ನಾನು ಕೊಟ್ಟಾಯಂಗೆ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾಗಿ ೧೯೮೭ರಲ್ಲಿ ಹೋದೆ. ಆಗ ಕೇರಳದಲ್ಲಿ ಇದ್ದ ಸರಕಾರ ಎಡಪಂಥೀಯರದು. ನನ್ನ ಹಲವು ದಶಕಗಳ ಗೆಳೆಯ ವೀರೇಂದ್ರಕುಮಾರರು ಸರಕಾರಕ್ಕೆ ನನ್ನ ಹೆಸರನ್ನು ಸೂಚಿಸಿದರಂತೆ; ನನ್ನ ಬರವಣಿಗೆಯ ಪರಿಚಯವಿದ್ದ ಹಿರಿಯರಾದ ಶ್ರೀ ನಂಬೂದರಿ ಪಾದರು ಸಂತೋಷದಿಂದ ಒಪ್ಪಿದರಂತೆ. ಇದು ನನಗೆ ಗೊತ್ತಿರಲಿಲ್ಲ. ನಾನು ಅಯೋವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಕೇರಳ ಸರಕಾರ ನನ್ನನ್ನು ಮಹಾತ್ಮಗಾಂಧಿ ವಿಶ್ವವಿದ್ಯಾಲಯಕ್ಕೆ ಕರೆಸಿಕೊಳ್ಳಬೇಕೆಂದು ಸಮಾಲೋಚಿಸಿತ್ತು. ಮೈಸೂರಿನಲ್ಲಿ ಒಂದು ರಾತ್ರೆ ನನಗೆ ಕೇರಳದ ವಿದ್ಯಾಮಂತ್ರಿಗಳಾದ ಶ್ರೀ ಚಂದ್ರಶೇಖರ್‌ನಿಂದ ಟೆಲಿಫೋನ್ ಬಂತು. ನಾನು ಒಪ್ಪಿಕೊಂಡೆ. ಕೇರಳದಲ್ಲಿ ಕಳೆದ ನಾಲ್ಕು ವರ್ಷಗಳು ನನಗೆ ಅರ್ಥಪೂರ್ಣವಾದ ಅನುಭವ; ನನ್ನನ್ನು ಬೆಳೆಸಿದ ಅನುಭವ.

ನಾನು ಚೀನಾಕ್ಕೆ ೧೯೮೯ರಲ್ಲಿ ಭಾರತದ ಸಾಂಸ್ಕೃತಿಕ ನಿಯೋಗದ ಒಬ್ಬ ಸದಸ್ಯನಾಗಿ ಹೋದದ್ದು. ಬೀಜಿಂಗ್ ದಿನಚರಿಯಲ್ಲಿ ಈ ಪ್ರವಾಸದ ಅನುಭವದ ನಿರೂಪಣೆಯಿದೆ. ಬೀಜಿಂಗ್‌ನಿಂದ ಹಿಂದಿರುಗಿದ ನಂತರ ನನ್ನ ಅನುಭವವನ್ನು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆದುಕೊಟ್ಟೆ. ಮೂರೋ ನಾಲ್ಕೋ ಸಂಚಿಕೆಗಳಲ್ಲಿ ನನ್ನ ದಿನಚರಿ ಪ್ರಕಟವಾಯಿತು.

ಕೇರಳದ ಎಡಪಂಥೀಯ ಸರಕಾರ ನನ್ನನ್ನು ಮಹಾತ್ಮಗಾಂಧಿ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ತಾನಾಗಿ ಕರೆದು ತಂದಿತ್ತು. ಎಡಪಂಥೀಯ ಯುವಜನರಿಗೆ ನನ್ನ ಬರವಣಿಗೆ ಕೃತಘ್ನವಾಗಿ ಕಂಡಿರಬೇಕು. ಎಡಪಂಥೀಯರಿಗೆ ವಿರೋಧಿಗಳಾದ ಕೋಮುವಾದಿಗಳು, ಭ್ರಷ್ಟ ರಾಜಕಾರಣಿಗಳು ನನ್ನ ಲೇಖನಗಳಿಂದ ಪುಳಕಿತರಾದರು ಎನ್ನುವುದು ನನಗೆ ಎಡಪಂಥೀಯ ಕೋಪಕ್ಕಿಂತ ಹೆಚ್ಚಿನ ಕಳವಳದ ಸಮಸ್ಯೆಯಾಯಿತು. ಭಾವನಾತ್ಮಕವಾಗಿ ನನ್ನ ಒಲವು ಇರುವುದು ಎಡಪಂಥೀಯರ ಜೊತೆ ಮಾತ್ರ. ನನ್ನ ಸಂತೋಷ, ನನ್ನ ಬೇಸರ, ನನ್ನ ಮನೋಲೋಕದ ಎಲ್ಲ ಹಾರಾಟಗಳು ಬೀಳಾಟಗಳು – ಈ ಎಲ್ಲದರ ಹಿಂದೆ ಎಡಪಂಥೀಯರ ಜೊತೆ ನನ್ನ ಬದುಕಿನುದ್ದಕ್ಕೂ ನಾನು ಬೆಳೆದ ಅನುಭವವಿದೆ. ಆದ್ದರಿಂದ ನನ್ನ ಬೀಜಿಂಗ್ ದಿನಚರಿಯಿಂದಾಗಿ ನಾನು ಎಡಪಂಥೀಯರ ವಿರೋಧಿಗಳಿಗೆ ಪ್ರಿಯನಾಗುವುದು ನನಗೆ ಅಸಹನೀಯವೆನ್ನಿಸಿತ್ತು. ಆದರೆ, ಇದರ ಜೊತೆಗೇ, ನಾನು ಕಣ್ಣಾರೆ ಕಂಡದ್ದನ್ನು, ಅನುಭವಿಸಿದ್ದನ್ನು ಹೇಳದೆ ಕೂಡ ಇರುವುದು ಸಾಧ್ಯವಿರಲಿಲ್ಲ. ಲೇಖಕನಾಗಿ ನಾನು ನನ್ನ ಆತ್ಮಕ್ಕೆ ದ್ರೋಹ ಬಗೆಯಲಾರೆ.

ಸೋವಿಯತ್ ರಷ್ಯಾಕ್ಕೆ ಹೋಗಿ ಬಂದ ಮುಖ್ಯ ಐರೋಪ್ಯ ಲೇಖಕರು, ಅಂದ್ರೆ ಜೀಡ್‌ನಂಥವರು, ತಮ್ಮ ಸಮಾಜವಾದಿ ನಿಲುವು ಬದಲಾಯಿಸಿಕೊಳ್ಳದಂತೆ ಸೋವಿಯತ್ ರಷ್ಯಾವನ್ನು ಅತ್ಯಂತ ಕಹಿಯಾಗಿ ಟೀಕಿಸಿದ್ದಾರೆ. ಆದರೆ ನಾವು ಭಾರತೀಯರು ತುಂಬ ಅವಮಾನದಲ್ಲಿ ಒಪ್ಪಿಕೊಳ್ಳಬೇಕಾದ ಒಂದು ಸಂಗತಿಯಿದೆ. ನಮ್ಮ ಯಾವ ದೊಡ್ಡ ಪ್ರಗತಿಶೀಲ ಬರಹಗಾರನೂ ಸೋವಿಯತ್ ರಷ್ಯಾದಲ್ಲಿ ತಾವು ಕಂಡ ಸತ್ಯವನ್ನು ಬಾಯಿಬಿಚ್ಚಿ ಹೇಳಲಿಲ್ಲ. ಹಿರಿಯರಾದ ರಾಹುಲ ಸಾಂಕೃತಾಯನರಿಂದ ಹಿಡಿದು, ನಮಗೆಲ್ಲ ಪ್ರಿಯರಾದ ಭೀಷಮ್ ಸಹಾನಿಯವರೆಗೆ ಯಾರೂ ತಾವು ಕಂಡ ಸತ್ಯ ಹೇಳಿಲಿಲ್ಲ. ಅಮೆರಿಕನ್ ವ್ಯವಸ್ಥೆಯನ್ನು ಟೀಕಿಸುವ ಇವರ ಬೌದ್ಧಿಕತೆ, ನೈತಿಕತೆ ಸೋವಿಯತ್ ರಷ್ಯಾದ ಎಲ್ಲ ಕ್ರೌರ್ಯವನ್ನೂ ಕಣ್ಣುಮುಚ್ಚಿ ಒಪ್ಪಿಕೊಂಡಿದ್ದುದು ಈಗ ಇತಿಹಾಸ. ನಾವು ಲೇಖಕರಾಗಿ ಅವಮಾನದಿಂದ ಒಪ್ಪಿಕೊಳ್ಳಬೇಕಾದ ಇತಿಹಾಸ.

ನಮ್ಮ ಎಲ್ಲ ಆದರ್ಶವಾದಿ ಕನಸುಗಳನ್ನೂ ಒಡೆದು ಹಾಕಿದ್ದು ಸೋವಿಯತ್ ರಷ್ಯಾದ ಇತಿಹಾಸ ಮತ್ತು ಮಾವೋ ದಬ್ಬಾಳಿಕೆಯ ಚೀನಾದ ಇತಿಹಾಸ. ಆದರೂ ನಾವು ನಮ್ಮ ಒಳಿತಿನ ಆಸೆಯನ್ನು –  ಎಂದರೆ ಶೋಷಣಾರಹಿತ ನಾಗರಿಕತೆಯ ಆಸೆಯನ್ನು –  ಕಾಪಾಡಿಕೊಳ್ಳಬೇಕಾಗಿದೆ. ಈ ಧ್ವನಿ ಕೆಡದಂತೆ ಲೆನಿನ್‌ರನ್ನು, ಮಾವೋರನ್ನು ಟೀಕಿಸುವುದು ಬಹಳ ಕಷ್ಟದ ಕೆಲಸವೆಂಬುದು ನಮಗೆಲ್ಲರಿಗೂ ಮತ್ತೆ ಮತ್ತೆ ಮನದಟ್ಟಾಗುವಂತೆ ಅವರಿಗಿಂತ ಕೊಳಕರಾದ ರಾಕ್ಷಸರು ನಮ್ಮ ಮಾತುಗಳನ್ನು ಬಳಸಿಕೊಳ್ಳಬಹುದಾದ ಅಪಾಯವನ್ನು ನಾವು ಯಾವತ್ತೂ ಎದುರಿಸುತ್ತಿರುತ್ತೇವೆ. ಎರಡು ದುಷ್ಟ ಬಣಗಳು ಎದುರಾದಾಗ ನಾವು ಆಡಿದ ಮಾತುಗಳು ಒಂದೋ ಅಲ್ಲಿ, ಅಥವಾ ಇಲ್ಲಿ ಸಲ್ಲುವಂತೆ ವಿನಿಯೋಗವಾಗುತ್ತದೆಂಬುದು ನಮ್ಮ ಕಾಲದ ದುರಂತ.

ಪ್ರತಿನಿತ್ಯ ಈ ಬಗೆಯ ರಾಜಕೀಯ ಹೊಯ್ದಾಟವನ್ನು ನನ್ನ ದೈನಿಕ ಕರ್ತವ್ಯದಲ್ಲೇ ಉಪಕುಲಪತಿಯಾಗಿ ಕೇರಳದಲ್ಲಿ ಎದುರಿಸಬೇಕಾಗಿ ಬಂದ ನಾನು ಒಂದೆರಡು ಪಾಠ ಕಲಿತಿದ್ದೇನೆಂದು ಹೇಳಬಲ್ಲೆ. ಇದಕ್ಕೆ ಕಾರಣ ನಾನು ಮಾತ್ರವಲ್ಲ. ಕೇರಳದ ಎಡಪಂಥೀಯರು ನನ್ನನ್ನು ವೈರಿಯೆಂದು ಭಾವಿಸದೆ ಸಹಿಸಿಕೊಂಡರು. ಎಂದೆಂದೂ ನನ್ನ ನಿತ್ಯದ ಕಾರ್ಯದಲ್ಲಿ ಅಡಚಣೆಗಳನ್ನು ತರಲಿಲ್ಲ. ಆಗಿನ ಗೃಹಮಂತ್ರಿಗಳಾಗಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಶ್ರೀ ರಾಮಕೃಷ್ಣನ್ ನನಗೊಮ್ಮೆ ಹೇಳಿದರು: “ನೀವು ಬರೆಯುವುದು ನಮಗೆ ಇಷ್ಟವಾಗದಿದ್ದರೂ, ನೀವು ಎಂದರೆ ನಮಗೆ ಇಷ್ಟ.” ನಾನು ಅವರಿಗೆ ವಿನಯದಲ್ಲಿ ಹೇಳಿದೆ: “ನೀವು ಮಾರ್ಕ್ಸ್‌‌ವಾದಿಗಳು. ನಿಮ್ಮ ರಾಜಕೀಯ ನಿಲುವುಗಳನ್ನು ವೈಚಾರಿಕವಾಗಿ ವಿಮರ್ಶಿಸಿ ಬದಲಾಯಿಸಿಕೊಳ್ಳಬಲ್ಲ ಸಮರ್ಥರು. ಆದ್ದರಿಂದ ನಾನೀಗ ಬರೆಯುತ್ತಿರುವುದೂ ನಿಮಗೆ ಇಷ್ಟವಾದೀತೆಂಬ ಭರವಸೆ ನನಗಿದೆ.” ಶ್ರೀ ರಾಮಕೃಷ್ಣನ್ ಸ್ನೇಹದಿಂದ ನಕ್ಕರು.

ಶ್ರೀ ನಂಬೂದರಿ ಪಾದರಂತೆ ಇನ್ನೊಬ್ಬ ಹಿರಿಯ ನಾಯಕರೆಂದರೆ ಸಿಪಿಐನ ಶ್ರೀ ಅಚ್ಚುತ ಮೆನನ್. ಅವರು ಸಾಯುವ ಮುಂಚೆ ನನಗೊಂದು ಪತ್ರ ಬರೆದು ನನ್ನ ಒಟ್ಟು ನಿಲುವನ್ನೂ, ನಾನು ಕೇರಳದಲ್ಲಿ ಕಾರ್ಯನಿರ್ವಹಿಸಿದ ಕ್ರಮವನ್ನೂ ವೈಯಕ್ತಿಕವಾಗಿ ಮೆಚ್ಚಿ ಸಮರ್ಥಿಸಿದ್ದರು. ಇದರಿಂದ ನನಗಾದ ಸಂತೋಷ ಅಪಾರವಾದ್ದು.

ನಾನು ಮತ್ತೆ ೧೯೯೩ರಲ್ಲಿ ಚೀನಾಕ್ಕೆ ಹೋಗಬೇಕಾಗಿ ಬಂದಿತು. ಅದೂ ಜೂನ್ ತಿಂಗಳಲ್ಲಿ ಮಾತ್ರವಲ್ಲ ಟಯನಾಮೆನ್ ಚೌಕದಲ್ಲಿ ಆದ ದುರಂತದ ದಿನವೇ. ನಾವು ಇಳಿದದ್ದು ಕೂಡ ಅದೇ ಹಿಂದಿನ ಹೋಟೆಲಿನಲ್ಲಿ. ನಮ್ಮ ದುಭಾಷಿ ಮಾತ್ರ ಹಿಂದಿನವಳಾಗಿರಲಿಲ್ಲ. ಅವಳು ತನ್ನ ಕೆಲಸ ಕಳೆದುಕೊಂಡು ಅಮೆರಿಕಾಕ್ಕೆ ಹೋದಳೆಂದು ಸುದ್ದಿಯಿತ್ತು.

ಈ ಬಾರಿ ಸಾಂಸ್ಕೃತಿಕ ನಿಯೋಗವನ್ನು ಕರೆದುಕೊಂಡು ಹೋಗಿದ್ದ ನಾನು ನಮ್ಮ ಸದಸ್ಯರ ಅನುಮತಿ ಪಡೆದು ಒಂದು ವಿಚಾರವನ್ನು ಎಲ್ಲ ಮುಖ್ಯ ಲೇಖಕರಲ್ಲೂ ನಿವೇದಿಸಿಕೊಂಡಿದ್ದೆ. ಈ ವಿಚಾರ ನನ್ನ ಅತ್ಯಂತ ಆಳದ ಭಾವನೆಯಾಗಿತ್ತು: ಆದ್ದರಿಂದ ನಾವು ಭೇಟಿಯಾಗುವ ಲೇಖಕರಲ್ಲಿ ಈ ಮುಂದಿನ ಮಾತುಗಳನ್ನು ನಿವೇದಿಸಿಕೊಳ್ಳುವುದೆಂದು ನಿರ್ಧರಿಸಿದ್ದೆ: “ಟಿಬೆಟ್ ದೇಶದ ಸಂಸ್ಕೃತಿಯನ್ನು ಚೀನಾ ನಾಶಮಾಡಕೂಡದು. ಮಾರ್ಕ್ಸ್‌‌ವಾದ ತನ್ನ ಶಕ್ತಿ ಪಡೆಯುವುದು ತನ್ನ ಸರ್ವಜ್ಞತೆಯ arroganceನಿಂದ. ಪ್ರಪಂಚದ ಎಲ್ಲ ಸತ್ಯಗಳನ್ನೂ –  ಭಾವನಾತ್ಮಕ ಸತ್ಯಗಳನ್ನೂ, ಆಧ್ಯಾತ್ಮಿಕ ಸತ್ಯಗಳನ್ನೂ –  ತನ್ನ ಡಯಲೆಕ್ಟ್‌ನಲ್ಲಿ ಅರಿಯಬಹುದೆಂಬ ಮಾರ್ಕ್ಸ್‌‌ವಾದದ ನಿಲುವೇ ಈ arroganceಗೆ ಕಾರಣ. ಮಾರ್ಕ್ಸ್‌‌ವಾದ ನಮಗೆ ಆಕರ್ಷಕವಾಗುವುದೂ ಈ ಕಾರಣದಿಂದಲೇ. ಆದರೆ ಟಿಬೆಟ್ಟಿನ ಬೌದ್ಧಧರ್ಮ ನಮ್ಮ ಅರಿವಿಗೆ ತನ್ನ ಅಮೂಲ್ಯವಾದ ಒಳನೋಟಗಳನ್ನು ಕೊಟ್ಟಿದೆ. ಟಿಬೆಟ್ಟಿನ ಸಂಸ್ಕೃತಿಯನ್ನು ನಾಶಮಾಡುವುದು ಅತ್ಯಂತ ಹೇಯವಾದ ಅಪರಾದ. ಇಂತಹ ಅಪರಾಧ ಚೀನಾದಲ್ಲಿ ಮಾತ್ರವಲ್ಲದೆ, ಭಾರತ ಕೂಡಿದಂತೆ ಎಲ್ಲೆಲ್ಲೂ ನಾವು ಕಾಣುತ್ತೇವೆ. ಆದರೆ ಚೀನಾದ ಕಮ್ಯುನಿಸ್ಟ್ ಪ್ರಭುತ್ವ ಹೀಗೆ ಹೇಯವಾದ್ದನ್ನು ನೈತಿಕ ಗೊಂದಲವಿಲ್ಲದೆ, ಆಂತರಿಕ ವಿರೋಧವಿಲ್ಲದೆ ತಾನು ಮಾಡುವುದು ಧರ್ಮವೆಂದು ತಿಳಿದು ಮಾಡುತ್ತದೆ. ಇಂಥ ನಿಲುವು ಭಯಾನಕವಾದ್ದು.” ಹೀಗೆ ಮಾತುಗಳನ್ನಾಡಿ, ನಾವು ಆಡಿದ ಮಾತು ಭಾರತ ಸರಕಾರದ ನಿಲುವು ಅಲ್ಲ; ಲೇಖಕರಾಗಿ ನಮ್ಮ ನಿಲುವು ಎಂದು ಹೇಳಿ ಇನ್ನೊಂದು ಮಾತನ್ನು ಮರೆಯದಂತೆ ಸೇರಿಸುತ್ತಿದ್ದೆ. “ನೀವು ನಮ್ಮ ಮಾತಿಗೆ ಪ್ರತಿಕ್ರಿಯೆಯಾಗಿ ಏನನ್ನಾದರೂ ಹೇಳಬೇಕೆಂಬ ಒತ್ತಾಯವಿಲ್ಲ” ಈ ಕೊನೆಯ ಮಾತಿನ ಉದ್ದೇಶವೇನೆಂದು ಓದುಗರು ಊಹಿಸಬಹುದು.

ನಾವು ಭೇಟಿಯಾದ ಬಹಳ ದೊಡ್ಡ ಲೇಖಕರು ನನ್ನ ಮಾತುಗಳನ್ನು ಕೇಳಿಸಿಕೊಂಡು ಸೌಜನ್ಯದಿಂದ ಸುಮ್ಮನಿರುತ್ತಿದ್ದರು. ಬೀಳ್ಕೊಡುವಾಗ ಅವರು ಕೈಕುಲುಕುವ ಸ್ನೇಹದ ಒತ್ತಡದಿಂದ ನಮಗೆ ಅವರ ಭಾವನೆ ತಿಳಿಯುವಂತಿತ್ತು.

* * *

 

ಜೂನ್ , ಶನಿವಾರ

ಬೀಜಿಂಗ್‌ನಲ್ಲಿ ಸಂಜೆ. ತುಂತುರು ಮಳೆಯಿಂದ ಒದ್ದೆಯಾಗಿ ಕೋಮಲವೆನ್ನಿಸುವ ಈ ಸಂಜೆ ದೆಹಲಿಯಲ್ಲಿ ಅನಿರೀಕ್ಷಿತವಾಗಿ ಒದಗಿಬಿಡುವ ಸಂಜೆಯಾಗಿರಬಹುದಿತ್ತು. ವಿಮಾನ ಕೆಳಗಿಳಿಯುತ್ತಿದ್ದಂತೆ ಎತ್ತರದಿಂದ ಕಾಣುತ್ತಾ ಹೋದ ಬೀಜಿಂಗ್ ನಗರದ ಸುತ್ತುನೋಟ ಮನೋಹರವಾಗಿತ್ತು. ಹೀಗೆ ನೋಡಿದಾಗ ಬೀಜಿಂಗ್ ದೆಹಲಿಯಂತೆಯೇ ಇನ್ನೊಂದು ನಗರ. ಆದರೆ ಈ ಬೀಜಿಂಗ್‌ನಲ್ಲಿ ದೆಹಲಿಯಲ್ಲಿ ಕಾಣುವುದಕ್ಕಿಂತ ಹೆಚ್ಚು ಎತ್ತರದ ಕಟ್ಟಡಗಳು ಇರುವಂತೆ ತೋರುತ್ತವೆಯಲ್ಲವೆ ಎಂದು ತೊಂಡೂಲ್ಕರ್‌ಗೆ ಹೇಳಿದೆ.

ನಮ್ಮನ್ನು ಸ್ವಾಗತಿಸಲು ಬಂದಿದ್ದ ಚೀನೀ ಹುಡುಗಿ ವ್ಯಾಕುಲೆಯಾಗಿ ಕಂಡಳು. ಅವರ ಕಣ್ಣಿನಿಂದಾಗಿ ಎಲ್ಲ ಚೀನಿಯರೂ ನನಗೆ ಹಾಗೆ ಕಾಣಿಸಬಹುದೆಂದು ಸುಮ್ಮನಾದೆ. ಅವಳು ತೊಟ್ಟ ಉಡುಪು ಸರಳವಾಗಿತ್ತು. ಅವರ ಸಪೂರವಾದ ಮೈಕಟ್ಟಿಗೆ ಒಪ್ಪುವಂತಿತ್ತು. ಅವಳ ಇಂಗ್ಲಿಷ್ ಖುದ್ದಾಗಿ ಅಮೆರಿಕನ್ನರಿಂದ ಕಲಿತದ್ದೇ ಇರಬೇಕು. ಅವಳಿಗೆ ಎಷ್ಟು ವಯಸ್ಸೋ ಊಹಿಸಲು ಬಾರದು. ಅವಳಿಗೊಂದು ಮಗುವಿದೆಯೆಂದು ನನಗೆ ತಿಳಿದದ್ದು, ಆಮೇಲೆ. ನಾವು ಪರದೇಶದವರು ಎಂದು ಅವಳು ಸಂಕೋಚಪಡಲಿಲ್ಲ –  ಬೀಜಿಂಗ್‌ನ ಸದ್ಯದ ಬಿಕ್ಕಟ್ಟನ್ನು ವಿವರಿಸಿದಳು. ಟ್ರಾಫಿಕ್ ಜಾಮಾಗಿದೆ ಎಂದಳು. ಊರಿನ ಒಳಗಿನಿಂದ ಹೋಗುವಂತಿಲ್ಲ, ಸುತ್ತಿ ಬಳಸಿ ನಮ್ಮ ಪಂಚತಾರಾ ಹೋಟೆಲನ್ನು ತಲುಪಬೇಕಾಗುತ್ತದೆ ಎಂದು ಕ್ಷಮೆಕೇಳಿ ತಾನು ತಂದಿದ್ದ ಕಾರಿನಲ್ಲಿ ಹತ್ತಿಸಿಕೊಂಡಳು.

ದಾರಿಯುದ್ದ ಕಂಡ ದೃಶ್ಯಗಳು ಆಶ್ಚರ್ಯವನ್ನುಂಟುಮಾಡಿದವು. ಎಲ್ಲೆಲ್ಲೂ ಮಿಲಿಟರಿ ವಾಹನಗಳು. ಅವುಗಳ ಸುತ್ತ ಯುವಕ ಯುವತಿಯರು, ವಯಸ್ಸಾದವರು ಕೂಡಾ. ಮಾತೋ ಮಾತು ಅವರ ನಡುವೆ. ಕೆಲವು ಯುವಕರಂತೂ ವಾಹನಗಳ ಮುಂಭಾಗದ ಬಾನೆಟ್ ಹತ್ತಿ ಕೂತಿದ್ದರು. ಶರಟುಗಳನ್ನು ಕಳಚಿಕೂತ ಈ ಯುವಜನರ ದೇಹಗಳು ಕಟ್ಟುಮಸ್ತಾಗಿ ಸಂಜೆಯ ಮೃದು ಬಿಸಿಲಿನಲ್ಲಿ ಹೊಳೆಯುತ್ತಿದ್ದವು. ಯಾವ ಸೈನಿಕನೂ ಕೋಪಗೊಂಡಂತಾಗಲೀ ಬಿಗುಮಾನದಿಂದ ಇರುವಂತಾಗಲೀ ನನಗೆ ತೋರಲಿಲ್ಲ. ಬದಲಾಗಿ ತಮ್ಮನ್ನು ಸುತ್ತುವರಿದ ನಾಗರಿಕರ ವಾದವನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು. ಚಪ್ಪಟೆಯೆನ್ನಿಸುವ ರೈತರ ಸರಳ ಸಾಮಾನ್ಯ ಮುಖಗಳು ಈ ಸೈನಿಕರದ್ದು. ಯೂನಿಫಾರಂನಿಂದಾಗಿ ಅವರನ್ನು ಸೈನಿಕರೆಂದು ಗುರುತಿಸಬೇಕು –  ಅಷ್ಟೆ. ಇಂಡಿಯಾದ ದೊಂಬಿಗಳ ಕಿರುಚಾಟ ಕ್ರೌರ್ಯಗಳನ್ನು ನಾನು ಎಲ್ಲೂ ಕಾಣಲಿಲ್ಲ.

