ನೆಲ್ಲಿಯನ್ನು ಬೀಜ ಊರಿ ಇಲ್ಲವೇ ನಿರ್ಲಿಂಗ ಪದ್ಧತಿಗಳಲ್ಲಿ ವೃದ್ಧಿಮಾಡಿ ಬೆಳೆಯಬಹುದು.

. ಬೀಜಪದ್ಧತಿ

ಈಗ ಕಂಡುಬರುವ ಹಳೆಯ ಮರಗಳೆಲ್ಲಾ ಬೀಜದಿಂದ ವೃದ್ಧಿಯಾದವುಗಳೇ. ಅಂತಹ ಬೀಜ ಸಸಿಗಳು ಬಲು ಎತ್ತರಕ್ಕೆ ಬೆಳೆಯುತ್ತವೆ. ಅವು ತಾಯಿ ಮರದಂತೆ ಇರುವುದಿಲ್ಲ ಅಲ್ಲದೆ ಫಲಬಿಡಲು ಏಳೆಂಟು ವರ್ಷ ಅಥವಾ ಇನ್ನೂ ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತವೆ. ಕಾಡುಗಳಲ್ಲಿ ಹಾಗೂ ಬೆಟ್ಟಗುಡ್ಡಗಳಲ್ಲಿ ಕಂಡುಬರುವ ಮರಗಳೆಲ್ಲವೂ ಬೀಜ ಸಸಿಗಳೇ ಆಗಿವೆ. ಅವುಗಳನ್ನು ಬೇರು ಸಸಿಗಳನ್ನಾಗಿ ಬಳಸಿಕೊಳ್ಳುವುದು ಉತ್ತಮ. ಬೀಜ ಸಸಿಗಳು ನಿರ್ಲಿಂಗಪದ್ಧಿತಿಗಳಲ್ಲಿ ವೃದ್ದಿ ಮಾಡಿದ ಸಸಿಗಳಿಗಿಂತ ಹೆಚ್ಚುಕಾಲ ಉಳಿಯುತ್ತವೆ.

ಈ ಉದ್ದೇಶಕ್ಕೆ ಕೊಯ್ಲುಗಾಲದಲ್ಲಿ ದೊಡ್ಡಗಾತ್ರದ, ಪೂರ್ಣಬಲಿತು ಪಕ್ವಗೊಂಡ ಹಾಗೂ ಕೀಟ ಮತ್ತು ರೋಗಗಳಿಂದ ಮುಕ್ತವಿರುವ ಹಣ್ಣುಗಳನ್ನು ಒಳ್ಳೆಯ ಮರಗಳಿಂದ ಬಿಡಿಸಿ ತರಬೇಕು. ಅವುಗಳ ತಿರುಳನ್ನು ಬೇರ್ಪಡಿಸಿ, ಬೀಜವನ್ನು ನೀರಿಗೆ ಸುರಿಯಬೇಕು. ಆಗಲೂ ಸಹ ಅವುಗಳನ್ನು ಚೆನ್ನಾಗಿ ಕಿವುಚಿ ತೊಳೆದಲ್ಲಿ ಅವುಗಳಿಗೆ ಅಂಟಿಕೊಂಡಿರುವ ಅಷ್ಟಿಷ್ಟು ತಿರುಳು ಕಿತ್ತುಬರುತ್ತದೆ. ಜೊಳ್ಳುಬೀಜವೆಲ್ಲಾ ಮೇಲೆ ತೇಲಿದರೆ ಗಟ್ಟಿಬೀಜ ನೀರಿನ ತಳ ಸೇರುತ್ತವೆ. ಜೊಳ್ಳುಬೀಜವನ್ನು ತೆಗೆದುಹಾಕಿ, ನೀರನ್ನು ಬಗ್ಗಿಸಿ ಹೊರಚೆಲ್ಲಿ, ತಳದಲ್ಲಿನ ಗಟ್ಟಿ ಬೀಜವನ್ನು ನೆರಳಿನಲ್ಲಿ ಎರಡು ಮೂರು ದಿನಗಳವರೆಗೆ ಹರಡಿ ಒಣಗಿಸಿ ಬಿತ್ತಬೇಕು. ಆದಷ್ಟು ಬೇಗ ಬಿತ್ತನೆ ಮಾಡುವುದು ಒಳ್ಳೆಯದು. ದಿನಕಳೆದಂತೆ ಅವುಗಳ ಮೊಳಿಯುವ ಸಾಮರ್ಥ್ಯ ಕುಸಿಯುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಶೇ. ೬೮ ರಿಂದ ೮೫ರಷ್ಟು ಬೀಜ ಮೊಳೆತಿದ್ದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ. ತೀರಾ ಹಳೆಯ ಬೀಜವನ್ನು ಬಿತ್ತನೆಗೆ ಬಳಸಬಾರದು.

ಬೀಜಗಳ ಮೇಲಿನ ತಿರುಳನ್ನು ಬಿಡಿಸಲು ಹಣ್ಣನ್ನು ಕಲ್ಲು, ಸುತ್ತಿಗೆ ಅಥವಾ ಯಂತ್ರಗಳ ನೆರವಿನಿಂದ ಜಜ್ಜಬಾರದು. ಬಿತ್ತುವ ಮುಂಚೆ ಬೀಜವನ್ನು ಮೂರುನಾಲ್ಕು ದಿನಗಳ ಕಾಲ ನೀರಿನಲ್ಲಿ ನೆನಸಿಟ್ಟರೆ ಬೀಜ ಕವಚ ಮೃದುಗೊಳ್ಳುತ್ತದೆ.

ಒಟ್ಲು ಎಬ್ಬಿಸುವುದು: ಬೀಜವನ್ನು ಎತ್ತರಿಸಿದ ಒಟ್ಲುಪಾತಿಗಳಲ್ಲಾಗಲೀ ಅಥವಾ ರಂಧ್ರಗಳಿಂದ ಕೂಡಿದ ಹಾಗೂ ಸೂಕ್ತ ಮಾಧ್ಯಮ ತುಂಬಿದ ಪ್ಲಾಸ್ಟಿಕ್‌ ಚೀಲಗಳಲ್ಲಾಗಲೀ ಬಿತ್ತಬಹುದು. ಇನ್ನೂ ಕೆಲವರು ಅವುಗಳನ್ನು ಅಗಲ ಬಾಯಿಯ ಮಣ್ಣಿನ ಕುಂಡಗಳಲ್ಲಿ ಮಾಧ್ಯಮ ತುಂಬಿ, ಅದರಲ್ಲಿ ಬಿತ್ತುವುದುಂಟು.

ಒಟ್ಲುಪಾತಿಗಳ ಅಥವಾ ಸಸಿಮಡಿಗಳ ಜಾಗವನ್ನು ಆಳವಾಗಿ ಎರಡು ಮೂರು ಸಾರಿ ಅಗೆತಮಾಡಿ, ಹೆಂಟೆಗಳನ್ನು ಒಡೆದು ಪುಡಿಮಾಡಿ ಕಲ್ಲುಗಳು, ಕಸಕಡ್ಡಿ, ಕಳೆಗಳು ಮುಂತಾಗಿ ಆರಿಸಿ ತೆಗೆದು ಮಡಿಗಳನಾಗಿ ಸಿದ್ಧಗೊಳಿಸಬೇಕು. ಸಸಿಮಡಿಗಳು ೧.೨ ಮೀ. ಅಗಲ, ೧೫ ಸೆಂ.ಮೀ. ಎತ್ತರ ಮತ್ತು ಅನುಕೂಲಕ್ಕೆ ತಕ್ಕ ಉದ್ದ ಇರುವಂತೆ ತಯಾರಿಸಿ ಚದರ ಮೀ. ಒಂದಕ್ಕೆ ೫ ರಿಂದ ೧೦ ಕಿ.ಗ್ರಾಂಗಳಷ್ಟು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಇಲ್ಲವೇ ಎಲೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರಸಬೇಕು. ಒಟ್ಲುಪಾತಿಗಳಿಗೆ ಯಾವುದಾದರೂ ಕೀಟನಾಶಕ ಮತ್ತು ಶೀಲೀಂಧ್ರ ನಾಶಕಗಳನ್ನು ನೀರಿನಲ್ಲಿ ಕರಗಿಸಿ ಸುರಿದರೆ ಕೀಟ ಮತ್ತು ರೋಗಗಳ ಬಾಧೆ ಇರುವುದಿಲ್ಲ.

