ಕಥೆಯ ಹೆಸರು ‘ಅಣ್ಣಯ್ಯನ ಮಾನವಶಾಸ್ತ್ರ’. ನಾನು ಈ ಕಥೆಯ ಬಗ್ಗೆ ಮೀಟಿಂಗ್‌ನಲ್ಲಿ ಮಾತಾಡಿದ್ದರೆ ಅಲ್ಲಿರುವ ಮಾನವಶಾಸ್ತ್ರಜ್ಞರನ್ನು ಸ್ವಲ್ಪ ಯೋಚಿಸುವಂತೆ ಮಾಡಬಹುದಿತ್ತೇನೋ. ಆದರೆ ಅಂತಹ ಅನುಮಾನಗಳಿಗೂ ತಮ್ಮ ಶಾಸ್ತ್ರದಲ್ಲಿ ಎಡೆಮಾಡಿಕೊಡುವ ನಿಪುಣರು ಅವರಾದ್ದರಿಂದ ಅವರ ಮೇಲೆ ಈ ಕಥೆ ಯಾವ ಪ್ರಭಾವವನ್ನೂ ಮಾಡುತ್ತಿರಲಿಲ್ಲವೇನೋ? – ನನಗೆ ತಿಳಿಯದು. ರಾಮಾನುಜನ್‌ರ ಕವನಗಳ ಧಾಟಿಯಲ್ಲಿ ಕಾಣುವಂತೆ ಈ ಕಥೆಯ ನಿರೂಪಣೆಯೂ ತಗ್ಗಿದ ಧ್ವನಿಯದು; ಕುಶಾಲಿನದು. ಆದ್ದರಿಂದಲೇ ಆ ಕಥೆಯ ಕೊನೆ ಇದ್ದಕ್ಕಿದಂತೆ ದಿಗಿಲನ್ನು ಹುಟ್ಟಿಸುವಂಥಹದು. ಯಾವತ್ತೂ ಭಾರತದ ವಿಷಯದಲ್ಲಿ ಆಸಕ್ತಿಯನ್ನು ತೋರದ ಅಣ್ಣಯ್ಯ ಎಂಬುವವನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ‘ಚಿಕಾಗೋ’ಗೆ ಆರ್ಥಶಾಸ್ತ್ರಜ್ಞನಾಗಿ ಬಂದವನೇ, ಭಾರತವನ್ನು ಕುರಿತು ಅಮೇರಿಕನ್ನರು ಬರೆದ   ಯ್ಯಾಂಥ್ರಾಪೋಲಜಿ ಪುಸ್ತಕಗಳನ್ನು ದಾಹಪಟ್ಟವನಂತೆ ಓದಲು ತೊಡಗುತ್ತಾನೆ. ಅದೆಷ್ಟು ಆಸಕ್ತಿಯಲ್ಲಿ, ಅದೆಷ್ಟು ಸೂಕ್ಷ್ಮ ವಿವರಣೆಗಳನ್ನು ಗಮನಿಸಿ ಅಮೇರಿಕದ ವಿದ್ವಾಂಸರು ಭಾರತದ ಮತಾಚರಣೆಗಳ ಬಗ್ಗೆ ಅದೆಷ್ಟು ಚೆನ್ನಾಗಿ ಬರೆಯುತ್ತಾರೆಂದು ಅವನು ಮೆಚ್ಚಿಕೊಳ್ಳುತ್ತಾನೆ. ಫರ್ಗ್ಯುಸನ್‌ ಎಂಬ ಈಚಿನ ಒಬ್ಬ ವಿದ್ವಾಂಸನ ಪುಸ್ತಕವೊಂದು ಅವನನನ್ನು ಆಕರ್ಷಿಸುತ್ತದೆ. ಅಣ್ಣಯ್ಯನ ಮಡಿವಂತ ತಾಯಿತಂದೆಯರು ಮೈಸೂರಿನಲ್ಲಿದ್ದಾರೆ. ಸುಂದರರಾವ್‌ ಎಂಬ ಒಬ್ಬ ಬಂಧು ಹುಣುಸೂರಿನಲ್ಲಿ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದಾನೆ. ತನಗೆ ಹಲವು ದಾಖಲೆಗಳನ್ನು ಒದಗಿಸಿಕೊಟ್ಟ ಈ ಬಂಧುವಿಗೆ ಫರ್ಗ್ಯುಸನ್‌ ಕೃತಜ್ಞತೆ ಹೇಳಿರುವುದು ಅಣ್ಣಯ್ಯನ ಗಮನಕ್ಕೆ ಬರುತ್ತದೆ. ಅಣ್ಣಯ್ಯ ಕುತೂಹಲದಿಂದ ಓದಲು ತೊಡಗುತ್ತಾನೆ. ತಾನು ಬಲ್ಲ ಮನೆಗಳ ಮತ್ತು ಬೀದಿಗಳ ಚಿತ್ರಗಳನ್ನು ಅವನು ಕಸಿವಿಸಿಯ ಕುತೂಹಲದಲ್ಲಿ ನೋಡುತ್ತಾ ಹೋಗುತ್ತಾನೆ. ಪುಸ್ತಕದಲ್ಲಿ ಸುಡುತ್ತಿರುವ ಶವದ ಚಿತ್ರ ತನ್ನ ತಂದೆಯದೇ ಇರಬಹುದೇ? ದೂರ ಓದಲು ಹೋಗಿದ್ದ ತನ್ನಿಂದ ಕುಟುಂಬದವರು ಬಚ್ಚಿಟ್ಟಿರಬಹುದೇ? ಸುಂದರರಾವ್‌ ತೆಗೆದ ಚಿತ್ರವೇ ಅದಾಗಿರುತ್ತದೆ. ಅಣ್ಣಯ್ಯನಿಗೆ ಭಯವಾಗುತ್ತದೆ. ಪುಸ್ತಕ ಅವನ ಕೈತಪ್ಪಿ ಕೆಳಗೆ ಬೀಳುತ್ತದೆ. ಮತ್ತೆ ಪುಸ್ತಕವೆನ್ನತ್ತಿ ವೈಧವ್ಯದ ಬಗ್ಗೆ ಓದಲು ತೊಡುತ್ತಾನೆ. ಅಲ್ಲಿ ತಲೆ ಬೋಳಿಸಿದ ಕೆಂಪು ಸೀರೆಯಲ್ಲಿರುವ ತನ್ನ ತಾಯಿಯ ಚಿತ್ರವಿರುತ್ತದೆ. ಕೃತಜ್ಞತಾಪೂರ್ವಕವಾಗಿ ಫರ್ಗ್ಯುಸನ್‌ ಸುಂದರರಾವ್‌ನಿಂದ ಪಡೆದ ಚಿತ್ರವದು.

ಹಲವು ಹಂತಗಳಲ್ಲಿ ಈ ಕಥೆ ನಮ್ಮನ್ನು ಮುಟ್ಟುವುದರಿಂದ ಇದು ಅಣ್ಣಯ್ಯನ ವಿಶಿಷ್ಟ ದರುಂತವಾಗಿ ಮಾತ್ರ ಕಾಣುವುದಿಲ್ಲ. ಅಣ್ಣಯ್ಯ ನಮ್ಮ ಹಾಗೆ ಅಧುನಿಕವಾದ ಭಾರತೀಯ: ಪಶ್ಚಿಮದ ಮೋಹಕ್ಕೆ ವಶನಾದವನು. ತನ್ನ ಸಂಸ್ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ತಿಳಿಯದಿದ್ದರೂ ಬಾವುಕವಾಗಿ ಅದಕ್ಕೆ ಅಂಟಿಕೊಂಡವನು. ಸ್ವದೇಶದಲ್ಲಿದ್ದಾಗ ಅವನು ಭಾರತವನ್ನು ಇಷ್ಟಪಡುವುದಿಲ್ಲ; ಆದರೆ ವಿದೇಶಕ್ಕೆ ಹೋದಾಗ ನಮ್ಮೆಲ್ಲರಿಗೆ ಆಗುವಂತೆ ಅವನ ಭಾರತ ಪ್ರೀತಿ ಉದ್ಭವವಾಗುತ್ತದೆ. ಪೂರ್ವ ಮತ್ತು ಪಶ್ಚಿಮದ ಮುಖಾಮುಖಿ ಹೀಗೆ ಅಸಂಬದ್ಧ ವಿಕಾರಗಳಿಗೆ ಕಾರಣವಾಗುತ್ತದೆ. ನಿಜದಲ್ಲಿ ತಾನು ಕಳೆದುಕೊಂಡದ್ದನ್ನು ಮಾನವಶಾಸ್ತ್ರದ ಅಧ್ಯಯನದಿಂದ ಮರಳಿ ಪಡೆಯಲು ಅವನು ಪ್ರಯತ್ನಿಸುತ್ತಾನೆ. ಆದರೆ ಮಾನವಶಾಸ್ತ್ರವೇ ಒಂದು ಅಚ್ಚುಕಟ್ಟಿನ ತರ್ಕದ ಶಿಸ್ತಾದ್ದರಿಂದ ನಮಗೆ ಅನ್ಯವಾದ್ದನ್ನು ಅರಿಯಲಿಕ್ಕೆಂದು ಇರುವುದು. ನಮ್ಮದನ್ನೇ ನೋಡಲು ಅದನ್ನು ಬಳಸಿದಾಗ ಅದು ಆತ್ಮನಿಷ್ಠವಾಗಿ ಉಳಿಯಬೇಕಾದ ಸಂವೇದನೆಯ ನಿರಾಕರಣೆಯಾಗುತ್ತದೆ. ಮಾನವಶಾಸ್ತ್ರಜ್ಞನ ಕನಿಕರವಾಗಲೀ, ಕುತೂಹಲವಾಗಲೀ, ಅಪ್ಪಟವಾದ ಸಂಬಂಧದಿಂದ ಹುಟ್ಟಿಕೊಂಡಿದ್ದಲ್ಲ. ದೂರನಿಂತು ತಣ್ಣಗೆ ನೋಡುವದರಿಂದ ಉತ್ಪನ್ನವಾಗುವಂತಹುದು. ನಮಗಿಂತ ಕೆಳಗಿನವರೆಂದು ನಾವು ತಿಳಿದವರನ್ನು ಮೇಲೆ ನಿಂತು ಅಭ್ಯಾಸ ಮಾಡುವುದರ ಫಲವೇ ಮಾನವಶಾಸ್ತ್ರ. ಅಂದರೆ, ವಸಾಹತುಶಾಹಿಯ ಫಲವಾಗಿ ಹುಟ್ಟಿದ ಶಿಸ್ತು ಇದು.

