತಲೇ ಇರಬೇಕು. ಮುರಿದು ಹಾಳಾದ ಇಲ್ಲವೇ ಸೀಳಿ ಕಿತ್ತುಬಂದಂತಹ ರೆಂಬೆಗಳನ್ನೂ ಸಹ ಸವರಿ ತೆಗೆಯಬೇಕು. ಸವರುಗಾಯಗಳಿಗೆ ಯಾವುದಾದರೂ ತಾಮ್ರಯುಕ್ತ ಶಿಲೀಂಧ್ರನಾಶಕವನ್ನು ನೀರಿನಲ್ಲಿ ಬೆರೆಸಿ ಬಳಿದಲ್ಲಿ ರೋಗಾಣುಗಳ ಬಾಧೆ ಇರುವುದಿಲ್ಲ. ಫಸಲು ಬಿಡುತ್ತಿರುವ ಮರಗಳಲ್ಲಿ ಸವರುವ  ಕೆಲಸವನ್ನೇನಿದ್ದರೂ ಹಣ್ಣನ್ನು ಕೊಯ್ಲು ಮಾಡಿದನಂತರ ಮಾಡಬೇಕಷ್ಟೆ. ಇದನ್ನು ಪ್ರತಿ ವರ್ಷ ಮಾಡಬೇಕಾಗುತ್ತದೆ. ಕೆಲವೊಮ್ಮೆ ಫಸಲಿನ ಭಾರಕ್ಕಾಗಿ ರೆಂಬೆಗಳು ನೆಲದತ್ತ ಇಳಿಬೀಳುವುದುಂಟು. ಅಂತಹ ರೆಂಬೆಗಳನ್ನು ಮೇಲಕ್ಕೆ ಎತ್ತಿ ಕಟ್ಟಬೇಕು ಇಲ್ಲವೇ ಗೂಟ ನಿಲ್ಲಿಸಿ, ಕಟ್ಟಬೇಕು. ಒಂದು ವೇಳೆ ದೊಡ್ಡ ರೆಂಬೆಗಳೇನಾದರೂ ಮುರಿದಿದ್ದರೆ, ಅವುಗಳನ್ನು ಗರಗಸದ ಸಹಾಯದಿಂದ ಸಮನಾಗೆ ಕತ್ತರಿಸಬೇಕು. ಯಾವುದೇ ಮರದಲ್ಲಿನ ತೊಗಟೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಮರಗಳ ಕಾಂಡ ನೆಟ್ಟಗಿದ್ದು, ನಯವಾಗಿದ್ದರೆ. ಅವುಗಳ ಬುಡದ ಪಾತಿಗಳಲ್ಲಿ ಕೆಲಸ ಮಾಡಲು ಅನುಕೂಲ ಹಾಗೂ ನೋಡಲು ಚಂದ.

ಪರಾಗಸ್ಪರ್ಶ, ಹೂವುಹೀಚು ಉದುರುವುದು ಮತ್ತು ಕಾಯಿಕಚ್ಚಿ ವೃದ್ಧಿ ಹೊಂದುವುದು

ಈ ಹಣ್ಣಿನ ಮರಗಳಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಒಂದೇ ರೆಂಬೆಯಲ್ಲಿ ವ್ಯವಸ್ಥಿತಗೊಂಡಿರುತ್ತವೆ. ಹೂಮೊಗ್ಗು ವಿಭಜನೆಗೊಂಡು ಅಂಕುರಿಸುವ ಅವಧಿಯು ತಳಿ ಹಾಗೂ ಆಯಾ ಪ್ರದೇಶದ ಹವಾ ಮತ್ತು ಭೂಗುಣಗಳನ್ನನುಸರಿಸಿ ಸ್ವಲ್ಪಮಟ್ಟಗೆ ವ್ಯತ್ಯಾಸಗೊಳ್ಳುತ್ತದೆ. ಹೆಣ್ಣು ಮತ್ತು ಗಂಡು ಹೂಗಳ ಸಂಖ್ಯೆ ತಳಿ ಮತ್ತು ಋತುಮಾನವನ್ನನುಸರಿಸಿ ವ್ಯತ್ಯಾಸಗೊಳ್ಳುತ್ತದೆ.

