ಪ್ರಿಯ ಸ್ನೇಹಿತರೆ,

ನಾನು ಈ ಶಿಬಿರದಲ್ಲಿ ಹಲವಾರು ದಿನ ಇರುತ್ತೇನೆ. ಇಲ್ಲಿ ಇಡೀ ದಿನ ನಿಮ್ಮನ್ನು ಭೇಟಿಯಾಗುವ, ನಿಮ್ಮೊಡನೆ ಮಾತನಾಡುವ ಅವಕಾಶವಿದೆ. ಹಾಗೆಯೇ ಬೇರೆಯವರು ನಡೆಸಿಕೊಡುವ ಉಪನ್ಯಾಸ, ಚರ್ಚೆಗಳಲ್ಲೂ ನನಗೆ ಭಾಗವಹಿಸುವ ಇಷ್ಟವಿದೆ. ಹಾಗಾಗಿ ಈಗಿನ ಮಟ್ಟಿಗೆ ನನ್ನ ಮನಸ್ಸಿನಲ್ಲಿರುವುದನ್ನು ಆರಾಮವಾಗಿ ಕೆಲವು ಚೌಕಟ್ಟಿನ ಮಾತುಗಳ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ನಾವು ಹೀಗೆ ಒಟ್ಟಾಗಿ ಕೂತು ನಮ್ಮ ದೇಶಕ್ಕೆ, ನಮ್ಮ ಮನಸ್ಸಿಗೆ ಅಗತ್ಯವಾದ ಸಿನೆಮಾ, ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ವಿಚಾರ ಮಾಡುವಾಗ, ನಾವು ಈ ವಿಷಯದಲ್ಲಿ ಏನನ್ನು ಅಪೇಕ್ಷಿಸುತ್ತಿದ್ದೇವೆ, ಈ ನಮ್ಮ ಅಪೇಕ್ಷೆಯ ಹಿಂದೆ ಯಾವ ಯಾವ ದೊಡ್ಡ ಶಕ್ತಿಗಳು –  ನಮಗೇ ಅರಿವಾಗುವಂಥ ಯಾವ ಪರೋಕ್ಷ ಪ್ರೇರಣೆಗಳು –  ಕೆಲಸ ಮಾಡುತ್ತಿರಬಹುದು ಎಂಬುದಕ್ಕೆ ವೈಚಾರಿಕವಾಗಿ ಒಂದು ಸ್ಪಷ್ಟತೆಯನ್ನು ತರುವುದಕ್ಕೆ ಇಲ್ಲಿ ಪ್ರಯತ್ನಿಸುತ್ತೇನೆ; ಎಂತಹ ಸ್ಪಷ್ಟತೆಯೆಂದರೆ, ನಾನು ಹೇಳುವ ಸ್ಪಷ್ಟತೆ ಮಾತ್ರವಾಗದೆ, ಅದು ನಿಮ್ಮ ನಿಮ್ಮ ಅನುಭವದಲ್ಲಿ, ನಿಮ್ಮ ನಿಮ್ಮ ಅನುಭವಕ್ಕೆ ಸ್ಪಷ್ಟವಾಗುತ್ತ ಹೋಗಬೇಕು.

ನನ್ನ ಮಾತನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ಯೋಚಿಸುತ್ತಿದ್ದಾಗ ಇವತ್ತು ಬೆಳಿಗ್ಗೆ ಹೊಳೆಯಿತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಡಿಯಾಕ್ಕೆ ಹಿಂದೆ ಬಂದರು, ಬಂದ ಮೇಲೆ ಕಾಶಿಗೆ ಹೋಗಿದ್ದರು. ಹೋಗುವಾಗ ಪವಿತ್ರ ಸ್ಥಳ ಕಾಶಿ, ಪವಿತ್ರ ನದಿ ಗಂಗೆ, ಪವಿತ್ರ ವಿಶ್ವನಾಥ ಎಂದೆಲ್ಲ ಮನಸ್ಸಿನಲ್ಲಿ ತುಂಬಿಕೊಂಡು ಹೋಗಿದ್ದರೆಂದು ಕಾಣುತ್ತದೆ. ಆದರೆ ಅಲ್ಲಿಯ ಕೊಳಕನ್ನು ನೋಡಿ ಅವರಿಗೆ ಎಷ್ಟು ಅಸಹ್ಯವಾಯಿತೆಂದರೆ ಯಾವ ಮುಚ್ಚುಮರೆಯಿಲ್ಲದೆ ಆ ಬಗ್ಗೆ ಅವರು ಮಾತಾಡಿ ಬಿಡುತ್ತಾರೆ: ‘ಇದು ಶುದ್ಧ ಕೊಳಕು, ಆ ಬೀದಿಗಳು, ಆ ಹೆಣಗಳು, ಆ ರೊಚ್ಚೆ, ಇದು ಪವಿತ್ರ ಇರುವುದಕ್ಕೆ ಸಾಧ್ಯವೇ ಇಲ್ಲ, ಪವಿತ್ರ ಎಂದು ಹೇಳುತ್ತಲೇ ಇದನ್ನು ಇಷ್ಟು ಕೊಳಕು ಮಾಡಿದ್ದೇವಲ್ಲ. ಯಾವ ಥರದ ಜನ ನಾವು?’ ಗಾಂಧಿಯ ಮೊದಲ ಬರವಣಿಗೆಯಲ್ಲಿ ಕಂಡುಬರುವಂತೆ ಆಗ ಅವರ ಇಡೀ ಮನಸ್ಸು ಒಂದು ದೊಡ್ಡ ಉತ್ಪಾತದಲ್ಲಿತ್ತು. ಇವತ್ತು ಬರೆಯುತ್ತಿರುವ ಅನೇಕರಲ್ಲೂ ಇದೇ ಮನೋಭಾವ ಕೆಲಸ ಮಾಡುತ್ತಿರಬಹುದಾದ್ದರಿಂದ ಇದನ್ನು ಹೇಳುತ್ತಿದ್ದೇನೆ. ನೀವು ಬೇಂದ್ರೆಯವರನ್ನು ಓದಿದರೆ ತಿಳಿಯುತ್ತದೆ –  ಗಂಗಾನದಿ ಅನ್ನುವುದು ಅವರಲ್ಲಿ ಬಹಳ ದೊಡ್ಡದಾದ ಒಂದು ಸಂಕೇತ, ಅದು ಅವಿಚ್ಛಿನ್ನವಾಗಿ ಹರಿಯುವಂಥದ್ದು. ಆಮೇಲೆ ಅಡಿಗರೂ ಗಂಗೆಯ ಬಗ್ಗೆ ಬಹಳ ಒಳ್ಳೆಯ ಒಂದು ಪದ್ಯ ‘ಬತ್ತಲಾರದ ಗಂಗೆ’ ಬರೆದಿದ್ದಾರೆ. ಅಲ್ಲಿ ‘ಬತ್ತಲಾರದ ಗಂಗೆ’ ಅನ್ನುವುದು –  ಅದು ಯಾವತ್ತೂ ಬತ್ತುವುದೇ ಇಲ್ಲ, ನಮ್ಮ ಸಂಸ್ಕೃತಿಯ ಹಾಗೆ ಹರಿಯುತ್ತಲೇ ಇರುವುದು ಎಂಬ ಹೊಗಳಿಕೆಯ ಮಾತೂ ಹೌದು; ಹಾಗೆಯೇ ‘ಬತ್ತಲಾರದ ಗಂಗೆ’ ಅಂದರೆ ಇದು ಬತ್ತಿಯಾದರೂ ಹೋಗಿದ್ದರೆ ಒಳ್ಳೆಯದಾಗುತ್ತಿತ್ತು. ಆಗ ನಾವು ಹೊಸದನ್ನಾದರೂ ಹುಡುಕುತ್ತಿದ್ದೆವು ಎಂಬ ಸಿಟ್ಟಿನ ಮಾತೂ ಹೌದು. ಇಂಥದ್ದೇ ದ್ವಂದ್ವ ಸಂಘರ್ಷ ಗಾಂಧಿಯನ್ನು ಕಾಡಿರಬೇಕು. ಯಾಕೆಂದರೆ ಗಾಂಧಿಗೆ ಆಗ ಪಾಶ್ಚಾತ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು, ಮತ್ತೆ ತನ್ನ ನೆಲದಲ್ಲೇ ಊರಿದಂತಹ ಒಂದು ಹೊಸ ಸಂವೇದನೆಯನ್ನು ತಾನು ಪಡೆದುಕೊಳ್ಳಬೇಕು ಎಂಬ ಹಂಬಲವಿತ್ತು. ಹಾಗೆ ಇಲ್ಲಿ ಬಂದು ಶೋಧನೆ ನಡೆಸಿದರೆ ಇಲ್ಲಿ ಕಂಡದ್ದು ಮಹಾ ಅಸಹ್ಯರಾಶಿ. ಇವತ್ತಿನ ಇಂಡಿಯಾದ ಸೃಜನಶೀಲ ಮನಸ್ಸು ತನ್ನ ಅತ್ಯುತ್ತಮ ಸ್ಥಿತಿಯಲ್ಲಿ ಇದೇ ರೀತಿ ಕೆಲಸ ಮಾಡುತ್ತದೆ. ಇಲ್ಲಿಯ ಅತ್ಯುತ್ಕೃಷ್ಟವಾದದ್ದನ್ನು ಕಂಡುಕೊಳ್ಳುತ್ತ ಹೋಗುವುದರೊಟ್ಟಿಗೇ ಅದನ್ನು ಆವರಿಸಿಕೊಂಡ ಅಸಹ್ಯವನ್ನು ಗಮನಿಸಿ ಕ್ರೋಧಗೊಳ್ಳುತ್ತದೆ. ಹಾಗೆಯೇ, ಗಾಂಧಿ ಅಲ್ಲಿಯ ರಾಜ ಮಹಾರಾಜರ ಸಭೆಯೊಂದಕ್ಕೆ ಹೋಗುತ್ತಾರೆ. ಆ ಘಟನೆಯ ವಿವರಗಳು ಬಹಳ ಚೆನ್ನಾಗಿವೆ. ಅಲ್ಲಿ ಗಾಂಧಿ ಮಾತನಾಡಲು ಪ್ರಾರಂಭಿಸುತ್ತಾರೆ ಆ ರಾಜಮಹಾರಾಜರನ್ನು ಉದ್ದೇಶಿಸಿ. ಇಷ್ಟು ವೇಷಭೂಷಣ ಹೊತ್ತುಕೊಂಡು ಬಂದಿದ್ದೀರಲ್ಲ, ನೀವು ದರಿದ್ರ ಬದುಕು ಬದುಕುತ್ತಿದ್ದೀರಿ, ಇದನ್ನೆಲ್ಲ –  ಈ ಬಂಗಾರವನ್ನೆಲ್ಲ –  ತೆಗೆದುಕೊಂಡು ಹೋಗಿ ಬಿಸಾಡಿ ಎಂದು ಬೈಯುತ್ತಾರೆ. ಆಗ ಅಲ್ಲಿದ್ದ ಐರಿಷ್ ಮಹಿಳೆ ಹ್ಯಾನಿ ಬೆಸೆಂಟ್ ಗಾಂಧಿಗೆ ಮುಂದೆ ಮಾತನಾಡಲು ಬಿಡುವುದಿಲ್ಲ. ಬ್ರಿಟಿಷರು ತಮ್ಮ ದೇಶದ ರಾಜತ್ವದ ಕೊಂಚ ಭಾಗವನ್ನಾದರೂ ಬಿಟ್ಟುಕೊಟ್ಟು ಈ ರಾಜಮಹಾರಾಜರಿಗೆ, ನಮ್ಮದೇ ದೇಶದವರಿಗೆ ಹೀಗೆ ಬಂಗಾರ ಹೇರಿಕೊಂಡು ಕೂರಲು ಅವಕಾಶ ಕೊಟ್ಟಿದ್ದಾರಲ್ಲ, ಅದನ್ನು ಹೀಗೆ ಖಂಡಿಸಬಾರದು ಎನ್ನುವ ಭಾವನೆ ಆ ಮಹಿಳೆಗಿದ್ದಿರಬೇಕು, ಪಾಪ. ಆದರೆ ಗಾಂಧಿ ಅದನ್ನು ತಿರಸ್ಕರಿಸುತ್ತಾರೆ.

ಹೀಗೆ ಭಾರತದ ಬಗ್ಗೆ ಅಸಹ್ಯ ಪಡುವವರಿಗೆಲ್ಲ ಇನ್ನೊಂದು ಭಾವನೆಯೂ ಇರುತ್ತಿತ್ತು. ರಾಜಾರಾಮ ಮೋಹನರಾಯರಿಗೆ ಇದ್ದಂತಹ ಭಾವನೆ ಅದು. ಬಹಳ ಸುಂದರವಾದದ್ದೆಲ್ಲ ಭಾರತದ ಹೊರಗಿದೆ, ನಮ್ಮದೆಲ್ಲ ಬಹಳ ಕೊಳಕಾಗಿ ಹೋಗಿದೆ, ಇದರಿಂದ ಒಳ್ಳೆಯದೇನೂ ಉತ್ಪನ್ನವಾಗುವುದು ಸಾಧ್ಯವಿಲ್ಲ, ನಮಗೆ ಸ್ವಲ್ಪ ಇಂಗ್ಲಿಷ್ ವಿದ್ಯಾಭ್ಯಾಸ ಸಿಕ್ಕರೆ, ಅಥವಾ ಇಂಗ್ಲಿಷರು ಏನಾದರೂ ಬಂದು ನಮ್ಮ ದೇಶದಲ್ಲಿ ಸ್ವಲ್ಪ ಪರಿವರ್ತನೆಗಳನ್ನು ಮಾಡಿದರೆ, ನಮ್ಮ ಕೆಟ್ಟ ಪದ್ಧತಿಗಳನ್ನು ನಾಶಮಾಡಲು ಪ್ರಯತ್ನಿಸಿದರೆ ನಾವೂ ಸ್ವಲ್ಪ ಉದ್ಧಾರವಾಗಬಹುದು – ಎಂಬಂತಹ ಭಾವನೆ ಇಂಥವರದು. ಆದರೆ ಗಾಂಧೀಜಿ ಕ್ರಮೇಣ ಕಂಡುಕೊಂಡಂತೆ ಇಂಗ್ಲಿಷರು ಇಲ್ಲಿ ಬಂದು ಮಾಡುವಂಥದ್ದು ಏನೂ ಇಲ್ಲ, ಅವರ ಸಂಪರ್ಕದಿಂದ ನಮಗೆ ಏನಾದರೂ ಒಳ್ಳೆಯದಾಗುವಂಥದ್ದೂ ಇಲ್ಲ –  ಹೀಗೆ ತಿಳಿಯುವ ಮನಸ್ಸು ಅತ್ಯಂತ ಕಷ್ಟಸಾಧ್ಯವಾದದ್ದು. ಒಂದು ಕಡೆ –  ವೈಜ್ಞಾನಿಕ ತಾಂತ್ರಿಕತೆಯ ಪಾಶ್ಚಾತ್ಯ ಐರೋಪ್ಯ ಸಂಸ್ಕೃತಿಯಲ್ಲಿ ನಮಗೆ ಪರಿಹಾರವಿದೆ ಎಂದು ತಿಳಿದುಕೊಳ್ಳಬಾರದು; ಇನ್ನೊಂದೆಡೆ –  ಇಲ್ಲಿರುವುದು ಎಲ್ಲವೂ ಚೆನ್ನಾಗಿದೆ ಎಂದೂ ತಿಳಿದುಕೊಳ್ಳಬಾರದು. ಇದು ಬಹಳ ಕಷ್ಟ. ಯಾಕೆಂದರೆ, ಪಾಶ್ಚಾತ್ಯಕ್ಕೆ ವಿರೋಧವಾದ ಕೂಡಲೇ –  ಭಾರತವನ್ನು ಕೀರ್ತಿಸಲು ಪ್ರಾರಂಭಿಸುವಂತಹ, ಇಲ್ಲಿರುವುದೆಲ್ಲ ಬಹಳ ಸುಂದರವಾಗಿದೆ, ಇದನ್ನೆಲ್ಲ ಹಾಗೆಯೇ ಉಳಿಸಿಕೊಳ್ಳಬೇಕು ಅನ್ನುವಂಥ –  ಮನೋಭಾವ ಸೃಷ್ಟಿಯಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಇಲ್ಲಿರುವುದೆಲ್ಲ ನಿಷ್ಪ್ರಯೋಜಕವಾದದ್ದು, ಅನಿಷ್ಟವಾದದ್ದು, ಈ ದೇಶವನ್ನೇ ಬಿಟ್ಟು ಹೋಗಿ ಪಶ್ಚಿಮದಲ್ಲಿ ನೆಲೆಸಬೇಕು ಎನ್ನುವಂಥ ಇನ್ನೊಂದು ಮನೋಭಾವ ಸೃಷ್ಟಿಯಾಗುತ್ತದೆ.

ನೀವು ಒಬ್ಬ ರಾಜನ ಕಥೆಯನ್ನು ಕೇಳಿರಬೇಕು. ಆ ರಾಜನಿಗೆ ಒಂದು ಹಕ್ಕಿಯ ಹಾಡು ಬಹಳ ಇಷ್ಟವಾಯಿತಂತೆ. ಆತ ತನ್ನ ಮಂತ್ರಿಗೆ ಆ ಹಕ್ಕಿಯನ್ನು ಹಿಡಿದುಕೊಂಡು ಬರಲು ಹೇಳಿ ಕಳಿಸಿದ. ಮಂತ್ರಿ ಬಂದು ಹೇಳಿದ, ಹಕ್ಕಿಯನ್ನು ತರಲಾಗುವುದಿಲ್ಲ, ಅದು ಕೊಂಬೆಯನ್ನು ಬಿಟ್ಟಿರುವುದಿಲ್ಲ ಎಂದು. ಹಾಗಾದರೆ ಕೊಂಬೆಯನ್ನೇ ತಾ ಎಂದ ರಾಜ. ಮಂತ್ರಿ ಹೇಳಿದ ಬರೀ ಕೊಂಬೆ ತರಲಾಗುವುದಿಲ್ಲ, ಇಡೀ ಮರವನ್ನೇ ತರಬೇಕಾಗುತ್ತದೆ ಎಂದು. ರಾಜ ಮರವನ್ನೇ ತಾ ಎಂದ. ಮಂತ್ರಿ ಹೇಳಿದ, ಮರವೊಂದನ್ನೇ ತರಲಾಗುವುದಿಲ್ಲ, ಇಡೀ ಕಾಡನ್ನೇ ತರಬೇಕಾಗುತ್ತದೆ ಎಂದು. ಆಗ ರಾಜ ಅದರ ಅರ್ಥ ತಿಳಿದುಕೊಂಡು, ಹಾಗಾದರೆ ನಾನೇ ಕಾಡಿನಲ್ಲಿ ಹೋಗಿ ಇದ್ದುಬಿಡುತ್ತೇನೆ ಎಂದು ಹೇಳಿದ; ಹಾಗೇ ಹೋಗಿ ಇದ್ದ ಎಂದು ಕಥೆ ಹೇಳುತ್ತದೆ. ಇದನ್ನು ರಾಮಾನುಜನ್ ಒಂದು ಪದ್ಯದಲ್ಲಿ ಬಹಳ ಚೆನ್ನಾಗಿ ಬರೆದಿದ್ದಾರೆ. ಆ ರೀತಿ ವ್ಯಾಮೋಹದ ಭಾವ ತಾಳಿದರೆ ನಾವೂ ಇಲ್ಲಿರುವುದನ್ನೆಲ್ಲ ಬಿಟ್ಟು ವಿದೇಶಕ್ಕೆ ಹೋಗಿ ಇರಬೇಕಾಗುತ್ತದೆ ಅಷ್ಟೆ.

ಆದರೆ ಇಲ್ಲಿ ಈ ಹೆಗ್ಗೋಡಿನ ರಂಗಮಂದಿರ, ಇಲ್ಲಿ ಸುಬ್ಬಣ್ಣ ಮತ್ತು ಅವನ ಸಹೋದ್ಯೋಗಿಗಳು ಮಾಡುತ್ತಿರುವ ಕೆಲಸವಿದೆಯಲ್ಲ, ಇದು ನಾನು ಈ ಮೊದಲು ಹೇಳಿದಂಥ ಮನಸ್ಥಿತಿಯದು. ಇಲ್ಲಿ ಇರುವ ಸ್ಥಿತಿಯ ಬಗ್ಗೆ ಒಂದು ರೀತಿಯ ಆತಂಕದ ಭಾವನೆ; ಹಾಗೆಯೇ ಇದಕ್ಕೆ ಪರಿಹಾರ ಪಾಶ್ಚಾತ್ಯರಲಿಲ್ಲ, ದೆಹಲಿಯಲ್ಲೂ ಇಲ್ಲ, ಬೆಂಗಳೂರಿನಲ್ಲೂ ಇಲ್ಲ, ಇಂಥ ಪರಿಹಾರವನ್ನೆಲ್ಲ ನಾವು ಇರುವಲ್ಲಿಯೇ, ನಮ್ಮ ಪರಿಸರ, ಪರಿಕರಗಳಿಂದಲೇ ಪಡೆದುಕೊಳ್ಳಬೇಕು ಎಂದಾಗ ಇಂಥ ಸಂಸ್ಥೆಗಳು ಸೃಷ್ಟಿಯಾಗುತ್ತವೆ. ಈ ಸಂಸ್ಥೆ ಇಲ್ಲಿ ನಡೆಸುತ್ತಿರುವ ಇಂಥ ಚಟುವಟಿಕೆಗಳ ಹಿಂದೆ ಇರುವ ಪ್ರೇರಣೆಗೆ ಒಂದು ಐಡಿಯಾಲಜಿಯ ಚೌಕಟ್ಟು ಕೊಡಲು ನಾನು ಈ ಮಾತನ್ನು ಹೇಳಿದೆ. ನಾನು ಇನ್ನು ಮುಂದೆ ಮಾತನಾಡುವುದೆಲ್ಲ ಇಂಥ ಪ್ರೇರಣೆಯಿಂದಲೇ ಉತ್ಪನ್ನವಾಗಿರುವುದು.

ಇಂಥ ಒಂದು ಪ್ರೇರಣೆ ನಮ್ಮ ಮನಸ್ಸಿನಲ್ಲಿ ಕೆಲಸ ಮಾಡುತ್ತಿದ್ದರೆ, ನಾವು ಸಾಹಿತ್ಯವನ್ನು ಓದುವಾಗ ಅಥವಾ ಸೃಷ್ಟಿಸುವಾಗ ಏನೇನು ತೊಡಕುಗಳು ಬರುತ್ತವೆ ನೋಡಿ. ಈಗ ಒಂದು ಉದಾಹರಣೆಯಾಗಿ ಯುರೋಪಿನ ದೇಶಗಳನ್ನು ನೋಡಿದರೆ, ಅವರಿಗೆ ಪ್ರಭುತ್ವ (Statehood)ದ ಸಮಸ್ಯೆ ಇಲ್ಲ. ರಷಿಯಾಕ್ಕೂ ಯಾವತ್ತೂ ಇಲ್ಲ. ಕ್ರಾಂತಿಗಿಂತ ಮುಂಚೆಯೂ ಯುರೋಪಿನ ಒಂದು ದೊಡ್ಡ ದೇಶವಾಗಿದ್ದ ರಷಿಯಾ, ಬಡ ಹಿಂದುಳಿದ ದೇಶ ಆಗಿದ್ದಿರಬಹುದು. ಆದರೆ ರಷಿಯನ್ ದೊರೆಮನೆತನಕ್ಕೂ, ಯುರೋಪಿನ ದೊರೆಮನೆತನಗಳಿಗೂ ರಕ್ತ ಸಂಬಂಧವಿತ್ತು. ರಷಿಯಾದ ಏಷಿಯಾ ಭಾಗ ತುಂಬಾ ಹಿಂದುಳಿದಿತ್ತು. ಐರೋಪ್ಯ ಭಾಗ ಮುಂದಿತ್ತು. ಯುರೋಪಿನ ಜೊತೆ ಸಂಪರ್ಕ ಇಟ್ಟುಕೊಂಡಿತ್ತು. ರಷಿಯಾದ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಆಗಿನ ಕಾಲದ ಪ್ರತಿಷ್ಠೆಯ ಭಾಷೆಯಾಗಿದ್ದ ಫ್ರೆಂಚ್ ಹೇಳಿಕೊಡುತ್ತಿದ್ದರು. ಮನೆಯಲ್ಲಿ ಫ್ರೆಂಚನ್ನೇ ಮಾತನಾಡುತ್ತಿದ್ದರು. ಈಗ ನಮ್ಮಲ್ಲೇ ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಕಡಿಮೆ ಮಹತ್ವ, ಇಂಗ್ಲಿಷಿಗೆ ಹೆಚ್ಚಿನ ಮಹತ್ವವಿತ್ತು. ಹಾಗೆಯೇ ಅಲ್ಲಿಯ ಮೇಲುದರ್ಜೆಯ ಜನ ರಜಾಕಾಲ ಕಳೆಯಲು ರಷಿಯಾವನ್ನು ಬಿಟ್ಟು ಪ್ರಾನ್ಸ್‌ಗೆ, ಯುರೋಪಿಗೆ ಹೋಗುತ್ತಿದ್ದರು. ಇಂಥ ರಷಿಯಾಕ್ಕೂ ಒಂದು ಪ್ರಭುತ್ವ ವ್ಯವಸ್ಥೆ ಇತ್ತು. ಚಿಯಾಂಗ್ ಕೈ ಷೇಕನ ಕಾಲದಲ್ಲಿ ಚೈನಾಕ್ಕೂ ಇತ್ತು, ಅದಕ್ಕೆ ಆಗಿನ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಒಂದು ಶಾಶ್ವತ ಸ್ಥಾನವೂ ಇತ್ತು. ಆದರೆ ಇಂಡಿಯಾಕ್ಕೆ ಇಂಥದ್ದೇನೂ ಇರಲಿಲ್ಲ. ಇಂಡಿಯಾ ಬೇರೆ ಯಾವ ದೇಶದ ತರವೂ ಅಲ್ಲ; ಬಹುಶಃ ಆಫ್ರಿಕಾದ ಥರ ಎಂದು ಕಾಣುತ್ತದೆ. ಇಂಡಿಯಾದಲ್ಲಿ ಒಂದು ರಾಜ್ಯ ಶಕ್ತಿ, ಒಂದು ಪ್ರಭುತ್ವ ಅನ್ನುವುದೇ ಇರಲಿಲ್ಲ. ಈ ದೇಶವನ್ನು ಅವರು, ಇವರು, ಕೊನೆಗೆ ಬ್ರಿಟಿಷರು, ಹೀಗೆ ಬೇರೆಯವರೇ ಆಳುತ್ತ ಬಂದಿದ್ದರು. ಯಾವುದೇ ಒಂದು ಜನಾಂಗಕ್ಕೆ ನೂರಾರು ವರ್ಷ ತನ್ನದೇ ಆದ ಪ್ರಭುತ್ವ ಇಲ್ಲದೆ ಹೋದಾಗ, ಅದು ಎಷ್ಟು ಸೊರಗಿ ಹೋಗುತ್ತದೆ, ಎಷ್ಟು ಆತ್ಮನಂಬಿಕೆಯನ್ನು ಕಳೆದುಕೊಂಡಿರುತ್ತದೆ ಎನ್ನುವುದಕ್ಕೂ, ಹಾಗೆಯೇ ಇಂಥ ಪ್ರಭುತ್ವ, ಸ್ವಾತಂತ್ರ್ಯ ಮರಳಿ ಬಂದ ಕೂಡಲೇ ಏನು ಪರಿಣಾಮ ಉಂಟಾಗುತ್ತದೆ ಎನ್ನುವುದಕ್ಕೂ ಇಂಡಿಯಾದ ಉದಾಹರಣೆ ನೋಡಿ. ದೀರ್ಘಕಾಲದ ನಂತರ ಸ್ವಪ್ರಭುತ್ವಕ್ಕೆ ಮರಳಿ ಸಿಕ್ಕ ತಕ್ಷಣ ನಮ್ಮ ಪೂರ್ವಕಾಲದ ಬಗ್ಗೆ ವಿಪರೀತ ಹೆಮ್ಮೆ ಬಂದುಬಿಡುತ್ತದೆ. ಪರಾಧೀನದಲ್ಲಿ ಎಷ್ಟು ಅವಮಾನ ಆಗಿರುತ್ತದೆಯೆಂದರೆ, ಅದನ್ನು ಮರೆಸಿಕೊಳ್ಳಲು, ತುಂಬಿಕೊಳ್ಳಲು, ಭೂತಕಾಲದ್ದನ್ನೇ ಕೀರ್ತಿಸುವ ಮನಸ್ಥಿತಿ ಬಂದುಬಿಡುತ್ತದೆ.

