ಒಂದಲ್ಲ ಒಂದು ಬಗೆಯಲ್ಲಿ ನಾವೆಲ್ಲರೂ –  ನಮ್ಮ ಹಿರಿಯರೂ ಕೂಡಾ –  ಆಧುನಿಕೀಕರಣವಾದಿಗಳೇ. ಗಾಂಧೀಜಿಯ ‘ಹಿಂದ್‌ಸ್ವರಾಜ್‌’ನ ವಾದವನ್ನು ನಮ್ಮ ಹಿರಿಯರು ಪಾರಮಾರ್ಥಿಕವಾಗಿ ಒಪ್ಪುತ್ತಿದ್ದರೇನೋ? ಆದರೆ ಖಂಡಿತ ಲೌಕಿಕವಾಗಿ ಒಪ್ಪುತ್ತಿರಲಿಲ್ಲ (ಯಾಕೆ? ನಾವು ಕೂಡ) ನಮ್ಮ ಹಿರಿಯ ಲೇಖಕರಿಗೆ ಪಾಶ್ಚಾತ್ಯ ಮಾದರಿಯ ಆಧುನಿಕತೆ ಅನಿವಾರ್ಯವೆಂದು ಕಂಡಿತ್ತು. ಅವರ ಆಸ್ಥೆ, ಹೀಗೆ ಅನಿವಾರ್ಯವಾಗಿ ಆವರಿಸುವ ಪಶ್ಚಿಮದ ಆಧುನಿಕತೆಯಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಬೆಲೆಯುಳ್ಳದನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದೇ ಆಗಿತ್ತು. ಹೀಗೆ ಚಿಂತಿಸುವವರು ಯಾವ ಅತರೇಕಕ್ಕೂ ಹೋಗದವರು. ಹೀಗಾಗಿ ಲೌಕಿಕ ವಿಷಯಗಳಲ್ಲಿ ಯಾವ ಭಾರತೀಯನಾದರೂ ಉತ್ಕಟವಾಗಿ ಚಿಂತಿಸಿದ್ದು ಒಂದೋ ಗಾಂಧಿವಾದಿಯಾದಾಗ, ಅಥವಾ ಮಾರ್ಕ್ಸ್‌‌ವಾದಿಯಾದಾಗ. ನಮ್ಮ ಕನ್ನಡದ ಹಿರಿಯರಲ್ಲಿ ಈ ಬಗೆಯವರು ಕಡಿಮೆ. ಕಾಮಗಂಧಿಯಾದ ಪ್ರೇಮವಾಗಲೀ, ಸಾಮಾಜಿಕ ವಿಷಯಮತೆಯಾಗಲೀ – ಈ ಯಾರಿಗೂ ಅಂಥ ತಲ್ಲಣ ತರುವ ವಸ್ತುವಲ್ಲ. ಅವರಲ್ಲಿ ಕೆಲವರ ಉತ್ಕಟತೆಯಿರುವುದು  ಅನುಭಾವದ ವಿಷಯಗಳಲ್ಲಿ.

ನಮ್ಮ ಹಿರಿಯರನ್ನು ಜರೆಯಲೆಂದು ಹೀಗೆ ನಾನು ಹೇಳುತ್ತಿಲ್ಲ. ಉದಾಹರಣೆಗೆ ಮಾಸ್ತಿಯವರನ್ನು ನೋಡಿ. ಅವರಿಗೆ ಈಗ ತೊಂಬತ್ತೈದು ವರ್ಷ ವಯಸ್ಸು. ಉದಾರವಾದೀ ಮಾನವೀಯತೆ ಮತ್ತು ಸಂಪ್ರದಾಯ ಶ್ರದ್ಧೆ –  ಇವುಗಳ ನಡುವೆ ಮಾಸ್ತಿಯವರು ಆತಂಕಕಾರಿಯಾದ ವಿರೋಧವನ್ನು ಕಂಡವರಲ್ಲ. ಭಾರತ ಸಂಸ್ಕೃತಿಯಲ್ಲಿ ಉಳಿಸಿಕೊಳ್ಳಲೇಬೇಕಾದ ಧಾರ್ಮಿಕ ಮೌಲ್ಯಗಳು ಇವೆ; ಆದರೆ ಈ ಮೌಲ್ಯಗಳು ಮನುಷ್ಯ ಸ್ವಭಾವವದಲ್ಲೇ ಅಡಕವಾಗಿರುವ ದುಷ್ಟತನದಿಂದಲೋ ಆಸೆಬುರುಕತನದಿಂದಲೋ ನಾಶವಾಗುವ ಸಂಭವವಿದೆ ಎಂಬುದನ್ನು ಇವರು ಅರಿತಿದ್ದಾರೆ. ಆದರೆ ಮನುಷ್ಯ ತನ್ನ ಒಳಿತನ್ನು ಮಾಗುತ್ತ ಕಂಡುಕೊಳ್ಳುತ್ತಾನೆ ಎಂಬ ದೃಢನಂಬಿಕೆಯೂ ಇವರಿಗಿದೆ.

ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುತ್ತಮವಾದ್ದನ್ನು ಇವರು ತಮ್ಮ ಉದಾರವಾದಿ ಮಾನವೀಯತೆಯ ಸರಕಾಗಿ ಪಡೆದಿದ್ದಾರೆ. ಶೇಕ್ಸ್‌ಪಿಯರ್‌, ವರ್ಡ್ಸ್‌‌ವರ್ಥ್‌, ಆರ್ನಾಲ್ಡ್‌, ಗಯಕಟೆ, ವಾಲ್ಮೀಕಿ ಮತ್ತು ವ್ಯಾಸ –  ಯಾಕೆ, ಅಷ್ಟೇನೂ ಅಸಾಧಾರಣನಲ್ಲದ ಆ ಕಾಲದ ವಿದ್ವಾಂಸ ವಿಮರ್ಶಕ ಲೆಸ್ಲೀ ಸ್ಟೀಫನ್‌ಗೂ –  ಮಾಸ್ತಿಯವರ ಮನಸ್ಸು ತೆರೆದುಕೊಂಡು ವಿಚಾರಸರಣಿ ಎಷ್ಟು ಲಾಭದಾಯಕವಾಗಿಯು ಇತ್ತೆಂದರೆ, ಗೊಡ್ಡು ಸಂಪ್ರದಾಯವಾದಿಗಳು ತಮ್ಮ ಮಡಿವಂತಿಕೆಯನ್ನು ಸಾರ್ವಜನಿಕ ಜೀವನದಲ್ಲಿ ಕಳೆದುಕೊಂಡು ಚಲನಶೀಲರೂ, ಸ್ಥಿತಿವಂತರೂ ಆದರು; ಹಾಗೆಯೇ ಶೂದ್ರ ಜನಾಂಗದವರು ಸಂಪ್ರದಾಯದ ಶ್ರದ್ಧೆಗಳಿಂದ ಮುಕ್ತರಾಗಿ ಬ್ರಾಹ್ಮಣರ ಯಜಮಾನಿಕೆಯಿಂದ ಬಿಡುಗಡೆ ಪಡೆದರು. ಈ ಬಿಡುಗಡೆಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಸಾರವಾದ್ದೆಂದು ಯರೋಪ್ಯದಿಂದಲೇ ಅರಿತದ್ದನ್ನು ಅಳವಡಿಸಿಕೊಳ್ಳಲು ಎಲ್ಲರೂ ಹವಣಿಸಿದರು. ಜಾಗತೀಕರಣದ ಈ ನಮ್ಮ ಕಾಲದಲ್ಲೂ ನಮ್ಮ ಎಲ್ಲ ಆಧ್ಯಾತ್ಮಿಕ ಸಂಶಯಗಳನ್ನೂ ಮೀರಿ ಬಹುರಾಷ್ಟ್ರ ಸಂಸ್ಥೆಗಳು ಕಟ್ಟುತ್ತಿರುವ ಹೊಸ ಅರ್ಥವ್ಯವಸ್ಥೆ ನಮಗೆ ರುಚಿಕರವಾಗಿಯೇ ಕಾಣುತ್ತಿದೆಯಲ್ಲವೇ? –  ಹಾಗೆಯೇ ಹಿಂದಿವರಿಗೂ ಬ್ರಿಟಿಷ್‌ರಾಜ್ಯ ಹೊಸ ರುಚಿಗಳನ್ನು ಹತ್ತಿಸಿತ್ತು ಎಂದು ತೋರುತ್ತದೆ.

ಕಾದಂಬರಿಕಾರರಾಗಿಯೂ  ಕಥೆಗಾರರಾಗಿಯೂ ಮಾಸ್ತಿಯವರು ಈ ಚಾರಿತ್ರಿಕ ಸಂದರ್ಭಕ್ಕೆ ಒಳನೋಟಗಳಿಂದ ಸ್ಪಂದಿಸಿದವರು. ಆಫ್ರಿಕಾದ ಲೇಖಕ ಅಚೀಬಿಯ Things Fall Apart ನಂತೆ ಇವರ ಕಾದಂಬರಿ ಚಿಕದೇವರಾಯ ವಸಾಹತೀಕರಣವನ್ನು ವಸ್ತುವಾಗಿ ಪಡೆದಿದೆ. ನೀತಿಗೆಟ್ಟು ಕೊಳೆಯುತ್ತಿರುವ ಸಂಸ್ಥಾನವೊಂದು ಹೇಗೆ ಬ್ರಿಟಿಷರ ಮಸಲತ್ತಿನಿಂದ ಅವರ ವಶವಾಗಿ ಬಿಡುತ್ತದೆ ಎಂಬುದು ಇಲ್ಲಿ ವರ್ಣಿತವಾಗಿದೆ. ಕಳೆದುಕೊಳ್ಳುವ ಸ್ವಾತಂತ್ರ್ಯದ ಬಗ್ಗೆ ವಿಷಾದವಿದೆಯಾದರೂ, ಬ್ರಿಟಿಷರ ಸ್ವಾರ್ಥ ಈ ಸಂಸ್ಥಾನದ ರಾಜನ ಕ್ರೌರ್ಯದಿಂದ ಬಿಡುಗಡೆ ಪಡೆಯಲೂ ಕಾರಣವಾಗುತ್ತದೆಂಬ ಸೂಚನೆ ಕಾದಂಬರಿಯಲ್ಲಿದೆ.

ಈ ಚೌಕಟ್ಟಿನಲ್ಲಿ ಮಾತ್ರ ಇಟ್ಟು ನೋಡುವುದರಿಂದ ಕೃತಿಕಾರನಿಗೆ ಅನ್ಯಾಯವಾಗುತ್ತದೆ. ಯಾಕೆಂದರೆ ದೈವಿಕವಾದ ಸಹನೆ ಮತ್ತು ಅಮಾನವೀಯ ಕ್ರೌರ್ಯಕ್ಕೆ ದಿಟ್ಟವಾಗಿ ಎದುರು ನಿಲ್ಲುವ ಕೌಟುಂಬಿಕ ಪ್ರೇಮ ಈ ಕಾದಂಬರಿಯ ಜೀವಾಳ ವಸ್ತುವಾಗಿದೆ. ಮಾಸ್ತಿಗಿಂತ ಅತ್ಯಂತ ಭಿನ್ನ ಲೇಖಕನೆಂದರೆ ರಷ್ಯಾದ ದಾಸ್ತೋವಸ್ಕಿ. ಅವನಿಗೆ ಸಾಧ್ಯವಾಗುವ ಅತಿರೇಕಗಳು, ಉತ್ಕಟತೆಗಳು, ತಾತ್ವಿಕ ಹುಚ್ಚುಗಳು, ವೈಚಾರಿಕ ಕಾಣ್ಕೆಗಳು ಇನ್ನು ಯಾವ ಲೇಖಕರಲ್ಲೂ ನಾವು ಕಾಣಲಾರೆವು. ಸ್ವರ್ಗ ಮತ್ತು ನರಕ – ಎರಡೂ ದಾಸ್ತೋವಸ್ಕಿಗೆ ಗೊತ್ತು. ಈ ಕಾದಂಬರಿಯಲ್ಲಿ ಮಾಸ್ತಿ ಕೂಡಾ ದಾಸ್ತೋವಸ್ಕಿ ಕಾಣಬಲ್ಲ ಕ್ರೌರ್ಯವನ್ನು ಒಂದೆಡೆಯಲ್ಲಿ ಕಾಣಿಸುವ ದಿಟ್ಟತನ ತೋರಿದ್ದಾರೆ.

