ಚಾಮರಾಜ ಒಡೆಯರ ವಿಲಾಸ ಜೀವನ, ಬೆಟ್ಟದ ಅರಸುವಿನ ಅಸಹಾಯಕತೆ, ರಣಧೀರ ಕಂಠೀರವನ ರಾಜತೇಜಸ್ಸು, ಉದಾತ್ತಗುಣ, ವಿಕ್ರಮರಾಯನ ರಾಜವಿದ್ರೋಹಿ ಚಟುವಟಿಕೆ, ಹಳೆಪೈಕದವರ ಧೂರ್ತತೆ ತಿಮ್ಮಾಜಮ್ಮಣ್ಣಿ ಮುದ್ದಾಜಮ್ಮಣ್ಣಿಯವರ ಕೊರಗು ಮುಂತಾದ ಅಂಶಗಳು ಈ ನಾಟಕದಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಚಾಮರಾಜ ಒಡೆಯರು ವಿಲಾಸಜೀವನದಲ್ಲಿ ತಲ್ಲೀನರಾಗಿರುವಂತೆ ಮಾಡಿ ರಾಜ್ಯದ ಆಡಳಿತ ಸೂತ್ರವನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು ಇಚ್ಛೆಬಂದಂತೆ ಕಾರುಬಾರು ಮಾಡುತ್ತಿದ್ದ ಹಳೆಪೈಕದವರನ್ನು ನಿಯಂತ್ರಿಸುವ ಸಲುವಾಗಿ ಬಂಗಾರದವಳ ಮಗ ಬೆಟ್ಟದ ಅರಸರನ್ನು ದಳವಾಯಿ ಮಾಡುತ್ತಾರೆ. ರಣಧೀರ ಮತ್ತು ವಿಕ್ರಮರಾಯ ತೆರಕಣಾಂಬಿಯಿಂದ ಮೈಸೂರಿಗೆ ಬರುತ್ತಾರೆ. ರಣಧೀರ ಅರಮನೆಯ ವಿದ್ಯಮಾನಗಳನ್ನರಿತು ಅದನ್ನು ಸುಧಾರಿಸುವಲ್ಲಿ ಪ್ರಯತ್ನಿಸುತ್ತಾನೆ. ಆದರೆ ವಿಕ್ರಮರಾಯ ಅರಮನೆಯ ಅವ್ಯವಸ್ಥೆಯ ಲಾಭ ಪಡೆದು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆ. ಹಳೆಪೈಕದವರನ್ನೂ ಬನ್ನೂರು ಲಿಂಗಣ್ಣನನ್ನೂ ಒಳಗುಮಾಡಿಕೊಂಡು ರಾಜವಿದ್ರೋಹದ ಕೆಲಸಗಳನ್ನು ಮಾಡುತ್ತ ಎಲ್ಲವನ್ನೂ ತನ್ನ ಅಂಕೆಯೊಳಗೇ ತಂದುಕೊಳ್ಳುತ್ತಾನೆ. ಹೀಗೆ ಪ್ರಬಲವಾಗುತ್ತಾ ಬಂದು ಬೆಟ್ಟದ-ಅರಸುವಿನ ಮೇಲೆ ಅಪವಾದ ತಂದು, ಅವನನ್ನು ಸೆರೆಹಿಡಿಸಿ ಆತನ ಕಣ್ಣಿಗೆ ಭಾಂಡ ಕರ್ಪೂರವನ್ನು ಕಟ್ಟಿಸುತ್ತಾನೆ. ತನಗೆ ಬೇಕಾದ ಲಿಂಗಣ್ಣನನ್ನು ದಳವಾಯಿಯನ್ನಾಗಿ ಮಾಡುತ್ತಾನೆ. ಹೀಗೆ ವಿಕ್ರಮರಾಯ ಮೈಸೂರಿನ ರಾಜಕೀಯದಲ್ಲಿ ಪ್ರವೇಶಿಸಿ ಪ್ರಬಲನಾಗುತ್ತ ಬಂದುದನ್ನು ಈ ನಾಟಕ ಚಿತ್ರಿಸುತ್ತದೆ. ರಣಧೀರ ರಾಜಯೋಗ್ಯ ವ್ಯಕ್ತಿ ಎಂಬುದನ್ನೂ ಈ ನಾಟಕ ಬಿಂಬಿಸುತ್ತದೆ. ನಾಟಕದ ವಸ್ತು ವಿಸ್ತಾರವಾದುದು. ಇದರಲ್ಲಿ ೧೪ ಪ್ರವೇಶಗಳಿದ್ದು, ಪ್ರತಿಯೊಂದು ಪ್ರವೇಶವೂ ಸ್ವತಂತ್ರ ಘಟಕದಂತಿದೆ. ತಂತ್ರ ಪ್ರತಿತಂತ್ರಗಳ ವೀರ್ಯವತ್ತಾದ ಸನ್ನಿವೇಶಗಳು ನಾಟಕದ ತುಂಬೆಲ್ಲ ಹರಡಿವೆ. ಬೆಟ್ಟದರಸು, ರಣಧೀರ, ವಿಕ್ರಮರಾಯ ಮೂವರೂ ಬೆಟ್ಟದ ಚಾಮರಾಜ ಒಡೆಯನ ಮಕ್ಕಳೇ ಆಗಿದ್ದರೂ ಕೂಡ ಅವರ ಗುಣ-ವ್ಯಕ್ತಿತ್ವಗಳು ಹೇಗೆ ಭಿನ್ನವಾಗಿದ್ದವೆಂದು ಈ ನಾಟಕ ಅರ್ಥಪೂರ್ಣವಾಗಿ ಚಿತ್ರಿಸುತ್ತದೆ. ಮಹಾರಾಣಿಯರು, ವೇಶ್ಯೆಯರು, ಅರಮನೆಯ ವಿಲಾಸಿನಿಯರು ಮುಂತಾದ ಸ್ತ್ರೀಪಾತ್ರಗಳೂ ಇದ್ದು, ಅವರು ಮಾಡುವ ಕೈವಾಡಗಳು, ನಡೆಸುವ ಒಳಸಂಚುಗಳು, ಮೈಸೂರಿನ ರಾಜಕೀಯದಲ್ಲಿ ಮಹತ್ವ ಪಡೆದುಕೊಳ್ಳುತ್ತವೆ.