ತುಂಗಾನದಿಯ ದಂಡೆಯ ಮೇಲಿನ ಒಂದು ಅಗ್ರಹಾರದಲ್ಲಿ ನಾನು ನನ್ನ ಬಾಲ್ಯ ಕಳೆದದ್ದು. ತೀರ್ಥಹಳ್ಳಿಯ ಹೈಸ್ಕೂಲಿಗೆ ನಿತ್ಯ ನಡೆದುಹೋಗಿ ಬರುತ್ತಿದ್ದೆ. ಮಡಿವಂತ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ನಮ್ಮನ್ನು ಆ ದಿನಗಳಲ್ಲಿ ನಿಗೂಢವಾದ ಭಯಗಳು ಆವರಿಸಿದ್ದವು. ಅಂತಹ ಭಯಗಳಿಗೆ ರೂಪಕೊಡುತ್ತಿದ್ದುದು ಭೂತಗಳೇ ಹೊರತು ಸಾತ್ವಿಕ ಶಕ್ತಿಯ ದೇವರಲ್ಲ. ಸೋಮಾರಿ ಆಳು, ಗೇಣಿ ಕಳ್ಳತನ ಮಾಡುವ ರೈತ, ಗಂಡನ ಪ್ರೀತಿಯಿಂದ ವಂಚಿತಳಾದ ಹೆಣ್ಣು –  ಇವರೆಲ್ಲರಿಗೂ ಆಪತ್ತಿನಲ್ಲಿ ಭೂತದ ಆಶ್ರಯವಿರುತ್ತಿತ್ತು. ಗೋಳು ತಡೆಯಲಾರೆ ಎನ್ನಿಸಿದಾಗ, ಮೈಮೇಲೆ ಭೂತ ಬರುತ್ತಿತ್ತು. ತಲೆಕೆದರಿಕೊಂಡು ಗರ್ಜಿಸುತ್ತಲೋ, ಥತ್ತರ ನಡುಗುತ್ತಲೋ ಯಜಮಾನನಿಗೆ ಎದುರು ನಿಲ್ಲುವ ಅವಕಾಶವನ್ನು ಒದಗಿಸುತ್ತಿದ್ದವು.

ನಾವು ಹುಡುಗರು ಹಂಚಿಕೊಳ್ಳುತ್ತಿದ್ದ ಈ ಬಗೆಯ ವೃತ್ತಾಂತಗಳಲ್ಲಿ, ಇಂಥದಕ್ಕೆಲ್ಲ ಸೊಪ್ಪು ಹಾಕದ, ಕೋರ್ಟಿನ ಮೆಟ್ಟಿಲು ಹತ್ತಿ ಇಳಿದ ಯಜಮಾನರೂ ಇರುತ್ತಿದ್ದರು. ಅಂದರೆ, ಅವರು ‘ಭೂತಬಿಡಿಸ’ಬಲ್ಲವರಾಗಿದ್ದರು. ನಾಗರ ಬೆತ್ತದಿಂದ ಹತ್ತೇಟು ಬಿಗಿದದ್ದೇ, ಎಲ್ಲಿಯ ಭೂತ? ಮತ್ತೆ ಅವನು ಹಲ್ಲುಗಿಂಜುವ ಹುಲುಮನುಷ್ಯನಾಗಿ ಬಿಡುವಲ್ಲಿ, ಕೆಲವು ಪ್ರಸಂಗಗಳು ಮುಕ್ತಾಯವಾಗುತ್ತಿದ್ದವು. ಯಜಮಾನನ ಕಟ್ಟುಪಾಡುಗಳ ರಕ್ಷಣೆಗೂ ಇವೇ ಭೂತಗಳೇ ಇದ್ದದ್ದು ಅಲ್ಲವೆ?

ಆ ಕಾಲಕ್ಕಾಗಲೇ ವಿಚಾರವಂತನಾಗಲು ಪ್ರಯತ್ನ ಪಡುತ್ತಿದ್ದ ನನ್ನನ್ನೂ ಭೂತದ ಭಯ ಬಿಟ್ಟಿರಲಿಲ್ಲ. ಗುಡ್ಡದ ಮೇಲಿನ ಭೂತದ ಕಲ್ಲಿಗೆ ಮೈಲಿಗೆ ಮಾಡಿ, ಸ್ಮಶಾನದಲ್ಲಿ ರಾತ್ರೆ ಸಂಚರಿಸಿ, ನಿರೀಶ್ವರವಾದಿ ಇಂಗರ್‌ಸಾಲನ ವಿಚಾರಗಳನ್ನು ಹೈಸ್ಕೂಲಿನಲ್ಲಿ ಕೇಳಿಸಿಕೊಂಡು, ವಿಚಾರವಾದಿಯಾಗಲು ಹೊರಟಿದ್ದ ನನಗೂ, ಭೂತ ನಿಜವಿರಬಹುದೇ ಎನ್ನುವ ಅನುಮಾನ ಬಿಟ್ಟಿರಲಿಲ್ಲ. ನನ್ನಲ್ಲಿ ಅವ್ಯಕ್ತ ಭಯ ಹುಟ್ಟಿಸುತ್ತಿದ್ದುದು ದೆವ್ವವೆಂದೂ, ಹಳ್ಳಿಗರು ನಂಬಿ ಪೂಜಿಸುತ್ತಿದ್ದುದು ಭೂತವೆಂದೂ, ನನ್ನ ಮಡಿವಂತ ಅಜ್ಜ ವಿವರಿಸುತ್ತಿದ್ದರು. ಯಾಕೆಂದರೆ, ಹರಿಸರ್ವೋತ್ತಮ ತತ್ವಾನುಯಾಯಿಯಾದ ನನ್ನ ಅಜ್ಜ ಕೂಡಾ, ಭೂತಗಳ ಪೂಜೆಯಲ್ಲಿ, ರಕ್ತ ಬಲಿಗೆ ಪೂರ್ವದ ಯಾವುದೋ ಹಂತದಲ್ಲಿ, ಭಾಗಿಯಾಗುತ್ತಿದ್ದರು. ನನ್ನ ವೈಚಾರಿಕ ಪ್ರಶ್ನೆಗಳಿಗೆ ಅವರದೇ ಸಮಾಧಾನವಿರುತ್ತಿತ್ತು. ಸರ್ವಾಂತರ್ಯಾಮಿಯಾದ ಶ್ರೀವಿಷ್ಣು ಭೂತಗಳ ಹೃದಯದಲ್ಲೂ ಇದ್ದಾನೆ. ಜೀವೋತ್ತಮನಾದ ಶಿವನ ಹೃದಯದಲ್ಲಿರುವಂತೆ, ಶಿವನ ಗುಣಗಳಾದ ಭೂತದಲ್ಲೂ ಅವನು ಇದ್ದಾನೆ –  ಹೀಗೆ ಅವರ ವಾದ.

ಹೈಸ್ಕೂಲು ಮುಗಿಸಿ, ಶಿವಮೊಗ್ಗದ ಇಂಟರ್ ಕಾಲೇಜು ಸೇರಿ, ಗೇಣಿದಾರರ ಪರ ನಿಂತ ಸಮಾಜವಾದಿ ಪಕ್ಷದ ಅನುಯಾಯಿಯಾಗಿ, ರಜಕ್ಕೆಂದು ಹಳ್ಳಿಗೆ ಬಂದಿದ್ದ ನಾನು ಒಮ್ಮೆ, ನಮ್ಮ ಗುಡ್ಡದ ಮೇಲೆ ನಡೆಯುತ್ತಿದ್ದ ಪಂಜುರ್ಲಿ ಕೋಲ ನೋಡಲು ಹೋಗಿದ್ದೆ. ನನ್ನ ತಂದೆಯ ಕಣ್ಣು ತಪ್ಪಿಸಿ, ಎಲ್ಲರಂತೆ ಗಣಮಗನ ಸಿದ್ಧತೆ ನೋಡುತ್ತ ಕೂತೆ. ನನ್ನ ಕಣ್ಣೆದುರೇ ಅವನು ಕ್ರಮೇಣ ಪಂಜರ್ಲಿಯಾಗುತ್ತ ಹೋದ. ಸುತ್ತಲಿನ ತೋಟಗಳಲ್ಲಿ ಬೆಳೆಯುವ ಬಾಳೆ, ತೆಂಗು, ಅಡಿಕೆ, ಮರಗಳೇ ಗಣಮಗನ ವೇಷಭೂಷಣಗಳಿಗೆ ಸಾಮಗ್ರಿ ಒದಗಿಸಿದ್ದವು. ದೊಂದಿಯ ಬೆಳಕಿನಲ್ಲಿ ಅವನ ಕಣ್ಣುಗಳು ಹೊಳೆಯುತ್ತಿದ್ದವು. ಆದರೂ ಅವನು ಕೇವಲ ಮನುಷ್ಯನಾಗಿಯೇ ತನ್ನನ್ನು ಶೃಂಗರಿಕೊಳ್ಳುತ್ತಿದ್ದ. ಹಾಗೇ ಕುಕ್ಕುರು ಕೂತು, ಬೀಡಿ ಸೇದಬಹುದಾದಷ್ಟು ಸಾಮಾನ್ಯನಾಗಿಯೇ ಇದ್ದ.

ಕತ್ತಲು ದಟ್ಟವಾಗುತ್ತಿದ್ದಂತೆ, ಎಲೆಯಡಿಕೆ ಮೆಲ್ಲುತ್ತ ಶೆಟ್ಟರು, ಭಟ್ಟರು ಗಣ್ಯರು ಎಲ್ಲ ಬಂದರು.

