ಸ್ನೇಹಿತರೆ,

ಅಸಾಮಾನ್ಯವಾದೊಂದು ಚರ್ಚೆಯನ್ನು ನೀವೆಲ್ಲ ಕೇಳಿದ್ದೀರಿ. ನಾನಿಲ್ಲಿ ಆಶೀಶ್ ಮತ್ತು ನಾಗರಾಜ ಎತ್ತಿದ ಪ್ರಶ್ನೆಗಳ ಬಗ್ಗೆ ಎಷ್ಟೊಂದು ಟಿಪ್ಪಣಿಗಳನ್ನು ಮಾಡಿಕೊಂಡಿದ್ದೇನೆಂದರೆ ಅವುಗಳನ್ನೆಲ್ಲ ಹೇಳಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಅವನ್ನೆಲ್ಲ ಬದಿಗಿಟ್ಟುಕೊಂಡು ನನಗೆ ಸಹಜವಾಗಿ ಹೊಳೆಯುತ್ತ ಹೋಗುವ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುವ ಪ್ರಯತ್ನ ಮಾಡುತ್ತೇನೆ.

ಆಶೀಶ್ ಇತ್ತೀಚೆಗಷ್ಟೆ ರವೀಂದ್ರನಾಥ ಟಾಗೋರ್ ಮತ್ತು ಅವರ ಕಾದಂಬರಿಗಳ ಬಗ್ಗೆ ಅಪರೂಪದ ಒಂದು ಅಧ್ಯಯನವನ್ನು ಪ್ರಕಟಿಸಿದ್ದಾರೆ. ಅಲ್ಲಿಯೂ ಇದೇ ಪ್ರಸ್ತಾಪ ಬರುತ್ತದೆ. ಟಾಗೋರ್ ಮತ್ತು ಗಾಂಧಿ ತುಂಬ ಆತ್ಮೀಯರಾಗಿದ್ದರೂ ಕೆಲವು ಮೂಲಭೂತ ವಿಷಯಗಳ ಬಗ್ಗೆ ಅವರಿಬ್ಬರಲ್ಲಿ ಅಭಿಪ್ರಾಯಭೇದಗಳಿದ್ದವು. ಟಾಗೋರ್ ರಾಷ್ಟ್ರೀಯವಾದವನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಆದರೆ ಗಾಂಧಿ ರಾಷ್ಟ್ರೀಯವಾದದ ಒಂದು ನಿರ್ದಿಷ್ಟ ಮುಖವನ್ನು ಸಮರ್ಥಿಸುತ್ತಿದ್ದರು. ಅವರಿಬ್ಬರ ನಡುವಿನ ಈ ಚರ್ಚೆ ತುಂಬಾ ಮಹತ್ವದ್ದು, ನಮ್ಮ ಇಡೀ ಆಧುನಿಕ ಚಾರಿತ್ರಿಕ ಪ್ರಕ್ರಿಯೆಗಳ ಬಗ್ಗೆಯೇ ಹೊಸಬೆಳಕು ಚೆಲ್ಲುವಂಥದು. ಭಾರತ ಅಂದು ಎದುರಿಸಿದ, ಇಂದೂ ಎದುರಿಸುತ್ತಿರುವ ಈ ಸಮಸ್ಯೆ ಭಾರತಕ್ಕೇ ವಿಶಿಷ್ಟವಾದುದು ಎನ್ನಬಹುದು. ಬೇರೆ ದೇಶಗಳನ್ನು ನೋಡಿ. ಯುರೋಪಿಯನ್ ದೇಶಗಳೆಲ್ಲ ಬಹು ಹಿಂದಿನಿಂದಲೇ ರಾಷ್ಟ್ರಗಳಾಗಿ (Nation – State ಎಂಬ ಅರ್ಥದಲ್ಲಿ) ಬೆಳೆದು ಬಂದಂಥವು. ರಷಿಯಾ, ಚೈನಾಗಳೂ ಕೂಡ ಅವರವರ ಆಧುನಿಕ ಕ್ರಾಂತಿಯ ಹಾಗೂ ಹೊಸ ರಾಜಕೀಯ ವ್ಯವಸ್ಥೆಯ ಸ್ಥಾಪನೆಯ ಎಷ್ಟೋ ಮೊದಲೇ ರಾಷ್ಟ್ರರೂಪದಲ್ಲಿದ್ದವು. ಈ ಎಲ್ಲ ದೇಶಗಳಿಗೂ ರಾಷ್ಟ್ರಗಳಾಗಿಕೊಂಡು ರಾಜಕೀಯ – ಸಾಮಾಜಿಕ – ಆರ್ಥಿಕ ವ್ಯವಸ್ಥೆಗಳಲ್ಲಿ, ವಿಜ್ಞಾನ – ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಅಸಾಧಾರಣ ಪ್ರಗತಿಯನ್ನು ಸಾಧಿಸುತ್ತಿದ್ದ ಕಾಲದಲ್ಲಿ ಪ್ರಾಯಶಃ ಭಾರತವೊಂದೇ ರಾಷ್ಟ್ರರೂಪವನ್ನು ಪಡೆಯಲಾಗದೆ ಉಳಿದುಕೊಂಡ ಪ್ರಮುಖ ದೇಶವಾಗಿತ್ತು. ಆದ್ದರಿಂದ ಅಂದಿನ ಬಹಳಷ್ಟು ಭಾರತೀಯರಿಗೆ ರಾಷ್ಟ್ರವ್ಯವಸ್ಥೆಯ ಕನಸು ಕಾಡುತ್ತಿದ್ದುದು ಆಶ್ಚರ್ಯವೇನಲ್ಲ. ಅಂಥ ಬಯಕೆಯನ್ನು ಗಾಂಧಿ ಅರ್ಥಮಾಡಿಕೊಂಡರು, ಕೆಲಮಟ್ಟಿಗೆ ಒಪ್ಪಿಕೊಂಡರು. ಟಾಗೋರ್‌ಗೆ ಅದು ಸಾಧ್ಯವಾಗಲಿಲ್ಲ. ವಿಶ್ವಪ್ರಜಾತ್ಮಕತೆಯ ಹಂಬಲದ ಅವರಿಗೆ ರಾಷ್ಟ್ರೀಯವಾದ ಕೊಂಚ ಸಂಕುಚಿತ ಆದರ್ಶವೆಂದು ಕಂಡಿರಬೇಕು. ಇದೇ ದ್ವಂದ್ವ ಇಂದು ಬೇರೆ ಬೇರೆ ಮುಖಗಳಲ್ಲಿ ನಮ್ಮನ್ನು ಬಾಧಿಸುತ್ತಿದೆ. ಹೊರಪ್ರಪಂಚವನ್ನು ನೋಡಿ ನಾವು ನಮ್ಮದೂ ಒಂದು ರಾಷ್ಟ್ರವಾಗಬೇಕು, ಬಲಾಢ್ಯ ರಾಷ್ಟ್ರವಾಗಬೇಕು ಎಂದು ಬಯಸುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಬಲಾಢ್ಯ ರಾಷ್ಟ್ರವೆಂದಾಗಬೇಕೆಂದರೆ ಅಣುಬಾಂಬನ್ನು ತಯಾರಿಸಿಕೊಳ್ಳಬೇಕು ಎಂದು ನಮ್ಮದೇ ವಾದದ ತರ್ಕಾತಿರೇಕದ ತೀರ್ಮಾನವನ್ನು ಇನ್ನೊಬ್ಬರು ಮಂಡಿಸಿದಾಗ ಮಾತ್ರ ನಾವು ಬೆಚ್ಚಿಬೀಳುತ್ತೇವೆ; ರಾಷ್ಟ್ರೀಯವಾದವನ್ನು ಸಂಶಯಿಸಲಾರಂಭಿಸುತ್ತೇವೆ. ಆದರೂ ಒಳಗೆಲ್ಲೋ ಅಣ್ವಸ್ತ್ರ ರಹಿತವಾದ ರಾಷ್ಟ್ರಕಲ್ಪನೆಯೊಂದನ್ನು ಉಳಿಸಿಕೊಂಡು ಬೆಳೆಸುತ್ತೇವೆ.

