ಅಯೋಧ್ಯೆಯಿಂದ ಹುಟ್ಟಿದ ಚಿಂತನೆ

ಡಿಸೆಂಬರ್ ೬ರಂದು ಅಯೋಧ್ಯೆಯಲ್ಲಿ ನಡೆದದ್ದು ಈ ಮುಂದಿನ ಚಿಂತನೆಗೆ ನನ್ನನ್ನು ಹಚ್ಚಿದೆ. ಯಾವ ಆಧಾರದ ಮೇಲೆ ನಾವು ಒಂದು ರಾಷ್ಟ್ರವಾಗಬಹುದು ಎಂಬ ಪ್ರಶ್ನೆ ಬ್ರಿಟಿಷರಿಂದ ಬಿಡುಗಡೆಯಾಗುವ ಪ್ರಯತ್ನದಲ್ಲಿ ಎಲ್ಲರನ್ನೂ ಕಾಡಿದೆ. ‘ನೇಷನ್ ಸ್ಟೇಟ್’ ಎನ್ನುವ ಕಲ್ಪನೆಯೇ ನಮಗೆ ಹೊಸದು. ಯುರೋಪಿನಿಂದ ನಾವು ಪಡೆದ ಕಲ್ಪನೆ ಇದು. ಯುರೋಪಿನ ರಾಜ್ಯಗಳಂತೆ ನಾವೂ ಒಂದು ನೇಷನ್ ಸ್ಟೇಟ್ ಆಗಬೇಕಾದರೆ ಆಗ ಎಲ್ಲ ಪ್ರಜೆಗಳು ಒಂದೇ ಭಾಷೆಯನ್ನು ಆಡುವ, ಒಂದೇ ಮತವನ್ನು ಆಚರಿಸುವ, ಒಂದೇ ಬುಡಕಟ್ಟಿನ ಜನರಾಗಿರಬೇಕಾಗುತ್ತದೆ. ಆದರೆ ಭಾರತ ಹಾಗಿಲ್ಲ. ಅನೇಕತ್ವವೇ ಭಾರತದ ವೈಶಿಷ್ಟ್ಯ. ಅನೇಕ ಭಾಷೆಗಳು, ಅನೇಕ ಮತಗಳು, ಅನೇಕ ಬುಡಕಟ್ಟಿನ ಜನರು, ಅನೇಕ ಬಗೆಯ ಊಟ ಉಪಚಾರಗಳು – ಇವೆಲ್ಲವೂ ಸೇರಿ ಭಾರತವಾಗಿದೆ. ಆದರೆ ನಾವು ಐರೋಪ್ಯರಂತೆ ಒಂದು ನೇಷನ್ ಸ್ಟೇಟ್ ಆಗಿರದಿದ್ದರೂ ಕೂಡ, ಐರೋಪ್ಯ ದೇಶದ ಒಂದು ನೇಷನ್ ಸ್ಟೇಟ್ ಆದ ಬ್ರಿಟನ್ನು ನಮ್ಮನ್ನು ಆಳುತ್ತಿದ್ದುದರಿಂದ, ನಾವೂ ಒಂದು ನೇಷನ್ ಸ್ಟೇಟ್ ಆಗಬಹುದಾದ ಕಲ್ಪನೆಯಿಂದಲೇ ಬ್ರಿಟನ್ನನ್ನು ಎದುರಿಸಬೇಕಾಗಿ ಬಂತು.

ಇದರ ಪರಿಣಾಮವಾಗಿ ನಾವು ಯಾರು ಎಂಬ ಹುಡುಕಾಟ ನಮ್ಮಲ್ಲಿ ಪ್ರಾರಂಭವಾಯಿತು. ಬಂಗಾಳದ ಮಹಾ ಲೇಖಕ ಬಂಕಿಮಚಂದ್ರರು ಈ ಹುಡುಕಾಟದಲ್ಲಿ ಕ್ಷತ್ರಿಯನಾದ ಶ್ರೀಕೃಷ್ಣನನ್ನು ಆದರ್ಶವಾಗಿ ಕಂಡರು. ಅನುಭಾವಿ ಸಂತ ಚೈತನ್ಯ ಪ್ರಭುವಿನ ಪ್ರಿಯಕರನಾದ ಶ್ರೀಕೃಷ್ಣ ಅವರ ಆದರ್ಶವಾಗಿರಲಿಲ್ಲ. ಬದಲಾಗಿ, ಮಹಾಭಾರತದ ಅಧ್ವರ್ಯವಾದ ಶ್ರೀಕೃಷ್ಣ ಅವರ ಆದರ್ಶವಾದ.

ಬಂಗಾಳದ ರಾಜಾರಾಂ ಮೋಹರಾಯರಿಗೆ ಪರಂಪರೆಗೆ ಅಂಟಿಕೊಂಡ ಭಾರತ ಬಲಹೀನವಾಗಿ ಕಂಡಿತು. ಆಧುನೀಕರಣಗೊಂಡ ಭಾರತ ಮಾತ್ರ ಬ್ರಿಟನ್ನಿಗೆ ಸರಿಸಾಟಿಯಾಗಬಹುದೆಂದು ಅವರಿಗೆ ಅನ್ನಿಸಿತು. ಆದ್ದರಿಂದಲೇ ಅವರು ಇಂಗ್ಲಿಷ್ ಭಾಷೆಯ ಕಲಿಕೆಗಾಗಿ ವಾದಿಸಿದರು. ಹಿಂದೂ ಧರ್ಮವನ್ನು ಕ್ರೈಸ್ತಧರ್ಮಕ್ಕೆ ಹತ್ತಿರ ತರುವಂತಹ ಸುಧಾರಣೆಯಗಳನ್ನು ಪ್ರಚೋದಿಸಿ ಬ್ರಹ್ಮ ಸಮಾಜದ ನಿರ್ಮಾಣ ಅವರಿಂದಾಯಿತು.

