ಸಾಹಿತ್ಯಕ್ಕೆ ಹಾಗೂ ಸಂವಹನಕ್ಕೆ ಆಧುನೀಕರಣದಿಂದ ಆಗುತ್ತಿರುವ ಸಮಸ್ಯೆಯನ್ನು ಕುರಿತು ಮಾತನಾಡುವಾಗ ಹೆಚ್ಚಿನ ವಿವೇಚನೆಯ ಅಗತ್ಯವಿದೆ. ಇಲ್ಲದಿದ್ದರೆ ನಮ್ಮ ವಿಚಾರಗಳಿಗೆ ಸ್ಪಷ್ಟತೆ ದಕ್ಕುವುದಿಲ್ಲ. ಟೆಲಿವಿಷನ್ ಪ್ರವೇಶ ಪಡೆಯುವ ಮೊದಲೇ, ನಗರೀಕರಣದ ಪ್ರಕ್ರಿಯೆ ಪೂರ್ಣಗೊಂಡಿತ್ತಲ್ಲವೇ? ಟೆಲಿವಿಷನ್‌ಗೆ ಮೊದಲು, ಮನುಷ್ಯ ಉಪಭೋಗಿ ಮಾತ್ರವಾಗಿ ಬಿಟ್ಟಿದ್ದನಲ್ಲವೆ? ಆತ ತನ್ನ ಪರಿಸರದಿಂದ ಅನ್ಯನಾಗಿ ಹೋಗಿದ್ದ, alienate ಆಗಿದ್ದ. ವ್ಯಕ್ತಿ consumer ಮಾತ್ರ ಆಗಿಬಿಡುವ ಪರಿಸ್ಥಿತಿಯೂ ಸಾಹಿತಿಗಳನ್ನ ಕಾಡಿದೆಯಲ್ಲವೆ? ಬ್ಲೇಕ್ ಕೈಗಾರಿಕೀಕರಣದ ಮೊದಲೇ, ಕೈಗಾರಿಕಾ ಕ್ರಾಂತಿಯನ್ನು ಉಗ್ರವಾಗಿ ಪ್ರತಿಭಟಿಸಿದ್ದ. ಕೈಗಾರಿಕೀಕರಣ ವಿನಾಶಕ್ಕೆ ಹಾದಿ ಎಂದಿದ್ದ.

ಹಾಗಾಗಿ ಇಡೀ ಸಮಸ್ಯೆಯನ್ನು ಟೆಲಿವಿಷನ್ ಪ್ರವೇಶಪೂರ್ವ ಹಾಗೂ ಪ್ರವೇಶನಂತರದ ಘಟ್ಟ ಎಂದು ಪ್ರತ್ಯೇಕಿಸಿ ನೋಡುವುದು ಒಳ್ಳೆಯದು. ಡಿ.ಆರ್. ನಾಗರಾಜ್‌ಆಗ ರಿಪಿಟೇಷನ್ ಬಗ್ಗೆ ಹೇಳಿದರು. ಮೌಖಿಕ ಪರಂಪರೆಯಲ್ಲಿ ಅದೊಂದು ಸಮಸ್ಯೆಯೇ ಅಲ್ಲ. ಅಲ್ಲಿ ರಿಪೀಟ್ ಮಾಡಿದಷ್ಟೂ ಚೆನ್ನಾಗಿರುತ್ತದೆ. ಒಂದೊಂದು ಬಾರಿ ರಿಪೀಟ್‌ಮಾಡಿ ಹೇಳಿದಾಗಲೂ ಅದಕ್ಕೆ ಹೊಸ ಅರ್ಥ ದಕ್ಕುತ್ತದೆ. ಆದರೆ ಆಧುನಿಕ ಬರವಣಿಗೆಯಲ್ಲಿ ರಿಪಿಟೀಶನ್ ಅನ್ನುವುದೊಂದು ಭಯಂಕರ ಬಿಕ್ಕಟ್ಟು. ಹತ್ತು ವರ್ಷ ಒಂದೇ ರೀತಿ ಬರೆಯುತ್ತಿದ್ದರೆ ಬೋರ್ ಆಗಿ ಬಿಡುತ್ತದೆ. ಆಧುನಿಕ ಸಂದರ್ಭದಲ್ಲಿ ಸೃಜನಾತ್ಮಕತೆ ಎನ್ನುವುದು ಚಿಂತೆಯ ಸಂಗತಿ. ಹೋದ ವರ್ಷ ಬರೆದ ಹಾಗೆ, ಈ ವರ್ಷ ಬರೆಯುವ ಹಾಗಿಲ್ಲ ಎನ್ನುವುದೇ ಚಿಂತೆ, ಹಾಗೆ ಬರೆದರೆ ಯಾರೂ ಓದುವುದಿಲ್ಲ ಎನ್ನುವುದು ಮತ್ತೊಂದು ಚಿಂತೆ. ಅಂತೂ ಏನಾದರೂ ಒಂದು ವ್ಯತ್ಯಾಸ ಮಾಡುತ್ತಲೇ ಇರಬೇಕಾಗುತ್ತದೆ.