ರಾಷ್ಟ್ರೀಯವಾದ ಬೆಳವಣಿಗೆ ತಂದುಕೊಡುವಂತಹ ವಿಶೇಷ ಸವಲತ್ತುಗಳು ಹೆಚ್ಚಾಗಿ ನಮ್ಮ ವರ್ಗಕ್ಕೇ ಲಭ್ಯವಾಗುವುದರಿಂದ ಅದನ್ನು ನೇರವಾಗಿ ಸಂಪೂರ್ಣವಾಗಿ ವಿರೋಧಿಸುವುದೂ ನಮಗೆ ಕಷ್ಟ. ಆಧುನಿಕ ವಿದ್ಯಾಭ್ಯಾಸ – ಪದವಿ – ಸ್ಥಾನಮಾನಗಳನ್ನು ನಾವೆಲ್ಲ ಪಡೆದುಕೊಂಡದ್ದು ಪರೋಕ್ಷವಾಗಿ ಇದೇ ರಾಷ್ಟ್ರೀಯವಾದದ ಮುಖಾಂತರವಾಗಿ. ಕರ್ನಾಟಕದ ನಾನು, ನಾಗರಾಜ ದಿನಾರ್ಧದಲ್ಲಿ ದೆಹಲಿಗೆ ಹಾರಬಲ್ಲೆವು. ಅಲ್ಲಿ ಇಂಥದೇ ಚರ್ಚೆನಡೆಸಿ ಮರುದಿನ ಅಂಥದೇ ಇನ್ನೊಂದು ಚರ್ಚೆಗೆಂದು ಬೊಂಬಾಯಿಗೋ ಕಲ್ಕತ್ತಾಕ್ಕೋ ಹಾರಬಲ್ಲೆವು. ಆಶೀಶ್ ಕೂಡಾ ಹಾಗೆಯೇ ದೆಹಲಿಯಿಂದ ಇಲ್ಲಿಗೋ ಬೆಂಗಳೂರಿಗೋ ಮದ್ರಾಸಿಗೋ ಹಾರಿಬಲ್ಲರು. ಇಂತ ಎಲ್ಲ ನಮ್ಮ ಸವಲತ್ತು ಸಾಧ್ಯವಾದುದು ಮತ್ತೆ ಅದೇ ರಾಷ್ಟ್ರೀಯವಾದದಿಂದ.

ಇದೇ ರಾಷ್ಟ್ರೀಯವಾದಿ ಪರಿಕಲ್ಪನೆ ಅಸಂಖ್ಯಾತ ಜನಕ್ಕೆ ದುಃಖವನ್ನೂ ದುರಂತವನ್ನೂ ತಂದುಕೊಟ್ಟಿದೆ. ಆಶೀಶ್ ಪ್ರಸ್ತಾಪಿಸಿದಂತೆ ‘ನಮ್ಮ’ ಅಭಿವೃದ್ಧಿಯ ದ್ಯೋತಕಗಳಾದ ಬೃಹತ್ ಅಣೆಕಟ್ಟುಗಳು ಮಿಲಿಯಗಟ್ಟಲೆ ಜನರನ್ನು ಅಸಹಾಯಕತೆಯ ಕಣ್ಣೀರಿನಲ್ಲಿ ಅದ್ದಿವೆ. ಅದಕ್ಕೇನಾದರೂ ಕ್ಷಮೆಯುಂಟೋ? ಇಲ್ಲ. ಅದಕ್ಕಾಗಿ ಅಪರಾಧೀ ಭಾವದಲ್ಲಿ ನಾವು ನರಳುವುದುಂಟೋ? ಉಂಟು. ಆದರೆ ಅದನ್ನು ಸರಿಪಡಿಸಲು ನಾವೇನಾದರೂ ಮಾಡುತ್ತಿದ್ದೇವೆಯೇ? ಏನೂ ಇಲ್ಲ. ಇದೊಂದು ದಿಗಿಲಿನ ಸಂಗತಿ. ಇತಿಹಾಸದುದ್ದಕ್ಕೂ ಪ್ರತಿಯೊಂದು ಮಹತ್ಸಾಧನೆಯ ಹಿಂದೆ, ಪ್ರತಿಯೊಂದು ಪ್ರಗತಿ ಕಾರ್ಯದ ಹಿಂದೆ ದಬ್ಬಾಳಿಕೆ, ಅತಿಕ್ರಮಣ ಹಾಗೂ ಕ್ರೌರ್ಯದ ಕರಾಳ ಮುಖವೊಂದು ಅಡಗಿ ಕೂತಿರುವುದನ್ನು ನಾವು ಮೂಕರಾಗಿ ನೋಡುತ್ತ ಬಂದಿದ್ದೇವೆ. ಒಂದು ತಾಜ್‌ಮಹಲ್, ಒಂದು ಪಿರಮಿಡ್, ಒಂದು ಜಲಾಶಯ, ಒಂದು ಬೃಹತ್ ಕೈಗಾರಿಕೆ – ಇವುಗಳ ಸೌಂದರ್ಯ – ಸಾಹಸ – ಸೌಲಭ್ಯ – ಸುಖಗಳ ಅಡಿಯಲ್ಲೆ ಧಾರಣತೆಯ ಪಾತಳಿಯೂ ಒಂದುಂಟು. ಸಾಮ್ರಾಜ್ಯಗಳನ್ನು ರಾಷ್ಟ್ರಗಳನ್ನು ಕಟ್ಟಿ ನಿಲ್ಲಿಸುವ ಕ್ರಿಯೆಯ ಹಿಂದಿನ ಕತ್ತಲ ಕಥೆಯೂ ಇದೇ ರೀತಿಯದು. ನಾಗರಾಜ್ ಹೇಳಿದ್ದು ಸರಿ. ಈ ಎಲ್ಲ ದುರಂತವನ್ನೂ ಯಾವ ಸಮಾಜಶಾಸ್ತ್ರಜ್ಞನೂ ಪೂರ್ಣವಾಗಿ ಪ್ರತಿಬಿಂಬಿಸಲಾರ. ಅದೇ ಒಬ್ಬ ಕಲಾವಿದ, ಒಬ್ಬ ಅನನುಭವಿ – ಕವಿ ಅದನ್ನು ಆದ್ಯಂತವಾಗಿ ಅಭಿವ್ಯಕ್ತಿಸಬಲ್ಲ. ಈ ಇಡೀ ‘ಪ್ರಗತಿ ಪ್ರಕ್ರಿಯೆ’ಯ ನಿರರ್ಥಕತೆ ಅರ್ಥವಾಗುವುದು ಅವರಿಗೆ ಮಾತ್ರ – ಬ್ರಿಟಿಷ್‌ಸಾಮ್ರಾಜ್ಯದ ವಿಷಯದಲ್ಲಿ ಬ್ಲೇಕನಿಗೆ ಆದಂತೆ, ನಮ್ಮ ಇಂದಿನ ವಿಷಯದಲ್ಲಿ ಪ್ರಾಯಶಃ ಪರಮಹಂಸರಂಥವರಿಗೆ ಅಗಬಹುದಾದಂತೆ.

ನಮ್ಮ ದೊಡ್ಡ ಡ್ಯಾಮುಗಳು ನೆಹರೂರವರಿಗೆ ನವಭಾರತದ ದೇಗುಲಗಳಾಗಿ ಕಂಡುಬಂದರೆ ಬ್ಲೇಕನಿಗೆ ಅವನ ಕಾಲದ ಇಂಗ್ಲೆಂಡಿನ ಕೈಗಾರಿಕೆಗಳು ಸೈತಾನನ ಕೈಗಳಾಗಿ ಕಂಡುಬಂದವು. ಈ ದ್ವಂದ್ವವನ್ನು ನಮ್ಮಂಥವರು ಪರಿಹರಿಸಿಕೊಳ್ಳುವುದಾದರೂ ಹೇಗೆ? ಪಾಶ್ಚಿಮಾತ್ಯ ಪ್ರಭಾವದ ಲಾಭಗಳನ್ನು ಅನುಭವಿಸುತ್ತಲೆ ಇರುವ ನಾವು ಅದರ ಇನ್ನೊಂದು ಮುಖದ ಅಪಾಯಗಳನ್ನು ಎದುರಿಸುವುದಾದರೂ ಹೇಗೆ?