ಇಂಥ ಸನ್ನಿವೇಶದ ಬೇರೆ ಮಗ್ಗುಲುಗಳನ್ನೂ ಈಗ ನೋಡೋಣ. ಆ ಕಾಲಕ್ಕೆ ಗಾಂಧಿ, ತಿಲಕರಂಥವರಿಗೆ ಪ್ರಥಮವಾಗಿ ಬೇಕಾಗಿದ್ದು ಇಂಡಿಯಾಕ್ಕೆ ತನ್ನದೇ ಆದ ಒಂದು ಪ್ರಭುತ್ವ. ಇಂಥ ಹಿನ್ನೆಲೆಯಲ್ಲಿ ಮತ್ತೆ ಆ ಕಾಲದ ಸಂವೇದನೆ ಏನಾಗುತ್ತದೆ ಗಮನಿಸಿ. ಸ್ವಪ್ರಭುತ್ವವೇ ಬಹಳ ಮುಖ್ಯ ಎಂದ ಕೂಡಲೇ, ಈ ದೇಶವನ್ನು ರಾಷ್ಟ್ರ ಎಂದು ತಿಳಿದುಕೊಳ್ಳುವುದು ಅತೀ ಮುಖ್ಯ; ನಮ್ಮಲ್ಲಿ ಅಸ್ಪೃಶ್ಯಯಿದೆ, ಅನ್ಯಾಯ, ದೌರ್ಜನ್ಯ, ಕೊಳಕು ಎಲ್ಲ ಇದೆ ಸರಿ, ಆದರೆ ಈ ಕ್ಷಣ ಇದನ್ನೆಲ್ಲ ಸ್ವಲ್ಪ ಮರೆಯೋಣ, ನಾವು ಮೊದಲು ರಾಷ್ಟ್ರವಾಗೋಣ ಎನ್ನುವ ವಾದ ಹುಟ್ಟುತ್ತದೆ. ಇದೇ ಮುಖ್ಯವಾದಾಗ, ನೀವು ಕವಿಯಾಗಿದ್ದರೆ ಬಹಳ ಭಾವುಕರಾಗಿಬಿಡುತ್ತೀರಿ, ಹೆಚ್ಚು ಹೆಚ್ಚು ಸೆಂಟಿಮೆಂಟಲ್ ಆಗಿ ಬರೆಯುತ್ತೀರಿ. ಯುರೋಪಿಗೆ ಇಂಥ ಸಮಸ್ಯೆ ಇಲ್ಲ, ಅವರಿಗೆ ತಮ್ಮ ರಾಷ್ಟ್ರದ ಪರಿಭಾವನೆ ಕಳೆದುಹೋಗುತ್ತದೆ ಎನ್ನುವ ಭಯವಿಲ್ಲ. ಆದ್ದರಿಂದ ಯುರೋಪ್ ತನ್ನನ್ನು ಸಮಾಜ ಎಂದು ಪರಿಗಣಿಸಿಕೊಳ್ಳುವುದನ್ನು ಸುಮಾರು ಮುನ್ನೂರು ವರ್ಷದಿಂದ ಕಲಿತುಕೊಂಡಿದೆ. ಅವರ ಎಲ್ಲ ಸಾಹಿತ್ಯದಲ್ಲೂ ತಮ್ಮ ದೇಶವನ್ನು ಒಂದು ಸಮಾಜ ಎಂದು ನೋಡುವುದರಿಂದ ಹುಟ್ಟುವ ವಿಶಿಷ್ಟ ಶಕ್ತಿ ಕಂಡುಬರುತ್ತದೆ, ಅಂಥದೊಂದು ಸಮಾಜದ ವಿಶ್ಲೇಷಣೆ ಕಂಡುಬರುತ್ತದೆ. ಆದರೆ ನಮ್ಮ ದೇಶವನ್ನು ಸಮಾಜ ಎಂಬ ದೃಷ್ಟಿಕೋನದಿಂದ ಪರಿಗಣಿಸಲು ಆರಂಭಿಸಿದ ತಕ್ಷಣ ಇಲ್ಲಿಯ ಒಡಕುಗಳು ಕಂಡುಬರುತ್ತವೆ. ಈಗ ನಾವು ಮತ್ತೆ ಅದೇ ಸ್ಥಿತಿಯಲ್ಲಿದ್ದೇವೆ ನೋಡಿ. ಕಾಶ್ಮೀರ, ಪಂಜಾಬು, ಅಸ್ಸಾಂಗಳಲ್ಲಿ ಪ್ರತ್ಯೇಕವಾದದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ. ರಾಜ್ಯಗಳೇ ನಮ್ಮ ಕೈಬಿಟ್ಟು ಹೋಗುವ ಪರಿಸ್ಥಿತಿಯಿದೆ. ಇಂಥ ಸಮಯದಲ್ಲಿ ನಮ್ಮ ದೇಶವನ್ನು ಒಗ್ಗೂಡಿಸಬೇಕಾದಂತಹ ಅವಶ್ಯಕತೆಯಿದೆ. ಈ ಕಾಲದಲ್ಲಿ ನಾವು ಮಂಡಲ್ ವರದಿಯ ಅನುಷ್ಠಾನ ಅಂದಕೂಡಲೇ ಜಾತಿಜಾತಿಗಳ ನಡುವೆ ಒಡಕು ಶುರುವಾಗುತ್ತದೆ. ಈಗ ಇಂಡಿಯಾದ ಅತ್ಯುತ್ತಮ ಮನಸ್ಸು ಈ ತಲ್ಲಣವನ್ನು ಎದುರಿಸಬೇಕು, ಅನುಭವಿಸಬೇಕು. ಒಂದು, ನಾವು ಸದ್ಯಕ್ಕೆ ಜಾತಿಜಾತಿಗಳ ಒಳಗಿನ ಒಡಕುಗಳನ್ನು ಘರ್ಷಣೆಯನ್ನು ಮರೆತು ಬಿಟ್ಟು ಒಂದು ರಾಷ್ಟ್ರವೆಂದು ಒಟ್ಟಾಗೋಣವೆಂದು ವಾದಿಸಬಹುದು, ಇಂಥ ನಿಲುವೂ ಅಪಾಯಕಾರಿ. ಇದು ಫ್ಯಾಸಿಸಮ್‌ಗೆ ಹೋಗುವ ದಾರಿಯೂ ಆಗಿಬಿಡಬಹುದು. ಇನ್ನೊಂದು, ನಮ್ಮನ್ನು ಒಂದು ಸಮಾಜ ಎಂದು ತಿಳಿದುಕೊಂಡು ನಮ್ಮ ಎಲ್ಲ ಜಗಳಗಳನ್ನು ಆಡಲು ಶುರುಮಾಡಬೇಕು. ಈ ದಾರಿಯೂ ಕಷ್ಟದ್ದೇ. ಪ್ರತಿಯೊಂದು ದೇಶವೂ ತನ್ನನ್ನು ಒಂದು ರಾಷ್ಟ್ರವೆಂದು ಪರಿಗಣಿಸಿಕೊಂಡು ತನ್ನ ಸಾಹಿತ್ಯ, ನಾಟಕ, ಸಿನೆಮಾಗಳಲ್ಲಿ ಇಂಥ ಪರಿಭಾವನೆಯ ಅಪಾರ ಶಕ್ತಿಯನ್ನು ಗಳಿಸಿ ಬಳಸಿಕೊಳ್ಳುವುದಿದೆ. ಅಂತೆಯೇ, ತನ್ನನ್ನು ಒಂದು ಸಮಾಜವೆಂದು ತಿಳಿದುಕೊಂಡು ಸಾಧಿಸುವುದೂ ಇದೆ. ಇದು ಬಹಳ ವಿಚಿತ್ರವಾದ ವಿಷಯ.

ತಿಲಕರನ್ನು ನೋಡಿ, ಇದನ್ನು ರಾಷ್ಟ್ರವೆಂದು ತಿಳಿದುಕೊಳ್ಳಿ, ಸಮಾಜವೆಂದು ಪರಿಗಣಿಸಬೇಡಿ, ಮೊದಲು ಗಟ್ಟಿಯಾಗೋಣ, ಒಟ್ಟಾಗೋಣ, ಇಲ್ಲಿಯ ಒಳಗಿನ ಅಸಮಾನತೆಯನ್ನೆಲ್ಲ ಆಮೇಲೆ ಸರಿಪಡಿಸೋಣ ಎಂದು ಅವರು ಹೇಳುತ್ತಿದ್ದರು. ಅವರ ಕಾಲದ ಬಹುತೇಕ ಲೇಖಕರ ಪ್ರೇರಣೆಯೂ ಅದೇ ರೀತಿಯದು. ಆದರೆ ಅಂಬೇಡ್ಕರ್ ರೀತಿಯವರು ಇದು ರಾಷ್ಟ್ರವಲ್ಲ, ಇದು ಮೊದಲು ಸಮಾಜ, ಇಲ್ಲಿರುವ ಅನ್ಯಾಯ, ಒಡಕು ನೋಡಿ, ಹೊಲಸು, ದೌರ್ಜನ್ಯ ನೋಡಿ, ಇದನ್ನು ಮೊದಲು ಸರಿಪಡಿಸೋಣ ಎನ್ನುತ್ತಿದ್ದರು. ಅದನ್ನು ಅವರು ಎಂಥ ತೀವ್ರತೆಯಲ್ಲಿ ಹೇಳುತ್ತಿದ್ದರೆಂದರೆ ಅವರಿಗೆ ಸಧ್ಯಕ್ಕೆ ಬ್ರಿಟಿಷರೂ ಇಲ್ಲೆ ಇದ್ದರೂ ಪರವಾಗಿಲ್ಲ, ಅದು ಮುಖ್ಯ ಸಮಸ್ಯೆಯಲ್ಲ, ಮೊದಲು ಇಲ್ಲಿ ಅನ್ಯಾಯ ಸರಿಯಾಗಲಿ, ಸ್ವಾತಂತ್ರ್ಯ ಆಮೇಲೆ ಬರಲಿ ಎನ್ನುವ ಭಾವನೆಯಿತ್ತು. ಆದರೆ ಗಾಂಧಿಗೆ ಯಾವ ಥರದ ಮನಸ್ಸು ಇತ್ತು ನೋಡಿ –  ಅದಕ್ಕೆ ಗಾಂಧಿ ಬಹಳ ವಿಶಿಷ್ಟವಾದ ಸಂವೇದನಾಶೀಲನಾದ ಮನುಷ್ಯ ಅಂತನ್ನಿಸುವುದು. ಅವರು ಏಕಕಾಲದಲ್ಲಿ ಇಂಡಿಯಾವನ್ನು ರಾಷ್ಟ್ರ ಎಂದೂ, ಸಮಾಜ ಎಂದೂ ನೋಡುತ್ತಿದ್ದರು. ಹಾಗಾಗಿ ಕೆಲವು ಸಾರಿ ನೆಹರೂರಂತವರಿಗೆ ತಬ್ಬಿಬ್ಬಾದದ್ದಿದೆ. ಎಲ್ಲರೂ ಸೇರಿ ಇಡೀ ದೇಶವನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿಮಾಡುತ್ತಿರುವಾಗಲೇ ಗಾಂಧೀಜಿ ‘ಸ್ವಲ್ಪ ತಾಳಿ, ಈಗ ಮೊದಲು ಹರಿಜನರ ದೇವಾಲಯ ಪ್ರವೇಶವಾಗಬೇಕು’ ಎನ್ನುತ್ತಿದ್ದರು. ‘ಇದೇನು ನೀವು ಮಾಡುತ್ತಿರುವುದು? ದೇಶವೆಲ್ಲ ಒಟ್ಟಾದಾಗ ಮತ್ತೆ ಯಾಕೆ ಅದನ್ನು ಒಡೆಯುತ್ತಿದ್ದೀರ?’ ಎಂದು ನೆಹರೂರಂಥವರು ಪ್ರಶ್ನಿಸಿದರೂ ಗಾಂಧಿ ದೇಶವನ್ನು ಒಡೆದರು. ಅವರು ಒಗ್ಗೂಡಿಸುವುದರಿಂದಲೂ ಶಕ್ತಿಯನ್ನು ಸಂಪಾದಿಸಿದರು, ಒಡೆಯುವುದರಿಂದಲೂ ಶಕ್ತಿಯನ್ನು ಸಂಪಾದಿಸಿದರು.

ಈ ವಿಷಯವೆಲ್ಲ ಸಾಹಿತ್ಯಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಹೇಳುತ್ತೇನೆ. ಕಾದಂಬರಿಕಾರನಿಗೆ ಒಂದು ದೇಶವನ್ನು ರಾಷ್ಟ್ರವೆಂದು ನೋಡುವುದು ಬಹಳ ಕಷ್ಟ. ಅವನು ಆ ರೀತಿ ಇನ್‌ಸ್ಪೈರಾಗಿ ಒಂದು ಕಾದಂಬರಿ ಬರೆಯಲು ಹೋದರೆ ಅದು ಗಳಗನಾಥರ ಕಾದಂಬರಿಯ ಹಾಗೆ ಆಗುತ್ತದೆ. ನಮ್ಮ ಅನೇಕ ಚಾರಿತ್ರಿಕ ಕಾದಂಬರಿಗಳ ದೋಷ ಇದೇ, ಅವುಗಳಿಗೆ ಕಾದಂಬರಿ ಪ್ರಕಾರದಿಂದಲೇ ಬರುವ ಶಕ್ತಿ ಇಲ್ಲವೇ ಇಲ್ಲ. ಆದರೆ ನಮ್ಮ ದೇಶವನ್ನು ರಾಷ್ಟ್ರವೆಂದು ತಿಳಿದುಕೊಂಡು ಸುಬ್ರಹ್ಮಣ್ಯ ಭಾರತಿ, ನಮ್ಮ ಕುವೆಂಪು, ಬೇಂದ್ರೆಯವರು ‘ಮೂವತ್ತುಮೂರು ಕೋಟಿ’ ರೀತಿಯ ಪದ್ಯಗಳನ್ನು ಬರೆಯುವುದು ಸಾಧ್ಯ. ಅದು ದುಃಖ ಆವೇಗವೆಲ್ಲ ಕಾವ್ಯದಲ್ಲಿ ಹೆಚ್ಚು ಸಹಜವಾಗಿ ಪ್ರಕಟವಾಗುವಂಥದ್ದು. ಆದರೆ ಗಾಂಧಿಯವರು ತಿಲಕರಿಗಿಂತ ಭಿನ್ನವಾಗಿ, ಹಾಗೆಯೆ, ಅಂಬೇಡ್ಕರ್‌ಗಿಂತ ಭಿನ್ನವಾಗಿ, ಎರಡೂ ಪರಿಭಾವನೆಗಳನ್ನು ಬೆಳೆಸಲು ಮಾಡಿದಂತಹ ಪ್ರಯತ್ನವನ್ನು ನಮ್ಮ ಸಾಹಿತ್ಯ ಪರಂಪರೆಯಲ್ಲಿ, ಕಲೆ, ನಾಟಕ, ಸಿನೆಮಾ ಪರಂಪರೆಯಲ್ಲಿ ಯಾರಾದರೂ ಮಾಡಿದ್ದಾರೆಯೆ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಇಂದಿನ ಇಂಡಿಯಾ ದೇಶದ ಮನಸ್ಸು ಹೊಸದನ್ನು ಹುಡುಕುವಾಗ ಈ ಎರಡು ರೀತಿಯ ಪರಿಭಾವನೆಗಳಲ್ಲಿ ಯಾವ ಒಂದನ್ನೂ ಸಂಪೂರ್ಣವಾಗಿ ಬಿಟ್ಟುಕೊಡಲು ಸಾಧ್ಯವಿಲ್ಲ. ಈಗ, ರಾಷ್ಟ್ರ ಅನ್ನುವ ಪರಿಭಾವನೆಯನ್ನು ಬಿಟ್ಟುಕೊಟ್ಟು ದುರ್ಬಲವಾದರೆ ನಾವು ಮತ್ತೆ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಬಿಡಬಹುದು. ಇನ್ನೊಂದೆಡೆ, ಸಮಾಜ ಎನ್ನುವುದನ್ನು ಬಿಟ್ಟುಕೊಟ್ಟು ಒಳಗಿನ ಅಸಹ್ಯರಾಶಿಗಳಿಗೆ ಕುರುಡಾದರೆ ಸಾಮಾಜಿಕ ಸಮಾನತೆ, ನೆಮ್ಮದಿಯನ್ನು ಪಡೆದುಕೊಳ್ಳದಿರಬಹುದು. ಗಾಂಧಿಗೆ ನಮ್ಮದೇ ಆದ ಕಾಶಿ ಎಷ್ಟು ಕೊಳಕು, ಅಸಹ್ಯ ಎಂಬ ತಲ್ಲಣ ಮೂಡಿತಲ್ಲವೆ? –  ಅಂಥದನ್ನು ನಾವೂ ಅನುಭವಿಸಲು ತಯಾರಾಗಬೇಕು. ಇಂಥ ತಲ್ಲಣ, ಆತಂಕಗಳನ್ನು ಶೋಧಿಸುತ್ತಾ ಹೊರಟಾಗ ಅದಕ್ಕೆ ಕಾರಣ ಪರಕೀಯರಲ್ಲ, ಸ್ವತಃ ನಾವೇ ಎಂಬುದೂ ನಿಚ್ಚಳವಾಗುತ್ತದೆ. ಆಗ ನಮ್ಮ ಒಳಗಡೆಯೇ ಒಂದು ಮೌಲಿಕ ಜಗಳವನ್ನು ಎತ್ತಿಕೊಂಡು, ಅದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಈ ರೀತಿಯ ಪ್ರಯತ್ನ ಮಾಡಿದವರು ಟಾಗೋರ್ ಒಬ್ಬರೇ, ಅವರ ಕಾದಂಬರಿ ಗೋರಾದಲ್ಲಿ ಎನಿಸುತ್ತದೆ. ಅಲ್ಲಿ ಟಾಗೋರ್ ಈ ಎರಡೂ ಪರಿಭಾವನೆಗಳನ್ನು ಸಮಪಾತಳಿಯಲ್ಲಿ ಅನುಭವಿಸಿ ಪರೀಕ್ಷಿಸಿದ್ದಾರೆ.

ಇನ್ನೊಂದು ಮುಖ್ಯ ವಿಷಯ: ಇಂಡಿಯಾದ ಸೃಜನಶೀಲ ಲೇಖಕರನ್ನು, ನಾಟಕ, ಸಿನೆಮಾ ಕಲಾವಿದರನ್ನು ಅಂತರಂಗದ ಪ್ರೇರಣೆಯಾಗಿ ತೀವ್ರ ಬಾಧಿಸುವ, ಬಾಧಿಸಬೇಕಾದ ವಿಷಯವೇನೆಂದರೆ, ಇಲ್ಲಿ ಸಾವಿರಾರು ವರ್ಷಗಳಿಂದ ಸ್ಥಾಪಿತವಾಗಿರುವ ಹೋಮೋ ಹೈರಾರ್ಕಿಕಸ್ – ತರತಮ ಮಾನವ ಸ್ಥಿತಿ – ವ್ಯವಸ್ಥೆ. ಇಂಡಿಯಾದ ಅತ್ಯುತ್ತಮ ಮನಸ್ಸುಗಳು ಬಹಳ ಹಿಂದೆ, ವೇದಕಾಲದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಎಂದು ನಮಗೂ ಬ್ರಹ್ಮನಿಗೂ ಯಾವ ವ್ಯತ್ಯಾಸವಿಲ್ಲ ಎಂದು ನುಡಿದರು. ಈ ಅದ್ವೈತವೂ ನಮ್ಮಲ್ಲಿದೆ. ಆದರೆ, ಅದರ ಜೊತೆಗೇ, ನಮ್ಮ ಸಮಾಜ ಸಂಸ್ಕೃತಿಯನ್ನು, ನಮ್ಮ ದೇಶಿ ಹಳ್ಳಿಯನ್ನು, ನಮ್ಮ ವ್ಯವಸ್ಥೆಯನ್ನು ಕಟ್ಟಿದ ಇಂಥ ಒಂದು ಅತ್ಯುತ್ತಮ ಪ್ರತಿಭೆ ಮನುಷ್ಯರನ್ನು ತರತಮವಾಗಿಯೂ ನೋಡಿತು. ಆ ಪ್ರಕಾರ ಜಾತಿ ಪದ್ಧತಿಯನ್ನು ರೂಪಿಸಿತು. ಇದು ಅತ್ಯಂತ ಸೂಕ್ಷ್ಮ ವಿಷಯ. ಇಂಥ ಸೂಕ್ಷ್ಮ ಹೋಮೋ ಹೈರಾರ್ಕಿಕಸ್ ವ್ಯವಸ್ಥೆ ಮೆಚ್ಚುಗೆಯ ವಿಷಯವೂ ಹೌದು. ಯಾಕೆಂದರೆ ಈ ದೇಶದಲ್ಲಿ ಒಂದು ಸರ್ಕಾರ ಅನ್ನುವುದು ಇಲ್ಲದೆ ಹೋದ ಪರಿಸ್ಥಿತಿಯಲ್ಲೂ ಜನಜೀವನ ನಡೆದುಕೊಂಡು ಹೋಗಲು ಸಾಧ್ಯವಾಗುವಂತಹ ಒಂದು ಸನ್ನಿವೇಶವನ್ನು ಎಲ್ಲರೂ ಒಪ್ಪಿ ನಡೆಯುವ ಈ ತರತಮ ಮಾನವ ವ್ಯವಸ್ಥೆ ನಿರ್ಮಿಸಿಕೊಟ್ಟಿತು. ಆದ್ದರಿಂದಲೇ, ಈ ದೇಶದಲ್ಲಿ ಅನೇಕಬಾರಿ ಅರಾಜಕತೆ ಇದ್ದಾಗಲೂ ಅಂತಹ ದೊಡ್ಡ ತೊಂದರೆಯೇನೂ ಆಗಲಿಲ್ಲ. ಈ ವ್ಯವಸ್ಥೆ, ಜಾತಿ ಸ್ಥಾನಮನಗಳನ್ನಲ್ಲದೆ, ಯಾರು ಕಳೆ ಕೀಳಲು ಬರಬೇಕು, ಯಾರು ನೀರು ಹಾಯಿಸಲು ಬರಬೇಕು; ಯಾರು ಕೊಯ್ಲು ಮಾಡಲು ಬರಬೇಕು ಎಂಬ ದೈನಂದಿನ ಕ್ರಿಯೆಯ ವಿವರಗಳನ್ನೂ, ಯಾರು ಯಾವ ಜಾತಿಯ ಮೀನು ಹಿಡಿಯಬಹುದು, ಯಾರು ಯಾವ ಮೀನುಗಳನ್ನು ಹಿಡಿಯಬಾರದು ಎಂಬಂತಹ ಅತ್ಯಂತ ಸಣ್ಣ ವಿಷಯಗಳನ್ನೂ ನಿರ್ಧರಿಸಿಬಿಟ್ಟಿತು. ಎಲ್ಲರೂ ಎಲ್ಲ ಮೀನುಗಳನ್ನು ಹಿಡಿದು ತಿಂದರೆ ಮೀನುಗಳ ಸಂಕುಲವೇ ಪೂರ್ಣ ನಾಶವಾಗುವ ಸಂಭವವಿರುವುದರಿಂದ, ಅಲ್ಲೂ ಕೆಲವು ಕಟ್ಟುನಿಟ್ಟುಗಳನ್ನು ವಿಧಿಸಿತು.

ನಮ್ಮ ತೋಟದಲ್ಲಿ ಕೆಲಸ ಮಾಡಲು ಬರುತ್ತಿದ್ದ ಒಬ್ಬರಿಗೆ ನಾನು ಒಮ್ಮೆ ‘ನಿಮಗೂ ಗೌಡರಿಗೂ ಏನು ವ್ಯತ್ಯಾಸ?’ ಎಂದು ಕೇಳಿದೆ. ಆತ ನಿರಕ್ಷರಸ್ಥ, ಆದರೆ ಆತ ಅವರ ವ್ಯತ್ಯಾಸಗಳನ್ನು ಹೇಳಿದ ಕ್ರಮ ನೋಡಿ: ‘ನಮ್ಮ ಹೆಂಗಸರು ಗೌಡರ ಮನೆಯಲ್ಲಿ ನೀರು ಕುಡಿಯಬಹುದು. ಆದರೆ ಗೌಡರು ನಮ್ಮಲ್ಲಿ ನೀರು ಕುಡಿಯುವ ಹಾಗಿಲ್ಲ, ಆ ದೃಷ್ಟಿಯಿಂದ ಅವರು ನಮಗಿಂತ ಮೇಲೆ. ಆದರೆ ಅಯ್ಯನವರು, ನಮ್ಮಲ್ಲಿ ಮದುವೆ ಮಾಡಿಸೋಕೆ ಬಂದ ಪುರೋಹಿತರು, ನಮ್ಮಲ್ಲಿ ಊಟ ಮಾಡುತ್ತಾರೆ. ಅವರ ಮನೆಯಲ್ಲಿ ಮಾಡೋಹಾಗಿಲ್ಲ. ಆದ್ದರಿಂದ ಅದರಲ್ಲಿ ನಾವು ಗೌಡರಿಗಿಂತ ಮೇಲೆ…’ ಆತ ಹಾಗೆಯೆ ತಾವು ಎಷ್ಟು ವಿಷಯದಲ್ಲಿ ಅವರಿಗಿಂತ ಮೇಲೆ, ಎಷ್ಟರಲ್ಲಿ ಕೆಳಗೆ, ಅವರು ಎಷ್ಟರಲ್ಲಿ ತಮಗಿಂತ ಮೇಲೆ, ಎಷ್ಟರಲ್ಲಿ ಕೆಳಗೆ ಎಂದು ವಿವರಿಸುತ್ತಾ ಹೋದ. ಅಂದರೆ, ಅವರಿಬ್ಬರ ನಡುವೆ ವ್ಯತ್ಯಾಸಗಳಿದ್ದೂ ಇಬ್ಬರೂ ಸದಾಕಾಲ ಶಾಂತಿಯಿಂದ, ಸೌಹಾರ್ದತೆಯಿಂದ ಇರುವಂಥ ಒಂದು ಮನೋಭೂಮಿಕೆ ಆ ವ್ಯವಸ್ಥೆಯಲ್ಲಿ ಸಿದ್ಧವಾಗಿ ಹೋಗಿತ್ತು. ಇದನ್ನು ನೋಡಿ ಯುರೋಪಿನ ಅತ್ಯಂತ ಶ್ರೇಷ್ಠ ಸ್ಟ್ರಕ್ಚರಲಿಸ್ಟ್‌ಗಳೂ ಕೂಡ ‘ಇದು ಎಂಥಾ ಸ್ಟ್ರಕ್ಚರ್’ ಎಂದು ಆಶ್ಚರ್ಯಪಟ್ಟುಬಿಡುತ್ತಾರೆ. ಈ ಸ್ಟ್ರಕ್ಚರ್‌ನ ವ್ಯವಸ್ಥೆಯಲ್ಲಿ ಯಾವುದೂ ಸಂಪೂರ್ಣ ಮೇಲೂ ಅಲ್ಲ, ಯಾವುದೂ ಸಂಪೂರ್ಣ ಕೆಳಗೂ ಅಲ್ಲ. ‘ನಮ್ಮಲ್ಲಿ ಇವರು ಬಂದು ಮಂಗಳಕಾರ್ಯದಲ್ಲಿ ವಾಲಗ ಊದಬಹುದು, ಆದರೆ ಅವರಲ್ಲಿ ಊದುವ ಹಾಗಿಲ್ಲ; ಇನ್ನೊಬ್ಬರಲ್ಲಾದರೆ ಹೊರಗಡೆ ವಾಲಗ ಊದಿಕೊಂಡು ಹೋಗಬಹುದು, ನಾವು ನಾಲ್ಕು ಕಂಬ ಕಟ್ಟಬೇಕು ಅವರು ಐದು ಕಂಬ ಕಟ್ಟಬೇಕು’ –  ಹೀಗೆ ನೂರಾರು ವಿಷಯಗಳಲ್ಲಿ ನೂರಾರು ವಿಧಿವಿಧಾನಗಳನ್ನು ಹೇಳುವ ಈ ನಮ್ಮ ಇಂಡಿಯಾದ ಸ್ಟ್ರಕ್ಚರ್ ಹೋಮೋ ಹೈರಾರ್ಕಿಕಸ್ ಪರಿಭಾವನೆಯದ್ದು. ಅದು ನಮ್ಮನ್ನು ಇನ್ನೂಬಿಟ್ಟಿಲ್ಲ.

