ನೆಲ್ಲಿಯ ವೈಜ್ಞಾನಿಕ ಸಸ್ಯನಾಮ ಫಿಲ್ಲಾಂಥಸ್ ಏಂಬ್ಲಿಕ್ ಲಿನ್ ಎಂದು. ಈ ಹೆಸರನ್ನು ಇತ್ತೀಚೆಗೆ ಪರಿಷ್ಕರಿಸಿ ಎಂಬ್ಲಿಕ ಅಫಿಷಿನ್ಯಾಲಿಸ್ ಗಾರ್ಟನ್ ಎಂಬುದಾಗಿ ಕರೆಯಲಾಗುತ್ತಿದೆ. ಇದು ಯೂಫೋರ್ಬಿಯೇಸೀ ಕುಟುಂಬದ ಫಿಲ್ಲಾಂಥಸ್ ಉಪವರ್ಗಕ್ಕೆ ಸೇರಿದ ನಿತ್ಯ ಹಸುರಿನ, ಸಣ್ಣ ಇಲ್ಲವೆ ಮಧ್ಯಮ ಗಾತ್ರದ ಮರ.

ಫಿಲ್ಲಾಂಥಸ್ ಉಪವರ್ಗದಲ್ಲಿ ಸುಮಾರು ೩೫೦ಕ್ಕೂ ಮೇಲ್ಪಟ್ಟು ಪ್ರಭೇದಗಳಿವೆಯಾದರೂ ಅವುಗಳ ಬಹುಪಾಲು ಪೊದೆಗಿಡಗಳಾಗಿಯೂ ಮತ್ತು ಮೂಲಿಕೆ ಗಿಡಳಾಗಿಯೂ ಕಂಡುಬರುತ್ತವೆ. ಮರಗಳಾಗಿ ಕಂಡು ಸಿಗುವುದು ಕಡಿಮೆ: ಫಿಲ್ಲಾಂಥಸ್ ಎಂಬ ಗ್ರೀಕ್ ಮೂಲದಿಂದ ಬಂದಂತಾದ್ದು. ಅದರ ಅರ್ಥ ‘ಎಲೆಯೊಂದಿಗೆ ಹೂವು’ ಎಂಬುದಾಗಿ. ದೊಡ್ಡನೆಲ್ಲಿ ನಿತ್ಯಹಸಿರಿನ ಮರವಾದಾಗ್ಯೂ ಸ್ವಲ್ಪ ಮಟ್ಟಿಗೆ ಎಲೆಗಳನ್ನುದುರಿಸಿ, ಮತ್ತೆ ಹೊಸಚಿಗುರು ತಳ್ಳಿ ಅದರೊಂದಿಗೆ ಹೂವು ಬಿಡುತ್ತದೆ. ಬನಾರಸಿಯಂತಹ ತಳಿಗಳ ಮರಗಳು ನೆಟ್ಟಗೆ ಬೆಳೆಯುವ, ಸ್ವಭಾವಹೊಂದಿದ್ದರೆ ಚಾಕೈಯ, ಕಾಂಚನ್ ಮುಂತಾದ ತಳಿಗಳ ಮರಗಳಲ್ಲಿನ ರೆಂಬೆಗಳು ಸತತ ಹರಡಿ ಚಾಚಿ ಬೆಳೆಯುವ ಸ್ವಭಾವ ಹೊಂದಿರುತ್ತವೆ. ಫ್ರಾನ್ಸಿಸ್ ತಳಿಯಲ್ಲಿ ರೆಂಬೆಗಳು ಸಡಿಲವಿದ್ದು ನೆಲದತ್ತ ಇಳಿಬಿದ್ದಿರುತ್ತವೆ. ಬನಾರಸಿ ತಳಿಯ ಮರಗಳಲ್ಲಿನ ವೈಶಿಷ್ಟ್ಯತೆಯೆಂದರೆ ಪ್ರತಿ ಗೆಣ್ಣಿನಲ್ಲಿ ಮೂರರಂತೆ ಕವಲು ರೆಂಬೆಗಳಿರುವುದು. ಪೂರ್ಣ ಬೆಳೆದಾಗ ಮರದ ಎತ್ತರ ೫ – ೬ ಮೀ. ಇರುತ್ತದೆ. ತೊಗಟೆ ನುಣ್ಣಗಿದ್ದು ಮೇಲ್ಮೇಲೆ ತೆಳ್ಳಗೆ ಸುಲಿದು ಬರುತ್ತಿರುತ್ತದೆ. ಪ್ರಧಾನಕಾಂಡ ಸೀಬೆಯಲ್ಲಿ ಇದ್ದಂತೆ. ಅದು ೬೦-೭೦ ಸೆಂ.ಮೀ. ದಪ್ಪ ಇದ್ದು ನೆಲಮಟ್ಟದಲ್ಲಿಯೇ ಕವಲೊಡೆದು, ನೆತ್ತಿ ಸ್ವಲ್ಪ ಮಟ್ಟಿಗೆ ಪೊದೆಯಂತಾಗುವುದು. ನೆತ್ತಿಯಲ್ಲಿ ೬ – ೭ ಕವಲು ರೆಂಬೆಗಳಿರುತ್ತವೆ. ರೆಂಬೆಗಳು ಬಲು ಪೆಡಸು. ಫಸಲಿನ ಭಾರಕ್ಕೆ ಅಥವಾ ಕೊಯ್ಲುಮಾಡಲು ಹತ್ತಿದಾಗ ಅವು ಮುರಿದು ಬೇಳುವ ಸಾಧ್ಯತೆ ಇರುತ್ತದೆ.