ಕೈಯಲ್ಲಿ ಸಿಂಗಾರ ಹಿಡಿದ ಮನುಷ್ಯ ಪಂಜುರ್ಲಿಯಾಗಲು ವ್ಯಾಕುಲದ ಪಾಡ್ದನ ಕೇಳಿಸಿಕೊಳ್ಳುತ್ತ, ಹೂಗುಡುತ್ತ, ತುಸು ತುಸುವೇ ಮೈನಡುಗುತ್ತ, ಕಣ್ಣು ಕಂಪಿಸುತ್ತ, ನೋಡುವ ಕಣ್ಣಲ್ಲವೆಂಬಂತೆ ಆಲಿಯಾಡಿಸುತ್ತ, ನಡೆಯುವ ಕಾಲಿಲ್ಲವೆಂಬಂತೆ ಕುಮ್ಮುಚಟ್ಟು ನೆಗೆಯುತ್ತ, ಹೂಂಕರಿಸುತ್ತ, ಸಂಚಾರಕ್ಕೆ ಪರಿಧಿ ಸಾಲದೆಂಬಂತೆ ಎತ್ತೆತ್ತಲೋ ನುಗ್ಗುತ್ತ, ಒಬ್ಬೊಬ್ಬನೇ ಗಣ್ಯನನ್ನಾರಿಸಿಕೊಂಡು, ಅವನೆದುರು ತನ್ನ ರುದ್ರ ತೇಜಸ್ಸನ್ನು ಉಕ್ಕಿಸಿಕೊಳ್ಳುತ್ತ, ತುಳುಕಾಡಲು ತೊಡಗಿದ. ಒಬ್ಬಿಬ್ಬರು, ಅವನ ತಲೆಗೆ ಎಳನೀರು ಚೆಲ್ಲಿ, ಮೈಗೆ ಬೆಂಕಿಯ ದೊಂದಿಯನ್ನು ನುರಿದುಕೊಳ್ಳುವ ಅವನಲ್ಲಿನ ಭೂತದ ಸತ್ಯಕ್ಕೆ ತಲೆಬಾಗಿ, ಮೆಚ್ಚುಗೆ ವ್ಯಕ್ತಪಡಿಸಿ, ಮುಂದಕ್ಕೆ ಕಳಿಸಿದರು. ಕಂಕುಳಿಗೂ ಎದೆಗೂ ಬೆಂಕಿಯ ದೊಂದಿಯನ್ನು ನುರಿದುಕೊಳ್ಳುವ ರೌದ್ರವನ್ನು ಸಂಯಮದಲ್ಲಿ ಹಿಡಿದಿಡಲು, ಪಂಜುರ್ಲಿಯ ಅಕ್ಕಪಕ್ಕದಲ್ಲಿ ಇಬ್ಬರು ಆರ್ತರು ಇದ್ದರು. ದೊಂದಿಯ ಬೆಳಕಲ್ಲಿ ಕಿವಿಯ ಒಂಟಿ ಹೊಳೆಯುವ ಒಬ್ಬ ಗಣ್ಯ, ಮರ್ಯಾದೆಗೆಂದು ಪಂಜುರ್ಲಿ ತನ್ನೆದುರು ನಿಂತಾಗ, ತಾಳಿಕೊಳ್ಳಲಾರದೆ ಕಂಪಿಸತೊಡಗಿದ. ಸುತ್ತ ಇದ್ದವರು ಅವನ ಶುಶ್ರೂಷೆ ಮಾಡುತ್ತಿದ್ದಂತೆ ಪಂಜುರ್ಲಿ, ನೋಡುನೋಡುತ್ತಲೇ, ಮಠದ ಏಜೆಂಟರ ಮಗನೆಂದೋ ಏನೋ, ನನ್ನನ್ನೇ ಆಯ್ದು, ನನ್ನೆದುರು ನಿಂತು ಕೇಕೆ ಹಾಕಿ, ಕತ್ತಲೆಗೆ ದೊಂದಿ ತಿವಿದು, ಘರ್ಜಿಸಿತ್ತು.

ನನ್ನ ಎದೆ ಜಗ್ಗೆಂದಿತ್ತು. ಬಾಯಿ ಒಣಗಿತ್ತು. ಒಂದು ಕ್ಷಣ ಸ್ತಬ್ಧನಾಗಿಬಿಟ್ಟೆ. ಕಾಲೇಜು ವಿದ್ಯಾರ್ಥಿ ಎಂಬ ಅಭಿಮಾನದಿಂದ ನಾನು ಕಿರುಚಿಕೊಳ್ಳಲಿಲ್ಲವೆಂದು ಕಾಣುತ್ತದೆ. ಅಜ್ಜಯ್ಯ ಸಿಡಿಲು ಗುಡುಗಿನ ಭಯ ಕಳೆಯಲೆಂದು ಹೇಳಿಕೊಟ್ಟಿದ್ದ ಅರ್ಜುನನ ಪ್ರಾರ್ಥನೆ ಮಾಡಿದ್ದೆ –  ಅರ್ಜುನಃ ಫಲ್ಗುಣೋ ಪಾರ್ಥ ಕಿರೀಟೀ ಶ್ವೇತವಾಹನಃ –  ಪ್ರಾರ್ಥನೆ ಮಾಡುತ್ತ ಅಲ್ಲಿಂದ ಓಟಕಿತ್ತಿದ್ದೆ.

ಮತ್ತೆ ಕೆಲವು ತಿಂಗಳುಗಳ ಹಿಂದೆ ಮಣಿಪಾಲದಲ್ಲಿ ಕೋಲ ನೋಡಲು ಹೋಗಿದ್ದೆ. ವಿದ್ಯುತ್‌ಶಕ್ತಿಯ ಎಲ್ಲ ನೆರವನ್ನೂ ಪಡೆದ ಭೂತವದು; ಹುಮ್ಮಸ್ಸಿಗೆಂದು ಸಿನೆಮಾ ಹಾಡಿನ ಆಸರೆ ಕೂಡಾ ಇತ್ತು –  ಆದರೂ, ಒಂದು ಕ್ಷಣ ಬಾಲ್ಯದ ಪಂಜುರ್ಲಿಯ ನೆನಪಾಗುವಂತೆ, ಭೂತದ ಆವೇಶ ತೋರಿತ್ತು; ಅಂದರೆ, ಹಾಗೆ ವೈಚಾರಿಕವಾಗಿ ಪರರಿಗೆ ವಿವರಿಸುವಂತೆ ತೋರಿತ್ತು.

ಬುದ್ಧಿವಂತಿಕೆಯಲ್ಲಿ ಬೆರಗು ಉಳಿಯುವುದಿಲ್ಲವೇನೋ? ಬೆರಗು ಉಳಿದಿದ್ದರೆ ಇದನ್ನು ಬರೆಯುತ್ತಿರುವ ಮನುಷ್ಯನಾಗಿ ಇರುತ್ತಿರಲಿಲ್ಲವೇನೊ. ಸಿರಿಭೂತದ ಜಾತ್ರೆ ನೋಡಿದೆ. ಉಡುಪಿ ಹತ್ತಿರದ ಹಿರಿಯಡ್ಕ ಎಂಬ ಸಣ್ಣ ಪೇಟೆಯಲ್ಲಿರುವ ವೀರಭದ್ರ ದೇವಸ್ಥಾನದ ಹೊರವಲಯದಲ್ಲಿ, ಹೊರವಲಯದಲ್ಲಿ ಇರಬೇಕಾದವರು ಹೊರವಲಯದಲ್ಲಿ, ಒಳವಲಯದಲ್ಲಿ ಇರಬೇಕಾದವರು ಒಳವಲಯದಲ್ಲಿ ಕಿಕ್ಕಿರಿದಿದ್ದರು. ಸುತ್ತಮುತ್ತಲಿನ ಎಲ್ಲ ಜಾತಿಯ ಜನರು, ತಮ್ಮ ತಮ್ಮ ಪರಿಧಿಯಲ್ಲಿ, ಒಟ್ಟು ಅಚ್ಚುಕಟ್ಟು ಕೆಡದಂತೆ ಉನ್ಮತ್ತರಾಗಿದ್ದರು. ಯಾವ ದಿಕ್ಕಿಗೆ ನೋಡಿದರೂ, ತಲೆಕೆದರಿ ಕಂಪಿಸುತ್ತ, ಕೇಕೆ ಹಾಕುತ್ತಾ, ಅಥವಾ ಮೂಕವಾಗಿ ಏದುಸಿರು ಬಿಡುತ್ತ ಆವೇಶಿತರಾದ ಹೆಂಗಸರು ಸುತ್ತ, ದೈನ್ಯದಿಂದ ನಿಂತು ಓಲೈಸುವ ಮನೆಯ ಗಂಡಸರು. ಹೂವು, ಅಡಿಕೆ, ಸಿಂಗಾರ, ಕುಂಕುಮ, ಅರಿಸಿನ, ಕೆದರಿದ ಕೂದಲು, ಲೋಭಾನದ ಹೊಗೆ ಹಾಗೂ ರೋಷಾವೇಶ –  ಮೂಗಿಗೂ ಕಣ್ಣಿಗೂ ಕಿವಿಗೂ ಅಪ್ಪಳಿಸುವಷ್ಟು.

ಜಾತ್ರೆಗೆ ಬಂದ ಪ್ರತಿ ಹೆಂಗಸೂ ಉದ್ರಿಕ್ತ ದೇವಿಯಾಗಿ ಮೈಮರೆತು ತನ್ನ ಮನುಷ್ಯ ಸಹಜ ದುಗುಡವನ್ನು, ರೋಷವನ್ನು ಕಾರುತ್ತ, ಗಂಡಸಿಗೆ ಛೀಮಾರಿ ಹಾಕುತ್ತಿದ್ದಳು. ಒಂದು ಮುದುಕಿ ಬೀಡಿ ಪಡೆದು ಸೇದುತ್ತ, ಪರಮಹರ್ಷದಲ್ಲಿ ನಗುತ್ತಿದ್ದಳು. ಬೀಡಿಯ ಮೇಲೆ ಬೀಡಿ ಸೇದುತ್ತ, ಕೊನೆ ಎಂಟು ಹತ್ತು ಬೀಡಿಗಳನ್ನು ಒಟ್ಟಾಗಿ ದಮ್ಮೆಳೆದು ಗಹಗಹಿಸಿದಳು. ಅವಳ ಮೊಮ್ಮಕ್ಕಳಿರಬೇಕು –  ಅಜ್ಜಿಯ ಗೆಲುವಿನ ಅಟ್ಟಹಾಸಕ್ಕೆ ಮರುಳಾಗಿ ನೋಡುತ್ತಿದ್ದರು. ಪ್ರಾಯದ ಒಂದು ಹೆಂಗಸು, ತನ್ನ ಗಂಡನನ್ನು ಹೀಯಾಳಿಸುತ್ತ –  ಅವನು ಕಚ್ಚೆಹರುಕನಿರಬೇಕು –  ಕಿರುಚುತ್ತಿದ್ದಳು.