ಪಾಶ್ಚಿಮಾತ್ಯ ಪ್ರಭಾವದ ಲಾಭಗಳು ಎಂದೆನಲ್ಲ – ನಾವೆಲ್ಲ ಅವನ್ನು ಸವಿಯುತ್ತಿರುವವರು ಎಂದೆನಲ್ಲ – ನನ್ನದೆ ಉದಾಹರಣೆ ನೋಡಿ. ನಾನು ಹುಟ್ಟಿದ್ದು, ಬಾಲ್ಯದಲ್ಲಿ ಬೆಳೆದಿದ್ದು ಎಲ್ಲವೂ ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣರ ಕುಟುಂಬವೊಂದರಲ್ಲಿ, ಅಗ್ರಹಾರವೊಂದರಲ್ಲಿ. ಅದರ ಸಂಕುಚಿತ ಪ್ರಪಂಚದಿಂದ ನನಗೆ ಬಿಡುಗಡೆ ದೊರಕಿದ್ದು ಇಂಗ್ಲಿಷ್‌ಶಿಕ್ಷಣದ ಮೂಲಕವಾಗಿ, ಪಶ್ಚಿಮದ ಪ್ರಭಾವದ ಮೂಲಕವಾಗಿ. ಮತ್ತೆ ಆ ಪಶ್ಚಿಮ ಪ್ರಾಚೀನ ಪಶ್ಚಿಮವಲ್ಲ, ಅದು ಆಧುನಿಕ ಪಶ್ಚಿಮ. ಪ್ರಾಚೀನ ಪಶ್ಚಿಮ ಬಹುಶಃ ನಮ್ಮ ಅಗ್ರಹಾರದಂತೆಯೆ ಇತ್ತು. ಆ ಅಗ್ರಹಾರದಲ್ಲಿ ನಮ್ಮಪ್ಪ ನನಗೆ ಒಂದೆಡೆ ಪುರುಷಸೂಕ್ತವನ್ನು ಹೇಳಿಕೊಡುತ್ತಿದ್ದರು, ಇನ್ನೊಂದೆಡೆ ಎಡ್ಮಂಡ್ ಬರ್ಕ್‌‌ನ ‘ಇಂಪೀಚ್‌ಮೆಂಟ್ ಆಫ್ ವಾರನ್ ಹೇಸ್ಟಿಂಗ್ಸ್’ ಭಾಷಣವನ್ನು ಕಂಠಪಾಠ ಮಾಡಲು ಹೇಳುತ್ತಿದ್ದರು. ಅಲ್ಲಿ ನಾನು ನದಿಯ ದಡದಲ್ಲಿ ಕುಳಿತು ಒಂದರ್ಧ ಗಂಟೆ ಕೆಟ್ಟ ಉಚ್ಚಾರಣೆಯಲ್ಲಿ ಬರ್ಕ್‌‌ನ ಇಂಗ್ಲಿಷ್ ಭಾಷಣವನ್ನು ಪಠಿಸುತ್ತಿದ್ದೆ. ಬರ್ಕ್‌‌ನ ಭಾಷಣದಲ್ಲಿ ಆತ ಇಂಗ್ಲಿಷ್‌ರನ್ನು ಕಟುವಾಗಿ ಟೀಕಿಸುವಂಥ ಭಾಗವೊಂದನ್ನು ವಿಶೇಷವಾಗಿ ಎತ್ತಿತೋರಿಸಿ ಅದನ್ನು ಪೂರ್ಣ ಮನನ ಮಾಡಿಕೊಳ್ಳುವಂತೆ ಅಪ್ಪ ನನಗೆ ಒತ್ತಾಯಿಸುತ್ತಿದ್ದರು. ಅಂದರೆ ಯಾವ ಭಾಷಣದ ಮುಖಾಂತರ ನಾನು ಇಂಗ್ಲಿಷ್ ಕಲಿಯಬೇಕೆಂದು ಅಪ್ಪ ಬಯಸುತ್ತಿದ್ದರೊ ಆ ಭಾಷಣದ ಸಾಮ್ರಾಜ್ಯ ಕಟ್ಟಬಲ್ಲ ಇಂಗ್ಲಿಷ್ ಜನರ ವಿರೋಧಿಯಾಗಿತ್ತು.

ನಮ್ಮ ದೇಶದ ಬ್ರಾಹ್ಮಣರಿಗೇನೇ ಇಂಗ್ಲಿಷ್ ಭಾಷೆ ಇಂಥದೊಂದು ದೊಡ್ಡ ಬಿಡುಗಡೆಯ ಮಾರ್ಗವಾಗಿ ಕಂಡಾಗ ನಮ್ಮ ದಲಿತರಿಗೆ ಅದು ಇನ್ನೂ ದೊಡ್ಡ ಶಕ್ತಿಸಾಧನವಾಗಿ ಕಂಡುಬಂದುದರಲ್ಲಿ ಆಶ್ಚರ್ಯವೇನಿಲ್ಲ. ಜೀವಮಾನವಿಡೀ ಕನ್ನಡಕ್ಕಾಗಿ ಹೋರಾಡಿದ ನಮ್ಮ ಕುವೆಂಪುರವರಂಥ ಧೀಮಂತರೆ ತಮ್ಮ ಕೊನೆಯ ದಿನಗಳಲ್ಲಿ ಹೇಳುತ್ತಿದ್ದರು: ದೇವಿ ಸರಸ್ವತಿಯನ್ನು ಹಾಡಿಹೊಗಳಲು ಬಳಸುವಂತಹ ನಮ್ಮ ಎಲ್ಲ ಅಕ್ಷರಗಳ ಜೊತೆಗೆ ಇಂಗ್ಲಿಷ್ ಭಾಷೆಯ ಇಪ್ಪತ್ತಾರು ಅಕ್ಷರಗಳನ್ನೂ ಸೇರಿಸಲು ನಾನು ಬಯಸುತ್ತೇನೆ. ಕಾರಣ, ಇಂಗ್ಲಿಷ್ ಭಾಷೆಯನ್ನು ಕಲಿಯದಿದ್ದ ಪಕ್ಷದಲ್ಲಿ ನಾನು ಇಂದು ಬ್ರಾಹ್ಮಣರ ಮನೆಗಳ ಕೊಟ್ಟಿಗೆ ಸಾರಿಸಿಕೊಂಡೇ ಜೀವನ ಕಳೆಯಬೇಕಾಗುತ್ತಿತ್ತು. ಆಧುನೀಕರಣವನ್ನು ನಾವು ಖಂಡಿಸುತ್ತೇವೇನೋ ನಿಜ, ಆದರೆ ಕುವೆಂಪು ಹೇಳಿದಂತಹ ‘ಅಸ್ತಿತ್ವದ ಸತ್ಯ’ಗಳನ್ನು ನಾವು ನಿರಾಕರಿಸುವುದಾದರೂ ಹೇಗೆ ಸಾಧ್ಯ?