ಮಾನವಶಾಸ್ತ್ರಜ್ಞನ ಕುತೂಹಲ ಮತ್ತು ವಸ್ತುನಿಷ್ಠೆಗಿಂತ ಸ್ತ್ರೀವಾದಿ ಚಳುವಳಿಗಾರಳ ಅಸಹನೆಯೇ ಹೆಚ್ಚು ನೈಜವೆಂದು ತಿಳಿಯುತ್ತ ನಾನು ಮೀಟಿಂಗ್‌ನಿಂದ ಹೊರಬಂದೆ. ಅಂದರೆ ಸ್ತ್ರೀವಾದಿಯ ಜೊತೆಯೂ ನಾನು ಭಿನ್ನಾಭಿಪ್ರಾಯವನ್ನು ಪಡೆದವನಾಗಿದ್ದೆ. ನಾನು ಅವರನ್ನು ಕೇಳಿದೆ – “ನಾವೂ ನೀವು ದುರದೃಷ್ಟವಶಾತ್‌ ಕಳೆದುಕೊಂಡಿರುವ ದೈವಿಕ ಶ್ರದ್ಧೆಯ ಉತ್ಕಟತೆಯನ್ನು ಆ ಬೆತ್ತಲೆಪೂಜೆಯವರಲ್ಲಿ ನೀವು ಯಾಕೆ ಕಾಣುವುದಿಲ್ಲ? ಅವರ ಪರವಶತೆ ನಿಮಗೆ ಯಾಕೆ ಬೆಲೆಯುಳ್ಳದ್ದು ಎನ್ನಿಸುವುದಿಲ್ಲ? ನಮಗೆ ಹೆಣ್ಣಿನ ಬೆತ್ತಲೆ ದೇಹ ಒಂದೋ ಕಾಮವನ್ನು ಕೆರಳಿಸುತ್ತದೆ; ಅಥವಾ ಒಬ್ಬ ಶಿಲ್ಪಿಯೋ, ಚಿತ್ರಕಾರನೋ ಅದನ್ನು ಬಿಡಿಸಿದರೆ ಕಲಾತ್ಮಕ ಅನುಭವ ಎನ್ನಿಸುತ್ತದೆ. ಆದರೆ ಬೆತ್ತಲೆಯಾಗಿ ಪೂಜಿಸುವವರಿಗೆ ಅದು ಕಲಾತ್ಮಕ ಅಭಿವ್ಯಕ್ತಿಯೂ ಅಲ್ಲ; ಕಾಮಪ್ರಚೋದಕವೂ ಅಲ್ಲ. ಇದಕ್ಕೆ ಏಕೆ ಭಾವನಾತ್ಮಕವಾಗಿ ನಾವು ಸ್ಪಂದಿಸುವುದಿಲ್ಲ? ಪ್ರಪಂಚದಲ್ಲಿ ಎಲ್ಲೂ ಇಲ್ಲದ್ದನ್ನು ಇಲ್ಲಿ ಕಾಣುತ್ತೇವೆ ಅಲ್ಲವೆ? ಬೆತ್ತಲೆದೇಹ ಪೂಜ್ಯವೆಂದು ಕಾಣುವುದು ಅಪರೂಪವಲ್ಲವೆ?”

ನನ್ನ ಗೆಳೆಯನೊಬ್ಬನಿಂದ ತನ್ನ ಹಳ್ಳಿಯಲ್ಲಿರುವ ಮುದುಕಿಯಾದ ದೊಡ್ಡಮ್ಮ ಈ ಬಗ್ಗೆ ಏನು ಹೇಳಿದರೆಂದು ಕೇಳಿಸಿಕೊಂಡಿದ್ದೆ. ಆಕೆಗೆ ಆರೋಗ್ಯಪೂರ್ಣವಾದ ಬೆತ್ತಲೆದೇಹಗಳು ಕತ್ತಿನಲ್ಲಿ ಹಾರಹಾಕಿ ನಡೆಯುತ್ತಿದ್ದಾಗ ದೇವತೆಗಳಂತೆ ಕಂಡಿದ್ದವಂತೆ. ಅಲ್ಲದೆ ಈ ಮೆರವಣಿಗೆಯಲ್ಲಿ ಹೋಗುವವರು ಯುವತಿಯರು ಮಾತ್ರವಲ್ಲ, ಅವರ ನಡುವೆ ಮುದುಕರು, ಮುದುಕಿಯರು ಮತ್ತು ಮಕ್ಕಳೂ ಇರುತ್ತಾರೆ. ಎಲ್ಲಾದರೂ ಯಾವಾಗಲಾದರೂ ಅವರು ಬೆತ್ತಲೆ ನಡೆಯುವವರಲ್ಲ – ಚಂದ್ರಗುತ್ತಿಯಲ್ಲಿ ಆ ದಿನ ಮಾತ್ರ ಬೆತ್ತಲೆ ನಡೆಯುವ ಅವರು, ಯಾವತ್ತೋ ಪೂರ್ವಕಾಲದಲ್ಲಿ ಜರುಗಿದ್ದನ್ನು ಸ್ಮರಿಸುತ್ತ ಪವಿತ್ರವೆಂದು ಬಗೆದು ಪುನರ್‌ನಟಿಸುವುದು.