ಅಮೇರಿಕಾದ ಕಾಕ್‌ಟೇಲ್ ಪಾರ್ಟಿಗಳಲ್ಲಿ ಕುಡಿದು ತಲೆಗೇರಿ, ಒಳಗೆ ಅಮುಕಿದ್ದನ್ನೆಲ್ಲ ಬಡಬಡಿಸುವ ಗಣ್ಯರಿಗೂ ಈ ಹೆಂಗಸರಿಗೂ ವ್ಯತ್ಯಾಸವಿಲ್ಲ ಎನಿಸಿತು. ಕುಡಿಯುವುದೊಂದು ನೆವವಾದಂತೆ, ಈ ಸಿರಿಯ ಉತ್ಸವವೂ ನೆವವಿರಬಹುದು. ಆದರೆ ಪಾಲುದಾರ ಯಾತ್ರಿಕರ ಕಣ್ಣಲ್ಲಿ ಮಾತ್ರ, ಈ ಹೆಂಗಸರೆಲ್ಲರೂ ಸಿರಿಗಳಾಗಿದ್ದರು, ದೇವಿಯರಾಗಿದ್ದರು. ನಿತ್ಯದ ಕರಕರೆಯ ಹೆಣ್ಣು ಜೀವಗಳು ಈ ಒಂದು ದಿನ, ಈ ಒಂದು ದಿನ, ಸಿರಿದೇವಿಯಾಗಿದ್ದರು. ಅವರ ಕಚ್ಚಿಹರುಕ ಕ್ರೂರ, ಅಥವಾ ಮುಟ್ಠಾಳ ಗಂಡುಗಳು ಆರ್ತರಾಗಿದ್ದರು. ಸಿರಿಯ ಸನ್ನಿಧಿಯಲ್ಲಿ ವಾದಾತೀತವಾಗಿ, ಹೇಳಬಹುದಾದ, ಕೇಳಿಸಿಕೊಳ್ಳಬೇಕಾದ, ಸ್ಥಿತಿ ಒದಗಿತ್ತು.

ಇನ್ನೂ ಒಳವಲಯದಲ್ಲಿ, ಮಡಿ ಮಡಿ ಬ್ರಾಹ್ಮಣರು, ಸಿರಿದೇವಿಗಿಂತ ಮೇಲಿನ ದೇವರುಗಳ ಉತ್ಸವ ನಡೆಸಿದ್ದರು –  ಪಲ್ಲಕ್ಕಿಯಲ್ಲಿ, ವಿಧಿಯುಕ್ತ ಮಂತ್ರಗಳನ್ನು ಪಠಿಸುತ್ತ,

ಈ ಅನುಭವ ನನಗೆ ಅಪರೂಪವೆನ್ನಿಸಲು ಕಾರಣ, ಅಲ್ಲಿ ಜರುಗುತ್ತಿದ್ದುದು ವೈಯಕ್ತಿಕವೂ ಸಾಂಸಾರಿಕವೂ ಆದ ಹಗರಣ ಸ್ವರೂಪದ್ದಾಗಿತ್ತು; ಜೊತೆಗೆ ಸಾರ್ವಜನಿಕ ಉತ್ಸವವೂ ಆಗಿತ್ತು. ‘ಸಂತೆಯಲ್ಲಿ ಸೀರೆ ಬಿಚ್ಚಿದ ಹಾಗೆ’ ಎನ್ನುವ ಗಾದೆಮಾತಿನಂತೆ ಸಂತೆಯಲ್ಲಿ ಎಲ್ಲರೂ ನಗ್ನರಾದರೆ, ತಮ್ಮ ತಮ್ಮ ದೈವಕ್ಕೆ ಎದುರಾದರೆ, ಮೈಮನಗಳನ್ನು ತೊಳೆದು ಶುಭ್ರವಾಗಲು ತೊಡಗಿದರೆ –  ಅದಕ್ಕೆ ಏನೆನ್ನಬೇಕು?

ಈ ಸಿರಿಯ ಬಗ್ಗೆ ಕೆಲವು ಅಮೇರಿಕನ್ ವಿದ್ವಾಂಸರಿಗೆ, ಜರ್ಮನ್ ವಿದ್ವಾಂಸರಿಗೆ ತುಂಬ ಗೊತ್ತು. ನಾನು ಮೊದಲು ಸಿರಿಯ ಬಗ್ಗೆ ಕೇಳಿದ್ದೂ ಆ ವಿದ್ವಾಂಸರಿಂದ, ಜರ್ಮನಿಯಲ್ಲಿ ಕೆಲವು ತಿಂಗಳು ಅಧ್ಯಾಪಕನಾಗಿದ್ದಾಗ.

ನನ್ನ ಅಜ್ಜನ ಸರೀಕರು ಈ ಸಿರಿ ಜಾತ್ರೆ ನಡೆಯುವ ದೇವಸ್ಥಾನದಲ್ಲಿ ಅರ್ಚಕರಾಗಿದ್ದಿರಬಹುದು. ಆದರೆ ಆಗಲೂ ನನ್ನ ಅಜ್ಜಿಯಾಗಲೀ, ನನ್ನ ತಾಯಿಯಾಗಲೀ, ಈ ಜಾತ್ರೆಯಲ್ಲಿ ಪಾಲುಗೊಳ್ಳುತ್ತಿರಲಿಲ್ಲ. ನಾನು ಹುಡುಗನಾಗಿದ್ದಾಗ ನಮ್ಮ ಮಠದಲ್ಲಿ, ಮೈಮೇಲೆ ಬರುವ ಬ್ರಾಹ್ಮಣ ಹೆಂಗಸರಿಗೆ ಭೂತ ಬಿಡಿಸುವುದಿತ್ತು. ಶ್ರೀರಾಮನಿಗೆ ಪೂಜೆಯಾದ ನಂತರ, ಎದುರಿನ ಹನುಮಂತನಿಗೆ ಪೂಜೆಯಾಗಿ, ಕೊನೆಯಲ್ಲಿ ಅಲ್ಲಿನ ಭೂತರಾಯನಿಗೆ ಪೂಜೆಯಾಗುತ್ತಿತ್ತು. ಎಲ್ಲ ಆದ ಮೇಲೆ ಮಠದ ಯತಿಗಳೇ, ಯಾವುದೋ ಯಃಕಶ್ಚಿತ್ ಭೂತದ ಚೇಷ್ಟೆಗೊಳಗಾದ ಹೆಂಗಸಿನ ಮುಖಕ್ಕೆ ನೀರೆರಚಿ, ಪೀಡಿಸುವುದೇ ಪ್ರಿಯವಾದ ಭೂತವನ್ನು ಗದರಿಸುತ್ತಿದ್ದರು. ಭೂತ ಹೆದರುತ್ತಲೂ ಇತ್ತು. ಹೆಂಗಸರು ಗುಣವಾಗಿ, ಅವರ ಗಂಡಸರು ಕೊಂಚ ಬದಲಾಗಿ, ತಮ್ಮ ಮನೆಗೆ ಹೋಗುತ್ತಿದ್ದರು. ಭೂತ ಬಿಡದಿದ್ದರೆ ಮತ್ತೆ ಬರುತ್ತಿದ್ದರು.

ಸಿರಿ ಜಾತ್ರೆಗೆ ನಾನು ಉಡುಪಿಯ ಗೆಳೆಯರ ಜೊತೆ ಹೋದ ರಾತ್ರೆ ನಮ್ಮೊಡನೆ ಒಬ್ಬಳು ಜಾಣ ದಿಟ್ಟೆ ಹುಡುಗಿಯಿದ್ದಳು. ಘನ ವಿದ್ವಾಂಸರ ಮನೆಯ ಈ ವಿದ್ಯಾವಂತ ಹುಡುಗಿ –  ನಾಟಕದಲ್ಲಿ ನಿಪುಣೆ. ಆದರೆ ಪ್ರತಿವರ್ಷ ನಡೆಯುವ ಸಿರಿಜಾತ್ರೆ ನೋಡಲು ಅವಳು ಬಂದದ್ದು ಅದೇ ಮೊದಲು.

ವಿಚಿತ್ರ –  ಎಷ್ಟು ವೈವಿಧ್ಯಗಳ ನಡುವೆ ನಾವು ಬದುಕುತ್ತೀವಿ! ಆದರೆ ಅವುಗಳನ್ನೆಲ್ಲಾ ತಿಳಿಯಬೇಕೆಂಬ, ತಿಳಿದು ನಮ್ಮ ದೃಷ್ಟಿಗೆ ಪರಿವರ್ತಿಸಬೇಕೆಂಬ ಒತ್ತಡ ನಮ್ಮ ಮೇಲೆ ಇರುವುದಿಲ್ಲ. ಇರಬೇಕಾಗಿಯೂ ಇಲ್ಲ ಎನ್ನುವುದೂ ನಿಜವೆ.

ಇರಬೇಕಾಗಿ ಇಲ್ಲ ಎನ್ನುವುದು ನಿಜವೇ? ಅದೆಷ್ಟೋ ಶತಮಾನಗಳ ಹಿಂದೆ, ಇದೇ ಉಡುಪಿಯಲ್ಲಿ ಹುಟ್ಟಿ ಬಾಳಿದ್ದ ಆನಂದತೀರ್ಥರು, ಈ ವೈವಿಧ್ಯಮಯ ಆಚರಣೆಗಳ ನಡುವೆ ಹೇಗೆ ಸತ್ಯವನ್ನು ಪರಿಭಾವಿಸಿದರು? ಸಿರಿ ಭೂತದ ಉತ್ಸವ ನೋಡಿ ಬಂದು ಅದೇ ಗುಂಗಿನಲ್ಲಿದ್ದ ನಾನು, ಆನಂದತೀರ್ಥರ ದ್ವಾದಶ ಸ್ತೋತ್ರಗಳನ್ನು ಕೇಳಿಸಿಕೊಂಡೆ. ಆರ್ದ್ರವಾದ ಭಾವನೆಯನ್ನು ನಮ್ಮಲ್ಲಿ ಉಂಟುಮಾಡುವಂತೆ ಹಾಡಬಲ್ಲ ಸುಬ್ರಮಣ್ಯದ ಶ್ರೀಗಳು ಬನ್ನಂಜೆಯವರ ಭಾಷಾಂತರವನ್ನು ಹಾಡಿದ್ದಾರೆ; ಸಂಸ್ಕೃತ ಮೂಲವನ್ನೂ ಹಾಡಿದ್ದಾರೆ.

