ಈಚೆಗೆ ನಾನು ಹೈಡೆಗರನನ್ನು ಓದುತ್ತಿದ್ದೇನೆ. ಅವನು ಅರ್ಥವಾಗುವುದು ನನಗೆ ಕಷ್ಟ. ಆದರೆ ನನಗೆ ಅರ್ಥವಾದಷ್ಟು ಅವನ ವಿಚಾರಗಳು ನನ್ನ ಮನಸ್ಸನ್ನು ಕಲಕಿವೆ. ಅವನ ಇಡೀ ಚಿಂತನೆಗೆ ಮೂಲವಾದ ಒಂದು ಗ್ರಹಿಕೆ ಇದೆ. ಅದೆಂದರೆ ಇರುವ ಎಲ್ಲವೂ ಈ ಭವದಲ್ಲೇ ಇರುವುದು; ಅಂದರೆ ಭವದಲ್ಲಿಲ್ಲದೆ ಏನೂ ಸಂಭವಿಸದು. ಇಂಗ್ಲಿಷಿನಲ್ಲಿ ಇದನ್ನು ‘Being in the World’ ಎಂಬ ಭಾಷಾಂತರದಲ್ಲಿ ಓದಿಕೊಂಡಿದ್ದೇನೆ. ಹೈಡೆಗರನ ಜರ್ಮನ್ ಮೂಲದ ಮಾತು ಇದಕ್ಕಿಂತಲೂ ಹೆಚ್ಚು ಅರ್ಥವಂತಿಕೆಯನ್ನು ಪಡೆದಿರಬಹುದು.

ಇರುವ ಎಲ್ಲವನ್ನೂ, ಭವದಲ್ಲಿ ಇದ್ದುದಾಗಿ ಗ್ರಹಿಸುವುದಕ್ಕೆ ಅವನೇ ಕೊಡುವ ಒಂದು ಉದಾಹರಣೆ ಚೆನ್ನಾಗಿದೆ. ಕಲಾವಿದ, ವ್ಯಾನ್‌ಗೋ (Vangogh) ಒಂದು ಜೊತೆ ಶೂಗಳನ್ನು ಚಿತ್ರಿಸಿದ್ದಾನೆ. ಅದರ ಬಗ್ಗೆ ನನ್ನದೊಂದು ಪದ್ಯವಿದೆ. ಚಿತ್ರವನ್ನು ಹೈಡೆಗರನ ಮುಖೇನ ನೋಡಿ ನನಗೆ ಭಾಸವಾದದ್ದನ್ನು ಹೀಗೆ ಬರೆದಿದ್ದೇನೆ.

ವ್ಯಾನ್ಗೊ ಶೂಗಳು

ಅವುಗಳಲ್ಲಿ ಇರುತ್ತ
ಆ ಮುದುಕಿ ಹೊಲದಲ್ಲಿ ಬಗ್ಗಿ ನೆಟ್ಟಿದ್ದು, ಕಳೆಕಿತ್ತದ್ದು,
ಉಬ್ಬು ತಗ್ಗುಗಳನ್ನು ನಡೆದು ಸೋತದ್ದು, ಗೆದ್ದದ್ದು,
ಅವಳು ಹಾಗೆ ಕಾಲೆತ್ತಿ ನಡೆಯುವುದರಿಂದ ಹಿಮ್ಮಡಿ ಹೀಗೆ ಸವೆದದ್ದು
ಸುಸ್ತಾದ ಪಾದಗಳು ಈಗ ಭಣಗುಡುವ ಅವುಗಳ ಶೂನ್ಯ ತುಂಬಿದ್ದು,
ನಾಳೆ ತುಳಿಯಲೆಂದು ಅವನ್ನಲ್ಲಿ ಬಿಚ್ಚಿಟ್ಟಿದ್ದು,
ಬಿಚ್ಚಿದಾಗ ಇಡೀ ದೇಹಕ್ಕೆ ಹಾಯೆನಿಸಿದ್ದು
ನಮಗೂ ಧಾರಾಳ ಒದಗುವಂತಾಗಿ ಸಾಕ್ಷಾತ್ತಾದ್ದು
ಈ ವ್ಯಾನ್‌ಗೊ ಶೂಗಳಲ್ಲಾದರೆ,
ಬಾಟಾದ ಗಾಜಿನ ಕಿಟಕಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟ ಎಲ್ಲವೂ
ಕೊಳ್ಳುವ ಇಚ್ಛೆ ಕುದುರಿಸಿಯಾವು, ಅಷ್ಟೆ.

ವ್ಯಾನ್‌ಗೊ ಕಾಣುವುದು ಕೇವಲ ಶೂಗಳನ್ನಲ್ಲ; ಭವದಲ್ಲಿ ಸಂಭವಿಸಿದ್ದೆಂದು ತೋರುವಂತೆ ಅವು ಚಿತ್ರಿತವಾದ್ದರಿಂದಲೇ ಅವುಗಳನ್ನು ತೊಟ್ಟು ನಡೆದಾಡಿದ್ದ ಯಾವುದೋ ಮುದುಕಿಯ ಆಯಾಸವನ್ನೂ ನಮಗೆ ಆ ಶೂಗಳು ಧ್ವನಿಸುತ್ತವೆ. ಹೀಗಾಗಿ ಅದೊಂದು ಕೇವಲ ವಸ್ತುವಲ್ಲ; ಅದು ನಮ್ಮ ಅನುಭವದಲ್ಲಿ ಭವಿಸಿದ್ದು, ಉತ್‌-ಭವಿಸಿದ್ದು.

ಒಂದು ಕೆಟ್ಟ ಕಾದಂಬರಿಯಲ್ಲಿ ಬರುವ ಒಂದು ಪಾತ್ರಕ್ಕೂ ಶೇಕ್ಸ್‌ಪಿಯರ್ ನಾಟಕದಲ್ಲಿ ನಾವು ಎದುರಾಗುವ ಪಾತ್ರಕ್ಕೂ ಇರುವ ವ್ಯತ್ಯಾಸ ಇದೇ. ಒಂದು ಕೆಟ್ಟ ಕಾದಂಬರಿಯಲ್ಲಿ ಬರುವ ಪಾತ್ರ ಬಾಟಾ ಶೂ ಕಂಪೆನಿಯಲ್ಲಿ ನಾವು ಕಂಡ ಒಂದು ಶೂನಂತೆ ಇರುತ್ತದೆ; ಅದು ‘ಶೂ’ ಅಂತ ಮಾತ್ರ ಗೊತ್ತಾಗುತ್ತದೆ. ಇವನು ಪೊಲೀಸಿನವನು, ಇವನು ರೈತ, ಇವಳು ತಮ್ಮ ಪಕ್ಕದ ಮನೆಯ ಹೆಂಗಸು, ಎನ್ನುವಷ್ಟು ಖಚಿತವಾಗಿ ನಮಗೆ ಪರಿಚಯವಾಗುವ ಪಾತ್ರಗಳು ಸುಲಭಗ್ರಾಹ್ಯವಾದ್ದರಿಂದಲೇ ಅವು ಖುಷಿಯಲ್ಲಿ ರೋಮಾಂಚಿತವಾಗುವ, ಆಯಾಸದಲ್ಲಿ ಬೆವರುವ ಪಾತ್ರಗಳಾಗಿ, ಈ ಭವದಲ್ಲಿ ಇರುವಂತೆ ಸಾಕ್ಷಾತ್ಕಾರಗೊಳ್ಳುವುದಿಲ್ಲ.