ಸ್ತ್ರೀವಾದಿ ಕ್ರಿಯಾಶೀಲಗೆ ನನ್ನ ಭಾವನೆಗಳು ಕಾವ್ಯದ ಗುಂಗಿನವು ಎನ್ನಿಸಿರಬೇಕು, ಸಹಜವಾಗಿ, ನನ್ನ ಗೆಳೆಯ ದೇವನೂರ ಮಹಾದೇವ ನನ್ನ ಹಾಗೆ ಲೇಖಕ ಮಾತ್ರವಲ್ಲದೆ ದಲಿತರ ಸಂಘರ್ಷದಲ್ಲಿ ತೊಡಗಿದವರೂ ಆದ್ದರಿಂದ ನಾನು ಅವರ ಅಭಿಪ್ರಾಯಗಳನ್ನು ತಿಳಿಯಲು ಬಯಸುತ್ತೇನೆ. ದೇವನೂರು ಮಹಾದೇವ ದಲಿತರು ಇರುವ ಸ್ಥಿತಿಯನ್ನೂ ಮತ್ತು ಅವರಲ್ಲಿ ಆಗುತ್ತಿರುವ ಜಾಗೃತಿಯನ್ನೂ ಒಳಗಿನಿಂದ ತಿಳಿದು ಬರೆಯುವ ಲೇಖಕ, ಜೊತೆಗೆ ಸಮಾನತೆಗಾಗಿಯೂ ಸ್ವಮರ್ಯಾದೆಗಾಗಿಯೂ ದಲಿತರ ಹೋರಾಟದಲ್ಲಿ ಭಾಗಿಯಾದವರು. ಅವರ ಕಥೆಗಳು ದಲಿತರ ದೈನಿಕ ಆಚರಣೆಗಳನ್ನು ಗಾಢವಾದ ಕವಿಸಂವೇದನೆಯಿಂದ ಕಂಡು ಹೇಳುವುದರಿಂದ ಅವರಿಗೆ ದಲಿತರ ದುಃಖವೂ ಗೊತ್ತು, ಅವರ ಪ್ರಾಣಶಕ್ತಿಯಿಂದ ಹೊಮ್ಮುವ ಉತ್ಕಟತೆಯೂ ಗೊತ್ತು. ಅವರ ಕಲೆಯ ಯಶಸ್ಸಿಗೆ ಅವರ ಲಘು ಅನುಕರುಣೆಯ ಶೈಲಿಯೂ ಕಾರಣವಾಗಿರಬಹುದು. ಅವರ ನೀಳ್ಗತೆ ‘ಒಡಲಾಳ’, ಇಂತಹ ಯಶಸ್ಸಿಗೆ ಒಂದು ಮಾದರಿ ಕಥೆಯಾಗಿದೆ. ಹಸಿದ ಒಂದು ಇಡೀ ಕುಟುಂಬ ಕದ್ದು ತಂದ ಒಂದು ದೊಡ್ಡ ಚೀಲ ಕಡಲೆಕಾಯಿಯನ್ನು ಬೆಂಕಿಯ ಸುತ್ತು ಕೂತು ಖುಷಿಯಾಗಿ ಮಾತಾಡುತ್ತಾ ತಿಂದು ತೇಗುತ್ತದೆ. ತಪಾಸಣೆಗೆ ಮಾರನೆಯ ದಿನ ಬಂದ ಪೋಲೀಸರಿಗೆ ಒಂದು ಚೂರು ಸಪ್ಪೆಯೂ ಕಾಣದಂತೆ ಕಡಲೆಕಾಯಿಯನ್ನು ಧ್ವಂಸಮಾಡಿದ ಈ ಜನ ತಮ್ಮ ಹಸಿವಿನಲ್ಲೇ ತಮ್ಮ ಅಸಾಧಾರಣ ಕೌಶಲ್ಯವನ್ನೂ, ಕ್ರಾಂತಿಕಾರಕತೆಯಲ್ಲಿ ಬದಲಾಗುವ ಸಾಧ್ಯತೆಯನ್ನೂ ತೋರುತ್ತಾರೆ. ಕಳೆದುಹೋದ ಹುಂಜವನ್ನು ಹುಡುಕುತ್ತಾ ಹೋಗುವ “ಒಡಲಾಳ”ದ ಅಜ್ಜಿ ಕುಟುಂಬದ ಪಾಲನೆಯ ಮಹಾತಾಯಿಯಾಗಿ ಕಾಣುತ್ತಾಳೆ. ಅವಳ ಜಗಳಗಳು, ಅವಳ ರೋದನ, ಅವಳ ಬೈಗಳದ ಆಟೋಟೋಪ, ಅವಳು ಹೇಳುವ ಪುರಾಣ ಕಥೆಗಳು, ಅವಳು ಹಾಕುವ ಶಾಪಗಳು –  ಇವೆಲ್ಲದರ ನಡುವೆ ಅವಳು ಈ ಮಣ್ಣಿನ ಮಾತೃಪಾಲನೆಯ ಪ್ರತೀಕವಾಗುತ್ತಾಳೆ. ತನ್ನ ಒಬ್ಬ ಮೊಮ್ಮಗಳು ಗೋಡೆಯ ಮೇಲೆ ಕುಣಿಯುವಂತೆ ಬಿಡಿಸುವ ನವಿಲನ್ನು ನೋಡುವ ವ್ಯವಧಾನವಿಲ್ಲದವಳಂತೆ ಇವಳು ಮಾತಾಡುತ್ತಾಳೆಯಾದರೂ ಅದನ್ನು ಕಂಡು ಬೆರಗಾಗುವ ಮೊಮ್ಮಗನಿಗೆ ಅವನು ಮುಂದೆ ರಾಜನಾಗುವ ಕನಸನ್ನು ಕೊಡುತ್ತಾಳೆ. ಹಸಿದು ಕಡಲೆಕಾಯಿ ತಿನ್ನುವುದೇ ಇಲ್ಲಿ ಒಂದು ಯಜ್ಞವಾಗಿ ಬಿಡುತ್ತದೆ.

ಮಹಾದೇವರಿಗೆ ದಲಿತರೇ ಆದ ಬೆತ್ತಲೆಸೇವೆಯವರನ್ನು ಮಾನವಶಾಸ್ತ್ರಜ್ಞನ ಕುತೂಹಲದಲ್ಲಿ ನೋಡಲು ಸಾಧ್ಯವಿಲ್ಲ. ಒಂದು ಮಾಂತ್ರಿಕ ಮುಗ್ಧ ಜಗತ್ತಿನಲ್ಲಿ ಆ ಜನ ಉಳಿದಿರಬೇಕೆಂದು ಅವರು ಬಯಸಿರುವುದಿಲ್ಲ. ಆಧುನಿಕ ಪ್ರಜಾತಾಂತ್ರಿಕ ಸಮಾಜದಲ್ಲಿ ಬೆತ್ತಲೆಸೇವೆ ಮಾಡುವ ದಲಿತರು ತಮ್ಮ ಹಕ್ಕುಗಳೇನೆಂದು ತಿಳಿಯಬೇಕೆಂದೂ ನಮ್ಮಂತೆಯೇ ಎಚ್ಚರಗೊಂಡವರಾಗಬೇಕೆಂದೂ ಮಹಾದೇವರು ಬಯಸುತ್ತಾರೆ. ಆದರೂ ಮಹಾದೇವ ಒಬ್ಬ ಕವಿಯಲ್ಲವೇ? ಈ ಬೆತ್ತಸೇವೆಯವರ ಪರವಶತೆ ಅವರಿಗೆ ಕಾಣುವುದಿಲ್ಲವೇ? ವೈಜ್ಞಾನಿಕ ದೃಷ್ಟಿಯಲ್ಲಿ ತಾರ್ಕಿಕವಾಗಿ ಎಲ್ಲವನ್ನೂ ಬಿಚ್ಚಿ ತಿಳಿಯುವ ಹುಮ್ಮಸ್ಸಿನ ಪಾಶ್ಚಾತ್ಯ ನಾಗರಿಕತೆಯಿಂದ ರೋಸಿ ಬ್ಲೇಕ್‌ನಂಥಹವರು, ಲಾರೆನ್ಸ್‌ನಂಥವರು, ಏಟ್ಸ್‌ನಂಥಹವರು ಹಂಬಲಿಸುವ ಮಾಂತ್ರಿಕ ಜಗತ್ತು ಇನ್ನೂ ಭಾರತದಲ್ಲಿ ಉಳಿದಿದೆ ಎಂಬುದನ್ನು ಮಹಾದೇವರು ಅರಿಯುವುದಿಲ್ಲವೇ ? ನನಗೆ ಮಹಾದೇವರು ಸರಳವಾಗಿ ಹೇಳುತ್ತಾರೆ –  ನೋಡುವವರು ಬೆತ್ತಲೆಯಾಗಿದ್ದಲ್ಲಿ ಸೇವೆ ಮಾಡುವವರ ಬೆತ್ತಲೆಗೆ ತನ್ನ ವಿರೋಧವಿಲ್ಲ. ಅಲ್ಲದೆ ಒತ್ತಾಯ ಪೂರ್ವಕವಾಗಿ ಕೆಲವು ಹುಡುಗಿಯರನ್ನು ಬೆತ್ತಲೆ ಹೋಗುವಂತೆ ಮಾಡುವುದನ್ನು ಅವರು ಒಪ್ಪುವುದಿಲ್ಲ. ಮಹಾದೇವರ ಪ್ರತಿಕ್ರಿಯೆ ನನಗೆ ಅರ್ಥವಾಗುತ್ತದೆ. ನಾನು ವಿಷಾದದಿಂದ ಒಪ್ಪಿಕೊಳ್ಳುತ್ತೇನೆ; ಪತ್ರಿಕೆಗಳ ಮೇಲು ಹೊದಿಕೆಯ ಮೇಲೆ ವರ್ಣರಂಜಿತವಾದ ಬೆತ್ತಲೆಯ ಚಿತ್ರಗಳು ಬಂದ ನಂತರ ನಾನು ಭಾವಿಸಿದಂತೆ ಪರವಶತೆಯ ಬೆತ್ತಲೆ ಸೇವೆ ಉಳಿಯುವುದು ಸಾಧ್ಯವಿಲ್ಲ.