ಸೈನಿಕರ ಜೊತೆ ಯುವಜನರು ಭಾವುಕರಾಗಿ ಮಾತಾಡುತ್ತಿದ್ದಾರೆ ಎಂಬುದನ್ನು ಅವರ ಹಾವಭಾವಗಳಿಂದ ತಿಳಿಯಬಹುದಾಗಿತ್ತು. ಕೆಲವು ಚೌಕಗಳಲ್ಲಿ ಸೈನಿಕರು ಆಚೀಚೆ ನೋಡದಂತೆ ತಮ್ಮ ಮೂಗಿನ ನೇರಕ್ಕೆ ಮಾರ್ಚ್‌ ಮಾಡುತ್ತಿದ್ದರು. ಅವರಲ್ಲಿ ಒಬ್ಬೊಬ್ಬನಿಗೆ ಒಬ್ಬೊಬ್ಬ ಯುವಕ ಹಿಂದೆ ಬಿದ್ದಿದ್ದ. ಸೈನಿಕರು ಕೇಳಿಸಿಕೊಳ್ಳಲಿ, ಬಿಡಲಿ –  ಈ ಯುವಜನರು ಅವರ ಮನ ಒಲಿಸಲು ಏನೋ ವಾದ ಮಾಡುತ್ತಲೇ ನಡೆದಿದ್ದರು. ಒಂದೇ ಒಂದು ವೃತ್ತದಲ್ಲಿ ನಾವು ಕಂಡದ್ದು ಈ ಅಹಿಂಸಾವ್ರತಕ್ಕೆ ಅಪವಾದವಾಗಿತ್ತು. ರೈಫಲನ್ನು ಹೆಗಲಿಗೇರಿಸಿ ಕೈಬೀಸುತ್ತ ಶಿಸ್ತಾಗಿ ನಡೆಯುತ್ತಿದ್ದ ಸೈನಿಕರನ್ನು ದೂರದಿಂದ ಯುವಜನರು ಚೀತ್ಕರಿಸಿ ಅಪಹಾಸ್ಯ ಮಾಡುವುದನ್ನು ನಾನು ನೋಡಿದೆ.

* * *

ನಮ್ಮ ಪಂಚತಾರ ಹೋಟೆಲು ಪ್ರಪಂಚದ ಅಂಥ ಎಲ್ಲ ಹೋಟೆಲುಗಳಂತೆ, ಶುಭ್ರವಾಗಿ, ಆದರ ಹುಟ್ಟಿಸದಂತೆ ಟಿಪ್‌ಟಾಪಾಗಿ ಇತ್ತು. ನಮ್ಮ ನಮ್ಮ ರೂಮುಗಳನ್ನು ತಲುಪಿದ್ದಾಯಿತು. ಟೀ ಕುಡಿದು ಸುಮ್ಮನೇ ಕೂತಿರುವುದು ಸಹಿಸಲಿಲ್ಲ. ದೀರ್ಘ ಪ್ರಯಾಣದಿಂದ ಕಾಲುಗಳು ಜೊಂಪು ಹತ್ತಿ ಕರಕರೆಯಾಗುತ್ತಿತ್ತು ಬೇರೆ. ನಾವೆಲ್ಲರೂ ಲಿಫ್ಟಿನಲ್ಲಿ ಇಳಿಯುತ್ತಿದ್ದಾಗ, ಅದು ಮೇಡ್ ಇನ್ ಜಪಾನ್ ಎಂಬುದನ್ನು ಗಮನಿಸಿದೆ. ತೋರುಗಾಣಿಕೆಯಲ್ಲಿ ಭಾರತೀಯರನ್ನು ಮೀರಿಸುವ ಠಾಕುಠೀಕು ಚೀನೀಯರಿಗೆ ಸಂಸ್ಕೃತಿ ಕ್ರಾಂತಿಯ ನಂತರ ಲಭಿಸಿದೆ –  ಅವರ ಪಂಚತಾರ ದ್ವೀಪಗಳಲ್ಲಿ. ಹೋಟೆಲಿನ ಹಜಾರದಲ್ಲಿ ಚೀನೀಯರ ‘ಕಿಚ್‌’ ಆದ ಡ್ರೇಗನ್ನುಗಳನ್ನು ದರ್ಶಿಸುತ್ತ ರಸ್ತೆ ಸೇರಿದೆವು.

ಅದೊಂದು ಮರೆಯಲಾರದ ದೃಶ್ಯ. ಸದ್ದಿಲ್ಲದಂತೆ ಸಹಸ್ರಾರು ಜನರು ಸೈಕಲ್‌ಗಳ ಮೇಲೆ ಶುಭ್ರವಾದ ರಸ್ತೆಗಳಲ್ಲಿ ಚಲಿಸುತ್ತಿದ್ದರು. ಇಂಡಿಯಾದ ರಸ್ತೆಯ ಮೇಲೆ ಈ ಬಗೆಯ ಸಮಾನತೆಯ ಭಾವನೆಯನ್ನು ನಾನು ಅನುಭವಿಸಿದ್ದಿಲ್ಲ. ಎತ್ತರದ ಹಸಿರಾದ ಪಾಪ್ಲರ್ ವೃಕ್ಷಗಳ ನಡುವಿನ ಬೀದಿಗಳಲ್ಲಿ ಈ ಸೈಕಲ್‌ಗಳು ಚಲಿಸುತ್ತವೆ. ಅಲ್ಲೊಂದು ಇಲ್ಲೊಂದು ಪರದೇಶದ ಕಾರು ಮುಖ್ಯರಸ್ತೆಯಲ್ಲಿ ಚಲಿಸುತ್ತದೆ.

ದಿನದಿನದ ಸಾಂಸಾರಿಕ ಜೀವನದ ದೃಶ್ಯಗಳನ್ನು ಎಲ್ಲೆಲ್ಲೂ ರಸ್ತೆಗಳ ಮೇಲೆ ಕಂಡೆವು. ಅವುಗಳನ್ನು ನೋಡುತ್ತಿದ್ದಾಗ ಚೀನಾ ಇನ್ನೊಂದು ಕ್ರಾಂತಿಯ, ಅಥವಾ ರಕ್ತಪಾತದ ಸಿದ್ಧತೆಯಲ್ಲಿದೆ ಎಂದು ಹೇಳುವಂತಿಲ್ಲ. ಇದನ್ನು ನೆನೆದಾಗ ಯಾವಾಗಲೂ ಚರಿತ್ರೆಯಲ್ಲಿ ಎಲ್ಲೆಲ್ಲೂ ಹೀಗೆಯೇ ಅಲ್ಲವೆ ಎಂದು ಬೆರಗಾಗುತ್ತದೆ.

ಪ್ರತಿನಿತ್ಯ ಆಗಬೇಕಾದ್ದೆಲ್ಲ ಆಗುತ್ತಿರುತ್ತದೆ; ಯಾವ ಕೋಲಾಹಲದಲ್ಲೂ ಜೀವನ ಸಾಗುತ್ತಿರುತ್ತದೆ. ರಕ್ತಪಾತಕ್ಕಿಂತ ಮುನ್ನ ಬೀಜಿಂಗ್‌ನ ಬೀದಿಗಳಲ್ಲಿ ಅದರ ಪರಿವೆಯಿಲ್ಲದೆ ತರಕಾರಿ ಹೊತ್ತು ಒಯ್ಯುತ್ತಿದ್ದ ಸೈಕಲ್ ರಿಕ್ಷಾಗಳು; ಖರಬೂಜ ಹಣ್ಣುಗಳನ್ನು ಸಾಗಿಸುತ್ತಿದ್ದ ಕೈಗಾಡಿಗಳು; ಮರದ ಕೆಳಗೆ ಒಂದು ಚಾಪೆ ಹಾಸಿ ಅದರ ಮೇಲೆ ಕತ್ತರಿಸಿಟ್ಟ ಕೆಂಪು ಕಲ್ಲಂಗಡಿ ಹಣ್ಣು ಮತ್ತು ಅದರ ಮೇಲೆ ನೊಣ ಕೂರದಂತೆ ಬೀಸಣಿಗೆ ಬೀಸುತ್ತ ಯಾರನ್ನಾದರೂ ನಿರೀಕ್ಷಿಸುವಂತೆ ಕೂತಿರುವ ಮುದುಕಿ. ತಾವು ಪಡೆಯಬಹುದಾದ ಒಂದೇ ಒಂದು ಮಗುವನ್ನು, ಅದೊಂದು ಅನರ್ಘ್ಯರತ್ನ ಎಂಬಂತೆ, ಅಕ್ಕರೆಯಿಂದ ಮಗುವಿನ ಕಣ್ಣಿಗೆ ತಮ್ಮ ಕಣ್ಣು ಕೀಲಿಸಿ ಪ್ರಾಮ್‌ನಲ್ಲಿ ತಳ್ಳುತ್ತಿದ್ದ ದಂಪತಿಗಳು.

ರಸ್ತೆಯ ಆಚೆ ಈಚೆ ಕೆಲವು ಹಿತ್ತಲು ತೋಟಗಳನ್ನೂ ನೋಡಿದ್ದಾಯಿತು. ಅವುಗಳಲ್ಲಿ ಇಡೀ ಸಂಸಾರ ದುಡಿಯುವುದನ್ನು ಕಂಡು ಚೈನಾದ ಹೊಸ ಆರ್ಥಿಕ ಸುಧಾರಣೆಯನ್ನು ಅರ್ಥಮಾಡಿಕೊಳ್ಳಲು ನಾವು ಯತ್ನಿಸಿದೆವು. ತಮ್ಮ ಪಾಡಿಗೆ ತಾವಿರುವ ಇಂಥವರನ್ನೆಲ್ಲ ನೋಡುತ್ತ, ಮರಗಳ ಸಾಲುಗಳ ಕೆಳಗೆ ನಾವು ನಡೆಯುತ್ತಿದ್ದಾಗ ಈ ದೈನಿಕಗಳ ಪ್ರಪಂಚದಲ್ಲಿ ವಿಶೇಷವಾದ್ದು ಏನೋ ಆಗುತ್ತಿದೆ ಎಂಬುದೂ ಮನಸ್ಸಿಗೆ ಬರುವಂತೆ ಹಲವು ದೃಶ್ಯಗಳು ಎದುರಾದವು.

ಈ ದೃಶ್ಯಗಳೆಂದರೆ: ಉತ್ಕಟವಾಗಿ ಚರ್ಚಿಸುತ್ತ ಬೀದಿಯ ಮಗ್ಗಲುಗಳಲ್ಲಿ ಸೇರಿದ ಹಲವು ಗುಂಪುಗಳು. ಇವು ಸಣ್ಣ ಸಣ್ಣ ಗುಂಪುಗಳಾದರೂ ಅನಿರೀಕ್ಷಿತವಾದ ಏನೋ ಹೊಸದನ್ನು ತಮ್ಮ ಚರಿತ್ರೆಯಲ್ಲಿ ಎದುರಾಗುವ ಸನ್ನಾಹಗಳಂತೆ ಅವುಗಳಲ್ಲಿ ಚರ್ಚೆ ನಡೆದಿತ್ತು. ನಮ್ಮ ದೇಶದಂತೆ ಇಲ್ಲಿಯೂ ಬಾಯಿ ಮತ್ತು ಕಿವಿಗಳು ಸತ್ಯದ ವಾಹಕಗಳು. ಪತ್ರಿಕೆಗಳ ಮೂಲಕ ತಲುಪಿಸಲ್ಪಡುವ ಸುದ್ದಿಯೇ ಬೇರೆ. ಕಿವಿಯಿಂದ ಕಿವಿಗೆ ಆಪ್ತ ವಾಕ್ಯಗಳಾಗಿ ‘ಹಬ್ಬು’ವ ಸುದ್ದಿಯೇ ಬೇರೆ. ಮೌಖಿಕ ಸಂಪ್ರದಾಯ ಜೀವಂತವಿರುವ ಭಾರತ ಚೀನಾದಂತಹ ದೇಶಗಳಲ್ಲಿ ಬೀದಿಯ ಮೂಲೆಗಳು, ಕ್ಷೌರಿಕರ ಅಂಗಡಿಗಳು, ಚಾದುಕಾನುಗಳು, ಬಸ್‌ಸ್ಟ್ಯಾಂಡುಗಳು ಸತ್ಯ ಬಿತ್ತಿ, ಬೆಳೆಯುವ, ಬೆಳೆದು ಹಬ್ಬುತ್ತ ವೇಗವಾಗಿ ಒಂದು ಮೂಲೆಯಿಂದ ಸಾವಿರಾರು ಮೈಲು ದೂರದ ಇನ್ನೊಂದು ಮೂಲೆಗೆ ತಲುಪುವ –  ಹಲವು ಭಾಷೆಗಳನ್ನು, ಮನಸ್ಸುಗಳನ್ನು ದಾಟಿಯೂ ತಲುಪುವ –  ಜೀವಂತ ಕ್ಷೇತ್ರಗಳು.

* * *

ಮುಂದೆ ಸಂಭವಿಸಲಿದ್ದ ಅನಾಹುತದ ಮುನ್ಸೂಚನೆಯಾಗಿ ನಾವು ಈ ಗುಂಪುಗಳ ಚರ್ಚೆಯನ್ನು ಕಾಣಲಿಲ್ಲ. ಇಡೀ ನಗರ ಮತ್ತೆ ಹುಟ್ಟಲು ಸಿದ್ಧವಾಗುತ್ತ, ಗಮನಿಸುತ್ತ, ಕಿವಿಗೊಡುತ್ತ, ಮನ ಒಲಿಸುವಂತೆ ನಿವೇದಿಸುತ್ತ, ವಾದಿಸುತ್ತ ಕಾಯುತ್ತಿರುವಂತೆ ಇತ್ತು. ಮುಗ್ಧರು ಮಾತ್ರ ಹೀಗೆ ಭರವಸೆಯಲ್ಲಿ ಕಾಯಬಲ್ಲರು. ಎಷ್ಟು ತೀವ್ರವಾದ ಚರ್ಚೆಯಲ್ಲೂ ತಮ್ಮ ಮಗುವಿಗೆ ಇನ್ನೇನು ಹಾಲು ಕುಡಿಸಬೇಕಾದ ಹೊತ್ತು ಎಂಬುದನ್ನು ಅವರು ಮರೆಯುವುದಿಲ್ಲ. ಹಾಲು ಕುಡಿಸಿಯಾದ ಮೇಲೆ ಚರಿತ್ರೆ ಚಲಿಸುತ್ತದೆ ಎಂದು ಅವರು ತಿಳಿದು ಚರಿತ್ರೆಯ ಗಾಲಿಗೆ ಕೈಹಚ್ಚಿರುತ್ತಾರೆ.

ನಮಗೆ ಕೆಲವು ಅನುಮಾನಗಳಿದ್ದವು. ಬಂಡೆದ್ದ ಈ ಚೀನೀ ವಿದ್ಯಾರ್ಥಿಗಳಿಗೆ ಅಮೆರಿಕಾ ಮಾದರಿಯಾಗಿ ಕಂಡಿತ್ತು. ಟೈನಾಮೇನ್ ಚೌಕದಲ್ಲಿ ಇವರು ಅಮೆರಿಕಾದ ಸ್ಟ್ಯಾಚೂ ಆಫ್ ಲಿಬರ‍್ಟಿಯನ್ನು ಸಂಕೇತವಾಗಿ ನಿಲ್ಲಿಸಿದ್ದರು. ವೈಯಕ್ತಿವಾಗಿ ನನಗಂತೂ ಈ ವಿಗ್ರಹ ಸುಂದರವೆಂದು ಅನ್ನಿಸಿದ್ದಿಲ್ಲ. ತಮ್ಮ ದೇಶದ ಒಳಗೆ ಪ್ರಜಾತಂತ್ರವನ್ನು ಆಚರಿಸುವ ಅಮೆರಿಕನ್ ಸರ್ಕಾರವಂತೂ ಪರದೇಶಗಳಲ್ಲಿ ಎತ್ತಿಹಿಡಿಯುವುದು ಸಾಮಾನ್ಯವಾಗಿ ಮಿಲಿಟರಿ ಸರ್ವಾಧಿಕಾರಿಗಳನ್ನು. ಈ ಚೀನೀ ವಿದ್ಯಾರ್ಥಿಗಳೂ ಅಷ್ಟೆ: ಟಿಬೆಟ್ಟಿನ ಜನರ ಸ್ವಾಯತ್ತತೆಯ ಬೇಡಿಕೆಯನ್ನು ಅವರು ಮಾನ್ಯ ಮಾಡುವಂತೆ ನಮಗೆ ಕಂಡಿರಲಿಲ್ಲ. ಅವರ ಸ್ವಾತಂತ್ರ್ಯದ ಹೋರಾಟದ ಹಿಂದೆ ನಿಶ್ಚಿತ ತಿಳುವಳಿಕೆ ಇದ್ದಂತೆ ನಮಗೆ ತೋರಿರಲಿಲ್ಲ.

ಟೈನಾಮನ್ ಚೌಕದಲ್ಲಿ ವಿದ್ಯಾರ್ಥಿಗಳು ಎರಡು ಬೇಡಿಕೆಗಳನ್ನು ಮುಂದಿಟ್ಟು ದಂಗೆ ಎದ್ದಿದ್ದರು. ಮೊದಲನೆಯದು ಎಲ್ಲರಿಗೂ ಅರ್ಥವಾಗುವಂಥದು. ನಮ್ಮ ಭಾರತದಲ್ಲೂ ಸರ್ವತ್ರ ವ್ಯಾಪಿಸಿರುವ ರೋಗ ಅದು: ಭ್ರಷ್ಟಾಚಾರ. ಭ್ರಷ್ಟಾಚಾರ ಈಗಿಂದೀಗಲೇ ಕೊನೆಯಾಗಬೇಕೆಂಬ ಅವರ ಆಗ್ರಹಕ್ಕೆ ಎಲ್ಲ ಸಾಮಾನ್ಯ ಸಂಸಾರವಂದಿಗರ ಬೆಂಬಲವಿತ್ತು. ಇನ್ನೊಂದು ಬೇಡಿಕೆ ಆದರ್ಶಪರವಾದ್ದು: ರಾಜಕೀಯ ಸ್ವಾತಂತ್ರ್ಯ, ಪೂರ್ಣ ಸ್ವಾತಂತ್ರ್ಯ – ಅಧಿಕಾರದಲ್ಲಿರುವವರನ್ನು ಟೀಕಿಸುವ ಸ್ವಾತಂತ್ರ್ಯ, ತಮಗೆ ಬೇಕಾದವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಪ್ರಜಾತಂತ್ರ ಜಾರಿಗೆ ಬಂದರೆ ಭ್ರಷ್ಟಾಚಾರವೂ ಕೊನೆಯಾಗುತ್ತದೆಂದು ಈ ಮುಗ್ಧ ಯುವಜನರು ತಿಳಿದಂತೆ ಇತ್ತು. ಅಂದರೆ, ಭಾರತದ ವಿಷಯ ಅವರಿಗೆ ತಿಳಿಯದೇನೊ ಎಂದು ನಮಗೆ ಅನುಮಾನ.

ಆದರೂ ಯುವಜನರು ಪ್ರಪಂಚದ ಮನಸ್ಸನ್ನು ಗೆದ್ದಿದ್ದರು. ತುರ್ತುಪರಿಸ್ಥಿತಿಗೆ ಮುಂಚೆ ತಮ್ಮ ಇಳಿವಯಸ್ಸಿನಲ್ಲಿ ಜಯಪ್ರಕಾಶರು ಅನ್ಯಾಯದ ವಿರುದ್ಧ ಪೊಲೀಸರೂ, ಸೈನಿಕರೂ ಬಂಡೇಳಬೇಕೆಂದು ಕರೆಕೊಟ್ಟಿದ್ದರು. ಹಾಗೆಯೇ ಚೀನಾದ ಈ ಯುವಜನರು ಸೈನ್ಯದ ಮನಸ್ಸನ್ನು ಒಲಿಸಿಕೊಳ್ಳಬಹುದೆಂದು ತಿಳಿದಿದ್ದರು. ಈ ನಂಬಿಕೆ ಬೆರಗು ಹುಟ್ಟಿಸುವಷ್ಟು ಅಪ್ಪಟವಾಗಿತ್ತು. ಆದ್ದರಿಂದ ತನ್ನ ಸ್ವರೂಪದಲ್ಲೇ ಅಹಿಂಸಾತ್ಮಕವಾಗಿತ್ತು.

ಈ ಯುವಜನರಲ್ಲಿ ಬಹುಮಂದಿಗೆ ವಯಸ್ಸು ಹದಿನೆಂಟೋ ಹತ್ತೊಂಬತ್ತೋ ಇದ್ದೀತು. ಪ್ರಾಯಶಃ ಅವರವರ ತಂದೆತಾಯಿಗಳು ಪಡೆದ ಮುದ್ದಿನಲ್ಲಿ ಬೆಳೆದ ಒಂಟಿಮಕ್ಕಳು ಅವರು. ಆದ್ದರಿಂದ ತಮ್ಮ ಬದುಕು ಎಷ್ಟು ಅಮೂಲ್ಯವೆಂದು ಅವರು ತಿಳಿದಿರಲೇಬೇಕು. ಶುಷ್ಕಕಾರಣಗಳಿಗಾಗಿ ಬೀದಿಯಲ್ಲಿ ಓಡಿಬಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುವ ಮೂರ್ಖರಂತೆ ನಮಗವರು ಕಂಡಿರಲಿಲ್ಲ. ಆದ್ದರಿಂದ ಅವರ ರೋಷದ ಹಿಂದಿದ್ದ ನೈತಿಕತೆ, ಜೀವನ ಪ್ರೀತಿ ನಮ್ಮ ಎಲ್ಲ ಅನುಮಾನಗಳನ್ನೂ ಗೆಲ್ಲುವ ಸಾಮರ್ಥ್ಯ ಪಡೆದಿತ್ತು.

 

ಜೂನ್, ಭಾನುವಾರ

ಪಂಚತಾರಾ ಹೋಟೆಲಿನ ಹಾಸಿಗೆ ಅತಿ ಮೆತ್ತಗಾದ್ದರಿಂದ ನಾನು ರತ್ನಗಂಬಳಿ ಹಾಸಿದ ನೆಲದ ಮೇಲೆ ದಿಂಬಿಟ್ಟು ಮಲಗಿ ಟೀವಿಯನ್ನು ನೋಡತೊಡಗಿದೆ. ಅದು ಶನಿವಾರದ ರಾತ್ರೆಯಾದ್ದರಿಂದ ಹತ್ತು ನಿಮಿಷಕ್ಕೆ ಸರಿಯಾಗಿ ಇಂಗ್ಲಿಷ್ ವಾರ್ತೆಗಳಿದ್ದವು. ಈ ವಾರ್ತೆಗಳ ಸತ್ಯಪ್ರಿಯತೆ ಮತ್ತು ಅಂತರರಾಷ್ಟ್ರೀಯ ಬೀಸು ನನಗೆ ಪ್ರಿಯವೆನ್ನಿಸಿದವು. ಪೋಲಂಡ್‌ನಲ್ಲೂ ಕಮ್ಯುನಿಸ್ಟ್ ಏಕಾಧಿಪತ್ಯ ವಿರೋಧವಾಗಿ ಚಳವಳಿ ನಡೆದಿತ್ತು. ವಿರೋಧದ ಸಾಲಿಡಾರಿಟಿಗೇ ಬಹುಮತ ದೊರೆಯಬಹುದೆಂದು ವಾರ್ತೆಯಿತ್ತು. ಪ್ರಜಾತಂತ್ರಕ್ಕಾಗಿ ನಡೆದ ಚೀನೀ ಯುವಜನರ ಹೋರಾಟವು ಯಶಸ್ವಿಯಾದೀತೆಂದು ಭರವಸೆ ಹುಟ್ಟುವಂತಿತ್ತು – ಆ ವಾರ್ತೆಯನ್ನು ಬಿತ್ತಿರಿಸುವ ಕ್ರಮ. ಈ ಕಮ್ಯುನಿಸ್ಟ್ ದೇಶಗಳು ಸಾಧಿಸಿಕೊಂಡ ಅಕ್ಷರತೆ ಮತ್ತು ಸಾಮಾಜಿಕ ನ್ಯಾಯಗಳ ಜೊತೆ ಪ್ರಜಾತಂತ್ರದ ಮುಕ್ತ ಮನಸ್ಸು ಸೇರಿಕೊಂಡಲ್ಲಿ, ಹೊಟ್ಟೆಬಾಕರಾದ ಬಂಡವಾಳ ಶಾಹೀ ದೇಶಗಳಿಗಿಂತ ಈ ದೇಶಗಳು ಹೆಚ್ಚು ಸ್ವಸ್ಥವೂ ಆರೋಗ್ಯಶಾಲಿಯೂ ಆಗಬಹುದೆಂಬ ಭರವಸೆಗೆ ಅವಕಾಶವಿತ್ತು.