ಈಗಲೂ ತನ್ನ ಭಾವನಾಲೋಕದಲ್ಲಿ ಸಂಪ್ರದಾಯಶೀಲರಾಗಿ ಉಳಿದಂತೆ ಕಾಣುವ ಮಾಸ್ತಿಯವರಿಗೆ ಪರಂಪರೆ ಮತ್ತು ಆಧುನಿಕತೆ ವಿರೋಧಿಗಳಾಗಿ ಕಾಣುವುದಿಲ್ಲ. ಸದಸದ್ವಿವೇಕ ಬೇಕು ಅಷ್ಟೆ –  ಯಾವುದನ್ನು ಎಷ್ಟರಮಟ್ಟಿಗೆ ಆಯಬೇಕೆಂಬ ಜೀವನದ ದಿವ್ಯದಲ್ಲಿ. ವಾಲ್ಮೀಕಿ ಮತ್ತು ಶೇಕ್ಸ್‌ಪಿಯರ್‌ ಇಬ್ಬರೂ ತಮ್ಮ ಸಮಕಾಲೀನರೆಂಬಂತೆ ಮಾಸ್ತಿ ಓದಿಕೊಳ್ಳುತ್ತಾರೆ. ಜಾನಪದ ಸೊಗಡಿನ ತನಗಿಂತ ಕಿರಿಯರಾದ ಬೇಂದ್ರೆಯವರನ್ನು ಪ್ರಪಂಚದ ಒಬ್ಬ ಒಳ್ಳೆಯ ಕವಿಯೆಂದು ಗ್ರಹಿಸಲು ಅಡ್ಡಿಯಾಗುವಂತಹ ಪಶ್ಚಿಮದ ಮೋಹ ಇವರಿಗೆ ಇಲ್ಲ.

ನಮ್ಮ ಸಾಂಸ್ಕೃತಿಕ ವಿಸ್ಮೃತಿಯ ಬಗ್ಗೆ ಮಾಸ್ತಿ ಕೆಲವು ಮನೋಜ್ಞ ಕಥೆಗಳನ್ನು ಬರೆದಿದ್ದಾರೆ. ಈ ಕಥೆಗಳ ವಸ್ತು ಮರೆಯಬಾರದ್ದನ್ನು ನಮ್ಮ ಜಡತ್ವದಲ್ಲಿ ನಾವು ಮರೆತಿದ್ದೇವೆ ಎಂಬುದು. ಆದರೆ ಈ ಕಥೆಗಳ ವಿಶೇಷವೆಂದರೆ, ನಮಗೆ ನಮ್ಮ ಗತಕಾಲದ ಸ್ಮೃತಿಯನ್ನು ಮತ್ತೆ ದಕ್ಕುವಂತೆ ಮಾಡುವವರೂ ಐರೋಪ್ಯರೇ ಆಗಿರುತ್ತಾರೆ. ಅಂದರೆ, ಬ್ರಿಟಿಷರ ಆಳ್ವಿಕೆ ಮಾತ್ರ ನಮ್ಮ ವಿಸ್ಮೃತಿಗೆ ಕಾರಣವಲ್ಲ. ಈ ಆಳ್ವಿಕೆಯಲ್ಲಿ ಎಷ್ಟು ಕೆಡುಕಿದೆಯೋ, ಅಷ್ಟೇ ಒಳ್ಳೆ ಗುಣಗಳೂ ಇವೆ –  ಮಾಸ್ತಿಯವರ ಪ್ರಕಾರ.

ಅಂದರೆ, ಆಧುನಿಕತೆ ನಮ್ಮ ಜೀವನದಲ್ಲಿ ತರುವ ಕಷ್ಟಗಳಿಂದಾಗಿಯೂ ಇವರ ಪರಂಪರೆಯ ಶ್ರದ್ಧೆ ಬೆಳೆಯುವಂತೆ ಕಾಣುತ್ತದೆ. ಆದರೆ ನನ್ನ ಭಾಷೆಯಲ್ಲಿ ಮಾಸ್ತಿಯಂಥವರು ಒಬ್ಬರೇ. ಅವರ ಸರಳವೂ ನಿಶ್ಚಲವೂ ಆದ ನಂಬಿಕೆ ನಮಗೆ ಯಾರಿಗೂ ಸಾಧ್ಯವಿಲ್ಲ.

ಈಗ ಎಂಬತ್ತೆರಡು ವರ್ಷ ವಯಸ್ಸಿನವರಾದ ಕುವೆಂಪು ಅವರು ವೈಚಾರಿಕತೆಯಲ್ಲಿ ಮಾಸ್ತಿಗಿಂತ ನಮಗೆ ಹೆಚ್ಚು ಹತ್ತಿರದವರು. ಪರಂಪರೆಯ ಜೊತೆ ಮಾಸ್ತಿಯ ಸಮಾಧಾನದ ಸಂಬಂಧ ಇವರದ್ದಲ್ಲ. ಮತಾಚರಣೆಗಳಿಗೂ, ಜಾತಿಪದ್ಧತಿಗೂ ಸಂಬಂಧಪಟ್ಟಂತೆ ಇವರ ನಿಲುವು ದಿಟ್ಟವಿಚಾರವಾದಿಯದು. ನಮ್ಮ ಕಾಲದ ಅತ್ಯಂತ ಎತ್ತರದ ಬ್ರಾಹ್ಮಣೇತರ ಲೇಖಕರಾದ ಇವರು ಯಾವತ್ತೂ ಮಡಿವಂತರ ಜೊತೆ ಒಪ್ಪಂದ ಮಾಡಿಕೊಂಡಿದ್ದಿಲ್ಲ. ಆದರೆ ಇವರಲ್ಲಿ ಕಾಣುವ ಸಂಪ್ರದಾಯಶೀಲತೆಯ ವಿರೋಧ ಆಧ್ಯಾತ್ಮಿಕ ಕಾರಣಗಳಿಂದಾಗಿಯೂ ಹುಟ್ಟಿಕೊಂಡಿದ್ದು ಆಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟಿಬೆಳೆದ ಈ ‘ಪಾರಮಾರ್ಥಿಕ ವಿಚಾರವಾದಿ’ ರಾಮಕೃಷ್ಣಾಶ್ರಮದಲ್ಲಿ ವಾಸವಾಗಿದ್ದು ಉನ್ನತ ವಿದ್ಯಾಭ್ಯಾಸ ಪಡೆದು, ಅರವಿಂದರನ್ನು ಮೆಚ್ಚಿಕೊಂಡಿದ್ದರೆಂಬುದು ನಾವು ಗಮನಿಸಬೇಕಾದ್ದು. ಇವರ ಶೈಲಿದಿಂದ ತನ್ನ ಶಕ್ತಿಯನ್ನೂ ಮಲೆನಾಡಿನ ಜಾನಪದದಿಂದ ತನ್ನ ಜೀವವನ್ನೂ ಪಡೆದುಕೊಳ್ಳುತ್ತದೆ. ಇವರ ರಾಮಾಯಣದರ್ಶನಂ ಶೇಕ್ಸ್‌ಪಿಯರ್‌, ಮಿಲ್ಟನ್‌ ಮತ್ತು ಭಾರತದ ಎಲ್ಲಾ ಆಧ್ಯಾತ್ಮಿಕ ಚಿಂತನೆಯ ಸಾರವನ್ನು ಸ್ವೀಕರಿಸಿ ಹುಟ್ಟಿದೆ. ಹೀಗೆ ತನ್ನ ಕಾಲಕ್ಕೆ ಮಿಡಿಯುವ ಕುವೆಂಪುರವರ ದೃಷ್ಟಿ ಅತ್ಯಂತ ಕುತೂಹಲಕಾರಿಯಾಗಿ ವೈಜ್ಞಾನಿಕ ವೈಚಾರಿಕತೆಯನ್ನೂ ಮತ್ತು ಅಲೌಕಿಕವಾದ, ಆಧ್ಯಾತ್ಮಿಕವಾದ ನಂಬಿಕೆಯನ್ನೂ ಬೆಸೆಯುತ್ತದೆ. ಪೂರ್ವ ಮತ್ತು ಪಶ್ಚಿಮ, ವೈಜ್ಞಾನಿಕ ಮನೋಧರ್ಮ ಮತ್ತು ಅವತಾರಗಳಲ್ಲಿ ನಂಬಿಕೆ – ಇವುಗಳನ್ನು ಹೆಣೆಯುವ ಇವರ ಮನಸ್ಸು ಚಿಂತನಶೀಲವಾಗಲು ತೊಡಗಿದೊಡನೆಯೇ ಸಿಡಿದೇಳುತ್ತದೆ. ಇಂದಿಗೂ ಅವರು ಅವರ ವಾರಿಗೆಯ ಹಿರಿಯರಲ್ಲಿ ಕೋಪಶೀಲರಾಗಿ ಉಳಿದಿದ್ದಾರೆ. ಕನ್ನಡವೇ ಶಿಕ್ಷಣದ ಮಧ್ಯಮವಾಗಬೇಕೆಂದು ಅತ್ಯಂತ ತೀವ್ರವಾಗಿ ವಾದಿಸುವ ಇವರು ಈಚೆಗೆ ತಾನು ಇಂಗ್ಲೀಷ್‌ ಕಲಿಯದಿದ್ದಲ್ಲಿ ಯಾವುದೋ ಬ್ರಾಹ್ಮಣರ ಕೊಟ್ಟಿಗೆಯಲ್ಲಿ ಸೆಗಣಿ ಹೊರುವವನು ಆಗಿರುತ್ತಿದ್ದೆ ಎಂದಿದ್ದಾರೆ. ಇದರಿಂದ ಹಲವರು ಆಶ್ಚರ್ಯ ಚಕಿತರಾದರು. ಬ್ರಾಹ್ಮಣಿಕೆಯನ್ನು ಅವರು ಖಂಡಿಸುವ ಕ್ರಮ ಹಲವು ಮಡಿವಂತರಿಗೆ ಕೋಪವನ್ನುಂಟು ಮಾಡಿತು. ಈ ದಿನಗಳಲ್ಲಿ ಅವರು ಮನುಷ್ಯ ‘ಅನಿಕೇತನ’ನಾಗಬೇಕೆಂದು ವಿಶ್ವಮಾನವನಾಗಬೇಕೆಂದೂ ಸಾರುತ್ತಾರೆ.

ಅವರ ಕಾವ್ಯದಲ್ಲಿ ಕಾಣುವ ಸ್ವ – ನಿಷ್ಠವಾದ ಭವ್ಯತೆಯ ಆರಾಧನೆ ನನಗೇನೂ ಅಷ್ಟು ಮೆಚ್ಚಿಕೆಯ ಸಂಗತಿಯಲ್ಲ. ಆದರೆ ಅವರು ಬರೆದ ಎರಡು ಕಾದಂಬರಿಗಳು ಮಾತ್ರ ಪ್ರಪಂಚದ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳೆಂದು ನಾನು ತಿಳಿದಿದ್ದೇನೆ. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಈ ಕಾದಂಬರಿಗಳು ನಿತ್ಯ ಜೀವನದ ದಟ್ಟ ವಿವರಗಳನ್ನು ಒಳಗೊಂಡು ಆಯಾಕಾಲದ ಅಪೂರ್ವ ದಾಖಲೆಗಳೂ ಆಗಿವೆ. ದೈನಿಕ ಜೀವನದ ಇಷ್ಟೊಂದು ವಿವರಗಳನ್ನು ಇಷ್ಟು ದಟ್ಟವಾಗಿ ಮಲೆಗಳಲ್ಲಿ ಮದುಮಗಳುನಲ್ಲಿ ಕಾಣಿಸುವಂತೆ ಮೂಡಿಸಿದ ಇನ್ನೊಬ್ಬ ಕಾದಂಬರಿಕಾರನೆಂದರೆ ನನ್ನ ಪಾಲಿಗೆ ಜೇಮ್ಸ್‌ಜಾಯ್ಸ್‌. “ಕಥೆಯನ್ನು ನಂಬು, ಕಥೆಗಾರನನ್ನು ನಂಬಬೇಡ” ಎಂದ ಲಾರೆನ್ಸ್‌ ಹೇಳುವ ಮಾತು ಕುವೆಂಪು ಬಗ್ಗೆ ಖಂಡಿತ ನಿಜ. ಪ್ರಜ್ಞಾಪೂರ್ವಕವಾಗಿ ಕುವೆಂಪು ಹೇಳಲು ಹೊರಡುವ ವೈಚಾರಿಕತೆಯನ್ನು ಮೀರಿ ಅವರ ಕಾದಂಬರಿಗಳು ಬೆಳೆಯುತ್ತವೆ.