ಅಂದರೆ, ಇಷ್ಟೆಲ್ಲ ದಲಿತರಿಗೆ, ಶೋಷಿತರಿಗೆ ವಿದ್ಯಾಭ್ಯಾಸ ದೊರೆತಿದ್ದು, ಹೊಸ ಪ್ರಜ್ಞೆ ಮೂಡಿದ್ದು, ಆತ್ಮಗೌರವ ಬೆಳೆದದ್ದು, ಬಿಡುಗಡೆ ಸಾಧ್ಯವಾದದ್ದು ಆಧುನಿಕ ಪಶ್ಚಿಮದ ಪ್ರಭಾವದಿಂದ ಮಾತ್ರವೆ? ನಮ್ಮ ಸಮಾಜದ ಒಳಗೆಯೆ ಅಂಥ ಸಾಧ್ಯತೆಗಳು ಇರಲಿಲ್ಲವೆ? – ಎಂಬ ಪ್ರಶ್ನೆಗಳೂ ಏಳಬಹುದು. ಅದು ಸಹಜ. ನಮ್ಮಲ್ಲಿಯೆ ಅಂಥ ಸಾಧ್ಯತೆಗಳಿದ್ದುದೂ ನಿಜ, ಅಂತ ಸಾಧನೆಗಳಾದುದೂ ನಿಜ. ಬಸವಣ್ಣ, ಅಲ್ಲಮ, ತುಕಾರಾಮ, ಕಬೀರ, ನಾನಕ, ಬುದ್ಧ – ಇವರೆಲ್ಲ ತೊಡಗಿದುದೂ ಸಮಾನತೆಯನ್ನು ಸ್ಥಾಪಿಸುವ ಇಂಥ ಪ್ರಯತ್ನಗಳಲ್ಲಿಯೆ. ಬುದ್ಧನಂತೂ ನಮ್ಮ ಪ್ರಪ್ರಥಮ ಕ್ರಾಂತಿಕಾರಿ. ಆದರೆ ಅವರೆಲ್ಲ ಸಾಧಿಸಿದ್ದುದಕ್ಕೂ ಪಾಶ್ಚಿಮಾತ್ಯ ನಾಗರಿಕತೆ ಅದೇ ರೀತಿಯ ತಾತ್ವಿಕ ಹೋರಾಟಕ್ಕೆ ಪೂರಕವಾಗಿ ತನ್ನ ತಾಂತ್ರಿಕ ಶಕ್ತಿಯನ್ನೂ ಬಳಸಿಕೊಂಡಿತು. ತಂತ್ರಜ್ಞಾನದ ಸಹಾಯದಿಂದ ನಾವು ಹೆಚ್ಚು ಹೆಚ್ಚು ವಸ್ತುಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿಸಬಹುದು. ಹೆಚ್ಚು ಹೆಚ್ಚು ಜನರಿಗೆ ಸುಲಭವಾಗಿ ಅವುಗಳನ್ನು ಹಂಚಬಹುದು, ಆ ಮೂಲಕ ಭೌತಿಕಮಟ್ಟದಲ್ಲಿ ಸಮಾನತೆಯನ್ನು ಸಾಧಿಸಬಹುದು. ಹೆಚ್ಚು ಪುಸ್ತಕಗಳು, ಶಾಲೆಗಳು, ಸ್ಲೇಟುಗಳು, ಬೋರ್ಡುಗಳು ಬಂದಂತೆ ಹೆಚ್ಚು ಹೆಚ್ಚು ಜನಸಾಮಾನ್ಯರಿಗೆ ಶಿಕ್ಷಣವೂ ಲಭ್ಯವಾಗುತ್ತ ಬಂದಿತು. ಅಂಥ ಬೆಳವಣಿಗೆ, ಬದಲಾವಣೆ ಸಾಧ್ಯವಾದುದು ಸಮಾನತೆಯ ತಾತ್ವಿಕ ತುಡಿತದಿಂದ ಮಾತ್ರವಲ್ಲ, ಅದಕ್ಕಿಂತಲೂ ಮಿಗಿಲಾಗಿ ಪ್ರಯೋಗಿಕವಾಗಿ ತಂತ್ರಜ್ಞಾನೀಯ ಉತ್ಪಾದನಾಕ್ರಮದಿಂದ. ಇದೆ ತಂತ್ರಜ್ಞಾನದ ಸಹಾಯ ನಮ್ಮ ಸಂತರಿಗೂ ದೊರಕಿದ್ದರೆ ಪಶ್ಚಿಮ ಇಂದು ಸಾಧಿಸಿರುವ ಸಮಾನತೆಯನ್ನು ಅವರೂ ಸಾಧಿಸಿಬಿಡುತ್ತಿದ್ದರು. ಆದರೆ ಆಶೀಶ್ ಹೇಳಿದಂತೆ, ಮಾನವಕುಲದ ಇಂಥ ದೊಡ್ಡ ಕನಸೊಂದನ್ನು ನನಸಾಗಿಸಿದ ಜೊತೆಯಲ್ಲೆ ಆಧುನಿಕ ನಾಗರಿಕತೆ ಕೆಲವು ಭೀಕರ ಅಪಾಯಗಳನ್ನು ತಂದೊಡ್ಡಿರುವುದೂ ಹೌದು. ಇದನ್ನು ಹೇಗೆ ಎದುರಿಸಬಹುದೆಂಬುದೆ ಇಂದು ನಮ್ಮ ಮುಂದಿರುವ ಬಹುದೊಡ್ಡ ಸವಾಲು.

ಚರ್ಚೆಯಲ್ಲಿ ಮೂಡಿಬಂದ ಮತ್ತೊಂದು ಮುಖ್ಯ ಪ್ರಶ್ನೆ: ಭಾರತವನ್ನು ನಾವು ಹೇಗೆ ಗ್ರಹಿಸಬೇಕು – ನಾಗರಿಕತೆಯಾಗಿಯೇ, ಸಮಾಜವಾಗಿಯೇ, ಅಥವಾ ರಾಷ್ಟ್ರವಾಗಿಯೆ? – ಎಂಬುದು. ತಿಲಕರು ಭಾರತವನ್ನು ಕಲ್ಪಿಸಿಕೊಂಡಿದ್ದು ಒಂದು ರಾಷ್ಟ್ರವಾಗಿ. ಭಾರತ ಮೊತ್ತಮೊದಲು ಒಂದು ಸ್ವತಂತ್ರ ಶಕ್ತ ರಾಷ್ಟ್ರವಾಗಬೇಕು (ಅಂದರೆ Nation – State ಆಗಬೇಕು); ಇಲ್ಲಿಯ ಒಳಗಿನ ಸಾಮಾಜಿಕ ಸಮಸ್ಯೆಗಳನ್ನೆಲ್ಲ ಆಮೇಲೆ ಪರಿಹರಿಸಿಕೊಳ್ಳಬಹುದು ಎಂದು ಅವರ ವಾದವಾಗಿತ್ತು. ಅದಕ್ಕೊಂದು ಸ್ವಾರಸ್ಯದ ಉದಾಹರಣೆಯುಂಟು. ಆ ಕಾಲದ ಕೊಲ್ಲಾಪುರದ ಮಹಾರಾಜನಿಗೊಮ್ಮೆ ಸಂಶಯ – ಸಿಟ್ಟು ಬಂದಿತು. ತಾನು ನಿತ್ಯದ ರಾಜವಿಧಿಗಳನ್ನು ನಡೆಸುವಾಗ ಪಕ್ಕದಲ್ಲಿ ನಿಂತು ಮಂತ್ರಪಠಣ ಮಾಡುವ ಬ್ರಾಹ್ಮಣರು ತಾನು ಕ್ಷತ್ರಿಯನೆಂದೂ ಆ ಬ್ರಾಹ್ಮಣ ಅಜ್ಞಾನಿಯೆಂದೂ ಉದ್ದೇಶಪೂರ್ವಕವಾಗಿ ಹೇಳಬೇಕಾದ ಮಂತ್ರಗಳನ್ನು ಬಿಟ್ಟು ಬೇರಾವುದೋ ಸಂಬಂಧವಿಲ್ಲದ ಶ್ಲೋಕಗಳನ್ನು ಪಠಿಸುತ್ತಿದ್ದಾರೆಂದು ಅವನ ಅನುಮಾನವಾಗಿತ್ತು. ಕೋಪಿಸಿಕೊಂಡು ಆತ ನುಡಿದ: ‘ನೋಡಿ, ನಾನು ಮಂತ್ರಪಠಣದ ಗೌರವಕ್ಕೆ ತಕ್ಕ ಯೋಗ್ಯತೆ ಉಳ್ಳಂಥವನು’ (ಅಂದರೆ, ಒಂದು ಅರ್ಥದಲ್ಲಿ ಅಬ್ರಾಹ್ಮಣರ ಚಳವಳಿ ಬ್ರಾಹ್ಮಣ ವಿರೋಧಿಯೇನಾಗಿರಲಿಲ್ಲ; ಬದಲಾಗಿ, ಬ್ರಾಹ್ಮಣರು ತಮ್ಮ ಸವಲತ್ತುಗಳಲ್ಲಿ ಅಬ್ರಾಹ್ಮಣರಾದ ತಮಗೂ ಪಾಲು ನೀಡಬೇಕೆಂದು ಒತ್ತಾಯಿಸುವಂತಹುದಾಗಿತ್ತು.) ಮಹಾರಾಜನ ಮಾತನ್ನು ಆ ಬ್ರಾಹ್ಮಣರು ತಿರಸ್ಕರಿಸಿದರು. ಮಹಾರಾಷ್ಟ್ರದಲ್ಲಿ ಒಂದು ದೊಡ್ಡ ವಿವಾದವೆದ್ದಿತು. ಹಲವು ಪ್ರಮುಖರು ಮಹಾರಾಜನ ಪರವಹಿಸಿದರೆ ತಿಲಕರು ಮಾತ್ರ ತಟಸ್ಥರಾಗುಳಿದರು. ಅವರ ಮೌನವೆ ಅವರು ತಾರತಮ್ಯತೆಯ ಜಾತಿಪದ್ಧತಿಯ ಸಮರ್ಥಕ ಎಂದು ತೋರುತ್ತದೆ ಎಂಬುದಾಗಿ ಕೆಲವರು ಆರೋಪಿಸಿದರು. ನಿಜ, ತಿಲಕರಿಗೆ ಸಮಾನತೆಗಿಂತ ಸ್ವರಾಜ್ಯವೆ ಪ್ರಥಮ ಆದ್ಯತೆಯ ಗುರಿಯಾಗಿತ್ತು. ಅದೆ ಅಬ್ರಾಹ್ಮಣರಿಗೆ ಹಾಗೂ ದಲಿತರಿಗೆ ಮಾತ್ರ ಭಾರತ ದೇಶದ ಸ್ವಾತಂತ್ರ್ಯಕ್ಕಿಂತ ಭಾರತೀಯ ಸಮಾಜದಲ್ಲಿ ಸಮಾನತೆಯ ಸ್ಥಾಪನೆಯೇ ಮುಖ್ಯವಾಗಿತ್ತು. ಭಾರತೀಯ ಸಾಮಾಜಿಕ ವ್ಯವಸ್ಥೆಯ ಕ್ರೌರ್ಯ – ಹಿಂಸೆ – ಶೋಷಣೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದ ಅಂಬೇಡ್ಕರ್ ಹೇಳಿದರು, ‘ಸಾಮಾಜಿಕ ಸಮಾನತೆ ಮೊದಲು, ದೇಶದ ಸ್ವಾತಂತ್ರ್ಯ ತರುವಾಯ.’ ತಿಲಕರು ಭಾರತವನ್ನು ಒಂದು ‘ರಾಷ್ಟ್ರ’ವಾಗಿ ಕಂಡರೆ ಅಂಬೇಡ್ಕರ್ ಅದನ್ನು ಒಂದು ‘ಸಮಾಜ’ವಾಗಿ ಕಂಡರು. ಆದರೆ ಗಾಂಧೀಜಿಯಂತಹ ಮಹಾದ್ರಷ್ಟಾರ ಮಾತ್ರ ಭಾರತವನ್ನು ಒಟ್ಟೊಟ್ಟಿಗೆ ಒಂದು ರಾಷ್ಟ್ರವನ್ನಾಗಿಯೂ ಒಂದು ಸಮಾಜವನ್ನಾಗಿಯೂ ಕಂಡರು. ಆದ್ದರಿಂದಲೇ ಅವರು ಒಂದೆಡೆ ಭಾರತರಾಷ್ಟ್ರವನ್ನು ಪರತಂತ್ರದಿಂದ ಬಿಡುಗಡೆಗೊಳಿಸುವ ಚಳವಳಿಯನ್ನು ನಡೆಸಿದರು, ಇನ್ನೊಂದೆಡೆ ಭಾರತ ಸಮಾಜವನ್ನು ಅದರ ಅನಿಷ್ಟ ಪದ್ಧತಿಗಳಿಂದ ಮುಕ್ತಗೊಳಿಸುವಂತಹ ಹೋರಾಟವನ್ನು ಹೂಡಿದರು. ಅವರು ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಟ್ಟುಗೂಡಿಸಿದರು. ಹಾಗೆಯೇ, ಒಳಗಿನ ಅಸಮಾನತೆಯನ್ನು ತೊಡೆದು ಹಾಕಲೆಂದು ಅದೆ ಭಾರತೀಯರನ್ನು ಒಡೆದರು. ಗಾಂಧೀಜಿಯ ಈ ಮಾದರಿ ಇಂದಿನ ನಮಗೆ ತುಂಬ ಪ್ರಸ್ತುತವಾದುದು ಎಂದು ನನ್ನ ನಂಬಿಕೆ.

