ಮನುಷ್ಯಜಾತಿಗೆ ಒಂದು ವ್ಯವಸ್ಥೆಯನ್ನು ನಿರ್ಮಿಸಿಕೊಂಡು, ಕಾಯ್ದೆಗಳನ್ನು ರೂಪಿಸಿಕೊಂಡು ಬದುಕುವುದು ಯಾಕೆ ಅಗತ್ಯವಾಯಿತು ಎಂಬುದಕ್ಕೆ ಬುದ್ಧನೇ ಹೇಳಿದ ಒಂದು ದುಷ್ಟಾಂತ ಕಥೆಯಿದೆ. ವ್ಯವಸ್ಥೆಯ ಹುಟ್ಟಿಗೆ ಕಾರಣಗಳನ್ನು ಕೊಡುವ ಎಲ್ಲಾ ಪುರಾಣಗಳಿಗಿಂತಲೂ ಈ ದುಷ್ಟಾಂತ ಕಥೆ ಹೆಚ್ಚಿನ ಒಳನೋಟದ್ದಾಗಿದೆ – ಎಂದು ನನ್ನ ಭಾವನೆ. ಅನಾದಿಕಾಲದಿಂದ ಭೂಲೋಕದ ಎಲ್ಲರೂ ಕಲ್ಪಿಸುವಂತೆ ಬಹಳ ಹಿಂದೊಂದು ಆದರ್ಶದ ಕಾಲವಿತ್ತು. ಯಾವ ಅಂಕೆ ಅಣತಿಗಳೂ ಇಲ್ಲದೆ ಜನರು ಸುಖವಾಗಿ ತಮ್ಮ ಪಾಡಿಗೆ ತಾವಿದ್ದು ಪರಸ್ಪರ ವಿಶ್ವಾಸವುಳ್ಳವರೂ ಆಗಿ ಬಾಳುತ್ತಿದ್ದರು. ಆಗ ಇಡೀ ಭೂಮಿಯ ಮೇಲೆ ಹಾಲಿನ ಕೆನೆಯಂತೆ ಜನರ ಪೋಷಣೆಗೆ ಅಗತ್ಯವಾದ ಆಹಾರ ಪ್ರತಿ ಪ್ರಾತಃಕಾಲ ಕಾಣಿಸಿಕೊಳ್ಳುತ್ತಿತ್ತು. ಪ್ರತಿಯೊಬ್ಬರು ತಮತಮಗೆ ಬೇಕಾದಷ್ಟು ದಿನವೂ ಮುಂಜಾನೆ ಆಯ್ದು ತಿಂದು ಸುಖವಾಗಿ ಬಾಳುತ್ತಿದ್ದರು. ಹೀಗಿರುವ ಸುಖಸಮೃದ್ಧಿಯ ಕಾಲದಲ್ಲೇ ಯಾವನೋ ಒಬ್ಬನಿಗೆ ಒಂದು ಆಸೆ ಹುಟ್ಟಿಕೊಂಡಿತು. “ನಾಳೆಗೆ ಬೇಕಾದ್ದನ್ನು ಇವತ್ತೆ ನಾನು ತಂದಿಟ್ಟುಕೊಳ್ಳಬಹುದಲ್ಲವೇ?” ಎಂದು ಭೂಮಿಯ ಮೇಲಿನ ಸೊಂಪನ್ನು ಆವತ್ತಿಗೆ ಅಗತ್ಯವಾಗಿದ್ದಕ್ಕಿಂತ ಎರಡಷ್ಟು ಆಯ್ದು ತಂದ. ಇದನ್ನು ಕಂಡ ಇನ್ನೊಬ್ಬ ಅಗತ್ಯಕ್ಕಿಂತ ಮೂರರಷ್ಟು ಹೆಚ್ಚನ್ನು ಆಯ್ದ. ಹೀಗೆಯೇ ಮತ್ತೊಬ್ಬ ನಾಲ್ಕರಷ್ಟು; ಮಗದೊಬ್ಬ ಹತ್ತರಷ್ಟು ಆಯುತ್ತಿದ್ದಂತೆ ಭಯಂಕರ ಪೈಪೋಟಿ ಜನರಲ್ಲಿ ತಲೆದೋರಿ ಭೂಮಿಯ ದಯೆಯಿಂದ ತಾನೇ ತಾನಾಗಿ ಒದಗಿಬರುತ್ತಿದ್ದ ಆಹಾರ ಕಣ್ಮರೆಯಾಯಿತು. ಜನರು ಶ್ರಮಪಟ್ಟು ಉತ್ತಿ, ಬಿತ್ತಿ, ಬೆಳೆಯುವುದು ಅಗತ್ಯವಾಯಿತು. ಆಗ ಜನರೆಲ್ಲರೂ ಸಭೆ ಸೇರಿದರು. ಒಬ್ಬ ‘ಮಹಾಸಮ್ಮತ’ನನ್ನು ಆಯ್ಕೆ ಮಾಡಿ ಅವನ ಅಣತಿಯ ಮೇಲೆ ತಾವೆಲ್ಲರೂ ತಮ್ಮ ತಮಗೆ ಬೇಕಾದಷ್ಟನ್ನು ಭೂಮಿಯಿಂದ ಪಡೆದುಕೊಂಡು ಕಲಹವಿಲ್ಲದಂತೆ ಬಾಳುವುದಾಗಿ ನಿಶ್ಚಯಿಸಿದರು. ಎಲ್ಲಾ ವ್ಯವಸ್ಥೆಗಳನ್ನು ಕಾಯುವುದಕ್ಕಾಗಿ ಇರುವ ಪ್ರಭುತ್ವ ಶುರುವಾದ್ದು ಬುದ್ಧನ ಪ್ರಕಾರ ಹೀಗೆ. ಇವತ್ತಿಗೂ ಈ ಕಥೆ ಕಾಣಿಸುವ ಸತ್ಯ ನಿಜವೇ.