ನಾನು ಕೆಲಸ ಮಾಡುವ ಸರ್ಕಾರಿ ಯೂನಿವರ್ಸಿಟಿಯಲ್ಲಿ ಬಹಳ ಜನ ನೇಕಾರರು, ಕಮ್ಯೂನಿಷ್ಟರು, ತಾರತಮ್ಯವನ್ನು ವಿರೋಧಿಸಿ, ಸಮಾನತೆಯನ್ನು ಬೆಂಬಲಿಸುವರು. ಆದರೆ ಅಲ್ಲಿಯೂ ಕೂಡ ಒಬ್ಬ ಡೆಪ್ಯೂಟಿ ರಿಜಿಸ್ಟ್ರಾರಿಗೂ, ಒಬ್ಬ ಅಸಿಸ್ಟೆಂಟ್ ರಿಜಿಸ್ಟ್ರಾರಿಗೂ ಪೆನ್ನು, ಮೇಜು, ಕುರ್ಚಿಗಳಲ್ಲಿ ಸ್ವಲ್ಪವಾದರೂ ವ್ಯತ್ಯಾಸ ಮಾಡದಿದ್ದರೆ ಅವರು ಅಸಮಾಧಾನ ಪ್ರಕಟಿಸುತ್ತಾರೆ. ಇವನ ಕುರ್ಚಿ ಹೀಗೆ ಇದ್ದರೆ ಅವನ ಕುರ್ಚಿ ಬೇರೆ ರೀತಿ ಇರಬೇಕು. ಇವನ ಮೇಜಿಗೆ ಒಂದು ಡ್ರಾ ಇದ್ದರೆ ಅವನ ಮೇಜಿಗೆ ಎರಡಿರಬೇಕು. ಸಂಬಳ, ಸ್ಥಾನಗಳಲ್ಲಿ ಹೇಗೂ ವ್ಯತ್ಯಾಸವಿದ್ದೇ ಇರುತ್ತದೆ. ಆ ವ್ಯತ್ಯಾಸಗಳನ್ನು ಮೇಜು ಕುರ್ಚಿಗಳಂಥ ವಿಷಯಗಳಲ್ಲೂ ತೋರಿಸಬೇಕು. ಇಲ್ಲೂ ಕೂಡಾ ನಮಗೆ ಹೋಮೋ ಹೈರಾರ್ಕಿಕಸ್ ವ್ಯವಸ್ಥೆ ಕಂಡುಬರುತ್ತದೆ. ಆದರೆ ಆಧುನಿಕ ಜಗತ್ತಿನ ಪ್ರೇರಣೆ ಇರುವುದು ಹೋಮೋ ಈಕ್ವಾಲಸ್‌ನಲ್ಲಿ. ನಾವು ಇವತ್ತು ಸಾಗಬೇಕಾದದ್ದು ಸಮಾನತೆಯ ಮಾನವನ ಕಡೆಗೆ. ಬಹುಶಃ ನಮ್ಮ ಇಪ್ಪತ್ತನೆಯ ಶತಮಾನದಲ್ಲಿ ಬಂದಿರುವ ಎಲ್ಲಾ ಶ್ರೇಷ್ಠ ಸಾಹಿತ್ಯದಲ್ಲೂ, ಆಳದಲ್ಲಿ ಒಂದಲ್ಲ ಒಂದು ರೀತಿಯಲ್ಲಿ, ಈ ತಕಲಾಟ ಹೋಮೋ ಹೈರಾರ್ಕಿಕಸ್‌ನಿಂದ ಹೋಮೋ ಈಕ್ವಾಲಸ್‌ನತ್ತ ಸಾಗುವ ಪ್ರಕ್ರಿಯೆಯ ದಾಖಲೆ ಕಾಣಿಸುತ್ತದೆ.

ನಮ್ಮ ಆಧ್ಯಾತ್ಮ ಇದನ್ನು ಬೇರೆಯೇ ಆದ ಇನ್ನೊಂದು ರೀತಿಯಲ್ಲಿ ಬಗೆಹರಿಸಿಬಿಟ್ಟಿದೆ. ಅದು ಹೇಳುತ್ತದೆ; ಈ ಹೋಮೋ ಹೈರಾರ್ಕಿಕಸ್‌ನಿಂದ ತರತಮ ಭಾವನೆ ಏನಿದ್ದರೂ ಈ ಮಾಯಾ ಪ್ರಪಂಚದ ಮಟ್ಟಿಗೆ ಮಾತ್ರ; ಇದನ್ನು ದಾಟಿ ಶಾಶ್ವತ ಪ್ರಪಂಚಕ್ಕೆ ಹೋದಾಕ್ಷಣ ಇದಾವುದೂ ಇಲ್ಲ. ಎಲ್ಲಿ ಎಲ್ಲವೂ ಸಮಾನ. ರಾಮಾನುಜನ್ ಇದನ್ನು ಒಂದು ಲೇಖನದಲ್ಲಿ ಬಹಳ ಚೆನ್ನಾಗಿ ಬರೆದಿದ್ದಾರೆ; ವ್ಯಾಕರಣದಲ್ಲಿ ಎರಡು ರೀತಿಯ ನಿಯಮಗಳು ಬರುತ್ತವೆ. ಒಂದು ‘ಸನ್ನಿವೇಶ ಸೂಕ್ಷ್ಮ’ (Context – sensitive) ನಿಯಮಗಳು – ಅಂದರೆ, ಆಯಾಯ, ಸನ್ನಿವೇಶಕ್ಕೆ ಬದ್ಧವಾಗಿ ಬದಲಾಗುವಂಥ ಪದಗಳು, ಬಳಕೆಗಳು ನಿಯಮಗಳು. ಉದಾಹರಣೆಗೆ, ಕನ್ನಡ ವಾಕ್ಯಗಳಲ್ಲಿ ಕರ್ತೃಪದ ‘ಅವನು’ ಎಂದಿದ್ದರೆ, ಕ್ರಿಯಾಪದ ‘ಹೋಗುತ್ತಾನೆ’ ಎನ್ನುವುದು. ‘ಅವಳು’ ಎಂದಾದಾಗ ‘ಹೋಗುತ್ತಾಳೆ’ ಎಂದು ಬದಲಾಗುತ್ತದೆ. ಕರ್ತೃಪದದ ಬದಲಾವಣೆಯನ್ನು ಅವಲಂಬಿಸಿಕೊಂಡು ಕ್ರಿಯಾಪದದ ರೂಪವೂ ಬದಲಾಗುತ್ತದೆ. ಇದು ‘ಸನ್ನಿವೇಶ ಸೂಕ್ಷ್ಮ’ದ ನಿಯಮ. ಇನ್ನೊಂದು ರೀತಿ ‘ಸನ್ನಿವೇಶಮುಕ್ತ’ (Context – free) ನಿಯಮಗಳು, ಯಾವ ಸನ್ನಿವೇಶದಲ್ಲಾದರೂ ಹಾಗೆಯೆ ಉಳಿದುಕೊಳ್ಳುವಂಥ ಬಳಕೆಯ ನಿಯಮಗಳು, ಎಲ್ಲ ಕಡೆಯೂ ನಿಜವಾಗುವಂಥವು. ರಾಮಾನುಜನ್ ಹೇಳುವಂತೆ ಭಾರತೀಯ ಚಿಂತನಾಕ್ರಮ ಸನ್ನಿವೇಶಸೂಕ್ಷ್ಮ ಪರಿಕಲ್ಪನೆಗಳನ್ನು ಹೆಚ್ಚು ಬಳಸುತ್ತದೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವುದು ಬಹಳಷ್ಟು ಸಲ ನೀವು ಯಾವ ಪರಿಸ್ಥಿತಿಯಲ್ಲಿದ್ದೀರಿ, ಯಾವ ಜಾಗದಲ್ಲಿದ್ದೀರಿ, ಯಾವ ಆಶ್ರಮದಲ್ಲಿದ್ದೀರಿ ಎಂಬುದನ್ನು ಅವಲಂಬಿಸಿರುವುದು. ನೀವು ವೀಳೆಯದೆಲೆಯನ್ನು ಮದುವೆಗೆ ಮುಂಚೆ ಹಾಕವು ಹಾಗಿಲ್ಲ. ಆದರೆ ಗೃಹಸ್ಥರಾದರೆ ಹಾಕಬಹುದು. ನೀವು ಕ್ಷತ್ರಿಯರಾದರೆ ಬೇಟೆಯಾಡಬಹುದು, ಕುಡಿಯಬಹುದು, ಮರುಮದುವೆಯಾಗಬಹುದು; ಬ್ರಾಹ್ಮಣನಾದರೆ ಇದ್ಯಾವುದೂ ಇಲ್ಲ; ಶೂದ್ರನಾದರೆ ಮತ್ತೊಂದು ಸರಿ, ಮತ್ತೊಂದು ತಪ್ಪು –  ಹೀಗೆ ಇಲ್ಲಿ ನ್ಯಾಯ, ಧರ್ಮ, ಸತ್ಯ, ನಡತೆ ಎಲ್ಲವೂ ‘ಸನ್ನಿವೇಶ ಸೂಕ್ಷ್ಮ’ ಯಾವುದೂ ‘ಸನ್ನಿವೇಶಮುಕ್ತ’ವಲ್ಲ. ಇದೆಲ್ಲ ಹೋಮೋ ಹೈರಾರ್ಕಿಕಸ್‌ನಿಂದಲೇ ಬಂದಿರುವುದು.

ಆದರೆ ನಮ್ಮಲ್ಲಿ ಕೆಲವು ಸನ್ನಿವೇಶಮುಕ್ತ ಅಂಶಗಳೂ ಇವೆ –  ಸನ್ಯಾಸ, ಮುಕ್ತಿ ಇಂಥವು. ಸನ್ಯಾಸಿಯಾದವನು ಜನಿವಾರ ಹಾಕಿಕೊಳ್ಳಬೇಕಾಗಿಲ್ಲ, ಹಾಗೆಯೇ ಅವನಿಗೆ ಇನ್ನೂ ಬೇರೆ ಎಷ್ಟೋ ನಿಯಮಗಳು ಅನ್ವಯವಾಗುವುದಿಲ್ಲ, ಯಾಕೆಂದರೆ ಆತ ಪೂರ್ಣವಾಗಿ ಸನ್ನಿವೇಶಮುಕ್ತ. ಇಂಥ ಅಂಶಗಳು ಯುರೋಪಿನಲ್ಲೂ ಇವೆ. ಯುರೋಪಿನ ಸಮಾನತೆ, ಪ್ರಜಾಪ್ರಭುತ್ವ ಇವೆಲ್ಲ ಸನ್ನಿವೇಶಮುಕ್ತ ಅಂಶಗಳು. ಅಲ್ಲಿ ನೀವು ಯಾರು, ನಿಮ್ಮಹೆಸರು, ಜಾತಿ ಏನು – ಇದ್ಯಾವುದೂ ಪರಿಗಣನೆಗೆ ಬರುವುದಿಲ್ಲ. ಆದ್ದರಿಂದಲೇ ಅವರ ಶಾಸ್ತ್ರ, ಸಂವಿಧಾನಗಳು ಸನ್ನಿವೇಶಮುಕ್ತ ಅಂಶಗಳ ಮೇಲೆ ಕಟ್ಟಿದಂಥವು. ಅದೇ ಕಾಲಕ್ಕೆ ಎಲ್ಲ ಸನ್ನಿವೇಶಗಳಿಗೂ ಏಕರೂಪ ತಾಳಿ ಅಮೂರ್ತವಾಗುವುದನ್ನೂ ವಿರೊಧಿಸಿ, ಸನ್ನಿವೇಶಕ್ಕೆ ತಕ್ಕಂತೆ ಬಹುರೂಪವಾಗಿ ಮೂಡುವ ಮೂರ್ತ ಅಂಶಗಳನ್ನು ಹುಡುಕುವವರು ಅಲ್ಲಿ ಕಂಡುಬರುತ್ತಾರೆ. ಇವರು ಅಲ್ಲಿಯ ಅತ್ಯುತ್ತಮ ಮನಸ್ಸುಗಳಾದ ಬ್ಲೇಕ್, ಲಾರೆನ್ಸ್‌ನಂಥವರು. ಲಾರೆನ್ಸ್ ಹೇಳುತ್ತಾನೆ –  ಒಂದೇ ದೇವರು ಇರುವುದು ಸುಳ್ಳು. ಪ್ರೀತಿಗೊಬ್ಬ ದೇವರು, ಸಿಟ್ಟಿಗೊಬ್ಬ ದೇವರು, ಸೌಂದರ್ಯಕ್ಕೊಬ್ಬ ದೇವರು –  ಹೀಗೆ ಬೇರೆ ಬೇರೆ ದೇವರುಗಳಿದ್ದಾರೆ ಎಂದು. ಬ್ಲೇಕ್‌ಗೂ ಹಾಗೆಯ ಅನ್ನಿಸಿತ್ತು. ನಮ್ಮಲ್ಲಿ ಒಬ್ಬ ಅವಧೂತನಾದ ನಂತರ ಅವನಿಗೆ ಮನುಷ್ಯ, ನಾಯಿ, ನರಿ ಎಂಬ ಯಾವ ಭೇದಭಾವವೂ ಇಲ್ಲ, ಮಡಿಮೈಲಿಗೆಯಿಲ್ಲ, ಆತ ಎಂಜಲೆಲೆಯನ್ನು ಹೆಕ್ಕಿಕೊಂಡು ತಿನ್ನಬಲ್ಲ, ಯಾಕೆಂದರೆ ಆತ ಮುಕ್ತ, ಸನ್ನಿವೇಶಮುಕ್ತ. ಮತ್ತೆ ನಮ್ಮ ಸಾಹಿತ್ಯದಲ್ಲಿ, ರಾಜಕೀಯದಲ್ಲಿ, ಇಂದಿನ ಎಲ್ಲ ರಂಗಗಳಲ್ಲೂ ಕಂಡುಬರುವ ಇನ್ನೊಂದು ಮುಖ್ಯ ಪ್ರೇರಣೆಯೆಂದರೆ, ಹೀಗೆ ಎಲ್ಲರಿಗೂ, ಎಲ್ಲಕಾಲಕ್ಕೂ ಸಲ್ಲಬಲ್ಲಂಥ ಸನ್ನಿವೇಶಮುಕ್ತ ಮೌಲ್ಯಗಳ ಪರಿಧಿಯನ್ನು ಹೆಚ್ಚು ಹೆಚ್ಚು ವಿಸ್ತಾರಗೊಳ್ಳುತ್ತ ಹೋಗುವುದು, ಸನ್ನಿವೇಶಸೂಕ್ಷ್ಮ ಅಂಶಗಳನ್ನು ಕಡಿಮೆ ಮಾಡಿಕೊಳ್ಳುತ್ತ ಹೋಗುವುದು.

ನಮ್ಮ ಸಾಹಿತ್ಯ, ರಂಗಭೂಮಿ, ಇತ್ಯಾದಿಗಳಲ್ಲಿ ಹೇಗೋ ಹಾಗೆಯೇ, ನಮ್ಮ ಇವತ್ತಿನ ಇಡೀ ಇಂಡಿಯಾದ ಬದಲಾವಣೆಗೆ ಈವರೆಗೆ ಪ್ರೇರಣೆಯಾಗಿ ಬಂದಿರುವುದು ಪಶ್ಚಿಮ, ಪಾಶ್ಚಿಮಾತ್ಯ ಸಂಸ್ಕೃತಿ. ಆದರೆ ಇಲ್ಲಿರುವ ಕೆಲವು ಸೂಕ್ಷ್ಮ, ಆದರೆ ಬಹಳ ಸಂದಿಗ್ಧಗಳನ್ನು ನೋಡಿ, ಕಾರ್ಲ್‌‌ಮಾರ್ಕ್ಸ್‌‌ಗೂ ಹೇಳಿದ್ದ –  ಇಂಡಿಯಾ ಸ್ವತಃ ಏನೂ ಬದಲಾವಣೆ ಆಗುವುದಿಲ್ಲ. ಇಲ್ಲಿರುವ ಏಷಿಯಾಟಿಕ್ ಉತ್ಪಾದನಾ ವಿಧಾನಕ್ಕೆ ಏನೂ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಇಂಡಿಯಾಕ್ಕೆ ಅವರು ಅತ್ಯಾವಶ್ಯಕ, ಅನಿವಾರ್ಯ. ಯಾಕೆಂದರೆ ಬ್ರಿಟಿಷರ, ಯುರೋಪಿಯನ್ನರ ಪ್ರಭಾವ ಇಲ್ಲದೆ ಇಂಡಿಯಾ ಉದ್ಧಾರವಾಗುವುದೇ ಇಲ್ಲ ಎಂಬುದನ್ನು ಮಾರ್ಕ್ಸ್‌ನ ಅಭಿಪ್ರಾಯವಾಗಿತ್ತು. ಆದರೆ ಈಗ ಕೆಲವು ಭಾರತೀಯ ಮನಸ್ಸುಗಳು ಸಂಪೂರ್ಣ ಭಿನ್ನ ರೀತಿಯಲ್ಲಿ ಯೋಚಿಸಲಾರಂಭಿಸಿವೆ. ಯುರೋಪಿನ ಪ್ರೇರಣೆಯಿಂದಲೇ ನಾವು ಬದಲಾವಣೆ ಆಗುವುದಿಲ್ಲ, ಆಗಬೇಕಾದ್ದಿಲ್ಲ ಎಂದು ನಮ್ಮ ಕೆಲವು ಶ್ರೇಷ್ಠ ಚಿಂತಕರಿಗೆ ಈಗ ಅನ್ನಿಸುತ್ತಿದೆ. ಅಂಥ ಯುರೋಪಿನಲ್ಲೇ ನೋಡಿ, ನವನಾಗರೀಕತೆಯ, ಬದಲಾವಣೆಯ ಪರಿಣಾಮವಾಗಿ ಬಂದದ್ದು ಎರಡು ಮಹಾಯುದ್ಧಗಳು. ಮರ್ಷಿಯಾ ಎಲಿಯಾದಿ ಅಂಥವನೇ ಐರೋಪ್ಯ ಸಂಸ್ಕೃತಿಯ ವ್ಯಾಮೋಹ ಸಂಪೂರ್ಣವಾಗಿ ಹೋಗದ ಹೊರತು ಜಗತ್ತಿನ ಬೇರೆ ಕಡೆ ಇರುವ ಒಳ್ಳೆಯದು ಯಾವುದೂ ನಮಗೆ ಕಾಣಿಸುವುದಿಲ್ಲ ಎಂದು ಹೇಳುತ್ತಾನೆ.

ನನ್ನ ಪೂರ್ವಪರ ಪುಸ್ತಕದಲ್ಲಿ ಅದನ್ನು ರಾವು ಬಿಡಿಸುವಂತಹ ಕ್ರಿಯೆ ಎಂದು ಕರೆದಿದ್ದೇನೆ. ಚಿಕ್ಕಂದಿನಲ್ಲಿ ಒಮ್ಮೆ ನನ್ನ ತಮ್ಮನಿಗೆ ರಾವು ಬಿಡಿಸಿದ್ದು ನನಗೆ ನೆನಪು ಬರುತ್ತದೆ. ಅವನಿಗೆ ವಿಪರೀತ ತಿನ್ನಬೇಕೆಂಬ ವಿಚಿತ್ರ ಆಸೆಯಿತ್ತು. ಒಂದು ಸಾರಿ ಅವನನ್ನು ಊಟ ಮಾಡು ಎಂದು ಕೂರಿಸಿ, ಎದುರಿಗೆ ರಾಶಿ ಅನ್ನ ಸುರಿದಿಟ್ಟು, ಅವನು ಸಾಕು ಎಂದು ಹೇಳಿದ ಪ್ರತಿ ಸಲವೂ ಬೈದು, ಬೆದರಿಸಿ, ಒತ್ತಾಯದಿಂದ ತಿನ್ನಿಸಿ ಅದರ ಮೂಲಕವೇ ಅವನಿಗಿದ್ದ ಅತಿ ತಿನ್ನುವ ಬಯಕೆಯನ್ನು ಬಿಡಿಸಿದ್ದರು. ಇದು ಒಂದು ವಿಲಕ್ಷಣ ರೀತಿಯ ರಿಚುವಲ್. ನಮಗೂ ಇದೇ ರೀತಿ ಆಗಬೇಕು ಎಂದು ಕಾಣುತ್ತದೆ. ನಮಗೆ ಈಗ ಹಿಡಿದಿರುವ ಪಶ್ಚಿಮದ ರಾವು ಇದೇ ರೀತಿ ಬಿಟ್ಟುಹೋಗಬೇಕು. ಅವರಿಗೂ ಆ ರಾವು ಬಿಡಬೇಕು. ಈಗ ರಷಿಯಾಕ್ಕೇನೆ ಆ ರಾವು ಹೇಗೆ ಬಡಿದುಕೊಂಡಿದೆ ನೋಡಿ. ಗೊರ್ಬಚೆವ್ ಅಂಥ ದೊಡ್ಡ ಮನುಷ್ಯನೇನಲ್ಲ. ಅವನು ತನ್ನ ಜನರಿಗೆ ತಿನ್ನಿಸಬೇಕೆಂದು ಇದ್ದಾನೆ ಅಷ್ಟೆ. ಆತ ಅವರಿಗೆ ಅಮೆರಿಕಾದ ಜೀವನಕ್ರಮವನ್ನೂ, ಸರಕು ಬಳಕೆಯ ವಸ್ತುಗಳನ್ನೂ, ಐಷಾರಾಮದ ಸಾಮಗ್ರಿಗಳನ್ನೂ ತಿನ್ನಿಸಬೇಕೆಂದು ಇದ್ದಾನೆ. ಈ ಪಾಶ್ಚಿಮಾತ್ಯ ಜೀವನ ಶೈಲಿಯೆಂಬ ರಾವಿಗೆ ಇಡೀ ಪ್ರಪಂಚವೇ ಬಲಿಯಾಗಿದೆ.

ನಮ್ಮ ಕನ್ನಡದ ಮೊದಲ ಕಾದಂಬರಿಗಳನ್ನು ನೋಡಿದಾಗ, ಅಲ್ಲಿಯೂ ಕೂಡ ಪಾಶ್ಚಿಮಾತ್ಯ ಪ್ರೇರಣೆಯ ಬಗ್ಗೆ ನಂಬಿಕೆಯಿರುವುದನ್ನು ಕಾಣುತ್ತೇವೆ. ನಮ್ಮದೆಲ್ಲ ತುಂಬ ಕೊಳಕು, ಇಲ್ಲಿ ಯುರೋಪಿಯನ್ ಸಂಸ್ಕೃತಿಯ ಪ್ರಭಾವವಾದಾಗ ಮಾತ್ರ ನಾವು ಚಂದವಾಗುತ್ತೇವೆ, ಒಳ್ಳೆಯವರಾಗುತ್ತೇವೆ ಎಂಬ ರೀತಿಯ ಭಾವನೆ ನಮ್ಮ ಮೊದಲ ಕಾದಂಬರಿಗಳಲ್ಲಿ ಪರೋಕ್ಷವಾಗಿಯಾದರೂ ಕೆಲಸ ಮಾಡುತ್ತಿರುತ್ತದೆ. ಇದು ಕಾರಂತ, ಕುವೆಂಪುರಂಥ ದೊಡ್ಡ ಲೇಖಕರಲ್ಲೂ ಕಂಡುಬರುತ್ತದೆ; ಅಡಿಗರಲ್ಲೂ, ನನ್ನಂಥವರಲ್ಲೂ ಕಂಡು ಬರುತ್ತದೆ. ಈ ಭಾವನೆಯಿಂದ ನಮ್ಮ ಸಾಹಿತ್ಯ, ನಾಟಕ, ಸಿನೆಮಾ ಕಲೆಗಳಿಗೆ ಒಂದು ಸ್ವಲ್ಪ ಶಕ್ತಿಯೂ ಬಂದಿದೆ. ಬಹುಶಃ ಸಂಗೀತವೊಂದರಲ್ಲಿ ಹಾಗಾಗಿಲ್ಲ. ಯಾಕೆಂದರೆ ಸಂಗೀತ ಈ ಬಗೆಯ ಪ್ರೇರಣೆಯನ್ನ ಕೇಳದಿರುವಂಥದ್ದು. ಆದರೆ ನಾವು ಈಗ ಪಶ್ಚಿಮದ ಪ್ರೇರಣೆಯ ಬಗ್ಗೆ, ಅದರ ಅಪೇಕ್ಷಣೀಯೆಯ ಬಗ್ಗೆ, ಕೆಲವು ಮೂಲಭೂತ ಪ್ರಶ್ನೆಗಳನ್ನೇ ಕೇಳುವ ಐತಿಹಾಸಿಕ ಸ್ಥಿತಿಯನ್ನೂ ತಲುಪಿದ್ದೇವೆ. ನಮ್ಮ ಇಲ್ಲಿಯ ಬದುಕಿನ ಅನುಭವದ ಮೂಲ ಸೆಲೆಗಳನ್ನು ಮತ್ತೆ ಕಾಣಲಾರಂಭಿಸಿದ್ದೇವೆ. ಒಂದು ಉದಾಹರಣೆ ನೋಡಿ: ಈಗ ಪಶ್ಚಿಮದಲ್ಲಿ ಇಷ್ಟಿಷ್ಟು ದಪ್ಪದ ಕಾದಂಬರಿಗಳನ್ನು ಬರೆಯುತ್ತಾರೆ. ಆದರೆ ಅವನ್ನು ಯಾರೂ ಓದುವವರೇ ಇಲ್ಲ. ಆ ಕಾದಂಬರಿಗಳನ್ನು ಓದಿಸಬೇಕೆಂದರೆ, ಅವನ್ನು ಪಠ್ಯಪುಸ್ತಕಗಳನ್ನಾಗಿ ಮಾಡಿ, ಜನರ ಮೇಲೆ ಒತ್ತಾಯದಿಂದ ಹೇರಬೇಕು ಅಷ್ಟೆ. ಇಲ್ಲಿ, ಕಾರಂತರಂಥವರ ಕಾದಂಬರಿಗಳಿಗೆ ತಕ್ಷಣಕ್ಕೇ ಓದುಗರು ಸಿಕ್ಕುಬಿಡುತ್ತಾರೆ. ಹಾಗೆಯೇ, ಕಾರಂತರಂಥವರು ಪರಮಾಣು ಸ್ಥಾವರದ ವಿರುದ್ಧ ಮಾತನಾಡಿದಾಗ ಜನ ಅವರನ್ನು ಕೇಳುತ್ತಾರೆ; ಸರ್ಕಾರ ಕೂಡ ಕೊಂಚ ಗಂಭೀರವಾಗಿ ಅವರ ಮಾತನ್ನು ಗಮನಿಸಬೇಕಾಗುವ ಸಂದರ್ಭ ನಮ್ಮಲ್ಲಿದೆ. ಆದರೆ ಅಮೆರಿಕಾದ ಖ್ಯಾತ ಲೇಖಕ ಸಾಲ್ ಬೆಲ್ಲೊ ಏನಾದರೂ ಹಾಗೆ ಹೇಳಿದರೆ ಅದು ಅವನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತಲುಪಬಹುದಷ್ಟೆ. ನಮ್ಮಲ್ಲಿ ಇನ್ನೂ ಸಾಹಿತ್ಯಕ್ಕೆ, ನಾಟಕಕ್ಕೆ, ಸಿನೆಮಾಕ್ಕೆ ಒಂದು ಜೀವಶಕ್ತಿ ಉಳಿದುಕೊಂಡಿದೆ. ನಮ್ಮಲ್ಲಿ ಸಿನೆಮಾಗಳಿಗೆ ಜನ ಹೇಗೆ ಸಾಲುಗಟ್ಟಿ ನಿಂತಿರುತ್ತಾರೆ ನೋಡಿ. ಇಲ್ಲಿ ಸಿನೆಮಾದ ಹೀರೋಗಳು ನಮ್ಮ ಮಂತ್ರಿಗಳೂ ಆಗಿಬಿಡುತ್ತಾರೆ. ಅಂದರೆ, ಇಲ್ಲಿ ಸಾಹಿತ್ಯ, ಸಿನೆಮಾ ನಾಟಕಕ್ಕೆಲ್ಲ ಒಂದು ಭಿನ್ನವಾದ ಜೀವಂತ ರೀತಿಯ ಸ್ಪಂದನವಿದೆ. ಇದು ಇಂಡಿಯಾದಲ್ಲಿದೆ, ಲ್ಯಾಟಿನ್ ಅಮೆರಿಕಾದಲ್ಲಿದೆ. ಆದರೆ ಯುರೋಪಿನಲ್ಲಿಲ್ಲ, ಅಮೆರಿಕಾದಲ್ಲಿಲ್ಲ. ಹಾಗೆ ನೋಡಿದರೆ, ಹಿಂದುಳಿದ ದೇಶಗಳು ಕಲಾದೃಷ್ಟಿಯಿಂದ ಮುಂದುವರೆದ ದೇಶಗಳಾಗಿರುತ್ತವೆ, ಮುಂದುವರೆದ ದೇಶಗಳು ಹಿಂದುಳಿದವಾಗಿರುತ್ತವೆ. ನಾನು ಸ್ವೀಡನ್‌ನಂತೆ ಬಹಳ ಮುಂದುವರೆದ ದೇಶದಲ್ಲಿ ಗಮನಿಸಿದೆ: ಸ್ವೀಡನ್‌ನಲ್ಲಿ ಹಲವರು ಸ್ವಿಡಿಷ್ ಸಾಹಿತ್ಯವನ್ನು ಓದುವುದಿಲ್ಲ; ಸ್ವಿಡಿಷ್ ಟೆಲಿವಿಷನ್ ಕಾರ್ಯಕ್ರಮಗಳನ್ನು ನೋಡುವುದಿಲ್ಲ. ಯಾಕೆಂದರೆ ಅಲ್ಲಿ ಅಮೆರಿಕನ್ ಟೆಲಿವಿಷನ್ ಬಂದುಬಿಟ್ಟಿದೆ. ಹುಕ್‌ ಅಪ್‌ ಮಾಡಿದರೆ ಸಾಕು ಇವರಿಗೆ ಅಮೆರಿಕನ್ ಚಿತ್ರಗಳು ಸಿಗುತ್ತವೆ. ಅವುಗಳನ್ನೇ ನೋಡುತ್ತಾ ಕೂರುತ್ತಾರೆ, ಇಂಗ್ಲಿಷ್ ಭಾಷೆ ಗೊತ್ತಾಗುವುದಿಲ್ಲವೆಂದರೆ ಸಂಭಾಷಣೆಗಳನ್ನು ಸ್ವೀಡಿಷ್‌ಗೆ ಬಾಷಾಂತರಿಸಿ ಉಪಶೀರ್ಷಿಕೆಯಾಗಿ ತೋರಿಸುತ್ತಾರೆ. ಹಾಗಾಗಿ ಅಲ್ಲಿ ಹಲವರು ತಮ್ಮದೇ ಆದ ಸ್ವೀಡಿಷ್ ಕಲೆ ಸಂಸ್ಕೃತಿಗಳ ಕಡೆ ಗಮನವೇ ಹಾಯಿಸುವುದಿಲ್ಲ. ಅವರಿಗೆ ಅಮೆರಿಕನ್ ಸಂಸ್ಕೃತಿಯ ರಾವು ಅಷ್ಟರಮಟ್ಟಿಗೆ ಬಡಿದುಕೊಂಡಿದೆ.