ಎಲೆ ಮತ್ತು ಹೂವು: ಚಿಗುರೆಲೆಗಳ ಬಣ್ಣ ಕೆಂಪು ಹಸಿರು, ಅವು ಬಲಿತಂತೆಲ್ಲಾ ಬೆಳಿಹಸಿರು ಬಣ್ಣಕ್ಕೆ ಮಾರ್ಪಡುತ್ತವೆ. ಬಿಡಿ ಎಲೆಗಲು ಗರಿಯಂತಿದ್ದು ಅಸಂಖ್ಯಾತ ಉಪ ಎಲೆಗಳಿಂದ ಕೂಡಿರುತ್ತವೆ. ಉಪ ಎಲೆಗಳು ಮಧ್ಯನರದ ಉದ್ದಕ್ಕೆ ಎರಡೂ ಪಾರ್ಶ್ವಗಳಲ್ಲಿ ಪೋಣಿಸಿದಂತೆ ವ್ಯವಸ್ಥಿತಗೊಂಡಿರುತ್ತವೆ. ಹೂವು ಉಪಎಲೆಗಳ ಕಂಕಳಲ್ಲಿ ಮೂಡುತ್ತವೆ. ಒಂದೇ ಎಲೆಯಲ್ಲಿ ಗಂಡು ಮತ್ತು ಹೆಣ್ಣು ಹೂವು ಬಿಟ್ಟಿರುತ್ತವೆ. ಗಂಡು ಹೂವು ಎಲೆಗಳ ಬುಡಭಾಗದತ್ತ ಬಿಟ್ಟರೆ, ಹೆಣ್ಣು ಹೂವು ಅವುಗಳಿಂದ ಮುಂದಕ್ಕೆ ತುದಿಯತ್ತ ಬಿಡುತ್ತವೆ. ಗಂಡುಹೂವು ಅಧಿಕ ಸಂಖ್ಯೆಯಲ್ಲಿರುತ್ತವೆ. ಬನಾರಸಿಯಂತಹ ತಳಿಗಳಲ್ಲಿ ತೀರಾ ಕಡಿಮೆ ಸಂಖ್ಯೆಯ ಹೆಣ್ಣು ಹೂವುಗಳಿರುತ್ತವೆ. ಆ ತಳಿಯ ಮರಗಳಲ್ಲಿ ಫಸಲು ಕಡಿಮೆ. ಚಾಕೈಯ ತಳಿಯಲ್ಲಿ ಫಸಲು ಯಥೇಚ್ಛ. ಅದರಲ್ಲಿ ಪ್ರತೀ ಕವಲು ರೆಂಬೆಯಲ್ಲಿ ಸರಾಸರಿ ನಾಲ್ಕು ಹೆಣ್ಣು ಹೂವು ಇರುವುದಾಗಿ ವರದಿಯಾಗಿದೆ. ಹೂವು ಗಾತ್ರದಲ್ಲಿ ಬಲು ಸಣ್ಣವು ಅವುಗಳಿಗೆ ಕೃಶವಾದ ಪುಟ್ಟ ತೊಟ್ಟುಗಳಿರುತ್ತವೆ. ಹೂವುಗಳ ಬಣ್ಣ ಪ್ರಾರಂಭಕ್ಕೆ ಹಸಿರುಹಳದಿ ಅಥವಾ ಕೆನ್ನೀಲಿ, ನಂತರ ಕೆನೆಬಿಳುಪು ಬಣ್ಣಕ್ಕೆ ಮಾರ್ಪಡುತ್ತವೆ.

ಹೂವು ಬಿಡುವ ಅವಧಿ ತೀರಾ ಕಡಿಮೆ. ಅದೇನಿದ್ದರೂ ಮೂರು-ನಾಲ್ಕು ವಾರಗಳಷ್ಟೆ. ಕರ್ನಾಟಕದಲ್ಲಿ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿಯೂ, ಫೆಬ್ರವರಿ ತಿಂಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯೂ ಹೂವು ಬಿಡುತ್ತವೆ. ಆದರೆ ಫೆಬ್ರವರಿ ತಿಂಗಳಲ್ಲಿ ಬಿಟ್ಟ ಹೂವು ಅಷ್ಟಾಗಿ ಫಲ ಕಚ್ಚುವುದಿಲ್ಲ. ತಮಿಳುನಾಡು ಮುಂತಾದೆಡೆ ಜುಲೈವರೆಗೆ ಹೂವು ಬಿಡುತ್ತಲೇ ಇರುತ್ತವೆ.

ಗಂಡು ಹೂವು ಬಿರಿಯುವುದು ಸಂಜೆಯ ಹೊತ್ತಿನಲ್ಲಿ. ಅವು ಬಿರಿದ ಸಲ್ಪ ಹೊತ್ತಿಗೆ ಪರಾಗ ಕೋಶಗಳ ಬಿರಿದು ಪರಾಗದ ಧೂಳನ್ನು ಹೊರಹಾಕುತ್ತವೆ ಹೆಣ್ಣು ಹೂವು ಒಮ್ಮೆಲೇ ಅರಳವ ಬದಲಾಗಿ ಹಂತಹಂತವಾಗಿ ಅರಳಿ ಅನಂತರ ಶಲಾಕಾಗ್ರ ರಸಮಯಗೊಳುತ್ತದೆ. ಇದರಲ್ಲಿ ಸ್ವ ಹಾಗೂ ಅನ್ಯ-ಪರಾಗಸ್ಪರ್ಶಗಳೆರಡೂ ಇವೆ. ಗಾಳಿ ಮತ್ತು ಕೀಟಗಳು ಪರಾಗ ಸ್ಪರ್ಶಕಾರ್ಯದಲ್ಲಿ ನೆರವಾಗುತ್ತವೆ. ಈ ಬೆಳೆಯಲ್ಲಿ ಸ್ವ-ಅಸಮಂಜಸ ಗುಣ ಇರುವುದುಂಟು. ಹೂವು ಬಿಟ್ಟು ಹಣ್ಣು ಕೊಯ್ಲಿಗೆ ಬರಲು ಎಂಟು-ಒಂಬತ್ತು ತಿಂಗಳುಗಳ ಅವಧಿ ಹಿಡಿಯುತ್ತದೆ.

