ನನ್ನ ಬಾಲ್ಯವನ್ನು ಕಾಡು ಪ್ರಧಾನವಾಗಿ ಆಕ್ರಮಿಸಿಕೊಂಡಿತ್ತು. ನಮ್ಮ ಮನೆಯಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದ ಕಾಡು ದಿನೇ ದಿನೇ ಬೆಳೆಯುತ್ತಾ ಮನೆಯೊಳ್ಳಕ್ಕೇ ನುಗ್ಗುವ ಗಳಿಗೆಗಾಗಿ ಹೊಂಚುತ್ತಿರುವಂತೆ ಕಾಣುತ್ತಿತ್ತು. ಅದು ಮತ್ತೂ ಮುನ್ನುಗ್ಗದಂತೆ ತಡೆಯಲು ಪ್ರತಿದಿನ ಬೆಳಗ್ಗೆ ಅಜ್ಜ ಕೈಯಲ್ಲಿ ಕುಡುಗೋಲು ಹಿಡಿದು ಹೊರಡುತ್ತಿದ್ದರು.

ಮೃಗಗಳನ್ನು ತನ್ನೊಳಗೆ ತುಂಬಿಕೊಂಡಿದ್ದ ಆ ಕಾಡೇ ಒಂದು ಮೃಗದಂತಿತ್ತು. ಸಂಜೆಯನ್ನು ಮುತ್ತುತ್ತಿದ್ದ ಜೋಯಿಸರ ಹಕ್ಕಿಯ ಎಡೆಬಿಡದೆ ಮೊರೆತ ಹೆದರಿಸುವ ಕಾಡಿನ ದನಿಯೊಂದರಂತೆ ನನಗೆ ಕೇಳಿಸುತ್ತಿತ್ತು. ‘ಆಗಲೇ ಸಂಜೆ ಆರಾಯಿತಲ್ಲ’ ಎಂದುಕೊಳ್ಳುತ್ತಾ, ಹಸುವೊಂದು ಇನ್ನೂ ಬರಲಿಲ್ಲವೆಂದು ಅಮ್ಮ ಚಿಂತೆಯಲ್ಲಿ ಮುಳುಗಿಬಿಡುತ್ತಿದ್ದರು.

ಆ ಕಾಲಕ್ಕೆ ನನ್ನನ್ನು ಮುತ್ತುತ್ತಿದ್ದ ಹಲವು ಬಗೆಯ ಸದ್ದುಗಳು, ಗಂಧವಾಸನೆಗಳು ನನಗೆ ಚೆನ್ನಾಗಿ ನೆನಪಿವೆ. ಅಮಲೇರಿಸುವ ಕೆಂಡಸಂಪಿಗೆಯ ವಾಸನೆ, ನಕ್ಷತ್ರದಾಕಾರದ ರಂಜದ ಹುವಿನ ತಾಜಾ ಸುಗಂಧ, ತೊಯ್ದ ಹುಲ್ಲಿನ ಮೇಲೆ ಬಿದ್ದ ಪಾರಿಜಾತದ ತೆಳು ಪರಿಮಳ, ಅದೇ ಆಗ ಕೊಯ್ದ ಹುಲ್ಲಿನ ವಾಸನೆ, ಉರಿವ ಕೊರಡು, ಸಗಣಿ ಹಾಗೂ ಹಣ್ಣಾಗತೊಡಗಿದ್ದ ಹಲಸಿನ ವಾಸನೆ, ಇವು ನನ್ನ ಮೂಗಿಗೆ ಚಿರಪರಿಚಿತವಾಗಿದ್ದ ಬೆಳಗಿನ ಗಂಧಗಳು. ನೋಡುನೋಡುತ್ತಿದ್ದಂತೆ ಬೆಳಗು ಮಧ್ಯಾಹ್ನವಾಗಿ ಬಿಡುತ್ತಿತ್ತು. ನೆತ್ತಿಯ ಮೇಲೇರಿದ ಸೂರ್ಯ ಪ್ರಖರವಾಗಿ ಬೆಳಗುತ್ತಾ ನಮ್ಮ ಕಾಲ ಕೆಳಗೆ ನೆರಳಿನ ಕೊಳವೊಂದನ್ನು ಸೃಷ್ಟಿಸುತ್ತಿದ್ದ. ದಾಳಿಂಬೆ ಮರದ ಮೇಲೆ ಕೂತ ಕಾಗೆಯ ಕೂಗು ಬಿಟ್ಟರೆ ಸಂಪೂರ್ಣ ನೀರವವಾಗಿರುತ್ತಿದ್ದ ಆ ಅವಧಿ ಶೂನ್ಯ ವೇಳೆಯಂತಿರುತ್ತಿತ್ತು. ಮಧ್ಯಾಹ್ನವಾದಂತೆ, ವ್ಯಾಕುಲದ ಇಷ್ಟಗಲ ಕಣ್ಣುಗಳ ಹಸುಗಳ ಕೊರಳ ಗಂಟೆಯ ಸದ್ದು ಸುತ್ತೆಲ್ಲ ತುಂಬಿಕೊಳ್ಳತೊಡಗುತ್ತಿತ್ತು. ಎಳೆಗರುಗಳು ಮಾತ್ರ ಜಿಗಿಯುತ್ತ, ಕುಣಿಯುತ್ತ, ವಿನಾಕಾರಣ ಉಲ್ಲಾಸದಿಂದಿರುತ್ತಿದ್ದವು.

ದಿನವಿಡೀ ಚಿಲಿಪಿಲಿಗುಡುತ್ತಲೇ ಇದ್ದ ಜೋಯಿಸರ ಹಕ್ಕಿಗಳು ಆಕಾಶದಲ್ಲಿ ಮಿನುಗುವ ತಾರೆಗಳ ಹಿಂಡಿನೊಂದಿಗೆ ರಾತ್ರಿ ಅಡಿಯಿಕ್ಕಿದ್ದ ತಕ್ಷಣ ನಾಟಕೀಯವಾಗಿ ಸ್ತಬ್ಧವಾಗಿಬಿಡುತ್ತಿದ್ದವು. ಚಿತ್ತಾರ ಕೆತ್ತಿದ ತಲೆಬಾಗಿಲಿಗೊರಗಿ ನಿಂತ ಅಮ್ಮ ಸದಾ ತರಳೆ ಮಾಡುವ ಹಸು ಗೌರಿಗಾಗಿ ಕಾತುರದಿಂದ ಕಾಯುತ್ತಿರುತ್ತಿದ್ದಳು. ಅಜ್ಜ ಜಗುಲಿಯ ಮೇಲೆ ಕೂತು ಲಾಟೀನಿನ ಬೆಳಕಲ್ಲಿ ಪಂಚಾಂಗ ಹರಡಿಕೊಂಡು ಚೀಲದಿಂದ ಕವಡೆ ತೆಗೆದುರುಳಿಸಿ ಈ ಹಸುವಿಗೇನಾಗಿರಬಹುದೆಂದು ಕಂಡುಹಿಡಿಯಲೆತ್ನಿಸುತ್ತಿದ್ದರು. ‘ಗೌರಿ ಇಲ್ಲೇ ಎಲ್ಲೋ ಪೂರ್ವದಿಕ್ಕಿನಲ್ಲಿ ಕ್ಷೇಮವಾಗಿದ್ದಾಳೆ’ ಎಂದು ಅಮ್ಮನಿಗೆ ಸಮಾಧಾನ ಹೇಳುತ್ತಾ, ‘ದೇವರ ಮನೆಯಲ್ಲಿ ದೀಪ ಹಚ್ಚಿಟ್ಟಿದೀಯ ತಾನೆ?’ ಎನ್ನುತ್ತಿದ್ದರು. ಅಜ್ಜನ ಪಕ್ಕದಲ್ಲೇ ಕೂತ ನಾನು ಋತುಗಳು, ಮಾಸಗಳು, ನಕ್ಷತ್ರಗಳು, ಸಂವತ್ಸರಗಳ ಹೆಸರುಗಳನ್ನು, ಮಗ್ಗಿಯನ್ನು, ಶ್ಲೋಕ, ಮಂತ್ರಗಳನ್ನು, ಅದರಲ್ಲೂ ದೆವ್ವ, ಗುಡುಗ ಹಾಗೂ ಹುಲಿಯಿಂದ ನನ್ನನ್ನು ಕಾಪಾಡಬಲ್ಲ ಶ್ಲೋಕಗಳನ್ನು ಜಪಿಸಲಾರಂಭಿಸುತ್ತಿದ್ದೆ. ನಡುನಡುವೆ ಅರ್ಜುನನಿಗಿದ್ದ ಹಲವು ಹೆಸರುಗಳನ್ನು ಒಂದೊಂದಾಗಿ ನಾನು ಪಠಿಸುತ್ತಿದ್ದುದ್ದು ನೆನಪಾಗುತ್ತದೆ: ಅರ್ಜುನ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ…

ದಟ್ಟ ಕಪ್ಪು ಕಾಡಿನ ನಡುವಿನಿಂದ ಸಣ್ಣಗಿನ, ಆದರೆ ಎದೆನಡುಗಿಸುವ ಸದ್ದೊಂದು ಕೇಳತೊಡಗುತ್ತಿತ್ತು. ಹ್ಞಾಂ, ಎಲ್ಲೋ ದೂರದಲ್ಲಿ ನಮ್ಮತ್ತಲೇ ಧಾವಿಸುತ್ತಿರುವ ಹುಲಿಯ ಘರ್ಜನೆಯದು. ಘರ್ಜನೆ ಜೋರಾದಂತೆಲ್ಲ ಅದು ನಮ್ಮ ಹತ್ತಿರ ಹತ್ತಿರವೇ ಬರುತ್ತಿರುವಂತೆ ಭಾಸವಾಗತೊಡಗುತ್ತಿತ್ತು –  ನಮ್ಮ ಸುತ್ತ ಸುತ್ತುವ ವೃತ್ತ ಕ್ರಮೇಣ ಹತ್ತಿರ ಹತ್ತಿರವಾಗುವ ಹಾಗೆ. ಹುಲಿರಾಯನ ಆಗಮನ ನಮ್ಮ ಅರಿವಿಗೆ ಬರುವ ಮೊದಲೇ ಹಸುಗಳಿಗೆ ಅರಿವಾಗಿ ಬಿಡುತ್ತಿತ್ತು. ಹಸುಗಳ ಕೊರಳ ಗಂಟೆಗಳ ಸದ್ದಿನಿಂದಲೇ ಅವು ಹೆದರಿ ಥರಗುಟ್ಟುವುದು ನಮಗೆ ಗೊತ್ತಾಗಿಬಿಡುತ್ತಿತ್ತು. ಥಟ್ಟನೆ ಕೊಟ್ಟಿಗೆಯ ಕದ ಮುಚ್ಚಿಬಿಡುತ್ತಿದ್ದ ಅಮ್ಮ ಕಳೆದು ಹೋದ ಹಸು ಜೋಪಾನವಾಗಿ ಮನೆಗೆ ಮರಳಲೆಂದು ರಾತ್ರಿಯಿಡೀ ಪ್ರಾರ್ಥಿಸುತ್ತಾ ಕೂತುಬಿಡುತ್ತಿದ್ದರು. ಅಮ್ಮನ ತೊಡೆಯ ಮೇಲೆ ಹಾಗೇ ಉರುಳಾಡುತ್ತಿರುತ್ತಿದ್ದ ನಾನು ಯಾವಾಗಲೋ ನಿದ್ದೆಗೆ ಜಾರಿಬಿಟ್ಟಿರುತ್ತಿದ್ದೆ. ಮೂರನೆಯ ಬೆಳಗ್ಗೆ ಮನೆಗೆ ಬಂದ ಒಕ್ಕಲು ಮಕ್ಕಳ ಬಾಯಲ್ಲೆಲ್ಲ ಹುಲಿಯ ಮಾತೇ. ಹಸು ಸುರಕ್ಷಿತವಾಗಿದೆಯೆಂದು ತಿಳಿದು ನಾವು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೆವು. ತನ್ನ ಹೊಲಕ್ಕೆ ನುಗ್ಗಿದ ಹಸುವನ್ನು ಒಕ್ಕಲು ಮಗನೊಬ್ಬ ಕಟ್ಟಿ ಹಾಕಿರುತ್ತಿದ್ದ. ಅದೂ, ಪೂರ್ವದಿಕ್ಕಿಗಿರುವ ಜಾಗವೊಂದರಲ್ಲೇ.

ಒಕ್ಕಲು ಮಕ್ಕಳ ಬಾಯಲ್ಲಿ ಹಲವು ಹುಲಿಕತೆಗಳಿದ್ದವು: ಹುಲಿಯ ಜೊತೆ ಬರಿಗೈಲಿ ಕಾದಾಡಿದ ಕಲಿಗಳಿದ್ದರು; ಗಾಯವೇನೂ ಆಗದಿದ್ದರೆ ಹುಲಿಗಳು ನಿರುಪದ್ರವಿಗಳಂತೆ; ಗಾಯವಾದರೆ, ಅವು ತಮ್ಮ ಮೈಯಿಂದಲೇ ಮಾಂಸ ಕಿತ್ತು ಗಾಯದ ಮೇಲೆಲ್ಲ ಅಂಟಿಸಿಕೊಳ್ಳುತ್ತವಂತೆ. ಪರಿಣಾಮ, ಹುಲಿಯ ಮೈತುಂಬ ಹುಣ್ಣುಗಳಂತೆ. ಇವೆಲ್ಲ ಕತೆಗಳನ್ನು ನಾನು ಕೇಳಿದ್ದು ಅವರ ಬಾಯಿಂದಲೇ. ‘ಹುಲಿಹುಣ್ಣು’ ಎನ್ನುವುದು ಎಂದೂ ಋಣಮುಕ್ತನಾಗದ ಸಾಲಗಾರರನ್ನು ಅಥವಾ ಸದಾ ವ್ಯಥೆಯಿಂದ ಕೊರಗುವವನನ್ನು ಬಣ್ಣಿಸುವ ರೂಪಕವಾದದ್ದು ಹೀಗೆ.

ಹುಲಿಯ ಜೊತೆ ಹಾಗೂ ಬಿಳಿಯರ ಜೊತೆ ಟಿಪ್ಪು ಕಾದಿದ್ದನ್ನೂ, ‘ಹೊಯ್ಸಳ’ ಎಂಬ ಪದ ಹುಟ್ಟಿದ ಬಗೆಯನ್ನೂ ನಾನು ಮೊದಲು ಬಾರಿಗೆ ಕೇಳಿದ್ದು ನಮ್ಮೂರ ಹುಲಿಪುರಾಣಗಳಲ್ಲೇ. ಆಶ್ರಮದಲ್ಲಿ ತನ್ನ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಛಂಗನೆ ಜಿಗಿದು ಬಂದ ಹುಲಿಯನ್ನು ಕಂಡ ಗುರು ಸಳನೆಂಬ ಬಾಲಕನಿಗೆ ‘ಹೊಯ್‌’ ಎಂದ. ಚೂರಿ ಹಿಡಿದು ಕಾದಾಡಿ ಹುಲಿಯನ್ನು ಕೊಂದ ಸಳ ಮುಂದೆ ಹೊಯ್ಸಳ ಸಾಮ್ರಾಜ್ಯವನ್ನೇ ಕಟ್ಟಿದ.

ಜೊತೆಗೇ, ಅಮ್ಮ ಹೇಳುತ್ತಿದ್ದ ಕಣ್ಣೀರಿನ ಕತೆಗಳೂ ಇದ್ದವು. ಅದರಲ್ಲೊಂದು ಕತೆ ಇದು: ಮಗುವೊಂದು ಇಡೀ ರೊಟ್ಟಿ ತನಗೇ ಬೇಕೆಂದು ಅಳಲಾರಂಭಿಸಿತ್ತು. ಅರ್ಧರೊಟ್ಟಿ ನಿನಗೆ ಸಾಕೆಂದು ತಾಯಿಯ ತಾಕೀತು. ಮಗುವಿನ ರಚ್ಚೆ ಹೆಚ್ಚಾದಾಗ ರೋಸಿಹೋದ ತಾಯಿ ಮಗುವನ್ನೆತ್ತಿ ಹೊರಗೆ ಕತ್ತಲಲ್ಲಿ ಕೂರಿಸಿ ಕದಮುಚ್ಚಿಕೊಂಡು ಇನ್ನಷ್ಟು ರೊಟ್ಟಿ ತಟ್ಟಲು ಹೋದಳು. ಇತ್ತ, ಸದ್ದಿಲ್ಲದೆ ಕಳ್ಳಹೆಜ್ಜೆ ಇಡುತ್ತಾ ಬಂದ ಹುಲಿರಾಯ ಮಗುವಿನೆದುರು ನಿಂತ. ಅದು ಹುಲಿಯೆಂಬುದು ಮಗುವಿಗೇನು ಗೊತ್ತು! ಆದರೆ ಉರಿಯುತ್ತಾ ಫಳಗುಟ್ಟುವ ಕಣ್ಣು, ಅತ್ತಿತ್ತ ಅಲ್ಲಾಡುವ ಬಾಲ ಕಂಡು ಮಗುವಿಗೆ ದಿಗಿಲು. ಕದ ಬಡಿಯುತ್ತಾ, ‘ಅರ್ಧರೊಟ್ಟಿ ಸಾಕಮ್ಮ ! ಬಾಗಿಲು ತೆಗೆಯಮ್ಮಾ ! ಕಣ್ಣು ಪಿಲಿಪಿಲೀ, ಬಾಲ ಪಟಪಟಾ; ಕಣ್ಣು ಪಿಲಿಪಿಲೀ, ಬಾಲ ಪಟಪಟಾ’ ಎನ್ನುತ್ತಾ ಮಗು ಗಟ್ಟಿಯಾಗಿ ಅಳಲಾರಂಭಿಸಿತು. ಹಟಮಾರಿ ಮಗುವಿಗೆ ಸರಿಯಾಗಿ ಪಾಠ ಕಲಿಸುತ್ತೇನೆಂದು ತಾಯಿ ಕದ ತೆಗೆಯದೆ ರೊಟ್ಟಿ ಸುಡುತ್ತಾ ಹೋದಳು. ಕಡೆಗೆ ಕದ ತೆರೆದ ತಾಯಿ ಕೂಗಿದರೆ ಕಾಡಿನಿಂದ ಯಾರೂ ಓಕೊಳ್ಳಲೇ ಇಲ್ಲ. ಇಂಥ ಎದೆ ನಡುಗಿಸುವ ಕತೆಯನ್ನು ಅಮ್ಮ ನನಗೆ ಯಾಕೆ ಹೇಳಿದ್ದರೋ ಗೊತ್ತಿಲ್ಲ.

ಪ್ರತಿಯೊಂದು ಕನ್ನಡ ಮಗುವೂ ಪ್ರಾಥಮಿಕ ಶಾಲೆಯಲ್ಲೇ ಕಲಿಯುವ ಗೋವಿನ ಹಾಡಿನ ಕತೆಯನ್ನು ನಾನು ಆಗಲೇ ಕೇಳಿದ್ದೆ. ‘ಕರ್ನಾಟಕ’ ಎಂಬ ಪದ ಮೊದಲ ಸಲ ನನ್ನ ಕಿವಿಗೆ ಬಿದ್ದದ್ದು ಈ ಗೋವಿನ ಹಾಡಿನ ಮೂಲಕವೇ. ಸಂಸ್ಕೃತದ ಕತೆಯನ್ನು ಕನ್ನಡದಲ್ಲಿ ಹೇಳಿರುವ ಜಾನಪದ ಕವಿಯ ಈ ‘ಗೋವಿನಹಾಡು’ ನಾನು ಓದಿರುವ ಕವಿತೆಗಳಲ್ಲೆಲ್ಲ ಅತ್ಯಂತ ಸರಳವಾದ ಭಾಷೆಯುಳ್ಳ ಕವಿತೆಯೆಂದು ನನ್ನ ನಂಬಿಕೆ. ತನ್ನ ಅತ್ಯಂತ ಸೃಜನಶೀಲ ಕ್ಷಣಗಳಲ್ಲಿ ವರ್ಡ್ಸ್‌‌ವರ್ಥ್‌‌ನಂಥವನು ಮಾತ್ರ ಇಷ್ಟು ಮುಗ್ಧವಾದ ಹಾಗೂ ಆಳವಾದ ಕವಿತೆಯನ್ನು ಬರೆಯಬಲ್ಲ. ಧರಣಿಮಂಡಲ ಮಧ್ಯದಲ್ಲಿರುವ ಕರ್ನಾಟಕ ದೇಶಕ್ಕೆ, ಅಲ್ಲಿಂದ ಕಾಳಿಂಗನೆಂಬ ಗೊಲ್ಲನ ಲೋಕಕ್ಕೆ ಕವಿತೆ ಸಲೀಸಾಗಿ ಜಿಗಿಯುತ್ತದೆ. ಕನ್ನಡಿಗರಿಗೆಲ್ಲ ಚರಿಪರಿಚಿತವಾದ ಪುಣ್ಯಕೋಟಿಯ ಕತೆಯನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಸತ್ಯವಾಕ್ಯತೆ ತಪ್ಪಿ ನಡೆಯದೆ ಮರಳಿಬಂದ ಪುಣ್ಯಕೋಟಿಯನ್ನು ಕಂಡು ಅರ್ಬುತನೆಂಬ ಹುಲಿ ಕರಗಿ ಹೋಗುತ್ತದೆ. ಆದರೆ ಮಾಂಸ ತಿನ್ನುವುದು ಹುಲಿಯ ಧರ್ಮ. ಹೃದಯ ಪರಿವರ್ತನೆಯಿಂದ ಅದು ಸಸ್ಯಾಹಾರಿಯಾಗಲಾರದು. ಹೀಗಾಗಿ ಸಾವೊಂದೇ ಅದರ ಕಣ್ಣೆದುರಿಗಿರುವ ದಾರಿ. ಮೂಲ ಸಂಸ್ಕೃತ ಕತೆಯಲ್ಲಿ ಹುಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತದೆ. ಆದರೆ ಕನ್ನಡ ಕವಿ ಇದನ್ನು ಭಿನ್ನವಾಗಿ, ಪರಿಣಾಮಕಾರಿಯಾಗಿ ತೋರಿಸುತ್ತಾನೆ. ಹೃದಯ ಪರಿವರ್ತನೆಯಾದ  ಹುಲಿಗೆ ಇರುವ ಮಾರ್ಗ ಸಾವೊಂದೇ. ಆದ್ದರಿಂದಲೇ ಅದು ‘ತನ್ನ ಪ್ರಾಣವ ಬಿಟ್ಟಿತು.’

ಯಾರೂ ನಂಬಲಾಗದ ಈ ಕತೆಯನ್ನು ಎಂಥ ನಂಬಿಕೆಯಲ್ಲಿ ಕವಿ ಹೇಳುತ್ತಾನೆಂದರೆ, ಬಿಟ್ಟಬಾಯಿ ಬಿಟ್ಟಂತೆ ಆಲಿಸುವ ಕೇಳುಗ ತನಗರಿವಿಲ್ಲದೆಯೇ ಇದನ್ನು ನಂಬಿಬಿಟ್ಟಿರುತ್ತಾನೆ. ಅಜ್ಞಾತ ಕವಿಯ ಈ ಸರಳ ಸಾಲುಗಳು ಅಸಾಧ್ಯವಾದದ್ದೊಂದನ್ನು ಸಾಧ್ಯವಾಗಿಸಿಬಿಡುತ್ತವೆ; ನಾವು ನಂಬಿಕೆಯ ಸ್ಥಿತಿಗೆ ಜಾರಿಬಿಡುತ್ತೇವೆ. ಈ ಪದ್ಯವನ್ನು ಓದಿ ಹೇಳುವಾಗ ಅಪ್ಪನ ಕಣ್ಣು ತುಂಬಿಬಂದಿರುತ್ತಿದ್ದದ್ದು ನನಗೆ ಚೆನ್ನಾಗಿ ನೆನಪಿದೆ. ಅಪ್ಪ ಅತ್ತಿದ್ದನ್ನು ನಾನು ಕಂಡಿರುವುದು ಆ ಸಂದರ್ಭದಲ್ಲಿ ಮಾತ್ರ.