ಈ ಸ್ತೋತ್ರಗಳಲ್ಲಿ ಆನಂದತೀರ್ಥರ ಉದ್ದೇಶ ನನ್ನ ಪಾಲಿಗೆ ಹೀಗೆ ಸ್ಪಷ್ಟಗೊಂಡಿತು: ಆನಂದತೀರ್ಥರ ಸುತ್ತ ಜೈನ ಧರ್ಮವಿದೆ, ಅಲ್ಲಿ ಇಲ್ಲಿ ಏಕದೇವತೋಪಾಸನೆಯ ಉಗ್ರನಿಷ್ಠೆಯ ಇಸ್ಲಾಂ ಕಣುಕಿದೆ, ಶಂಕರ ಪ್ರಣೀತ ಅದ್ವೈತವಿದೆ, ಶೈವ ಧರ್ಮವಿದೆ, ಭೂತಾರಾಧನೆ ಇದೆ. ಅವರವರ ವೈಚಾರಿಕತೆಗೆ ನಿಲುಕುವಂತೆ ನ್ಯಾಯ, ಯೋಗ, ಮೀಮಾಂಸೆ, ಸಾಂಖ್ಯ, ವಿಶಿಷ್ಟಾದ್ವೈತ, ಹೀಗೆ ಇನ್ನೇನೋ ಹಲವು ಇವೆ. ಈ ಎಲ್ಲದರ ನಡುವೆ ಸತ್ಯ ಬಹುಮುಖಿಯಾದದ್ದು ಎಂದುಕೊಂಡು, ಎಲ್ಲವನ್ನೂ ಏಕಪ್ರಕಾರ ಸ್ವೀಕಾರ ಮಾಡುವ ಮನಸ್ಥಿತಿಯವರಾಗಿರಲಿಲ್ಲ ಅವರು. ಅಥವಾ ಆಧುನಿಕರಾದ ನಮ್ಮಂತೆ ದೇವ ಕೇಂದ್ರಿತ ಜಗತ್ತನ್ನು ನಿರಾಕರಿಸಿದ್ದರಿಂದಲೇ, ಹಲವು ಬಗೆಯ ಉಪಾಸನೆಗಳನ್ನು ಸುಲಭವಾದ, ಮೋಜಿನ ಜೌದರ್ಯದಿಂದ, ಸಹಿಸಬಲ್ಲವರೂ ಆಗಿರಲಿಲ್ಲ.

ಎಲ್ಲದರಲ್ಲೂ ಸ್ವಾರಸ್ಯವನ್ನು ಕಾಣುವ ಮನಸ್ಸು ಈಸ್ತೇಟಿನದು –  ರೂಪಾರಾಧಕನದು. ಈ ಬಗೆಯಲ್ಲಿ ಗ್ರಹಿಸುವವರ ಒಳಬದುಕಿನಲ್ಲಿ ದೇವರು ಪ್ರಭುವಾಗಿರುವುದಿಲ್ಲ. ಆದ್ದರಿಂದಲೇ ದಾಸ್ತೋವಸ್ಕಿಯ ಹಲವು ಉದ್ವಿಗ್ನ ನಾಯಕರು –  ಯಾಕೆ ಅಲ್ಲಮ ಬಸವರಂಥವರೂ ಈ ಬಗೆಯ ಗ್ರಹಿಕೆಯನ್ನು ಅನಧಿಕೃತವೆಂದು ತಿರಸ್ಕರಿಸುತ್ತಾರೆ.

ಆನಂದತೀರ್ಥರೂ ‘ಅನೇಕ’ದ ಮೂಲದಲ್ಲಿರುವ ‘ಏಕ’ವನ್ನು, ಅಂದರೆ ‘ಏಕೈಕ’ವಾದ್ದನ್ನು ಹುಡುಕಿದ್ದಾರೆ ಎನ್ನಿಸುತ್ತದೆ ನನಗೆ; ‘ಹರಿಸರ್ವೋತ್ತಮ’ ತತ್ವದಲ್ಲಿದನ್ನು ಕಂಡಿದ್ದಾರೆ. ಆದ್ದರಿಂದಲೇ ದ್ವಾದಶ ಸ್ತೋತ್ರಗಳು ದೇವರ ಕಿವಿಗಷ್ಟೇ ಅಲ್ಲದೆ, ನಮ್ಮ ಕಿವಿಗಳಿಗೂ ರಚಿತವಾದವು. ಆಚಾರ್ಯರ ಪ್ರತಿಪಕ್ಷದವರು ಕೇಳಿಸಿಕೊಂಡಾಗ ಈ ಸ್ತೋತ್ರ ಜಿಜ್ಞಾಸೆಗೆ ಆಹ್ವಾನ. ದೇವರ ಕಿವಿಯಲ್ಲಿ ಮಾತ್ರ ಮಾತನಾಡುವವಳು ಅಕ್ಕಮಹಾದೇವಿ. ತನಗೇ ಮಾತನಾಡಿಕೊಳ್ಳುವಾತ ಅಲ್ಲಮ. ಆನಂದತೀರ್ಥರಾದರೋ, ವ್ಯವಸ್ಥೆ ಕಟ್ಟುವ ತಾತ್ವಿಕ ವ್ಯವಸ್ಥಾಪಕರು. ಹರಿಯೇ ಸರ್ವೋತ್ತಮ ಎಂದು ನಮ್ಮ ಮನಸ್ಸಿಗೆ ಮುಟ್ಟಿಸುವುದು ಬೇಕು ಅವರಿಗೆ. ಅವರು ಪುರಂದರದಾಸರಂತೆ ಆರ್ತರು ಮಾತ್ರ ಅಲ್ಲ; ದಾಸರಿಗೆಲ್ಲ ಸಿದ್ಧಾಂತ ಕೊಟ್ಟ ಐಡಿಯೋಲಾಗ್ ಆನಂದತೀರ್ಥರು.

ನಾನೀಗ ಭಾಗವತ ಓದುತ್ತಿದ್ದೇನೆ. ಓದುವಾಗ ತುಂಬ ಕರೆಕರೆಯಾಗುವ ಭಾಗಗಳ ಬಗ್ಗೆ ಮೊದಲು ಹೇಳುತ್ತೇನೆ. ಅದರಲ್ಲಿ ಶ್ರೀಹರಿಯನ್ನು ಕೊಂಡಾಡುವ ಭಾಗಗಳೆಲ್ಲವೂ ದೇವರನ್ನು ಒಲಿಸಲೆಂದಲ್ಲ, ನಮ್ಮಂಥಹ ಹುಲುಮನುಷ್ಯರನ್ನು ಗೆಲ್ಲಲೆಂದು ಇರುವುದು, ಎನ್ನಿಸುವಷ್ಟು ಅತಿರೇಕವಾಗಿ, ಉದ್ದೇಶಪೂರ್ವಕವಾಗಿ ಪುನರಾವರ್ತವಾಗುತ್ತವೆ. ಹಾಗೆ ಕೊಂಡಾಡಿಸಿಕೊಳ್ಳುವುದು ಅಗತ್ಯವಾದ ದೇವರು, ಒಂದೋ ಕಿವುಡನಿರಬೇಕು, ಅಥವಾ ಹೊಗಳಿಕೆಗೆ ಉಬ್ಬುವ ಟೈರೆಂಟ್ ಇರಬೇಕು. ನಾನು ಓದುತ್ತಿರುವ ಭಾಗವತದಲ್ಲಿ ಶ್ರೀಹರಿಯ ಹೊಗಳಿಕೆ ಮಾತ್ರ ಇರುವುದಲ್ಲ –  ಅವನ ಸ್ಥಾನಮಾನ ನಿರ್ಣಯವೂ ಆಗುತ್ತಲೇ ಇರುತ್ತದೆ. ಬೇರೊಂದು ದೇವರನ್ನು ಹಿಂಬಾಲಿಸುವ, ಪ್ರತಿಪಕ್ಷದ ಯಾವ ಎದುರಾಳಿಯನ್ನು ಗೆಲ್ಲಲೆಂದು ಈ ಭಾಗಗಳು ಬರುತ್ತವೆ ಎಂಬುದನ್ನು ಊಹಿಸಬಹುದು. ಆನಂದತೀರ್ಥರಲ್ಲೂ ಅಷ್ಟೇ –  ಶಿವನ ಹೆಸರು ಬಂದಲ್ಲೆಲ್ಲಾ ಅವನ ಸ್ಥಾನ ನಿರ್ಣಯವೂ ಆಗುತ್ತದೆ. ತಮ್ಮ ಪದವಿಗಳನ್ನು ಹೆಗಲ ಮೇಲೂ, ಎದೆಯ ಮೇಲೂ ಹಚ್ಚಿಕೊಂಡಿರುವ ಸೈನ್ಯದ ಅಧಿಕಾರಿಗಳಂತೆ, ದೇವೋತ್ತಮನಾದ ಶ್ರೀಹರಿಯೂ, ಜೀವೋತ್ತಮರಾದ ದೇವತೆಗಳೂ, ನಮಗೆ ಎದುರಾಗುತ್ತಾರೆ. ಹೀಗಾಗಿ ಸ್ತುತಿಯಲ್ಲಿ ಭಕ್ತಿ ಮಾತ್ರ ಕಾಣುವುದಿಲ್ಲ. ಸ್ವಮತ ಪ್ರತಿಪಾದನೆಯ ಯುಕ್ತಿಯೂ ಇಣುಕುತ್ತಿರುತ್ತದೆ. ಶಿವನನ್ನು ಸ್ತುತಿಸುವ ಮಾಧ್ವ ಮತದ ದಾಸರ ಪದ ಹೀಗಿದೆ: ‘ಕೈಲಾಸವಾಸ ಗೌರೀಶ ಈಶ / ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ’. ಉಗ್ರಭಕ್ತಿಯ ವೀರಶೈವರೂ ಈ ಪರಿಯವರೇ.