ಕಾರ್ಪೆಟ್ಟಿನ ಮೇಲೆ ನಿದ್ರಿಸಲು ಪ್ರಯತ್ನಿಸುತ್ತಿದ್ದಂತೆ, ನಿಲ್ದಾಣದಿಂದ ಕಾರಿನಲ್ಲಿ ಬರುವಾಗ ಕಂಡ ಒಂದು ದೃಶ್ಯ ನನಗೆ ಥಟ್ಟನೆ ನೆನಪಾಯಿತು. ಅಂಗಿಯಿಲ್ಲದ ಮೈಯಲ್ಲಿ ನಿಂತು, ಸೈನಿಕರ ಜೊತೆ ವಾದಿಸುತ್ತಿದ್ದ, ತುಂಟು ಹರ್ಷದಲ್ಲಿ ಮಿನುಗುವ ಕಣ್ಣುಗಳ ಯುವಕನೊಬ್ಬ ನನ್ನನ್ನು ಕಂಡು ಕೈಬೀಸಿ ಕರೆದಿದ್ದ. ತನ್ನ ಜೊತೆ ಕೂಡಿಕೋ ಎಂದು ಇಂಗ್ಲಿಷಲ್ಲಿ ಕೂಗಿದ್ದ. ಅವನ ತುಂಟು ಒತ್ತಾಯದಿಂದ ನನಗೆ ಮುಜುಗರವಾಗಿತ್ತು. ಕೊಟ್ಟಾಯಂನಲ್ಲಿ ಉಪಕುಲಪತಿಯಾಗಿ ಘನತೆಯಿಂದ ಓಡಾಡುತ್ತ ನನ್ನ ಹಿಂದಿನ ರಾಜಕೀಯ ಪ್ರತಿಭಟನೆಗಳನ್ನು ಮರೆಯತೊಡಗಿದ್ದ ನಾನು ಕಸಿವಿಸಿಗೊಂಡಿದ್ದೆ.

ಭಾನುವಾರ ಬೆಳಿಗ್ಗೆ ಎದ್ದು ರೂಮಿನಲ್ಲಿ ಹಿಂದಿನ ರಾತ್ರೆ ತಂದಿಟ್ಟಿದ್ದ ದೊಡ್ಡ ಫ್ಲಾಸ್ಕಿನಿಂದ ಬಿಸಿನೀರನ್ನು ಒಂದು ದೊಡ್ಡ ಜಾರ್‌ಗೆ ಹೂಯ್ದು, ಅದರಲ್ಲಿ ಮಲ್ಲಿಗೆ ವಾಸನೆಯ ಹಸಿರು ಚಹಾದ ಪುಡಿ ಹಾಕಿ ಇಷ್ಟಪಡುತ್ತ ಕುಡಿದೆ.

ಹೊರಗೆ ಲಾಬಿಯಲ್ಲಿ ಲೇಖಕ ಮಿತ್ರರು ಆಗಲೇ ಸೇರಿದ್ದರು –  ಬೆಳಗಿನ ಉಪಹಾರಕ್ಕೆಂದು. ನಮ್ಮ ವ್ಯಾಕುಲ ಕಣ್ಣಿನ ದುಭಾಷಿ ಬಂದಳು. ಅವಳ ಮುಖ ಕಾಂತಿಹೀನವಾಗಿತ್ತು. ರಾತ್ರೆ ನಿದ್ದೆ ಮಾಡಿದಂತೆ ತೋರಲಿಲ್ಲ. ಮಾತಾಡಲು ಯತ್ನಿಸುತ್ತ ಕಣ್ಣಿನಲ್ಲಿ ನೀರು ತುಂಬಿ ಗದ್ಗದಿಸಿದಳು. ನಾವೆಲ್ಲರೂ ಅವಳ ಸುತ್ತ ನಿಂತು ಪ್ರಶ್ನಾರ್ಥಕವಾಗಿ ನೋಡುತ್ತ ಅವಳ ಮಾತಿಗೆ ಕಾದೆವು.

ತನ್ನ ಜೀವನದಲ್ಲಿ ಅಂಥ ಇನ್ನೊಂದು ಘಟನೆಯಾಗಿರಲಿಲ್ಲ ಎಂದು ದುಭಾಷಿ ಶುರುಮಾಡಿದಳು. ಸಾವಿರಾರು ಯುವಕರನ್ನು ಮಿಲಿಟರಿ ಟ್ಯಾಂಕುಗಳು ಚಲಿಸುತ್ತ ಅಪ್ಪಚ್ಚಿ ಮಾಡಿದಲ್ಲದೆ, ಗುಂಡಿಕ್ಕಿ ಕೊಂದಿದ್ದವು. ಎಷ್ಟು ಜನ ಸತ್ತಿರಬಹುದೆಂದು ಖಚಿತವಾಗಿ ಅವಳಿಗೆ ತಿಳಿಯದು. ಮುನ್ನೆಚ್ಚರಿಕೆ ಕೊಡದಂತೆ ತಮ್ಮ ಮೇಲೆ ಏರಿಬಂದ ಟ್ಯಾಂಕುಗಳಿಂದ ಓಡಿ ಪಾರಾದ ಯುವಜನರು ಈಗ ಬೀದಿ ಬೀದಿಗಳಲ್ಲಿ ಉದ್ರಿಕ್ತರಾಗಿ ಚಲಿಸುತ್ತ, ತಾವು ಕಂಡ ಸರ್ಕಾರಿ ವಾಹನಗಳಿಗೆ ಬೆಂಕಿಯಿಡತೊಡಗಿದ್ದರು. ನಮ್ಮ ಹೋಟೆಲಿನ ಹೆಚ್ಚಿನ ಕೆಲಸಗಾರರು ಬಂದಿರಲಿಲ್ಲ. ಇಡೀ ನಗರದಲ್ಲಿ ಚಲನೆ ಸ್ತಬ್ಧವಾಗಿತ್ತು. ನಮಗೆ ಬೆಳಗಿನ ಉಪಹಾರ ಅಗತ್ಯವಿದ್ದಷ್ಟು ಸಿಗುವುದು ನಿಶ್ಚಯವಿರಲಿಲ್ಲ. ಇಂಥ ಆಪತ್ತಿನ ಸಮಯದಲ್ಲೂ ಚೀನೀ ಸರ್ಕಾರ ನಮ್ಮನ್ನು ಯಾಕೆ ಕರೆಸಿಕೊಂಡಿತೆಂದು ನಮಗೆ ಆಶ್ಚರ್ಯವಾಯಿತು. ಯಾಕೆಂದರೆ ನಾವು ಭಾರತ ಬಿಡುವ ಮುಂಚೆಯೇ ಟೈನಾಮನ್ ಚೌಕದಲ್ಲಿ ಆಂದೋಳನ ಪ್ರಾರಂಭವಾಗಿತ್ತು.

ದುಭಾಷಿ ಕ್ಷಮೆಯಾಚಿಸಿದಳು ವಿಧಿವತ್ತಾಗಿ: ನಮ್ಮ ದೇಶದ ಅತಿಥಿಗಳು ನೀವು, ನಿಮ್ಮನ್ನು ಯಥೋಚಿತವಾಗಿ ನಮಗೆ ಸತ್ಕರಿಸಲು ಆಗುತ್ತಿಲ್ಲ, ಇತ್ಯಾದಿ. ಇಡೀ ದೇಶದ ಹೊಣೆ ಹೊತ್ತವಳಂತ ಆ ಚಿಕ್ಕಹುಡುಗಿ ಕರ್ತವ್ಯನಿರತಳಾದದ್ದು ಕಂಡು ನಮಗೆ ಅವಳ ಬಗ್ಗೆ ಅಭಿಮಾನವೆನ್ನಿಸಿತು. ಟೇಬಲ್ಲಿನ ಮೇಲಿದ್ದ ಬ್ರೆಡ್ಡು, ಬೆಣ್ಣೆ, ಜಾಮುಗಳೇ ಸಾಕೆಂದು ನಾವು ಉಪಾಹಾರ ಮುಗಿಸಿದೆವು.

ಭಾರತದ ಎಂಬೆಸಿಯಿಂದ ನನಗೆ ಒಂದು ಕರೆ ಬಂದಿತು. ಎಂಬೆಸಿಯ ಸುರಕ್ಷಿತ ಸ್ಥಳದಲ್ಲೇ ರಾತ್ರೆಯೆಲ್ಲ ಗುಂಡಿನ ಶಬ್ದ ಕೇಳಿಸಿತ್ತಂತೆ. ಮುಂದೇನಾಗುವುದೋ ಯಾರಿಗೂ ತಿಳಿಯದು. ಆದ್ದರಿಂದ ನಾವು ಯಾರೂ ಹೋಟೆಲ್ ಬಿಟ್ಟು ಹೊರಗೆ ಕದಲಕೂಡದು.

ನಾವು ಹೋಟೆಲಿನ ಹೊರಗಿನ ಪಾರ್ಕ್‌‌ನಲ್ಲಿ ಮುಂದೇನು ತಿಳಿಯದೆ ನಿಂತುಕೊಂಡೆವು. ಹೋಟೆಲಿನ ಗೇಟಿನ ಎರಡು ಪಕ್ಕದಲ್ಲೂ ಎರಡು ದೊಡ್ಡ ಕೆಂಪು ಬಾವುಟಗಳು ಇದ್ದವು. ಒಂದರಲ್ಲಿ “ಕಮ್ಯುನಿಸ್ಟ್ ಪಕ್ಷ ಹಾಕಿಕೊಟ್ಟ ಕರೆಕ್ಟ್ ಲೈನಿನಲ್ಲಿ ನಡೆಯಿರಿ” ಎಂದು ಬರೆದಿತ್ತು. ಇನ್ನೊಂದರಲ್ಲಿ “ಸಮಾಜವಾದ ಚಿರಯುವಾಗಲಿ” ಎಂದು ಬರೆದಿತ್ತು. ಚೀನೀ ಭಾಷೆಯಲ್ಲಿದ್ದ ಈ ಬರಹವನ್ನು ನಮ್ಮ ದುಭಾಷಿ ಭಾಷಾಂತರಿಸಿದ್ದಳು.

ಇದ್ದಕ್ಕಿದ್ದಂತೆ ಕೂಗುತ್ತ ಒಂದು ಯುವಜನರ ಗುಂಪು ಹೋಟೆಲಿನ ಗೇಟಿನ ಎದುರು ಬಂದು ನಿಂತಿತು. ಯೂನಿಫಾರಂ ಹಾಕಿಕೊಂಡಿದ್ದ ಗಾರ್ಡು ಗೇಟನ್ನು ಮುಚ್ಚಿ ಬೀಗ ಹಾಕಿದ. ಯುವಜನರು ಕೈಬೀಸಿ ಕೂಗತೊಡಗಿದರು –  ಈ ಎರಡು ಬಾವುಟಗಳನ್ನು ಕಿತ್ತೆಸೆಯುವಂತೆ. ಹೋಟೆಲಿನ ಮ್ಯಾನೇಜರ್ ಬಂದು ಯುವಕರನ್ನು ಸಮಾಧಾನಪಡಿಸಲು ಯತ್ನಿಸಿ ಸೋತ. ಎರಡು ಆಳುಗಳನ್ನು ಕರೆದು ಬಾವುಟಗಳನ್ನು ತೆಗೆಸಿದ. ಯುವಜನರು ಬಾವುಟಗಳನ್ನು ಕಿತ್ತುಕೊಂಡು ಅವಕ್ಕೆ ಬೆಂಕಿಯಿಟ್ಟರು; ಗೇಟಿನ ಬಾಗಿಲನ್ನು ಒತ್ತಾಯಪಡಿಸಿ ತೆಗೆಸಿ ಹೋಟೆಲ್ ಕಾರ್ಮಿಕರನ್ನು ಕಿರುಚುತ್ತ ಆಹ್ವಾನಿಸತೊಡಗಿದರು.

ಶ್ರೀಮತಿ ಮೃಣಾಲ್ ಪಾಂಡೆ, ಹಿಂದಿಯ ಪ್ರಸಿದ್ಧ ಲೇಖಕಿ ನಮ್ಮ ಗುಂಪಿನ ಒಬ್ಬ ಸದಸ್ಯೆ. ಬಹು ದಿಟ್ಟ ಮಹಿಳೆ – ‘ಸಾಪ್ತಾಹಿಕ್ ಹಿಂದುಸ್ತಾನ್‌’ದ ಸಂಪಾದಕಿ. ತನ್ನ ಮನಸ್ಸಿನಲ್ಲಿರುವುದನ್ನು ಹಿಂದಿಯಲ್ಲಾಗಲೀ ಇಂಗ್ಲಿಷಿನಲ್ಲಾಗಲಿ ಸೂಕ್ಷ್ಮವಾಗಿ, ಅಸ್ಖಲಿತವಾಗಿ ಹೇಳಬಲ್ಲ ನಿಪುಣೆ ಈಕೆ. ಬಾವುಟಗಳು ಬೆಂಕಿಯಲ್ಲಿ ಉರಿಯಲು ತೊಡಗಿದ್ದೇ ಈಕೆ ಕೈಯಲ್ಲಿ ಕ್ಯಾಮರಾ ಹಿಡಿದು ಗೇಟಿನ ಕಡೆ ಓಡಲು ತೊಡಗಿದಳು.

ಹಿಂದಿನ ರಾತ್ರೆ ತುಂತುರು ಮಳೆ ಬಿದ್ದದ್ದರಿಂದ ನೆಲ ಜಾರುತ್ತಿತ್ತು. ಮೃಣಾಲ್ ಪಾಂಡೆ ರಸ್ತೆ ತಲುಪಿದ್ದೇ ಜಾರಿಬಿದ್ದಳು. ಕೋಪೋದ್ರಿಕ್ತರಾಗಿ ಕಿರುಚಾಡುತ್ತಿದ್ದ ಯುವಕರು ಮೃಣಾಲ್ ಬಿದ್ದಿದ್ದನ್ನು ಕಂಡು ಥಟ್ಟನೇ ಕಿರುವುಚುದನ್ನು ನಿಲ್ಲಿಸಿ ಮೃದುವಾಗಿಬಿಟ್ಟರು. ಓಡಿ ಬಂದು ರಸ್ತೆಯಿಂದ ಅವಳನ್ನು ಹಿಡಿದೆತ್ತಿ ನಿಲ್ಲಿಸಿದರು. ಮತ್ತೆ ಸ್ಲೋಗನ್ನು ಕೂಗುತ್ತಾ ಮುಂದುವರೆದರು.

ನಾನು ದುಭಾಷಿಯನ್ನು ಕೇಳಿದೆ: “ಇವರು ಕೋಪದಲ್ಲಿ ಏನು ಮಾಡಬೇಕು ತಿಳಿಯದೆ ಕೆಂಪು ಬಾವುಟ ಸುಟ್ಟರೊ? ಅಥವಾ ಇವರು ಸಮಾಜವಾದವನ್ನೇ ತಿರಸ್ಕರಿಸುತ್ತಾರೋ?” ದುಭಾಷಿ ಅನುಮಾನವೇ ಇಲ್ಲದಂತೆ ಹೇಳಿದಳು: “ಛೇ ಇವರು ಸೋಷಲಿಸ್ಟ್ ಕ್ರಾಂತಿಗೆ ವಿರೋಧಿಗಳಲ್ಲವೇ ಅಲ್ಲ –  ಗುಂಪಿನಲ್ಲಿ ಕೆಲವು ಮಾವೋ ಚಿತ್ರವನ್ನು ಹಿಡಿದುಕೊಂಡದ್ದು ನಿನಗೆ ಕಾಣಿಸಲಿಲ್ಲವೆ?”

ಆದರೆ ಈ ಹುಡುಗರನ್ನು ಹತ್ತಿಕ್ಕಲಿರುವ ಸರಕಾರ ಅವರನ್ನು ‘ಕೌಂಟರ್ ರೆವಲ್ಯೂಶನರಿ’ ಎಂದು ಹಣೆಪಟ್ಟಿ ಹಚ್ಚಿ ವಿವರಿಸಿ ಬಿಡುವುದಂತೂ ನನಗೆ ಖಚಿತವೆನ್ನಿಸಿತ್ತು. ಕಮ್ಯುನಿಸ್ಟರಿಗೆ ತಮಗಾಗದವರನ್ನು ಹೀಗೆ ಜರೆಯಲು ಎಷ್ಟೊಂದು ಪದಗುಚ್ಛಗಳಿವೆ ಎಂಬುದು ಇಂದು ಬಂಡಾಯವೆದ್ದ ನಿನ್ನೆಯ ಕಮ್ಯುನಿಸ್ಟರಿಗೆ ತಿಳಿಯದೆ?

* * *

ಭಾರತೀಯ ವಿದ್ಯಾರ್ಥಿಯೊಬ್ಬ ನಾವು ಬಂದಿದ್ದೇವೆಂದು ತಿಳಿದು ಸೈಕಲ್ ಹತ್ತಿ ಸಾಹಸಪಟ್ಟು ನಮ್ಮನ್ನು ನೋಡಲು ಬಂದಿದ್ದ. ಅವನ ಜೊತೆ ನಾವು ಒಂದು ಕಾಫಿಟೇಬಲ್ಲಿನ ಸುತ್ತ ಕೂತು ದುಭಾಷಿ ನಮಗೆ ತಂದುಕೊಟ್ಟ ಬಿಸಿನೀರನ್ನು ಇನ್‌ಸ್ಟಂಟ್ ಕಾಫಿಗೆ ಬೆರೆಸಿ ಕರಿಕಾಫಿ ಕುಡಿಯುತ್ತ, ವಿಮಾನದಿಂದ ಬರುವಾಗ ಕೊಂಡು ತಂದಿದ್ದ ‘555’ –  ಸಿಗರೇಟು ಸೇದುತ್ತ ಹರಟಲು ಶುರುಮಾಡಿದೆವು. ಯುನಿವರ್ಸಿಟಿಯಲ್ಲಿ ಎಲ್ಲೆಲ್ಲೂ ಒಂದು ಪೋಸ್ಟರ್ ಕಾಣಿಸಿಕೊಂಡಿತ್ತಂತೆ: “ನಾವು ವಿದ್ಯಾರ್ಥಿಗಳು ಯಾವ ರಾಜಕೀಯ ಒಳಗುಂಪಿನ ಕೈಗೊಂಬೆಗಳೂ ಅಲ್ಲ.” ಅಂದರೆ ಅದರ ಅರ್ಥ: ‘ಜನರಲ್ ಸೆಕ್ರಟರಿಯಾಗಿದ್ದು ಪಾರ್ಟಿಯಿಂದ ಬಹಿಷ್ಕೃತನಾದ ಜಾವೋ ಜಿಯಾಂಗ್‌ನ ಹಿಂಬಾಲಕರು ನಾವಲ್ಲ’ ಎಂದು. ಜಿಯಾಂಗ್‌ನನ್ನು ಭ್ರಷ್ಟಾಚಾರದ ಆಪಾದನೆಯ ಮೇಲೆ ಅಧಿಕಾರದಿಂದ ಉಚ್ಛಾಟಿಸಲಾಗಿತ್ತು. ಕೆಂಪು ಸೈನ್ಯದ ಕೆಲವು ಯೂನಿಟ್‌ಗಳು ಟೈನಾಮನ್ ಚೌಕದಲ್ಲಿ ಆಂದೋಲನ ನಡೆಸುತ್ತಿದ್ದ ಯುವಜನರ ಜೊತೆ ಸಂವಾದ ಯಾಕೆ ನಡೆಸಿದ್ದವು? ಯಾಕೆ ಈ ಯೂನಿಟ್‌ಗಳು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ನಿರಾಕರಿಸಿದವು? ಇದಕ್ಕೆ ಹಲವು ವಿವರಣೆಗಳು ಇದ್ದವು: ಮೊದಲನೆಯದು, ಸಿನಿಕಲ್ ವಿವರಣೆ. ರೆಡ್ ಆರ್ಮಿ ತನ್ನ ಮುಂಚಿನ ಪ್ರಾಶಸ್ತ್ಯ ಕಳೆದುಕೊಂಡಿದೆ. ಯಾಕೆಂದರೆ ಅಧಿಕಾರದಲ್ಲಿರುವ ಪ್ರೆಸಿಡೆಂಟ್ ಡೆಂಗ್ ಸೈನ್ಯಕ್ಕೆ ಯಾವ ರಾಜಕೀಯವೂ ಇರಕೂಡದೆಂದು ಅದನ್ನು ಪ್ರೊಫೆಶನಲ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅವರು ಕೇವಲ ವೃತ್ತಿಬದ್ಧರಾದರೆ ದೇಶಕ್ಕೆ ಕ್ಷೇಮವೆಂದು ತಿಳಿದಿದ್ದಾನೆ. ಐಡಿಯಾಲಜಿ –  ಎಂದರೆ ರಾಜಕೀಯ ಸಿದ್ಧಾಂತವೇ ಎಲ್ಲ ಸಂಸ್ಥೆಗಳ ನಿರ್ವಹಣೆಯ ಅಡಿಪಾಯವಾಗಬೇಕೆಂಬುದು ಇದೇ ಸಮಾಜವನ್ನು ಮಾಡರ್ನೈಸ್ ಮಾಡಲು ಹೊರಟ ಡೆಂಗ್‌ಗೆ ಒಪ್ಪಿಗೆಯಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಆಂದೋಳನವನ್ನು ಬಳಸಿಕೊಂಡು ರೆಡ್‌ ಆರ್ಮಿ ತನ್ನ ಮೊದಲಿನ ಪ್ರಭುತ್ವವನ್ನು ಗಳಿಸಿಕೊಳ್ಳಲು ಹವಣಿಸಿದೆ.

ಈ ವಿವರಣೆಯನ್ನು ಒಪ್ಪದ ಇನ್ನೊಂದು ಆದರ್ಶಪರವಾದ ವಿವರಣೆಯೂ ಇತ್ತು. ರೆಡ್ ಆರ್ಮಿ ದೇಶಪ್ರೇಮಿ. ಬಿಡುಗಡೆಗಾಗಿ ರಾಜಕೀಯ ಹೋರಾಟ ನಡೆಸಿದ ಕ್ರಾಂತಿಕಾರಿ ಸೈನ್ಯ. ಅವರು ಪ್ರಭುತ್ವದ ಆಣತಿಯ ಮೇಲೆ ಗುಂಡು ಹಾರಿಸುವ ವೃತ್ತಿಪರ ಸೈನ್ಯವಲ್ಲವಾದ್ದರಿಂದ ದೇಶಪ್ರೇಮಿಗಳಾದ ಯುವಜನರನ್ನು ಕೊಲ್ಲಲು ನಿರಾಕರಿಸಿದ್ದು.

ಹಾಗಾದರೆ ಗುಂಡುಹಾರಿಸಿ ಅಮಾನುಷ ರೀತಿಯಲ್ಲಿ ಕೊಂದವರು ಯಾರು? ಉತ್ತರ: ಒಂದು ಸಂಖ್ಯೆ. ಅದು ೨೭. ಚೈನಾದಲ್ಲಿ ಎಲ್ಲರೂ ದ್ವೇಷಿಸುವ ಭಯಪಡುವ ಸಂಖ್ಯೆಯೆಂದರೆ, ಈ ೨೭. ಇವರು ಯಾರೆಂದರೆ ಪ್ರೆಸಿಡೆಂಟ್ ಡೆಂಗ್‌ನ ಬಂಧುವೊಬ್ಬ ಕಮಾಂಡ್ ಮಾಡುವ ಸೈನ್ಯ –  ಕಠಿಣ ಕ್ರೂರ ಮಾರ್ಗದ್ದು. ಈ ೨೭ನ್ನು ಸಿಚುವಾನ್ ಪ್ರಾಂತ್ಯದಿಂದ ಕರೆಸಿದ್ದಂತೆ. ಅವರು ಆಡುವ ಭಾಷೆ ಬೇರೆಯಂತೆ. ಅವರು ಚೈನಾದ ಒಂದು ಮೈನಾರಿಟಿಗೆ ಸೇರಿದವರಂತೆ, ಅಂದರೆ ಶೇಖಡಾ ೯೪ ಜನರಾದ ಬಹುಸಂಖ್ಯಾತ ಹನ್ ಬುಡಕಟ್ಟಿಗೆ ಸೇರದೇ ಇರುವ ಜನರಂತೆ. ನಾನು ಭಾರತವನ್ನೇ ಯೋಚಿಸುತ್ತ ಆತಂಕಪಡುತ್ತ ಈ ವಿವರಣೆ ಕೇಳಿಸಿಕೊಂಡೆ. ಎಲ್ಲ ದೇಶಗಳ ಪ್ರಭುತ್ವದ ಸಂರಕ್ಷಣೆಯೂ ಹೀಗೆ, ಪರಕೀಯರ ಬಳಕೆಯಿಂದ ಆಗುತ್ತಿರಬಹುದು. ಪಂಜಾಬಿನ ಸೈನಿಕರು ತಮಿಳುನಾಡಿನಲ್ಲಿ, ತಮಿಳರು ಪಂಜಾಬಿನಲ್ಲಿ, ಬಿಹಾರಿಗಳು ಕರ್ನಾಟಕದಲ್ಲಿ ದೇಶ ರಕ್ಷಣೆ ಮಾಡುವುದಲ್ಲವೆ? ಗುಂಡು ಹಾರಿಸುತ್ತ ಟ್ಯಾಂಕಿನಲ್ಲಿ ನುಗ್ಗಿದ ಸೈನಿಕರು ಡ್ರಗ್ ಸೇವಿಸಿದ್ದರು ಎಂದು ಯಾವನೋ, ವ್ಯಾಪಾರಕ್ಕೆಂದು ಸ್ವೀಡನ್‌ನಿಂದ ಬಂದವ, ನಮ್ಮ ಕಾಫಿ ಟೇಬಲ್‌ಗೆ ಬಂದು ಹೇಳಿದ. ಗಾಯಗೊಂಡ ಯುವಜನರನ್ನು ಆಸ್ಪತ್ರೆಗೆ ಸಾಗಿಸಲು ಬಂದವರನ್ನೂ ಈ ಸೈನಿಕರು ಕೊಂದರಂತೆ ಎಂದು ಅವನು ನಿಟ್ಟುಸಿರಿಟ್ಟ.

