ಮುಕ್ತ ಚಿಂತನೆ ಸಾಧ್ಯವಾಗುವುದು ನಾವು ಮತಧರ್ಮಗಳನ್ನು ವಿಮರ್ಶತ್ಮಕವಾಗಿ ನೋಡಿದಾಗ ಎಂದು ಮಾರ್ಕ್ಸ್ ಹೇಳುತ್ತಾನೆ. ಅವನು ಹೇಳುವುದು ಸರಿ. ಆದರೆ ಅವನ ಮಾತನ್ನು ಮುಂದುವರಿಸಿ ವಿಜ್ಞಾನವನ್ನೂ ಅದರಲ್ಲಿ ಸೇರಿಸಿಕೊಳ್ಳಬೇಕು. ಯಾಕೆಂದರೆ ಮತಧರ್ಮಗಳನ್ನು ಆವರಿಸಿಕೊಂಡಿರುವ ಗೌಪ್ಯವನ್ನು ಬಯಲುಗೊಳಿಸುವುದು ಚಿಂತನಶೀಲತೆಗೇ ಅಗತ್ಯವಾಗಿರುವಂತ ವಿಜ್ಞಾನವನ್ನು ಆವರಿಸಿರುವ ರಹಸ್ಯ ಮಯತೆಯನ್ನು ಭೇದಿಸಿದ ಹೊರತು ಸಮಾಜವಾದದ ಕಲ್ಪನೆ ಕೂಡ ಸಾಧ್ಯವಾಗಲಾರದು.

ಈ ಅರ್ಥ ಹುಟ್ಟುವಂತೆ ಫ್ರಾನ್ಸಿನ ದಾರ್ಶನಿಕ ತತ್ವಜ್ಞಾನಿ ಸಿಮೋನ್ ಮೇಲ್ ಹೇಳಿದ ಮಾತುಗಳನ್ನು ನನ್ನ ಮಾತಿನಲ್ಲಿ ವಿವರಿಸಿಕೊಂಡಿದ್ದೇನೆ. ವಿಜ್ಞಾನ ಎಂದ ಮೇಲೆ ಟೆಕ್ನಾಲಜಿ, ಅಭಿವೃದ್ಧಿ, ಪ್ರಗತಿ – ಇತ್ಯಾದಿಯಾಗಿ ವಿಜ್ಞಾನದ ಫಲವಾಗಿ ಹುಟ್ಟಿಕೊಂಡ ಕಲ್ಪನೆಗಳನ್ನೂ ನಾವು ಪ್ರಶ್ನಿಸಿ ನೋಡಬೇಕಾಗುತ್ತದೆ. ಲೆನಿನ್ ಆಗಲೀ ಅವರ ಉತ್ತರಾಧಿಕಾರಿಗಳಾಗಲೀ ವಿಜ್ಞಾನದ ಸರ್ವಜ್ಞತೆಯನ್ನು ಪ್ರಶ್ನಿಸಲು ಹೋಗಲಿಲ್ಲ. ತಮ್ಮನ್ನು ವೈಜ್ಞಾನಿಕ ಸಮಾಜವಾದಿಗಳು ಎಂದು ತಿಳಿದಿದ್ದ ಅವರು ಸಮಾಜವಾದಿಯೆಂದು ತಾವು ತಿಳಿದಿದ್ದ ವ್ಯವಸ್ಥೆ ತಮ್ಮ ಕಣ್ಣೆದುರೇ ಕುಸಿಯುವುದನ್ನು ಕಾಣಬೇಕಾಯಿತು. ಗೊರ್ಬಚೇವ್ ಕಾಲದಲ್ಲಿ ಸೋವಿಯತ್ ಯೂನಿಯನ್ನಿನ ಕೇಂದ್ರ ನಗರವಾಗಿ ಮಾಸ್ಕೊ ಪ್ರವಾಸ ಕುರಿತಂತೆ ನಾನು ಬರೆದಿಕೊಂಡಿರುವ ಅನುಭವ ಸಿಮೋನ್ ವೇಲ್‌ನ ಮಾತಿನ ಸುತ್ತ ನಡೆಸಿದ ಒಂದು ಧ್ಯಾನವಾಗಿದೆ.

* * *

ಅಕ್ಟೋಬರ್ ತಿಂಗಳಲ್ಲಿ ಮಸ್ಕೊ ವಿಮಾನ ನಿಲ್ದಾಣದಲ್ಲಿ ಇಳಿದದ್ದೇ ನಾನು ಕಂಡ ಟ್ರಾಲಿಗಳು ಎಲ್ಲ ನಿಲ್ದಾಣಗಳಲ್ಲಿ ಸಿಗುವಂತೆ ಪುಕ್ಕಟೆಯೆಂದು ನಾನು ಭಾವಿಸಿದ್ದು ತಪ್ಪಾಯಿತು. ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಅವುಗಳಿಗಾಗಿ ಧಾವಿಸಿದವರ ಪಾಲಾಗಿ ಕೊನೆಗೆ ಒಂದೇ ಒಂದು ಟ್ರಾಲಿ ಉಳಿಯಿತು. ನೀಲಿ ಜೀನ್ಸ್ ತೊಟ್ಟ ಯುವಕನೊಬ್ಬ ಈ ಟ್ರಾಲಿಯ ಪಕ್ಕದಲ್ಲಿ ಎಲ್ಲಿಂದಲೋ ಪ್ರತ್ಯಕ್ಷನಾಗಿದ್ದ. ಅವನಿಗೆ ಅದು ಬೇಕೆನ್ನಿಸುವಂತೆ ಕಾಣದ್ದರಿಂದ ‘ಕ್ಷಮಿಸಿ’ ಎಂದು ನಾನು ಅದನ್ನು ಹಿಡಿಯಲು ಹೋದೆ. ಅವನು ನನಗೊಂದು ತನ್ನ ಬೆರಳನ್ನು ತೋರಿಸಿ ‘ಡಾಲರ್‌’ ಎಂದ. ‘ರೂಬಲ್’ ಎಂದು ನಾನು ಪ್ರಶ್ನಿಸಿದೆ. ಅವನು ತಲೆಯಲ್ಲಾಡಿಸಿ ‘ಡಾಲರ್’ ಎಂದ. ಅವನು ಕಾನೂನುಬಾಹಿರವಾದ್ದನ್ನು ಮಾಡುತ್ತಿದ್ದಾನೆ ಎಂದು ಅನುಮಾನವಾದರೂ ಒಂದು ಡಾಲರ್ ನ್ನು ಅವನು ಒಡ್ಡಿದ ಕೈಗೆ ರವಾನಿಸಿ ಅವನಿಂದ ಟ್ರಾಲಿ ಪಡೆದೆ.

ಆಮೇಲೆ ಅವನ ಹಾಗಿನ ಎಷ್ಟೋ ಯುವಕರನ್ನು ನಾನು ಅನುಭವಿಸಬೇಕಾಯಿತು. ಡಾಲರ್ನಲ್ಲಿ ಪಾವ್ತಿ ಮಾಡದ ಹೊರತು ಟ್ಯಾಕ್ಸಿಗಳು ಬರುವುದಿಲ್ಲ ಎಂಬುದು ಮನದಟ್ಟವಾಯಿತು. ಅಥವಾ ಯಾವನೋ ಒಬ್ಬ ತನ್ನ ಸ್ವಂತದ ಕಾರನ್ನು ಓಡಿಸುತ್ತಿರುತ್ತಾನೆ ಎನ್ನಿ; ನೀವು ಟ್ಯಾಕ್ಸಿಗಾಗಿ ಕಾಯುತ್ತಿದ್ದೀರೆಂದು ಊಹಿಸಿ ನಿಲ್ಲುತ್ತಾನೆ. ಡಾಲರ್ ನಲ್ಲಿ ಬಾಡಿಗೆ ಕೊಡುವಂತಿದ್ದರೆ ಬೇಕಾದಲ್ಲಿಗೆ ನಿಮ್ಮನ್ನು ಕೊಂಡೊಯ್ಯುತ್ತಾನೆ. ರೂಬಲ್‌ನಲ್ಲಿ ಕೊಡುವುದು ಮಾತ್ರ ನಿಮಗೆ ಸಾಧ್ಯವಾದರೆ ಬಾಡಿಗೆ ಹತ್ತರಷ್ಟು ಹೆಚ್ಚಾಗುತ್ತದೆ. ರಷ್ಯನ್ ಮಾತಾಡಬಲ್ಲ ನನ್ನ ಕನ್ನಡದ ಸ್ನೇಹಿತರನ್ನೂ, ನನ್ನನ್ನೂ ಹೀಗೆ ಕೊಂಡೊಯ್ಯುತ್ತಿದ್ದ ಒಬ್ಬನನ್ನು ಪೊಲೀಸನೊಬ್ಬ ನಿಲ್ಲುವಂತೆ ಸಂಜ್ಞೆಮಾಡಿದ. ಪಾಪ್ ಸಂಗೀತ ಕಿರುಚುತ್ತಿದ್ದ ತನ್ನ ಕಾರಿನ ಸ್ಟೀರಿಯೋನನ್ನು ಸ್ವಿಚಾಫ್‌ಮಾಡಿ ಅವನು “ಪೊಲೀಸ್ ನಿಮ್ಮನ್ನು ಕೇಳಿದರೆ ನಾನು ನಿಮ್ಮ ಗೆಳೆಯ ಎನ್ನಿ. ಪುಕ್ಕಟೆ ಕರೆದುಕೊಂಡು ಹೋಗುತ್ತಿದ್ದಾನೆ ಎನ್ನಿ” ಎಂದ. ಅವನಿಗೆ ಪೊಲೀಸ್ ಎಗ್ಗಿರಲಿಲ್ಲ.

ಖಾಸಗಿ ಉದ್ಯಮಶೀಲರಾದ ಯುವಕರೂ ಇದ್ದಾರೆ. ನನ್ನ ಗೆಳೆಯರೊಬ್ಬರ ಮನೆಗೆ ನಲ್ಲಿ ರಿಪೇರಿ ಮಾಡಲು ಬಂದ ಇಬ್ಬರನ್ನು ಕಂಡು ಮಾತಾಡಿದೆ. ಪೆರಿಸ್ಟ್ರೋಯಿಕಾ, ಗ್ಲಾಸ್‌ನಾಟ್ ಶಬ್ದಗಳಿಗೆ ಅವರಿಗೆ ತಿಳಿದಿದ್ದ ಅರ್ಥ ಉಳಿದ ಐರೋಪ್ಯರಂತೆ ಗ್ರಾಹಕ ಸ್ವರ್ಗಕ್ಕೇರುವುದು. ಸುಮಾರು ಮುವ್ವತ್ತು ವಯಸ್ಸಿನ ಒಳಗಿನ ಈ ಯುವಜನರು ಯಾರೂ ಸಮಾಜವಾದದಿಂದ ತಲೆಕೆಡಿಸಿಕೊಂಡಿರಲಿಲ್ಲ. ತಮ್ಮ ದೇಶ ಒಂದು ಪರ್ಯಾಯ ವ್ಯವಸ್ಥೆಗಾಗಿ ಹೆಣಗಾಡಿದೆಯೊ ಎಂಬುದು ಅವರನ್ನು ಬಾಧಿಸಿರಲಿಲ್ಲ. ಅನುಕರಣಶೀಲರಾದ ದ್ವಿತೀಯ ದರ್ಜೆಯ ಯುರೋಪಿಯನ್ನರಾಗುವುದು ಮಾತ್ರ ಅವರ ಗುರಿಯಂಬಂತೆ ಕಂಡಿತು.

