ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೇಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಷಿಯಲಿಸ್ಟ್ ಕ್ಲಬ್‌’ ಎಂಬ ಸಂಸ್ಥೆಯ ರಾಜಕೀಯ – ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ ಸಾಹಿತ್ಯಪ್ರೇಮಿಯೆಂದು ಆ ದಿನಗಳಲ್ಲಿ ನನಗೆ ಗೌರವ. ಮುಂದೆ ಐವತ್ತರ ದಶಕದ ಪ್ರಾರಂಭದಲ್ಲಿ ಇಂಗ್ಲಿಷ್ ಆನರ್ಸ್ ಓದಲು ನಾನು ಮೈಸೂರಿಗೆ ಬಂದಾಗ, ಸುಬ್ಬಣ್ಣ ಕನ್ನಡ ಅನರ್ಸ್‌ನ ವಿದ್ಯಾರ್ಥಿ. ನಾನು ಮೊದಲು ಸೋನೆಗಾರರ ಬೀದಿಯಲ್ಲಿ, ನಂತರ ಸುಣ್ಣದ ಕೇರಿಯಲ್ಲಿ, ಕೊನೆಗೆ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿದ್ದೋ, ಕಾಲ ಹಾಕುತ್ತಿದ್ದ ದಿನಗಳಲ್ಲಿ ನನಗೆ ಸುಬ್ಬಣ್ಣ ಹೆಚ್ಚು ಹೆಚ್ಚು ಆತ್ಮೀಯನಾಗುತ್ತಾ ಹೋದ. ಆ ದಿನಗಳಲ್ಲಿ ಸುಬ್ಬಣ್ಣ ದುಡ್ಡುಕಾಸಿನ ವಿಷಯದಲ್ಲಿ ನನಗಿಂತ ಹೆಚ್ಚು ಭಾಗ್ಯಶಾಲಿಯಾಗಿದ್ದ. ಪ್ರತಿ ಭಾನುವಾರ ಹಾಸ್ಟೆಲಿನಲ್ಲಿ ಸ್ಪೆಶಲ್ ಊಟ ಇರುತ್ತಿತ್ತು ನನಗೆ, ಸುಬ್ಬಣ್ಣನ ಅತಿಥಿಯಾಗಿ. ಮಧ್ಯಾಹ್ನ ತಿಂಡಿ ಕೂಡ ಅವನೊಂದಿಗೆ. ಅಲ್ಲದೆ ಕ್ಲಾಸಿದ್ದಾಗ ಚಕ್ಕರ್ ಬೇಕಾದರೆ ಹೊಡೆದು ಅವನ ರೂಮಿನಲ್ಲಿ ಕೂತು ಗಂಟೆಗಟ್ಟಲೆ ಕಾಲ ಸಾಹಿತ್ಯದ ಕುರಿತು ನಾವು ಮಾತನಾಡುತ್ತಿದ್ದೆವು.