‘ಶೂ’ನಂತೆ ಕಾಣುತ್ತಲೇ ಒಬ್ಬ ಮುದುಕಿಯ ಅಯಾಸವನ್ನೂ ಧ್ವನಿಸುವ ವ್ಯಾನ್‌ಗೂ ಶೂಗಳಲ್ಲಿ ಹೈಡೆಗರ್ ಇನ್ನೂ ಗಾಢವಾದ ರಹಸ್ಯವೊಂದನ್ನು ತತ್ವಜ್ಞಾನಿಯಾಗಿ ಅರಿಯುತ್ತಾನೆ. ಇಳೆ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತ ಇರುತ್ತದೆ; ಪ್ರಪಂಚ ಬಿಚ್ಚಿಡುತ್ತ ಇರುತ್ತದೆ. ಭೂಮಿಗಿರುವ ಬಚ್ಚಿಡುವ ಗುಣವನ್ನೂ ಪ್ರಪಂಚದ ಬಿಚ್ಚುವ ಪ್ರೇರಣೆಯನ್ನೂ ಒಂದು ಕಲಾಕೃತಿ ಏಕಕಾಲದಲ್ಲಿ ವ್ಯಕ್ತಪಡಿಸುತ್ತದೆ.

ಹೈಡೆಗರ್‌ಗೆ ಎದುರಾಗಿ ವಿರೋಧದಲ್ಲಿ ನಿಲ್ಲುವ ಚಿಂತನೆ ಎಂದರೆ ಮರ್ತ್ಯಕ್ಕೆ ಅತೀತವಾಗುವಿಕೆಯಲ್ಲೇ ಸತ್ವವನ್ನು ಕಾಣುವ ದಾರ್ಶನಿಕತೆ ಎಂದು ಹೇಳುವ ಸಾಹಸಕ್ಕೆ ನಾನೀಗ ತಯಾರಾಗುತ್ತಿದ್ದೇನೆ. ಕವಿಯಾಗಿ ಕುವೆಂಪು ಹೀಗೆ Transcendental (ಅಂದರೆ ಅತೀತದಲ್ಲೇ ಸತ್ಯದರ್ಶನವಾಗುವುದೆಂಬ) ಭಾವನೆಯವರು. (ಆದರೆ ಈ ಅವಸರದಲ್ಲೇ ಹೇಳಿ ಬಿಡಬೇಕಾದ್ದೊಂದು ಮಾತಿದೆ. ಕಾದಂಬರಿಕಾರರಾಗಿ ಕುವೆಂಪು ಗ್ರಹಿಸುವ ಕ್ರಮವೇ ಇದಕ್ಕಿಂತ ಅನ್ಯವಾದ್ದು.) ಮೀರಿನಿಂತದ್ದರಲ್ಲೇ, ಆಧ್ಯಾತ್ಮವಾದದ್ದರಲ್ಲೇ, ಮರ್ತ್ಯದ ಸೋಂಕಿಲ್ಲದಂತೆ ಅತೀತವಾದ್ದರಲ್ಲೇ ಸತ್ಯದ ದರ್ಶನವಾಗುವುದೆಂಬ ಕುವೆಂಪುವಿಗೆ ವರ್ಡ್ಸ್‌‌ವರ್ಥ್‌ಹಿಡಿಸಿದಷ್ಟು ಶೇಕ್ಸ್‌ಪಿಯರ್ ಏನನ್ನು ನಮಗೆ ಹೊಳೆಯಿಸಿದರೂ ಅದನ್ನು ಈ ಭವದಲ್ಲಿ ಸಂಭವಿಸಿದ್ದೆಂದೇ ಹೊಳೆಯಿಸುತ್ತಾನೆ. ವ್ಯಾನ್‌ಗೊ ಶೂಗಳು ತಾವು ಶೂಗಳೆಂದು ತೋರುತ್ತಿರುವಂತೆಯೇ ಈ ಭವದಲ್ಲಿನ ತಮ್ಮ ಇರುವಿಕೆಯನ್ನು ಹೊಳೆಯಿಸುತ್ತವೆ. ಶೇಕ್ಸ್‌ಪಿಯರ್‌ನ ಲೋಕವೂ ಅವನ ಕೃತಿ ಪ್ರಪಂಚದಲ್ಲಿ ಇರುವುದು ಹೀಗೆ. ಅದು ತನ್ನನ್ನು ತೊರುತ್ತಿರುವಂತೆಯೇ ರಹಸ್ಯಗಳನ್ನು ಅಡಗಿಸಿಕೊಳ್ಳುತ್ತದೆ. ಹೀಗೆ ಬಚ್ಚಿಡುವ ಇಳೆ ಮತ್ತು ಬಿಚ್ಚುವ ಪ್ರಪಂಚ –  ಎರಡನ್ನೂ ಒಳಗೊಂಡ ಭವವಾಗಿ ಶೇಕ್ಸ್‌ಪಿಯರ್‌ನ ಕಲಾಕೃತಿ ಇರುತ್ತದೆ. ಆಧ್ಯಾತ್ಮಿಕವಾಗಿ ಬೇಂದ್ರೆ ಕೂಡಾ ಏನೇ ಹೇಳಲಿ ಅವರ ಪದ್ಯಗಳೂ ಹೈಡೆಗರ್ ತಿಳಿಯುವಂತ ಇವೆ. “ಇದು ಬರಿ ಬೆಳಗಲ್ಲೋ ಅಣ್ಣಾ” ಎಂದು ಕವಿ ಅಂದಾಗಲೂ ಅದು ಭವದಲ್ಲಿ ಮಾತ್ರ ನಮಗೆ ಸಂಭವಿಸಬಹುದಾದ ಒಂದು ಬೆಳಗು ಕೂಡ ಆಗಿದೆ. ಕುವೆಂಪು ಕಾದಂಬರಿಯ ನಾಯಿಗುತ್ತಿ ಕೂಡಾ ಹೀಗೆ ಒಂದು ಕಾಲದ ಚರಿತ್ರೆಗೆ ಸೇರಿದವನಾಗಿದ್ದೇ ನಮಗೆ ಸದಾ ಭವಿಸುವಂತಿರುವ ಒಂದು ಜೀವಿ. ಬೆಳ್ಳಕ್ಕಿಗಳಿಲ್ಲವೇ ದೇವರು ರುಜು ಮಾಡಲಾರ. ಅವನ ರುಜುವಾಗಿ ಕಾಣುತ್ತಿರುವುದು ಈ ಇಹದಲ್ಲಿರುವ ಬೆಳ್ಳಕ್ಕಿಗಳೇ. ನಾರಣಪ್ಪ “ಶ್ರೀ ಮುಡಿಗೆ ಕೈಯಿಕ್ಕಿದನು” ಎನ್ನುವಾಗ ದ್ರೌಪದಿ ಕಟ್ಟಿದ ತುರುಬಾಗಿದ್ದೇ ಅದು ಕಾವ್ಯ ಪ್ರಪಂಚದ ‘ಶ್ರೀ ಮುಡಿಯೂ’ ಆಗುತ್ತದೆ. ಕಲಾತೀತ ಪುರಾಣವೂ ಜರುಗುವುದು ಈ ಭವದಲ್ಲಿ.

* * *

ಶೇಕ್ಸ್‌ಪಿಯರ್‌ಗೆ ಮೊದಲಿನಿಂದಲೂ ವಿರೋಧವಿದೆ. ಹದಿನೆಂಟನೇ ಶತಮಾನದ ಡ್ರೈಡನ್ ಎಂಬ ಕವಿ ದೇವರ ಸರ್ವಸ್ವವನ್ನೂ ಪಡೆದ ಪ್ರತಿಭೆಯ ಈ ಶೇಕ್ಸ್‌ಪಿಯರ್‌ನನ್ನೂ ತಿದ್ದುವುದು ಅಗತ್ಯವೆನ್ನುತ್ತಾನೆ. ಯಾಕೆಂದರೆ ಅವನ ಪ್ರತಿಭೆ ಒರಟಾದ್ದು; ನಾಗರಿಕವಾದ್ದಲ್ಲ. ಅದು ಮರ್ಯಾದಾಶೀಲವಾದ ಬರವಣಿಗೆಯಲ್ಲ.