ಹೇಗಾದರೂ ದುಡ್ಡು ಮಾಡಿ ತಮಗೆ ಬೇಕಾದ್ದನ್ನೆಲ್ಲ ಉಪಭೋಗಿಸಬೇಕೆಂಬುದು ಮಾತ್ರ ಅವರ ಆಸೆಯಾಗಿತ್ತು. ಒಂದು ರೂಬಲ್ ಮತ್ತು ಒಂದು ಡಾಲರ್ ಸರ್ಕಾರದ ದೃಷ್ಟಿಯಿಂದ ಒಂದೇ ಮೌಲ್ಯದವು; ರೂಬಲ್ ಕೊಂಚ ಹೆಚ್ಚೇ ಎನ್ನಬಹುದು. ಆದರೆ ಬೀದಿ ಸತ್ಯ ಬೇರೆ. ಒಂದು ಡಾಲರ್ ಗೆ ಹತ್ತು ರೂಬಲ್ ಬೆಲೆಯಿತ್ತು. ನನ್ನ ಗೆಳೆಯ ಹೇಳಿದ: ಅವನ ನೆರೆಮನೆಯವನು ಒಳ್ಳೆ ಸಂಬಳದ ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಈಗ ಶ್ರೀಮಂತನಾಗಿದ್ದಾನೆ. ಈಗ ಅವನ ಕೆಲಸ ಕಣ್ಣು ಕಿವಿಗಳನ್ನು ತೆರೆದುಕೊಂಡು ಹೋಟೆಲ್‌ಗಳಲ್ಲಿ, ಏರ‍್ಪೋರ್ಟ್‌‌ಗಳಲ್ಲಿ ಡಾಲರ್ ಗಾಗಿ ಸುಮ್ಮನೆ ಆರಾಮಾಗಿ ಅಡ್ಡಾಡುತ್ತ ಇರುವುದು. ವಿದೇಶೀಯರ ಜೊತೆ ಚೆನ್ನಾಗಿ ಮಾತನಾಡಿ, ಸ್ನೇಹಗಿಟ್ಟಿಸಿ ಡಾಲರ್ ಪಡೆಯುವುದು. ಕೊಳ್ಳುವಾಗ ಐದು ರೂಬಲ್, ಮಾರುವಾಗ ಹತ್ತು ರೂಬಲ್.

ಮಾರ್ಕ್ಸ್ ಹೇಳಿದ್ದ: ಮನುಷ್ಯನ ಪ್ರಜ್ಞೆ ಸರ್ವತಂತ್ರ ಸ್ವತಂತ್ರವಲ್ಲ, ಅದು ಸಾಮಾಜಿಕ ಸಂಬಂಧಗಳಿಂದ ಉಂಟಾದದ್ದು. ರಷ್ಯಾದಲ್ಲಿ ಖಾಸಗಿ ಬಂಡಾವಳವನ್ನು ರದ್ದುಗೊಳಿಸಿದ ನಂತರವೂ, ಆದರೆ ಶೋಷಣಾತ್ಮಕವಾದ ಎಲ್ಲ ಸಂಬಂಧಗಳನ್ನು ಕೊನೆಗೊಳಿಸಿದ ನಂತರವೂ – ಈ ಯುವಕರಲ್ಲಿ ನಾನು ಕಂಡ ಬಗೆಯ ಮನಸ್ಸು ಹೇಗೆ ಸೃಷ್ಟಿಯಾಯಿತು? ಎಲ್ಲಿಂದ ಈ ದುರಾಸೆ, ಈ ಮೋಸಗಾರಿಕೆ, ಈ ದಗಲ್ಬಾಜಿತನ ಹುಟ್ಟಿಕೊಂಡಿತು? ಮಾರ್ಕ್ಸ್‌ವಾದದ ಶುದ್ಧ ತರ್ಕದಲ್ಲಿ ಇದಕ್ಕೆ ಉತ್ತರವಿಲ್ಲವೆನ್ನಿಸುತ್ತದೆ. ಮನುಷ್ಯ ವರ್ತನೆ ಅಷ್ಟು ಬೇಗ ಬದಲಾಗುವುದಿಲ್ಲ; ಹಿಂದಿನ ಹವ್ಯಾಸಗಳು ಉಳಿದುಕೊಂಡು ಬಿಟ್ಟಿರುತ್ತದೆ ಎನ್ನಬಹುದು. ಆದರೆ ಎಷ್ಟು ಜನಾಂಗಗಳ ತನಕ ಎಂದು ಕೇಳಿದರೆ ಮಾರ್ಕ್ಸ್‌ವಾದಿಗಳು ಹೀಗೂ ತರ್ಕಮಾಡುವುದಿದೆ: ಸಮಾಜವಾದಿ ರಾಷ್ಟ್ರಗಳನ್ನು ಇನ್ನೂ ಬಂಡವಾಳಶಾಹಿ ರಾಜ್ಯಗಳು ಸುತ್ತುವರಿದಿವೆಯಲ್ಲವೆ? ಆದ್ದರಿಂದ ಮನುಷ್ಯ ವರ್ತನೆಯಲ್ಲಿ ಬದಲಾವಣೆ ಸಾಧ್ಯವಾಗಿಲ್ಲ. ಹೀಗೆ ಅಂದರೆ, ಟ್ರಾಟ್ಸ್‌ಕಿ ಹೇಳುತ್ತಿದ್ದುದು ನಿಜವೆಂದ ಹಾಗಾಯಿತು. ಒಂದು ರಾಜ್ಯದಲ್ಲಿ ಮಾತ್ರ ಸಮಾಜವಾದ ಸಾಧ್ಯವಲ್ಲ. ಆದರೆ ಸ್ಟಾಲಿನ್ ಟ್ರಾಟ್ಸ್‌ಕಿಯನ್ನು ಕೊಲ್ಲಿಸಿದ್ದ. ತಮ್ಮ ಶತ್ರುಗಳನ್ನು ರಷ್ಯಾ ಕರೆಯುತ್ತಿದ್ದು ಟ್ರಾಟ್ಸ್‌ಕಿ ವಾದಿಗಳೆಂದು, ಒಂದು ರಾಜ್ಯದಲ್ಲಿ ಯಶಸ್ವಿಯಾಗುವ ಸಮಾಜವಾದ ಸಾಂಕ್ರಾಮಿಕವಾಗುತ್ತದೆ, ಉಳಿದವರಿಗೆ ಮಾದರಿಯಾಗುತ್ತದೆ, ಇತ್ಯಾದಿ ವಾದಗಳೆಲ್ಲವೂ ನಮ್ಮ ಕಾಲದಲ್ಲಿ ಠೊಳ್ಳಾದದ್ದನ್ನು ನಾವೇ ಕಣ್ಣಾರೆ ಕಾಣುವಂತಾಯಿತು.

ರಷ್ಯಾದಲ್ಲಿ ನಾನು ಆಸೆಬುರಕ ಯುವಕರನ್ನು ಮಾತ್ರ ಕಂಡೆ ಎಂದರೆ ತಪ್ಪಾಗುತ್ತದೆ. ಸುಶಕ್ಷಿತ ಮನಸ್ಸಿನ, ಸೂಕ್ಷ್ಮ ಭಾವನೆಗಳ ಅಗ್ನೇಸಾ ಎಂಬ ನಯನಾಜೂಕಿನ ಒಬ್ಬ ಹುಡುಗಿಯ ಪರಿಚಯವೂ ನನಗೆ ಆಯಿತು. ಅವಳು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ. ಅವಳ ಪೂರ್ವಜರು ಜಾರ್ಜಿಯಾದವರು. ಅವಳಿಗೆ ತನ್ನ ಮನೆತನದ ಶ್ರೀಮಂತ ಸಂಪ್ರದಾಯದ ಬಗ್ಗೆ ಹೆಮ್ಮೆಯಿತ್ತು. ಕಮ್ಯುನಿಸ್ಟ್ ಬಿಗಿಯಲ್ಲಿಯೂ ಆಕೆಯ ಮನೆತನ ತನ್ನ ಸಂಪ್ರದಾಯವಂತಿಕೆಯನ್ನು ಕಳೆದುಕೊಂಡಿರಲಿಲ್ಲ; ಮನೆಯಲ್ಲಿ ನಿತ್ಯ ಬೈಬಲ್ ಓದುವುದು, ಹಾಡುವುದು ಇತ್ಯಾದಿ ರೂಢಿಯಲ್ಲಿತ್ತು. ಆಕೆಯ ತಾಯಿತಂದೆ ಇಬ್ಬರೂ ವೈದ್ಯರು. ಅವಳು ಹಲವು ಬಸ್ಸುಗಳನ್ನು ಹಿಡಿದು ಸಂಚರಿಸುತ್ತ, ಬೇರೆ ಬೇರೆ ಕಟ್ಟಡಗಳಲ್ಲಿ ತನ್ನ ವೈದ್ಯಕೀಯ ಪಾಠಗಳನ್ನು ಕಲಿಯುತ್ತ, ಈ ನಡುವೆ ಹೇಗೋ ಸಮಯ ಮಾಡಿಕೊಂಡು ಫ್ರೆಂಚ್, ಇಂಗ್ಲಿಷ್ ಮತ್ತು ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಳು. ಅವಳ ಆಸೆ ಯುರೋಪಿನಲ್ಲಿ ಮುಂದಿನ ವ್ಯಾಸಂಗ ಮಾಡುವುದು ಅಥವಾ ತಾನು ಪ್ರೀತಿಸುವ ಭಾರತದಲ್ಲಿ ಓದುವುದು. ಸುಮಾರು ಇಪ್ಪತ್ತೊಂದು ವಯಸ್ಸಿನ ಈ ಹುಡುಗಿ ನೋಡಲು ಕೋಮುಲವಾಗಿದ್ದಳು. ತನ್ನ ಹಾವಭಾವಗಳಲ್ಲಿ ತುಂಬ ಆಕರ್ಷಕವಾಗಿದ್ದಳು. ಅವಳ ತೊಡಿಗೆ ಸರಳವಾಗಿದ್ದರೂ ಅದರ ಹೊಂದಾಣಿಕೆಯಲ್ಲಿ ಕಲಾತ್ಮಕವಾಗಿತ್ತು.