ಸುಬ್ಬಣ್ಣ ಈಗಷ್ಟೇ ಹೇಳಿದನಲ್ಲ, ನವಯಾಂತ್ರಿಕ ಮಾಧ್ಯಮಗಳಿಂದ ನಡೆದಿರುವ ಸಾಂಸ್ಕೃತಿಕ ಆಕ್ರಮಣ ಎಂಬ ವಿಷಯ, ಅದ್ಕಕೆ ಸ್ವೀಡನ್ ಕೂಡ ಒಂದು ಜೀವಂತ ಉದಾಹರಣೆ. ಆದರೆ ನಮ್ಮಲ್ಲಿ ಒಂದು ಕಡೆ ಆ ಆಕ್ರಮಣ ಎಷ್ಟೇ ಬಲವಾಗಿ ನಡೆಯುತ್ತಿದ್ದರೂ, ಇನ್ನೊಂದೆಡೆಯಲ್ಲಿ ನಮ್ಮಲ್ಲಿರುವ ಕನ್ನಡ, ತುಳು, ಕೊಂಕಣಿ ಇಂತಹ ಬಹುಭಾಷೆಗಳಿಂದಾಗಿ, ಈ ಆಕ್ರಮಣ ಸಂಪೂರ್ಣವಾಗಿ ಫಲ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ನಮಗಿರುವ ಒಂದು ರಕ್ಷೆ. ಈ ರಕ್ಷೆ ಯಾವುದೆಂದರೆ –  ಅದನ್ನು ನಾನು ಹೇಳಬಾರದು; ಆದರೂ ಹೇಳುತ್ತೇನೆ –  ನಿರಕ್ಷರತೆ. ನಮ್ಮಲ್ಲಿಯ ನಿರಕ್ಷರತೆಯೂ ಈ ಆಕ್ರಮಣದ ವಿರುದ್ಧ ಒಂದು ರಕ್ಷೆಯಾಗಿ, ಕೋಟೆಯಾಗಿ ಕೆಲಸ ಮಾಡಿದೆ. ಇಲ್ಲದಿದ್ದರೆ ಬ್ರಿಟಿಷರು ನಮ್ಮ ನಿರಕ್ಷಕರನ್ನೆಲ್ಲ ಹಿಡಿದು, ಅವರ ತಲೆಯಲ್ಲಿ ತಮ್ಮ ಯೋಚನೆಗಳನ್ನೆಲ್ಲ ತುಂಬಿ ಬಿಡುತ್ತಿದ್ದರು. ಇವತ್ತು ನಮ್ಮ ಲೇಖಕರಿಗೆ ಒದಗುವ ಸರಕನ್ನೆಲ್ಲ ಇನ್ನೂ ಉಳಿಸಿಕೊಂಡಿರುವವರು ಆ ನಿರಕ್ಷರರು. ಅವರಲ್ಲಿಯೇ ನಮ್ಮ ಕೆಲವು ಮುಖ್ಯ ಪ್ರೇರಣೆಗಳೆಲ್ಲ ಇನ್ನೂ ಉಳಿದುಕೊಂಡಿರುವುದು. ಅಂದರೆ, ನಿರಕ್ಷರತೆ ಇರಬೇಕು ಎಂದಲ್ಲ ನಾನು ಹೇಳುತ್ತಿರುವುದು –  ಇಂಥ ಸಂದರ್ಭದಲ್ಲಿ ಹೇಳದ ಒಂದು ಮಾತನ್ನು ಅದರ ವಿಪರೀತಾರ್ಥಕ್ಕೆ ಒಯ್ಯಬಾರದು. ನಿರಕ್ಷರತೆಯ ಕಾರಣದಿಂದ ನಮ್ಮ ಪರಂಪರೆಯ ಹಲವು ಅಂಶಗಳು ಪ್ರಿಸರ್ವ್‌ ಆಗಿವೆ, ಹಾಗೆ ಪ್ರಿಸರ್ವ್‌ ಆಗಿರುವುದರಿಂದಲೇ ಅವುಗಳಿಗಿರುವ ಬೆಲೆಯೂ ಕಡಿಮೆಯಾಗಿದೆ, ಅದು ಬೇರೆ ವಿಷಯ. ಆದರೆ ಇದೇ ಕಾರಣದಿಂದ ನಮ್ಮ ಭಾಷೆಗಳೂ ಉಳಿದುಕೊಂಡಿವೆ, ಇಲ್ಲದಿದ್ದರೆ ನೋಡಿ: ನಿಮ್ಮ ಮಕ್ಕಳನ್ನು ಚಿಕ್ಕಂದಿನಿಂದ ಕಾನ್ವೆಂಟಿಗೆ ಕಳಿಸಿ, ಎಸ್‌.ಎಲ್‌.ಎಲ್‌.ಸಿ.ವರೆಗೆ ಇಂಗ್ಲಿಷ್‌ನಲ್ಲೇ ಓದಿಸಿ. ಹಾಗೆ ಅವರು ಇಂಗ್ಲಿಷ್‌ನಲ್ಲೆ ಓದುತ್ತಾ ಬಂದರೆ ಮುಂದೆ ಸುಧಾ, ತರಂಗದಂಥ ಕನ್ನಡ ಪತ್ರಿಕೆಗಳನ್ನು ಓದುವುದೇ ಇಲ್ಲ, ಇಂಗ್ಲಿಷ್‌ನಲ್ಲಿ ಅವುಗಳಿಗಿಂತ ಒಳ್ಳೆಯ ಪತ್ರಿಕೆಗಳು, ಕಾದಂಬರಿಗಳು, ಸಿನೆಮಾಗಳು, ಕನ್ನಡದಕ್ಕಿಂತ ಹೆಚ್ಚು ಖುಷಿಕೊಡುವಂಥವು, ಇಂಗ್ಲಿಷ್‌ನಲ್ಲೇ ಸಿಗುತ್ತವೆ ಎಂದು ಅವರು ಹೇಳಲಾರಂಭಿಸುತ್ತಾರೆ. ಕ್ರಮೇಣ ನಮ್ಮಲ್ಲಿ ಕನ್ನಡ, ಈಗ ತುಳು ಆಗಿದೆಯಲ್ಲ, ಹಾಗೆ, ಮನೆಯೊಳಗಡೆ ಮಾತಾಡುವ ಭಾಷೆ, ಅಡುಗೆಮನೆಯ ಭಾಷೆ ಆಗಿಬಿಡಬಹುದು; ಈಗಾಗಲೇ ಹಾಗೆ ಆಗುತ್ತಲಿದೆ, ಅಗಿದೆ. ಇವತ್ತು ಇನ್ನು ಮುಂದೆ ಕನ್ನಡದಲ್ಲಿ ಒಳ್ಳೆಯ ಲೇಖಕರು ಹಿಂದುಳಿದ ಜನಾಂಗಗಳಿಂದ, ಹಳ್ಳಿಗಳಿಂದ, ಇಂಗ್ಲಿಷ್ ಶಾಲೆಗಳು ಇಲ್ಲದಿರುವ ಜಾಗದಿಂದಲೇ ಬರಬೇಕು. ಆದ್ದರಿಂದ ಈ ಹೋರಾಟದ ಪ್ರಕ್ರಿಯೆಯಲ್ಲಿ ಜೀವಂತ ಕೃತಿಗಳು ಬರಲು ಸಾಧ್ಯವಿರುವುದು ಪಾಶ್ಚಾತ್ಯ ಪ್ರೇರಣೆಯಿಂದಲ್ಲ, ಬದಲಾಗಿ ನಮ್ಮ ಒಳಗಿನ ಪ್ರೇರಣೆಯಿಂದ ಆ ಪ್ರೇರಣೆ ಎಂಥದ್ದಾಗಿರಬೇಕು ಅಂದರೆ ನಮ್ಮ ಕಾಶಿ ಕೊಳಕು ಅನ್ನುವುದನ್ನು ಕಾಣುತ್ತಿರಬೇಕು ಹಾಗೆಯೇ, ಅದು ಹಿಂದೆ ಪವಿತ್ರವಾಗಿತ್ತು ಅನ್ನುವುದನ್ನು ಕಾಣುತ್ತಿರಬೇಕು. ಇಲ್ಲಿ, ಕಾಶಿಯನ್ನು ಮತ್ತೆ ಪವಿತ್ರಗೊಳಿಸಬೇಕು ಎನ್ನುವ ಬಯಕೆಯೂ ಕೆಲಸ ಮಾಡುತ್ತಿರಬೇಕು, ಮತ್ತು ಯಾವುದನ್ನೂ ಹಿಂದೆ ಇದ್ದ ಹಾಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದೂ ಗೊತ್ತಿರಬೇಕು.

ಆದರೆ ಈ ಪ್ರೇರಣೆ ಏಕಮುಖಿಯಾಗದೆ ಬಹುಮುಖಿ ಪ್ರೇರಣೆಯಾಗಿ ಬರಬೇಕು. ನಾವು ಇಷ್ಟರವರೆಗೆ ನಮ್ಮ ಬದಲಾವಣೆಗೆ ಪಡೆದುಕೊಂಡ ಎನರ್ಜಿಯಲ್ಲಿ ಪಾಶ್ಚಾತ್ಯ ಪ್ರೇರಣೆಯಿಂದಲೇ ಬಂದಿರುವುದು. ಇದನ್ನು ಗಾಂಧಿ ಕೂಡಾ ಗಮನಿಸಿದ್ದರು. ಅವರು ಒಂದು ಕಡೆ ಬರೆಯುತ್ತಾರೆ: ಯಾರಿಗೆ ಪಾಶ್ಚಾತ್ಯ ಪ್ರೇರಣೆ ಇದೆಯೋ, ಯಾರು ಅದರೊಟ್ಟಿಗೆಯೆ ತಮ್ಮ ಸಂಸ್ಕೃತಿಯಲ್ಲೇ ಊರಿದವರಾಗಿದ್ದಾರೋ ಅಂಥವರು ಅಷ್ಟರಮಟ್ಟಿಗೆ ಹೆಚ್ಚಿಗೆ ಸೃಜನಶೀಲರಾಗಿರುತ್ತಾರೆ, ಅತ್ಯುತ್ತಮ ಮನಸ್ಸುಳ್ಳವರಾಗಿರುತ್ತಾರೆ. ಆದರೆ ಈಗ, ಅದೂ ಭಾರತ ಸ್ವತಂತ್ರವಾದ ಮೇಲೆ ಪಾಶ್ಚಾತ್ಯ ಪ್ರೇರಣೆಯ ಆಕ್ರಮಣದ ರೀತಿಯಲ್ಲಿ ಹೆಚ್ಚಾಗುತ್ತಾ, ನಾವು ಇಲ್ಲಿ ಬೇರೂರಿರುವುದು ಕಡಿಮೆಯಾಗುತ್ತಿದೆ. ಹಿಂದೆ, ನನ್ನ ಹಿಂದಿನ ಪೀಳಿಗೆಗೆ ಇವರೆಡೂ ಒಟ್ಟಿಗೆ, ಸಮಪ್ರಮಾಣದಲ್ಲಿ ಸಿಗುವ ಸಾಧ್ಯತೆಯಿತ್ತು. ಇದಕ್ಕೆ ಸ್ವಾತಂತ್ರ್ಯ ಹೋರಾಟ ಕಾಲದ ಆದರ್ಶವಾದ ಕಾರಣವಿರಬೇಕು. ಆದರೆ ನಮ್ಮ ಪೀಳಿಗೆಗೆ, ನಂತರದವರಿಗೆ, ಪಾಶ್ಚಾತ್ಯ ಪ್ರೇರಣೆಯೇ ಹೆಚ್ಚಾಗಿ, ಸ್ವಂತದ್ದು ಕಡಿಮೆಯಾಗುತ್ತಿದೆ.

ಈ ಸಂದಿಗ್ಧವನ್ನು ಹೇಗೆ ಗೆದ್ದುಕೊಳ್ಳಬೇಕು? –  ಇದಕ್ಕೆ ಸುಲಭವಾದ ಉತ್ತರಗಳಿಲ್ಲ. ಈ ಹುಡುಗಾಟದ ಪ್ರಯತ್ನದಲ್ಲಿ, ಭಾರತೀಯವಾದ, ಸ್ವತಂತ್ರವಾದ ಆದರೆ ಈ ಕಾಲಕ್ಕೆ, ಈ ಜೀವನಕ್ಕೆ ಸ್ಪಂದಿಸುವಂಥ, ಇಲ್ಲಿಯದನ್ನು ಕೇವಲ ತೆಗಳದೆ, ಕೇವಲ ಹೊಗಳದೆ, ಇದಲ್ಲದೆ ಬೇರೆ ಬದುಕು ನನಗಿಲ್ಲ, ನಾನು ಇಲ್ಲಿಯೇ ಅರಳಬೇಕೆನ್ನುವ ಬಹುಮುಖಿ ಪ್ರೇರಣೆಗಳೆಲ್ಲ ಕೆಲಸ ಮಾಡಿದಾಗ ಜೀವಂತ ಕೃತಿಗಳು ಬರುತ್ತವೆ.

ಇನ್ನೊಂದು ವಿಷಯ ನೋಡಿ: ನೀವು ಈಗ ಸಮಾನ ಮಾನವತೆಯನ್ನು ಸ್ಥಾಪಿಸಲು, ತರತಮ ಮಾನವತೆಯ ವ್ಯವಸ್ಥೆಯನ್ನು ಕೊಂಚ ಬದಲಾಯಿಸಲು ಹೊರಟ ತಕ್ಷಣ, ಮಂಡಲ್ ವರದಿಯ ಅನುಷ್ಠಾನಕ್ಕೆ ಪ್ರಯತ್ನಿಸಿದ ತಕ್ಷಣ, ಜನ ಅದನ್ನು ವಿರೋಧಿಸಿ ಸುಟ್ಟುಕೊಂಡು ಸಾಯುತ್ತಾರೆ. ಆದರೆ ಅಂಥವರು ಕೂಡ, ನೀವು ಚೋಮನ ದುಡಿಯನ್ನು ನಾಟಕ ಅಥವಾ ಸಿನೆಮಾ ಮಾಡಿ ತೋರಿಸಿದಾಗ ಅತ್ತುಬಿಡುತ್ತಾರೆ. ಅಯ್ಯೋ ಪಾಪ, ಹರಿಜನಾದ್ದಕ್ಕೆ ಎಷ್ಟು ದುಃಖಪಡುತ್ತಾನೆ ಎಂದು ಕಣ್ಣೀರು ಹಾಕುತ್ತಾರೆ. ಹಿಂದಿರುಗಿ ಮನೆಗೆ ಬಂದದ್ದೇ ಅದೇ ಅಸ್ಪಶ್ಯತೆಯನ್ನು ಮತ್ತೆ ಆಚರಿಸುತ್ತಾರೆ. ಇದು ನಿಮಗೆ ಗೊತ್ತಾದ ಮೇಲೆ, ನೀವು ಒಬ್ಬ ಸಾಹಿತಿಯಾಗಿ ತರತಮ ಮಾನವನಿಂದ ಸಮಾನ ಮಾನವನತ್ತ ಎಂಬಂತಹ ಪ್ರೇರಣೆಯನ್ನು ನಿಮ್ಮ ಓದುಗರಿಗೆ ತಟ್ಟುವ ಹಾಗೆ ತಿಳಿಸಬೇಕು ಎಂದುಕೊಂಡು, ಬಡವನ ಬಗ್ಗೆ ತೀರಾ ಅನುಕಂಪ ಹುಟ್ಟಿಸುವಂತಹ ಸಾಹಿತ್ಯವನ್ನು ಬರೆದರೆ ಆಗುವುದೇ ಇಲ್ಲ. ಯಾಕೆಂದರೆ ಅನುಕಂಪದ ಸಂದರ್ಭದಲ್ಲಿ ನಾವು ಮನುಷ್ಯರೆಲ್ಲರೂ ಒಂದೇ ಎಂದು ಒಪ್ಪಿಕೊಳ್ಳುತ್ತೇವೆ, ಅನುಕಂಪ ಇಳಿದ ಕೂಡಲೇ ಮತ್ತೆ, ಮನುಷ್ಯರು ಬೇರೆ ಬೇರೆ ಎನ್ನುತ್ತೇವೆ. ಆದ್ದರಿಂದ, ಅಂಥಲ್ಲಿ ನಾವು ಹೃದಯ ಕಲಕುವಂಥ ಕಲಾಕೃತಿಯ ರಚನೆಯನ್ನೇ ಬಿಡಬೇಕಾಗುತ್ತದೆ. ಯಾಕೆಂದರೆ ಹೃದಯ ಕಲಕಿಸಬೇಕು ಎಂದು ಹೊರಟಾಗ ಹೃದಯ ಖಂಡಿತವಾಗಿಯೂ ಕಲಕುತ್ತದೆ. ಜನ ಸ್ವಲ್ಪ ಅತ್ತುಕೊಂಡು ಹೋಗುವುದಕ್ಕೆ, ಕಲಕುವುದಕ್ಕೆ ತಯಾರಾಗಿಯೇ ನಾಟಕ, ಸಿನೆಮಾಗಳಿಗೆ ಬಂದಿರುತ್ತಾರೆ, ಕೂತು ನೋಡುತ್ತಾರೆ, ಅತ್ತೂ ಬಿಡುತ್ತಾರೆ. ಅತ್ತ ನಂತರ ತಾನು ಮಾಡಿದ ತಪ್ಪುಗಳಿಗೆಲ್ಲ ಪರಿಹಾರ ಸಿಕ್ಕಿತು ಎಂದು ನಿರಾಳವಾಗಿ, ಸಂತೋಷವಾಗಿ ಮರಳಿ ಹೋಗಿ ಅದೇ ತಪ್ಪುಗಳನ್ನು ಪುನಃ ಮಾಡುತ್ತಾರೆ. ಮರುದಿನ ಮತ್ತೆ ಸಿನಿಮಾ ನೋಡಿ ಅತ್ತುಕೊಂಡು ಹೋಗುತ್ತಾರೆ, ಮತ್ತದೇ ಪುನರಾವರ್ತನೆಯಾಗುತ್ತದೆ. ಆದ್ದರಿಂದ ನಾವು ಸಿನೆಮಾ, ನಾಟಕ, ಕಥೆ, ಕಾದಂಬರಿ ಸೃಷ್ಟಿಸುವಾಗ ಈ ರೀತಿ ಪ್ರೇಕ್ಷಕರಿಗೆ, ಓದುಗರಿಗೆ ಮನಸ್ಸಿಗೆ ಬರೀ ಸಮಾಧಾನ ಕೊಡದ ಹಾಗೆ ಸೃಷ್ಟಿಸುವುದು ಹೇಗೆ ಎಂಬುದನ್ನು ಹುಡುಕಬೇಕು. ಭಾರತದ ಬಗ್ಗೆ ಬರೆಯುತ್ತಿರುವಾಗ ಹಳೆಯ ಕಾಲದವರ ರೀತಿ ಅದನ್ನು ಕೇವಲ ಕೀರ್ತಿಸದೆ ಜೊತೆಗೆ ಪಾಶ್ಚಾತ್ಯದ ಬಗ್ಗೆ ವ್ಯಾಮೋಹ ಬೆಳೆಸದೆ ಸಮಭಾವದಲ್ಲಿ ಬರೆಯುವುದು ಬಲು ಕಷ್ಟ. ನಮ್ಮ ಅತ್ಯುತ್ತಮ ಕೃತಿಗಳು ಯಾವುದು ಅನ್ನುವುದು ಅವು ಈ ಕಷ್ಟವನ್ನು ಹೇಗೆ ನಿವಾರಿಸಿಕೊಂಡಿವೆ ಎಂಬುದನ್ನು ಅವಲಂಬಿಸಿಕೊಂಡಿದೆ. ಯಾಕೆಂದರೆ ನಾವು ದಿನನಿತ್ಯ ಹೀಗೆಯೇ ಮಾತನಾಡುತ್ತಿರುವಾಗ ಕೂಡ ಈ ಅಪಾಯ ಇದ್ದೇ ಇರುತ್ತದೆ. ಮೊನ್ನೆ ಒಬ್ಬ ಪಾಶ್ಚಿಮಾತ್ಯ ವ್ಯಕ್ತಿ ನನ್ನೆದುರು ಏನು ನಿಮ್ಮ ಇಂಡಿಯಾ ಅಷ್ಟು ಕೊಳಕು ಇಷ್ಟು ಅಸಹ್ಯ ಎಂದು ಹೇಳುತ್ತಿದ್ದರು. ಅವರ ಮಾತನ್ನು ಕೇಳುತ್ತಿದ್ದ ಹಾಗೆ ನಾನು ಒಳಗೊಳಗೆ ಆರ್.ಎಸ್‌.ಎಸ್‌ ಆಗುತ್ತಾ ಇದ್ದೆ. ಅವರನ್ನು ಕ್ರಿಯಾತ್ಮಕವಾಗಿ ವಿರೋಧಿಸುವ ನನ್ನ ಗುಣವೆಲ್ಲವೂ ಮನಸ್ಸಿನಲ್ಲೇ ಸತ್ತು ಹೋಯಿತು. ಇದೇ ರೀತಿ ಆರ್.ಎಸ್‌.ಎಸ್‌ ವ್ಯಕ್ತಿಯ ಜೊತೆ ವಾದ ಮಾಡುವಾಗ ನಾನು ಪಾಶ್ಚಾತ್ಯರ ಪರವಾಗಿ ಬಿಡಬಹುದು. ನಾವು ಇರುವುದೇ ಹೀಗೆ; ಎದುರಿಗಿರುವವರು ಯಾರು ಎನ್ನುವುದರ ಮೇಲೆಯೇ ನಮ್ಮ ಇವತ್ತಿನ ಆಲೋಚನಾಕ್ರಮ, ವಾದವೈಖರಿ ನಿರ್ಧಾರವಾಗುವುದು. ಆದರೆ ಬರೆಯುವ ಸಂದರ್ಭದಲ್ಲಿ, ಈ ಅಪಾಯಕ್ಕೆ ಒಳಗಾಗದೆಯೆ ಬರೆಯುವುದು ಇದೆಯಲ್ಲ, ಅಂದರೆ, ದಟ್ಟವಾಗಿ ಆಳವಾಗಿ ಆಲೋಚನೆ ಮಾಡಿ ಬರೆಯುವುದು, ಇದು ಬಹಳ ಕಷ್ಟದ ವಿಷಯ.