ಹಣ್ಣು: ಹಣ್ಣುಗಳ ತೂಕ, ಗಾತ್ರ, ಬಣ್ಣ, ತಿರುಳು ಹಾಗೂ ರಾಸಾಯನಿಕ ಸಂಯೋಜನೆಗಳಲ್ಲಿ ವತ್ಯಾಸವಿರುತ್ತದೆ. ನೆಲ್ಲಿ ಕಾಯಿ ಬಲು ಪೌಷ್ಟಿಕ. ಅವು ಪೂರ್ಣಬಲಿತಾಗ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೋಟೀನ್, ಖನಿಜಪದಾರ್ಥ, ನಾರು, ಜಿಡ್ಡು, ಕಬ್ಬಿಣ ಮುಂತಾದವುಗಳನ್ನು ಹೊಂದಿರುತ್ತವೆ. ಈ ಹಣ್ಣುಗಳು ‘ಸಿ’ ಜೀವಸತ್ವದ ಒಳ್ಳೆಯ ಮೂಲ. ಬಾರ್ಬಡಾಸ್ ಚಿರ್ರಿಯನ್ನು ಬಿಟ್ಟರೆ ಇದೇ ಅತ್ಯಂತ ಹೆಚ್ಚಿನಪ್ರಮಾಣದ ‘ಸಿ’ ಜೀವಸತ್ವವನ್ನು ಹೊಂದಿರುವ ಫಲ. ಹಣ್ಣನ್ನು ಒಣಗಿಸಿ ಇಲ್ಲವೇ ಬೇಯಿಸಿ ಸಂಸ್ಕರಿಸಿದಾಗ ಅವುಗಳಲ್ಲಿನ  ‘ಸಿ’ ಜೀವಸತ್ವದ ಪುಡಿ ಅಥವಾ ಹಿಟ್ಟಿಗಿಂತ ತಾಜಾ ಹಣ್ಣುಗಳಿಂದ ತಯಾರಿಸಿದ ನೈಜ ಹಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಹಾಗೂ ಉತ್ತಮ ಗುಣಮಟ್ಟದ ‘ಸಿ’ ಜೀವಸತ್ವ ಇರುತ್ತದೆ ಅವುಗಳಲ್ಲಿ ಪೆಕ್ಟಿನ್ ಅಂಶವಿರುವುದರಿಂದ, ಉತ್ತಮ ದರ್ಜೆಯ ಜೆಲ್ಲಿಯನ್ನು ತಯಾರಿಸಬಹುದು.

ಕೋಷ್ಟಕ: ೧೦೦ ಗ್ರಾಂ. ಬೆಟ್ಟದ ನೆಲ್ಲಿಕಾಯಿಗಳ ತಿರುಳಿನಲ್ಲಿನ ಪೋಷಕಾಂಶಗಳು

ತೇವಾಂಶ ೮೧.೨ ಗ್ರಾಂ ಖನಿಜ ಪದಾರ್ಥ ೦.೭  ಗ್ರಾಂ
‘ಬಿ’ ಜೀವಸತ್ವ ೦.೦೩ ಮಿ.ಗ್ರಾಂ ಶರ್ಕರಪಿಷ್ಟ ೧೪.೦ ಗ್ರಾಂ
ನಾರು ೩.೪ ಗ್ರಾಂ  ನಿಕೋಟಿನಿಕ್ ಆಮ್ಲ ೦.೦೨ ಗ್ರಾಂ
ಪ್ರೋಟೇನ್ ೦.೫ ಗ್ರಾಂ ಸುಣ್ಣ ೦.೦೫ ಗ್ರಾಂ
‘ಸಿ’ ಜೀವಸತ್ವ ೬೦೦-೭೦೦ ಮಿ.ಗ್ರಾಂ ಜಿಡ್ಡು ೦.೧ ಗ್ರಾಂ
ರಂಜಕ ೦.೦೨ ಗ್ರಾಂ ಕ್ಯಾಲೋರಿಗಳು ೫೯
ಕಬ್ಬಿಣ ೧.೦೨ ಮಿ.ಗ್ರಾಂ

ಈ ಹಣ್ಣುಗಳಿಂದ ತಯಾರಿಸಿದ ಹಲವಾರು ಪದಾರ್ಥಗಳನ್ನು ಹೋಲಿಸಿ ನೋಡಿದಾಗ ಒಣ ಹಣ್ಣುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು ಅನಂತರದ ಸ್ಥಾನ ಕ್ರಮವಾಗಿ ಚ್ಯವನ ಪ್ರಾಶ, ಪ್ರಿಸರ್ವ್‌, ಮುರಬ್ಬ, ಉಪ್ಪಿನಕಾಯಿ ಮತ್ತು ಉಪ್ಪು ದ್ರಾವಣದಲ್ಲಟ್ಟ ಹಣ್ಣುಗಳದೆಂದು ತಿಳಿದುಬಂದಿದೆ. ಈ ಹಣ್ಣುಗಳ ಪೋಷಕಾಂಶಗಳನ್ನು ಕೋಷ್ಟಕ ೧ ರಲ್ಲಿ ಕೊಟ್ಟಿದೆ.