ಸಮಾಜವಾದಿ ರಾಜಕೀಯ ಚಿಂತನೆಯಿಂದ ಸಾಹಿತ್ಯ ಚಿಂತನೆಗೆ ತೊಡಗುವುದು ನನಗೆ ಒಂದೇ ವಿಷಯದ ಎರಡು ಹಂತಗಳಾಗಿಬಿಟ್ಟಿದ್ದವು. ಸುಬ್ಬಣ್ಣನಿಗೆ ನಾನು ಗಾರ್ಕಿಯ ಕಥೆಗಳ ಹುಚ್ಚು ಹಿಡಿಸಿದೆ, ಶೆಲ್ಲಿಯನ್ನು ಓದಿಸಿದೆ; ಸುಬ್ಬಣ್ಣ ನನಗೆ ಸತತವಾಗಿ ಪಂಪನನ್ನು, ಕುಮಾರವ್ಯಾಸನನ್ನು, ರತ್ನಾಕರವರ್ಣಿಯನ್ನು ಓದಿ ಹೇಳುತ್ತಿದ್ದ. ನಾವಿಬ್ಬರೂ ಹೀಗೆ ಒಂದು ಬಗೆಯ ಗುಂಗಿನಲ್ಲಿ ಇರುತ್ತಿದ್ದುದರಿಂದ ನನಗೆ ಸದ್ಯದ ವಿದ್ಯಾರ್ಥಿ ಜೀವನ ಸಾಗಿಸುವ ಕಷ್ಟದ ಪರಿವೆಯೇ ಇರಲಿಲ್ಲ. ಫೀಸು ಕೊಡಲು ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲ ಗೌಡರಿಂದ ಪಡೆಯುತ್ತಿದ್ದೆ, ಅಥವಾ ಶಿವಮೊಗ್ಗದ ಅಣ್ಣಯ್ಯನಿಂದ ಅಥವಾ ಸುಬ್ಬಣ್ಣನಿಂದ, ಅಥವಾ ಆ ದಿನಗಳ ನನ್ನ ಇನ್ನೊಬ್ಬ ಗೆಳೆಯ ಶಂಕರನಾರಾಯಣ ಭಟ್ಟನಿಂದ. ಸಮಾಜವಾದದಲ್ಲಿ ಆ ದಿನಗಳಲ್ಲಿ ನನಗಿದ್ದ ಭರಸೆ ಎಷ್ಟೆಂದರೆ ಸದ್ಯದ ಕಷ್ಟಗಳೆಲ್ಲವೂ ತೃಣ ಸಮಾನವೆನ್ನಿಸುವಷ್ಟು. ನನ್ನ ಎಲ್ಲ ಸ್ನೇಹ ಸಂಬಂಧವೂ ಒಂದು ಸಮಾಜವಾದಿ ಕುಟುಂಬವನ್ನು ಸದ್ಯದ ಸ್ಥಿತಿಯಲ್ಲೇ ನನಗೆ ಸೃಷ್ಟಿಸಿಕೊಟ್ಟಿತ್ತು.

ಈಗಲೂ ಒಂದು ಘಟನೆ ನೆನಪಿದೆ: ಒಮ್ಮೆ ನನಗೆ ಅತ್ಯಗತ್ಯವಾಗಿ ಬೇಕಾಗಿದ್ದ ಹತ್ತು ರೂಪಾಯಿಗಳಿಗಾಗಿ ಮೈಸೂರಿನಲ್ಲಿದ್ದ ನಮ್ಮೂರಿನ ಒಬ್ಬ ಹಿರಿಯರ ಬಳಿ ಹೋಗಿದ್ದೆ. ಅವರು ಸಣ್ಣ ಮಾತಾಡಿ ಆ ಹಣ ಕೊಟ್ಟರು. ಅದನ್ನು ಮುಷ್ಟಿಯಲ್ಲಿ ಹಿಡಿದು ಸುಣ್ಣದಕೇರಿಗೆ ನಾನು ಬರುವಷ್ಟರಲ್ಲಿ ಆ ಹಣ ನನಗೆ ಅರಿವಾಗದಂತೆ ಸಿಟ್ಟಿನ ಮುಷ್ಟಿಯಲ್ಲಿ ಚೂರು ಚೂರಾಗಿತ್ತು. ಅಂದರೆ ಗೆಳೆಯ ಸುಬ್ಬಣ್ಣನ ಬಳಿ ಹಣವಿಲ್ಲದ ದಿನ ಅದಾಗಿರಬೇಕು.