ಇದು ಸಾಹಿತ್ಯದಲ್ಲಿ, ಕಲೆಗಳಲ್ಲಿ ಹೇಗೆ ಮುಖ್ಯವಾಗುತ್ತದೆ ಅನ್ನುವುದನ್ನು ನೋಡೋಣ. ವಾಲ್ಟರ್ ಬೆಂಜಮಿನ್ ಅನ್ನುವ ಲೇಖಕ ಒಂದೆಡೆ ಹೇಳುತ್ತಾನೆ: ಈ ಯಂತ್ರಯುಗದಲ್ಲಿ ವಸ್ತುಗಳ, ಕಲಾಕೃತಿಗಳ ಪ್ರಭೆ (aura) ನಾಶವಾಗಿ ಹೋಗುತ್ತದೆ. ಉದಾಹರಣೆಗೆ, ಪ್ರಸಿದ್ಧ ಚಿತ್ರ ‘ಮೊನಾಲಿಸಾ’ವನ್ನು ನೋಡಿ. ಆ ಚಿತ್ರವನ್ನು, ಅಂದರೆ ಮೂಲಚಿತ್ರ ಎಲ್ಲೋ ಒಂದೇ ಒಂದು ಕಡೆ, ಪ್ಯಾರಿಸ್ ನಗರದಲ್ಲಿ, ಒಂದು ಬೀದಿಯಲ್ಲಿ, ಒಂದು ಕಟ್ಟಡದಲ್ಲಿ, ಒಂದು ನಿರ್ದಿಷ್ಟ ಸ್ಥಳದಲ್ಲಿ ಇದೆ. ಈಗಲೂ ಅದನ್ನು ಯಾರಾದರೂ ಕದ್ದೊಯ್ಯಬಹುದು ಎಂದು ಅದಕ್ಕೆ ಎಲ್ಲ ರೀತಿಯ ರಕ್ಷಣೆ ಮಾಡಿದ್ದಾರೆ. ಈ ಚಿತ್ರ ಏಕಮಾತ್ರವಾದ್ದರಿಂದ, ಒಂದು ನಿರ್ದಿಷ್ಟ ಸ್ಥಳದಲ್ಲಿರುವುದರಿಂದ ಅದಕ್ಕೊಂದು ಅನನ್ಯತೆಯಿದೆ, ಆ ಅನನ್ಯತೆಯ ಕಾರಣವಾಗಿ ಒಂದು ಪ್ರಭೆಯಿದೆ. ನಮ್ಮ ಎಲ್ಲಾ ದೇವತೆಗಳಿಗೂ ಆ ರೀತಿಯ ಪ್ರಭೆ ಇರುತ್ತದೆ. ದೇವಾಲಯದಲ್ಲಿ ಗರ್ಭಗುಡಿ ಮಾಡಿ, ಅದನ್ನು ಕತ್ತಲೆಯನ್ನಾಗಿಸಿ, ಒಂದು ಪವಿತ್ರವಾದ ಪ್ರದೇಶವನ್ನಾಗಿಸಿ, ಚಪ್ಪಲಿ ಹೊರಗಡೆ ಬಿಟ್ಟು, ಮೇಲುವಸ್ತ್ರ ತೆಗೆದು, ಒಳಗೆ ಪ್ರಾಕಾರಕ್ಕೆ ಹೋಗಿ, ಅಲ್ಲಿನ ಕತ್ತಲೆಯಲ್ಲಿ ಮಿಣುಕುಮಿಣುಕು ದೀಪದಲ್ಲಿ ಆರತಿ ಎತ್ತುವಾಗ ಒಂದೊಂದೇ ಭಾಗ ಕಾಣುವ ಆ ದೇವರಿಗೆ ಒಂದು ವಿಶಿಷ್ಟ ಪ್ರಭೆಯಿದೆ. ಆದರೆ ನಮ್ಮ ಕಾಲವೇ ಈ ಪ್ರಭೆಯನ್ನು ನಾಶಮಾಡುವ ಕಾಲ. ಈ ಪ್ರಭೆ ಬಲು ಪ್ರಬಲವಾಗಿದ್ದಾಗ ನಮಗೆ ಸ್ವಾತಂತ್ರ್ಯವಿಲ್ಲ. ಎಲ್ಲಿ ನಮ್ಮದೇ ಆದ ಸ್ವಜನಶಕ್ತಿ ಇಲ್ಲವೋ ಅಲ್ಲಿ ಈ ಪ್ರಭೆಯ, ಪರಂಪರೆಯ ಅಧಿಕಾರ ಹೆಚ್ಚಾಗಿ ಬಿಡುತ್ತದೆ. ಮತ್ತೆ, ಇಂಡಿಯಾಕ್ಕೆ ಇದನ್ನು ಅನ್ವಯಿಸುವುದಾದರೆ, ಇಂಡಿಯಾ ನಿಂತ ನೀರು, ಕೊಳಕು ಎಂದು ಅನ್ನಿಸಿದ ಕೂಡಲೆ ಕೆಲವು ಜನ ಅದರ ಪರಂಪರೆಗಿದ್ದ ಅಧಿಕಾರವನ್ನು ನಾಶಮಾಡಲೆಣಿಸಿದರು.

ಅಂದರೆ ಇಂಥ ಸಂದರ್ಭದ ಒಂದು ಅಪಾಯವೆಂದರೆ, ನಾವು ಹೀಗೆ ನಮ್ಮ ಪರಂಪರೆಗೆ ಇರುವ ಅಧಿಕಾರ ನಾಶಮಾಡಿದಾಕ್ಷಣ ಯಾವುದೋ ಮೂರನೆ ದರ್ಜೆಯ ಪಾಶ್ಚಾತ್ಯರಿಗೆಲ್ಲ ಅಧಿಕಾರ ಬಂದುಬಿಡುತ್ತದೆ. ನಮ್ಮ ಸಂಸ್ಕೃತ ಪಂಡಿತರಿಂದ, ನಮ್ಮ ಮಹಾಜ್ಞಾನಿಗಳಿಂದ ನಾವು ಪ್ರಭೆಯನ್ನು ಕಳೆಯುತ್ತಿರುವಂತೆ ಅತ್ಯಂತ ಸಾಮಾನ್ಯ ಪಾಶ್ಚಾತ್ಯರೆಲ್ಲ ನಮಗೆ ಬಹಳ ಪ್ರಭಾವಶಾಲಿಗಳಾಗಿ ಬಿಟ್ಟರು. ನಮ್ಮ ಶಂಕರರಲ್ಲ, ರಾಮಾನುಜರಲ್ಲ, ಪಶ್ಚಿಮದ ಇಂಗರ್‌ಸಾಲ್ ಮೂರನೆ ದರ್ಜೆಯ ಮನುಷ್ಯ, ಇವತ್ತು ಅಮೆರಿಕದಲ್ಲಿ ಅವನ ಪುಸ್ತಕ ಕೇಳುವವರೂ ಇಲ್ಲ. ಇಂಥ ಇಂಗರ್‌ಸಾಲ್ ಆ ಕಾಲಕ್ಕೆ ಇಂಡಿಯಾದಲ್ಲಿ ಬಹಳ ದೊಡ್ಡ ಪ್ರಭಾವ ಉಂಟುಮಾಡಿದ್ದ. ನಮ್ಮ ಪ್ರಭೆಯನ್ನು ನಾವು ಕಳೆಯುತ್ತಿದ್ದ ಕಾಲದಲ್ಲಿ ಪಶ್ಚಿಮದ ಒಂದು ಹುಳ ಕೂಡ ನಮಗೆ ದೊಡ್ಡ ವ್ಯಕ್ತಿಯಾಗಿ ಕಾಣಿಸಿತು. ನಮ್ಮ ಹಳೆಯ ಪರಂಪರೆಯ ಅಧಿಕಾರವನ್ನು ಪ್ರಶ್ನಿಸಿ, ಅದನ್ನು ಕಳೆದ ಮೇಲೆ ನಮ್ಮ ಪರಂಪರೆಗೆ ಮತ್ತೆ ಅಧಿಕಾರವನ್ನು ತಂದುಕೊಡಬೇಕೋ, ಅಥವಾ, ಬೇರೆ ಅಧಿಕಾರವನ್ನೇ ನಾವು ನಮ್ಮ ಅನುಭವದಿಂದ ಸೃಷ್ಟಿಸಿಕೊಳ್ಳಬೇಕೋ ಎಂಬ ಸಮಸ್ಯೆ ಕೂಡ ನಮಗಿರುತ್ತದೆ. ಆಗ ಇಂಥ ಅಪಾಯಗಳೂ ಹುಟ್ಟಿಕೊಳ್ಳುತ್ತವೆ.

ಈ ಪ್ರಭೆಯ ಬಗ್ಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ಕೆಲವು ದಿನಗಳ ಹಿಂದೆ ಕೇರಳದ ಕೊಟ್ಟಾಯಮ್‌ನ ಹತ್ತಿರವಿರುವ ಒಂದು ಸರಸ್ವತಿಯ ದೇವಸ್ಥಾನಕ್ಕೆ ಹೋಗಿದ್ದೆ. ಇಂಡಿಯಾದಲ್ಲಿ ಸರಸ್ವತಿಯ ಪೂಜೆ ಮಾಡುವ ಜಾಗಗಳೆಲ್ಲೆಲ್ಲ ಬಹಳ ಮುಖ್ಯವಾದ ಜಾಗ ಅದು. ಪಕ್ಕದಲ್ಲಿ ಲಕ್ಷ್ಮೀಯ ದೇವಸ್ಥಾನವೂ ಇದೆ. ಬೇರೆಡೆಗಳಲ್ಲಿರುವಂತೆ ಅಲ್ಲಿಯೂ ಅಂಗಿ ತೆಗೆದಿಟ್ಟು ಒಳಗೆ ಹೋಗಬೇಕು –  ನಿಮಗೆ ಗೊತ್ತಿದೆಯಲ್ಲ, ಸೆಕ್ಯುಲರ್ ಆದ ಭೂಮಿಯಲ್ಲಿ ನಾವು ಒಂದು ಭಾಗವನ್ನು ಪವಿತ್ರಗೊಳಿಸುತ್ತೇವೆ, ಪವಿತ್ರಭಾಗ – ಅಪವಿತ್ರಭಾಗ ಎಂದು ವಿಂಗಡಿಸುತ್ತೇವೆ; ಆದರೆ ಅಲ್ಲಿ ಸರಸ್ವತಿಯ ಮಟ್ಟಿಗೆ ವಿಗ್ರಹ ಮಾತ್ರ ಇದೆ, ಮಂದಿರವಿಲ್ಲ. ಅದಕ್ಕೆ ಅನೇಕ ರೀತಿಯ ಕಥೆಗಳಿವೆ. ಒಂದು ಕಥೆ ಒಬ್ಬ ನಂಬೂದರಿಗೆ ಸಂಬಂಧಿಸಿದ್ದು, ಅವನಿಗೆ ಬಹಳ ವರ್ಷ ಮಕ್ಕಳಾಗಲಿಲ್ಲ. ಆತ ಕೆಲ್ಲೂರಿನ ಮೂಕಾಂಬಿಕೆಯ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ಮಾಡಿಕೊಂಡಿದ್ದ. ಎಷ್ಟೋ ವರ್ಷಗಳಾದರೂ ಮಕ್ಕಳಾಗದೇ ಬೇಸತ್ತು ಹಿಂದಕ್ಕೆ ಊರಿಗೆ ಹೋದ. ಅಲ್ಲಿ ಒಂದೆಡೆ ತನ್ನ ವಾಲೆಕೊಡೆಯನ್ನು ಇಟ್ಟು ನೀರು ಕುಡಿಯಲು ಹೋದ. ಬಂದು ಅದನ್ನು ಎತ್ತಲು ಹೋದರೆ ಸಾಧ್ಯವೇ ಆಗಲಿಲ್ಲ, ಬದಲಾಗಿ ಮೂಕಾಂಬಿಕೆ ಕಾಣಿಸಿಕೊಂಡು ಅವನಿಗೆ ಹೇಳಿದಳಂತೆ: ನಾನು ನಿನ್ನ ಜೊತೆ ಬಂದು ಇಲ್ಲಿಯೇ ನೆಲೆಸುತ್ತೇನೆ. ನೀನೇನೂ ಹಿಂದಕ್ಕೆ ಹೋಗಬೇಕಾಗಿಲ್ಲ, ಯಾರಿಗೋ ಎರಡು ಮಕ್ಕಳಾಗಿವೆ. ಅದರಲ್ಲಿ ಒಂದನ್ನು ನೀನು ಸಾಕಿಕೋ. ಜೊತೆಗೆ ಈ ದೇವಿ, ಆ ನಂಬೂದರಿಗೆ ಅವನು ಈಗಿರುವ ಸ್ಥಳ ಬಿಟ್ಟು ಹೋಗಬಾರದು, ಹಾಗೆ ಹೋದರೆ ತಾನೂ ಹೊರಟು ಹೋಗುತ್ತೇನೆ ಎಂದೂ ಹೇಳಿದಳಂತೆ. ಹಾಗಾಗಿ, ಅ ನಂಬೂದರಿಯ ವಂಶಸ್ಥರು ಅಲ್ಲಿಯೆ ಇರಬೇಕಾದ್ದರಿಂದ ಇಂದಿಗೂ ಆ ಸ್ಥಳವನ್ನು ಬಿಟ್ಟು ಕರ್ನಾಟಕದ ಮೂಕಾಂಬಿಕಾ ಕ್ಷೇತ್ರಕ್ಕೂ ಬರಲಾರರು. ‘ನೀನು ಮಾತ್ರ ನನ್ನನ್ನು ಪೂಜೆ ಮಾಡಬಹುದು. ಆದರೆ ನಿನ್ನ ನಂತರದವರು ನನ್ನ ಪ್ರತಿಬಿಂಬವನ್ನು ಮಾತ್ರ ಪೂಜೆ ಮಾಡಬೇಕು’ ಎಂದೂ ಆಕೆ ನುಡಿದಳಂತೆ. ಆದ್ದರಿಂದ ಇಂದು ಅಲ್ಲಿ ಒಂದು ಹೊಂಡ ಮಾತ್ರ ಇದೆ. ಅಲ್ಲಿ ಒಂದಿಷ್ಟು ಲತೆಗಳು ಬೆಳೆದಿವೆ, ಆ ಲತೆಗಳ ಒಳಗೆ ಸರಸ್ವತಿಯ ವಿಗ್ರಹವಿದೆ ಎಂದು ಹೇಳುತ್ತಾರೆ. ಆದರೆ ಅದನ್ನು ನಾವು ನೋಡುವ ಹಾಗಿಲ್ಲ. ಈ ನಾನ್ನೂರು – ಐನ್ನೂರು ವರ್ಷದಲ್ಲಿ ಯಾರೂ ನೋಡಿಲ್ಲ, ನೋಡುವ ಹಾಗೂ ಇಲ್ಲ. ಅಲ್ಲಿ ಆ ವಿಗ್ರಹದ ಪ್ರತಿಬಿಂಬಕ್ಕೆ ಮಾತ್ರ ಪೂಜೆ ಮಾಡುತ್ತಾರೆ. ಆ ಪ್ರತಿಬಿಂಬವೂ ಹೇಗಿದೆಯೆಂದರೆ, ಅದಕ್ಕೆ ಮುಖವಿಲ್ಲ. ಕೈಯಿಲ್ಲ, ಆಕಾರವಿಲ್ಲ. ನೀವು ನಂಬಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಅದು ಸಂಪೂರ್ಣವಾಗಿ ಪ್ರಭೆಯ ಮೇಲೆ ನಿಂತಿರುವಂಥದ್ದು. ಅಂದರೆ, ಅದಕ್ಕೆ ಅಲ್ಲಿ ಪ್ರಾಪ್ತಿ ಆಗುವ ಹಾಗೆ ಸರಸ್ವತೀತ್ವವನ್ನು ನಾನೇ ನನ್ನ ಮನಸ್ಸಿನಿಂದ ಕೊಡಬೇಕು. ಹತ್ತಿರದಲ್ಲಿ ಒಂದು ಕಲ್ಲಿನ ಮುದ್ದೆ ಬಿದ್ದುಕೊಂಡಿದೆ. ‘ಅದು ಯಕ್ಷಿ, ಅದನ್ನು ನೋಡಿದರೆ ನಮ್ಮನ್ನು ಸುಟ್ಟುಬಿಡುತ್ತದೆ, ಆದ್ದರಿಂದ ನಾವು ಯಾರೂ ಅದನ್ನು ನೋಡುವುದಿಲ್ಲ’ ಎಂದು ಒಬ್ಬ ಬ್ರಾಹ್ಮಣ ಹೇಳಿದ.

ನನಗೆ ಇದ್ಯಾವುದನ್ನೂ ಸಂಪೂರ್ಣ ನಂಬುವುದಕ್ಕೆ ಸಾಧ್ಯವೇ ಇಲ್ಲ. ಪಾಶ್ಚಾತ್ಯ ಪ್ರಭಾವದ ನನ್ನ ಮನಸ್ಸಿಗೆ ಅ ಕೊಳದೊಳಗಿನ ಆ ಪ್ರತಿಬಿಂಬಕ್ಕೆ ಸರಸ್ವತೀತ್ವ ಪ್ರದಾನ ಮಾಡುವುದು ಸಧ್ಯವೇ ಆಗಲಿಲ್ಲ. ಆ ಬ್ರಾಹ್ಮಣ ಮತ್ತೂ ಹೇಳಿದ: ‘ಇಲ್ಲೊಂದು ಬಳ್ಳಿಯಿದೆಯಲ್ಲ, ಇದು ಸರಸ್ವತೀ ಬಳ್ಳಿ. ದೊಡ್ಡ ದೊಡ್ಡ ಸಸ್ಯಶಾಸ್ತ್ರಜ್ಞರೆಲ್ಲ ಬಂದು ಅದು ಯಾವ ಬಳ್ಳಿ ಎಂದು ತಿಳಿಯಲು ಯತ್ನಿಸಿದ್ದಾರೆ. ಆದರೆ ಅದು ಯಾರಿಗೂ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ’. ಅವನಿಗೆ ಆ ಸ್ಥಳಕ್ಕೆ ಸರಸ್ವತೀತ್ವವನ್ನು ಪ್ರಾಪ್ತ ಮಾಡಲು ಆ ಬಳ್ಳಿ ಯಾವ ಸಸ್ಯವಿಜ್ಞಾನಿಗೂ ಗೊತ್ತಾಗದಂಥ ಒಂದು ಬಳ್ಳಿ ಎಂದು ಹೇಳಿಕೊಳ್ಳಬೇಕಾಗಿ ಬಂದಿದೆ. ಅಂದರೆ, ವಿಜ್ಞಾನಕ್ಕೆ ಎಂಥ ಅಧಿಕಾರ ಬಂದುಬಿಟ್ಟಿದೆಯೆಂದರೆ, ಅದರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳದೆ ನಮ್ಮಯಾವ ಪರಂಪರೆಯೂ ಅಧಿಕಾರ ಪಡೆದುಕೊಳ್ಳವ ಹಾಗಿಲ್ಲ. ನನಗೆ ‘ಪಾಪ’ ಅನ್ನಿಸಿಹೋಯಿತು; ಯಾಕೆಂದರೆ ಯಾವ ಬಾಟನಿಸ್ಟ್‌ ಬೇಕಾದರೂ ಆ ಬಳ್ಳಿ ಯಾವುದೆಂದು ಹೇಳಬಲ್ಲ. ಅಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದು, ಆ ನಂಬೂದರಿ ಬ್ರಾಹ್ಮಣ ಇದ್ದ ಜಮೀನೆಲ್ಲ ಕಳೆದುಕೊಂಡಿದ್ದಾನೆ. ಪಾಪ, ಅವನಿಗೆ ಉಳಿದುಕೊಂಡಿರುವುದು ಇದೊಂದು ನಂಬಿಕೆ ಮಾತ್ರ; ಅದಕ್ಕೂ ಅವನು ವಿಜ್ಞಾನದಿಂದ ಸರ್ಟಿಫಿಕೇಟ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆತ ಇನ್ನೊಂದು ಹೇಳಿದ: ‘ನೋಡಿ ಇಲ್ಲಿ ಸದಾ ನೀರು ಇರುತ್ತದೆ. ಯಾವಾಗಲೂ ನೀರಿನ ಒರತೆ ಇದ್ದೇ ಇರುತ್ತದೆ. ಕುಡಿದು ನೋಡಿ’, ನಾನು ಕುಡಿದೆ. ನನ್ನ ಹೆಂಡತಿಗೆ, ಅದು ಸ್ವಚ್ಛವಾದ ನೀರು ಹೌದೋ ಅಲ್ಲವೋ ಎಂದು ಕುಡಿಯಲು ಅನುಮಾನ.

ಆ ನೀರು, ಆ ಬಳ್ಳಿ ಎರಡೂ ಬಹಳ ಚೆನ್ನಾಗಿದ್ದವು. ಆತ ಆ ಜಾಗಕ್ಕೆ ಸರಸ್ವತೀತ್ವವನ್ನು ಪಾಪ್ತ ಮಾಡಲು ಆ ಬಳ್ಳಿ ಮತ್ತು ಆ ನೀರಿನ ವಿಷಯ ಬಳಸಿಕೊಂಡ. ಹಾಗೆ ನೋಡಿದರೆ ಇದೆಲ್ಲಾ ಒಂದು ತರ್ಕಾತೀತ ಅದ್ಭುತ. ಅದು ಬಹಳ ಸುಂದರವಾದ ಜಾಗ, ಸುತ್ತಲೂ ದಟ್ಟ ಕಾಡು. ಇದೆಲ್ಲ ಬಳಸಿಕೊಂಡು ಅಲ್ಲೊಂದು ಪ್ರಭೆಯನ್ನು ಕಟ್ಟಿಕೊಂಡಿದ್ದಾರೆ, ಆ ಪ್ರಭೆಯನ್ನು ರಕ್ಷಿಸಿಕೊಂಡಿದ್ದಾರೆ. ಆದರೆ ಇದೆಲ್ಲ ನನ್ನ ಮನಸ್ಸಿನಲ್ಲಿ ಉಳಿಯಲೇ ಇಲ್ಲ. ನಾನು ಅದನ್ನು ಬೇರೆ ರೀತಿಯಲ್ಲೇ ಅರ್ಥಮಾಡಿಕೊಂಡೆ. ಸುತ್ತಲೂ ಮರಗಳಿರುವುದರಿಂದ ನೀರು ಸದಾ ಇರುತ್ತದೆ, ಬಳ್ಳಿ ಯಾವುದೆಂದು ಯಾರೂ ಬೇಕಾದರೂ ಹೇಳಬಹುದು. ಇತ್ಯಾದಿಯಾಗಿ ಯೋಚಿಸಿಕೊಂಡೆ. ಆ ಜಾಗದ ಸುತ್ತಲೂ ಮರಳಿದೆ, ಅಲ್ಲಿ ಬಂದವರೆಲ್ಲ ಮರಳಿನಲ್ಲಿ ‘ಹರಿ ಓಂ’. ಎಂದು ಬರೆದು ಹೋಗುತ್ತಾರೆ. ನಾನೂ ಬರೆದೆ. ನನಗೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಬರೆಸಿದ್ದು ನೆನಪಾಯಿತು. ಅಲ್ಲಿಂದ ಹೊರಗೆ ಬರುವಾಗ ಒಬ್ಬರು ಭೇಟಿಯಾದರು. ಅವರು ನನಗೆ ಬಹಳ ಇಷ್ಟವಾದ ಬಹಳ ಒಳ್ಳೆಯ ಒಬ್ಬ ಕವಿ. ಬಹಳ ಪ್ರೋಗ್ರೆಸಿವ್ ಕವಿ ಎಂದು ಅವರನ್ನು ಯುವಕರು ತುಂಬ ಮೆಚ್ಚಿಕೊಳ್ಳುತ್ತಾರೆ. ಆ ಕವಿ ಅವತ್ತು ಅಲ್ಲಿಗೆ ಬಂದಿದ್ದರು. ಹಣೆಗೆ ಇಷ್ಟು ಗಂಧ ಹಾಕಿ, ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಮೆಟ್ಟಿಲ ಮೇಲೆ ನಿಂತವರು ಮೈಮೇಲೆ ದೇವರು ಬಂದವರ ರೀತಿ ಕಾಣುತ್ತಿದ್ದರು. ಮಾರ್ಕ್ಸ್‌‌ವಾದದಿಂದ ಪ್ರೇರಣೆ ಪಡೆದಂಥ ಆತ ಆ ದೇವತೆಯ ಭಕ್ತರು. ಅವರನ್ನು ನೋಡಿದಾಕ್ಷಣ ನನಗೂ ಭಕ್ತಿ ಬಂದುಬಿಟ್ಟಿತು. ಇದೆಲ್ಲ ವಿಚಿತ್ರವಾದದ್ದು, ಯಾಕೆಂದರೆ ಅವರೂ ಯಾವುದೋ ಮಹತ್ವವನ್ನು ಹುಡುಕುತ್ತಿದ್ದಾರೆ. ತಾನು ಇಂಗ್ಲಿಷ್ ಓದಿನಿಂದ, ಶಾಲೆಯ ಟೆಕ್ಸ್ಟ್‌ಬುಕ್‌ಗಳಿಂದ ಪಡೆದುಕೊಂಡಿದ್ದೆಲ್ಲ ಅವರಿಗೆ ಈಗ ದರಿದ್ರವಾಗಿ ಹೋಗಿದೆ. ತನ್ನ ನಾಡಿನ, ತನ್ನ ಮುಗ್ಧಜನರ ನಂಬಿಕೆಯ ಮೂಲಕ್ಕೆ ಹೋದರೆ ಅದರಲ್ಲಿರುವ ವಿಚಿತ್ರವಾದ ಶಕ್ತಿಯನ್ನು ತಾನು ಪಡೆದುಕೊಳ್ಳಬಹುದು ಎಂದು ಅವರು ಪ್ರಯತ್ನಿಸುತ್ತಿರಬಹುದು. ಅವರು ಹಾಗೆ ಪ್ರಯತ್ನ ಮಾಡುತ್ತಿರುವುದು ಅವರ ಕಾವ್ಯದಿಂದಲೂ ತಿಳಿಯುತ್ತದೆ. ಅಂತೂ ಬಂಡಾಯ ಕವಿಯ ಹಣೆಯ ಗಂಧ ಮತ್ತು ಕುಂಕುಮ ನನ್ನ ಮಟ್ಟಿಗೆ ಆ ಸರಸ್ವತಿಯ ಪ್ರಭೆಯನ್ನು ಹುಟ್ಟಿಸಿಕೊಟ್ಟಿತು.

ನಾನು ಈ ವಿಷಯ ಹೇಳುವುದಕ್ಕೆ ಕಾರಣವಿದೆ. ಶ್ರೀರಂಗರು, ಕಾರಂತರು, ನಮ್ಮಲ್ಲಿ ಪಾಶ್ಚಾತ್ಯರಿಂದ ಪ್ರೇರಣೆ ಪಡೆದುಕೊಂಡಂಥವರು ಎಲ್ಲರೂ ಈ ಪ್ರಭೆಯನ್ನು ನಾಶ ಮಾಡಲು ಪ್ರಯತ್ನಿಸಿದರು. ನನ್ನನ್ನೂ ಸೇರಿಕೊಂಡು –  ನಾನು ಭಾರತೀಪುರದಲ್ಲಿ ಇದನ್ನೇ ಮಾಡಲು ನೋಡಿದ್ದು –  ನನಗೆ ಈಗ ಅರ್ಥವಾಗುತ್ತದೆ. ಈ ಪ್ರಭೆ, ಪರಂಪರೆಯ ಅಧಿಕಾರ ನಾಶವಾಗದ ಹೊರತು ನಾನು ಜೀವಂತವಾಗುವುದಿಲ್ಲ. ಹಾಗೆ ಜೀವಂತವಾದಾಗ ನಾವು ನಮ್ಮ ಸ್ವಂತದ್ದೇ ಆದ ಇನ್ನೊಂದು ಪ್ರಭೆಯನ್ನು ಸೃಷ್ಟಿಸಿಕೊಳ್ಳಲು ಹವಣಿಸುತ್ತೇವೆ. ಅದು ನಮ್ಮ ಕಾವ್ಯದಲ್ಲಿ, ಸಿನೆಮಾದಲ್ಲಿ, ಒಂದು ಅದ್ಭುತ ಕಲಾಕೃತಿಯಲ್ಲಿ ಸಿಕ್ಕಿಬಿಡಬಹುದು. ಒಂದು ಸಾಹಿತ್ಯದ ಕ್ರಾಂತಿಯಾದಾಗ ನಾವು ಹಳೆಯ ಸಾಹಿತ್ಯ ಪರಂಪರೆಯಲ್ಲಿದ್ದ ಪ್ರಭೆಯನ್ನು ಸರಿಯಾಗಿ ವಿಮರ್ಶೆ ಮಾಡಿ, ಅದನ್ನು ಕುದಿಸಿ, ಅದರ ಮೇಲೆ ಹೊಸತಾದ ಇನ್ನೊಂದು ಪ್ರಭೆಯನ್ನು ಸೃಷ್ಟಿ ಮಾಡಿಡುತ್ತೇವೆ. ಮತ್ತೊಂದು ಕ್ರಾಂತಿಯಾದಾಗ ಈ ಪ್ರಭೆಯನ್ನು ಕಳೆದು, ಮತ್ತೊಂದು ಪ್ರಭೆಯನ್ನು ಕಟ್ಟಿಕೊಳ್ಳುತ್ತೇವೆ.