ಈತ ಬೋಳುತಲೆಯ, ಸಾಮಾನ್ಯವಾಗಿ ಸ್ನೇಹಪರನೆಂದು ಭಾಸವಾಗುವ ತೋರವಾದ ಆಲಸ್ಯದ ಮೈಕಟ್ಟಿನ, ಹೊಳೆಯುವ ಗುಂಡುಮುಖದ ಮನುಷ್ಯ. ಅವನು ಒಬ್ಬ ಚೀನಾದ ಹೆಂಗಸನ್ನು ಮದುವೆಯಾಗಿದ್ದ. ಹಿಂದಿನ ದಿನ ಮಧ್ಯಾಹ್ನದ ಊಟಕ್ಕೆಂದು ಒಂದು ರೆಸ್ಟೋರಾಂಟಿಗೆ ಆತ ಹೆಂಡತಿಯ ಜೊತೆ ಹೋಗುತ್ತಿದ್ದಾಗ ಯಾವಳೋ ಹೆಂಗಸನ್ನು ಯಾರೋ ಗುಂಡಿಟ್ಟು ಕೊಂದದ್ದನ್ನು ತಾನು ಕಣ್ಣಾರೆ ಕಂಡೆ ಎಂದು ಅವನು ಹೇಳಿದ. ಇನ್ನು ಮುಂದೆ ‘ಸಿವಿಲ್ ವಾರ್’ ಎಂದು ಮತ್ತೆ ನಿಟ್ಟುಸಿರಿಟ್ಟ. ಒಂದು ಸೈನ್ಯದ ತುಕಡಿಗೆ ವಿರೋಧವಾಗಿ ಇನ್ನೊಂದು ಸೈನ್ಯದ ತುಕಡಿ, ಹಿಂದಿನ ಕಾಲದಂತೆಯೇ ಒಬ್ಬ ವಾರ್ ಲಾರ್ಡ್‌‌ಗೆ ವಿರೋಧವಾಗಿ ಇನ್ನೊಬ್ಬ ವಾರ್ ಲಾರ್ಡ್‌; ಎಲ್ಲ ಹಿಂದಿನ ಕಾಲದಂತೆಯೇ ಎಂದು ತನ್ನ ಒಳನೋಟಕ್ಕೆ ಬೀಗುತ್ತ ಅವನು ಮಾತಾಡುತ್ತಿರುವಂತೆ ತೋರಿತು. ಏಷ್ಯಾವನ್ನು ಯಾವತ್ತೂ ಅನುಮಾನದಿಂದ ಕಂಡು ಟೀಕಿಸುವ ಇನ್ನೊಬ್ಬ ಯುರೋಪಿಯನ್ ಈತ ಎಂದುಕೊಂಡು ಅವನನ್ನು ಕೇಳಿಸಿಕೊಳ್ಳುತ್ತ ಕೂತೆ. ಅವನು ಬಹಳ ವಿಷಯಗಳನ್ನು ತಿಳಿದವನಂತೆ ಮಾತಾಡುತ್ತಿದ್ದ. ಒಬ್ಬ ಬಿಬಿಸಿ ಮನುಷ್ಯ ಅವನಿಗೆ ನಿನ್ನೆ ಹೇಳಿದ್ದನಂತೆ –  ಈ ವಿದ್ಯಾರ್ಥಿಗಳು ಎಷ್ಟು ಚೆನ್ನಾಗಿ ಆಂದೋಳನಕ್ಕೆ ಸಜ್ಜಾಗಿದ್ದಾರೆ ಗೊತ್ತ? ಎಂದು ಪೀಠಿಕೆ ಹಾಕಿ, ಕ್ಷಣ ನಮ್ಮನ್ನು ಕಾಯಿಸಿ ಮುಂದುವರೆದ: “ಗೊತ್ತ? ಅವರು ಡ್ರಮ್ಮುಗಳನ್ನು ಉಪಯೋಗಿಸಿ ನಮ್ಮ ಪೂರ್ವಜರಂತೆಯೇ ಅನುಸಂಧಾನ ಮಾಡುವುದಂತೆ. ಎಲ್ಲ ಎಲೆಕ್ಟ್ರಾನಿಕ್ ಮಾಧ್ಯಮಗಳೂ ಸರ್ಕಾರದ ವಶದಲ್ಲಿದ್ದಾಗ, ನೋಡಿ ಈ ಯುವಕರು ಎದೆಗುಂದಲಿಲ್ಲ. ಆಯಾ ಸ್ಥಳದಲ್ಲಿ ಡ್ರಮ್ಮುಗಳನ್ನಿಟ್ಟುಕೊಂಡು ಬಾರಿಸುತ್ತಾರೆ. ಒಂದು ಡ್ರಮ್ಮಿನಿಂದ ಇನ್ನೊಂದು ಡ್ರಮ್ಮಿಗೆ ಸದ್ದು ಚಲಿಸಿ ಮೆಸೇಜ್ ಮುಟ್ಟುವುದಂತೆ. ಉಬ್ಬತಗ್ಗಿಲ್ಲದ ಪ್ರದೇಶದಲ್ಲಿ ಡ್ರಮ್ಮನ್ನು ಬಳಸುವಂತೆಯೇ ಗಿರಿಪ್ರದೇಶದಲ್ಲಿ ಬೆಂಕಿ ಹಚ್ಚಿ ತಮ್ಮ ಮೆಸೇಜ್‌ಗಳನ್ನು ಕಳಿಸುತ್ತಾರೆ. ಅವರೊಂದು ಹೀಗೆ ಸಂಜ್ಞಾಭಾಷೆಯನ್ನೇ ಸೃಷ್ಟಿಸಿಕೊಂಡಿದ್ದಾರೆ.”

ಭಾರತದಲ್ಲಿ ತುರ್ತುಪರಿಸ್ಥಿತಿ ಕಾಲದಲ್ಲಿ ದೆಹಲಿಯಲ್ಲಿ ಆದದ್ದು ಕಿವಿಯಿಂದ ಕಿವಿಗೆ ಚಲಿಸುತ್ತಾ ಮೈಸೂರನ್ನು ಒಂದೆರಡು ದಿನಗಳಲ್ಲೇ ತಲುಪುತ್ತಿದ್ದುದನ್ನು ಬಲ್ಲ ನನಗಿದು ಆಶ್ಚರ್ಯವೆನ್ನಿಸಲಿಲ್ಲ. ಉಸಿರುಕಟ್ಟಿಸುವ ಸರ್ವಾಧಿಕಾರದ ದಿನಗಳಲ್ಲಿ ಏನಾಗುತ್ತಿದೆಯೆಂದು ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದೇ ರಾಜಕೀಯ ಕ್ರಿಯೆಯಾಗಿ ಪರಿಣಮಿಸುತ್ತದೆ. ಬಾಯಿಯಿಂದ ಬಾಯಿಗೆ ಹಬ್ಬುವ ಸುದ್ದಿ ಹಲವು ಸಾರಿ ಉತ್ಪ್ರೇಕ್ಷೆಗೊಳ್ಳುವುದು ಸಹಜ. ಆದರೆ ಈ ಉತ್ಪ್ರೇಕ್ಷೆಯೂ ಇರುವ ಸತ್ಯವನ್ನು ಇನ್ನಷ್ಟು ಹೊಳೆದು ತೋರುವಂತೆ ಮಾಡುವ ಉಪಾಯವೇ ಆಗಿರುತ್ತದೆ. ಸುದ್ದಿ ಹರಡುತ್ತ ಹೋದಂತೆ ಸತ್ತ ಮೂರು ಸಾವಿರ ಜನರು, ಏಳು ಸಾವಿರ, ಏಳು ಸಾವಿರದ ಎಂಟುನೂರ ಐವತ್ತು, ಎಂಟು ಸಾವಿರ ಹತ್ತು ಸಾವಿರವಾಗುತ್ತ ಹೋಗುತ್ತಾರೆ. ಈ ಉತ್ಪ್ರೇಕ್ಷೆಯಲ್ಲಿ ನಾವು ಕಾಣಬೇಕಾದ್ದು ಸಂಖ್ಯೆಯ ಸತ್ಯವನ್ನಲ್ಲ, ಕ್ರೌರ್ಯದ ಅಮಾನುಷ್ಯ ಸತ್ಯವನ್ನು. ಪುರಾಣಗಳು ಹುಟ್ಟಿಕೊಳ್ಳುವುದೂ ಹೀಗೆಯೇ: ನಮ್ಮ ಅಂತರ್ಯ ಸತ್ಯವನ್ನು ಭಾವುಕವಾಗಿ ಗಮನಿಸುವ ಬಗೆ ಅದು.

* * *

ಸಿಕ್ಕಿದಷ್ಟನ್ನು ತಿಂದಾದ ಮೇಲೆ ನಮ್ಮನ್ನು ಸಮ್ಮರ್ ಪ್ಯಾಲೇಸ್‌ಗೆ ಹೋಗುವಂತೆ ದುಭಾಷಿ ಒತ್ತಾಯಿಸಿದಳು. ಏನನ್ನೂ ಮಾಡದೆ ನಮ್ಮನ್ನು ಹೋಟೆಲಲ್ಲಿ ಕೂರಿಸಿಕೊಂಡಿರುವುದು ಆಕೆಗೂ ಅಕೆಯ ಸಹೋದ್ಯೋಗಿಗಳಿಗೂ ಸರಿಕಂಡಿರಲಿಲ್ಲ. ಅವತ್ತು ಭಾನುವಾರ ಬೇರೆ. ಎಂದಿನಂತಾದರೆ ಪ್ಯಾಲೇಸ್‌ನಲ್ಲಿ ಜನ ಕಿಕ್ಕಿರಿದಿರಬೇಕು. ಅದರೆ ನಾವು ಹೋಗಿ ನೋಡಿದಾಗ ಜನರೇ ಇಲ್ಲದ ಇಡೀ ವಾತಾವರಣ ಖಿನ್ನವಾಗಿತ್ತು. ಕ್ರೂರವಾದ ಸಾಮ್ರಾಟರ ನೆನಪುಗಳನ್ನೆಲ್ಲ ಬಚ್ಚಿಟ್ಟುಕೊಂಡಿದ್ದ ಈ ಅರಮನೆ ಖಿನ್ನವಾಗಿರುವಂತೆ ತೋರಿದ್ದು ಸಹಜವೇ ಎನ್ನಿಸಿತ್ತು. ಇದೇ ಅರಮನೆಯ ಪ್ರದೇಶದಲ್ಲಿ ಸುಂದರವೆಂದು ಕಂಡಿದ್ದೆಂದರೆ ಗಂಭೀರವಾದ ಮುದಿ ಪೈಪ್‌ ವೃಕ್ಷಗಳು. ನಮ್ಮೊಡನಿದ್ದ ಚೈನೀಸ್ ಲೇಖಕ ಒಬ್ಬ ಕ್ರೂರ ರಾಣಿಯ ಬಗ್ಗೆ ದೀರ್ಘವಾಗಿ ಕಥೆ ಹೇಳಿದ. ವಿದೇಶಿಯರಿಗೆ ಚೈನಾವನ್ನು ಮಾರಾಟ ಮಾಡಿದ ಈ ಕ್ರೂರರಾಣಿ ಅಷ್ಟೆಲ್ಲ ಪಾಪಕಾರ್ಯ ಮಾಡಿಯೂ ಸತ್ತದ್ದು ಮಾತ್ರ ಮುದಿ ವಯಸ್ಸಿನಿಂದಾಗಿ.

ಚೀನೀಯರು ರೂಪಕಗಳ ಮೂಲಕ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಹೇಳುವುದು. ಆದ್ದರಿಂದ ಲೇಖಕನ ಉದ್ದೇಶವೇನೇ ಇರಲಿ ನಾನವನು ಹೇಳಿದ ಕಥೆಯನ್ನು ಹೀಗೆ ವ್ಯಾಖ್ಯಾನಿಸಿಕೊಂಡೆ: ಈಗ ಆಳುತ್ತಿರುವ ಕ್ರೂರಿಗಳೂ ಒಂದಲ್ಲ ಒಂದು ದಿನ, ಆಯುಷ್ಯ ತೀರಿಯಾದರೂ ಸಾಯುತ್ತಾರೆ. ಇದು ಕೂಡ ಕ್ರೌರ್ಯ ಕೊನೆಯಾಗಲೇಬೇಕೆಂಬುದಕ್ಕೆ ಇರುವ ಭರವಸೆಯಲ್ಲವೆ?

ನಾವು ಒಂದು ವಿಶಾಲವಾದ ಕೊಳವನ್ನು ನೋಡುತ್ತ ಒಂದು ದೀರ್ಘವಾದ ಕಾರಿಡಾರಿನ ಮೇಲೆ ನಡೆದೆವು. ಆ ಕಾರಿಡಾರಿನ ಮೇಲೆ ನಡೆಯುತ್ತಿದ್ದವರು ನಾವು ಮಾತ್ರ. ಹಿಂದಿನ ಚೈನಾದ ಸಾಮ್ರಾಟ್ ತನಗೂ ತನ್ನ ಕುಟುಂಬಕ್ಕೂ ಮಾತ್ರ ಈ ಕಾರಿಡಾರನ್ನು ಬಳಸುತ್ತಿದ್ದುದಂತೆ. ಕೇವಲ ಏಳು ಜನ ಈ ಕಾರಿಡಾರಿನಲ್ಲಿ ಈ ಸಾಮ್ರಾಟನ ನಂತರ ನಡೆದಾಡಿದ್ದೆಂದರೆ ನಾವು ಮಾತ್ರ ಇರಬಹುದು.

ಚೀನೀ ಲೇಖಕ ಟಾಗೋರ್ ಬಗ್ಗೆ ಮಾತನಾಡಲು ಶುರುಮಾಡಿದ. ನೋಬೆಲ್ ಬಹುಮಾನ ಪಡೆದ ಏಷ್ಯಾದ ಮೊದಲ ಲೇಖಕ ಅವನಲ್ಲವೆ? ನಮ್ಮನ್ನು ಕವಿದ ಖಿನ್ನತೆ ಮರೆಯಲು ಏನಾದರೂ ಮಾತಾಡಬೇಕಿತ್ತು. ಚೈನಾದ ಲೇಖಕಸಂಘದ ಅಧಿಕಾರಿಗಳಿಗೆ ನಮ್ಮ ಡೆಲಿಗೇಶನ್ ಕೊಂಚವಾದರೂ ನಮಗೆ ಹೀಗೆ ಸಂತೋಷ ಕೊಡಬಹುದೆಂದು ಭ್ರಮಿಸುವುದು ಅಗತ್ಯವಾಗಿತ್ತು.

 

ಜೂನ್ , ಸೋಮವಾರ

ಶ್ರೀರಂಗನಾಥನ್ ಚೈನಾದಲ್ಲಿ ನಮ್ಮ ರಾಯಭಾರಿ. ನಿನ್ನೆ ಅವರು ನಮ್ಮನ್ನು ಬಂದು ನೋಡಿದ್ದರು. ರಾಯಭಾರಿಯಾಗಿರಬೇಕಾದ ಎಲ್ಲ ಗುಣಗಳೂ ಅವರಿಗಿದ್ದಂತೆ ಕಂಡಿತು –  ಸಜ್ಜನಿಕೆ, ಜಾಣತನ, ಮುಂದಾಲೋಚನೆ ಸೂಕ್ಷ್ಮಗಳನ್ನು ಗಮನಿಸುವ ಕಿವಿ. ಅವರು ಹೇಳಿದ್ದು ಕಡಿಮೆಯಾದರೂ ಚೈನಾದ ರಾಜಕೀಯವನ್ನು ಅದರ ಹಿಂಬಾಗಿಲಿನಿಂದ ಹೊಕ್ಕು. ಇಣುಕಿ ನೋಡುವುದಕ್ಕೆ ಅಗತ್ಯವಾದ ಕೆಲವು ಒಳನೋಟಗಳನ್ನು ಅವರಿಂದ ಪಡೆದೆವು. ಆದರೆ ನಾವು ಚೈನಾದ ಭವಿಷ್ಯದ ಬಗ್ಗೆ ಯಾವ ತೀರ್ಮಾನಕ್ಕೂ ಬರಗೊಡದಂತೆ ಅವರು ಎಚ್ಚರದಿಂದ ಮಾತಾಡಿದ್ದರು. ಅವರು ನಮಗೆ ಹೇಳಿದ್ದನ್ನು ಭಾರತದ ಸರ್ಕಾರದ ಕಿವಿಗೆಂದು ಕಾದಿರಿಸಿದ್ದಾರೆ ಎಂದು ಅನ್ನಿಸಿತು.

ಇವತ್ತು ನಮ್ಮನ್ನು ಅವರು ಊಟಕ್ಕೆ ಆಹ್ವಾನಿಸಿದ್ದರು. ಕೆಲವು ಮುಖ್ಯ ಚೀನೀ ಬರಹಗಾರರನ್ನೂ ಕರೆದಿದ್ದೇನೆಂದು ನಮಗೆ ಹೇಳಿದ್ದರು. ಸಾಂಸ್ಕೃತಿಕ ಕ್ರಾಂತಿಯಲ್ಲಿ ಶಿಕ್ಷಿಸಲ್ಪಟ್ಟ ಲೇಖಕರು ಅವರು. ಅಂದರೆ, ಪುನರ್ ಶಿಕ್ಷಣಕ್ಕಾಗಿ ಹಳ್ಳಿಗಳಿಗೆ ರವಾನಿಸಲ್ಪಟ್ಟವರು. ನಮ್ಮ ಲೇಖಕ ಗೈಡ್‌ನನ್ನು ಕೇಳಿದ್ದೆ: “ ‘ಪುನರ್ ಶಿಕ್ಷಣ’ವೆಂದರೆ ಏನು?” ಅವನು ಹೇಳಿದ್ದ: “ನಾನೂ ಪಡೆದದ್ದು ಅದು.” ಪರಿಣಾಮವೇನೆಂದು ಅವನ ಮುಖವನ್ನು ನಾನು ನೋಡುತ್ತಿದ್ದಂತೆ ಅವನು ನಕ್ಕು ಹೇಳಿದ್ದು: “ಫೇಲು.”

ನಮ್ಮ ರಾಯಭಾರಿಗಳ ಔತಣಕ್ಕಾಗಿ ನಾವು ಕಾದಿದ್ದೆವು – ಪುನರ್ ಶಿಕ್ಷಣದಲ್ಲಿ ಫೇಲಾದವರಿಂದ ನಾವೇನಾದರೂ ಕಲಿಯಬಹುದು. ಆದರೆ ಔತಣ ಕ್ಯಾನ್ಸಲ್ ಆಗಿದೆಯೆಂದೂ, ಅದಕ್ಕೆ ಕಾರಣ ಖೊಮೇನಿ ಸತ್ತದೆಂದೂ ನಮಗೆ ರಾಯಭಾರ ಕಛೇರಿಯಿಂದ ಫೋನ್ ಬಂದಿತು. ಇದರಿಂದ ನಮ್ಮ ದುಭಾಷಿಗೆ ತುಂಬ ಬೇಸರವೂ ಕರಕರೆಯೂ ಆಯಿತು. ಅದಕ್ಕೆ ನಾನು ಊಹಿಸಿದಂತೆ ಎರಡು ಕಾರಣಗಳಿದ್ದವು. ಒಂದು, ನಮಗೆ ಹೇಗೆ ರಾತ್ರೆಯ ಊಟವನ್ನು ಹೋಟೆಲಲ್ಲಿ ಒದಗಿಸಬಹುದೆಂಬುದು ಮತ್ತು ಸಂಜೆ ಹೇಗೆ ನಮ್ಮನ್ನು ಎಂಗೇಜ್ ಮಾಡಬೇಕೆಂಬುದು: ಎರಡನೆಯದು, ಈ ಸರ್ವಾಧಿಕಾರಿ ಖೊಮೇನಿಗೂ ಪ್ರಜಾತಂತ್ರ ಭಾರತಕ್ಕೂ ಎತ್ತಣೆತ್ತಣ ಸಂಬಂಧವೆಂದು ಅವಳ ಮುಗ್ಧ ರಾಜಕೀಯ ಮನಸ್ಸಿಗೆ ಹೊಳೆಯದೇ ಇದ್ದುದು. ಪಾಶ್ಚಿಮಾತ್ಯ ಇಂಪೀರಿಯಲಿಸಂಗೆ ಹೇಗೆ ಖೊಮೇನಿ ವಿರೋಧವಾಗಿದ್ದ ಎಂಬ ನಮ್ಮ ವಿವರಣೆಗೆ ಅವಳಿಗೆ ಕಮ್ಯುನಿಸ್ಟ್ ಪಕ್ಷ ಮಾಡಿಸಿದ್ದ ಬಾಯಿಪಾಠಗಳನ್ನು ನೆನಪು ಮಾಡಿರಬೇಕು.

ಸಂಜೆ ಬೇಗನೆ ನಾವು ಮೂವರು ಊಟ ಮುಗಿಸಿ ಒಂದು ಸನ್ನಾಹ ಮಾಡಿದೆವು. ಮೃಣಾಲ್‌ ಪಾಂಡೆ ತುಂಬ ದಿಟ್ಟೆ ಮತ್ತು ಜಾಣೆ. ನಮ್ಮನ್ನು ಬಂದು ನೋಡುವಂತೆ ಅವಳಿಗೆ ಪರಿಚಯದ ಬೀಜಿಂಗ್‌ನಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಹೇಳಿದ್ದಳು. ಅವನು ಬಂದದ್ದೇ ನಾವು ಮೂವರು –  ತೊಂಡೂಲ್ಕರ್, ಮೃಣಾಲ್ ಪಾಂಡೆ ಮತ್ತು ನಾನು –  ಎಂಟು ಕಿಲೋಮಿಟರ್ ದೂರದ ಪೀಪಲ್ಸ್ ಯೂನಿವರ್ಸಿಟಿಗೆ ನಡೆದು ಹೋಗಲು ನಿರ್ಧರಿಸಿದೆವು. ವಿದ್ಯಾರ್ಥಿಗಳ ಆಂದೋಳನ ಪ್ರಾರಂಭವಾದದ್ದು ಈ ಯೂನಿವರ್ಸಿಟಿಯಲ್ಲಿ.

ತುಂತುರು ಮಳೆಯಲ್ಲಿ ನಾವು ಹೊರಟೆವು. ದುಭಾಷಿ ಆತಂಕದಲ್ಲಿ ಕೇಳಿದಳು “ಎಲ್ಲಿಗೆ ಹೊರಟಿರಿ?” “ಹೀಗೆ ವಾಕಿಗೆ” ಎಂದು ನಾನು ಕಣ್ಣು ಮಿಟುಕಿಸಿದೆ. “ದೂರ ನಡೆಯುವುದು ಅಪಾಯ. ಜೋಕೆಯಾಗಿರಿ” ಎಂದು ಅವಳು ಆರ್ತಳಾಗಿ ಹೇಳಿದರು.

ಬೀಜಿಂಗ್ ರೋಡುಗಳಲ್ಲಿ ನಡೆದಾಡುವುದೇ ಸುಖವೆನ್ನಿಸಿ ಉಲ್ಲಾಸದಿಂದ ನಾವು ಮಾತನಾಡುತ್ತ ನಡೆದೆವು. ನೂರು ಹೆಜ್ಜೆಗೊಂದರಂತೆ ನಾವು ಸಣ್ಣ ಸಣ್ಣ ಗುಂಪುಗಳನ್ನು ಕಂಡೆವು. ಈ ಗುಂಪುಗಳ ಕೇಂದ್ರಗಳಲ್ಲಿ ಒಬ್ಬೊಬ್ಬನಾದರೂ ಯುವಕನಿರುತ್ತಿದ್ದ. ಉದ್ವಿಗ್ನವಾಗಿ ಮಾತಾಡುತ್ತಿದ್ದ. ಈ ಗುಂಪುಗಳಲ್ಲಿ ನಾವು ಹಿಂಸೆಯ ಭಯವನ್ನು ಕಾಣಲಿಲ್ಲ. ಖಾಲಿ ಕೈಗಾಡಿಗಳನ್ನು ಎಳೆದುಕೊಂಡು ಹೋಗುತ್ತಿದ್ದ ಸೈಕಲ್ ಸವಾರರು ನಿಂತು ನಮ್ಮನ್ನು ಬರುವಿರಾ ಎಂದು ಕೇಳುತ್ತಿದ್ದರು. ತಮ್ಮ ಸಾಮಾನುಗಳನ್ನು ಇಳಿಸಿ ಹಿಂದಿರುಗುತ್ತಿದ್ದರು. ನಾವು ಅವರಿಗೆ ಕೃತಜ್ಞತೆ ಹೇಳಿ ಮುಂದುವರೆದೆವು. ಪೀಪಲ್ಸ್ ಯೂನಿವರ್ಸಿಟಿ ಗೇಟು ತಲುಪುತ್ತಿದ್ದಂತೆ ಕತ್ತಲಾಗಲೂ ತೊಡಗಿತ್ತು. ಪರದೇಶದವರನ್ನು ಯೂನಿವರ್ಸಿಟಿ ಒಳಗೆ ಬಿಡುತ್ತಿರಲಿಲ್ಲವಾದ್ದರಿಂದ ನಮಗೆ ಪ್ರವೇಶ ಸಿಗಲಿಲ್ಲ. ಗೇಟಿನ ಮೇಲೆ ಒಂದು ಹೂಗುಚ್ಚವನ್ನೂ ಕಪ್ಪುಬಟ್ಟೆಯನ್ನೂ ನಾವು ಕಂಡೆವು. ಮೆಗಫೋನ್ ಮೂಲಕ ಯಾರೋ ಯುವಕ ಗಟ್ಟಿಯಾಗಿ ಮಾತಾಡುತ್ತಿರುವುದು ಕೇಳಿಸಿತು. ಅವನ ಮಾತು ಕೇಳಿಸಿಕೊಳ್ಳುತ್ತಿದ್ದವರು ಕೇವಲ ವಿದ್ಯಾರ್ಥಿಗಳಾಗಿ ಇರಲಿಲ್ಲ. ಮಕ್ಕಳನ್ನು ಎತ್ತಿಕೊಂಡು ಬಂದ ಹೆಂಗಸರೂ, ಮುದುಕರೂ ಅಲ್ಲಿದ್ದರು. ಮೃಣಾಲ್ ಪಾಂಡೆ ಕೆಲವು ಚಿತ್ರಗಳನ್ನು ತೆಗೆದುಕೊಂಡ ನಂತರ ನಾವು ಹತ್ತಿರದ ಒಂದು ಹಾಸ್ಟೆಲಿಗೆ ಹೋದೆವು.

ಈ ಹಾಸ್ಟೆಲಿನಲ್ಲಿ ಸುಮಾರು ಒಂದು ವರ್ಷದಿಂದ ವಾಸವಾಗಿದ್ದ ಹಿಂದೀ ಭಾಷಾಂತರಕಾರನೊಬ್ಬನ ರೂಮಿಗೆ ಹೋದೆವು. ಪ್ರಸಿದ್ಧ ಜಾನಪದ ಪಂಡಿತರಾದ ಕೋಮಲ್ ಕೊಠಾರಿ ಇವನನ್ನು ನೋಡುವಂತೆ ನಮಗೆ ಮೊದಲೇ ಹೇಳಿದ್ದರು. ಕಲಕತ್ತದಲ್ಲಿ ಸಿಪಿಐ ಸದಸ್ಯನೂ ಮಾರ್ಕ್ಸ್‌‌ವಾದಿಯೂ ಆದ ಈತನಿಂದ ಚೈನಾ ಬಗ್ಗೆ ತಿಳಿಯುವುದು ಸಾಧ್ಯವೆಂಬ ಆಸೆ ನಮಗೆ ಇತ್ತು.