ಸುಬ್ಬಣ್ಣನಿಗೆ ನಾಟಕದ ಹುಚ್ಚು ಎಷ್ಟೆಂದರೆ ಯಾವ ಕಂಪೆನಿ ಮೈಸೂರಿಗೆ ಬಂದರೂ, ಗೆಳೆಯರನ್ನೆಲ್ಲಾ ಕಟ್ಟಿಕೊಂಡು ನಾಟಕ ನೋಡಲು ಅವನು ಹಾಜರು. ಇಂತಹ ಷೋಕಿಗಳಿಗಾಗಿ ಹಣ ಕಡಿಮೆಯಾದಾಗ ಅವನೂ ನಾನೂ ಮತ್ತು ಇನ್ನೊಬ್ಬ ಆತ್ಮೀಯ ಗಂಗಾಧರನೂ ನೂರಡಿ ರಸ್ತೆಯ ಗಿರಿಯಪ್ಪನ ಅಂಗಡಿಯಲ್ಲಿ ನಮ್ಮ ರಿಸ್ಟ್ ವಾಚುಗಳನ್ನು ಗಿರವಿಯಿಟ್ಟು ಹಣ ಪಡೆಯುತ್ತಿದ್ದೆವು. ನಮ್ಮ ಹಲವು ಜೋಕುಗಳು ಇದರ ಸುತ್ತಲೇ. ಅವನಿಗೆ ಹಣ ಹಿಂತಿರುಗಿಸಿ ನಮ್ಮ ವಾಚು ಪಡೆಯುವುದು ತಡವಾದರೆ ನೂರಡಿ ರಸ್ತೆಯ ಸಂಚಾರದ ಸ್ವಾತಂತ್ರ್ಯವನ್ನೇ ನಾವು ಕಳೆದುಕೊಳ್ಳುತ್ತಿದ್ದೆವು. ಒಮ್ಮೆ ಎಲ್ಲೋ ನಡೆದು ಹೋಗುವಾಗ ಸುಬ್ಬಣ್ಣನನ್ನು ಹೆದರಿಸಲು “ಏ ಗಿರಿಯಪ್ಪ ಬರುತ್ತಿದ್ದಾನೆ, ನೋಡು” ಎಂದೆ. ಕೂಡಲೇ ಸುಬ್ಬಣ್ಣ ನಡೆಯುವ ಭಂಗಿ ಬದಲಾಯಿಸಿ ಒಂದು ಕಾಲಿನಲ್ಲಿ ಕುಂಟನಾಗಿ ನನ್ನ ಜೊತೆಗೆ ನಡೆಯತೊಡಗಿದ – ಬಹಳ ಗಂಭೀರವಾಗಿ, ಇವತ್ತಿಗೂ ಆ ಘಟನೆ ನೆನೆದರೆ ನನಗೆ ನಗು ಬರುತ್ತದೆ. ಬಾಲ್ಯದ ಆತ್ಮೀಯ ಗೆಳೆತನವನ್ನು ಹುಟ್ಟುವ ಈ ಕ್ಷುಲ್ಲಕ ಸಂತೋಷಗಳು ಅತ್ಯಮೂಲ್ಯವಾದುವು. ನನ್ನ ಜೀವನದುದ್ದಕ್ಕೂ ಸುಬ್ಬಣ್ಣನ ಜೊತೆಗಿನ ಸಹವಾಸದ ಇಂಥ ನೆನಪುಗಳು ಹಲವಾರು ಇವೆ.

ನನ್ನ ನೆನಪಿನಲ್ಲಿ ಆ ದಿನಗಳಲ್ಲಿ ಸುಬ್ಬಣ್ಣ ಪರಮ ರಸಿಕನಾಗಿದ್ದ. ಏನನ್ನೇ ಓದಲಿ, ಏನನ್ನೇ ನೋಡಲಿ, ಅದನ್ನು ಅತ್ಯಂತ ಉತ್ಕಟವಾಗಿ ಅನುಭವಿಸುತ್ತಿದ್ದ. ನಾನು ಆ ದಿನಗಳಲ್ಲಿ ಓದಿದ ಕಾರಂತರ ಎಲ್ಲಾ ಕಾದಂಬರಿಗಳನ್ನೂ ಅವನ ಉತ್ಕಟ ದೃಷ್ಟಿಯಿಂದಲೇ ಕಂಡದ್ದು, ಅನುಭವಿಸಿದ್ದು. ಸುಬ್ಬಣ್ಣನನ್ನು ಕೇಳಿದರೆ ಅವನು ಆಗ ಓದಿದ ಕೆಲವು ಪುಸ್ತಕಗಳನ್ನು ಕುರಿತು ನನ್ನ ಬಗ್ಗೆಯೂ ಇದೇ ಮಾತನ್ನು ಹೇಳಿಯಾನು. ನಿಜವೆಂದರೆ ಆ ದಿನಗಳಲ್ಲಿ ಸುಬ್ಬಣ್ಣ ಸಾಹಿತ್ಯದ ಬಗ್ಗೆ ನನಗಿಂತಲೂ ಹೆಚ್ಚು ಖಚಿತವಾದ ತಿಳುವಳಿಕೆಯನ್ನು ಪಡೆದಿದ್ದೇನೆಂದೇ ನನ್ನ ನೆನಪು. ನಾನು ಅವನನ್ನು ಒಬ್ಬ ಮಾರ್ಗದರ್ಶಿಯೆಂದೇ ತಿಳಿದು ಅನುಸರಿಸಿದ್ದೆ.