ಬಾಲ್ಯಕಾಲದ ಸರಳ ಹಾಗೂ ಎದೆತಟ್ಟುವ ಅನುಭವಗಳೂ ನಾನು ಬೆಳೆದಂತೆಲ್ಲ ಹೊಸ ಅರ್ಥಗಳನ್ನು ಹೊಳೆಯಿಸುತ್ತಾ ಬಂದಿವೆ; ಜಗತ್ತು ಬದಲಾಗುವುದು ವ್ಯವಸ್ಥೆಯ ಪರಿವರ್ತನೆಯಿಂದ ಅಥವಾ ಜನರ ಹೃದಯ ಪರಿವರ್ತನೆಯಿಂದ. ಮಾರ್ಕ್ಸ್‌ ಅಥವಾ ಮನುವಿನಂಥವರು ವ್ಯವಸ್ಥೆಯನ್ನು ಕಟ್ಟುವ, ಬದಲಿಸುವ ವರ್ಗಕ್ಕೆ ಸೇರಿದವರು. ಗಾಂಧಿ, ಟಾಲ್‌ಸ್ಟಾಯ್‌ ಹಾಗೂ ಗೋವಿನ ಹಾಡಿನ ಕವಿಯಂಥವರು ಮೂಲತಃ ಹೃದಯ ಪರಿವರ್ತಕರು. ಸ್ವರ್ಗದ ಬಾಗಿಲು ತೆರೆಸಬೇಕೆನ್ನುವ ಮನುಷ್ಯನಿಗೆ ಅತಿಗೆ ತಲುಪುವ ಧೈರ್ಯವಿರಬೇಕು ಎಂದಿದ್ದ ಬ್ಲೇಕ್‌. ನಂಬಿಕೆಯ ದೃಷ್ಟಿಯಿಂದ ಗೋವಿನ ಹಾಡಿನ ಕವಿಗಿಂತ ಇನ್ನಾವ ಅತಿಯನ್ನು ತಾನೆ ನೀವು ತಲುಪಲು ಸಾಧ್ಯ?

* * *

ತನ್ನ ಅವಳಿಗಳನ್ನೆತ್ತಿಕೊಂಡ ಅಬ್ಬಕ್ಕ ನಮ್ಮ ಹಿತ್ತಲಿಗೆ ಬರುತ್ತಿದ್ದಳು. ದೂರದ ಯಾವುದೋ ಊರಿಂದ ಬಂದ ಆ ತುಳುವರ ಹೆಂಗಸು ತಮ್ಮೂರಲ್ಲಿ ನೂರಾರು ದೋಣಿಗಳೂ ಲೆಕ್ಕವಿಲ್ಲದಷ್ಟು ತೆಂಗಿನ ಮರಗಳೂ ಇವೆಯೆಂದು ಹೇಳುತ್ತಿದ್ದಳು. ನನ್ನ ಪಾಲಿಗಂತೂ ಅವಳೊಂದು ವಿಸ್ಮಯ. ಕೆಲವು ಸಲ ರಾತ್ರಿಯ ಹೊತ್ತು, ಕೈಯಲ್ಲಿ ಅಡಿಕೆ ಹೂವಿನ ಗೊಂಚಲು ಹಿಡಿದ ಅವಳ ಇಡೀ ಮೈ ಲಯಬದ್ಧವಾಗಿ ತೂಗುತ್ತಿರುತ್ತಿತ್ತು. ಹಣೆಯ ತುಂಬ ಕುಂಕುಮ ಬಳಿದುಕೊಂಡ ಅವಳ ಕಣ್ಣುಗಳು ವಿಚಿತ್ರವಾಗಿ ಹೊಳೆಯುತ್ತಿರುತ್ತಿದ್ದವು. ಆಗವಳು ಮೈದುಂಬಿದ ದೇವತೆ. ತನ್ನ ಭಕ್ತರ ಬೆನ್ನು ಹತ್ತಿದ ಭೂತ ಜಕ್ಕಣಿಗಳನ್ನು ಓಡಿಸಬಲ್ಲ, ಅವರ ಖಾಯಿಲೆಗಳನ್ನು ವಾಸಿಮಾಡಬಲ್ಲ ದೇವತೆ. ಆದರೆ, ಅಮ್ಮನನ್ನು ಕಾಣಲೆಂದು ಅವಳು ನಮ್ಮ ಹಿತ್ತಿಲಲ್ಲಿ ಬಂದು ನಿಂತಾಗ ಮಾತ್ರ ನಿತ್ಯದ ಗೋಳುಗಳನ್ನು ತೋಡಿಕೊಳ್ಳುವ ದೈನೇಸಿ ಹೆಂಗಸು.

ಹಿತ್ತಿಲಿನ ಜಗತ್ತೇ ಬೇರೆ. ನನ್ನ ಅಜ್ಜ ಅಥವಾ ಅಪ್ಪ ಪಾರುಪತ್ಯೆ ನಡೆಸುತ್ತಿರುತ್ತಿದ್ದ ಅಂಗಳದ ಜಗತ್ತೇ ಬೇರೆ. ಆದರೆ ಅವರಿಬ್ಬರೂ ಒಟ್ಟಿಗೇ ಕೂತು ಪಾರುಪತ್ಯೆ ನಡೆಸಿದವರಲ್ಲ. ಮನೆಯ ಮುಂದಿನ ಅಂಗಳದಲ್ಲಿ ಥರಹೇವಾಗಿ ಜನರು ನೆರೆಯುತ್ತಿದ್ದರು. ಕೆಲವರ ತಲೆಯ ಮೇಲೊಂದು ಹ್ಯಾಟು ಅಥವಾ ಪೇಟವಿರುತ್ತಿತ್ತು. ಅಪರೂಪಕ್ಕೊಮ್ಮೆ ಟರ್ಕಿ ಅಥವಾ ಜರಿ ಟೋಪಿಗಳೂ ಕಾಣಿಸಿಕೊಳ್ಳುತ್ತಿದ್ದವು. ದೂರದ ಊರುಗಳಿಂದ ಬರುತ್ತಿದ್ದ ಅವರಲ್ಲಿ ಕೆಲವರು ಕಂದಾಯದ ಲೆಕ್ಕಪತ್ರ ನೋಡುವ ಸರಕಾರಿ ಜನ, ಇನ್ನು ಕೆಲವರು ಸುಮ್ಮನೆ ಭೇಟಿಗೆಂದು ಬಂದ ಊರಿನ ಹಿರಿಯರು, ಮತ್ತೆ ಕೆಲವರು ಅಡಿಕೆಯನ್ನೋ, ಭತ್ತವನ್ನೋ ಕೊಳ್ಳಲು ಪಟ್ಟಣದಿಂದ ಬಂದ ಬ್ಯಾರಿಗಳು. ಈ ಬ್ಯಾರಿಗಳೆಂದರೆ ನನಗೆ ಏನೋ ಆಕರ್ಷಣೆ. ಅವರು ನನಗೆಂದು ಬತ್ತಾಸು, ಖರ್ಜೂರ, ದ್ರಾಕ್ಷಿಗಳನ್ನು ತರುತ್ತಿದ್ದರು. ಅವರ ಕಾಲದಲ್ಲಿ ಬಣ್ಣದ ಚಪ್ಪಲಿ; ಆ ಚರ್ಮದ ಚಪ್ಪಲಿಗಳ ತುದಿಗೊಂದು ಪುಟ್ಟು ಕುಚ್ಚು. ದೀಪಾವಳಿ ಕಳೆದ ಮೇಲೆ ನನಗೂ ಅಂಥದೊಂದು ಜೊತೆ ಚಪ್ಪಲಿ ತಂದುಕೊಡುತ್ತೇನೆಂದು ಬ್ಯಾರಿಯೊಬ್ಬ ಮಾತುಕೊಟ್ಟಿದ್ದ. ಘಟ್ಟದ ಕೆಳಗಿನ, ಕಣಿವೆಯಾಚೆಗಿನ ಊರುಗಳ ವಿಚಾರವನ್ನೋ, ದೂರದ ಪಟ್ಟಣಗಳ ಸಮಾಚಾರವನ್ನೋ ಬ್ಯಾರಿಗಳು ಮಾತಾಡುತ್ತಿದ್ದರು. ಘಟ್ಟದಾಚೆಗೊಂದು ಅರಮನೆ, ಅರಮನೆಯಾಚೆಗೆ ರಾಘವೇಂದ್ರಸ್ವಾಮಿಗಳ ಬೃಂದಾವನ, ಅದರಿಂದ ಮತ್ತೂ ಆಚೆಗೆ ದಿಲ್ಲಿ. ಅಲ್ಲಿ ಬಿಳಿಯ ದೊರೆಗಳ ದರ್ಬಾರು ಎಂಬುದು ನನ್ನ ತಿಳುವಳಿಕೆ. ಅಲ್ಲಿಂದ ಇನ್ನಷ್ಟು ದೂರ ಹೋದರೆ ಹಿಮವಂತದಲ್ಲಿ ಶಿವನ ವಾಸ; ಆ ಶಿವನ ಜಟೆಯಿಂದ ಗಂಗೆ ಹುಟ್ಟಿ ಹರಿಯುತ್ತಾಳೆ ಎಂಬುದೂ ನನಗೆ ಗೊತ್ತಿತ್ತು. ನನ್ನ ತಾತ ಮುತ್ತಾತರಲ್ಲೊಬ್ಬ ಕಾಶಿಗೆ ಹೋಗಿ ಅಲ್ಲಿಯ ದೊಡ್ಡ ಪಂಡಿತರೊಬ್ಬರನ್ನು ವಾದದಲ್ಲಿ ಸೋಲಿಸಿ ಆನೆಯನ್ನೇ ಗೆದ್ದಿದ್ದ. ಜಪವನ್ನಾರಂಭಿಸುವ ಮುನ್ನ ಕಾಲದೇಶಗಳಲ್ಲಿ ನನ್ನನ್ನು ನಾನು ಕೇಂದ್ರೀಕರಿಸಿಕೊಳ್ಳುತ್ತಿದ್ದ ಕರ್ನಾಟಕವೇ ಭರತ ವರ್ಷದ ಕೇಂದ್ರವೆಂಬುದು ನನ್ನ ಯಾವತ್ತಿನ ನಂಬಿಕೆ. ನಾವೆಲ್ಲಿದ್ದರೆ ಅದೇ ಭಾರತ. ಆ ಭಾರತಕ್ಕೆ ಹಲವು ಕೇಂದ್ರಗಳು.

ನನ್ನ ಬೌದ್ಧಿಕ ಹಾಗೂ ಆಂತರಿಕ ಚೇತನದ ಬೆಳವಣಿಗೆಗೆ ಪೂರಕವಾದ ಅನೇಕ ಅಂಶಗಳು ನಾನು ಸ್ಕೂಲಿಗೆ ಹೋಗುತ್ತಿದ್ದ ತೀರ್ಥಹಳ್ಳಿಯಲ್ಲೇ ದೊರಕಿದವೆಂದು ಕಾಣುತ್ತದೆ. ಹೆಡ್‌ಮಾಸ್ತರಂತೆಯೇ ಗುಡುಗುತ್ತಿದ್ದ ಕ್ರಿಶ್ಚಿಯನ್‌ ಜವಾನ ಆರೇಕ್ಯಂನನ್ನು (ಅವನ ನಿಜವಾದ ಹೆಸರು ಅರೇಕೊಪ್ಪ) ಕಂಡರೆ ನಮಗೆ ಹೆಡ್‌ಮಾಸ್ತರನ್ನು ಕಂಡಷ್ಟೇ ಭಯ. ನಾಗರಹಾವನ್ನು ಅನಾಮತ್ತಾಗಿ ಮೇಲೆತ್ತಿ ಹಿಡಿದುಕೊಂಡು ಬಿಡುತ್ತಿದ್ದ ಆರೇಕ್ಯಂ ಆ ಹಾವು ತನ್ನ ಮುಷ್ಠಿಯಲ್ಲಿ ಸಿಕ್ಕು ಒದ್ದಾಡುವುದನ್ನು ಕಂಡು ನಗುತ್ತಿರುತ್ತಿದ್ದ. ಅದೊಂದು ಜುಜುಬೀ ಹಗ್ಗವೆಂಬಂತೆ ಗರಗರ ತಿರುಗಿಸುತ್ತಾ ಆ ಭಯಾನಕ ಜಂತುವನ್ನೂ ಶಕ್ತಿಹೀನವಾಗಿಸಿಬಿಡುತ್ತಿದ್ದ. ಬಹಳ ಹಿಂದೆ ಆ ಸ್ಕೂಲಿನಲ್ಲೇ ಓದಿ ಹೋಗಿದ್ದ ತುಂಟ ಹುಡುಗನೊಬ್ಬನನ್ನು ಕುರಿತು ಆರೇಕ್ಯಂ ಸದಾ ನಮಗೆಲ್ಲ ಹೇಳುತ್ತಿರುತ್ತಿದ್ದ. ಏನು ಮಾಡಿದರೂ ಆ ಹುಡುಗನ್ನ ಬಗ್ಗಿಸಲಾಗುತ್ತಿರಲಿಲ್ಲವಂತೆ. ಕಾಡಲ್ಲಿ ಜೇನು ಹುಡುಕಿಕೊಂಡು ಹೋಗುತ್ತಿದ್ದ ಆ ಹುಡುಗ ಮುಂದೆ ದೊಡ್ಡ ಕವಿಯಾಗಿಬಿಟ್ಟನಂತೆ. ಅವನು ಹೇಳುತ್ತಿದ್ದುದು ನಮ್ಮ ಕುವೆಂಪುವನ್ನು ಕುರಿತು; ಎಲ್ಲ ಪ್ರಭಾವಗಳಿಗೂ ಮುಕ್ತವಾಗಿ ತೆರೆದುಕೊಂಡಿದ್ದ ನನನ್ನ ಬದುಕಿನ ಆ ಘಟ್ಟದಲ್ಲಿ ನನ್ನನ್ನು ಬಹುವಾಗಿ ಆಕ್ರಮಿಸಿಕೊಂಡಿದ್ದ ಮಹಾಕವಿಯನ್ನು ಕುರಿತು. ಮನೆಗೆ ಹೋಗುವ ದಾರಿಯಲ್ಲಿ ನಾವು ದಾಟಬೇಕಾಗಿದ್ದ ತುಂಗಾನದಿಯ ಬಂಡೆಗಳು ಕುವೆಂಪುವಿನ ಕಾನೂರು ಹೆಗ್ಗಡಿತಿಯ ಮೂಲಕ ನಿತ್ಯ ನೆನಪಿನಲ್ಲುಳಿಯುವಂತಾದವು. ವಾಸ್ತವದಲ್ಲಿ ನಾನು ಕಂಡದ್ದನ್ನೇ ಕಲ್ಪನೆಯಲ್ಲಿ ಮತ್ತೊಮ್ಮೆ, ಇನ್ನಷ್ಟು ಉತ್ಕಟವಾಗಿ, ಅನುಭವಿಸಿದೆ. ವಾಸ್ತವ ಅನುಭವವೊಂದಕ್ಕೆ ವಾಸ್ತವಾತೀತತೆಯ ಪ್ರಭಾವಳಿ ದಕ್ಕಿದ್ದು ಹೀಗೆ.

ನನ್ನ ಬಾಲ್ಯ ಕಾಲದಲ್ಲಿ ಸಾಮಾಜಿಕ ಅನ್ಯಾಯ ಕುರಿತು ಪ್ರಜ್ಞೆ ಮೂಡಿದ್ದೂ, ನನ್ನ ಎಳೆಯ ಮನಸ್ಸಿನಲ್ಲಿ ಅಪಸ್ವರವೊಂದು ಮೂಡಲಾರಂಭಿಸಿದ್ದೂ ತೀರ್ಥಹಳ್ಳಿಯಲ್ಲೇ. ಕಾರಂತರ ಚೋಮನದುಡಿ ಓದಿದ ಮೇಲೆ, ನಮ್ಮ ಕೊಟ್ಟಿಗೆ ಬಳಿಯಲು ಬರುತ್ತಿದ್ದ ಹೊಲೆಯ ನನ್ನ ಪಾಲಿಗೆ ಕೇವಲ ಹೊಲೆಯನಾಗಿ ಉಳಿಯಲಿಲ್ಲ. ಅವನ ಅಂತರಂಗದಲ್ಲೇನು ಮಾರಿ ಹರಡಿದಾಗ ಹಲವು ಅಸ್ಪೃಶ್ಯರು ತಾವು ಅಸ್ಪೃಶ್ಯರಾಗಿದ್ದರಿಂದಲೇ ಪ್ಲೇಗಿಗೆ ತುತ್ತಾದರು. ಕಾರಣ, ಯಾವ ಡಾಕ್ಟರೂ ಅವರಿಗೆ ಚುಚ್ಚುಮದ್ದು ನೀಡಲು ಸಿದ್ಧರಿರಲಿಲ್ಲ. ನಂತರ ಉಳಿದವರಿಗೂ ಪ್ಲೇಗು ಹಬ್ಬಿತು.

ಆ ಸರಿಸುಮಾರಿಲ್ಲೇ ನಮ್ಮ ತಂದೆ ಗಾಂಧೀಜಿಯ ‘ಹರಿಜನ್‌’ ಪತ್ರಿಕೆಯ ಇಂಗ್ಲಿಷ್‌ಆವೃತ್ತಿಯನ್ನು ತರಿಸುತ್ತಿದ್ದರು. ಅವರು ಅವನ್ನು ಉಳಿದವರಿಗೂ ಅನುವಾದಿಸಿ ಹೇಳುತ್ತಿದ್ದರು. ಎರಡು ಜಗತ್ತುಗಳ ನಡುವೆ, ಲೌಕಿಕ – ಪಾರಮಾರ್ಥಗಳ ನಡುವೆ ಬದುಕುತ್ತಿದ್ದ ಸಂಕೇತವಾಗಿಯೇನೋ ಎಂಬಂತೆ ಮುಂದಲೆಯಲ್ಲಿ ಪಶ್ಚಿಮದ ಕ್ರಾಪನ್ನೂ, ಪರಂಪರೆ ಕುರಿತ ಭಕ್ತಿಯ ಸಂಕೇತವೆಂಬಂತೆ ಹಿಂದಲೆಯಲ್ಲಿ ಜುಟ್ಟನ್ನೂ ಬಿಟ್ಟುಕೊಂಡಿರುತ್ತಿದ್ದ ಅಪ್ಪನಿಂದ ನಾನು ವಿಚಿತ್ರವಾದ ಪಾಠವೊಂದನ್ನು ಕಲಿತೆ, ಅಪ್ಪ ಆಗ ‘ಪುರಷಸೂಕ್ತ’ಕ್ಕಿಂತ ಹೆಚ್ಚು ಶ್ರದ್ಧೆಯಿಂದ ಎಡ್ಮಂಡ್ ಬರ್ಕಿನ ‘ದಿ ಇಂಪೀಚ್‌ಮೆಂಟ್ ಆಫ್‌ ವಾರನ್‌ ಹೇಸ್ಟಿಂಗ್ಸ್‌’ ಭಾಷಣಗಳನ್ನು ನಾನು ಓದುವಂತೆ ಮಾಡಿದ್ದೇನೂ ಆಶ್ಚರ್ಯವಲ್ಲ. ಬರ್ಕಿನ ದೊಡ್ಡ ದೊಡ್ಡ ವಾಕ್ಯಗಳನ್ನು ನಾನು ಮಂತ್ರಗಳಂತೆ ಪಠಿಸುತ್ತಿದ್ದುದು ಆಗ ವಿಚಿತ್ರ ದೃಶ್ಯವಾಗಿದ್ದಿರಬೇಕು.

ನನ್ನ ಬೆಳವಣಿಗೆಗೆ ಕರ್ನಾಟಕ ನೀಡಿರಬಹುದಾದ ಕೊಡುಗೆಗಳು ಹಾಗೂ ಪ್ರೇರಣೆಗಳೆಲ್ಲ ಈ ಜಗತ್ತಿಗೆ ಒಂದೊಂದಾಗಿ ಹರಿದು ಬರತೊಡಗಿದವು. ವಯಸ್ಕ ಶಿಕ್ಷಣ ಸಂಸ್ಥೆಯ ಪ್ರಕಟಣೆಯಾದ ಪುಸ್ತಕ ಪ್ರಪಂಚದ ಮೂಲಕ ನಾನು ಪುಸ್ತಕಗಳ ಲೋಕ ಪ್ರವೇಶಿಸಿದೆ. ಜಗತ್ತಿನ ಪ್ರಖ್ಯಾತ ಪುಸ್ತಕಗಳನ್ನು ಪರಿಚಯಿಸುತ್ತಿದ್ದ ಪತ್ರಿಕೆ ಅದು. ಜೊತೆಗೆ ಕಾರಂತರ ಬಾಲಪ್ರಪಂಚವೂ ಇತ್ತು. ಆ ಕಾಲಕ್ಕೆ ವಿದ್ಯಾರ್ಥಿ ನಾಯಕರಾಗಿದ್ದ ಸೋಷಲಿಸ್ಟ್ ಶಾಂತವೇರಿ ಗೋಪಾಲಗೌಡರ ಪ್ರಭಾವವೂ ನನ್ನ ಮೇಲಾಯಿತು. ಆಮೇಲೆ ಗೋಪಾಲಗೌಡರು ಕರ್ನಾಟಕದ ಧೀಮಂತ ರಾಜಕೀಯ ನಾಯಕರಾಗಿ ಬೆಳೆದದ್ದು ಈಗ ಚರಿತ್ರೆಯ ಒಂದು ಭಾಗ.

ಆಗ ನನ್ನ ಸುತ್ತಮುತ್ತ ಇದ್ದವೆಲ್ಲ ಪವಿತ್ರವಾದಂಥವುಗಳೇ, ಮರ, ಮರದಡಿಯ ಕಲ್ಲು, ಎಲ್ಲವೂ ಪವಿತ್ರವೇ, ದೂರ್ವಾಸರ ಕೋಪಶಮನ ಮಾಡಲೆಂದು ಭೀಮಸೇನ ಮೂರು ಕಾಲುವೆಗಳನ್ನಾಗಿಸಿದ ನದಿಯೂ ಪವಿತ್ರವೇ. ದ್ರೌಪದಿಯ ಸ್ನಾನಕ್ಕೆಂದು ನದಿಯಲ್ಲೊಂದು ಕಡೆ ಅವನು ಸೃಷ್ಟಿಸಿದ್ದ ಕೊಳವೂ ಅಷ್ಟೇ ಪವಿತ್ರ. ನದಿಯ ನಡುವೆಲ್ಲೋ ಮೆಳೆಗಳಿದ್ದ ನಡುಗಡ್ಡೆಯೂ ಪವಿತ್ರವೇ. ದೂರ್ವಾಸ ಪ್ರಾಯಶ್ಚಿತ್ತ ಮಾಡಿಕೊಂಡ ಆ ಜಾಗವೊಂದು ಪವಿತ್ರ ಸ್ಥಳವೆಂಬುದು ಕೇವಲ ಕತೆಯಾಗಿರಲಿಲ್ಲ; ಹುಣ್ಣಿಮೆಯಾದ ಹನ್ನೆರಡನೆಯ ದಿನ ಬೆಳಗಿನ ಜಾವ ಹಲವರಿಗೆ ದೂರ್ವಾಸರ ಶಂಖದ ದನಿಯೂ ಕೇಳೀಸುತ್ತಿತ್ತು. ಆದರೆ, ಇವೆಲ್ಲದರ ಜೊತೆಗೇ ಒಳಗೊಳಗೇ ಬೆಳೆಯತೊಡಗಿದ್ದ ಸಂದೇಹವೂ ನನ್ನನ್ನು ಆಕ್ರಮಿಸಿಕೊಳ್ಳತೊಡಗಿತ್ತು. ಹೀಗಾಗಿ, ನನ್ನನ್ನು ನಾನು ಅರಿಯಬೇಕಾದರೆ, ನಾನು ಬದುಕಿದ್ದ ಜಗತ್ತನ್ನು ನಿರ್ಪುರಾಣೀಕರಿಸಿಕೊಳ್ಳಲೇಬೇಕಾಗಿತ್ತು.

ಪುರಾಣವೆನ್ನುವುದು ಸರ್ವವ್ಯಾಪಿಯಾಗಿತ್ತು. ವಾಸ್ತವದೊಂದಿಗೆ ನಿರಂತರ ನಂಟನ್ನು ಉಳಿಸಿಕೊಳ್ಳುತ್ತಲೇ, ಅದರಿಂದ ಬಿಡಿಕೊಳ್ಳುತ್ತಲೂ ಹೊಸ ರೂಪಗಳನ್ನು ಸೃಷ್ಟಿಸುತ್ತಲೂ ಇತ್ತು.