ನಾನು ಮಾತಾಡುತ್ತಿರುವ ಈ ಸಂದರ್ಭಕ್ಕೆ ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ ಹೆಚ್ಚು ಪ್ರಸ್ತುತವಾದದ್ದು. ಮೈಸೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿದ ಕಾದಂಬರಿಯ ನಾಯಕ ತನ್ನ ಹಳ್ಳಿಗೆ ಹಿಂದಿರುಗುತ್ತಾನೆ. ದಟ್ಟ ಅಡವಿಯ ನಡುವೆ ಸುಲಭವಾಗಿ ಸಿಗದಂತೆ ಇರುವ ತನ್ನ ಹಳ್ಳಿಯಲ್ಲಿ ಈತ ಪರಕೀಯನಾಗಿ ಬಿಡುತ್ತಾನೆ. ತನ್ನ ಜನರ ಎಲ್ಲ ಆಚರಣೆಗಳಿಗೂ ಹೊರಗಿನವನಾಗಿಬಿಡುವ ಈತ ತನ್ನ ಸುತ್ತಲಿನ ನಿಸರ್ಗದ ಜೊತೆ ಮಾತ್ರ ಆತ್ಮೀಯ ಸಂಬಂಧವನ್ನು ಪಡೆದವನಾಗುತ್ತಾನೆ. ಕಾದಂಬರಿಯಲ್ಲಿ ಮೇಲ್ನೋಟಕ್ಕೆ ಅಸಂಗತ ಎನ್ನಿಸುವ, ಆದರೆ ಅತ್ಯಂತ ಅರ್ಥಪೂರ್ಣವಾದ, ಒಂದು ಸನ್ನಿವೇಶ ಇದೆ. ಮನೆ ಜಗಳದಿಂದ ಛಿದ್ರವಾಗುತ್ತಿರುವ ಸಮಷ್ಟಿ ಕುಟುಂಬದ ತನ್ನ ಮನೆಯ ಮಹಡಿಯ ಮೇಲೆ ಕೂತು ಕಾದಂಬರಿಯ ನಾಯಕ ಹೂವಯ್ಯ ತನ್ಮಯನಾಗಿ ಇಂಗ್ಲೀಷ್‌ನ ರೋಮ್ಯಾಂಟಿಕ್‌ ಕವಿಗಳನ್ನು ಓದುತ್ತಿರುವ ಚಿತ್ರ ಬರುತ್ತದೆ. ೧೯೩೬ ನೆಯ ಇಸವಿಯ ಈ ಕಾದಂಬರಿಯಲ್ಲಿ ಪ್ರಥಮ ಬಾರಿಗೆ ‘ಪರಕೀಯ ಭಾವ’ದ ಚಿತ್ರಣ ಕಾಣಸಿಗುತ್ತದೆ. ಈ ಭಾವದ ಇನ್ನೊಂದು ಮುಖ್ಯ ಕೃತಿಯಾದ ಮನಿಕ್‌ ಬಂದೋಪಾಧ್ಯಾಯರ  A Puppets Tale (ಇಂಗ್ಲೀಷ್‌ ಭಾಷಾಂತರ) ಎನ್ನುವ ಕೃತಿ ಈ ಇಸವಿಯಲ್ಲೇ ಪ್ರಕಟವಾದದ್ದು. ಸ್ವಸ್ಥಳಕ್ಕೆ ಹಿಂದಿರುಗುವ ಈ ಬಗೆಯ ಭಾರತೀಯ ಕೃತಿಗಳು ಪೂರ್ವ ಮತ್ತು ಪಶ್ಚಿಮ, ಹಳ್ಳಿ ಮತ್ತು ಪಟ್ಟಣ – ಈ ಎರಡರ ನಡುವೆ ಎಲ್ಲಿಯೂ ಸಲ್ಲದ ನಾಯಕನ ಬಗ್ಗೆ ನಮಗೆ ಮಹತ್ತ್ವವಾದ ವಿಚಾರಗಳನ್ನು ಒದಗಿಸುತ್ತದೆ.

ಇವತ್ತಿಗೂ ಈ ವಸ್ತು ನಮ್ಮ ಕಾದಂಬರಿಕಾರರನ್ನು ಕಾಡುತ್ತಿದೆ ಎಂಬುದಕ್ಕೆ ಶಾಂತಿನಾಥ ದೇಸಾಯಿಯವರ ಬೀಜ ಒಳ್ಳೆಯ ಉದಾಹರಣೆ. ನಗರದ ಕತೆಗಾರರೆಂದೇ ಪ್ರಸಿದ್ಧರಾಗಿದ್ದ ದೇಸಾಯಿಯವರು ಈ ಕಾದಂಬರಿ ಬರೆದು ತನ್ನ ಓದುಗರನ್ನು ಆಶ್ಚರ್ಯಗೊಳಿಸಿದರು. ತನ್ನ ತಂದೆಯ ಶ್ರಾದ್ಧಕ್ಕೆಂದು ಬೊಂಬಾಯಿಯಿಂದ ಹಿಂದಿರುಗಿದ ಕಾದಂಬರಿಯ ನಾಯಕ ತನ್ನ ಊರನ್ನು ಬಿಟ್ಟು ಹೋಗಲಾರದವನಾಗಿ ಬಿಡುತ್ತಾನೆ. ಇದಕ್ಕೆ ಕಾರಣ ಕೇವಲ ಹಳಹಳಿಕೆಯಲ್ಲ. ತನ್ನ ಹಿರಯರ ಮನೆಗೆ ಹಿಂದಿರುಗುವುದು ತಾನೊಬ್ಬ ಗಟ್ಟಿ ಮನುಷ್ಯನಾಗಿ ಬೆಳೆಯಲು ಅವನಿಗೆ ಅಗತ್ಯವಾಗಿ ಬಿಡುತ್ತದೆ. ತಾನು ಕಳಚಿಕೊಂಡುಬಿಟ್ಟನೆಂದು ತಿಳಿದಿದ್ದ ರಾಜಕೀಯು ಆರ್ಥಿಕವೂ ಆದ ಸತ್ಯಗಳನ್ನೂ ಇವಕ್ಕೆ ಹೊಂದಿಕೊಂಡಂತೆ ಇರುವ ಮಾನವೀಯ ಸಂಬಂಧಗಳನ್ನು ಅವನು ಎದುರಿಸಬೇಕಾಗುತ್ತದೆ.

ನಮ್ಮ ಕಾಲದ ಇನ್ನೊಬ್ಬ ಮುಖ್ಯ ಕಾದಂಬರಿಕಾರರು ಯಶವಂತ ಚಿತ್ತಾಲರು. ಕಾಫ್ಕಾನ ಬರವಣಿಗೆಯನ್ನು ನೆನಪು ಮಾಡಿಕೊಡುವಂತೆ ಬೊಂಬಾಯಿಯ ಬಗ್ಗೆ ತಮ್ಮ ವಿಶಿಷ್ಟ ಅನುಭವಗಳಿಂದ ಬರೆಯುತ್ತಾರೆ. ಇವರ ಶಿಕಾರಿಯ ನಾಯಕ ಎಲ್ಲಿದ್ದರೂ ತಾನು ತನ್ನ ಗ್ರಾಮದಲ್ಲಿ ಕಳೆದಿದ್ದ ಬಾಲ್ಯದ ನೆನಪುಗಳನ್ನು ಹೊತ್ತಿರುತ್ತಾನೆ. ಚಿತ್ತಾಲರಲ್ಲಿ ಮತ್ತೆ ಆಧುನಿಕ ನಾಗರಿಕತೆಯೂ, ಪರಂಪರೆಯ ಶ್ರದ್ಧೆಯೂ ಎದುರುಬದುರಾಗಿ ಯಾವ ಸರಳ ನಿವಾರಣೆಯೂ ಇಲ್ಲದಂತೆ ಸಮಸ್ಯಾತ್ಮಕವಾಗುತ್ತದೆ. ಇವರ ನಗರವಾಸಿ ಪಾತ್ರಗಳು ಮನಃಶಾಸ್ತ್ರೀಯವಾದ ತಿಳಿವಿಗೆ ಸುಲಭವಾಗಿ ಸಿಗುವಂತೆ ಇವರ ಹಳ್ಳಿಯ ಸಜೀವ ಪಾತ್ರಗಳು ಸಿಗುವುದಿಲ್ಲ. ಚಿತ್ತಾಲರನ್ನು ಪರಂಪರಾಗತವಾದ ಮನೆತನದ ಶ್ರದ್ಧೆಗಳು ಬಾಧಿಸುತ್ತವೆ. ಆದರೆ ಇವರ ನಾಯಕ ತನ್ನ ಊರಿಗೆ ಮರಳಲಾರದೆ ಬೊಂಬಾಯಿಯಲ್ಲೇ ಇರುತ್ತ ತನ್ನೊಳಗೆ ತಾನೇ ಹಲುಬುತ್ತ, ತೀವ್ರವಾಗಿ ಚಿಂತಿಸುತ್ತ ಇರಬೇಕಾದವನು. ಹವಾನಿಯಂತ್ರಿತವಾದ ಆಧುನಿಕ ನಾಗರಿಕತೆಯ ಸುಖಸಂಪತ್ತುಗಳು ಹೀಗೆ ಚಿತ್ತಾಲರಲ್ಲಿ ದುಃಸ್ವಪ್ನಗಳಾಗುತ್ತವೆ. ನಮ್ಮಲ್ಲಿ ಎಷ್ಟು ‘ಪೂರ್ವ’ವಿದೆಯೋ ಅಷ್ಟೇ ‘ಪಶ್ಚಿಮ’ ಈಗಾಗಲೇ ಕಳೆದುಕೊಳ್ಳಲಾರದಂತೆ ಇದ್ದುಬಿಟ್ಟಿದೆ ಎಂಬುದು ಚಿತ್ತಾಲರ ಒಟ್ಟು ಗ್ರಹಿಕೆ ಎಂದು ತೋರುತ್ತದೆ. ಅವರ ನಾಯಕರು ಎದುರಾಗುವ ವಾಸ್ತವ ಎಷ್ಟು ಕಠಿಣವಾದ್ದೆಂದರೆ, ಯಾರೂ ತಮ್ಮ ತವರಿಗೆ ಹಿಂದಿರುಗಲಾರರು. ಪುನರ್ಜನ್ಮ ಪಡೆದು ಗಳಿಸಿಕೊಳ್ಳಬಹುದಾದ ಕಳೆದುಹೋದ ಜಗತ್ತು ಇವರಿಗಿಲ್ಲ.

ಕನ್ನಡದಲ್ಲಿ ಕಾದಂಬರಿಗಳು ಹುಟ್ಟಿಕೊಂಡ ಪ್ರಾರಂಭದಲ್ಲಿ ಎಂ.ಎಸ್‌.ಪುಟ್ಟಣ್ಣನವರು ೧೯೧೫ ನೆಯ ಇಸವಿಯಲ್ಲಿ ಪ್ರಕಟಿಸಿದ “ಮಾಡಿದ್ದುಣ್ಣೋ ಮಹಾರಾಯ” ನಮ್ಮ ಈವರೆಗಿನ ಜಿಜ್ಞಾಸೆಗೆ ಪೂರಕವಾದ ಕೆಲವು ಅಂಶಗಳನ್ನು ಒಳಗೊಂಡಿದೆ. ಪುರಾಣಗೊಳಿಸುವ ರಹಸ್ಯದಲ್ಲಿ ವಾಸ್ತವವನ್ನು ಕಂಡು ಹೇಳುವ ಪ್ರಯತ್ನವನ್ನೂ, ವಾಸ್ತವವನ್ನು ವಿಶ್ಲೇಷಿಸಿ ಒಡೆದು ಕಾಣುವ ಐರೋಪ್ಯ ಪ್ರೇರಿತ ಆಧುನಿಕತೆಯನ್ನೂ ಏಕಕಾಲದಲ್ಲಿ ಪುಟ್ಟಣ್ಣನವರ ಕೃತಿ ತೋರುತ್ತದೆ. ತನ್ನ ಕಾದಂಬರಿಗೆ ಪುಟ್ಟಣ್ಣನವರು ಐರೋಪ್ಯ ಆಧುನಿಕತೆಯ ಪ್ರಾರಂಭದ ಹರಿಕಾರರಾಗಿ ಇಂಗ್ಲೀಷಿನಲ್ಲಿ ಮುನ್ನುಡಿ ಬರೆದಿದ್ದಾರೆಂಬುದನ್ನು ಗಮನಿಸಬೇಕು. ಇಂಗ್ಲೀಷ್‌ಭಾಷೆಯ ಪ್ರೇರಣೆಯಿಂದ ಹುಟ್ಟಿದ ಈ ಮಾತುಗಳು ಇಂಗ್ಲೀಷಿನಲ್ಲೇ ಇದೆಯೆಂಬುದು ಹೊಸ ಬಗೆಯ ಓದುಗರ ಆಪೇಕ್ಷೆಯನ್ನು ನಿರೀಕ್ಷಿಸಿ ಪ್ರತಿಕ್ರಿಯಿಸಿದಂತಿದೆ:

Most of the works in Kannada… are either expansions or constractions of our two great epics, Ramayana and Mahabharatha… While this repitition is landable on the one hand, it has, on the other, all the short – comings of mere imitation without originality, dryness without curiousity, and a mental cramp without intellectual liberty.