ಆನರ್ಸ್ ಓದುತ್ತಿದ್ದ ಆ ದಿನಗಳಲ್ಲೂ ಕೂಡ ಸುಬ್ಬಣ್ಣನಿಗೆ ನಾಲ್ಕು ಜನರನ್ನು ಕೂಡಿಸಿಕೊಂಡು ಕೆಲಸ ಮಾಡುವ ಕೌಶಲ್ಯ ಸಾಧಿಸಿತ್ತು. ಮಹಾರಾಜರ ಕಾಲೇಜಿನ ‘ಮಿತ್ರಮೇಳ’ ಎಂಬ ನಾಟಕ ಬಳಗದ ಸಕ್ರಿಯ ಸದಸ್ಯ ಅವನಾಗಿದ್ದ. ನಾನಾದರೂ ಅದರ ಅಂಚಿನಲ್ಲಿ ಇದ್ದವನು. ಪ್ರೊ. ರಂಗಣ್ಣನವರಿಗಾಗಿ ‘ಬಾಗಿನ’ ಎಂಬ ಅಭಿನಂದನ ಗ್ರಂಥವನ್ನು ಅವನು ಹಾ.ಮಾ. ನಾಯಕರೊಂದಿಗೆ ಸೇರಿ ಹೊರತಂದಿದ್ದ. ಈಗಲೂ ನನಗೆ ತುಂಬ ಸುಂದರ ಎನ್ನಿಸುವ ಸಭೆಯಲ್ಲಿ ಈ ಗ್ರಂಥ ಬಿಡುಗಡೆಯಾಗಿತ್ತು. ಸಾಹಿತ್ಯ ಮಾತ್ರವಲ್ಲದೆ ಅಡಿಕೆ ಬೆಳೆಗಾರರ ಪರವಾಗಿಯೂ ಸುಬ್ಬಣ್ಣ ಹಲವು ಲೇಖನಗಳನ್ನು ಬರೆದಿದ್ದ. ನಾನು ಅವನನ್ನು ತಮಾಷೆ ಮಾಡುತ್ತಿದ್ದೆ: “ಏನೋ, ಒಂದೇ ಲೇಖನವನ್ನು ‘ನೀವು ತಿನ್ನುವ ಅಡಿಕೆ’, ‘ತಾವು ತಿನ್ನುವ ಅಡಿಕ’, ‘ನಾವು ತಿನ್ನುವ ಅಡಿಕೆ’ಯೆಂದು ನೀನು ಪ್ರಕಟಿಸುತ್ತಿದ್ದೀಯಾ”? ನಾವು ಪರಸ್ಪರ ಗೌರವ ಪ್ರೀತಿ ವ್ಯಕ್ತಪಡಿಸುತ್ತಿದ್ದುದು ಈ ರೀತಿಯ ಲೇವಡಿಯಿಂದಲೇ. ಆಗಿನಂತೆ ಈಗಲೂ ಕೂಡ.

ಆನರ್ಸ್ ಮುಗಿಸಿ ನಾನು ಅಧ್ಯಾಪಕ ವೃತ್ತಿಗೆ ಇಳಿದು ಹಲವು ಸಂಕೋಚಗಳ ನಡುವೆಯೇ ನನ್ನ ಮಾನಸಿಕ ಸಾಹಸಗಳನ್ನು ಕೈಗೊಂಡರೆ ಸುಬ್ಬಣ್ಣ ಸಂಬಳದ ಹಂಗಿಲ್ಲದ ಜೀವನಕ್ಕೆ ಇಳಿದುಬಿಟ್ಟ. ಅವನ ಆಗಿನ ರಸೈಕದೃಷ್ಟಿ ಎಂದು ನನ್ನ ಅರ್ಧ ಕುಶಾಲಿನ, ಅರ್ಧ ಗಂಭೀರದ ಟೀಕೆಗೆ ಒಳಗಾಗಿದ್ದ ಅವನ ಜೀವನಕ್ರಮ ಈ ಆಯ್ಕೆಯಿಂದಾಗಿಯೇ ಹಲವು ಸವಾಲುಗಳನ್ನು ಎದುರಿಸಿ ಪಕ್ವವಾಗುತ್ತ ಹೋಯಿತು. ಆಗಿನ ಅವನ ಕವನ ಸಂಕಲನ ಹೂ ಚೆಲ್ಲಿದ ಹಾದಿಯಲ್ಲಿ ಎಂಬುದು ಸೌಂದರ್ಯದ ಉದ್ದೇಶಪೂರ್ವಕ ಹುಡುಕಾಟವೆಂದು ನನಗೆ ಅತೃಪ್ತಿ ತಂದಿತ್ತು. ಆದರೆ ಆ ದಿನಗಳಲ್ಲೇ ದಶರೂಪಕವನ್ನು ಅವನು ಕನ್ನಡಕ್ಕೆತಂದದ್ದು. ಅವನ ವಯಸ್ಸಿಗೆ ಮೀರಿದ ಒಂದು ಪ್ರೌಢ ಕೆಲಸವೂ ಆಗಿತ್ತು.