ಒಮ್ಮೊಮ್ಮೆ ರಾತ್ರಿಯ ಹೊತ್ತು ಚಂಡೆಯ ಲಯಬದ್ಧ ಬಡಿತ ಎಷ್ಟು ಕಾಡುವಂತಿರುತ್ತಿತ್ತೆಂದರೆ, ದೊಂದಿ ಹಿಡಿದು ಕಪ್ಪುಕಾಡಿನ ಸ್ತಬ್ಧತೆಯನ್ನು ಭಂಗಗೊಳಿಸುತ್ತಾ ನಾವು ಆ ಕತ್ತಲಲ್ಲೂ ನಿರಾಯಾಸವಾಗಿ ಯಕ್ಷಗಾನ ನಡೆಯುವಲ್ಲಿಗೆ ಹೋಗುತ್ತಿದ್ದೆವು. ಪ್ರತಿ ಸುಗ್ಗಿಯ ನಂತರ ಯಕ್ಷಗಾನ ಕಲಾವಿದರು ಕರಾವಳಿಯ ಕಡೆಯಿಂದ ಬರುತ್ತಿದ್ದರು. ರಾಮಾಯಣ, ಮಹಾಭಾರತದ ಕತೆಗಳಿಗೆ ಜೀವಕೊಟ್ಟು ಆ ರಾತ್ರಿಗಳನ್ನು ಸಮೃದ್ಧಗೊಳಿಸುತ್ತಿದ್ದರು. ಚಂಡೆಯ ಸದ್ದು ಕಣಿವೆಗಳನ್ನು ತುಂಬುತ್ತಿತ್ತು. ಬೆಟ್ಟಗಳಿಂದ ಮಾರ್ದನಿಸುತ್ತಿತ್ತು. ನಾವು ನೆಲದ ಮೇಲೆ ವಿರಾಮವಾಗಿ ಕೂತು ಕಡಲೆಕಾಯಿ ಮೆಲ್ಲುತ್ತಾ ರಂಗದ ಮೇಲೆ ನಡೆಯುವ ಆಟ ನೋಡುತ್ತಾ, ಆ ನಾಟಕೀಯ ಸಂಭಾಷಣೆಗಳ ರುಚಿಯನ್ನು ಅನುಭವಿಸುತ್ತಿದ್ದೆವು. ಸುಸ್ತಾದಾಗ ಹಾಗೇ ನಿದ್ದೆ ಹೋಗುತ್ತಿದ್ದೆವು. ಅ ಅರೆನಿದ್ದೆ, ಅರೆ ಎಚ್ಚರದಲ್ಲೂ ಭಾಗವತರ ನಿರೂಪಣೆಯಲ್ಲಿ ಕತೆ ಬಿಚ್ಚಿಕೊಳ್ಳುವುದೂ, ಚಂಡೆಯ ಸದ್ದಿನೊಡನೆ ಕುಣಿವ ಹೆಜ್ಜೆ ಬೆರೆಯುವುದೂ, ರಾತ್ರಿಯ ನೀರವದಲ್ಲಿ ಸಂಭಾಷಣೆಗಳು ಮಾರ್ದನಿಸುವುದೂ ಕಿವಿಗೆ ಬೀಳುತ್ತಲೇ ಇರುತ್ತಿತ್ತು. ಇನ್ನೇನು ಬೆಳಗಾಯಿತು ಎನ್ನುವಷ್ಟರಲ್ಲಿ ನಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸುವಂತೆ ಎರಗುತ್ತಿದ್ದ ಭಯಂಕರ ಸದ್ದು ಹೊಸ ನಿರೀಕ್ಷೆ, ಕಾತುರಗಳನ್ನು ಹುಟ್ಟಿಸುತ್ತಿತ್ತು. ನಿದ್ದೆಗಣ್ಣಲ್ಲಿದ್ದ ಪ್ರೇಕ್ಷಕರ ನಡುವಿನಿಂದ ನಾಟಕದ ಅತ್ಯಂತ ವರ್ಣರಂಜಿತ ವೇಷವೊಂದು ಅಬ್ಬರಿಸುತ್ತಾ ಓಡೋಡಿ ಬರುತ್ತಿದೆ. ಕಾಡಿನ ಯಾವ ಮೂಲೆಯಿಂದ ಈ ವೇಶ ಅವತರಿಸಿತೊ?.

ಬರೀ ಪುರಾಣ ಕತೆಗಳನ್ನಷ್ಟೇ ಅಲ್ಲ, ಕೆಳಜಾತಿಯ ತುಳುವರ ತಂಡಗಳು ಆಡುತ್ತಿದ್ದ ‘ಕೋಲ’ವನ್ನೂ ನಾವು ನೋಡುತ್ತಿದ್ದೆವು. ತುಳುವರ ದೇಸೀ ದೇವತೆಗಳ ಕತೆಗಳನ್ನು ಹೇಳುವ ‘ಕೋಲ’ಗಳು ಧಾರ್ಮಿಕ ಆಚರಣೆಗಳಂತಿರುತ್ತಿದ್ದವು. ಈ ಆಟ ನಡೆಯುವಾಗ ನಟನನ್ನು ಪಂಜರ್ಲಿಯೋ, ಕಲ್ಕಡ್ಕವೋ ಮೈದುಂಬಿರುತ್ತಿದ್ದವು. ಇದನ್ನು ಕಂಡ ನನಗೆ ನಡುಕ ಹುಟ್ಟುತ್ತಿದ್ದರೂ ವಿಚಿತ್ರ ಸೆಳೆತವೂ ಇತ್ತು. ಮಂತ್ರೋಚ್ಚಾರಣೆಯ ಏಕತಾನದ ಲಯದಲ್ಲಿ ತುಳು ಪಾಡ್ಡನ ಆರಂಭವಾಗುತ್ತಿದ್ದಂತೆ ಕಣ್ಣು ಕುಕ್ಕುವ ವಿಚಿತ್ರ ಬಣ್ಣಗಳನ್ನು ಹಚ್ಚಿಕೊಂಡ, ಅಷ್ಟೇ ರಂಗುರಂಗಾದ ವೇಷ ತೊಟ್ಟ ನಟ ಕುಣಿಯಲಾರಂಭಿಸುತ್ತಿದ್ದ. ಮನುಷ್ಯ ಮಾತ್ರ ಕತೆಯಂತಿದ್ದರೂ ಪ್ರೇಕ್ಷಕರಲ್ಲಿ ಭಕ್ತಿಯನ್ನುಕ್ಕಿಸಬಲ್ಲ ದೇವತೆಯ ಪುರಾಣ ಕತೆ ಬಿಚ್ಚಿಕೊಳ್ಳುತ್ತಿತ್ತು. ಮೈದುಂಬಿದ ಉತ್ಕಟ ಕ್ಷಣಗಳಲ್ಲಿ ಆ ನಟ ಕೈಲಿದ್ದ ಉರಿವ ದೊಂದಿಯನ್ನೇ ಬಾಯಿಗಿಟ್ಟುಕೊಂಡು ಬಿಡುತ್ತಿದ್ದ ಅಥವಾ ತನ್ನ ಮೈಯನ್ನು ದೊಂದಿಯಿಂದ ತಿವಿದುಕೊಳ್ಳುತ್ತಿದ್ದ. ಆ ಕಪ್ಪು ದೇವತೆ ಅಲ್ಲಿ ನೆರೆದವರಲ್ಲೊಬ್ಬನನ್ನು ಆರಿಸಿಕೊಂಡು ಅವನೆದುರು ಬಂದು ನಿಲ್ಲುತ್ತಿತ್ತು. ಮಾಂತ್ರಿಕವಾಗಿ ನರ್ತಿಸುತ್ತಾ ಆ ವ್ಯಕ್ತಿಯನ್ನು ಸಮ್ಮೋಹನಗೊಳಿಸುವಂತೆ ದಿಟ್ಟಿಸಲಾರಂಭಿಸುತ್ತಿತ್ತು. ಕ್ರಮೇಣ ಆ ವ್ಯಕ್ತಿಯೂ ಮೈದುಂಬುತ್ತಿದ್ದ, ನಟನೊಬ್ಬನನ್ನು ಕಾಲಜ್ಞಾನಿಯನ್ನಾಗಿ, ಪ್ರವಾದಿಯನ್ನಾಗಿ ಮಾಡಿಬಿಡುತ್ತಿದ್ದ ಧಾರ್ಮಿಕ ಆಚರಣೆ ಅದು. ಒಂದು ಸಲವಂತೂ ಹಾಗೆ ಮೈದುಂಬಿದ ನಟನೊಬ್ಬ ನನ್ನನ್ನೇ ದುರಗುಟ್ಟಿ ನೋಡಲಾರಂಭಿಸಿದಾಗ ನಾನು ಹೆದರಿ ಅಲ್ಲಿಂದ ಓಡಿಬಿಟ್ಟಿದ್ದೆ.

ನಾನು ಬದುಕುತ್ತಿದ್ದ ಆ ಪವಿತ್ರ ಜಗತ್ತನ್ನು ನಿರ್ಪುರಾಣೀಕರಿಸಲು (demythification) ನನ್ನಗಿದ್ದ ಏಕೈಕ ಮಾರ್ಗ ಇದು: ಏನಾದರೂ ಅತ್ಯಂತ ನಾಟಕೀಯವಾದದ್ದನ್ನೋ ತೀರಾ ಅಸಹಜವಾದದ್ದನ್ನೋ ಮಾಡಿ, ಕಲ್ಲು ಎನ್ನುವುದು ಬರೀ ಕಲ್ಲು, ಮರ ಎಂದರೆ ಮರ ಎಂದು ನನ್ನನ್ನು ನಾನು ನಂಬಿಸಿಕೊಳ್ಳುವುದು. ಈ ಕಾರಣಕ್ಕಾಗಿ ಒಂದು ಪವಿತ್ರ ಮರದಡಿಯ ಕಲ್ಲನ್ನು ಆರಿಸಿಕೊಂಡೆ. ಅದು ಬಹಳ ಪ್ರಭಾವಶಾಲಿಯಾದ ಪಂಜುರ್ಲಿಯೆಂದು ಜನ ಹೇಳುತ್ತಿದ್ದರು. ಆ ಕಲ್ಲಿನ ಮೇಲೆ ಗುಟ್ಟಾಗಿ ಉಚ್ಚೆ ಹೊಯ್ದೆ. ಆಮೇಲೆ, ಏನು ಶಿಕ್ಷೆ ಕಾದಿದೆಯೋ ಎಂಬ ದಿಗಿಲಿನಲ್ಲೇ ಹಲವಾರು ದಿನಗಳನ್ನು ಕಳೆದೆ.

ಆ ನಂತರದ ದಿನಗಳಲ್ಲಿ ತುಂಗಾನದಿಯ ದಂಡೆಯಲ್ಲಿರುವ ಅಗ್ರಹಾರದಲ್ಲಿ (ಅಲ್ಲೊಂದು ಸುಪ್ರಸಿದ್ಧ ಮಠವೂ ಇತ್ತು ) ಭಾರತವನ್ನು ರೂಪಿಸಿರುವ ಬೆಸುಗೆಯ ಸ್ವರೂಪವನ್ನು ಅರಿಯತೊಡಗಿದೆ. ಉಪನಿಷತ್ತಿನ ಸಾಲೊಂದನ್ನು ಕುರಿತಂತೆ ದ್ವೈತ ಹಾಗೂ ಅದ್ವೈತ ಪಂಥಕ್ಕೆ ಸೇರಿದ ಪಂಡಿತರ ಸುದೀರ್ಘ ವಾದವನ್ನು ಕೇಳಿಸಿಕೊಳ್ಳುತ್ತಿದ್ದೆ. ಸುದೀರ್ಘ ಹಬ್ಬದೂಟದ ಸಮಯದಲ್ಲಿ ನಡೆಯುತ್ತಿದ್ದ ಸುದೀರ್ಘ ಚರ್ಚೆಗಳವು. ಸಂಜೆಯ ಹೊತ್ತಿಗೆ ಆರ್ಯ ಸಮಾಜದವರೊಬ್ಬರು ಆಶ್ರಮಕ್ಕೆ ಬರುವರು. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆಯೋ ಹೊರತು, ನಮ್ಮ ಕಣ್ಣಿಗೆ ಕಾಣುವಂತೆ ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ ಎಂದು ವಾದಿಸಿ ಅಗ್ರಹಾರದ ಪಂಡಿತರ ನಂಬಿಕೆಗಳನ್ನು ಬುಡಮೇಲು ಮಾಡುವರು. ಹಾಗೆ ನೋಡಿದರೆ ನಾನು ಗೆಲಿಲಿಯೋನ ಸಮಕಾಲೀನನೇ ಆಗಿದ್ದಿರಬೇಕು.

ಹೈಸ್ಕೂಲಿಗೆ ಹೋಗುವಾಗ ಮೈಲುಗಟ್ಟಲೆ ನಡೆಯಬೇಕಾಗುತ್ತಿತ್ತು. ನಮ್ಮ ಹೈಸ್ಕೂಲಿನ ವಿಜ್ಞಾನದ ಮೇಷ್ಟ್ರರು ‘ಭಗವದ್ಗೀತೆಯೆನ್ನುವುದು ಕೇವಲ ಕತೆ ಅಷ್ಟೆ, ಯಾರಾದರೂ ಯುದ್ಧಭೂಮಿಯಲ್ಲಿ ಹೀಗೆ ಬೋಧಿಸುತ್ತಾ ಕೂರುತ್ತಾರೆಯೇ?’ ಎಂದು ವಾದಿಸುತ್ತಿದ್ದರು. ನಾನು ಸ್ಕೂಲಿನಿಂದ ಅಗ್ರಹಾರಕ್ಕೆ ವಾಪಸ್‌ ಬರುವಾಗ, ತಮ್ಮ ಹೆಸರನ್ನು ‘ಸಿನ್ಹ’ ಎಂದು ಆಧುನೀಕರಿಸಿಕೊಂಡಿದ್ದ ಶ್ರೀನಿವಾಸ ಜೋಯಿಸಲು ಒಮ್ಮೆಮ್ಮೆ ಸಿಗುತ್ತಿದ್ದರು. ಡಾಕ್ಟರ್ ಶಾಪಿನ ಬೆಂಚಿನ ಮೇಲೆ ಕೂತ ಅವರು ನಮ್ಮಂಥ ಶಾಲೆಯ ಹುಡುಗರಿಗೆ ಜಿ.ಬಿ.ಷಾ., ಬರ್ಟ್ರಂಡ್‌ ರಸೆಲ್‌, ಇಂಗರ್ ಸಾಲ್‌ ಮುಂತಾದವರನ್ನೆಲ್ಲ ಕುರಿತು ಹೇಳುತ್ತಿದ್ದು. ಡೈನಮೋದಿಂದ ನಡೆಯುತ್ತಿದ್ದ ತಮ್ಮ ರೇಡಿಯೋದಲ್ಲಿ ಬಿ.ಬಿ.ಸಿ ಕೇಳಿ ಕೇಳಿ ಕಲಿತ ಒಂದು ತಪ್ಪಿಲ್ಲದ ಇಂಗ್ಲಿಷ್‌ಮಾತಾಡುತ್ತಿದ್ದರು. ಆ ಕಾಲಕ್ಕೆ ಅಂದೊಂದೇ ಊರಲ್ಲಿದ್ದ ರೇಡಿಯೋ. ನಮಗೆಲ್ಲ ಮೊದಲ ಬಾರಿಗೆ ನಮ್ಮ ರಾಷ್ಟ್ರ ನಾಯಕರು ಹಾಗೂ ಜಗತ್ತಿನ ದೊಡ್ಡ ಲೇಖಕರನ್ನು ಕುರಿತು ಹೇಳಿದವರು ಸಂಗೀತಗಾರ, ಸಂಸ್ಕೃತ ವಿದ್ವಾಂಸ ಎರಡೂ ಆಗಿದ್ದ ಯೋಗಾನರಸಿಂಹನ್‌ ಎಂಬ ನಮ್ಮ ಹೆಡ್‌ಮಾಸ್ತರು. ಗಾಂಧೀ ಹತ್ಯೆಯಾದ ಸುದ್ದಿ ಕೇಳಿ ಅವರು ಅತ್ತಿದ್ದು ನನಗೆ ನೆನಪಿದೆ. ನಮ್ಮಂಥ ಸಣ್ಣಪುಟ್ಟ ಹೈಸ್ಕೂಲು ಹುಡುಗರಿಗೆ ತಿಳಿಯುವುದೋ ಇಲ್ಲವೋ ಎಂದು ಅನುಮಾನಿಸಿದೆ ತಮ್ಮ ಮೃದು ಮಧುರ ದನಿಯಲ್ಲಿ ಶೇಕ್ಸ್‌ಪಿಯರನ ಕೃತಿಗಳನ್ನು ವಿವರಿಸುತ್ತಿದ್ದರು. ನಾವಂತೂ ಅದನ್ನು ಕೇಳಿ ರೋಮಾಂಚಿತರಾಗುತ್ತಿದ್ದೆವು.

ಒಂದೇ ದಿನ ಅವಧಿಯಲ್ಲಿ ನಾನು ಹಲವು ಶತಮಾನಗಳನ್ನು ಹಾದು ಬಂದಿದ್ದೆ. ಪಶ್ಚಿಮದ ಸರಳ ರೇಖಾತ್ಮಕ ಕಾಲ (Linear time)  ಭಾರತದ ಜೊತೆ ಸಹಬಾಳ್ವೆ ನಡೆಸುತ್ತಿತ್ತು. ಪುರಾತನ, ಆದಿವಾಸಿ, ಮಧ್ಯಯುಗೀನ ಹಾಗೂ ಆಧುನಿಕ ಕಾಲಗಳು ಒಂದೇ ಪ್ರಜ್ಞೆಯಲ್ಲ ಒಟ್ಟೊಟ್ಟಿಗೆ ಇರಲಾರಂಭಿಸಿದ್ದವು. ಯಾಕೆ –  ಸುಮಾರು ೩ ದಶಕಗಳ ಹಿಂದೆ ಕೂಡ ಸಾವಿನ ದವಡೆಯಲ್ಲಿದ್ದ ನನ್ನ ತಂದೆ ತಮ್ಮ ಸ್ಥಿತಿಯನ್ನರಿಯಲು ಪ್ರತಿದಿನ ಕನ್ನಡದಲ್ಲಿದ್ದ ಪಂಚಾಂಗವನ್ನೂ, ಇಂಗ್ಲಿಷಿನಲ್ಲಿದ್ದ ಮಾನವನ ಕಾಯಿಲೆಗಳನ್ನು ಕುರಿತ ವೈದ್ಯಕೀಯ ಪುಸ್ತಕಗಳನ್ನೂ ಓದಿ ನೋಡುತ್ತಿದ್ದರು.

ಸಾಹಿತ್ಯದ ಲೋಕ ತನ್ನದೇ ಆದ ಪ್ರಭಾವಲಯವೊಂದನ್ನು ಸೃಷ್ಟಿಸುವುದರ ಜೊತೆಗೇ ಪಾರಂಪರಿಕ ಪ್ರಭಾವಲಯದ ಬಿಗಿಹಿಡಿತದಿಂದ ನಮ್ಮನ್ನು ಬಿಡಿಸುತ್ತಲೂ ಇರುತ್ತದೆ. ನನ್ನ ಹಾಗೂ ನನ್ನಂಥ ಅಸಂಖ್ಯಾತರ ಬದುಕಿನಲ್ಲಿ ಆಧುನಿಕ ಕನ್ನಡ ಸಾಹಿತ್ಯ ಹಾಗೂ ಕನ್ನಡದ ದೊಡ್ಡ ಲೇಖಕರು ವಹಿಸಿರುವ ಪಾತ್ರ ಇಂಥದ್ದು, ತಮ್ಮ ಆದ್ಭುತ ಕಾದಂಬರಿಗಳು ಹಾಗೂ ಪ್ರಬಂಧಗಳ ಮೂಲಕ ಕಾರಂತರು ಇಂಥ ಕೆಲಸ ಮಾಡಿದ್ದಾರೆ. ಸನಾತನಿಗಳು ಎಂದೂ ಅವರನ್ನೂ ಇಷ್ಟ ಪಟ್ಟವರಲ್ಲ. ಆದರೆ ಅಂಥವರೂ ಕಾರಂತರನ್ನು ಗೌರವಿಸುತ್ತಿದ್ದರು. ಜಾತಿ ಮೀರಿದ ಮದುವೆಯ ಮೂಲಕ ಸಾಂಪ್ರದಾಯಿಕ ನಿಯಮಗಳನ್ನು ಕಾರಂತರು ಧಿಕ್ಕರಿಸಿದ್ದರು. ಸಾಂಪ್ರದಾಯಿಕ ಧರ್ಮ ಕುರಿತು ವಿಚಾರವಾದಿ ಧೋರಣೆ ಬೆಳೆಸಿಕೊಂಡಿದ್ದ ಕುವೆಂಪು ತಮ್ಮ ಸೌಂದರ್ಯ ಪ್ರಜ್ಞೆಯ ಮಟ್ಟಿಗಂತೂ ಆಳವಾದ ಆಧ್ಯಾತ್ಮಿಕರು. ಹಳ್ಳಿಯ ವಿದ್ಯಾವಂತ ಬ್ರಾಹ್ಮಣರು ಈ ಹೊಸ ಬರವಣಿಗೆಯನ್ನೂ ಏಕಕಾಲಕ್ಕೆ ಆದರದಿಂದಲೂ ಅನುಮಾನದಿಂದಲೂ ನೋಡುತ್ತಿದ್ದರು.

ತೀರ್ಥಹಳ್ಳಿಯಲ್ಲಿ ನಾನು ಬೆಳೆದ ವಾತಾವರಣ ತೀರ ಸಾಹಿತ್ಯಕವಾದದ್ದೆಂದೇ ಹೇಳಬೇಕು. ಸೋಷಲಿಸ್ಟ್ ಗೋಪಾಲಗೌಡರು ಹೊಸ ಹೊಸ ತತ್ವಗಳನ್ನು ಕುರಿತು ಹೇಳುವುದರ ಜೊತೆಗೇ ಸಾಹಿತ್ಯದಿಂದ ತಂದ ಉದಾಹರಣೆಗಳನ್ನೂ ನಡುನಡುವೆ ಸೇರಿಸುತ್ತಿದ್ದರು. ನಾರಾಣಪ್ಪ, ಲಕ್ಷ್ಮೀಶ, ಬೇಂದ್ರೆ, ಕುವೆಂಪು, ಅಡಿಗರ ಕಾವ್ಯ ಅವರ ನಾಲಗೆಯ ತುದಿಯಲ್ಲಿತ್ತು. ಸಂಪ್ರದಾಯವಾದೀ ನಂಬಿಕೆಯ ಲೋಕದಿಂದ ನಾನು ಅವರ ಲೋಕದತ್ತ ಚಲಿಸಿದೆ.

ತೀರ್ಥಹಳ್ಳಿಯ ಜನ ಯಾವ ವಿದ್ಯಮಾನವನ್ನೂ ಸುಲಭವಾಗಿ ಮರೆತವರಲ್ಲ, ಅವರು ಅವನ್ನು ವರ್ಷಗಟ್ಟಲೆ ಮೆಲುಕು ಹಾಕುತ್ತಿದ್ದರು. ಕನ್ನಡ ನವೋದಯ ಕಾಲದ ಬಹಳ ದೊಡ್ಡ ಮೇಷ್ಟರಾಗಿದ್ದ ಪ್ರೊಪೆಸರ್ ಟಿ.ಎಸ್‌.ವೆಂಕಣ್ಣನವರು ಶ್ರೀಕೃಷ್ಣನನ್ನು ಕುರಿತು ಕೊಟ್ಟ ಉಪನ್ಯಾಸವೊಂದನ್ನು ಕುರಿತು ನನ್ನ ಅಪ್ಪ ತನ್ನ ಗೆಳೆಯರೊಡನೆ ವರ್ಷಗಟ್ಟಲೆ ಚರ್ಚಿಸಿದ್ದು ನನಗೆ ನೆನಪಿದೆ. ಸಾಹಿತ್ಯ, ರಾಜಕೀಯ ಹಾಗೂ ಹೊಸ ಚಿಂತನೆಗಳು ಅಲ್ಲಿ ಒಂದರೊಡನೊಂದು ಬೆರತು ಹೋಗಿದ್ದವು. ಸ್ವತಃ ಮಹಾತ್ಮಗಾಂಧಿಯೇ ತೀರ್ಥಹಳ್ಳಿಗೆ ಬಂದಿದ್ದನ್ನು ಕುರಿತು ಜನ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ಬಾಲ್ಯದಿಂದಲೂ ಕೇಳಿಬಲ್ಲೆ.