ಸಸಿಮಡಿಗಳಲ್ಲಿ ೧೫ ಸೆಂ.ಮೀ. ಅಂತರದಲ್ಲಿ ಅಡ್ಡ ಗೀರುಗಳನ್ನು ಮಾಡಿ, ಅವುಗಳಲ್ಲಿ ೧೦ ಸೆಂ.ಮೀ.ಗೆ ಒಂದರಂತೆ ಬೀಜವನ್ನು ಊರಿ ಮಣ್ಣು ಮುಚ್ಚಬೇಕು. ಅವುಗಳನ್ನು ೦.೫ ರಿಂದ ೧ ಸೆಂ.ಮೀ. ಆಳಕ್ಕೆ ಬಿತ್ತಿದರೆ ಸಾಕು. ಅನಂತರ ಪ್ರತಿ ದಿನ ನೀರು ಹನಿಸುವ ಡಬ್ಬಿಯಿಂದ ನೀರು ಹಾಕುತ್ತಿದ್ದಲ್ಲಿ ಅವು ೩-೪ ವಾರಗಳಲ್ಲಿ ಮೊಳೆಯುತ್ತವೆ. ಬೀಜ ಬಿತ್ತಲು ಪೆಬ್ರವರಿಯಿಂದ ಜೂನ್‌ – ಜುಲೈ ಸೂಕ್ತಕಾಲ.

ಒಂದು ವೇಳೆ ಬೀಜವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಬಿತ್ತುವುದಿದ್ದರೆ, ೧೫ ಸೆಂ.ಮೀ. ಉದ್ದ ಮತ್ತು ೧೦ ಸೆಂ.ಮೀ. ಅಗಲ ಇರುವ ೧೫೦ ಗೇಜ್‌ ದಪ್ಪದ ಪ್ಲಾಸ್ಟಿಕ್‌ ಚೀಲಗಳನ್ನು ಆರಿಸಿಕೊಂಡು ಅವುಗಳ ತಳಭಾಗ ಮತ್ತು ಪಾರ್ಶ್ವಗಳಲ್ಲಿ ರಂಧ್ರಗಳನ್ನು ಮಾಡಬೇಕು. ಅದರಿಂದ ಹಾಕಿದ ಹೆಚ್ಚುವರಿ ನೀರು ಬಸಿದು ಹೋಗಲು ಅನುಕೂಲವಾಗುತ್ತದೆ. ಅನಂತರ ಅವುಗಳಿಗೆ ಕೊಳೆತ ಕೊಟ್ಟಿಗೆ ಗೊಬ್ಬರ, ಮರಳು ಮತ್ತು ಮಣ್ಣುಗಳನ್ನು ೧:೧:೧ ರಂತೆ ಬೆರಸಿ ತುಂಬಬೇಕು. ಚೀಲಗಳಲ್ಲಿ ತಲಾ ಒಂದರಂತೆ ಬೀಜ ಊರಿ, ನೀರು ಕೊಡಬೇಕು.

ಬೀಜವನ್ನು ೫೦೦ ಪಿಪಿಎಂ. ಸಾಮರ್ಥ್ಯದ ಜಿಬರ್ಲಿಕ್‌ ಆಮ್ಲದ ದ್ರಾವಣದಲ್ಲಿ ಅದ್ದಿ ಉಪಚರಿಸಿ ಬಿತ್ತಿದಲ್ಲಿ ಅಧಿಕ ಪ್ರಮಾಣದಲ್ಲಿ ಮೊಳೆಯುವುದೇ ಅಲ್ಲದೆ ಬಲಿಷ್ಟವಿರುವ ಬೇರು ಸಮೂಹ ಸಾಧ್ಯವಾಗುತ್ತದೆ.

ಎಳೆಯ ಸಸಿಗಳು ಒಂದು ವರ್ಷದಲ್ಲಿ ೩೦-೪೦ ಸೆಂ.ಮೀ. ಎತ್ತರಕ್ಕೆ ಬೆಳೆಯಬಲ್ಲವು. ಆ ಸಮಯಕ್ಕೆ ಅವುಗಳ ಕಾಂಡ ೦.೫ ರಿಂದ ೧ ಸೆಂ.ಮೀ. ದಪ್ಪ ಇರುತ್ತದೆ. ಆಗ ಅವುಗಳನ್ನು ಹೆಪ್ಪುಸಮೇತ ಜೋಪಾನವಾಗಿ ಗುಂಡಿಗಳಿಗೆ ವರ್ಗಾಯಿಸಬಹುದು ಅಥವಾ ಕಸಿ ಮಾಡಲು ಬಳಸಬಹುದು.

. ನಿರ್ಲಿಂಗಪದ್ಧತಿ

ನಿರ್ಲಿಂಗ ಪದ್ಧತಿಯಲ್ಲಿ ವೃದ್ಧಿಪಡಿಸಿ ನೆಟ್ಟ ಗಿಡಗಳು ತಾಯಿ ಗಿಡದಂತೆ ಇದ್ದು, ಬೇಗ ಫಸಲನ್ನು ಬಿಡುತ್ತವೆ. ಅಂತಹ ಮರಗಳು ಗಿಡ್ಡನಾಗಿದ್ದು, ಸುಲಭವಾಗಿ ನಿರ್ವಹಿಸಬಹುದು. ನಿರ್ಲಿಂಗ ಪದ್ಧತಿಯಲ್ಲಿನ ವಿಧಾನಗಳೆಂದರೆ ಸಾಮೀಪ್ಯ ಕಸಿ, ಮೆತುಕಟ್ಟಿಗೆ ಕಸಿ, ಗುರಾಣಿ ಆಕಾರದಲ್ಲಿ ಕಣ್ಣುಕೂಡಿಸಿ ಕಸಿಮಾಡುವುದು, ಪೋರ್ಕರ್ಟ್‌ ಪದ್ಧತಿ, ತೇಪೆ ಪದ್ಧತಿ, ರೆಂಬೆಯ ತುಂಡುಗಳನ್ನು ನೆಟ್ಟು ಬೇರುಬರುವಂತೆ ಮಾಡುವುದು ಮಣೆಪದ್ಧತಿ, ಹಳೆಯ ಹಾಗೂ ಬೀಜ ಸಸಿಗಳನ್ನು ಉತ್ತಮ ಮರಗಳನ್ನು ಕಸಿ ಮಾಡಿ ಪುನರುಜ್ಜೀವನ ಮಾಡುವುದು ಮತ್ತು ಅಂಗಾಂಶಕೃಷಿ.