ಇದು ಮತಧರ್ಮಗಳ ಹಿಂದಿರುವ ರಾಜಕೀಯ; ನಮ್ಮಂತೆಯೇ ನರಮನುಷ್ಯರಾದವರ ನಡುವಿನಲ್ಲಿ ತಮ್ಮ ತಮ್ಮ ಮತದ ಹೆಚ್ಚುಗಾರಿಕೆ ಸ್ಥಾಪಿಸಲಿಕ್ಕಾಗಿ ನಡೆಯುವ ರಾಜಕೀಯ. ತಾನು ನಂಬಿದ ದೈವದಲ್ಲಿ ಶರಣಾಗತನಾಗಿ, ಹಸುಗೂಸಿನಂತೆ ಮುಗ್ಧ ನೆಮ್ಮದಿಯಲ್ಲಿ ನೆಲೆಸಿರುವುದು, ಜೊತೆಗೇ ತನ್ನ ಪಂಥ ಗೆಲ್ಲಬೇಕೆಂಬ ಉಪಾಯಗಾರನಾಗಿರುವುದು ಏಕಕಾಲದಲ್ಲಿ ಹೇಗೆ ಸಾಧ್ಯವೆಂದು, ಸಾಧ್ಯವಾದರೆ ಅದು ಅಧಿಕೃತವೋ ಎಂದು ಅನುಮಾನವಾಗುತ್ತದೆ. ಘಂಟಾಕರ್ಣನನ್ನು ಅರ್ಥಮಾಡಿಕೊಳ್ಳಬಹುದು. ಬೇರೆ ದೇವರುಗಳ ಹೆಸರನ್ನು ಕೇಳಿಸಿಕೊಳ್ಳಲಾರದಷ್ಟು ಅಸಹನೆ ಅವನಿಗೆ –  ಆದ್ದರಿಂದ ಎರಡು ಕಿವಿಗಳಿಗೂ ಭರ್ಜರಿ ಗಂಟೆಗಳನ್ನು ಕಟ್ಟಿಕೊಂಡು ಅನ್ಯ ದೇವರ ಹೆಸರು ಎತ್ತಿದರೇ ಅಲ್ಲಾಡಿಸುತ್ತಿದ್ದನಂತೆ. ಭಯಂಕರ ಪ್ರೇಮಕ್ಕೆ ವಶರಾದ ಪ್ರಣಯಿಗಳೂ ಹೀಗೆಯೇ; ತಮ್ಮ ಸನಿಹಕ್ಕೆ ಯಾರನ್ನೂ ಬಾರಗೊಡದಂತೆ ತಮ್ಮದೇ ಮೋಹಪರವಶತ ಜಿನುಗಿಸುವ ಅಸೂಯೆಯಿಂದ ರಕ್ಷಿತರಾಗಿರುತ್ತಾರೆ. ದೇವರ ಮೇಲಿನ ಪ್ರೇಮವೂ ಈ ಬಗೆಯ ಉನ್ಮತ್ತತೆಯನ್ನು ತಂದೀತೆಂದು ಊಹಿಸಬಹುದು. ಆದರೆ ಚಾಣಾಕ್ಷವಾದ ಸ್ವಮತ ಪ್ರತಿಪಾದನೆಯ ರಾಜಕೀಯವೂ ಮತಧರ್ಮಗಳನ್ನು ಕಟ್ಟುವವರಲ್ಲಿ ಇರುತ್ತದೆ ಎಂಬುದು ನಮ್ಮಲ್ಲಿ ಕಸಿವಿಸಿಯನ್ನುಂಟುಮಾಡುತ್ತದೆ.

ಆನಂದತೀರ್ಥರ ಸಿದ್ಧಾಂತವನ್ನು ಉಡುಪಿಯ ಸುತ್ತಮುತ್ತ ಕೊನೆಗೂ ಸ್ಥಾಪಿಸಿದ್ದು, ವ್ಯವಸ್ಥೆ ಕಟ್ಟುವುದರಲ್ಲಿ ಜೀನಿಯಸ್ ಆದ ವಾದಿರಾಜರೇ. ಭೂತಗಳನ್ನು ಶಿವನ ಅಧೀನ ಮಾಡಿದರು; ಶಿವನನ್ನು ವಿಷ್ಣುವಿನ ಅಧೀನ ಮಾಡಿದರು. ಜಾತಿಗಿನ್ನೊಂದು ಜಾತಿ ಅಧೀನವಾಗುತ್ತ ಮೇಲುಮೇಲಾಗುತ್ತ, ಜೊತೆಗೇ ಪ್ರತಿ ಜಾತಿಯೂ ತನ್ನ ವಲಯದಲ್ಲಿ ಸ್ವತಂತ್ರವಾಗಿರುತ್ತ –  ತಮ್ಮ ತಮ್ಮ ದೇವರುಗಳನ್ನು ಪಡೆದವು. ಯಾವ ದೇವರೂ ನಾಶವಾಗಬೇಕಿಲ್ಲ. ಯಾಕೆಂದರೆ ಒಂದಕ್ಕೊಂದು ಅಧೀನವಾದವು; ತಮ್ಮ ಆಳ್ವಿಕೆಯ ವಲಯಗಳನ್ನು ಗುರುತಿಸಿಕೊಂಡವು. ಶ್ರೀವಿಷ್ಣು ಈ ನಡುವೆ ಸರ್ವಾಂತರ್ಯಾಮಿಯಾಗಿದ್ದಾನೆ ಎಂದು ನಂಬುವುದು ಕಷ್ಟವಾಗಲಿಲ್ಲ. ಯಾಕೆಂದರೆ ಅದರದರ ಸ್ಥಾನ ಅದಕ್ಕೆ ಲಭಿಸಿ ಯಾವುದೂ ನಾಶವಾಗಲಿಲ್ಲ. ಯಾವುದು ಲೌಕಿಕಕ್ಕಾಗಿ ಮಾಡಿಕೊಂಡ ರಾಜಿ, ಯಾವುದು ನಮ್ಮ ಸಂಪೂರ್ಣ ಗಮನವನ್ನು ಆಹ್ವಾನಿಸುವ ಪರಮ ಸತ್ಯ, ಎಂಬುದರ ನಡುವಿನ ವ್ಯತ್ಯಾಸ ಉಳಿಯಲಿಲ್ಲ.

ಉದಾಹರಣೆಗೆ ನೋಡಿ: ಹಳ್ಳಿಗಳಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಲ್ಲಿ ಇರುತ್ತಾರೆ ಎಂದು ನಾವೆಲ್ಲಾ ಸಂತೋಷವಾಗಿ ಹೇಳುತ್ತೇವೆ. ಅದು ಯಾಕೆಂದರೆ, ಹಳ್ಳಿ ವ್ಯವಸ್ಥೆಯಲ್ಲಿ ಮುಸ್ಲಿಮರೂ ಇನ್ನೊಂದು ಜಾತಿ. ಆದರೆ ಮುಸ್ಲಿಮನಿಗೆ ಹೀಗೆ ಜಾತಿಯಾಗಿ ವ್ಯವಸ್ಥೆಯ ಒಳಗಿನವನಾಗುವುದು ಅವಮಾನವೆನ್ನಿಸಿದರೆ ತಾನೊಂದು ‘ಅನ್ಯಮತ’ದವನು ಎನ್ನುವ ಭಾವನೆ ಬಂದು ಬಿಡುತ್ತದೆ. ಮುಸ್ಲಿಮನ ದೇವರು ಈ ನಮ್ಮ ಪರಸ್ಪರಾಧೀನರಾದ ದೇವ ವಲಯದಲ್ಲಿ ಇರಲಾರ.

ಇಸ್ಲಾಂ ಎಂದರೆ ದೇವರಿಗೆ ಶರಣಾಗತನಾಗುವುದು. ಹೀಗೆ ಶರಣಾಗತನಾಗಬೇಕಾದ್ದು ಒಬ್ಬನೇ ದೇವರಿಗೆ. ಅವನು ಏಕೈಕನಾದವನು. ಅವನನ್ನು ಬಿಟ್ಟು ಬೇರೆ ದೇವರಿಲ್ಲ. ಪೈಗಂಬರರೇ ಅವನ ಕೊನೆಯ ಪ್ರವಾದಿ –  ಅವರನ್ನು ಬಿಟ್ಟು ಬೇರೊಬ್ಬ ಪ್ರವಾದಿ ಮುಂದಿಲ್ಲ. ಏಕದೈವ ನಿಷ್ಠೆಯ ಇಸ್ಲಾಂನ ಪ್ರವಾದಿ ಮಹಮ್ಮದರು ಜೀವಿಸಿದ್ದ ಅರೇಬಿಯಾದಲ್ಲಿ, ಉಡುಪಿಯಂತೆಯೇ ಹಲವಾರು ದೇವರುಗಳಿಗೆ ನಿಷ್ಠರಾದವರು ಇದ್ದರು. ಕ್ರೈಸ್ತರು, ಯಹೂದ್ಯರು, ಅಲ್ಲದೆ ಹಲವು ಭೂತಾಕಾರದ ಜನಾಂಗಗಳು ಇದ್ದವು. ಮಹಮ್ಮದನ ಏಕೈಕನಾದ ದೇವರು ಸಗುಣ, ಆದರೆ ನಿರಾಕಾರ. ಆನಂದತೀರ್ಥರ ದೇವರಾಗಿ ಏಕೈಕನಾದ, ದೇವಗಣದಲ್ಲಿ ಸರ್ವೋತ್ತಮನಾದ, ಎಲ್ಲರ ಹೃದಯದಲ್ಲಿ ತಿಳಿದೋ ತಿಳಿಯದೆಯೋ ಇರುವ ಶ್ರೀಹರಿ, ಸಗುಣ ಮಾತ್ರನಲ್ಲ, ಸಾಕಾರನೂ ಹೌದು. ಪ್ರಾಯಶಃ ಶ್ರೀಹರಿಯು ಸಾಕಾರ ಮತ್ತು ಸಗುಣನಾದ್ದರಿಂದ, ಉಡುಪಿ ಪ್ರಾಂತ್ಯದ ಎಲ್ಲ ಭೂತಗಳೂ ಸಾಕಾರ ಮತ್ತು ಸಗುಣವಾದ್ದರಿಂದ, ಅವುಗಳನ್ನು ಆರಾಧಿಸುವ ಮನಸ್ಸುಗಳು ತಮ್ಮ ಅರಿವಿನ ಮಟ್ಟದಲ್ಲಿ ತಾರತಮ್ಯದವೇ ಹೊರತು, ದೈವವನ್ನು ಪರಿಕಲ್ಪಿಸುವ ಬಗೆಯಲ್ಲಿ ಅನ್ಯವೆಂಬುವಂತಿಲ್ಲ. ದೇವರು ನಿರಾಕಾರನಾದ ಕೂಡಲೇ ತೊಡಕುಂಟಾಗಬಹುದು.