ಪುಟ್ಟಣ್ಣವರ ಆಧುನಿಕತೆ – ನಮ್ಮ ಎಲ್ಲರ ಆಧುನಿಕತೆಯಂತೆಯೇ – ಅಸಂದಿಗ್ಧವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಅಡಕವಾದ ಪುರಾಣ ಪ್ರಜ್ಞೆಯನ್ನು ತೊರೆದು ಅವರು ಮಾತಾಡಲಾರರು. ನಮ್ಮಂತೆಯೇ ಆಚಿಚೆ ನೊಡುತ್ತ, ಬದಲಾಗಲು ಬಯಸುತ್ತಲೇ ಉಳಿಸಿಕೊಳ್ಳಲು ಬಯಸುತ್ತ ಅವರು ಮುಂದೆ ಹೇಳುವದನ್ನು ಕೇಳಿ:

The Question is whether such pitfalls cannot be avoided by transfering the attention from those ideal heroes and heroines to a conception of characters of our daily life, which in their nature and in their deeds, more or less approach the ideal Rama and Sita, yudhistria and Draupadi.

ವಾಸ್ತವವನ್ನು ಮತ್ತೆ ಪುರಾಣದ ಪ್ರೇಮಿನಲ್ಲಿ ಗ್ರಹಿಸಲು ಅವರು ಬಯಸುತ್ತಾರೆಂಬುದು ಇಲ್ಲಿ ಮುಖ್ಯ ಏಕಕಾಲದಲ್ಲಿ ಅವರು ಒಂದು ಅಲಿಗರಿಯನ್ನೂ ಕಾದಂಬರಿಯನ್ನೂ ಅಡಗುವಂತೆ ಪುರಾಣವನ್ನೂ ಕಾಣುವಂತೆ ವಾಸ್ತವ ಕಥನವನ್ನೂ ಬರೆಯಲು ಹೊರಟಿದ್ದಾರೆಂಬುದು ಇದರಿಂದ ತಿಳಿಯುತ್ತದೆ. ಪುಟ್ಟಣ್ಣನವರ ಮುಖೇನ ನಾವು ಲ್ಯಾಟಿನ್‌ ಅಮೇರಿಕದ ಗಾರ್ಸಿಯ ಮಾರ್ಕೀಸ್‌ನನ್ನು ತಲುಪಬಹುದಾದ ಸಾಧ್ಯತೆ ಈ ಹೊಸ ಯುಗದ ಪ್ರಾರಂಬದಲ್ಲೇ ಇದೆ. ‘ಮಾಂತ್ರಿಕ ವಾಸ್ತವತೆ’ ಪುಟ್ಟಣ್ಣನವರಿಂದ ತುಂಬ ದೂರದಲ್ಲೇನೂ ಇಲ್ಲ. ಸತ್ತಳೆಂದು ತಿಳಿಯಲಾದ ಹೆಂಗಸು ಪುಟ್ಟಣ್ಣನ ಕಾದಂಬರಿಯಲ್ಲಿ ಮತ್ತೆ ಜೀವಂತವಾಗುತ್ತಾಳೆ – ಅಗ್ನಿ ದಿವ್ಯದಿಂದ ಎದ್ದು ಬರುವ ಸೀತೆಯಂತೆ ಆಗುತ್ತಾಳೆ. ವೇಷ ಮರೆಸಿಕೊಂಡ ರಾಮಾಯಣವಾಗಿ ಬಿಡುತ್ತದೆ ಪುಟ್ಟಣ್ಣನವರ ಕಾದಂಬರಿ; ರಾವಣ ಕುಡ ಈ ಕಥೆಯಲ್ಲಿದ್ದಾನೆ.

ಆದರೆ ಪುಟ್ಟಣ್ಣನವರ ಕಥೆಗೆ ಜೀವದಾನವಾಗುವುದು ಪುರಾಣದ ಈ ಹೊಂದಿಕೆಯಿಂದಲ್ಲ; ಕಥೆಯಲ್ಲಿ ಕಾಣುವ ವಾಸ್ತವಿಕತೆಯ ಸತ್ವದಿಂದ. ಕಾದಂಬರಿಕಾರ ಅನುಮಾನದ ಕಣ್ಣುಗಳನ್ನು ಪಡೆದ ಆಧುನಿಕನಾಗಿರದೇ ಇದ್ದಲ್ಲಿ ಹೊಸದೇನನ್ನೂ ಕಂಡು ಕಾಣಿಸಬಲ್ಲವನಾಗದೇ ಗೊಡ್ಡು ಪುರಾಣಿಕನಾಗಿ ಉಳಿಯುತ್ತಿದ್ದ. ಕಾಣುವುದಕ್ಕೆ ನಮಗೆ ವಾಸ್ತವತೆ ಬೇಕು; ಕಾಣ್ಕೆಗೆ ಪುರಾಣ ಬೇಕು ಎಂದು ನಮ್ಮ ಬಹಳ ಲೇಖಕರಿಗೆ ಅನ್ನಿಸುವಂತೆ ತೋರುತ್ತದೆ. ಅಂದರೆ, ನಮ್ಮ ಎದುರಿನ ಲೋಕದ ವಿದ್ಯಮಾನಗಳನ್ನು ಪರೀಕ್ಷೆ ಮಾಡಿ ಗ್ರಹಿಸಲು ಅನುಮಾನದಿಂದ ವಿಶ್ಲೇಷಿಸುವ ವಾಸ್ತವ ಮಾರ್ಗದ ಶೈಲಿ ಅಗತ್ಯವಾದರೆ, ಈ ಎಲ್ಲ ವಿದ್ಯಮಾನಗಳ ಹಿಂದಿರುವ ಪ್ರೇರಣೆಯನ್ನು ಗ್ರಹಿಸಲು ಪುರಾಣಗಳನ್ನು ಸೃಷ್ಟಿಸಬಲ್ಲ ಕಾವ್ಯಪ್ರತಿಭೆ ಬೇಕು ಎಂದ ಹಾಗಾಗುತ್ತದೆ.

ಚಂದ್ರಗುತ್ತಿಯಲ್ಲಿ ಬೆತ್ತಲೆಯಾಗಿ ಪೂಜಿಸುವವರು ಅನುಮಾನವಿಲ್ಲದಂತೆ ನಂಬಬಲ್ಲವರು; ತಮ್ಮನ್ನು ದೇವರಿಗೆ ಅರ್ಪಿಸಿಕೊಳ್ಳಬಲ್ಲವರು. ಈ ನಂಬಿಕೆ ಮೌಢ್ಯದಿಂದ ಹುಟ್ಟಿದ್ದೆಂದೂ ವಾದಿಸಬಹುದು; ಅಥವಾ ಅನುಭಾವದ ಪರವಶತೆಯಿಂದ ಜನ್ಯವಾದದ್ದೆಂದೂ ಭಾವಿಸಬಹುದು. ಅವರು ನದಿಯಲ್ಲಿ ಮಿಂದು ಆವೇಶಿತರಾಗಿ, ತಮ್ಮನ್ನು ಸುತ್ತುವರಿದ ಅನುಮಾನದ ತಾತ್ಸಾರದ ಆಧುನಿಕರ ಕಣ್ಣುಗಳನ್ನು ನಿರ್ಲಕ್ಷಿಸಿ ಅವರು ಬೆತ್ತಲೆ ನಡೆಯುತ್ತಾರೆ. ಇಂಗ್ಲಿಷನ್ನು ಕಲಿತ ಪುಟ್ಟಣ್ಣನವರ ಕಾಲದಿಂದಲೂ ನಾವು ಇವರನ್ನು ಅನುಮಾನದಿಂದ ನೋಡವವರಾಗಿದ್ದೇವೆ. ಕೆಲವೊಮ್ಮೆ – ಕಾವ್ಯ ನಿರ್ಮಾಣದ ಸಂದರ್ಭದಲ್ಲಿ ಖಂಡಿತವಾಗಿ, –  ಕುವೆಂಪು, ಬೇಂದ್ರೆ, ಪುತಿನ, ಮಧುರಚೆನ್ನ ಮತ್ತು ಅಡಿಗರೂ ಪರವಶರಾಗುವುದು ಉಂಟು.

ಕಾದಂಬರಿಕಾರನ ಜಾಯಮಾನವೇ ಅನುಮಾನಿಯದು ಎಂದು ಹೇಳಬೇಕೆನ್ನಿಸಿದರೂ ಯಾವಾಗಲೂ ಅಲ್ಲ ಎಂದೂ ಅವಸರದಲ್ಲಿ ಹೇಳಬೇಕೆನ್ನಿಸುತ್ತದೆ. ಚಾರಿತ್ರಿಕವಾಗಿ ಕಾವ್ಯ ಮತ್ತು ಜರ್ನಲಿಸಂಗಳ ಹಾದರಕ್ಕೆ ಹುಟ್ಟಿದ ಕೂಸು ಕಾದಂಬರಿಯಾದ್ದರಿಂದ ತನ್ನನ್ನು ಹುಟ್ಟಿಸಿದವರ ಭಿನ್ನ ಜಾತಿಯ ಗುಣಗಳನ್ನು ತನ್ನ ದೃಢವಾದ ಆರೋಗ್ಯದಲ್ಲಿ ಕಾದಂಬರಿ ಮೈಗೂಡಿಸಿಕೊಂಡಿರುತ್ತದೆ. ನಂಬಲು ಹಾತೊರೆಯುವ ಅನುಮಾನಿಗೂ ಕಾದಂಬರಿಯಲ್ಲಿ ಎಡೆಯಿದೆ; ಹಾಗೆ ನಂಬಿದವರನ್ನು ಕಾಡುವ ಸಂಶಯದ ಒಳಗುದಿಗೂ ಅದರಲ್ಲಿ ಸ್ಥಳವಿದೆ. ಆದ್ದರಿಂದ ಸಮಗ್ರವಾಗಿ ನಮ್ಮನ್ನು ನಾವು ಕಂಡುಕೊಳ್ಳಬಹುದಾದ ಕನ್ನಡಿ ಅದು. ನಮ್ಮ ಎಲ್ಲ ತೊಡಕುಗಳಿಗೂ, ಕಷ್ಟಗಳಿಗೂ, ದುಗುಡ ದುಮ್ಮಾನಗಳಿಗೂ, ದೈವಿಕ ಕನಸುಗಳಿಗೂ ಮಾತು ಕೊಡಬಲ್ಲ ಈ ಸಾಹಿತ್ಯ ಪ್ರಕಾರ ಕನ್ನಡದಲ್ಲಿ ಹುಟ್ಟುತ್ತಿರುವಂತೆಯೇ ಮುಂದೆ ಬೆಳೆಯಲಿರುವ ತನ್ನ ಎಲ್ಲ ಆಸಕ್ತಿಗಳನ್ನೂ ಪ್ರಕಟಗೊಳಿಸುತ್ತದೆ ಎಂಬುದು ಹಿನ್ನೊಟದಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ. ಉದಾಹರಣೆಗೆ ಜಾತಿಪದ್ಧತಿ ಮತ್ತು ಅಧಿಕಾರದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ಪುಟ್ಟಣ್ಣನವರಿಗಿರುವ ಆಸಕ್ತಿಯನ್ನು ನೋಡಬಹುದು. ನಿತ್ಯ ಜೀವನದ ವಾಸ್ತವ ವಿವರಗಳನ್ನು ಒಳಗೊಳ್ಳುತ್ತಲೇ ಪುರಾಣದಂತೆಯೂ ಅನಿರೀಕ್ಷಿತವಾದ ಅಂಶಗಳನ್ನು ಬೆಸೆಯುತ್ತ ಅಲಿಗರಿಯಾಗಿಯೂ ಬೆಳೆಯುವ ಕಥನಕಲೆ ಇವತ್ತಿಗೂ ನಮಗೆ ಪ್ರಸ್ತುತವಾಗಿರುವ ಸಾಹಿತ್ಯ ವಿಧಾನವಾಗಿದೆ. ಇಲ್ಲವಾದಲ್ಲಿ ಭಾರತದ ಬಹುರೂಪಿಯಾದ ಸತ್ಯವನ್ನು ಅನುಭವಕ್ಕೆ ದಕ್ಕಿಸಿಕೊಳ್ಳುವುದು ಸಾಧ್ಯವಾಗದು. ಪುಟ್ಟಣ್ಣನವರ ಬರವಣಿಗೆಯ ಹಿಂದಿರುವ ಪ್ರೇರಣೆ ಮಾರ್ಕೀಸ್‌ ದಿಕ್ಕಿನಲ್ಲಿ ಬೆಳೆಯಬಲ್ಲಂತೆ, ವಾಸ್ತವವನ್ನು ಪುರಾಣಗೊಳಿಸುವ ಪ್ರಕ್ರಿಯೆಗೆ ಸಂಪೂರ್ಣ ಹೊರತಾದ, ಮಹಾಭಾರತವನ್ನು ಅಂಥ್ರೊಪಾಲಜಿಯ ಶಿಸ್ತಿನಲ್ಲಿ ಗ್ರಹಿಸುವ ಭೈರಪ್ಪನವರ ಪರ್ವವಾಗಿಯೂ ಇನ್ನೊಂದುದಿಕ್ಕಿನಲ್ಲಿ ಬೆಳೆಯಬಹುದು.