ಹದಿನೆಂಟನೆಯ ಶತಮಾನವನ್ನು ವೈಚಾರಿಕ ಯುಗವೆನ್ನುತ್ತಾರೆ. (Age of Reason) ತರ್ಕಕ್ಕೆ ಅತೀತವಾದ್ದು ಅವರಿಗೆ ಸಂಶಯಾಸ್ಪದ. ಡ್ರೈಡನ್‌ನ ರಿಪೇರಿಯಲ್ಲಿ ಶೇಕ್ಸ್‌ಪಿಯರ್‌ನ ದೀರ್ಘ ಉಸಿರಾಟದ ಲಯಗಳು ತಕ್ಕಡಿಯ ಸಮತೋಲ ಪಡೆದ ಪ್ರಾಸಬದ್ಧ ಕಪ್ಲೆಟ್ ಆಗಬೇಕಾಗುತ್ತದೆ. ಟ್ರಾಜೆಡಿ ತನ್ನ ಒಗರು ಕಳೆದುಕೊಂಡು ನೆಮ್ಮದಿ ತರುವ ಕಾಮೆಡಿ ಆಗಬೇಕಾಗುತ್ತದೆ. ಕನ್ನಡದಲ್ಲೂ ನಾವು ಹೀಗೆಯೇ ಪ್ರಾರಂಭದಲ್ಲಿ ಶೇಕ್ಸ್‌ಪಿಯರ್‌ನ ಟ್ರ್ಯಾಜೆಡಿಗಳನ್ನು ಸುಖಾಂತಗಳಾಗಿ ಪರಿವರ್ತಿಸಿ ಆಡಿದೆವು.

ಇದೇ ಕಾಲದ ಡಾ. ಜಾನ್ಸ್‌ನ ಎಲ್ಲ ಅತಿರೇಕಗಳ ವಿರೋಧಿ; ಪರಮ ವಿವೇಕಿ. ಸಾಮಾನ್ಯ ಮನಸ್ಸಿಗೆ ಗ್ರಾಹ್ಯವಲ್ಲದ್ದನ್ನು ಆತ ಸಂಶಯದಿಂದ ನೋಡುತ್ತಾನೆ. ಅವನಿಗೆ ಓರಣ, ಒಪ್ಪ, ಔಚಿತ್ಯ ಜ್ಞಾನ ನಾಗರೀಕತೆಯ ಮುಖ್ಯ ಲಕ್ಷಣಗಳಾಗಿರುವಂತೆ, ಕಲಾಕೃತಿಯ ಮುಖ್ಯ ಗುಣಗಳೂ ಕೂಡ. ಶೇಕ್ಸ್‌ಪಿಯರ್‌ Knife ಎಂದರೆ ಅವನು ಒಪ್ಪುವುದಿಲ್ಲ. ಒಂದು ಗಂಭೀರ ಸನ್ನಿವೇಶದಲ್ಲಿ Knife ಎನ್ನುವುದೇ? ಅದು ಕಟುಕನ ಕತ್ತಿಯನ್ನ ನೆನಪು ಮಾಡುವುದಲ್ಲವೇ –  ಆದ್ದರಿಂದ ‘ಖಡ್ಗ’ ಎನ್ನುವಂತಹ ಗೌರವದ ಪದವನ್ನು ಇಂಗ್ಲಿಷಿನಲ್ಲಿ ಬಳಸಬೇಕು ಎನ್ನುತ್ತಾನೆ. ಜಾನ್ಸನ್‌ ಪ್ರಕಾರ ಮ್ಯಾಕ್‌ಬೆತ್ ಸತ್ತಾಗ ನಾವು ದುಃಖಿಸುವುದಿಲ್ಲ; ಒಬ್ಬ ಟೈರೆಂಟ್ ಸತ್ತನೆಂದು ಸಂತೋಷಪಡುತ್ತೇವೆ. ಡಾ. ಜಾನ್ಸ್‌ನಗೆ ಶೇಕ್ಸ್‌ಪಿಯರ್‌ನ ಕಾಮೆಡಿಗಳೆಂದರೇ ಹೆಚ್ಚು ಪ್ರಿಯವಾದ್ದು.

ಈ ಹದಿನೆಂಟನೇ ಶತಮಾನದ ಔಚಿತ್ಯ ಪ್ರಜ್ಞೆಯಲ್ಲಿ ನಾಗರೀಕತೆಗೆ ಬಾಹಿರವಾದ್ದು –  ಮನುಷ್ಯನಲ್ಲಿರುವ ದೈವಿಕತೆ ಹಾಗೂ ರಾಕ್ಷಿಸೀಯತೇ – ಕಾಣಲಾರದೇ ಹೋಯಿತೆಂದು ಬಂಡಾಯವೆದ್ದ ಹತ್ತೊಂಬತ್ತನೇ ಶತಮಾನದ ರೊಮ್ಯಾಂಟಿಕ್‌ ಕವಿಗಳು ಪರಮ ಬಾವುಕರು. ತಮ್ಮ ಪೂರ್ವಜರ ಪರಮವಿವೇಕವನ್ನು ತಿರಸ್ಕರಿಸಿದ ಈ ಪರಮ ಭಾವುಕರಿಗೂ ಶೇಕ್ಸ್‌ಪಿಯರ್‌ ಪೂರ್ಣ ತಿಳಿಯಲೇ ಇಲ್ಲ. ಅತೀತದ ವ್ಯಾಮೋಹಿಯಾಗಿದ್ದ ಶೆಲ್ಲಿಗಂತೂ ತಿಳಿಯಲ್ಲ. ವಿಪರ್ಯಾಸವೆಂದರೆ ‘ಚಂಚಿ’ ಎನ್ನುವ ಶೈಲಿಯ ನಾಟಕ ಶೇಕ್ಸ್‌ಪಿಯರ್‌ನ ತದ್ವತ್‌ ಅನುಕರಣೆ; ಆದರೆ ಶೇಕ್ಸ್‌ಪಿಯರ್‌ನ ಜೀವಾಳ ಮಾತ್ರ ಅದರಲ್ಲಿ ಇಲ್ಲ. ರಕ್ತ ಮಾಂಸಗಳನ್ನು ಪಡೆಯದೇ ಹೋದ ಆತ್ಮಗಳು ಶೇಕ್ಸ್‌ಪಿಯರ್‌ನಲ್ಲಿ ಇರುವುದಿಲ್ಲ. ಆದರೆ ಈ ಮಾನವಜೀವಿ ಕಾಯಬದ್ಧವೆಂಬುದೇ ಶೆಲ್ಲಿಗೆ ಅವನ ದಿವ್ಯ ಯಾತನೆಗೆ ಕಾರಣವಾಗುತ್ತದೆ. ಲೌಕಿಕ ಸತ್ಯದ ಜೊತೆ ಕಿಂಚಿತ್ತೂ ರಾಜಿಯಾಗದ ಅದ್ವೈತಿಯೆಂದರೆ, ಶೆಲ್ಲಿಯೊಬ್ಬನೇ. ಶಂಕರರಿಗಿಂತ ಅವನದು ಒಂದು ಕೈಮೇಲೆಂದರೂ ಸರಿಯೆ.