* * *

ಪ್ರಭುತ್ವ ಯಾವಾಗಲೂ ಒಂದು ಸಮಸ್ಯೆಯೇ. ಒಂದೋ ಅದು ಅಗತ್ಯಕ್ಕಿಂತ ಹೆಚ್ಚಿರುತ್ತದೆ; ಅಥವಾ ಅದು ಅತಿಕ್ಷೀಣವಾಗಿ ಅರಾಜಕತೆಗೆ ಕಾರಣವಾಗುತ್ತದೆ. ವಿಪರ್ಯಾಸವೆಂದರೆ, ಪ್ರಭುತ್ವ ಅಗತ್ಯಕ್ಕಿಂತ ಹೆಚ್ಚಾದಾಗಲೂ ಅದಕ್ಕೆ ವಿರೋಧವಾಗಿ ಅರಾಜಕತೆ ಉಂಟಾಗಬಹುದು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸಾಹಿತ್ಯಪ್ರೇಮಿ ಸಜ್ಜನನಾದ ಮ್ಯಾಥ್ಯೂ ಅರ್ನಾಲ್ಡ್ ಈ ಬಗ್ಗೆ ತುಂಬಾ ತಲೆಕೆಡಿಸಿಕೊಂಡು ಬರೆದಿದ್ದಾನೆ. (ಈ ಬಗ್ಗೆ ನಾನು ಈ ಹಿಂದೆ ರುಜುವಾತುನಲ್ಲಿ ಬರೆದಿದ್ದೇನೆ) ಅವನು ಬರೆದ ಗ್ರಂಥ Culture and Anarchy ಎಂಬುದು ನನಗೆ ಒಂದು ಕಾಲದಲ್ಲಿ ಬಹಳ ಪ್ರಿಯವಾಗಿ ಬಿಟ್ಟಿತ್ತು. ಅದು ಎಮರ್ಜೆನ್ಸಿಯ ಕಾಲ. ನಾನು ಆಗ ಮಾನಸಗಂಗೋತ್ರಿಯಲ್ಲಿ ಬಹಳ ಇಷ್ಟಪಟ್ಟು ಈ ಪುಸ್ತಕವನ್ನು ಅಂದಿನ ಸ್ಥಿತಿಯ ವಿಮರ್ಶೆಗಾಗಿ ಬಳಸುತ್ತಿದ್ದೆ ಎಂಬುದನ್ನು ಆಗಿನ ವಿದ್ಯಾರ್ಥಿಗಳು ಈಗಲೂ ನೆನೆಯುತ್ತಾರೆ.

ಆರ್ನಾಲ್ಡ್ ತನ್ನ ಕಾಲದ ಅರಾಜಕತೆಗೆ ಬೆದರಿದವನು. ಪ್ರಾಯಶಃ ಅನಗತ್ಯವಾದ ಅತಿಯಲ್ಲಿ ಬೆದರಿದವನು; ಯಾಕೆಂದರೆ, ಹಿನ್ನೋಟದಲ್ಲಿ ಆಗಿನ ಕಾಲ ಅಷ್ಟೊಂದು ಗೊಂದಲಮಯವಾಗಿತ್ತೆಂದು ನಮಗೆ ಈಗ ಅನ್ನಿಸುವುದಿಲ್ಲ. ಓಟಿನ ಹಕ್ಕಿಲ್ಲದ ಇಂಗ್ಲೆಂಡ್‌ನ ಸಾಮಾನ್ಯ ಜನರು ಹೈಡ್‌ಪಾರ್ಕಿನ ಬೇಲಿಯನ್ನು ಕ್ರುದ್ಧರಾಗಿ ಕಿತ್ತೆಸೆದರು ಎಂಬುದೇ ಆರ್ನಾಲ್ಡ್‌ಗೆ ಭೀತಿಗೆ ಕಾರಣವಾಗಿತ್ತು! ಈಗ ನೋಡಿದರೆ ವಿಕ್ಟೋರಿಯನ್ ಸಮೃದ್ಧಿಯ ಕಾಲದಲ್ಲೂ ಎಷ್ಟೊಂದು ಕಷ್ಟಗಳನ್ನು ಸಹಿಸಿಕೊಂಡು ಜನ ತೆಪ್ಪಗಿದ್ದರು ಎಂಬುದು ಹೆಚ್ಚು ಆಶ್ಚರ್ಯದ ವಿಷಯ. ಹೆಂಗಸರು, ಕಾರ್ಮಿಕರು ಮತ್ತು ತೆರಿಗೆ ಕೊಡದ ಸಾಮಾನ್ಯ ಜನರು ತಮ್ಮ ಹಕ್ಕಿಗಾಗಿ ಅಷ್ಟಾದರೂ ರಂಪಮಾಡದಿದ್ದಲ್ಲಿ ಬ್ರಿಟಿಷ್ ಸಮಾಜ ಪ್ರಜಾತಾಂತ್ರಿಕವಾಗಿ ಬೆಳೆಯುತ್ತಿರಲಿಲ್ಲವೆಂದೇ ಹಿನ್ನೋಟಕ್ಕೆ ಕಂಡು ಆರ್ನಾಲ್ಡ್‌ನ ಆತಂಕ ಕೊಂಚ ಹಾಸ್ಯಾಸ್ಪದವೆಂದೂ, ಅಂಥಹ ಒಬ್ಬ ನಿಷ್ಠಮೇಧಾವಿ ಕೂಡ ತನ್ನ ವರ್ಗದ ಮಿತಿಯನ್ನು ಮೀರಿ ವಾಸ್ತವವನ್ನು ಗ್ರಹಿಸಲಾರದವನಾಗಿದ್ದನೆಂದು ಈಗ ತಿಳಿಯುತ್ತದೆ.