. ಸಾಮೀಪ್ಯ ಕಸಿ ವಿಧಾನ: ಕಾಡು ಸಸಿಗಳನ್ನು ಇಲ್ಲವೇ ಬೀಜ ಊರಿ ಎಬ್ಬಿಸಿದ ೧-೨ ವಯಸ್ಸಿನ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಬೇರು ಸಸಿಯ ಕಾಂಡದ ಮತ್ತು ಕಸಿಕೊಂಬೆಯ ದಪ್ಪ ಒಂದೇ ಆಗಿರಬೇಕು. ಬೇರು ಸಸಿಯ ಕಾಂಡ ನಯವಾಗಿದ್ದು. ನೆಟ್ಟಗಿದ್ದಲ್ಲಿ ಉತ್ತಮ. ಬೇರು ಸಸಿಯನ್ನು ಕಸಿಕೊಂಬೆಯ ಪಕ್ಕಕ್ಕೆ ಸರಿಸಿ ಅದರ ಒಂದು ಪಾರ್ಶ್ವದಲ್ಲಿ ಸುಮಾರು ೫ ಸೆಂ.ಮೀ. ಉದ್ದದ ತೊಗಟೆ ಮತ್ತು ಚಕ್ಕೆಯನ್ನು ಹರಿತವಿರುವ ಕಸಿ ಚಾಕುವಿನ ಸಹಾಯದಿಂದ ಅಂಡಾಕಾರದಲ್ಲಿ ಕಚ್ಚುಕೊಟ್ಟು ಬಿಡಿಸಿ ತೆಗೆಯಬೇಕು. ಅಷ್ಟೇ ಉದ್ದಗಲ ಮತ್ತು ಆಳದ ಕಚ್ಚನ್ನು ಕಸಿಕೊಂಬೆಯಲ್ಲಿ ಮಾಡಿ, ತೊಗಟೆ ಮತ್ತು ಚಕ್ಕೆಯನ್ನು ಬಿಡಿಸಿ ತೆಗಯಬೇಕು. ಕಚ್ಚುಗಾಯಗಳು ಎರಡೂ ತುದಿಗಳತ್ತ ಇಳಿಜಾರಿನಿಂದ ಕೂಡಿದ್ದು ನಯವಾಗಿರಬೇಕು. ಕಚ್ಚುಗಾಯಗಳ ಆಳ ಮಧ್ಯಭಾಗದಲ್ಲಿ ಬೇರು ಸಸಿಯಕಾಂಡ ಮತ್ತು ಕಸಿಕೊಂಬೆಗಳ ದಪ್ಪದ ಅರ್ಧದಷ್ಟಿದ್ದರೆ ಸಾಕು. ಆನಂತರ ಎರಡೂ ಕಚ್ಚುಗಾಯಗಳನ್ನು ಎದುರುಬದುರಾಗಿ ಜೋಡಿಸಿ, ಬಿಗಿಯಾಗಿ ಬೆರಳುಗಳಿಂದ ಅದುಮಿ ಹಿಡಿದು, ಪ್ಲಾಸ್ಟಿಕ್‌ ಪಟ್ಟಿಯಿಂದ ಸುತ್ತಿ ಕಟ್ಟಬೇಕು. ಈ ಕೆಲಸಕ್ಕೆ ಜೂನ್‌-ಜುಲೈ ಅತ್ಯುತ್ತಮ ಕಾಲ ಹೇಗೆ ಕಟ್ಟಿದ ಸುಮಾರು ಒಂದು ತಿಂಗಳಲ್ಲಿ ಗಾಯಗಳು ಒಂದರಲ್ಲೊಂದು ಬೆಸದುಕೊಳ್ಳೂತ್ತವೆ. ಕಸಿಮಾಡಿದ ಎರಡು ಮೂರು ತಿಂಗಳುಗಳ ನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಕತ್ತರಿಸಿ ಹಾಕಬೇಕು. ಅದೇ ರೀತಿ ಕಸಿಕೊಂಬೆಯನ್ನು ಕಸಿಗಂಟಿನ ಸ್ವಲ್ಪ ಕೆಳಗೆ ಕಚ್ಚುಕೊಟ್ಟು, ಅದಾದ ಎರಡು ವಾರಗಳನಂತರ ಅದನ್ನು ಮತ್ತಷ್ಟು ಆಳಮಾಡಿ, ಅದರ ಮುಂದಿನ ಎರಡು ವಾರಗಳ ನಂತರ ಕಡೆಯ ಹಂತದ ಕಚ್ಚುಕೊಟ್ಟು ತಾಯಿಮರದಿಂದ ಬೇರ್ಪಡಿಸಬೇಕು. ಆಗ ಅದು ಕಸಿಗಿಡ ಎನಿಸಿಕೊಳ್ಳುತ್ತದೆ. ಹೀಗೆ ಸಿದ್ಧಗೊಳಿಸಿದ ಗಿಡಗಳನ್ನು ನೆರಳಿನಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ. ಈ ವಿಧಾನದಲ್ಲಿ ಶೇ. ೫೦ ರಿಂದ ೬೦ ರಷ್ಟು ಯಶಸ್ಸು ಸಾಧ್ಯ. ಅವುಗಳನ್ನು ಮುಂದಿನ ಮಳೆಗಾಲದಲ್ಲಿ ನೆಡಬಹುದು.