ವಾಸ್ತವವನ್ನು ವ್ಯಾಖ್ಯಾನಿಸುವ ಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಬಗೆಯೊಂದಿದೆ ಎಂದು ನನ್ನ ನಂಬಿಕೆ. ಗೋವಿನ ಹಾಡಿನ ಕವಿ ಹೃದಯ ಪರಿವರ್ತಕ ಎಂಬುದನ್ನಾಗಲೇ ಹೇಳಿದ್ದೇನೆ. ಇನ್ನಷ್ಟು ಮುಂದುವರಿದು, ಬಹುತೇಕ ಕನ್ನಡ ಕವಿಗಳು ಅಲ್ಪತೃಪ್ತರಲ್ಲ; ಅವರು ಒಲಿಸಿಕೊಳ್ಳುವುದರಲ್ಲಿ ನಂಬಿಕೆಯುಳ್ಳವರು ಎಂದೂ ಹೇಳಬಲ್ಲೆ. ಜನಾಂಗ ಅಥವಾ ಜಾತಿಯ ಹೆಮ್ಮೆ ಕುರಿತಂತೆ ಶತಶತಮಾನಗಳಿಂದಲೂ ನಮ್ಮ ಕವಿಗಳು ತೋರುತ್ತ ಬಂದಿರುವ ಆರೋಗ್ಯಕರ ತಿರಸ್ಕಾರ ಅತ್ಯಂತ ಮಹತ್ವಪೂರ್ಣವಾದದ್ದು. ನಮ್ಮ ಆದಿಕವಿ ಪಂಪ ಸಾವಿರ ವರ್ಷಗಳಷ್ಟು ಹಿಂದೆಯೇ ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂದು ಸಾರಿದ್ದ. ಪಂಪನ ಶ್ರೇಷ್ಠ ಭಾಗಗಳಲ್ಲಿ ಯುದ್ಧದಲ್ಲಿ ಭರತನನ್ನು ಸೋಲಿಸಿದ ಬಾಹುಬಲಿಯ ಹೃದಯಪರಿವರ್ತನೆ ಹಾಗೂ ಅವನ ರಾಜ್ಯತ್ಯಾಗ ಪ್ರಖ್ಯಾತವಾದದ್ದು. ಸರ್ವಸಂಗ ಪರಿತ್ಯಾಗಿಯಾಗಿಯೂ ಬಾಹುಬಲಿಗೆ ಕೈವಲ್ಯ ದಕ್ಕಲಾರದು. ಕಾರಣ, ತಾನು ನಿಂತ ತುಂಡು ನೆಲವೂ ತನ್ನ ಅಣ್ಣನಿಗೆ ಸೇರಿದ್ದೆಂಬ ಕೊರಗು ಅವನ ಅಂತಃಸಾಕ್ಷಿಯನ್ನು ಚುಚ್ಚುತ್ತಲೇ ಇದೆ. ಕಡೆಗೂ ಅವನಿಗ ಮುಕ್ತಿ ದೊರಕುವುದು ಅವನ ಪ್ರಜ್ಞೆಯಲ್ಲಿ –  ಹೇಗೋ ಉಳಿದುಬಿಟ್ಟ ಈ ದೌರ್ಬಲ್ಯವನ್ನು ಗೆದ್ದ ಮೇಲೆಯೇ.

ಹನ್ನೆರಡನೆಯ ಶತಮಾನದ ನಮ್ಮ ವಚನಕಾರರು ಮಹಾಪರಂಪರೆ ಹಾಗೂ ಉಪಪರಂಪರೆಗಳೆಡನ್ನೂ ಧಿಕ್ಕರಿಸಿದವರು. ರಾಜರನ್ನಾಗಲೀ, ಲೌಕಿಕಾಧಿಕಾರದ ಕೇಂದ್ರಗಳಾನ್ನಾಗಲೀ ಏನೂ ಗೌರವಿಸಿದ ಅವರು ಜಾತ್ಯಾತೀತ ಸಮಾಜದ ಕನಸು ಕಂಡವರು. ಹುಟ್ಟಿನಿಂದ ಬ್ರಾಹ್ಮಣನಾಗಿ ನಂತರ ವೀರಶೈವನಾದ ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದೂ ಅಖಿಲ ಭಾರತೀಯ (Pan Indian) ವ್ಯವಸ್ಥೆಯನ್ನು ಧಿಕ್ಕರಿಸಿದವನು. ಬ್ರಾಹ್ಮಣ ಹುಡುಗಿಯೊಬ್ಬಳು ಅಸ್ಪೃಶ್ಯನನ್ನು ಮದುವೆಯಾಗಲು ನೆರವಾದವನು. ಇದಾದದ್ದು ಎಂಟುನೂರು ವರ್ಷಗಳ ಹಿಂದೆ. ಕರ್ನಾಟಕದ ಸೋಷಲಿಸ್ಟ್ ತರುಣರು ಇವತ್ತಿಗೂ ಬಸವಣ್ಣನಿಂದ ಸ್ಫೂರ್ತಿ ಪಡೆಯುತ್ತಾರೆ.

ಸಂತ ಕವಯಿತ್ರಿ ಅಕ್ಕ ಮಹಾದೇವಿ ಬೆತ್ತಲಾಗಿ ಓಡಾಡುತ್ತ ತನ್ನ ವಚನಗಳ ಮೂಲಕ ಶಿವನನ್ನು ಆರಾಧಿಸುತ್ತಿದ್ದವಳು. ಅನುಭವ ಮಂಟಪದಲ್ಲಿ ಅಲ್ಲಮ ಅಕ್ಕನನ್ನು, ‘ನೀನು ಬೆತ್ತಲೆಯಾಗಿ ತಿರುಗಲು ಕಾರಣವೇನು?’ ಎಂದು ಕೇಳುತ್ತಾನೆ. ‘ತಾನು ಹೆಣ್ಣೆಂಬ ಪ್ರಜ್ಞೆಯಿಂದ ಮುಕ್ತಳಾದವಳು. ಎಲ್ಲ ಲಜ್ಜೆಯನ್ನೂ ಮೀರಿದವಳು’ ಎಂದು ಅಕ್ಕಮಹಾದೇವಿ ಉತ್ತರಿಸುತ್ತಾಳೆ. ‘ಹಾಗಾದರೆ ನಿನ್ನ ಗುಪ್ತಾಂಗಗಳನ್ನು ಇಳಿಬಿದ್ದ ಮುಡಿಯಿಂದ ಮುಚ್ಚಿರುವುದೇಕೆ?’ ಎನ್ನುತ್ತಾನೆ ಗುರು ಅಲ್ಲಮ.‘ಅನ್ಯರಿಗೆ ಮುಜುಗರವಾಗದಿರಲೆಂದು’ ಎನ್ನುತ್ತಾಳೆ ಅಕ್ಕ. ಅವಳ ಸಮಕಾಲೀನನಾದ ಬಸವಣ್ಣ ಅಸ್ಪೃಶ್ಯರು ಹಾಗೂ ಕೆಳಜಾತಿಗಳನ್ನು ವೀರಶೈವ ಧರ್ಮಕ್ಕೆ ತಂದ. ಆದರೆ ಭಾರತದ ಚರಿತ್ರೆಯುದ್ದಕ್ಕೂ ಆಗಿರುವ ಹಾಗೆ ವೀರಶೈವರು ಕೂಡ ಹಿಂದೂ ಧರ್ಮದ ಒಂದು ಭಾಗವಾಗಿ, ಜಾತಿಯಾಗಿ, ಉಪಜಾತಿಗಳಾಗಿ ಹಂಚಿಹೋದರು.

ನಮ್ಮ ಲೇಖಕರು ಒಲಿಸಿಕೊಳ್ಳುವುದರಲ್ಲಿ, ಹೃದಯ ಪರಿವರ್ತನೆಯಲ್ಲಿ ನಂಬಿಕೆಯುಳ್ಳವರು ಎಂಬ ಮಾತನ್ನು ಈಗಾಗಲೇ ಹೇಳಿದ್ದೇನೆ. ನಾಲ್ಕುನೂರು ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದ ಪುರಂದರದಾಸರನ್ನೇ ನೋಡಿ. ಸಾಮಾನ್ಯವಾಗಿ ಎಲ್ಲ ದೈನಂದಿನ ವಿಷಯಗಳನ್ನೂ ಕುರಿತು ಕವಿಯೊಬ್ಬ ತಾನಿದ್ದ ಕಾಲದ ಸಾಮ್ರಾಜ್ಯಕ್ಕೆ ಮುಸ್ಲಿಮರಿಂದ ಬಂದಿರುವ ಅಪಾಯ ಕುರಿತು ಹಾಡಬೇಕಾದದ್ದು ಸಹಜವಾಗಿತ್ತು. ಅಚ್ಚರಿಯೆಂದರೆ, ದಾಸರು ಈ ಕುರಿತು ಹಾಡಲಿಲ್ಲ; ಬದಲಿಗೆ, ಭಕ್ತಿ ಪರಂಪರೆಯ ಸಮತಾವಾದೀ ಗುಣಕ್ಕನುಗುಣವಾಗಿ ಬಿಜಾಪುರದ ಸೂಫಿಸಂತರನ್ನು ಅವರು ತುಂಬು ಗೌರವದಿಂದ ಕಂಡರು. ವಿಜಯನಗರ ಸಾಮ್ರಾಜ್ಯದ ಮೇಲೆ ಮುಸ್ಲಿಮರ ಆಕ್ರಮಣವನ್ನು ಕುರಿತು ಮತೀಯ ದೃಷ್ಟಿಕೋನದಿಂದ ಬರೆದವರು ಈ ಶತಮಾನದ ಆದಿಭಾಗದ ಆಧುನಿಕ ಲೇಖಕ ಗಳಗನಾಥರು. ಪುರಂದರದಾಸರ ಕಾಣ್ಕೆ ರಾಜ್ಯಪ್ರಭುತ್ವದ ಲೌಕಿಕ ಸಂಘರ್ಷಗಳನ್ನು ಮೀರಿದ್ದಾಗಿತ್ತು. ಈ ಕುರಿತು ಪುರಂದರದಾಸರ ಹಾಡಿನಲ್ಲಿ ಅರ್ಥಪೂರ್ಣ ಸಾಲೊಂದಿದೆ:

‘ಉತ್ತಮ ಪ್ರಭುತ್ವ ಲೊಳಲೊಟ್ಟೆ’

ಇಲ್ಲಿನ ಮೊದಲು ಎರಡು ಪದಗಳು ಸಂಸ್ಕೃತ ಪದಗಳು. ‘ಪ್ರಭುತ್ವ’ ಎಂದರೆ State; ಅದು ಲೌಕಿಕಾಧಿಕಾರ. ಅದು ಉತ್ತಮವಾಗಿದ್ದಾಗಲೂ ಅದು ಲೊಳಲೊಟ್ಟೆಯೇ, ಟೊಳ್ಳೇ ಎಂಬುದು ಕವಿಯ ನಂಬಿಕೆ. ಕನ್ನಡದಲ್ಲಿ ‘ಲೊಳಲೊಟ್ಟೆ’ ಎಂಬ ಆಡುಮಾತಿನ ಸದ್ದೇ ತಿರಸ್ಕಾರ ಪೂರಿತವಾದ ಅರ್ಥ ಹೊರಡಿಸುತ್ತದೆ. ಪ್ರಭುತ್ವ ಉತ್ತಮವಾಗಿದ್ದರೂ ಅದಕ್ಕೆ ಯಾವುದೇ ನಿಜವಾದ ಅರ್ಥವಿಲ್ಲ ಎಂಬರ್ಥ ಈ ಸಾಲಿಗಿರುವಂತೆ, ರಾಜ್ಯಪ್ರಭುತ್ವವು ಉತ್ತಮವಾಗಿರಬಲ್ಲದೆಂದು ನಿರೀಕ್ಷಿಸುವುದೇ ಮೂರ್ಖತನ ಎಂಬ ಧ್ವನಿಯೂ ಇದೆ. ಎಲ್ಲ ಕಾಲಕ್ಕೂ, ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಮಾತಿದು. ಇದನ್ನು ಪುರಂದರದಾಸರು ಹೇಳಿದ್ದು ಬಲಾಢ್ಯ ವಿಜಯನಗರ ಸಾಮ್ರಾಜ್ಯದ ಸೊಕ್ಕಿನ ದಿನಗಳಲ್ಲಿ, ಹಾಗೆ ನೋಡಿದರೆ, ಭಕ್ತಕವಿಗಳಲ್ಲಿ ರಾಜ್ಯಪ್ರಭುತ್ವವನ್ನು ಆರಾಧಿಸಿದವರು ಯಾರೂ ಇಲ್ಲ.

ರಾಜ್ಯಪ್ರಭುತ್ವ ನಮ್ಮ ಕೈತಪ್ಪಿ ಹೋಯಿತೆಂಬ ಸಂಗತಿ ನಮ್ಮ ಬರಹಗಾರರಿಗೆ ಕಳವಳನ್ನುಂಟು ಮಾಡದೇ ಇಲ್ಲ. ಬ್ರಿಟಿಷ್‌ಸಾಮ್ರಾಜ್ಯಶಾಹಿಯ ಜೊತೆಗಿನ ಐತಿಹಾಸಿಕ ಕದನದಲ್ಲಿ ಟಿಪ್ಪು ಸೋತ ನಂತರ ಕರ್ನಾಟಕವೆಂಬ ರಾಜ್ಯವೇ ಹರಿದು ಹಂಚಿಹೋಯಿತು. ಉಳಿದಿದ್ದು, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಪುಟ್ಟ ಮೈಸೂರು ರಾಜ್ಯ ಮಾತ್ರ. ಕರ್ನಾಟಕದ ಉಳಿದ ಭಾಗಗಳು ಬ್ರಿಟಿಷ್‌ಪ್ರೆಸಿಡೆನ್ಸಿ ಹಾಗೂ ಹೈದರಾಬಾದಿನ ನಿಜಾಮರ ನಡುವೆ ಹಂಚಿಹೋದವು. ೧೯೫೬ರ ತನಕ ಏಕೀಕೃತ ಕರ್ನಾಟಕದ ಕನಸು ಕನಸಾಗಿಯೇ ಇತ್ತು. ಹೀಗಾಗಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲದ ವೈಭವವನ್ನೂ, ‘ಕಾವೇರಿಯಿಂದ ಗೋದಾವರಿವರೆಮಿರ್ಪ’ ಕರ್ನಾಟಕದ ಭವ್ಯ ಇತಿಹಾಸವನ್ನು ಕುರಿತು ಕರ್ನಾಟಕದ ದೊಡ್ಡ ಕವಿಗಳು ನಾಸ್ಟಾಲ್ಜಿಕ್‌ಆಗಿ ಬರೆದದ್ದು ತೀರ ಸಹಜ. ಆದರೆ ಈ ಏಕೀಕೃತ ಕರ್ನಾಟಕದ ಹಂಬಲ ಸಂಕುಚಿತವಾದ ಪ್ರದೇಶಾಭಿಮಾನ ಮಟ್ಟಕ್ಕೆ ಎಂದೂ ಇಳಿಯಲಿಲ್ಲ. ಕಾರಣ, ಕನ್ನಡದ ಬಹುತೇಕ ಸೂಕ್ಷ್ಮ ಲೇಖಕರು ಎಂದೂ ಕೇವಲ ಲೌಕಿಕಾಧಿಕಾರದ ಆರಾಧರಕರಾಗಿದ್ದವರಲ್ಲ.

ಏಕೀಕೃತ ಕರ್ನಾಟಕಕ್ಕಾಗಿ ಹಂಬಲಿಸುತ್ತಿದ್ದವರನ್ನು ಹುರಿದುಂಬಿಸುವ ದನಿಯಾಗಿದ್ದ ಬೇಂದ್ರೆಯ ಪದ್ಯವೊಂದಿದೆ. ‘ಕನಸಿನೊಳಗೊಂದು ಕನಸು’ ಎಂಬ ಈ ಪದ್ಯ ಒಬ್ಬ ಹೆಣ್ಣು ಹಾಗೂ ಕವಿಯ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಪದ್ಯದ ಆರಂಭದಲ್ಲಿ ಹೆಂಗಸೊಬ್ಬಳು ನಡುಬೀದಿಯಲ್ಲಿ ಅನಾಥಳಂತೆ ನಿಂತಿದ್ದಾಳೆ. ಕವಿ ಅವಳನ್ನು ಕೇಳುತ್ತಾನೆ: “ಯಾರು ನಿಂದವರಲ್ಲಿ ತಾಯಿ?” ಇದೊಂದು ಸಾಮಾನ್ಯವಾದ, ಸಹಾನೂಭೂತಿಯ ಪ್ರಶ್ನೆ. ಹೆಂಗಸಿನ ಉತ್ತರ ಇದು: “ಯಾರು ಕೇಳುವರೆನಗೆ, ಯಾಕೆ ತಂದೆ?” ಅವಳ ದುಃಖಕ್ಕೇನು ಕಾರಣ, ಅವಳ ಮನೆಯಲ್ಲಿದೆ, ಇವೆಲ್ಲವನ್ನೂ ಕೇಳುವ ತವಕ, ಕವಿಗೆ. ಅವಳನ್ನು ಕುರಿತ ಕವಿಯ ಕಾಳಜಿ ಹೆಚ್ಚಾದಂತೆಲ್ಲ ಅವಳ ಉತ್ತರವೂ ನಿಗೂಢವಾಗುತ್ತಾ ಹೋಗುತ್ತದೆ. ಕವಿಯ ಕಾಣ್ಕೆ ಬೆಳೆದಂತೆ ಅವಳೂ ಬೆಳೆಯತೊಡುಗುತ್ತಾಳೆ. ಕೊನೆಗೆ ಅವಳು ಯಾವ ಹಂತ ತಲುಪುತ್ತಾಳೆಂದರೆ, ‘ಗಂಡುಸಾದರೆ ನಿನ್ನ ಬಲಿಕೊಡುವೆಯೇನು?’ ಎಂದು ಕವಿಗೇ ಸವಾಲೆಸೆಯುತ್ತಾಳೆ. ಈ ಹೆಣ್ಣು ಬೆಳೆಯುವ ಕ್ರಮವನ್ನು ಸಾಂಕೇತಿಕವಾಗಿ ನೋಡಿದರೆ ಅವಳು ಐರ್ಲೆಂಡ್, ದಕ್ಷಿಣ ಆಫ್ರಿಕಾ, ಪ್ಯಾಲೆಸ್ಟೀನ್‌ಹೀಗೆ ಅವಮಾನದಿಂದ ನೊಂದ ಯಾವ ದೇಶದ ಪ್ರತಿನಿಧಿಯಾದರೂ ಆಗಿಬಿಡಬಹುದು. ಸಂಕುಚಿತ ರಾಷ್ಟ್ರೀಯ ದೃಷ್ಟಿಕೋನವನ್ನು ಮೀತಿ ನಿಲ್ಲುವ ಕವಿತೆ ಇದು.

ಆಗಿನ ಮೈಸೂರು ಸರ್ಕಾರ, ಕರ್ನಾಟಕದ ಏಕೀಕರಣ ಕುರಿತು ಯಾವ ಸಾರ್ವಜನಿಕ ಹೇಳಿಕೆಯನ್ನೂ ನೀಡಬಾರದು ಎಂದು ಕುವೆಂಪು ಅವರಿಗೆ ಎಚ್ಚರಿಕೆ ನೀಡಿತ್ತು. ಆಗ ಸರ್ಕಾರಕ್ಕೆ ಕುವೆಂಪು ಅವರು ತಿರುಗಿಸಿ ಕೊಟ್ಟ ಏಟು ಚಿರಸ್ಮರಣೀಯವಾದದ್ದು: “ಅಖಂಡ ಕರ್ನಾಟಕ! ಅಲೋ ನಿಮ್ಮ ರಾಜಕೀಯ ಕಪಟನಾಟಕ –” ‘ಕರ್ನಾಟಕವೆನ್ನುವುದು ಗೋಸುಂಬೆ ರಾಜಕೀಯ ಪಂದ್ಯಾಟವಲ್ಲ. ಅದೊಂದು ಆಧ್ಯಾತ್ಮಿಕ ಸಾಮ್ರಾಜ್ಯ. ಅಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಪ್ರಧಾನಿ. ಆತನ ಮಂತ್ರಿಮಂಡಲದಲ್ಲಿ ರನ್ನ, ಜನ್ನ, ಹರಿಹರ, ನಾರಣಪ್ಪ, ಷಡಕ್ಷರಿ ಹಾಗೂ ಮುದ್ದಣರು ಮಂತ್ರಿಗಳು.’

ಕರ್ನಾಟಕ ಎನ್ನುವುದೊಂದು ಪರಿಕಲ್ಪನೆ. ಅದರ ಪದಶಃ ಅರ್ಥಕ್ಕಾಗಿ ತಲೆಕೆಡಿಸಿಕೊಳ್ಳುವವರು ಪಂಡಿತರು ಮಾತ್ರ. ಕರ್ನಾಟಕ ಎಂಬ ಪದಕ್ಕೆ ‘ಕಪ್ಪು ಮಣ್ಣಿನ ಸುಂದರನಾಡು’ ಎಂಬ ಅಕ್ಷರಶಃ ಅರ್ಥವೂ ಇದೆ. ರಾಮಾಯಣದಲ್ಲಿ ಇದು ದಂಡಕಾರಣ್ಯ. ಆದರೆ, ಕರ್ನಾಟಕವೆಂಬ ಪದ ಮೊದಲು ಕಾಣಿಸಿಕೊಳ್ಳುವುದು ಮಹಾಭಾರತದಲ್ಲಿ ಎಂದು ಎಲ್ಲೋ ಓದಿದ ನೆನಪು. ಕರ್ನಾಟಕವೊಂದು ಮಿನಿಭಾರತ. ಸುರಿವ ಮಂಜೊಂದನ್ನು ಬಿಟ್ಟರೆ ಭಾರತದ ಉಳಿದ ಭಾಗಗಳಲ್ಲಿ ಇರುವುದೆಲ್ಲವೂ ಕರ್ನಾಟಕದಲ್ಲಿದೆ. ಚೆಂದ ಕರಾವಳಿ, ಕಪ್ಪುಮಣ್ಣು, ಕೆಂಪುಮಣ್ಣು, ಪರ್ವತಗಳು, ಕಣಿವೆಗಳು, ಬಯಲುಗಳು ಎಲ್ಲವೂ ಇಲ್ಲಿವೆ. ಜೊತೆಗೇ, ಪುರಾತನ ದೇವಾಲಯಗಳು, ಚಾರಿತ್ರಿಕ ಮಸೀದಿಗಳು ಹಾಗೂ ಸುಂದರ ಚರ್ಚುಗಳಿವೆ. ಒಂದಾನೊಂದು ಕಾಲದಲ್ಲಿ ಬೌದ್ಧ ಧರ್ಮವೂ ಕರ್ನಾಟಕವನ್ನು ಪ್ರವೇಶಿಸಿದೆ. ಅಶೋಕನ ಶಿಲಾಶಾಸನಗಳೂ ಇಲ್ಲಿ ದೊರೆತಿವೆ. ವಿಶಿಷ್ಟಾದ್ವೈತ ತತ್ವವನ್ನು ಕೊಟ್ಟ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ನೆಲೆಸಿದ್ದರೆ, ಶಂಕರಾಚಾರ್ಯರು ಶೃಂಗೇರಿಯಲ್ಲಿ  ಮಠ ಸ್ಥಾಪಿಸಿದ್ದರು. ಇಲ್ಲೇ ಹುಟ್ಟಿದ ಮಧ್ವಾಚಾರ್ಯರು ಉಡುಪಿಯ ಅಷ್ಟಮಠಗಳು ಸ್ಥಾಪಿಸಿದರು. ಇವತ್ತಿಗೂ ಕರ್ನಾಟಕದ ಜನರನ್ನು ಪ್ರಭಾವಿಸಬಲ್ಲ ಶಕ್ತಿಯುಳ್ಳ ವೀರಶೈವಧರ್ಮ ಕನ್ನಡದಲ್ಲಿವೆಯೆಂಬ ಅಂಶ ಕೂಡ ಬಹುಮುಖ್ಯವಾದದ್ದು. ಕರ್ನಾಟಕದ ಮಾಧ್ವರಿಗೆ ದಾಸರ ಕನ್ನಡ ರಚನೆಗಳು ಸಂಸ್ಕೃತದ ಆಗಮ ಪೂಜಾ ಪದ್ಧತಿಗೆ ಪೂರಕವಾಗಿವೆ.

ಕನ್ನಡ ಭಾಷೆ ನಮ್ಮೆಲ್ಲರನ್ನು ಬೆಸೆಯುವ ಸಾಧನ. ಆದರೆ ಕನ್ನಡ – ಭಾಷಿಕರಿಗೇ ವಿಶಿಷ್ಟವಾದ ಲಕ್ಷಣವೊಂದಿದೆ. ಆಹಾರ, ಉಡುಗೆ –  ತೊಡುಗೆ, ಸಂಸ್ಕೃತಿಗಳ ದೃಷ್ಟಿಯಿಂದ ಗುಲ್ಬರ್ಗಾದವನೊಬ್ಬ ಹೈದರಾಬಾದಿಗೆ ಹೆಚ್ಚು ಹತ್ತಿರವೇ ಹೊರತು ಉಡುಪಿಯವನಿಗಲ್ಲ. ಉಡುಪಿಯವರಿಗೆ ಕೇರಳದ ಜೊತೆ ನಂಟು ಹೆಚ್ಚು. ಹೀಗೆ ಕನ್ನಡ ಬೆಳಗಾವಿಯಲ್ಲಿ ಮರಾಠಿಯಿಂದ, ಕೆ.ಜಿ.ಎಫ್‌ನಲ್ಲಿ ತಮಿಳಿನಿಂದ, ಬಳ್ಳಾರಿಯಲ್ಲಿ ತೆಲುಗಿನಿಂದ ಪಡೆಯುತ್ತಾ ಬೆಳೆಯುತ್ತದೆ. ಹೀಗಾಗಿ ಕನ್ನಡಿಗರಲ್ಲಿ ಉರ್ದು ಕನ್ನಡಿಗರು, ತಮಿಳು ಕನ್ನಡಿಗರು, ತೆಲಗು ಕನ್ನಡಿಗರು, ಮರಾಠಿ ಕನ್ನಡಿಗರು, ತುಳು ಕನ್ನಡಿಗರು, ಕೊಡವ ಕನ್ನಡಿಗರು ಹಾಗೂ ಕೊಂಕಣಿ ಕನ್ನಡಿಗರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ನಮ್ಮ ದೊಡ್ಡ ಲೇಖಕರಾದ ಬೇಂದ್ರ, ಮಾಸ್ತಿ, ಡಿ.ವಿ.ಜಿ., ಪು.ತಿ.ನ.ರಂಥವರ ಸಂದರ್ಭದಲ್ಲಿ ಕಡೆಯ ಪಕ್ಷ ಅವರ ಬಾಲ್ಯದಲ್ಲಂತೂ ಕನ್ನಡ ಮನೆಯ ಮಾತಾಗಿರಲಿಲ್ಲ. ತಾನು ಬಾಲ್ಯದಲ್ಲಿ ಕನ್ನಡ, ಮರಾಠಿ –  ಹೀಗೆ ಎರಡು ಭಾಷೆಗಳನ್ನಾಡುತ್ತಿದ್ದೆನೆಂಬುದೇ ನನಗೆ ಅರಿವಿರಲಿಲ್ಲ ಎಂದು ಬೇಂದ್ರ ಒಮ್ಮೆ ನನಗೆ ಹೇಳಿದ್ದರು. ತುಳುವರಿಗೂ, ಕೊಡವರಿಗೂ ಕರ್ನಾಟಕವೇ ಮನೆ.