ಆದರೂ ಆರ್ನಾಲ್ಡ್‌ನ ಕೆಲವು ಒಳನೋಟಗಳು ನನಗೆ ಆ ದಿನಗಳಲ್ಲೂ ಮುಖ್ಯವೆಂದು ಅನ್ನಿಸಿತ್ತು. ಅವರ ಪ್ರಕಾರ ಅರಾಜಕತೆಗೆ ನಿಜವಾದ ಉತ್ತರವಿರುವುದು ಜನ ಹೆಚ್ಚು ಸುಸಂಸ್ಕೃತರಾಗುವುದರಲ್ಲಿ. ಅಂದರೆ, ಇತರರ ಜೊತೆ ಹೊಂದಿಕೊಂಡು ಬಾಳುವುದು ಸ್ವಂತದ ಅನುಕೂಲಕ್ಕಾಗಿ ಮಾತ್ರವಲ್ಲದೆ ಮನುಷ್ಯನ ಕಲ್ಪನಾಶಕ್ತಿಯ ಸಹಜವಿಕಾಸದ ಫಲವೂ ಆಗಬೇಕು. ಪ್ರಯೋಜನದ ಸ್ವಾರ್ಥಮೂಲದೃಷ್ಟಿಯನ್ನು ಮೀರಿ, ಪರಾರ್ಥಚಿಂತನೆ ಮನಸ್ಸಿನ ಸಹಜ ಸ್ವಯಂಸ್ಫೂರ್ತ ವ್ಯಾಪಾರವಾಗಿ, ಅದರಲ್ಲೇ ಹರ್ಷವನ್ನು ಕಾಣುವ ಪ್ರವೃತ್ತಿ ಮಾನವನದ್ದಾಗಬೇಕು. ಇದು ಬೆಂಥಮಿನ ಪ್ರಯೋಜನಕ್ಕೆ ಕಟ್ಟುಬಿದ್ದ utilitarian ತತ್ವಕ್ಕಿಂತ ಭಿನ್ನವಾದ ದೃಷ್ಟಿ. ಆರ್ನಾಲ್ಡ್ ಮನುಷ್ಯನ ಭಾವನಾಲೋಕದ ಸಾಧ್ಯತೆಗಳನ್ನು ಕಾಣುವ ಬಗೆಯೇ ಬೇರೆ. ಎಷ್ಟು ಕಟ್ಟುನಿಟ್ಟಿನ ಪ್ರಭುತ್ವವೂ ಅಂತಿಮವಾಗಿ ಅರಾಜಕತೆಯ ಸಮಸ್ಯೆಗೆ ಉತ್ತರವಲ್ಲ. ಒಳಿತು ಉಪಯುಕ್ತವಾದ್ದು ಎಂದು ಮಾತ್ರ ತಿಳಿಯುವ ಕುಬ್ಜಸ್ಥಿತಿ ಮಾನವನದಲ್ಲ. ಇಂತಹ ದೊಡ್ಡ ಸತ್ಯವನ್ನು ಭಾವುಕನಾಗಿ ಮನಗಂಡಿದ್ದ ಪಾಪಬೀರು, ಸಜ್ಜನರಸಿಕನಾದ ಆರ್ನಾಲ್ಡ್ ಕೂಡಾ ತನ್ನ ಕಾಲದ ಸದ್ಯದ ಆತಂಕಗಳಿಗೆ, ವಿಕಾಸಶೀಲವಾದ ಕಾಲದಲ್ಲಿ ಮಾತ್ರ ಪಕ್ವವಾಗಬೇಕಾದ ಸಂಸ್ಕೃತಿಯಲ್ಲಿ ಕೂಡಲೇ ಉತ್ತರ ಸಿಗಲಾರದ್ದರಿಂದ, ತನ್ನ ಸದ್ಯದಲ್ಲಿ, ತನ್ನ ದೇಶದ ಸರಕಾರ, ಅರಾಜಕತೆಯನ್ನು ಹತ್ತಿಕ್ಕಲು ಬಲಪ್ರಯೋಗ ಮಾಡುವುದು ಸರಿಯಾದ ಕ್ರಮವೆಂದೇ ವಾದಿಸುತ್ತಿದ್ದ.

ರಾಜಕೀಯ ಕ್ರಿಯೆಯಲ್ಲಿ ತೊಡಗಲಾರದವನ ಮುಜುರಗಗಳಿಂದ ಹುಟ್ಟಿಕೊಂಡ ನಿಷ್ಕಾರಣವಾದ ಭಯವಿದೆಂದು ನಾನು ಟೀಕಿಸುತ್ತಿದ್ದುದು ನೆನಪಾಗುತ್ತದೆ. ಇಷ್ಟಾದರೂ ಆರ್ನಾಲ್ಡ್‌ನನ್ನು ನಿರಾಕರಿಸುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಅವನು ತನ್ನ ಇಡೀ ಸಮಾಜವನ್ನು ಬಹಳ ಅರ್ಥಪೂರ್ಣವಾಗಿ ಮೂರು ಭಾಗಗಳಾಗಿ ವಿಂಗಡಿಸಿದ್ದ. ತನ್ನ ಕಾಲದ ಕಾರ್ಮಿಕರನ್ನು ಅವನು ‘ಪ್ಯಾಪಲೇಸ್’ ಎಂದು ಕರೆದ. ಅವರು ಅರಿವು ಇಲ್ಲದ ಜನ; ಆದರೆ ವಿಕಾಸಗೊಳ್ಳಬಲ್ಲ ಭವಿಷ್ಯ ಇರುವ ಜನ, ತೆರೆದ ಮನಸ್ಸಿನ ಜನ. ತಾನು ಸೇರಿದ ಮಧ್ಯಮವರ್ಗದ ಜನರನ್ನು ಅವನು ‘ಫಿಲಿಸ್ಟೈನ್’ ಎಂದು ಕರೆದ. ಈ ಫಿಲಿಸ್ಟೈನ್‌ರು ತಮ್ಮ ಹಿರಿತನ ಇರುವುದು ತಮ್ಮ ಸಿರಿವಂತಿಕೆಯಲ್ಲೇ ಎಂದು ನಂಬುವವರು. ತಾವು ಸಿರಿವಂತರಾಗಲು ಸತತವಾಗಿ ಶ್ರಮಿಸುವವರು. ಇವರು ಎಷ್ಟು ಪ್ರಾಪಂಚಿಕರೋ, ಅಷ್ಟೇ ಮತಾಂಧರೂ ಆಗಿರುತ್ತಾರೆ. ಪುಣ್ಯ ಮತ್ತು ಧನ ಇವೆರಡರ ಸಂಪಾದನೆಯಲ್ಲಿ ಸತತ ನಿರತರಾಗಿದ್ದು –  ಅಂದರೆ ದೈವಿಕ ಶ್ರದ್ಧೆಯನ್ನೂ ಇನ್ನೊಂದು ಸಂಚಯವೆಂದು ಕಾಣುತ್ತ –  ಸಂಸ್ಕೃತಿಯಿಂದ ವಿಮುಖರಾಗಿ ಬದುಕುತ್ತಾರೆ. ಆರ್ನಾಲ್ಡ್‌ನ ಅತ್ಯಂತ ಕಟುವಾದ ವಿಮರ್ಶೆ ನಡೆಯುವುದು ಇಂಥವರ ಬಗ್ಗೆ. (ನಮ್ಮ ಕಾಲದಲ್ಲಿ ಹುಟ್ಟಿಕೊಂಡ ಮ್ಯಾನೇಜ್‌ಮೆಂಟ್ ಮಂದಿಯನ್ನು ನೆನೆಸಿಕೊಳ್ಳಿ). ಮೂರನೆಯ ವರ್ಗವಾದ ಇಂಗ್ಲೆಂಡಿನ ಹುಟ್ಟಾ ಶ್ರೀಮಂತರಾದರೂ ಬಾರ್ಬೇರಿಯನ್‌ರು. ಯಾರಿಗೂ ಅರ್ಥವಾಗದ ಹಾಗೆ, ತಮಗೂ ಅರ್ಥಹೀನವಾಗಿ, ಬಡಬಡಿಸುತ್ತಾ ಬದುಕುವ ಸಂಸ್ಕೃತಿ ಹೀನರು. ಕುದುರೆಯ ಮೇಲೆ ಕೂತು ಕೇಕೆ ಹಾಕುತ್ತ ಪಾಪದ ನರಿಗಳನ್ನು ಬೇಟೆಯಾಡಿ ಕೊಲ್ಲುವುದು ಇವರ ಗೀಳು. ಅವರ ಇನ್ನೊಂದು ಗೀಳು: ತಮ್ಮ ದೇಹಗಳನ್ನು ಸೊಂಪಾಗಿ ಬೆಳೆಸಿಕೊಳ್ಳುವ ಸ್ವಶರೀರ ಆರಾಧನೆ. ಈ ಮೂರು ವರ್ಗಗಳ ವಿಶ್ಲೇಷಣೆಯಲ್ಲಿ ಆರ್ನಾಲ್ಡ್‌ ಹೆಚ್ಚು ಒಳನೋಟಗಳಿಂದ ನಿಷ್ಠುರವಾಗಿ ಮಾತಾಡುವುದು ತಾನೂ ಕೂಡಿದಂತೆ ತನ್ನ ಕಾಲದ ಅತಿವಾಚಾಳಿಗಳಾದ ಮಧ್ಯಮವರ್ಗದ ಬಗ್ಗೆಯೇ.