ಕೋಮಲ್ ಕೊಠಾರಿಯವರು ಕೊಟ್ಟ ಕಾಗದವನ್ನು ನನ್ನಿಂದ ಪಡೆದು ಈ ಹಿಂದೀ ಭಾಷಾಂತರಕಾರ ನಮ್ಮನ್ನು ತುಂಬ ಆದರದಿಂದ ಒಳಗೆ ಕರೆದುಕೊಂಡರು. ಹೆಂಡತಿಯನ್ನು ಕರೆದು ನಮ್ಮನ್ನು ಪರಿಚಯ ಮಾಡಿಕೊಟ್ಟು “ನಿಮಗೆ ಟೀ ಆಗಬಹುದೊ ಕಾಫಿ ಆಗಬಹುದೊ?” ಎಂದು ಕೇಳಿದರು. ನಾನು ಉತ್ತರಿಸುವ ಮುಂದೆಯೇ “ಯಾರು ತಾನೆ ಟೀ ಬೇಕು ಎಂದಾರು, ಅದೂ ಸೌತ್ ಇಂಡಿಯನ್ ಆಗಿದ್ದರೆ?” ಎಂದು ಕಾಫಿ ಮಾಡಲು ಹೇಳಿದರು.

ಅಷ್ಟು ದೂರ ನಡೆದು ಬಂದ ದಣಿದ ನಮಗೆ ಕಾಫಿಗೆ ಕಾಯುವುದು ಹಿತವಾಗಿತ್ತು. ಶೂ ಹಾಕುವುದರಲ್ಲಿರುವ ಸುಖ ಅದನ್ನು ಬಿಚ್ಚುವುದರಲ್ಲಿ ಎಂಬ ಮಾತಿನ ಸತ್ಯವನ್ನೂ ಶೂ ಕಳಚಿ ಅರ್ಥಮಾಡಿಕೊಂಡೆ. ನಾವು ಕಾಲು ಚಾಚಿ ಕೂತು ಆ ಕೋಣೆಯನ್ನು ಭಾರತ ಮಾಡುತ್ತಿದ್ದಂತೆ, ಆ ಕೋಣೆ ಭಾರತವೇ ಆಗಿಬಿಟ್ಟಿತು. ನಾವು ಬಂದಿರುವ ಸುದ್ದಿ ಹೇಗೋ ತಿಳಿದು ಆ ಹಾಸ್ಟೆಲ್‌ನಲ್ಲಿದ್ದ ಭಾರತೀಯರೆಲ್ಲ ಒಬ್ಬೊಬ್ಬರಾಗಿ ಆ ಕೋಣೆಯಲ್ಲಿ ಕಿಕ್ಕಿರಿದರು.

ನಮ್ಮ ಚರ್ಚೆಯಲ್ಲಿ ಉತ್ಸಾಹದಿಂದ ಭಾಗವಹಿಸಿದವರಲ್ಲಿ ನಾನು ಮರೆಯಲಾರದ ಒಬ್ಬ ವಿದ್ಯಾರ್ಥಿಯಿದ್ದ. ಕುರುಚಲು ದಾಡಿಯಲ್ಲಿ ಉಗ್ರವಾಗಿ ಕಾಣುತ್ತಿದ್ದ ಈತನ ಕಣ್ಣುಗಳು ಮಾತ್ರ ಕರುಣೆಯಲ್ಲಿ ಮಿನುಗುತ್ತಿದ್ದವು. ಅವನು ಮಾವೋವಾದಿಯಾಗಿದ್ದ. ಆಮೇಲೆ ಅಲಹಾಬಾದಿನಲ್ಲಿ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿ ಎರಡು ವರ್ಷ ರಜಾ ಪಡೆದು ಚೀನೀ ಭಾಷೆ ಕಲಿಯಲೆಂದು ಆತ ಬೀಜಿಂಗ್‌ಗೆ ಬಂದಿದ್ದ. ಅವನು ಇನ್ನೂ ಎಷ್ಟು ತೀವ್ರವಾಗಿ ತತ್ಪರವಾಗಿ ಮಾವೋಪರ ವಾದಿಸುತ್ತಿದ್ದನೆಂದರೆ ಭಾರತದಲ್ಲೇ ಕೊನೆಯ ಮಾವೋವಾದಿಗೆ ಅವಕಾಶವಿರುವುದೆಂದು ನಾನು ಆಶ್ಚರ್ಯದಿಂದ ಅವನ ವಾದ ಕೇಳಿಸಿಕೊಂಡೆ. ವಿಚಾರಗಳನ್ನು ವ್ಯಾವಹಾರಿಕವಾಗಿ ಕಾಣದೆ ವಿಚಾರಗಳೆಂದೇ ತಲೆಕೆಡಿಸಿಕೊಳ್ಳುವವರು ಹೆಚ್ಚಾಗಿ ಇರುವುದು ಭಾರತದಲ್ಲೇ ಎಂದು ನನಗೆ ಹಲವು ಸಾರಿ ಅನ್ನಿಸಿದೆ. ಕೊನೆಯ ವಿಕ್ಟೋರಿಯನ್ ಯುಗದ ಸಭ್ಯ ಕೂಡ ಭಾರತೀಯನಾದ ನಿರಾಧ್ ಚೌದುರಿಯಲ್ಲವೆ?

ನಮ್ಮ ಡೆಲಿಗೇಶನ್ ಒಟ್ಟಿನಲ್ಲಿ ಎಡಪಂಥೀಯವೆಂದೇ ಅನ್ನಬೇಕು. ಮೃಣಾಲ್ ಪಾಂಡೆ ಸಕ್ರಿಯಳಾದ ಸ್ತ್ರೀವಾದಿ; ತೊಂಡಲ್ಕರ್ ಶೋಷಣೆಗೆ ವಿರೋಧವಾಗಿ ಬರೆಯುವ ಬಂಡಾಯಗಾರ ನಾಟಕಕಾರ; ಭಟ್ಟಾಚಾರ್ಯರು ಗಾಂಧಿವಾದಿಗಳು ಮತ್ತು ಲೋಹಿಯಾ ಜೊತೆ ದುಡಿದವರು; ನಾರಂಗ್ ಉರ್ದು ಸಾಹಿತ್ಯದ ಖ್ಯಾತ ಪಂಡಿತ. ಅವರ ರಾಜಕೀಯ ಧೋರಣೆ ಮಾತ್ರ ನನಗೆ ಅಸ್ಪಷ್ಟವಾಗಿತ್ತು.

ಚೈನಾದಲ್ಲಿ ಸಿವಿಲ್ ವಾರ್ ಆಗುತ್ತದೆಯೆ? ಸೈನ್ಯ ಪರಸ್ಪರ ಬಡಿದಾಡುತ್ತದೆಯೇ? –  ಇದು ನಮ್ಮ ಚರ್ಚೆಯ ವಿಷಯವಾಗಿತ್ತು. ಯಾರ ಅಭಿಪ್ರಾಯ ಏನೇ ಇರಲಿ –  ಒಟ್ಟಿನಲ್ಲಿ ಎಲ್ಲರೂ ಚೈನಾದ ಭ್ರಷ್ಟಾಚಾರ ಬಗ್ಗೆ ಮಾತಾಡುವವರೇ.

* * *

ಸಾಂಸ್ಕೃತಿಕ ಕ್ರಾಂತಿಯ ನಂತರದ ದಿನಗಳಲ್ಲಿ ಡೆಂಗ್ ಬಗ್ಗೆ ಅಪಾರವಾದ ಸಹಾನುಭೂತಿಯ ಅಲೆ ಎದ್ದಿತ್ತು ಅದಕ್ಕೆ ಕಾರಣ ಮಾವೋ ಆಳ್ವಿಕೆಯಲ್ಲಿ ಡೆಂಗ್ ಅಷ್ಟು ಹೀನಾಯವಾದ ಅಪಮಾನಕ್ಕೆ ಒಳಗಾಗಿದ್ದ. ಚೀನೀಯರು ಸಾಮಾನ್ಯವಾಗಿ ತಮ್ಮ ರಾಜಕೀಯ ವಿಚಾರಗಳನ್ನು ಸಾಂಕೇತಿಕವಾಗಿ ತೋರಿಸಿಕೊಳ್ಳುತ್ತಾರೆ ಎಂದು ಹೇಳಿದ್ದೆನಲ್ಲವೆ? ಸಾಂಸ್ಕೃತಿಕ ಕ್ರಾಂತಿಯನ್ನು ಟೀಕಿಸಿದ್ದು ಕೂಡ ಪಯನಿಯರ್ ಎಂಬ ಸಿನಿಮಾದ ವಿಶ್ಲೇಷಣೆಯ ಮೂಲಕ. ವುಹಾನ್ ಎಂಬಾತ ಬರೆದ ಅಧಿಕಾರದಿಂದ ಉಚ್ಚಾಟನೆಗೊಂಡ ಹಾಯ್ರುಯಿ ಎಂಬ ಪುಸ್ತಕದ ಮೂಲಕ ಮಾವೋನ Great Leap Forword ಯೋಜನೆಯ ಟೀಕೆಯಾದದ್ದು. ಯಾವುದೋ ಪುರಾತನ ಕಥೆಯೆಂಬಂತೆ ಬರೆದ ಈ ಪುಸ್ತಕದಲ್ಲಿ ಅಧಿಕಾರದಿಂದ ಪೆಂಗ್‌ ಡೆ ಹುವಾಯ್ ಎಂಬಾತನನ್ನು ಮಾವೋ ಉಚ್ಚಾಟಿಸಿದ್ದು ಟೀಕೆ ಮಾಡಲಾಗಿತ್ತು.

ಸಂಸ್ಕೃತಿ ಕ್ರಾಂತಿಯಾದ ನಂತರ ವುಹಾನ್ ಮತ್ತೆ ಒಳ್ಳೆಯ ಮನುಷ್ಯನಾಗಿ ಕಂಡ –  ಅಂದರೆ ಕಮ್ಯುನಿಷ್ಟರ ಭಾಷೆಯಲ್ಲಿ ಅವನನ್ನು ಪುನರ್‌ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ನಾವು ಡೆನ್‌ನನ್ನೂ ನೋಡಬೇಕು. ಚೈನೀಸ್ ಭಾಷೆಯಲ್ಲೇ ಅವನ ಹೆಸರಿಗೆ ‘ಪುಟ್ಟಸೀಸೆ’ ಎಂಬ ಅರ್ಥ ಉಂಟಂತೆ. ಮಲೆನಾಡಿನ ಮಾತಿನಲ್ಲಿ ಹೇಳುವುದಾದರೆ ಅವನು ‘ಪುಟ್ಟ ಕುಪ್ಪಿ’ –  ನೋಡಲು ಕೂಡಾ ಅವನು ಹಾಗಿದ್ದಾನೆ. ಸಂಸ್ಕೃತಿ ಕ್ರಾಂತಿಯ ನಂತರ ಈ ‘ಪುಟ್ಟ ಕುಪ್ಪಿ’ಯ ಮೇಲೆ ಅಪಾರವಾದ ಸಹಾನುಭೂತಿ ಹುಟ್ಟಲು ಇನ್ನೂ ಒಂದು ಕಾರಣ ಉಂಟು. ರೆಡ್‌ ಗಾರ್ಡ್‌‌ಗಳ ಮೂರನೆಯ ಮಹಡಿಯ ಮೇಲೆ ಕುಳಿತಿದ್ದ ಅವನ ಮಗನನ್ನು ಎತ್ತಿ ಎಸೆದದ್ದರ ಪರಿಣಾಮವಾಗಿ ಅವನ ಮಗ ಕಾಲು ಕಳೆದುಕೊಂಡಿದ್ದಾನೆ. ಹೀಗಾಗಿ ಅವನು ಅಂಗವಿಕಲ ಸಂಸ್ಥೆಯ ಅಧ್ಯಕ್ಷ. ಮತ್ತೂ, ಚೀನೀಯರ ತಮ್ಮ ಸಹಾನುಭೂತಿಯಲ್ಲಿ ಕೊಂಚ ಕೊಂಕು ಸೇರಿಸಿ ಹೇಳುವಂತೆ –  ಅವನೊಬ್ಬ ಕೋಟ್ಯಾಧೀಶ.

ಚೀನೀಯರ ಸಾಂಕೇತಿಕ ರಾಜಕೀಯ ಕ್ರಿಯೆಗೆ ಒಂದು ಒಳ್ಳೆಯ ನಿದರ್ಶನವೆಂದರೆ ಡೆನ್ ಬಗ್ಗೆ ಅವರು ‘ಸಂಸ್ಕೃತಿಯ ಕ್ರಾಂತಿ’ಯ ನಂತರ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುವ ಕ್ರಮ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಇದ್ದ ಖಾಲಿ ಪುಟ್ಟ ಕುಪ್ಪಿಗಳನ್ನು ತಂದು ಎಲ್ಲ ಸಾರ್ವಜನಿಕೆ ಪ್ರದೇಶಗಳಲ್ಲೂ ಸಾಲಾಗಿ ಇಟ್ಟು ತಮಗೆ ಡೆನ್ ಬೇಕೆಂದು ಸೂಚಿಸಿದ್ದರು.

ನಾವು ಕೇಳಿಸಿಕೊಂಡಂತೆ ಇಪ್ಪತ್ತೇಳನೆಯ ದುರುಳ ಸೈನ್ಯದ ಕಮಾಂಡರ್ – ಯಾನ್ – ಶಾಂಗ್ ಎಂಬಾತ. ಈತ ಡೆನ್‌ನ ಇನ್ನೊಬ್ಬ ಮಗನಿರಬೇಕು, ಅಥವಾ ಅಳಿಯನಿರಬೇಕು ಎಂಬ ಗುಲ್ಲೆದ್ದಿತ್ತು. ಈ ವಿಷಯಗಳಲ್ಲಿ ಭಾರತಕ್ಕಿಂತ ಚೀನಾ ಅಷ್ಟೇನು ಬೇರೆಯಲ್ಲ. ಟಯನಾಮೆನ್ ಚೌಕದಲ್ಲಿ ಏಪ್ರಿಲ್ ತಿಂಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಆರಂಭಿಸಿದ್ದು ಸಾಂಕೇತಿಕವಾಗಿಯೇ. ಹೂ – ಯಾವೋ – ಬ್ಯಾಂಗ್ ಎಂಬಾತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದ. ಆತ ಪ್ರಜಾತಂತ್ರದ ಪರವಾಗಿದ್ದನೆಂದು ಅವನನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವನು ಸತ್ತಾಗ ಅವನ ಶವಸಂಸ್ಕಾರದ ಸಂದರ್ಭದಲ್ಲಿ ಯಾವ ಗೌರವವನ್ನೂ ಅವನಿಗೆ ತೋರಿಸಲಿಲ್ಲ. ಈ ಹೂ – ಯಾವೋ – ಬ್ಯಾಂಗ್‌ನ್ನ ಜನ ಹೊಗಳುವ ಕ್ರಮದಲ್ಲೂ ಒಂದು ವಿಶೇಷವಿತ್ತು. ಅವನು ಒಳ್ಳೆಯವನೆಂಬುದನ್ನು ಎಷ್ಟು ಸರಳವಾಗಿ ಜನ ಸೂಚಿಸಬಲ್ಲವರಾಗಿದ್ದರು ಎಂಬುದೇ ಒಂದು ಆಶ್ಚರ್ಯ. ಜನರ ಪ್ರಕಾರ ಕಮ್ಯುನಿಸ್ಟ್ ಹಿರಿಯರಲ್ಲಿ ತಮ್ಮ ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸದೆ ಇದ್ದವನು ಅವನೊಬ್ಬ ಮಾತ್ರ.

ನಮ್ಮ ಭಾರತೀಯ ಮಾವೋವಾದಿ ಗೆಳೆಯನ ಪ್ರಕಾರ ಭ್ರಷ್ಟಾಚಾರ ಎಷ್ಟು ಸಾರ್ವತ್ರಿಕವಾಗಿತ್ತೆಂದರೆ ಈ ಬಂಡೆದ್ದ ವಿದ್ಯಾರ್ಥಿಗಳೂ ಕೂಡ ಸಿಐಎಯ ಹಣವನ್ನು ಪಡೆದವರಾಗಿದ್ದರು! ನನಗೆ ಆಗ ನೆನಪಾಯಿತು. ಎಮರ್ಜೆನ್ಸಿ ದಿನಗಳಲ್ಲಿ ನಮ್ಮ ಪ್ರಗತಿಶೀಲ ಲೇಖಕರಲ್ಲಿ ಒಬ್ಬರಾದ ಮುಲ್ಕ್‌ರಾಜ್ ಆನಂದರು ಮೈಸೂರಿಗೆ ಬಂದಿದ್ದರು. ಅವರು ಅಲ್ಲಿ ತಮ್ಮ ಭಾಷಣದಲ್ಲಿ ಜಯಪ್ರಕಾಶ ನಾರಾಯಣರು ಸಿಐಎಯ ಹಣವನ್ನು ಪಡೆದು ಇಂದಿರಾಗಾಂಧಿಯವರನ್ನು ವಿರೋಧಿಸುತ್ತಿದ್ದಾರೆಂದು ಹೇಳಿದ್ದಲ್ಲದೆ, ಆ ದಿನಗಳಲ್ಲಿ ಭೂಗತರಾಗಿದ್ದ ಜಾರ್ಜ್‌ ಫರ್ನಾಂಡಿಸರಿಗೆ ಅಪಾರವಾದ ಸಿಐಎಯ ಹಣ ದೊರಕಿತ್ತು ಎಂದು ಎಲ್ಲ ತಿಳಿದವರಂತೆ ಅವರು ಹೇಳಿದ್ದರು. ಫರ್ನಾಂಡಿಸರಿಗೆ ನಿತ್ಯದ ಖರ್ಚಿಗೆಂದು ಎಲ್ಲ ಗೆಳೆಯರಿಂದ ಹಣ ಎತ್ತುವುದನ್ನು ಸ್ವತಃ ಕಂಡಿದ್ದ ನಾನು ಮುಲ್ಕ್‌ರಾಜ್‌ ಆನಂದರಿಗೆ ಅವರಂಥ ಹಿರಿಯರು ತಮಗೆ ಸ್ವತಃ ಅನುಭವಕ್ಕೆ ಬಾರದ ವಿಷಯಗಳನ್ನು ಮಾತಾಡಬಾರದೆಂದು ಮುಗುಮ್ಮಾಗಿ ಸೂಚಿಸಿದ್ದೆ. ನಮ್ಮ ಪ್ರಗತಿಶೀಲರಿಗೆ ಸತ್ಯವನ್ನು ತಿಳಿಯಬೇಕೆಂಬ ಆಸೆ ಇರಬಹುದೆಂದು ಭರವಸೆ ಇಟ್ಟಿದ್ದ ನಾನು ಮುಲ್ಕ್‌ರಾಜ್‌ ಆನಂದರ ಸರ್ಕಾರೀಪ್ರೇರಿತ ಸರ್ವಜ್ಞತೆಯಿಂದ ಪೆಚ್ಚಾಗಿದ್ದೆ. ನಮ್ಮ ಮಾವೋವಾದಿ ಗೆಳೆಯನಿಗೂ ಇದನ್ನು ಗಮನಕ್ಕೆ ತಂದೆ. ಎದುರಾಳಿಯ ಮುಖಕ್ಕೆ ಮಸಿ ಬಳಿದು ಎಲ್ಲ ಪ್ರಗತಿಶೀಲರು ಯಾಕೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ? ಎಂದು ಅವನನ್ನು ಅಂಥವರು ಹತ್ತಿರ ಇಂಥ ಪ್ರಶ್ನೆಗೆ ಉತ್ತರವಿದ್ದೀತೆಂಬ ಭ್ರಮೆಯಲ್ಲಿ ಕೇಳಿದ್ದೆ.

ನಾವು ಚೀನೀ ಅರ್ಥವ್ಯವಸ್ಥೆ ಬಗ್ಗೆ ಮಾತಾಡಿದೆವು. ಒಬ್ಬ ಕಾಲೇಜು ಅಧ್ಯಾಪಕನ ಸಂಬಳ ಒಂದು ‘ನೂರು ಯುವಾನ್’. ಅವನೊಬ್ಬ ಪ್ರೊಫೆಸರ್ ಆದಾಗ ಆತನ ಸಂಬಳ ಇನ್ನೂರು ಯುವಾನ್. ಆದರೆ ಒಬ್ಬ ಕ್ಷೌರಿಕನ ಸಂಪಾದನೆ ಒಂದು ಸಾವಿರ ಯುವಾನ್. ಸಾಮಾನ್ಯ ಕ್ಷೌರದ ದರ ನಾಲ್ಕು ಯುವಾನ್. ಒಬ್ಬ ಹೆಂಗಸರು ಒಂದು ಬ್ಯೂಟಿಪಾರ್ಲರ್‌ಗೆ ಹೋದರೆ ಅಗುವ ಖರ್ಚು ನೂರು ಯುವಾನ್. ಹೀಗೆ ಇದ್ದರೆ ಒಬ್ಬ ಕಾಲೇಜು ಅಧ್ಯಾಪಕ ಹೇಗೆ ಬದುಕಿಯಾನು? ಎಂದು ನಾನು ಕೇಳಿದ್ದೆ.

‘ಪ್ಯಾವ್’ ಅದಕ್ಕೆ ಉತ್ತರವಾಗಿತ್ತು. ಪ್ಯಾವ್ – ಅಂದರೆ ಸರಕಾರ ತನ್ನ ಪ್ರಜೆಗಳಿಗೆ ಕೊಡುತ್ತಿದ್ದ ಕೂಪನ್. ಹಲವು ವಿಧದ ಪ್ಯಾವ್‌ಗಳಿದ್ದವು. ಸೈಕಲ್‌ಗಳ ಪ್ಯಾವ್, ಎಲೆಕ್ಟ್ರಾನಿಕ್ ವಸ್ತುಗಳ ಪ್ಯಾವ್, ಹಂದಿ ಮಾಂಸದ ಪ್ಯಾವ್‌ಗಳ. ‘ಈ ಪ್ಯಾವ್‌ಗಳು ನಿನ್ನ ಬಳಿ ಇದ್ದರೆ ಎಲ್ಲ ವಸ್ತುಗಳ ಬೆಲೆಯೂ ಕಡಿಮೆಯಾಗಿರುತ್ತದೆ’ ಎಂದು ಹೇಳಿದ ಮಾವೋವಾದಿ ಗೆಳೆಯ ತನ್ನ ಜೇಬಿನಿಂದ ಒಂದು ಪ್ಯಾವ್ ಹೊರತೆಗೆದು ತೋರಿಸಿದ. ‘ನಿನಗಿದು ಹೇಗೆ ದೊರೆಯಿತು?’ ಎಂದು ಆಶ್ಚರ್ಯದಿಂದ ನಾನು ಕೇಳಿದೆ. ‘ಕಪ್ಪು ಸಂತೆಯಲ್ಲಿ ಇದು ನನಗೆ ಸಿಕ್ಕಿತು’ ಎಂದು ನಾಚಿಕೆಗೆಟ್ಟ ಈ ಮಾವೋವಾದಿ ಹೇಳಿದ್ದ.

ನಾನಿದ್ದ ಹೋಟೆಲ್‌ನಲ್ಲಿ ಸಂಬಳದ ವ್ಯತ್ಯಾಸಗಳ ಬಗ್ಗೆ ಒಬ್ಬ ಯುವಕನನ್ನು ಪ್ರಶ್ನಿಸಿದ್ದೆ. ಆಗ ಅವನು ದೊಡ್ಡದಾಗಿ ನಕ್ಕು ‘ಅತ್ಯಂತ ಕಡಿಮೆ ನನ್ನದು, ಅತ್ಯಂತ ಹೆಚ್ಚು ಡೆನ್‌ನದು’ ಎಂದಿದ್ದ. ಚೀನಾದಲ್ಲಿ ಇನ್‌ಫ್ಲೇಷನ್ ಕೂಡಾ ಇತ್ತು. ಆದ್ದರಿಂದ ಮಾವೋವಾದಿ ಗೆಳೆಯ ಹೀಗೆ ತಾತ್ವಿಕವಾಗಿ ತೀರ್ಮಾನಿಸಿದ್ದ. – ‘ಸ್ಪಷ್ಟ ವೈಚಾರಿಕ ನಿಲುವು ಇಲ್ಲದ್ದರಿಂದಲೇ ಈ ವಿದ್ಯಾರ್ಥಿ ಮೂರ್ಖರು ಬಂಡೆದಿದ್ದಾರೆ.’

ಅಲ್ಲಿ ಕುಳಿತಿದ್ದ ಉಳಿದ ಭಾರತೀಯ ವಿದ್ಯಾರ್ಥಿಗಳು ಈ ವಾದವನ್ನು ಒಪ್ಪಲಿಲ್ಲ. “ನಿನ್ನ ವಿಚಾರ ನಿಜವೇ ಎನ್ನೋಣ. ಆದರೆ ಬದಲಾವಣೆಗೆ ಹಾತೊರೆದ ಸಾವಿರಾರು ವಿದ್ಯಾರ್ಥಿಗಳನ್ನು ಕೊಂದುಬಿಡುವುದೇ? ಅವರ ಶವಗಳನ್ನು ಗಾರ್ಬೇಜ್ ಎನ್ನುವಂತೆ ಗುಡಿಸಿ ಹಾಕಿಬಿಡಬಹುದೇ? ಗುಡಿಸಿಬಿ‌ಟ್ಟು ಹಾಕಿದ ಹೆಣಗಳನ್ನು ಬೆಂಕಿಹಾಕಿ ಸುಟ್ಟು ಅವರನ್ನು ನಿರ್ನಾಮ ಮಾಡಿಬಿಡಬಹುದೇ? ತಾವು ಮಾಡಿದ್ದು ಜಗತ್ತಿಗೇ ಸರಿ ಎಂದು ಕಾಣಲೆಂದು ಸೈನ್ಯದ ದರಿದ್ರ ಟ್ರಕ್ಕುಗಳನ್ನು ಬೆಂಕಿಯಲ್ಲಿ ಉರಿದು ಅವು ಕರಟಾದಂತೆಯೇ, ಅವುಗಳ ಟಯರ್‌ಗಳು ಇನ್ನೂ ಬೇಯುತ್ತಿರುವಂತೆಯೇ ರಸ್ತೆಯ ಮೇಲೆ ಈ ಆಳುತ್ತಿರುವ ದುಷ್ಟರು ಬಿಟ್ಟಾದ್ದಾರಲ್ಲ! ಅದಕ್ಕೇನೆನ್ನುತ್ತೀ?”

