ಈ ಸಂಕಲನದ ‘ನನ್ನನ್ನು ಬೆಳೆಸಿದ ಕರ್ನಾಟಕ’ವನ್ನು ಇಂಗ್ಲಿಷಿನಿಂದ ಭಾಷಾಂತರಿಸಿದವರು ಗೆಳೆಯ ನಟರಾಜ ಹುಳಿಯಾರ್, ದೀರ್ಘವಾದ ಲೇಖನವನ್ನು ಸೂಕ್ಷ್ಮವಾಗಿ ಗ್ರಹಿಸಿ ಅನುವಾದಿಸಿದ್ದಾರೆ –  ನನ್ನ ಒತ್ತಾಯಕ್ಕಾಗಿ ಮಾತ್ರವಲ್ಲದೆ, ಅವರೂ ಈ ಅನುವಾದವನ್ನು ತನ್ನ ಸಂತೋಷಕ್ಕಾಗಿಯೂ ಮಾಡಿದ್ದೆಂಬ ಭಾವನೆಯನ್ನು ನನಗೆ ಕೊಟ್ಟಿದ್ದಾರೆ. ಕನ್ನಡ ಯುವ ಲೇಖಕರ ನಡುವಿನ ಒಂದು ಒಳ್ಳೆಯ ಮನಸ್ಸು ಹೀಗೆ ನನಗೆ ನೆರವಾಯಿತೆಂದು ನನಗೆ ಹರ್ಷವಾಗಿದೆ.

ಏಕಾಗ್ರತೆಯಲ್ಲಿ ಮೈಮರೆತು ನನ್ನ ಒಳಗಿನಿಂದ ನನಗೇ ಮಾತಾಡಿಕೊಳ್ಳುವಂತೆ ಸಾಧ್ಯವಾಗಿರುವುದು ಈ ಕೆಲವು ವರ್ಷಗಳಲ್ಲಿ ನಿನಾಸಮ್‌ ಹೆಗ್ಗೋಡಿನಲ್ಲಿ ನಡೆಸುವ ಶಿಬಿರಗಳಲ್ಲಿ. ಅಲ್ಲಲ್ಲೇ ಹುಟ್ಟುವ ಮಾತುಗಳು ಇವು. ನನ್ನನ್ನೇ ನಾನು ಹುಡುಕಾಡುತ್ತ ಆಡುವ ಈ ಮಾತುಗಳು ಹುಟ್ಟುವುದಕ್ಕೆ ಕಾರಣ ನನ್ನ ಎದುರಿರುವ ಕಣ್ಣುಗಳ ನಿರೀಕ್ಷೆ. ಮಾತುಗಾರಿಕೆ ಕೇವಲ ವ್ಯಕ್ತಿತ್ವದ ಪ್ರದರ್ಶನವಾಗದಂತೆ, ತನ್ಮಯತೆಯಲ್ಲಿ ನಡೆಯುವ ಶೋಧವಾಗುವಂತೆ ಪ್ರೇರೇಪಿಸುವ ಸಭಿಕರು ಹೀಗೆ ಒದಗುವುದೊಂದು ಅದೃಷ್ಟ. ಆಡಿದ ಮಾತುಗಳು ನನಗೇ ನೆನಪಿನಲ್ಲಿ ಉಳಿಯದಂತೆ ಕಳೆದುಹೋಗಬಹುದಿತ್ತು. ಆದರೆ ರೆಕಾರ್ಡ್‌ ಆದ ಮಾತಿನ ಲಹರಿಯನ್ನು ಹೇಗೆ ಸ್ವೀಕರಿಸಬೇಕೊ, ಎಷ್ಟು ಸ್ವೀಕರಿಸಬೇಕೊ ಅಷ್ಟು, ಯಥೋಚಿತ ಕ್ರಮದಲ್ಲಿ ಸ್ವೀಕರಿಸಿ ಬರೆದುಕೊಟ್ಟವರು ಗೆಳೆಯ ಜಾಧವ್. ಅವರಿಗೆ ನಾನು ಋಣಿಯಾಗಿದ್ದೇನೆ.