ಆಗ್ನೇಸಾ ನನ್ನ ದುಭಾಷಿಯಾದ್ದರಿಂದ ಇಡೀ ದಿನ ನನ್ನ ಜೊತೆ ಸುತ್ತಾಡುತ್ತ ಹರಟುತ್ತ ಇರುತ್ತಿದ್ದಳು. ಒಂದು ಸಂಜೆ ನಾವಿಬ್ಬರೂ ಕಾಫಿ ಕುಡಿಯುತ್ತ ಆರಾಮವಾಗಿ ಕೂತಿದ್ದಾಗ ನನಗೆ ಆಶ್ಚರ್ಯವಾಗುವಂತೆ ಒಂದು ಮಾತು ಹೇಳಿದಳು: “ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಾನೂ ನನ್ನ ಸ್ನೇಹಿತರು ಒಂದು ಪುಸ್ತಕವನ್ನು ದ್ವೇಷಿಸುತ್ತಿದ್ದೆವು. ಯಾವುದು ಗೊತ್ತಾ?” ನನಗೆ ಗೊತ್ತಿರಲು ಸಾಧ್ಯವಿರಲಿಲ್ಲ. “ಯಾವುದು?” ಎಂದೆ. “ಅದನ್ನು ಬರೆದವನು ಒಳ್ಳೆಯ ಮನುಷ್ಯ ಎನ್ನಲೇಬೇಕು. ಕ್ರಾಂತಿಕಾಲದ ಉಳಿದ ಕೊಲೆಗಡುಕರಂತೆ ಅವನು ಇರಲಿಲ್ಲ. ಅಧಿಕಾರದಲ್ಲಿ ಇದ್ದೂ ಅವನು ಸಜ್ಜನನಾಗಿ ಉಳಿದ ಎಂಬುದೊಂದು ಆಶ್ಚರ್ಯ.”

ನನಗೆ ಈ ಲೇಖಕನ ಪರಿಚಯವೇ ಇರಲಿಕ್ಕಿಲ್ಲವೆಂದು ಊಹಿಸಿ ಅವಳು ಇಷ್ಟು ವಿವರ ಕೊಟ್ಟಿರಬೇಕು, ಹೆಸರು ಹೇಳುವ ಮುಂಚೆ. “ಅವನು ಯಾರು?” ಎಂದು ಕೇಳಿದೆ. ನಾನು ಊಹಿಸಿದಂತೆ ಗಾರ್ಕಿಯಿರಬಹುದೆ ಎಂಬುದನ್ನು ನಿಶ್ಚಯ ಮಾಡಿಕೊಳ್ಳಲು. ಹೌದು –  ಅದು ಗಾರ್ಕಿ, ಅವಳು ದ್ವೇಷಿಸುತ್ತಿದ್ದ ಪುಸ್ತಕ ಗಾರ್ಕಿ ಬರೆದ ತಾಯಿ.

ಗಾರ್ಕಿಯ ‘ತಾಯಿ’ ಕಾದಂಬರಿ ಆಗ್ನೇಸಾ ಜನಾಂಗಕ್ಕೆ ಕೇವಲ ಶುಷ್ಕ ಪ್ರಚಾರದ ಕಾದಂಬರಿಯಾಗಿ ಬಿಟ್ಟಿತ್ತು ಎಂಬುದರಿಂದ ನನಗೆ ಆಶ್ಚರ್ಯವಾಗಿರಲಿಲ್ಲ. ಕನ್ನಡದ ಹಿರಿಯ ಲೇಖಕರಾದ ಕುವೆಂಪು ಕೂಡ ಗಾರ್ಕಿಯ ತಾಯಿ ಉಳಿದ ಪ್ರಸಿದ್ಧ ರಷ್ಯನ್ ಕೃತಿಗಳಿಗೆ ಹೋಲಿಸಿದರೆ ತುಂಬ ಸಾಮಾನ್ಯ ಕೃತಿಯೆಂದು ಹೇಳಿದ್ದರೆಂಬುದು ನನಗೆ ನೆನಪಾಯಿತು. ಆದರೆ ನಾವು ಎಳೆಯರಾಗಿದ್ದಾಗ ಗಾರ್ಕಿಯ ತಾಯಿ ಬಹಳ ಪ್ರಸಿದ್ಧವಾಗಿತ್ತು. ನಾನು ಗಾರ್ಕಿಯ ಲಭ್ಯವಿದ್ದ ಪುಸ್ತಕಗಳನ್ನೆಲ್ಲ ಆನರ್ಸ್ ಓದುವ ಕಾಲದಲ್ಲಿ ಓದಿಬಿಟ್ಟಿದ್ದೆ. ಈಗಲೂ ನನಗೆ ಅವನ ಕೆಲವು ಕಥೆಗಳು ಮತ್ತು ಅವನ ಆತ್ಮಚರಿತ್ರೆ ಮುಖ್ಯವಾದ ಕೃತಿಗಳಾಗಿ ಉಳಿದಿವೆ ಎಂದು ಆಗ್ನೇಸಾಗೆ ಹೇಳಿದೆ. ಪರದೇಶದ ಹಿರಿಯನೊಬ್ಬನ ಮಾತೆಂದು ಅವಳು ಸದಾಚಾರದ ದೃಷ್ಟಿಯಿಂದ ಅಲ್ಲಗಳೆಯಲಿಲ್ಲ. ಅಬ್ಬರದ ಪ್ರಚಾರ ಹೇಗೆ ಒಳ್ಳೆಯದನ್ನೂ ಅಂತಿಮವಾಗಿ ನಿರ್ಲಕ್ಷ್ಯಕ್ಕೆ ಗುರಿಪಡಿಸುತ್ತದೆ ಎಂಬುದು ಆಗ್ನೇಸಾಳಿಂದ ನನಗೆ ಖಚಿತವಾಯಿತು.

ಗ್ಲಾಸ್‌ನಾಟ್ ಮತ್ತು ಪೆರಿಸ್ಟ್ರೋಯಿಕಾಗಳ ಫಲವಾಗಿ ಗ್ರಾಹಕ ದುರಾಸೆಯ ಕೆಲವು ಯುವಜನರು ಹುಟ್ಟಿಕೊಂಡಂತೆಯೇ ಸೂಕ್ಷ್ಮಜ್ಞರಾದ ಒಂದು ಯುವ ಪೀಳಿಗೆಯೂ ತಲೆಯೆತ್ತಿದೆ ಎಂಬುದು ನನಗೆ ಆಗ್ನೇಸಾಳಿಂದ ತಿಳಿಯಿತು. ಆಗ್ನೇಸಾರಂಥವರ ಆಸೆ ರಷ್ಯಾ ಮತ್ತೆ ಐರೋಪ್ಯ ದೇಶಗಳಂತಾಗಬೇಕೆಂದು; ಮುಕ್ತ ವಿಚಾರದ ಜೀವನಕ್ರಮದ ನಾಡಾಗಬೇಕೆಂದು. ಕಮ್ಯುನಿಸ್ಟರು ಯಾವ ಸಂಸ್ಕೃತಿಯನ್ನು ಅವನತಿಯ ದಿಕ್ಕಿನಲ್ಲಿದೆ ಎಂದು ಹೇಳುತ್ತಿದ್ದರೋ, ಅದೇ ಈಗ ಆದರ್ಶವಾಗಿ ಕಾಣತೊಡಗಿತ್ತು. ಸ್ಯಾಮುಯಲ್ ಬೆಕೆಟ್ ಮತ್ತು ಜೇಮ್ಸ್ ಜಾಯ್ಸ್‌ನಂತಹ ಕ್ಲಿಷ್ಟ ಲೇಖಕರು ಈ ಪೀಳಿಗೆಯ ಹೀರೋಗಳಾಗಿದ್ದರು. ತಮ್ಮ ಮಕ್ಕಳ ಜೊತೆಗೆ ಫ್ರೆಂಚ್ ಮಾತಾಡುವ ಸಿರಿವಂತಿಕೆಯ ರಷ್ಯನ್ ಸಂಸ್ಕೃತಿಯನ್ನು ಟಾಲ್‌ಸ್ಟಾಯ್ ಗೇಲಿ ಮಾಡುತ್ತಿದ್ದ. ಈ ಸಿರಿವಂತರು ಕ್ರಾಂತಿಯ ನಂತರ ತಮ್ಮ ಹಣವನ್ನೂ, ಅಧಿಕಾರವನ್ನೂ ಕಳೆದುಕೊಂಡಿದ್ದರು. ಆದರೆ ಕ್ರಾಂತಿಯಾಗಿ ಎಪ್ಪತ್ತು ವರ್ಷಗಳಾದ ಮೇಲೂ, ಮನಸ್ಸಿನಲ್ಲಿರುವುದನ್ನೆಲ್ಲ ತೊಳೆದು ಹಾಕಿ ಬಿಡಬೇಕೆಂಬ ಉದ್ದೇಶದ ಸತತ ಪ್ರಚಾರದ ನಂತರವೂ ಸಿರಿವಂತ ರಷ್ಯನ್ ಸಂಸ್ಕೃತಿಯ ವರ್ಚಸ್ಸು ಇನ್ನೂ ಉಳಿದಿದೆ ಎಂಬುದು ಆಶ್ಚರ್ಯ.

ಸೋವಿಯತ್ ರಷ್ಯಾದ ಬಹು ಪ್ರಖ್ಯಾತವಾದ ಜರ್ನಲ್‌ ಒಂದಿದೆ. ‘ಇನೊಸ್ಟ್ರಾನಿಯಾ ಲಿಟೆರೆಚುರಾ’ ಅಂದರೆ ‘ವಿದೇಶೀಯ ಸಾಹಿತ್ಯ’ ಎನ್ನುವ ಈ ಜರ್ನಲ್‌ ನನ್ನ ಕಾದಂಬರಿಯಾದ ಸಂಸ್ಕಾರವನ್ನು ರಷ್ಯನ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಿಸಿತ್ತು. ಪುಸ್ತಕವಾಗಿಯೂ ಹೊರಬಂದ ಸಂಸ್ಕಾರಕ್ಕೆ ಮುನ್ನುಡಿ ಬರೆದ ಖ್ಯಾತ ಕಾದಂಬರಿಕಾರ ಚಿಂಗೀಸ್ ಐತ್‌ಮತಾವ್ ಈ ಜರ್ನಲ್ಲಿನ ಸಂಪಾದಕ. ಚಿಂಗೀಸ್ ಐತ್‌ಮತಾವ್ ಕೃತಿಗಳಲ್ಲಿ ದಾರ್ಶನಿಕವಾದ ಆಳವಿದೆಯೆಂದು ನಾನು ಕೇಳಿದ್ದೆ. ಇವನ ನೇತೃತ್ವದಲ್ಲಿ ನಡೆದ ಒಂದು ಸೆಮಿನಾರಿಗೆಂದು ರಷ್ಯಾಕ್ಕೆ ಹೋದದ್ದು. ಸೆಮಿನಾರಿನ ವಿಷಯ: “ಲೇಖಕ ಮತ್ತು ಪ್ರಭುತ್ವ”.