ಆಳುವವರ ಸಿದ್ಧಾಂತದ ಪ್ರಕಾರ ಮಾರ್ಕ್ಸ್‌ ಮತ್ತು ಲೆನಿನ್‌ ವಾದಗಳು ಹೇಳುವಂತೆ ಮೂರು ವಿರೋಧಿಗಳು ಇವೆ: ಪಟ್ಟಣಕ್ಕೂ ಹಳ್ಳಿಗೂ ಇರುವ ಒಂದು ವಿರೋಧ; ಬುದ್ಧಿಯ ಕೆಲಸಕ್ಕೂ ದೈಹಿಕ ಕೆಲಸಕ್ಕೂ ಇರುವ ಇನ್ನೊಂದು ವಿರೋಧ, ನಾಗರಿಕ ವರ್ಗಕ್ಕೂ ಸೈನ್ಯಕ್ಕೂ ಇರುವ ವಿರೋಧ. ಈ ಮೂರು ವಿರೋಧಗಳನ್ನು ಸರಿಪಡಿಸಲು ಆಳುವ ಜನ ಏನಾದರೂ ಮಾಡಿದ್ದಾರೆಯೇ ಚೀನೀಯರು ‘ಕ್ವಾಂಥಾವ್’ ಎಂದು ಕರೆಯುವ ನವಶ್ರೀಮಂತರು ಎಲ್ಲೆಲ್ಲೂ ಇದ್ದಾರೆ. ಈಗ ಯಾರು ಬೂರ್ಜ್ವಾ ಅಲ್ಲ ಇಲ್ಲಿ? ರೈತರು, ಕಾರ್ಮಿಕರು ಈಗ ಬೂರ್ಜ್ವಾ ಆಗಿಲ್ಲೇನು? ಕೇವಲ ವಿದ್ಯಾರ್ಥಿಗಳಿಗೆ ಸಹಾನುಭೂತಿ ತೋರಿಸಿದರು ಎಂಬುದನ್ನು ನಾವು ಕಂಡಿಲ್ಲವೇ? ಈ ಎಲ್ಲರಿಗೂ ಗ್ಲಾಸ್‌ನಾಸ್ಟ್‌ ಬೇಕಾಗಿದೆ. ಬೂರ್ಜ್ವಾ ಜನರಿಗೂ ಕಾರ್ಮಿಕರಿಗೂ ನಡುವೆ ಇರುವ ವಿರೋಧ ನೇತ್ಯಾತ್ಮಕವಲ್ಲವೆಂದು ಮಾವೋ ಹೇಳಿಲ್ಲವೇ? ಅಲ್ಲದೆ ಜನಸಮುದಾಯ ಎಂದರೆ ನೀರು; ಸೈನಿಕರು ಎಂದರೆ ಮೀನು ಎಂದು ಸೈನ್ಯಕ್ಕೂ ಜನಸಮುದಾಯಕ್ಕೂ ಅನ್ಯೋನ್ಯ ಕಲ್ಪಿಸಿದ್ದ ಮಾವೋವಾದದ ಗತಿ ಏನಾಯಿತು?

ಈ ಪ್ರಶ್ನೆಗಳಲ್ಲದೆ ಇನ್ನೂ ಅನೇಕ ಪ್ರಶ್ನೆಗಳಿದ್ದವು. ಅಲ್ಲಿ ಕೂಡಿದ್ದವರು ಎಷ್ಟೆಂದರೂ ಯಾವತ್ತೂ ವಿಚಾರಪ್ರಿಯರೂ ಮಾತುಗಾರರೂ ಆದ ಭಾರತೀಯ ಯುವಜನರಲ್ಲವೇ?: ಈಗ ಬಂಡೆದ್ದ ವಿದ್ಯಾರ್ಥಿಗಳು ಯಾರು? ಮಾವೋ ಕಾಲದಲ್ಲಿ ಬಂಡೆದ್ದ ರೆಡ್‌ಗಾರ್ಡ್‌ ಯುವಕರು ಯಾರು? ಅವರೀಗ ಎಲ್ಲಿದ್ದಾರೆ? ಯುವಜನರಲ್ಲಿ ಇಷ್ಟೊಂದು ಮಹತ್ವದ ಬದಲಾವಣೆ ಹೇಗಾಯಿತು? ಇತ್ಯಾದಿ ಪ್ರಶ್ನೆಗಳ ಸುರಿಮಳೆಯಲ್ಲಿ ನಾವು ಹಲವು ಕಪ್ಪು ಕಾಫಿ ಕುಡಿದು ಸಿಗರೇಟು ಸೇದಿದ್ದೆವು.

ಗೆಳೆಯ ತೊಂಡೂಲ್ಕರ್ ಮತ್ತು ಚುರುಕು ಮನಸ್ಸಿನ ಮೃಣಾಲ್ ಪಾಂಡೆಯವರ ಸೂಕ್ಷ್ಮ ಪ್ರಶ್ನೆಗಳಿಗೆ ಹಲವು ಪರಸ್ಪರ ವಿರೋಧದ ಉತ್ತರಗಳು ಸಿಕ್ಕವು. ಮಾವೋ ಒಮ್ಮೆ ಹೇಳಿದ್ದ – “ನೂರು ಹೂಗಳು ಅರಳಲಿ” – ಎಂದು. ವಿಪರ್ಯಾಸವೆಂದರೆ, ಹೀಗೆ ಅವು ಅರಳಿ ಪೈಪೋಟಿಯಾಗುತ್ತಿದ್ದುದು ಚೈನಾದ ಬೇರೆಲ್ಲೂ ಅಲ್ಲ; ಭಾರತೀಯರು ಸೇರಿದ್ದ ಈ ಸಣ್ಣ ಕೋಣೆಯಲ್ಲಿ. ಯಾರೋ ಹೇಳಿದರು ಟೆಲಿವಿಷನ್‌ ತೋರಿಸಿದ ಒಂದು ನಾಟಕದಲ್ಲಿ ಎಲ್ಲ ನಟರೂ ಕಪ್ಪುವಸ್ತ್ರ ತೊಟ್ಟು ಕಾಣಿಸಿಕೊಂಡರು. ವಾರ್ತೆಯನ್ನು ಓದುವವರನ್ನು ತೋರಿಸಲೇ ಇಲ್ಲವಂತೆ. ಯಾಕೆಂದರೆ ಅವರ ಮುಖಗಳು ಮ್ಲಾನವಾಗಿದ್ದವಂತೆ. ಬೇಸರದ ಧ್ವನಿಯಲ್ಲಿ ಅವರು ವಾರ್ತೆಯನ್ನು ಓದಿದರಂತೆ. ಈ ಘಟನೆಗಳು ನಡೆದದ್ದು ೪ನೇ ತಾರೀಖು.

ಕಾಫಿ ಕುಡಿದದ್ದಾಯಿತು. ಸಿಗರೇಟ್ ಸೇದಿದ್ದಾಯಿತು. ನಾವು ಹಿಂದಕ್ಕೆ ಹೋಗಲು ತಯಾರಾಗಿ ನಿಂತೆವು. ಆದರೆ ತುಂತುರು ಮಳೆಯಲ್ಲಿ ಎಂಟು ಕಿ.ಮೀ. ನಾವು ನಡೆಯುವುದು ಹೌದೇ? ತೆಂಡೂಲ್ಕರ್ ಸುಸ್ತಾಗಿದ್ದರು. ಸಣ್ಣಗೆ ಬೆನ್ನುನೋವೆಂದು ಅವರಿಗೆ ಕಾಣಿಸಿಕೊಂಡಿತ್ತು. ನನಗೂ ಕೂಡ ಕೊಂಚ ಬೆನ್ನು ನೋವಿತ್ತು. ಟ್ಯಾಕ್ಸಿಯನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ಒಬ್ಬ ಪಾಕಿಸ್ತಾನಿ ಪತ್ರಕರ್ತ ನಮ್ಮನ್ನು ಒಂದು ಹೋಟೆಲ್ಲಿಗೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾದ. ಅವನು ನೋಡಲು ಆಕರ್ಷಕನಾಗಿದ್ದ ಸುಂದರ ಯುವಕ. ನಮ್ಮ ಕೂಟದಲ್ಲಿ ಒಬ್ಬರಾದ ಪ್ರೊ. ನಾರಂಗ್ ಎಂದರೆ ಅವನಿಗೆ ತುಂಬಾ ಗೌರವ. ಉರ್ದು ಸಾಹಿತ್ಯದ ಖ್ಯಾತ ವಿಮರ್ಶಕರಾದ ನಾರಂಗ್ ಪಾಕಿಸ್ತಾನದಲ್ಲಿ ಬಹಳ ಖ್ಯಾತನಾಮರಂತೆ. ಅವನು ತುಂತುರು ಮಳೆಯಲ್ಲಿ ಕಾರು ನಡೆಸುತ್ತಾ ತುಂಬಾ ಉಮೇದಿನಲ್ಲಿ ಮಾತಾಡಿದ. ಅವನ ಪ್ರಕಾರ ಇಂಡಿಯಾ – ಪಾಕಿಸ್ತಾನ ಇನ್ನು ಮುಂದೆ ಹೆಚ್ಚು ಸುಖದಲ್ಲಿ ಬಾಳುವುದು ಖಚಿತ. ಅವನು ಬೆನಜಿರ್ ಭುಟ್ಟೋನ ಅನುಯಾಯಿ ಎಂಬುದನ್ನು ನಾವು ಊಹಿಸಬಹುದಾಗಿತ್ತು. ಪರದೇಶದ ಆವರಣದಲ್ಲಿ ನಾವೂ ಪಾಕಿಸ್ತಾನದವರೂ ಎಷ್ಟು ಸ್ನೇಹದಿಂದ ಇರುತ್ತೇವೆ ಎಂಬುದನ್ನು ನಾನು ಯಾವಾಗಲೂ ಗಮನಿಸಿದ್ದೇವೆ.

ನಾವು ಹಿಂದಿರುಗಿದಾಗ ಹೋಟೆಲ್ ನಿರ್ಜನವಾಗಿತ್ತು. ಭಟ್ಟಾಚಾರ್ಯರನ್ನೂ, ನಾರಂಗ್ ಅವರನ್ನೂ ನಾವು ಹೋಟೆಲ್‌ನಲ್ಲೇ ಬಿಟ್ಟು ನಮ್ಮ ಸಾಹಸಯಾತ್ರೆ ಕೈಗೊಂಡಿದ್ದೆವು. ಅವರ ಜೊತೆ ನಮ್ಮ ಅನುಭವವನ್ನು ಹಂಚಿಕೊಳ್ಳಬೇಕೆನಿಸಿದರೂ ಅವರನ್ನು ನಾವು ಎಬ್ಬಿಸಲಿಲ್ಲ.

 

ಜೂನ್ , ಮಂಗಳವಾರ

ನಮ್ಮನ್ನು ಸತ್ಕರಿಸಲೆಂದು ಇದ್ದ ಚೀನೀಯರು ಬಹು ಧೈರ್ಯಶಾಲೆಗಳಂತೆ ಕಂಡರು. ನಮ್ಮನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದರು. ನಾವು ಹೋಟೆಲ್‌ನ ಲಿಫ್ಟನ್ನು ಹತ್ತಿದೆವು. ಅದು ಹಿಟಾಚಿ ನಿರ್ಮಿತ. ಸದ್ದಿಲ್ಲದಂತೆ ಬಹಳ ವೇಗವಾಗಿ ಚಲಿಸಬಲ್ಲ ಲಿಫ್ಟ್. ನಮ್ಮ ಅಶೋಕಾ ಲಿಫ್ಟ್‌ಗಳಂತಲ್ಲ. ಚೀನಾಕ್ಕೆ ಅಮೆರಿಕನ್ ಮಾದರಿಯ ಸುಖಜೀವನವನ್ನು ಮೊದಲು ಆಮದು ಮಾಡಿಕೊಂಡವರು ಯಾರು ಎಂದು ನಾನು ಆಶ್ಚರ್ಯಪಟ್ಟುಕೊಂಡೆ. ವಿದ್ಯಾರ್ಥಿಗಳನ್ನು ದೂರಿ ಏನು ಪ್ರಯೋಜನ?

ಕೆಲವು ಲೇಖಕರಾದರೂ ಸಿಕ್ಕಿಯಾರೆಂಬ ಭರವಸೆಯಿಂದ ನಮ್ಮನ್ನು ಬೀಜಿಂಗ್‌ನ ಲೇಖಕಗೃಹಕ್ಕೆ ಕೊಂಡೊಯ್ಯಲಾಯಿತು. ಒಂದು ಸಣ್ಣ ಕೋಣೆಯಲ್ಲಿ ಕೂರಿಸಿ ಚಹದ ಉಪಚಾರ ಆಯಿತು. ನಮ್ಮ ಪಾಡಿಗೆ ನಮ್ಮನ್ನು ಗೈಡುಗಳು ಬಿಟ್ಟು ಹೋಗಿದ್ದರು. ಎಷ್ಟು ಹೊತ್ತು ಕಾಯಬೇಕಾಯಿತೆಂದರೆ ನಮಗೆ ನಾವು ಗೃಹಬಂಧನದಲ್ಲಿದ್ದೇವೋ ಅನ್ನಿಸಲು ಶುರುವಾಯಿತು. ನಾವು ಕುಳಿತಿದ್ದ ಮನೆಯಲ್ಲಿ ಎಲ್ಲೆಂಲಿಂದಲೂ ಗದ್ದಲದ ಚರ್ಚೆ ನಡೆಯುತ್ತಿರುವಂತೆ ಕೇಳಿಸುತ್ತಿತ್ತು. ಏನಾದರೂ ಜಗಳವಾಡುತ್ತಿರಬಹುದೋ? ಇಡೀ ವಾತಾವರಣ ನಿಗೂಢವಾಗಿತ್ತು. ಕೊನೆಯಲ್ಲಿ ಕೊನೆಯಲ್ಲಿ ಅಂತೂ ನಮ್ಮ ದುಭಾಷಿಯೂ ಮತ್ತು ಜೊತೆಗಿದ್ದ ಚೀನೀ ಲೇಖಕರೂ ಬಂದರು. “ಸಾರಿ, ಯಾವ ಚೀನೀ ಲೇಖಕನೂ ಸಿಗುತ್ತಿಲ್ಲ” ಎಂದರು. ಪ್ರಜಾತಂತ್ರಕ್ಕಾಗಿ ಹೋರಾಡಿ ಸತ್ತ ಯುವಜನರಿಗೆ ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಬೇಕೆಂಬ ಇಚ್ಛೆಯನ್ನು ನಾವು ಅವರಿಗೆ ಹೇಳಿಕೊಂಡೆವು. ನಾವು ಶಾಂಘಾಯ್‌ನಲ್ಲಿ ಭೇಟಿಯಾಗಬೇಕೆಂದಿದ್ದ ಬಾಜಿನ್ ಎಂಬ ಲೇಖಕನೂ ಈ ಯುವಜನರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದನೆಂಬ ಸುದ್ದಿ ಕೇಳಿದ್ದೆವು. ನಮ್ಮ ಸಂತಾಪದ್ಯೋತಕವಾಗಿ ಹೂವನ್ನು ನಾವು ಅರ್ಪಿಸಬಹುದೇ? ಎಂದು ನಾನು ಕೇಳಿದೆ. ನಮ್ಮ ಗೈಡ್‌ನಿಂದ ನಮಗೆ ಸ್ಪಷ್ಪ ಉತ್ತರ ಸಿಕ್ಕಲಿಲ್ಲ. ಕಟ್ಟಡದಿಂದ ಹೊರ ಬಂದಾಗ ಅದು ಸಾಂಸ್ಕೃತಿಕ – ಸಚಿವಾಲಯ ಎಂಬುದು ನಮಗೆ ತಿಳಿಯಿತು. ನಮಗೆ ಆಶ್ಚರ್ಯವಾದದ್ದೆಂದರೆ ಹೊರಗಿನ ಗೋಡೆಯ ಒಂದು ಮೂಲೆಯಲ್ಲಿ ಒಂದು ಅನಾಮಿಕ ಪುಷ್ಪಗುಚ್ಛವಿತ್ತು. ಹೀಗೆ ಧೂಳು ತುಂಬಿದ ಯಾರ ಕಣ್ಣಿಗೂ ಬೀಳದ ಒಂದು ಯಃಕಶ್ಚಿತ ಜಾಗದಲ್ಲಿ ಇಂಥ ಒಂದು ಮೂಲೆಯಲ್ಲಿ ಒಂದು ಅನಾಮಿಕ ಪುಷ್ಪಗುಚ್ಛವಿತ್ತು. ಹೀಗೆ ಧೂಳು ತುಂಬಿದ ಯಾರ ಕಣ್ಣಿಗೂ ಬೀಳದ ಒಂದು ಯಃಕಶ್ಚಿತ್ ಜಾಗದಲ್ಲಿ ಇಂಥ ಒಂದು ಹೂಗುಚ್ಛ ಕಾಣಿಸುವುದರ ಹಿಂದೆ ಒಂದು ವಿಶೇಷವಾದ ಅಸಹಾಯಕ ದುಃಖದ ಭಾವನೆ ವ್ಯಕ್ತವಾದಂತೆ ನನಗೆ ಅನ್ನಿಸಿತು. ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿ ಒಂದು ಕಾಗದವನ್ನು ಬರೆದು ಲೇಖಕ ಗೃಹದಲ್ಲಿ ಬಿಟ್ಟು ಬಂದೆವು.

ನಾವು ಒಂದು ಪ್ರಸಿದ್ಧ ದೇವಾಲಯ ನೋಡಲೆಂದು ಹೋದೆವು. ದೇವಾಲಯ ಮುಚ್ಚಿದ್ದರಿಂದ ಬೆ – ಹಾಯ್ ಪಾರ್ಕಿಗೆ ಹೋದೆವು. ನಮಗೆ ಸ್ವಲ್ಪ ವ್ಯಾಯಾಮ ಅಗತ್ಯವಾದ್ದರಿಂದ ಬಿರುಸಾಗಿ ಯಾರೂ ಇಲ್ಲದೆ ಮ್ಲಾನವಾಗಿದ್ದ ಪಾರ್ಕಿನಲ್ಲಿ ನಡೆದಾಡಿದೆವು. ಹೀಗೆ ನಡೆದಾಡುತ್ತಿರುವಾಗ ನಾನೊಂದು ವಿಶೇಷ ಕಂಡೆ. ಅದೊಂದು ಮರ. ಮರದ ಕೆಳೆಗೊಂದು ಬೋರ್ಡಿತ್ತು. ಆ ಬೋರ್ಡಿನ ಮೇಲೆ ಹೀಗೆ ಬರೆದಿತ್ತು. “ಸಾಮ್ರಾಟ್ ಚೂನ್ – ಝನ್ ನು ಇಲ್ಲಿ ೧೬೪೪ ರಲ್ಲಿ ನೇಣು ಹಾಕಿಕೊಂಡು ಸತ್ತನು.” ಅವನು ಮಿಂಗ್ – ರಾಜಮನೆತನದ ಕೊನೆಯ ಸಾಮ್ರಾಟನಾಗಿದ್ದ. ನನಗೆ ಅದೊಂದು ಬೇವಿನ ಮರದಂತೆ ಕಂಡಿತು. ಅವನ ಆತ್ಮಹತ್ಯೆಯ ಕತೆ ಹೀಗಿದೆ: ರೈತರು ಕ್ರುದ್ಧರಾಗಿ ದಂಗೆ ಎದ್ದಿದ್ದರು. ಬೀಜಿಂಗ್ ನಗರವನ್ನು ಬಲಾತ್ಕಾರವಾಗಿ ನುಗ್ಗಿ ಸಾಮ್ರಾಟನನ್ನು ಅಟ್ಟಿಸಿಕೊಂಡು ಬಂದು ಅಡರಿದ್ದರು. ಕಾಲುಕಿತ್ತ ಸಾಮ್ರಾಟ ಈ ಸ್ಥಳಕ್ಕೆ ಬಂದು ಮರದ ಮೇಲೆ ನೇಣುಹಾಕಿಕೊಂಡು ಸತ್ತಿದ್ದ. ಅವನು ನೇಣು ಹಾಕಿಕೊಂಡ ಹಳೆಯ ಮರ ಸತ್ತಿತ್ತು. ಆದರೆ ಅದರ ಜಾಗದಲ್ಲಿ ಈಗಿನ ಹೊಸ ರಾಜರು ಒಂದು ಹೊಸ ಮರವನ್ನು ನೆಟ್ಟಿದ್ದರು!

ನಾವು ಜೇಡ್‌ಶಿಲೆಯಲ್ಲಿ ಮಾಡಿದ ಬುದ್ಧನನ್ನು ನೋಡಿದೆವು. ಅವನು ಸುಕುಮಾರನಾಗಿ ಕಂಡ! ಆಳವಾದ ಧ್ಯಾನದಲ್ಲಿದ್ದಂತೆ ಕಾಣಲಿಲ್ಲ. ಆದರೆ ಅವನ ಮೂರ್ತಿ ಬಹು ಮೋಹಕವಾಗಿತ್ತು. ನಾನು ಬುದ್ಧನಿಗೆ ನಮಸ್ಕಾರ ಮಾಡಿದೆ. ಚೈನೀ ಗೈಡುಗಳು ನನ್ನಂತೆ ನಮಸ್ಕಾರ ಮಾಡಿದರು.

ನಾವು ಅರೆಮನಸ್ಸಿನಲ್ಲಿ ಹೋಟೆಲ್‌ಗೆ ಹಿಂದಿರುಗಿದೆವು. ಅದೇ ದೃಶ್ಯಗಳು – ಅದೇ ಉರಿಯುವ ಟ್ರಕ್ಕುಗಳು, ಗುಂಪುಗೂಡಿ ಮಾತಾಡುವ ಜನ, ಸೈಕಲ್‌ಗಳ ಮೇಲೆ ಎಂದಿನಂತೆ ಉದ್ಯೋಗನಿರತರಾದ ಸಾವಿರಾರು ಜನ.

ಮಧ್ಯಾಹ್ನ ಲೇಖಕ ಸಂಘದ ಅಧ್ಯಕ್ಷ ನಮ್ಮನ್ನು ನೋಡಲು ಬಂದ. ಅವನ ಹೆಸರು ಡೆನ್ – ಯೂ – ಮೈ. “ನಶ್ಯದ ಡಬ್ಬಿ ಮತ್ತು ಇತರೆ ಕತೆಗಳು” ಎಂಬ ತನ್ನ ಪುಸ್ತಕವೊಂದನ್ನು ನಮಗೆ ಕೊಟ್ಟ.

ಡೆನ್ – ಯೂ – ಮೈನ ಜೀವನ ಚರಿತ್ರೆ ವಿಶೇಷವಾದ್ದು. ೧೯೩೧ ರಲ್ಲಿ ಅವನೊಂದು ಬಡ ಕುಟುಂಬದಲ್ಲಿ ಹುಟ್ಟಿದ . ಜಪಾನೀಯರು ಉತ್ತರ ಚೀನಾವನ್ನು ಅಕ್ರಮಣವಾಗಿ ಮಾಡಿದಾಗ ಇನ್ನೂ ಬಾಲನಾಗಿದ್ದ ಡೆನ್ – ಯೂ – ಮೈ ಎಂಟನೇ ರೂಟ್ ಆರ್ಮಿಗೆ ಸಂದೇಶವಾಹಕನಾಗಿ ಕೆಲಸ ಮಾಡಿದ. ಆಮೇಲೆ ಜಪಾನೀಯರಿಂದ ಬಂಧನಕ್ಕೊಳಗಾದವನು ಜಪಾನ್ ನಲ್ಲಿ ಕೂಲಿ ಕೆಲಸ ಮಾಡಿದ. ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗಿಯಾದ. ಇವನನ್ನು ೧೯೫೦ ನೇ ಇಸವಿಯಲ್ಲಿ ಅವನು ಬರೆದ ಒಂದು ಕತೆಗಾಗಿ ಖಂಡಿಸಲಾಯಿತು. ಕತೆಯ ಹೆಸರು “ಧರೆಯ ಅಂಚಿನಲ್ಲಿ”. ಬುದ್ಧಿಜೀವಿಗಳ ಬದುಕಿನ ಬಗ್ಗೆ ಅದೊಂದು ಸರಳವಾದ, ಜನಪ್ರಿಯವಾದ ಕತೆ. ಈ ಕತೆಯಿಂದಾಗಿ ಅವನು ಒಂದು ದಶಕಕ್ಕೂ ಹೆಚ್ಚು ದೈಹಿಕ ದುಡಿಮೆಯ ಶಿಕ್ಷೆಗೆ ಒಳಗಾಗಬೇಕಾಯಿತು. ಸಾಂಸ್ಕೃತಿಕ ಕ್ರಾಂತಿ ೧೯೭೬ ರಲ್ಲಿ ಮುಗಿದ ನಂತರ ಡೆನ್ –  ಯೂ – ಮೈನ ಸೃಜನಶೀಲತೆ ಮರುಕಳಿಸಿತು. ನಾವು ಭೇಟಿಮಾಡಿದಾಗ ಅವನು ಮೃದುವಾದ ಮಾತಿನ ಕೋಮಲ ಹೃದಯದ ಮನುಷ್ಯನಾಗಿ ಕಂಡ. ಭಾರತೀಯ ಸಂಸ್ಕೃತಿಯ ಬಗ್ಗೆ ಅವನಿಗೆ ಅಪಾರವಾದ ಗೌರವ. ನಮ್ಮೊಡನೆ ತಂದಿದ್ದ ಬಹುಮಾನವನ್ನು ಅವನಿಗೆ ಕೊಟ್ಟೆವು. ಅವನನ್ನು ಒಂದು ಸರಳವಾದ ಪ್ರಶ್ನೆ ಕೇಳಿದೆವು. “ಬಂಡೆದ್ದ ಯುವಜನರು ಪ್ರತಿಗಾಮಿಗಳು ಎಂದು ನಿನಗನ್ನಿಸುತ್ತದೆಯೇ?”