ವೀರಶೈವ ಧರ್ಮದಲ್ಲೂ ದೇವರು ಸಗುಣ; ಆದರೆ ನಿರಾಕಾರ. ಹಾಗೆಯೇ ಸಿಖ್ಖರಿಗೆ ದೇವರು ಸಗುಣ ಎಂದರೆ ನಿರಾಕಾರ. ಮುಸ್ಲಿಮರಿಗೆ, ಪ್ರಾಟೆಸ್ಟೆಂಟ್ ಕ್ರೈಸ್ತರಿಗೆ ದೇವರು ಸಗುಣ. ಆದರೆ ನಿರಾಕಾರ. ಈ ಬಗೆಯಲ್ಲಿ ಮತಧರ್ಮಗಳನ್ನು ವಿಂಗಡಿಸಿ ಅವಲೋಕಿಸುವ ನನ್ನ ದಾರ್ಶನಿಕ ಗೆಳೆಯ ರಾಮಚಂದ್ರ ಗಾಂಧಿಯವರು, ವೀರಶೈವರನ್ನೂ, ಮುಸ್ಲಿಮರನ್ನೂ, ಸಿಖ್ಖರನ್ನೂ, ಸಗುಣ ಮತ್ತು ನಿರಾಕಾರ ದೈವಕಲ್ಪನೆಯವರೆಂದು ಒಟ್ಟು ಮಾಡಿಯಾರು. ಹೀಗೆ ಬಗೆಯ ಔದಾರ್ಯ, ನಿರಾಕಾರ ನಿರ್ಗುಣ ಕಲ್ಪನೆಯ ಅದ್ವೈತಿಗಳಿಗೆ ಮಾತ್ರ ಸಾಧ್ಯವೋ ಏನೋ! ಯಾಕೆಂದರೆ ಅವರಿಗೆ, ಅನೇಕದಲ್ಲಿ ವಿಜೃಂಭಿಸುವ ಪ್ರಕೃತಿ ಸ್ವಯಂ ಸತ್ಯವಲ್ಲ; ಅಸತ್ಯವೂ ಅಲ್ಲ. ಮಾಯೆಯಲ್ಲಿ ಕಾಣುವಾಗ ಉಂಟು; ಜ್ಞಾನದಲ್ಲಿ ಕಾಣುವಾಗ ಇಲ್ಲ.

ವಿದ್ವಾಂಸರ ಪ್ರಕಾರ ಪವಿತ್ರ ಖುರಾನಿನ ಆದಿಭಾಗಗಳಲ್ಲಿ ಬೇರೆ ದೇವರುಗಳ ನಿರಾಕರಣೆ ಇಲ್ಲ; ಆದರೆ ‘ದೇವರು ಒಬ್ಬನೇ’ ಮತ್ತು ಅವನು ನಿರಾಕಾರ ಎನ್ನುವುದು ಎಷ್ಟು ಪ್ರಖರವಾಗಿ ಖುರಾನಿನಲ್ಲಿ ಕಾಣಿಸಿಕೊಳ್ಳುತ್ತದೆ ಎಂದರೆ, ಬೇರೆ ದೇವರುಗಳ ಅಸ್ತಿತ್ವದ ಬಗ್ಗೆ ಖುರಾನು ತೋರಿಸುವ ಔದರ್ಯ ಲಘು ಎನ್ನಿಸಿ ಮರೆತು ಹೋಗಿಬಿಡುತ್ತದೆ. ಮಹಮ್ಮದರ ಕಾಲದಲ್ಲಂತೂ ಮೆಕ್ಕಾದ ಸುತ್ತಮುತ್ತ, ಮೂರು ಸ್ತ್ರೀ ದೇವತೆಗಳಿಗೆ ಬಹಳ ಪುರಸ್ಕಾರವಿತ್ತು. ಅವರ ಹೆಸರುಗಳು ಹೀಗಿವೆ: ಅಲ್‌ಲಾತ್, ಅಲ್‌ಉಸ್ಸಾ ಮತ್ತು ಮನತ್. ಖುರಾನ್‌ನಲ್ಲಿ ಈ ದೇವತೆಗಳ ಅಸ್ತಿತ್ವ ಹಲವು ಬದಲಾವಣೆಯನ್ನು ಪಡೆಯುತ್ತವೆ. ಮೊದಲಿಗೆ ಈ ದೇವತೆಗಳು ದೇವರಿಗೆ ಮಧ್ಯವರ್ತಿಗಳು; ನಂತರ ಏಂಜಲ್‌ಗಳು; ಕೊನೆಯಲ್ಲಿ ಮೆಕ್ಕಾದ ಪೂರ್ವಿಕರು ಹುಟ್ಟಿಸಿಕೊಂಡ ಹೆಸರುಗಳು. ಮುಖ್ಯವಾಗಿ ಅಲ್ಲಾ ಅಲ್ಲದೆ ಮತ್ತಾರೂ ದೇವರಲ್ಲ; ಇರುವುದಾದರೆ ಅವೆಲ್ಲವೂ ದೆವ್ವಗಳು, ಜಿನ್‌ಗಳು.

ಇಸ್ಲಾಂನಂತೆ ಕ್ರೈಸ್ತ ಮತವು ಆಯಾ ಜನಾಂಗಗಳ ಪೂರ್ವಸ್ಮೃತಿಯ ದೇವರುಗಳನ್ನು ನಾಶಪಡಿಸಿ ತಮ್ಮ ಏಕದೇವೋಪಾಸನೆಯನ್ನು ಸ್ಥಾಪಿಸಿದೆ. ಜರ್ಮನರ, ಫ್ರೆಂಚರ ಕ್ರಿಸ್ತಪೂರ್ವ ದೇವರುಗಳು ಯಾರು? ನಮಗೆ ಅವು ತಿಳಿಯದಂತೆ ನಾಶವಾಗಿವೆ. ಆದರೆ ಪಂಜುರ್ಲಿ, ಬೊಬ್ಬರ್ಯ, ಜಟ್ಟಿಗ ಎಲ್ಲರೂ ವಿಷ್ಣುವಿನ ಜೊತೆ ಇದ್ದಾರೆ. ತಿಳಿದು ನೋಡಿದಾಗ ವಿಷ್ಣುವಿಗೆ ಕೆಳಸ್ತರದಲ್ಲಿ ಹೊಂದಿಕೊಂಡು ಇದ್ದಾರೆ; ಕತ್ತಲಲ್ಲಿ ಎದುರಾದಾಗ ಮಾತ್ರ ತಾವೇ ಆಗಿ ವಿಜೃಂಭಿಸುತ್ತಾ ಇದ್ದಾರೆ. ಹೀಗಾಗಿ ಅವರು ಅಧೀನರು –  ಆದರೆ ದೀನರಲ್ಲ. ನಮ್ಮಲ್ಲಿ ಅಧೀನಗೊಳಿಸುವ ಉಪಾಯದಿಂದ ಎಲ್ಲವೂ ಉಳಿಯುವುದು ಸಾಧ್ಯವಾಯಿತು. ಆದರೆ ಕ್ರೈಸ್ತರಿಗೂ ಮಹಮ್ಮದರಿಗೂ ಇರುವ ಸ್ವಮತ ತೀವ್ರತೆ, ಈ ಬಗೆಯ ಅನುಸಂಧಾನವನ್ನು ಒಪ್ಪುವಂತಹುದಲ್ಲ. ಆದ್ದರಿಂದಲೇ ಆನಂದತೀರ್ಥರಿಗೆ ಉಡುಪಿಯ ವಲಯದಲ್ಲಿ ಸಾಧ್ಯವಾದದ್ದು, ಕ್ರಿಸ್ತನಿಗಾಗಲೀ ಮಹಮ್ಮದರಿಗಾಗಲೀ, ಅವರ ವಲಯಗಳಲ್ಲಿ ಸಾಧು ಎನ್ನಿಸದೇ ಹೋಗಿರಬಹುದು. ಆದರೆ ಜಗದ್ವ್ಯಾಪಿಯಾಗಲು ಹೊರಟ ಈ ಮತಧರ್ಮಗಳು ಎದುರಿಸಿದ ವಿಪರ್ಯಾಸ ಎಂದರೆ, ಭಾರತಕ್ಕೆ ಬಂದಾಗ ತಮಗೆ ಅನ್ಯವಾದ ಹಲವು ದೈವಗಳನ್ನು ಹತ್ತಿಕ್ಕಲಾರದೆ, ತಮ್ಮ ಏಕೈಕ ದೇವರನ್ನು ಸ್ಥಾಪಿಸುವ ಯತ್ನದಲ್ಲಿ ಸೋಲಬೇಕಾಯಿತು.

ನನ್ನ ಈ ಬರವಣಿಗೆ ಎತ್ತೆತ್ತಲೋ ಹರಿದು ಸಾಗುತ್ತಿದೆ. ಮತಧರ್ಮಗಳಲ್ಲಿ ಯಾವ ಸತ್ಯವನ್ನೂ ಕಾಣದೆ, ರಾಜಕೀಯ ಸಿದ್ಧಾಂತಗಳಲ್ಲಿ ಪವಿತ್ರವಾದ ಹೊಸ ಜಗತ್ತಿನ ಪ್ರವಾದಿಗಳಂತೆ ಕಂಡ ಲೆನಿನ್ ಮತ್ತು ಮಾವೋರಂಥವರು ತಮ್ಮ ಮತಸಾಧನೆಗೆ ನಿಷ್ಕರುಣಿಗಳೂ ಕ್ರೂರಿಗಳೂ ಆಗಬೇಕಾಯಿತು. ಗಾಂಧೀಜಿ ಹಾಗಾಗಲಿಲ್ಲ; ಆದರೆ ಗಾಂಧೀಜಿ ನಾವು ತ್ರಿಕರಣಪೂರ್ವಕವಾಗಿ ನಂಬುವ ಜೀವಂತ ಸತ್ಯವೆಂದು, ಈ ನಮ್ಮ ಕಾಲದಿಂದಾಗಿ ಅನ್ನಿಸುತ್ತಿಲ್ಲ. ಹೀಗಾಗಿ ಹಿಮ್ಮೆಟ್ಟುವ ನಮ್ಮ ಮನಸ್ಸು ರಮಣ ರಾಮಕೃಷ್ಣರ ಆಧ್ಯಾತ್ಮಕ್ಕೆ ಹಾತೊರೆಯುತ್ತದೆ. ಹಾತೊರೆಯುವುದು ಕೂಡಾ ಅಧಿಕೃತ ಅನುಭವದ ಜೀವಂತ ಸ್ಥಿತಿಯಲ್ಲ. ರಮಣರ ಹೆಸರಲ್ಲಿ ನಡೆಯುವ ಸಂಸ್ಥೆಗಳಿಗೂ, ರಾಮಕೃಷ್ಣರನ್ನು ಪೂಜಿಸುವ ಆಶ್ರಮಗಳಿಗೂ ಹೋದಾಗ ಮನಸ್ಸು ಇಂಗುತ್ತದೆ. ಮೌನಿಯಾದ ರಮಣರ ಹೆಸರಿನಲ್ಲಿ ಅದೆಷ್ಟು ಗದ್ದಲ, ಅದೆಷ್ಟು ಜಾಹಿರಾತಿನಂತೆ ಕಾಣುವ ಪ್ರತಿಪಾದನೆಯೆಂದು ಬೇಸರವಾಗುತ್ತದೆ.