ಶೇಕ್ಸ್‌ಪಿಯರ್‌ನ ಗುಣ ಕಿಂಚಿತ್ತಾದರೂ ಕಾಣುವುದಾದರೆ ಅದು ಎಲ್ಲ ರೊಮ್ಯಾಂಟಿಕ್‌ಕವಿಗಳಲ್ಲಿ ಕಿರಿಯನಾದ ಜಾನ್‌ಕೀಟ್ಸ್‌ನಲ್ಲಿ. ಅವನಿಗೆ ಪ್ರಿಯವಾದ ಒಂದು ವಿಚಾರವೆಂದರೆ negative capability; ನೇತಿ ಎಂದುಕೊಳ್ಳುತ್ತ ಗ್ರಹಿಸುವ ಶಕ್ತಿ. ಕವಿಯ ಮನಸ್ಸು ಇದು ಹೀಗೇ ಎಂದು ಖಡಾಖಂಡಿತವಾಗಿ ಏನನ್ನೂ ಹೇಳುವುದಿಲ್ಲ. ಅದರ ಗ್ರಹಿಕೆ ಯಾವುದಾದರೂ ಒಂದು ತೀರ್ಮಾನಕ್ಕೆ ಬಂದು ಬಿಡಬೇಕೆಂಬ ಆತುರದ್ದಲ್ಲ. ಶೈಲ್ಲಿಯಂತೆ ಕೀಟ್ಸ್‌ಅತೀತಕ್ಕೆ ಜಿಗಿದುಬಿಡುವ ಅವಸರದವನಲ್ಲ. ಯಾವುದಾದರೂ ನಿರ್ಣಯಕ್ಕೆ ಶೀಘ್ರ ತಲುಪುವ ಅವಸರವಿಲ್ಲದಂತೆ, ಬೆರಗು ಕಳೆದುಕೊಳ್ಳದಂತೆ ದಿಟ್ಟಿಸುತ್ತ ಅರಿಯಬೇಕೆಂಬ ವ್ಯವಧಾನಶೀಲವಾದ ಕೀಟ್ಸ್‌ಗೆ, ಈ ಪ್ರಪಂಚ ಆತ್ಮಗಳಾಗಿ ನಮ್ಮನ್ನು ಮಾಗಿಸುವ ಕಣಿವೆ. ಇಲ್ಲಿ ಹುಟ್ಟಿ ಬರುವ ಮುನ್ನ ನಾವು ಆತ್ಮಗಳಲ್ಲ; ಈ ಲೋಕಕ್ಕೆ ಬಂದು ದಾರಿಗೆಟ್ಟವರಲ್ಲ. ಇಲ್ಲೇ ನಾವು ಚಿಗುರಾಗಿ, ಕಾಯಿಯಾಗಿ, ಹಣ್ಣಾಗಿ ಪಕ್ವವಾಗಬೇಕು. ಶೇಕ್ಸ್‌ಪಿಯರ್ ಕಾಣುವಂತೆ ಕೀಟ್ಸ್‌ನಿಗೂ Ripeness in all. ಇಹದಿಂದ ಬಿಡುಗಡೆಯನ್ನಾಗಲೀ, ಮುಕ್ತಿಯನ್ನಾಗಲೀ ಅವನು ಹಂಬಲಿಸುವುದಿಲ್ಲ. ಇಂದ್ರಿಯಗಳು ತಮ್ಮ ನವಿರನ್ನು ಕಳೆದುಕೊಳ್ಳದಂತೆ ಹೃದಯ ಪಕ್ವವಾಗುವುದನ್ನಷ್ಟೆ ಅವನು ಬಯಸುವುದು.

ಆದರೆ ಕೀಟ್ಸ್‌ ಗಟ್ಟಿಯಾಗುವುದರೊಳಗೆ ಎಳೆಯ ತಾರುಣ್ಯದಲ್ಲೇ ತೀರಿಕೊಂಡ. ಶೇಕ್ಸ್‌ಪಿಯರ್‌ಗಿರುವ ಬೀಸು ಈ ಯಾರಿಗೂ ಇಲ್ಲ. ರೋಮಿಯೋ ಜೂಲಿಯಟ್ಟಿನಲ್ಲಿ ದೈವಿಕ ಪ್ರೇಮದ ಮಾತುಗಳ ಜೊತೆಜೊತೆಯಲ್ಲೇ ಹಾದರದ ಹಲ್ಕ ಮಾತುಗಳೂ ಇರಬಲ್ಲವು. ಆದರ್ಶದಲ್ಲಿ ಮೋಹಿತರಾದವರಿಗೆ ಶೇಕ್ಸ್‌ಪಿಯರ್‌ ಹೇಗೆ ಒಂದು ಸಮಸ್ಯೆಯೆ ವಾಸ್ತವಕ್ಕೆ ಅಂಟಿಕೊಂಡ ಜೀವಕಾಮಿಗಳೂ ಅವನು ಒಂದು ಒಗಟು. ಕಾಣುವುದಕ್ಕಷ್ಟೇ ಅಂಟಿಕೊಂಡ ವ್ಯವಹಾರಜ್ಞ ತಾರ್ಕಿಕನಿಗೆ ಬಾಟಾ ಕಂಪೆನಿಯ ವಸ್ತುವಾಗಿ ಮಾತ್ರ ಶೂ ಕಾಣುವುದು. ಈಚೆಗೆ ಕನ್ನಡದಲ್ಲಿ ಕಾವ್ಯಕ್ಕೆ ಕುರುಡರೂ ಕಿವುಡರೂ ಆದ ಒಂದು ಗುಂಪಿದೆ. ನಾವು ಸೃಷ್ಟಿಸುವ ಪಾತ್ರಗಳೂ ನಮ್ಮ ನೆರೆಹೊರಯವರಷ್ಟೇ ಸಹಜವಾಗಿದ್ದು ನಮಗೆ ಗೊತ್ತಿರುವ ಊರುಗಳಲ್ಲೇ ತಮ್ಮ ಪ್ಯಾಂಟುಗಳನ್ನೂ ಸೀರೆಗಳನ್ನೂ ಕೊಳ್ಳಬೇಕೆಂದೂ, ಮತ್ತು ಅಂತಹ ಪಾತ್ರಗಳು ಹಾಗೆಯೇ ಟೆಲಿವಿಷನ್‌ನ ಮೇಲೆ ಕಾಣಿಸಿಕೊಳ್ಳಬೇಕೆಂದೂ ಬಯಸುವ ಈ ಬಗೆಯ ಮನೋಧರ್ಮಕ್ಕೆ ಶೇಕ್ಸ್‌ಪಿಯರ್ ಎಂದೆಂದೂ ತಿಳಿಯಲಾರ. ಏಕೆಂದರೆ ಅವನ ಪಾತ್ರಗಳು ಕಾವ್ಯ ಪ್ರಪಂಚದೊಳಗೆ ಬರುವ ಪಾತ್ರಗಳು. ‘ಮಾನ ಮರ್ಯಾದೆ ಬಿಟ್ಟವನು ದೇವರಿಗೆ ಸಮ’ ಎನ್ನುವ ಒಂದು ಗಾದೆಯಿದೆ. ಶೇಕ್ಸ್‌ಪಿಯರ್‌ನ ‘ನಾಲ್ಕನೆ ಹೆನ್ರಿ’ ಎನ್ನುವ ನಾಟಕದಲ್ಲಿ ಬರುವ ಪಾತ್ರ ಸರ್ ಫಾಲ್ಸ್‌ಸ್ಟಾಫ್ನ್‌ ಈ ಗಾದೆ ಮಾತನ್ನು ನಿಜವೆನ್ನಿಸುವಂತೆ ಧಡೂತಿ ಪ್ರಾಣಿಯಾಗಿ, ಪರಮ ವಂಚಕನಾಗಿ, ಲೋಲುಪನಾಗಿದ್ದು, ಬಹು ಪ್ರಿಯನಾಗಿ, ಮಹಾ ಕಳ್ಳನಾಗಿ, ಸುಳ್ಳನಾಗಿ, ಹೊಟ್ಟೆಬಾಕನಾಗಿ ವಿಜೃಂಭಿಸುತ್ತಾನೆ.