ಆದ್ದರಿಂದಲೇ, ಭಿನ್ನ ಭಿನ್ನ ಹಿನ್ನೆಲೆಯ ಜನ ತಂತಮ್ಮ ಮನೆ ಮಾತುಗಳನ್ನೂ ಕನ್ನಡವನ್ನೂ ಬಳಸುವ ಕರ್ನಾಟಕ ಒಂದು ಮಿನಿಭಾರತ. ತಮಿಳು ಮಾತಾಡುವ ಶ್ರೀವೈಷ್ಣವರಾದ ಏ.ಕೆ.ರಾಮಾನುಜನ್‌ತಾನು ಅಡುಗೆ ಮನೆಯಲ್ಲಿ ತಮಿಳನ್ನೂ, ಹಾದಿಬೀದಿಗಳಲ್ಲಿ ಕನ್ನಡವನ್ನೂ, ಮಹಡಿಯ ಮೇಲೆ ಇಂಗ್ಲಿಷನ್ನೂ ಮಾತಾಡುತ್ತೇನೆ ಎಂದು ಒಮ್ಮೆ ಹೇಳಿದ್ದರು. ಗಟ್ಟಿಯಾದ ಸ್ವಂತಿಕೆ ಹಾಗೂ ವಿಶಾಲವಾದ ವಿಶ್ವಾತ್ಮಕ ಪ್ರಜ್ಞೆಯ ಅಪರೂಪದ ಸಂಶ್ಲೇಷಣೆಯೊಂದು ಕರ್ನಾಟಕದಲ್ಲಿ ಕಾಣುತ್ತದೆ. ಅನೇಕ ಉಪ ಸಂಸ್ಕೃತಿಗಳು ಕರ್ನಾಟಕವೆಂಬ ರಚನೆಯೊಳಗೆ ಯಾವ ರಂಪವೂ ಘರ್ಷಣೆಯೂ ಇಲ್ಲದೆ ಬೆರೆತು ಹೋಗು ಕ್ರಮ ಅನನ್ಯವಾದದ್ದು.

ಕರ್ನಾಟಕವೆನ್ನುವುದು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಅದೊಂದು ಆಧ್ಯಾತ್ಮಿಕ ಕಲ್ಪನೆ ಕೂಡ ಎನ್ನುವುದಾದರೆ ಅಂಥ ಕಲ್ಪನೆಯೊಂದು ರೂಪುಗೊಳ್ಳಲು ಕಾರಣವಾಗುವ ಶಕ್ತಿಗಳು ಯಾವುದು? ಇಂತಹ ಜಟಿಲ ಪ್ರಶ್ನೆಗೆ ಥರೇಹವಾರಿ ಉತ್ತರಗಳು ಎದುರಾಗಬಹುದು. ಈ ಪ್ರಶ್ನೆಗೆ, ಲೇಖಕನಾಗಿ ವೈಯಕ್ತಿಕ ನೆಲೆಯ ಉತ್ತರವೊಂದನ್ನು ನಾನು ಹುಡುಕಲೆತ್ನಿಸಿದ್ದೇನೆ. ತಾರ್ಕಿಕತೆಯ ಬಲವಿಲ್ಲದವನೊಬ್ಬ ಮಾಡಬಲ್ಲ ಕೆಲಸವೆಂದರೆ ಇದೇ. ಆದ್ದರಿಂದ ಇನ್ನು ಮುಂದೆ, ಕೆಲವು ಡಯಲೆಕ್ಟಿಕಲ್‌ಪರಿಕಲ್ಪನೆಗಳ ಜೋಡಿಗಳನ್ನಾಧರಿಸಿ ಕ್ಷಣಕಾಲ ಕಲ್ಪನಾ ವಿಲಾಸವೊಂದರಲ್ಲಿ ಮುಳುಗುತ್ತೇನೆ. ಓದುಗರು ತಮ್ಮ ಅಪನಂಬಿಕೆಗಳನ್ನು ಕೊಂಚ ಬದಿಗಿಟ್ಟು ಮುಂದಿನದನ್ನು ಓದಿದರೆ ಒಳ್ಳೆಯದು.

ಕರ್ನಾಟಕದ ದಿನನಿತ್ಯದ ಆಹಾರದ ಎರಡು ಧಾನ್ಯಗಳಾದ ಅಕ್ಕಿ – ರಾಗಿಗಳ ಉದಾಹರಣೆಗಳೊಂದಿಗೆ ನನ್ನ ಈ ವಾದಲಹರಿಯನ್ನು ಆರಂಭಿಸುತ್ತೇನೆ. ರಾಗಿಯ ಬಣ್ಣ ಕಪ್ಪು, ಜೋಳದಂತೆ ರಾಗಿಯೂ ಗಟ್ಟಿ. ಮೈಮುರಿದು ದುಡಿಯುವ ರೈತರು ಹಾಗೂ ಕೂಲಿಗಳ ಆಹಾರ. ಬಿಳಿ ಬಣ್ಣದ ಅಕ್ಕಿ ಕೊಂಚ ಮೃದು. ಮಳೆ ತುಸು ಕಡಿಮೆಯಾದರೂ ಭತ್ತದ ಬೆಳೆ ಮುದುಡಿ ಹೋಗುತ್ತದೆ. ಅಕ್ಕಿ ನೋಡಲು ಚೆಂದ, ಬೆಲೆ ಹೆಚ್ಚು, ಬೇಯಿಸಿದಾಗ ಹೂವಿನಂತೆ ಮೃದು. ಒಂದಾನೊಂದು ಕಾಲಕ್ಕೆ ಇವೆರಡರ ನಡುವ ಹಣಾವಣಿಯಾಯಿತಂತೆ. ಈ ಕುರಿತು ಕನಕದಾಸರು ಬರೆದ ಅಣಕು ಮಹಾಕಾವ್ಯ ರಾಮಧಾನ್ಯಚರಿತೆ. ಈ ವಿಷಯಕ್ಕೆ ಮತ್ತೆ ಬರೋಣ.

‘ಮಾರ್ಗ’ ಮತ್ತು ‘ದೇಸಿ’ ಎಂಬ ಎರಡು ಪರಿಕಲ್ಪನೆಗಳಿವೆ. ‘ಮಾರ್ಗ’ ಎನ್ನುವುದು ಹೆದ್ದಾರಿ. ಅದು ಅಖಿಲ ಭಾರತ ವ್ಯಾಪ್ತಿಯ ಮಹಾ ಪರಂಪರೆ. ಅಧಿಕೃತವಾಗಿ ಸ್ಥಾಪಿತವಾಗಿರುವ ಅದಕ್ಕೆ ಎಲ್ಲೆಡೆ ಮನ್ನಣೆ. ಅದು ‘ಶಾಸ್ತ್ರ’ವೂ ಹೌದು. ಆದರೆ ‘ದೇಸಿ’ ಎನ್ನುವುದು ಸ್ಥಳೀಯವಾದ, ದೇಸಿಯಾದ ‘ಕಿರಿಯ’ ಪರಂಪರೆ. ಅದು ಪ್ರದೇಶದಿಂದ ಪ್ರದೇಶಕ್ಕೆ, ಹಳ್ಳಿಯಿಂದ ಹಳ್ಳಿಗೆ, ಜಾತಿಯಿಂದ ಜಾತಿಗೆ ಬದಲಾಗುವಂಥದ್ದು. ಆದರೆ, ಮಾರ್ಗ –  ದೇಸಿಗಳ ನಡುವೆ ಘರ್ಷಣೆಯಿರುವಂತೆ ಅವರೆಡರ ನಡುವೆ ಸೃಜನಾತ್ಮಕವಾದ ಸಂಬಂಧವೂ ಇದೆ. ತರ್ಕವನ್ನು ಕೊಂಚ ಕೈಬಿಟ್ಟು ರೂಪಾತ್ಮಕ (metaphorical) ದೃಷ್ಟಿಕೋನದಿಂದ ನೋಡಿದರೆ ಅಕ್ಕಿ –  ರಾಗಿಯ ಜೋಡಿಗೂ ಮಾರ್ಗ –  ದೇಸಿಯ ಜೋಡಿಗೂ ದೂರದ ನಂಟಿದೆ.

ಇವೆರಡಕ್ಕಿಂತ ಹೆಚ್ಚು ಮೆಟಫಿಸಿಕಲ್‌ಆದ ‘ಸ್ಥಾವರ’ ಮತ್ತು ‘ಜಂಗಮ’ ಎಂಬ ಎರಡು ಪರಿಕಲ್ಪನೆಗಳಿವೆ. ವೀರಶೈವ ಆಧ್ಯಾತ್ಮದ ಈ ಎರಡು ಮುಖ್ಯ ಪರಿಕಲ್ಪನೆಗಳನ್ನು ರಾಮಾನುಜನ್‌ತಮ್ಮ ‘ಸ್ಪೀಕಿಂಗ್‌ಆಫ್‌ಶಿವ’ ಎಂಬ ವಚನಗಳ ಇಂಗ್ಲಿಷ್ ಅನುವಾದಗಳ ಸಂಗ್ರಹಕ್ಕೆ ಬರೆದ ಮುನ್ನಡಿಯಲ್ಲಿ ಚರ್ಚಿಸುತ್ತಾರೆ: “ಇಂಡೋ ಯುರೋಪಿಯನ್ ಬೇರುಳ್ಳ ಇಂಗ್ಲಿಷ್‌ಶಬ್ದಗಳಾದ ‘Stand’ ‘State’ ‘estate’ ‘stature’ ‘static’ ‘status’ ಮುಂತಾದವುಗಳಂತೆ ‘ಸ್ಥಾವರ’ ಎಂಬ ಶಬ್ದವೂ ಇದೇ ಮೂಲದಿಂದ ಬಂದದ್ದು. ‘ಸ್ಥಾವರ’ ಎನ್ನವುದು ನಿಂತಲ್ಲೇ ನಿಂತಿರುವುದು, ಅದೊಂದು ಆಸ್ತಿ, ನಿರ್ಜೀವ ವಸ್ತು. ಆದರೆ, ‘ಜಂಗಮ’ ಎನ್ನುವುದು ಚಲಿಸುವಂಥದ್ದು, ಮುನ್ನಡೆಸಬಹುದಾಗಿದ್ದು. ಬರುವಂಥದ್ದು, ಹೋಗುವಂಥದ್ದು.” ಬಸವಣ್ಣನ ಸುಪ್ರಸಿದ್ಧ ವಚನ ‘ಉಳ್ಳವರು ಶಿವಾಲಯ ಮಾಡುವರು’ ಈ ಸತ್ಯವನ್ನು ಆಕರ್ಷಕವಾಗಿ ಮಂಡಿಸುತ್ತದೆ. ಕಟ್ಟಿದ ಶಿವಾಲಯ ಉರುಳಿ ಹೋಗುತ್ತದೆ. ಮನುಷ್ಯ ತಾನೇ ಆಲಯವಾದರೆ ಅದು ಉಳಿಯುತ್ತದೆ.  ‘ಸ್ಥಾವರಕ್ಕುಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ದರ್ಶನ ಮೇಲುನೋಟಕ್ಕೆ ವಿರೋಧಾಭಾಸದಂತೆ ಕಾಣಿಸುತ್ತದೆ. ಸಾಯುವ ಮನುಷ್ಯ ಅಮರ, ಆದರೆ ಶಾಶ್ವತವೆಂಬಂತೆ ಕಾಣುವ ಕಲ್ಲು ಕಟ್ಟಡವೇ ನಶ್ವರವೆಂದು ಈ ವಿರೋಧಾಭಾಸ ಸೂಚಿಸುತ್ತದೆ. ಮಾನವ ದೇಹದ ಆಕೃತಿಯನ್ನೇ ದೇವಾಲಯದ ಆಕೃತಿಯೂ ಹೋಲುತ್ತದೆ: ಹಸ್ತಗಳೆಂದ ಇಕ್ಕೆಲಗಳು, ಪಾದವೆಂಬ ಕಂಭ, ಶಿಖರವೆಂಬ ಗೋಪುರ, ಗರ್ಭಗೃಹವೆಂಬ ಗರ್ಭಗುಡಿ. ಮಾನವ ದೇಹದ ತದ್ರೂಪಾದ ಆಲಯದ ಅರ್ಥ ಕಾಲಾನುಕ್ರಮೇಣ ಅಳಿಯುತ್ತಾ ಬರುತ್ತದೆ. ದೇಹವೇ ದೇಗುಲವಾಗುವ ಮೂಲಕ ಮಾತ್ರ ಅದರ ಮೂಲಾರ್ಥವನ್ನು ಮರಳಿ ಗಳಿಸಬಹುದು ಎಂದು ಈ ವಚನ ಸೂಚಿಸುತ್ತದೆ.

ಕನಕದಾಸರ ಕಾವ್ಯದ ಭತ್ತ –  ರಾಗಿಗಳ ಮುಖಾಮುಖಿಗೆ ಮರಳಿ ಬರೋಣ. ಭತ್ತಕ್ಕೆ ಮಹಾ ಸೊಕ್ಕು. ‘ಹೊಸಮನೆಯ ಪುಣ್ಯಾರ್ಚನೆಗೆ ಮಿಗಿಯೆಸೆವ, ಮದುಮಕ್ಕಳಿಗೆ ಸೇಸೆಗೆ, ವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದರ್ಚನೆಗೆ ಎಸೆವ, ವಿಪ್ರರ ಫಾಲದಲಿ ರಂಜಿಸುವ ಗಂಧಾಕ್ಷತೆಯಹೆನು’ ಎಂದು ಭತ್ತ ಕಂಡು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತದೆ. ಸಿಟ್ಟಾದ ರಾಗಿ ರಾಘವನ ಬಳಿ ಹೋಗಿ ದೂರುತ್ತದೆ. ಮಹರ್ಷಿಗಳ ಸಮ್ಮುಖದಲ್ಲಿ ರಾಘವ ಭತ್ತ ಹಾಗೂ ರಾಗಿಗಳೆರಡನ್ನೂ ಸೆರೆಮನೆಯಲ್ಲಿರಿಸುತ್ತಾನೆ. ಎರಡೂ ಕೆಲ ಕಾಲ ಸೆರೆವಾಸವನ್ನು ಅನುಭವಿಸುತ್ತವೆ. ಕೆಲಕಾಲಾ ನಂತರ ನೋಡಿದರೆ ರಾಗಿಯಿನ್ನೂ ‘ಕಾಂತಿಗೆಡದೆ’ ತಿನ್ನಲು ಲಾಯಕ್ಕಾಗೇ ಇದೆ. ಆದರೆ ಭತ್ತ ತನ್ನ ಸತ್ವವನ್ನೆಲ್ಲ ಕಳೆದುಕೊಂಡುಬಿಟ್ಟಿದೆ. (ವ್ರಿಹಿ ಕರಗಿ ಕಂದಿಹನು ಸೆರೆಯಲಿ). ಆಗ ರಾಗಿಗೆ ರಾಘವ ತನ್ನ ಹೆಸರನ್ನಿಟ್ಟನೆಂದು ಕನಕದಾಸರು ಹೇಳುತ್ತಾರೆ. ಇದು ವ್ಯವಸ್ಥೆಯ ಸೋಲು; ದೇವಾನುದೇವತೆಗಳ ಅರ್ಚನೆಯಲ್ಲಿ ಮಂತ್ರಾಕ್ಷತೆಯಾದ, ಎಲ್ಲ ಕಾಲಕ್ಕೂ ಸಲ್ಲುವೆನೆಂದು ಮೆರೆದ ಅಕ್ಕಿಕಾಳಿನ ಸೋಲು, ಆದರೆ ಹಸಿದ ಜನ ಹಾಗೂ ತುಳಿಯಲ್ಪಟ್ಟ ಜನ, ಉಣ್ಣುವ ರಾಗಿಯ, ಜಂಗಮ, ದೇಸೀ ಧಾನ್ಯದ ಗೆಲುವು.

ಒಂದು ಸಾವಿರ ವರ್ಷಗಳ ಹಿಂದೆ ಪಂಪ ರೂಪಿಸಿದಂಥ ಕೃತಿರಚನೆ, ಶಿಲ್ಪ ಹಾಗೂ ಬಂಧದ ತತ್ವಗಳು ಇಂದಿಗೂ ನಮ್ಮ ಬರವಣಿಗೆಯ ಹಿನ್ನೆಲೆಯಲ್ಲಿವೆ. ಮಾರ್ಗ –  ದೇಸಿಗಳ ಸಂಶ್ಲೇಷಣೆಯೊಂದನ್ನು ಕುರಿತು ಪಂಪ ಅಂದೇ ಹೇಳಿದ್ದ, ಕೃತಿರಚನೆ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು, ಅನೂಚಾನವಾಗಿ ಪಾಲಿಸಿಕೊಂಡು ಬಂದ ಸಂಸ್ಕೃತ ಸಾಹಿತ್ಯ. ‘ಮಾರ್ಗ’ಕ್ಕೆ ಸೇರಿದ್ದು, ಆದರೆ, ಅನಕ್ಷರಸ್ಥರಾದರೂ ಸುಸಂಸ್ಕೃತರಾದ ದೇಸೀಯರಿಂದ ಜೀವಂತವಾಗಿ, ಶಕ್ತವಾಗಿ ಉಳಿದ ಕನ್ನಡ, ‘ದೇಸಿ’. ಒಂದು ಲಿಖಿತ ಪರಂಪರೆಯಿದ್ದರೆ ಇನ್ನೊಂದು ಮೌಖಿಕ ಪರಂಪರೆಗೆ ಸೇರಿದ್ದು. ಒಂದು ಸ್ಥಾವರ; ಇನ್ನೊಂದು ಜಂಗಮ. ಒಂದು ವಿಶ್ವಾತ್ಮಕವಾದ್ದು: ಇನ್ನೊಂದು ಸ್ಥಳೀಯವಾದದ್ದು. ಆದರೆ ಅವೆರಡೂ ಬೆರೆಯಲೇ ಬೇಕಾಯಿತು. ಬೇಂದ್ರೆಯಲ್ಲಿ ಅವು ಬೆಸುಗೆಯರಿಯದ ಹಾಗೆ ಬೆರೆತುಹೋಗಿವೆ. ಅಲ್ಲಿ ದೇಸಿಯದೇ ಮೇಲುಗೈ ಎಂಬ ಮಾತು ಬೇರೆ !

ಒಂದು ಕಾಲಕ್ಕೆ, ಸಾಹಿತ್ಯ ಕೃತಿಯಲ್ಲಿ ಇರಬೇಕಾದ ಅಂಶಗಳನ್ನು ಕುರಿತ ನಿರೀಕ್ಷೆಗಳನ್ನು ರೂಪಿಸುತ್ತಿದ್ದದ್ದು ಸಂಸ್ಕೃತ. ಆದರೆ ಇವತ್ತು ಅವನ್ನು ರೂಪಿಸುತ್ತಿರುವುದು ಯುರೋಪಿಯನ್‌ಸಾಹಿತ್ಯ. ಆದರೆ ನಮ್ಮ ಅತ್ಯಾಧುನಿಕರಾದ ಶಾಂತಿನಾಥ ದೇಸಾಯಿ ಅಥವಾ ಯಶವಂತ ಚಿತ್ತಾಲರಂಥ ಕಾದಂಬರಿಕಾರರಲ್ಲೂ ದೇಸೀ ಅಂಶಗಲೇ ಗೆದ್ದು ನಿಲ್ಲಬಲ್ಲವು !  ಬೇಂದ್ರೆಯಂತೆ ಕಂಬಾರರಲ್ಲೂ ‘ದೇಸೀ’ಯದೇ ವಿಜೃಂಭಣೆ; ಆದರೆ, ಕಂಬಾರರ ‘ದೇಸಿ’ ಯುರೋಪಿಯನ್ ‘ಮಾರ್ಗ’ವನ್ನು ಎಷ್ಟು ಸಂಪೂರ್ಣವಾಗಿ ಜೀರ್ಣಿಸಿಕೊಂಡು ಬಿಟ್ಟಿದೆಯೆಂದರೆ, ಅಲ್ಲಿ ‘ಮಾರ್ಗ’ದ ಗುರುತೂ ಕಾಣುವುದಿಲ್ಲ. ದೇವನೂರು ಮಹಾದೇವರ ಕತೆಗಳಲ್ಲಿ ಜಾನಪದೀಯ ಮತ್ತು ಪೌರಾಣಿಕ ಬಂಧ ಹಾಗೂ ಆಧುನಿಕ ಬೌದ್ಧಿಕ ಶಿಲ್ಪಗಳು ಬಹುಸೂಕ್ಷ್ಮವಾಗಿ ಬೆರೆತು ಹೋಗಿರುವ ರೀತಿ ನೋಡಿದರೆ ಅಲ್ಲೂ ‘ಮಾರ್ಗ’ ಅದೃಶ್ಯವೇ ಎನ್ನುವುದು ಹೊಳೆಯುತ್ತದೆ. ಮಹಾದೇವರ ‘ಒಡಲಾಳ’ ಕತೆಯಲ್ಲಿ ಹಸಿದ ದಲಿತರು ಕತ್ತಲಲ್ಲಿ ಜಮೀನುದಾರರ ಹೊಲದಿಂದ ಕಡಲೆಕಾಯಿ ಕದ್ದುತರುವ ಭಾಗವೊಂದಿದೆ. ಅವರು ಒಂದು ಸಮುದಾಯದಂತೆ ಬೆಂಕಿಯ ಸುತ್ತ ಕೂತು ಕಡಲೆಕಾಯಿ ತಿನ್ನುತ್ತಾ ಸಿಪ್ಪೆಯನ್ನು ಬೆಂಕಿಗೆ ಎಸುಯುತ್ತಾರೆ. ಸಾಕವ್ವನ ನಾಯಕತ್ವದಲ್ಲಿ ಜರಗುವ ಈ ಕ್ರಿಯೆ ಬರುಬರುತ್ತಾ ಯಜ್ಞವೊಂದರ ಸಾಂಕೇತಿಕ ಕ್ರಿಯೆಯಂತೆ ಬೆಳೆಯತೊಡಗುತ್ತಾ, ಉಪನಿಷತ್ತಿನ ‘ಸಹಾನಭುನಕ್ತು, ಸಹವೀರ್ಯ ಕರವಾವಹೈ’ ಎಂಬ ಸಾಲನ್ನು ನೆನಪಿಗೆ ತರುವಂತಿದೆ.