ಪ್ರಭೇಧಗಳು ಮತ್ತು ತಳಿಗಳು

ಫಿಲ್ಲಾಂಥಸ್ ಉಪವರ್ಗದಲ್ಲಿ ಮೂರು ಪ್ರಭೇಧಗಳ ಮರಗಳು ತಿನ್ನಲು ಸೂಕ್ತವಿರುವ ಹಣ್ಣನ್ನು ಬಿಡುತ್ತವೆ. ಇವುಗಳ ಪೈಕಿ ವಾಣಿಜ್ಯವಾಗಿ ಬೇಸಾಯದಲ್ಲಿರುವುದು ದೊಡ್ಡ ನೆಲ್ಲಿ ಮಾತ್ರ.

ತಳಿಗಳು: ನೆಲ್ಲಿಯಲ್ಲಿ ನಿರ್ದಿಷ್ಟ ತಳಿಗಳಂತೇನೂ ಇಲ್ಲ. ಕಾಡುಬಗೆಗಳಲ್ಲಿನ ಹಣ್ಣು ಸಣ್ಣವಿದ್ದು, ದೊಡ್ಡಬೀಜ ಮತ್ತು ಕಡಿಮೆ ತಿರುಳುಗಳಿಂದ ಕೂಡಿರುತ್ತವೆ. ಅವುಗಳ ಗುಣಮಟ್ಟ ಸಹ ಅಷ್ಟಕ್ಕಷ್ಟೆ. ದೊಡ್ಡಗಾತ್ರದ ಹಣ್ಣನ್ನು ಬಿಡುವ ಹಾಗೂ ಉತ್ತಮ ಗುಣಮಟ್ಟ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅವು ಪ್ರತಿವರ್ಷ ಅಧಿಕ ಫಸಲನ್ನು ಬಿಡುವಂತಿರಬೇಕು. ಅಂತಹ ಕೆಲವೊಂದು ತಳಿಗಳು ಮತ್ತು ಆಯ್ಕೆಗಳು ಈಗ ಬೇಸಾಯದಲ್ಲಿವೆ. ತಳಿಗಳನ್ನು ಹಣ್ಣುಗಳ ಗಾತ್ರ, ಬಣ್ಣ, ಆಕಾರ ಇಲ್ಲವೇ ಅವು ಹೆಚ್ಚಿನ ಮ್ರಮಾಣದಲ್ಲಿ ಬೇಸಾಯದಲ್ಲಿದ್ದು ಜನಪ್ರಿಯವಾಗಿರುವ ಸ್ಥಳ ಅಥವಾ ಪ್ರದೇಶಗಳ ಆಧಾರದ ಮೇಲೆ ಅವುಗಳಿಗೆ ವಿವಿಧ ಹೆಸರುಗಳನ್ನು ಕೊಡಲಾಗಿದೆ. ಕೆಲವು ಉದಾಹರಣೆಗಳೆಂದರೆ:

. ಬನಾರಸಿ: ಇದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಉತ್ಪತ್ತಿಯಾದುದಾಗಿ ತಿಳಿದುಬಂದಿದೆ. ಅತ್ಯುತ್ತಮ ತಳಿಗಳ ಪೈಕಿ ಇದೂ ಒಂದು. ಇದರ ಹಣ್ಣು ಗಾತ್ರದಲ್ಲಿ ಬಲು ದೊಡ್ಡವು. ಸಣ್ಣ ಸೇಬು ಹಣ್ಣಿನಷ್ಟು ದೊಡ್ಡವಿರುತ್ತವೆ. ಹಣ್ಣು ಗುಂಡಗೆ ಇಲ್ಲವೇ ಸ್ವಲ್ಪ ಓರೆಯಾಗಿದ್ದು ಎರಡೂ ತುದಿಗಳಲ್ಲಿ ಅದುಮಿದಂತೆ ಕಾಣುತ್ತವೆ. ಹಣ್ಣು ಎಳೆಯವಿರುವಾಗ ಬಿಳಿ ಹಸಿರು ಬಣ್ಣವಿದ್ದು, ಪೂರ್ಣಬಲಿತಾಗ ಹೊಳಪು ಹಳದಿ ಬಣ್ಣಕ್ಕೆ ಮಾರ್ಪಾಡುತ್ತವೆ. ಸಿಪ್ಪೆ ನುಣ್ಣಗಿರುತ್ತದೆ. ಹಣ್ಣಿನ ಉದ್ದಕ್ಕೆ ಆರು ಸಮ ಅಂತರದ ಉದ್ದಗೆರೆಗಳಿರುತ್ತವೆ. ಸಿಪ್ಪೆ ತೆಳು: ಪಾರದರ್ಶಕ. ಅದು ತಿರುಳಿಗೆ ಬಿಗಿಯಾಗಿ ಅಂಟಿಕೊಂಡಿರುತ್ತದೆ. ಬಿಡಿಹಣ್ಣು ೩.೭೪ ಸೆಂ.ಮೀ. ಉದ್ದ ಮತ್ತು ೪.೫೪ ಸೆಂ.ಮೀ. ಅಡ್ಡಗಲ ಇರುತ್ತದೆ. ಹಣ್ಣುಗಳ ಬುಡಬಾಗ ಗುಂಡಗಿದ್ದು ತೊಟ್ಟು ಚಚ್ಚೌಕವಾಗಿ ಅಂಟಿಕೊಂಡಿರುತ್ತದೆ. ತೊಟ್ಟಿನ ಸುತ್ತ ಅಷ್ಟೇನೂ ಕುಳಿ ಇರುವುದಿಲ್ಲ. ತಿರುಳು ಮೃದುವಾಗಿರುತ್ತದೆ, ನಾರಿನಾಂಶ ಕಡಿಮೆ. ರಸದ ಪ್ರಮಾಣ ಸಾಧಾರಣ, ರುಚಿಯಲ್ಲಿ ಸಾಧಾರಣ ಒಗರು. ಬೀಜ ಸ್ವಲ್ಪ ಮಟ್ಟಿಗೆ ದೊಡ್ಡವಿದ್ದು. ಷಟ್ಕೋನಾಕಾರದ್ದಿರುತ್ತವೆ. ಅವುಗಳ ಬಣ್ಣ ಮಾಸಲು ಹಸುರು. ಅದರಲ್ಲಿ ಅಂಡಾಕಾರದ ಆರು ಹೋಳುಗಳಿರುತ್ತವೆ. ಇದು ಬೇಗ ಕೊಯ್ಲಿಗೆ ಬರುವ ತಳಿ. ಹಣ್ಣುಗಳ ಸಂಗ್ರಹಣಾ ಗುಣ ಚೆನ್ನಾಗಿದೆ, ಫಸಲು ಕಡಿಮೆ. ಅದಕ್ಕೆ ಕಡಿಮೆ ಸಂಖ್ಯೆಯ ಹೆಣ್ಣು ಹೂವುಗಳಿರುವುದು ಹಾಗೂ ಸ್ವ-ಅಸಮಂಜಸ ಗುಣ ಪ್ರಮುಖ ಕಾರಣಗಳು. ಈ ತಳೀಯ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಆ‍ಯ್‌ಸ್ಕಾರ್ಬಿಕ್ ಆಮ್ಲವಿರುತ್ತದೆ. ಇದರ ಹಣ್ಣು ಮುರಬ್ಬಾ, ಕ್ಯಾಂಡಿ, ಪ್ರಿಸರ್ವ್, ಉಪ್ಪಿನಕಾಯಿ ಮುಂತಾಗಿ ತಯಾರಿಸಲು ಹೆಚ್ಚು ಸೂಕ್ತ. ಇತ್ತೀಚಿನ ವರ್ಷಗಳಲ್ಲಿ ಈ ತಳಿಯನ್ನು ದೇಶದ ಇತರ ರಾಜ್ಯಗಳಲ್ಲಿ ಸಹ ಬೆಳೆಯಲು ಪ್ರಾರಂಭಿಸಿದ್ದಾರೆ.