ಬಹಳ ದೊಡ್ಡ ಲೇಖಕರು ಈ ಸೆಮಿನಾರಿಗೆ ಆಮಂತ್ರಿತರಾಗಿದ್ದರು. ನಾನು ಹಿಂದೆ ಹವಾಯ್‌ನಲ್ಲಿ ಭೇಟಿಯಾಗಿ ನನಗೆ ಪರಿಚಿತನಾಗಿದ್ದ ಜಪಾನಿನ ಬರಹಗಾರ –  ಈಚೆಗೆ ನೊಬೆಲ್ ಪಾರಿತೋಷಕ ಪಡೆದ – ಓಯಿ ಬಂದಿದ್ದ. ಬ್ರೆಜಿಲ್‌ನಿಂದ ವೃದ್ಧ ಲೇಖಕ ಜಾರ್ಜ್‌ ಆಮಡು ಇದ್ದ. ಪೂರ್ವ ಜರ್ಮನಿಯಿಂದಲೂ ಕ್ಯೂಬಾದಿಂದಲೂ ಬಂದ ಲೇಖಕರಿದ್ದರು; ಇವರು ಇದೇ ಸೆಮಿನಾರಿನಲ್ಲಿ ಲೆಖ್ಖಾಚಾರ ಮಾಡಿ ಮಾತಾಡುವ ಮಿತಭಾಷಿಗಳಾಗಿದ್ದರು. ಇಂಥ ವಿಷಯದಲ್ಲಿ ಸರಿಯಾದ ‘ಲೈನ್’ ಯಾವುದು ಎಂಬ ಬಗ್ಗೆ ಅವರಿಗೆ ಸಂಕೋಚವಿದ್ದಂತೆ ಕಂಡಿತ್ತು. ಉಳಿದ ರಷ್ಯನ್ ಲೇಖಕರಿಗೆ ತಮ್ಮ ಪೂರ್ವಾಶ್ರಮವನ್ನು ಕಾಣಿಸುವ ಕನ್ನಡಿಯಂತೆ ಇವರು ಭಾಸವಾಗಿರಬೇಕು.

ಅಧಿಕಾರದ ಜತೆ ಲೇಖಕನ ಸಂಬಂಧ ಹೇಗಿರಬೇಕು ಎಂಬ ಪ್ರಶ್ನೆಗೆ ಐತ್‌ಮತಾವ್ ಫಾಕ್‌ನರ‍್ನನ್ನು ಉದಾಹರಣೆಯಾಗಿ ಕೊಟ್ಟ. ದಕ್ಷಿಣ ಅಮೆರಿಕಾದ ಪ್ರಸಿದ್ಧ ಕಾದಂಬರಿಕಾರ ಫಾಕ್‌ನರ್‌ನನ್ನು ಅಮೆರಿಕಾದ ಅಧ್ಯಕ್ಷನಾಗಿದ್ದ ಕೆನಡಿ ಊಟಕ್ಕೆ ಕರೆದಿದ್ದನಂತೆ. ಅದಕ್ಕೆ ಫಾಕ್‌ನರ್ ಹೀಗೆ ಉತ್ತರಿಸಿದ್ದನಂತೆ: “ಮಿಸಿಸಿಪಿಯಲ್ಲಿ ವಾಸವಾಗಿರುವ ಲೇಖಕನಿಗೆ ಅಪರಿಚಿತನೊಬ್ಬನ ಜೊತೆ ಊಟಮಾಡಲೆಂದು ವಾಷಿಂಗ್‌ಟನ್ ತನಕ ಹೋಗುವುದು ಅತಿ ಪ್ರಯಾಸದ ಪ್ರಯಾಣ”. ಪ್ರಭುತ್ವದಿಂದ ಅವಮಾನಿತರಾದ ರಷ್ಯನ್ ಲೇಖಕರಿಗೆ ಈ ಕಥೆ ಬಹುಪ್ರಿಯವಾದದ್ದಾಗಿತ್ತು.

ಸಾಮಾನ್ಯ ಯೋಗ್ಯತೆಯ ಬರಹಗಾರರು ಹೇಗೆ ಸ್ಟಾಲಿನ್ ಕಾಲದಿಂದ ಈ ವರೆಗೂ ಪ್ರಭುತ್ವಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆಂಬುದನ್ನು ಎಲ್ಲ ರಷ್ಯನ್ ಲೇಖಕರೂ ವರ್ಣಿಸಲು ತೊಡಗಿದರು. ಪ್ರಭುತ್ವಕ್ಕೆ ಯಾವತ್ತೂ ದಾಸರಾದ ಈ ಲೇಖಕರೇ ಗೊರ್ಬಚೇವ್ “ಗ್ಲಾಸ್‌ನಾಟ್” ತತ್ವವನ್ನು ಮುಂದಿಟ್ಟಾಗ ಒಂದು ಡೆಲಿಗೇಶನ್ ಆಗಿ ಅವನ ಬಳಿ ಹೋಗಿ ವಿನಯಪೂರ್ವಕವಾಗಿ ಹೇಳಿದರಂತೆ: “ನಾವು ಇನ್ನೂ ಮುಂದೆ ಗ್ಲಾಸ್‌ನಾಟ್ ಮತ್ತು ಪೆರಿಸ್ಟ್ರೋಯಿಕಾ ಬಗ್ಗೆ ಬರೆಯುವ ನಿರ್ಧಾರ ಮಾಡಿದ್ದೇವೆ”. ಆಗ ಗೊರ್ಬಚೇವ್‌ಹೇಳಿದನಂತೆ: “ಯಾಕೆ ಈ ಆತುರ? ಕೊಂಚವಾದರೂ ಗ್ಲಾಸ್‌ನಾಟ್ ಜಾರಿಯಲ್ಲಿ ಬರಲಂತೆ – ಆಮೇಲಿಂದ ನೀವು ಆ ಬಗ್ಗೆ ಬರೆಯಬಹುದಲ್ಲ?”

ಐತ್‌ಮತಾವ್ ಇನ್ನೊಂದು ಘಟನೆ ಹೇಳಿದ. ರಷ್ಯನ್ ಲೇಖಕರ ಒಂದು ಗುಂಪಿನ ಜೊತೆ ಐತ್‌ಮತಾವ್ ಇಟಲಿಗೆ ಹೋಗಿದ್ದನಂತೆ. ಅದು ಬ್ರೆಜ್ನೇವ್ ಕಾಲ. ಇಟಲಿಯಲ್ಲಿ ‘ಚಿಂಸಾನಾ’ ಎಂಬ ಮದ್ಯವನ್ನು ಜಾಹೀರಾತು ಮಾಡಲು ಬ್ರೆಜ್ನೇವ್ ಚಿತ್ರವನ್ನು ಬಳಸುವುದನ್ನು ಕಂಡ ರಷ್ಯನ್ ಲೇಖಕರು ಗಾಬರಿಯಾಗಿ ಬಿಟ್ಟರಂತೆ. ಇನ್ನು ಮುಂದೆ ನಮ್ಮ ರಾಜಕೀಯ ನಾಯಕರನ್ನು ಯಾರಾದರೂ ಹಾಸ್ಯ ಮಾಡುವುದು ಸಾಧ್ಯ ಎಂದು ಐತ್‌ಮತಾವ್ ನಿಟ್ಟುಸಿರೆಳೆದ.

ಎಲ್ಲ ರಷ್ಯನ್ ಲೇಖಕರಿಗೂ ಸ್ಟಾಲಿನ್ ಒಂದು ದುಸ್ವಪ್ನವಾಗಿ ಬಿಟ್ಟಿದ್ದ. ಸ್ಟಾಲಿನ್ ಎಂದರೆ ತಮ್ಮ ಪೂರ್ವಕಾಲದ ಪೀಟರ್ ಸಾಮ್ರಾಟ್‌ಮತ್ತು ಚೆಂಗೀಸ್ ಖಾನಿನ ಬೆರೆಕೆಯಾಗಿದ್ದ. ರಷ್ಯವನ್ನು ಆಳಿದ ಎಲ್ಲ ಪ್ರಭುಗಳಿಗೂ ರುಚಿಯಲ್ಲಿ ಮಿಗಿಲಾದವನು ಸ್ಟಾಲಿನ್ ಎಂದು ಒಬ್ಬ ಲೇಖಕ ಕಟುವ್ಯಂಗ್ಯದಲ್ಲಿ ಹೇಳಿದ: ಯಾಕೆಂದರೆ ಅತ್ಯುತ್ತಮ ಲೇಖಕರನ್ನು ತಿಂದವನೆಂದರೆ ಸ್ಟಾಲಿನ್. ಮೈಗೆ ಹತ್ತಿದ ಜಡ್ಡಿನಂತೆ ಕಾಡುವ ಸ್ಟಾಲಿನ್ ನೆನಪಿನಿಂದ ಲೇಖಕರು ಪಾರಾಗಲು ಉಪಯೋಗಿಸುವ ಮಾತುಗಳು ನನಗೆ ಅಚ್ಚರಿಯನ್ನುಂಟು ಮಾಡಿದವು. ಅದೊಂದು ಕಥಾರ್ಸಿಸ್ ರೀತಿಯ ಅನುಭವ.

