ಬೆಟ್ಟದ ನೆಲ್ಲಿ ಬೆಳೆಗೆ ಹಾನಿಮಾಡುವ ಕೀಟ ಮತ್ತು ರೋಗಗಳು ಕಡಿಮೆ ಇದ್ದರೂ ಸಹ ಅವುಗಳನ್ನು ಸಕಾಲದಲ್ಲಿ ಹತೋಟಿ ಮಾಡದಿದ್ದಲ್ಲಿ ಫಸಲು ನಷ್ಟಗೊಳ್ಳವುದು ಖಚಿತ. ಅಂತಹ ಕೆಲವು ಪ್ರಮುಖ ಕೀಟ ಮತ್ತು ರೋಗಗಳು, ಅವುಗಳಿಂದಾಗುವ ಹಾನಿ ಮತ್ತು ಹತೋಟಿ ಕ್ರಮಗಳು ಮುಂದಿನಂತಿವೆ.

ಕೀಟಗಳು

. ತೊಗಟೆ ತಿನ್ನುವ ಕಂಬಳಿ ಹುಳು

ಈ ಕೀಟಗಳು ಕಾಂಡ ಮತ್ತು ಪ್ರಧಾನ ರೆಂಬೆಗಳಲ್ಲಿ ಸುರಂಗಗಳನ್ನು ಕೊರೆಯುತ್ತವೆ. ತೀರಾಕಡೆಗಣಿಸಿದ ಮರಗಳಲ್ಲಿ ಹೆಚ್ಚಿನ ಹಾನಿ ಕಂಡುಬರುತ್ತದೆ. ಈ ಕಂಬಳಿ ಹುಳುಗಳು ಸೂಕ್ಷ್ಮ ರೇಶಿಮೆದಾರದ ಎಳೆಗಳಿಂದ ಸಡಿಲವಿರುವ ಹಾಗೂ ಕ್ರಮಬದ್ಧವಲ್ಲದ ಗೂಡುಗಳನ್ನು ನಿರ್ಮಿಸುತ್ತವೆ. ಅವು ವಿಸರ್ಜಿಸಿದ ಮಲಮೂತ್ರ, ಹಿಕ್ಕೆ ತೊಗಟಿಪುಡಿ, ನೊರೆ ಮುಂತಾದುವು ಈ ಗೂಡುಗಳಲ್ಲಿ ಸಂಗ್ರಹಗೊಂಡಿರುತ್ತವೆ. ಈ ವಿಧದಲ್ಲಿ ತೊಗಟೆಗೆ ಹಾನಿಯಾಗಿ ಮರಗಳು ಬಲಹೀನಗೊಂಡು, ಕಡಿಮೆ ಫಸಲನ್ನು ಕೊಡುವಂತಾಗುತ್ತವೆ.

ಹತೋಟಿ: ತೋಟದಲ್ಲಿ ಶುಚಿತ್ವ ಅಗತ್ಯ. ಸುಲಭದಲ್ಲಿ ಹಾಗೂ ಕಡಿಮೆ ಖರ್ಚಿನ ಹತೋಟಿ ಕ್ರಮವೆಂದರೆ ರಂಧ್ರಗಳ ಮೂಲಕ ಸೀಮೆಎಣ್ಣೆ ಅಥವಾ ಪೆಟ್ರೋಲ್ ಅನ್ನು ಪಿಚಕಾರಿ ಮಾಡಿ, ಅವುಗಳ ಬಾಯಿಗೆ ಕೆಸರು ಮಣ್ಣನ್ನು ಮೆತ್ತುವುದು. ಅವು ಉಸಿರು ಕಟ್ಟಿ ಸಾಯುತ್ತವೆ. ಈ ಕೆಲಸವನ್ನು ಸೆಪ್ಟಂಬರ್-ಅಕ್ಟೋಬರ್ ಹಾಗೂ ಫೆಬ್ರುವರಿ-ಮಾರ್ಚ್‌ ತಿಂಗಳುಗಳಲ್ಲಿ ಮಾಡುವುದು ಉತ್ತಮ. ಅದೇ ರೀತಿ ರಂಧ್ರಗಳೊಳಕ್ಕೆ ಸಣ್ಣ ತಂತಿಯ ತುಂಡನ್ನು ತೂರಿಸಿ ಚುಚ್ಚಿದರೂ ಸಹ ಅವು ಸಾಯುತ್ತವೆ.