ಮಹಾರಾಷ್ಟ್ರದಲ್ಲಿ ತಿಲಕರು ಉಗ್ರವಾದಿಗಳಾಗಿ ಬ್ರಿಟನ್ನನ್ನು ಎದುರಿಸಿದರು. ಹೀಗೆ ಎದುರಾದಾಗ ಹೆಂಬೇಡಿಗಳಾದ ಭಾರತೀಯರನ್ನು ಒಟ್ಟು ಮಾಡಲೆಂದು ಶಿವಾಜಿಯನ್ನೂ, ಗಣೇಶನನ್ನೂ ಸಂಕೇತಗಳನ್ನಾಗಿ ಮಾಡಿಕೊಂಡ ಪೂರ್ಣಸ್ವರಾಜ್ಯದ ವಾದಿಗಳಾದರು. ನಾವು ಎಂದೂ ಐರೋಪ್ಯ ಬ್ರಿಟನ್ನಿನಷ್ಟು ನಮಗೆ ಅನ್ಯವಾದ್ದನ್ನು ಹೀಗೆ ಎದುರಿಸಿದ್ದೇ ಇಲ್ಲ. ಗ್ರೀಕರ ಅಲೆಗ್ಸಾಂಡರ್ ಭಾರತಕ್ಕೆ ಬಂದ; ಹಾಗೆಯೇ ಹೊರಟು ಹೋದ. ಹಲವು ಪರಕೀಯರು ಹೀಗೆಯೇ ದಂಡೆತ್ತಿ ಬಂದರು; ಆದರೆ ನಮ್ಮವರಾಗಿ ಬಿಟ್ಟರು. ಮುಸ್ಲಿಮರು ಅನ್ಯರಾಗಿ ಬಂದರು; ಆದರೆ ಭಾರತದಲ್ಲೇ ನೆಲೆ ಊರಿದರು. ಅನ್ಯವಾದ ಬ್ರಿಟನ್ ಅನ್ಯವಾಗಿಯೇ ಉಳಿದು ಭಾರತದ ಸ್ವರೂಪವನ್ನೇ ಬದಲಾಯಿಸುವಂತೆ ಒತ್ತಾಯಿಸಿತು. ಈ ಒತ್ತಾಯದಿಂದಾಗಿ ಪ್ರಾರಂಭವಾದ ಹುಡುಕಾಟದಲ್ಲಿ ಒಂದು ಕಡೆ ನಾವು ಉದ್ದೇಶಪೂರ್ವಕವಾಗಿ ಹಿಂದು ಮತಸ್ಥರಾಗಲು ಹವಣಿಸಿದರೆ ಇನ್ನೊಂದು ಕಡೆಯಲ್ಲಿ ಇಂಗ್ಲಿಷ್ ಜನರ ನಡೆನುಡಿಯನ್ನೇ ನಮ್ಮದಾಗಿಸಿಕೊಳ್ಳಲು ಹವಣಿಸಿದೆವು. ಹೀಗೆ ಇವತ್ತಿಗೂ ನಮ್ಮ ಸ್ವಕೀಯತೆಯ ಹುಡುಕಾಟದಲ್ಲಿ ಒಂದೊ ನಾವು ಅಪ್ಪಟ ಹಿಂದುಗಳಾಗಲು ಪ್ರಯತ್ನಿಸುತ್ತೇವೆ; ಅಥವಾ ಆಧುನೀಕರಣದಲ್ಲಿ ಐರೋಪ್ಯರಂತಾಗಲು ಬಯಸುತ್ತೇವೆ.

ಈ ಸಮಸ್ಯೆಗೆ ಗಾಂಧಿಯವರ ಪ್ರತಿಕ್ರಿಯೆ ಅತ್ಯಂತ ಗಾಢವಾದದ್ದು. ಅಂತರ್ ವಿರೋಧವಾದದ್ದು ಎಂದು ಮೇಲ್ನೋಟಕ್ಕೆ ಅನ್ನಿಸಬಹುದಾದ ಅವರ ಮೂರು ಪ್ರತಿಕ್ರಿಯೆಗಳಿಂದ ಇದನ್ನು ಅರಿಯಲು ಬಯಸುತ್ತೇನೆ. ಒಮ್ಮೆ ಗಾಂಧೀಜಿಯವರನ್ನು ಯಾರೋ ರಾಜಾರಾಂ ಮೋಹನರಾಯರ ಬಗ್ಗೆ ಅಭಿಪ್ರಾಯ ಕೇಳಿದರು. ಆಗ ಗಾಂಧೀಜಿಯವರು ರಾಜಾರಾಂ ಮೋಹನರಾಯರನ್ನು ಒಬ್ಬ ‘ಕುಬ್ಜ’ ಎಂದು ಕರೆದರು. ಹೀಗೆ ಕರೆಯುವಾಗ ಅತ್ಯಂತ ವಿನಯದಿಂದ ತನ್ನನ್ನೂ ಒಬ್ಬ ‘ಕುಬ್ಜ’ ಎಂದು ಕರೆದುಕೊಂಡರು. ಗಾಂಧೀಜಿಯವರನ್ನು ಮಹಾತ್ಮ ಎಂದು ತಿಳಿದಿದ್ದ ಗುರುದೇವ ರವೀಂದ್ರನಾಥ ಠಾಕೂರರು ಇದರಿಂದ ಸಿಟ್ಟಿಗೆದ್ದು ಮಹಾತ್ಮರನ್ನು ಟೀಕಿಸಿದರು. ಈ ಟೀಕೆಗೆ ಗಾಂಧೀಜಿಯವರ ಪ್ರತಿಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಇಂಗ್ಲಿಷ್ ಭಾಷಾಜ್ಞಾನ ದೊರೆಯುವುದಕ್ಕಿಂತ ಪೂರ್ವದಲ್ಲಿದ್ದ ಮಹಾನುಭಾವರಾದ ತುಳಸೀದಾಸರಿಗಾಗಲೀ ಕಬೀರದಾಸರಿಗಾಗಲೀ ಹೋಲಿಸಿಕೊಂಡಾಗ ತಾನೂ ರಾಜಾರಾಂ ಮೋಹನರಾಯರೂ ಕುಬ್ಜರಲ್ಲವೇ ಎಂದು ಗಾಂಧೀಜಿ ಕೇಳಿದರು.

