ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ ಇವರಲ್ಲಿ ಒಬ್ಬೊಬ್ಬರದ್ದು ಒಂದು ವಿಶೇಷ. ಮಾಸ್ತಿ, ಸಣ್ಣ ಧ್ವನಿಯಲ್ಲಿ ಪ್ರಪಂಚದ ನಿತ್ಯವನ್ನ, ಅದರ ಸೂಕ್ಷ್ಮ ಸಂಬಂಧಗಳನ್ನು ನೋಡುತ್ತಾರೆ. ಇದಕ್ಕೆ ತದ್ವಿರುದ್ಧವಾದದ್ದು ಕುವೆಂಪು ಅವರ ದನಿ. ಇವರ ದನಿಗೆ ತನ್ನ ಘನತೆಯಲ್ಲಿ ತುಂಬ ವಿಶ್ವಾಸವಿದೆ. ಈ ದೃಷ್ಟಿಯಿಂದ ಕುವೆಂಪು ಅವರದ್ದು ಅನನ್ಯವಾದ ಪ್ರತಿಭೆ. ಕುವೆಂಪು ಪ್ರತಿಭೆಯ ಮೂಲ ಇರುವುದು egotistical sublimeನಲ್ಲಿ. ಅಂದರೆ ಅಹಂನಿಷ್ಠವಾದ ಭವ್ಯತೆಯಲ್ಲಿ ಕವಿಗೆ ತನ್ನ ಸೃಜನಶೀಲತೆಯನ್ನು ಕಂಡುಕೊಳ್ಳಬಹುದೆಂಬ ನಂಬಿಕೆಯಿದೆ. ಹೀಗಾಗಿ ಅವರ ಎಲ್ಲ ಕವನಗಳ ನಾಯಕರು ಅವರೇ ಆಗಿರುತ್ತಾರೆ, ಹಾಗೂ ಆ ನಾಯಕನಿಗೆ ಪ್ರವಾದಿತ್ವದ ಶ್ರದ್ಧೆಯಿರುತ್ತದೆ.

ನವ್ಯ ಸಾಹಿತ್ಯದ ಆರಂಭದಲ್ಲಿ ನಾವು ಹಲವರು ಈ ಅಹಂನಿಷ್ಠ ಭವ್ಯತೆಯನ್ನು ಪ್ರಶ್ನಿಸಿದ್ದೆವು. ಅಹಂನಿಷ್ಠ ಭವ್ಯತೆ ಕಾವ್ಯದ ಭಾಷೆಯನ್ನು ಸಂಸ್ಕೃತಮಯ ಮಾಡುತ್ತದೆಂದು ನಾವು ವಾದಿಸಿದ್ದೆವು. ನವ್ಯ ಸಾಹಿತ್ಯದ ಮುಂಚೂಣಿಯಲ್ಲಿದ್ದ ಅಡಿಗರ ದನಿಯ ಕೂಡಾ ಈ ಅಹಂನಿಷ್ಠೆಯನ್ನು ಸಂಪೂರ್ಣ ತ್ಯಜಿಸಲಿಲ್ಲ ಎಂದು ಕೊನೆ ಕೊನೆಯಲ್ಲಿ ನನಗೆ ಅನುಮಾನ ಹುಟ್ಟಿದ್ದಿದೆ. ನಿಜವಾಗಿಯೂ ಅಹಂನಿಷ್ಠ ಭವ್ಯತೆಯಿಂದ ಸಂಪೂರ್ಣ ಪಾರಾಗಿ ಬರೆಯುತ್ತಿರುವ ಲೇಖಕರೆಂದರೆ ಕುವೆಂಪುರವರ ಮಗ ತೇಜಸ್ವಿಯೇ ಇರಬಹುದು ಎಂದು ಈಗ ನನಗೆ ಅನ್ನಿಸುತ್ತಿದೆ.

ಬೇಂದ್ರೆಯ ಮಾಂತ್ರಿಕತೆ, ಕಾರಂತರ ಜೀವನನಿಷ್ಠವಾದ ಶೋಧನೆ, ಮಾಸ್ತಿಯವರ ಸಣ್ಣ ದನಿಯಲ್ಲಿ ಮೂಡುವ ವಿಶಾಲ ಹೃದಯವಂತಿಕೆ ಮತ್ತು ಕುವೆಂಪುರವರ ಉಗ್ರ ತಪಸ್ಸಿನ ಭವ್ಯತೆ, ಇವು ಒಟ್ಟಾಗಿ ಕನ್ನಡವನ್ನು ಜಗತ್ತಿನ ಶ್ರೇಷ್ಠ ಸಾಹಿತ್ಯ ಭಾಷೆಗಳಲ್ಲಿ ಒಂದನ್ನಾಗಿ ಮಾಡಿವೆ.