ಜಾರ್ಜಿ ಗಚೇವ್ ಎಂಬ ಲೇಖಕನ ಮಾತನ್ನು ನಾನು ಮರೆಯಲಾರೆ, ನೋಡಲು ಸಪೂರವಾಗಿ ಶಕ್ತಿಯುತವಾದ ಕಾಡು ಪ್ರಾಣಿಯೆ ಕಾಣುತ್ತಿದ್ದ ಅವನು ಮುಖದ ಮೇಲೆಲ್ಲಾ ಬೀಳುತ್ತಿದ್ದ ತಲೆಗೂದಲನ್ನು ತಳ್ಳಿಕೊಳ್ಳುತ್ತ ಮಾತಾಡಿದ. ಸಣ್ಣ ಹಾಲಿನಲ್ಲಿ ಇದ್ದವರು ನಾವು ಸುಮಾರು ಹದಿನೈದು ಮಂದಿ. ಮಾತಾಡಲು ಶುರುವಾಗಿ ಕೆಲವು ನಿಮಿಷಗಳಲ್ಲೇ ತಾನು ಸಹಸ್ರಾರು ಮಂದಿಗೆ ಮಾತಾಡುತ್ತಿರುವವನಂತೆ ಅವನು ಆವೇಶಿತನಾದ. ಅವನು ಕಣ್ಣುಗಳು ಹಿಪ್ನಾಟಿಕ್ಕಾಗಿ ಅರಳಿದವು; ಅವನ ಕಂಠ ಘೋಷದ ಉಬ್ಬುಗುಣ ಪಡೆದು ನಾದಮಯವಾಯಿತು. ಅವನ ವಾಕ್‌ಝರಿಯ ನಡುವೆ ಅವನು ಎದ್ದು ನಿಂತು ಹಾಡಲೂ ಶುರುಮಾಡಿದ. ಹಿಂದೆ ರಷ್ಯನ್ ಲೇಖಕರು ಒಟ್ಟಾದಾಗ ಕಡ್ಡಾಯವಾಗಿ ಸ್ಟಾಲಿನ್‌ನನ್ನು ಸ್ತುತಿಸಲೆಂದು ಈ ಹಾಡನ್ನು ಒಟ್ಟಾಗಿ ಉತ್ಕಂಠರಾಗಿ ಹಾಡುತ್ತಿದ್ದರಂತೆ. ಆ ಹಾಡನ್ನು ಮತ್ತೆ ಹೀಗೆ ಕೇಳಿಸಿಕೊಳ್ಳುವುದು ಅಲ್ಲಿ ನೆರೆದಿದ್ದ ರಷ್ಯನ್ ಲೇಖಕರಿಗೆಲ್ಲ ಒಂದು ಕಥಾರ್ಟಿಕ್ ಅನುಭವವಾಗಿತ್ತು. ಅವಮಾನದಿಂದ ತಗ್ಗಿದ ಲೇಖಕರ ತಲೆಗಳನ್ನು ಉದ್ದೇಶಿಸಿ ಗಚೇವ್ ಹೇಳಿದ: “ಈ ಹಾಡನ್ನು ಕೇಳಿಸಿಕೊಳ್ಳುತ್ತಿದ್ದಂತೆ ಗೆಳೆಯರೇ ಈಗ ನಿಮಗೇನು ಅನ್ನಿಸುತ್ತಿದೆ ಹೇಳಿ.” ಯಾರೂ ಅಲ್ಲಿ ನಗಲಿಲ್ಲ. ತನ್ನನ್ನೂ ಬಿಟ್ಟುಕೊಡದಂತೆ ಅವನು ಕ್ರೂರವಾದ ಸತ್ಯವನ್ನು ಬಯಲು ಮಾಡಿದ್ದ. ಹೀಗೆ ಅವನು ಮುಂದುವರಿಯುತ್ತ ಅಶ್ಲೀಲ ಮಾತುಗಳಿಗೆ ಇಳಿದ. ಆಗ್ನೇಸಾ ಅವನನ್ನು ಭಾಷಾಂತರಿಸಲು ನಾಚಿಕೊಂಡಳು.

ಅವನು ಏನನ್ನೂ ಮುಚ್ಚಿಡಲು ಬಯಸಿರಲಿಲ್ಲ. ಕ್ರುಶ್ಚೇವ್ ಅಧಿಕಾರದಲ್ಲಿದ್ದಾಗ ರಷ್ಯನ್ ಭಾಷೆಯ ‘ಗ’ದ ಉಚ್ಛಾರ ಉಕ್ರೇನಿಯನ್ ಭಾಷೆಯಲ್ಲಿಯಂತೆ ‘ಹ’ ಆಗಿ ಬಿಟ್ಟಿತಂತೆ. ‘ಗಾರ್ಬಚೇವ್’ ಎನ್ನುವ ಶಬ್ದ ‘ಹಾರ್ಬಚೇವ್’ ಆದಂತೆ. ಎಲ್ಲರೂ ‘ಗ’ದ ಬದಲು ‘ಹ’ನ ಉಚ್ಛಾರಣೆಯಲ್ಲಿ ಬಳಸಲು ಕಾರಣ: ಉಕ್ರೇನಿಯನ್ ದೇಶದವನಾದ ಕ್ರುಶ್ಚೇವ್‌ಗೆ ಖುಷಿಯಾಗಲಿ ಎಂದು. ಕ್ರುಶ್ಚೇವ್ ಹೀಗೆ ತನ್ನ ದೇಶದ ರಚ್ಚನ್ನು ತೀರಿಸಿಕೊಂಡಿದ್ದ. ಮುನ್ನೂರು ವರ್ಷಗಳ ಕೆಳಗೆ ಬಲಾತ್ಕಾರವಾಗಿ ರಷ್ಯಾದಲ್ಲಿ ವಿಲೀನವಾಗಬೇಕಾಗಿ ಬಂದಿದ್ದ ಉಕ್ರೇನಿಯಾದ ರೋಷ ಕ್ರುಶ್ಚೇವ್‌ನಲ್ಲಿ ಉಳಿದಿರಬೇಕು.

ಗಚೇವ್ ಪ್ರಕಾರ ರಷ್ಯಾ ಒಂದು ಸೂಳೆ: ಅವಳು ಬಸುರಾಗುವುದು ಯಾವತ್ತೂ ಯಾರೋ ಪರದೇಶದ ಮಿಂಡನಿಗೆ: ಒಂದು ಕಾಲದಲ್ಲಿ ಜರ್ಮನರಿಗೆ, ಮತ್ತೆ ಜಾರ್ಜಿಯಾಕ್ಕೆ, ಮತ್ತೆ ಉಕ್ರೇನಿಯಾಕ್ಕೆ.

ಗಚೇವ್ ನಾನು ಬರೆದದ್ದಕ್ಕಿಂತ ಒರಟಾಗಿ ಮಾತನಾಡಿದ್ದ. ತರ್ಕಾತೀತವಾದ ಸಂಕೇತಗಳು ಅವನ ಆವೇಶಕ್ಕೆ ಕಾರಣವಾಗಿದ್ದವು. ದಾಸ್ತೋವಸ್ಕಿಯ ಪ್ರಪಂಚದಲ್ಲಿರುವ ದೈತ್ಯ ಸಂಕೇತಗಳು ಇನ್ನೂ ರಷ್ಯನ್ ಮನಸ್ಸನ್ನು ಆಳುತ್ತಿವೆ ಎಂಬುದನ್ನು ನಾನು ಬೆರಗಿನಲ್ಲಿ ಅರಿತುಕೊಂಡೆ. ಸ್ವದೇಶಿ ವಾದದ ಸ್ವಾವೊಫೈಲ್‌ರಿಗೂ ಉದಾರವಾದದ ಪಾಶ್ಚಾತ್ತೀಕರಣ ವಾದಿಗಳಿಗೂ ಹತ್ತೊಂಬತ್ತನೇ ಶತಮಾನದಲ್ಲಿ ನಡೆದಿದ್ದ ಉಗ್ರಸಮರ ಇನ್ನೂ ಮುಗಿದಿರಲಿಲ್ಲ. ಮಾರ್ಕ್ಸ್‌ವಾದದ ವೈಚಾರಿಕತೆಗೆ ಈ ವಾದದಲ್ಲಿ ಅವಕಾಶವಿರಲಿಲ್ಲ. ಗಚೇವ್‌ನಂತಹ ಭಾವುಕರು ಗಣಮಗರಾಗಿ ಪೂರ್ವಕಾಲದ ಭೂತಗಳಿಗೆ ಇನ್ನೂ ತಮ್ಮನ್ನು ಒಡ್ಡಿಕೊಂಡು ನುಡಿಯಬಲ್ಲವರಾಗಿದ್ದರು. ಅಂಥವರು ಇಲ್ಲದ ನಾಡಿನಲ್ಲಿ ಕಾವ್ಯವಿರುವುದಿಲ್ಲ; ಸತ್ಯವೂ ಇರುವುದಿಲ್ಲ ಎಂದುಕೊಳ್ಳುತ್ತ ನಾನವನನ್ನು ಕೇಳಿಸಿಕೊಂಡೆ.

ನನ್ನ ಕನ್ನಡ ಸ್ನೇಹಿತನ ಜೊತೆ ನಾನು ಕೆಂಪು ಚೌಕಕ್ಕೆ ಹೋಗಿ ಲೆನಿನ್ ಶವದರ್ಶನಕ್ಕಾಗಿ ಸಾಲು ನಿಂತವರನ್ನು ಕಂಡೆ. ನನೆಗೆ ನೆನಪಾಯಿತು. ೧೯೮೦ ರಲ್ಲಿ ನಾನು ರಷ್ಯಾ ಪ್ರವಾಸ ಮಾಡಿದಾಗ ಲೆನಿನ್ ಮಾಸೋಲಿಯಂಗೆ ಹೋಗಲು ನಿರಾಕರಿಸಿದ್ದೆ. ಆಗ ನನ್ನ ದುಭಾಷಿಯಾಗಿದ್ದ ಇರಿನಾಗೆ ಕಾರಣ ವಿವರಿಸಿದ್ದೆ. ಹೆಣದ ಪೂಜೆಯನ್ನು ನಾನು ಒಪ್ಪುವವನಲ್ಲ. ಸತ್ತ ಮನುಷ್ಯನನ್ನು ಆದಷ್ಟು ಬೇಗೆ ಸುಟ್ಟು ಹಾಕಬೇಕೆಂಬ ನಂಬಿಕೆಯವನು ನಾನು. ಇರೀನಾಳನ್ನು ಪೀಡಿಸಿ ಲೆನಿನ್ ಮಸೋಲಿಯಂಗೆ ಹೋಗುವ ಬದಲು ನಾವು ಟಾಲ್‌ಸ್ಟಾಯ್ ಮನೆಗೆ ಹೋಗಿ ಅಲ್ಲಿ ಅವನ ಸಮಾಧಿ ನೋಡಿದ್ದೆವು. ರೈತರು ಸತ್ತಾಗ ಅವರನ್ನು ಹೂಳಿ ಮೇಲೊಂದು ಕಲ್ಲನ್ನು ಇಡದೆ ಮಣ್ಣನ್ನು ಸ್ವಲ್ಪ ಎತ್ತರ ಒಟ್ಟಿರುತ್ತಾರೆ. ಟಾಲ್‌ಸ್ಟಾಯ್‌ನ ಗೋರಿ ಹೀಗೆ ತನ್ನ ಮೇಲೆ ಹಸಿರಾದ ಹುಲ್ಲನ್ನು ತೊಟ್ಟು ತುಸು ಉಬ್ಬಿಕೊಂಡಿತ್ತು. ಕೊಳೆಯದಂತೆ ಕಾದಿಟ್ಟ ಲೆನಿನ್‌ಗಿಂತ ಹುಲ್ಲಿಗೆ ಅವಕಾಶನಾದ ಟಾಲ್‌ಸ್ಟಾಯ್ ನನಗೆ ಶಾಶ್ವತ ಎನ್ನಿಸಿದ್ದ.