೧೦ ಲೀ. ನೀರಿಗೆ ೧೦ ಮಿ.ಲೀ. ಮಾನೊಕ್ರೋಟೊಫಾಸ್‌ ದಬ್ಲ್ಯು.ಎಸ್‌.ಸಿ. ಇಲ್ಲವೇ ಮೀಥೈಲ್‌ ಪ್ಯಾರಾಥಿಯಾನ್‌ ೫೦ ಇಸಿ ಅಥವಾ ಫೆನಿಟ್ರೋಥಿಯಾನ್‌ ೫೦ ಇಸಿ ಕೀಟನಾಶಕವನ್ನು ಬೆರಸಿ ಎರಡು ಸಾರಿ ಸಿಂಪಡಿಸಿದರೆ ಈ ಕೀಟಗಳು ಸಾಯುತ್ತವೆ.

ಕಂಬಳಿಹುಳುಗಳನ್ನು ಯ್ಸ್ಪರ್ಜಿಲ್ಲಸ್ ಪ್ರಭೇದದಂತಹ ಶಿಲೀಂಧ್ರಗಳೂ ಸಹ ಸಾಯಿಸುತ್ತವೆ. ಮಳೆಗಾಲದಲ್ಲಿ ಈ ಶಿಲೀಂಧ್ರಗಳು ಕಂಬಳಿ ಹುಳುಗಳನ್ನು ಮುತ್ತಿ ಅವು ಸಾಯುವಂತೆ ಮಾಡುತ್ತವೆ.

. ಸುಳಿ ಕೊರೆಯುವ ಮತ್ತು ಗಂಟುಗಳನ್ನುಂಟು ಮಾಡುವ ಕಂಬಳಿಹುಳು

ಈ ಕಂಬಳಿ ಹುಳುಗಳು ಚಿಗುರು ರೆಂಬೆಗಳ ಸುಳಿ ಭಾಗಗಳನ್ನು ಕೊರೆದು ಮಧ್ಯದ ದಿಂಡು ಭಾಗ ಸೇರುತ್ತವೆ. ಇವು ತೀರಾ ಸಣ್ಣಗಾತ್ರದ ಕಂಬಳಿ ಹುಳುಗಳು. ಇವುಗಳ ಹಾವಳಿ ಅಗಸ್ಟ್‌ – ಸೆಪ್ಟಂಬರ್ ಸುಮಾರಿಗೆ ಪ್ರಾರಂಭಗೊಳ್ಳುತ್ತದೆ. ಅದರಿಂದಾಗಿ ಅಲ್ಲೆಲ್ಲಾ ಗಂಟುಗಳು ಉಂಟಾಗಿ, ರೆಂಬೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಂತಹ ರೆಂಬೆಗಳು ನೋಡಲು ವಿಕಾರವಾಗಿರತ್ತವೆ. ಗಂಟುಗಳ ಒಳಗೆ ಪೂಳ್ಳು ಇದ್ದು ಅದರಲ್ಲಿ ಈ ಕಂಬಳಿ ಹುಳುಗಳು ಸಲೀಸಾಗಿ ಹರಿದಾಡಲು ಅವಕಾಶವಿರುತ್ತದೆ.