. ಮೆತುಕಟ್ಟಿಗೆ ಕಸಿ ವಿಧಾನ: ಇತ್ತೀಚಿನ ದಿನಗಳಲ್ಲಿ ರಾಜಸ್ಥಾನ, ಗುಜರಾತ್‌ ಮುಂತಾದೆಡೆ ಈ ವಿಧಾನ ಹೆಚ್ಚು ಬಳಕೆಗೆ ಬಂದಿದೆ. ಸಾಮೀಪ್ಯಕಸಿ ವಿಧಾನದಲಿ ಇದ್ದಂತೆಯೇ ಇದರಲ್ಲಿಯೂ ಸಹ ೧-೨ ವರ್ಷವಯಸ್ಸಿನ ಹಾಗೂ ೧-೨ ಸೆಂ.ಮೀ. ದಪ್ಪದ ಕಾಂಡ ಇರುವ ಬೀಜಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ ಕಸಿಮಾಡುವ ೧೨-೧೫ ದಿನ ಮುಂಚಿತವಾಗಿ ಅಯ್ಕೆ ಮಾಡಿದ ತಾಯಿಮರದ ಚೆನ್ನಾಗಿ ಬಲಿತ ಕಸಿಕೊಂಬೆ ಎಲೆಗಳನ್ನು ಸ್ವಲ್ಪವೇ ತೊಟ್ಟು ಇರುವಂತೆ ಸವರಿ ತೆಗೆಯಲಾಗುವುದು. ಹಾಗೆ ಮಾಡುವುದರಿಂದ ಕಸಿಕೊಂಬೆಯ ತುದಿಭಾಗದಲ್ಲಿನ ಮೊಗ್ಗುಗಳು ಚೆನ್ನಾಗಿ ಉಬ್ಬುತ್ತವೆ. ಕಸಿಮಾಡುವ ದಿನ ಅವುಗಳನ್ನು ತಾಯಿಮರದಿಂದ ಬೇರ್ಪಡಿಸಿ, ಒದ್ದೆಬಟ್ಟೆಯಲ್ಲಿ ಇಲ್ಲವೇ ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿಟ್ಟು ತರಬೇಕು. ಬೇರು ಸಸಿಯ ತಲೆಯನ್ನು ನೆಲಮಟ್ಟದಿಂದ ೩೦-೪೫ ಸೆಂ.ಮೀ. ಎತ್ತರದಲ್ಲಿ ಅಡ್ಡಕಚ್ಚುಕೊಟ್ಟು ಕತ್ತರಿಸಿ ನಂತರ ಕಚ್ಚಿನ ಅರ್ಧದಲ್ಲಿ ಕಸಿಚಾಕುವಿನ ಅಲಗನ್ನು ಊರಿ ೨.೫-೪ ಸೆಂ.ಮೀ. ಆಳಕ್ಕೆ ಸೀಳಬೇಕು. ಅದೇ ಸಮಯಕ್ಕೆ ಕಸಿಕಡ್ಡಿಯನ್ನು ೧೦-೧೫ ಸೆಂ.ಮೀ. ಉದ್ದ ಇರುವಂತೆ ಕತ್ತರಿಸಿ, ಅದರ ಬುಡಭಾಗದ ಎರಡೂ ಮಗ್ಗುಲಲ್ಲಿ ಇಳಿಜಾರು ಕಚ್ಚುಕೊಟ್ಟು ಅಲುಗಿನಂತೆ ಚೂಪು ಮಾಡಬೇಕು. ಈ ಚೂಪುಭಾಗವನ್ನು ಬೇರು ಸಸಿಯ ಕಾಂಡದ ಸೀಳುಗಳ ನಡುವೆ ನೆಟ್ಟಗೆ ಇಳಿಸಿ ಕಚ್ಚುಗಾಯಗಳು ಒಂದಕೊಂದು ಆತುಕೊಳ್ಳುವಂತೆ ಬೆರಳುಗಳಲ್ಲಿ ಬಿಗಿಯಾಗಿ ಅದುಮಿಹಿಡಿದು, ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿದುಕಟ್ಟಬೇಕು. ಮಳೆಯನೀರು ಅಥವಾ ಗಿಡಗಳಿಗೆ ಹಾಕಿದ ನೀರು ಕಸಿಗಾಯಗಳೊಳಕ್ಕೆ ಹೋಗುವುದನ್ನು ತಪ್ಪಿಸಲು ಕಸಿಭಾಗದ ಮೇಲೆ ಸಣ್ಣ ಪ್ಲಾಸ್ಟಿಕ್‌ ಕೊಳವೆ ಅಥವಾ ಚೀಲವನ್ನು ಬೋರಲಾಗಿ ಇಳಿಬಿಟ್ಟು, ಕಸಿಗಂಟಿನ ಕೆಳಗೆ ದಾರದಿಂದ ಬಿಗಿದು ಕಟ್ಟಬೇಕು. ಅದರಿಂದ ಕಸಿಕಡ್ಡಿಗೆ ಸೂಕ್ಷ್ಮಹವೆ ಸಿಗುವಂತಾಗುತ್ತದೆ. ಕಸಿ ಮಾಡಿದ ಸುಮಾರು ಒಂದು ತಿಂಗಳಲ್ಲಿ ಕಸಿಕಡ್ಡಿ ಬೇರುಸಸಿಯೊಂದಿಗೆ ಬೆಸೆದುಕೊಂಡು, ಚಿಗುರು ತಳ್ಳಲು ಪ್ರಾರಂಭಿಸುತ್ತದೆ. ಆಗ ಅದರ ಮೇಲೆ ಇಳಿಬಿಟ್ಟ ಪ್ಲಾಸ್ಟಿಕ್‌ ಕೊಳವೆ ಅಥವಾ ಚೀಲವನ್ನು ಬಿಚ್ಚಿ ತೆಗೆದು, ನೆರಳಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಸೂಕ್ತಗಾತ್ರಕ್ಕೆ ಬೆಳೆದು, ಮುಂದಿನ ವರ್ಷ ನೆಡಲು ಸಿದ್ದವಿರುತ್ತವೆ. ಈ ವಿಧಾನಕ್ಕೆ ಜೂನ್‌-ಜುಲೈ ಸೂಕ್ತಕಾಲ. ಇದರಲ್ಲಿ ಶೇ. ೭೦ ರಷ್ಟು ಯಶಸ್ಸು ಸಾಧ್ಯ.

. ಗುರಾಣಿಯಾಕಾರದಲ್ಲಿ ಕಣ್ಣು ಕೂಡಿಸಿ ಕಸಿಮಾಡುವುದು: ಇದಕ್ಕೆ ಷೀಲ್ಡ್‌ ಬಡ್ಡಿಂಗ್‌ ಅಥವಾ T ಬಡ್ಡಿಂಗ್‌ ಎನ್ನುತ್ತಾರೆ ಬೇರು ಸಸಿಯ ತೊಗಟೆಯಲ್ಲಿ T ಆಕಾರದಲ್ಲಿ ಕಚ್ಚುಕೊಟ್ಟು ತೊಗಟೆಯನ್ನು ಸಡಿಲ ಮಾಡುವ ಕಾರಣ ಅದನ್ನು T ಬಡ್ಡಿಂಗ್‌ ಮತ್ತು ಕಸಿಮೊಗ್ಗನ್ನು ಗುರಾಣಿ ಆಕಾರದಲ್ಲಿ ಬಿಡಿಸಿ ತೆಗೆಯುವುದರಿಂದ ಅದನ್ನು ಷೀಲ್ಡ್ ಬಡ್ಡಿಂಗ್‌ ಎಂದೂ ಕರೆಯಲಾಗುತ್ತಿದೆ.