ನನ್ನ ಬರವಣಿಗೆಯ ಮೇಲೆ ಪ್ರಭಾವ ಮಾಡಿದ ಶಿವರಾಮ ಕಾರಂತರನ್ನೂ ನಾನು ಇಲ್ಲಿಯ ತನಕ ಕಟ್ಟಿಕೊಳ್ಳುತ್ತಿರುವ ಚೌಕಟ್ಟಿನಲ್ಲಿಟ್ಟು ನೋಡಬೇಕು. ಕಾರಂತರು ಇವತ್ತಿಗೂ ನಿಷ್ಠುರ ವಿಚಾರವಾದಿಯಾಗಿ ಉಳಿದಿದ್ದಾರೆ –  ತನ್ನ ಇಳಿವಯಸ್ಸಲ್ಲೂ ಒಬ್ಬ ಭಾರತೀಯ ಲೇಖಕ ತನ್ನ ವಿಶ್ಲೇಷಣಾತ್ಮಕ ಒಳನೋಟಗಳನ್ನು ಭಾವವಶವಾಗದಂತೆ ಉಳಿಸಿಕೊಂಡಿರುವುದು ಅಪರೂಪ. ಕಾರಂತರು ಅನುಮಾನಿಸಿ ಅರಿಯುವುದನ್ನು ಕಲಿಸುವ ಕಾದಂಬರಿಕಾರರು ಮಾತ್ರವಲ್ಲ; ವಿಜ್ಞಾನದ ಬಗ್ಗೆ ಬರೆದವರಲ್ಲಿ ಮೊದಲಿಗರು, ಜೊತೆಗೇ, ಅನುಭಿಸುವ ಇಂದ್ರಿಯಗಳನ್ನು ತನ್ನ ಉಜ್ವಲ ವೈಭವದಲ್ಲಿ ಪರವಶಗೊಳಿಸುವಂತಹ ಯಕ್ಷಗಾನದಂತಹ ಕಲೆಯನ್ನು ಇಡೀ ಪ್ರಪಂಚ ಅರಿಯುವಂತೆ ಮಾಡಿದವರು. ಹೀಗೆ ಮಾಡಬಲ್ಲ ಕಾರಂತರೇ ಮಾನವಶಾಸ್ತ್ರಜ್ಞನ ದೃಷ್ಟಿಕೋನದಿಂದ. ಅವರ ಮೂಕಜ್ಜಿಯ ಕನಸುಗಳಲ್ಲಿ ಮಾನವಶಾಸ್ತ್ರದ ಅಭ್ಯಾಸದಿಂದ ಪಡೆದ ಸತ್ಯಗಳನ್ನು ಒಬ್ಬ ಮುದುಕಿಯ ಮುಖಾಂತರ ನಮಗೆ ಕಾರಂತರು ಕಾಣಿಸುತ್ತಾರೆ. ಈ ಮುದುಕಿಗೆ ಅತೀಂದ್ರಿಯ ಜ್ಞಾನವಿದೆಯೆಂಬುದು ಕೇವಲ ಕಾದಂಬರಿಯ ತಂತ್ರದ ಅಗತ್ಯಕ್ಕಾಗಿಯೇ –  ಈ ಪ್ರಶ್ನೆ ಇವತ್ತಿಗೂ ಕಾದಂಬರಿಯ ಓದುಗರಿಗೆ ಸಮಸ್ಯಾತ್ಮಕವಾಗಿ ಉಳಿದಿದೆ.

ವ್ಯವಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ತಾನು ಕಂಡ ಸತ್ಯವನ್ನು ಹೇಳುವ ಕಾರಂತರು ನಮ್ಮ ದೇಶದ ಬಹಳ ದೊಡ್ಡ ಸಾಹಿತ್ಯ ಪುರುಷನೆಂದು ನನ್ನ ಭಾವನೆ. ಇವರಲ್ಲಿ ನನಗೆ ವಿಶೇಷವೆಂದು ಕಾಣುವ ಒಂದು ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಕೆಲವೊಮ್ಮೆ ಇವರು ಪಾಶ್ಚಾತ್ಯ ಆಧುನಿಕತೆಯನ್ನು ಬಹುವಾಗಿ ಮೆಚ್ಚಿಕೊಂಡವರಂತೆ ಕಾಣುತ್ತಾರೆ. ಭಾರತದ ಗೊಂದಲಮಯ ವಿದ್ಯಮಾನಗಳನ್ನು ಟೀಕಿಸುವಾಗ ಪಾಶ್ಚಾತ್ಯ ಜೀವನ ಕ್ರಮದ ಕಟುವಿಮರ್ಶಕರೂ ಇವರಾಗಿ ಬಿಡುತ್ತಾರೆ. ಪಾಶ್ಚಾತ್ಯ ವ್ಯವಸ್ಥೆಯ ಅಚ್ಚುಕಟ್ಟನ್ನೂ ಶಿಸ್ತನ್ನೂ ಅಷ್ಟೊಂದು ಮೆಚ್ಚುವಂತೆ ಕಾಣುವ ಕಾರಂತರು ತಮ್ಮ ಇಡೀ ಜೀವನದ ಶೈಲಿಯಲ್ಲಿ ತನ್ನ ಗ್ರಾಮೀಣ ಪರಿಸರದ ಸಾರವನ್ನು ಸ್ವೀಕರಿಸಿದ ಅಪ್ಪಟ ಭಾರತೀಯನಾಗಿ ಉಳಿದಿದ್ದಾರೆ. ಪೂರ್ವ ಮತ್ತು ಪಶ್ಚಿಮಗಳು ಭಾರತದಲ್ಲಿ ಸಂಧಿಸಿ ಸೃಷ್ಟಿಸಿದ ಮನಸ್ಸುಗಳು ಯಾವ ಸರಳ ವಿಶ್ಲೇಷಣೆಯಲ್ಲಾಗಲೀ, ತಾತ್ವಿಕ ನಿಷ್ಠೆಯ ಅಬ್ಬರದಲ್ಲಾಗಲೀ ಇದು ಹೀಗೆ ಎಂದು ಹೇಳಲಾರದಷ್ಟು ಸೃಜನಶೀಲ ಸಂದಿಗ್ಧಗಳಾಗಿ ನಮಗೆ ಎದುರಾಗುತ್ತವೆ.

೧೦

ಮಾರ್ಕ್ಸ್‌ ಹೇಳುವ ಕ್ರಾಂತಿಯೂ ನಮಗೆ ಭಾರತದಲ್ಲಿ ಆಕರ್ಷಕವಾದದ್ದರ ಹಿಂದೆ, ತಿಳಿದೊ ತಿಳಿಯದೆಯೊ, ನಾವು ಆಧುನಿಕರಾಗಿ ಐರೋಪ್ಯರಂತಾಗಬೇಕೆಂಬ ಪ್ರೇರಣೆ ಕೆಲಸ ಮಾಡಿದೆ. ಸಾಮಾಜಿಕ ಅನ್ಯಾಯದ ವಿರುದ್ಧ ನಮ್ಮ ಪ್ರಗತಿಶೀಲರು ಪ್ರತಿಭಟಿಸುವಾಗ ಐರೋಪ್ಯ ಆಧುನಿಕ ವ್ಯವಸ್ಥೆಗೆ ನಾವೂ ಒಳಗಿನವರಾಗಬೇಕೆಂಬ ಅವಸರ ಇದೆಯೆಂಬುದು ಈಚಿನ ರಷ್ಯಾ ಮತ್ತು ಚೀನಾಗಳ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ. ಪ್ರಗತಿಶೀಲ ಚಳವಳಿಯಲ್ಲಿ ಭಾವುಕರಾಗಿ ಭಾಗಿಯಾಗಿದ್ದ ಚದುರಂಗರಂತಹ ಹಿರಿಯ ಲೇಖಕರ ಹಿಂದಿನ ನಿಲುವನ್ನೂ ಈಗಿನ ನಿಲುವನ್ನೂ ಹೋಲಿಸಿ ನೋಡಿದಾಗ ಅವರಲ್ಲಿ ಚೈತನ್ಯಶೀಲವಾಗಿ ಕೆಲಸ ಮಾಡಿದ್ದ ಪ್ರೇರಣೆ ಮೇಲ್ನೋಟಕ್ಕೆ ಸರಳವೆನ್ನಿಸಿದರೂ ಪಾಶ್ಚಾತ್ಯ ಆಧುನಿಕತೆಯನ್ನು ಒಪ್ಪಿಕೊಳ್ಳುವುದರ ಹಿಂದಿರುವ ಸಂದಿಗ್ಧತೆ ಅದರ ಆಳದಲ್ಲಿ ನಮಗೆ ಎದುರಾಗುತ್ತದೆ. ಚದುರಂಗದಂತಹ ದಟ್ಟ ಸ್ಮೃತಿಯನ್ನು ಪಡೆದ ಒಳ್ಳೆಯ ಎಲ್ಲ ಲೇಖಕರ ಬಗ್ಗೆ ಇದು ನಿಜ.

ಆದ್ದರಿಂದ ಚದುರಂಗರು ನಮಗೆ ನಿಜವಾಗುವುದು ತಮ್ಮ ಸ್ಮೃತಿಯಲ್ಲಿ ದಟ್ಟವಾಗಿ ಉಳಿದಿರುವ ಗ್ರಾಮೀಣ ಜೀವನದ ಬಗ್ಗೆ ಬರೆಯುವಾಗ. ಉದಾಹರಣೆಗೆ ವೈಶಾಖ ವರ್ಣಿಸುತ್ತದೆ; ಮತ್ತು ಹೀಗೆ ವರ್ಣಿಸುವಾಗ ಇಂಥ ಆಚರಣೆಗಳಲ್ಲೇ ಅಡಗಿರುವ ಪ್ರಜ್ಞಾಪೂರ್ವಕವಲ್ಲದ ಕ್ರೌರ್ಯವನ್ನೂ, ಸಾಮಾಜಿಕ ವಿಷಮತೆಯ ಪೆದ್ದುತನವನ್ನೂ, ಈ ಕ್ರೌರ್ಯ ಮತ್ತು ಪೆದ್ದುತನಗಳಿಂದಲೇ ಗ್ರಾಮೀಣ ಸಂಸ್ಕೃತಿಯ ಚೈತನ್ಯ ನಾಶವಾದೀತೆಂಬುದನ್ನೂ ನಮಗೆ ಮನವರಿಕೆಯಾಗುವಂತೆ ಮಾಡುತ್ತದೆ.

ನಮ್ಮ ತರುಣ ಲೇಖಕರಲ್ಲಿ ಒಬ್ಬರಾದ ಪ್ರತಿಭಾಶೀಲ ಬರಹಗಾರ ಶ್ರೀಕೃಷ್ಣ ಆಲನಹಳ್ಳಿಯಲ್ಲೂ ಈ ಸಂದಿಗ್ಧತೆ ನಮಗೆ ಎದುರಾಗುತ್ತದೆ. ವಿಚಾರವಾದಿಯಾಗಿ ಆಲನಹಳ್ಳಿಗೆ ಹಳ್ಳಿಯಲ್ಲಿ ಬೇರೂರಿದ ಭಾರತದ ಸಂಪ್ರದಾಯಶೀಲತೆ ಅಸಹನೀಯವಾದ್ದು; ಆದರೆ, ನಗರ ಸಂಸ್ಕೃತಿಯ ಆಧುನಿಕತೆ ನಾಶಮಾಡುತ್ತಿರುವ ಗ್ರಾಮೀಣ ಸಂಸ್ಕೃತಿಯ ಮುಗ್ಧತೆಯೇ ಇವರಿಗೆ ಪ್ರಾಣಪ್ರಿಯವಾದ್ದು. “ಪರಸಂಗದ ಗೆಂಡೆತಿಮ್ಮ” ಇದಕ್ಕೆ ಒಳ್ಳೆಯ ಉದಾಹರಣೆ.