ಮೌಖಿಕತೆಯ ಬಗ್ಗೆ ಆಗ ಪ್ರಸನ್ನ ಹೇಳಿದ್ದು ಸರಿ. ನಾನು ಸಭೆಯಲ್ಲಿ ನಿಂತು ಒಂದು ಹಾಡು ಹೇಳಿದರೆ, ಅದರ ಸಹಭಾಗಿತ್ವ ಸಭೆಯ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾಗಿ ರಿಪೇಟ್ ಮಾಡುತ್ತೇವೆ. ಜನಗಳ ಸಹಬಾಗಿತ್ವದಿಂದಾಗಿ ರಿಪೀಟ್ ಮಾಡುವುದು ಸೃಜನಾತ್ಮಕ ಕ್ರಿಯೆಯಾಗುತ್ತದೆ, ಚಿಂತೆಯ ವಿಷಯವಾಗುವುದಿಲ್ಲ. ಟೆಲಿವಿಷನ್ನಿನ ಸಮಸ್ಯೆಯೆಂದರೆ, ಅಲ್ಲಿ ಎಲ್ಲವೂ ಸವಕಲಾಗುತ್ತ ಹೋಗುತ್ತದೆ: ಮಾತು ಸವಕಲಾಗುತ್ತದೆ, ಮಿಥ್ ಸವಕಲಾಗುತ್ತದೆ.

… intervention ಬಗ್ಗೆ

ಅಂತಹ ಒಂದು ಪ್ರಯತ್ನ ಇಂಗ್ಲೆಂಡಿನಲ್ಲಿ ಆಗಿತ್ತು. ಸ್ಕ್ರೂಟನಿ ಪತ್ರಿಕೆಯ ಬಗ್ಗೆ ನೀವು ಕೇಳಿರಬಹುದು. ಆ ಗುಂಪಿನವರು ಸೆಕೆಂಡರಿ ಸ್ಕೂಲುಗಳಲ್ಲಿ ಅಧ್ಯಾಪಕರುಗಳಾಗಿ ಸೇರಿಕೊಂಡರು. ಅವರ ಉದ್ದೇಶ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ಸಾಹಿತ್ಯ ಓದುವ ಬಗೆಯನ್ನು ಕಲಿಸುವುದಾಗಿತ್ತು. ಅವರು ಮುಖ್ಯವಾಗಿ ಎರಡು ಮಾತು ಹೇಳುತ್ತಿದ್ದರು. To discriminate ಅಂತ To resist ಅಂತ.

… To discriminate ಅಂದರೆ ಉದಾಹರಣೆಗಾಗಿ ಜಾಹಿರಾತಿನಿಂದ ಒಂದು ಸಾಲು ತೆಗೆದುಕೊಳ್ಳುವುದು, ಕಾವ್ಯದಿಂದಲೂ ಒಂದು ಸಾಲು ತೆಗೆದುಕೊಳ್ಳುವುದು, ಅವುಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಲು ಯತ್ನಿಸುವುದು. ಆ ಸಾಲುಗಳಲ್ಲಿರುವ manipulate ಮಾಡುವ ಗುಣವನ್ನು ಹುಡುಕುವುದು. ಯಾವುದು ನಿನ್ನ ಮನಸ್ಸನ್ನು manipulate ಮಾಡಲಿಕ್ಕೆ ಯತ್ನಿಸುತ್ತದೆಯೋ ಅದು ಕೆಟ್ಟ ಕಾವ್ಯ.