‘ಅಡಿಗ ಸಂದರ್ಶನ’ವನ್ನು ಒಮ್ಮೆಯಲ್ಲ, ಎರಡು ಬಾರಿ ನನಗೆ ಬರೆದುಕೊಟ್ಟವರು ಚಿಕಾಗೊನಲ್ಲಿರುವ ಅಡಿಗರ ಮಗಳಾದ ಶ್ರೀಮತಿ ವಿದ್ಯಾ ಕೃಷ್ಣರಾಜ್‌, ಮೊದಲು ಅವರು ಬರೆದುಕೊಟ್ಟದ್ದನ್ನು ನಾನು ಕಳೆದುಕೊಂಡರೂ ಅವರಿಗೆ ನನ್ನ ಮೇಲಿರುವ ವಿಶ್ವಾಸದಿಂದ ಮತ್ತೆ ಬರೆದುಕೊಟ್ಟರೆಂದು ನಾನು ವಿದ್ಯಾ ಕೃಷ್ಣರಾಜ್‌ಗೆ ಕೃತಜ್ಞನಾಗಿದ್ದೇನೆ.

ಇದು ಒಟ್ಟಿನಲ್ಲಿ ನನಗೇ ಪ್ರಿಯವಾದ ಸಂಕಲನವೆಂದು ನಾನು ಸಂಕೋಚವಿಲ್ಲದೆ ಹೇಳಬಯಸುತ್ತೇನೆ. ನನ್ನ ಸಮಕಾಲೀನ ಲೇಖಕರಿಗೆ ಇಲ್ಲಿ ನನ್ನ ಸ್ಪಂದನವಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನನ್ನ ಚಿಂತನೆಯಿದೆ. ಈ ಎರಡನ್ನೂ ನಾನು ಒಟ್ಟಿನಲ್ಲಿ ನಮ್ಮ ರಾಷ್ಟ್ರೀಯ ಪರಿಕಲ್ಪನೆ ಹೇಗಿರಬೇಕೆಂಬ ಚೌಕಟ್ಟಿನಲ್ಲಿಟ್ಟು ನೋಡಿದ್ದೇನೆ. ನಮ್ಮ ಧರ್ಮ, ನಮ್ಮ ರಾಜಕೀಯ, ನಮ್ಮ ಸಾಹಿತ್ಯ –  ಈ ಎಲ್ಲವೂ ಒಂದಕ್ಕೊಂದು ಸಂಬಂಧವಿರುವ ವಿಷಯಗಳೆಂದು ನಾನು ತಿಳಿದಿರುವುದರಿಂದ ಇಲ್ಲಿನ ಎಲ್ಲ ಲೇಖನಗಳಲ್ಲೂ ಈ ಸಂಬಂಧಗಳ ಬೇರೆ ಬೇರೆ ಮಗ್ಗಲುಗಳು ಪ್ರತ್ಯಕ್ಷವಾಗುತ್ತ ಹೋಗುತ್ತವೆ. ನಾನು ನನ್ನ ಕಾಲವನ್ನು ಪರಿಭಾವಿಸುವ ಕ್ರಮವನ್ನೇ ಈ ಬರವಣಿಗೆಗಳಲ್ಲಿ ನಾನು ಹಿಡಿದಿಡಲು ಪ್ರಯತ್ನಿಸಿದ್ದೇನೆ.

ಚೀನಾ ಮತ್ತು ರಷ್ಯಾದಲ್ಲಿ ನನಗೆ ಆದ ಅನುಭವ ಕೂಡ ಈ ಸಂಕಲನದ ಒಟ್ಟು ಚಿಂತನೆಗೆ ಪುಷ್ಟಿ ಕೊಡುವಂತಿದೆ ಎಂದು ನಾನು ತಿಳಿದಿದ್ದೇನೆ.

ಈ ಸಂಕಲನವನ್ನು ವಿಶೇಷ ಆಸಕ್ತಿಯಿಂದ ಮುದ್ರಣಕ್ಕೆ ಸಿದ್ಧಪಡಿಸಿದ ಕುಮಾರಿ ಪಲ್ಲವಿಗೂ, ಅಚ್ಚಿನ ಮುದ್ರಣಕ್ಕೆ ತಪ್ಪಿಲ್ಲದಂತೆ ತಿದ್ದಿಕೊಟ್ಟ ಶ್ರೀಮತಿ ಶಾಂಭವಿಯವರಿಗೂ, ಅಕ್ಷರ ಪ್ರಕಾಶನಕ್ಕೂ ನಾನು ಕೃತಜ್ಞ.

ಯು.ಆರ್. ಅನಂತಮೂರ್ತಿ
೧೦ ಮಾಧವ ನಗರ
ಮಣಿಪಾಲ
೨೧.೦೧.೯೬