ದಕ್ಷಿಣ ದಿಕ್ಕಿನತ್ತ ಇರುವ ಕವಲು ರೆಂಬೆಗಳಲ್ಲಿ ಅಧಿಕ ಸಂಖ್ಯೆಯ ಹೂವು ಮತ್ತು ಪಶ್ಚಿಮ ದಿಕ್ಕಿನತ್ತ ಇರುವ ಕವಲು ರೆಂಬೆಗಳಲ್ಲಿ ಕಡಿಮೆ ಸಂಖ್ಯೆಯ ಹೂವು ಇದ್ದುದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ. ಹೆಣ್ಣು ಹೂಗಳಲ್ಲಿ ಕೇವಲ ಪೆರಿಯಾಂಥ್‌ ಅಥವಾ ಪುಷ್ಪಪತ್ರಗಳ ಜೊತೆಗೆ ಅಂಡಾಶಯ ಮತ್ತು ಶಲಾಕೆಗಳಿರುತ್ತವೆ. ಹೆಣ್ಣು ಹೂವು ಹಂತಹಂತವಾಗಿ ೭೨ ತಾಸುಗಳವರೆಗೆ ಅರಳುತ್ತಿರುತ್ತವೆ. ಅವು ಅರಳಿದ ಎರಡರಿಂದ ಆರು ದಿನಗಳವರೆಗೆ ಶಲಾಕಾಗ್ರ ರಸಮಯವಿರುತ್ತದೆ. ಆಗ ತಾನೇ ಬಿರಿದು ಪರಾಗವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಳೆಯುತ್ತವೆ. ಸಂಗ್ರಹಿಸಿ ಜೋಪಾನ ಮಾಡಿಟ್ಟು ಪರಾಗವಾದಲ್ಲಿ ಮೊಳೆಯುವ ಪ್ರಮಾಣ ಕಡಿಮೆ. ಪರಾಗವು ಹೆಚ್ಚು ಕಾಲ ಜೀವಂತವಿರುವುದಿಲ್ಲ. ಆಗ ತಾನೇ ಬಿರಿದ ಪರಾಗವು ಶೇ. ೨೯ ರಷ್ಟು ಮತ್ತು ಅದರ ಹಿಂದಿನ ದಿನ ಸಂಗ್ರಹಿಸಿದ್ದ ಪರಾಗವು ಶೇ. ೧೧ ರಷ್ಟು ಮೊಳೆತಿದ್ದಾಗಿ ಕಾನ್ಪುರದಲ್ಲಿ ಕೈಗೊಂಡ ಸಂಶೋಧನೆಗಳಲ್ಲಿ ಕಂಡುಬಂದಿದೆ. ಕೈಯಿಂದ ಪರಾಗಸ್ಪರ್ಶ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿ ಕಚ್ಚಬಲ್ಲವು.

ಪರಾಗಸ್ಪರ್ಶಗೊಂಡು ೨೪ ರಿಂದ ೩೬ ಘಂಟೆಗಳಲ್ಲಿ ಯುಗ್ಮಕ (Zygote) ಉತ್ಪತ್ತಿಯಾಗುತ್ತದೆ. ಕೆಲವೊಂದು ತಳಿಗಳ ಪರಾಗವು ಇತರ ತಳಿಗಳಿಗೆ ಹೆಚ್ಚು ಹೊಂದಾಣಿಕೆಯನ್ನು ತೋರುವುದುಂಟು. ಉದಾಹರಣೆಗೆ ಚಾಕೈಯ x ಪ್ರಾನ್ಸಿಸ್‌, ಪ್ರಾನ್ಸಿಸ್‌ x ಕೃಷ್ಣ, ಎನ್‌.ಎ.-೭ x  ಕೃಷ್ಣ, ಬನಾರಸಿ x ಕಾಂಚನ್‌, ಕಾಂಚನ್‌ x ಎನ್‌.ಎ.-೬, ಎನ್‌.ಎ.-೬ x ಎನ್‌.ಎ.-೮, ಎನ್‌.ಎ.-೯ x ಎನ್‌.ಎ.-೮ ಮುಂತಾದವು.

ಕಾಯಿಕಚ್ಚುವ ಪ್ರಮಾಣದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಮೋತಿಬಾಘ್‌ ಆಯ್ಕೆಯಲ್ಲಿ ಶೇ. ೪೪ ರಷ್ಟು ಕಾಯಿಕಚ್ಚಿದರೆ  ಪ್ರಾನ್ಸಿಸ್‌ ತಳಿಯಲ್ಲಿ ಅದರ ಪ್ರಮಾಣ ಶೇ. ೮೨ ರಷ್ಟು ಇದ್ದು, ಅಂತಿಮವಾಗಿ ಉಳಿದುದ್ದು ಶೇ. ೧೯ ಮತ್ತು ೫೦ ರಷ್ಟು ಮಾತ್ರವೆಂಬುದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ.