ಕೀಟ್ಸ್‌ನ ತತ್ವವಾದ nagative capability ಹೀಗೆ ಏನನ್ನಾದರೂ ಸ್ವೀಕರಿಸಬಲ್ಲ ಮನಸ್ಥಿತಿ. ನೈತಿಕ ಬಿಗಿಗೂ ಕಾಣದ್ದು ಹಾಗೆಯೇ ಲೋಲುಪತೆಗೂ ಕಾಣದ್ದು, ಶೇಕ್ಸ್‌ಪಿಯರ್‌ನಿಗೆ ಕಾಣುತ್ತದೆ. ಸೋಜಿಗದ ಹೊಳಹಿನಲ್ಲಿ ನಾವು ಈ ಪಾತ್ರಗಳನ್ನು ಕಾಣುತ್ತೇವೆ. ಅವು ಇಳೆಯಲ್ಲಿ ಅಡಗಿದ್ದು, ಪ್ರಪಂಚದಲ್ಲಿ ತೋರಿಕೊಳ್ಳುತ್ತವೆ. ನಮ್ಮನ್ನೇ ನಮಗೆ ಕಾಣಿಸುತ್ತವೆ.

ಶೇಕ್ಸ್‌ಪಿಯರ್‌ಬಗ್ಗೆ ತುಂಬ ಬರೆದು ಪ್ರಸಿದ್ಧನಾದ ನಮ್ಮ ಕಾಲದ ಬ್ರಾಡ್ಲೇ ಕೂಡ ಮೆಳ್ಳಗಣ್ಣನೇ. ಒಂದು ಜನಪ್ರಿಯ ಕಾದಂಬರಿಯಲ್ಲಿ ರಂಜಿಸುವ ಪಾತ್ರಗಳಂತೆ ಶೇಕ್ಸ್‌ಪಿಯರ್‌ನ ಪಾತ್ರಗಳನ್ನು ಅವನು ಕಾಣುತ್ತಾನೆ. ಅವನು ಶೇಕ್ಸ್‌ಪಿಯರ್‌ನನ್ನು ಮುಟ್ಟಿ ತಿಳಿಯುವುದಿಲ್ಲವೆಂದೇನೂ ನಾನು ಹೇಳುವುದಿಲ್ಲ. ಆದರೆ ಅವನ ಅತಿ ವಿವರಣೆಯಲ್ಲಿ ಶೇಕ್ಸ್‌ಪಿಯರ್‌ನ ಗೂಢಗಳು ಮರೆಯಾಗುತ್ತವೆ.

ಜಗತ್ತಿನ ಇನ್ನೊಬ್ಬ ದೊಡ್ಡ ಲೇಖಕ ಟಾಲ್‌ಸ್ಟಾಯ್ ಕೂಡ ಶೇಕ್ಸ್‌ಪಿಯರ್‌ನನ್ನು ಅರಿಯುವುದಿಲ್ಲ. ಅವನ ಪ್ರಕಾರ ಶೇಕ್ಸ್‌ಪಿಯರ್‌ನಿಗೆ ಸಲ್ಲುತ್ತಿರುವ ಅಪಾರ ಗೌರವ ಒಂದು ಅಂತರರಾಷ್ಟ್ರೀಯ ಪಿತೂರಿ. ಟಾಲ್‌ಸ್ಟಾಯ್‌ಗೆ ಶೇಕ್ಸ್‌ಪಿಯರ್‌ನ ಕಿಂಗ್ಲಿಯರ್ ನಾಟಕ ಯಾಕೆ ಇಷ್ಟವಾಗುವುದಿಲ್ಲ ಎನ್ನುವುದನ್ನು ಜಾರ್ಜ್‌ ಆರ್ವೆಲ್ ಎನ್ನುವ ಲೇಖಕ ಹೀಗೆ ವಿವರಿಸುತ್ತಾನೆ. ಮೊದಲನೆಯದಾಗಿ ಲಿಯರ್ ನಾಟಕದ ಅದ್ಭುತ ಕಾವ್ಯ ಆ ಭಾಷೆಯನ್ನು ಆಡುವವರಿಗೆ ಮಾತ್ರ ತಿಳಿಯುವಂತಾದ್ದು. ಅದಕ್ಕೂ ಹೆಚ್ಚಾಗಿ ಟಾಲ್‌ಸ್ಟಾಯ್ ತನ್ನ ಇಳಿವಯಸ್ಸಿನಲ್ಲಿ ಲಿಯಾರ್‌ನಂತೆಯೇ ಅಸ್ವಸ್ಥನಾಗಿದ್ದಾನೆ. ಸರ್ವತ್ಯಾಗಕ್ಕೆ ಸಿದ್ಧನಾದ ಟಾಲ್‌ಸ್ಟಾಯ್ ಅವನ ಇಡೀ ಸಂಸಾರಕ್ಕೆ ಒಬ್ಬ ತಿಕ್ಕಲು ಮುದುಕನಂತೆ ಕಾಣುತ್ತಾನೆ. ಎಲ್ಲರೂ ಅವನನ್ನು ತಿರಸ್ಕರಿಸಿದ್ದಾರೆ. ಬ್ರಹ್ಮಚರ್ಯ ಬೋಧಿಸುತ್ತಿದ್ದಂತೆಯೇ ತನ್ನಿಂದ ಮಕ್ಕಳನ್ನು ಪಡೆಯುತ್ತಾ ಹೋದ ಒಬ್ಬ ಸಂಸಾರಿಯನ್ನಾಗಿ ಮಾತ್ರ ಅವನ ಹೆಂಡತಿ ಟಾಲ್‌ಸ್ಟಾಯ್‌ನನ್ನು ಕಾಣುತ್ತಾಳೆ. ಹೀಗಾಗಿ ಟಾಲ್‌ಸ್ಟಾಯ್‌ಗೆ ಕಿಂಗ್ಲಿಯರ್ ಕನ್ನಡಿ ಹಿಡಿದು ಅವನನ್ನು ಕ್ಷೋಭೆಗೆ ಒಳಪಡಿಸುತ್ತದೆ.

ಕುವೆಂಪು ಕೂಡಾ ಕಿಂಗ್‌ಲಿಯರ್‌ನ ಕೊನೆಯಲ್ಲಿ ಬರುವ ದಾರುಣವಾದ ಸಾವುಗಳನ್ನು ಒಪ್ಪುವುದಿಲ್ಲ. ಒಂದು ಅತೀಂದ್ರಿಯ ಘಟನೆಯ ಮೂಲಕ ಶೇಕ್ಸ್‌ಪಿಯರ್‌ ಇಲ್ಲಿ ದಾರ್ಶನಿಕನಾಗಬಹುದಿತ್ತು ಎಂದು ಟೀಕಿಸುತ್ತಾರೆ.

ಇನ್ನು ಶೇಕ್ಸ್‌ಪಿಯರ್‌ನನ್ನು ತುಂಬ ಪ್ರೀತಿಸುವಂತೆ ಕಾಣುವ ಮಾಸ್ತಿ ಅವರನ್ನು ಎಷ್ಟು ಒಪ್ಪಿಯಾರೆಂದು ಅನುಮಾನವಾಗುತ್ತದೆ. ಅದಕ್ಕೆ ಕಾರಣ, ಮಾಸ್ತಿಯವರ ಸೌಜನ್ಯ ಬಿಟ್ಟುಕೊಡದ ಶೈಲಿ. ಮಾಸ್ತಿಯ ಹಾಗೆ ಬರೆದಿದ್ದರೆ ಶೇಕ್ಸ್‌ಪಿಯರ್‌ನಿಗೆ ತನ್ನ ಅನೇಕ ನಾಟಕಗಳನ್ನು ಬರೆಯುವುದೇ ಸಾಧ್ಯವಾಗುತ್ತಿರಲಿಲ್ಲವೇನೋ? ಹೂವಯ್ಯನ ಭಾವ ಸಮಾಧಿಯ ಜೊತೆಜೊತೆಯಲ್ಲೇ ಮೀನು ಮತ್ತು ಹೆಂಡದ ವಾಸನೆ ನಮಗೆ ತಟ್ಟುವಂತೆ ಕಾಣಿಸುವ ಕುವೆಂಪು ತನ್ನ ವಿಚಾರಕ್ಕೆ ಮೀರಿ ಶೇಕ್ಸ್‌ಪಿಯರ್‌ಗೆ ಹತ್ತಿರವಾದಂತೆ, ಮಾಸ್ತಿಯವರೂ ತನ್ನ ಸೌಜನ್ಯವನ್ನು ಮೀರುವುದಿದೆ, ಕೆಲವು ಕಡೆಗಳಲ್ಲಿ ಮಾತ್ರ.