. ಹಾಥಿಜೂಲ್: ಇದು ಪ್ರತಾಪಗಢದಲ್ಲಿ ಉದ್ಬವಿಸಿದ ತಳಿ. ಹಣ್ಣು ದೊಡ್ಡವಿದ್ದು ಗೋಲಾಕಾರವಿರುತ್ತವೆ. ಬಿಡಿ ಹಣ್ಣು ಸುಮಾರು ೬೪ ಗ್ರಾಂಗಳಷ್ಟು ತೂಕವಿರುತ್ತವೆ. ಹಣ್ಣು ೪.೪ ಸೆಂ.ಮೀ. ಉದ್ದ ಹಾಗೂ ೪.೯೪ ಸೆಂ.ಮೀ. ಅಡ್ಡಗಲ ಇರುತ್ತವೆ. ಹಣ್ಣುಗಳ ಬಣ್ಣ ತೆಳುಹಸಿರು. ತೊಟ್ಟು ಅತಿ ಪುಟ್ಟದು ಅದುಹಣ್ಣಿನ ಬುಡದಲ್ಲಿ ಚಚ್ಚೌಕವಾಗಿ ತೂರಿರುತ್ತದೆ. ಅದರ ಸುತ್ತ ಇರುವ ಕುಳಿ ಆಳವಿರುವುದಿಲ್ಲ. ಸಿಪ್ಪೆ ತೆಳು, ತಿರುಳು ಬಿಗಿಯಾಗಿರುತ್ತದೆ. ಹಣ್ಣಿನ ಮೇಲೆ ಆರು ಸಮ ಅಂತರದ ಉದ್ದ ಗೀರುತಳಿರುತ್ತವೆ. ರಸದ ಪ್ರಮಾಣ ಸಾಧಾರಣ. ಅದು ರುಚಿಯಲ್ಲಿ ಸ್ವಲ್ಪ ಒಗರಾಗಿರುತ್ತದೆ. ತಿರುಳಿನಲ್ಲಿ ಸಾಧಾರಣ ನಾರು ಇರುತ್ತದೆ. ಬೀಜ ದೊಡ್ಡವಿದ್ದು ಷಟ್ಕೋನಾಕಾರವಿರುತ್ತವೆ. ಬೀಜಗಳ ಬಣ್ಣ ಮಾಸಲು ಹಸಿರು. ಪ್ರತಿ ಬೀಜದಲ್ಲಿ ಆರು ದಟ್ಟಕಂದು ಬಣ್ಣದ ಹೋಳುಗಳಿರುತ್ತವೆ. ಹಣ್ಣು ಗುಣಮಟ್ಟ ಉತ್ತಮ ಆದರೆ ಅವುಗಳ ಸಂಗ್ರಹಣಾ ಗುಣ ಚೆನ್ನಾಗಿಲ್ಲ. ಇದು ತಡವಾಗಿ ಹೊಯ್ಲಿಗೆ ಬರುವ ತಳಿ; ಅಧಿಕ ಫಸಲನ್ನು ಬಿಡುತ್ತದೆ.