To resist ಅಂದರೆ, ತೀರ ಜನಪ್ರಿಯವಾದದ್ದಕ್ಕೆ, ತೀರ ಅನಾಯಾಸವಾಗಿ ದಕ್ಕುವಂತಹದ್ದಕ್ಕೆ ಪ್ರತಿರೋಧ ತರುವುದು.

ಬಲಹೀನಗೊಳಿಸುವ ವಾಸ್ತವವಾದ

ರಕ್ತಪಾತ ತೋರಿಸಲಿಕ್ಕೆ ರಕ್ತದ ಹೊಳೆಯೇ ಹರಿಯಬೇಕು, ಗರ್ಭಪಾತ ಅಂದರೆ, ನಾಲ್ಕೈದು ಬಾರಿ ಭೀಕರ ಗರ್ಭಪಾತ ತೋರಿಸಬೇಕು ಅನ್ನುವ ಪರಿಸ್ಥಿತಿ ಇದೆಯಲ್ಲ ಅದು ಯುರೋಪಿನಲ್ಲಿಯೂ ಇತ್ತು. ೧೯ ನೆಯ ಶತಮಾನದ ಕಡೆಯಲ್ಲಿ ಬಂದ ಜರ್ಮನ್ ವಾಸ್ತವವಾದಿ ಕಾದಂಬರಿಗಳು ಈ ರೀತಿಯ ಬರೆವಣಿಗೆಗೆ ಹೆಸರುವಾಸಿಯಾಗಿದ್ದವು. ಈ ಕಾದಂಬರಿಗಳಿಂದ ರೋಗಿ ಹೋಗಿದ್ದ ಆರ್ನಾಲ್ಡ್, ಟಾಲ್‌ಸ್ಟಾಯ್‌ನ ಅನ್ನಾ ಕರೆನೀನಾ ಓದುತ್ತಾನೆ, ಅದೂ ಇಂಗ್ಲಿಷ್‌ನಲ್ಲಿ ಅಲ್ಲ. ಫ್ರೆಂಚ್ ಭಾಷೆಯಲ್ಲಿ ಓದುತ್ತಾನೆ.

ಅರ್ನಾಲ್ಡ್ ಅನ್ನಾ ಕರೆನೀನಾ ಓದಿದ ಅನುಭವದ ಬಗ್ಗೆ ಬರೀತಾನೆ. ಎಲ್ಲವನ್ನ ಬಲಹೀನಗೊಳಿಸಿಬಿಡುವ ( Enervation) ಅತಿವಾಸ್ತವವಾದದ ಪರಿಸ್ಥಿತಿಯನ್ನ ಕುರಿತೇ ತನ್ನ ಬರವಣಿಗೆಯನ್ನ ಆರಂಭಿಸುತ್ತಾನೆ. ಜರ್ಮನ್ ಕಾದಂಬರಿಗಳು ಮತ್ತು ಅಂತಹ ಇತರ ಬರವಣಿಗೆಯಿಂದ ಏನನ್ನೂ ಮುಟ್ಟಲಿಕ್ಕಾಗದ ಮನಸ್ಥಿತಿಯನ್ನ ತಲುಪಿಬಿಡುತ್ತೇವೆ ಅನ್ನುತ್ತಾನೆ ಆರ್ನಾಲ್ಡ್. ಅಂತಹ ಪರಿಸ್ಥಿತಿಯಲ್ಲಿ, ಮುಟ್ಟುವುದು ಅಂದರೆ, ಎದುರಿಗಿರುವ ಒಬ್ಬನನ್ನ ಕಡಿದೇ ತೋರಿಸಬೇಕಾಗುತ್ತದೆ.