ಇನ್ನೊಂದು ಸಂದರ್ಭದಲ್ಲಿ ಗಾಂಧೀಜಿಯವರೇ ತಿಲಕರಿಗಿಂತ ಗೋಪಾಲಕೃಷ್ಣ ಗೋಖಲೆಯವರು ತನಗೆ ಹೆಚ್ಚು ಆತ್ಮೀಯರು ಮಾತ್ರವಲ್ಲದೆ ತನ್ನ ಗುರುಗಳೂ ಆಗಿದ್ದರು ಎಂದು ಹೇಳುತ್ತಾರೆ. ತಿಲಕರು ಹಿಂದೂ ಸಂಸ್ಕೃತಿಯ ಪುನರುತ್ಥಾನದ ಮಹಾ ಪುರುಷರು; ಆದರೆ ಗೋಖಲೆಯವರು ಸಂವಿಧಾನ ಬದ್ಧವಾಗಿ ಕ್ರಮೇಣ ಭಾರತ ಸ್ವತಂತ್ರವಾಗಬೇಕೆಂಬ ಮಿತವಾದಿ. ತಿಲಕರಂತೆ ಗೋಖಲೆಯವರು ಉಗ್ರವಾದಿಗಳೂ ಅಲ್ಲ; ಅವರಷ್ಟು ಆಕರ್ಷಕ ವ್ಯಕ್ತಿಯೂ ಅಲ್ಲ. ಗಾಂಧೀಜಿ ಆಧುನೀಕರಣವನ್ನು ನಿರಾಕರಿಸದ ಗೋಖಲೆಯವರನ್ನು ತನ್ನ ಮಾರ್ಗದರ್ಶಕರಾಗಿ ಹೀಗೆ ಆಯ್ದದ್ದು ಅವರ ಮೊದಲಿನ ಪ್ರತಿಕ್ರಿಯೆಗೆ ವಿರೋಧವಾಗಿ ಮೇಲ್ನೋಟಕ್ಕೆ ಕಾಣುತ್ತದೆ.

ಗಾಂಧೀಜಿಯವರ ಇನ್ನೊಂದು ಆಯ್ಕೆಯೂ ಹೀಗೆಯೇ ಅತ್ಯಂತ ಸಂದಿಗ್ಧವಾಗಿದೆ. ತನ್ನ ರಾಜಕೀಯ ಉತ್ತರಾಧಿಕಾರಿಯನ್ನಾಗಿ ಅವರು ಸಂಪ್ರದಾಯಸ್ಥರು ಎನ್ನಿಸುವ ರಾಜಾಜಿಯನ್ನಾಗಲೀ, ಸರದಾರ್ ಪಟೇಲರನ್ನಾಗಲೀ ಆಯ್ಕೆಮಾಡಲಿಲ್ಲ. ಅದರ ಬದಲು ಅವರು ಖುದ್ದಾಗಿ ಹೇಳಿದ್ದು ಪಂಡಿತ್ ಜವಾಹರಲಾಲ್ ನೆಹರು ತನ್ನ ಉತ್ತರಾಧಿಕಾರಿ ಎಂದು ಗಾಂಧೀಜಿ ನೆಹರುಗೆ ಅತ್ಯಂತ ಪ್ರಿಯರಾದವರು, ನಿಜ. ಆದರೆ ಗಾಂಧೀ ತತ್ವದಿಂದ ಮೂಲತಃ ವಿಮುಖರಾದ ನೆಹರುರವರು ರಾಜಾರಾಮ ಮೋಹನರಾಯರ ಬಗೆಯವರು ಮತ್ತು ಆಧುನೀಕರಣವಾದಿಗಳು.