ಹತೋಟಿ: ಬಹಳಷ್ಟು ಹಾನಿಗೀಡಾಗಿರುವ ಚಿಗುರುರೆಂಬೆಗಳನ್ನು ಸವರಿ ತೆಗೆದು ಸುಡಬೇಕು. ಅದರ ಜೊತೆಗೆ ಶೇ. ೨ ಪ್ಯಾರಾಥಿಯಾನ್‌ ಕೀಟನಾಶಕವನ್ನು ೧೫ ದಿನಗಳ ಅಂತರದಲ್ಲಿ ಎರಡು ಮೂರು ಸಾರಿ ಸಿಂಪಡಿಸಬೇಕು.

. ಬೂಷ್ಟು ತಿಗಣೆ

ಇದಕ್ಕೆ ಹಿಟ್ಟುತಿಗಣೆ ಮತ್ತು ಮೀಲಿಬಗ್‌ ಎಂಬ ಹೆಸರುಗಳಿವೆ. ಇವು ಮೆತುಶರೀರದ ತಿಗಣೆಗಳಿದ್ದು ಎಳೆಯ ಚಿಗುರು, ಹೀಚು ಮುಂತಾಗಿ ಕಚ್ಚಿ ರಸ ಹೀರುತ್ತವೆ. ಅಂತಹ ಭಾಗಗಳು ಬಲಹೀನಗೊಂಡು, ನಿಸ್ತೇಜಗೊಳ್ಳುತ್ತವೆ.

ಹತೋಟಿ: ಇವುಗಳ ಮೈಮೇಲೆ ಹತ್ತಿಯಂತಹ ಮೇಣದ ಹೊದಿಕೆ ಇದ್ದು ಕೀಟನಾಶಕವನ್ನು ಸಿಂಪಡಿಸಿದಾಗ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಲಾರದು. ಆದ್ದರಿಂದ ಮೊದಲು ನೀರನ್ನು ಜೋರಾಗಿ ಸಿಂಪಡಿಸಿ ಮೇಣದ ಹೊದಿಕೆ ತೊಳೆದು ಹೋಗುವಂತೆ ಮಾಡಿ ಆನಂತರ ಕೀಟನಾಶಕವನ್ನು ಸಿಂಪಡಿಸಬೇಕು. ೧೦ ಲೀ. ನೀರಿಗೆ ೨೦ ಮಿ.ಲೀ. ಲಿಬೇಸಿಡ್‌ ಕೀಟನಾಶಕ ಬೆರಸಿ ಎರಡು ಮೂರು ಸಾರಿ ಸಿಂಪಡಿಸಿದರೆ ಸಾಕು. ಜೊತೆಗೆ ಈ ಕೀಟಗಳನ್ನು ಹರಡುವ ಇರುವೆಗಳನ್ನೂ ಸಹ ಹತೋಟಿ ಮಾಡಬಹುದು.

. ಬಿಳಿನೊಣ

ಇವು ರೆಕ್ಕೆಗಳಿಂದ ಕೂಡಿದ ಸಣ್ಣಗಾತ್ರದ ಕೀಟಗಳಿದ್ದು ಚಿಗುರು ಭಾಗಗಳಲ್ಲಿ ಗುಂಪು ಗುಂಪಾಗಿದ್ದು, ಕಚ್ಚಿ ರಸಹೀರುತ್ತವೆ. ಹಾನಿ ಬಹಳಷ್ಟಿದ್ದಾಗ ಅಂತಹ ಭಾಗಗಳು ಬಲಹೀನಗೊಳ್ಳುತ್ತವೆ.

ಹತೋಟಿ: ೧೦ ಲೀ. ನೀರಿಗೆ ೨೦ ಮಿ.ಲೀ. ರೋಗಾರ್ ಅಥವಾ ಮೆಟಾಸಿಸ್ಟಾಕ್ಸ್ ಕೀಟನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಅದಿಲ್ಲದಿದ್ದಲ್ಲಿ ಬೇವಿನ ಬೀಜಗಳ ಕಷಾಯವನ್ನು ತಯಾರಿಸಿ, ಸಿಂಪಡಿಸಬಹುದು.