ಸಬ್ಬಣ್ಣನ ಚೇತನ ಎಷ್ಟು ವೇಗವಾಗಿ ತನ್ನ ನೆಲೆಯನ್ನು ಕಂಡುಕೊಂಡು ಬೆಳೆಯಿತೆಂಬುದು ಆಶ್ಚರ್ಯದ ಸಂಗತಿ. ಊರಿಗೆ ಮರಳಿದವನೇ ಒಂದು ಸೊಗಸಾದ ಮನೆ ಕಟ್ಟಿದ, ಅದು ತಾನಿರಲು ಮಾತ್ರವೇ ಕಟ್ಟಿದ ಮನೆಯಲ್ಲ. ತನ್ನ ಅಪಾರ ಗೆಳೆಯರನ್ನು ಮನೆಗೆ ಕರೆದು ಸಂತೋಷಪಡಿಸಲು ತಕ್ಕ ವೈಶಾಲ್ಯದಲ್ಲಿ ಅದನ್ನು ಅವನು ಕಟ್ಟಿದ್ದು. ನಮಗೆಲ್ಲರಿಗೂ ತೀರ್ಥಹಳ್ಳಿಯಲ್ಲಿ ಪೂಜ್ಯ ಗುರುಗಳಾಗಿದ್ದ ಸ್ವತಃ ಕವಿಗಳೂ ಆಗಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳ ಮಗಳಾದ ಶ್ರೀಮತಿ ಶೈಲಜಾಳನ್ನು ಅವನು ಮದುವೆಯಾದದ್ದು ಅವನ ಆಯ್ದ ಬದುಕಿನ ಕ್ರಮಕ್ಕೆ ಹೆಚ್ಚಿನ ಅರ್ಥವನ್ನೂ ಸಹಜತೆಯನ್ನೂ ತಂದು, ಸುಬ್ಬಣ್ಣನ ಕಲಾಸಾಹಸಗಳು ಗೃಹಸ್ಥ ಧರ್ಮದ ಒಂದು ಅಂಶವೆನ್ನುವಂತೆ ಮಾಡಿತು. ಹೆಂಡತಿ ಸಂಗೀತಗಾರಳಾದರೆ ತಾಯಿ ಪ್ರಕಟಣೆ ಬಯಸದ ಧ್ಯಾನಶೀಲೆ ಸಾಹಿತಿ. ಈಗ ಅವನ ಮಗ ಅಕ್ಷರನೂ ಒಬ್ಬ ಪ್ರತಿಭಾಶಾಲಿ ಬರಹಗಾರ.

ತನ್ನೂರಿಗೆ ಮರಳಿದ ಮೇಲೆ ಸುಬ್ಬಣ್ಣ ಮೊದಲ ತನ್ನ ಅಡಿಕೆ ತೋಟವನ್ನು ಚೆನ್ನಾಗಿ ಬೆಳೆಸಿ ನಿಜವಾದ ಅರ್ಥದಲ್ಲಿ ಈಚೆಗೆ ಅಪರೂಪವೆನ್ನಿಸುವ ಶ್ರೀಮಂತನಾದ. ತನಗೆ ಇಷ್ಟವಾದುದರಲ್ಲಿ ನಿರತನಾಗುವ ಸ್ವಾತಂತ್ರ್ಯವನ್ನು ಹೀಗೆ ಪಡೆದು ತನ್ನ ಸುತ್ತಮುತ್ತಲಿನ ಹಲವು ರಸಿಕರನ್ನು ಕೂಡಿಕೊಂಡು ನಾಟಕ ಆಡುವುದರಲ್ಲಿ, ಆಡಿಸುವುದರಲ್ಲಿ ತೊಡಗಿದ. ಹೀಗೆ ‘ನೀಲಕಂಠ ನಾಟ್ಯ ಸೇವಾ ಸಂಘ’ ಬೆಳೆಯತೊಡಗಿತು – ಏಷ್ಯಾದಲ್ಲೇ ಒಂದು ಮಾದರಿ ಸಂಸ್ಥೆಯಂತೆ.