ಇಲ್ಲಿ ವೈಯಕ್ತಿಕವಾದೊಂದು ಘಟನೆಯನ್ನೂ ನಾನು ಹೇಳಿಕೊಳ್ಳಬೇಕು. ಇರೀನಾನಿಂದ ಇದನ್ನು ನಾನು ತಿಳಿದಿದ್ದು. ಕೆಲವು ವರ್ಷಗಳ ಹಿಂದೆ ನನ್ನ ಕಾದಂಬರಿ ಸಂಸ್ಕಾರ ರಷ್ಯನ್‌ಗೆ ಭಾಷಾಂತರಗೊಂಡು ಪ್ರಕಟವಾಯಿತೆಂದು ಹೇಳಿದ್ದನಲ್ಲವೇ? ಅದನ್ನು ಭಾಷಾಂತರಿಸಿದ್ದು ಹಿಂದಿಯನ್ನು ಬಲ್ಲ ರಷ್ಯನ್ ಲೇಖಕಿ ಮೀರಾ ಎಂಬಾಕೆ. ಇದು ಭಾಷಾಂತರವಾಗಲು ಪ್ರಯತ್ನಿಸಿದ್ದು ಇರೀನಾ – ಹಿಂದಿಯಲ್ಲಿ ಸಂಸ್ಕಾರ ಓದಿಕೊಂಡಿದ್ದ ಇರೀನಾ.

ನನ್ನ ಕಾದಂಬರಿ ಪ್ರಕಟಗೊಂಡ ಸಮಯದಲ್ಲೇ ಒಬ್ಬ ಸೋವಿಯತ್ ಇತಿಹಾಸಕಾರ ಲೆನಿನ್‌ನ ವಿಧವೆ ಕ್ರುಪುಸ್ಕಾಯ ಬರೆದೊಂದು ಕಾಗದವನ್ನು ಹುಡುಕಿ ತೆಗೆದು ಪ್ರಕಟಿಸಿದ್ದನಂತೆ. ಕ್ರುಪುಸ್ಕಾಯ ಈ ಪತ್ರವನ್ನು ಸ್ಟಾಲಿನ್‌ಗೆ ಬರೆದದ್ದು. ತನ್ನ ಗಂಡ ಸತ್ತ ನಂತರ ಅವನ ಶವವನ್ನು ರಾಜಕೀಯಗೊಳಿಸಕೂಡದೆಂದೂ ಅವನ ತಾಯಿಯ ಗೋರಿಯ ಪಕ್ಕದಲ್ಲಿ ಅವನನ್ನು ಹೂಳಬೇಕೆಂದೂ ಕ್ರುಪುಸ್ಕಾಯ ಕೇಳಿಕೊಂಡಳಂತೆ. ಯಾವ ಹೆಂಡತಿಯಾದರೂ ತಾನು ಅನುಭವಿಸಿದ್ದ ತನ್ನ ಗಂಡನ ದೇಹ ಸತ್ತ ಮೇಲೆ ಕೊಳೆಯದಂತೆ ಉಳಿದಿರಬೇಕೆಂದು ಅಪೇಕ್ಷಿಸುವುದು ಸಾಧ್ಯವೆ? ಕ್ರೂರಿಯಾದ ಸ್ಟಾಲಿನ್ ಈ ಕೋರಿಕೆಯನ್ನು ಗಮನಿಸಿರಲಿಲ್ಲ.

ಈ ಪತ್ರವನ್ನು ಹೊರತಂದ ಇತಿಹಾಸಕಾರ ಬರೆದದ್ದನ್ನು ಓದಿದವರು ಸಂಸ್ಕಾರ ಕಾದಂಬರಿಗೂ ಈ ಘಟನೆಗೂ ತಳಕು ಹಾಕಿ ‘ಫಾರಿನ್ ಲಿಟರೇಚರ್’ ಜರ್ನಲ್‌ಗೆ ಬರೆದಿದ್ದರೆಂದು ಇರೀನಾ ಹೇಳಿದಳು. ಲೆನಿನ್‌ ಸಂಸ್ಕಾರವಿಲ್ಲದೆ ಪ್ರೇತವಾಗಿ ಕಾಡುತ್ತಿದ್ದಾನೆ ಎಂಬುದು ಈ ಪತ್ರಗಳ ಸಾರಾಂಶ. ಗಾರ್ಬಚೇವ್ ಆದರೂ ಲೆನಿನ್‌ಗೆ ಮಾಡಬೇಕಾದ ಸಂಸ್ಕಾರ ಮಾಡಿಯಾನೆ? ಇರೀನಾ ವ್ಯಗ್ರಳಾಗಿದ್ದಳು. ಹೈಸ್ಕೂಲಿನ ಅಧ್ಯಾಪಕಿಯಾಗಿದ್ದ ಆಕೆಗೆ ಮನಶ್ಯಾಂತಿ ಇರಲಿಲ್ಲ. ಅವಳ ಪುಂಡು ವಿದ್ಯಾರ್ಥಿಗಳು ಸ್ಕೂಲಿನ ಗೋಡೆಗಳ ಮೇಲೆ ನೇತುಹಾಕಿದ್ದ ಎಲ್ಲ ಕ್ರಾಂತಿಕಾರರ ಚಿತ್ರಗಳ ಮುಖಕ್ಕೆ ಟಾರು ಬಳೆದು ಕೆಡಿಸಲು ಶುರು ಮಾಡಿದ್ದರು. ಯಾರಿಗೂ ಯಾವುದರ ಬಗ್ಗೆಯೂ ಗೌರವ ಉಳಿದಿರಲಿಲ್ಲ. ಲೆನಿನ್‌ನಂತೆ ಆದರ್ಶವಾದಿಗಳಾಗಿದ್ದ ಹಲವು ಕ್ರಾಂತಿಕಾರರು ಅತಂತ್ರರಾದ ಪಿಶಾಚಿಗಳಂತಾಗಿ ಬಿಟ್ಟಿದ್ದರು. ಅವಳಿಗೆ ಕಾಣುತ್ತಿದ್ದುದು: ದೋಷ ಮತ್ತು ಸೇಡು – ಎರಡೇ.

ರಷ್ಯನ್ ಕ್ರಾಂತಿ ಯಾಕೆ ವಿಫಲವಾಯಿತು? ನಾನು ಲೇಖಕರಿಗೆ ಅವರಿಗೇ ಗೊತ್ತಿರುವ ಒಂದು ಮಾತನ್ನು ಹೇಳಿದೆ. ಹೊಸದಾಗಿ ಏನು ಹೇಳಲು ಸಾಧ್ಯ? ಸ್ಟಾಲಿನ್‌ನನ್ನು ದೂಷಿಸಿದರೆ ಸಾಲದು: ಅವನೊಂದು ದುರಾದೃಷ್ಟದ ಆಕಸ್ಮಿಕವಲ್ಲ. ಲೆನಿನ್‌ನ ತಾತ್ವಿಕ ಬುನಾದಿಯನ್ನೂ ಪರಿಶೀಲಿಸಬೇಕು. ಅವನ ಎರಡು ಪ್ರಸಿದ್ಧ ತತ್ವಗಳು: “ಡೆಮೊಕ್ರಾಟಿಕ್‌ ಸೆಂಟ್ರಲಿಸಂ” ಮತ್ತು “ವ್ಯಾನ್ ಗಾರ್ಡ್‌ ಆಫ್‌ ದಿ ಪ್ರೊಲಿಟೇರಿಯಟ್” – ಅಂದರೆ ಅರ್ಥಹೀನವಾದ ಎರಡು ಮಾತುಗಳು: “ಪ್ರಜಾತಾಂತ್ರಿಕ ಕೇಂದ್ರೀಯತೆ” ಮತ್ತು “ಕಾರ್ಮಿಕರ ಮುಂದಾಳು ಜನ”. ಕಾರ್ಮಿಕರೇ ಕ್ರಾಂತಿ ಮಾಡಲಾರರು; ಅವರಿಗೊಂದು ಮುಂದಾಳು ಪಕ್ಷ ಬೇಕು. ಸ್ಟ್ರಾಟೆಜಿ ಸರಿಯಿರಬೇಕಲ್ಲವೆ? ಆದ್ದರಿಂದ ಚಿಂತನಶೀಲರೂ ಕ್ರಿಯಾಶೀಲರೂ ಆದ ಮುಂದಾಳುಗಳು ಬೇಕು. ನಿಜ. ಆದರೆ ಈ ಮುಂದಾಳುಗಳು ಮುಂದೆ ಮುಂದೆಯೂ ಆಳುತ್ತ ಹೋಗುವ, ಕ್ರಮೇಣ ಮೆಳ್ಳಗಣ್ಣರೂ ಭ್ರಷ್ಟರೂ ಆಗುವ ಅಪಾಯಕ್ಕೆ ಏನು ತಡೆ? ಎಲ್ಲ ಅಧಿಕಾರ ಸೂತ್ರ ಹಿಡಿದವರು, ಕ್ರಾಂತಿಯ ಅನಿವಾರ್ಯ ಹಿಂಸಾಚಾರಣೆಯಲ್ಲಿ ಬಲಿಷ್ಠರಾಗುತ್ತ ಹೋದವರು ತಾವಾಗಿ ವೈರಾಗ್ಯವಶರಾಗಿ ಅಧಿಕಾರ ಬಿಟ್ಟು ಕೊಡುವುದುಂಟೆ? ಜನರಿಗಾಗಿ ತಾವು ಅಧಿಕಾರವನ್ನು ನಿಷ್ಠುರವಾಗಿ ನಡೆಸುತ್ತಿರುವುದು ಎಂಬುದನ್ನು ಆ ಜನರೇ ನಂಬಿದಾಗ, ಅಂಥ ಜನ ಯಾವ ಹಿಪೊಕ್ರಸಿಯ ಒಳತೋಟಿಯೂ ಇಲ್ಲದ ರಕ್ಕಸರಂತಾಗಿ ಬಿಡುವುದರಿಂದ, ಆಡಳಿತ ಅಸಹನೀಯವೂ ಭಯಾನಕವೂ ಆಗುತ್ತದೆ. ಸುಳ್ಳನ್ನು ಹೇಳುವುದು ಮಾತ್ರವಲ್ಲ ತಮ್ಮ ಏಕಾಂತದಲ್ಲೂ ಅದನ್ನು ನಂಬುವಷ್ಟು ಅವರು ಏಕಾಕ್ಷ ಪ್ರಾಣಿಗಳಾಗಿ ಬಿಟ್ಟಿರುತ್ತಾರೆ. ಪ್ರಾಯಶಃ ಸ್ಟಾಲಿನ್ ಆದದ್ದು ಹೀಗೆ. ರಷ್ಯವನ್ನು ಆಳಲು ತನ್ನಂಥವನು ಅಗತ್ಯವೆಂದು ಅವನು ನಂಬಿರಲೇಬೇಕು, ರುಮೇನಿಯಾದ ದುಷ್ಟನಂತೂ ತನ್ನ ಅರಮನೆಯಲ್ಲಿ ಮೈಲುಗಟ್ಟಲೆ ಉದ್ದದ ಒಳ ಸುರಂಗಗಳನ್ನು ನಿರ್ಮಿಸಿಕೊಂಡು ಬಿಟ್ಟಿದ್ದ. ನಮ್ಮ ಪುರಾಣಗಳ ರಾಕ್ಷಸನಂತೆ ಆಗಿ ಬಿಟ್ಟಿದ್ದ.