. ಚಾಕೈಯ: ಇದು ಗಡುತರ ತಳಿ, ಆಧಿಕ ಪಸಲನ್ನು ಬಿಡುತ್ತದೆ. ಹಣ್ಣು ಗಾತ್ರದಲ್ಲಿ ಸಾಧಾರಣ ದೊಡ್ಡವು; ಎರಡೂ ತುದಿಗಳಲ್ಲಿ ಅಗಲಗೊಂಡಿರುತ್ತವೆ ಸರಾಸರಿ ಹಣ್ಣುಗಳ ತೂಕ ೩೦ ಗ್ರಾಂಗಳಷ್ಟು. ಅವು ದುಂಡಗಿರುತ್ತವೆ. ಬಿಡಿಹಣ್ಣು ೩.೨ ಸೆಂ.ಮೀ. ಉದ್ದ ಮತ್ತು ೩.೮ ಸೆಂ.ಮೀ. ಅಡ್ಡಗಲ ಇರುತ್ತವೆ. ಹಣ್ಣುಗಳ ಬಣ್ಣ ಹಸಿರು ಸಿಪ್ಪೆ ನುಣ್ಣಗಿದ್ದು ತೆಳ್ಳಗಿರುತ್ತದೆ. ಮೇಲೆ ಕೆಂಪುಗಂದು ಛಾಯೆ ಇರುತ್ತದೆ. ಪ್ರತಿ ಹಣ್ಣಿನಲ್ಲಿ ೬ ರಿಂದ ೮ ಅಸ್ಪಷ್ಟ ಬಿಳಿಯ ಗೀರುಗಳು ಉದ್ದಕಿರುತ್ತವೆ. ತೊಟ್ಟು ಪುಟ್ಟದು. ಅದು ಆಳವಾದ ಕುಳಿಯಲ್ಲಿ ತೂರಿರುತ್ತದೆ. ತಿರುಳು ಸಾಧಾರಣ ಗಡಸು. ರಸದ ಪ್ರಮಾಣ ಕಡಿಮೆ. ರುಚಿಯಲ್ಲಿ ಒಗರು. ತಿರುಳಿನಲ್ಲಿ ಬಣ್ಣರಹಿತ ನಾರು ಇರುತ್ತದೆ. ಬೀಜ ಸಣ್ಣವಿದ್ದು, ಅದುಮಿದಂತೆ ಕಾಣುತ್ತವೆ. ಬೀಜಗಳ ಬಣ್ಣ ಹಸಿರು. ಪ್ರತಿ ಬೀಜದಲ್ಲಿ ೬ ರಿಂದ ೮ ಗೀರು ಕಾಲುವೆಗಳಿದ್ದು ಮಾಸಲು ಹಸುರು ಬಣ್ಣದಿರುತ್ತವೆ. ಹೋಳುಗಳು ಅಂಡಾಕಾರ. ಹಣ್ಣುಗಳ ಗುಣಮಟ್ಟ ಸಾಧಾರಣ. ಅವುಗಳ ಸಂಗ್ರಹಣಾ ಗುಣ ಉತ್ತಮವಿರುತ್ತದೆ. ಈ ತಳಿಯ ಮರಗಳು ಪ್ರತಿ ವರ್ಷ್ ಫಸಲು ಬಿಡುತ್ತವೆ. ಇದು ಉಪ್ಪಿನಕಾಯಿ ತಯಾರಿಸಲು ಸೂಕ್ತವಿರುವ ತಳಿ.

. ಫ್ರಾನ್ಸಿಸ್: ಇದರ ಹಣ್ಣು ದೊಡ್ಡವಿದ್ದು ಮೊಟ್ಟೆಯಾಕಾರವಿರುತ್ತವೆ. ಹಣ್ಣು ತುದಿಗಳತ್ತ ಅದುಮಿದಂತೆ ಕಾಣುತ್ತವೆ. ಹಣ್ಣುಗಳ ಬಣ್ಣ ಹಸುರುಹಳದಿ. ಸಿಪ್ಪೆ ನುಣ್ಣಗಿರುತ್ತದೆ ತಿರುಳು ಮೃದುವಾಗಿದ್ದು ನಾರುರಹಿತವಿರುತ್ತದೆ. ಫಸಲಿನ ಹಾಗೂ ಸಂಗ್ರಹಣಾ ಗುಣಗಳು ಸಾಧಾರಣವಿರುತ್ತವೆ. ಈ ತಳಿಯ ಹಣ್ಣು ನೆಕ್ರೋಸಿಸ್‌ ಬಾಧೆಗೆ. ಸುಲಭವಾಗಿ ತುತ್ತಾಗುತ್ತವೆ.

. ದೇಶಿ ಸೀಡ್ಲಿಂಗ್: ಈ ತಳಿ ಉತ್ತರ ಪ್ರದೇಶದ ಹಲವಾರು ಕಡೆ ಕಂಡುಬರುತ್ತದೆ. ಇದು ಸ್ಥಳೀಯ ಬೇಜ ಸಸಿ ಸ್ವಲ್ಪಮಟ್ಟಿಗೆ ಕಾಡು ಬಗೆಯಂತಿರುತ್ತದೆ. ಹಣ್ಣು ಗೋಲಿಯಂತೆ ಗುಂಡಗಿರುತ್ತವೆ. ಹಣ್ಣುಗಳ ತೂಕದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಬಿಡಿಹಣ್ಣು ೧೨ ರಿಂದ ೪೫ ಗ್ರಾಂಗಳವರೆಗೆ ತೂಗುತ್ತವೆ. ಹಣ್ಣು ೨-೩ ಸೆಂ.ಮೀ. ಉದ್ದವಿದ್ದು ಬುಡದತ್ತ ದುಂಡಗಿರುತ್ತವೆ. ತೊಟ್ಟು ಚಚ್ಚೌಕವಿರುತ್ತದೆ. ಅದರ ಬುಡದ ಸುತ್ತ ಕುಳಿ ಇರುವುದಿಲ್ಲ. ಹಣ್ಣುಗಳ ಬಣ್ಣ ಹಸುರು. ಮೇಲೆಲ್ಲಾ ಬಿಳಿ ಚುಕ್ಕೆಗಳಿರುತ್ತವೆ. ಹಣ್ಣುಗಳ ಉದ್ದಕ್ಕೆ ಆರು ಸಮ ಅಂತರದ ಬಿಳಿ ಗೀರುಗಳಿರುತ್ತವೆ. ತಿರುಳು ತೆಳು ಹಸುರು ಬಣ್ಣದ್ದಿದ್ದು ಅಧಿಕ ನಾರಿನಿಂದ ಕೂಡಿರುತ್ತದೆ. ರಸದ ಪ್ರಮಾಣ ಕಡಿಮೆ. ರುಚಿಯಲ್ಲಿ ಒಗರು. ಬೀಜಗಾತ್ರದಲ್ಲಿ ಸಣ್ಣದಿದ್ದು ಗುಂಡಗಿರುತ್ತವೆ. ಬೀಜ ತಿರುಳಿಗೆ ಬಿಗುವಾಗಿ ಅಂಟಿಕೊಂಡಿರುತ್ತವೆ. ಪ್ರತಿ ಬೀಜದಲ್ಲಿ ಆರು ತಿಳಿಕಂದು ಬಣ್ಣದ ಹೋಳುಗಳಿರುತ್ತವೆ. ಹಣ್ಣುಗಳ ಗುಣಮಟ್ಟ ಅಷ್ಟಕ್ಕಷ್ಟೆ. ಆದರೆ ಅವುಗಳ ಸಂಗ್ರಹಣಾ ಗುಣ ಚೆನ್ನಾಗಿದೆ. ಇದು ಅಧಿಕ ಫಸಲನ್ನು ಬಿಡುವ ತಳಿ. ತಡವಾಗಿ ಕೊಯ್ಲಿಗೆ ಬರುತ್ತದೆ.