ಹೀಗೆ ಗಾಂಧಿ ಮಾಡುವ ಈ ಮೂರು ಆಯ್ಕೆಯಲ್ಲಿ ಭಾರತ ಹುಡುಕಾಡುತ್ತಿರುವ ಸ್ವಸ್ವರೂಪದ ನೈಜ ಸಂದಿಗ್ಧತೆ ಅಡವಾಗಿದೆ. ಇವತ್ತು ಬದುಕುತ್ತಿರುವ ನಾವೆಲ್ಲರೂ ಈ ಸಂದಿಗ್ಧತೆಯನ್ನು ಒಂದಲ್ಲ ಒಂದು ರೀತಿಯಿಂದ ಎದುರಿಸುತ್ತಿದ್ದೇವೆ. ವಸಾಹತುಶಾಹಿ ಚಾರಿತ್ರಿಕ ಸಂದರ್ಭದ ಫಲ ಇದಾಗಿದೆ. ನಮ್ಮ ಸಂಸ್ಕೃತಿಗೆ ಅನ್ಯವಾದ ಯುರೋಪು ನಮ್ಮನ್ನು ಆರ್ಥಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಆಕ್ರಮಿಸಿದೆ. ನಮ್ಮ ಲೌಕಿಕ ಹಿತ ಮಾತ್ರವಲ್ಲದೆ ನಮ್ಮ ಮಾನಸಿಕ ಬೆಳವಣಿಗೆಗೂ ಯುರೋಪು ನಮಗೆ ಮಾದರಿಯಾಗಿದೆ. ಅದರ ಜೊತೆಯಲ್ಲೇ ನಮ್ಮ ಅತ್ಯಂತ ಕಷ್ಟದ ಕ್ಷಣಗಳಲ್ಲಿ ನಮ್ಮ ಇರುವಿಕೆಯನ್ನೇ ನಿರ್ಧರಿಸುವ ಜೀವಾಳವಾಗಿ ಭಾರತದ ಅನೇಕ ಪರಂಪರೆಗಳು ನಮಗೆ ಕಾಣಿಸುತ್ತವೆ. ನಮಗೆ ಆತ್ಮೀಯವಾದದ್ದು, ನಮಗೆ ಹಿತವಾದದ್ದು, ಮತ್ತು ನಮ್ಮ ಆಕಾಂಕ್ಷೆಗಳನ್ನು ಪೂರೈಸುವಂತಹದ್ದು ಹೀಗೆ ಬೇರೆ ಬೇರೆ ಚಾರಿತ್ರಿಕ ಸಂಬಂಧಗಳಿಂದ ಬಂದವು ಆದ್ದರಿಂದ ನಮ್ಮ ಚಿಂತನಾ ಕ್ರಮದಲ್ಲೂ, ನಮ್ಮ ದಿನನಿತ್ಯದ ವ್ಯವಹಾರದಲ್ಲೂ ನಾವು ಏಕತೆಯನ್ನು ಕಂಡುಕೊಳ್ಳಲಾರದೆ ಗೊಂದಲಕ್ಕೀಡಾಗುತ್ತೇವೆ. ಆಗ್ರಹದಲ್ಲಿ ಹಠಹಿಡಿದು ಇದನ್ನು ಬಗೆಹರಿಸಿಕೊಳ್ಳುವಂತೆ ಇಲ್ಲ. ಯಾಕೆಂದರೆ ನಾವು ಯಾವುದಾದರೂ ಒಂದು ರೀತಿಯಲ್ಲಿ ನಮ್ಮ ರಾಷ್ಟ್ರಕಲ್ಪನೆಯನ್ನು ಕಟ್ಟಲು ಹೊರಟಿದ್ದೇ ಆದರೆ ಅಪಾಯವನ್ನು ಎದುರಿಸಬೇಕಾದ್ದು ಮಾತ್ರವಲ್ಲದೆ, ಅನಧಿಕೃತವಾದ ಆತ್ಮವಂಚನೆಯ ಸ್ಥಿತಿಯನ್ನು ತಲುಪಬಹುದಾಗಿದೆ.

ಮತಧರ್ಮಕ್ಕೆ ಸಂಬಂಧಿಸಿದಂತೆ ಅತಿ ಎನಿಸುವ ನಿಲುವು ಯಾಕೆ ಅನಧಿಕೃತವಾಗುತ್ತಿದೆ ಎಂಬುದನ್ನು ನೋಡೋಣ.

ಇಸ್ಲಾಂ ಧರ್ಮದ ಅನುಯಾಯಿಯೊಬ್ಬ ತನ್ನ ಮತವನ್ನು ಅಕ್ಷರಶಃ ಪಾಲಿಸುತ್ತೇನೆಂಬ ನಿಲುವನ್ನು ತಾಳಿ ತನ್ನ ಮತಸ್ಥರ ಕಣ್ಣಿಗೆ ಅಧಿಕೃತ ವ್ಯಕ್ತಿಯಾಗಿ ಕಾಣುವುದು ಸಾಧ್ಯವಿದೆ. ಆದರೆ ಈ ಸಾಧ್ಯತೆ ಕೂಡ ಕ್ರಮೇಣ ಹೆಚ್ಚು ಹೆಚ್ಚು ಕೃತಕವಾಗಿ ಇಸ್ಲಾಂ ಮತಸ್ಥರಿಗೇ ಕಾಣುವುದು ಶುರುವಾಗಿದೆ. ಈಜಿಪ್ಟ್ ದೇಶದಲ್ಲಿ ಮೌಲ್ವಿಗಳ ವಿರುದ್ಧ ನಡೆಯುತ್ತಿರುವ ಹೋರಾಟ ಮತ್ತು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗುತ್ತಿರುವ ಪ್ರಜಾತಾಂತ್ರಿಕ ಒತ್ತಡ ಇದಕ್ಕೆ ಉದಾಹರಣೆ. ಸಲ್ಮಾನ್ ರಶ್ದಿಯಂತಹ ಒಬ್ಬ ಬರಹಗಾರನ ಮೇಲೆ ಮರಣ ದಂಡನೆಯನ್ನು ವಿಧಿಸುವ ಇಸ್ಲಾಂ ಮತೀಯತೆ ಅದರ ಅತಿರೇಕದಲ್ಲಿ ಹಲವು ಹೃದಯವಂತರೂ ಧರ್ಮನಿಷ್ಠರೂ ಆದ ಮುಸ್ಲಿಮರಿಗೇ ಅಸಹನೀಯವಾಗಿ ಕಂಡಿದೆ. ಆದರೆ ಹಿಂದೂ ಮತೀಯತೆಯು ಕ್ರೈಸ್ತ ಮತ್ತು ಇಸ್ಲಾಂ ಮತೀಯತೆಗಳಿಗೆ ಇರುವಷ್ಟೂ ಸಂಭಾವ್ಯತೆಯನ್ನಾಗಲೀ, ಶಾಸ್ತ್ರಾಧಾರವನ್ನಾಗಲೀ ಪಡೆದಿಲ್ಲ. ಇದನ್ನು ಹಿಂದೂ ಸಂಸ್ಕೃತಿಯ ವಿಶಿಷ್ಟ ಗುಣವೆಂದೇ ತಿಳಿಯಬಹುದು. ಅಲ್ಲದೆ ಈ ವಿಶಿಷ್ಟತೆಯಲ್ಲಿ ಅದರ ಅನ್ಯತೆ ಮಾತ್ರವಲ್ಲದೆ ಅದರ ಹೆಚ್ಚಳವನ್ನೂ ಕಾಣುವುದು ಸಾಧ್ಯ.