ಈ ಪ್ರಭೆ ಮನುಷ್ಯನ ಮನಸ್ಸಿನ ಅಗತ್ಯ, ನಮ್ಮ ಜೀವನದ ಅಗತ್ಯವೇ ಹೌದು ಎಂದು ಕಾಣುತ್ತದೆ. ಹೀಗೆ ನಮಗೆ ಸಾಮಾನ್ಯ, ಕ್ಷುದ್ರ ಅನ್ನಿಸುವ ವಸ್ತುವಿನಲ್ಲೂ ಇರುವ ದೈವೀಕತೆಯನ್ನು, ಅದರ ಪ್ರಭೆಯನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲವಿದೆಯಲ್ಲ, ಅದು ನಮ್ಮ ಆತ್ಮದ ಹಸಿವು. ಈ ಹಸಿವೇ ನಮ್ಮನ್ನು ಕಾವ್ಯಕ್ಕೆ, ಕಲೆಗೆ, ನಾಟಕಕ್ಕೆ, ಸಿನಿಮಾಕ್ಕೆ ಹೆಚ್ಚುತ್ತಿರುತ್ತದೆ. ಹಾಗೆಯೇ, ಅದು ಮತ್ತೆ ‘ಚೀಪ್’ ಆದಾಗ, ಬರೀ ನಂಬಿಕೆಯ ಮೇಲೆ ನಿಂತಾಗ, ಅದರ ಜೊತೆಗೆ ಇನ್ನು ಯಾವುದೋ ದುರ್ವ್ಯಸನಗಳು, ಕೆಟ್ಟ ಚಾಳಿಗಳು ಸೇರಿಕೊಂಡಾಗ ಅದನ್ನು ಬಿಡಬೇಕಾಗುತ್ತದೆ. ದೇವಸ್ಥಾನದ ಪ್ರಭೆಯನ್ನು ಕಳೆಯುವ ಬಸವಣ್ಣನ ಒಂದು ದೊಡ್ಡ ವಚನ ಇದೆಯಲ್ಲ ಹಾಗೆ: ‘ಉಳ್ಳವರು ಶಿವಾಲಯವ ಮಾಡುವರು| ನಾನೇನ ಮಾಡಲಿ ಬಡವನಯ್ಯಾ… ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ…’ ಎಂದು, ‘ದೇಹವೆ ದೇಗುಲ’ ಎಂದು, ಮತ್ತೆ ದೇಹವನ್ನೇ ದೇಗುಲ ಮಾಡಿಕೊಂಡು, ಆ ದೇವಸ್ಥಾನದ ಪ್ರಭೆಯನ್ನು ಕಳೆದು, ಈ ದೇಹದ ಪ್ರಭೆಯನ್ನು ಮತ್ತೆ ಕಟ್ಟಿಕೊಳ್ಳಬೇಕಾಗುತ್ತದೆ. ಪ್ರಭೆಯನ್ನು ಕಳೆದು, ಮತ್ತೆ ಕಟ್ಟಿಕೊಳ್ಳುವ ಇಂಥ ಪ್ರಕ್ರಿಯೆಯಲ್ಲಿ ನಾವು ರಾಜಾರಾಮ ಮೋಹನರಾಯ್ ಕಾಲದಿಂದ ಇಲ್ಲಿಯವರೆಗೆ ಸಾಮಾನ್ಯವಾಗಿ, ವಿಜ್ಞಾನವನ್ನು, ತಂತ್ರಜ್ಞಾನವನ್ನು, ಪಶ್ಚಿಮವನ್ನು ಉಪಯೋಗಿಸುತ್ತ ಬಂದಿದ್ದೇವೆ. ಆದರೆ ಇದು ಸರಿಯಲ್ಲ. ನಾವು ಬೇರೆಯದೇ ಆದ ರೀತಿಯಲ್ಲಿ ಇದನ್ನು ಮಾಡಬೇಕು, ಸ್ವತಂತ್ರವಾದ ಆಲೋಚನೆಯ ಮೂಲಕವೇ ನಮ್ಮ ಪ್ರಭೆಯನ್ನು ಕಳೆಯುವ, ಕಟ್ಟುವ ಕೆಲಸ ಮಾಡಬೇಕು. ನಮ್ಮ ಹಿಂದಿನ ಧೀಮಂತರೆಲ್ಲ ಈ ಮಾರ್ಗವನ್ನು ಬಳಸಿದ್ದಾರೆ. ನಮ್ಮ ಪರಂಪರೆಯಲ್ಲಿ ಬೌದ್ಧರು, ಜೈನರು, ಶೈವರು, ಆಚಾರ‍್ಯರು ಎಲ್ಲರೂ ಸ್ವತಂತ್ರ ಆಲೋಚನೆಯನ್ನು ತೋರಿದ್ದಾರೆ. ಆದರೆ ನಾವು ಈಗ ಸಂಪೂರ್ಣ ಪಶ್ಚಿಮವನ್ನೇ ಆತುಕೊಂಡು ಪ್ರಭೆಯನ್ನು ಕಳೆವ – ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಹೀಗೆ ಮಾಡುವಾಗ ಒಂದು ದೊಡ್ಡ ಸುಳ್ಳನ್ನು –  ಇಂಡಿಯಾ ಬಿಟ್ಟರೆ ಉಳಿದಿದ್ದೆಲ್ಲ ಬಹಳ ಚೆನ್ನಾಗಿದೆ, ಪಶ್ಚಿಮದಲ್ಲೆಲ್ಲ ಬಹಳ ಸುಂದರವಾಗಿದೆ ಎಂಬ ಸುಳ್ಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಪಶ್ಚಿಮದಲ್ಲಿಯ ರಕ್ತಪಾತ, ರಕ್ತಪಿಪಾಸೆ, ಅವರು ಪ್ರಕೃತಿಯನ್ನು ಪೂರಾ ಒಣಗಿಸಿ ಅದನ್ನು ದರಿದ್ರವಾಗಿಸುತ್ತಿರುವ ರೀತಿ, ಜೀವನವನ್ನೇ ಅಸಹ್ಯಗೊಳಿಸುವಂಥ ಅವರ ವಿಚಾರ ಕ್ರಮ ಇವೆಲ್ಲ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಆದ್ದರಿಂದಲೇ ನಾನು ಹೇಳಿದ್ದು, ಈ ಭ್ರಮೆಯೆಲ್ಲ ನಮ್ಮನ್ನು ರಾವು ಬಿಟ್ಟಹಾಗೆಯೇ ಬಿಟ್ಟುಹೋಗಬೇಕು. ಹಾಗೆ ರಾವು ಬಿಡದ ಹೊರತು ನಾವು ನಮ್ಮ ಜನರಿಂದಲೇ ದೂರವಾಗುತ್ತ ಹೋಗುತ್ತೇವೆ. ಎಂ.ಎನ್. ರಾಯ್ ಉದಾಹರಣೆ ನೋಡಿ. ರಾಯ್ ಈ ವಿಚಾರದಲ್ಲಿ ಯಾವ ದೂರಕ್ಕೆ ಹೋಗಿದ್ದರೆಂದರೆ ‘ಈ ಇಂಡಿಯಾದ ಜನರಿಂದ ಏನು ಮಾಡಲು ಸಾಧ್ಯ? ಪೇಟ ಸುತ್ತಿಕೊಂಡು, ಭಜನೆ ಮಾಡಿಕೊಂಡು, ಕವಳ ಹಾಕಿಕೊಂಡು, ಕಚ್ಚೆಪಂಚೆ ಉಟ್ಟುಕೊಂಡು ಓಡಾಡುವ ಈ ಜನ, ಇವರೇನು ಕ್ರಾಂತಿ ಮಾಡುತ್ತಾರೆ?’ ಎಂದು ಅವರು ಲೆನಿನ್‌ಗೆ ಪತ್ರ ಬರೆದಿದ್ದರು. ಆದರೆ ಆಗ ಗಾಂಧಿ ಮಾಡುತ್ತಿದ್ದುದು ಕಾಂತ್ರಿಯನ್ನೇ. ಪಂಚೆ ಉಟ್ಟು, ಜುಟ್ಟುಬಿಟ್ಟು ಗಾಂಧಿಗೇನು ಮಾಡಲು ಸಾಧ್ಯ ಎಂದು ತಿಳಿದುಕೊಂಡಿದ್ದ ರಾಯ್ ಕೊನೆಗೆ ಬದಲಾದರು. ಹೀಗೆ ನಾವು ನಮ್ಮ ಪರಂಪರೆಯ ಅಧಿಕಾರದಿಂದ ಬಿಡುಗಡೆ ಪಡೆದುಕೊಂಡಾದ ಮೇಲೆ ಇನ್ನೊಂದಕ್ಕೆ, ಪರಕೀಯವಾದದ್ದಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿಬಿಡುವ ಸ್ಥಿತಿಗೆ ಹೋಗುತ್ತೇವೆ. ಹಾಗೆ ಸ್ವಕೀಯತೆಯನ್ನು ಬಿಡದೆ ಪರಕೀಯರೆ ಪೂರ್ಣ ಶರಣಾಗದೆ, ಬೇರೆಲ್ಲೂ ಹೋಗದೆ, ಇಲ್ಲಿಯೇ ಇದ್ದುಕೊಂಡು ಸ್ವಂತ ಪ್ರಭೆಯನ್ನು ಸೃಷ್ಟಿಸಿಕೊಳ್ಳುವುದು ಹೇಗೆ ಎನ್ನುವುದು ಬಹಳ ಸಂದಿಗ್ಧ ಸಮಸ್ಯೆ.

* * *

ಈಗ ನಾನು ಈ ವಿಷಯವನ್ನು ಕನ್ನಡ ಭಾಷೆಗೆ ಅನ್ವಯಿಸಿ ಒಂದೆರಡು ಮಾತು ಹೇಳುತ್ತೇನೆ. ಕನ್ನಡ ಭಾಷೆಯಲ್ಲಿ ಅಸಂಖ್ಯ ಸಾಧ್ಯತೆಗಳಿವೆ, ಅವುಗಳನ್ನು ಕಟ್ಟಿರುವುದು ನಮ್ಮ ಪೂರ್ವಿಕರೇ ಹೊರತು ಪಾಶ್ಚಿಮಾತ್ಯರಲ್ಲ. ನಾವು ನಮ್ಮ ಭಾಷೆಯಲ್ಲಿ ಕೆಲಸ ಮಾಡುವಾಗ, ನಮ್ಮ ನೆಲದ ಕ್ರಮದಲ್ಲಿ ಮಾತ್ರ ಮೇಲೆ ಹೇಳಿದಂಥ ಬದಲಾವಣೆಗಳನ್ನು ತರಲು ಸಾಧ್ಯ. ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರಂಥವರು ಮಾತ್ರ ಭಾಷೆಯನ್ನು ಬಿಟ್ಟು ಈ ಕೆಲಸ ಮಾಡಲು ಸಾಧ್ಯವಿರುವವರು. ಆದರೆ ಲೇಖಕರ ಮಟ್ಟಿಗೆ ಮಾತ್ರ ಅದು ಸಾಧ್ಯವಿಲ್ಲ. ತೆಲುಗು, ತಮಿಳು, ಕನ್ನಡ ಇತ್ಯಾದಿ ಭಾಷೆಗಳಿಗೆ ಅವುಗಳದೇ ಆದ ಒಂದು ಪರಂಪರೆಯಿದೆ, ಆ ಪರಂಪರೆಯ ಅಧಿಕಾರವಿದೆ. ಲೇಖಕರು ಹೀಗೆ ಅವರವರ ಭಾಷೆಗೆ ಅವರವರು ಒಳಗಾಗಿರುವುದರಿಂದ, ಅವರಲ್ಲಿ ಈ ರಾವು ಬಿಡಿಸುವ ಕ್ರಿಯೆ, ಇಂಡಿಯಾದ ಮಟ್ಟಿಗೆ ಒಂದು ಹೊಸ ಸೃಜನಶೀಲತೆಯ ಕ್ರಿಯೆಯಾಗುತ್ತದೆ. ಕನ್ನಡ ಭಾಷೆಗೆ ಹೇಗೆ ಸಾಧ್ಯ ಎನ್ನುವುದಕ್ಕೆ ಉದಾಹರಣೆಯಾಗಿ ನಾನು ಮೂರು ವಾಕ್ಯಗಳನ್ನು ಇಲ್ಲಿ ಬಳಸಿಕೊಳ್ಳುತ್ತೇನೆ. ಈ ಮೂರು ವಾಕ್ಯಗಳಲ್ಲಿ ನಾನು ನನ್ನ ಎಲ್ಲ ಗೊಂದಲಗಳನ್ನು, ಪ್ರಶ್ನೆಗಳನ್ನು ವ್ಯಕ್ತಪಡಿಸಲು ಸಾಧ್ಯ.

ಮೊದನೆಯ ವಾಕ್ಯ – ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ ನಾವು ಈಗಷ್ಟೇ ತರತಮ ಮಾನವನಿಂದ ಸಮಾನ ಮಾನವನತ್ತ ನಡೆಯುವ ಪ್ರಕ್ರಿಯೆಯನ್ನು ನೋಡಿದೆವಲ್ಲ, ಆ ಪ್ರಯತ್ನವನ್ನು, ಈ ವಾಕ್ಯ ಸೂಚಿಸುವಂತೆ, ಹಿಂದಿನಿಂದಲೂ ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಅವಶ್ಯಕವಾದದ್ದು, ಅಪೇಕ್ಷಣೀಯವಾದದ್ದು ಎಂಬುದರ ಬಗ್ಗೆ ಹೇಗೋ ಮಾಡಿ ನಿಮಗೆ ‘ಹೌದು’ ಅನ್ನಿಸಬೇಕು –  ಯಾಕೆಂದರೆ ಇಡೀ ವ್ಯವಸ್ಥೆ ‘ಇಲ್ಲ’ ಅನ್ನುತ್ತಿರುತ್ತದೆ. ಹೀಗೆ “ಹೌದು” ಎಂದು ಒಪ್ಪಿಸುವಲ್ಲಿ ಈ ವಾಕ್ಯ ಹೇಗೆ ಕೆಲಸ ಮಾಡುತ್ತದೆಂಬುದನ್ನು ಸ್ವಲ್ಪ ವಿಶ್ಲೇಷಿಸಿ ನೋಡೋಣ. ವಾಕ್ಯದ ಈ ಕ್ರಿಯೆ ಅದು ಭಾಷೆಯನ್ನು, ಭಾಷೆಯ ಶಕ್ತಿಯನ್ನು ಬಳಸಿಕೊಳ್ಳುವ ಕ್ರಮದಲ್ಲಿಯೇ ಮೂಡಿ ಬಂದಿದೆ. ‘ಜಾತಿ’ಗೆ ‘ಜ್ಯೋತಿ’ ಅನ್ನುವುದು ಹೊಂದುವಂಥ ಶಬ್ದ; ಆದ್ದರಿಂದ ‘ಜಾತಿಹೀನನ ಮನೆಯ ಜ್ಯೋತಿ…’ ‘ಜಾತಿ’ಯ ಜೊತೆಗೆ ‘ಜ್ಯೋತಿ’ ಎಂದು ಹೇಳುತ್ತಿರುವುದರಿಂದ ಅದರಿಂದ ಹುಟ್ಟುವ ಸುಖವನ್ನೇ ಕವಿ ಬಳಸಿಕೊಳ್ಳುತ್ತಿದ್ದಾನೆ ಎನಿಸುತ್ತದೆ. ಅಂಥ ಸುಖದಲ್ಲಿ ಕೇಳುಗರಾದ ನಮ್ಮ ಮನಸ್ಸು ಸ್ವಲ್ಪ ಉಬ್ಬಿದರೆ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು, ಅಲ್ಲಿ ಭಾಷೆಯಲ್ಲಿ ಪಡುವ ಆನಂದದಿಂದ ಇನ್ನೂ ವಿಸ್ತಾರವಾಗುತ್ತದೆ. ನಮಗಿರುವ ಸುಖದ ಶಕ್ತಿ ಹೀಗೆ ಹೆಚ್ಚಾದಾಗ ನಾವು ‘ಹೌದು’ ಅನ್ನುತ್ತೇವೆ. ಇಲ್ಲಿ ಕವಿಯ ಇಂಗಿತಾರ್ಥಕ್ಕೆ ‘ಹೌದು’ ಎಂದು ಒಪ್ಪಿಗೆ ಸೂಚಿಸುತ್ತವೆ. ಮತ್ತೆ, ‘ಜ್ಯೋತಿ’ ಅನ್ನುವುದು ಸಂಸ್ಕೃತ ಶಬ್ದ. ಸಂಸ್ಕೃತ ಶಬ್ದ ಕೊಂಚವೇ, ಎಲ್ಲಿಯೇ ಬಂದರೂ ಅದು ನಮ್ಮ ಪರಂಪರೆಯ ಕಾರಣದಿಂದಲೇ, ನಮ್ಮ ಮನಸ್ಸಿನಲ್ಲಿ ಅಮೂರ್ತತೆಯನ್ನು, ಒಂದು ರೀತಿಯ ಪಾವಿತ್ರ್ಯತೆಯ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಅದನ್ನೇ ಒಬ್ಬ ಹರಿಜನನ ಮನೆಯಲ್ಲಿರುವ ಚಿಮಣಿಬುಡ್ಡಿ ಎಂದಿದ್ದರೆ ಈ ಭಾವನೆ ಕಟ್ಟಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ‘ಬುಡ್ಡಿ’ ಒಂದು ಸಾಮಾನ್ಯ ವಸ್ತು ಎಂದೆನಿಸಿ ಬಿಡುತ್ತಿತ್ತು. ಆದರೆ ‘ಜ್ಯೋತಿ’ ಎಂದಾಗ ‘ಅವನ ಮನೆಯಲ್ಲಿ ಬೆಳಗುವಷ್ಟು ಪ್ರಭೆಯಿಂದ ನಮ್ಮ ಮನೆಯಲ್ಲೂ ಉರಿಯುತ್ತದೆ’ ಎಂದೆನಿಸುತ್ತದೆ. ‘ಜ್ಯೋತಿ’ ಎನ್ನುವುದರಿಂದ ವಾಕ್ಯಕ್ಕೆ ಇಂಥ ಶಕ್ತಿ ಸಿಗುತ್ತದೆ. ಇಲ್ಲಿ ಒಪ್ಪಿಸುವ ಕೆಲಸ ಮಾಡಲು ಕನ್ನಡದಲ್ಲಿ ನಾವು ಸಂಸ್ಕೃತದಿಂದ ಬಂದ ಪರಂಪರೆಯ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದೇವೆ. ತರತಮ ಮಾನವನಿಂದ ಸಮಾನ ಮಾನವನೆಡೆಗೆ ಎಂಬುದನ್ನು ತಿಳಿಹೇಳಿ ಮನಸ್ಸನ್ನು ಪರಿವರ್ತಿಸಲು ನಾವು ಇಲ್ಲಿ ‘ಜ್ಯೋತಿ’ ಎಂಬ ಶಬ್ದವನ್ನು ಉಪಯೋಗಿಸುತ್ತಿದ್ದೇವೆ. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ –  ಇದು ಕೇಳುವ ಕ್ರಮವೇ ಹೇಗಿದೆ ಅಂದರೆ, ಸಂಸ್ಕೃತದ ಬಳಕೆಯಿಂದ ಅಲಿಟರೇಷನ್, ಅಸೋನನ್ಸ್‌ಗಳ ಬಳಕೆಯಿಂದ, ಅದರ ಆಪ್ತತೆಯಿಂದ, ಕೇಳುಗರಿಗೆ ತಕ್ಷಣ ‘ಇಲ್ಲಪ್ಪ, ಇಲ್ಲ’ ಎನಿಸಿಬಿಡುತ್ತದೆ. ಇಲ್ಲಿ ಕವಿ ಒಂದು ಭಾಷೆಯ ಸಾಧ್ಯತೆಗಳಿಂದ ಒದುಗನ ಮನಸ್ಸಿನಲ್ಲಿ ಒಂದು ಪರಿಣಾಮವನ್ನುಂಟು ಮಾಡಿ, ಆ ಪರಿಣಾಮದ ಮೂಲಕ ಅವನ ಮನಸ್ಸನ್ನು ಬದಲಾಯಿಸುವುದನ್ನು, ಅವರಿಬ್ಬರದೂ ಆದ ಭಾಷೆಯನ್ನು ಬಳಸುವ ಕ್ರಮದಲ್ಲೇ ಸಾಧಿಸಿ ಬಿಡುತ್ತಾನೆ. ಇನ್ನೊಂದು ಮಾತು, ಈ ರೀತಿಯ ಯಾವುದೇ ಸೊಗಸು, ಅಲಂಕಾರಗಳಿಲ್ಲದಿರುವ ಮಾತು: ‘ದಯೆಯಿಲ್ಲದ ಧರ್ಮವಾವುದಯ್ಯಾ?’ ಈ ಮಾತನ್ನು ಆಡುವುದಕ್ಕೆ ಸಾಧ್ಯವಾಗಬೇಕಾದರೆ ನೀವೂ ಕೂಡ ‘ಹೌದಪ್ಪ, ಎಲ್ಲ ಧರ್ಮಗಳಲ್ಲೂ ದಯೆ ಇದ್ದೇ ಇದೆ’ ಎಂದು ತಿಳಿದುಕೊಂಡವರಾಗಿರಬೇಕು. ನಾವೆಲ್ಲ ಒಂದು ಕುಟುಂಬ ಎನ್ನುವ ಪ್ರಜ್ಞೆ ಇದ್ದಾಗ ಮಾತ್ರ ಇಂಥ ಮಾತನ್ನು ಆಡಲು ಸಾಧ್ಯ. ಒಂದು ಭಾಷೆಯಲ್ಲಿ ಒಂದು ದೊಡ್ಡ ಕೆಲಸವನ್ನು ಒಪ್ಪಂದದಿಂದ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ, ನನಗೆ, ನಿಮಗೆ ಇಬ್ಬರಿಗೂ ಧರ್ಮ ಎಂಬುದರ ಬಗ್ಗೆ ಒಂದು ಸಮಾನ ಕಲ್ಪನೆ ಇದ್ದು, ಧರ್ಮದ ಮೂಲದಲ್ಲಿ ದಯೆಯಿದೆ ಎಂಬ ಸಮಾನ ಅಭಿಪ್ರಾಯವಿದ್ದಾಗ, ಹಿಂದೂ ಧರ್ಮವಿರಲಿ, ಇಸ್ಲಾಂ ಇರಲಿ, ಕ್ರಿಶ್ಚಿಯಾನಿಟಿ ಇರಲಿ, ಯಾವುದೇ ಧರ್ಮವಿರಲಿ, ದಯೆಯಿಲ್ಲದ ಧರ್ಮ ಯಾವುದಯ್ಯಾ? –  ಎಂದು ಹೇಳಲು ಬರುತ್ತದೆ. ಒಂದು ದೊಡ್ಡ ಸತ್ಯವನ್ನು ಹೇಳಲು ಇಂಥದೊಂದು ನೇರ, ಸರಳ ಮಾತು ಕೂಡ ಬೇಕಾಗುತ್ತದೆ. ಮನಃಪರಿವರ್ತನೆಯ, ಪ್ರಭೆಯನ್ನು ಕಳೆದು – ಕಟ್ಟುವ ಕೆಲಸ ಮಾಡುವಾಗ ಇಂಥ ಶಕ್ತಿಯೂ ಬೇಕಾಗುತ್ತದೆ.

ಮೂರನೆಯದು –  ನಮ್ಮ ನವ್ಯದಲ್ಲೂ ಕಂಡಂತಹ ಶಕ್ತಿ ಅದು –  ಪುರಂದರದಾಸರ ಒಂದು ಮಾತು. ನಾನು ಇತ್ತೀಚೆಗೆ ರಷಿಯಾದಲ್ಲಿ ಒಂದು ಸೆಮಿನಾರ್‌ನಲ್ಲಿ ಭಾಗವಹಿಸಿದ್ದೆ. ಆ ಸೆಮಿನಾರ್‌ನಲ್ಲಿ ಅವರು ಇಟ್ಟುಕೊಂಡಿದ್ದ ವಿಷಯ ‘ಸಾಹಿತಿ ಮತ್ತು ಅಧಿಕಾರ –  ಇವರಿಬ್ಬರ ನಡುವಣ ಸಂಬಂಧ ಹೇಗಿರಬೇಕು’ ಎಂದು. ಅಲ್ಲಿ ಮೊನ್ನೆಯವರೆಗೆ ಇದು ಎಂಥ ಕೆಟ್ಟ ಸಂಬಂಧವಾಗಿತ್ತೆಂದರೆ ಗೊರ್ಬಚೆವ್ ಬಂದು ಗ್ಲಾಸ್‌ನಾಸ್ಟ್‌ ಇತ್ಯಾದಿಯನ್ನೆಲ್ಲಾ ತಂದ ಮೇಲೆ ಸಾಹಿತಿಗಳೆಲ್ಲ ಒಂದು ಸಭೆ ಸೇರಿದರಂತೆ. ಸೇರಿ ಒಂದು ನಿರ್ಣಯ ಮಾಡಿದರಂತೆ, ‘ನಾವು ಇನ್ನು ಮೇಲೆ ಗ್ಲಾಸ್‌ನಾಸ್ಟ್‌ ಬಗ್ಗೆಯೇ ಬರೆಯೋಣ’ ಎಂದು. ನಿರ್ಣಯ ಮಾಡಿ ಸೀದಾ ಗೊರ್ಬಚೆವ್ ಹತ್ತಿರ ಹೋಗಿ –  ಯಾಕೆಂದರೆ ಅವರಿಗೆ ಸರ್ಕಾರಿ ಭತ್ಯೆ ಇತ್ಯಾದಿ ಎಲ್ಲ ಸಿಗುತ್ತದೆ – ‘ಸರ್, ನಾವು ಇನ್ನು ಮೇಲೆ ಗ್ಲಾಸ್‌ನಾಸ್ಟ್‌ ಬಗ್ಗೆಯೇ ಬರೆಯುತ್ತೇವೆ’ ಎಂದು ತಮ್ಮ ನಿರ್ಣಯ ತಿಳಿಸಿದರಂತೆ. ಅದಕ್ಕೆ ಗೊರ್ಬಚೆವ್ ಹೇಳಿದನಂತೆ: “Way don’t you wait for a little while; let it first take place” ಅದು ಅವರ ಸ್ಥಿತಿ. ನಾನು ಬರಹಗಾರರಿಗೆ ಹೇಳಿದೆ: ‘ಪುರಂದರದಾಸರ ಒಂದು ಸಾಲನ್ನು ಓದಿದ್ದರೆ ನೀವು ಈ ಸ್ಥಿತಿಗೆ ಬರುತ್ತಿರಲಿಲ್ಲ’ ಎಂದು. ನಾನು ಹೇಳಿದ ಪುರಂದರದಾಸರ ಆ ಮಾತು “ಉತ್ತಮ ಪ್ರಭುತ್ವ ಲೊಳಲೊಟ್ಟೆ”. ಇದು ಭಾಷೆಯ ಎಂತಹ ವಿಚಿತ್ರವಾದ ಉಪಯೋಗಿ, ನೋಡಿ. ಪುರಂದರದಾಸರು ಬದುಕಿದ್ದು ಕೃಷ್ಣದೇವರಾಯನ ಕಾಲದಲ್ಲಿ. ಆಗ ಒಂದು ಬಹಳ ಒಳ್ಳೆಯ ಪ್ರಭುತ್ವವಿತ್ತು, ಸುವರ್ಣಯುಗವಾಗಿತ್ತು, ದೊಡ್ಡ ಚಕ್ರಾಧಿಪತ್ಯವಾಗಿತ್ತು ಎಂದೆಲ್ಲ ನಾವು ಕೇಳಿದ್ದೇವೆ. ಪುರಂದರದಾಸರು ಈ ಮಾತಿನಲ್ಲಿ ಹೇಳುತ್ತಿದ್ದಾರೆ. ಯಾವುದೇ ಪ್ರಭುತ್ವ ಉತ್ತಮವಾಗಿರಲು ಸಾಧ್ಯ ಎಂದು ತಿಳಿಯುವುದೇ ಲೊಳಲೊಟ್ಟೆ ಎಂದು ಹೇಳುತ್ತಿದ್ದಾರೆ. ಇಲ್ಲಿ ‘ಉತ್ತಮ’ ಸಂಸ್ಕೃತ ಶಬ್ಧ, ‘ಪ್ರಭುತ್ವ’ ಸಂಸ್ಕೃತ ಶಬ್ಧ, ‘ಲೊಳಲೊಟ್ಟೆ’ ಮಕ್ಕಳು ಬಳಸುವ ಖಾಲಿ, ಅರ್ಥಹೀನ ಕನ್ನಡ ಶಬ್ದ. ಇವುಗಳ ಜೋಡಣೆಯಲ್ಲೆ ವಿಚಿತ್ರವಾದ ಅರ್ಥ ಸ್ಫುರಿಸುತ್ತದೆ: ಯಾವುದೇ ಪ್ರಭುತ್ವ ಉತ್ತಮವಾಗಿರಲು ಸಾಧ್ಯ ಎನ್ನುವುದು ಲೊಳಲೊಟ್ಟೆ. ಇದೊಂದನ್ನು ತಿಳಿದಿದ್ದರೆ ಲೆನಿನ್ ಕಾಲದ ಬರಹಗಾರರೆಲ್ಲ ಬಿಡುಗಡೆ ಪಡೆದು ಬಿಡುತ್ತಿದ್ದರು. ಲೆನಿನ್ ಮಹಾಶಯ ಇಲ್ಲಿ ಏನೋ ಒಂದು ‘ನ ಭೂತೋ ನ ಭವಿಷ್ಯತಿ’ ಎನ್ನುವಂಥ ಒಂದು ವ್ಯವಸ್ಥೆಯನ್ನು, ಪ್ರಭುತ್ವವನ್ನು ತಂದುಬಿಡುತ್ತಾನೆ ಎಂದು ನಂಬಿಕೊಂಡಿದ್ದವರಿಗೆ ಪುರಂದರದಾಸರ ಈ ಮಾತು ತಿಳಿಯಬೇಕಿತ್ತು. ಒಂದು, ಪ್ರಭುತ್ವ ಉತ್ತಮವಾಗಿರಲಿಕ್ಕೆ ಸಾಧ್ಯವಿಲ್ಲ: ಇನ್ನೊಂದು, ಉತ್ತಮವಾಗಿದ್ದರೂ ಪ್ರಭುತ್ವ ಲೊಳಲೊಟ್ಟೆ. ನಿಜವಾಗಿಯೂ ಬಹಳ ದೊಡ್ಡ ಮಾತು ಇದು. ಇಡೀ ರಷಿಯಾವನ್ನು ವಿಮುಕ್ತಿಗೊಳಿಸಬಹುದಾದ ಮೂರು ಶಬ್ದಗಳು ಇವು. ಇಷ್ಟನ್ನು ತಿಳಿದುಕೊಂಡಿದ್ದರೆ ಕಮ್ಯುನಿಸ್ಟ್ ದೇಶಗಳ ಯಾವ ಬರಹಗಾರನೂ ಹೀಗೆ ಭ್ರಮೆಗೆ ಬಲಿಬಿದ್ದು ದುಃಖಕ್ಕೊಳಗಾಗುತ್ತಿರಲಿಲ್ಲ.