. ಸಸ್ಯಹೇನು

ಇವು ಮೆತು ಶರೀರದ ಸಣ್ಣ ಗಾತ್ರದ ಕೀಟಗಳಿದ್ದು ಸುಳಿ ಭಾಗಗಳಲ್ಲಿ ಗುಂಪು ಗುಂಪಾಗಿ ಮುತ್ತಿ ರಸ ಹೀರುತ್ತವೆ. ಅಂತಹ ಭಾಗಗಳು ಬಲಹೀನಗೊಂಡು, ನಿಸ್ತೇಜಗೊಳ್ಳುತ್ತವೆ.

. ಸಸ್ಯ ತಿಗಣೆ

ಈ ತಿಗಣೆಗಳು ತಮ್ಮ ಮೂತಿಯನ್ನು ಹಣ್ಣುಗಳಲ್ಲಿ ಚುಚ್ಚಿ ರಸ ಹೀರುತ್ತವೆ. ಗಾಯವಾದ ಭಾಗವು ಮಾಸಲಾಗಿ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.

ಹತೋಟಿ: ಇವುಗಳ ಹತೋಟಿ ಬೂಷ್ಟು ತಿಗಣೆಯಲ್ಲಿ ಇದ್ದಂತೆ.

. ದಾಳಿಂಬೆ ಚಿಟ್ಟೆ

ಯಾವಾಗಲಾದರೂ ಒಮ್ಮೊಮ್ಮೆ ಈ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಇದರ ಕಂಬಳಿ ಹುಳುಗಳು ಕಾಯಿಗಳನ್ನು ಕೊರೆದು ರಂಧ್ರಗಳನ್ನುಂಟು ಮಾಡುತ್ತವೆ. ಎಳೆಯ ಹಾಗೂ ಹಸುರು ಬಣ್ಣದ ಬೀಜಕವಚವನ್ನು ತಿನ್ನುತ್ತವೆ. ಬೀಜಕವಚ ಸ್ವಲ್ಪ ಗಡುಸಾಗಿದ್ದರೂ ಸಹ ಅದನ್ನು ತಿನ್ನುತ್ತವೆ. ಹಾಗಾಗಿ ಫಸಲು ಹಾಳಾಗುತ್ತದೆ.

ಹತೋಟಿ: ಹಾನಿಗೀಡಾದ ಕಾಯಿಗಳನ್ನು ಹಾಗೂ ಉದುರಿಬಿದ್ದ ಕಾಯಿಗಳನ್ನೆಲ್ಲಾ ಆರಿಸಿ ತೆಗೆದು ನಾಶಗೊಳಿಸಬೇಕು. ೧೦ ಲೀ. ನೀರಿಗೆ ೨೦ ಮಿ.ಲೀ. ಮಾನೊಕ್ರೋಟೋಫಾಸ್‌ ೩೬ ಡಬ್ಲ್ಯು.ಎಸ್‌.ಸಿ ಅಥವಾ ೧೫ ಮಿ.ಲೀ ಡೈಮಿಥೊಯೇಟ್‌ ೩೦ ಇಸಿ ಕೀಟನಾಶಕವನ್ನು ಬೆರೆಸಿ ಎರಡು ಮೂರು ಸಾರಿ ಸಿಂಪಡಿಸಬೇಕು.

. ಹಣ್ಣಿನ ರಸಹೀರುವ ಪತಂಗ

ಇದರ ಪ್ರಾಯದ ಪತಂಗಗಳು ತಮ್ಮ ಉದ್ದನಾದ ಸೊಂಡಿಲನ್ನು ಹಣ್ಣುಗಳಲ್ಲಿ ಚುಚ್ಚಿ ರಸ ಹೀರುತ್ತವೆ. ಅವು ಚುಚ್ಚಿ ಮಾಡಿರುವ ರಂಧ್ರಗಳು ಸ್ಫುಟವಾಗಿ ಕಾಣುತ್ತವೆ. ಈ ರಂಧ್ರಗಳಲ್ಲಿ ಇತರ ಕೀಟಗಳು ಹಾಗೂ ರೋಗಾಣುಗಳು ಪ್ರವೇಶಿಸಿ ಜಾಗ ಮಾಡಿಕೊಳ್ಳುತ್ತವೆ. ಅಂತಹ ಹಣ್ಣು ಉದುರಿ ಬೀಳುತ್ತವೆ.