ನಮ್ಮ ಗೆಳೆತನವೂ ಗಾಢವಾಗುತ್ತ ಹೋಯಿತು. ಉಂಡು, ತಿಂದು ಸುಖವಾದ ನಿದ್ರೆ ಮಾಡಿ ಕಾಡಿನ ದಾರಿಗಳನ್ನು ಅಲೆದು, ಯಕ್ಷಗಾನ ನೋಡಲು ಮತ್ತು ಹಳ್ಳಿಯ ಹಾಡುಗಳನ್ನು ಕೇಳಿಸಿಕೊಳ್ಳಲು ಆಸೆಯಾದಾಗಲೆಲ್ಲಾ ನಾನು ಹೋಗುತ್ತಿದ್ದುದು ಸುಬ್ಬಣ್ಣನ ಸದಾ ತೆರೆದ ಬಾಗಿಲಿನ ಮನೆಗೆ. ಅಲ್ಲಿ ಸುಬ್ಬಣ್ಣ, ಅವನ ಹೆಂಡತಿ ಶೈಲಜಾ, ಅವನ ತಾಯಿ ಮತ್ತು ಮಗ ಅಕ್ಷರ ಬೆಳೆಯುತ್ತಾ ಹೋದುದನ್ನು ಕಂಡು ನಾನು ಸಂತೋಷಪಟ್ಟಿದ್ದೇನೆ. ನನಗೆ ಮಾತ್ರವಲ್ಲ ನನ್ನ ಸಂಸಾರಕ್ಕೂ ಮತ್ತು ಸಾಹಿತ್ಯದ ಗೆಳೆಯರಿಗೂ, ರಾಜಕೀಯ ಮಿತ್ರರಿಗೂ ಸುಬ್ಬಣ್ಣನದು ಸ್ವಂತ ಮನೆಯಾಗಿಬಿಟ್ಟಿತು.

ಮುಂದಿನದು ಕನ್ನಡದ ಸಾಂಸ್ಕೃತಿಕ ಇತಿಹಾಸಕ್ಕೆ ಸೇರಿದ ಸಂಗತಿಯಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ರಾಜಕೀಯ ಕ್ಷೇತ್ರದಲ್ಲಿ ವಿಫಲವಾಯಿತು ಎನ್ನಿಸುವ ಆದರ್ಶಗಳೆಲ್ಲವೂ ಸುಬ್ಬಣ್ಣನ ಊರಿನಲ್ಲಿ ಒಂದು ದೀಪದಂತೆ ಸಜೀವವಾಗಿ ಉಳಿದು ಬೆಳೆದಿವೆ. ಸುಬ್ಬಣ್ಣ ಈಗ ಕೇವಲ ಒಬ್ಬ ಉತ್ಕಟನಾದ ರಸಿಕ ಮಾತ್ರವಲ್ಲ, ಅವನ ರಸಿಕತೆ ತನ್ನ ಜೀರ್ಣಶಕ್ತಿಯನ್ನು ಅಪಾರವಾಗಿ ಬೆಳೆಸಿಕೊಂಡು ಒಂದು ಹಳ್ಳಿಯ ಪರಿಸರದಲ್ಲಿ ಪ್ರಪಂಚದಲ್ಲಿ ಅತ್ಯುತ್ತಮವಾದುದನ್ನು ಮೈದಾಳುವಂತೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಇಲ್ಲಿಯೇ ಹೇಳಬೇಕಾದ ಸಂಗತಿ ಒಂದಿದೆ: ಕೆಲವರು ಅತ್ಯುತ್ತಮ ಸಂಸ್ಥೆ ಕಟ್ಟಬಲ್ಲರು. ಆದರೆ ತಾವೇ ಉತ್ತಮ ಸೃಜನಶೀಲ ಲೇಖಕರಾಗಿರಬೇಕಿಲ್ಲ. ಸೃಜನಶೀಲ ಲೇಖಕರಂತೂ ಯಾವ ಸಂಸ್ಥೆಯನ್ನಾದರೂ ಹಾಳು ಮಾಡಬಲ್ಲ ಉದ್ರೇಕದ ವಿಶಿಷ್ಟತೆ ಪಡೆದವರಾಗಿರುವುದೇ ಹೆಚ್ಚು. ಆದರೆ ಸುಬ್ಬಣ್ಣ ಸ್ವತಃ ಎಷ್ಟು ಒಳ್ಳೆಯ ಬರಹಗಾರನೆಂದರೆ ಸಾಹಿತ್ಯ ಮತ್ತು ಸಿನಿಮಾ ಕುರಿತು ಅವನ ವಿಮರ್ಶೆಗಳಲ್ಲಿ ಕೆಲವು ನಮ್ಮ ಕಾಲದ ಉತ್ತಮ ಬರಹಗಳಾಗಿವೆ. ರೋಶಮಾನ್ ಬಗ್ಗೆ ಸುಬ್ಬಣ್ಣ ಬರೆದಿದ್ದು ಮತ್ತು ಲೋಕ ಶಾಕುಂತಲಾದ ಬಗೆಗಿನ ಅವನ ಲೇಖನ ಯಾವ ಭಾಷೆಯಲ್ಲೇ ಆಗಲಿ ಉತ್ತಮ ಕೃತಿಗಳೆಂದು ನನಗನ್ನಿಸಿದೆ.