ಸದ್ಯದ ಸಾರ್ವತ್ರೀಕರಣದ ಪ್ರಕ್ರಿಯೆಯನ್ನೆ ಹಿನ್ನೆಲೆಯಾಗಿಟ್ಟುಕೊಂಡು ಯೋಚಿಸಿ. ಭಾರತೀಯ ದಲಿತನೊಬ್ಬನನ್ನು ಭಾರತೀಯ ಬ್ರಾಹ್ಮಣನೊಬ್ಬ ಎಷ್ಟು ಶೋಷಿಸಬಲ್ಲನೊ ಐರೋಪ್ಯನೊಬ್ಬ ಅಥವಾ ಅಮೆರಿಕನ್ನನೊಬ್ಬ ಆತನನ್ನು ಅದಕ್ಕಿಂತಲೂ ಘೋರವಾಗಿ ಶೋಷಿಸಬಲ್ಲ. ಈ ಬ್ರಾಹ್ಮಣನಾದರೊ ದಲಿತನ ಪಕ್ಕದಲ್ಲಿ ಬದುಕಿರುವಂಥವನು, ಅವನೊಡನೆ ಒಂದಲ್ಲ ಒಂದು ನೆಲೆಯಲ್ಲಿ ನೇರ ಜೀವಂತ ಸಂಬಂಧವನ್ನುಳ್ಳವನು; ಅವನದು ಮಂತ್ರದ ಶಕ್ತಿ ಮಾತ್ರ. ಅದೆ ಆ ಐರೋಪ್ಯ ಅಥವಾ ಅಮೆರಿಕನ್ ದೂರದಲ್ಲೆಲ್ಲೊ ಕುಳಿತಿರುವವನು, ಭಾರತೀಯ ದಲಿತನೊಡನೆ ಯಾವುದೇ ರೀತಿಯ ನೇರ ಸಂಬಂಧವನ್ನೂ ಹೊಂದಿರದಂಥವನು; ಅವನಾದರೋ ಮಂತ್ರ ಮಾತ್ರಕ್ಕಿಂತ ಬಹುಮಿಗಿಲಾಗಿರುವ ಯಂತ್ರಶಕ್ತಿ, ತಂತ್ರಜ್ಞಾನದ ಶಕ್ತಿ. ಆತ ನಮ್ಮನ್ನು ಸಂಪೂರ್ಣ ದಾಸಾನುದಾಸರನ್ನಾಗಿ ಮಾಡಿಕೊಳ್ಳಬಲ್ಲ. ವರ್ಲ್ಡ್‌‌ಬ್ಯಾಂಕ್, ಐ.ಎಮ್.ಎಫ್‌.ಗಳಂತಹವನ್ನು ನಾವು ಸರಿಯಾಗಿ ನಿಯಂತ್ರಿಸಿಕೊಂಡು ಬಳಸಿಕೊಳ್ಳಬೇಕಾದುದು ಹೊರಗಿನ ಅಪಾಯಗಳನ್ನೂ, ಹಾಗೆಯೇ ಒಳಗಿನ ಅನಿಷ್ಟಗಳನ್ನೂ ಏಕಕಾಲದಲ್ಲಿ ಎದುರಿಸಬಲ್ಲಂತಹ ಒಂದು ಮಾರ್ಗವನ್ನು. ಇದು ತೀರ ದುಸ್ಸಾಧ್ಯವೆಂಬುದೂ ನಿಜ. ಸಮಾಜಶಾಸ್ತ್ರಗಳು ಪ್ರಾಯಶಃ ಇಂಥ ಮಾರ್ಗವನ್ನು ಕಂಡುಕೊಳ್ಳಲಾರವು. ಅದು ಸಾಧ್ಯವಿರುವುದಾದರೆ ಸಮಾಜಿಕ ಕ್ರಿಯೆ – ಹೋರಾಟಗಳಲ್ಲಿ, ಕಾವ್ಯದಲ್ಲಿ, ಕಲೆಯಲ್ಲಿ ಮಾತ್ರ ಎನಿಸುತ್ತದೆ.