ಕಟ್ಟಾ ಸನಾತನಿಯಾಗಿ ಒಬ್ಬ ಹಿಂದೂ ನಮ್ಮ ಇಡೀ ಸಾಹಿತ್ಯದಲ್ಲಿ ಒಬ್ಬ ಅದರಣೀಯ ಹಾಗೂ ಆದರ್ಶ ವ್ಯಕ್ತಿ ಎಂದು ತಿಳಿಯಬಲ್ಲ ಒಂದೇ ಒಂದು ಚಿತ್ರಣವನ್ನು ನಾನು ಕಂಡಿಲ್ಲ. ನಮ್ಮ ಪುರಾಣಗಳಲ್ಲಿ ಪ್ರಶ್ನಾತೀತನೂ ದ್ವಂದ್ವಾತೀತನೂ ಆದ ಸನಾತನಿಯೊಬ್ಬ ಇಲ್ಲವೆಂದೇ ನಾನು ತಿಳಿದಿದ್ದೇನೆ. ಅಂದರೆ, ಬದುಕುವ ಕ್ರಮದಲ್ಲಿ ಸನಾತನಿಯಾಗಿರುವುದು ಮಾತ್ರವಲ್ಲದೆ, ಅದನ್ನೇ ಜೀವನ ದೃಷ್ಟಿ ಎಂದು ಮುಂದೆ ಮಾಡಿ ಬದುಕಿದವರ ಆದರ್ಶ ಚಿತ್ರಣ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಇಲ್ಲ. ಆಧುನಿಕ ಸಾಹಿತ್ಯದಲ್ಲಂತೂ ಒಬ್ಬನೇ ಒಬ್ಬ ಆದರ್ಶ ಸನಾತನಿ ನಮಗೆ ಕಾಣುತ್ತಿಲ್ಲ. ಠಾಗೂರರ ಗೋರ ಕಾದಂಬರಿಯಲ್ಲಿ ಒಬ್ಬ ಸನಾತನಿಯಾದ ಹೆಂಗಸು ಕಾಣಿಸುತ್ತಾಳೆ. ಸ್ವಪ್ರತಿಷ್ಠೆಯ ಆಧುನಿಕ ಬ್ರಹ್ಮ ಸಮಾಜಿಗಳ ವಲಯದಲ್ಲಿ ಆಕೆಯ ಬಗ್ಗೆ ನಮಗೆ ಸ್ವಲ್ಪ ಸಹಾನೂಭೂತಿ ಹುಟ್ಟುತ್ತದ. ಆದರೆ ಅವಳು ಅಸಹನೀಯಳು ಅನ್ನಿಸುತ್ತಾಳೆ. ಇಡೀ ಕನ್ನಡ ಸಾಹಿತ್ಯದಲ್ಲಂತೂ ನಾನು ಆದರ್ಶ ಸನಾತನಿಯ ಚಿತ್ರಣವನ್ನು ಕಂಡಿಲ್ಲ.

ಇದಕ್ಕೇನು ಕಾರಣ ಇರಬಹುದು?