ಈ ಉದ್ದೇಷಕ್ಕೆ ಒಂದು ವರ್ಷ ವಯಸ್ಸಿನ ಹಾಗೂ ೧-೨ ಸೆಂ.ಮೀ. ದಪ್ಪದ ಕಾಂಡ ಇರುವ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಅಪೇಕ್ಷಿತ ತಳಿಯ ಕಸಿಕೊಂಬೆ ಚೆನ್ನಾಗಿ ಉಬ್ಬಿದ ಆದರೆ ಚಿಗುರಿರದ ಕಸಿಮೊಗ್ಗುಗಳನ್ನು ಜೋಪಾನವಾಗಿ ಸ್ವಲ್ಪ ಭಾಗ ತೊಗಟೆಯೊಂದಿಗೆ ಬಿಡಿಸಿ ತೆಗೆಯಬೇಕು. ಇದಕ್ಕೆ ಚೂಪಾದ ಕಸಿಚಾಕು ಅಗತ್ಯ. ಬೇರುಸಸಿಯ ಕಾಂಡದ ನಯವಾದ ಭಾಗದಲ್ಲಿ ನೆಲಮಟ್ಟದಿಂದ ೩೦ ಸೆಂ.ಮೀ. ಎತ್ತರದಲ್ಲಿ ೧ ಸೆಂ.ಮೀ. ಉದ್ದದ ಇಳಿಕಚ್ಚುಕೊಟ್ಟು ಅದರ ಮೇಲ್ಬಾಗದಲ್ಲಿ ಅಷ್ಟೇ ಉದ್ದದ ಅಡ್ಡಕಚ್ಚು ಕೊಟ್ಟು, ಚಾಕುವಿನ ಹಿಂಬದಿಯ ಮೊಂಡು ಅಲುಗಿನಿಂದ ಸಡಿಲಗೊಳಿಸಬೇಕು. ಸಿದ್ಧಗೊಳಿಸಿದ ಕಸಿಮೊಗ್ಗನ್ನು ಸಡಿಲಗೊಳಿಸಿದ ತೊಗಟೆಯ ಕಚ್ಚಿನಲ್ಲಿ ಜೋಪಾನವಾಗಿ ಇಳಿಸಬೇಕು. ಕಸಿಮೊಗ್ಗು ತೊಗಟೆ ಮತ್ತು ಕಟ್ಟಿಗೆಗಳ ನಡುವೆ ಭದ್ರವಾಗಿ ಬೆಸೆದುಕೊಳ್ಳುವುದು. ಅದನ್ನು ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಿದಲ್ಲಿ ನೀರು ಒಳಗೆ ಸೇರುವುದು ತಪ್ಪುತ್ತದೆ. ಹೀಗೆ ಸುತ್ತಿ ಕಟ್ಟುವಾಗ ಕಸಿಮೊಗ್ಗಿನ ತುದಿ ಹೊರಕ್ಕೆ ಕಾಣುವಂತೆ ಬಿಡಬೇಕು. ಸುಮಾರು ೧೫-೨೦ ದಿನಗಳಲ್ಲಿ ಕಸಿಮೊಗ್ಗು ಬೇರು ಸಸಿಯೊಂದಿಗೆ ಬೆಸೆದುಕೊಳ್ಳುತ್ತದೆ. ಕಸಿಮಾಡಿದ ಮೂರು ವಾರಗಳನಂತರ ಪ್ಲಾಸ್ಟಿಕ್‌ ಪಟ್ಟಿಯನ್ನು ಬಿಚ್ಚಿ, ಕಸಿಗಂಟಿನ ಸ್ವಲ್ಪ ಮೇಲೆ ಅಡ್ಡಕಚ್ಚುಕೊಟ್ಟು ಬೇರು ಸಸಿಯ ತಲೆಯನ್ನು ಕತ್ತರಿಸಿಹಾಕಬೇಕು ಅದರಿಂದ ಕಸಿಮೊಗ್ಗು ಬೇಗ ಚಿಗರಿ ಬೆಳೆಯಲು ಅವಕಾಶವಾಗುತ್ತದೆ. ಈ ಕೆಲಸಕ್ಕೆ ಜೂನ್‌ ತಿಂಗಳ ಮೊದಲವಾರ ಹೆಚ್ಚು ಸೂಕ್ತ. ಈ ವಿಧಾನದಲ್ಲಿ ಶೇ. ೭೦ ರಿಂದ ೮೦ ರಷ್ಟು ಯಶಸ್ಸು ಸಾಧ್ಯ. ಈ ರೀತಿಯಲ್ಲಿ ವೃದ್ಧಿಮಾಡಿದ ಗಿಡಗಳು ಮುಂದಿನ ವರ್ಷ ನೆಡಲು ಸಿದ್ದವಿರುತ್ತವೆ.

. ಪೋರ್ಕರ್ಟ್ ವಿಧಾನದಲ್ಲಿ ಕಣ್ಣು ಹಾಕಿ ಕಸಿಮಾಡುವುದು: ಬೇರು ಸಸಿಯ ಕಾಂಡದ ತೊಗಟೆಯಲ್ಲಿ ನೆಲಮಟ್ಟದಿಂದ ೩೦ ಸೆಂ.ಮೀ. ಎತ್ತರದಲ್ಲಿ ಎರಡು ಸಮ ಅಂತರದ ೧-೧.೫ ಸೆಂ.ಮೀ. ಉದ್ದದ ಇಳಿ ಕಚ್ಚುಗಳನ್ನು ಕೊಟ್ಟು ಅವುಗಳ ಮೇಲ್ಬಾಗದಲ್ಲಿ ಅಡ್ಡಕಚ್ಚುಕೊಟ್ಟು ತೊಗಟೆಯನ್ನು ನಾಲಿಗೆಯಂತೆ ಸಡಿಲಗೊಳಿಸಿ ಜೋಪಾನವಾಗಿ ಕೆಳಕ್ಕೆ ಜಗ್ಗಬೇಕು. ಅಷ್ಟೇ ಉದ್ದಗಲಗಳುಳ್ಳ ಕಸಿಮೊಗ್ಗಿನ ತೇಪೆ ತೊಗಟೆಯನ್ನು ಬಿಡಿಸಿ ಕಂದು ಬೇರು ಸಸಿಯಲ್ಲಿ ಸಡಿಲಗೊಳಿಸಿದ ತೊಗಟೆ ಮತ್ತು ಕಟ್ಟಿಗೆಗಳ ಮಧ್ಯೆ ಇಳಿಬಿಟ್ಟು ಸಾಲಿಗೆ ತೇಪೆಯನ್ನು ಮೊದಲಿದ್ದಂತೆ ಮೇಲಕ್ಕೆ ಜಗ್ಗಿ, ಪ್ಲಾಸ್ಟಿಕ್‌ ಪಟ್ಟಿಯಿಂದ ಸುತ್ತಿ ಕಟ್ಟಬೇಕು. ಇದರಲ್ಲಿ ಬೇರು ಸಸಿಯ ನಾಲಿಗೆ ತೊಗಟೆ ಕಸಿಮೊಗ್ಗಿನ ತೇಪೆ ತೊಗಟೆಯನ್ನು ಪೂರ್ಣವಾಗಿ ಮುಚ್ಚಿರುತ್ತದೆ. ಸುಮಾರು ೧೫-೨೦ ದಿನಗಳಲ್ಲಿ ಕಸಿಮೊಗ್ಗು ಬೇರು ಸಸಿಯೊಂದಿಗೆ ಬೆಸೆದುಕೊಳ್ಳುತ್ತದೆ. ಆಗ ಪ್ಲಾಸ್ಟಿಕ್‌ ಪಟ್ಟಿಯನ್ನು ಬಿಚ್ಚಿ ತೆಗೆದು, ಕಸಿಗಂಟಿನ ಸ್ವಲ್ಪ ಮೇಲೆ ಬೇರು ಸಸಿಯನ್ನು ಕತ್ತರಿಸಬೇಕು. ಆನಂತರ ಕಸಿಮೊಗ್ಗು ಚಿಗರು ತಳ್ಳಿ ಬೆಳೆಯತ್ತದೆ. ಇದಕ್ಕೆ ಜೂನ್‌ ತಿಂಗಳ ಪ್ರಾರಂಭ ಸೂಕ್ತವಿರುತ್ತದೆ. ಇದರಲ್ಲಿ ಶೇ. ೭೦ ರಷ್ಟು ಯಶಸ್ಸು ಸಾಧ್ಯ.