ಕಾಮ ಪ್ರಚೋದಿತ ಸಾಹಿತ್ಯಕ್ಕೂ ಈ ಸಮಸ್ಯೆ ಇರುತ್ತದೆ. ಒಂದು ಚೂರು ಕಾಮ ಪ್ರಚೋದನೆಯನ್ನ ಒಂದನೆಯ ಪುಟದಲ್ಲಿ ಮಾಡಿದರೆ, ಆನಂತರ ಕಾವು ಉಳಿಸಲಿಕ್ಕೆ ಎರಡನೆಯ ಪುಟದಲ್ಲಿ ಇನ್ನೂ ಹೆಚ್ಚಿನ ಕಾಮದ ವರ್ಣನೆ ಮಾಡಬೇಕಾಗುತ್ತದೆ. ಕಡೆಕಡೆಗೆ ಕಾದಂಬರಿ ಹೇಗಾಗಿರುತ್ತದೆಯೆಂದರೆ, ಒಂದು ಬತ್ತಲೆ ಹೆಣ್ಣೇ ನಿಜವಾಗಿ ಎದುರುಗಡೆ ಬರಬೇಕು ಆಗ ಮಾತ್ರ ಕಾವು ಉಳಿದೀತು. ಅಂದರೆ ಕಾದಂಬರಿಕಾರ ಭಾಷೆಯನ್ನೇ ವರ್ಜ್ಯಮಾಡಿಬಿಡುವ ಸ್ಥಿತಿಗೆ ತಲುಪಬೇಕಾಗುತ್ತದೆ. ನಮ್ಮ ಹಿಂದಿನವರು ಈ ಸಮಸ್ಯೆಯನ್ನ ಗ್ರಹಿಸಿದ್ದರು. ಭಾವ ಮತ್ತು ರಸಗಳಿರುವ ವ್ಯತ್ಯಾಸವನ್ನು ಸೂಚಿಸುವ ಮೂಲಕ ಈ ಸಮಸ್ಯೆಯನ್ನ ಅರ್ಥಮಾಡಿಕೊಂಡಿದ್ದರು ಅಂತ ಕಾಣುತ್ತದೆ.

ಆರ್ನಾಲ್ಡ್, ಟಾಲ್‌ಸ್ಟಾಯ್ ಬಗ್ಗೆ ಬರೀತಾ, ‘ಆತ ನಮಗೆ ಮತ್ತೆ ಭಾವಮುಗ್ಧತೆಯನ್ನ ತಂದುಕೊಟ್ಟಿದ್ದಾನೆ’ ಅನ್ನುತ್ತಾನೆ. ನಾವು ಮತ್ತೆ ಭಾವಿಸಲಿಕ್ಕೆ ಸಾಧ್ಯವಾಗುವಂತೆ, ಮತ್ತೆ ಪ್ರೇಮಕ್ಕೆ ಮಿಡಿಯಲು ಸಾಧ್ಯವಾಗುವಂತೆ, ನೋವಿಗೆ ಮಿಡಿಯಲು ಸಾಧ್ಯವಾಗುವಂತಗೆ, ಸಾಹಿತ್ಯ ಮಾಡಬೇಕು ಎನ್ನುವುದು ಈ ಮಾತಿನ ಹಿಂದಿರುವ ಆಶಯ. ಹೆನ್ರಿ ಜೇಮ್ಸ್ Cultural Intervention ಅನ್ನುವಾಗ ಸೂಕ್ಷ್ಮಾತಿಸೂಕ್ಷ್ಮದ ಕಡೆಗೆ ವಾಲುತ್ತಾನೆ. ಅವನು ಹೇಳುತ್ತಾನೆ, ‘ನನಗೆ ಕಾದಂಬರಿಯಲ್ಲಿ ಘಟನೆ ಅಂದರೆ ಏನು? ಘಟನೆಗಳು ಅಂದರೆ ಭಯಂಕರ ಭೂಕಂಪಗಳೇ ಘಟಿಸಬೇಕು ಎಂದೇನೂ ಇಲ್ಲ. ಒಂದು ಹೆಣ್ಣು ಆಕೆಯ ಕೈಯನ್ನು ಒಂದು ವಿಶಿಷ್ಟ ರೀತಿಯಲ್ಲಿ ಎತ್ತಿದಾಗ, ಅವರ ಎದೆ ಏರಿಳಿದಾಗ, ನನಗೆ ಇಡೀ ಪ್ರಪಂಚವೇ ಅಲ್ಲಿ ಕಾಣಿಸೀತು’, ಅನ್ನುತ್ತಾನೆ.