ಕುವೆಂಪುಗೆ ಆಧ್ಯಾತ್ಮಿಕವಾದ ಈ ದಿವ್ಯದ ಹಂಬಲ ಇಲ್ಲದೇ ಹೋಗಿದ್ದಲ್ಲಿ, ಸಾಮಾಜಿಕ ಕೋಪ, ಆಂಧಶ್ರದ್ಧೆಯ ಬಗೆಗಿನ ತಿರಸ್ಕಾರ ಎಲ್ಲವೂ ಪ್ರಗತಿಶೀಲ ಸಾಹಿತ್ಯದಲ್ಲಿ ಆದಂತೆ ಸವಕಲು ವಿಚಾರಗಳಾಗಿ ಬಿಡುತ್ತಿದ್ದವು. ಕುವೆಂಪು ತಾನು ಗಾಂಧಿ ಮತ್ತು ಅರವಿಂದರ ಸಮಕಾಲೀನ ಎನ್ನುವುದನ್ನು ಯಾವತ್ತೂ ಮರೆಯಲಿಲ್ಲ. ರಾಮಕೃಷ್ಣ ಪರಮಹಂಸರ ಶಿಷ್ಯರಿಂದ ದೀಕ್ಷೆ ಪಡೆದಿದ್ದೇನೆ ತಾನು ಎನ್ನುವುದು ಅವರ ವ್ಯಕ್ತಿತ್ವದ ಹೆಗ್ಗುರುತಾಗಿತ್ತು.

ಹಾಗೆಯೇ ಜಗತ್ತಿನ ವಿಭೂತಿ ಪುರುಷರೆಲ್ಲರ ಜೊತೆ ಸಹಸ್ಪಂದನ ಪಡೆದವ ತಾನೆಂಬುದನ್ನು ಮರೆತಿರಲಿಲ್ಲ ಕುವೆಂಪು. ಆದ್ದರಿಂದಲೇ ಅವರ ಅಹಂನಿಷ್ಠ ಭವ್ಯತೆ ಕೇವಲ ಅಹಮಿಕೆಯಾಗಿ ಉಳಿಯುವುದಿಲ್ಲ. ಬೇಂದ್ರೆಯಂತೆಯೇ ಕುವೆಂಪು, ಇನ್ನೊಂದು ರೀತಿಯಲ್ಲಿ ತಾನೊಂದು ಆವಾಹಿತ ಶಕ್ತಿ ಎಂದು ತಿಳಿದು ಕೊಂಡವರಂತೆ ಮಾತಾಡುತ್ತಿದ್ದರು.

ಮೊದಲಿನಿಂದಲೂ ನನಗೆ ಕುವೆಂಪು ಅವರ ಕಾದಂಬರಿಗಳೇ ಅವರ ನಿಜವಾದ ಮಹಾಕಾವ್ಯ ಅನ್ನಿಸುತ್ತ ಬಂದಿದೆ. ಅವರ ಕಾದಂಬರಿಗಳಲ್ಲಿ ಮಾತ್ರ ಅವರು ಪ್ರೀತಿಸುವ ಭವ್ಯತೆ, ಪ್ರಕೃತಿಯ ನಿತ್ಯದ ಜೊತೆ ಒಡನಾಡುವ ಅದ್ಭುತ ಕಾಣುತ್ತದೆ. ಹೂವಯ್ಯ ದಟ್ಟ ಅರಣ್ಯದ ತನ್ನ ಮನೆಯ ಮಹಡಿಯಲ್ಲಿ ಕೂತು ವರ್ಡ್ಸ್‌‌ವರ್ಥ್ ಮತ್ತು ಅರ್ನಾಲ್ಡರನ್ನು ಓದುವುದು, ಜೊತೆಗೆ ಮನೆಮಂದಿಯ ಕ್ಷುದ್ರ ವ್ಯವಹಾರಗಳಿಂದ ತಲೆ ಕೆಡಿಸಿಕೊಳ್ಳುವುದು ವಿಪರ್ಯಾಸವೆಂದು ಒಂದು ಕಾಲದಲ್ಲಿ ನಾನು ತಿಳಿದದ್ದಿತ್ತು. ಈಗಲೂ ಕೆಲವರು ಕಾನೂರು ಹೆಗ್ಗಡತಿಯಲ್ಲಿ ಬರುವ ಜಗತ್ತು ಬಹಳ ಸುಂದರವಾಗಿದೆ, ಆದರೆ ಹೂವಯ್ಯನ ವೈಚಾರಿಕತೆ ಈ ಜಗತ್ತಿನಲ್ಲಿ ಅಪ್ರಸ್ತುತವಾಗಿ ಕಾಣುತ್ತದೆ ಎನ್ನುವುದಿದೆ. ನಿಜವೆಂದರೆ ಈ ಕಾದಂಬರಿಯ ಮಹತ್ವವಿರುವುದು ಈ ವಿಪರ್ಯಾಸದಲ್ಲೇ. ಈ ಕಾರಣದಿಂದಾಗಿ ಭಾರತದ ಬಹುಮುಖ್ಯ ಕಾದಂಬರಿಗಳಲ್ಲಿ ಹೆಗ್ಗಡತಿ ಅಗ್ರಮಾನ್ಯ ಕೃತಿಯಾಗುತ್ತದೆ. ಬದಲಾಗುತ್ತಿರುವ ಭಾರತದಲ್ಲಿ ನಾವು ಇವತ್ತು ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳನ್ನು, ಎಲ್ಲ ದಿಗ್ಭ್ರಮೆಗಳನ್ನು, ಕುವೆಂಪು ತಮ್ಮ ಕೃತಿಗಳಲ್ಲಿ ಕಾಣಿಸಿದ್ದಾರೆ.