ನಮ್ಮ ಕಾಲದ ಮಹತ್ವದ ಲೇಖಕರಾದ ಲಂಕೇಶರ ಪ್ರತಿಭೆ ವಿಶ್ಲೇಷಣೆಗೆ ಅಷ್ಟು ಸುಲಭವಾಗಿ ಸಿಕ್ಕುವಂತಹುದಲ್ಲ. ಇದಕ್ಕೆ ಕಾರಣ ಮತ್ತೆ ಮತ್ತೆ ಆಶ್ಚರ್ಯ ಹುಟ್ಟಿಸುವಂತೆ ಹೊಸಜನ್ಮ ಪಡೆಯುವ ಇವರ ಕಾಲ್ಪನಿಕ ಶಕ್ತಿ ಮತ್ತು ಸದ್ಯದ ವಾಸ್ತವದ ನಿಷ್ಠುರ ಗ್ರಹಿಕೆ. ಇವರ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿಯಾಗಿ ಸ್ವಚ್ಛಂದವಾದ ಕಥನವಾಗಿದೆ. ತನ್ನ ಕಥನದ ರೀತಿಯ ವೈವಿಧ್ಯದಲ್ಲೇ ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಅಪ್ರಯತ್ನವೆಂಬಂತೆ ಗ್ರಹಿಸುವ ಶಕ್ತಿ ಪಡೆದಿದೆ. ಗ್ರಾಮೀಣ ಜೀವನದ ಕ್ರೌರ್ಯ ಮತ್ತು ಅನ್ಯಾಯವನ್ನೂ, ಸಾಮಾಜಿಕ ವಿಷಮತೆಯನ್ನೂ ಈ ಕೃತಿ ಎಲ್ಲಿಯೂ ಕಿರುಚದಂತೆ, ಆದರೆ ಆಳವಾಗಿ ನಮಗೆ ಬಿಚ್ಚಿ ತೋರಿಸುತ್ತದೆ. ಆದರೆ ಕಾದಂಬರಿಯ ಆಶಯವಾದ ಸಮಾಜ ಪುನರ್ ನಿರ್ಮಾಣಗೊಳ್ಳಬೇಕೆಂಬ ಒಳಗುದಿಯಲ್ಲೂ ವಿಷಾದ ಇಣುಕುತ್ತದೆ. ಯಾಕೆಂದರೆ ಲಂಕೇಶರು ಮೂಲತಃ ಕವಿಯಾಗಿರುವುದು. ಅಬ್ಬರದ ಬಂಡಾಯವಾದಿ ಲೇಖಕರು ಅವರಾಗಿದ್ದರೆ ಗ್ರಾಮದ ಶ್ರೀಮಂತ ಜಮೀನ್ದಾರನನ್ನು ವಿಷಾದದ ಕರುಣೆಯಿಂದ ಕಾಣಲಾಗುತ್ತಿರಲಿಲ್ಲ; ಅವನನ್ನು ಖಂಡಿಸಿ ಕಿರುಚಾಡಬಹುದಿತ್ತು.

ಬಡತನ, ಭ್ರಷ್ಟಾಚಾರ ಮತ್ತು ಕ್ರೌರ್ಯಗಳಿಂದ ತುಂಬಿದ ಭಾರತದ ಸದ್ಯದ ಸಾಮಾಜಿಕ ರಾಜಕೀಯ ವಾಸ್ತವವನ್ನು ಉಗ್ರವಾಗಿ ಟೀಕಿಸುವ ಲಂಕೇಶರು ಹಿಂದೆ ಮುಂದೆ ನೋಡಿಕೊಳ್ಳುತ್ತ ತಮ್ಮ ಶಕ್ತಿಯನ್ನು ವ್ಯಯಮಾಡಿಕೊಳ್ಳುವುದಿಲ್ಲವಾದ್ದರಿಂದ, ಭಾರತ ಪಾಶ್ಚಾತ್ಯ ಮಾದರಿಯಲ್ಲಿ ಆಧುನಿಕಗೊಳ್ಳುವ ಅವಸರದ ಪ್ರಕ್ರಿಯೆ ಅವರನ್ನು ತಾತ್ವಿಕವಾಗಿ ಬಾಧಿಸಿದಂತೆ ಕಾಣುವುದಿಲ್ಲ. ಅವರ ಎಲ್ಲ ಬರವಣಿಗೆಯ ಸದ್ಯತನದ ಶಕ್ತಿಯೇ, ಮತ್ತು ಅಂಥ ತತ್ಪರತೆಯ ನೈತಿಕತೆಯೇ ನಮಗೆ ಮುಖ್ಯವಾಗಿ ಬಿಡುತ್ತದೆ. ಹೀಗಾಗುವುದರಿಂದ ಒಟ್ಟಿನಲ್ಲಿ ಲಂಕೇಶರು ಪಾಶ್ಚಾತ್ಯ ಮಾದರಿಯ ಆಧುನಿಕದ ಬೆಂಬಲಿಗರಂತೆಯೇ ಕಾಣುತ್ತಾರೆ; ವಿಪರ್ಯಾಸವಾಗಿ ಕಾಣುವುದಾದರೂ ಇನ್ನೊಂದು ಮಾತು ಇಲ್ಲಿ ಸೇರಿಸಬೇಕು; ಆರ್ಷ ಸಂಪ್ರದಾಯದಿಂದ ಪ್ರೇರಿತರಾದ ಅಡಿಗರೂ ಯೂರೋಪಿಗೆ ಮನಸೋತವರೇ – ಲಂಕೇಶರಂತೆ.

ಮೇಲಿನ ಮಾತುಗಳನ್ನು ಹೇಳುತ್ತಿದ್ದಂತೆಯೇ ಹಾಗೆ ಹೇಳುವುದು ಅಷ್ಟು ಸರಿಯಲ್ಲವೆನ್ನಿಸುತ್ತದೆ –  ಗಾಂಧಿ  ಮತ್ತು ಲೋಹಿಯಾ ಬಗ್ಗೆ ಲಂಕೇಶರಿಗಿರುವ ಒಲವನ್ನು ನೆನೆದಾಗ; ಅವರ ಕಥೆ ಕಾದಂಬರಿಗಳಲ್ಲಿ ಇಣುಕುವ ವಿಷಾದ ನೆನೆದಾಗ; ಅವರ “ಅವ್ವ” ಪದ್ಯ ನೆನೆದಾಗ; ಹಾಗೆಯೇ ಅಡಿಗರ ಈ ಸಾಲುಗಳನ್ನು ನೆನೆದಾಗ:

ಆದರೂ ಫರಂಗಿರೋಗ ತಗುಲದ ಹಾಗೆ
ಉಳಿಸು ಪೂರ್ವಾರ್ಜಿತವಾದ ರತಿ ವಿವೇಕದ ಶಿಖೆಯ.”

ಯಾಕೆಂದರೆ ನಾವು ಇಲ್ಲಿ ಗಮನಿಸುತ್ತಿರುವುದು ಸರಳಗೊಳಿಸಲಾಗದ ಸೃಜನಶೀಲ ಲೇಖಕರನ್ನು.

ಲಂಕೇಶರನ್ನು ಈ ಚರ್ಚೆಯಲ್ಲಿ ಬಳಸುವುದು ಕಷ್ಟವಾದರೆ, ಕಂಬಾರರನ್ನು ಬಳಸುವುದು ಇನ್ನೂ ಕಷ್ಟ. ಅವರು ಚಂದ್ರಗುತ್ತಿಯ ಆಚರಣೆಗಳ ಲೋಕದಿಂದಲೇ ಉದ್ಭವವಾಗಿ ಬಂದವರು ಎನ್ನಿಸುತ್ತದೆ. ಕನ್ನಡದ ಬೇರೆ ಯಾವ ಲೇಖಕನ ಬಗ್ಗೆಯೂ ಪ್ರಾಯಶಃ ಹೀಗೆ ಹೇಳುವಂತಿಲ್ಲ. ಆದರೆ ಚಂದ್ರಗುತ್ತಿಯ ಲೋಕದಲ್ಲೇ ತನ್ಮಯನಾಗಿ ಕಂಬಾರರು ಉಳಿದಿದ್ದರೆ ಅವರು ನಮ್ಮ ಲೋಕದ ಒಬ್ಬ ಮಹತ್ವದ ಲೇಖಕರಾಗುತ್ತಿರಲಿಲ್ಲ. ಆಧುನಿಕತೆ ಅವರನ್ನು ಒಡೆದು ಹೊರಗೆ ತಂದಿದೆ, ವಿಚಾರಶೀಲ ಪ್ರಜ್ಞಾವಂತರನ್ನಾಗಿ ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಅವರು ಬೆಳೆದು ಲೇಖಕರಾದ ಕ್ರಮವನ್ನು ಅವರ ಬಾಯಿಯಿಂದಲೇ ಕೇಳಬೇಕು. ನಾನು ಇಲ್ಲಿ ಸುತ್ತಿ ಬಳಸಿ ಹೇಳುತ್ತಿರುವುದನ್ನೆಲ್ಲ ಅವರು ರೂಪಕಗಳಲ್ಲಿ ನಮಗೆ ಹೊಳೆಯಿಸಿಬಿಡುತ್ತಾರೆ. ಈ ರೂಪಕ ಶಕ್ತಿಯನ್ನು ಅವರಿಗೆ ಕೊಟ್ಟಿದ್ದು ವಿಶ್ಲೇಷಣಾತ್ಮಕವಾದ ಆಧುನಿಕತೆಯಲ್ಲ –  ಅವರ ಜಾನಪದ ಆಚರಣೆಗಳ ಲೋಕ. ಆದರೆ ಈ ಲೋಕವನ್ನು ಅವರು ಪ್ರಜ್ಞಾವಂತರಾಗಿ ಕಾಣುವುದಕ್ಕೆ ಕಾರಣ ಅವರನ್ನು ತಟ್ಟಿದ ಆಧುನಿಕತೆ.

ಕನ್ನಡದಲ್ಲಿ ಇದೊಂದು ವಿಶೇಷ. ಯಾಕೆಂದರೆ ಇದು ಕನ್ನಡ ಭಾಷೆಯಿಂದಾಗಿಯೇ ಹುಟ್ಟಿಕೊಂಡ ವಿಶೇಷ. ಕುವೆಂಪು ಇಂಗ್ಲಿಷಿನಲ್ಲಿ ತಾನು ಬರೆಯಬಲ್ಲೆನೆಂದು ತಿಳಿದು ಪ್ರಾರಂಭದ ತಮ್ಮ ಕವನಗಳನ್ನು ಬರೆದವರು. ಅವರು ಇಂಗ್ಲಿಷ್ ವಿದ್ಯಾಭ್ಯಾಸದಿಂದ ಏನನ್ನು ಪಡೆದರು ಎಂಬುದಕ್ಕಿಂತ ಮುಖ್ಯವಾದ್ದು: ಅವರು ಕನ್ನಡದಲ್ಲಿ ಬರೆಯದಿದ್ದರೆ ಕಾನೂರು ಹೆಗ್ಗಡಿತಿಯನ್ನು ಮೂವ್ವತ್ತರ ದಶಕದಲ್ಲಿ ಖಂಡಿತ ಬರೆಯುತ್ತಿರಲಿಲ್ಲ ಎಂಬುದು. ಕಂಬಾರರು ಆಧುನಿಕತೆಯಿಂದ ಈಗಿನ ಬರಹಗಾರರು ಆದರು ಎನ್ನುವಾಗ, ಜಾನಪದ ಆಚರಣೆಗಳ ಲೋಕವನ್ನು ಬಳಸುತ್ತಲೇ ಅವರು ಬೆಳೆಯುವ ಅಗತ್ಯ ಬಂದದ್ದು ಅವರು ಕನ್ನಡದಲ್ಲಿ ಬರೆಯುವುದರಿಂದ. ಹಾಗೆಯೇ ಸಂಸ್ಕೃತದಿಂದಲೂ ಇಂಗ್ಲಿಷಿನಿಂದಲೂ ಬೆಳೆದ ಮನಸ್ಸಿನ ಬೇಂದ್ರೆಯವರೂ ಪ್ರಾರಂಭದಲ್ಲಿ ಇಂಗ್ಲಿಷ್‌ನಲ್ಲಿ ಕವನ ಬರೆದವರೇ. ಆದರೆ ಇವರ ಸ್ಮೃತಿಯಲ್ಲಿ ದಟ್ಟವಾಗಿ ಬೇರೂರಿದ ಜಾನಪದವನ್ನು ಒಳಗೊಂಡಂತೆ ಅವರು ಸೃಷ್ಟಿಸುವಂತೆ ಮಾಡಿದ್ದು ಕನ್ನಡ ಭಾಷೆ. ಚಂದ್ರಗುತ್ತಿಯಲ್ಲಿ ಪರವಶವಾಗುವ ಆಚರಣೆಗಳ ಲೋಕ ಕೂಡ ನಮ್ಮ ಸೃಜನಶೀಲತೆಯ ತವರಾಗಿದೆ ಎಂದು ತಿಳಿದೊಡನೆಯೇ ನಮ್ಮ ಅನಿವಾರ್ಯ ಆಧುನಿಕತೆ ಸಂದಿಗ್ಧಗೊಳ್ಳುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ವೈದಿಕ ಮಡಿವಂತಿಕೆಯನ್ನೂ ಜಾನಪದ ಆಚರಣೆಗಳ ಪರವಶತೆಯನ್ನೂ ಒಡೆದುಕೊಂಡು ಹೊರಬರದ ಲೇಖಕರೂ ನಮ್ಮಲ್ಲಿ ಇಲ್ಲ; ಹಾಗೆಯೇ ಪಾಶ್ಚಾತ್ಯ ಆಧುನಿಕತೆಯನ್ನು ಅನುಮಾನಿಸದ ಲೇಖಕರೂ ನಮ್ಮಲ್ಲಿ ಇಲ್ಲ. ತಾನು ಹಣೆಯ ಮೇಲೆ ಧರಿಸುವ ನಾಮದ ಮುಖೇನ ಇಡೀ ಪಾಶ್ಚಾತ್ಯ ಸಂಸ್ಕೃತಿಯನ್ನು ಹೊರಗಿಟ್ಟಿದ್ದೇನೆ ಎಂದು ಹಿರಿಯ ಕವಿ ಪುತಿನ ಹೇಳಿದ್ದರೆಂದು ನಾನು ಕೇಳಿದ್ದೇನೆ.