ಟಿ.ವಿ.ಯವರು ಮಾಡುವುದನ್ನ, ನಾವು ಮಾಡಬಾರದು. ನಾನು resist ಮಾಡಬೇಕು, discriminate ಮಾಡಬೇಕು.

ಆದರೆ ಇಲ್ಲಿಯೂ ಒಂದು ಸಮಸ್ಯೆ ಎದುರಾಗುತ್ತದೆ. ರೆಸ್ಟಿಸ್ ಮಾಡುವುದು ಎಂದಾಗ, ನಾವು ಇನ್ನೊಂದು ತುದಿಯನ್ನ ತಲುಪಿಬಿಡುವ ಸಾಧ್ಯತೆಯೂ ಇರುತ್ತದೆ. ಅದೆಂದರೆ, ನಾವು ಒಂದು ‘ಸೃಜನಾತ್ಮಕ ಅಲ್ಪಸಂಖ್ಯಾತ’ ವರ್ಗ (Creative minority) ಎಂದು ಭಾವಿಸುವುದು. ಸೃಜನಾತ್ಮಕ ಅಲ್ಪಸಂಖ್ಯಾತರಾಗುವ ಬಗ್ಗೆ ಅನೇಕರಿಗೆ ಅನುಮಾನಗಳಿವೆ.

ನಾವೆಲ್ಲಾ ‘ಸಾಕ್ಷಿ’ ಯಲ್ಲಿ ಬರೆಯುತ್ತಿದ್ದಾಗ ನಮಗೆ ಬಹಳ ದೊಡ್ಡ ನಂಬಿಕೆ ಇತ್ತು. ಪ್ರತಿಯೊಂದು ಸಮಾಜದಲ್ಲೂ ಒಂದು ಸೃಜನಾತ್ಮಕ ಅಲ್ಪಸಂಖ್ಯಾತ ವರ್ಗ ಇರುತ್ತದೆ ಅಂತ ನಾವು ನಂಬಿದ್ದೆವು. ಹಾಗೆ ಸೃಜನಾತ್ಮಕ ಅಲ್ಪಸಂಖ್ಯಾತರಾದಾಗ ತನ್ನ ಬಗ್ಗೆ ದೃಢವಾದ ನಂಬಿಕೆ ಇರುತ್ತದೆ.