ಈ ಸಂದರ್ಭದಲ್ಲೆ ಯಾವ ಸುಲಭದ ಉತ್ತರವೂ ಇಲ್ಲದ ಇನ್ನೊಂದು ಪ್ರಶ್ನೆ ಎತ್ತುತ್ತೇನೆ. ನಮಗೆ ಕನ್ನಡದಲ್ಲಿ ಒಂದು ಸಾವಿರ ವರ್ಷದಷ್ಟಾದರೂ ಬೆಳೆದು ಸಿದ್ಧಗೊಂಡ ಸಾಹಿತ್ಯದ ಚರಿತ್ರೆ ಇರುವಂತೆ ಶೇಕ್ಸ್‌ಪಿಯರ್‌ನಿಗಿರಲಿಲ್ಲ. ಅವನು ಬದುಕುತ್ತಿದ್ದ ಕಾಲ ದೊಡ್ಡದು ನಿಜ. ಆದರೆ ನಮಗೆ ಒಬ್ಬ ಕುಮಾರವ್ಯಾಸ, ಒಬ್ಬ ಅಲ್ಲಮ, ಒಬ್ಬ ಪಂಪ ಇರುವಂತೆ ಶೇಕ್ಸ್‌ಪಿಯರ್‌ನಿಗೆ ಅಷ್ಟು ದೊಡ್ಡವರು ಅವನ ಬೆನ್ನಿಗೆ ಇರಲಿಲ್ಲ. ಇಂಗ್ಲಿಷ್‌ ಭಾಷೆಗೆ ಅಂತಹ ರಾಜಕೀಯ ಆರ್ಥಿಕ ಪ್ರತಿಷ್ಠೆ, ಪ್ರಭುತ್ವದ ಮನ್ನಣೆ, ಪೂರ್ವೆತೀಹಾಸದ ಮಾದರಿ ಇಲ್ಲದಿದ್ದರೂ ಶೇಕ್ಸ್‌ಪಿಯರ್‌ ಏನನ್ನಾದರೂ ಇಂಗ್ಲಿಷಿನಲ್ಲಿ ಹೇಳಬಲ್ಲವನಾಗಿದ್ದ. ಏನನ್ನಾದರೂ ರಂಗದ ಮೇಲೆ ಆಡಿ ಆಗಿಸಬಲ್ಲವನಾಗಿದ್ದ.

ಇಂಗ್ಲೆಂಡಿನಲ್ಲೂ ಶೇಕ್ಸ್‌ಪಿಯರ್‌ನಂಥವನು ಇನ್ನೊಬ್ಬ ಲೇಖಕನಿಲ್ಲ. ಚಾರಿತ್ರಿಕ ಕಾರಣಗಳನ್ನು ಕೊಟ್ಟು ಶೇಕ್ಸ್‌ಪಿಯರ್‌ನಂಥವನು ಯಾಕೆ ಒಂದು ಭಾಷೆಯಲ್ಲಿ – ಅದೂ ಅಷ್ಟು ಸಾಹಿತ್ಯವಾಗಿ ಬೆಳೆಯದಿದ್ದ ಭಾಷೆಯಲ್ಲಿ –  ಬರುವುದು ಸಾಧ್ಯವಾಯಿತೆಂದು ನಿರ್ಣಾಕವಾಗಿ ಹೇಳುವುದು ಸಾಧ್ಯವಿಲ್ಲ. ಶೇಕ್ಸ್‌ಪಿಯರ್‌ನ ಕಾವ್ಯ ಎಷ್ಟು ತೋರುತ್ತದೋ ಅಷ್ಟೇ ಅಡಗಿಸಿಯೂ ಇಡುತ್ತದೆ. ಆದ್ದರಿಂದ ಅವನಿಂದ ಪ್ರತಿಕಾಲವೂ ತನಗೆ ಬೇಕಾದ್ದನ್ನು ಪಡೆಯುತ್ತಾ ಹೋಗಿದೆ. ಆದ್ದರಿಂದಲೇ ವೇದವ್ಯಾಸರಂತೆ ಶೇಕ್ಸ್‌ಪಿಯರ್‌ನನ್ನು ಅಕ್ಷಯವೆಂದೂ, ಅಕ್ಷತವೆಂದೂ ನಮಗೆ ತಿಳಿಯುವುದು ಸಾಧ್ಯವಾಗುತ್ತದೆ.

ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಓಥೇಲೋನಲ್ಲಿ ಬರುವ ಇಯಾಗೋ ಪಾತ್ರದ ನಿಷ್ಕಾರಣ ದುರುಳತನ ಎಲ್ಲ ವಿಮರ್ಶಕರಿಗೂ ಒಂದು ಒಗಟಾಗಿದೆ. ಆದರೆ ಈ ಎಲ್ಲ ವಿಮರ್ಶಕರೂ ಇಯಾಗೋನ ದುರುಳತನವನ್ನೇ ಹೆಚ್ಚು ಗಮನಿಸುವುದು ಕೂಡ ಓಥೇಲೋನ ಧೀರೋದಾತ್ತ ಭವ್ಯತೆಯನ್ನು ಇನ್ನಷ್ಟು ಹೆಚ್ಚು ಸವಿಯುವುದಕ್ಕಾಗಿ ಎಂದು ಲೀವಿಸ್ ಎಂಬ ವಿಮರ್ಶಕ ಹೇಳುತ್ತಾನೆ. ಡೆಸ್ಟಿಮೋನಳಂತಹ ಮುಗ್ಧೆಯನ್ನು ಕೊಲ್ಲುವ ಒಥೇಲೋ ತನ್ನ ವಾಗ್ವೈಖರಿಯ ಮೂಲಕ ನಮ್ಮ ಅನುಕಂಪವನ್ನು ಪಡೆಯುತ್ತಾನೆ. ಈ ವಾಗ್ವೈಖರಿಯನ್ನು ಲೀವಿಸ್‌ ಸ್ವಾನುರುಕ್ತಿಯ ಒಂದು ಮನೋರೋಗವೆಂದೇ ಕಾಣುತ್ತಾನೆ. ಹೀಗೆ ಒಥೇಲೋನನ್ನು ವಿಮರ್ಶಕ ಅನುಮಾನದಿಂದ ನೋಡಿದಾಗ ಇಯಾಗೋನ ದುರುಳತನ ಒಂದು ಗಾಢವಾದ ಸಮಸ್ಯೆಯಾಗಿರುವರ ಬದಲಾಗಿ, ಓಥೇಲೋ ಬಗೆಯ ಸ್ವಾನುರಕ್ತಿಯನ್ನು ಬಯಲಿಗೆಳೆಯಲು ಉಪಯೋಗಿಸುವ ಸಾಧನಮಾತ್ರವಾಗಿ ಕಾಣುತ್ತದೆ.

ನಾನು ಬರ್ಮಿಂಗಂನಲ್ಲಿ ಸರ್ ಲಾರೆನ್ಸ್ ಒಲಿವಿಯರ್ ಮಾಡಿದ ಓಥೇಲೋ ನಾಟಕವನ್ನು ನೋಡಿದಾಗ ಲೀವಿಸ್‌ರೀತಿಯಲ್ಲಿ ಅವನು ನಾಟಕವನ್ನು ಗ್ರಹಿಸಿದಂತೆ ನನಗೆ ತೋರಿ ಅದೊಂದು ಮರೆಯಲಾಗದ ಅನುಭವವಾಗಿತ್ತು. ಆದರೆ ಇನ್ನೊಂದು ರೀತಿಯಲ್ಲೂ ಈ ನಾಟಕವನ್ನು ಆಡಿ ಇಯಾಗೋನ ದುರುಳತನವನ್ನೇ ಒಂದು ದೊಡ್ಡ ಅನುಭವವಾಗಿ ಮಾಡಲೂ ಸಾಧ್ಯ.