ನನಗೆ ಅಗತ್ಯವಾದ ಇನ್ನೊಂದು ಪ್ರಶ್ನೆಯನ್ನು ನನಗೆ ನಾನು ಕೇಳಿಕೊಳ್ಳುತ್ತೇನೆ. ಹನ್ನೆರಡನೆಯ ಶತಮಾನದ ವಚನಕಾರರು ಈ ಬೆತ್ತಲೆಸೇವೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಬಸವ ಮತ್ತು ಅಲ್ಲಮರು ತಮಗೆ ಪೊಳ್ಳೆಂದು ಕಾಣುವ ದೈವಶ್ರದ್ಧೆಯನ್ನು ನಿಷ್ಠುರವಾಗಿ ಟೀಕಿಸಿದವರು. ಅವರು ವೈದಿಕ ಧರ್ಮಕ್ಕೂ ಎದುರಾಗಿ ವಾದಿಸಿದ್ದರು; ತಮ್ಮ ಸ್ಥಳೀಯ ಮತಾಚರಣೆಗಳನ್ನೂ ವಿರೋಧಿಸಿದ್ದರು. ಆದ್ದರಿಂದ ಇದು ನನ್ನ ಊಹೆ – ಪ್ರಾಯಶಃ ಅವರಿಗೆ ಮಾಂತ್ರಿಕರ ಅಥವಾ ತಾಂತ್ರಿಕರ ಆಚರಣೆಗಳಿಂದ ಹುಟ್ಟುವ ದೈವಶ್ರದ್ಧೆ ಮಹತ್ವದ್ದೆಂದು ಅನ್ನಿಸುತ್ತಿರಲಿಲ್ಲ. ಯಾವ ಅವಲಂಬನವೂ ಇಲ್ಲದ ಆಧ್ಯಾತ್ಮಿಕವಾದ ದೇವರ ಅರಿವಿಗಾಗಿ ಅವರು ಆಸೆಪಟ್ಟವರು. ಅವರು ಹನ್ನೆರಡೆನೆಯ ಶತಮಾನದಲ್ಲಿ ತಳೆದಿದ್ದ ಯೋಗಮೂಲವಾದ ಧಾರ್ಮಿಕ ನಿಲುವಿನ ಉತ್ಕಟತೆ ಮತ್ತು ವಿಚಾರಸರಣಿ ಇವತ್ತಿಗೂ ನೈಜವಾಗಿ ಉಳಿದಿದ್ದಲ್ಲಿ ಬೆತ್ತಸೇವೆಯವರ ಜೊತೆ, ಯಾಕೆ ಭಜನೆಯಲ್ಲಿ ಮಾತ್ರ ನಂಬುವ ಎಲ್ಲ ಭಕ್ತಿಪಂಥಗಳ ಜೊತೆ ಪರಿಣಾಮಕಾರಿಯಾದ ಮುಖಾಮುಖಿ ಸಾಧ್ಯವಾಗಿರುತ್ತಿತ್ತು.

ಭಾವುಕನಾದ ಯುವಕವಿಯೊಬ್ಬರು ನನ್ನನ್ನು ಪ್ರಶ್ನಿಸಿದಾಗ ಮಾತ್ರ ನನಗೆ ಹೀಗೆ ಹೇಳುವ ಧೈರ್ಯ ಒಂದು ಕ್ಷಣವಾದರೂ ಹುಟ್ಟುತ್ತದೆ. “ರೇಣುಕೆ ಸತ್ಯವೇ?” “ಹೌದು ಸತ್ಯ” “ಎಲ್ಲಮ್ಮ ಸತ್ಯವೇ?” “ಹೌದು ಸತ್ಯ” ಹೀಗೆ ಹೇಳುವಾಗ ಅವನ ಜೊತೆ ನಾನೊಬ್ಬನೇ ಇದ್ದೇನೆ. ಅವನ ಭಾವನಾತ್ಮಕ ಕಣ್ಣುಗಳಲ್ಲಿ ನಾನೂ ಹೀಗೆ ಭಾವನಾತ್ಮಕವಾಗಿ ನನ್ನ ಇನ್ನೊಂದು ಮನಸ್ಥಿತಿಗೆ ನೆಗೆಯುವುದು ಸಾಧ್ಯವಾಗುತ್ತದೆ. ನನ್ನ ಮುಖ ನಾಚಿಕೆಯಲ್ಲಿ ಕೆಂಪಾಗಿರಬೇಕು –  ಆ ಕವಿ ನನ್ನನ್ನು ಅರ್ಥವಾಗದವನಂತೆ ನೋಡುತ್ತಾನೆ. ಕೈತುಂಬ ಸಂಬಳವನ್ನೂ ಕ್ಷೇಮದ ಉದ್ಯೋಗವನ್ನೂ ನನಗೆ ಒದಗಿಸಿಕೊಟ್ಟದ್ದು ಪಾಶ್ಚಿಮಾತ್ಯ ಆಧುನಿಕತೆ ಅಲ್ಲವೇ? ಈ ಆಧುನಿಕತೆ ಬೇಕನ್ ಮತ್ತು ಡೆಕಾರ್ಟೆಯವರ ಅನುಮಾನಗಳಿಂದ ಪಾಕಗೊಂಡದಲ್ಲವೇ? ಯಾವ ಉತ್ಕಟ ಸಂಕಟಕ್ಕೂ ಅನುವು ಮಾಡಿಕೊಡದಂತೆ, ನನ್ನಲ್ಲಿ ಸದಾ ಜಾಗೃತವಾಗಿರುವಂತೆ ಉಳಿದಿರುವ ಸಂದೇಹಶೀಲತೆಯಿಂದ ನಾನೇನಾದರೂ ಆಯತಪ್ಪಿ ಮುಗ್ಗರಿಸಿ ಈ ಯುವಕವಿಯ ಕಣ್ಣಿನಲ್ಲಿ ಮುಠ್ಠಾಳನಾದೆನೇ ಎಂದು ದಿಗ್ಭ್ರಮೆಗೊಳ್ಳುತ್ತೇನೆ.

ಯಾಕೆಂದರೆ ನನ್ನ ಬಾಲ್ಯದ ಪೌರಾಣಿಕ ಪ್ರಪಂಚವನ್ನು ಸೀಳಿಕೊಂಡು ಬೆಳೆದವನು ನಾನು. ನನ್ನನ್ನೂ ಮೀರಿದ ಅಜ್ಞಾತಶಕ್ತಿಗಳು ಇಲ್ಲ ಎಂದು ನನಗೆ ನಾನು ದೃಢಪಡಿಸಿಕೊಳ್ಳುವುದಕ್ಕಾಗಿ ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೆವ್ವದ ಕಲ್ಲುಗಳ ಮೇಲೆ ನಾನು ಮೂತ್ರವಿಸರ್ಜನೆ ಮಾಡಿದ್ದಿದೆ. ಭಯದಿಂದ ನಿದ್ದೆಗೆಟ್ಟ ಆ ದಿನದ ರಾತ್ರಿಗಳು ನೆನಪಾಗುತ್ತವೆ. ಆಗ ನನ್ನನ್ನು ಕವಿದಿದ್ದ ಸಕಲವೂ ಪವಿತ್ರವೆಂಬ ದೃಷ್ಟಿಯಿಂದ ಬಿಡುಗಡೆಯಾಗುವ ಸಂಕಟವೇ ನನ್ನ ಯೌವನದ ಕಥೆಗಳಲ್ಲಿ ಕಾಣುವುದು. ನಿಜ, ಕವಿಯ ಉತ್ಕಟತೆ ಮತ್ತು ಪರವಶತೆ ನನ್ನದಲ್ಲ. ಎಲ್ಲ ಒಡಕುಗಳನ್ನೂ ಗಮನಿಸುವ ಕಥೆಗಾರ ನಾನು. ಮಾರ್ಕ್ಸ್‌‌ವಾದವನ್ನೂ ಅನುಭಾವವನ್ನೂ ಸತತವಾದ ಚಲನಶೀಲ ಕ್ರಿಯೆಯಲ್ಲಿ ಒಟ್ಟಿಗೆ ಹಿಡಿದಿಡುವ ನನ್ನ ಬಯಕೆ ನಿಜವಾಗಲಾರದು. ಎಲ್ಲೋ ನನ್ನ ಕೆಲವು ಕೃತಿಗಳಲ್ಲಿ ಇದು ಸಾಧ್ಯವಾಗಬಹುದಾದರೂ ನನ್ನ ದೈನಿಕ ಜೀವನದಲ್ಲಿ ಆಗಲಾರದ್ದು. ಕವಿಯಾಗಿ ಮಾತ್ರ ವರ್ಡ್ಸ್‌‌ವರ್ಥ್‌ ತನ್ನ ದುಃಖದಲ್ಲಿ ಹೀಗೆ ಹೇಳಿಕೊಳ್ಳಬಲ್ಲ; “ದೇವರೆ, ಯಾಕಿಷ್ಟು ನಾವು ಈ ಪ್ರಪಂಚಕ್ಕೆ ಹತ್ತಿಕೊಂಡಿದ್ದೇವೆ? ಕೊಡುಕೊಳ್ಳುವ ವ್ಯವಹಾರದಲ್ಲಿ ನನ್ನ ಆತ್ಮವನ್ನೇ ಕಳೆದುಕೊಂಡಿದ್ದೇನಲ್ಲವೇ? ಹೀಗೆ ನಾಗರಿಕನಾಗುವ ಬದಲು ಗೊಡ್ಡು ಆಚರಣೆಗಳ ಒಬ್ಬ ಪೇಗನ್ ಆದರೂ ಆಗಿದ್ದಲ್ಲಿ ಈ ಸಮುದ್ರದಿಂದ ಪ್ರೋಟಿಯಸ್‌ ಎದ್ದು ಬರುವುದನ್ನು ನಾನು ಕಾಣುತ್ತಿದ್ದೆ. ಅಥವಾ ಟ್ರೈಟಾನ್‌ ತುತ್ತೂರಿ ಊದುವುದನ್ನು ನಾನು ಕೇಳಿಸಿಕೊಳ್ಳುತ್ತಿದ್ದೆ.”

