ಕೃಷಿ ವಿಜ್ಞಾನ ಸಾಹಿತ್ಯದ ಪ್ರಕಟಣೆಗೆಂದೇ ಪ್ರಾರಂಭಿಸಲಾದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಇದುವರೆಗೆ ಸುಮಾರು ೨೫೦ ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಷ್ಟೇ ಅಲ್ಲದೆ ಈ ಪುಸ್ತಕಗಳು ಬೋಧಕರಿಗೆ, ವಿಜ್ಞಾನಿಗಳಿಗೆ, ರೈತರಿಗೆ ಹಾಗೂ ಇತರ ಆಸಕ್ತರಿಗೆ ಪರಾಮರ್ಶನ ಗ್ರಂಥಗಳೂ ಆಗಿವೆ.

ಯಾವುದೇ ಕೃಷಿ ಸಂಶೋಧನೆಯ ಫಲ ಅಂತಿಮವಾಗಿ ತಲುಪಬೇಕಿರುವುದು ರೈತರನ್ನು. ಹೊಸ ಆವಿಷ್ಕಾರಗಳನ್ನು ರೈತ ತನ್ನ ಕ್ಷೇತ್ರದಲ್ಲಿ ಅಳವಡಿಸಿ ಅದರ ಪ್ರಯೋಜನವನ್ನು ಪಡೆಯುವುದರಲ್ಲಿಯೇ ಅದರ ಸಾರ್ಥಕತೆ ಅಡಗಿದೆ. ಈ ದಿಸೆಯಲ್ಲೆ ಕೃಷಿ ಜ್ಞಾನ ಭಂಡಾರ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ, ಇದರಲ್ಲಿ ಕೃಶಿ ವಿಜ್ಞಾನದ ಹೊಸ ಆವಿಷ್ಕಾರ, ಅನುಭವ ಹಾಗೂ ಚಿಂತನೆಗಳನ್ನು ಸರಳ, ಸುಂದರ, ವಿಚಾರಪೂರ್ಣ ಶೈಲಿಯಲ್ಲಿ ರೈತರಿಗೆ ಒದಗಿಸಿಕೊಡಲಾಗುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಈ ಮಾಲಿಕೆಯಡಿಯಲ್ಲಿ ಇಗಾಗಲೇ ಕೃಷಿ, ತೋಟಗಾರಿಕೆ, ಸಸ್ಯ ಸಂರಕ್ಷಣೆ, ಮುಂತಾದ ವಿಷಯಗಳ ಬಗ್ಗೆ ೧೭ ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ಪ್ರಕಟಣೆ ಬೆಟ್ಟದ ನೆಲ್ಲಿ ಮತ್ತು ಕಮರಾಕ್ಷಿ ಈ ಮಾಲಿಕೆಯ ಹದಿನೆಂಟನೇ ಕೃತಿ.

ಬೆಟ್ಟದ ನೆಲ್ಲಿ ಮತ್ತು ಕಮರಾಕ್ಷಿ ಹಣ್ಣುಗಳು ತಮ್ಮಲ್ಲಿರುವ ಸಮೃದ್ಧ ‘ಸಿ’ ಜೇವಸತ್ವದಿಂದಾಗಿ ಅತ್ಯಂತ ಜನಪ್ರಿಯವಾಗೆವೆ ಹಾಗೂ ವಿಶ್ವದಾದ್ಯಂತ ಬೇಡಿಕೆ ಹೊಂದಿವೆ. ಅವುಗಳ ಔಷಧೀಯ ಪ್ರಯೋಜನಗಳಿಂದಾಗಿ ಅವುಗಳನ್ನು ಹಲವಾರು ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿರುವ ಬೆಟ್ಟದ ನೆಲ್ಲಿ ತ್ರಿಫಲಗಳಲ್ಲಿ ಒಂದು. ಈ ಪುಸ್ತಕದಲ್ಲಿ ಬೆಟ್ಟದನೆಲ್ಲಿ ಮತ್ತು ಕಮರಾಕ್ಷಿ ಬೆಳೆಗಳ ಇತಿಹಾಸ, ಬೆಳೆ ಹಂಚಿಕೆ, ಬೇಸಾಯದ ಕ್ರಮಗಳು, ಸಸ್ಯ ಸಂರಕ್ಷಣೆ ಹಾಗೂ ಸಂಸ್ಕರಣೆ ಬಗ್ಗೆ ವಿವರವಾದ ಮಾಹಿತಿಯಿದೆ. ಬೆಟ್ಟದ ನೆಲ್ಲಿ ಮತ್ತು ಕಮರಾಕ್ಷಿ ಪುಸ್ತಕವನ್ನು ಬೆಂಗಳೂರು ಕೃ.ವಿ.ವಿ.ಯ ತೋಟಗಾರಿಕೆ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಎ. ನಾರಯಣರೆಡ್ಡಿಯವರು ರಚಿಸಿದ್ದು ಇದರ ತಾಂತ್ರಿಕ ಪರಿಶೀಲನೆಯನ್ನು ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರೂ ಹಾಗೂ ಮುಖ್ಯಸ್ಥರಾಗಿರುವ ಡಾ. ಡಿ. ಪಿ. ಕುಮಾರ‍್ರವರು ನಡೆಸಿಕೊಟ್ಟಿದ್ದಾರೆ. ಪುಸ್ತಕದ ಡಿ.ಟಿ.ಪಿ. ಕಾರ್ಯವನ್ನು ವಿಭಾಗದ ಬೆರಳಚ್ಚುಗಾರರಾದ ಶ್ರೀ ಎಲ್.ಆರ್. ದೊಡ್ಡರಂಗಯ್ಯ ನಿರ್ವಹಿಸಿದ್ದಾರೆ.

ಈ ಪುಸ್ತಕದಿಂದ ರೈತರು, ಸಂಶೋಧಕರು, ವಿಧ್ಯಾರ್ಥಿಗಳೂ ಹಾಗೂ ಇತರ ಆಸಕ್ತರು ಹೆಚ್ಚಿನ ಪ್ರಯೋಜನ ಪಡೆಯುವರೆಂದು ಆಶಿಸಲಾಗಿದೆ.

ಡಾ. ಬಿ.ಎಸ್. ಸಿದ್ಧರಾಮಯ್ಯ
ಪ್ರಾಧ್ಯಾಪರು ಮತ್ತು ಮುಖ್ಯಸ್ಥರು ಹಾಗೂ ಕನ್ನಡ ಅಭಿವೃಧಿ ಸಮಿತಿ ಕಾರ್ಯದರ್ಶಿಗಳು
ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ,
ಹೆಬ್ಬಾಳ, ಬೆಂಗಳೂರು – ೫೬೦ ೦೨೪