. ಬನ್ಸಿರೆಡ್: ಇದು ಆಕಸ್ಮಿಕ ಬೀಜ ಸಸಿ. ಇದರ ಹಣ್ಣು ಆಕರ್ಷಕ ಕೆಂಪು ಬಣ್ಣದ್ದಿರುತ್ತವೆ. ಬಿಡಿಹಣ್ಣುಗಳ ತೂಕ ೨೮ ಗ್ರಾಂ ಅವು ಗಾತ್ರದಲ್ಲಿ ಸಾಧಾರಣ ದೊಡ್ಡವಿರುತ್ತವೆ. ಹಣ್ಣು ಸ್ವಲ್ಪ ಉದ್ದವಿದ್ದು ತ್ರಿಕೋನಾಕಾರದ್ದಿರುತ್ತವೆ. ಅವು ೩.೫ ಸೆಂ.ಮೀ. ಉದ್ದ ಮತ್ತು ೪.೬ ಸೆಂ.ಮೀ. ಅಡ್ಡಗಲವಿರುತ್ತವೆ. ತೊಟ್ಟು ಪುಟ್ಟದು. ಅದು ಚಚ್ಚೌಕವಾಗಿದ್ದು ಬುಡದಲ್ಲಿ ತೂರಿರುತ್ತದೆ. ಕುಳಿ ಆಳವಾಗಿರುವುದಿಲ್ಲ. ಸಿಪ್ಪೆ ನುಣ್ಣಗಿದ್ದು ತೆಳ್ಳಗಿರುತ್ತದೆ. ಅದರ ಮೇಲೆಲ್ಲಾ ಬಿಳಿಚುಕ್ಕೆಗಳಿರುತ್ತವೆ. ಹಣ್ಣುಗಳ ಬುಡಭಾಗದಲ್ಲಿ ಕೆಂಪು ಬಣ್ಣ ದಟ್ಟವಾಗಿರುತ್ತದೆ. ನಾರು ಸಾಕಷ್ಟಿರುತ್ತದೆ. ಆದರೆ ರಸದ ಪ್ರಮಾಣ ಸಾಧಾರಣ. ರುಚಿಯಲ್ಲಿ ಒಗರು. ಬೀಜ ತಿರುಳಿಗೆ ಬಿಗಿಯಾಗಿ ಅಂಟಿಕೊಂಡಿರುತ್ತದೆ. ಬೀಜದೊಡ್ಡವು. ಅವು ಸ್ವಲ್ಪ ಮಟ್ಟಿಗೆ ಷಟ್ಕೋನಾಕಾರ. ಬೀಜದ ಬಣ್ಣ ಮಾಸಲು ಹಸಿರು. ಅದರಲ್ಲಿ ೬ ಹೋಳುಗಳಿರುತ್ತವೆ ಹಣ್ಣಿನ ಗುಣಮಟ್ಟ ಉತ್ತಮ; ಸಂಗ್ರಹಣಾಗುಣ ಸಾಧಾರಣ.

. ಎನ್..- : ಇದರ ಮತ್ತೊಂದು ಹೆಸರು ‘ಕೃಷ್ಣ’ ಎಂದು. ಇದು ಬಹುಶಃ ಬನಾರಸಿ ತಳಿಯಲ್ಲಿ ಉತ್ಪತ್ತಿಯಾದ ಆಕಸ್ಮಿಕ ಬೀಜ ಸಸಿ ಇರಬಹುದು. ಫಸಲು ಸಾಧಾರಣ. ಹಣ್ಣು ಗಾತ್ರದಲ್ಲಿ ಸಾಧಾರಣದಿಂದ ದೊಡ್ಡವಿರುತ್ತವೆ. ಅವುಗಳ ತುದಿಭಾಗಗಳು ಅದುಮಿದಂತಿದ್ದು ನೋಡಲು ಶಂಕುವಿನ ಆಕಾರದ್ದಿರುತ್ತವೆ. ಹಣ್ಣುಗಳ ಬಣ್ಣ ಹಳದಿ. ಸಿಪ್ಪೆ ನುಣ್ಣಗಿರುತ್ತದೆ. ಅದರ ಮೇಲೆ ಕೆಂಪು ಛಾಯೆ ಎದ್ದು ಕಾಣುತ್ತದೆ. ತಿರುಳು ಗಟ್ಟಿ, ಅದು ಅರೆಪಾರದರ್ಶಕವಿರುತ್ತದೆ. ನಾರು ಇರುವುದಿಲ್ಲ. ಇದು ಬೇಗ ಕೊಯ್ಲಿಗೆ ಬರುವಂತಾದ್ದು. ಇದರ ಹಣ್ಣು ಪ್ರಿಸರ್ವ್‌ ಮತ್ತು ಕ್ಯಾಂಡಿಗಳನ್ನು ತಯಾರಿಸಲು ಬಹುವಾಗಿ ಒಪ್ಪುತ್ತವೆ.