* * *

ಕನ್ನಡದಲ್ಲಿ ನಾವು ಕೆಲವರು ಅತ್ಯಂತ ಬಿಕ್ಕಟ್ಟಿನ ಸಮಸ್ಯೆಯಾದ ಪ್ರಭುತ್ವದ ಬಗ್ಗೆ ಈಚೆಗೆ ಚರ್ಚೆಮಾಡಲು ಶುರುಮಾಡಿದ್ದೇವೆ. ಆದರೆ ನಮ್ಮ ವಾಗ್ವಾದಗಳಿನ್ನೂ, ಅಪಕ್ವವಾಗಿ ಉಳಿದಿವೆ. ಇಡೀ ದೇಶ ಒಂದು ಬಲವಾದ ಸರಕಾರದ ಶಿಸ್ತಿಗೆ ಒಳಪಟ್ಟಿರಬೇಕೆಂಬುದನ್ನು ನಾವು ಗುಮಾನಿಯಿಂದ ನೋಡುತ್ತೇವೆ. ಈ ಗುಮಾನಿ ಸರಿಯಾದ್ದೆ. ಆದರೆ ಇಡೀ ಭಾರತ ಏಕವಾಗಿ ಆಲೋಚಿಸದಿದ್ದಲ್ಲಿ ನಾವು ಬ್ರಿಟಿಷ್‌ರಿಂದ ಬಿಡುಗಡೆಯಾಗುತ್ತಿರಲಿಲ್ಲ. ಯುದ್ಧದ ನಂತರ ಬ್ರಿಟಿಷರು ಅನಿವಾರ್ಯವಾದ ಐತಿಹಾಸಿಕ ಕಾರಣಕ್ಕಾಗಿ ಭಾರತವನ್ನು ಬಿಟ್ಟು ಹೋಗಬೇಕಾಗಿ ಬಂದಿದ್ದರೂ ಹಲವು ಪುಂಡ ರಾಜರ ಹಾಗೂ ತೆವಲಿನ ಪಾಳೆಗಾರರ ಆಳ್ವಿಕೆಯಲ್ಲಿ ನಾವು ದಿಕ್ಕೆಟ್ಟು ಬದುಕುತ್ತಿರುತ್ತಿದ್ದೆವು. ಇನ್ನೂ ಮುಖ್ಯವಾಗಿ ಹೇಳಬೇಕಾದ ಮಾತೊಂದು ಇದೆ: ಇಡೀ ದೇಶ ತನ್ನ ಅಂಧಮತ ಶ್ರದ್ಧೆಗಳನ್ನು ಮೀರಿ, ನೂರಾರು ವರ್ಷಗಳ ಮೂರ್ಖತನವನ್ನು ಬದಿಗೊತ್ತಿ ಅಸ್ಪೃಶ್ಯತೆ ಅನೈತಿಕವೆಂದೂ, ಕಾನೂನುಬಾಹಿರವೆಂದೂ ಘೋಷಿಸದೇ ಇದ್ದಲ್ಲಿ ನಾವು ಈಗ ಹೇಗಿರುತ್ತಿದ್ದೆವು? – ಯೋಚಿಸಿ ನೋಡಬೇಕು. ಭಾರತದಲ್ಲಿ ಒಮ್ಮತದಲ್ಲಿ ಸೃಷ್ಟಿಯಾದ ಪ್ರಭುತ್ವದಿಂದ ಮಾತ್ರ ಇದು ಸಾಧ್ಯವಾದುದ್ದು. ಇಲ್ಲದಿದ್ದಲ್ಲಿ ಮತಾಚರಣೆಯ ವಿಷಯದಲ್ಲಿ ಸಂವಿಧಾನ ಹೇಳುವಂತೆ ಸರಕಾರಕ್ಕೆ ಪ್ರವೇಶಿಸುವ ಹಕ್ಕಿಲ್ಲವೆಂದು ಹಲವು ಕಾರಣಗಳನ್ನೊಡುತ್ತಾ ನಾವು ನಿರ್ವೀರ್ಯರಾಗಿ ಕೈಚೆಲ್ಲಿ ಕೂತಿರುತ್ತಿದ್ದೆವೋ ಏನೋ! ನಮ್ಮ ಈಗಿನ ಸ್ಥಿತಿಯಂತೂ ಯಾವ ಒಮ್ಮತದ ನಿರ್ಣಯಕ್ಕೂ ಮುಖ್ಯ ವಿಷಯಗಳಲ್ಲಿ ಬರಲಾರದ ಕಳಾಹೀನ ಸ್ಥಿತಿಯಾಗಿ ಬಿಟ್ಟಿದೆ. ಆದರೆ ನಮ್ಮ ದೇಶದ ಪ್ರಭುತ್ವದ ನೈತಿಕತೆಯನ್ನು ಕಾಪಾಡಲು ಭಾರತದ ಏಕತೆ ಮುಖ್ಯವೆಂದಾಕ್ಷಣ ಕೇಂದ್ರದಲ್ಲಿರುವ ಸರಕಾರ ನಾಡಿನ ಎಲ್ಲಾ ಪ್ರಾಂತಗಳ ಅಧಿಕಾರಿಗಳನ್ನು ಕಿತ್ತುಕೊಂಡು, ತನ್ನ ಪಕ್ಷದ ಬಾಲ – ಬಡುಕರನ್ನು ಆ ಎಲ್ಲಾ ಪ್ರಾಂತಗಳ ಅಧಿಕಾರಿಗಳನ್ನು ಕಿತ್ತುಕೊಂಡು, ತನ್ನ ಪಕ್ಷದ ಬಾಲ – ಬಡುಕರನ್ನು ಆ ಎಲ್ಲಾ ಪ್ರಾಂತದ ಮುಖ್ಯಮಂತ್ರಿಗಳನ್ನಾಗಿ ನೇಮಿಸಿ ಇಡೀ ದೇಶವನ್ನು ನಿವೀರ್ಯಗೊಳಿಸಬೇಕೆಂದು ಇದರ ಅರ್ಥವಲ್ಲ. ಹೀಗೆ ಕೇಂದ್ರ ನಡೆದುಕೊಂಡಿದ್ದರಿಂದಲೇ ಪಂಜಾಬ್, ಅಸ್ಸಾಂ ಇವತ್ತಿಗೂ ಕಾಶ್ಮೀರ, ವಿಜೋ, ನಾಗ ಇತ್ಯಾದಿ ಗಿರಿಜನ ದೇಶಗಳು ಸಮಸ್ಯೆಗಳಾಗಿ ಪರಿಣಮಿಸಿವೆ.