ಶೇಕ್ಸ್‌ಪಿಯರ್‌ನನ್ನು ಪ್ರತಿಯೊಂದು ಶತಮಾನವೂ, ೧೯ನೇಯ ಶತಮಾನವೂ ಕೂಡಿದಂತೆ ಗ್ರಹಿಸಿದ ರೀತಿ –  ಒಂದು ಗೀಳಿನಂತಿದೆ. ಕೋಲ್‌ರಿಜ್‌ ಹ್ಯಾಮ್ಲೆಟ್‌ನ್ನು ಓದಿದ್ದು ಹೇಗೆ ಅಂದರೆ, ತನ್ನ ಸುಖದಃಖಗಳನ್ನು ಆ ಮೂಲಕ ತೋಡಿಕೊಳ್ಳುವ ರೀತಿಯಾಗಿ. ಆದರೆ ಅವನು ಕೂಡ ಶೇಕ್ಸ್‌ಪಿಯರ್‌ನ ಬಹುಶತ್ರುತತೆಗೆ, ಎಲ್ಲವನ್ನೂ ಒಳಗೊಳ್ಳುವಂಥ ಮಹತ್‌ ಪ್ರತಿಭೆಗೆ ತನ್ನನ್ನು ತಾನು ಒಡ್ಡಿಕೊಳ್ಳಲಿಲ್ಲ. ರಂಗಭೂಮಿಯ ಮೇಲೂ ಶೇಕ್ಸ್‌ಪಿಯರ್‌ನನ್ನು ‘ಇಂಟರ್‌ಪ್ರಿಟ್‌’ ಮಾಡುತ್ತಾರೆಯೇ ಹೊರತು ಇಡೀ ಶೇಕ್ಸ್‌ಪಿಯರ್‌ನನ್ನು ತೋರಿಸುತ್ತಾರೆ ಅಂತ ಹೇಳುವುದಕ್ಕಾಗುವುದಿಲ್ಲ. ಒಂದೊಂದು ರಂಗಪ್ರದರ್ಶನವೂ ಶೇಕ್ಸ್‌ಪಿಯರ್‌ನ ಒಂದೊಂದು ರೀತಿಯ –  ಇಂಟರ್ ಪ್ರಿಂಟೇಷನ್ –  ವ್ಯಾಖ್ಯಾನ. ಕೋರಿಯೋಲೇನಸ್ ನಾಟಕದ ಬಗ್ಗೆ ಬ್ರೆಕ್ಟ್‌ಒಂದು ಕಡೆ ಬರೆಯುತ್ತಾನೆ: ಕೋರಿಯೋಲೇನಸ್‌ನಲ್ಲಿ ಬರುವ ಸಾಮಾನ್ಯ ಪಾತ್ರಧಾರಿಗಳಿಗೆ ಹರುಕು ಅಂಗಿ ಹಾಕಿದರೆ, ಕೋರಿಯೋಲೇನಸ್‌ ಒಬ್ಬ ದೊಡ್ಡ ದುರಂತ ನಾಯಕನ ಹಾಗೆ ಕಾಣುತ್ತಾನೆ; ಅದರ ಬದಲು ಅವರಿಗೆ ಒಳ್ಳೆಯ ಅಂಗಿಯನ್ನು ಹಾಕಿ ಸಭ್ಯರಾಗಿ ಕಾಣುವಂತೆ ಮಾಡಿಬಿಟ್ಟರೆ, ಆಗ ನಿಮಗೆ ಕೋರಿಯೋಲೆನಸ್ ಅಂಥ ಬಹಳ ದೊಡ್ಡ ನಾಯಕನಾಗಿ ಕಾಣುವುದಿಲ್ಲ. ನಿಮಗೆ ಅವನನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವಾಗುತ್ತದೆ. ಅಂದರೆ ಎರಡು ಬೇರೆ ಬೇರೆ ವ್ಯಾಖ್ಯಾನಗಳನ್ನು ಕೋರಿಯೋಲೇನಸ್ನಾಟಕ ತಡೆದುಕೊಳ್ಳಬಹುದು.

ಇನ್ನು ಇಪ್ಪತ್ತನೆಯ ಶತಮಾನಕ್ಕೆ ಬಂದರೆ, ಶೇಕ್ಸ್‌ಪಿಯರ್‌ನನ್ನು ಕುರಿತು ಎಲಿಯಟ್‌ನಂಥ ಒಬ್ಬ ಕವಿ, ನಮ್ಮ ಕನ್ನಡದ ಕುವೆಂಪು ಎತ್ತುವಂಥ ಪ್ರಶ್ನೆಯನ್ನೆ ಎತ್ತುತ್ತಾನೆ –  ಡಾಂಟೆಯೋ, ಶೇಕ್ಸ್‌ಪಿಯರನೋ, ಯಾರು ಇಷ್ಟ? ನಿಮಗೆ ಗೊತ್ತಾಗುತ್ತದೆ: ಎಲಿಯಟ್‌ಗೆ ತುಂಬ ಇಷ್ಟವಿರುವುದು ಡಾಂಟೆಯ ಮೇಲೆ; ಶೇಕ್ಸ್‌ಪಿಯರ್‌ಮೇಲೆ ಇದೆ –  ಆದರೆ ಡಾಂಟೆಯ ಮೇಲಿನಷ್ಟು ಅಲ್ಲ. ಯಾಕೆಂದರೆ ಡಾಂಟೆಯ ಕಾವ್ಯದಲ್ಲಿ ಒಂದು ಮೂಲಭೂತವಾದ ನಿಲುವು ಇದೆ. ಒಂದು ಅಚಲವಾದ ದೃಷ್ಟಿಕೋನವಿದೆ. ಒಂದಕ್ಕೊಂದು ನೇರವಾಗಿ ಕಾಣುವಂತ ಸಂಬಂಧವಿರುವ ಪ್ರಪಂಚವಿದೆ. ಆದರೆ ಶೇಕ್ಸ್‌ಪಿಯರ್‌ನಲ್ಲಿ ಹಾಗಿಲ್ಲ. ಅದು ಹರಿದು ಹಂಚಿ ಹೋಗಿದೆ –  ಹೇಗೋ ಅದೃಷ್ಟವಶಾತ್ ಅದೊಂದು ಪ್ರಪಂಚವಾಗುತ್ತಾ ಹೋಗುತ್ತದೆ. ನಾವು ಶೇಕ್ಸ್‌ಪಿಯರ್‌ನನ್ನು ಓದಿದಾಗ ಅವೆಲ್ಲ ಒಂದೇ ಪ್ರಪಂಚದಿಂದ ಬಂದದ್ದು, ಒಂದಕ್ಕೊಂದು ಸಂಬಂಧವಿರುವ ಪ್ರಪಂಚದಿಂದ ಬಂದದ್ದು ಅಂತ ಅನ್ನಿಸುತ್ತದೆಯಾದರೂ, ಅದು ಅದೃಷ್ಟವಶಾತ್ ಆದದ್ದು. ಆದರೆ ಡಾಂಟೆಯಲ್ಲಿ ಹಾಗಲ್ಲ. ಅದೊಂದು ಅಚ್ಚುಕಟ್ಟಾದ ಚೌಕಟ್ಟನ್ನು ಇಟ್ಟುಕೊಂಡಿರುವ ಕೃತಿ. ಎಲಿಯಟ್‌ಗೆ ಅಂಥದೇ ಇಷ್ಟ.