ಕ್ರೈಸ್ತ ಧರ್ಮದಲ್ಲಿ ಲೂಥರ್ ಬಂದ ಮೇಲೆ ರೆನೇಸಾನ್ಸ್ ಪ್ರಾರಂಭವಾಯಿತು. ಇಸ್ಲಾಂನಲ್ಲಿ ರೆನೆಸಾನ್ಸ್ ಆಗಿಯೇ ಇಲ್ಲ ಎಂದು ವಾದಿಸುವವರು ಇದ್ದಾರೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇಂಥ ಒಂದು ಕಾಲದಿಂದ ರೆನೆಸಾನ್ಸ್ ಪ್ರಾರಂಭವಾಯ್ತು ಎಂದು ಹೇಳುವುದು ಸಾಧ್ಯವೇ ಇಲ್ಲ. ಪ್ರಕೃತಿಯ ಶಕ್ತಿಗಳನ್ನು ದೈವಿಕವೆಂದು ಆರಾಧಿಸುತ್ತಿದ್ದ ವೈದಿಕ ಪುರಾತನ ಕಾಲ ನಮ್ಮ ಈ ಕಾಲದ ಮತವಿರೋಧಿಯಾದ ಒಬ್ಬ ಕ್ರಾಂತಿಕಾರಕ ಕವಿಯದೂ ಆಗಬಹುದು. ಉಪನಿಷತ್ತಿನ ಕಾಲವಂತೂ ರೆನೆಸಾನ್ಸ್ ಮುಂದುವರೆದ ಕಾಲ ಎನಿಸುತ್ತದೆ. ಬಹಳ ಪೂರ್ವದ ಬುದ್ಧ, ಮಹಾವೀರ, ಲೋಕಯತದ ಕೆಲವು ಕಷಾಯ ಗುಣದ ಮನಸ್ಸಿನ ಚಿಂತಕರು – ಎಲ್ಲರೂ ರೆನೆಸಾನ್ಸ್ ಪುರುಷರೆಂದೆ ಅನಿಸುತ್ತದೆ. ಇನ್ನು ಬಸವ, ಕಬೀರ, ನಾನಕ್, ಚೈತನ್ಯ, ತುಕಾರಾಂ, ಜ್ಞಾನದೇವ – ಇವರಂತೂ ಇವತ್ತಿಗೂ ಸಲ್ಲುವ ಕ್ರಾಂತಿ ಪುರುಷರು. ಯುರೋಪಿನಲ್ಲಿ ಇರುವಂತೆ ಮಧ್ಯಯುಗ ನಮ್ಮಲ್ಲಿ ಕತ್ತಲಿನ ಕಾಲವಲ್ಲ. ಆ ಶಬ್ದವನ್ನೇ ನಾವು ಇಲ್ಲಿ ಬಳಸಕೂಡದು. ಇನ್ನು ನಮ್ಮ ಕಾಲಕ್ಕೆ ಬಂದಾಗ ಪರಮಹಂಸರು, ರಮಣರು, ಅರವಿಂದರು, ನಾರಾಯಣ ಗುರುಗಳು – ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಮತೀಯತೆಯನ್ನು ವಿರೋಧಿಸಿದವರು. ಭಾರತೀಯರಿಗೆ ವಶಿಷ್ಠ ಮತ್ತು ವಿಶ್ವಾಮಿತ್ರರ ನಡುವೆ ನಡೆದ ಕಾದಾಟದಲ್ಲಿ ಹೀರೋ ವಿಶ್ವಾಮಿತ್ರನೇ ಹೊರತು ವಶಿಷ್ಠರಲ್ಲ. ಗಾಯತ್ರಿ ಮಂತ್ರವನ್ನು ಹೊತ್ತು ಹೆತ್ತವನು ವಿಶ್ವಾಮಿತ್ರ; ಸನಾತನಿಯಾದ ವಶಿಷ್ಠರ ಎದುರಾಳಿ. ಇಂಥ ಸತತವಾದ ರೆನೆಸಾನ್ಸ್‌ಗಳ ಸರಪಳಿಯಲ್ಲಿ ಬಂದ ಇನ್ನೊಬ್ಬ ದೊಡ್ಡ ದ್ರಷ್ಟಾರರೆಂದರೆ ಗಾಂಧಿಯವರು. ಆದ್ದರಿಂದಲೇ ಕಟ್ಟಾ ಸನಾತನಿಯಾಗಿ ಭಾರತದಲ್ಲಿ ಇರುವುದು ಒಂದು ಅಧಿಕೃತವಾದ ನಿಲುವೇ ಆಗಿರಲಾರದು. ಹಾಗೆ ಮಾಡಲು ಹೊರಟವರು ಹಿಂದೂ ಸಂಸ್ಕೃತಿಯನ್ನು ‘ಅಬ್ರಹಾಮಿ’ ಮಾಡುವವರಾಗುತ್ತಾರೆ. (ಸೆಮಿಟೆಕ್ ಎನ್ನುವುದರ ಬದಲಾಗಿ ‘ಅಬ್ರಹಾಮಿ’ ಎನ್ನುವ ಶಬ್ದವನ್ನು ಗೆಳೆಯ ರಾಮಚಂದ್ರ ಗಾಂಧಿಯವರ ಪ್ರೇರಣೆಯಿಂದ ನಾನು ಬಳಸಿದ್ದೇನೆ. ಕ್ರೈಸ್ತರಿಗೂ, ಯಹೂದ್ಯರಿಗೂ, ಇಸ್ಲಾಮಿಯರಿಗೂ ಮೂಲ ಪುರುಷ ಎಂದರೆ ಅಬ್ರಹಾಂ. ಅಬ್ರಹಾಂನಿಂದ ಪ್ರತೀತವಾದದು ‘ಅಬ್ರಹಾಮಿ’.)

ಎಲ್ಲ ಪಥಗಳೂ ಕ್ರಮೇಣ ಪಂಥಗಳಾಗಿ ಬಿಡುತ್ತವೆ. ಹೀಗೆ ಎಲ್ಲ ದರ್ಶನವೂ ಕಲುಷಿತವಾಗುವುದು ಮನುಷ್ಯ ಪಾಡಿನ ಒಂದು ಲಕ್ಷಣ. ಆದ್ದರಿಂದಲೇ ನಮ್ಮ ದೇಶದಲ್ಲಿ ಈ ಬಗೆಯಲ್ಲಿ ರೆನೆಸಾನ್ಸ್‌ಗಳು ಆಗುತ್ತಲೇ ಬಂದಿವೆ. ಪ್ರತಿನಿತ್ಯ ಮನೆಯನ್ನು ಗುಡಿಸಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕಾದ ಗೃಹಸ್ಥನ ಕಾಯಕವೇ ರೆನೆಸಾನ್ಸ್ ಪುನರುಜ್ಜೀವನ ಸಂಸ್ಕೃತಿಯಲ್ಲಿ ಅಡಗಿರುವ ಈ ಪುನರುಜ್ಜೀವನದ ಶಕ್ತಿಯನ್ನು ಮರೆಮಾಚುವುದು ಈ ಕಾರಣದಿಂದಾಗಿಯೇ ಅನಧಿಕೃತವಾಗುತ್ತದೆ. ಯಾವ ಅತಿಯಲ್ಲಾದರೂ ನಮ್ಮ ರಾಷ್ಟ್ರಜೀವನದ ತತ್ವವನ್ನು ಯಾವುದೋ ಒಂದೇ ಮೂಲದಿಂದ ಪಡೆದಿರಬೇಕೆಂಬ ಹಟವನ್ನು ಗಾಂಧೀಜಿಯವರು ಈ ಕಾರಣದಿಂದಲೇ ಬಿಟ್ಟುಕೊಟ್ಟರು.