ದೇವರನ್ನು ಸಗುಣ ಮತ್ತು ಸಾಕಾರನೆಂದು ತಿಳಿಯುವುದು ಕವಿಯಾಗಿ ಮಾತ್ರ ಸಾಧ್ಯವೇನೊ. ಅದೂ, ಕಲ್ಪನೆಯಲ್ಲಿ ಕಂಡದ್ದು ವಾಸ್ತವವಾಗಿಯೂ ನಿಜ ಎಂದು ತಿಳಿದಿದ್ದ ಅಕ್ಕ ಅಥವಾ ಬ್ಲೇಕಂತರಲ್ಲ. ಎಲ್ಲವೂ ಸಾಂಕೇತಿಕ ಎಂದು ಮೂರ್ತನಾಗಿ ಭಾಸವಾದ್ದನ್ನು ಅಮೂರ್ತಕ್ಕೆ ತರ್ಜುಮೆ ಮಾಡಿಕೊಳ್ಳುವ ರೊಮ್ಯಾಂಟಿಕ್‌ಮನೋಭಾವದ ಕವಿಗಳಲ್ಲಿಯಂತೆ. ಇದೂ ಕೂಡ ಕೊಂಚ ಅನಧಿಕೃತವೇ –  ಸೌಂದರ್ಯೋಪಾಸನೆಯ ಮೋಹದಲ್ಲಿ ಬೆಳೆಸಿಕೊಂಡ ಭಾವುಕತೆ ಅದಾದ್ದರಿಂದ.

ಆದರೆ ದೇವರನ್ನು ಶ್ರೀಹರಿಯೆಂದೋ, ಶಿವನೆಂದೋ, ಭೂತಗಳೆಂದೋ, ನಂಬಿ ಸಂಭ್ರಮಿಸುವವರ ನಡುವೆ ನಾವೆಲ್ಲ ಬದುಕುವುದು. ನಂಬುವಾಗ ಸಾಕಾರನೆಂದು; ತಿಳಿಯುವಾಗ ನಿರಾಕಾರನೆಂದು ದೇವರನ್ನು ನಂಬುವ ಶಕ್ತಿ ಪಡೆದ ಜನ ನೆಚ್ಚಿರಬಹುದು. ಕಾರಣ ತಿಳಿಯದೆ ಒದಗಿಬರುವ ನೋವು, ಕಷ್ಟ, ದುಃಖಗಳ ಜೊತೆ ಪ್ರತಿಜೀವಿಯೂ ಬದುಕುವುದಾದ್ದರಿಂದ, ಅವರವರ ನಂಬಿಕೆಗಳು ಅವರಿಗೆ ಎಷ್ಟು ನಿಜ ಎಂದು ಕೇಳುವುದು ಲಿಬರಲ್ ಧೋರಣೆಗೆ ನಿರ್ದಯತೆಯೆನ್ನಿಸುತ್ತದೆ. ಆದರೆ ಇಂಥ ನಿರ್ದಯವಾದ ಪ್ರಶ್ನೆ ಕೇಳಬೇಕೆಂದು ಅನ್ನಿಸುವುದೂ, ನಾವು ಅನಿವಾರ್ಯವಾದ ದುಃಖದ ನಡುವೆ ಬದುಕುತ್ತಿರುವುದರಿಂದಲೇ. ಬುದ್ಧ ಹೀಗೆ  ಸತ್ಯಕ್ಕಾಗಿ ತವಕಪಟ್ಟು, ತಾನು ಕಂಡದ್ದನ್ನು ಹೇಳಿದವ. ತನ್ನ ಸುತ್ತಲಿನ ನಂಬಿಕೆಗಳನ್ನು  ನಿರಾಕರಿಸಿ, ಇರುವುದನ್ನು ಒಡೆದು ಸೀಳಿ ಹುಟ್ಟಿದವ. ಮೈ ಮತ್ತು ಮನಸ್ಸು ತಮ್ಮ ಭಿನ್ನತೆ ಕಳೆದುಕೊಂಡು ಏಕಾಗ್ರವಾಗಿ ತೀವ್ರಗೊಂಡಾಗ ಹಂಬಲಿಸುವುದು ಏಕೈಕವಾದ್ದಕ್ಕೆ; ಆದರೆ ಸಂಸಾರವೆಂದರೆ ‘ಅನೇಕ’ದ ಜೊತೆಗೆ ಅನಿವಾರ್ಯವಾಗಿ ರಾಜಿ ಮಾಡಿಕೊಳ್ಳುವುದು. ಎಲ್ಲ ಕಾಲದಲ್ಲೂ ಮನುಷ್ಯನ ಪಾಡು ಇದು.

ಶ್ರೀಹರಿಗೆ ಕೊಟ್ಟ ಜಾಹೀರಾತಿನಂತೆ ಕಾಣುತ್ತದೆಂದು ಹೇಳಿ, ನಾನು ಭಾಗವತಕ್ಕೆ ಅನ್ಯಾಯ ಮಾಡಿದ್ದೇನೆ; ಅಂದರೆ ನನ್ನ ಒಟ್ಟು ಅನುಭವಕ್ಕೆ ಅನ್ಯಾಯ ಮಾಡಿಕೊಂಡಿದ್ದೇನೆ. ಆದರೆ ಈ ಕೃತಿ ಹಾಗಿರುವುದು ಕೂಡಾ ನಿಜವೇ. ಹಾಗಿದ್ದೂ ಉಳಿದ ಸತ್ಯಗಳು ಕೂಡ ನಮ್ಮ ಪುರಾತನ ಕೃತಿಗಳಲ್ಲಿ ಇವೆ. ನಮ್ಮ ಸದ್ಯದ ಅನುಭವಕ್ಕೆ ಒದಗುವಂತೆ ಮಾಡಿಕೊಳ್ಳಲು ಈ ಕೃತಿಗಳನ್ನು ಮುಗ್ಧವಾಗಿ ಓದಿ ಪ್ರಯೋಜನವಿಲ್ಲ; ಓದು ಅವುಗಳನ್ನು ಪರಿಷ್ಕರಿಸಬೇಕು. ಅಂದರೆ ನಾವು ‘ರಿವಿಶನಿಸ್ಟ್‌’ ಆಗಬೇಕು. ಪೂರ್ವದ ಬಗೆಗೆ ಅಡಿಗರು ಈ ರೀತಿಯ ರಿವಿಶನಿಸ್ಟರು –  ಪರಿಷ್ಕರಣಕಾರರು. ‘ಸುಟ್ಟು ಸೋಸುವ ಅಪರಂಜಿ ವಿದ್ಯೆ’ ಕಲಿಯಬೇಕೆಂದು ಹೊರಟವರು. ಇಲ್ಲವಾದರೆ ‘ಭೂತ’ ಕಾಡುತ್ತದೆ –  ವರ್ತಮಾನದ ಬೃಂದಾವನದ ಕಟ್ಟೆಗೆ ಹುಗಿದ ಬಾವಿಯ ಹೊಲಸು ಗಾಳಿ ಹಾಯುತ್ತದೆ. ಹೀಗೆಂದುಕೊಂಡ ಅಡಿಗರಿಗೂ ಭಕ್ತಿ ಮಾತ್ರ ಸಾಧ್ಯವಿರಲಿಲ್ಲ. ಒಂದು ಸಂದರ್ಶನದಲ್ಲಿ, ನನಗವರು ಹಾಗೆಂದು ಹೇಳಿದ್ದರು.

ಯಾಕೆ ಹಾಗೆ? ಕುವೆಂಪು ಆಗಲಿ, ಬೇಂದ್ರೆಯಾಗಲಿ ಭಕ್ತರಲ್ಲ –  ಬಸವ, ಅಕ್ಕ ಅಥವಾ ಪುರಂದರನ್ನು ಭಕ್ತರು ಎನ್ನುವ ಅರ್ಥದಲ್ಲಿ. ಸೌಂದರ್ಯೋಪಾಸಕರಾಗಿ ಪು.ತಿ.ನ. ಮತ್ತು ಎಕ್ಕುಂಡಿ ಭಕ್ತರು ಎನ್ನಬಹುದೇನೋ. ಭಾವುಕತೆಯ ಆವೇಶವನ್ನು ಆಪ್ತವಾಗಿ ತಿಳಿಯಬಲ್ಲ ನಮ್ಮ ಕಾಲದ ಹಲವರು ರಸಗ್ರಾಹಿಗಳೇ ಹೊರತು ಭಕ್ತರಲ್ಲ. ಹೆಚ್ಚೆಂದರೆ ವೈಚಾರಿಕ ನಿಲುವನ್ನು ಪ್ರಶ್ನಿಸಲು ತೊಡಗಿರುವ ವಿಚಾರವಾದಿಗಳು ಇವರು. ಗಿರೀಶರ ‘ತಲೆದಂಡ’ದ ಬಗ್ಗೆ ನನಗಿರುವ ಅನುಮಾನ ಇದು. ಭಕ್ತನಲ್ಲದವ ಸೃಷ್ಟಿಸಿದ ವೈಚಾರಿಕತೆ, ಈ ನಾಟಕ. ಹೀಗೆ ಗಿರೀಶ್‌ಕರ್ನಾಡರಂತೆ ಅನುಮಾನಿಗಳಾಗಿದ್ದು. ಆದರೆ ತಮ್ಮ ಅನುಮಾನದಲ್ಲೇ ಸಂತೃಪ್ತರಾಗದಂತೆ ಸತ್ಯಕ್ಕೆ ಎದುರಾಗುವ ಇಷ್ಟವುಳ್ಳವರು ನಮಗೆ ನೈಜರಾದವರು; ನಮ್ಮ ಒಟ್ಟು ಕಾಣ್ಕೆಯನ್ನು ಕಟ್ಟುತ್ತಿರುವವರು.

ಭಾಗವಂತದಂತಹ ಭಕ್ತ್ಯುತ್ಸಾಹದ ಕೃತಿ ಓದುವಾಗ ಅಥವಾ ಉಗ್ರನಿಷ್ಠೆಯ ಖುರಾನನ್ನಾಗಲಿ, ಬೈಬಲ್ಲನ್ನಾಗಲಿ ಓದುವಾಗ, ನಾವು ಓದಬಲ್ಲ ಕ್ರಮವೇ ನಮಗೆ ಸಮಸ್ಯೆಗಳನ್ನು ಒಡ್ಡುತ್ತದೆ. ಈ ಕೃತಿಗಳ ನಿಜವಾದ ಅರ್ಥ ಒದಗಬಲ್ಲಂತೆ ನಾನು ಅವನ್ನು ಓದುತ್ತಿದ್ದೇನೆಯೇ? ಈ ಕೃತಿಗಳ ಅಂತಃಪ್ರೇರಣೆಯಾದ ಶರಣಾಗತಭಾವದಿಂದ ಆವೇಶಿತನಾಗದೆ ಓದಿದಾಗ, ಈ ಪವಿತ್ರ ಗ್ರಂಥಗಳ ಸರಿಯಾದ ಓದೇ ಅದು?