ಈ ಕಲ್ಪನೆಯ ಮೂಲ ಎಲ್ಲಿದೆ? ಅದು ಬೈಬಲ್ಲಿನಲ್ಲಿಯೇ ಶುರುವಾಗುತ್ತದೆ. ಅಲ್ಲಿ ನೋವಾ ಅನ್ನುವವನು ಇರುತ್ತಾನೆ. ಪ್ರಳಯ ಆದಾಗ, ಸಣ್ಣದೊಂದು ದೋಣಿ ಮಾಡಿಕೊಂಡು, ಅದರಲ್ಲಿ ಎಲ್ಲ ಜೀವಿಗಳ ಸ್ಯಾಂಪಲ್ ಇಟ್ಟುಕೊಂಡು ತೇಲುತ್ತಾನೆ. ನಂತರದ ಸಮಾಜವಾದಿಗಳು ಈ ರೀತಿಯ ಕಲ್ಪನೆಯನ್ನ ಅಲ್ಲಗಳೆದರು. ನೋವಾನ ತರಹ, ಸಾರವನ್ನ ಮಾತ್ರ ಕಾಪಾಡಿಕೊಂಡು, ಪ್ರಳಯ ಕಳೆಯುವುದನ್ನ ಕಾಯುತ್ತೇನೆ ಎನ್ನುವುದೆಲ್ಲಾ ಮಿಥ್ಯ, ನಿನ್ನ ಸುತ್ತಣ ಪ್ರಪಂಚ ನಿನ್ನನ್ನ ತಾಕಿಯೇ ತಾಕುತ್ತದೆ ಎಂದರು. ಟೆಲಿವಿಷನ್, ಸಿನೆಮಾ ಇತ್ಯಾದಿಗಳಿಗೂ ಮನಸ್ಸನ್ನ ತೆರೆದಿಟ್ಟುಕೊಂಡು, ಅವುಗಳಿಂದಲೂ ಕಲಿಯಬೇಕಾದದ್ದು ಇದ್ದರೆ ಕಲಿ ಅಂದರು. ವೈಯಕ್ತಿಕವಾಗಿ ನಾನು ಕೂಡಾ ‘ಪ್ರತಿರೋಧ’ ತರಬೇಕು ಅನ್ನುವ ವಿಚಾರದಲ್ಲಿ ನಂಬಿಕೆ ಇಟ್ಟಿದ್ದವನು. ಆದರೂ ಮತ್ತೊಂದು ಅಭಿಪ್ರಾಯವನ್ನ ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ರಚರ್ಡ್‌ ಹೋಗಾರ್ಟ್‌ ತಾನು ನಡೆಸಿದ್ದ ಸಮಕಾಲೀನ ಸಂಸ್ಕೃತಿಗಳ ಅಧ್ಯಯನ ಒಂದು ಘಟ್ಟದಲ್ಲಿ ಈ ಪ್ರಶ್ನೆಗಳನ್ನು ಎತ್ತುತ್ತಾನೆ. ಹೀಗೆ ಒಂದು ಮೈನಾರಿಟಿ ಇರಲಿಕ್ಕೆ ಸಾಧ್ಯವೆ? ಸಂಸ್ಕೃತಿಯಲ್ಲಿ ಉಳಿಯಬೇಕಾದದ್ದು ಏನು ಎನ್ನುವುದನ್ನು ನಾನು ನಿರ್ಧರಿಸುತ್ತೇನೆ, ಅದರ ಸಾರವನ್ನ ಕಾಪಾಡಿಕೊಂಡು ಬರುತ್ತೇನೆ, ಎನ್ನುವ ಮಾತು ದುರಹಂಕಾರವಾಗುವುದಿಲ್ಲವೇ? ಈ ದುರಹಂಕಾರವೇ ಕೊನೆಯಲ್ಲಿ ಅ – ಸೃಜನಾತ್ಮಕವಾಗುವುದಿಲ್ಲವೇ? ಎಂದೆಲ್ಲ ಪ್ರಶ್ನೆ ಎತ್ತುತ್ತಾನೆ.

ಸಮೂಹ ಸಂಸ್ಕೃತಿಯ ಬಗ್ಗೆ

ನಾವು ಒಂದು ಸಾರಿ ಮಾಸ್ ಕಲ್ಚರಿನ ಬಗ್ಗೆ ಮಾತನಾಡುತ್ತಿದ್ದಾಗ ತೇಜಸ್ವಿ ಹೇಳಿದ್ದರು: ನಮಗೆ ಟೆಲಿವಿಷನ್ ಇತ್ಯಾದಿಗಳು ಒಳ್ಳೆಯದು, ಜಾತಿ ವಿಜಾತಿಗಳ ವಿರುದ್ಧ ಹೋರಾಡಲಿಕ್ಕೆ ನಮಗೆ ಆಗ್ತಾ ಇಲ್ಲ, ಸಮೂಹ ಸಂಸ್ಕೃತಿಯನ್ನು ಛೂ ಬಿಟ್ಟರೆ ಇವೆಲ್ಲಾ ನಾಶವಾಗಿ ಬಿಡುತ್ತವೆ ಅಂತ.