ಬಹಳ ಜನ ಲೇಖಕರು ಒಂದು ಗೀಳು ಇಟ್ಟುಕೊಂಡವರು. ಕುವೆಂಪು ಅವರ ಒಳಗಿನ ಶಕ್ತಿಯೆಲ್ಲ ತನ್ನನ್ನು ತಾನು ಉದಾತ್ತ, ವ್ಯಕ್ತಿಯನ್ನಾಗಿ ಮಾಡಿಕೊಳ್ಳುವ ಕಡೆಗೆ ವಿನಿಯೋಗವಾಯಿತು. ಅವರ ಎಲ್ಲ ಸೃಜನ ಸಾಮರ್ಥ್ಯವೂ ಆ ಗೀಳಿನಿಂದಲೇ ಹುಟ್ಟುವಂತೆ ತೋರುತ್ತದೆ. ಡಾಂಟೆಗೂ ಒಂದು ಗೀಳಿದೆ. ಇಪ್ಪತ್ತನೆಯ ಶತಮಾನದ ಎಲ್ಲರಿಗೂ ಒಂದು ಗೀಳಿದೆ, ಕಾಫ್ಕಾನಂಥವನಿಗೂ. ಗೀಳು ಇಲ್ಲದೆ ಬರೆಯುವವರಿದ್ದಾರಲ್ಲ, ಅವರು ಸಾಮಾನ್ಯವಾಗಿ ಪಾಪ್ಯುಲರ್ ರೈಟರ‍್ಸ –  ಜನಪ್ರಿಯ ಬರಹಗಾರರು. ಈಗ ಸದ್ಯಕ್ಕೆ ಜನಕ್ಕೆ ಏನು ಇಷ್ಟ ಅಂತ ನೋಡಿ ಅದಕ್ಕನುಗುಣವಾಗಿ ಬರೆಯುವವರು. ಇದೊಂದು ವಿಚಿತ್ರ: ಶೇಕ್ಸ್‌ಪಿಯರ್‌ನಲ್ಲಿ ಒಂದು ಗೀಳು ಇದ್ದ ಹಾಗೆ ಅನ್ನಿಸುವುದಿಲ್ಲ. ಅಂದರೆ ಅವನಿಗೆ ಗೀಳು ಇರಲೇ ಇಲ್ಲ ಅಂತ ಇದರ ಅರ್ಥವಲ್ಲ. ಬಹಳ ಆಳವಾಗಿ ನೋಡಿದರೆ, ಏನೇನು ಗೀಳುಗಳು ಅವನನ್ನು ಸುತ್ತಿಕೊಂಡಿವೆಯೋ, ಅವನ್ನೆಲ್ಲ ಹೇಳುವುದು ಕಷ್ಟ. ಗೀಳೇ ಇಲ್ಲವೇನೋ ಎಂಬಂತೆ ಲೀಲಾತ್ಮಕವಾಗಿ ಪ್ರಪಂಚವನ್ನು ಬಿಚ್ಚಿಡಬಲ್ಲ ಶಕ್ತಿ ಶೇಕ್ಸ್‌ಪಿಯರ್‌ನದು. ಬಹುಶಃ ಲೀಲೆ ಎನ್ನುವ ಶಬ್ದ ಕವಿ ಪ್ರತಿಭೆಗೆ ಇನ್ನೊಂದು ಶಬ್ದ. ಅದು ಸಂಪೂರ್ಣವಾಗಿ ಹೊಂದಿಕೊಳ್ಳುವುದು ಶೇಕ್ಸ್‌ಪಿಯರ್‌ನಲ್ಲಿ. ಲೀಲಾತ್ಮಕವಾದರೂ ಅದು ಗಂಭೀರ. ಗಂಭೀರವಾದರೂ ಮೃದುವಾದ ಹಾಸ್ಯವನ್ನುಳ್ಳದ್ದು. ಅದು ಪರವನ್ನು ಅರಿತರೂ ಇಹವನ್ನು ಮರೆಯದ್ದು. ಇಹದಲ್ಲೇ ಪರವನ್ನು ಕಾಣುವಂಥದು. ಪರವನ್ನು ಕಾಣಿಸುವಾಗ ಅದಕ್ಕಿರುವ ಇಹದ ಎಲ್ಲ ವಾಸನೆಗಳನ್ನೂ ತೋರಿಸುವಂಥದ್ದು. ತೋರಿಸುವಾಗ ಇಹವನ್ನು ಮರೆಸದಂತೆ, ಪರವನ್ನು ಮರೆಸದಂತೆ ಉಳ್ಳದ್ದು.

ಹಕ್ಲ್ಯಿಯ ಕಾದಂಬರಿಯೊಂದರಲ್ಲಿ ಅವನೊಬ್ಬ ಸಂತನನ್ನು ಚಿತ್ರಿಸಿ, ಅವನು ತನ್ನ ಬೆನ್ನು ತುರಿಸಿಕೊಳ್ಳುತ್ತ ಇದ್ದ ಅಂತ ಬರೆಯುತ್ತಾನೆ. ಇದನ್ನು ಓದಿದ ಕೂಡಲೇ ಬಹುಜನಕ್ಕೆ ಅವನ ಸಂತತ್ವ ಸ್ವಲ್ಪ ಕಡಿಮೆಯಾಗಬಹುದು. ಸಂತನಾದವನು ಬೆನ್ನು ತೋರಿಸಿಕೊಳ್ಳುವುದು ಅಂದರೇನು, ಅದು ಸಾಧ್ಯವೇ ಇಲ್ಲ. ಏಕೆಂದರೆ ಅವನು ಸಂತ. ಶೇಕ್ಸ್‌ಪಿಯರ್‌ನಲ್ಲಿ ಅವನು ಬೆನ್ನು ತುರಿಸಿಕೊಳ್ಳುತ್ತಲೇ ಸಂತನಾಗುತ್ತಾನೆ.

ಅದಕ್ಕೇ ನಾನು ಹೇಳಿದ್ದು ಈ ಬಗೆಯ ಚಿತ್ರಣ ಶೇಕ್ಸ್‌ಪಿಯರ್‌ನಿಗೆ ಮಾತ್ರ ಸಾಧ್ಯ. ಸ್ವಲ್ಪಮಟ್ಟಿಗೆ ಈ ಶಕ್ತಿ ಇದ್ದದ್ದು ಕೀಟ್ಸ್ನಲ್ಲಿ. ಅವನು ತನ್ನ ಮನಸ್ಸಿನ ಬಗ್ಗೆ ಹೇಳುತ್ತಾನೆ: “ಈಗ ನಾನು ಒಂದ ಕೊಠಡಿಯಲ್ಲಿ ಕೂತಿರುವಾಗ ನಾನು ಎಲ್ಲವೂ ಆಗಿಬಿಡುತ್ತೇನೆ. ಪ್ರತಿಯೊಂದರ ಮನಸ್ಸನ್ನೂ ನಾನು ಹೊಕ್ಕು ಬಿಡುತ್ತೇನೆ. ಅಲ್ಲಿ ಹೊರಗಡೆ ಕಾಳು ಆಯ್ದು ತಿನ್ನುವ ಹಕ್ಕಿಯಾಗಿ ಬಿಡುತ್ತೇನೆ.”

ನನ್ನ ಸ್ವಂತದ್ದೇನು ಎನ್ನುವುದೇ ಅಮುಖ್ಯವಾಗುವಂತೆ, ತನಗೊಂದು ವ್ಯಕ್ತಿತ್ವವೇ ಇಲ್ಲವೆಂಬಂತೆ ಭವದಲ್ಲಿ ಇರುವ, ಇರುತ್ತ ಆಗುವ ಸ್ಥಿತಿ ಅದು.

—-
ಶೇಕ್ಸ್ಪಿಯರ್ಕುರಿತಾಗಿ ಕರ್ನಾಟಕ ಸಾಹಿತ್ಯ ಅಕಾಡಮಿಯಲ್ಲಿ ಮಾಡಿದ ಭಾಷಣವನ್ನು ಧ್ವನಿಮುದ್ರಿಕೆಯಿಂದ ಬರೆದುಕೊಂಡು ಪರಿಷ್ಕರಿಸಿದ್ದು.