ಕವಿ, ಕತೆಗಾರ, ನಾಟಕಕಾರ ಎಲ್ಲವೂ ಆಗಿರುವ ಲಂಕೇಶರ ಆರಂಭದ ಘಟ್ಟದ ಜೀವತುಂಬಿ ಪುಟಿಯುವ ಕತೆಗಳು ನಗರೀಕೃತ ಸೂಕ್ಷ್ಮ ಪ್ರಜ್ಞೆಯ ಫಲವೆಂಬಂತೆ ಕಾಣುತ್ತಿದ್ದವು. ಆದರೆ ಈಚೆಗೆ ಅವರು ಗ್ರಾಮ ಸಮಾಜದ ದಟ್ಟ ಅನುಭವದ ಜಗತ್ತಿಗೆ ಮರಳ್ಳಿದ್ದಾರೆ. ಒಂದು ದೃಷ್ಟಿಯಿಂದ, ಅವರ ಸಕ್ರಿಯ ರಾಜಕೀಯ ಕಾರ್ಯಕರ್ತನಂತೆಯೂ ಗ್ರಾಮ ಜಗತ್ತಿಗೆ ಮರಳಿದ್ದಾರೆ. ಅವರ ಪ್ರತಿಭೆಯ ಮೂಸೆಯಲ್ಲಿ ಗ್ರಾಮ – ನಗರಗಳು ಪರಸ್ಪರ ಸಂಧಿಸುತ್ತಾ ಅತ್ಯಂತ ಒರಿಜಿನಲ್ ಆದ ಬರವಣಿಗೆಯೊಂದಕ್ಕೆ ಹುಟ್ಟು ನೀಡುತ್ತವೆ. ಜೀವಂತ ವರ್ತಮಾನವನ್ನು ನಿರ್ದಯವಾಗಿ ಗ್ರಹಿಸಬಲ್ಲ ಶಕ್ತಿಯುಳ್ಳ ಬರವಣಿಗೆಯಿದು. ಅವರ ‘ಅವ್ವ’ ಕವಿತೆಯಲ್ಲಿನ ಅವ್ವ ಫಲವತ್ತಾದ ಕಪ್ಪು ನೆಲ. ಒರಟು ಪ್ರೀತಿಯ, ತೀವ್ರ ಭಾವನೆಗಳ ಅವ್ವ ಹಸಿಹಸಿ ಬದುಕಿಗೆ ಬದ್ಧಳಾದ, ಗೊಣಗದೆ ತಣ್ಣಗೆ ಸಾಯಬಲ್ಲ ಹೆಂಗಸು. ಅವಳು ಮಾಗಲು ಭಗವದ್ಗೀತೆಯೇನೂ ಬೇಕಾಗಲಿಲ್ಲ. ಲಂಕೇಶರಿಗಿಂತ ಭಿನ್ನವಾಗಿ ಬರೆಯುವ ಇನ್ನೊಬ್ಬ ಮುಖ್ಯ ಕತೆಗಾರರಾದ ಪೂರ್ಣಚಂದ್ರ ತೇಜಸ್ವಿ ಪಶ್ಚಿಮದ ವಿಚಾರವಾದ ಹಾಗೂ ವೈಜ್ಞಾನಿಕ ತತ್ವಗಳಿಂದ ಪ್ರೇರಣೆ ಪಡೆದು ಕರ್ನಾಟಕದ ಗ್ರಾಮೀಣ ಜಗತ್ತಿನ ಬಗೆಗೆ ಸಾಂಕೇತಿಕವಾಗಿ ಹಾಗೂ ಒಂದು ಬಗೆಯ ನಿಗೂಢ ದೃಷ್ಟಿಕೋನವನ್ನು ಉಳಿಸಿಕೊಂಡು ಬರೆಯುತ್ತಾ ಬಂದಿದ್ದಾರೆ.

ಆಫ್ರಿಕಾ ಮತ್ತು ಲಂಡನ್‌ಗಳಲ್ಲಿ ಇದ್ದು ಬಂದಿರುವ ರಾಮಚಂದ್ರಶರ್ಮ, ಹಾಗೂ ಹೈದರಾಬಾದಿನಲ್ಲಿರುವ ತಿರುಮಲೇಶ್ ತಮ್ಮ ಕವಿತೆಗಳ ಮೂಲಕ ಕನ್ನಡ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಲಿಸಿದ್ದಾರೆ. ವೆಂಕಟೇಶ ಮೂರ್ತಿಯವರ ಸಂವೇದನೆ ನಮ್ಮ ಪ್ರಾಚೀನ ಕವಿಗಳಾದ ಕುಮಾರವ್ಯಾಸ, ಕಾಳಿದಾಸರನ್ನೂ ನಮ್ಮ ಸಮಕಾಲೀನರನ್ನಾಗಿ ಕಾಣುವಂತೆ ಮಾಡಿಬಿಡಬಲ್ಲದು. ನಮ್ಮ ಕಾಲದ ಮುಖ್ಯ ಸಾಹಿತ್ಯ ವಿಮರ್ಶಕರಲ್ಲೊಬ್ಬರಾದ ಕೀರ್ತಿನಾಥ ಕುರ್ತುಕೋಟಿ ತಾವು  ಬೇಂದ್ರೆಯಿಂದ ಪಡೆದ ಒಳನೋಟವನ್ನಾಧರಿಸಿ ಇಡೀ ಕನ್ನಡ ಸಾಹಿತ್ಯವನ್ನು ಜೀವಂತ ಸಾತತ್ಯವುಳ್ಳ ಸಾಹಿತ್ಯವೆಂದು ವ್ಯಾಖ್ಯಾನಿಸಿದ್ದಾರೆ. ಚಂದ್ರಶೇಖರ ಪಾಟೀಲರಲ್ಲಿ ಭಾವಗೀತಾತ್ಮಕತೆ ಹಾಗೂ ಗೇಲಿ ಗುಣಗಳೆರಡೂ ಒಟ್ಟಿಗೇ ಇರಬಲ್ಲವು. ಹೀಗಾಗಿ ಪತ್ರಕರ್ತನ ಸದ್ಯದ ತುರ್ತಿನಿಂದ ಹಿಡಿದು ಆಳವಾದ ಧ್ಯಾನಶೀಲ ಗ್ರಹಿಕೆಯವರೆಗೂ ಅವರು ಸರಾಗವಾಗಿ ಚಲಿಸಬಲ್ಲರು. ಗೋಕಾಕ್‌, ಭೈರಪ್ಪ, ಶಂಕರ ಮೊಕಾಶಿ ಪುಣೆಕರ್ ರಂಥ ಲೇಖಕರು ವೇದ ಹಾಗೂ ಪೌರಾಣಿಕ ಕಾಲದ ಮರುವ್ಯಾಖ್ಯಾನದ ಮೂಲಕ ಸಮಕಾಲೀನ ಸಂದರ್ಭದ ಅರ್ಥವನ್ನರಿಯುವ ಯತ್ನ ಮಾಡುತ್ತಾರೆ.

ಈ ಎಲ್ಲ ಲೇಖಕರ ಸಂದರ್ಭದಲ್ಲೂ ಶಿಲ್ಪವನ್ನು ರೂಪಿಸುವ ಸಣ್ಣ ಪ್ರೇರಣೆಯೊಂದು ‘ಮಾರ್ಗ’ ದಿಂದಲೇ ಹುಟ್ಟಿದರೂ ಬಂಧ ಮಾತ್ರ ‘ದೇಸಿ’ಯೇ. ಆಧುನಿಕ ಭಾರತೀಯ ಕಾವ್ಯಕ್ಕೆ ಕೆಲವು ಶ್ರೇಷ್ಠ ಕವಿತೆಗಳನ್ನು ನೀಡಿರುವ ಅಡಿಗರ ಧಾನ್ಯಶೀಲ ಕವಿತೆಗಳಲ್ಲಿ ವೈದಿಕ ‘ಮಾರ್ಗ’ ಹಾಗೂ ‘ದೇಸಿ’ಯ ಮಣ್ಣಿನ ವಾಸನೆ ಮತ್ತು ಕರಾವಳಿಯ ಕಡಲುಗಳನ್ನು ಬೆಸೆಯಬಲ್ಲ ಮೂಲಭೂತ ಗುಣವೊಂದಿದೆ.

ತಮಿಳುನಾಡು ಅಥವಾ ಆಂಧ್ರಕ್ಕಿಂತ ಭಿನ್ನವಾದ ಕರ್ನಾಟಕದ ರಾಜಕಾರಣ ಇಂದಿಗೂ ಮುಖ್ಯವಾಹಿನಿಯ ರಾಜಕಾರಣ. ಈ ತನಕ ಕರ್ನಾಟಕವನ್ನಾಳಿರುವುವೆಲ್ಲ ಅಖಿಲ ಭಾರತ ಮಟ್ಟದ ಪಕ್ಷಗಳೇ. ರಾಜಕೀಯ ಪಂಡಿತರನ್ನೆಲ್ಲ ನಿಬ್ಬೆರಗಾಗಿಸಿದ ಮಹತ್ವದ ರಾಜಕೀಯ ಬೆಳವಣಿಗೆಯೊಂದು ಕರ್ನಾಟಕದಲ್ಲಿ ನಡೆದಿದ್ದನ್ನು ಇಲ್ಲಿ ದಾಖಲಿಸಬೇಕು. ಇಂದಿರಾಗಾಂಧಿಯ ಹತ್ಯೆಯ ನಂತರ ನಡೆದ ಲೋಕಸಭಾ ಚುಣಾವಣೆಗಳಲ್ಲಿ ರಾಜೀವಗಾಂಧಿಯ ಕಾಂಗೈ ಪಕ್ಷವನ್ನು ಕಳಿಸಿದ ಕರ್ನಾಟಕದ ಜನ ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷವನ್ನು ಆರಿಸಿದರು. ಮಾರ್ಗ –  ದೇಸಿ ತತ್ವಗಳ ಸಂಗಮ ಕರ್ನಾಟಕದ ರಾಜಕೀಯದಲ್ಲೂ ಸಾಧ್ಯವಾಯಿತು ಎಂಬುದಕ್ಕೆ ಇದು ಕೂಡ ಉದಾಹರಣೆ.

ಇದಕ್ಕೂ ಮುನ್ನ, ದೆಹಲಿಯ ಗದ್ದುಗೆ ಮೇಲೆ ಕಣ್ಣಿಟ್ಟ ದೇವರಾಜ ಅರಸು ಕರ್ನಾಟಕವನ್ನಾಳಿದ್ದು ಮಾತ್ರ ರಾಜ್ಯದ ಜಾತೀಯ ರಚನೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವುದರ ಮೂಲಕ. ಹಿಂದೊಮ್ಮೆ ಕೇರಳದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತಾಡುತ್ತ, ಕೇರಳದ ರಾಜಕಾರಣಿಗಳು ವಿಶ್ವಾತ್ಮಕ ‘ಮಾರ್ಗ’ದ ಭಾಷೆಯಾದ ‘ವರ್ಗ’ವನ್ನು ಕುರಿತು ಮಾತನಾಡುತ್ತಿದ್ದರೂ, ‘ದೇಸಿ’ ವಾಸ್ತವದ ಜಾತ್ಯಾಧಾರಿತ ಪಕ್ಷಗಳನ್ನೇ ಅವರು ಕಟ್ಟಿಬೇಕಾಯಿತು ಎಂದು ನಾನು ಹೇಳಿದ್ದೆ. ಆದರೆ, ಜಾತಿ ಪದ್ಧತಿಯ ‘ದೇಸಿ’ ವಾಸ್ತವ ಕುರಿತು ಮಾತಾಡುತ್ತಿದ್ದ ಅರಸು ಹೆಚ್ಚೂ ಕಡಿಮೆ ಅದನ್ನು ‘ವರ್ಗ’ ರಾಜಕಾರಣವನ್ನಾಗಿಯೇ ಪರಿವರ್ತಿಸಿ ಬಿಟ್ಟಿದ್ದರು. ಇದು ಕರ್ನಾಟಕದ ‘ದೇಸಿ’ಶೈಲಿ.

ಹೀಗೆ ಭತ್ತ –  ರಾಗಿ ಹಾಗೂ ಮಾರ್ಗ –  ದೇಸಿಗಳು ಕರ್ನಾಟಕದಲ್ಲಂತೂ ಜೊತೆ ಜೊತೆಗೇ ಬದುಕುತ್ತಾ ಬರಬೇಕಾಯಿತು. ಊಟ ಮಾಡುವ ಮುನ್ನ ಬಾಳೆಲೆಯ ಸುತ್ತ ಮಾಡುವ ‘ಪರಿಸಿಂಚನ’ ಹಾಗೂ ‘ಚಿತ್ರಾಹುತಿ’ಗಳು ‘ಮಾರ್ಗ’ ಪದ್ಧತಿಗೆ ಸೇರಿದವರಾದರೆ ಅದರ ಮೇಲೆ ಬಡಿಸಲಾಗುವ ಆಹಾರ, ಶುದ್ಧ ‘ದೇಸಿ’. ಅದು ಎಷ್ಟರಮಟ್ಟಿಗೆ ‘ದೇಸಿ’ಯೆಂದರೆ ಬ್ರಾಹ್ಮಣರ ಉಪ – ಉಪಜಾತಿಗಳ ಜೊತೆಗೂ ರುಚಿಯೂ ಭಿನ್ನವಾಗುತ್ತಾ ಹೋಗುತ್ತದೆ. ಇದೇ ರೀತಿ ಸ್ಥಾವರ –  ಜಂಗಮಗಳೂ ಒಟ್ಟಿಗೆ ಬದುಕಬೇಕಾಯಿತು. ಹನ್ನರಡನೆಯ ಶತಮಾನದ ವಚನ ಯುಗದಲ್ಲಿ ಘಟ್ಟಿವಾಳಯ್ಯನೆಂಬ ಬಂಡಾಯಗಾರನಿದ್ದ. ಹೆಚ್ಚೂ ಕಡಿಮೆ, ಆ ಕಾಲದ ನಕ್ಸಲೈಟ್ ಅವನು. ವಚನಗಳಲ್ಲಿ ಅವನ ಅಂಕಿತಾಕ್ಷರವುಳ್ಳ ಸಾಲಿನಲ್ಲಿ ‘ಇಲ್ಲ, ಇಲ್ಲ’ ಎಂಬ ಶಬ್ದಗಳಿರುವುದು ಈ ದೃಷ್ಟಿಯಿಂದ ಅರ್ಥಪೂರ್ಣ. ಕೇವಲ ಹೊಟ್ಟೆ ತುಂಬಿಸಿವುದನ್ನೇ ಕಾಯಕವನ್ನಾಗಿರಿಸಿಕೊಂಡಿರುವ ಜಂಗಮರನ್ನು, ಯಾವ ಕೆಲಸಕ್ಕೂ ಬಾರದ ಜಂಗಮರನ್ನು ಬೆಂಬಲಿಸುವ ಬಸವಣ್ಣ ಮತ್ತು ಅವನ ಅನುಯಾಯಿಗಳೂ ಕೂಡ ಭ್ರಷ್ಟ ವ್ಯವಸ್ಥೆಯೊಂದನ್ನು ಹುಟ್ಟುಹಾಕಿದರು ಎಂದು ಅವನು ಕಿಡಿ ಕಾರುತ್ತಾನೆ. ಬಸವಣ್ಣನ ಚಳುವಳಿಯೇ ಇನ್ನೊಂದು ಸ್ಥಾವರ, ಅಂದರೆ, ಯಥಾಸ್ಥಿತಿಯಾಗಿ ಬಿಟ್ಟಿದೆಯೆಂಬುದು ಅವನ ಸಿಟ್ಟಿಗೆ ಕಾರಣ. ಆದರೆ ಯಾವ ಸಂಘಟನೆಯನ್ನೂ ಒಲ್ಲದ ಆಧ್ಯಾತ್ಮಿಕ ಏಕಾಂಗಿಯಾದ, ಅವಧೂತ ಅಲ್ಲಮಪ್ರಭು ಅವನೊಡನೆ ವಾದಿಸುತ್ತಾ, ‘ಸಂಘವೇ ಇಲ್ಲದೆ (ಸಮಯ) ನೀನು ಬದುಕುವುದು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾನೆ. ‘ಬೌದ್ಧರ ‘ಸಂಘ’ದಂತೆ ಜಂಗಮರ ಸಂಘ ಕೂಡ ಒಂದು ಅಗತ್ಯ. ಅದರಲ್ಲಿ ದೌರ್ಬಲ್ಯಗಳಿರಬಹುದೆಂಬ ಮಾತು ಬೇರೆ’ ಎನ್ನುವ ಅಲ್ಲಮ ಹೆಚ್ಚೂ ಕಡಿಮೆ  ಲೆನ್ನಿನ್ನನಂತೆಯೇ ಪಕ್ಷದ ಚಾರಿತ್ರಿಕ ಅಗತ್ಯ ಕುರಿತು ಮಾತನಾಡುತ್ತಾನೆ. ಅಂದರೆ, ಸ್ಥಾವರದ ಲೆನಿನ್ನಂತೆಯೇ ಪಕ್ಷದ ಚಾರಿತ್ರಿಕ ಅಗತ್ಯ ಕುರಿತು ಮಾತನಾಡುತ್ತಾನೆ. ಅಂದರೆ, ಸ್ಥಾವರದ ಸ್ಥಿರತೆಯನ್ನು ಜಂಗಮ ಗಳಿಸಿಕೊಳ್ಳಬೇಕಾಗಿರುವಂತೆ, ಜಂಗಮಕ್ಕಿರುವ ಚಲನಶೀಲ ಜೀವಂತಿಕೆಯನ್ನು ಸ್ಥಾವರ ತನ್ನದಾಗಿಸಿಕೊಳ್ಳಬೇಕಾಗುತ್ತದೆ. ವ್ಯವಸ್ಥೆ ಹಾಗೂ ಬಂಡವಾಳಗಳ ನಡುವಣ ಸಂಬಂಧ ಕುರಿತಂತೆ ಹೊಸ ಜನಾಂಗದ ಕವಿ ಶಿವಪ್ರಕಾಶರ ಸುಂದರ ಪದ್ಯವೊಂದಿದೆ. ಬಿಜ್ಜಳನ ಅಧಿಕಾರ ಕೇಂದ್ರ ಹಾಗೂ ಬಸವಣ್ಣನ ‘ಮಹಾಮನೆ’ಗಳನ್ನು ಈ ಪದ್ಯ ಮುಖಾಮುಖಿಯಾಗಿಸುತ್ತದೆ. ಕಾಲಕ್ರಮೇಣ ಬಸವಣ್ಣನ ‘ಮಹಾಮನೆ’ಯೇ ಒಂದು ವ್ಯವಸ್ಥೆಯಾಗಿ ಬಿಡುವ ವ್ಯಂಗ್ಯವನ್ನು ಈ ಪದ್ಯ ಹಿಡಿದಿಡುತ್ತದೆ. ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಯೊಂದನ್ನು ಮಹಾಮನೆಯ ಕಸದ ತೊಟ್ಟಿಗಳಲ್ಲಿ ಬಿದ್ದ ಎಂಜಲೆಲೆಗಳನ್ನು ನೆಕ್ಕುವ ಮರುಳ ಶಂಕರದೇವನ ಚಿತ್ರ ಮಂಡಿಸುತ್ತದೆ. ಶಿವ ಧಾನ್ಯದಲ್ಲಿ ಮುಳುಗಿಹೋಗಿ ತನ್ನ ಮನೆಯ ಹೊರಗಿರುವ ಜೀವಂತ ಶಿವನನ್ನೇ ಕಡೆಗಣಿಸಿರುವ ಬಸವಣ್ಣನನ್ನು ಅಲ್ಲಮ ಅಣಕಿಸುತ್ತಾನೆ. ‘ಸದಾ ನಿನ್ನ ಹಿತ್ತಲಲ್ಲೇ ಬಿದ್ದಿದ್ದರೂ ನಿನ್ನ ಕಣ್ಣಿಗೆ ಕಾಣದ ಮರುಳ ಶಂಕರದೇವ ಇವನು’ ಎಂದು ತಿವಿಯುತ್ತಾನೆ. ಅಲ್ಲಮನ ಮಾತಿಗೆ ನಾಚಿ ಕುಗ್ಗುವ ಬಸವಣ್ಣನಿಗೆ ತನ್ನ ತಪ್ಪಿನ ಅರಿವಾಗತೊಡಗುತ್ತದೆ.

ಭತ್ತ –  ರಾಗಿ, ಮಾರ್ಗ –  ದೇಸಿ ಹಾಗೂ ಸ್ಥಾವರ –  ಜಂಗಮಗಳು ಕರ್ನಾಟಕದ ನಿರಂತರ ವಿಕಾಸದ ದ್ವಂದ್ವ ಆದರ್ಶಗಳನ್ನು ಪ್ರತಿನಿಧಿಸುವ ತತ್ವಗಳಾಗಿಯೇ ಉಳಿಸಿಕೊಂಡು ಬಂದಿವೆ ಎಂಬುದಕ್ಕೆ ಸಂಗೀತ ಕ್ಷೇತ್ರದಲ್ಲೂ ಪುರಾವೆ ಇದೆ. ಕೇವಲ ಸಾಹಿತ್ಯ ಹಾಗೂ ರಾಜಕಾರಣಗಳಲ್ಲಿ ಮಾತ್ರವಲ್ಲ, ಸಂಗೀತದ ಸಂದರ್ಭದಲ್ಲೂ ಕರ್ನಾಟಕವೊಂದು ಮಿನಿಭಾರತವೇ. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತಗಳೆರಡಕ್ಕೂ ದೊಡ್ಡ ಕೊಡುಗೆ ನೀಡಿರುವ ನಮ್ಮ ಸಂಗೀತಗಾರರು ತಮ್ಮ ಕಲೆಯ ‘ಮಾರ್ಗ’ ಪರಂಪರೆ ಕನ್ನಡದ ‘ದೇಸಿ’ ರಚನೆಗಳೊಂದಿಗೆ ಬೆರೆಯುವಂತೆ ಮಾಡಿದ್ದಾರೆ. ಭೀಮಸೇನ ಜೋಷಿಯವರು ಹಾಡುವ ದಾಸವಾಣಿ ಅಥವಾ ಮಲ್ಲಿಕಾರ್ಜುನ ಮನ್ಸೂರರು ಹಾಡುವ ವಚನಗಳನ್ನು ಕೇಳಿದರೆ ಈ ಮಾತಿನ ಅರ್ಥ ಸ್ಪಷ್ಟವಾಗುತ್ತದೆ. ಮಧ್ಯಪ್ರದೇಶದಲ್ಲಿ ನೆಲಸಿ, ಜಾನಪದೀಯ ರಾಗಗಗಳನ್ನು ಹಿಂದೂಸ್ತಾನಿಯೊಂದಿಗೆ ಬೆಸೆಯುತ್ತಾ ಹಿಂದೂಸ್ತಾನಿ ಸಂಗೀತವನ್ನೇ ಸ್ಪಲ್ಪಮಟ್ಟಿಗೆ ರೂಪಾಂತರಿಸಿರುವ ಕುಮಾರಗಂಧರ್ವರ ಪ್ರಯೋಗಗಳು ಕೂಡ ಕರ್ನಾಟಕದ ಈ ಮೂಲರೂಪೀ ಸಂವೇದನೆಗೆ ತಕ್ಕಂತೆಯೇ ಇವೆ.

ಇದೇ ಪರಂಪರೆಯಲ್ಲಿ ನಮ್ಮ ಸರೋದ್‌ವಾದಕ ರಾಜೀವ ತಾರಾನಾಥರೂ ಇದ್ದಾರೆ. ಸಂಗೀತ ವಿಮರ್ಶಕರು ಗುರುತಿಸುವಂತೆ ರಾಜೀವರ ಸರೋದ್‌ವಾದನದಲ್ಲಿ ಅವರ ಗುರು ಅಲಿ ಅಕ್ಬರ್ ಖಾನ್‌ರ ತೀವ್ರತೆಯ ಛಾಯೆಯ ಜೊತೆಜೊತೆಗೇ ಕರ್ನಾಟಕದ ಸಂಗೀತದ ಶಾಸ್ತ್ರೀಯ ಒಗರು ಕೂಡ ಕಾಣತ್ತಿರುತ್ತದೆ. ಹೀಗಾಗಿ ಕನ್ನಡಿಗರ ‘ಮಾರ್ಗ’ ಪರಂಪರೆಯ ದೊರೆಸ್ವಾಮಿ ಅಯ್ಯಂಗಾರರ ಶುದ್ಧ ವೀಣಾವಾದನವನ್ನು ಆಳವಾಗಿ ಪ್ರೀತಿಸುವ ಕನ್ನಡಿಗರ ಕಿವಿಗಳಿಗೆ ರಾಜೀವರ ಸರೋದ್ ಹೊಸತೊಂದು ದನಿಯಾಗಿ ಕೇಳಿಸಲಾರಂಭಿಸುತ್ತದೆ. (ಹಾಗೆ ನೋಡಿದರೆ, ವೀಣೆ, ಮೈಸೂರು ಮಲ್ಲಿಗೆ  ಹಾಗೂ ವೀಳೆಯದೆಲೆ, ಈ ಮೂರೂ ಹಳೆಯ ಮೈಸೂರು ಪ್ರಾಂತ್ಯದ ಜನರ ಆರೋಗ್ಯಕರ ಸೌಂದರ್ಯ ಪ್ರಜ್ಞೆಗೆ ಅತ್ಯಂತ ಪ್ರಿಯವಾದ ಅಂಶಗಳು). ನಾನು ಈ ಹಿಂದೆ ಹೇಳಿದ ಬೆಸುಗೆಯ ಇನ್ನೊಂದು ವಿಶಿಷ್ಟ ಉಹಾಹರಣೆಯೆಂದರೆ, ಇಸ್ಲಾಂ ಹಾಗೂ ವೀರಶೈವ ದರ್ಶನಗಳು ಬೆರೆಯುವ ಶಿಶುನಾಳ ಶರೀಫರ ಕಾವ್ಯ. ಇವತ್ತಿಗೂ ಕರ್ನಾಟಕದ ಜನಪ್ರಿಯ ಸಂಗೀತದ ಕೇಳುಗರಿಗೆ ಪ್ರಿಯವಾದ ಕವಿ ಎಂದರೆ ಶರೀಫ. ಶರೀಫರ ಅನುಭಾವೀ ಕವಿತೆಯೊಂದರಲ್ಲಿ ಗಿರಣಿಯೊಂದರ ಪ್ರತಿಮೆ ಪ್ರತ್ಯಕ್ಷವಾಗುತ್ತದೆ. ಆದರೆ, ಅದೊಂರು ನೇತ್ಯಾತ್ಮಕ ಅರ್ಥದ ಪ್ರತಿಮೆಯಾದರೆ ಅವನು ಆರಾಧಿಸುವ ಭವ್ಯತೆಯ ಒಂದು ಭಾಗವೇ ಆಗಿ ಬಿಡುತ್ತದೆ.