ಇಂಗ್ಲೆಂಡಿನಲ್ಲಿ Z cars ಅನ್ನುವ ಧಾರಾವಾಹಿಯನ್ನು ನಾನು ಅರವತ್ತರ ದಶಕದಲ್ಲಿ ಖುಷಿಯಿಂದ ನೋಡುತ್ತಿದ್ದೆ, ಅದನ್ನ ರಾಣಿವಾಸದವರಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲರೂ ನೋಡುತ್ತಿದ್ದರು. ಅದೇ, ಹಳೆಯ ಇಂಗ್ಲೆಂಡಿಗೆ ಹೋದರೆ ವರ್ಗ ವ್ಯತ್ಯಾಸಗಳು ಅದೆಷ್ಟು ಸೂಕ್ಷ್ಮ ರೀತಿಯಲ್ಲಿ ತಮ್ಮ ತಮ್ಮ ಕಲೆಗಳನ್ನು ಕಾಪಾಡಿಕೊಂಡು ಬರುತ್ತವೆ ಅಂತ ತಿಳಿಯುತ್ತದೆ. ಅವರ ಡೈನಿಂಗ್ ಟೇಬಲ್ ಗಮನಿಸಿದರೂ ಸಾಕು: ಡೈನಿಂಗ್ ಟೇಬಲ್ ಓಕ್ ಮರದಿಂದ ಮಾಡಿದ್ದಾದರೆ ಅವನು ಕಾರ್ಮಿಕ ವರ್ಗದವನು; ಬೀಟಿಯದಾದರೆ ಶ್ರೀಮಂತ ವರ್ಗದವನು ಅಂತ ಸುಲಭವಾಗಿ ಗುರುತಿಸಬಹುದಾಗಿತ್ತು. ಆದರೆ, ವರ್ಗಭೇದಗಳೇನೇ ಇದ್ದರೂ ಹಳೆಯ ಸಂಸ್ಕೃತಿಯಲ್ಲಿ ಮೂರೂ ಮರವೇ ಆಗಿತ್ತು. ಇವತ್ತು ಯಾರದೇ ಮನಗೆ ಹೋದರೂ ಟೇಬಲ್ಲಿನ ಮೇಲುಮೈ ಫಾರ್ಮೈಕಾದ್ದಾಗಿರುತ್ತದೆ. ಒಂದು ರೀತಿಯ ವರ್ಗಾತೀತತೆ ಸಮೂಹ ಸಂಸ್ಕೃತಿಯಿಂದಾಗಿ ಬಂದಿದೆ.

ಹಳೆಯ ರೀತಿಯಲ್ಲಿ ಒಳ್ಳೆಯದೂ ಇತ್ತು, ಕಟ್ಟೆದ್ದೂ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ವಿಶಿಷ್ಟತೆಯಿತ್ತು. ರಾಗಿಮುದ್ದೆ ಸೊಪ್ಪಿನಸಾರು ಒಬ್ಬ ತಿನ್ನುತ್ತಿದ್ದ, ಇನ್ನೊಬ್ಬ ಮತ್ತೊಂದು ರೀತಿಯ ಆಹಾರ ತಿನ್ನುತ್ತಿದ್ದ. ಆದರೆ ಅವರೆಡೂ ನಿಜವಾದ ಆಹಾರಗಳಾಗಿರುತ್ತಿದ್ದವು. ಈಗ, ಎಲ್ಲರೂ ಅಮೇರಿಕಾದಲ್ಲಿರುವಂತೆ ಒಂದೇ ರೀತಿಯ fast food ತಿನ್ನಲಿಕ್ಕೆ ಶುರು ಮಾಡಿದ್ದಾರೆ. ಟೆಲಿವಿಷನ್‌ನಿಂದ ಸಮೂಹ ಸಂಸ್ಕೃತಿ ವಿಪರೀತ ವೇಗವಾಗಿ ಜಾರಿಯಾಗುತ್ತದೆ. ( ಪಕ್ಕದಲ್ಲಿದ್ದ ಸರ್ವಮಂಗಳ ಅವರನ್ನ ಉದ್ದೇಶಿಸಿ) ಸರ್ವಮಂಗಳಗೆ ಆಗಿನ ಕಾಲದಲ್ಲಿ ಜಪಾನ್‌ಎಲ್ಲಿದೆ ಅಂತ ಪ್ರಾಯಶಃ ಗೊತ್ತಿರಲಿಲ್ಲ, ಈಗ ಅವರ ಮನೆ ಮಗೂಗೆ ಕೂಡ ಗೊತ್ತಿದೆ. ಟೆಲಿವಿಷನ್‌ನಿಂದಾಗಿ information ಧಂಡಿಯಾಗಿ ಸಿಕ್ಕುತ್ತಿದೆ. ಟೆಲಿವಿಷನ್ ಇಲ್ಲದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ ಅನ್ನುವ ವಾದ ಇದೆ.