. ತೇಪೆ ಕಸಿ: ಇದಕ್ಕೆ ಪ್ಯಾಚ್‌ ಬಡ್ಡಿಂಗ್‌ ಎನ್ನುತ್ತಾರೆ. ಇದನ್ನು ವಾಣಿಜ್ಯ ಮಟ್ಟದಲ್ಲಿ ಅನುಸರಿಸುತ್ತಾರೆ. ಬೇರುಸಸಿಯ ಕಾಂಡದ ತೊಗಟೆಯಲ್ಲಿ ಸುಮಾರು ೩೦-೪೦ ಸೆಂ.ಮೀ. ಎತ್ತರದಲ್ಲಿ ಚಚ್ಚೌಕವಾಗಿ ಇಲ್ಲವೇ ಆಯಾಕಾರದಲ್ಲಿ ಕಚ್ಚು ಕೊಟ್ಟು ತೊಗಟೆಯನ್ನು ಬಿಡಿಸಬೇಕು. ಕಸಿಕೊಂಬೆಯಲ್ಲಿ ಅಷ್ಟೇ ಉದ್ದಗಲಗಳ ತೇಪೆ ತೊಗಟೆಯನ್ನು ಮೊಗ್ಗಿನೊಂದಿಗೆ ಬಿಡಿಸಿ ತೆಗೆದು ಬೇರು ಸಸಿಯ ಕಾಂಡದಲ್ಲಿನ ಖಾಲಿ ಜಾಗದಲ್ಲಿ ಕೂಡಿಸಿ, ಪ್ಲಾಸ್ಟಿಕ್‌ ಪಟ್ಟಿಯಿಂದ ಸುತ್ತಿ ಕಟ್ಟಬೇಕು. ಸುಮಾರು ಎರಡು ಮೂರು ವಾರಗಳಲ್ಲಿ ಕಸಿಮೊಗ್ಗು ಬೇರುಸಸಿಯೊಂದಿಗೆ ಬೆಸೆದುಕೊಳ್ಳುತ್ತದೆ. ಆಗ ಪ್ಲಾಸ್ಟಿಕ್‌ ಪಟ್ಟಿಯನ್ನು ಬಿಚ್ಚಿ ತೆಗೆದು ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಅಡ್ಡಕ್ಕೆ ಕತ್ತರಿಸಬೇಕು. ಇದಕ್ಕೆ ಜುಲೈನಿಂದ ಸೆಪ್ಟೆಂಬರ್‌‌ವರೆಗೆ ಸೂಕ್ತವಿರುತ್ತದೆ. ಈ ವಿಧಾನದಲ್ಲಿ ಕಸಿ ಮಾಡಿದಾಗ ಜುಲೈನಲ್ಲಿ ಶೇ. ೮೦, ಅಗಸ್ಟ್‌ನಲ್ಲಿ ಶೇ. ೭೬.೪ ಮತ್ತು ಸೆಪ್ಟಂಬರ್‌ನಲ್ಲಿ ಶೇ. ೭೨ ರಷ್ಟು ಯಶಸ್ಸು ಲಭಿಸಿದ್ದಾಗಿ ಸಂಶೋಧನೆಯಿಂದ ತಿಳಿದುಬಂದಿದೆ.

. ಕಾಂಡದ ತುಂಡುಗಳನ್ನು ನೆಟ್ಟು ಬೇರುಬರುವಂತೆ ಮಾಡುವುದು: ಇದು ಸ್ವಲ್ಪ ಕಷ್ಟದ ಕೆಲಸವಾಗಿರುತ್ತದೆ. ಈ ಉದ್ದೇಶಕ್ಕೆ ೧.೫-೨ ಸೆಂ.ಮೀ. ದಪ್ಪದ ಬಲಿತ ರೆಂಬೆಗಳ ತುಂಡುಗಳನ್ನು ೨೨-೩೦ ಸೆಂ.ಮೀ. ಉದ್ದಕ್ಕೆ ಕತ್ತರಸಿ ಅವುಗಳ ಬುಡಬಾಗಕ್ಕೆ ೧೫,೦೦೦ ಪಿಪಿಎಂ ಸಾಮರ್ಥ್ಯದ ಇಂಡೋಲ್‌ ಬ್ಯುಟೈರಿಕ್‌ ಆಮ್ಲವನ್ನು ಹಚ್ಚಿ ಸೂಕ್ತ ಮಾಧ್ಯಮದಲ್ಲಿ ಮೂರನೆಯ ಎರಡರಷ್ಟು ಆಳಕ್ಕೆ ನೆಡಬೇಕು. ಅಲ್ಲಿನ ಉಷ್ಣತೆ ೩೫º ಸೆ. ಇದ್ದು, ಆರ್ದ್ರತೆ ಶೇ. ೯೫ ರಿಂದ ೯೮ರಷ್ಟು ಇರುವಂತೆ ಮಾಡಿದಲ್ಲಿ ಹೆಚ್ಚಿನಪ್ರಮಾಣದಲ್ಲಿ ಬೇರುಬಿಟ್ಟು ಚಿಗುರುತ್ತವೆ. ಈ ಕೆಲಸಕ್ಕೆ ಸಿಂಪರಣಾಯುಕ್ತ ಸಲಕರಣೆ ಅಳವಡಿಸಿರುವ ಗಾಜಿನಮನೆ ಅಥವಾ ಪ್ಲಾಸ್ಟಿಕ್‌ ಮನೆ ಇದ್ದರೆ ವರ್ಷದ ಉದ್ದಕ್ಕೆ ರೆಂಬೆಯ ತುಂಡುಗಳನ್ನು ನೆಟ್ಟು ಬೇರುಬರುವಂತೆ ಮಾಡಬಹುದು. ಈ ವಿಧದಲ್ಲಿ ಶೇ. ೮೫ಕ್ಕೂ ಮೇಲ್ಪಟ್ಟು ತುಂಡುಗಳು ಬೇರುಬಿಟ್ಟು ಹೊಸ ಗಿಡಗಳಾಗಬಲ್ಲವು. ಸುಮಾರು ಎರಡು ಮೂರು ತಿಂಗಳುಗಳಲ್ಲಿ ಸಾಕಷ್ಟು ಬೇರು ಮತ್ತು ಚಿಗರುಗಳು ವೃದ್ಧಿ ಹೊಂದಿ, ಅವುಗಳನ್ನು ಜೋಪಾನವಾಗಿ ಹೆಪ್ಪುಸಮೇತ ಕಿತ್ತು ಕುಂಡಗಳಿಗೆ ವರ್ಗಾಹಿಸಬಹುದು. ಹದವರಿತು ನೀರು ಕೊಡುತ್ತಿದ್ದಲ್ಲಿ ಅವು ಮುಂದಿನ ಮಳೆಗಾಲದ ಹೊತ್ತಿಗೆ ನೆಡಲು ಸಿದ್ಧವಿರುತ್ತವೆ. ಈ ಕೆಲಸಕ್ಕೆ ಜೂನ್‌ನಿಂದ ಅಗಸ್ಟ್‌ವರೆಗೆ ಹೆಚ್ಚು ಸೂಕ್ತ.

. ಮಣೆ ಪದ್ಧತಿ: ಇದನ್ನು ಕುಪ್ಪೆ ಪದ್ಧತಿ. ಸ್ಟೂಲ್‌ ಲೇಯರಿಂಗ್‌, ಮೌಂಡ್‌ ಲೇಯರಿಂಗ್‌ ಮುಂತಾಗಿ ಕರೆಯುತ್ತಾರೆ. ಈ ಪದ್ಧತಿಯಿಂದ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ವೃದ್ಧಿ ಮಾಡಬಹುದು. ಬೆಳೆದ ಗಿಡಮರಗಿಡಗಳಲ್ಲಿ ಈ ಪದ್ಧತಿಯನ್ನು ಅನುಸರಿಸಬಹುದು. ಆದಾಗ್ಯೂ ಸಹ ಇದೇನೂ ವಾಣಿಜ್ಯ ಪದ್ಧತಿಯಲ್ಲ.