ಕನ್ನಡ ಪ್ರತಿಭೆ ‘ಮಾರ್ಗ’ದಿಂದ ‘ದೇಸಿ’ಗೆ ಚಲಿಸುತ್ತಿರುತ್ತದೆ. ಯಕ್ಷಗಾನದಲ್ಲಿ ‘ದೇಸಿ’ಯೇ ‘ಮಾರ್ಗ’ವಾಗಿ ಬಿಡುತ್ತದೆ. ಹಾಗೆಯೇ ಬಿ.ವಿ.ಕಾರಂತರ ಕಲಾಪ್ರಯಾಣವನ್ನೇ ಗಮನಿಸಿ. ಅವರು ಬೆಳೆದದ್ದು ಗುಬ್ಬಿ ವೀರಣ್ಣನವರ ವೃತ್ತಿರಂಗಭೂಮಿಯಲ್ಲಿ, ಆದರೆ ತಮ್ಮ ಕಲೆಯನ್ನು ರೂಪಿಸಿಕೊಂಡದ್ದು ಮಾತ್ರ ಹಿಂದಿ ರಂಗಭೂಮಿ, ಯಕ್ಷಗಾನ, ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಹಾಗೂ ಜಾನಪದ ನೃತ್ಯಗಳ ಮೂಲಕ. ಇವೆಲ್ಲದರ ಫಲವಾಗಿ ಅವರ ನಿರ್ದೇಶನದಲ್ಲಿ ಒಬ್ಬ ಶೇಕ್ಸ್‌ಪಿಯರ್ ಅಥವಾ ಬ್ರೆಕ್ಟ್ ಶುದ್ಧ ಕನ್ನಡ ಅನುಭವವೇ ಆಗಿಬಿಡಬಲ್ಲ.

ಮಲೆನಾಡಿನ ಪುಟ್ಟ ಹಳ್ಳಿಯೊಂದು ಹಲವು ಸಂಸ್ಕೃತಿಗಳು ಸಂಧಿಸುವ ಫಲವತ್ತಾದ ಸ್ಥಳವಾಗಿದೆ. ಹೆಗ್ಗೋಡಿನಂಥ ಹಳ್ಳಿಯೊಂದಕ್ಕೆ ಇಂಥ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾದದ್ದು ಕೆ.ವಿ.ಸುಬ್ಬಣ್ಣನಿಂದಾಗಿ. ಒಂದು ರಂಗ ಚಳುವಳಿಯನ್ನೇ ಹುಟ್ಟು ಹಾಕಿ ರಾಷ್ಟ್ರದ ಗಮನ ಸೆಳೆದಿರುವ ಈ ಪುಟ್ಟ ಹಳ್ಳಿಯಲ್ಲೊಂದು ಫಿಲ್ಮ ಸೊಸೈಟಿ ಇದೆ. ಸಂಜೆ ಇಲ್ಲಿ ಸೇರುವ ಹಳ್ಳಿಗರು ಸತ್ಯಜಿತ್‌ರಾಯ್, ಕುರಸೊವ, ಹಾಗೂ ಬರ್ಗಮನ್‌ರಂಥ ನಿರ್ದೇಶಕರ ಸಿನಿಮಾಗಳನ್ನು ಚರ್ಚಿಸುತ್ತಾರೆ. ಪ್ರಸನ್ನರಂಥ ರಂಗನಿರ್ದೇಶಕ ತಮ್ಮ ವಿಶಿಷ್ಟವಾದ ಹಾಗೂ ಪ್ರಗತಿಪರವಾದ ಪ್ರತಿಭಾಶಕ್ತಿಯ ಮೂಲಕ ನಿಜವಾದ ಹೊಸತು ಹಾಗೂ ನಿಜವಾದ ಹಳೆಯದನ್ನು ಸಂಧಿಸುವಂತೆ ಮಾಡಿಬಿಡುತ್ತಾರೆ. ಅತ್ತ ಸಿನಿಮಾ ರಂಗದಲ್ಲಿ, ಗುಬ್ಬಿವೀರಣ್ಣ ಕಂಪನಿಯ ಶಿಶುವಾದ ರಾಜಕುಮಾರ್‌ಪುರಾಣಗಳ ಲೋಕ ಹಾಗೂ ಆಧುನಿಕ ಮಧ್ಯವರ್ಗದ ಸಮಾಜಗಳೆರಡೆ ನಡುವೆ ಸಲೀಸಾಗಿ ಚಲಿಸುತ್ತಿರುತ್ತಾರೆ.

ಕನ್ನಡ ರಂಗಭೂಮಿಯಂತೆ ಕನ್ನಡ ಸಿನಿಮಾ ಕೂಡ ರಾಷ್ಟ್ರವೇ ತನ್ನತ್ತ ನೋಡುವಂತೆ ಮಾಡಿದೆ. ಕನ್ನಡ ಸಿನಿಮಾದ ಯೂನಿವರ್ಸಲ್ ಗುಣವಿರುವುದೇ ಅದು ಮೂರ್ತ ಪ್ರಾದೇಶಿಕ ವಾಸ್ತವಕ್ಕೆ ಆಳವಾಗಿ ಬದ್ಧವಾಗಿರುವುದರಲ್ಲಿ. ಪಟ್ಟಾಭಿರಾಮರೆಡ್ಡಿಯವರ ಸಂಸ್ಕಾರದಿಂದ ಶುರುವಾದ ಕನ್ನಡ ಹೊಸ ಅಲೆಯ ಸಿನಿಮಾ ಘಟಶ್ರಾದ್ಧ, ಹಾಗೂ ತಬರನ ಕತೆಗಳೆರಡಕ್ಕೂ ಸ್ವರ್ಣಕಮಲ ಪಡೆದ, ಇಂಡಿಯಾದ ಕಿರಿಯ ನಿರ್ದೇಶಕರಲ್ಲೊಬ್ಬರಾದ ಗಿರೀಶ್ ಕಾಸರವಳ್ಳಿಯವರಲ್ಲಿ ಮುಂದುವರೆದಿದೆ. ತಮಿಳು ಕನ್ನಡಿಗ ಎಂ.ಎಸ್‌.ಸತ್ಯು ಕನ್ನಡದಲ್ಲಿ ಬರದಂಥ ಸಿನಿಮಾಗಳನ್ನು ಮಾಡಿರುವುದರ ಜೊತೆಗೇ ಭಾರತ ವಿಭಜನೆಯ ಕಾಲದ ಹಿಂದೂ – ಮುಸ್ಲಿಮರ ಸಂಘರ್ಷವನ್ನು ತುಂಬ ಎದೆಗಾರಿಕೆಯಿಂದ ಶೋಧಿಸಿರುವ ಗರಂಹವಾದಲ್ಲಿ ಆಗ್ರಾದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಕನ್ನಡದ ಅನಂತನಾಗ್ ಹಿಂದಿ ಸಿನಿಮಾರಂಗದಲ್ಲೂ ಜನಪ್ರಿಯ ನಟನಾಗಿದ್ದರೆ, ಶಂಕರನಾಗ್‌ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಚಿತ್ರಿಸಿದ ಮಾಲ್ಗುಡಿ ಡೇಸ್ ಅಂತರ ರಾಷ್ಟ್ರೀಯ ಗಮನವನ್ನೂ ಸೆಳೆದುಕೊಂಡಿದೆ.

ಕನ್ನಡ ಸಂವೇದನೆ ಇಂಗ್ಲಿಷಿನಲ್ಲೂ ಅಭಿವ್ಯಕ್ತಿಗೊಂಡಿದೆ. ಆರ್.ಕೆ.ನಾರಾಯಣರ ಮಾಲ್ಗುಡಿ, ರಾಜಾರಾಯರ ಕಾಂತಾಪುರ, ಏ.ಕೆ.ರಾಮಾನುಜನ್ನರ ಇಂಗ್ಲಿಷ್‌ಕವಿತೆಗಳು ಹಾಗೂ ಅನುವಾದಗಳನ್ನು ಗಮನಿಸಿದರೆ ಮೂಲತಃ ಕನ್ನಡವೇ ಆದ ಅನುಭವಗಳು ಹಾಗೂ ಸರಕಗಳು ಇಂಗ್ಲಿಷ್‌ಭಾಷೆಯೊಡನೆ ಸ್ನೇಹ ಬೆಳೆಸಿ ಪುನರ್‌ಸೃಷ್ಟಿಗೊಂಡಿರುವ ಬಗೆಯಿದೆಂಬುದರ ಅರಿವಾಗುತ್ತದೆ. ಐರ್ಲೆಂಡಿನ ಐಡೆಂಟಿಟಿಗಾಗಿ ತೀವ್ರವಾಗಿ ಹಂಬಲಿಸುವ ಯೇಟ್ಸ್ ಯುರೋಪಿನ ಮುಖ್ಯವಾಹಿಸಿನಿಯ ಭಾಗವೂ ಆಗಿದ್ದಾನೆ. ನಮ್ಮ ಲೇಖಕರೂ ಹಾಗೆಯೇ. ಪಂಪನಿಂದ ಬೇಂದ್ರೆ, ಕುವೆಂಪು, ಕಾರಂತ ಹಾಗೂ ಈಚಿನ ಮುಖ್ಯ ಬರಹಗಾರರವರೆಗೂ ಯಾರು ಇದಕ್ಕೆ ಹೊರತಲ್ಲ.

ನಮ್ಮ ವಿಮರ್ಶಕರ ಕಾಳಜಿಯೂ ಇದೇ. ಎ.ಆರ್.ಕೃಷ್ಣಶಾಸ್ತ್ರಿಗಳು ಬಂಕಿಮಚಂದ್ರರನ್ನು ಕುರಿತು ಹಾಗೂ ಸಂಸ್ಕೃತ ನಾಟಕಕಾರರನ್ನು ಕುರಿತು ತುಂಬ ಸೊಗಸಾಗಿ ಬರೆದಿದ್ದಾರೆ. ಎಂ.ಜಿ.ಕೃಷ್ಣಮೂರ್ತಿ, ಎಫ್‌.ಆರ್.ಲೀವಿಸ್ಸಿನ ಪ್ರಭಾವವನ್ನು ಅತ್ಯಂತ ಸೃಜನಶೀಲವಾಗಿ ಕನ್ನಡಕ್ಕೂ ತಂದರು. ಡಾ.ಆಮೂರರು ಕನ್ನಡ ವಿಮರ್ಶೆಗೆ ಸಾರವತ್ತಾದ ಅಕಡೆಮಿಕ್‌ಶಿಸ್ತಿನ ಗುಣ ತಂದವರು. ಕೀರ್ತಿನಾಥ ಕುರ್ತುಕೋಟಿ ಪ್ರಾಯಶಃ ನಮ್ಮ ಕಾಲದಲ್ಲಿ ಭಾರತದ ದೊಡ್ಡ ಸಂಸ್ಕೃತ ಕ್ಲಾಸಿಕಲ್‌ಸಂವೇದನೆ ಕನ್ನಡದ ಜೊತೆ ಇವರಲ್ಲಿ ಕಸಿಗೊಂಡಿದೆ. ಜಿ.ಎಚ್.ನಾಯಕ, ಗಿರಡ್ಡಿ ಗೋವಿಂದರಾಜರಂಥವರು ಕನ್ನಡ ಪರಂಪರೆಯಲ್ಲಿ ಬೇರುಬಿಟ್ಟ ನವ್ಯರು. ಮಾಸ್ತಿಯಂಥವರು ವಾಲ್ಮೀಕಿ ಹಾಗೂ ಗಯಟೆ ಇಬ್ಬರನ್ನೂ ಕುರಿತು ಪ್ರೀತಿಯಿಂದ ಮಾತನಾಡಬಲ್ಲವರಾಗಿದ್ದರು. ಯುರೋಪಿಯನ್‌ಹಾಗೂ ಕನ್ನಡದ ತಾತ್ವಿಕ ದರ್ಶನಗಳ ಡಿ.ಆರ್.ನಾಗರಾಜ್, ಕೆ.ವಿ.ನಾರಾಯಣ, ರಾಜಶೇಖರ್, ಹಾಗೂ ಕಿ.ರಂ.ನಾಗರಾಜರಂಥವರು ತಮ್ಮದೇ ಆದ ಸ್ವತಂತ್ರ ಅಸ್ತಿತ್ವವೊಂದರ ಹುಡುಕಾಟದಲ್ಲಿರುವವರು. ನಮ್ಮ ಮೇಜರ್ ನಾಟಕಕಾರರಾದ ಶ್ರೀರಂಗರು ಸಂಸ್ಕೃತ ಪಂಡಿತರೂ, ಆಧುನಿಕ ವಿಚಾರವಾದಿಯೂ ಆಗಿದ್ದವರು. ಧಾರವಾಡದ ಪ್ರಶಾಂತಮಾಯೆ ಬೇಂದ್ರೆಯವರ ವಿಚಾರತೀತ ಅನುಭವವನ್ನೂ, ಶಂ.ಬಾ.ಜೋಷಿಯವರ ವೈಚಾರಿಕ ಪಾಂಡಿತ್ಯವನ್ನೂ ಪೋಷಿಸಿಕೊಂಡು ಬಂದಿತು.

ಪ್ರತಿ ಕನ್ನಡ ಲೇಖಕನಲ್ಲೂ ಹುದುಗಿರುವ ಜೀರ್ಣಾಗ್ನಿ ಹಲವು ಮೂಲಗಳಿಂದ ಅವನಿಗೆ ಒದಗುವ ಅನುಭವಗಳನ್ನು ಜೀರ್ಣಿಸಿ ರೂಪಾಂತರಿಸುತ್ತಿರುತ್ತದೆ. ಹಿಂದೆ, ಸಂಸ್ಕೃತದ ‘ಮಾರ್ಗ’ ಕನ್ನಡದ ‘ದೇಸಿ’ ಮೌಖಿಕ ಪರಂಪರೆಯ ಜೊತೆಗೆ ಅನುಸಂಧಾನ ಮಾಡಿಕೊಳ್ಳಬೇಕಾಗಿತ್ತು. ಆದರೆ ಇಂದಿನ ಕನ್ನಡ ಲೇಖಕನ ‘ಅಗ್ನಿ’ ಇಂಗ್ಲಿಷ್. ಫ್ರೆಂಚ್ ಅಥವಾ ಸ್ಪ್ಯಾನಿಷ್ ಪರಂಪರೆಗಳ ಜೊತೆಜೊತೆಗೇ, ಇಂದಿಗೂ ಜೀವಂತವಾಗಿರುವ ಗ್ರಾಮೀಣ ಕರ್ನಾಟಕದ ಮೌಖಿಕ ಪರಂಪರೆಗಳನ್ನೂ, ಜೊತೆಗೆ ಸಂಸ್ಕೃತವನ್ನೂ ಜೀರ್ಣಿಸಿಕೊಳ್ಳಬೇಕಾಗಿದೆ. ಹನ್ನರಡನೆಯ ಶತಮಾನದ ಸಮಾಜೋಸಾಂಸ್ಕೃತಿಕ ಕ್ರಾಂತಿ ಬದುಕಿನ ಎಲ್ಲ ಮೂಲೆಗಳ ಲೇಖಕರನ್ನೂ ಕನ್ನಡಕ್ಕೆ ಕರೆತಂದಿತು. ಉದಾಹರಣೆಗೆ, ಆ ಕಾಲದ ವಚನಕಾರ್ತಿಯರಲ್ಲೊಬ್ಬಳಾದ ಸೂಳೆ ಸಂಕವ್ವೆ ಶಿವನನ್ನು ‘ನಿರ್ಲಜ್ಜೇಶ್ವರ’ ಎಂದು ಕರೆದದ್ದನ್ನು ಇಲ್ಲಿ ನೆನೆಯಬಹುದು. ಇಂದು, ಎಲ್ಲ ಹಿಂದುಳಿದ ಜಾತಿಗಳ ಲೇಖಕರೂ ಈವರೆಗೆ ಕನ್ನಡ ಸಾಹಿತ್ಯ ಹಿಂದೆಂದೂ ಕಾಣದ ಅನುಭವಗಳನ್ನೂ ಕುರಿತು ಬರೆಯುತ್ತಾರೆ.

ಕನ್ನಡದ ‘ದೇಸಿ’ ಮೌಖಿಕ ಜಾನಪದ ಸಾಹಿತ್ಯ, ಅಖಿಲ ಭಾರತೀಯವಾದ ‘ಮಾರ್ಗ’ ಸಾಹಿತ್ಯದ ಲೋಕದರ್ಶನಕ್ಕೆ ಪೂರಕವಾಗಿ ತನ್ನದೇ ಆದದ್ದೊಂದನ್ನು ಸೇರಿಸುತ್ತಲೇ ಬಂದಿದೆ. ರಾಮಾಯಣದ ಅಹಲ್ಯೆ ಇಂದ್ರನೊಡನೆ ಮಲಗುವುದು ಅವನು ದೇವರಾಜನೆಂಬ ಕುತೂಹಲದಿಂದಾಗಿ; ಕಟ್ಟುನಿಟ್ಟಾದ ನೇಮನಿಷ್ಠೆಗಳ ತನ್ನ ಋಷಿಪತಿಯನ್ನು ಕುರಿತಂತೆ ಅವಳೊಳಗಿನ ಹೆಣ್ಣಿನ ಅತೃಪ್ತಿಯಿಂದಾಗಿ. ಅದರ ಫಲವಾಗಿ ಶಾಪಕ್ಕೆ ತುತ್ತಾದ ಅವಳು ಕಲ್ಲಾಗುತ್ತಾಳೆ. ಆದರೆ ಅಹಲ್ಯೆಯ ಕತೆಗೆ ಪೂರಕವಾಗಿಯೇ ಇರುವಂತೆ ಕಾಣುವ ಕನ್ನಡ ಜಾನಪದ ಕತೆಯೊಂದರಲ್ಲಿ ಪಾಪಪ್ರಜ್ಞೆಯ ಮಡಿಭಾವನೆಯ ಸುಳಿವೇ ಇಲ್ಲ.

ಇದು ಕೂಡ ಗಂಡನಿಂದ ಉಪೇಕ್ಷೆಗೊಳಗಾದ ಹೆಣ್ಣಿನ ಕತೆಯೇ. ಹೆಂಡತಿಯನ್ನು ಮನೆಯಲ್ಲಿ ಕೂಡಿಹಾಕಿ ಪ್ರೇಯಸಿಯ ಜೊತೆ ರಾತ್ರಿ ಕಳೆಯಲು ಹೋಗುವ ಗಂಡ. ಅವನ ಮನೆಯ ಹಿತ್ತಲಲ್ಲೇ ಮನೆ ಮಾಡಿರುವ ಸರ್ಪಕ್ಕೆ ಅವನ ಹೆಂಡತಿಯನ್ನು ಕುರಿತು ಮೋಹ. ರಾತ್ರಿ ಆತ ಹೊರಹೊರಟ ಕೂಡಲೇ ಸರ್ಪ ಅವನ ವೇಷ ಧರಿಸಿ ಮನೆಯೊಳಗಡಿಯಿಡುತ್ತದೆ. ಒಂದು ದೃಷ್ಟಿಯಿಂದ ಆ ಹೆಂಗಸಿಗೆ ಇದು ಗೊತ್ತಿದ್ದೂ ಗೊತ್ತಿಲ್ಲ. ತನ್ನ ಗಂಡ ಬೆಳಗಿನ ಹೊತ್ತು ವರ್ತಿಸುವ ಬಗೆಯೇ ಬೇರೆ, ರಾತ್ರಿಯ ಬಗೆಯೇ ಬೇರೆ ಎಂದು ಅವಳು ಬೆರಗಾಗುತ್ತಾಳೆ. ಕೆಲದಿನಗಳಲ್ಲೆ ಬಸಿರಾಗುತ್ತಾಳೆ.

ಸಿಟ್ಟಿಗೆದ್ದ ಗಂಡ ಊರ ಹಿರಿಯರನ್ನು ಕರೆಸಿ ತನ್ನ ಹೆಂಡತಿ ಪರಿಶುದ್ಧಳಾಗಿದ್ದರೆ ಸರ್ಪವನ್ನು ಕೈಯಲ್ಲಿ ಹಿಡಿದು ಪ್ರಮಾಣ ಮಾಡಲೆನ್ನುತ್ತಾನೆ. ಅವಳ ಪ್ರೇಮಿ ಸರ್ಪ ಒಲಿಯುತ್ತದೆ. ಊರ ಹಿರಿಯರು ಹಾಗೂ ತನ್ನ ಗಂಡ ನೋಡುನೋಡುತ್ತಿದ್ದಂತೆ ಸರ್ಪವನ್ನು ಕೈಯಲ್ಲಿ ಹಿಡಿದು ನಿಲ್ಲುತ್ತಾಳೆ. ಈ ತನಕ ತನ್ನ ಜೀವನದಲ್ಲಿ ತಾನು ಹಿಡಿದಿರುವ ತನ್ನ ಗಂಡನ ಕೈಯನ್ನು ಹಾಗು ಈ ಹಾವನ್ನು ಮಾತ್ರ ಎಂದು ಘೋಷಿಸುತ್ತಾಳೆ. ಎಂಥ ಜಾಣತನದ, ಆದರೆ ಎಷ್ಟು ಸತ್ಯವಾದ ಮಾತು ! ಗಂಡ ಸುಮ್ಮನಾಗಲೇಬೇಕಾಗುತ್ತದೆ. ಕಾಲಕ್ರಮೇಣ ಅವಳು ಗಂಡು ಮಗುವೊಂದನ್ನು ಹಡೆದು ಸಂತೋಷದಿಂದಿದ್ದಾಳೆ. ಒಮ್ಮೆ ಅವಳ ಗಂಡನ ಪ್ರೇಯಸಿ ಅವಳಲ್ಲಿಗೆ ಬಂದು ಒಂದು ದಿನ ಮಟ್ಟಿಗೆ ಆ ಮಗುವನ್ನು ತಾನಿರಿಸಿಕೊಳ್ಳುವೆನೆಂದು ಅವಳನ್ನು ಕೇಳಿಕೊಳ್ಳುತ್ತಾಳೆ. ಗೆಲುವಿನ ಸಂಭ್ರಮದಲ್ಲಿರುವ ಈ ಹೆಣ್ಣು ತನ್ನ ಮಗುವಿಗೆ ಚಿನ್ನಾದಾಭರಣಗಳನ್ನು ತೊಡಿಸಿ ಮಾತ್ರ ಒಂದು ದಿನದ ಮಟ್ಟಿಗೆ ಮಗುವನ್ನು ನಿನ್ನಲ್ಲಿಗೆ ಕಳಿಸುವೆನೆನ್ನುತ್ತಾಳೆ. ಜೊತೆಗೆ, ಮಗುವನ್ನು ತನಗೆ ಹಿಂದಿರುಗಿಸುವಾಗ ಅದರ ತೂಕ ಒಂದು ತೊಲ ಕಡಿಮೆಯಾದರೂ ಆ ಉಪಪತ್ನಿ ತನ್ನ ದಾಸಿಯಾಗಬೇಕೆಂಬ ಷರತ್ತನ್ನೂ ಒಡ್ಡುತ್ತಾಳೆ. ಮತ್ತೆ, ಪ್ರೇಮಿ ಸರ್ಪದ ಆಟದಿಂದಾಗಿ ಆ ಉಪಪತ್ನಿ ಈ ಹೆಣ್ಣಿನ ದಾಸಿಯಾಗಬೇಕಾಗುತ್ತೆ.

ಈ ಜಾನಪದ ಕತೆಯ ಅಹಲ್ಯೆಗೆ ಇನ್ನೇನು ತಾನೆ ಬೇಕು? ತನ್ನ ಪಾಲಿಗೆ ಕಳೆದುಹೋಗಿದ್ದ ಗಂಡ ಮರಳಿ ಬಂದಿದ್ದಾನೆ. ಮನೆಯಲ್ಲಿ ಮುದ್ದಿನ ಮಗುವಿದೆ. ಒಮ್ಮೆ ಎದುರಾಳಿಯಾಗಿದ್ದವಳು ತನ್ನ ದಾಸಿಯಾಗಿದ್ದಾಳೆ.