ಕುವೆಂಪು ಹೇಗೆ ಆಧ್ಯಾತ್ಮಿಕವಾಗಿ ತಪಸ್ವಿಯೋ ಹಾಗೆಯೇ ಸೌಂದರ್ಯೋಪಾಸಕರು ಕೂಡಾ ಹೌದು. ಆದ್ದರಿಂದಲೇ ಕನ್ನಡ ಕಾದಂಬರಿ ಪ್ರಪಂಚದಲ್ಲಿ ಶುದ್ಧ ಕಲಾತ್ಮಕತೆ ಹಾಗೂ ಕಾವ್ಯದ ಧ್ವನಿಶಕ್ತಿ ಎರಡನ್ನೂ ಪಡೆದ ಮೊದಲ ಕೃತಿ ಕಾನೂರ ಹೆಗ್ಗಡತಿ.

ಎಲ್ಲ ಪ್ರತಿಭಾಶಾಲಿ ಲೇಖಕರಂತೆ ಕುವೆಂಪು ಕೂಡಾ, ತಮ್ಮ ಮುಗ್ಧ ಅನುಯಾಯಿಗಳನ್ನು ದಿಗ್ಭ್ರಮೆಗೊಳಿಸಬಲ್ಲವರಾಗಿದ್ದರು, ರಾಮಾಯಣ ದರ್ಶನಂನ ಭವ್ಯತೆಗೆ ಮಾರುಹೋದ ಅವರ ಹಲವು ಶಿಷ್ಯರು ಮಲೆಗಳಲ್ಲಿ ಮದುಮಗಳು ಹೇಗೆ ಓದಿರಬಹುದು ಎನ್ನುವುದು ನಮಗೆಲ್ಲರಿಗೂ ಕುತೂಹಲದ ಸಂಗತಿಯಾಗಿತ್ತು. ಕುವೆಂಪುರವರನ್ನು ಕೇವಲ ಭವ್ಯವಾದ ಬೋಧನಾತ್ಮಕ ಕೃತಿಗಳ ಕರ್ತೃ ಎಂದು ತಿಳಿದವರಿಗೆ, ಅವರು ತಮ್ಮ ಘನತೆಯನ್ನು ಕಳಚಿಟ್ಟು ಪ್ರಕೃತಿಯ ಪ್ರಾಣಶಕ್ತಿಯನ್ನು ಮುಟ್ಟಿ ಮೈಮರೆಯಬಲ್ಲವರಾಗಿದ್ದರು ಎನ್ನುವುದು ಶಾಕ್ ಕೊಟ್ಟಿರಬೇಕು. ಆದ್ದರಿಂದಲೇ ಕುವೆಂಪುರವರ ಈ ಸೋಜಿಗವನ್ನು ಅರವಿಂದರಲ್ಲಿ, ಅವರು ವಿಭೂತಿ ಪುರುಷರಾಗಿದ್ದರೂ ಸಹ, ನಾವು ಕಾಣಲಾರೆವು.