ಆದ್ದರಿಂದಲೇ ಗಾಂಧೀಜಿಯವರು ಮತ್ತು ಜಯಪ್ರಕಾಶರು ಪ್ರತಿಪಾದಿಸಿದ ವಿಕೇಂದ್ರೀಕರಣವನ್ನು ಗ್ರಾಮಸ್ವರಾಜ್ಯವನ್ನೂ, ಲೋಹಿಯಾ ಪ್ರತಿಪಾದಿಸಿದ ಚತುಸ್ತಂಭ ರಾಷ್ಟ್ರವನ್ನೂ ನಾವು ಭಾರತದ ಏಕತೆಯ ಯಶಸ್ಸಿಗೆ ಜೀವಾಳವೆಂದು ತಿಳಿದಿರುವುದು.

ಭಾರತದ ಏಕತೆಯನ್ನು ಕಾಯುವುದು ಮತ್ತು ಭಾರತದ ಪ್ರಭುತ್ವದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ನೆಲೆಯೂರುವಂತೆ ಪ್ರಯತ್ನಿಸುವುದು – ಈ ಎರಡೂ ಒಂದೇ ಪ್ರಯತ್ನವೆಂಬಂತೆ ನನ್ನ ಅನೇಕ ಗಣ್ಯ ಸಮಕಾಲೀನ ಸ್ನೇಹಿತರು ತಿಳಿದಿದ್ದಾರೆ. ಆದರೆ ಈ ನಮ್ಮ ಆಸ್ಥೆಯನ್ನು ನಮಗೇ ನಾವು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಅಗತ್ಯವಾದ ಅನುಮಾನಗಳನ್ನು ನಾವು ಎತ್ತಿದಾಗಲೆಲ್ಲಾ ವಿಚಿತ್ರವಾದ ಪೇಚಿಗೆ ಒಳಗಾಗಿದ್ದೇವೆ. ಹಿಂದುತ್ವ ಮತ್ತು ನಮ್ಮ ಏಕತೆಗೆ ಆಧಾರ ಎಂದು ಅಯೋಧ್ಯೆಯ ಘಟನೆಯ ನಂತರ ಬಹಳ ಜನ ಪರೋಕ್ಷವಾಗಿ ತಿಳಿದಂತಿದೆ. ಆದರೆ ಬಹುಭಾಷೆಗಳ ಬಹುಸಂಸ್ಕೃತಿಗಳ ಈ ನಾಡಿನಲ್ಲಿ ಅಂಥ ಪ್ರಯತ್ನ ಒಂದು ತಿಂಗಳೊಳಗೆ ಇಡೀ ದೇಶದ ಅಭದ್ರತೆಗೆ ಕಾರಣವಾಗಬಹುದೆಂಬುದರಲ್ಲಿ ನಮಗೆ ಸಂಶಯವಿಲ್ಲ. ಭದ್ರತೆ ಮಾತ್ರವಲ್ಲ; ನಮ್ಮ ಪ್ರೀತಿಗೂ ಸೃಜನಶೀಲತೆಗೂ ಎಲ್ಲಾ ಕಾಲಗಳಿಂದಲೂ ಪೋಷಕವಾಗಿರುವ ನಮ್ಮ ದೇಶದ ಸಮೃದ್ಧ ‘ಅನೇಕತೆ’ ಇದರಿಂದ ನಾಶವಾಗಿ, ಕೇವಲ ಹಿಂಸೆಯಿಂದ ಏಕತೆಯನ್ನು ಉಳಿಸಿಕೊಳ್ಳಬೇಕಾದ ಬರ್ಬರತೆಯಲ್ಲಿ ಇಡೀ ದೇಶ ನರಳಬಹುದು. ನಮ್ಮ ದೇಶದ ಗುಣ ‘ಅನೇಕತೆಯಲ್ಲಿ ಏಕತೆ’ ಎಂದಾಗ ಅಂಥ ಮಾತು ಕ್ಲೀಷೆ ಎನಿಸಿದರೂ ಅದರಲ್ಲಿ ಸತ್ಯವಿದೆ. ಈ ಮಾತಿನ ಸತ್ಯ ಯಾವಾಗ ನಮಗೆ ಅನುಭವ ವೇದ್ಯವಾಗುತ್ತದೆ ಎಂಬುದನ್ನು ಈಗಾಗಲೇ ನಾವು ಮನಗಂಡಿದ್ದೇವೆ. ಉದ್ದೇಶಪೂರ್ವಕವಾದ ಬಲತ್ಕಾರದಲ್ಲಿ ಏಕತೆಯನ್ನು ಮಾತ್ರ ನಾವು ಸ್ಥಾಪಿಸಲು ಹೊರಟಾಗ ಅನೇಕತೆಯ ಶಕ್ತಿಗಳು ಅಲ್ಲಿ ಇಲ್ಲಿ ಸಿಡಿದೇಳಲು ಪ್ರಾರಂಭಿಸುತ್ತವೆ; ಮತ್ತು ‘ಅನೇಕತೆ’ ಮಾತ್ರ ಸತ್ಯವೆಂದೂ ಅನ್ನಿಸತೊಡಗುತ್ತದೆ. ಹಾಗೆಯೇ ಅನೇಕತೆ ಮಾತ್ರ ನಮ್ಮ ದೇಶದ ವಿಶಿಷ್ಟತೆ ಎಂದು ಭಾರತದ ಪ್ರಾಂತ್ಯಗಳು ಸ್ವಾಯತ್ತವಾಗಿ ಬೇರೆಯಾಗಲು ಪ್ರಯತ್ನಿಸಿದಾಗೆಲ್ಲಾ ಸ್ಪಷ್ಟವಾಗಿ ಹೇಳಲುಬಾರದ, ಆದರೆ ಅಂತರ್ಗಾಮಿಯಾಗಿ ಹರಿಯುತ್ತಿರುವ ನಮ್ಮ ದೇಶದ ಒಟ್ಟು ಸಂಸ್ಕೃತಿಯ ಏಕತೆ ಮನದಟ್ಟಾಗುತ್ತದೆ. ಅಂದರೆ ಇದು ಯಾವಾಗಲೂ ಅತಿರೇಕದ ಅತಿಕ್ರಮದಲ್ಲಿ ನಮಗೆ ಹೊಳೆಯುವ ಸತ್ಯ; ಆದ್ದರಿಂದ ಈ ಅನೇಕತೆಯಲ್ಲೇ ಏಕತೆ ಇದೆ ಎನ್ನುವ ಗ್ರಹಿಕೆ ದೇಶದ ಭದ್ರತೆಗೂ ಅಗತ್ಯ; ನಮ್ಮಸಂಸ್ಕೃತಿಯ ವಿಕಾಸಕ್ಕೂ ಅಗತ್ಯ. ಆದ್ದರಿಂದಲೇ ಹೇಳುವುದು If we don’t decentralise we will balkanise. ರೋಮಿನ ಪೋಪಿನ ಬಿಗಿಮುಷ್ಟಿಯಿಂದ ಯುರೋಪ್ ಕಳಚಿಕೊಂಡು, ಛಿದ್ರವಾದ್ದು ಹೀಗೆ. ನಾವು ಕೂಡಾ ಭಾರತದ ಪ್ರಭುತ್ವವನ್ನು ವಿಕೇಂದ್ರೀಕರಿಸದಿದ್ದರೆ ಛಿದ್ರಗೊಳ್ಳುತ್ತೇವೆ ಎನ್ನುವಾಗ, ಸದ್ಯದಲ್ಲಿಯೇ ಈ ವಿಕೇಂದ್ರೀಕರಣದ ಹಿಂದಿರುವ ಪ್ರೇರಣೆಗಳನ್ನೂ ಶಕ್ತಿಗಳನ್ನೂ ನಾವು ವಿಮರ್ಶಾತ್ಮಕವಾಗಿ ನೋಡಬೇಕಾಗುತ್ತದೆ.