ಇತ್ತ, ಇಂದು ರಾತ್ರಿ ಬಡಪಾಯಿ ಸರ್ಪ ಮತ್ತೆ ತನ್ನ ಪ್ರೇಯಸಿಯನ್ನರಸಿ ಬಂದಿದೆ. ಪ್ರೇಯಸಿ ತನ್ನ ಪತಿ ಹಾಗೂ ಮಗುವಿನೊಂದಿಗೆ ನೆಮ್ಮದಿಯ ನಿದ್ದೆಯಲ್ಲಿದ್ದಾಳೆ. ದಾಂಪತ್ಯದ ನೆಮ್ಮದಿ ಹಾಗೂ ಆನಂದದಲ್ಲಿ ಅವರು ಮುಳುಗಿಹೋಗಿರುವ ಪ್ರಶಾಂತ ದೃಶ್ಯವನ್ನು ಕಂಡ ಪ್ರೇಮಿಸರ್ಪ ಹತಾಶೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುತ್ತದೆ.

ಕೆಲವು ತಿಂಗಳ ಹಿಂದೆ, ಈ ಕತೆಯನ್ನಾಧರಿಸಿ ಗಿರೀಶ್‌ಕರ್ನಾಡ್ ನಾಟಕವೊಂದನ್ನು ಬರೆದು ಚಿಕಾಗೋದಲ್ಲಿ ಆಡಿಸಿದರು. ಹಳೆಯ ಜಾನಪದ ಕತೆಯೊಂದನ್ನಾಧರಿಸಿದ ಈ ನಾಟಕ ಅತ್ಯಂತ ಆಧುನಿಕವಾದದ್ದು ಹಾಗೂ ಪ್ರಯೋಗಾತ್ಮಕವಾದದ್ದೆಂದು ಚಿಕಾಗೊ ವಿಶ್ವವಿದ್ಯಾಲಯದ ಧೀಮಂತ ಪ್ರೇಕ್ಷಕರು ಮೆಚ್ಚಿಕೊಂಡದ್ದನ್ನು ಕೇಳಿ ಸಹಜವಾಗಿಯೇ ನನಗೆ ಖುಷಿಯಾಯಿತು. ಹಾಗೆಯೇ ಒಮ್ಮೆ ಟಫ್ಟ್ಸ್ ಹಾಗೂ ಬೋಸ್ಟನ್‌ನ ವಿದ್ಯಾರ್ಥಿಗಳಿಗೆ ನಾನು ಅಲ್ಲಮನ ಬೆಡಗಿನ ವಚನಗಳನ್ನು ಹೇಳಿಕೊಟ್ಟಾಗ, ಆ ಅಮೆರಿಕನ್‌ವಿದ್ಯಾರ್ಥಿಗಳು ‘ಇದು ಫ್ರೆಂಚ್ ಸರ್ರಿಯಲಿಸಮ್ಮಿ ನಂತಿದೆ’ ಎಂದು ಚಕಿತರಾಗಿದ್ದರು.

ಕನ್ನಡ ಸಂಸ್ಕೃತಿಯ ಹಸಿವು ಆರೋಗ್ಯಪೂರ್ಣವಾದದ್ದು. ಇಲ್ಲಿ ಪ್ರತಿ ಜಾತಿಗೂ ತನ್ನದೇ ಆದ ಆದ್ಯತೆಗಳಿವೆ, ನಿಜ. ಆದರೆ, ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಅವು ಇತರ ಜಾತಿಗಳ ಅನುಭವವನ್ನೂ ಒಳಗೊಳ್ಳುತ್ತಿವೆ. ಹೀಗಾಗಿ ಕನ್ನಡ ಸಂಸ್ಕೃತಿ ರಾಗಿ. ಜೋಳ ಹಾಗೂ ಅಕ್ಕಿಯ ಜೊತೆಗೇ ಇತರ ಹಲವು ಬಗೆಯ ಆಹಾರವನ್ನೂ ಅರಗಿಸಿಕೊಳ್ಳಬಲ್ಲದು. ಬೆಂಗಳೂರಿನಲ್ಲಿ ನಿಮಗೆ ಹಲವು ಬಗೆಯ ಖಾದ್ಯಗಳು ಸಿಗುತ್ತವೆ. ಉಡುಪಿ, ಮದಾರಾಸಿ, ಪಂಜಾಬಿ, ಗುಜರಾತಿ, ಇಟ್ಯಾಲಿಯನ್‌ ಅಥವಾ ಚೈನೀಸ್ –  ಹೀಗೆ ಎಲ್ಲ ಬಗೆಯ ಖಾದ್ಯಗಳೂ ಇಲ್ಲಿವೆ. ಮಿರ್ಜಾ ಇಸ್ಮಾಯಿಲ್‌ರಂಥ ಸೌಂದರ್ಯ ಪ್ರಜ್ಞೆಯುಳ್ಳ ಆಡಳಿತಗಾರರು ತಂದ ಪರದೇಶದ ಮರಗಳಂತೆ ತನ್ನದೇ ಆದ ಸಂಪಿಗೆ ಮರಗಳೂ ಬೆಂಗಳೂರಿಗೆ ಪ್ರಿಯ. ಬೆಂಗಳೂರು ಬಿಟ್ಟಿರೆ ಇಂಡಿಯಾದ ಯಾವ ನಗರದಲ್ಲೂ ಇಷ್ಟೊಂದು ಸಿನಿಮಾ ಮಂದಿರಗಳಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಮಲಯಾಳಂ, ಬಂಗಾಳಿ, ಫ್ರೆಂಚ್ ಹೀಗೆ ಎಲ್ಲ ಬಗೆಯ ಸಿನಿಮಾಗಳಿಗೂ ಇಲ್ಲಿ ಸ್ಥಾನವಿದೆ. ಆದರೂ ಬೆಂಗಳೂರು ತೀರಾ ಕಾಸ್ಮೊಪಾಲಿಟನ್ ಆಗತೊಡಗಿ –  ಈಗಾಗಲೇ ಅಂಥ ಅಪಾಯಗಳು ಕಾಣತೊಡಗಿವೆ – ತನ್ನನ್ನು ಕಟ್ಟಿದ ಕೆಂಪೇಗೌಡನ ನೆನಪಿನಿಂದ ದೂರದೂರವಾಗ ತೊಡಗಿತೆಂದರೆ ಅದು ತನ್ನ ನಿಜ ಅಸ್ತಿತ್ವವನ್ನು ಕಳೆದುಕೊಂಡಂತೆಯೇ. ಇಲ್ಲಿ ಮುದ್ದೆಯೂಟವೂ ಇಟ್ಯಾಲಿಯನ್ ಊಟವೂ ಜೊತೆಜೊತೆಗೇ ಉಳಿಯಬೇಕು.

* * *

ನನ್ನ ಅಜ್ಜ ಕೈಲಿದ್ದ ಕುಡುಗೋಲಿನ ಜಾಗದಲ್ಲಿ ಈಗ ಬುಲ್‌ಡೋಜರ್ ಬಂದು ನಿಂತಿದೆ. ನಮ್ಮ ಪುಟ್ಟ ಮನೆಯೊಳಕ್ಕೆ ನುಗ್ಗಿಬಿಡುತ್ತೇನೆಂದು ಹೆದರಿಸುತ್ತಿದ್ದ ಬಾಲ್ಯದ ನಿಗೂಢ ಕಾಡು ಈಗ ಹಿಂದೆ ಹಿಂದೆ ಸರಿಯುತ್ತಿದೆ. ಹುಲಿಗಳು ಮೃಗಾಲಯದಲ್ಲಿ ಮಾತ್ರ ಕಾಣಸಿಗುತ್ತವೆ. ಗೋವಿನ ಹಾಡು ನಮಗೆಲ್ಲ ಕೇಳಿಸುತ್ತಿದ್ದ ಹಾಗೆಯೇ ಇಂದಿನ ಮಕ್ಕಳಿಗೂ ಕೇಳಿಸುತ್ತದೆಂಬ ಖಾತ್ರಿಯಿಲ್ಲ. ಹಾಗಾದರೆ ನಾಳಿನ ಕರ್ನಾಟಕ ಹೇಗಿರಬಲ್ಲದು?

ಉತ್ತರ ಕನ್ನಡದ ಕಾರವಾರದಿಂದ ಐವತ್ತು ಕಿಲೋಮೀಟರ್ ದೂರಕ್ಕೆ, ಪಶ್ಚಿಮಘಟ್ಟದ ಮೊಲೆಯೊಂದರ ಏಕಾಂತ ಸ್ಥಳದಲ್ಲಿರುವ ಕೈಗಾದಲ್ಲಿ ಅಣುಸ್ಥಾವರವೊಂದನ್ನು ಸರ್ಕಾರ ಕಟ್ಟುತ್ತಿದೆ. ಎಲ್ಲ ಪ್ರಜ್ಞಾವಂತ ಕನ್ನಡಿಗರೆದುರೂ ಕೈಗಾ ಒಂದು ಮುಖ್ಯ ಪ್ರಶ್ನೆಯಾಗಿ ನಿಂತಿದೆ. ಪರಿಸರ ವಿನಾಶಕ್ಕೆ ಕಾರಣವಾಗಿರುವ ಈ ಅಣುಸ್ಥಾವರವನ್ನು ವಿರೋಧಿಸಿ ನಮ್ಮ ಹಿರಿಯ ಲೇಖಕರಾದ ಶಿವರಾಮ ಕಾರಂತರೂ, ಉಡುಪಿಯ ಪೇಜಾವರ ಸ್ವಾಮಿಗಳೂ ಒಟ್ಟಿಗೇ ಜೈಲು ಸೇರಿದ್ದರು. ಆದರೆ ಅಣುಶಕ್ತಿಯ ಸಮರ್ಥಕರಾದ ಟೆಕ್ನೊಕ್ರಾಟ್‌ಗಳು, ‘ಹೆಚ್ಚುತ್ತಿರುವ ವಿದ್ಯುತ್ತಿನ ಬೇಡಿಕೆಯನ್ನು ಇಂಥ ಅಣುಸ್ಥಾವರಗಳ ನೆರವಿಲ್ಲದೆ ಪೂರೈಸುವ ಬಗೆಯೇ ಇಲ್ಲ’ ಎಂದು ವಾದಿಸುತ್ತಾರೆ.

ಆದರೆ ಅಣುಸ್ಥಾವರಗಳನ್ನು ವಿರೋಧಿಸುವವರೇನೂ ಲಡ್ಡೈಟರಲ್ಲ (Luddites*) ವಿದ್ಯುತ್ತಿನ ಪರ್ಯಾಯ ಮೂಲಗಳನ್ನು ಹುಡುಕಬೇಕೆಂಬುದು ಅವರ ನಿಲುವು.

ನನ್ನ ಬಾಲ್ಯದ ನೆನಪುಗಳನ್ನು ಸ್ಥಾಯಿಯಾಗಿರುವ ಪಾರಂಪರಿಕ ಗ್ರಾಮೀಣ ಕರ್ನಾಟಕದ ಸೊಗಸು ಕೆಲವೇ ವರ್ಷಗಳಲ್ಲಿ ಒಂದಾನೊಂದು ಕಾಲದ ಕತೆಯೊಂದರ ಭಾಗದಂತೆ ಕಾಣತೊಡಗಬಹುದು. ಆದರೆ ಕೇವಲ ನಾಸ್ಟಾಲ್ಜಿಯದಿಂದ ಏನೂ ಪ್ರಯೋಜನವಿಲ್ಲ. ಜೀವನಾಧಾರಕಷ್ಟೆ ಸೀಮಿತವಾದ ಆರ್ಥಿಕ ಪದ್ಧತಿ (Subsistence economy)  ಹುಟ್ಟುಹಾಕುವ ಹೊಟ್ಟೆಪಾಡಿನ ಸಮಸ್ಯೆಗಳನ್ನು ಕಡೆಗಣಿಸುವುದನ್ನು ಪ್ರತಿಗಾಮಿ ಎನ್ನುವವರು, ಇಂಥ ಆರ್ಥಿಕ ಪದ್ಧತಿಯುಳ್ಳ ಜಗತ್ತುಗಳ ಚೌಕಟ್ಟಿನೊಳಗೇ ಸಾವಯವ ಸಂಬಂಧವುಳ್ಳ ಸಮುದಾಯವೊಂದು ಇವತ್ತಿಗೂ ಕರ್ನಾಟಕದಲ್ಲಿ ಬದುಕಿ ಉಳಿದು ಬಂದಿದೆಯೆಂಬುದನ್ನು ಮರೆಯಬಾರದು. ಇಂಥ ಹಳ್ಳಿಯೊಂದರ ಸೂಕ್ಷ್ಮ ಚಿತ್ರಣ ಎಂ.ಎನ್.ಶ್ರೀನಿವಾಸರ ರಿಮೆಂಬರ್ಡ್ ವಿಲೇಜ್ ಪುಸ್ತಕದಲ್ಲಿದೆ. ಶ್ರೇಣಿಕರಣವುಳ್ಳ, ಫ್ಯೂಡಲ್‌ ಆದ ಕೆಲವೊಮ್ಮೆ ಅಸೂಕ್ಷ್ಮವೂ ಆಗಿರುವ ಸಮುದಾಯದ ಒಂದು ಮುಖದ ಜೊತೆಗೇ ಅಂಥ ಸಮುದಾಯದ ಸದಸ್ಯರ ನಡುವೆ ಇರುವ ಪರಸ್ಪರ ಸಂಬಂಧವನ್ನೂ ಈ ಚಿತ್ರ ಎತ್ತಿ ತೋರಿಸುತ್ತದೆ. ಇಂಥ ಸಮುದಾಯಗಳ ಪರ ಅಥವಾ ವಿರೋಧಿ ಚರ್ಚೆಗಳನ್ನಾರಂಭಿಸಿದರೆ ಅದಕ್ಕೆ ಕೊನೆಯೇ ಇರಲಾರದು. ಕನ್ನಡದ ಬಹುತೇಕ ಮುಖ್ಯ ಲೇಖಕರು ಇಂತಹ ತಲ್ಲಣ ತುಂಬಿದ ಯುದ್ಧವನ್ನು ಚಿತ್ರಿಸಿದ್ದಾರೆ. ಅದು ಕೇವಲ ಹೊರಗಿನ ಸಮಾಜೋರಾಜಕೀಯ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧವಲ್ಲ, ಅದು ಪ್ರತಿ ಸೂಕ್ಷ್ಮಜ್ಜನ ಹೃದಯದ ಒಳಗೇ ನಡೆಯುತ್ತಿರುವ ಘರ್ಷಣೆಯೂ ಹೌದು.

ವಿಭಿನ್ನ ಮೌಲ್ಯಗಳ ನಡುವೆ ನಡೆಯುವ ಇಂಥ ಯುದ್ಧದ ಪ್ರತಿಮೆಗಳು ಕಾರಂತರ ಮರಳಿ ಮಣ್ಣಿಗೆಯಲ್ಲಿವೆ. ನಗರ ಹಾಗೂ ಅದರ ಆಧುನಿಕ ನಾಗರಿಕತೆಗೆ ಮರುಳಾದ ಲಚ್ಚ ನಾಶವಾಗುತ್ತಾನೆ. ಸಂಪ್ರದಾಯಶರಣ ತಂದೆಯೊಬ್ಬನ ಆಸೆಯ ಫಲವೇ ಲಚ್ಚ ಎಂಬುದು ಇಲ್ಲಿನ ವ್ಯಂಗ್ಯವೆಂಬುದನ್ನು ಮರೆಯುವಂತಿಲ್ಲ.

ಚರಿತ್ರೆ ಸದಾ ನಮ್ಮನ್ನು ಎಚ್ಚರಿಸುತ್ತಿರುತ್ತದೆ, ನಿಜ ಆದರೆ ಚರಿತ್ರೆಯಿಂದ ಪಾಠಕಲಿಯುವವರು ಯಾರು? ನಾವು ಹುಟ್ಟು ಹಾಕುವ ಚಳುವಳಿಗಳ ಉದ್ದೇಶಗಳೇನೇ ಇದ್ದರೂ, ಸಾಂಪ್ರಾದಾಯಿಕ ಸಮಾಜದ ಉಸಿರುಗಟ್ಟಿಸುವ ಸ್ಥಿತಿಯಿಂದ ನಮ್ಮನ್ನು ಪಾರುಮಾಡಬಲ್ಲ ಪ್ರತಿಚಳುವಳಿಯೂ ಉಪಭೋಗವಾದಿಯಾದ ಹಾಗೂ ವ್ಯಕ್ತಿವಾದಿಯಾದ ಹೊಟ್ಟೆಬಾಕ ಆಧುನಿಕ ನಾಗರಿಕತೆಯನ್ನು ಪೋಷಿಸುವುದರಲ್ಲಿ ಪರ್ಯವಸನವಾಗಿ ಬಿಡುವುದೂ ಸತ್ಯವಲ್ಲವೇ? ಕೈಗಾ ಎನ್ನುವುದು ಮುಂಬರಲಿರುವ ದಿನಗಳ ಸೂಚನೆಯಂತಿಲ್ಲವೆ? ಪ್ರಕೃತಿಯ ಅವಲಂಬನದಿಂದ, ಹಾಗೂ ಪ್ರಕೃತಿಯನ್ನೇ ಅವಲಂಬಿಸಿರುವ –  ಜೀವನಾಧಾರಕ್ಕಷ್ಟೆ ಸೀಮಿತವಾದ –  ಆರ್ಥಿಕ ಪದ್ಧತಿ ತಂದೊಡ್ಡುವ ಅಡೆತಡೆಗಳಿಂದ ಸ್ವತಂತ್ರವಾಗಬೇಕು ಎಂದು ನಾವೆಲ್ಲ ಹಂಬಲಿಸುತ್ತಿರುತ್ತೇವೆ. ಹೀಗಿರುವಾಗ ಅಣುಸ್ಥಾವರದ ಅಗತ್ಯವನ್ನು ನಾವು ಸುಲಭವಾಗಿ ತಳ್ಳಿಹಾಕಿ ಬಿಡಬಲ್ಲೆವೆ? ಆದರೆ, ಅಣುಸ್ಥಾವರದ ವಿರೋಧಿಗಳು ಈ ಬಗೆಯ ವಾದಗಳನ್ನು ಒಪ್ಪಲಾರರು. ಭೌತಿಕ ಪ್ರಗತಿ ಹಾಗೂ ಸಮಗ್ರಲೋಕ ದರ್ಶನ (holistic world view) ಗಳ ನಡುವೆ ಘರ್ಷಣೆಯನ್ನು ಹುಟ್ಟುಹಾಕದಂಥ ಪರ್ಯಾಯ ತಂತ್ರಜ್ಞಾನವೊಂದನ್ನು ಶೋಧಿಸಬೇಕೆಂಬುದು ಅವರ ವಾದ.

ಆಧುನೀಕರಣ ಆಕ್ರಮಣದೆದುರು ಕನ್ನಡ ಭಾಷೆಗೆ ಒದಗಲಿರುವ ಸ್ಥಿತಿಯ ಪ್ರಶ್ನೆಯೂ ನಮ್ಮೆದುರಿಗಿದೆ. “ಎಷ್ಟು ಜನರನ್ನು ಪ್ರೇಮಿಸಿದರೂ ಕಡೆಗೆ ಪರಿಶುದ್ಧವಾಗಿ, ತಾಜಾ ಆಗಿ ಉಳಿಯುವ ಅಪ್ಸರೆಯಂತೆ – ಕನ್ನಡ” ಎಂದು ಪು.ತಿ.ನ. ಒಮ್ಮೆ ನನ್ನೊಡನೆ ಮಾತಾಡುತ್ತಾ ಹೇಳಿದ್ದರು. ನಿಜ, ಇಲ್ಲಿಯವರೆಗೂ ಕನ್ನಡಭಾಷೆ ಅಪ್ಸರೆಯಂತೆಯೇ ಉಳಿದುಕೊಂಡು ಬಂದಿದೆ. ಪರ್ಷಿಯನ್, ಉರ್ದು, ಇಂಗ್ಲಿಷ್‌ಅಥವಾ ಸಂಸ್ಕೃತದ ಪ್ರಭಾವಗಳು ಕನ್ನಡವನ್ನು ಹಾಳುಗೆಡವದೆ, ಅದನ್ನು ಸಮೃದ್ಧಗೊಳಿಸಿವೆ. ಆದರೆ, ಅಪ್ಸರೆ ಸದಾಕಾಲ ತನ್ನ ಪಾವಿತ್ರ್ಯವನ್ನುಳಿಸಿಕೊಳ್ಳಬಲ್ಲಳೆ? ಪಶ್ಚಿಮದ ಆಧುನಿಕ ನಾಗರಿಕತೆಯ ಸಮ್ಮೋಹಿನಿಯೆದುರು ಅವಳು ಉಳಿಯಬಲ್ಲಳೆ? ಸದ್ಯಕ್ಕೆ ಈ ಪ್ರಶ್ನೆಯೇ ಅಸಂತಗವಾಗಿ ಕಾಣಬಹುದು. ಆದರೆ, ಆಧುನೀಕರಣದ ಹುಚ್ಚು ಆವರಿಸಿರುವ ಕರ್ನಾಟಕ ಮುಂದೊಂದು ದಿನ ಈ ಸವಾಲನ್ನು ಎದುರಿಸಲೇಬೇಕಾಗುತ್ತದೆ.

ನಾವು ಮರಳಿ ಹಿಂದಕ್ಕೆ ಹೋಗಲಾರೆವು. ಆದರೆ ಸಂತೃಪ್ತ ಜೀವನದ ಬಯಕೆ ಹಾಗೂ ಅಗತ್ಯಗಳೆರಡೂ ದಿನೇ ದಿನೇ ಹೆಚ್ಚುತ್ತಿರುವಾಗ ಇದ್ದಲ್ಲೇ ಇರಲೂ ಆರೆವು. ಮನಸ್ಸನ್ನು ಕಲ್ಲು ಮಾಡಿ ಮುಂದಕ್ಕೆ ನಡೆಯುವುದನ್ನು ಬಿಟ್ಟರೆ ಬೇರೆ ಮಾರ್ಗವೇ ನಮ್ಮೆದುರಿಗಿದ್ದಂತಿಲ್ಲ. ಹಳೆಯ ಮೈಸೂರು ಸಂಸ್ಥಾನದ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯನವರಿಗಾಗಲೀ, ಸರ್ ಮಿರ್ಜಾ ಇಸ್ಮಾಯಿಲ್ಲರಿಗಾಗಲೀ ಆಧುನೀಕರಣದ ಸಮಗ್ರ ಪರಿಣಾಮಗಳ ಕಲ್ಪನೆಯಿರಲಿಲ್ಲ. ಇಂದು ನಾವು ನೋಡುತ್ತಿರುವ ತಂತ್ರಜ್ಞಾನ ಕ್ರಾಂತಿಯ ಆಗಾಧ ವ್ಯಾಪ್ತಿಯನ್ನು ಅವರು ನಿರೀಕ್ಷಿಸಿದವರಲ್ಲ. ಗಾಂಧಿಯ ನೆಚ್ಚಿನ ಶಿಷ್ಯರಾಗಿಯೂ ಆಧುನೀಕರಣವನ್ನು ಅಪ್ಪಿಕೊಂಡ ಜವಹರಲಾಲ್‌ನೆಹರೂವಿಗೂ ಆ ಕಲ್ಪನೆಯಿರಲಿಲ್ಲ.

ಆದರೆ, ಇಂದು ಕರ್ನಾಟಕದಲ್ಲಿ ಅಕ್ಕಿ – ರಾಗಿಗಳ ನಡುವೆ, ಹಾಗೂ ಸ್ಥಾವರ – ಜಂಗಮಗಳ ನಡುವೆ ಹಿಂದೆಂದಿಗಿಂತಲೂ ಭೀಕರವಾದ ಕದನವೊಂದು ನಡೆಯಲಾರಂಭಿಸಿದೆ.

ಇಂಗ್ಲಿಷಿನಿಂದ ಕನ್ನಡಕ್ಕೆ
ನಟರಾಜ ಹುಳಿಯಾರ್

Karnataka Impressions ಎಂಬ ಪುಸ್ತಕಕ್ಕೆ ಬರೆದ ‘Growing up in Karnataka’ ಲೇಖನ, Gangarams, 1989.


* ಕೈಗಾರಿಕಾ ಕ್ರಾಂತಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದಾಗ ನಿರುದ್ಯೋಗಿಗಳಾಗಿ ಹತಾಶರಾದ ಕುಶಲಕರ್ಮಿಗಳು ಯಂತ್ರಗಳನ್ನು ತಮ್ಮ ಶತ್ರುಗಳೆಂದು ಕಂಡು ಅವುಗಳನ್ನು ಒಡೆದು ಹಾಕುವ ಚಳವಳಿ ಪ್ರಾರಂಭಿಸಿದರು. ಇವರನ್ನು ಲಡ್ಡೈಟ್ಸ್‌ರೆಂದು ತಿರಸ್ಕಾರದಲ್ಲಿ ಕರೆಯುತ್ತಾರೆ.