ಪುರಂದರದಾಸರ ಮಾತನ್ನು ಯಾಕೆ ಹೇಳಿದೆನೆಂದರೆ, ಪ್ರಭೆಯನ್ನು ಕಳೆಯುವ – ಕಟ್ಟುವ ಸ್ವಮೂಲದ ಪ್ರಯತ್ನವನ್ನು ನಾವು ಲೇಖಕರಾಗಿ ಕೈಗೊಂಡಾಗ, ಇಂಥ ಸಾಧನಗಳನ್ನೆಲ್ಲ ಬಳಸುತ್ತಿರುತ್ತೇವೆ. ಹೀಗೆಯೇ, ಸಿನೆಮಾ, ನಾಟಕ ಇತ್ಯಾದಿಗಳಲ್ಲೂ ಇವುಗಳನ್ನು ಬಳಸುತ್ತೇವೆ. ನೀವು ಒಂದು ಸಿನೆಮಾ ಮಾಡುವಾಗ, ಅದರಲ್ಲಿ ಒಬ್ಬ ಐರೋಪ್ಯನನ್ನು ತಂದು, ಅವನನ್ನು ಮಹಾದುಷ್ಟನನ್ನಾಗಿ ಚಿತ್ರಿಸಿ, ಐರೋಪ್ಯರ ವಿರುದ್ಧ ದ್ವೇಷ ಮೂಡಿಸುವುದು ಖಂಡಿತ ಸಲ್ಲ. ಯಾಕೆಂದರೆ ಅವರಲ್ಲೂ ಬಹಳ ಒಳ್ಳೆಯವರು, ತುಂಬ ಸಜ್ಜನರು ಇರುತ್ತಾರೆ. ಮಾರ್ಕ್ಸ್‌ ಬಹಳ ದೊಡ್ಡ ಮನುಷ್ಯ. ಫ್ರಾಯ್ಡ್ ಬಹಳ ದೊಡ್ಡ ಮನುಷ್ಯ, ಬಹಳ ದೊಡ್ಡವರು, ಋಷಿ ಸಮಾನರು ಅವರು. ಆದರೂ ಅವರು ಹೇಳಿದ್ದರಲ್ಲಿ ಎಷ್ಟೋ ತಪ್ಪುಗಳಿವೆ. ಇದನ್ನು ಹೇಗೆ ಬಗೆಹರಿಸಿಕೊಳ್ಳುವುದು? ಒಂದು ಕಾದಂಬರಿ ಬರೆದು, ಅದರಲ್ಲಿ ಅವರನ್ನು ದುಷ್ಟರಾಗಿಯೇ ಚಿತ್ರಿಸುವಿರಾ? ಇಲ್ಲ, ಸಾಧ್ಯವಿಲ್ಲ. ಯಾಕೆಂದರೆ ಕಾದಂಬರಿ ಓದುವವರಿಗೆಲ್ಲ ಅದೇ ರೀತಿಯ ದುಷ್ಟವಾದುದನ್ನೇ ಓದಿ ಓದಿ ಅಭ್ಯಾಸವಾಗಿರುತ್ತದೆ. ಹಾಗಾಗಿ ಅವರಿಗೆ ಹೊಸತೇನೂ, ಅರ್ಥಪೂರ್ಣವಾದದ್ದೇನೂ ನೀಡಲು ಸಾಧ್ಯವಾಗುವುದಿಲ್ಲ.

ಒಂದು ಉದಾಹರಣೆ ಕೊಡುತ್ತೇನೆ: ಹಿಂದೆ, ಕಥೆ ಹೇಳುವ ಕಾಲ ಇನ್ನೂ ಇದ್ದಾಗ, ನಮ್ಮೂರಿನಲ್ಲಿ ಒಬ್ಬರು ಬಲ್ಲಾಳರಿದ್ದರು. ಹಳ್ಳಿಗರಾದ ಅವರು ಒಮ್ಮೆ ಮೈಸೂರು ದಸರಾ ನೋಡಿಕೊಂಡು ಬಂದರು. ನಂತರ ನಮ್ಮೂರಿನಲ್ಲಿ ಪ್ರತಿದಿನ ಒಂದು ಹಬ್ಬ. ಯಾರ ಮನೆಯಲ್ಲಾದರೂ ಊಟಕ್ಕೆ ಜನರೆಲ್ಲ ಸೇರಿದರೆ ಸಾಕು, ಎಲ್ಲರ ಊಟ ಮುಗಿದ ನಂತರ ಆ ಬಲ್ಲಾಳರು ಕೂತು ದಸರಾದ ವರ್ಣನೆ ಶುರುಮಾಡುತ್ತಿದ್ದರು. ‘ಅಯ್ಯಾ’, ಎಂದವರು ಕಣ್ಮುಚ್ಚಿ ಮೊದಲು ತಮಗೆ ತಾವೇ ಸಂತೋಷಪಟ್ಟುಕೊಂಡು ಕೂತರೆ ಸಾಕು, ನಾವೆಲ್ಲ ‘ಮುಂದೆ ಏನು ಹೇಳುತ್ತಾರೆ’ ಎಂದು ಕಾತರದಿಂದ ಕಾಯುತ್ತಿದ್ದೆವು. ಅವರು ಎಷ್ಟು ಸೊಗಸಾಗಿ ಕಥೆ ಹೇಳುತ್ತಿದ್ದರೆಂದರೆ ಸುತ್ತಲಿದ್ದವರೆಲ್ಲ ಮಂತ್ರಮುಗ್ಧರಾಗಿ ಕೇಳುತ್ತಿದ್ದರು. ಅವರು ಮಕ್ಕಳು, ದೊಡ್ಡವರು ಎಲ್ಲರಿಗೂ ಸೇರಿ ಕಥೆ ಹೇಳುತ್ತಿದ್ದರು. ಅಷ್ಟು ಅದ್ಭುತವಾಗಿ ಹೇಳಲು ಅವರಿಗೆ ಯಾಕೆ ಸಾಧ್ಯವಾಗಿತ್ತೆಂದರೆ ದಸರಾ ಅವರಿಗೊಂದು ಅನುಭವವಾಗಿತ್ತು. ಆ ಕಥೆ ಹೇಳುವಾಗಲೇ ಅವರು ಮೈಸೂರಿನ ಬೀದಿಗಳು ಯಾವ ರೀತಿ, ಅಲ್ಲಿ ಎಲ್ಲೆಲ್ಲಿ ಕಾಫಿ ಹೇಗೆ, ಎಷ್ಟು ಬೆಲೆ, ಈ ಎಲ್ಲ ವಿವರಗಳನ್ನೂ ನೀಡುತ್ತಿದ್ದರು. ಒಂದು ಬುಗುರಿಯ ವಿಷಯ ಹೇಳಿದರೆ ‘ಆತ ಮರವನ್ನು ಹೇಗೆ ಕಡಿದ, ಹೇಗೆ ತಂದ, ಹೇಗೆ ಕೆತ್ತಿದ, ಹೇಗೆ ಬುಗುರಿ ಮಾಡಿದ’ ಎನ್ನುವುದನ್ನೆಲ್ಲ ವಿವರಿಸುತ್ತಿದ್ದರು. ಅವರು ಕ್ರಿಯೆಗಳನ್ನೆಲ್ಲ ಕಥೆಮಾಡಿ ಹೇಳುತ್ತಿದ್ದರು. ಹೀಗೆ ಕಥೆ ಹೇಳುವ ಕ್ರಿಯೆ ಸಾಯುತ್ತ ಹೋದಾಗಲೇ ಕಾದಂಬರಿ ಬಂದದ್ದು. ಕಥೆ ಹೇಳುವುದು ಎಂದರೆ ಇಡೀ ಸಮೂಹವನ್ನು ಕೂರಿಸಿಕೊಂಡು ಕಥೆ ಹೇಳುವುದಾಗಿತ್ತು. ಆದರೆ ಕಾದಂಬರಿ ಒಬ್ಬನೇ ಕೂತು ಓದುವುದು. ಒಬ್ಬನೇ ಕೂತು ಓದುವುದು ಎಂಥ ಸ್ವಾತಂತ್ರ್ಯದ ವಿಷಯವೆಂದರೆ, ನಾನು ಬೇಡವಾದಾಗ ಕಾದಂಬರಿಯನ್ನು ಮುಚ್ಚಬಹುದು, ಇಷ್ಟವಾದಾಗ ಬಿಚ್ಚಬಹುದು, ನಾನು ಸಾಮಾಜಿಕವಾಗಿ ಕೇಳುವುದಕ್ಕೆ ನಾಚಿಕೊಳ್ಳುವಂಥ ವಿಷಯಗಳನ್ನು, ವರ್ಣನೆಗಳನ್ನು ಓದುಬಹುದು. ಇಂಥದೆಲ್ಲ ಒಂದು ಇಡೀ ಸಮೂಹ ಒಪ್ಪಿಕೊಂಡ ಸಂಸ್ಕೃತಿಯಾಗಿದ್ದರೆ ಅವುಗಳನ್ನು ಯುಕ್ತವಾಗಿ ಹೇಳಿಬಿಡಬಹುದು. ನಮ್ಮ ಗ್ರಾಮೀಣ ಸಂಸ್ಕೃತಿಯಲ್ಲಿ ಇಂಥ ಅವಕಾಶಗಳಿರುವ ಕಲೆಗಳಿವೆ; ಸುಸಂಸ್ಕೃತದಲ್ಲಿ ಇಲ್ಲ. ಆದರೆ ಕಾದಂಬರಿಯಲ್ಲಿ ಇವೆಲ್ಲವೂ ಸಾಧ್ಯ. ಕಾದಂಬರಿಯಲ್ಲಿ ಕಥೆ ಹೇಳುವುದಾದರೆ ವೃತ್ತಪತ್ರಿಕೆಯಲ್ಲಿ ಮಾಹಿತಿ ಕೇವಲ ಮಾಹಿತಿಯಾಗಿ ಬರಬೇಕಾಗುತ್ತದೆ. ಹಾಗಾಗಿ ಪತ್ರಿಕೆಯಲ್ಲಿ ವಿಷಯಗಳು ‘ಇಲ್ಲೊಂದು ಸಮಾರಂಭ, ಅಲ್ಲೊಂದು ಕೊಲೆ, ಒಂದೆಡೆ ಒಳ್ಳೆಯದು, ಮತ್ತೊಂದೆಡೆ ಕೆಟ್ಟದ್ದು, ವಿ.ಪಿ.ಸಿಂಗ್ ಹೀಗೆ ಹೇಳಿದರು, ಭಾರತ ಕ್ರಿಕೆಟ್ ತಂಡದವರು ಇಷ್ಟು ರನ್ನು ಮಾಡಿದರು’ ಎಂದು ಎಲ್ಲ ಕಲಸು ಮೋಲೋಗರವಾಗಿ ಬರುತ್ತದೆ. ಇದು ಪ್ಯೂರ್ ಇನ್‌ಫರ್ಮೇಷನ್. ಇದು ಒಂದು ಅನುಭವವಾಗಿ ಬರಲು ಸಾಧ್ಯವಿಲ್ಲ. ಆದರೆ ಅದೇ ಕಾದಂಬರಿಯಲ್ಲಿ ಅನುಭವವಾಗಿ ಬರಲು ಸಾಧ್ಯ. ಕಾದಂಬರಿ ನಮ್ಮನ್ನು ಹಗಲುಗನಸಿಗೆ ಹಚ್ಚಲು ಸಾಧ್ಯವಿರುವುದರಿಂದ, ಒಂದು ಜನಪ್ರಿಯ ಕಾದಂಬರಿ ಓದಲು ಶುರುಮಾಡಿದ ತಕ್ಷಣ, ನಾಯಕಿ ಮೈಸೂರಿನಲ್ಲಿ, ಸ್ಟಾಚ್ಯೂ ಸ್ಕ್ವೇರ್‌ನಲ್ಲಿ ಇಳಿದಳು ಅಂದ ತಕ್ಷಣ, ಅವಳು ಹೋಗುವ ಲಕ್ಷ್ಮೀ ಸಿಲ್ಕ್ ಹೌಸ್‌ಗೆ ನಾವು ಓದುಗರೂ ಹೋಗುತ್ತೇವೆ. ಅವಳು ನೋಡುವ ಎಲ್ಲ ಸೀರೆಗಳನ್ನೂ ನೋಡುತ್ತೇವೆ, ಅವಳು ಹುಡುಕುವ ಹಾಗೆ ನಾವೂ ಹುಡುಕುತ್ತೇವೆ, ನಾವು ಆಸೆ ಪಡುವಂಥ ಸೀರೆಗಳನ್ನು ಅವಳು ಕೊಂಡುಕೊಳ್ಳುತ್ತಾಳೆ, ನಾವು ಆಸೆ ಪಡುವಂಥ ಹುಡುಗನನ್ನು ಅವಳು ಮದುವೆಯಾಗುತ್ತಾಳೆ, ನಾವು ಆಸೆ ಪಡುವಂಥ ಊರುಗಳಿಗೆಲ್ಲ ಆಕೆ ಹೋಗಿ ಬರುತ್ತಾಳೆ. ಆದರೆ ಇದು ಇಷ್ಟೆಲ್ಲ ಸುಲಭವೂ ಆಗಬಾರದು, ಹಾಗಾದರೆ ರೋಮಾಂಚನದ ಸುಖ ಇರುವುದಿಲ್ಲ ನೋಡಿ. ಆದ್ದರಿಂದ ಮಧ್ಯೆ ಕೆಲವು ಅಡಚಣೆಗಳೂ ಬರಬೇಕು, ಆಕೆ ಅವುಗಳನ್ನೆಲ್ಲ ದಾಟಿಕೊಂಡು ಬಂದಾಗ ನಮ್ಮ ಖುಷಿ ಹೆಚ್ಚಾಗುತ್ತದೆ. ನಾವು ಸ್ವತಃ ಇಂಥದ್ದನ್ನು ಹಗಲುಗನಸಿನಲ್ಲಿ ಮಾಡುತ್ತಿರುತ್ತೇವೆ: ಅಡಚಣೆಗಳನ್ನು ತಂದುಕೊಂಡು, ಖುಷಿ ಪಟ್ಟುಕೊಂಡು, ಅವನ್ನು ದಾಟಿಕೊಂಡು, ಖುಷಿ ಪಟ್ಟುಕೊಂಡು ಅದರ ಸುಖ ಅನುಭವಿಸುತ್ತಿರುತ್ತೇವೆ. ಕಾದಂಬರಿ ಹೀಗಾಗಿಬಿಟ್ಟರೆ ಅಲ್ಲಿ ನಾನು ಮೇಲೆ ಹೇಳಿದಂಥ ಯಾವ ಕೆಲಸವನ್ನೂ ಮಾಡಲಿಕ್ಕಾಗುವುದಿಲ್ಲ. ಯಾಕೆಂದರೆ ಇಂಥ ಕಾದಂಬರಿ ಓದುಗರಿಗೆ ಕೇವಲ ನೆಮ್ಮದಿಯನ್ನು, ಕಾಲ್ಪನಿಕ ಸುಖವನ್ನು ತಂದುಕೊಡುತ್ತದೆಯೇ ಹೊರತು ಒಂದು ಸಂಕೀರ್ಣ ಅನುಭವವಾಗಿ ಕಾಡುವುದಿಲ್ಲ, ಕದಡುವುದಿಲ್ಲ.

ನಾವು ಇಂದು ಹೊಸ ಪ್ರಜ್ಞೆ, ಸಂವೇದನೆ, ಪ್ರಭೆ ಪಡೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಇಂಥ ಮೈ ಮರೆಸುವ ಬರಹಗಳಿಂದ ಪ್ರಯೋಜನವಿಲ್ಲ. ಅಂಥ ಬರಹವನ್ನೂ ನಾವು ವಿರೋಧಿಸಬೇಕಾಗುತ್ತದೆ. ಇದು ಸಿನೆಮಾನ ಮಟ್ಟಿಗೂ ತುಂಬ ನಿಜ. ನಮ್ಮ ಇವತ್ತಿನ ಬಹಳಷ್ಟು ಸಿನೆಮಾಗಳು ಕೇವಲ ನಮ್ಮ ಕಲ್ಪನೆಯ ಅಪೇಕ್ಷೆಗಳನ್ನು ಪೂರೈಸಿಕೊಡುವ ಸಾಧನಗಳು. ನೀವು ಕೆಲವರು ಮನೆಯಲ್ಲಿ ರಂಪವಾಗುವುದನ್ನು ನೋಡಿರಬಹುದು. ಅಂಥ ಜನ ದಿನನಿತ್ಯ ಅದೇ ವಿಷಯ ತೆಗೆದುಕೊಂಡು ಜಗಳವಾಡುತ್ತಿರುತ್ತಾರೆ; ಇಂದು ಸರಿಯಾಗುತ್ತಾರೆ, ನಾಳೆ ಮತ್ತೆ ಅದೇ ಜಗಳವಾಡುತ್ತಾರೆ. ಟಾಲ್‌ಸ್ಟಾಯ್‌ನಲ್ಲಿ ಎರಡು ರೀತಿಯ ಜನ ಬರುತ್ತಾರೆ: ಅನುಭವದಿಂದ ಪಾಠ ಕಲಿಯುವವರು, ಮತ್ತು ಅನುಭವದಿಂದ ಏನೂ ಪಾಠ ಕಲಿಯದೆ ಇರುವವರು. ಎರಡನೆಯ ರೀತಿಯವರು ಯಾವತ್ತೂ ರಂಪ ಮಾಡಿಕೊಂಡಿರುತ್ತಾರೆ. ಈ ಸಿನೆಮಾ ನೋಡುವುದೂ ರಂಪ ಇದ್ದ ಹಾಗೆ: ನಿತ್ಯ ಸಿನೆಮಾಕ್ಕೆ ಹೋಗುವುದು, ಅಲ್ಲಿ ಹೃದಯ ಕರಗಿ ಅಳುವುದು, ಅದರ ಸಂತೋಷ ಪಡೆದುಕೊಂಡು ಬರುವುದು, ಮತ್ತೆ ಮರುದಿನ ಸಿನೆಮಾಕ್ಕೆ ಹೋಗುವುದು, ಮತ್ತದೇ ಭ್ರಮೆಯ ಪುನರಾವರ್ತನೆಯಾಗುವುದು. ಇದಕ್ಕೆ ಒಂದು ಬಿಡುಗಡೆ ಅನ್ನುವುದೇ ಇಲ್ಲ; ಏನೋ ಮನಸ್ಸಿನಲ್ಲಿ ಒಂದು ಅನಾವರಣವಾಯಿತು, ಹೊಸ ಪ್ರಜ್ಞೆ ಮೂಡಿತು ಅನ್ನುವುದೆ ಇಲ್ಲ. ಪ್ರತಿಯೊಂದು ಸಲೀಸು, ಪ್ರತಿಯೊಂದು ಸುಖಕರ. ಆದ್ದರಿಂದಲೇ ಇಂಥ ಸಿನೆಮಾವನ್ನು, ಕಾದಂಬರಿಯನ್ನು ವಿರೋಧಿಸಬೇಕಾಗುತ್ತದೆ. ನಾನು ಒಂದು ಸಿನೆಮಾವನ್ನು ಇದಕ್ಕಿಂತ ಬೇರೆಯೇ ಆದ ರೀತಿಯಲ್ಲಿ ಮಾಡಿ, ಅದರ ಮೂಲಕ, ನಿಮ್ಮಲ್ಲಿ ಹೊಸತನ್ನು ಕಾಣುವ ಆಸೆಯನ್ನು ಹುಟ್ಟಿಸಬೇಕು, ನನ್ನಲ್ಲಿ ಹಾಗೆ ಹೊಸತನ್ನು ಕಾಣಿಸುವ ಆಸೆಯನ್ನು ಬೆಳೆಸಿಕೊಳ್ಳಬೇಕು, ಹಾಗೆ ನಿಮ್ಮ ಹೊಸತರ ಆಸೆಯನ್ನು ಹುಟ್ಟಿಸುವಂಥ ಶಕ್ತಿಯನ್ನು ಪಡೆದುಕೊಳ್ಳಬೇಕು. ಅಂಥ ಶಕ್ತಿ ನನಗೆ ನಿಮ್ಮಿಂದಲೇ ಬರಬೇಕು. ಹಾಗಾದಾಗ ಮಾತ್ರ ಒಂದು ಅರ್ಥಪೂರ್ಣ ಸಂವಾದ ಸಾಧ್ಯವಾಗುತ್ತದೆ.

ಇಂಥ ಹೊಸ ರೀತಿಯ ಶಕ್ತಿಯನ್ನು ಪಡೆದುಕೊಳ್ಳುವಾಗ ಹೊಸ ರೀತಿಯ ಕಥೆಯನ್ನೇ ಹೇಳಬೇಕಾಗುತ್ತದೆ. ಅದಕ್ಕೆ ಇಲ್ಲಿ ಮತ್ತೆ ರೂಢಿ ಜಡ ಹೆಜ್ಜೆಯನ್ನು ತಪ್ಪಿಸಬೇಕಾಗುತ್ತದೆ, ರೂಢಿಗತ ದಾರಿಯಲ್ಲಿ ಓದುಗನನ್ನು ಕೊಂಚ ದೂರ ಕರೆದುಕೊಂಡು ಹೋಗಿ ಹೆಜ್ಜೆ ತಪ್ಪಿಸಿ ಷಾಕ್ ನೀಡಬೇಕಾಗುತ್ತದೆ. ಹೀಗೆ ಷಾಕ್ ನೀಡದಿದ್ದರೆ ಓದುಗನ, ಕೇಳುಗನ ಮನಸ್ಸು ಎಚ್ಚರವಾಗುವುದಿಲ್ಲ. ಒಂದು ಉದಾಹರಣೆ: ಒಂದು ಕಾದಂಬರಿಯಲ್ಲಿ ಒಬ್ಬ ಮನುಷ್ಯ ಮೂವತ್ತೈದನೆಯ ವಯಸ್ಸಿಗೆ ಸಾಯುತ್ತಾನೆ ಎಂದಿಟ್ಟುಕೊಳ್ಳಿ. ಅವನು ಕಾದಂಬರಿಯಲ್ಲಿ ಒಂದು ಪಾತ್ರವಾಗಿ ಬಂದಾಗ ಎಲ್ಲಾ ಕ್ಷಣಗಳಲ್ಲೂ ಆತ ತನ್ನ ಮೂವತ್ತೈದನೆಯ ವರ್ಷಕ್ಕೆ ಸಾಯುವಂಥ ಮನುಷ್ಯ. ಅವನು ಬದುಕಿದ್ದ ಕಾಲದ ಮಟ್ಟಿಗೆ ತಾನು ಬದುಕುತ್ತ ಇದ್ದೇನೆ ಎಂದು ತಿಳಿದುಕೊಂಡು ಬದುಕುತ್ತಿರುವ ಮನುಷ್ಯ. ಕಾದಂಬರಿಯ ಆ ಪಾತ್ರ ಯಾವುದೇ ಕ್ಷಣದಲ್ಲೂ ತನ್ನ ಮೂವತ್ತೈದನೆ ವರ್ಷಕ್ಕೆ ಸಾಯುವ ಪಾತ್ರವೂ ಹೌದು. ಯಾಕೆಂದರೆ, ನೀವು ಆ ಕಾದಂಬರಿಯನ್ನು ಎರಡನೇ ಬಾರಿ, ಮೊದಲು ಓದಿದ ನೆನಪಿನೊಂದಿಗೆ, ಓದುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಹೀಗೆ ಎರಡನೇ ಸಲ ಓದುವಾಗ ಆತ ಸಂತೋಷದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಪ್ರೇಮಮಗ್ನನಾಗಿದ್ದಾಗಲೂ ತಾನು ಬದುಕುತ್ತಿದ್ದೇನೆ ಎಂದು ತಿಳಿದುಕೊಂಡು ಬದುಕುತ್ತಿರುವಾಗಲೂ ಆತ ನಿಮಗೆ ತನ್ನ ಮೂವತ್ತೈದನೇ ವಯಸ್ಸಿನಲ್ಲಿ ಸಾಯುವ ಮನುಷ್ಯನಾಗಿ ಕಂಡುಬರುತ್ತಿರುತ್ತಾನೆ. ಕೇವಲ ಸುಖ ನೀಡುವ ಜನಪ್ರಿಯ ಕಾದಂಬರಿಯಲ್ಲಿ, ಒಂದು ಪತ್ತೇದಾರಿ ಕಾದಂಬರಿಯಲ್ಲಿ ಇಂಥ ಅನುಭವ ಸಿಗುವುದಿಲ್ಲ. ಯಾಕೆಂದರೆ ಅವನ ಸಾವಿನ ವಿಷಯ ಕೇವಲ ಸಸ್ಪೆನ್ಸ್‌ನ ಅಂಶವಾಗಿ, ನೀವು ಆ ಸಸ್ಪೆನ್ಸ್‌ನಲ್ಲಿ ಪಡೆಯಬಹುದಾದ ದುಃಖ ಸಂತೋಷವನ್ನೆಲ್ಲಾ ಪಡೆದುಬಿಟ್ಟ ಮೇಲೆ ಅಂಥ ಕಾದಂಬರಿಯ ಎರಡನೆಯ ಓದಿನಲ್ಲಿ ಏನೂ ಸ್ವಾರಸ್ಯ, ಮಹತ್ವ ಉಳಿದಿರುವುದಿಲ್ಲ. ಆದರೆ ಆ ಪಾತ್ರದ ಎರಡೂ ಮುಖಗಳನ್ನು ಹೇಳುವಂಥ ಕಾದಂಬರಿ, ಕಾವ್ಯ, ಸಿನೆಮಾ ಮಾತ್ರ ಮತ್ತೊಂದು ಸಲವೂ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ, ನೆನಪಿನಲ್ಲೂ ಜೀವಂತವಾಗಿರುತ್ತದೆ. ನಾವು ಇಂದು ಸೃಷ್ಟಿಸಬೇಕಾಗಿರುವುದು ಇಂಥ ಬಂಧಗಳನ್ನು.