* * *

ಹೀಗೆ ನೋಡುವಾಗಲೇ ನಾವು ಮುಜುಗರಗೊಳ್ಳುವ ಒಂದು ಸತ್ಯವನ್ನು ಕಾಣಲೇಬೇಕಾಗಿ ಬರುವುದು. ಉದಾಹರಣೆಗೆ: ನಮ್ಮ ರುಚಿಗಳ ವೈವಿಧ್ಯವನ್ನೇ ನೋಡಿ. ನಮ್ಮ ಆಹಾರಗಳು ಹಲವು ವಿಧ. ಅಕ್ಕಿ, ಗೋಧಿ, ರಾಗಿ, ನವಣೆ, ಜೋಳ ಇತ್ಯಾದಿ. ಪ್ರದೇಶಗಳನ್ನು ಆಧರಿಸಿ, ಜಾತಿಗಳನ್ನು ಆಧರಿಸಿ ಈ ವ್ಯತ್ಯಾಸವಿರುವಂತೆ, ವಿವಿಧ ಎಣ್ಣೆಗಳ ಬಳಕೆಯ ಪ್ರದೇಶಗಳನ್ನಾಗಿ ನಮ್ಮ ದೇಶವನ್ನು ನಾವು ವಿಂಗಡಿಸಬಹುದು; ಎಳ್ಳು, ಸಾಸಿವೆ, ತೆಂಗು, ಕಡಲೇಕಾಯಿ ಇತ್ಯಾದಿಗಳನ್ನು ಉಪಯೋಗಿಸುವ ವಲಯಗಳಾಗಿ. ಭಾಷೆ ಮಾತ್ರ ನಮ್ಮ ವಿಶಿಷ್ಟತೆಗಳ ಆಧಾರವಲ್ಲ. ದಕ್ಷಿಣ ಕನ್ನಡ ಜಿಲ್ಲೆಯವರು ಕನ್ನಡಿಗರಾಗಿ ಗುಲ್ಬರ್ಗಕ್ಕೆ ಹತ್ತಿರದವರು; ಆದರೆ ತೆಂಗಿನೆಣ್ಣೆ ಬಳಕೆಯಲ್ಲೂ ಊಟ ಉಪಚಾರಗಳಲ್ಲೂ ಮತ್ತು ಭೂತಾರಾಧನೆ ಯಕ್ಷಗಾನ ಸಂಪ್ರದಾಯಗಳಲ್ಲೂ ನಮಗೆ ಭಾಷೆಯಲ್ಲಿ ಅನ್ಯರಾದ ಮಲಯಾಳಿಗಳಿಗೆ ಹತ್ತಿರದವರು.