ಇಲ್ಲ. ಬೆತ್ತಲೆಸೇವೆಯ ಬಗ್ಗೆ ಉಪೇಕ್ಷೆ ಸಾಧ್ಯವಿಲ್ಲ; ಕುತೂಹಲದ ದೃಷ್ಟಿ ಮಾತ್ರ ಸಾಲುವುದಿಲ್ಲ. ಕೇವಲ ಸಹನೆಯೂ ಸಲ್ಲದು. ಯಾಕೆಂದರೆ ಚಂದ್ರಗುತ್ತಿ ಈಗ ಪ್ರಯಾಣಕ್ಕೆ ಅಲಭ್ಯವಾದ ಪ್ರದೇಶವಲ್ಲ. ಶಿವಮೊಗ್ಗೆಯಿಂದ ಬಸ್ಸುಗಳು ನಿತ್ಯ ಅಲ್ಲಿಗೆ ಹೋಗುತ್ತವೆ. ಊರನ್ನು ಸುತ್ತುವರಿದ ಅರಣ್ಯ ನಾಟದ ವ್ಯಾಪಾರಿಗಳ ಲೋಭದಿಂದ ನಾಶವಾಗಿದೆ. ಬಿರ‍್ಲಾನ ಗಿರಣಿಗಳಿಗಾಗಿ ವರ್ಲ್ಡ್‌ಬ್ಯಾಂಕಿನ ಸಹಾಯದಿಂದ ಎಲ್ಲೆಲ್ಲೂ ಯಾವ ಜೀವಿಗೂ ಆದರಾಶ್ರಯ ಕೊಡದ ನೀಲಗಿರಿ ಮರಗಳು ಬೆಳೆದು ನಿಂತಿವೆ. ಜಟೆಗೊಂಡ ಕೂದಲಿನ ಕ್ಷುದ್ಧ ಜೋಗಿತಿಯರು. ಹುಡುಗಿಯರನ್ನು ಕದ್ದು ಮುಂಬೈನ ವೇಶ್ಯಾವಾಟಿಕೆಗೆ ಮಾರುವರೆಂಬ ಗುಮಾನಿ ಹುಟ್ಟಿಕೊಂಡಿದೆ. ಲೈಂಗಿಕ ಸುಖವನ್ನು ಬಯಸುವ ಪ್ರಪಂಚದ ಟೂರಿಸ್ಟರು ಮುಂಬೈಗೆ ಹೋಗಿಬರುತ್ತಲೇ ಇರುತ್ತಾರೆ.

ನನ್ನ ಈ ಎಲ್ಲ ಅನುಮಾನಗಳನ್ನು ಗೊಂದಲಗಳನ್ನು ಎರಡು ವರ್ಷಗಳ ಕೆಳಗೆ ಬರೆದುಕೊಂಡಿದ್ದೇನೆಂದು ತಿಳಿದಿದ್ದೇನೆ. ಒಂದು ದಿನ ನಾನು ಕೋಣೆಯಲ್ಲಿ ಸುಮ್ಮನೆ ಕೂತಿದ್ದಾಗ, ಹಠಾತ್ತನೆ ಹಾರಿಬಂದ ಅಚ್ಚ ಹಸಿರಿನ “ಅದು” ಏನೆಂದು ನನ್ನ ಮಗಳು ಕೇಳಿದಾಗ “ಅದು ಸೂರ್ಯನ ಕುದುರೆ” ಎಂದೆ. ಹಾಗೆ ಎಂದೊಡನೆಯೇ ನನ್ನ ಮನಸ್ಸಿನಲ್ಲಿ ಒಂದು ಕಥೆ ಹೊಳೆದಿತ್ತು. ಕಾರ್ಲ್‌‌ಮಾರ್ಕ್ಸ್‌‌ನು ಗ್ರಾಮೀಣಶಾಂತಿ ‘ಈಡಿಯಸಿ’ಯನ್ನು, ಅಂದರೆ ಪೆದ್ದುತನವನ್ನು, ಮಾತ್ರ ಸೃಷ್ಟಿಸೀತೆಂದು ತಿಳಿಯುತ್ತಾನೆ. ಬದಲಾಗಿ ಮನುಷ್ಯನ ಪ್ರಜ್ಞೆ ಬೆಳೆಯಲು ಅವನು ನಗರವಾಸಿಯಾಗಿ ನಾಗರಿಕತೆಯ ತಿಕ್ಕಾಟಗಳಿಗೆ ಒಳಗಾಗಿರಬೇಕೆಂದು ಭಾವಿಸುತ್ತಾನೆ. ಆದರೆ ಅವನ ಗ್ರಹಿಕೆ ತಪ್ಪಲ್ಲವೇ? ಸೂರ್ಯನನ್ನು ಒಂದು ಸಾಮಾನ್ಯ ಜಂತುವನ್ನೂ ತಳಕುಹಾಕಿ, ಈ ಲೋಕವನ್ನು ಸರ್ವಜಿವಿಗಳ ಅನ್ಯೋನ್ಯತೆಯ ಕೊಂಡಿಯಾಗಿ ಕಾಣುವಂತೆ “ಸೂರ್ಯನ ಕುದುರೆ” ಎನ್ನುವಂತಹ ಒಂದು ಶಬ್ದದ ಸೃಷ್ಟಿಯನ್ನು ಗ್ರಾಮೀಣ ಸಂಸ್ಕೃತಿಯೇ ಮಾಡಿರುವುದು ಅರಿವಿನ ಸ್ಫೋಟವಲ್ಲವೇ? ಹೀಗೆ ಉಲ್ಲಾಸದಾಯಕವಾದ ಪವಿತ್ರಭಾವನೆಯಲ್ಲೂ ಬಲು ಧೈರ್ಯದ ಕಲ್ಪನಾವಿಲಾಸದಲ್ಲೂ ಒಂದು ಜಂತುವಿಗೆ ಅರ್ಪೂವವಾದ ಹೆಸರಿಡುವ ಗ್ರಾಮೀಣ ಮನುಷ್ಯನ ಅರಿವು ಕೂಡ ನನಗೆ ಅದ್ಭುತ ಎನ್ನಿಸಿ ನನ್ನದೇ ಬಾಲ್ಯದ ಸ್ಮತಿಗಳಿಗೆ ನಾನು ಮರಳುವಂತಾಯಿತು.

ನನ್ನ ಕಥೆಯ ನಾಯಕನ ಮಗ ತಂದೆಯನ್ನೇ ಕೊಲ್ಲಲು ಸಿದ್ಧನಾಗುತ್ತಾನೆ. ಗ್ರಾಮವಾಸಿಯಾದ ತಂದೆ ಅಷ್ಟೊಂದು ನಿಷ್ಪ್ರಯೋಜಕನಾದ ಅವ್ಯವಹಾರಿಯಾಗಿದ್ದಾನೆ. ಆದರೆ ಇಂತಹ ಮನುಷ್ಯನೇ ಕಥೆಯಲ್ಲಿ ನಿರೂಪಕನಾದ ನನ್ನ ಅನುಮಾನಗಳನ್ನು ಗೆಲ್ಲುವಷ್ಟು ಬೆಳೆಯುತ್ತಾನೆ. ಗ್ರಾಮೀಣ ಬದುಕಿನ ಮೂರ್ಕ ಪರಿಮಿತಿಗಳನ್ನು ಮೀರಿ ಹೋಗಲೆಂದು ಕುಟುಂಬವನ್ನು ಧಿಕ್ಕರಿಸಿ ಹಿಂಸಾತ್ಮಕವಾಗಿ ಎದುರು ನಿಲ್ಲುವ ಮಗನನ್ನು ಸಮಾಧಾನದಲ್ಲಿ ಸಹಿಸಿಕೊಳ್ಳುತ್ತಾನೆ. ಅವನ ಮಗನಾದರೋ ಆಧುನಿಕನಾಗಿರುವ ನಿರೂಪಕನಾದ ನನ್ನ ಮಾರ್ಗದಲ್ಲೇ ಇದ್ದಾನೆ. ಆದರೆ ಅವನ ತಂದೆ ಒಂದು ಉತ್ಕಟ ಕ್ಷಣದಲ್ಲಿ ಬೇಲಿಯ ಮೇಲೆ ಕೂತ ಜಂತುವನ್ನು ಸೂರ್ಯನ ಸಾಕ್ಷಾತ್ ಕುದುರೆಯೆಂದು ನಿರೂಪಕನಿಗೆ ಕಾಣಿಸುತ್ತಾನೆ. ನನ್ನ ಅನೇಕ ವಿಮರ್ಶಕ ಮಿತ್ರರಲ್ಲಿ ಒಂದು ಕ್ಷಣವಾದರೂ ಕಥೆಗೆ ಪರವಶರಾಗಿ, ಮೆಚ್ಚಿಕೊಂಡ ಕೆಲವರು ಕೂಡಾ, ಮರುಕ್ಷಣದಲ್ಲೇ ಕಥೆ ಎತ್ತುವ ವಾಗ್ವಾದದಲ್ಲಿ ಸಿಡಿಮಿಡಿಕೊಂಡು, ಆಧುನಿಕ ವ್ಯವಸ್ಥೆಯ ಪರವಾಗಿ ಚರ್ಚಿಸಲು ತೊಡಗಿಬಿಡುತ್ತಾರೆ.