ಮನುಷ್ಯನ ಮನಸ್ಸು ಈ ಬಗೆಯ ಮರುಚಿಂತನೆಯಲ್ಲಿ ತನ್ನನ್ನು ಮತ್ತೆ ಮತ್ತೆ ಜೀವಂತವಾಗಿಸಿಕೊಳ್ಳುವುದರ ಹಿಂದೆ ಇರುವ ಮುಖ್ಯ ಪ್ರೇರಣೆ ಯಾವುದು?

ಗಾಂಧಿಯವರ ಒಂದು ಮಾತು ಇಲ್ಲಿ ಅತ್ಯಂತ ಮುಖ್ಯವಾದುದು. ಮೊದಲು ಗಾಂಧೀಜಿಯವರು ‘ದೇವರು ಸತ್ಯ’ವೆಂದು ತಿಳಿದಿದ್ದವರು – ಎಲ್ಲ ಸಂಪ್ರದಾಯಕರಂತೆ. ಆಮೇಲೆ ಅವರು ಬದಲಿಸಿಕೊಂಡ ತಮ್ಮ ಧೋರಣೆ ಎಂದರೆ ಇದು: ‘ಸತ್ಯವೇ ದೇವರು’. ‘ದೇವರೇ ಸತ್ಯ’ ಮತ್ತು ‘ಸತ್ಯವೇ ದೇವರು’ ಎನ್ನುವುದರ ನಡುವಿನ ಅಂತರ ಅತ್ಯಂತ ಮಹತ್ವವಾದುದು. ಸಂಕೋಚದ ಮತೀಯತೆಗೂ, ಧಾರಾಳದ ಆಧ್ಯಾತ್ಮಿಕತೆಗೂ ನಡುವೆ ಇರುವ ಅಂತರ ಇದು. ದೇವರೇ ಸತ್ಯ ಎನ್ನುವವನು ತಾನು ಅನುಸರಿಸುವ ಮತದಲ್ಲಿ ವರ್ಣಿತವಾದ ದೇವರು ಮಾತ್ರ ಸತ್ಯ ಎಂದು ತಿಳಿಯುವುದು ಬಹಳ ಸಹಜವಾದುದು. ತನ್ನ ದೇವರು ಮಾತ್ರ ಸತ್ಯ ಎಂದು ತಿಳಿದ ನಂತರ ಉಳಿದ ಎಲ್ಲ ದೇವರುಗಳೂ ಸುಳ್ಳು ಎನ್ನುವುದು ತರ್ಕಬದ್ಧವಾದ ಮುಂದಿನ ಹೆಜ್ಜೆಯಾಗುತ್ತದೆ. ಇದು ‘ಮೂಲಭೂತವಾದ’ಕ್ಕೆ (Fundamentalism) ಎಡೆ ಮಾಡಿಕೊಡುತ್ತದೆ.

ಸತ್ಯವೇ ದೇವರು ಎಂದು ತಿಳಿದವನು ಸತತವಾಗಿ ಶೋಧನಾತ್ಮಕವಾದ ಮನಸ್ಸಿನವನಾಗಬೇಕಾಗುತ್ತದೆ. ಅವನಿಗೆ ತನ್ನ ಪೂರ್ವಜರಿಂದ ಪಡೆದ ಶಾಸ್ತ್ರ ಮಾತ್ರ ಸಾಲದಾಗುತ್ತದೆ. ತನ್ನ ಸದ್ಯದ ಅನುಭವವು ಶಾಸ್ತ್ರದಷ್ಟೇ ಮುಖ್ಯವಾಗುತ್ತದೆ. ಶಾಸ್ತ್ರದ ಕಣ್ಣಿನಿಂದ ತನ್ನ ಸದ್ಯವನ್ನು ಪರಿಶೀಲಿಸುತ್ತಿದ್ದಂತೆಯೇ ಸದ್ಯದ ಅನುಭವದಿಂದ ಶಾಸ್ತ್ರದ ಅಧಿಕೃತತ್ವವನ್ನು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ಹೀಗೆ ಒಂದು ಇನ್ನೊಂದಕ್ಕೆ ಎದುರಾಗಿ, ಸತತವಾದ ನೆಲೆಯ ಹುಡುಕಾಟದಲ್ಲಿ ಅಂಥ ಮನಸ್ಸು ತೊಡಗಿರುತ್ತದೆ. ಗಾಂಧಿಯವರದು ಅಂಥ ಮನಸ್ಸಾದ್ದರಿಂದಲೇ ಅವರು ರಾಜಾರಾಂ ಮೋಹನರಾಯರನ್ನು ಕಬ್ಜರೆನ್ನುತ್ತಲೇ, ಉದಾರಭಾವನೆಯವರಾದ ಗೋಖಲೆಯವರನ್ನು ತನ್ನ ಗುರುವೆಂದು ಕರೆದು, ತಿಲಕರ ಅತಿರೇಕವನ್ನು ತನ್ನ ಕಾರ್ಯವಿಧಾನದಲ್ಲಿ ಕೈಬಿಟ್ಟಿದ್ದು.