ಡೆನ್ – ಯೂ – ಮೈ ನಕ್ಕು ಹೇಳಿದ. ವಿದ್ಯಾರ್ಥಿಗಳು ಅಮೆರಿಕನ್ ರೀತಿಯ ಪ್ರಜಾತಂತ್ರಕ್ಕಾಗಿ ಕೇಳಿದರೆ ಅದು ಸದ್ಯ ಚೀನಾದಲ್ಲಿ ಸಾಧ್ಯವಿಲ್ಲ. ಮತ್ತೆ ಚಿಂತಿಸುತ್ತ ಗಂಭೀರವಾಗಿ ಅವನು ಹೇಳಿದ – “ಉತ್ಪಾದನೆ ಹೆಚ್ಚಾದಂತೆ ಹಲವು ಹತ್ತು ರೀತಿಯ ಚಿಂತನೆಗೂ ನಾವು ಅವಕಾಶ ಮಾಡಿಕೊಡಬೇಕಾಗುತ್ತದಲ್ಲವೇ?” ಆತ ತುಂಬ ಸೌಜನ್ಯದಿಂದ ನಮಗೆ “ಈಗ ಊರಿಗೆ ಹೋಗಿ; ಮರಳಿ ಬನ್ನಿ” ಎಂದ. ನಿಮ್ಮ ಪ್ರಯಾಣದ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದ. ಅವನ ಕರುಣಾರ್ದ್ರ ದೃಷ್ಟಿಯಿಂದ ನಮ್ಮ ಮನಸ್ಸೂ ಮೃದುವಾಗಿತ್ತು. ಅವನು ಜಪಾನೀಯರ ಕೈಯಲ್ಲೂ ನರಳಿದ್ದ. ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ತನ್ನ ಜನರಿಂದಲೂ ತೊಂದರೆಪಟ್ಟಿದ್ದ. ಆದರೆ ಅವನ ಮನಸ್ಸು ಕಹಿಯಾಗಿರಲಿಲ್ಲ.

ನಾನು ಓದಿದ ಹಲವು ಚೀನೀ ಕತೆಗಳಲ್ಲಿ ದಟ್ಟವಾದ, ಸತ್ಯವಾದ ಜೀವನದ ವಿವರಗಳು ಇರುತ್ತವೆ. ಆದರೆ ಎಲ್ಲ ಕತೆಗಳೂ ಕೊನೆಯಾಗುವುದು ‘ಪಕ್ಷ ಹೇಳುವ ಸರಿಯಾದ ಮಾರ್ಗದಲ್ಲಿ ನಡೆದರೆ ನಮಗೆ ಜಯ ಲಭಿಸುತ್ತ’ದೆಂದು. ಇಂಥ ನಿರ್ಣಯವನ್ನು ಮಂಡಿಸದಿದ್ದಲ್ಲಿ ಆ ಕಥೆಗಳು ಪ್ರಕಟವಾಗುತ್ತಲೇ ಇರಲಿಲ್ಲವೇನೊ! ನಾವು ಇನ್ನೇನು ಹೆಚ್ಚಿಗೆ ನೋಡಲಾರದೆ ಭಾರತಕ್ಕೆ ಮರಳುವುದೆಂಬುದು ನಿಶ್ಚಯವಾಗಿತ್ತು. ನಮ್ಮ ಎಂಬಸಿಯಿಂದ ಒಬ್ಬರು ಬಂದು ನಮ್ಮ ಪಾಸ್ಪೋರ್ಟ್‌ ಪಡೆದಿದ್ದರು. ಗುರುವಾರ ೮ನೇ ತಾರೀಖು ನಮ್ಮನ್ನು ಹಿಂದಕ್ಕೆ ಕಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದರು.

ಇನ್ನೂ ಒಂದು ದಿನ ಉಳಿದಿತ್ತು. ನಾವು ಏನು ಮಾಡಬಹುದು ತೋಚಲಿಲ್ಲ. 

ಜೂನ್ , ಬುಧವಾರ

ಎದ್ದಾಗ ಮನಸ್ಸು ಖಾಲಿಯಾಗಿ ಬಿಕೋ ಎನ್ನಿಸುತ್ತಿತ್ತು. ಹಿಂದಿನ ರಾತ್ರಿ ಹತ್ತುಗಂಟೆಗೆ ಇಂಗ್ಲಿಷ್ ವಾರ್ತೆಗಾಗಿ ಟೆಲಿವಿಷನ್ ಹಾಕಿದಾಗ ನನಗೆ ಎದುರಾಗಿದ್ದು ಒಂದು ಸಂಗೀತ ಕಛೇರಿ. ಮಿಲಟರಿ ಸಮವಸ್ತ್ರ ಧರಿಸಿದ್ದ ಸಂಗೀತಗಾರರು ಆಯುಧಗಳಂತೆ ಕಾಣುವ ದೊಡ್ಡ ಸಾಧನಗಳಿಂದ ಸಂಗೀತವನ್ನು ಸೃಷ್ಟಿಸತೊಡಗಿದ್ದರು. ಕೇಳುಗರಲ್ಲಿ ಉತ್ಸಾಹವನ್ನು ಉಕ್ಕಿಸುವುದೇ ಆ ಸಂಗೀತದ ಗುರಿಯಾಗಿತ್ತು. ಎಷ್ಟೊಂದು ಧೀರ ಸ್ಪಷ್ಟ ಸ್ವರದಲ್ಲಿ ಅವರು ಗರ್ಜಿಸುತ್ತಿದ್ದರು ಎಂದರೆ ಅದಕ್ಕೆ ತಕ್ಕ ಹಿನ್ನೆಲೆಯಲ್ಲಿ ಜಲಪಾತಗಳು ಕಂಡವು; ಶೀಘ್ರವಾಗಿ ಹರಿಯುವ ನದಿಗಳು ಕಂಡವು; ಅಸಹ್ಯವಾಗಿ ಮುಗಿಲು ಮುಟ್ಟುವಂತೆ ಕಣ್ಣೆದುರೇ ನಿಗುರುತ್ತ ನಿಲ್ಲುವ ಸ್ಕೈಸ್ಕ್ರೇಪರ್‌ಗಳು ಕಂಡವು. ಜಪಾನೀಯರ ವಿರುದ್ಧ ದಿಟ್ಟ ಹೋರಾಟ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಸಂಗೀತಗಾರರು ಘೋಷಿಸುತ್ತಿದ್ದರು. ಇಂಥ ವರ್ಣರಂಜಿತ ಕಛೇರಿ ಮುಗಿದ ಮೇಲೆ ನಿದ್ದೆ ಮಾಡುವ ಮುನ್ನ ನಾನು ಕಂಡದ್ದು ಬ್ಯಾಕ್‌ ಅಂಡ್ ವೈಟ್ ನಲ್ಲಿ ಉರಿಯುವ ಟ್ರಕ್ಕುಗಳನ್ನು. ನಾನು ಅಸಹ್ಯ ಪಡುತ್ತಿದ್ದಂತೆ, ಇದ್ದಕ್ಕಿದ್ದಂತೆಯೇ, ಎಲ್ಲ ಪ್ರಸಾರಗಳು ನಿಂತು ಟೆಲಿವಿಷನ್ ಪರದೆ ಬರಿದಾಯಿತು.

ಕೂಡಲೆ ತೆಂಡಲ್ಕೂರ್ ನನಗೆ ಫೋನ್ ಮಾಡಿ ಕೇಳಿದರು – “ಟೆಲಿವಿಷನ್ ನಲ್ಲಿ ಏನಾಯಿತು ಗಮನಿಸಿದೆಯಾ?” ನಾನು ಗಮನಿಸಿದೆ ಎಂದೆ. ಅದರ ಅರ್ಥ ಏನಿರಬಹುದೆಂದು ತೆಂಡೂಲ್ಕರ್ ಚಿಂತಿಸಿದರು. ಚೀನಾದಲ್ಲಿ ಏನಾದರೂ ಬದಲಾವಣೆ ಆಗಿರಬಹುದೆ? ಟಿ.ವಿ. ಸ್ಟೇಷನ್ ಬಂಡಾಯಗಾರರ ವಶವಾಗಿರಬಹುದೆ?

ಏನೇನೂ ಆಗಿರಲಿಲ್ಲ. ಬೆಳಗಿನ ಶೂನ್ಯಕ್ಕೆ ಕಣ್ಣು ತೆರೆದಿದ್ದೆವು ಅಷ್ಟೆ. ಹೊರಗೆ ಹೋಗುವುದಂತೂ ಸಾಧ್ಯವಿರಲಿಲ್ಲ. ಚೀನಾದ ಪ್ರಸಿದ್ಧವಾದ “ಗ್ರೇಟ್ ವಾಲ್” ನ್ನು ನಾವು ನೋಡಲು ಹೋಗುವಂತಿರಲಿಲ್ಲ. ನಮ್ಮಲ್ಲಿದ್ದ ಟ್ಯಾಕ್ಸಿಗಳಲ್ಲಿ ಸಾಕಷ್ಟು ಪೆಟ್ರೋಲ್ ಇರಲಿಲ್ಲ. ಕುಪಿತ ಮುಖದ ಹೋಟೆಲ್ ಕಾರ್ಮಿಕರು ನಮಗೆ ತಂಗಳು ಉಪಹಾರವನ್ನು ಬಡಿಸಿದರು. ಈ ಪಂಚತಾರಾ ಹೋಟೆಲಿನಲ್ಲಿ ಪಾಟುಗಳಲ್ಲಿ ಬೆಳೆದ ಗಿಡಗಳನ್ನು ಆಗೊಮ್ಮೆ – ಈಗೊಮ್ಮೆಯಾದರೂ ಬಿಸಿಲಿನಲ್ಲಿ ತಂದಿಡಬೇಕೆಲ್ಲವೇ? ಬಿಸಿಲಿನಲ್ಲಿ ಅಡ್ಡಾಡಲೆಂದು ನಾನೂ ಹೊರಗೆ ಹೋದೆ. ಮತ್ತೆ ಕಂಡಿದ್ದು ಅದೇ ದೃಶ್ಯವನ್ನು. ಗುಂಪುಕಟ್ಟಿ ನಿಂತ ಜನ ಮಾತಾಡಿಕೊಳ್ಳುತ್ತಿದ್ದರು – ಆದರೆ ಪಿಸುಮಾತಿನಲ್ಲಿ. ಒಂದೇ ಒಂದು ಅಂಗಡಿ ತೆರೆದಿದ್ದನ್ನು ಕಂಡು, ಹಾಗಾದರೆ ಡೆನ್ ಗೆದ್ದಂತೆಯೇ ಎಂಬ ಭಾವನೆ ಬಂತು.

ಅವಸರವಾಗಿ ಹೋಟೆಲ್ ಗೆ ಹಿಂದಿರುಗಿ ನೋಡಿದಾಗ ಹೋಟೆಲ್‌ಗೆ ಒಂದು ಬಲವಾದ ಗೇಟನ್ನು ಕಟ್ಟುತ್ತಿದ್ದುದನ್ನು ಕಂಡೆ. ಮೂರು ಕಾರ್ಮಿಕರು ಖುಷಿಯಾಗಿ ಮಾತಾಡುತ್ತಾ ಗೇಟೆಗೆ ಬಣ್ಣ ಹಚ್ಚುತ್ತಿದ್ದರು. ದೈನಿಕದ ವಾಸ್ತವಗಳು ನಡೆದ ರಕ್ತಪಾತವನ್ನು ಎಷ್ಟು ಬೇಗ ಮರೆಸಿಬಿಡುತ್ತದೆ ಎಂದುಕೊಂಡು ಒಳಬಂದೆ. ಅರಾಜಕತ್ವವನ್ನು ಯಾವ ಸಮುದಾಯವೂ ಸಹಿಸಲಾರದು. ಮಕ್ಕಳು ಶಾಲೆಗೆ ಹೋಗಬೇಕು; ಹೆಂಗಸರು ಕಾಯಿಪಲ್ಯಗಳನ್ನು ಕೊಂಡುತಂದು ನಿತ್ಯ ಅಡುಗೆ ಮಾಡಬೇಕು – ದೈನಿಕಗಳು ಹೇಗೂ ಸಾಗಬೇಕಾದ್ದರಿಂದ ವ್ಯವಸ್ಥೆಗಾಗಿ ಜನ ಎಂಥ ದುಷ್ಟವನ್ನೂ ಸಹಸಿಯಾರು. ನಮಗೆ ಎಷ್ಟು ಪ್ರಿಯರಾದವರು ಸತ್ತಾಗಲೂ ಹೊಟ್ಟೆ ಹಸಿಯುತ್ತದೆ. ಕಣ್ಣು ಬಾಡುತ್ತದೆ. ಬೆಳಗ್ಗೆ ಎದ್ದೊಡನೆಯೇ ಹಲ್ಲನ್ನು ತೊಳೆಯಬೇಕಾಗುತ್ತದೆ. ಬಾಯಾರಿದಾಗ ನೀರು ಕುಡಿಯಬೇಕಾಗುತ್ತದೆ. ಯಾವುದಾದರೊಂದು ರಾಜಕೀಯ ವ್ಯವಸ್ಥೆಯು ಹೀಗೆ ದೇಹದ ಒಂದು ನಿತ್ಯದ ಅಗತ್ಯ.

ನಮ್ಮ ದುಭಾಷಿ ಹೋಟೆಲ್‌ನ ಕಾಂಪೌಂಡಿನಲ್ಲಿ ರಗಳೆ ಮಾಡಿಕೊಳ್ಳುತ್ತಾ ಸುತ್ತಾಡುತ್ತಿದ್ದಳು. ಅವಳ ಬಗ್ಗೆ ಆಗಲೇ ಅಲ್ಪ ಸ್ವಲ್ಪ ತಿಳಿದಿದ್ದೆ. ಅವಳ ಗಂಡ ಎಂಜಿನಿಯರಿಂಗ್ ಕಲಿಯುತ್ತ ನ್ಯೂಯಾರ್ಕಿನಲ್ಲಿದ್ದ. ಅವಳಿಗೊಂದು ಮಗು ಬೇರೆ ಇತ್ತು. ಅವಳ ದುಡಿಮೆ ಸಂಸಾರ ನಿರ್ವಹಣೆಗೆ ಏನೇನು ಸಾಲದು. ಕೆಲಸಕ್ಕೆ ಹೋಗುವಾಗ ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ನೇಮಿಸಿ ಹಣ ಕೊಡುತ್ತಿದ್ದಳು. ಅವಳ ಅತ್ತೆ – ಮಾವಂದಿರು, ತಾಯಿತಂದೆಯರು ಅವಳಿಗೆ ಸಹಾಯ ಮಾಡುತ್ತಿದ್ದರು. ಚೀನಿಯರ ಕೌಟುಂಬಿಕ ವ್ಯವಸ್ಥೆ ನಮ್ಮದರಂತೆಯೇ. ಸಾಂಸಾರಿಕ ಭಾವನೆ ಅವರನ್ನು ಒಟ್ಟಾಗಿ ಕಟ್ಟಿಟ್ಟಿರುತ್ತದೆ.

ನಾಲ್ಕು ದಿನಗಳಿಂದ ಅವಳು ಮನಗೆ ಹೋಗಿರಲಿಲ್ಲ. ಮನೆಯಲ್ಲಿ ಮಗುವನ್ನು ಬಿಟ್ಟು ನಮ್ಮೊಡನಿದ್ದ ಈ ಹುಡುಗಿಯನ್ನು ನಾವು ಚುಡಾಯಿಸುತ್ತಿದ್ದೆವು: ನಿನ್ನ ಮಗುವನ್ನು ನೀನು ಯಾಕೆ ಕರೆದುಕೊಂಡು ಬರಬಾರದು? ತೆಂಡಲ್ಕೂರ್ಗೆ ಮ್ಯೂಸಿಯಂಗಳನ್ನು ನೋಡುವುದೆಂದರೆ ಹೇಗೂ ಬೋರು. ಅವರು ಬಿಟ್ಟಿಯಾಗಿ ನಿನ್ನ ಮಗುವನ್ನು ನೋಡಿಕೊಳ್ಳಬಹುದಲ್ಲ!

ನಮ್ಮ ದುಭಾಷಿ ಖಿನ್ನಳಾಗಿದ್ದಂತೆ ಕಂಡಿತು. ಮನೆಗೆ ಹೋಗದಂತೆ ನಮ್ಮೊಡನೆ ಪಂಚತಾರಾ ಹೋಟೆಲಿನಲ್ಲಿದ್ದ ಅವಳನ್ನು ನಾನು ಕೇಳಿದೆ. “ಯಾಕೆ ಬೇಸರವಾ?” ಅವಳು ಹೇಳಿದಳು. “ಮನೆಗೆ ಫೋನ್‌ ಮಾಡಿದೆ. ಮಗುವಿಗೆ ಹಾಲಿಲ್ಲವಂತೆ. ನನ್ನ ಅತ್ತೆ ಹೇಳಿದರು, ಅಡುಗೆ ಮಾಡಲು ಗ್ಯಾಸ್ ಇಲ್ಲವಂತೆ. ಗ್ಯಾಸ್ ಅಂಗಡಿಯ ಎದುರು ಒಂದು ದೊಡ್ಡ ಕ್ಯೂ ಅಂತೆ”. ನಾನು ಅವಳಿಗೆ ಹೇಳಿದೆ: “ಇಲ್ಲಿಯೇ ನೀನು ಸ್ವಲ್ಪ ಹಾಲನ್ನು ಕೊಂಡು ಟ್ಯಾಕ್ಸಿ ಬಂದ ನಂತರ ಮನೆಗೆ ಹೋಗಿ ಬಾ”. “ಹಾಲಿನ ಡಬ್ಬಿಗಳೂ ಸಿಗುತ್ತಿಲ್ಲ” ಎಂದಳು ಅವಳು. ಒಳ್ಳೆಯ ದಿನಗಳಲ್ಲೂ ಹಾಲಿನ ಡಬ್ಬಿಗಳು ದುರ್ಲಭವೇ. ಆದರೆ ಪಂಚತಾರಾ ಹೋಟೆಲಿನಲ್ಲಿ ನಾನು ಸಾಕಷ್ಟು ಹಾಲಿನ ಡಬ್ಬಿಗಳನ್ನು ನೋಡಿದ್ದೆ. “ಇಲ್ಲಿಂದಲೇ ಯಾಕೆ ನೀನು ಕೊಳ್ಳಬಾರದು?” ಎಂದು ಕೇಳಿದೆ. ಡಾಲರ್ ಕೊಡದೆ ಅವುಗಳು ಸಿಗುವುದಿಲ್ಲ ಎಂದಳು ದುಭಾಷಿ. ನಾನು ಏನೂ ಹೇಳದೆ ಹೋಟೆಲ್‌ನ ಅಂಗಡಿಗೆ ಹೋಗಿ ಹತ್ತು ಡಾಲರ್‌ಗೆ ಸಿಗುವಷ್ಟು ನೆಸ್ಲೆ ಹಾಲಿನ ಡಬ್ಬಿಗಳನ್ನು ಕೊಂಡು ಅವಳ ಬಳಿ ಹೋದೆ. ಅವಳ ಕಣ್ಣುಗಳಲ್ಲಿ ನೀರಾಡಿದವು. ನಾಳೆ ನಿನ್ನ ಹಣವನ್ನು ಹಿಂದಿರುಗಿಸುತ್ತೇನೆ ಅಂದಳು. “ ಹೇಗೂ ಮತ್ತೆ ನಾವು ಬರುತ್ತೇವಲ್ಲವೆ? ಆಗ ಕೊಟ್ಟರಾಯಿತು” ಎಂದು ನಗೆಯಾಡಿದೆ. ಕಾಫೀಶಾಪಿಗೆ ಹೋಗಿ ಶೂನ್ಯಭಾವದಲ್ಲಿ ಕಾಫಿ ಕುಡಿಯುತ್ತಾ ಕೂತೆ.

೧೯೮೦ನೇ ಇಸವಿಯಲ್ಲಿ ರಷ್ಯಕ್ಕೆ ಹೋಗಿದ್ದ ನಾನು ರಷ್ಯನ್ ದುಭಾಷಿಗೊಂದು ಪ್ರಶ್ನೆ ಹಾಕಿದ್ದೆ. ಕೆಲವು ಸಮಯದ ಹಿಂದೆ ಕೆಂಪು ಚೌಕದಲ್ಲಿ ನಡೆದೊಂದು ಪ್ರತಿಭಟನೆಯ ಸುದ್ದಿಯನ್ನೂ, ಪ್ರತಿಭಟನಾಕಾರರು ಬಂಧಿತರಾಗಿ ಕಣ್ಮರೆಯಾದದ್ದನ್ನೂ ನಾನು ಕೇಳಿಸಿಕೊಂಡಿದ್ದೆ. ಈ ಬಗ್ಗೆ ದುಭಾಷಿಯನ್ನು ಕೇಳಿದಾಗ ಅವಳು ತುಂಬ ಸರಳವಾಗಿ ಉತ್ತಿರಿಸಿದ್ದಳು. “ಅವರಿಗೆ ತಲೆ ಕೆಟ್ಟಿತ್ತು”. ಹೀಗೇಕೆ ಹೇಳುತ್ತಿ ಎಂದು ಚಕಿತನಾಗಿ ನಾನು ಕೇಳಿದ್ದಕ್ಕೆ ಅವಳ ಉತ್ತರ ಇನ್ನೂ ಸರಳವಾಗಿತ್ತು. “ತಲೆ ಕಟ್ಟಿರದ ಯಾರಾದರೂ ಕೆಂಪು ಚೌಕದಲ್ಲಿ ಪ್ರತಿಭಟಿಸುವುದು ಉಂಟೆ?”

ಅವಳ ಮಾತಿನಲ್ಲಿ ವ್ಯಂಗ್ಯವಾಗಲಿ ಕುಹಕವಾಗಲೀ ಇಲ್ಲದ್ದನ್ನು ಕಂಡು ನಾನು ಬೆರಗಾಗಿದ್ದೆ. ಅವಳು ನಿಜವಾಗಿ ಹಾಗೆ ನಂಬಿದ್ದಳು. ರಾಜಕೀಯ ಪ್ರಜ್ಞೆಯನ್ನು ಉಲ್ಬಣ ಎನ್ನಿಸುವಷ್ಟು ಹೆಚ್ಚಿಸಿ ಕಮ್ಯುನಿಸ್ಟರು ಅಧಿಕಾರಕ್ಕೆ ಬರುವುದು. ಆದರೆ ಹಾಗೆ ಅಧಿಕಾರ ಹಿಡಿದ ಕ್ರಾಂತಿಕಾರರೇ ಯಾಕೆ ಜನಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಲವಲೇಶವೂ ಇಲ್ಲದಂತೆ ಮಾಡುವುದಾದರೂ ಯಾಕೆ? ಹೇಗೆ? ಎಂಬುದು ನನ್ನ ಬೆರಗಿಗೆ ಕಾರಣವಾಗಿತ್ತು. ಅತ್ಯಂತ ಹತಾಶರಾದ ಜನ ಮಾತ್ರ ತಮ್ಮ ರಾಜಕೀಯ ಪ್ರಜ್ಞೆಯನ್ನು ಹೀಗೆ ಕಳೆದುಕೊಂಡುಬಿಡುತ್ತಾರೆ. ರಷ್ಯದ ಬೆಳವಣಿಗೆಯಿಂದ ನಿರಾಶೆಗೊಂಡ ನಾನು ಎಲ್ಲರಂತೆ ಇನ್ನೊಂದು ಭ್ರಮೆಗೆ ಒಳಗಾಗಿದ್ದೆ. ಮಾವೊ ಖಂಡಿತ ಚೀನಾ ರಷ್ಯದಂತೆ ಆಗಲು ಬಿಡುವುದಿಲ್ಲ; ತನ್ನ ಜನರ ರಾಜಕೀಯ ಪ್ರಜ್ಞೆಯನ್ನು ನಿಚ್ಚಳ ಉಳಿಸಿ ಉರಿಸಿ ಮಾವೊ ಬೆಳಗುತ್ತಾನೆ ಎಂದು ನಾನು ಭಾವಿಸಿದ್ದೆ. ಸಂಸ್ಕೃತಿ ಕ್ರಾಂತಿಯ ಪ್ರಕಟಿತ ಉದ್ದೇಶ ಅದೇ ಆಗಿತ್ತಲ್ಲವೇ? ಆದರೆ ಅಧಿಕಾರ ಲಾಲಸೆಯಿಂದ ಮಾವೊ ಜನರನ್ನು ಮೋಸ ಮಾಡಿದ. ಮಾವೊನಿಂದ ಅವಮಾನಿತನಾದ ಡೆಂಗ್ ಕೂಡಾ ಅದೇ ದಾರಿಯಲ್ಲಿದ್ದಂತೆ ಕಂಡಿತು.

ಕಾಫಿ ಕುಡಿಯುತ್ತಾ ಕುಳಿತ್ತಿದ್ದಂತೆ ನಮ್ಮ ದುಭಾಷಿ ಹಿಂದಕ್ಕೆ ಬಂದು ೩೦ ಯುವಾನ್‌ನನ್ನು ಹಿಂದಕ್ಕೆ ಕೊಟ್ಟಳು. ಆಗ ತಾನೇ ಬಂದು ಟ್ಯಾಕ್ಸಿ ಚಾಲಕನಿಂದ ಈ ಹಣವನ್ನು ಸಾಲ ಪಡೆದೆ ಎಂದಳು. ಟ್ಯಾಕ್ಸಿ ಚಾಲಕ ಅವಳಿಗೆ ಪರಿಚಿತನಲ್ಲ. ಆದರೂ ಇಷ್ಟು ಹಣವನ್ನು ಅವಳಿಗೆ ಸಾಲವಾಗಿ ಕೊಟ್ಟಿದ್ದ. ಈ ಸಾಲವನ್ನು ನಿನ್ನ ಮಗುವಿಗೆ ನಾನು ಕೊಟ್ಟ ಉಡುಗೊರೆ ಎಂದು ತೆಗೆದುಕೋ ಎಂದು ನಾನು ಒತ್ತಾಯಿಸಿದೆ. ಕಣ್ಣಲ್ಲಿ ನೀರು ತುಂಬಿದ ಆಕೆ ಬೇಡವೇ ಬೇಡ ಎಂದು ನಿರಾಕರಿಸಿದಳು. ತನಗೆ ಪರಿಚಯವಿರದ ಟ್ಯಾಕ್ಸಿ ಚಾಲಕ, ಯಾವುದೋ ದೇಶದ ನಾನು – ಎಷ್ಟು ಒಳ್ಳೆಯ ಜನರ ನಡುವೆ ತಾನ್ನಿದ್ದೇನೆಂಬುದೇ ಅವಳ ಸಂತೋಷಕ್ಕೆ ಕಾರಣವಾಗಿತ್ತು.