ಈ ದೇಶದ ಸಂಸ್ಕೃತಿಯ ಬಹುತ್ವಕ್ಕೆ ಜಾತಿ ಉಪಜಾತಿಗಳಿಗೆ ಹತ್ತಿರದವರು. ಜಾತಿಗೊಂದೊಂದು ಆಚರಣೆ, ಜಾತಿಗೊಂದೊಂದು ಪ್ರತ್ಯೇಕ ದೇವತಾ ಕಲ್ಪನೆ. ಉಡಿಗೆ – ತೊಡಿಗೆಯಿಂದ ಹಿಡಿದು ಮದುವೆ, ಸಾವು – ಯಾಕೆ ಪ್ರಾತರ್ವಿಧಿಗಳಲ್ಲೂ – ಒಂದು ಜಾತಿಯಂತೆ ಇನ್ನೊಂದಿಲ್ಲ. ನಮ್ಮ ಅನೇಕ ಕಸುಬುಗಳಿಗೆ, ಅವುಗಳ ತಾಂತ್ರಿಕ ಜ್ಞಾನದ ಸಾತತ್ಯಕ್ಕೆ ಜಾತಿಯೊಳಗಿರುವುದು ಅಗತ್ಯ. ಇವತ್ತಿನ ದೇಶದ ಸಂಪತ್ತನ್ನು ಯಾರಿಗೆ ಎಷ್ಟು ಹಂಚುವುದರ ಮೂಲಕ ನ್ಯಾಯ ದೊರಕಿಸಬೇಕೆಂಬ ಮಹತ್ವದ ನೈತಿಕ ಹಾಗೂ ಕಾನೂನಿನ ಪ್ರಶ್ನೆಗೂ ಜಾತಿಯೇ ಆಧಾರವಾಗಿದೆಯೇ ಹೊರತು, ಬೇರೆ ಯಾವ ಆಧುನಿಕ ಆರ್ಥಿಕ ಪರಿಕಲ್ಪನೆಯೂ ಆಗಿಲ್ಲ. ನಾವು ನಮ್ಮ ದೇಶದ ಅನೇಕತೆಯನ್ನು ಉಳಿಸಿಕೊಳ್ಳಬೇಕೆಂದು ಏಕಾಧಿಪತ್ಯದ ಪ್ರಭುತ್ವಕ್ಕೆ ಎದುರಾದಾಗ ಈ ಜಾತಿಗಳಿಂದಗಿ ಹುಟ್ಟಿಕೊಂಡ ಅನೇಕತೆಯ ಸತ್ಯವನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ನಮ್ಮ ವೈಚಾರಿಕತೆಯನ್ನೂ ಕಲ್ಪನಾಶಕ್ತಿಯನ್ನೂ, ಅನುಕಂಪಗಳನ್ನೂ, ಪ್ರೇಮದ ಆಕರ್ಷಣೆಯನ್ನೂ –  ಅಂದರೆ ಒಟ್ಟಿನಲ್ಲಿ ನಮ್ಮ ಚೈತನ್ಯಶೀಲ ಬದುಕನ್ನು ಮೊಟಕುಗೊಳಿಸುವುದು ಕೂಡಾ ಅನೇಕತೆಗೆ ಕಾರಣವಾದ ಈ ಜಾತಿಪದ್ಧತಿಯೇ. ಮನುಷ್ಯ ತನ್ನ ಜಡಸ್ಥಿತಿಯನ್ನು ಭಾರತದಲ್ಲಿ ಮೀರುತ್ತಿದ್ದಂತೆ – ಎಲ್ಲ ಕಾಲದಲ್ಲೂ ಇದು ನಿಜವಿದ್ದಿರಬೇಕು – ಅವನು ತನ್ನ ಜಾತಿಯ ಮಿತಿಗಳಿಂದ ಮುಕ್ತನಾಗಬೇಕಾಗುತ್ತದೆ. ಇದು ಎಷ್ಟು ಸತ್ಯವೆಂದರೆ ಯುವಕ –  ಯುವತಿಯರು ಪರಸ್ಪರ ಪ್ರೇಮಿಸಿದಾಗ ಮಾತ್ರವಲ್ಲ, ದೇವರನ್ನು ಗಾಢವಾಗಿ ಹಚ್ಚಿಕೊಂಡಾಗಲೂ ಜಾತಿಗಳು ಕೃತಕವಾಗಿ ಕಾಣುತ್ತವೆ. ತನ್ನ ತನ್ನ ಜಾತಿಯ ಒಳಗೆ ಯಾವ ಪ್ರಶ್ನೆಗಳನ್ನೂ ಕೇಳದಂತೆ ಇದ್ದುಬಿಡುವ ಯಾವ ಮುಗ್ಧನೂ ಇವತ್ತು ಭಾರತದಲ್ಲಿ ಶ್ರೇಷ್ಠ ಬರಹಗಾರನಾಗಲೀ ಕಲಾವಿದನಾಗಲೀ ಚಿಂತಕನಾಗಲೀ ದಾರ್ಶಕನಿಕನಾಗಲೀ ಆಗಲಾರ. ತನ್ನ ಮಕ್ಕಳು ಅನ್ಯದ ಆಕರ್ಷಣೆಯಲ್ಲಿ ಚಿಗುರಿಕೊಳ್ಳಲು ತೊಡಗಿದಾಗ ಅಂಥವನು ಒಬ್ಬ ಒಳ್ಳೆಯ ತಂದೆಯೂ ಆಗಲಾರ. ಹಾಗೆಯೇ ತನ್ನ ಜಾತಿಯ ಎಲ್ಲಾ ವಾಸನೆಗಳನ್ನು ಕಳೆದುಕೊಂಡ ಒಂದು ಅಪ್ಪಟ ಪ್ರಾಣಿಯೂ ಭಾರತದಲ್ಲಿ ಇಲ್ಲ. ಇದ್ದರೆ ಅದೊಂದು ವಿಶೇಷ. ಒಂದೋ ಪರಮ ಅವಧೂತತನದಲ್ಲಿ, ಅಥವಾ ಸ್ವದೇಶ ತೊರೆದ ಐರೋಪಿಕರಣದಲ್ಲಿ, ಅಥವಾ ಅಂತರ್ಜಾತಿ ವಿವಾಹಗಳಲ್ಲಿ ಸವೆಯುತ್ತ ಹೋಗುವ ಆಧುನಿಕತೆಯಲ್ಲಿ ಇಂತಹ ಮನುಷ್ಯ ಹುಟ್ಟಿಕೊಳ್ಳಬಹುದು –  ಭಾರತದಲ್ಲಿ.

