ಅಗ್ರಮಾನ್ಯ ಲೇಖಕರಾದ ಡಾ. ಯು.ಆರ್. ಅನಂತಮೂರ್ತಿ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲಿ ಅಪೂರ್ವ ಚಿಂತಕರೆಂದು ಹೆಸರಾದವರು. ಸಾಹಿತ್ಯ, ಸಮಾಜ, ರಾಜಕೀಯ, ಪರಿಸರ, ಸಂಸ್ಕೃತಿ, ಹೀಗೆ ಹಲವು ಕ್ಷೇತ್ರಗಳ ಬಗ್ಗೆ ಅವರಷ್ಟು ಸಂವೇದನೆಯಿಂದ, ಒಳನೋಟಗಳಿಂದ ಬರೆದವರು ಇನ್ನೊಬ್ಬರಿಲ್ಲ. ಪರಂಪರೆಯ ಸ್ಮೃತಿಗಳನ್ನು ತಮ್ಮ ಪ್ರಜ್ಞೆಯಲ್ಲಿಟ್ಟುಕೊಂಡೇ ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಅವರು ನಮ್ಮೆಲ್ಲರ ಅಂತಃಸಾಕ್ಷಿಯನ್ನು ಸದಾ ಎಚ್ಚರಿಸುತ್ತಿರುವವರು. ಹಲವು ದಿಕ್ಕುಗಳಿಗೆ ಚಾಚಿಕೊಳ್ಳುವ ವೈಚಾರಿಕತೆಯಿಂದಾಗಿ, ವ್ಯಕ್ತಿಯನ್ನೋ ವಿಷಯವನ್ನೋ ಪರಿಸ್ಥಿತಿಯನ್ನೋ ಅಮೂಲಾಗ್ರವಾಗಿ ಪರಿಶೀಲಿಸಿ ನೋಡುವ ಸೂಕ್ಷ್ಮಜ್ಞತೆಯಿಂದಾಗಿ ಅವರ ಪ್ರಬಂಧಗಳು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಪೂರ್ವವೆನಿಸಿವೆ. ಬೆತ್ತಲೆ ಪೂಜೆ ಯಾಕೆ ಕೂಡದು? ಎಂಬ ಈ ಕೃತಿ ಮೊದಲು ಪ್ರಕಟವಾದದ್ದು ೧೯೯೬ರಲ್ಲಿ. ಇದನ್ನು ಈಗ ಪುನರ್ಮುದ್ರಿಸುವ ಸಂತೋಷ ನಮ್ಮದು. ಇದಕ್ಕಾಗಿ ಅನಂತಮೂರ್ತಿಯವರಿಗೆ ನಮ್ಮ ಪ್ರಕಾಶನ ಋಣಿಯಾಗಿದೆ.

ಕೆ.ಎಸ್‌.ಮುರಳಿ
ವಸಂತ ಪ್ರಕಾಶನ