ಇಂಗ್ಲಿಷಿನಲ್ಲಿ ‘ಪ್ರತಿಯೊಂದು ಕೃತಿಯೂ ಓದುವವನು ತಾನು ಓದುವಾಗ ಸೃಷ್ಟಿಸಿಕೊಳ್ಳುವ ಕೃತಿ’ ಎಂಬ ಒಂದು ಮಾತಿದೆ. ಓದುವವನು ಹೀಗೆ ಸೃಷ್ಟಿಸಿಕೊಳ್ಳುವಾಗ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಅವನ ಸಂಸ್ಕೃತಿ, ಜೀವನಕ್ರಮ, ಜೀವನಾನುಭವ, ಅವನು ಓದಿರುವ ಬೇರೆ ಕೃತಿಗಳು, ಅವನ ಅಪೇಕ್ಷೆಗಳು, ಅವನ ವ್ಯಕ್ತಿತ್ವ –  ಹೀಗೆ ಹತ್ತು ಹಲವು ಅಂಶಗಳು ಕೆಲಸ ಮಾಡುತ್ತಿರುತ್ತವೆ. ಇದೆಲ್ಲದರ ಮೂಲಕ ಹಾದುಹೊಕ್ಕು ಆ ಕೃತಿ ಅವನ ಮೇಲೆ ತನ್ನ ಪರಿಣಾಮ ಮಾಡಿರುತ್ತದೆ. ಆದರೆ ಮೇಲ್ಕಂಡ ಅಂಶಗಳ ಚೌಕಟ್ಟಿನಲ್ಲಿ ಹೀಗೆ ಹೊಸ ಮನಸ್ಸೊಂದನ್ನು ಸೃಷ್ಟಿಸುವ ಕ್ರಿಯೆಯನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪರೋಕ್ಷವಾದ, ವಕ್ರವಾದ ಮಾರ್ಗವೊಂದನ್ನು ಬಳಸಬೇಕಾಗುತ್ತದೆ. ತನ್ನ ದಿಕ್ಕಲ್ಲೇ ಏನೇನೋ ಯೋಚನೆ ಮಾಡುತ್ತಿರುವ ನಿಮ್ಮ ಮನಸ್ಸಿಗೆ ನನ್ನ ಮಾತು ಕೇಳುವಂತೆ ಮಾಡಲು ಅದಕ್ಕೆ ಒಂದು ಕೊಕ್ಕೆ ಹಾಕಿ ಎಳೆಯಬೇಕಾಗುತ್ತದೆ, ಪರೋಕ್ಷ ಮಾತನ್ನು ಉಪಯೋಗಿಸಬೇಕಾಗುತ್ತದೆ, ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಸಾಕ್ರಟೀಸ್‌ನಿಗೆ ಒಬ್ಬಾತ ಅಂದು ಸಂಜೆ ಊಟಕ್ಕೆ ಕರೆದಾಗ, ಸಾಕ್ರಟೀಸ್ ಉತ್ತರ ಬರೆದು ಕಳಿಸುತ್ತಾನೆ: ‘ಸಂಜೆ ನದಿ ದಾಟಿ ಬರುವಾಗ ಸಾಯದೆ ಇದ್ದ ಪಕ್ಷದಲ್ಲಿ ನಾನು ಖಂಡಿತ ನಿನ್ನ ಮನೆಗೆ ಊಟಕ್ಕೆ ಬರುತ್ತೇನೆ’, ವಿಚಿತ್ರ ಮಾತು, ಆದರೆ ಸಾಕ್ರಟೀಸ್ ಯಾಕೆ ಹೀಗೆ ಹೇಳುತ್ತಾನೆ ಎಂದು ಗಮನಿಸಿ: ಮನುಷ್ಯ ನಶ್ವರ ಜೀವಿ, ಸಾಯುವವನು. ಅದನ್ನು ನೇರವಾಗಿ ಹೇಳಿದರೆ ಯಾರೂ ಗಮನಿಸುವುದಿಲ್ಲ. ನಂಬುವುದೂ ಇಲ್ಲ, ಆದರೆ ನದಿ ದಾಟುವಾಗ ಸಾಯುವ ಸಾಧ್ಯತೆ ಇದೆ ತಾನೆ? ಹೀಗೆ ವಕ್ರ ಮಾತಿನ ಮೂಲಕ ಸಾಕ್ರಟೀಸ್ ಮನುಷ್ಯನ ನಶ್ವರತೆಯ ಪ್ರಜ್ಞೆಯನ್ನು ತಂದುಕೊಡುತ್ತಾನೆ, ವಕ್ರೋಕ್ತಿಯ ಕೊಕ್ಕೆ ಹಾಕಿ ನಮ್ಮ ಮನಸ್ಸನ್ನು ಎಳೆದುಕೊಂಡು ತನ್ನ ಮಾತಿಗೆ ಹೌದೆನ್ನಿಸುತ್ತಾನೆ. ಇಂಥ ಮಾತು ನಮ್ಮನ್ನು ಹಿಡಿಯುವುದು ಅದರ ವಕ್ರತೆಯಿಂದ, ಅದು ಕೂಡಲೆ ಅರ್ಥವಾಗಿದ್ದರಿಂದ. ಯಾಕೆಂದರೆ ಕೂಡಲೇ ಅರ್ಥವಾಗಿದ್ದನ್ನು ನಾವು ಮತ್ತೆ ಯೋಚಿಸಲು ಹೋಗುವುದಿಲ್ಲ. ಇಲ್ಲಿ ಇನ್ನೊಂದು ಉದಾಹರಣೆ ನೋಡಿ. ಓಥೆಲೊ ನಾಟಕದಲ್ಲಿ ಒಂದು ಮಾತು ಬರುತ್ತದೆ: ‘ಫುಟ್‌ ಔಟ್ ದ ಲೈಟ್, ದೆನ್ ಪುಟ್ ಔಟ್ ದ ಲೈಟ್’ ಈಗ ನಾನು ನಿಮಗೆ ‘ಪುಟ್‌ ಔಟ್ ದ ಲೈಟ್’ ಎಂದು ಹೇಳಿದರೆ ನೀವು ಹೋಗಿ ದೀಪ ಆರಿಸುತ್ತೀರಿ, ಇಲ್ಲಿ ಮಾತು ಕೃತಿಯಾಗಿ ಪರಿಣಮಿಸುತ್ತದೆ. ಅಂದರೆ ಮಾತು ಒಂದು ಸಾಧನವಾಗಿ ಕೆಲಸ ಮಾಡುತ್ತದೆ, ಇದೇ ಮಾತು ಓಥೆಲೊದಲ್ಲಿ ಏನು ಕೆಲಸ ಮಾಡುತ್ತದೆ ನೋಡಿ: ಓಥೆಲೊಗೆ ಡೆಸ್ಟಮೋನಾಳ ಬಗ್ಗೆ ಬಹಳ ಪ್ರೀತಿಯಿದೆ, ಅಷ್ಟೇ ಅನುಮಾನವೂ ಇದೆ. ಆ ಸುಂದರ, ಮುಗ್ಧ ಹುಡುಗಿ, ಕತ್ತಲಲ್ಲಿ ನಿದ್ದೆ ಹೊಗಿದ್ದಾಳೆ. ಅಲ್ಲಿ ಒಂದು ಮೇಣದ ಬತ್ತಿ ಮಾತ್ರ ಉರಿಯುತ್ತಿದೆ. ಮಹಾ ಉತ್ಪಾತದಲ್ಲಿರುವ ಓಥೆಲೊ ಪ್ರೀತಿಯಲ್ಲಿ, ಅನುಮಾನದಲ್ಲಿ ಡೆಸ್ಡೆಮೋನಾಳನ್ನು ಕೊಲ್ಲಲು ಹೋಗಿದ್ದಾನೆ. ಆತ ಆಕೆಯನ್ನು ನೋಡುತ್ತಾನೆ, ಆ ಮೇಣದ ಬತ್ತಿಯನ್ನು ನೋಡುತ್ತಾನೆ, ತನಗೆ ತಾನೆ ನುಡಿಯುತ್ತಾನೆ: ‘ಪುಟ್ ಔಟ್ ದ ಲೈಟ್, ದೆನ್ ಪುಟ್ ಔಟ್ ದ ಲೈಟ್’. ಮೊದಲ ‘ಪುಟ್ ಔಟ್ ದ ಲೈಟ್‌’ ಎಂದರೆ ‘ದೀಪವಾರಿಸು’ ಎಂದು. ಈ ಮಾತು ಕೂಡಲೆ ಅರ್ಥವಾಗುವುದಿಲ್ಲ. ನಂತರ ಮೊತ್ತೊಮ್ಮೆ ‘ಪುಟ್ ಔಟ್ ದ ಲೈಟ್‌’ ಎನ್ನುತ್ತಾನೆ: ಅಂದರೆ ‘ಡೆಸ್ಡೆಮೋನಾ ಒಂದು ದೀಪವಿದ್ದ ಹಾಗೆ; ನಾನು ಆ ದೀಪವನ್ನು ಆರಿಸುತ್ತೇನೆ. ಅದರಿಂದ ನನ್ನ ಜೀವನದಲ್ಲಿ ಕತ್ತಲೆಯಾಗುತ್ತದೆ’ ಎಂದಾಗುತ್ತದೆ. ಒಟ್ಟು ಸಾಲಿನ ಧ್ವನಿ ‘ಮೊದಲ ದೀಪವನ್ನು ಆರಿಸುತ್ತೇನೆ. ಇಲ್ಲದಿದ್ದರೆ ಅವಳನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವಳನ್ನು ನೋಡಿದಾಕ್ಷಣ ನನ್ನ ಮನಸ್ಸು ಕರಗಿ ಹೋಗುತ್ತದೆ. ಹಾಗಾಗಿ ಅವಳನ್ನು ಕತ್ತಲೆಯಲ್ಲಿಯೇ ಕೊಲ್ಲಬೇಕು. ಆ ಕತ್ತಲಲ್ಲಿ ಅವಳ ಜೀವದ ದೀಪವನ್ನು ಆರಿಸಬೇಕು. ಅದರಿಂದ ನನ್ನ ಜೀವನವೂ ಕತ್ತಲಾಗಿ ಹೋಗುತ್ತದೆ ಎಂದಾಗುತ್ತದೆ’, ಅವನ ಆ ಕ್ಷಣದ ದುಃಖ, ಸಂಕಟ, ತೊಳಲಾಟ ಎಲ್ಲವೂ ವ್ಯಕ್ತವಾಗುತ್ತದೆ. ಓಥೆಲೊ ರಂಗದ ಮೇಲೆ ಈ ಮಾತನ್ನಾಡಿದಾಗ ಅಲ್ಲಿ ಎದುರಿಗೆ ಪ್ರತ್ಯಕ್ಷವಾಗಿ ಮೇಣದ ಬತ್ತಿ ಕಾಣುತ್ತಿದ್ದು, ದೀಪವಾರಿಸುವುದು ಒಂದು ನಿತ್ಯ ವಿಧಿಯಾಗಿದ್ದು, ಒಟ್ಟೂ ಅನುಭವ ಅವನ ಮನಸ್ಸಿಗೂ, ನಿಮ್ಮ ಮನಸ್ಸಿಗೂ ಒಂದು ಕೊಕ್ಕೆಯಾಗಿ ಬೀಳಲು ಸಾಧ್ಯವಾಗುತ್ತದೆ. ಮಾತಿನ ವಕ್ರಾರ್ಥವನ್ನು ಇಷ್ಟು ಚೆನ್ನಾಗಿ ದುಡಿಸಿಕೊಂಡ ಷೇಕ್ಸ್‌ಪಿಯರ್  ಮಾತಿನ ಸಹಜತೆಯನ್ನೂ ಅಷ್ಟೇ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಕಿಂಗ್ ಲಿಯರ್ನಲ್ಲಿ ಲಿಯರ್ ಮಗಳು ಕಾರ್ಡೀಲಿಯಾಗೆ ‘‘ಪ್ರೇ ಅನ್‌ಬಟನ್ ಮಿ’’ (ದಯೆಯಿಟ್ಟು ಗುಂಡಿ ಬಿಚ್ಚು) ಎಂದು ಹೇಳುತ್ತಾನೆ. ಅದ್ಭುತವಾದ ಸಾಲ ಇದು, ಇಂಥದ್ದು ಜನಪ್ರಿಯ ಕಲೆಯಲ್ಲಿ ಇರುವುದಿಲ್ಲ. ಜನಪ್ರಿಯ ಸಿನೆಮಾ, ಸಾಹಿತ್ಯ, ನಾಟಕ ಸಲೀಸಾಗಿ ಮನಸ್ಸನ್ನು ದ್ರವಿಸುತ್ತಿರುತ್ತವೆ. ಒಂದು ತೆಳು ಅನುಭವವನ್ನು ಪದೇ ಪದೇ ನೀಡುತ್ತ ರಂಪ ಮಾಡುತ್ತಿರುತ್ತದೆ. ಜನಪ್ರಿಯ ಕಲೆಯ ಸ್ವರೂಪವೇ ಈ ರೀತಿಯಾಗಿ ಒಂದು ಅಪೇಕ್ಷೆಯನ್ನು ಕೆರಳಿಸಿ, ಅದನ್ನು ತಣಿಸಿ ಆದ ಮೇಲೆ ಮತ್ತೂ ಹೆಚ್ಚು ಅಪೇಕ್ಷೆಗಳನ್ನು ಕೆರಳಿಸುವುದಾಗಿದೆ. ಉದಾಹರಣೆಯಾಗಿ, ಕಾಮುಕತೆ, ಕೆರಳಿಸುವಂಥ ಪುಸ್ತಕಗಳಿವೆಯಲ್ಲ, ಅವು ಬರೆಯುವುದಕ್ಕೆ ಅಸಾಧ್ಯವಾದ ಪುಸ್ತಕಗಳು. ಯಾಕೆಂದರೆ ಓದುಗನನ್ನು ಕೆರಳಿಸಬೇಕು ಎಂದು ಬರೆದರೆ, ಹಾಗೆ ಕೆರಳಿಸಬೇಕು ಎಂದು ಆಸೆಯಿರುವವನಿಗೆ, ಅದನ್ನು ಓದುವ ಸಮಾಧಾನವೂ ಇರುವುದಿಲ್ಲ. ಆದ್ದರಿಂದ ಅಂಥ ಪುಸ್ತಕಗಳನ್ನು ಇನ್ನೂ ಹೆಚ್ಚು ರೋಚಕವಾಗಿಸಬೇಕಾಗುತ್ತದೆ. ಹಾಗಾಗಿ ಜನಪ್ರಿಯ ಕಲೆ ತನ್ನನ್ನು ಉಳಿಸಿಕೊಳ್ಳಲು, ತನ್ನ ಗಿರಾಕಿ ವರ್ಗವನ್ನು ಉಳಿಸಿಕೊಳ್ಳಲು ಹೆಚ್ಚುಹೆಚ್ಚು ಲಂಪಟವಾಗುವುದನ್ನು ಬಿಟ್ಟು ಬೇರೆ ಮಾಗವೇ ಇಲ್ಲ.

ಆದರೆ ಯಾವಾಗ ನಾವು ನಮ್ಮ ಮನಸ್ಸಿನಲ್ಲಿರುವುದನ್ನು ವಿಸ್ತರಿಸಲು ಸಾಧ್ಯವಾಗುತ್ತದೋ ಆಗ ಕಲೆ ಹುಟ್ಟುತ್ತದೆ. ನಡೆಯುವಾಗ ನಾವು ಒಂದು ಗುರಿಗೆ ಹೋಗುತ್ತೇವೆ, ಗುರಿಯ ದಾರಿ ಹಿಡಿದು ನಡೆಯುತ್ತೇವೆ. ಆದರೆ ಅದೇ ಕಾಲುಗಳನ್ನು ಇನ್ನೊಂದು ರೀತಿಯಲ್ಲಿ, ಯಾವ ವ್ಯವಹಾರಿಕ ಗುರಿಯೂ ಇಲ್ಲದೆ ಬಳಸಿದಾಗ ಅದು ನೃತ್ಯವಾಗುತ್ತದೆ, ಹಾಗೆಯೇ ಸ್ವರ ಸಂಗೀತವಾಗುತ್ತದೆ, ಕಲೆ ಮೂಡುತ್ತದೆ. ಈ ಕ್ರಿಯೆಗಳನ್ನು ವಿಸ್ತರಿಸಲು ಸಾಧ್ಯವಿರುತ್ತದೆ, ಕಾರಣ ವಿಸ್ತರಿಸಿದಷ್ಟೂ ಅವು ನಮಗೆ ಹೊಸ ಹೊಸ ಅನುಭವವನ್ನು ನೀಡುತ್ತಿರುತ್ತವೆ. ಇಂಥ ಕಲಾತ್ಮಕ ಕ್ರಿಯೆ ನಮಗೆ ಭ್ರಮೆಯ ಸುಖವನ್ನು ನೀಡದೆ, ನಮ್ಮ ಅಪೇಕ್ಷೆಯಂತೆ ನಡೆಯದೆ, ನಮ್ಮ ಬಯಕೆಗೆ ವಿರುದ್ಧವಾದದ್ದನ್ನೇ ಕೊಟ್ಟಿರುತ್ತದೆ; ಹಗಲುಗನಸಿನಂತೆ ಸಮಾಧಾನ ನೀಡದೆ ಷಾಕ್ ಕೊಡುವ ಕೊಕ್ಕೆಯ ಕೆಲಸ ಮಾಡಿರುತ್ತದೆ. ಆದರೆ ಇನ್ನೊಂದು ವಿಚಿತ್ರ ವಿಷಯ ಗಮನಿಸಿ: ಹೀಗೆಲ್ಲ ಮಾಡುವಂಥ ಕೃತಿಯನ್ನು ಸೃಷ್ಟಿಸುವ ಲೇಖಕ ಕೂಡ ಎಷ್ಟೋ ಸಲ ಇತರರಂತೆಯೇ ಹಗಲುಗನಸ್ಸನ್ನು ಬಯಸುವವನೂ, ಸಲೀಸಾಗಿ ಹೇಳಬೇಕೆಂದು ಇಷ್ಟ ಪಡುವವನೂ ಆಗಿರುತ್ತಾನೆ. ಬಹಳ ಒಳ್ಳೆಯ ಲೇಖಕರು ತಾವು ಓದುವಾಗ ಬಹಳ ಅಗ್ಗದ ಬರಹಗಳನ್ನೇ ಇಷ್ಟಪಡಬಹುದು, ಒಳ್ಳೆಯ ಕ್ರಿಕೆಟ್ ಆಟಗಾರ ಬಿಡುವಿನಲ್ಲಿ ಗಾಲ್ಫ್ ಆಡಲು ಇಷ್ಟಪಡುವಂತೆ, ಅದು ಬೇರೆ ವಿಷಯ. ಆದರೆ ಅಂಥ ಮನುಷ್ಯನೂ ಹೊಸತನ್ನು ಸೃಷ್ಟಿ ಮಾಡಲು ಯತ್ನಿಸುವಾಗ, ಅವನಲ್ಲಿ ನಾವು ಈವರೆಗೆ ಕಂಡ ಎಲ್ಲ ಶಕ್ತಿಗಳೂ ಇರಬೇಕಾಗುತ್ತದೆ.

ಹೀಗೆ ಹೊಸ ಸಂವೇದನೆ, ಹೊಸ ಪ್ರಜ್ಞೆಯನ್ನು ಸೃಷ್ಟಿಸಬಲ್ಲ ಶಕ್ತಿ ಎಲ್ಲ ಕಲಾಪ್ರಕಾರಗಳಿಗೂ ಇರುತ್ತದೆ. ನಾನು ಕೆಲವು ದಿನಗಳ ಹಿಂದೆ ಚಿಕಾಗೋ ನಗರದಲ್ಲಿ ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕವನ್ನು ನೋಡಿದೆ. ಅಲ್ಲಿಯವರೆಗೆ ಅದು ಅತ್ಯಂತ ಹೊಸತಾದ, ಆಧುನಿಕವಾದ ಅನುಭವವಾಗಿತ್ತು. ನಾನು ಅವರಿಗೆ ಹೇಳಿದೆ ‘ದಿಸ್ ಈಸ್ ಓಲ್ಡ್‌ ಹ್ಯಾಟ್ ಇನ್‌ ಕರ್ನಾಟಕ’ ಎಂದು. ನೀವು ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸಿರಬಹುದು, ನಮ್ಮಲ್ಲಿ ಯಾವತ್ತೂ ಕ್ಲಾಸಿಕಲ್ ಸಂಸ್ಕೃತಿ – ಜಾನಪದ ಸಂಸ್ಕೃತಿಗಳು, ಸಂಸ್ಕೃತ ಸಾಹಿತ್ಯ ದೇಶೀ ಸಾಹಿತ್ಯಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿದ್ದವು. ಒಂದು ಆರೋಗ್ಯವಂತ ಸಮತೋಲವನ್ನು ಕಾಪಾಡಿಕೊಳ್ಳುತ್ತಿದ್ದವು. ಕಾರ್ನಾಡರ ನಾಗಮಂಡಲ ನೋಡುವಾಗ ನನಗೆ ಇದೆಲ್ಲ ನೆನಪಿಗೆ ಬಂದಿತು, ಅಹಲ್ಯೆಯ ಕಥೆ ನೆನಪಾಯಿತು. ಆದರೆ ಈ ನಾಟಕದಲ್ಲಿ ಗಂಡ ಆಕೆಗೆ ಮೋಸ ಮಾಡುತ್ತಿರುತ್ತಾನೆ, ಒಬ್ಬ ಸೂಳೆಯನ್ನುಇಟ್ಟುಕೊಂಡಿರುತ್ತಾನೆ, ಗಂಡ ಹೊರಗಡೆ ಹೋದಾಗ ಹಿಂದುಗಡೆ ಇರುವ ಒಂದು ಸರ್ಪ ಆಕೆಯ ಬಳಿ ಬರುತ್ತಾನೆ, ಅಹಲ್ಯೆಯ ಬಳಿ ಇಂದ್ರ ಬಂದಂತೆಯೇ ಬರುತ್ತಾನೆ. ಅವಳಿಗೂ ಗೊತ್ತು, ಈತ ತನ್ನ ಗಂಡನಲ್ಲ ಎಂದು, ಆದರೂ ನಂಬಿ ಅವನನ್ನು ಕೂಡುತ್ತಾಳೆ, ಮಗುವನ್ನು ಪಡೆಯುತ್ತಾಳೆ. ಆದರೆ ಆ ಕಥೆಯ ಮಟ್ಟಿಗೆ ಮಾತ್ರ ಕಲ್ಲಾಗುವುದಿಲ್ಲ. ಕೊನೆಗೆ ಗಂಡನೇ ಸೋತುಬಿಡುತ್ತಾನೆ. ಆಕೆ ಮಗುವನ್ನು ಪಡೆಯುತ್ತಾಳೆ. ಈ ಜಾನಪದ ಕಥೆಯಲ್ಲಿ ನಮ್ಮಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುವ ಪುನರ್ಜನ್ಮವಾಗಲಿ, ಪಾಪಪ್ರಜ್ಞೆಯಾಗಲಿ ಇಲ್ಲವೇ ಇಲ್ಲ. ಇಂಥ ವಿಭಿನ್ನವಾದ, ಪರಸ್ಪರ ವಿರುದ್ದ, ಆದರೂ ಪೂರಕವಾದ ಪರಂಪರೆಗೆ ನಮ್ಮಲ್ಲಿ ಒಟ್ಟೊಟ್ಟಿಗೆ ಇರುವುದು ಕಂಡುಬರುತ್ತದೆ. ನಾವು ಈ ಮೊದಲು ಚರ್ಚಿಸಿದ ದೃಷ್ಟಿ ಇದ್ದ ಮನುಷ್ಯನಿಗೆ ನಮ್ಮ ಸಂಸ್ಕೃತದ ಹಾಗೆಯೇ ನಮ್ಮ ಜಾನಪದ ಪರಂಪರೆಗಳಲ್ಲಿ ತನಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುಲು ಸಾಧ್ಯವಿದೆ. ಪಾಶ್ಚಾತ್ಯ ಪ್ರಭಾವದಿಂದ ಹೆಚ್ಚುಹೆಚ್ಚು ಮುಕ್ತವಾಗುವ ಪ್ರಯತ್ನದಲ್ಲಿರುವ ನಮಗೆ ಇದು ನಮ್ಮ ಸ್ವಂತದ ಪ್ರಭೆಯನ್ನು ಕಟ್ಟಿಕೊಳ್ಳುವಲ್ಲಿ ಮಾರ್ಗದರ್ಶಕವಾಗಬಲ್ಲದು. ಇಂತಹ ಒಂದು ಸಂದರ್ಭದಲ್ಲಿ ಇಂದಿನ ಕನ್ನಡ ಸಾಹಿತ್ಯ, ಕನ್ನಡ ರಂಗಭೂಮಿ, ಕನ್ನಡ ಸಿನೆಮಾ ಇವೆ. ಇವುಗಳನ್ನು ಗಾಢಗೊಳಿಸಿಕೊಳ್ಳುವುದು ಹೇಗೆ, ಇವುಗಳನ್ನು ಸ್ವೀಕರಿಸುವಂಥ ಸಹೃದಯರನ್ನು ಪಡೆದುಕೊಳ್ಳುವುದು ಹೇಗೆ –  ಎನ್ನುವ ನಮ್ಮ ಹುಡುಕಾಟದ ಹೆಜ್ಜೆಗಳಾಗಿ ಇಂಥ ಶಿಬಿರಗಳು ನಡೆಯುತ್ತಿರುತ್ತವೆ.

ನೀನಾಸಮ್ ಸಂಸ್ಕೃತಿ ಶಿಬಿರ, ೧೯೯೦ ಅಕ್ಟೋಬರ್ನಲ್ಲಿ ಮಾಡಿದ ಪೀಠಿಕಾ ಭಾಷಣ. ಇದನ್ನು ಟೇಪ್ರೆಕಾರ್ಡ್ ಮಾಡಿಕೊಂಡು ಸಂಗ್ರಹಿಸಿದವರು ಶ್ರೀ ಜಶವಂತ್ ಜಾಧವ್.