ಎಲ್ಲಾ ಜಾತಿಗಳೂ ನಾಶವಾಗಿ ನಾವು ಕಲ್ಪನಾಶೀಲರಾದ, ಸೂಕ್ಷ್ಮಜ್ಞರಾದ, ಪ್ರೀತಿಗೆ ಮುಕ್ತರಾಗಿ ತೆರೆದುಕೊಂಡ ಮನುಷ್ಯರಾಗಿರಬೇಕು ಎಂಬುದು ನಮ್ಮ ಆಸೆ. ಆದರೆ ಈ ಆಸೆ ಒಂದು ವಿಪರ್ಯಾಸದಲ್ಲಿ ಫಲಿಸಬಹುದು; ಇವತ್ತಿನ ನಿರ್ದಯವಾದ ಸರ್ವಭಕ್ಷಕ ಜಾಗತೀಕರಣದ ಪ್ರಕ್ರಿಯೆಯಲ್ಲಿ ಜಾತಿಭೇದಗಳು ಕ್ರಮೇಣ ತೊಡಕುಗಳಾಗಿ ಕಂಡು, ನಾವು ಒಂದು ಮುಖಹೀನವಾದ, ಏಕರುಚಿಯವರಾದ, ಯಾವ ವ್ಯತ್ಯಾಸಗಳೂ ಇಲ್ಲದ ಜನರಾಗಿ ಬಿಡಬಹುದು. ಇದಕ್ಕೆ ವಿರೋಧವಾಗಿ ಹಿಮ್ಮೆಟ್ಟುವುದು ಕೂಡ ಸಾಮೂಹಿಕವಾಗಿ ಸಾಧ್ಯವಿಲ್ಲವೆನ್ನಿಸುತ್ತದೆ. ಸಾಧ್ಯವಾದದ್ದೇ ಆದರೆ ನಾವು ಸತತ ವಿರೋಧದಲ್ಲಿ ವಿಕಾರಗೊಂಡ, ಎಲ್ಲಿಯೂ ಸಲ್ಲದ, ಭೂತಕಾಲದ ತಿಪ್ಪೆಯಲ್ಲಿ ವಾಸಿಸುವ ಸಂವೇದನಾರಹಿತವಾದ ಪ್ರಾಣಿಗಳಾಗಿ ಬಿಡಬಹುದು. ಆದ್ದರಿಂದ ನಮ್ಮ ಎದುರಿಗಿರುವ ಆತಂಕ ಇದು: ಇವತ್ತಿಗೂ ಜಾತಿವ್ಯವಸ್ಥೆಯಿಂದಾಗಿ ಉಳಿದಿರುವ ಸಾಂಸ್ಕೃತಿಕ ಅನೇಕತೆಯನ್ನು ನಮ್ಮ ನಿತ್ಯ ಜೀವನದ ಶೈಲಿಯಲ್ಲಿ ಕಳೆದುಕೊಳ್ಳದಂತೆ, ಆದರೆ ನಮ್ಮನ್ನು ಜಡ್ಡುಗೊಳಿಸುವ ಜಾತಿಯ ಅಲ್ಪತೆಯ ಕಲ್ಪನೆಗಳಿಂದ ಹೊರಬಂದು, ನಮ್ಮ ಸ್ಮೃತಿಯ ಸಾತತ್ಯವನ್ನು ಉಳಿಸಿಕೊಂಡ, ಆದರೆ ಆಧುನಿಕಕ್ಕೆ ಸ್ಪಂದಿಸುವ, ಮನುಷ್ಯರಾಗುವುದು ಹೇಗೆ ನಾವು? ಇದೇ ಇವತ್ತಿನ ಮುಖ್ಯ ವಾಗ್ವಾದ ಎನ್ನಬಹುದು. ಲೋಹಿಯಾ ಒಮ್ಮೆ ಹೇಳಿದ್ದು ನೆನಪಾಗುತ್ತದೆ: ಯುರೋಪನ್ನು ತಾನು ವಿರೋಧಿಸುವಾಗ ಸನಾತನಿಯರಂತೆ ಕಾಣುವ ಅಪಾಯವಿದೆ; ಆದರೆ ಸನಾತನಿಗಳನ್ನು ತಾನು ವಿರೋಧಿಸುವಾಗ ಯುರೋಪಿಗೆ ಒತ್ತೆಯಾದವನಂತೆ ಕಾಣುವ ಅಪಾಯವಿದೆ. ಕೇವಲ ತರ್ಕದಲ್ಲಿ ಮೀರಬಹುದಾದ ಅಪಾಯ ಇದಲ್ಲ; ಚಿಂತನೆಯಲ್ಲೂ ಅಲ್ಲ. ಆದರೆ ಇದೊಂದು ನಮ್ಮ ಕಾಲದ ವಿಸ್ಮಯ; ನಿತ್ಯ ಜೀವನದ ಸೃಜನತೆಯಲ್ಲಿ ನಾವು ಮೀರಬಹುದಾದ್ದು. ನಮ್ಮನ್ನು ಆಧುನಿಕ ಯುಗಕ್ಕೆ ತಂದವರು ಮೊಣಕಾಲಿನ ಮೇಲೆ ಪಂಚೆ ಉಟ್ಟು ನಿತ್ಯ ಬೆಳಗ್ಗೆ ಗೀತೆಯನ್ನೂ, ಕುರಾನನ್ನೂ, ಬೈಬಲನ್ನೂ ಭಕ್ತಿಯಿಂದ ಪಠಿಸುತ್ತಿದ್ದ ಗಾಂಧೀಜಿಯವರು. ನೆಹರೂ ಕೂಡಾ ಅವರ ಫಲವೇ.

* * *

ಎತ್ತೆತ್ತಲೋ ಸುತ್ತಿ ಬೆಳೆದಿರುವ ಈ ಟಿಪ್ಪಣಿಗಳ ಅಂತರಂಗದಲ್ಲಿ ಬಯಕೆಯನ್ನು ಈ ಮುಂದಿನ ವಾಕ್ಯಗಳಲ್ಲಿ ಹೀಗೆ ಸಂಗ್ರಹಿಸಬಹುದು.

೧. ನಮ್ಮ ನಮ್ಮ ಭಾಷೆಗಳನ್ನು ಬಿಟ್ಟುಕೊಡದಂತೆ ನಾವು ಇಡೀ ಜಗತ್ತಿಗೆ ಸ್ಪಂದಿಸಬಲ್ಲ ಜನರಾಗಬೇಕು.

೨. ನಮ್ಮ ಭಾರತದ ಏಕತೆಯನ್ನು ಕಾಯುವ, ಮತ್ತು ಅಸ್ಪೃಶ್ಯತೆ, ಸ್ತ್ರೀ ಹಿಂಸೆ, ಮತಾಂಧತೆ ಇತ್ಯಾದಿ ಅನಿಷ್ಟಗಳನ್ನು ಕಿತ್ತೆಸೆಯುವ ಅಧಿಕಾರವನ್ನು ಸರ್ವರಿಂದ ಪಡೆದ ಪ್ರಭುತ್ವ ನಮಗೆ ಬೇಕು.

೩. ಜಾತಿಗಳಿಂದ ಹುಟ್ಟುವ ಅಲ್ಪತನ ಮಾಯವಾಗಿ, ನಮ್ಮ ಅನೇಕತೆಯ ವಿಶಿಷ್ಟತೆಗಳೆಲ್ಲವೂ ಸೃಜನಶೀಲವಾಗಿ ಬೆಳೆಯುತ್ತ, ಈ ಬೆಳೆಯುವಿಕೆಯಲ್ಲಿ ಭಾರತದ ಪರಮ ಪ್ರಭುತ್ವ ವಿಕೇಂದ್ರಿಕೃತವಾಗಿ ಬಹುಕೇಂದ್ರಿತವಾದ ರಾಜ್ಯವ್ಯವಸ್ಥೆ ನಮ್ಮದಾಗಿರಬೇಕು.

೪. ಪ್ರಭುತ್ವದ ಭಯ ಕುಗ್ಗುತ್ತ ನಾವು ಸ್ವಯಂಪ್ರೇರಿತವಾಗಿ ನಡೆದುಕೊಳ್ಳುವ ನಾಗರಿಕ ಜನರಾಗಬೇಕು.

೫. ಜಗತ್ತಿನ ಯಾವನಾದರೂ ತನ್ನ ಆಯ್ಕೆಯಿಂದಾಗಿ ಕನ್ನಡಿಗನಾಗುವ, ಹಾಗೆಯೇ ಕನ್ನಡಿಗನೊಬ್ಬ ಜಗತ್ತಿನ ಯಾವ ಪ್ರದೇಶದವನಾದರೂ ಆಗಬಲ್ಲ ಮುಕ್ತ ಸಂವೇದನಾಶೀಲ ಜಗತ್ತನ್ನು ಸೃಷ್ಟಿಸಲು ನಾವು ಹಂಬಲಿಸಬೇಕು.

ಅಂದರೆ, ಬುದ್ಧನ ಕಥೆ ಹೇಳುವಂತೆ ಈ ಭೂಮಿಯಿಂದ ಅಗತ್ಯವಾದದ್ದಷ್ಟನ್ನು ಆಯ್ದು ಅನುಭವಿಸುವ ಜನ ನಾವಾಗಬೇಕು.