ಇನ್ನು ಡೆಮೊಕ್ರಟಿಕ್ ಸೆಂಟ್ರಲಿಸಂ ತತ್ವ ಕೇವಲ ಸೆಂಟ್ರಿಸಂ ಆಗಿ ಇಬ್ಬಗೆಯಲ್ಲಿ ಏಕಕಾಲದಲ್ಲಿ ಆಡುವ ಹಸಿ ಸುಳ್ಳಾಯಿತು. ಆರ್ವೆಲ್ ಕರೆಯುವ ಡಬಲ್‌ಥಿಂಕ್ ಶಬ್ದ ಇದು. ಇಂಥ ಪದಪ್ರಯೋಗದಲ್ಲಿ ಕಮ್ಯುನಿಸ್ಟರು ನಿಷ್ಣಾತರಾಗುತ್ತ ಹೋದರು.

ಆದ್ದರಿಂದ ಲೆನಿನ್ ವೈಯಕ್ತಿಕವಾಗಿ ಒಳ್ಳೆಯವನಿದ್ದಿರಬಹುದು. ತನ್ನ ಆದರ್ಶದಲ್ಲಿ ನಂಬಿದವನಿರಬಹುದು. ಆದರೆ ಸ್ಟಾಲಿನ್ನನ್ನು ಅಗತ್ಯಗೊಳಿಸುವ ತಾತ್ವಿಕತೆ ಅವನದಲ್ಲವೆ? ನಾನು ಹೀಗೆ ಕೇಳುವಾಗ ರಷ್ಯನ್ ಲೇಖಕರು ಲೆನಿನ್‌ನ ಪ್ರಾಮಾಣಿಕತೆಯನ್ನೂ ಅವಮಾನಿಸುತ್ತಾರೆ ಎಂಬುದು ಟೀ ವೇಳೆಯ ಖಾಸಗಿ ಮಾತಿನಲ್ಲಿ ನನಗೆ ತಿಳಿಯಿತು. ಗಾರ್ಬಚೇವ್ ಇನ್ನೂ ಲೆನಿನ್‌ನನ್ನು ಬಳಸಿಯೇ ತನ್ನ ವಿಚಾರವನ್ನು ಮುಂದಿಡುತ್ತಿದ್ದನಾದ್ದರಿಂದ ಲೆನಿನ್ ಬಗ್ಗೆ ಗುಸು ಗುಸು ಮಾತಷ್ಟು ಮಾತ್ರ ಲೇಖಕರಿಗೆ ಸಾಧ್ಯವಾಗಿತ್ತು.

ಯಾವ ಮಾತಾಡಿಯೂ ನಿಜವನ್ನು ಹೇಳುವುದು ಸಾಧ್ಯವಿಲ್ಲವೆನ್ನಿಸಿದಾಗ ನನಗೆ ಪುರಂದರದಾಸರ ಒಂದು ಸಾಲು ನೆನಪಾಯಿತು: “ಉತ್ತಮ ಪ್ರಭುತ್ವ ಲೊಳಲೊಟ್ಟೆ.” ಈ ಸಾಲಿನ ಸ್ವಾರಸ್ಯವನ್ನು ಲೇಖಕರಿಗೆ ವಿವರಿಸಿದೆ. ಮೊದಲ ಎರಡು ಸಂಸ್ಕೃತ ಶಬ್ದಗಳ ನಂತರ ಬರುವ ಲೊಳಲೊಟ್ಟೆ ಎನ್ನುವ, ತನ್ನ ಅರ್ಥಹೀನತೆಯಲ್ಲೇ ಪೊಳ್ಳನ್ನು ಅಭಿನಯಿಸುವ ಶಬ್ದದ ರುಚಿ ಅವರಿಗೆ ಕೂಡಲೇ ಹತ್ತಿತು. ರಷ್ಯನ್ನರು ಮಹಾ ಕಾವ್ಯಾಭಿಮಾನಿಗಳಲ್ಲವೇ? ಪ್ರಭುತ್ವ ಉತ್ತಮವಾಗಿದ್ದರೂ ಲೊಳಲೊಟ್ಟೆಯೇ. ವಿಜಯನಗರ ಸಾಮ್ರಾಜ್ಯದ ಸುವರ್ಣ ವೃಷ್ಟಿಯಾಯಿತೆಂಬ ಲೆಜೆಂಡಿನ ಕಾಲದಲ್ಲಿದ್ದ ಭಿಕ್ಷೆ. ಎತ್ತಿ ಬದುಕುವ ಕವಿ ಆಡಿದ ಮಾತಿದು. ಆದ್ದರಿಂದ ರಷ್ಯನ್ ಲೇಖಕರಿಗೆ ಲೆನಿನ್‌ಕಾಲದ “ಉತ್ತಮ ಪ್ರಭುತ್ವ” ಎಂಬ ಭ್ರಮೆ ಹುಟ್ಟಿಸಿದ ಘಟ್ಟವೂ ಲೊಳಲೊಟ್ಟೆ ಎನ್ನಿಸಬೇಕಿತ್ತು. ಹಾಗೆಯೇ ಲೆನಿನ್ ಹಿಂದೆ ಹೆಗಲ್‌ನನ್ನು ಬೆನ್ನಿಗಿಟ್ಟುಕೊಂಡ ಮಾರ್ಕ್ಸ್‌ವಾದ ಕನಸುಕಾಣುವ ಭವಿಷ್ಯದ ಕಾಲ. ಪ್ರಭುತ್ವ ಅತ್ಯುತ್ತಮವಾಗುತ್ತ ಹೋಗಿ ತನ್ನನ್ನೇ ತಾನು ಕಳಚಿಕೊಂಡು ಬಿಡುವ ಕಾಲ ಕೂಡ ಲೊಳಲೊಟ್ಟೆ ಎನ್ನಿಸಬೇಕಿತ್ತು. ಅಂದರೆ ಅಂಥ ಕಾಲವನ್ನು ಎಂದಾಗಲೀ ಯಾವ ವ್ಯವಸ್ಥೆಯಾಗಲೀ ತಲುಪಬಹುದೆಂಬ ಆದರ್ಶ ರಾಜ್ಯದ ಕಲ್ಪನೆ ಲೊಳಲೊಟ್ಟೆ ಎನ್ನಿಸಬೇಕಿತ್ತು. ಪುರಂದರದಾಸರ ಈ ಸಾಲು ನಿಮ್ಮ ಲೇಖಕರ ಕಟ್ಟಡ ಮೇಲೆ ಬರೆದಿಡಬಹುದಾದ್ದು ಎಂದು ನಾನು ಹೇಳಿದಾಗ, ರಷ್ಯನ್ ಲೇಖಕರು ನಕ್ಕರು. ಮತ್ತೆ ನನ್ನಿಂದ ಈ ಸಾಲನ್ನು ಹೇಳಿಸಿಕೊಂಡು ತಮ್ಮ ನೋಟ್‌ಬುಕ್ಕಿನಲ್ಲಿ ಗುರುತು ಹಾಕಿಕೊಂಡರು.

ನಾನು ಲೆನಿನ್‌ ಪ್ರಣೀತ ವೈಜ್ಞಾನಿಕ ಸಮಾಜವಾದದ ವೈಜ್ಞಾನಿಕತೆಯನ್ನೇ ಪ್ರಶ್ನಿಸಿದ್ದೆ. ಸಮಾಜವಾದವನ್ನಲ್ಲ. ಯಾಕೆಂದರೆ ಸಮಾಜವಾದದ ಆದರ್ಶ ಮಾನವನ ಹೃದಯದಲ್ಲಿ ಆಳವಾಗಿ ಯುಗ ಯುಗದಿಂದಲೂ ಉಳಿದು ಬಂದದ್ದು. ಅಮೆರಿಕಾದ ಗ್ರಾಹಕ ಸ್ವರ್ಗ ಕೂಡ ನರಕವೇ. ಗ್ರಾಹಕ ಮನೋವೃತ್ತಿಯ ಸಂಗ್ರಹ ದುರಾಸೆ ಪ್ರಪಂಚದಲ್ಲಿ ನಾವು ಗೌರವಿಸುವುದನ್ನೆಲ್ಲ ಚಿಲ್ಲರೆ ಮಾಡಿಬಿಡುತ್ತದೆ. ಬುದ್ಧ, ಕ್ರಿಸ್ತ, ಗಾಂಧಿಯರಂತೆಯೇ ಮಾರ್ಕ್ಸ್‌ನಿಗೂ ಹೊಸಕಾಲದ ಹಸಿವಿತ್ತು. ಆದರೆ ಮಾರ್ಕ್ಸ್‌ವಾದದಲ್ಲಿರುವ ಊನವೆಂದರೆ ಅದರ ಪರಮ ಲೌಕಿಕತೆಯಲ್ಲಿ ಮಾನವನಿಗೆ ವಿಕಾಸಶೀಲವಾದ ಪ್ರಾಣವಿದೆ, ಆದರೆ ಆತ್ಮವಿಲ್ಲ; ಯಾಕೆಂದರೆ ಮಾರ್ಕ್ಸ್‌ನದು ಮಾನವ ಕೇಂದ್ರಿತ ವಿಶ್ವ. ಬುದ್ಧನೂ ಅನಾತ್ಮವಾದಿ; ಆದರೆ ಅವನದು ಮಾನವ ಕೇಂದ್ರಿತ ವಿಶ್ವವಲ್ಲ. ಈ ಪ್ರಪಂಚ ಕಾಣಿಸುವಷ್ಟು ಮಾತ್ರ ಇರುವುದಲ್ಲ ಎಂಬ ಬೆರಗು ಇಲ್ಲದೆ ಕಾವ್ಯವಿಲ್ಲ, ಕಲೆಯಿಲ್ಲ, ಸತ್ಯಾನ್ವೇಷಣೆಯ ಛಲವೂ ಇಲ್ಲ.