ಬಿಟ್ಟ ಹೂವೆಲ್ಲಾ ಕಾಯಿ ಕಚ್ಚುವುದಿಲ್ಲ. ಗಂಡು ಹೂವು ಪರಾಗ ಬಿರಿದನಂತರ ಉದುರಿಬೀಳುತ್ತವೆ. ಗಣನೀಯ ಪ್ರಮಾಣದ ಹೆಣ್ಣು ಹೂವುಗಳೂ ಸಹ ಉದುರಿಬೀಳುತ್ತವೆ. ಹೂವು ಮತ್ತು ಹೀಚು ಮೂರು ಹಂತಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತವೆ. ಈ ಹಂತಗಳ ಪೈಕಿ ಹೂವು ಬಿಟ್ಟ ಮೂರು ವಾರಗಳಲ್ಲಿ ಶೇ. ೭೦ ರಷ್ಟು ಉದುರಿಬೀಳುತ್ತವೆ. ಎರಡನೇ ಹಂತದ ಉದುರುವಿಕೆ ಜೂನ್‌ನಿಂದ ಸೆಪ್ಟಂಬರ್‌‌ವರೆಗೆ ಮತ್ತು ಮೂರನೇ ಹಂತ ಅಕ್ಟೋಬರ್ ತಿಂಗಳಿನಿಂದ ಇರುತ್ತವೆ. ಈ ವಿಧದ ಹೂವು ಮತ್ತು ಹೀಚುಗಳು ಉದುರಲು ಪರಾಗಸ್ಪರ್ಶದ ಕೊರತೆ, ಗರ್ಭಧಾರಣೆ ಆಗದಿರುವುದು ಮುಂತಾಗಿ ಹಲವಾರು ಕಾರಣವಿರುತ್ತವೆ.

ಕಾಯಿಕಚ್ಚಿದ ನಂತರ ಅಂಡಾಶಯವು ಸ್ವಲ್ಪ ಕಾಲ ಸುಪ್ತಾವಸ್ಥೆಯಲ್ಲಿದ್ದು ಅನಂತರ ಹೀಚುಗಳ ಅಡ್ಡಳತೆ ಹಾಗೂ ಗಾತ್ರಗಳು ತೀವ್ರಗತಿಯಲ್ಲಿ ಹೆಚ್ಚುತ್ತಾ ಹೊಗಿ ನವೆಂಬರ್ ಸುಮಾರಿಗೆ ಗರಿಷ್ಟ ಪ್ರಮಾಣಕ್ಕೆ ತಲುಪುತ್ತವೆ. ಕಾಯಿಗಳ ವೃದ್ಧಿಗೆ ಮೃದು ತಿರುಳಿನ ಕಣಗಳು ಕಾರಣವಿದ್ದರೆ ಬೀಜದ ವೃದ್ಧಿಗೆ ಗಡುಸಾದ ಬೀಜಕವಚದ ಕಣಗಳು ಕಾರಣವಿರುತ್ತವೆ.

ಕಾಯಿಗಳ ವೃದ್ದಿಗೆ ಸೈಟೋಕೈನಿನ್‌, ಜಿಬ್ಬೆರೆಲ್ಲಿನ್‌ ಮುಂತಾದ ಚೋದಕ ಪದಾರ್ಥಗಳು ನೆರವಾಗುವುದಾಗಿ ತಿಳಿದುಬಂದಿದೆ. ಕಾಯಿ ಕಚ್ಚಿದ ನಾಲ್ಕು ತಿಂಗಳುಗಳ ನಂತರ ಅವುಗಳ ಬಣ್ಣ ಹಸಿರಿನಿಂದ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ವೃದ್ದಿಯ ಈ ಹಂತದಲ್ಲಿ ಒಟ್ಟು ಕರಗಿದ ಘನಪದಾರ್ಥಗಳು, ಅಪಕರ್ಷಕವಲ್ಲದ ಸಕ್ಕರೆ, ಅ‍ಯ್‌ಸ್ಕಾರ್ಬಿಕ್‌ ಆಮ್ಲ ಮುಂತಾದವು ಗರಿಷ್ಠಗೊಳ್ಳುತ್ತವೆ.