ಹತೋಟಿ: ಹಾನಿಗೀಡಾದ ಹಣ್ಣುಗಳನ್ನೆಲ್ಲಾ ಆರಿಸಿ ಆಳವಾಗಿ ಹೂತಿಡಬೇಕು ಇಲ್ಲವೇ ನಾಶಗೊಳಿಸಬೇಕು. ಕಾಯಿಗಳು ಬಲಿತು ಪಕ್ವಗೊಳ್ಳುವ ದಿನಗಳಲ್ಲಿ ತೋಟದಲ್ಲಿ ಸಂಜೆ ಹೊತ್ತಿನಲ್ಲಿ ಅಲ್ಲಲ್ಲಿ ಹೊಗೆ ಎಬ್ಬಿಸಿದರೆ ಇವು ದೂರ ಸರಿಯುತ್ತವೆ. ಅದರ ಜೊತೆಗೆ ವಿಷಬೆರೆಸಿದ ಆಹಾರವನ್ನಿಟ್ಟರೆ ಸ್ವಲ್ಪ ಮಟ್ಟಿನ ಹತೋಟಿ ಸಾಧ್ಯ. ೧೦ ಲೀ. ನೀರಿಗೆ ೨೦ ಗ್ರಾಂ ಕಾರ್ಬರಿಲ್‌ ಅಥವಾ ೮ ಮಿ.ಲೀ. ಡೈಕ್ಲೋರ್‌ವಾಸ್‌ ಕೀಟನಾಶಕವನ್ನು ಬೆರೆಸಿ ಒಂದೆರಡು ಸಾರಿ ಸಿಂಪಡಿಸಿ ಈ ಪತಂಗವನ್ನು ನಿಯಂತ್ರಿಸಬಹುದು.

. ಎಲೆ ಸುರುಳಿ ಕಂಬಳಿ ಹುಳು

ಈ ಕಂಬಳಿ ಹುಳುಗಳು ಎಲೆಗಳನ್ನು ಸುರುಳಿಯಂತೆ ಮಾಡಿ, ಅವುಗಳ ಒಳಗೆ ಇದ್ದು, ತಮ್ಮ ಜೀವನ ಚರಿತ್ರೆಯನ್ನು ಪೋರ್ಣಗೊಳಿಸುತ್ತವೆ. ಇದೇನೂ ಅಷ್ಟೊಂದು ಮಹತ್ವದ ಕೀಟಪೀಡೆಯಲ್ಲ. ಯಾವುದಾದರೂ ಸೂಕ್ತ ಕೀಟನಾಶಕವನ್ನು ನೀರಿನಲ್ಲಿ ಬೆರಿಸಿ ಸಿಂಪಡಿಸಿದರೆ ಸಾಕು.

೧೦. ಎಲೆ ತಿನ್ನುವ ಕಂಬಳಿಹುಳು

ಇವು ಸಣ್ಣ ಗಾತ್ರದ ಕಂಬಳಿಹುಳುಗಳಿದ್ದು ಚಿಗುರೆಲೆಗಳ ಹಸಿರೆನ್ನೆಲ್ಲಾ ತಿಂದು ಹಾಳುಮಾಡುತ್ತವೆ. ಇವು ಗುಂಪು ಗುಂಪಾಗಿದ್ದು, ಸಣ್ಣದಾರದ ಎಳೆಗಳ ನೆರವಿನಿಂದ ನೇತಾಡಿ ಕೆಳಕ್ಕೆ ಬೀಳುತ್ತವೆ. ಹಾನಿಗೀಡಾದ ಎಲೆಗಳು ಉದುರಿ ಬೀಳುವುದುಂಟು, ಅಂತಹ ರೆಂಬೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಹತೋಟಿ: ಸುಳಿ ಕೊರೆಯುವ ಹುಳುವಿನಲ್ಲಿ ಇದ್ದಂತೆ.