ಗಾರ್ಬಚೇವ್ ಕೂಡ ಈ ಪ್ರಪಂಚ ನಮ್ಮ ಉಪಭೋಗಕ್ಕೆಂದು ಇರುವುದೆಂಬ ಮಾರ್ಕ್ಸ್‌ವಾದದ ಹೊಟ್ಟೆಯಲ್ಲಿ ಹುಟ್ಟಿದವನಾದ್ದರಿಂದ, ರಷ್ಯಕ್ಕಿರುವ ಆದರ್ಶ ಅಮೆರಿಕಾದಂತೆ ಆಗಬೇಕೆನ್ನುವುದು. ಮಾವೋ ಸಾಹಸದ ಲಾಂಗ್ ಮಾರ್ಚ್ ಕೂಡ ದಣಿದು ತಲುಪಿದ್ದು ಕೊಕೊಕೋಲಾವನ್ನು. ಆದ್ದರಿಂದ ಮಾರ್ಕ್ಸ್‌ನ ಸಮತೆಯ ಆಸೆ ನಿಜವಾಗಲು ನಮಗೆ ಈಗ ಬೇಕಾದ್ದು ನಮ್ಮ ಈವರೆಗಿನ ತಪ್ಪನ್ನು ಕಂಡುಕೊಂಡು ಹುಟ್ಟುವ ಹೊಸ ಸಿದ್ಧಾಂತ. ಈ ಸಿದ್ಧಾಂತದ ಪ್ರಾರಂಭದ ಮೆಟ್ಟಿಲೇ ತಂತ್ರಜ್ಞಾನದ ಫಲವಾದ ‘ಪ್ರಗತಿ’ ಮತ್ತು ‘ಅಭಿವೃದ್ಧಿ’ ಇತ್ಯಾದಿ ಅರ್ಥಶಾಸ್ತ್ರದ ಕಲ್ಪನೆಗಳನ್ನು ಅನುಮಾನದಿಂದ ನೋಡುವುದು.

ಮನುಷ್ಯ ಮನುಷ್ಯನನ್ನು ಕಿತ್ತಿ ತಿನ್ನಬಾರದು. ಹಾಗೆಯೇ ಮನುಷ್ಯನೂ ಈ ಭೂಮಿಯನ್ನು ಕಿತ್ತು ತಿಂದು ಮುಗಿಸಬಾರದು. ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ಸೃಜನಶೀಲವಾಗಬೇಕು; ದೇಹದ ದಣಿವಿನಲ್ಲಿ ಮನಸ್ಸು ಸುಖ ಕಾಣಬೇಕು. ಪ್ರತಿ ಬೆಳಿಗ್ಗೆ ಎದ್ದಾಗ ಕಾಣುವ ಪ್ರಪಂಚ ನಿತ್ಯ ಹೊಸದೆನ್ನಿಸಬೇಕು. ಇದು ಕನಸು.

ಗಾಂಧಿಗೂ ಗೊತ್ತು; ನಮಗೆ ಯಂತ್ರ ಬೇಕು. ಚರಕದ ಜೊತೆ ಹೊಲಿಗೆ ಯಂತ್ರವೂ ಬೇಕೆಂದು ಗಾಂಧಿ ಬಯಸಿದ್ದರು. ತನ್ನ ಹೆಂಡತಿ ಕಣ್ಣನ್ನು ದಣಿಸಿಕೊಂಡು ಹೊಲಿಯುತ್ತಿರುವುದನ್ನು ಕಂಡ ಸಿಂಗರ್ ಎಂಬಾತ ಹೊಲಿಗೆಯ ಯಂತ್ರ ತಯಾರಿಸಿದ ಎಂದು ಕೇಳಿ ಸಂತೋಷಪಟ್ಟು ಗಾಂಧಿ ಈ ಯಂತ್ರವನ್ನು ಬಯಸಿದ್ದರು. ಹೀಗೆಯೇ ಮನುಷ್ಯನನ್ನು ಹೆಚ್ಚು ಕ್ರಿಯಾಶೀಲನನ್ನಾಗಿ ಮಾಡುವ, ಈ ಪ್ರಪಂಚದ ಸೊಬಗನ್ನು ನಾವು ಧ್ಯಾನಶೀಲರಾಗಿ ಅನುಭವಿಸಲು ಅಗತ್ಯವಾದ ವಿರಾಮವನ್ನು ಒದಗಿಸುವ ಮಾನವ ನಿಯಂತ್ರಣದಲ್ಲಿ ಉಳಿಯುವ, ಎಲ್ಲ ಯಂತ್ರಗಳೂ ನಮಗೆ ಬೇಕು.

ಈ ಪ್ರಪಂಚ ಅಕ್ಷಯ ಪಾತ್ರೆಯೆಂದು ಬಗೆದಿದ್ದ ಮಾರ್ಕ್ಸ್‌ವಾದ ಹತ್ತೊಂಬತ್ತನೇ ಶತಮಾನದ ತಂತ್ರಜ್ಞಾನದ ಸಂಭ್ರಮದಿಂದ ಮುಕ್ತವಾಗಬೇಕು. ಉತ್ಪಾದನಾ ಸಂಬಂಧಗಳಲ್ಲಿರುವ ಪೈಪೋಟಿ, ದಮನ, ಸುಲಿಗೆ ಕೊನೆಯಾದರೆ ಮನುಷ್ಯನ ಸುಖೀರಾಜ್ಯದ ಕನಸು ನನಸಾಗುತ್ತದೆಂದು ತಿಳಿದ ಸಮಾಜವಾದ ವಿಫಲವಾಗಿದೆ. ಯಾಕೆಂದರೆ ಉತ್ಪಾದನಾ ಸಂಬಂಧದ ಜೊತೆ ಜೊತೆಯಲ್ಲೇ ಉತ್ಪಾದನಾ ಬದಲಾವಣೆಯೂ ಅಗತ್ಯ. ಈ ಬದಲಾವಣೆಗೆ ಪರ್ಯಾಯವಾದ ಟೆಕ್ನಾಲಜಿ ಅಗತ್ಯ. ಪ್ರಭುತ್ವದ ವಿಕೇಂದ್ರಿಕರಣ ಅಗತ್ಯ. ಮನುಷ್ಯನ ಕಲ್ಪನಾ ಲೋಕದಲ್ಲಿ ಅರಳಿದ ಅತ್ಯಂತ ಮಹತ್ವದ ಸೃಷ್ಟಿಯಾದ ದೇವರ ಕಲ್ಪನೆ ಇಂತಹ ಆಶಯಗಳ ಹಿಂದಿನ ಶಕ್ತಿಯಾಗಿದೆ.

ಹೀಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಪೊಳ್ಳೆನ್ನಿಸುವ ಸನ್ನಿವೇಶದಲ್ಲಿ ನಾವೆಲ್ಲ ಇದ್ದೇವೆ. ಹೊಟ್ಟೆಯ ಹಸಿವಿನಷ್ಟೇ ತೀವ್ರವಾಗಿ ದೇವರಿಗಾಗಿ ಹಸಿದವರು ಈ ಬಗೆಯ ಮಾತಿಗೆ ಜೀವ ತರಬಲ್ಲರು. ಹೀಗೆ ಹಸಿದವರ ದೇವರು ಮತೀಯವಾಗಿರುವುದಿಲ್ಲ – ಅಲ್ಲಮನ ಹಸಿವು ಆ ಬಗೆಯದು. ರಾಜಕೀಯದ ಉಪದ್ವ್ಯಾಪಗಳಲ್ಲಿ ತೊಡಗಿದ್ದೂ ದೇವರಿಗಾಗಿ ಹಸಿದ ನಮ್ಮ ಕಾಲದ ಗಾಂಧೀಜಿ ಇಹದಲ್ಲೇ ಪರವನ್ನು ಕಂಡವರು. ಲೆನಿನ್‌ಗಾಗಲೀ, ಮಾವೋಗಾಗಲೀ ಇದ್ದದ್ದು ಇಹ ಒಂದೇ. ‘ಪರ’ ದ ಬಗ್ಗೆ ಅಮೆರಿಕನ್ ಪ್ರಭುತ್ವ ಮಾತಾಡಿದರೂ ಅದಕ್ಕಿರುವುದು ‘ಇಹ’ ಒಂದೇ.

ಇರುವುದು ‘ಇಹ’ ಒಂದೇ, ಅದನ್ನು ನಮಗೆ ಇಷ್ಟಬಂದಂತೆ ತಿರುಚಿಕೊಳ್ಳಬಹುದು ಎಂದು ತಿಳಿದವರು ಓಜೋನ್ ವಲಯವನ್ನು ತೂತು ಮಾಡಲು ಹೊರಟಿದ್ದಾರೆ. ನಮ್ಮ ‘ಇಹ’ ದ ಬಗ್ಗೆ ವಿಶೇಷ ಜ್ಞಾನ ಸಂಗ್ರಹಿಸಿರುವ ಮಾರ್ಕ್ಸ್‌ವಾದ ಈಗ ಗಾಂಧಿಯಿಂದ ಕಲಿಯಬೇಕಾಗಿದೆ.

ಮೇಲಿನ ಮಾತುಗಳನ್ನು ನಾನು ನಾಚುತ್ತ ಬರೆದಿದ್ದೇನೆ. ಅಂಥ ಮಾತುಗಳಿಗೆ ಜೀವ ಬರುವುದು ಗಚೇವ್ ಹಾಗೆ ಆವೇಶಿತನಾಗಿ ಆಡಿದಾಗ. ನಾವು ಈಗ ಬುದ್ಧಿಪೂರ್ವಕವಾಗಿ ಕಾಣುತ್ತಿರುವ ಸತ್ಯ ಯಾವುದೋ ಒಂದು ದಿನ ನಮ್ಮ ಅಸ್ತಿತ್ವದ ಉಳಿವಿನ ಪ್ರಶ್ನೆಯಾಗಿ ನಮ್ಮನ್ನು ಕಾಡಿಯೇ ಕಾಡುತ್ತದೆ ಎಂಬ ಭರವಸೆಯಲ್ಲಿ ಮೇಲಿನ ಮಾತುಗಳು ಹುಟ್ಟಿಕೊಂಡಿವೆ.