ಇಂಥ ಹಿನ್ನೆಲೆಯಲ್ಲಿಯೆ ‘ಕ್ರಿಟಿಕಲ್ ಇನ್‌ಸೈಡರ್’ ಮಾದರಿ ನಮಗೆ ಮುಖ್ಯವಾಗುವುದು. ಹೊರಗಿನ ವೈರಿಗಳನ್ನಷ್ಟೊ…., ತನ್ನ ಸ್ವಂತ ಸಮಾಜದ ಒಳಗಿನ ಹುಳುಕುಗಳ ಸತ್ಯವನ್ನೂ ಅಷ್ಟೇ ಧೀರನಾಗಿ ಎದುರಿಸುವಂತಹ ಇಂಥ ವ್ಯಕ್ತಿತ್ವಕ್ಕೆ ಗಾಂಧೀಜಿ ಒಂದು ಅತ್ಯುತ್ತಮ ಪ್ರತೀಕ. ಯಾರೊ ಒಮ್ಮೆ ‘ಮನು ಧರ್ಮಶಾಸ್ತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಗಾಂಧೀಜಿಯನ್ನು ಕೇಳಿದರಂತೆ. ಅದಕ್ಕೆ ಗಾಂಧೀಜಿ ಉತ್ತರಿಸಿದರು: ‘ಭಾರತದಲ್ಲಿರುವ ಕೆಡುಕು ಪುಸ್ತಕಗಳನ್ನೂ ಅವು ಭಾರತೀಯವೆಂಬ ಕಾರಣಕ್ಕಾಗಿಯೆ ನಾನು ಸಮರ್ಥಿಸಬೇಕೆಂದು ಏಕೆ ನಿರೀಕ್ಷಿಸುತ್ತೀರಿ?’ ಯಾವುದೇ ತಪ್ಪನ್ನು – ಅದನ್ನು ಎಸಗಿದ್ದು ಸಾಮಾನ್ಯನೆ ಇರಲಿ, ಇಲ್ಲ ಮಹಾಋಷಿಯೇ ಇರಲಿ, ಪರದೇಶಿಯನೆ ಇರಲಿ, ಇಲ್ಲ ಭಾರತೀಯನೆ ಇರಲಿ – ತಪ್ಪೆಂದು ಖಂಡಿಸುವುದರಲ್ಲಿ ಗಾಂಧೀಜಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಮತ್ತೆ, ಅವರು ಭಾರತದಲ್ಲಿನ ಅಮಾನವೀಯ ಪದ್ಧತಿಗಳನ್ನು ಖಂಡಿಸಿದ್ದು, ಅವರ ಸ್ವಂತ ಪ್ರಜ್ಞೆಗೇ ಅವು ಹಾಗೆ ಕಂಡವೆಂಬ ಕಾರಣಕ್ಕಾಗಿಯೇ ಹೊರತು ಪಾಶ್ಚಿಮಾತ್ಯರು ಅವುಗಳನ್ನು ಟೀಕಿಸಿದರೆಂಬ ಕಾರಣಕ್ಕಾಗಿಯಲ್ಲ. ಹೀಗೆ ಪರರ ದೃಷ್ಟಿಕೋನದ ದಾಸನಾಗದೆ ತಮ್ಮದೇ ಸಮಾಜದ ವಿಷವಾಸ್ತವಗಳನ್ನು ತಮ್ಮದೇ ಅತ್ಮಸಾಕ್ಷಿಯ ವಿಮರ್ಶೆಗೆ ಒಳಪಡಿಸಿ ಅವುಗಳನ್ನು ಖಂಡಿಸಿದವರು ಗಾಂಧೀಜಿ. ಪ್ರಸ್ತುತ ಸನ್ನಿವೇಶದ ಸವಾಲುಗಳನ್ನು ಎದುರಿಸುವಲ್ಲಿ ಅವರಂತಹ ಕಡು ಸತ್ಯನಿಷ್ಠೆ ನಮಗೆ ಅತ್ಯಗತ್ಯವಾದುದು.

ನಮ್ಮ ‘ದ್ವಿಸಂಸ್ಕೃತೀಯತೆ’ಯ ಬಗ್ಗೆ ಆಶೀಶ್ ಪ್ರಸ್ತಾಪಿಸಿದರಲ್ಲ, ಅದು ತುಂಬ ನಿಜ. ಉದಾಹರಣೆಗೆ ಇಂದಿನ ಭಾರತದ ಅಥವಾ ಕರ್ನಾಟಕದ ಯಾವುದೊ ಪುಟ್ಟ ಪಟ್ಟಣದ ಕಾಲೇಜೊಂದರ ಹುಡುಗ ತನ್ನ ಸಂಸ್ಕೃತಿಯ ಕಾಳಿದಾಸ – ಕುಮಾರವ್ಯಾಸ – ಕುವೆಂಪು ಮೊದಲಾದವರನ್ನು ಕೊಂಚ ಓದುತ್ತಿರುತ್ತಾನೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಶೇಕ್ಸ್‌ಪಿಯರ್‌ನನ್ನೂ ಕೊಂಚ ಓದುತ್ತಿರುತ್ತಾನೆ. ಅದೆ ಅಮೆರಿಕಾ ಅಥವಾ ಇಂಗ್ಲೆಂಡಿನ ಒಬ್ಬ ಕಾಲೇಜು ವಿದ್ಯಾರ್ಥಿ ತನ್ನ ಸಂಸ್ಕೃತಿಯ ಶೇಕ್ಸ್‌ಪಿಯರ್‌ನನ್ನು ಮಾತ್ರ ತಿಳಿದಿರುತ್ತಾನೆ; ಬೇರೆ ಸಂಸ್ಕೃತಿ – ಸಾಹಿತ್ಯಗಳ ಬಗ್ಗೆ ಆತನಿಗೆ ಕೇಳಿಯೂ ಗೊತ್ತಿರುವುದಿಲ್ಲ. ನಮ್ಮ ಕಾಳಿದಾಸನನ್ನು ಆಳವಾಗಿ ಓದಿಕೊಂಡಿರುವಂತಹ ಪಾಶ್ಚಿಮಾತ್ಯರೂ ಇದ್ದಾರೆ. ಆದರೆ ಅಂಥವರು ಕೈಬೆರಳೆಣಿಕೆಯಷ್ಟು ಜನ ಮಾತ್ರ; ಮತ್ತವರು ಇರುವುದೂ ಪುಟ್ಟ ಊರು – ಪಟ್ಟಣಗಳಲ್ಲಿ ಅಥವಾ ಸರ್ವ ಸಾಮಾನ್ಯ ಸಾಮಾಜಿಕ ವಲಯಗಳಲ್ಲಿ ಅಲ್ಲ, ಬದಲಾಗಿ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ‘ಇಂಡಲಜಿ’ ವಿಭಾಗದ ಪ್ರಾಧ್ಯಾಪಕ ಪೀಠಗಳಲ್ಲಿ ಮಾತ್ರ. ಹೀಗಾಗಿ ನಮ್ಮ ದ್ವಿಸಂಸ್ಕೃತೀಯತೆಯೇ ಹೆಚ್ಚು ವ್ಯಾಪಕವಾದುದು, ಸರ್ವ ಸಾಮಾನ್ಯವಾದುದು, ಮಾತ್ರವಲ್ಲ, ಹೆಚ್ಚು ಜೀವಂತವಾದುದು. ಇದರಿಂದ ಒದಗಿರುವ ಲಾಭಗಳೂ ಹಲವಾರುಂಟು. ಉದಾಹರಣೆಯಾಗಿ ನಮ್ಮ ಸದ್ಯದ ವಿಕೇಂದ್ರೀಕರಣದ ಪ್ರಕ್ರಿಯೆಯನ್ನೆ ನೋಡಿ. ಇಲ್ಲಿ ಜನತೆ ಒಂದೆಡೆಯಿಂದ ಆಧುನಿಕ ಪಾಶ್ಚಿಮಾತ್ಯ ರಾಜಕೀಯಾತ್ಮಕ ಅಸ್ತ್ರಗಳನ್ನೂ ಬಳಸಬಹುದು. ಇನ್ನೊಂದೆಡೆಯಿಂದ ತಮ್ಮದೆ ಪರಂಪರೆಯ ಬುದ್ಧ, ಬಸವ, ಕಬೀರ, ಅಲ್ಲಮ, ಗಾಂಧಿಯಂಥವರು ರೂಪಿಸಿಕೊಟ್ಟ ಆಧ್ಯಾತ್ಮಿಕ ಅಸ್ತ್ರಗಳನ್ನೂ ಬಳಸಬಹುದು. ಅಂದರೆ ಇಂಥಲ್ಲಿ ವ್ಯವಸ್ಥೆಯ ಪರಿವರ್ತನೆಯೂ ಮನಃಪರಿವರ್ತನೆಯೂ ಒಟ್ಟೊಟ್ಟಿಗೆ ಸಾಗಬಹುದು; ಅಂತರಂಗ – ಬಹಿರಂಗಗಳೆರಡರ ಶುದ್ಧಿ ಸಾಧನೆಗಳೂ ಒಟ್ಟೊಟ್ಟಿಗೆ ನಡೆಯಬಹುದು.