ಉದಾಹರಣೆಗೆ ನೋಡಿ: ಈ ದಿನಗಳಲ್ಲಿ ನಮ್ಮಂತಹ ಹಲವರು ಬಸವನನ್ನು ಮೆಚ್ಚುವುದು, ಅವನು ಸಾಮಾಜಿಕವಾಗಿ ಕ್ರಾಂತಿಕಾರಕ ನಿಲುವಿನವನೆಂದು. ಆದರೆ ಈ ಕ್ರಾಂತಿಕಾರಕತೆ ಅವನಿಗೆ ಸಾಧ್ಯವಾದದ್ದು ಅವನ ತ್ರಿಕರಣಪೂರ್ವಕವಾದ ಭಕ್ತಿಯಿಂದಾಗಿ. ಆದರೆ ಅಂಥ ಭಕ್ತಿಯನ್ನು ನಮ್ಮ ಅಂತಃರಂಗ ಒಪ್ಪಕೊಳ್ಳುವುದಿಲ್ಲ. ಒಪ್ಪಿಕೊಂಡರೂ ಮರುಕ್ಷಣ ಅದು ಕಪಟವೆನ್ನಿಸುತ್ತದೆ. ಆದರೆ ಪಾರಮಾರ್ಥಿಕವಾಗಿಯೂ, ಸರ್ವವ್ಯಾಪಿಯಾಗಿಯೂ, ದೇವರು ಇದ್ದನೋ ಇಲ್ಲವೋ ಎಂಬುದು ಬಸವನ ಜೀವವನ್ನೇ ಅಲ್ಲಾಡಿಸಿದ ಪ್ರಶ್ನೆ. ಇದೇ ಪ್ರಶ್ನೆ ನಮ್ಮ ಅಸ್ತಿತ್ವವನ್ನೂ ಅಲ್ಲಾಡಿಸುಬೇಕೆಂದು ಬಸವ ವಚನಗಳನ್ನು ನುಡಿಯುವುದು. ಅವನನ್ನು ಸಾಹಿತ್ಯ ವಿಶ್ಲೇಷಣೆಗೋ ಅಥವಾ ನಮ್ಮ ಕಾಲದ ಮತಾಂಧತೆಯನ್ನು ಟೀಕಿಸುವುದಕ್ಕೂ ಬಳಸಿಕೊಳ್ಳುವುದು ಬಸವನನ್ನು ಪೂರ್ಣಗ್ರಹಿಸಿದಂತೆ ಆಗದು. ವಿವೇಕಾನಂದರು ರಾಮಕೃಷ್ಣರನ್ನು ಬಳಸಿದ್ದೂ ಹೀಗೆಯೇ –  ಲೌಕಿಕ ಉಪಯೋಗಕ್ಕಾಗಿ. ನಮ್ಮ ಗ್ರಹಿಕೆಯಲ್ಲಿರುವ ಈ ಕೊರೆ, ನಮ್ಮನ್ನು ಬಾಧಿಸಬೇಕು. ಆಗ ನಮ್ಮ ಓದು ಬಸವನಿಗೆ ವಿರೋಧವನ್ನು ಧ್ವನಿಸಿದರೂ ಧ್ವನಿಸಬಹುದು. ಅಥವಾ ಅವನನ್ನು ಸಾರದಲ್ಲಿಯೂ, ಎಲ್ಲ ವಿವರದಲ್ಲಿಯೂ ಒಳಗೊಳ್ಳಬಹುದು.

ಅನೇಕ ಬಗೆಯ ದೇವೋಪಾಸನೆಯ ನಾಡಿನಲ್ಲಿ ಇದ್ದುಕೊಂಡು, ಸ್ವತಃ ಉಪಾಸಕರಾಗಲಾರದೇ, ಆದರೆ ಭಾವಜೀವನದಲ್ಲಿ ಉಪಾಸನೆಗಳನ್ನು ನಿರ್ಲಕ್ಷಿಸಲಾರದೆ, ಪರ್ಯಾಯವಾದ ಆಧುನಿಕ ಸಿದ್ಧಾಂತಗಳ ಕ್ಷೇಮಕಾರಿ ಗುಣದಲ್ಲಿ ನಂಬಿಕೆ ಕಳೆದುಕೊಂಡ ನಾವು, ನಮ್ಮ ಕಾಲಕ್ಕೆ ಸ್ಪಂದಿಸುತ್ತಲೇ, ಪೂರ್ವಜರಿಗೆ ಎದುರಾಗಬೇಕಾಗಿದೆ. ಅವರೆಲ್ಲರೂ ತಮ್ಮ ಕಾಣಿಕೆಯ ‘ಏಕೈಕ’ ಸತ್ಯವನ್ನು ಮೌನವಾಗಿ ಕಂಡು ಕಾಲದಿಂದ ಸರಿದವರಿರಬಹುದು. ಅಥವಾ ಈ ಪ್ರಪಂಚದಲ್ಲಿ ಅದನ್ನು ಸ್ಥಾಪಿಸಲು ಹೆಣಗಿದವರು ಇರಬಹುದು. ಅವರ ಈ ಸ್ಥಾಪನೆಯ ಯತ್ನ ಇತರ ಕಾಣ್ಕೆಗಳನ್ನು ನಿರ್ದಯವಾಗಿ ನಾಶಪಡಿಸುವುದರಲ್ಲಿ ಪರಿಣಮಿಸಿರಬಹುದು. ಅಥವಾ ಔದಾರ್ಯದಲ್ಲಿ ಉಳಿಯಲು ಬಿಟ್ಟಿರಬಹುದು. ಅಥವಾ ಅಧೀನಗೊಳಿಸಿ –  ಭಾರತದಲ್ಲಾದಂತೆ –  ಎಲ್ಲವುದಕ್ಕೂ ಅದರದರ ಜಾಗ ಮಾಡಿಕೊಟ್ಟಿರಬಹುದು. ಅನೇಕತೆಯ ಸಾಂಸ್ಕೃತಿಕ ಆಕರ್ಷಣೆ, ಹಾಗೂ ಏಕೈಕವನ್ನು ಕಾಣಬೇಕೆಂಬ ದಾರ್ಶನಿಕ ಅಪೇಕ್ಷೆ ಎಲ್ಲ ಕಾಲದಲ್ಲೂ ಇರುವಂತಹುದು. ಮನುಷ್ಯನ ಆತ್ಮಕ್ಕೆ ತೀವ್ರವಾದ ಸಂಕಟವನ್ನೂ, ಅಪಾರವಾದ ಆನಂದವನ್ನು ತರಬಲ್ಲ ಶೋಧನೆ ಇದು. ಭಾರತದಲ್ಲಿ ಇಡೀ ಜಗತ್ತೇ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಮನಸ್ಸು ಮತ್ತೆ ಪೂರ್ವಜರ ಹುಡುಕಾಟದಲ್ಲಿ ತೊಡಗಬೇಕಾಗಿದೆ.

ಜಾಗೃತವಾದ ಮನಸ್ಸು ‘ಸೈದ್ಧಾಂತಿಕ’ವಾಗಿ ಸತ್ಯಕ್ಕೆ ಹಾತೊರೆದಾಗ, ಹಲವು ವೈವಿಧ್ಯಗಳ ಜಗತ್ತಿನಲ್ಲಿ ‘ಒಂದು’ ಮಾತ್ರ ಪರಮ ಸತ್ಯವೆಂದು ತಿಳಿದು ಅದಕ್ಕಾಗಿ ಹಂಬಲಿಸುತ್ತದೆ. ಕ್ರಿಸ್ತನ ‘ತಂದೆ’, ಪೈಗಂಬರರ ‘ಅಲ್ಲಾ’, ಶಂಕರರ ‘ಸತ್ಯ’, ಆನಂದತೀರ್ಥರ ‘ಶ್ರೀಹರಿ’; ಲೌಕಿಕವಾದ ಸ್ತರದಲ್ಲಿ ಮಾರ್ಕ್ಸ್‌‌ನ ‘ಅರ್ಥಪ್ರಪಂಚ’, ಫ್ರಾಯ್ಡ್‌ನ ‘ಲಿಬಿಡೊ’, ಐನ್‌ಸ್ಟೀನನ ‘ಸಾಪೇಕ್ಷತೆ’ ಈ ಬಗೆಯ ‘ಒಂದನ್ನು’ ಹುಡುಕುವುದರ ಫಲಗಳು. ವೈವಿಧ್ಯವನ್ನು ವ್ಯಾಖ್ಯಾನಿಸಿ ಏಕಸೂತ್ರಕ್ಕಿಳಿಸುವುದು ವಿಫಲವೆಂದು ತಿಳಿದ ಮಹಾನುಭಾವರೂ ಇದ್ದಾರೆ. ಇರುವುದನ್ನು ಇರುವಂತೆ ದರ್ಶಿಸುವ ವೇದವ್ಯಾಸರು ಮತ್ತು ಶೇಕ್ಸ್‌ಪಿಯರ್ ಈ ಬಗೆಯ ದ್ರಷ್ಟಾರರು. ಸಾಹಿತಿಗಳಾದವರಿಗೆ ಇವರು ಹೆಚ್ಚು ಪ್ರಿಯರು.

ಆದರೆ ತರಲೆ ಇಲ್ಲದೆ ಬದುಕುವುದಕ್ಕಾಗಿ, ಅನೇಕತೆಯನ್ನು ಸಹಿಸುವ ಹುಸಿ ಉದಾರವಾದಿ ಲೌಕಿಕತೆ; ಅಥವಾ ಪಂಥವನ್ನು ಗೆಲ್ಲಿಸುವುದಕ್ಕಾಗಿ, ಅಧಿಕಾರವನ್ನು ಹೇರುವುದಕ್ಕಾಗಿ ಹುಟ್ಟುವ ‘ಏಕ’ದ ದುರಹಂಕಾರಿ ಸಿದ್ಧಾಂತ –  ಈ ಎರಡು ಬಗೆಗಳಲ್ಲಿ ಕೀಳುಗೊಂಡೂ, ಮಾನವ ಮನಸ್ಸಿನ ಎರಡು ಪ್ರವೃತ್ತಿಗಳು ನಮಗೆ ಎದುರಾಗುವುದು ಉಂಟು. ಸದ್ಯದ ನಮ್ಮ ಪಾಡು ಇದು.