ರೋಗಗಳು

.ತುಕ್ಕು ರೋಗ

ಈ ರೋಗಕ್ಕೆ ದೇಶಿತಳಿ ಬಹು ಸುಲಭವಾಗಿ ತುತ್ತಾದರೆ ಬನಾರಸಿ ಮತ್ತು ಚಾಕೈಯ ತಳಿಗಳು ಸ್ವಲ್ಪ ಮಟ್ಟಿಗೆ ನಿರೋಧಕ ಸಾಮರ್ಥ್ಯ ಹೊಂದೆವೆ. ಪ್ರಾರಂಭಕ್ಕೆ ಎಲೆ ಮತ್ತು ಕಾಯಿಗಳ ಮೇಲೆಲ್ಲಾ ಕಂದುಬಣ್ಣದ ಗುಳ್ಳೆಗಳು ಕಾಣಿಸಿಕೊಂಡು ದಿನಕಳೆದಂತೆ ಅವು ದಟ್ಟ ಕಂದು ಬಣ್ಣಕ್ಕೆ ಮಾರ್ಪಡುತ್ತವೆ. ತೀವ್ರ ಹಾನಿ ಇದ್ದಾಗ ಎಲೆ ಮತ್ತು ಕಾಯಿಗಳು ಉದುರಿಬೀಳುತ್ತವೆ.

ಹತೋಟಿ: ಇದರ ಹತೋಟಿಗೆ ಶೇ. ೦.೨ ಡೈಥೇನ್‌ಜಡ್‌-೭೮ ಅಥವಾ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪಡಿಸಬೇಕು. ಅದಿಲ್ಲದಿದ್ದಲ್ಲಿ ೧೦ ಲೀ. ನೀರಿಗೆ ೧೦ ಮಿ.ಲೀ. ಟ್ರೈಡೆಮಾರ್ಪ್‌ ೭೫ ಇಸಿ ಅಥವಾ ೨೦ ಗ್ರಾಂ ಮ್ಯಾಂಕೊಜೆಬ್‌ ೭೫ ಡಬ್ಲ್ಯೂಸಿ ಅನ್ನು ಬೆರಿಸಿ ಸಿಂಪಡಿಸಬೇಕು. ನಿರೋಧಕ ತಳಿಗಳನ್ನು ಬೆಳೆಯುವುದು ಲಾಭದಾಯಕ.

. ನೀಲಿಬೂಷ್ಟು

ಇದು ಸಂಗ್ರಹಣೆಯಲ್ಲಿ ಕಂಡುಬರುವ ರೋಗ. ಪ್ರಾರಂಭಕ್ಕೆ ಹಣ್ಣುಗಳ ಮೇಲೆಲ್ಲಾ ನೀರಿನಲ್ಲಿ ತೊಯ್ಯಿಸಿದ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು, ದಿನಕಳೆದಂತೆ ಕೆನ್ನೀಲಿ ಕಂದು ಇಲ್ಲವೇ ನೀಲಿ ಹಸಿರು ಬಣ್ಣದ ಮಚ್ಚೆಗಳಾಗಿ ಮಾರ್ಪಡುತ್ತವೆ. ತೀವ್ರಹಾನಿಯಿದ್ದಾಗ ಮಚ್ಚೆಗಳು ಹೊಳಪು ಹಸಿರು, ನೀಲಿಹಸಿರು ಮುಂತಾಗಿ ಬಣ್ಣ ಬದಲಾಯಿಸುತ್ತವೆ. ಹಾಗಾಗಿ ಹಣ್ಣು ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಅಂತಹ ಹಣ್ಣುಗಳಿಂದ ಕೆಟ್ಟ ವಾಸನನೆಯಿಂದ ಕೂಡಿದ ಹಳದಿ ದ್ರವ ಒಸರುತ್ತಿರುತ್ತದೆ.