ಕಾರಂತರಿಗೆ ಹಿಂದಿರುಗಿ ಒಂದು ಮಾತು ಹೇಳಬೇಕು. ಅವರ ಮರಳಿ ಮಣ್ಣಿಗೆಯ ಗ್ರಾಮೀಣ ಶಾಂತಿಯನ್ನು ನಾಶಮಾಡುವ ಪ್ರೇರಣೆ ಅವರ ಗ್ರಾಮೀಣ ಪ್ರಪಂಚದಲ್ಲೇ ಇದೆ. ಮರಳಿ ಮಣ್ಣಿಗೆಯ ಪ್ರಪಂಚದ ನೈತಿಕ ಮೌಲ್ಯಗಳೆಲ್ಲವೂ ಹುಟ್ಟಿಕೊಳ್ಳುವುದು ಕೇವಲ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಮಾತ್ರ ಸಾಕಾಗುವಂತಹ ವ್ಯವಸಾಯ ಮೂಲವಾದ ಆರ್ಥಿಕ ವ್ಯವಸ್ಥೆಯಲ್ಲಿ. ಈ ವ್ಯವಸ್ಥೆಯಲ್ಲಿದ್ದು ಎರಡು ಹೊತ್ತಿನ ಊಟಕ್ಕಾಗಿ ಹೋರಾಡುವ ಮಡಿವಂತ ತಂದೆಯೇ ತನ್ನ ಮಗ ಇಂಗ್ಲಿಷ್‌ ಕಲಿತು ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸುತ್ತಾನೆ. ತನ್ನಂತೆ ತನ್ನ ಮಗ ಪುರೋಹಿತವಾಗುವುದು ಅವನಿಗೆ ಬೇಕಾಗಿಲ್ಲ. ಆದರೆ ಓದಲೆಂದು ಪೇಟೆ ಸೇರುವ ಕೆಟ್ಟ ಚಾಳಿಗಳಿಗೆ ಬಿದ್ದು ಆಲಸ್ಯದ ಜೀವಿಯಾಗುತ್ತಾನೆ. ಮೂರನೆಯ ತಲೆಮಾರಿನ ಆಧುನಿಕ ಮಾತ್ರ, ಸಮಾಜೋದ್ಧಾರದ ಕೆಲಸದಲ್ಲಿ ಭಾಗಿಯಾಗಲೆಂದು ಹಳ್ಳಿಗೆ ಹಿಂದಿರುಗಲು ನಿರ್ಧರಿಸುತ್ತಾನೆ. ಅವನಿಗೆ ಹಳ್ಳಿ ಜೀವನಕ್ಕಾಗಿ ಹೋರಾಡಲೆಂದು ಇರುವ ಸ್ಥಳ ಮಾತ್ರವಲ್ಲ; ಅದೊಂದು ನಿಸರ್ಗದ ಸೌಂದರ್ಯವನ್ನು ಸವಿಯುವ ತಾಣ.

ಪಾಶ್ಚಾತ್ಯ ವೈಜ್ಞಾನಿಕ ದೃಷ್ಟಿಯ ಆಧುನಿಕತೆಗೆ ಕಾರಂತರು ಒಲಿದವರು ಎಂದು ಎನ್ನಿಸುವಾಗಲೂ ನಾವು ಗಮನಿಸಬೇಕಾದ್ದು; ಅವರ ನೈತಿಕ ಮಾನವೀಯ ಮೌಲ್ಯಗಳ ಕಲ್ಪನೆ ಗ್ರಾಮೀಣ ಜನಪದದಲ್ಲಿ ಬೇರೂರಿದ್ದು ಎಂಬುದು. ಅವರ ಕಾದಂಬರಿಗಳಲ್ಲಿ ನಮಗೆ ಬಹಳ ಇಷ್ಟವಾಗುವ ಪಾತ್ರಗಳೆಲ್ಲವೂ ಇನ್ನೂ ಆಧುನಿಕತೆಯ ಪ್ರೇರಣೆಗೆ ಒಳಗಾಗದವರು. ಇದಕ್ಕೆ ಅಲ್ಲಿ ಇಲ್ಲಿ ವಿನಾಯಿತಿ ಇದ್ದರೂ, ನಮ್ಮನ್ನು ಆಳವಾಗಿ ಕಲುಕುವ ಪಾತ್ರಗಳೆಂದರೆ ದೈವದಲ್ಲಿ ನಂಬಿ ತಮ್ಮ ಹೋರಾಟದ ಬದುಕನ್ನು ಸಹಿಸಿ ನಿಧಾನವಾಗಿ ಪಕ್ವವಾಗುವ ಅವರ ಸರಳ ಜೀವನದ ಮುದುಕಿಯರು. ಮರಳಿ ಮಣ್ಣಿಗೆ ಲಕ್ಷ್ಮೀನಾರಾಯಣನಾದರೊ ಗ್ರಾಮೀಣ ಮಡಿವಂತ ತಂದೆಯ ಬಯಕೆಯ ಫಲವಾಗಿಯೇ ತಂದೆಯ ಲೋಕಕ್ಕೆ ಅನ್ಯನಾದವನು, ದುಡುಕುವವನು.

ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬಂದು ಆಧುನಿಕ ನಾಗರಿಕತೆಯ ಪ್ರೇರಣೆಗಳಿಗೆ ಒಡ್ಡಿಕೊಂಡ ನಮ್ಮೆಲ್ಲರನ್ನೂ ಲಕ್ಷ್ಮೀನಾರಾಯಣನ ಪಾತ್ರ ಬಾಧಿಸಿರುತ್ತದೆ. ತಾನು ಕಂಡದ್ದನ್ನು ಅನುಭವಿಸಿದ್ದನ್ನು ಯಥಾವತ್ತಾಗಿ ಬರೆಯುವ ಕಾರಂತರು ಇದು ಯಾಕೆ ಹೀಗಾಗುತ್ತದೆ ಎಂಬ ತಾತ್ವಿಕ ಪ್ರಶ್ನೆಯನ್ನು ತಾವೇ ಕೇಳಿಕೊಳ್ಳುವಂತೆ ತೋರುವುದಿಲ್ಲ. ಸ್ವತಃ ತಂದೆಯೇ ಯಾಕೆ ತನ್ನ ಗ್ರಾಮೀಣ ಬದುಕಿನ ನಿಶ್ಚಿತ ಮೌಲ್ಯಗಳಿಂದ ಮಗನ ಮುಖಾಂತರ ಹೊರಬರಲು ಬಯಸಬೇಕು? ಅಂಥ ಪ್ರೇರಣೆಗಳು ಯಾಕೆ ಶಾಂತವಾದ ಜೀವನವನ್ನು ಒಳಗಿಂದಲೇ ಕೆದಕಬೇಕು ? ವಾಸ್ತವವಾದಿ ಶೈಲಿಯಲ್ಲಿ ತಮ್ಮ ಅತ್ಯುತ್ತಮ ಒಳನೋಟಗಳನ್ನು ಕೊಡುವ ಕಾರಂತರು ಕಂಡದ್ದನ್ನು ಕಂಡಷ್ಟು ಮಾತ್ರ ಹೇಳಬೇಕೆಂಬ ತಮ್ಮ ವ್ರತ ಬಿಟ್ಟು ದಾರ್ಶನಿಕ ಕಾಣ್ಕೆಗೆ ಕೈ ಒಡ್ಡುವವರಲ್ಲ. ಈ ಅತೃಪ್ತಿಯೇ ನನ್ನ ಹಾಗಿನ ಲೇಖಕರನ್ನು ಕಾವ್ಯಗಂಧಿಯಾದ ಕಥನ ಕ್ರಮಕ್ಕೆ ಒಲಿಯುವಂತೆ ಮಾಡಿರಬಹುದು.

ಈ ಶತಮಾನದ ಪ್ರಾರಂಭದಲ್ಲಿ ಆಧುನಿಕ ಜಗತ್ತಿನ ವ್ಯವಸ್ಥೆಯನ್ನೂ, ಕೈಗಾರಿಕಾ ಕ್ರಾಂತಿಯನ್ನೂ ಪ್ರಪಂಚದ ಎಲ್ಲ ಮನುಷ್ಯರಿಗೂ ಕೆಡುಕೆಂದು ಕಂಡುಕೊಂಡ ದ್ರಷ್ಟಾರರಾಗಿ ನಮಗೆ ಗಾಂಧೀಜಿ ಕಂಡರೂ, ಬ್ರಿಟೀಷರ ಸುಧಾರಣಾತ್ಮಕವಾದ ಆಡಳಿತದಿಂದ ನಮಗೆ ಒಳಿತಾಗಬಹುದೆಂಬ ಆಶಯವನ್ನು, ಅಥವಾ ಭ್ರಮೆಯನ್ನು ಉಳಿಸಿಕೊಂಡೇ ಅವರು ಬ್ರಿಟೀಷರ ವಿರುದ್ಧ ಅಹಿಂಸಾತ್ಮಕವಾದ ಸತ್ಯಾಗ್ರಹ ಹೂಡಿದ್ದರು. ಆ ಕಾಲದಲ್ಲಿ ನಾವು ಬದುಕಿದ್ದರೆ ನನ್ನ ಪ್ರಾಯದ ಲೇಖಕರೂ ಸ್ವಲ್ಪ ಆಚೆ ಅಥವಾ ಸ್ವಲ್ಪ ಈಚೆ ನಿಂತು ಗಾಂಧೀಜಿಯನ್ನು ಒಪ್ಪಿಕೊಳ್ಳುತ್ತಿದ್ದೇವೆಂದು ನನಗೆ ಅನ್ನಿಸುತ್ತದೆ. ನಮ್ಮ ಕಲ್ಯಾಣಕ್ಕೆ ಪಾಶ್ಚಿಮಾತ್ಯರು ತಮ್ಮ ಕೈಗಾರಿಕಾ ಕ್ರಾಂತಿಯ ಮುಖೇನ ತಂದು ಆಧುನಿಕತೆಯನ್ನು ಸಾರಾಸಗಟಾಗಿ ಇವತ್ತಿಗೂ ಯಾವ ಪ್ರಜ್ಞಾವಂತ ಭಾರತೀಯನೂ ವಿರೋಧಿಸಿದ್ದು ಕಾಣುವುದಿಲ್ಲ. ಆದರೆ ಗಾಂಧೀಜಿಯವರು ತಮ್ಮ ‘ಹಿಂದ್ ಸ್ವರಾಜ್’ ಬರೆದು ಸುಮಾರು ನಾಲ್ಕು ದಶಕಗಳಾದ ಮೇಲೆ ಬ್ರಿಟೀಷರ ಬಗ್ಗೆ ಯಾವ ಭ್ರಮೆಯನ್ನೂ ಇಟ್ಟುಕೊಳ್ಳದವರಂತೆ “ಭಾರತ ಬಿಟ್ಟು ತೊಲಗಿ” ಎಂದು ೧೯೪೨ರಲ್ಲಿ ಘೋಷಿಸಿದರು. ಆದರೆ ಪಾಶ್ಚಿಮಾತ್ಯ ಆಧುನಿಕ ನಾಗರಿಕತೆಯನ್ನು ಹೃತ್ಪೂರ್ವಕ ಒಪ್ಪಕೊಂಡಿದ್ದ ನೆಹರೂರನ್ನು ತನ್ನ ಉತ್ತರಾಧಿಕಾರಿ ಎಂದು ಕರೆದರು.

