ಯು.ಆರ್.ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್‌ವೆಲ್ತ್‌ ಫೆಲೊಶಿಪ್‌ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್‌ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಆಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್‌ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ, ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್‌ಬ್ರೈಟ್‌ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಅಧ್ಯಕ್ಷ, ಪುಣೆಯ ಫಿಲ್ಮ್‌ ಆಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು.

ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯುರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ ಅವರ ಮುಖ್ಯ ಕಥಾ ಸಂಕಲನಗಳು, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ ಮೊದಲಾದ ವಿಮರ್ಶಾತ್ಮಕ/ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ.

ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ. ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್‌, ಹೋಮಿಬಾಬಾ ಫೆಲೊಶಿಪ್‌, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.