ಮರದ ಕಾಂಡವನ್ನು ನೆಲಮಟ್ಟದಿಂದ ೧೫-೩೦ ಸೆಂ.ಮೀ. ಎತ್ತರದಲ್ಲಿ ಅಡ್ಡಕ್ಕೆ ಕತ್ತರಿಸಬೇಕು. ಮೋಟುಭಾಗದಲ್ಲಿ ಬಹಳಷ್ಟು ಚಿಗುರು ಮೊಗ್ಗುಗಳಿರುತ್ತವೆಯಾದರೂ ಅವು ಸುಪ್ತಾವಸ್ತೆಯಲ್ಲಿರುತ್ತವೆ. ಕಾಂಡವನ್ನು ಕತ್ತರಿಸಿದ ನಂತರ ಹೇಗೆ ಸುಪ್ತಾವಸ್ಥೆಯಲ್ಲಿನ ಮೊಗ್ಗುಗಳು ಬಹುಬೇಗ ಚಿಗುರಿ ಬೆಳೆಯಲು ಪ್ರಾರಂಭಿಸುತ್ತವೆ. ಮೋಟು ಕಾಂಡದ ಮೇಲೆ ಹಸಿ ಮಣ್ಣನ್ನು ಕುಪ್ಪೆಯಂತೆ ಗುಡ್ಡೆ ಮಾಡಿದರೆ ಚಿಗುರುರೆಂಬೆಗಳ ಬುಡದಲ್ಲಿ ಸಾಕಷ್ಟು ಬೇರು ಮೂಡಲು ಅನುಕೂಲವಾಗುತ್ತದೆ. ಈ ಕೆಲಸವನ್ನು ಜೂನ್‌-ಜುಲೈ ತಿಂಗಳಿನಲ್ಲಿ ಮಾಡಿದ್ದೇ ಆದರೆ ಎರಡುಮೂರು ತಿಂಗಳುಗಳಲ್ಲಿ ಅವುಗಳನ್ನು ತಾಯಿ ಮರದಿಂದ ಬೇರ್ಪಡಿಸಬಹುದು. ಕುಪ್ಪೆ ಮಣ್ಣನ್ನು ನಿಧಾನವಾಗಿ ಹಿಂದಕ್ಕೆಳೆದು ಒಂದೊಂದೇ ಚಿಗರು ರೆಂಬೆಯನ್ನು ಹರಿತವಿರುವ ಕಸಿಗತ್ತರಿಯಿಂದ ಕತ್ತರಿಸಿ ತೆಗೆದು, ಕುಂಡಗಳಿಗೆ ವರ್ಗಾಯಿಸಿ ನೀರು ಹಾಕುತ್ತಿದ್ದಲ್ಲಿ ಮುಂದಿನ ಮುಂಗಾರಿನ ಹೊತ್ತಿಗೆ ಅವು ಗುಂಡಿಗಳಲ್ಲಿ ನೆಡಲು ಸಿದ್ಧವಿರುತ್ತವೆ.

. ಅಂಗಾಂಶ್ ಕೃಷಿ: ಇದನ್ನು ಊತಕಸಾಕಣೆ, ಟಿಶ್ಯೂಕಲ್ಚರ್ ಮುಂತಾಗಿ ಕರೆಯುತ್ತಾರೆ. ಇದು ಪ್ರಯೋಗಶಾಲೆಯಲ್ಲೆ ಕೈಗೊಳ್ಳುವ ಸಸ್ಯಾಭಿವೃದ್ಧಿ ಪದ್ಧತಿಯಾಗಿದೆ. ಕಾಂಡದ ಗೆಣ್ಣು ಭಾಗದಲ್ಲಿನ ಚಿಗುರು ಅಂಗಾಂಶವನ್ನು ಬಿಡಿಸಿ ತೆಗೆದು ಸೂಕ್ತ ಮಾಧ್ಯಮದಲ್ಲಿಟ್ಟು ವೃದ್ಧಿ ಹೊಂದುವಂತೆ ಮಾಡಲಾಗುತ್ತದೆ. ಈ ಮಾಧ್ಯಮಕ್ಕೆ ೩ ರಿಂದ ೫ ಪಿಪಿಎಂ ಬೆಂಜೋಯಿಕ್‌ ಆಮ್ಲ ಮತ್ತು ೦.೫ ಪಿಪಿಎಂ ನ್ಯಾಫ್ತಲಿನ್‌ ಅಸೆಟಿಕ್‌ ಆಮ್ಲಗಳನ್ನು ಸೇರಿಸಿದ್ದೇ ಆದರೆ ಹೆಚ್ಚಿನ ಯಶಸ್ಸು ಸಾಧ್ಯವಿರುವುದಾಗಿ ತಿಳಿದುಬಂದಿದೆ. ಈ ಉದ್ದೇಶಕ್ಕೆ ಚಿಗುರುಗಳ ಸುಳಿ ಭಾಗಗಳ ಅಂಗಾಂಶವನ್ನೂ ಸಹ ಬಳಸಿಕೊಳ್ಳಬಹುದು. ಈ ವಿಧಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ಉತ್ಪಾದಿಸಬಹುದು ಆದರೆ ಈ ಹಣ್ಣಿನ ಬೆಳೆಯಲ್ಲಿ ಈ ರೀತಿಯ ಸಸ್ಯಾಭಿವೃದ್ಧಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ.

. ಹಳೆಯ ಮರಗಳಿಗೆ ಪುನರುಜ್ಜೀವನ ಒದಗಿಸುವುದು: ಬಹಳಷ್ಟು ಹಳೆಯವಿರುವ, ಕೆಳದರ್ಜೆಯ ಅಥವಾ ಸಾಕಷ್ಟು ಫಸಲು ಬಿಡದ ಇಲ್ಲವೇ ಕಾಡುಬಗೆಗಳ ಮರಗಳನ್ನು ಉತ್ತಮ ತಳಿಗಳ ಕಸಿಕೊಂಬೆಗಳನ್ನು ಬಳಸಿ ಕಸಿಮಾಡಿ ಅವುಗಳಿಗೆ ಹೊಸ ಜೇವಕೊಟ್ಟು ಮೇಲ್ದರ್ಜೆಯ ಮರಗಳನ್ನಾಗಿ ಪರಿವರ್ತಿಸಬಹುದು. ಇದಕ್ಕೆ ಪುನರುಜ್ಜೀವನ ಅಥವಾ ರಿಜುವೆನೇಶನ್‌ ಎನ್ನುತ್ತಾರೆ. ಮೇಲ್ಕಸಿ ಮಾಡಿ, ವೃದ್ಧಿಹೊಂದುವಂತೆ ಮಾಡಲಾಗುತ್ತದೆ. ಅಂತಹ ಮರಗಳ ಕಾಂಡವನ್ನು ನಿಲಮಟ್ಟದಿಂದ ಸುಮಾರು ೧.೨ ಮೀ. ಎತ್ತರದಲ್ಲಿ ಕವಲು ರೆಂಬೆಗಳಲ್ಲಿ ಸ್ವಲ್ಪ ಉದ್ದದ ಮೋಟುಭಾಗ ಇರುವಂತೆ ಹುಷಾರಾತಗಿ ಅಡ್ಡಕ್ಕೆ ಕತ್ತರಿಸಲಾಗುತ್ತದೆ. ಅದನ್ನೇನಿದ್ದರೂ ಹರಿತವಿರುವ ಸವರುಗರಗಸದಿಂದ ಮಾಡಬೇಕೇ ಹೊರತು ಮಚ್ಚು ಅಥವಾ ಬಾಚಿಯಿಂದ ಮಾಡಬಾರದು. ಒಟ್ಟಾರೆ ಗಿಡಕ್ಕೆ ಆಘಾತವಾಗುವುದಾಗಲೀ ಅಥವಾ ತೊಗಟೆ ಸೀಳಿಬರುವುದಾಗಲೀ ಇರಕೂಡದು. ಈ ಕೆಲಸವನ್ನು ಫೆಬ್ರವರಿ ಸುಮಾರಿಗೆ ಮಾಡಬವುದು ಉತ್ತಮ. ಮೋಟುಭಾಗಕ್ಕೆ ಬ್ಲೈಟಾಕ್ಸ್‌ ಅಥವಾ ಮತ್ತಾವುದಾದರೂ ತಾಮ್ರಯುಕ್ತ ಶಿಲೀಂಧ್ರನಾಶಕದ ಸರಿಯನ್ನು ಬಳಿಯಬೇಕು. ಈ ಮೋಟು ಕೊಳೆಗಳಿಂದ ಅಸಂಖ್ಯಾತ ಚಿಗುರು ಹುಟ್ಟಿ ಬೆಳೆಯುತ್ತವೆ. ಅವುಗಳ ಪೈಕಿ ದೃಢವಾದ ನಾಲ್ಕೈದು ಚಿಗುರುಗಳನ್ನು ಮಾತ್ರವೇ ಉಳಿಸಿಕೊಂಡು ಮಿಕ್ಕವುಗಳನ್ನು ಚಿವುಟಿಹಾಕಬೇಕು. ಅವು ಜೂನ್‌ ಹೊತ್ತಿಗೆ ಕಸಿಮಾಡಲು ಸಿದ್ಧವಿರುತ್ತವೆ.