ಕೈಗಾರಿಕಾ ಕ್ರಾಂತಿಯನ್ನು ಸಾರಾಸಗಟಾಗಿ ವಿರೋಧಿಸಿದ್ದ ಇಂಗ್ಲಿಷ್ ಕವಿ ಬ್ಲೇಕ್‌ ಯಾವ ಸಂದಿಗ್ಧಕ್ಕೂ ಎಡೆಯಿಲ್ಲದಂತೆ ಆಧುನಿಕ ನಾಗರಿಕತೆಗೂ ವಿಶ್ಲೇಷಣಾತ್ಮಕ ವಿಚಾರವಾದಕ್ಕೂ ವಿರೋಧಿಯಾಗಿದ್ದ. ಪರಮಾತ್ಮನಿಗೆ ತನ್ನನ್ನು ಅರ್ಪಣೆ ಮಾಡಿಕೊಂಡರೂ ಕ್ರಿಶ್ಚಿಯನ್‌ ಮತೀಯರು ಒಪ್ಪಲಾರದ ದಾರ್ಶನಿಕ ಕವಿ ಅವನು. ಹೀಗೆ ಅರ್ಪಿಸಿಕೊಂಡ ಸ್ಥಿತಿಯಲ್ಲಿ ದೇವರ ಸಾಕ್ಷಿಯಲ್ಲಿ ನಮ್ಮ ಬಸವ, ಅಲ್ಲಮ, ಅಕ್ಕ, ತುಕಾರಾಂ, ಕಬೀರ್‌ದಾಸ ಮಾತಾಡುತ್ತಾರೆ. ನಾನು ಇಲ್ಲಿ ಎತ್ತಿಕೊಂಡ ಯಾವ ಕನ್ನಡದ ಲೇಖಕನಿಗೂ ಹೀಗೆ ವಿಚಾರಾತ್ಮಕ ಆಧುನಿಕತೆಯನ್ನೂ ಅದನ್ನು ಹುಟ್ಟು ಹಾಕಿದ ಪಶ್ಚಿಮದ ತಾತ್ವಿಕತೆಯನ್ನೂ ಅಮೂಲಾಗ್ರವಾಗಿ ನಿರಾಕರಿಸುವ ದೇವ ತತ್ಪರತೆಯಿಲ್ಲ. ಅದೊಂದು ಕೊರತೆಯೆಂದೇನೂ ನಾನು ಟೀಕಿಸುತ್ತಿಲ್ಲ. ಯಾಕೆಂದರೆ ನನ್ನ ಬಗೆಯ ಮನಸ್ಸಿಗೆ ಅಂಥ ಅಧಿಕಾರವಿಲ್ಲ.

* * *

ವಸಾಹತುಶಾಯಿಯ ಫಲವಾದ ನಮ್ಮ ಮನಸ್ಸು ಲೌಕಿಕ ವ್ಯವಹಾರದಲ್ಲಿ ಪ್ರಾಪಂಚಿಕ ಯಶಸ್ಸಿಗಾಗಿ ಮಾಡುವ ಆಯ್ಕೆ ಒಂದಾಗಿ, ಭಾವುಕವಾಗಿ ಹಳಹಳಿಕೆಯಲ್ಲಿ ಮಾಡುವ ಆಯ್ಕೆ ಇನ್ನೊಂದಾಗಿ ಇಬ್ಬಗೆಯಲ್ಲಿ ವರ್ತಿಸುತ್ತ ಗೊಂದಲಮಯವಾಗಿದೆ. ಈ ಗೊಂದಲ ಹಿಪೋಕ್ರಸಿಗೂ ಕಾರಣವಾಗಬಹುದು; ಅಥವಾ ಚಾರಿತ್ರಿಕವಾಗಿ ಅನಿವಾರ್ಯವಾಗಿ ಬಿಟ್ಟ ಒಂದು ಪಾಡಿನ ಸೂಕ್ಷ್ಮ ಅರಿವೂ ಆಗಿರಬಹುದು. ಇಂಡಿಯಾ ಮತ್ತು ಭಾರತ ಎಂದು ಎರಡು ದೇಶಗಳೇ ಇಲ್ಲಿವೆ ಎಂಬುದು ನಿಜ. ಚಂದ್ರಗುತ್ತಿ ಪ್ರಕರಣದಲ್ಲಿ ಭಾರತವನ್ನು ಇಂಡಿಯಾ ಎದುರಾಯಿತು. ಆಧುನಿಕವಾದ ಇಂಡಿಯಾ ಭಾರತದಿಂದ ಬಹುದೂರ ಹೋಗುತ್ತಿದೆ; ಯಾಕೆಂದರೆ ಅದಕ್ಕೆ ಕಾರಣ, ಪ್ರಜ್ಞೆಯ ವಿಕಾಸ ಮಾತ್ರವಲ್ಲ, ಹಾಗಾಗುವುದು ಇಂಡಿಯಾಕ್ಕೆ ವ್ಯಾವಹರಿಕವಾಗಿ ಲಾಭದಾಯಕವಾಗಿದೆ ಎಂಬುದು ಮುಖ್ಯ ಕಾರಣ. ನವ ವಸಾಹತುಶಾಹಿಯ ಈ ಕಾಲದಲ್ಲಿ ಈ ಬಗ್ಗೆ ನಾವು ಮುಕ್ತ ಶೋಧನೆಗೆ ತೊಡಗಬೇಕಾಗಿದೆ.

ಜೋಸೆಫ್ ಕಾನ್ರಾಡ್‌ನ ಒಂದು ಕಥೆಯಿದೆ. ಅದರಲ್ಲಿ ಕ್ರುಟ್ಸ್‌ಎಂಬ ಆದರ್ಶ ಜೀವಿ ಕತ್ತಲಿನ ಖಂಡವಾದ ಆಫ್ರಿಕಾದಲ್ಲಿ ಕ್ರಿಶ್ಚಿಯನ್‌ಧರ್ಮವನ್ನು ಬಿತ್ತಲೆಂದು ಹೋಗುತ್ತಾನೆ. ಸಮಾಜೋದ್ಧಾರದ ಈ ಆದರ್ಶದ ಜೊತೆ ವ್ಯಾಪಾರದ ಒಂದು ಉದ್ದೇಶವೂ ಅವನಿಗಿರುತ್ತದೆ. ಅದು, ಆಫ್ರಿಕಾದ ಆನೆಗಳನ್ನು ಕೊಂದು ದಂತವನ್ನು ಪಡೆದು ಯೂರೋಪಿಗೆ ಮಾರುವುದು. ಬಲಶಾಲಿಗಳಾಗಿ ಬೆಳೆದವರ ಸ್ವಾರ್ಥ ಸಾಧನೆಗೆ ಒಂದು ಹಿರಿಯ ಆದರ್ಶದ ಬೆಂಬಲವೂ ಇರುತ್ತದೆ. ಎಂಬುದು ಇಡೀ ಮಾನವ ಚರಿತ್ರೆಯಲ್ಲಿ ನಮಗೆ ಗೋಚರಿಸುತ್ತದೆ. ಮಿಲ್‌ನಂತಹ ಉದಾರವಾದಿಯೂ ಭಾರತವನ್ನು ಆಧುನಿಕ ನಾಗರಿಕ ದೇಶವನ್ನಾಗಿ ಮಾಡಲು ಬ್ರಿಟೀಷರು ಆಳುವುದು ಅಗತ್ಯವೆಂದು ತಿಳಿದಿದ್ದ. ಹೀಗೆ ತಿಳಿಯುವಾಗ ಬ್ರಿಟೀಷರು ಇನ್ನಷ್ಟು ಬಲಶಾಲಿಗಳಾಗಲು ಭಾರತವನ್ನು ಶೋಷಣೆ ಮಾಡುತ್ತಿದ್ದುದನ್ನು ಅವನು ಕಂಡೂ ಕಾಣದಂತೆ ಇದ್ದ ಲೆನಿನ್‌ನ ರಷ್ಯಾ ತನ್ನ ಕ್ರಾಂತಿಕಾರದ ಆದರ್ಶದಲ್ಲಿ ಸೋವಿಯತ್‌ ಒಕ್ಕೂಟ ಕಟ್ಟಿದ್ದರ ಹಿಂದೆಯೂ ತನ್ನನ್ನು ವಿಸ್ತರಿಸಿಕೊಳ್ಳುವ ಲಾಭದ ಹೊಂಚಿಕೆಯಿದೆ. ಬೆತ್ತಲೆಸೇವೆ ನಿಲ್ಲದ ಹೊರತು ಆಧುನಿಕ ವ್ಯವಸ್ಥೆಯ ಸರಕುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚುವುದಿಲ್ಲ –  ಅಲ್ಲವೇ ?

ಕಾನ್ರಾಡ್‌ನ ಕ್ರುಟ್ಸ್‌ಹೀಗೆಯೇ ‘ಧೀರೋದಾತ್ತ’ನಾದ ಆದರ್ಶ ಪುರುಷ. ಆದರೆ ಆಫ್ರಿಕಾದ ಕಾಡಿನ ಜನರ ನಡುವೆ ಬದುಕಿದ್ದು ಆತನೂ ಕ್ರಮೇಣ ಅವರಂತೆಯೇ ಆಗಿ ಬಿಡುತ್ತಾನೆ; ಆಫ್ರಿಕಾದ ಜನರಿಗೆ ಆರೋಗ್ಯವಾದ್ದು ಇವನನ್ನು ವ್ಯಾಪಿಸುವ ವಿಷವಾಗುತ್ತದೆ. ಕೊನೆಯಲ್ಲಿ ಈ ಆದರ್ಶ ಪುರುಷ “ಈ ಜಂತುಗಳನ್ನು ಸರ್ವನಾಶ ಮಾಡಿ” ಎಂದು ಕಿರುಚಿಕೊಳ್ಳುತ್ತ ಸಾಯುತ್ತಾನೆ.

ಕ್ರುಟ್ಸ್‌ನಂತೆ ನಮ್ಮ ಕಾಲದಲ್ಲಿ ಚೀನೀಯರು ಟಿಬೆಟ್ಟಿನಲ್ಲಿದ್ದಾರೆ; ರಷ್ಯನ್ನರು ಆಫ್ಘಾನಿಸ್ತಾದಲ್ಲಿದ್ದಾರೆ. ರಷ್ಯನ್ನರು ಇರಗೊಡದ ಜಾಗದಲ್ಲೆಲ್ಲ ಅಮೆರಿಕನ್ನರು ಇದ್ದಾರೆ. ಭಾರತದ ಸದ್ಗೃಹಸ್ಥರಾದ ನಾವು ಇವರಿಗಿಂತೇನೂ ಬೇರೆಯಲ್ಲ –  ಬಡಜನ ಸಮುದಾಯದ ದೃಷ್ಟಿಯಿಂದ. ಗಮನಿಸಬೇಕಾದ ವಿಷಯವೆಂದರೆ ಅರಣ್ಯವಾಸಿಯಾದ ಫ್ರೈಡೇನನ್ನು ಸಾಹಸಪ್ರಿಯ ರಾಬಿನ್‌ಸನ್‌ಕ್ರೂಸೋ ಬೆಟ್ಟಿಯಾಗುವುದು ಈ ಪ್ರಪಂಚದ ಮೊದಲ ಕಾದಂಬರಿಕಾರರಲ್ಲಿ ಒಬ್ಬನಾದ ಡೇನಿಯಲ್‌ ಡಿಫೋನ ವಸ್ತುವಾಗಿದೆ. ಅರಣ್ಯದ ಅನಂತಕಾಲದ ಗಾಢ ಮೌನವನ್ನು ಕ್ರೂಸೋ ತನ್ನ ಕೋವಿಯಿಂದ ಗುಂಡು ಹಾರಿಸಿ ದಿಗ್ಭ್ರಮೆಗೊಳಿಸುವುದು ಈ ಕಾದಂಬರಿಯಲ್ಲಿ ಆಧುನಿಕತೆಯ ಹಿಂಸಾತ್ಮಕ ಪ್ರವೇಶಕ್ಕೆ ಸಂಕೇತವಾಗಿದೆ.

ಇನ್ನೂ ಹೆಚ್ಚು ನಾನು ಹೇಳ ಹೊರಟರೆ ನನ್ನ ಅರಿವನ್ನು ಮೀರಿ ಮಾತಾಡಬೇಕಾಗುತ್ತದೆ. ಪಾಶ್ಚಾತ್ಯ ಆಧುನಿಕತೆ ನನಗೆ ಕಲಿಸಿದ ಅನುಮಾನವಿಲ್ಲದೆ ನಾನು ಕಥೆಗಾರನಾಗುತ್ತಿರಲಿಲ್ಲ. ಆದರೆ ನನ್ನ ರೀತಿಯಲ್ಲಿ ನನಗೆ ಬರೆಯುವುದು ಸಾಧ್ಯವಾಗಿರುವುದು ಕೂಡ ಪಾಶ್ಚಾತ್ಯ ಆಧುನಿಕತೆಯ ಜೊತೆ ನನಗೆ ಜಗಳವಿರುವುದರಿಂದ.