ನನ್ನ ಇನ್ನೊಂದು ಕಾದಂಬರಿ ಅವಸ್ಥೆಯೂ ಹೀಗೆ ಪೂರ್ವಕ್ಕೆ ಚಲಿಸುತ್ತದೆ. ಸ್ಮೃತಿಯಲ್ಲಿ ಹೊಳೆಯುವ ತನ್ನ ಬಾಲ್ಯದ ಹಳ್ಳಿಯ ಪ್ರಪಂಚಕ್ಕೆ ಕಥೆಯ ನಾಯಕ ರಾಜಕಾರಣದ ಭ್ರಷ್ಟಾಚಾರದಿಂದ ಬೇಸತ್ತು ಹಿಂದಿರುಗಲು ಬಯಸುತ್ತಾನೆ. ಆ ಲೋಕದಲ್ಲಿರುವ ಇನ್ನೂ ‘ದಡಹತ್ತದ’ ಬಡಜನರನ್ನು ಸಂಘಟಿಸಿ ನಮ್ಮ ಆಧುನೀಕರಣವಲ್ಲದ ಪರ್ಯಾಯ ಸಂಸ್ಕೃತಿಯೊಂದಕ್ಕೆ ಸಿದ್ಧಪಡಿಸಲು ಹವಣಿಸುತ್ತಾನೆ. ಪ್ರಾಯಶಃ ಇದು ಗಟ್ಟಿಯಾಗಿ ಕಾದಂಬರಿಯಲ್ಲಿ ಮೂಡಿಲ್ಲದೇ ಇರಬಹುದು. ಆದರೆ ಅವನ ಕೊನೆಯ ನಿರ್ಧಾರವನ್ನು ಯಾವ ವಿಮರ್ಶಕನೂ ಗಮನಿಸಿದಂತೆ ಕೂಡಾ ಇಲ್ಲ ! ಪಾಶ್ಚಾತ್ಯ ಮಾದರಿಯ ಆಧುನೀಕರಣ ನಮಗೆಲ್ಲರಿಗೂ ಇರುವ ಏಕೈಕ ಮಾರ್ಗವೆಂದು ನಮ್ಮ ಕ್ರಾಂತಿಕಾರರೂ ಸಹ ಭಾವಿಸಿದಂತಿದೆ. “ಚೀನಾದಲ್ಲಿ ಏನಾಗುತ್ತಿದೆ ನೋಡಿ” ಎಂದು ಎಲ್ಲರೂ ಹೇಳುತ್ತಾರೆ.

ನಮ್ಮ ಕಾಲದ ಬಹುಮುಖ್ಯ ಕಾದಂಬರಿಕಾರರಲ್ಲಿ ಒಬ್ಬರಾದ ತೇಜಸ್ವಿಯವರು ಪ್ರಾಚೀನ ನಂಬಿಕೆಗಳ ಲೋಕವನ್ನು ಮತ್ತು ಆಧುನಿಕ ನಾಗರಿಕತೆಯ ಮುಖಾಮುಖಿಯನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಕಾಣುತ್ತಾರೆ. ಅವರ ಈಚಿನ ಕಾದಂಬರಿ ಚಿದಂಬರ ರಹಸ್ಯದಲ್ಲಿ ಈ ಎರಡರ ನಡುವಿನ ಸಂಘರ್ಷ ತೋರಿಕೆಯದು ಮಾತ್ರ. ಆದರೆ ಎರಡೂ ಕೂಡಿ ‘ಕೆಸರೂರು’ ಎಂಬ ಸಣ್ಣ ಪಟ್ಟಣ ಕೊಳೆಯುತ್ತಾ ನಿರ್ನಾಮವಾಗುವುದಕ್ಕೆ ಕಾರಣವಾಗುತ್ತದೆ. ಆಸೆಬುರುಕ ವರ್ತಕನೊಬ್ಬ ಊರಿನ ಸುತ್ತಲಿನ ಕಾಡನ್ನು ಕಡಿದು ಲಂಟಾನ ಸಮೃದ್ಧವಾಗಿ ಬೆಳೆಯುವುದಕ್ಕೆ ಕಾರಣನಾಗುತ್ತಾನೆ. ಒಂದು ಪತ್ತೆದಾರಿ ಕಥೆಯಂತೆ ಕಾದಂಬರಿ ಪ್ರಾರಂಭವಾಗಿ ಯಾವ ಶ್ರಮವಿಲ್ಲದಂತೆ ಸರಳವಾಗಿ ತನ್ನ ಅರ್ಥಗಳನ್ನು ತುಂಬಿಕೊಳ್ಳುತ್ತ ಬೆಳೆಯುತ್ತದೆ. ಕೆಸರೂರು ಕಾಲೇಜಿನ ಅಪಕ್ವ ಯುವಕರು ಹುಡುಗಿಯರ ಸ್ನೇಹಕ್ಕಾಗಿ ಹಂಬಲಿಸುತ್ತಾರೆ. ಇದು ಅವರ ಹಲವು ಕೀಟಲೆಗಳ ತುಂಟತನದಲ್ಲಿ ವ್ಯಕ್ತವಾಗುವಂತೆ ಅವರ ಸಾಹಸಪ್ರಿಯತೆಯಲ್ಲೂ ಅವರ ಬೋರ್‌ಡಂನಲ್ಲೂ ಪಟ್ಟಣದ ಹಿರಿಯರ ಮೂಢನಂಬಿಕೆಗಳ ವಿರುದ್ಧ ಅವರು ಮಾಡುವ ವಿಚಾರವಾದಿ ಪ್ರತಿಭಟನೆಗಳಲ್ಲೂ ವ್ಯಕ್ತವಾಗುತ್ತದೆ. ಈ ಪಟ್ಟಣ ನಮ್ಮ ಇಡೀ ಕಾಲಕ್ಕೆ ಪ್ರಸ್ತುತವಾದ ಸಂಕೇತದಂತಿದೆ.