ಇಂದಿನ ಸಾರ್ವತ್ರೀಕರಣದ ಹಿನ್ನೆಲೆಯಲ್ಲಿ ನಾವು ಹೀಗೆ ನಮ್ಮ ಸ್ವಂತ ಸಂಸ್ಕೃತಿಗಳ ಸತ್ವ – ಶಕ್ತಿಗಳನ್ನು ಪುನಃಶೋಧಿಸಿಕೊಳ್ಳುವುದು ಅತಿ ಮುಖ್ಯ. ಜಾಗತೀಕರಣದ ಪ್ರಕ್ರಿಯೆಯ ಮೂಲಕ ಜಗತ್ತೆಲ್ಲ ಒಂದು ದೊಡ್ಡ ಬಿಚ್ಚುಬೋಳುಬಯಲಾಗಿಬಿಡುವ ಅಪಾಯವಿದೆಯಲ್ಲ, ಅಂಥಲ್ಲಿ ನಮಗೆ ಬಚ್ಚಿಟ್ಟುಕೊಳ್ಳಲು ಕೆಲವು ಗುಪ್ತ ತಾಣಗಳೂ ಬೇಕು. ಇಲ್ಲದಿದ್ದಲ್ಲಿ ನಮ್ಮದೆಂಬುದು ಏನೂ ಉಳಿಯುವುದಿಲ್ಲ. ಆಗ ನಮ್ಮ ನಮ್ಮ ವೈವಿಧ್ಯ – ವೈಶಿಷ್ಟ್ಯಗಳನ್ನೆಲ್ಲ ಕಳೆದುಕೊಂಡು ಏಕರೂಪದ ಒಂದು ಜಗತ್ತಿನಲ್ಲಿ ನಾವು ಮುಖರಹಿತವಾಗಿ ಬಾಳಬೇಕಾದ ದುಸ್ಥಿತಿಗೆ ಇಳಿದುಬಿಡುತ್ತೇವೆ. ನಮ್ಮ ದೇಶಭಾಷೆಗಳು ಅಂಥ ಅಪಾಯದಿಂದ ನಮ್ಮನ್ನು ಉಳಿಸಿಕೊಡುವ ಅಡಗುಗೂಡುಗಳು ಎಂದು ನನ್ನ ದೃಢ ನಂಬಿಕೆ. ಕನ್ನಡ, ಬಂಗಾಳಿ, ತುಳು, ಕೊಂಕಣಿ, ಮರಾಠಿ ಇತ್ಯಾದಿಯೆಲ್ಲ ಇಂಥ ರಕ್ಷಣಾತಾಣಗಳು. ಈ ನಮ್ಮ ನೆಲದ ಭಾಷೆಗಳಲ್ಲೆ ನಾವು ನಮ್ಮ ಅತ್ಯಂತ ಆಳದ ಅನುಭವ – ಭಾವನೆ – ಚಿಂತನೆಗಳನ್ನು ಹುದುಗಿಸಿ ಬಿಟ್ಟಿದ್ದೇವೆ. ಇದು ಮೂರನೆಯ ಜಗತ್ತಿನ ಇತರ ರಾಷ್ಟ್ರಗಳ ಬಗ್ಗೆಯೂ ಅಷ್ಟೆ ನಿಜ. ನಮ್ಮ ಸಮಕಾಲೀನ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ಕೃಷ್ಟ ಕೃತಿಗಳು ಸೃಷ್ಟಿಯಾಗುತ್ತಿರುವುದು ಅಮೆರಿಕಾದಲ್ಲೊ, ಆಫ್ರಿಕಾದಲ್ಲಿ, ಏಷಿಯಾದಲ್ಲಿ; ಇಂಗ್ಲಿಷಿನಲ್ಲಿ ಅಲ್ಲ, ದೇಶೀಯ ಭಾಷೆಗಳಲ್ಲಿ. ಈ ರೀತಿ, ಜಾಗತಿಕ ಏಕರೂಪೀಕರಣದ ವಿರುದ್ಧ ಹೋರಾಡುವುದರಲ್ಲಿ ನಮ್ಮ ನಮ್ಮ ಭಾಷೆ – ಕಲೆ – ಸಾಹಿತ್ಯಗಳೂ ಬಹುಶಕ್ತ ಸಾಧನಗಳಾಗುವುದು ಸಾಧ್ಯ. ಹೊಸ ಸಂವೇದನೆ – ಪ್ರಜ್ಞೆಗಳನ್ನು ಸೃಜಿಸಿಕೊಡುವುದು ಸಾಧ್ಯ.

ದೇಶೀಯ ಭಾಷೆ – ಕಲೆ – ಸಾಹಿತ್ಯಗಳ ಈ ವಿಷಯಕ್ಕೂ ನಮ್ಮ ದಿನನಿತ್ಯದ ಸಾಮಾಜಿಕ – ರಾಜಕೀಯ – ಆರ್ಥಿಕ ಜೀವನಕ್ಕೂ ಪರೋಕ್ಷವಾದ, ಆದರೆ ಅನ್ಯೋನ್ಯವಾದ ಸಂಬಂಧವೊಂದುಂಟು. ಈ ಸಂಬಂಧ ಮೂಲತಃ ವಿಕೇಂದ್ರೀಕರಣದ ಆದರ್ಶವನ್ನು ಅವಲಂಬಿಸಿರುವಂಥದದ್ದು. ಯಾವುದೇ ಸಾಮಾನ್ಯ ಪ್ರಜೆಯಾದರೂ ಈ ದೇಶದ ಪ್ರಧಾನಿಯಾಗುವಂತಹ ಅವಕಾಶವಿದ್ದಲ್ಲಿ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆ ತನ್ನ ಪರಮೋಚ್ಛ ಸ್ಥಿತಿಯನ್ನು ಮುಟ್ಟಬಲ್ಲದು. ಇಲ್ಲಿ ಇಂಗ್ಲಿಷ್‌ಕಲಿಯದ, ಕಪ್ಪು ಚರ್ಮದ ಕಾಮರಾಜ ನಾಡಾರ್‌ನಂತಹ ಸರಳ – ಸಾಮಾನ್ಯ ವ್ಯಕ್ತಿಯೂ ಕೂಡ ನಾಡಿನ ಅತ್ಯುನ್ನತ ನಾಯಕನಾಗುವುದು ಸಾಧ್ಯವಾಗಬೇಕು. ವರ್ಚಸ್ಸಿನ ವ್ಯಕ್ತಿಗಳು ಸಾಹಿತ್ಯ – ಸಂಗೀತ – ಚಲನಚಿತ್ರ ಕ್ಷೇತ್ರಗಳಲ್ಲಿ ಬೇಕಾಗಬಹುದು; ಆದರೆ ರಾಜಕಾರಣದಲ್ಲಿ ಅಂಥವರು ಅನವಶ್ಯಕ ಹಾಗೂ ಅಪಾಯಕಾರಿ ಕೂಡ. ವ್ಯಕ್ತಿ – ಆರಾಧನೆ ಪ್ರಜಾತಂತ್ರಕ್ಕೆ ತದ್ವಿರುದ್ಧವಾದುದು, ಪ್ರಜಾತಂತ್ರವನ್ನು ಬುಡದ ಒಳಗಿನಿಂದಲೆ ಕೊರೆದು ಬೀಳುವಂಥದು; ಅತಿಮಾನುಷ ವರ್ಚಸ್ಸಿನ ವ್ಯಕ್ತಿಗಳ ಕೈಗೆ ಅತಿಶಯ ಅಧಿಕಾರವನ್ನು ಕೊಟ್ಟು ವಿಕೇಂದ್ರೀಕರಣದ ಕಲ್ಪನೆಯನ್ನೆ ಕೊಲ್ಲುವಂಥದು. ಇಂದು ನಮ್ಮ ದೇಶದಲ್ಲಿ, ನಮ್ಮ ಕೆಲವು ರಾಜ್ಯಗಳಲ್ಲಿ ಕೆಲವು ರಾಜಕೀಯ ನಾಯಕರು ಪಡೆದುಕೊಳ್ಳುತ್ತಿರುವ ಅಕಾರಣ ಅತಿಪ್ರಾಮುಖ್ಯತೆಯನ್ನು ಇದೇ ಕಾರಣಕ್ಕಾಗಿ, ನಾವು ವಿರೋಧಿಸಬೇಕು. ಅದು ‘ಆರಾಧನೆ’ಯ ‘ಭಕ್ತಿ’ಯ ಒಂದು ರೂಪ ಎಂದು ಯಾರಾದರೂ ಅಸಂಬಂಧವಾಗಿ ವಾದಿಸಬಂದಲ್ಲಿ ಆಗ ಆರಾಧನೆ – ಭಕ್ತಿಗಳ ಭಾವವನ್ನೇ ನಾವು ತಿರಸ್ಕರಿಸಬೇಕು. ನಮ್ಮ ಬಗ್ಗೆಯೇ ನಾವು ಅಂಥ ವಿವೇಚನೆಯ ಎಚ್ಚರವನ್ನು ಕಾಪಾಡಿಕೊಂಡಲ್ಲಿ ಮಾತ್ರ ಹೊರಗಿನ ಅಪಾಯಗಳಿಗೂ ನಾವು ಎಚ್ಚರಾಗಿರಬಹುದು, ಸ್ವತಂತ್ರ ವ್ಯಕ್ತಿತ್ವದ ಸಮುದಾಯವಾಗಿ ಬೆಳೆಯಬಹುದು.