ಹತೋಟಿ: ಸ್ವಚ್ಛತೆ ಬಹುಮುಖ್ಯ, ಕೊಯ್ಲಿನ ನಂತರ ಹಣ್ಣುಗಳನ್ನು ದುರ್ಬಲ ಬೋರಾಕ್ಸ್‌ ದ್ರಾವಣದಲ್ಲಿ ಅಥವಾ ಅಡುಗೆ ಉಪ್ಪಿನ ದ್ರಾವಣದಲ್ಲಿ ಅದ್ದಿ ಉಪಚರಿಸಬೇಕು.

. ಹಣ್ಣಿನ ತಿರುಳು ಕೊಳೆಯುವುದು

ಇದನ್ನು ಶಾರೀರಕ ಅವ್ಯವಸ್ಥೆ, ಆಂತರಿಕ ಕ್ಷಯ, ನೆಕ್ರೋಸಿಸ್‌ ಮುಂತಾಗಿ ಕರೆಯುತ್ತಾರೆ. ಇದು ಬೋರಾನ್‌ ಧಾತುವಿನ ಕೊರತೆಯಿಂದ ಉಂಟಾಗುವುದಾಗಿ ತಿಳಿದುಬಂದಿದೆ. ಹಣ್ಣಿನ ತಿರುಳು ಕಂದುಬಣ್ಣಕ್ಕೆ ತಿರುಗಿ, ಆನಂತರ ಕಪ್ಪು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಹಣ್ಣುಗಳ ಮೇಲೆಲ್ಲಾ ಅಂಟಿನ ಬೊಕ್ಕೆಗಳಿರುತ್ತವೆ. ರೆಂಬೆಗಳ ಸುಳಿ ಭಾಗ ಗುಂಪುಕೂಡಿ ಗುಲಾಬಿ ಹೂದಳತಳಂತೆ ಒತ್ತಾಗಿ ಪೊದೆಯಂತೆ ಕಾಣುವುದು.

ಹತೋಟಿ: ಇದನ್ನು ಹೋಗಲಾಡಿಸಲು ಸೂಕ್ತಪ್ರಮಾಣದ ಬೋರಾಕ್ಸ್‌ ಅನ್ನು ಮಣ್ಣಿಗೆ ಸೇರಿಸಬೇಕು ಇಲ್ಲವೇ ಶೇ. ೦.೬ ಬೋರಾಕ್ಸ್‌ ದ್ರಾವಣವನ್ನು ೧೫ ದಿನಗಳಿಗೊಮ್ಮೆ ಎರಡು ಮೂರು ಸಾರಿ ಚೆನ್ನಾಗಿ ತೊಯ್ಯುವಂತೆ ಎಲೆ ಮತ್ತು ಹಣ್ಣುಗಳ ಮೇಲೆ ಸಿಂಪಡಿಸಬೇಕು. ಈ ಕೆಲಸವನ್ನು ಸೆಪ್ಟೆಂಬರ್ ಮೊದಲನೇ ವಾರದಿಂದಲೇ ಪ್ರಾರಂಭಿಸಬೇಕು.

ರೋಗ ನಿರೊಧಕ ತಳಿಗಳನ್ನು ಬೆಳೆಯುವುದು ಲಾಭದಾಯಕ ಎಂ.ಆರ್. / ಆರ್.ಡಿ.-೮೯ / ೯ ಬೀಜ ಸಸಿಯು ನೆಕ್ರೋಸಿಸ್‌ ಅನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಾಗಿ ತಳಿದುಬಂದಿದೆ.