ಅಪೇಕ್ಷಿತ ತಳಿಯ ಕಸಿ ಮೊಗ್ಗುಗಳನ್ನು ಬಿಡಿಸಿ ತಂದು ಗುರಾಣಿ ಪದ್ಧತಿಯಲ್ಲಿ ಕಣ್ಣುಕೂಡಿಸಿ ಕಸಿಮಾಡಬೇಕು. ಸುಮಾರು ೧೫-೨೦ ದಿನಗಳಲ್ಲಿ ಕಸಿಮೊಗ್ಗು ಅದರೊಂದಿಗೆ ಬೆಸೆದುಕೊಳ್ಳುತ್ತದೆ. ಆಗ ಪ್ಲಾಸ್ಟಿಕ್‌ ಪಟ್ಟಿಯನ್ನು ಬಿಚ್ಚಿ ತೆಗೆದು ಕಸಿಗಂಟಿನ ಸ್ವಲ್ಪ ಮೇಲೆ ಬೇರು ಸಸಿಯ ಚಿಗುರನ್ನು ಕತ್ತರಿಸಿ ಹಾಕಬೇಕು. ನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಗಿಡಗಳಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ಸಾಧ್ಯ. ಹದಿನೈದು ವರ್ಷವಸ್ಸಿನ ಮರಗಳಲ್ಲಿ ಶೇ. ೯೬ರಷ್ಟು ಮತ್ತು ಹಳೆಯ ಮರಗಳಲ್ಲಿ ಶೇ. ೬೮ ರಿಂದ ೮೦ರಷ್ಟು ಯಶಸ್ಸು ಉತ್ತರಪ್ರದೇಶದಲ್ಲಿ ನಡೆಸಿದ ಅಧ್ಯಯನಗಳಲ್ಲಿ ಕಂಡುಬಂದಿದೆ. ಈ ರೀತಿಯಲ್ಲಿ ಕಸಿಮಾಡಿದಾಗ ಮರದ ಪ್ರಧಾನ ಚೌಕಟ್ಟು ಹಾಗೆಯೇ ಉಳಿದು, ಅಂತಹ ರೆಂಬೆಗಳು ಅದರ ಮುಂದಿನ ವರ್ಷದಲ್ಲಿಯೇ ಹಣ್ಣು ಬಿಡಬಲ್ಲವು.

೧೦. ನೆಡಬೇಕಾದ ಸ್ಥಳದಲ್ಲಿಯೇ ಬೇರುಸಸಿಗಳನ್ನು ಎಬ್ಬಿಸಿ, ಅನಂತರ ಕಸಿ ಮಾಡುವುದು: ಇದನ್ನು ಇನ್‌ಸಿಟು ಗ್ರ್ಯಾಫ್ಟಿಂಗ್‌ ಅಥವಾ ಬಡ್ಡಿಂಗ್‌ ಎನ್ನುತ್ತಾರೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದಾಗಿ ನೆಟ್ಟಂತಹ ಕಸಿಗಿಡಗಳು ಎಲ್ಲವೂ ಸ್ಥಿರಗೊಂಡು ಬೆಳಿಯುವುದಿಲ್ಲ. ಅದನ್ನು ತಪ್ಪಿಸಲು ಬೇರುಸಸಿಗಳ ಬೀಜವನ್ನು ಸಿದ್ಧಗೊಳಿಸಿದ ಗುಂಡಿಗಳಲ್ಲಿ ತಲಾ ಎರಡು ಮೂರರಂತೆ ಮಳೆಗಾಲದ ಪ್ರಾರಂಭದಲ್ಲಿ ಬಿತ್ತಿ, ಆನಂತರ ದೃಢವಾಗಿರುವ ಒಂದು ಸಸಿಯನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಕಿತ್ತುಹಾಕಲಾಗುತ್ತದೆ. ಇನ್ನೂ ಕೆಲವರು ಬೀಜಸಸಿಗಳನ್ನು ಪ್ರತಿ ಗುಂಡಿಯಲ್ಲಿ ಒಂದರಂತೆ ಹೆಪ್ಪು ಸಮೇತ ನೆಟ್ಟು ಬೆಳೆಸುವುದುಂಟು. ಒಂದೆರಡು ವರ್ಷಗಳಲ್ಲಿ ಅವುಗಳ ಬೇರು ಮಣ್ಣಿನ ಪದರಗಳಲ್ಲಿ ಆಳಕ್ಕಿಳಿದು ಚೆನ್ನಾಗಿ ಬಲಗೊಳ್ಳುತ್ತದೆ. ಆಗ ಅಪೇಕ್ಷಿತ ತಳಿಗಳ ಕಸಿಮೊಗ್ಗುಗಳನ್ನು ತಂದು, ಅವುಗಳ ಮೇಲೆ ಕಸಿಮಾಡಬಹುದು. ಒಂದು ವೇಳೆ ಕಡಿಮೆ ಇದ್ದರೂ ಸಹ, ಬೇರುಸಸಿಗಳ ಬೇರು ಸಮೂಹ ಆಳಕ್ಕೆ ಇಳಿದಿರುವ ಕಾರಣ, ಗಿಡಗಳಿಗೆ ಹಾನಿಯಾಗದು. ಕಸಿಗಿಡಗಳನ್ನು ಖರೀದಿಸಲು ಹೆಚ್ಚು ಹಣ ಖರ್ಚಾಗುತ್ತದೆ ಮತ್ತು ಸಾಗಾಣಿಕೆಯಲ್ಲಿ ಹಾಗೂ ನೆಟ್ಟನಂತರ ಕೆಲವು ಗಿಡಗಳು ಆಘಾತದಿಂದ ಇಲ್ಲವೇ ಪ್ರತಿಕೂಲ ಪರಿಸ್ಥಿಗಳಿಂದ ಸಾಯುವುದುಂಟು. ಈ ವಿಧಾನದಲ್ಲಿ ಬೆಳೆಸಿದ್ದೇ ಆದರೆ ಆ ತೊಂದರೆಗಳು ಇರಲಾರವು. ಆದರೆ ಕಸಿ ಮಾಡಲು ಅನುಭವ ಇರುವ ಹಾಗೂ ನುರಿತ ವ್ಯಕ್ತಿ ಇರುವುದು ಅಗತ್ಯ. ಅದೇ ರೀತಿಯಾಗಿ, ಸೂಕ್ತ ಸಮಯದಲ್ಲಿ ಕಸಿಮಾಡುವುದು ಬಹು ಮುಖ್ಯ.