ಆಶೀಶ್ ಮತ್ತು ನಾಗರಾಜ್ ಅದ್ಭುತವಾದೊಂದು ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ಅವರಿಬ್ಬರಿಗೂ ಧನ್ಯವಾದಗಳು. ಅವರ ಚಿಂತನೆ ಮತ್ತು ಮಾತುಗಳಲ್ಲಿ ಸಂಪೂರ್ಣ ಮುಳುಗಿಹೋದ ನನಗೆ ಸಹಜವಾಗಿಯೇ ವ್ಯವಸ್ಥಿತವಾಗಿ ಏನೂ ಮಾತನಾಡಲೂ ಕಷ್ಟ ಎಂದು ಅನ್ನಿಸಿದ್ದರಿಂದ ಇಲ್ಲಿ ಹೀಗೆಯೆ ಮನಸ್ಸಿನಲ್ಲಿ ಮಿಂಚಿಬಂದ ಕೆಲವು ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾತ್ರ ಮಾಡಿದ್ದೇನೆ.

ಅಂತಿಮವಾಗಿ, ನನ್ನ ಸ್ವಂತ ಅನುಭವದ ಒಂದು ಮಾತು ಆಶೀಶ್‌ರ ಪ್ರತ್ಯಕ್ಷ ಪರಿಚಯ ನನಗಾದದ್ದು ಇತ್ತೀಚೆಗೆ. ಅದರ ಮೊದಲು ಅವರ ಕೆಲವು ಪುಸ್ತಕಗಳನ್ನು ಓದಿ ತುಂಬ ಮೆಚ್ಚಿಕೊಂಡಿದ್ದೆ. ಸುಮಾರು ವರ್ಷಗಳ ಹಿಂದೆ ಅಮೆರಿಕಾದ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ನಾನು ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯ ವಿದ್ಯಾರ್ಥಿಗಳಿಗೆ ಆಶೀಶ್‌ರ ಬರಹಗಳನ್ನು ಪಾಠಮಾಡುವ ಅವಕಾಶ ನನಗೆ ಒದಗಿ ಬಂದಿತ್ತು. ಆ ನನ್ನ ಅಮೆರಿಕನ್ ಮಿತ್ರರಿಗೆ ಆಶೀಶ್‌ರ ಚಿಂತನೆಗಳ ಶ್ರೇಷ್ಠತೆ ಮೊದಮೊದಲು ಅರ್ಥವೇ ಅಗಲಿಲ್ಲ. ‘ಇಂದೆಂಥ ಆಲೋಚನೆ, ಇದೆಂಥ ಬರವಣಿಗೆ ಇದಕ್ಕೊಂದು ಕೇಂದ್ರವಾದವೆ ಇಲ್ಲವಲ್ಲ. ಎಲ್ಲ ಹರಡಿ ಚೆಲ್ಲಿದಂತಿದೆಯಲ್ಲ’ ಎನ್ನುತ್ತಿದ್ದರು ಅವರು. ಭಾರತೀಯನೊಬ್ಬ ಅಮೆರಿಕನ್ ಚಿಂತಕರ ಮಟ್ಟಕ್ಕೆ ಎಂದೂ ಏರಲಾರ ಎಂಬ ಪೂರ್ವಗ್ರಹವೂ ಅವರ ಮನದಾಳದಲ್ಲಿ ಇದ್ದಿತೇನೋ. ಆದರೆ ನಾನು ಛಲಹಿಡಿದು ಆಶೀಶರ ಮಹತ್ವವನ್ನು ಅವರಿಗೆ ಮನಗಾಣಿಸಿದೆ ಎಂದುಕೊಂಡಿದ್ದೇನೆ. ಮುಂದೆ ನಾನು ಕೆಲಸ ಮಾಡಿದ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲೆಲ್ಲ ಅವರ ಪುಸ್ತಕಗಳನ್ನು ಪಠ್ಯಗಳನ್ನಾಗಿ ಓದಿಸಿದೆ, ಕಲಿಸಿದೆ. ನೀವೂ ಅವರನ್ನು ಓದಬೇಕು. ತುಂಬ ಧೀಮಂತ ಚೇತನ ಅವರದು. ನಮ್ಮ ದುರಂತ ಸ್ಥಿತಿಯೆಂದರೆ ನಾವು ಭಾರತೀಯರು ಯಾರ‍್ಯಾರೋ ಎರಡನೆಯ ಮೂರನೆಯ ದರ್ಜೆಯ ಪಾಶ್ಚಿಮಾತ್ಯ ಚಿಂತಕರನ್ನು ಕೊಂಡಾಡುತ್ತೇವೆ, ಉದ್ಧರಿಸುತ್ತೇವೆ. ಅದೆ ನಮ್ಮ ನಡುವೆಯೆ ಇರುವ ಶ್ರೇಷ್ಠ ದರ್ಜೆಯ ಭಾರತೀಯ ಚಿಂತಕರತ್ತ ಕಣ್ಣೂ ಹಾಯಿಸುವುದಿಲ್ಲ. ಆಶೀಶ್ ಆಗಲಿ, ನಾಗರಾಜ್ ಅಗಲಿ ನಮ್ಮ ಪರಂಪರೆ – ಸಂಸ್ಕೃತಿಗಳಿಗೆ ಶೋಭೆಯನ್ನು ತರುವಂಥವರು. ಅಂಥವರನ್ನು, ಅಂಥವರ ಚಿಂತನೆಗಳನ್ನು ಕಣ್ಣುಬಿಟ್ಟು ಕಂಡು ತಿಳಿದಾಗ ಮಾತ್ರ ನಮ್ಮ ಪರಾವಲಂಬನೆಯ ದೌರ್ಬಲ್ಯವನ್ನು ನೀಗಿಸಿಕೊಳ್ಳಬಹುದು. ಆಗ ಮಾತ್ರ ದೇಶೀಯ ದರ್ಶನಗಳನ್ನು ಆಧರಿಸಿಕೊಂಡು, ಆತ್ಮಗೌರವದ ಸತ್ವ ಹೊಂದಿದ ಪರ್ಯಾಯ ನಾಗರಿಕತೆಯ ರೂಪವೊಂದನ್ನು ಸೃಷ್ಟಿಸಿಕೊಳ್ಳುವ ನಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.

ಧನ್ಯವಾದಗಳು.

—-
೧೯೯೪ರ ಫೆಬ್ರವರಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಶ್ರಯದಲ್ಲಿ ನಡೆದ ಚರ್ಚೆಯಲ್ಲಿ ಆಶೀಶ್ ನಂದಿ ಮತ್ತು ಡಿ.ಆರ್.ನಾಗರಾಜ್ ಆಡಿದ ಮಾತುಗಳಿಗೆ ಅಧ್ಯಕ್ಷನಾಗಿ ನನ್ನ ಸ್ಪಂದನ ಇಲ್ಲಿದೆ. ಚರ್ಚೆಯ ವಿವರಗಳಿಗೆ ನೋಡಿ: ಮಾತುಕತೆ, ನೀನಾಸಮ್, ೩೫.

ಕೃಪೆ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ಡಾ| ನಿ. ಮುರಾರಿ ಬಲ್ಲಾಳ. ಸಂಗ್ರಹಾನುವಾದ: ಜಶವಂತ ಜಾಧವ್.