ಅಲ್ಲೊಬ್ಬ ವಿಜ್ಞಾನಿ ಇದ್ದಾನೆ. ಅವನು ಏಲಕ್ಕಿಯ ಅತಿ ಉತ್ತಮ ತಳಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ. ಮಾತ್ರವಲ್ಲ, ಅಂತಾರಾಷ್ಟ್ರೀಯ ಮಸಲತ್ತಿನಿಂದಾಗಿ ಪ್ರಾಯಶಃ ಕೊಲ್ಲಲ್ಪಟ್ಟ ಒಬ್ಬ ಕೃಷಿ ವಿಜ್ಞಾನಿಯ ಸಾವಿನ ರಹಸ್ಯ ಬಿಡಿಸಲೂ ಹೊರಟಿದ್ದಾನೆ. ಆ ಊರಿನಲ್ಲಿ ವಿಚಾರವಾದಿ ಚಳುವಳಿಯನ್ನು ನಿರ್ದೇಶಿಸಿಸುವ ಕವಿ ಇದ್ದಾನೆ. ಒಬ್ಬ ಆಧುನಿಕವಾದ ಕಾಲೇಜ್‌ ಅಧ್ಯಾಪಕನಿದ್ದಾನೆ. ದೇವಸ್ಥಾನಗಳನ್ನು ಕಟ್ಟಬೇಕೆಂದು, ಮಸೀದಿ ಕಟ್ಟಬೇಕೆಂದು ಪರಸ್ಪರ ಬಡಿದಾಡುವ ಮತಭ್ರಾಂತರೂ ಆ ಊರಿನಲ್ಲಿದ್ದಾರೆ. ಅಲ್ಲದೆ ವಿಲಾಸಿಗಳಾದ ಎಸ್ಟೇಟ್‌ ಯಜಮಾನರೂ, ಕಾಳಸಂತೆಕೋರರು, ನಾಟಾ ವ್ಯಾಪಾರದ ಮುಸ್ಲೀಮರೂ, ಡ್ರಗ್ಸ್‌ಗಳನ್ನು ಕದ್ದು ಮಾರುವವರೂ ಅಲ್ಲಿದ್ದಾರೆ. ಇವರೆಲ್ಲರ ಭವಿಷ್ಯಕ್ಕೂ ಲಂಟಾನಾದ ಮೊಟ್ಟುಗಳಾಗಿ ಪರಿವರ್ತಿತವಾಗುತ್ತಿರುವ ಕಾಡಿಗೂ ಸಂಬಂಧವಿದೆ. ಲಘು ಅನುಕರಣದ ಕಾಮಿಡಿಯಂತೆ ಬೆಳೆಯುವ ಈ ಕಾದಂಬರಿ ಕೊನೆಯಲ್ಲಿ ದಾರುಣವಾಗಿ ಮುಗಿಯುತ್ತದೆ. ಈ ಊರಿನ ಒಬ್ಬ ಭ್ರಷ್ಟ ನಾಟದ ವ್ಯಾಪಾರಿಯೂ ಮತ್ತು ಓಟ್‌ಬ್ಯಾಂಕ್‌ ಬೆಳೆಸಿಕೊಳ್ಳುತ್ತಿರುವ ಒಬ್ಬ ಭ್ರಷ್ಟ ರಾಜಕಾರಣಿಯೂ ಜೊತೆಯಾಗಿ ಮಾಡುವ ಮಸಲತ್ತಿನಿಂದಾಗಿ ಕಾಡಿಗೆ ಬೆಂಕಿ ಹತ್ತಿ ಲಂಟಾನಾ ಹೊತ್ತಿ ಉರಿಯುತ್ತಾ ಆ ಪ್ರದೇಶದ ಎಲ್ಲರನ್ನೂ –  ಒಳ್ಳೆಯವರನ್ನೂ, ಕೆಟ್ಟವರನ್ನೂ ಯಾರ ಗೊಡವೆಗೂ ಹೋಗದವರನ್ನೂ –  ನಾಶ ಮಾಡುತ್ತದೆ. ಈ ಶಾಪಗ್ರಸ್ತ ಪಟ್ಟಣದಲ್ಲಿಯೂ ಪರಸ್ಪರ ಪ್ರೇಮ ಮಾಡುವ ಧೈರ್ಯ ತೋರಿದ ಒಬ್ಬ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿ ಲಂಟಾನದ ದಳ್ಳುರಿಯಿಂದ ತಪ್ಪಿಸಿಕೊಂಡು ಬೆಟ್ಟದ ತುದಿಯನ್ನು ಏರುತ್ತಾರೆ. ಒಂದು ಕಡೆ ಉರಿಯುವ ನರಕದ ಬೆಂಕಿನ್ನೂ ಇನ್ನೊಂದು ಕಡೆ ಮುಗ್ಧ ಪ್ರೇಮದ ಸಾಧ್ಯತೆಯನ್ನೂ ಒಟ್ಟಾರೆ ಹಿಡಿದಿರುವ ಈ ಭಾಗ ಇಡೀ ಕಾದಂಬರಿಯಲ್ಲಿ ಕಾವ್ಯದ ಶಕ್ತಿಯನ್ನು ಪಡೆದಿದೆ.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದವರೇ ಭಾರತೀಯ ರಾಜಕೀಯವನ್ನು ಒಂದು ಧರ್ಮಗ್ರಂಥ ಬರೆಯುವ ಮುಖಾಂತರ ಪ್ರವೇಶಿಸಲಿಲ್ಲ. ಆದರೆ ಒಂದು ರಾಜಕೀಯ ಸಿದ್ಧಾಂತವಾದ ‘‘ಹಿಂದ್‌ಸ್ವರಾಜ್‌’’ ಬರೆದು ಪ್ರವೇಶಿಸಿದರು. ಈ ಪುಸ್ತಕ ಒಬ್ಬ ಉಗ್ರಗಾಮಿಯ ಜೊತೆ ನಡೆಸಿದ ವಾಗ್ವಾದದ ರೀತಿಯಲ್ಲಿ ಇದೆ. ಬ್ರಿಟೀಷರು ಭಾರತದಲ್ಲಿ ಯಾಕಿದ್ದಾರೆಂದು ಗಾಂಧೀಜಿಯೇ ಕೇಳಿಕೊಂಡು ಆಧುನಿಕ ನಾಗರಿಕತೆಯನ್ನು ಭಾರತೀಯರಾದ ನಾವು ಪ್ರೀತಿಸುವುದರಿಂದಾಗಿ ಅವರು ಇಲ್ಲಿದ್ದಾರೆಂದು ಉತ್ತರಿಸುತ್ತಾರೆ. ಆಧುನಿಕ ನಾಗರಿಕತೆ ನಮಗೆ ಕೆಟ್ಟದ್ದು ಮಾತ್ರವಲ್ಲ, ಬ್ರಿಟೀಷರಿಗೂ ಅದು ಕೆಟ್ಟದ್ದು, ಎಲ್ಲ ದಾರ್ಶನಿಕರಂತೆ ಗಾಂಧೀಜಿಯೂ ಒಬ್ಬ ಅತಿವಾದಿ. ಭಾರತದಲ್ಲಿ ನಾವು ಯಾರೂ ಗಾಂಧೀಜಿಯವರ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಂಡಿಲ್ಲ. ಆಧುನಿಕ ನಾಗರಿಕತೆಯ ಕೊಡುಗೆಗಳಾದ ರೈಲು ಸಂಚಾರ, ಕೋರ್ಟು ವ್ಯವಹಾರ, ಅಲೋಪತಿ, ಈ ಎಲ್ಲವನ್ನು ದುಷ್ಟವೆಂದೂ, ಮನುಷ್ಯನ ಸುಖಶಾಂತಿಗೆ ಅನಗತ್ಯವೆಂದೂ ಬಗೆಯುವ ಗಾಂಧೀಜಿಯವರನ್ನು ನಾವು ತೋರಿದಿದ್ದೇವೆ. ಅವರ ಅತ್ಯಂತ ಆಪ್ತ ಶಿಷ್ಯರಾಗಿದ್ದ ನೆಹರೂ ಕೂಡಾ ಗಾಂಧೀಜಿಯ ಈ ದೃಷ್ಟಿಕೋನಕ್ಕೆ ಮನಗೊಡಲಿಲ್ಲ. ಭಾರತದಲ್ಲಿ ನಾವೆಲ್ಲರೂ –  ಕ್ಯಾಪಿಟಲಿಸ್ಟರಾಗಿರಲಿ, ಕಮ್ಯುನಿಷ್ಟರಾಗಿರಲಿ, ಉದಾರವಾದಿಗಳಾಗಿರಲಿ –  ಆಧುನಿಕ ನಾಗರಿಕತೆಯನ್ನು ಪ್ರೀತಿಸುವವರೇ ಆಗಿದ್ದೇವೆ. ಆದರೆ ಭಾರತದ ಬಹುಸಂಖ್ಯಾತ ಸಮುದಾಯ ತಮ್ಮ ಬಡತನ, ಮೂಢನಂಬಿಕೆ, ಸ್ವಜಾತಿನಿಷ್ಠೆ ಇವುಗಳ ನಡುವೆಯೂ ಹೇಗೋ ಅಂತು ಬದುಕುವಂತೆ ಕಾಣುತ್ತಾರೆ. ಇಂಥವರಿಂದಾಗಿ ನಾರಾಯಣರು ಹೇಳುವಂತೆ “ಇಂಡಿಯಾ ಹೀಗೇ ಸಾಗುತ್ತದೆ”. ಅಂದರೆ, ಭಾರತದ ಪುರಾತನ ಕಾಲ ತೂಕಡಿಸಿಕೊಂಡು ಉಳಿದುಬಿಡುತ್ತದೆ. ಯಾಕೆಂದರೆ ಈ ಬಡಜನರು ತಮ್ಮ ಹೊಟ್ಟೆ ಹೊರೆದುಕೊಳ್ಳುವುದನ್ನು ಬಿಟ್ಟು ಹೆಚ್ಚೇನನ್ನೂ ಅಪೇಕ್ಷಿಸುವುದಿಲ್ಲ. ನಾವು ಪ್ರೀತಿಸುವ ಭಾರತೀಯತೆ ಎನ್ನುವುದು ಈ ಹೊಟ್ಟೆಹೊರೆಯುವ ಉಪಾಯ ಮಾತ್ರವಾದ ಅರ್ಥವ್ಯವಸ್ಥೆಯಿಂದ – “Subsistence Economy” ಯಿಂದ –  ಉಳಿಯಬಲ್ಲದಾಗಿದೆ. ಹೇಗೋ ಅಂತೂ ಬದುಕಿ ಉಳಿದಿರುವ ಈ ಬಹುಜನ ಸಮಾಜ ದೇವರನ್ನು ಉತ್ಕಟತೆಯಿಂದ ಪೂಜಿಸುತ್ತಾ ತಮ್ಮ ಶುಷ್ಕ ಬದುಕನ್ನು ಆಗೀಗ ಹೊಳೆಯಿಸಿಕೊಳ್ಳುವುದುಂಟು.

ಕ್ರೀಯಾಶೀಲರಾದ ಆಧುನಿಕೀಕರನವಾದಿಗಳು ಈ ಬಗೆಯ ಜಡತ್ವದಿಂದ ಕ್ರುದ್ಧರಾಗುವುದು ಸಹಜ. ಶ್ರೀಮತಿ ಗಾಂಧಿಯವರು ೧೯೭೫ರಲ್ಲಿ ತುರ್ತುಪರಿಸ್ಥಿತಿಯನ್ನು ನಮ್ಮ ಮೇಲೆ ಹೇರಿದಾಗ ಇಂಥ ಸಿಟ್ಟಿಗೆ ಸಂಜಯಗಾಂಧಿಯವರ ಕೆಲವು ಯೋಜನೆಗಳು ಅಭಿವ್ಯಕ್ತಿಕೊಟ್ಟವು. ಬಡಜನರನ್ನು ಬಲಾತ್ಕಾರವಾಗಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಯಿತು. ಗುಡಿಸಲುಗಳನ್ನು ಎಲ್ಲೆಲ್ಲೂ ಕಟ್ಟಿಕೊಂಡು ಬಾಳುವ ಬಡಪಾಯಿಗಳನ್ನು ಒದ್ದೋಡಿಸಿ ರೋಡುಗಳನ್ನು ಅಗಲ ಮಾಡಿದ್ದಾಯಿತು. ದೆಹಲಿ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಿಯೊಬ್ಬ ಶಿವನಯಪಾಲರಿಗೆ ಹೇಳಿದ ಈ ಮಾತುಗಳು ಗಮನಾರ್ಹವಾಗಿವೆ: “ಭಾರತೀಯ ವ್ಯಕ್ತಿತ್ವದಲ್ಲಿ ಅಡಕವಾದ ಕಾಳವಾದ ಅಂಶವೊಂದಕ್ಕೆ ಸಂಜಯರು ಅಭಿವ್ಯಕ್ತಿಕೊಟ್ಟರು. ನನ್ನ ಒಳಗೂ ಈ ಕಾಳ ಅಂಶವನ್ನು ನಾನು ಗುರುತಿಸಿಕೊಂಡಿದ್ದೇನೆ” ಹೀಗೆನ್ನುತ್ತಾ ಅವನು ನಿಧಾನವಾಗಿ ತನ್ನ ಮಾತುಗಳನ್ನು ಬಿಡಿಸಿಹೇಳತೊಡಗಿದ.