ಎಲ್ಲ ಮನುಷ್ಯನೂ ಈ ಪ್ರಪಂಚದಲ್ಲಿ ಇದ್ದಿರುತ್ತಲೇ ಎಲ್ಲ ಸತ್ಯವನ್ನು ಕಾಣಬೇಕಾಗುತ್ತದೆ. ನಮ್ಮ ಯಾವ ಸ್ಥಿತಿಯಲ್ಲೂ ಪ್ರಪಂಚದಲ್ಲಿರಬೇಕಾದ ಈ ಪಾಡಿನಿಂದ ಬಿಡುಗಡೆ ಇಲ್ಲ. ನಿರ್ವಿಕಲ್ಪ ಸಮಾಧಿ ಕೂಡ ಈ ಪ್ರಪಂಚದಲ್ಲಿದ್ದು ಪಡೆಯುವ ಸ್ಥಿತಿ. ಆದ್ದರಿಂದಲೇ ಸತ್ಯವೇ ದೇವರು ಎಂದು ತಿಳಿಯುವ ಮನಸ್ಸು ಮತೀಯತೆಯನ್ನು ಆಧ್ಯಾತ್ಮಿಕತೆಯಾಗಿ ಪರಿವರ್ತಿಸುತ್ತದೆ. ಪಂಥಗಳ ಕಲ್ಮಶಗಳನ್ನು ಕಳೆದುಕೊಂಡು ಪಥದ ಅನ್ವೇಷಣೆಯಲ್ಲಿ ತೊಡಗಿರುತ್ತದೆ.

ಎಲ್ಲ ಪಂಥಗಳೂ ತಮ್ಮ ಕಾಠಿಣ್ಯಗಳನ್ನು ಕಳೆದುಕೊಂಡು ಸದ್ಯಕ್ಕೆ ಸ್ಪಂಧಿಸುವ ಚೈತನ್ಯವನ್ನು ಪಡೆಯಬಲ್ಲ ಸ್ಥಳವೆಂದರೆ ಭಾರತ. ವಿಗ್ರಹಾರಾಧನೆಯ ಪರಮ ದ್ವೇಷಿಯಾಗಿ ಭಾರತದೊಳಕ್ಕೆ ಬಂದ ಇಸ್ಲಾಂ ಕ್ರಮೇಣ ಇಲ್ಲಿ ಸೂಫಿ ಪಂಥದ ಪ್ರೇಮನಿಷ್ಠೆ ಅನುಭವಕ್ಕೆ ಎಡೆಮಾಡಿಕೊಡುತ್ತದೆ. ಕೋಟ್ಯಾಂತರ ದೇವತೆಗಳನ್ನು ಪೂಜಿಸುತ್ತಲೇ ಅದ್ವೈತವನ್ನು ಎತ್ತಿ ಹಿಡಿಯುತ್ತಿದ್ದ ಭಾರತ, ಕ್ರಿಸ್ತನಿಗೂ ಮಹಮ್ಮದನಿಗೂ ತನ್ನನ್ನು ಒಡ್ಡಿಕೊಂಡು ನಾನಕ್, ಕಬೀರ, ಗಾಂಧಿಯಂತಹ ಮಹಾನುಭಾವರನ್ನು ಪಡೆಯುತ್ತದೆ. ಹೀಗಾಗಿ ಕ್ರೈಸ್ತ ಮತ ಮತ್ತು ಇಸ್ಲಾಂ ಭಾರತದಲ್ಲಿ ಪಡೆದುಕೊಂಡ ಶ್ರೀಮಂತ ಸ್ವರೂಪವನ್ನು ಬೇರೆ ಯಾವ ದೇಶದಲ್ಲೂ ಪಡೆಯಲಿಲ್ಲ. ತನಗಿಂತ ಅನ್ಯವಾದ ಇನ್ನೊಂದು ದೊಡ್ಡ ಧರ್ಮದ ಜೊತೆ ಸಹಬಾಳ್ವೆ ಮಾಡಬೇಕಾದ ಅನಿವಾರ್ಯತೆ ಇನ್ನೆಲ್ಲೂ ಈ ಧರ್ಮಗಳಿಗೆ ಒದಗಲಿಲ್ಲ. ಸತ್ಯವೇ ದೇವರು ಎನ್ನುವ ಸವಾಲಿಗೆ ತಮ್ಮನ್ನು ಒಡ್ಡಿಕೊಂಡು ತಮ್ಮ ತಮ್ಮ ಶಾಸ್ತ್ರಗಳ ಚೌಕಟ್ಟಿನಲ್ಲೂ ಕೆಲವೊಮ್ಮೆ ಈ ಚೌಕಟ್ಟುಗಳನ್ನು ಮೀರಿಯೂ ಸತ್ಯಾನ್ವೇಷಣೆ ನಡೆಯುತ್ತಿರುವ ಪ್ರಯೋಗಶಾಲೆಯಾದ ಭಾರತ ತನ್ನ ಸ್ವರೂಪವನ್ನೇ ಕಳೆದುಕೊಂಡೀತೆಂಬ ಆತಂಕದಲ್ಲಿ ಈ ನನ್ನ ಚಿಂತನೆ ಸಾಗಿದೆ.

ಅದರೆ ಹೀಗಾಗಲಾರದು ಎಂಬ ಭರವಸೆಯೂ ಇದೆ. ಆ ಭರವಸೆಗೆ ಕಾರಣ ನಮ್ಮ ನಾಡಿನ ಸಂಸ್ಕೃತಿಯ ವಿಶೇಷವೆನ್ನಬಹುದಾದ ಅನೇಕತೆ.

ರುಜುವಾತು ೩೪.