. ಎನ್..- : ಇದರ ಮತ್ತೊಂದು ಹೆಸರು ಕಾಂಚನ್‌ ಎಂಬುದಾಗಿ. ಇದೂ ಸಹ ಚಾಕೈಯ ತಳಿಯಲ್ಲಿನ ಆಕಸ್ಮಿಕ ಬೀಜ ಸಸಿ ಎಂಬುದಾಗಿ ಅಂದಾಜು. ಫಸಲು ಯಥೇಚ್ಚ. ಹಣ್ಣು ಸಾಧಾರಣ ದೊಡ್ಡವಿದ್ದು ಅದುಮಿದಂತೆ ಓರೆಯಾಗಿರುತ್ತವೆ. ಹಣ್ಣುಗಳ ಬಣ್ಣ ಹಳದಿ ಮಿಶ್ರಿತ ಹಸುರು; ಸಿಪ್ಪೆ ನಯವಾಗಿರುತ್ತದೆ. ತಿರುಳು ಬಿಗುವಾಗಿದ್ದು ನಾರಿನಿಂದ ಕೂಡಿರುತ್ತದೆ. ಈ ತಳಿಯ ಹಣ್ಣು ಉಪ್ಪಿನಕಾಯಿ ತಯರಿಸಲು ಹೆಚ್ಚು ಸೂಕ್ತ.

. ಎನ್..- : ಇದು ಫ್ರಾನ್ಸಿಸ್‌ ತಳಿಯಿಂದ ಆರಿಸಿ ವೃದ್ಧಿಪಡಿಸಲಾದ ಬೀಜ ಸಸಿ. ಫಸಲು ಯಥೇಚ್ಚ. ಬೇಗ ಕೊಯ್ಲಿಗೆ ಬರುತ್ತದೆ. ಹಣ್ಣು ಉಪ್ಪಿನಕಾಯಿ ಹಾಗೂ ಮತ್ತಿತರ ಪದಾರ್ಥಗಳನ್ನು ತಯರಿಸಲು ಸೂಕ್ತ. ಇದಕ್ಕೆ ನೆಗ್ರೊಸಿಸ್‌ನ ಬಾಧೆ ಇರುವುದಿಲ್ಲ.

೧೦. ಎನ್..- : ಇದೂ ಸಹ ಬನಾರಸಿ ತಳಿಯಲ್ಲಿನ ಆಕಸ್ಮಿಕ ಬೀಜ ಸಸಿಯೇ ಆಗಿದೆ. ಹಣ್ಣು ದೊಡ್ಡವಿದ್ದು ಸಂಸ್ಕರಣೆಗೆ ಸೂಕ್ತವಾಗಿವೆ. ಇದು ಬೇಗ ಕೊಯ್ಲಿಗೆ ಬರುವಂತಾದ್ದು.

ಇವುಗಳೇ ಅಲ್ಲದೆ ಪ್ರತಾಪಗಢ ಫೈಬರ್ ಲೆಸ್‌, ಆನಂದ್‌-೨ ಮುಂತಾದವುಗಳೂ ಸಹ ಅಲ್ಲಲ್ಲಿ ಬೆಸಾಯದಲ್ಲಿವೆ.

ಈ ಹಣ್ಣಿನ ಬೆಳೆಯಲ್ಲಿ ಮಿಶ್ರತಳಿಗಳಾವುವೂ ಇಲ್ಲ. ಉತ್ತರಪ್ರದೇಶದ ಬಸ್ತಿ ಹಣ್ಣು ಸಂಶೋಧನಾ ಕೇಂದ್ರದಲ್ಲಿ ವಿವಿಧ ತಳಿಗಳ ಹಣ್ಣುಗಳನ್ನು ವಿಶ್ಲೇಷಿಸಿ ಅವುಗಳ ಭೌತಿಕ ಮತ್ತು ರಾಸಾಯನಿಕ ಗುಣಗಳನ್ನು ವರದಿಮಾಡಿದ್ದಾರೆ. ಅವುಗಳನ್ನು ಕೋಷ್ಟಕ ೨ರಲ್ಲಿ ಕೊಟ್ಟಿದೆ.

ಅದೇ ರೀತಿಯಾಗಿ ಇತರ ಹಣ್ಣು ಸಂಶೋಧನಾ ಕೇಂದ್ರಗಳಲ್ಲಿ ಬನಾರಸಿ, ಚಾಕೈಯ, ದೇಶಿ, ಫ್ರಾನ್ಸಿಸ್‌, ಎನ್‌ಎ.- ೪ ಮತ್ತು ಎನ್.ಎ.-೫ ತಳಿಗಳ ಹಣ್ಣುಗಳನ್ನು ವಿವಿಧ ಭೌತಿಕ ಮತ್ತು ರಾಸಾಯನಿಕ ಗುಣಗಳಿಗೆ ವಿಶ್ಲೇಷಿಸಿ ವರದಿಮಾಡಲಾಗಿದೆ. ಅವುಗಳನ್ನು ಕೋಷ್ಟಕ ೩ರಲ್ಲಿ ಕೊಟ್ಟಿದೆ.