ಕೆಲವೊಮ್ಮೆ ನೀನು ನಿನ್ನ ಸುತ್ತ ನೋಡಿಕೊಂಡಾಗ, ಎಲ್ಲೆಲ್ಲೂ ನಾರಿ ಕೊಳೆಯುತ್ತಿರುವುದನ್ನೂ, ಅರ್ಥಹೀನವಾದುದನ್ನೂ ಕಂಡಾಗ, ವರ್ಷದ ಮೇಲೆ ವರ್ಷವಾದರೂ ಕುರೂಪಿಗಳಾದ ಭಿಕ್ಷುಕ ಸಮುದಾಯ ನಿರಂತರವಾಗಿ ಮಕ್ಕಳನ್ನು ಹುಟ್ಟಿಸಿಕೊಳ್ಳುತ್ತಾ ಬೆಳೆಯುತ್ತಿರುವುದನ್ನು ಕಂಡಾಗ…… ಇದೊಂದು ಕೈಮೀರಿ ಬೆಳೆಯುತ್ತಾ ಹೋಗುವ ವೆಜಿಟೆಬಲ್ ಹಾಗೆ ಎನ್ನಿಸಿದಾಗ, ನಿನ್ನೊಳಗೆ ಬಂದು ಭಯಂಕರ ದ್ವೇಷ ಹುಟ್ಟಿಕೊಂಡು ಬಿಡುತ್ತದೆ. ಪ್ರಾಣಿಗಳನ್ನು ಹಿಸುಕಿ ಸಾಯಿಸಬೇಕೆನ್ನಿಸುತ್ತದೆ. ಇವುಗಳನ್ನು ಚಚ್ಚಿ ತುಳಿಯಬೇಕೆನ್ನಿಸುತ್ತದೆ. ಇದು ನಮ್ಮೊಳಗೆ ಕಾಣದಂತೆ ಅಡಗಿರುವ ಒಂದು ಬಗೆಯ ಜನಾಂಗೀಯ ದ್ವೇಷ. ಇದೊಂದು ಬಗೆಯ ಆತ್ಮದ್ವೇಷ. ಇದನ್ನೇ ನಾನು ನಮ್ಮ ಒಳಗಿನ ಕಾಳಾಂಶ ಎನ್ನುವುದು. (The Observor, 11July, 1941)

ತೇಜಸ್ವಿ ಸಂಜಯವಾದಿ ಅಲ್ಲ. ಆದರೆ ಅವರ ಕೆಸರೂರು ಬೆಂಕಿಹತ್ತಿ ಉರಿಯುತ್ತದೆ. ಇದು ಸಾಯಲು ಯೋಗ್ಯವಾದ ಊರು ಎಂದು ನಮಗೆ ಅನ್ನಿಸುತ್ತದೆ. ಭ್ರಷ್ಟಾಚಾರದಿಂದಲೂ, ಕೊಳಕಿನಿಂದಲೂ, ನಿರ್ವಿಣ್ಣತೆಯಿಂದಲೂ ಆವರಿಸಿಕೊಂಡ ನಮ್ಮ ಪ್ರಪಂಚ ನಾಶವಾಗಿ ಬಿಡಬೇಕು ಎಂದು ಕೆಲವೊಮ್ಮೆಯಾದರೂ ಅಂದುಕೊಳ್ಳದೇ ಇರುವವರು ನಮ್ಮಲ್ಲಿ ವಿರಳವೇ ಸರಿ.

ಆದರೆ ನಮಗೆ ಅಚ್ಚರಿ ಉಂಟುಮಾಡುವಂತೆ ವಿಚಿತ್ರವಾದ ರೀತಿಯಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೆಲಸಮಾಡುತ್ತಿದೆ. ಅಷ್ಟು ಬಲಶಾಲಿ ಎನ್ನಿಸಿದ್ದ ಶ್ರೀಮತಿ ಗಾಂಧಿಯವರ ಸರಕಾರ ಮುರಿದು ಬೀಳುತ್ತದೆ; ಆದರೆ ಮತ್ತೆ ಏಳುತ್ತದೆ. ನನ್ನ ರಾಜ್ಯ ಕರ್ನಾಟಕದಲ್ಲಿ ರಾಜೀವ ಗಾಂಧಿಯ ಪಕ್ಷ ಪಾರ್ಲಿಮೆಂಟ್‌ಚುನಾವಣೆಯಲ್ಲಿ ಗೆಲ್ಲುತ್ತದೆ. ಆದರೆ ಮೂರು ತಿಂಗಳ ಒಳಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋಲುತ್ತದೆ. ಆಧುನೀಕರಣವಾದಿಗಳು ಬದಲಾವಣೆಯ ವಿಳಂಬಕ್ಕೆ ಬೇಸತ್ತು ಚುರುಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಇಪ್ಪತ್ತನೆಯ ಶತಮಾನಕ್ಕೆ ಭಾರತವನ್ನು ತಯಾರು ಮಾಡಲೆಂದು ರಾಜೀವಗಾಂಧಿಯವರು ಕಂಪ್ಯೂಟರ್‌ ಕ್ರಾಂತಿಯನ್ನು ಮಾಡುತ್ತಾರೆ. ಆಧುನಿಕೀರಣವಾದಿಗಳಾದ ನಾವು ನಮ್ಮ ಮಕ್ಕಳನ್ನು ಇಂಗ್ಲೀಷ್‌ ಮಾಧ್ಯಮ ಶಾಲೆಗೆ ಕಳಿಸಿಕೊಡುತ್ತೇವೆ. ಯಾವುದೋ ಒಂದು ದಿನ ನಾವೆಲ್ಲರೂ ಇಂಗ್ಲೀಷ್‌ಗೆ ಭಾಷಾಂಥರವಾದ ಉಪನಿಷತ್‌ಗಳ ಜ್ಞಾನವನ್ನು ಸವಿಯುತ್ತಾ, ಆಮದಾದ ಕಂಪ್ಯೂಟರರಗಳನ್ನು ಬಳಸುತ್ತಾ, ವಿಡಿಯೋ ಕ್ಯಾಸೆಟ್‌ಗಳಿಂದ ಸಿತಾರ್‌ನ ಸಂಗೀತಗಳನ್ನು ಕೇಳಿಸಕೊಳ್ಳುತ್ತಾ ನಮ್ಮ ಐಹಿಕ ಸಿರಿವಂತಿಕೆಯನ್ನೂ ಆಧ್ಯಾತ್ಮಿಕ ಚಿಂತನೆಯನ್ನೂ ಬೆಸೆಯುವ ಕನಸು ಕಾಣುತ್ತೇವೆ. ಏತನ್ಮಧ್ಯೆ ಹೇಗಾದರೂ ಹೊರೆದುಕೊಳ್ಳಬೇಕಾದ ಕೋಟ್ಯಂತರ ಹೊಟ್ಟೆಗಳು ಇದ್ದೇ ಇರುತ್ತವೆ. ಇವುಗಳಲ್ಲಿ ಕೆಲವು ಗುಡ್ಡದ ಮೇಲಿನ ದೇವತೆಯನ್ನು ಪೂಜಿಸಲೆಂದು ಪರವಶವಾಗಿ ಬೆತ್ತಲೆ ನಡೆಯುತ್ತವೆ. ಅಡ್ಡ ಬಂದವರನ್ನು ತ್ರಿಶೂಲದಿಂದ ತಿವಿಯುತ್ತವೆ. ಪೊಲೀಸರ ದೌರ್ಜನ್ಯವನ್ನು ಯಾವತ್ತೂ ಖಂಡಿಸುವ ಕೆಲವು ರಾಜಕೀಯ ಕ್ರಾಂತಿಕಾರರು “ರೈಫಲ್‌ಗಳನ್ನು ಈ ಪೋಲೀಸರೇನು ಅಲಂಕಾರಕ್ಕಾಗಿ ತೊಟ್ಟಿದ್ದಾರೋ?” ಎನ್ನುತ್ತಾರೆ. ತಮ್ಮ ವೈಚಾರಿಕತೆ ತಮ್ಮನ್ನು ಎಲ್ಲಿಗೆ ಒಯ್ಯುತ್ತದೆಂದು ದುರದೃಷ್ಟವಶಾತ್‌ ಈ ಜನ ಆತ್ಮವಿಮರ್ಶೆ ಮಾಡಿಕೊಳ್ಳುವುದಿಲ್ಲ.