ಅವಿದ್ಯಾವಂತನಾದರೂ ಶ್ರೀಮಂತನಾದ ಟ್ಯಾಕ್ಸಿಯ ಚಾಲಕ ಒಂದು ಕಡೆ, ವಿದ್ಯಾವಂತಳಾದರೂ ಬಡವಿಯಾದ ಬೂರ್ಜ್ವಾ ಹುಡುಗಿ ಇನ್ನೊಂದು ಕಡೆ – ಇವರಿಬ್ಬರ ನಡುವೆ ಎಂತಹ ವಿಶ್ವಾಸದ ಸಂಬಂಧ! ನಾನು ನಿಜವಾಗಿಯೂ ಬೆರಗಾಗಿಬಿಟ್ಟೆ.

ಚೀನಾದ ಸಮಸ್ಯೆ ಏನು ಹಾಗಾದರೆ?

 

ಜೂನ್ , ಗುರುವಾರ

ಹಿಂದಿನ ರಾತ್ರಿ ಮತ್ತೆ ನಾವು ೧೦.೧೦ ಕ್ಕೆ ಇಂಗ್ಲಿಷ್ ವಾರ್ತೆಗೆ ಟೆಲಿವಿಷನ್ ಸ್ವಿಚ್ಚು ಹಾಕಿದೆವು. ಆದರೆ ನಾವು ಕಂಡದ್ದು ಎಲ್ಲೋ ದೂರದ ಚೀನೀ ಹಳ್ಳಿಯೊಂದರಲ್ಲಿ ಯಾವುದೋ ಒಂದು ಅಲ್ಪಸಂಖ್ಯಾತ ಜನಾಂಗ ಹೇಗೆ ಶವಸಂಸ್ಕಾರ ಮಾಡುತ್ತಾರೆಂಬ ಡಾಕ್ಯುಮೆಂಟರಿಯನ್ನು. ಅನಂತರ ಚೀನೀ ವಾರ್ತೆಯಲ್ಲಿ ಸಮವಸ್ತ್ರ ಧರಿಸಿದ ಸೈನ್ಯದ ಜನರೆಲ್ಲರನ್ನೂ, ಉರಿಯುವ ಟ್ರಕ್ಕುಗಳನ್ನೂ ಕಂಡದ್ದಾಯಿತು. ಯುವಕರ ಹುಂಬ ಬಂಡಾಯ ಮತ್ತು ಅವರ ಆದರ್ಶದ ಕನಸು ಹೀಗೆ ಮುಕ್ತಾಯವಾಗಿತ್ತು. ಆದರೂ ಈ ಅನುಭವದ ನಂತರ ಮತ್ತೆ ಚೀನ ಹಿಂದಿನ ಹಾಗೆ ಇರುವುದಿಲ್ಲವೆಂದು ಒಂದು ಸಣ್ಣ ಭರವಸೆ ನಮಗೆ, ಹೀಗೆ ಚಿಂತಿಸುತ್ತಾ ಹೋಟೆಲ್‌ನಲ್ಲಿ ಲಂಚ್‌ ಮುಗಿಸಿ, ನಮ್ಮ ಸಾಮಾನುಗಳನ್ನೆಲ್ಲಾ ಪ್ಯಾಕ್‌ ಮಾಡಿಕೊಂಡು ಭಾರತೀಯ ಎಂಬಿಸಿಗೆ ಸೇರಿದ ಒಂದು ಫ್ಲಾಟ್‌ನಲ್ಲಿ ಇಳಿದುಕೊಳ್ಳಲು ಹೊರಟೆವು. ರಜೆಯ ಮೇಲೆ ಹೋಗಿದ್ದ ರಾಯಭಾರಿ ಕಛೇರಿ ಅಧಿಕಾರಿಯ ಫ್ಲ್ಯಾಟಿದ್ದು. ಎರಡು ಬೆಡ್‌ರೂಂಗಳ ಫ್ಲ್ಯಾಟು.

ಮೃಣಾಲ್ ಪಾಂಡೆ ಬಲು ಜಾಣೆ. ನಾವು ಅಡುಗೆ ಮನೆಗೆ ಹೋದದ್ದೇ ಅವಳಿಗೆ ಚಹ ಇರುವುದೆಲ್ಲಿ, ಹಾಲಿನ ಡಬ್ಬ ಇರುವುದೆಲ್ಲಿ, ಚಮಚಗಳು ಕಪ್ಪುಗಳು ಇರುವುದೆಲ್ಲಿ ಎಲ್ಲವೂ ಹೊಳೆದುಬಿಟ್ಟಿತ್ತು. ಆದರೆ ಸಕ್ಕರೆ ಮಾತ್ರ ಸಿಗಲಿಲ್ಲ. ತೆಂಡೂಲ್ಕರ್ ಪ್ರಯಾಣ ಮಾಡುವಾಗ ಏರೋಪ್ಲೇನ್ ನಲ್ಲಿ ಉಳಿಸಿದ್ದ ಸಕ್ಕರೆಯ ಪ್ಯಾಕೆಟ್ ಗಳನ್ನು ತನ್ನ ಜೇಬಿನಿಂದ ತೆಗೆದರು. ಚಹ ತಯಾರಾಗುತ್ತಿದ್ದಂತೆ ಮೃಣಾಲ್‌ಪಾಂಡೆ ಅಲ್ಲಿದ್ದ ಎರಡು ರೆಫ್ರಿಜರೇಟರ್ ಗಳಲ್ಲಿ ಒಂದರಿಂದ ಒಂದಷ್ಟು ಬ್ರೆಡ್‌ನ್ನೂ, ಹಣ್ಣನ್ನೂ, ಚಾಕಲೇಟನ್ನೂ ತೆಗೆದರು. ನಮ್ಮ ದುರದೃಷ್ಟವೆಂದರೆ ನಾವು ಹೀಗೆ ಅರಿತುಕೊಳ್ಳಲು ತೊಡಗಿದ್ದ ಮೃಣಾಲ್‌ ಪಾಂಡೆಯವರನ್ನು ಇನ್ನೊಬ್ಬಳು ಸ್ತ್ರೀ ಅಧಿಕಾರಿ ಇರುವ ಫ್ಲ್ಯಾಟಿಗೆ ಯಾರೋ ಬಂದು ಒಯ್ದುಬಿಟ್ಟರು. ಇನ್ನು ಸ್ವಲ್ಪ ಸಮಯದಲ್ಲೇ ಇನ್ನೊಬ್ಬ ಅಧಿಕಾರಿಯ ಹೆಂಡತಿ ನಮ್ಮನ್ನು ಇನ್ನಷ್ಟು ಚಹಾಕ್ಕೆ ಕರೆದರು. ಆದರೆ ತಿನ್ನಲು ಹೆಚ್ಚೇನು ಇಲ್ಲ ಎಂದು ಆಕೆ ಕ್ಷಮೆಯಾಚಿಸಿದಳು. ಮಾರನೇ ದಿನದ ಪ್ರಯಾಣಕ್ಕೆ ಎಲ್ಲರೂ ಸಜ್ಜಾಗುತ್ತಿದ್ದರು.

ಮತ್ತೆ ರಾತ್ರಿ ಇನ್ನೊಬ್ಬ ಅಧಿಕಾರಿಯ ಮನೆಯಲ್ಲಿ ನಮಗೆ ಊಟ ಆಯಿತು. ಎಲ್ಲರೂ ತುಂಬಾ ಪ್ರೀತಿಯಿಂದ ನಮ್ಮನ್ನು ನೋಡಿಕೊಂಡರು. ಅಧಿಕಾರಿಗಳಾದ ಗಂಡಂದಿರು ರಾಯಭಾರದ ಮೌನದಲ್ಲಿ ಇದ್ದರೂ, ಅವರ ಹೆಂಡಂದಿರು ಮನಸ್ಸು ಬಿಚ್ಚಿ ಮಾತಾಡುತ್ತಿದ್ದರು. ನಾನು ಅವರಲ್ಲೊಬ್ಬರನ್ನು ಕೇಳಿದೆ: “ಈ ವಿದ್ಯಾರ್ಥಿಗಳು ಎಷ್ಟು ಆದರ್ಶಪರರು ಎಂದು ನಿಮಗೆ ಅನ್ನಿಸುತ್ತದೆ? ಸ್ವಲ್ಪ ಸಮಯದ ಹಿಂದೆ ಕೆಲವು ವಿದ್ಯಾರ್ಥಿಗಳು ಕಪ್ಪು ವಿದ್ಯಾರ್ಥಿಗಳ ವಿರುದ್ಧ ಹಿಂಸಾತ್ಮಕವಾಗಿ ಯೂನಿವರ್ಸಿಟಿಗಳಲ್ಲಿ ನಡೆದುಕೊಂಡಿದ್ದರೆಂದು ನಾವು ಕೇಳಿದ್ದರಲ್ಲಿ ಸತ್ಯಾಂಶವಿದೆಯೇ?” ಮಹಿಳೆಯ ಉತ್ತರ ಅರ್ಥಪೂರ್ಣವಾಗಿತ್ತು: ಚೀನೀ ವಿದ್ಯಾರ್ಥಿಗಳಿಗೂ ನಮ್ಮ ವಿದ್ಯಾರ್ಥಿಗಳಂತೆಯೇ, ಅವರಲ್ಲಿ ವರ್ಣದ್ವೇಷಿಗಳೂ ಇದ್ದಾರೆ, ಆದರ್ಶವಾದಿಗಳೂ ಇದ್ದಾರೆ.

ಊಟವಾದ ಬಳಿಕ ನಮ್ಮ ಫ್ಲ್ಯಾಟಿಗೆ ಹಿಂದಿರುಗಿದೆವು. ತೆಂಡೂಲ್ಕರ್ ಮತ್ತು ಪ್ರೊ. ನಾರಂಗರು ತಮ್ಮ ಒಂದು ಅಪೂರ್ವ ಅನುಭವವನ್ನು ನಮಗೆ ಹೇಳಿದರು. ಒಬ್ಬ ಉರ್ದು ವಿದ್ವಾಂಸರಾದ ಚೀನೀ ಅಧ್ಯಾಪಕರೊಬ್ಬರು ಪ್ರೊ. ನಾರಂಗ್ ಅವರನ್ನು ಭೇಟಿಯಾಗಲು ಬಂದಿದ್ದರಂತೆ. ತಾನು ಕಲಿತ ಉರ್ದು ಭಾಷೆಯಲ್ಲಿ ಈ ಚೀನೀ ವಿದ್ವಾಂಸ ಈ ಮೂರು ದಿನಗಳಲ್ಲಿ ತಮ್ಮ ದುಗುಡವನ್ನು ಹಲವು ಉರ್ದು ಕವನಗಳಾಗಿ ವ್ಯಕ್ತಪಡಿಸಿದ್ದರಂತೆ. “ನನ್ನ ಭಾಷೆಯಾದ ಚೀನೀಯಲ್ಲಿ ನಾನು ಎಂದೆಂದೂ ಈ ಭಾವನೆಗಳನ್ನು ವ್ಯಕ್ತಪಡಿಸಲಾರೆ. ನಾನು ಓದುವ ಪದ್ಯಗಳನ್ನು ನೀವು ನಿಮ್ಮ ಸಂಪ್ರದಾಯದಂತೆ ನೆನಪಿನಲ್ಲಿಟ್ಟುಕೊಂಡು ಭಾರತದಲ್ಲಿ ಅವು ಉಳಿದು ಬಾಳುವಂತೆ ಕಾಪಾಡಿಕೊಳ್ಳಿ” ಹೀಗೆ ಹೇಳಿ ಉರ್ದು ವಿದ್ವಾಂಸ ತನ್ನ ಪದ್ಯವನ್ನು ತೆಂಡೂಲ್ಕರ್ ಮತ್ತು ನಾರಂಗ್‌ಗೆ ಪಠಿಸಿದ್ದನಂತೆ.

ನನಗೆ ಇನ್ನೊಂದು ಅರ್ಥಪೂರ್ಣವಾದ ಘಟನೆಯಾಗಿತ್ತು. ಕಾಗದದ ಮೇಲೆ ಬರೆದದ್ದನ್ನು ಸೆನ್ಸರ್ ಮಾಡಿ ಹತ್ತಿಕ್ಕಬಹುದು. ನೆನಪಿನಲ್ಲಿ ಇಟ್ಟುಕೊಂಡಿರುವುದರ ಮೇಲೆ ಯಾವ ದುರಳನೂ ತನ್ನ ಅಧಿಕಾರಿ ಚಲಾಯಿಸುವಂತಿಲ್ಲ. ಹೀಗೆ ಸ್ಮೃತಿ ಆದದ್ದು ಕಿವಿಯಿಂದ ಕಿವಿಗೆ ಹರಡಿ ಬಾಳುತ್ತದೆ. ಅಡಿಗರು ಅನ್ನುವಂತೆ “ಸ್ಮೃತಿ ಇರುವ ತನಕ ಸ್ಮಾರ್ತ ನಿರ್ವಿಘ್ನ”. ಎಡುತಚ್ಚನ್, ಪುಂತಾನಮ್, ಕಬೀರ, ತುಕಾರಾಮ, ಬಸವ – ಅಲ್ಲದೆ ನಮ್ಮ ವೇದೋಪನಿಷತ್ತುಗಳು ಸಹ – ಹೀಗೆ ಬಾಳಿ ಉಳಿದದ್ದಲ್ಲವೇ? ಯಾವ ಯಾವೊನೂ ಸ್ಟಾಲಿನ್‌ನೂ ಹಿಟ್ಲರ್ ನೂ ಈ ಬಗೆಯಲ್ಲಿ ಸ್ಮಾರ್ತನಾದವನನ್ನು ಎಂದಿಗೂ ಹತ್ತಿಕ್ಕಲಾರ.

ರಾಯಭಾರ ಕಛೇರಿ ಕಾಂಪೌಂಡ್ ತಲುಪಿದ್ದೇ ಅದು ಅಪ್ಪಟ ಭಾರತೀಯನಾಗಿ ಕಂಡಿತ್ತು. ಕೆಡಸಿಟ್ಟು ಬೆಳೆಸಿದ ಮಕ್ಕಳ ಅಳುಬುರುಕು ಕೀಟಲೆಗಳು, ಅವಸರದಲ್ಲಿ ಕೊಂಡ ಸಾಮಾನುಗಳನ್ನು, ಅವಸರದಲ್ಲಿ ಪ್ಯಾಕ್‌ ಮಾಡಿದ ಅವ್ಯವಸ್ಥೆಗಳು, ಎಲ್ಲರಿಗೆ ಜಾಗವಿದ್ದರೂ ತಾವು ಮೊದಲಿಗರಾಗಬೇಕೆಂಬ ನೂಕು ನುಗ್ಗಲು – ಇತ್ಯಾದಿ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನಮ್ಮ ಬಸ್ಸಿನ ಟಯರ್ನಲ್ಲಿ ಗಾಲಿ ಇಲ್ಲ ಎಂಬುದು ಪತ್ತೆಯಾಯಿತು. ನಮ್ಮ ಸಾಂಸಾರಿಕ ರಗಳೆಗಳು, ನಮ್ಮ ಗೊಂದಲಗಳು, ನಮ್ಮ ಅದಕ್ಷತೆ ಎಲ್ಲದರಲ್ಲೂ ನಾವು ಅಪ್ಪಟ ಭಾರತೀಯನಾಗಿ ಚೀನಾದೇಶದ ಒಂದು ಸಣ್ಣ ಕಂಪೌಂಡಿನಲ್ಲಿ ನೆರೆದಿದ್ದೆವು.

ಅಂತೂ ಕೊನೆಗೆ ರಾತ್ರಿ ೯ ಘಂಟೆಗೆ ನಾವೊಂದು ಬ್ರಿಟಿಷ್ ಏರ್ವೇಸ್‌ ವಿಮಾನವನ್ನು ಹತ್ತಿದ್ದಾಯಿತು. ನಾವು ಏರೋಪ್ಲೇನ್‌ನಲ್ಲಿ ಒಂದೇ ಒಂದು ಅಚ್ಚಾದ ಕಾಗದವನ್ನೂ ಕಾಣಲಿಲ್ಲ. ಪೈಲೆಟ್‌ ಹೇಳಿದ: ಅವನು ಹಾಂಕಾಂಗ್‌ ಬಿಡುವಾಗಲೇ ಚೀನೀ ಸರ್ಕಾರದ ಆಜ್ಞೆಯಾಗಿತ್ತಂತೆ – ಅಚ್ಚಾದ ಏನನ್ನೂ ವಿಮಾನದಲ್ಲಿ ತರಕೂಡದು. ಆದ್ದರಿಂದ ಪೈಲಟ್‌ ಹೇಳಿದ: “ಕ್ಷಮಿಸಿ, ಓದುವುದಕ್ಕೆಂದು ನಿಮಗೆ ನಾವು ಏನನ್ನೂ ಕೊಡಲಾರೆವು”.

ಸುರಕ್ಷಿತವಾಗಿ ಏರೋಪ್ಲೇನ್ ಆಕಾಶಕ್ಕೇರಿದ ಕೂಡಲೇ ಪ್ಲೇನಿನ ಮೇಲಿದ್ದ ರಜತಪರದೆಯ ಮೇಲೆ ಒಂದು ಚಿತ್ರ ಉದ್ಭವಿಸಿತು. ಟಯನಾಮಿನ್ ಚೌಕದಲ್ಲಿ ಸೈನಿಕರ ಟ್ರಕ್ಕುಗಳು ಓಡಾಡುವುದನ್ನು ಕಂಡೆವು. ಹೀಗೆ ನೋಡುತ್ತಿದ್ದಂತೆಯೇ ಒಂದು ಮಗುವನ್ನು ಎತ್ತಿಕೊಂಡು ಓಡುತ್ತಿದ್ದ ಮಹಿಳೆಯನ್ನು ಗುಂಡೇಟಿನಿಂದ ಗಾಯಗೊಳಿಸುವುದನ್ನು ನೋಡಿದೆವು. ರಕ್ತ ಸೋರುತ್ತಿದ್ದ ಮಗುವನ್ನು ಗಾಯಗೊಂಡಿದ್ದ ತಾಯಿ ಎತ್ತಿಕೊಂಡು ಓಡುವ ದೃಶ್ಯ ಹೃದಯವಿದ್ರಾವಕವಾಗಿತ್ತು. ಯಾವ ಬರವಣಿಗೆಯನ್ನು ತರಕೂಡದೆಂದು ಆಜ್ಞೆಹೊರಡಿಸಿದ್ದ ಸರಕಾರಕ್ಕೆ ಇಂತಹದೊಂದು ಫಿಲ್ಮ್ ನ್ನು ತೋರಿಸಬಹುದೆಂದು ತಿಳಿದಿರಲಿಲ್ಲ. ಪ್ರಭುತ್ವ ಹೀಗೆ ಮೂರ್ಖವಾಗಿರಬಹುದೆಂಬುದೇ ನಮಗಿರುವ ಭರವಸೆಯಲ್ಲವೇ?

ಏರ್‌ಪೋರ್ಟಿಗೆ ನಮ್ಮನ್ನು ಕಾರಿನಲ್ಲಿ ಒಯ್ದ ಎಂಬಸಿಯ ಒಬ್ಬ ಸುಶಕ್ಷಿತ ಅಧಿಕಾರಿ ಹೇಳಿದ್ದನ್ನು ನಾನು ಮರೆಯಲಾರೆ. ಅವಳು ಚೀನೀ ಇತಿಹಾಸವನ್ನು ಚೆನ್ನಾಗಿ ಅರಿತವಳು. ಇವತ್ತಿಗೂ ಕನ್ ಫ್ಯೂಷಿಯಸ್‌ನ ವಿಚಾರಗಳು ಎಷ್ಟು ಪ್ರಭಾವಶಾಲಿಯಾಗಿಯೇ ಉಳಿದಿವೆ, ಮಾವೊನನ್ನು ಮೀರಿ, ಎಂಬುದಕ್ಕೆ ಅವಳೊಂದು ನಿರ್ದಶನ ಕೊಟ್ಟಳು. ಕನ್ ಫ್ಯೂಷಿಯಸ್ ನ ಒಂದು ನುಡಿಯ ಪ್ರಕಾರ ದೇವರ ಇಚ್ಛೆ ನಡೆಯುವ ತನಕ ಒಂದು ಸಾಮ್ರಾಜ್ಯ ಮುಂದುವರಿಯುತ್ತದೆ; ದೈವೇಚ್ಛಿ ಮುಗಿದ ಬಳಿಕವೇ ಅದನ್ನು ನಾಶಮಾಡಲು ಸಾಧ್ಯ. ಒಂದು ಸಾಮ್ರಾಜ್ಯ ನ್ಯಾಯವಾಗಿದೆಯೋ ಇಲ್ಲವೋ ಎಂಬುದಕ್ಕೆ ಇದು ಏಕೈಕ ಪರೀಕ್ಷೆ ಎನ್ನುವುದಾದರೆ ಪ್ರಜೆಗಳಿಗೆ ತಮ್ಮ ಹಿತವನ್ನು ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳಲು ಅವಕಾಶವೇ ಇಲ್ಲದಂತಾಯಿತು. ಯಾವ ಪ್ರಭುತ್ವವೇ ಆಗಲೀ ತನ್ನ ವಿರುದ್ಧದ ಬಂಡಾಯವನ್ನು ಹತ್ತಿಕ್ಕಲು ಸಾಧ್ಯವಾದಲ್ಲಿ, ಅದರರ್ಥ ಆ ಸಾಮ್ರಾಜ್ಯಕ್ಕೆ ದೇವರ ಕೃಪೆ ಇನ್ನೂ ಇದೆ ಅಂತಾಯಿತು. ಅಂತಹ ಪ್ರಭುತ್ವ ದೇವರ ಕೃಪೆಯನ್ನು ಪಡೆದದ್ದರಿಂದ ಅಥವಾ ಪಡೆದಷ್ಟು ದಿನ ಕ್ರೂರವೇ ಅಲ್ಲ ಎಂದು ಹಾಗೂ ಆಯಿತು.

ನಾವು ಭಾರತದಲ್ಲಿ ನಂಬುವುದಾದರೂ ‘ಸತ್ಯಮೇವ ಜಯತೆ’. ಸತ್ಯ ಗೆದ್ದೇ ಗೆಲ್ಲುತ್ತದೆ, ಇಂದಲ್ಲದಿದ್ದರೆ ನಾಳೆ. ನಾಳೆಯಲ್ಲದಿದ್ದರೆ ದೇವರ ಅನಂತ ಕಾಲದಲ್ಲಿ. ಮನುಷ್ಯನ ಆತ್ಮವನ್ನು ಕಾಪಾಡಬಲ್ಲ ನಂಬಿಕೆ ಇದು; ವ್ಯವಹಾರದ ಮಾತಲ್ಲ. ಆದ್ದರಿಂದಲೇ ಗೀತೆ ಹೇಳುವುದು ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡು ಎಂದು. ಗಾಂಧಿಯವರು ನಮಗೆ ಕಲಿಸಿದ್ದೂ ಇದ್ದನ್ನೇ. ಜಗತ್ತಿನ ಸಮಸ್ತರ ಅಸತ್ಯವಾದ್ದನ್ನು ಎತ್ತಿ ಹಿಡಿದು ಯಶಸ್ವಿಯಾಗಿರುವಂತೆ ಕಂಡರೂ ಕೂಡ, ಸತ್ಯವನ್ನು ಕಂಡ ಒಬ್ಬನೇ ಒಬ್ಬ ಏಕಾಂಗಿಯಾಗಿ ಇಡೀ ಮಾನವತೆಯ ವಿರುದ್ಧ ನಿಲ್ಲುವ ಸ್ಥೈರ್ಯವನ್ನು ತೋರಿಸಬೇಕು ಎಂದು ಗಾಂಧಿ ತಿಳಿದಿದ್ದರು. ಆದರೆ ಚೀನೀ ಕನ್‌ಫ್ಯೂಷಿಯಸ್ ನುಡಿಯ ಪ್ರಕಾರ: ಸತ್ಯ ಗೆಲ್ಲುವುದಲ್ಲ; ಗೆದ್ದದ್ದು ಸತ್ಯವಾಗುತ್ತದೆ. ಕೆಲವು ಕಾಲದವರೆಗೆ ಮಾವೊ ಗೆದ್ದು ಆಳಿದ. ಅಲ್ಲಿಯ ತನಕ ಅದು ಸತ್ಯವಾಗಿತ್ತು. ಅನಂತರದಲ್ಲಿ ಡೆನ್ ಗೆದ್ದ. ಸದ್ಯ ಅವನು ಬೀಳುವ ತನಕ ಅದೇ ಸತ್ಯ. ಅಂದರೆ ಇವರ ತಾತ್ಪರ್ಯ: ಯಾವುದು ಗೆದ್ದಿದೆ ನೋಡಿ ಅದನ್ನೇ ಸತ್ಯ ಎಂದು ತಿಳಿದುಕೊ.

ಪ್ರಜಾತಂತ್ರವೆಂದರೆ ರೋಮಾಂಚಿತರಾಗಿ ಮಾತಾಡುವ, ಆದರೆ ವ್ಯವಹಾರದಲ್ಲಿ ತಮ್ಮ ವ್ಯಾಪಾರಕ್ಕಾಗಿ ಗೆದ್ದವರ ಬಾಲವನ್ನು ಹಿಡಿಯುವ ಅಮೆರಿಕನ್ ವ್ಯವಸ್ಥೆಯೂ ನಿಜದಲ್ಲಿ ಅನುಸರಿಸುವುದು ಕನ್‌ಫ್ಯೂಷಿಯಸ್‌ನನ್ನೇ ಅಲ್ಲವೇ?

—-
ಚೀನಾ ಪ್ರವಾಸದ ನಂತರ ಇಂಗ್ಲಿಷ್‌ನಲ್ಲಿ ನಾನು ಬರೆದ ದಿನಚರಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಇದರ ಕನ್ನಡಾನುವಾದ ಇದು.;