ಸುಬ್ಬಣ್ಣ ತಾನು ಬದುಕುವ ಕ್ಷೇತ್ರದ ಕ್ರಮವನ್ನೇ ಬದಲಾಯಿಸಿ ಒಂದು ಸಮುದಾಯದ ಬದುಕಿಗೆ ವಿಶೇಷ ಹೊಳಪನ್ನು ತಂದಿದ್ದಾನೆ. ಅವನ ಊರಿನಲ್ಲಿ ಹುಡುಗಿಯರು ಮದುವೆಯಾಗಿ ತಾವು ಹೋಗುವ ಊರು ಬೆಂಗಳೂರು ಆಗಿದ್ದರೂ ಸಾಂಸ್ಕೃತಿಕವಾಗಿ ಅದು ತೆಳು ಎಂದುಕೊಳ್ಳುತ್ತಾರೆಂದು ನಾನು ಕೇಳಿದ್ದೇನೆ.

ಉತ್ಕಟ ರಸಿಕನಾಗಿ ಪ್ರಾರಂಭಿಸಿ, ಪ್ರಯೋಗಶೀಲ ಕಾರ್ಯದಕ್ಷನಾಗಿ ಬೆಳೆದು, ಈಗೊಬ್ಬ ಸಮಕಾಲೀನ ದ್ರಷ್ಟಾರನಾಗಿ ಸುಬ್ಬಣ್ಣ ಬೆಳೆದಿದ್ದಾನೆ. ಯಶಸ್ಸು ಮತ್ತು ಕೀರ್ತಿ ಅವನನ್ನು ಕಂಗೆಡಿಸಲಾರವು. ಯಾಕೆಂದರೆ ಅವನು ಬೆಳೆದ ನೆಲ ಮತ್ತು ಅವನು ತನ್ನ ಕನಸನ್ನು ಬೆಳೆಸುತ್ತಿರುವ ನೆಲ –  ಅದರ ಗುಣವೇ ಅಂಥದ್ದಾಗಿದೆ. ಈಗಿನ ಮಹತ್ವಾಕಾಂಕ್ಷೆಯ ಪೈಪೋಟಿಯ ಕಾಲದಲ್ಲೂ ತನ್ನ ಒಬ್ಬನೇ ಮಗನ ಕೂಡ ಈ ತನ್ನ ಕನಸಿನಲ್ಲಿ ಸುಬ್ಬಣ್ಣ ತೊಡಗಿಸಿದ್ದಾನೆ.

ನನ್ನ ಗೆಳೆಯರಲ್ಲಿ ಎಲ್ಲ ದೃಷ್ಟಿಯಿಂದಲೂ ನಿಜವಾದ ಪುಣ್ಯವಂತನೆಂದರೆ ಸುಬ್ಬಣ್ಣನೇ.