ಮಾತಿನ ಬಗ್ಗೆ

ಸುಮ್ಮನೆ ಮಾತು ಮಾತು ಮಾತು ಅಂತ ಆಡ್ತಾ ಇರ್ತೀವಿ. ಮತ್ತೆ ಮತ್ತೆ ಅದೇ ಮಾತನ್ನ ಆಡುತ್ತೀವಿ. ಯಾರಾದರೂ ಮಾತು ಆಡ್ತಾ ಇದ್ದರೆ ಅದನ್ನ ತತ್ಪರತೆಯಿಂದ ಕೇಳಿಸಿಕೊಳ್ಳುವುದು ಕಡಿಮೆ. ಕೇಳಿಸಿಕೊಳ್ಳುವುದು ಇದೆಯಲ್ಲ, ಅದು ನಮ್ಮಲ್ಲಿ ಬಹಳ ಕಡಿಮೆ. ಕೇಳಿಸಿಕೊಳ್ಳುವ ಅಭ್ಯಾಸ ಇಲ್ಲದಿದ್ದಾಗ ಮಾತುಗಾರರು ವಿಪರೀತ ಮಾತುಗಾರರಾಗಿಬಿಡುತ್ತಾರೆ. (ಪಕ್ಕದಲ್ಲಿ ರಾಮಚಂದ್ರ ಶರ್ಮರ ಕಡೆ ತಿರುಗಿ, ನಗುತ್ತ), ಈ ರಾಮಚಂದ್ರ ಶರ್ಮರು ಆದ ಹಾಗೆ.

ಹೀಗಾದಾಗ ಹಾಗೂ ಹೀಗೂ ಕೇಳಿಸಿಕೊಳ್ಳದೇ ಇರುವುದಕ್ಕೆ ಆಗುವುದೇ ಇಲ್ಲ ಎನ್ನಿಸುವಂತಹ ಮಾತು ಆಡುವುದಕ್ಕೆ ಶುರು ಮಾಡಿಬಿಡ್ತೀವಿ ತಮಾಷೆ ಮಾಡಿಕೊಂಡು ರಂಜಕವಾಗಿ ಮಾತಾಡುವುದು, ಅನಗತ್ಯವಾಗಿ ನಮ್ಮನ್ನ ಜನರೆದುರು ಒಡ್ಡಿಕೊಳ್ಳುವುದು, ಏನೆಲ್ಲಾ ವೇಷಗಳನ್ನ ಹಾಕಿಕೊಳ್ಳುವುದು ಶುರುವಾಗಿ ಬಿಡುತ್ತದೆ. ನಾವೆಲ್ಲರೂ ಇದನ್ನ ಮಾಡ್ತಾ ಇದ್ದೀವಿ. ನಾನೂ ಕೂಡಾ ಮಾಡ್ತೀನಿ ಅಂತ ಕಾಣುತ್ತೆ. Listening Culture ಬಂದಾಗ ಮಾತ್ರ ಈ ರೋಗ ವಾಸಿಯಾಗಬಹುದು. ನಿಜವಾದ ವಿಚಾರಗೋಷ್ಠಿ ಆಗಬೇಕಾದರೆ, ಅರ್ಧ ಮಾತನಾಡಿದಾಗಲೇ, ಕೇಳುವವರಿಗೆ ಗೊತ್ತಾಗಿಬಿಡಬೇಕು; ಇಡೀ ಮಾತು ಹೇಳುವ ಅಗತ್ಯ ಬೀಳಬಾರದು.

ನಾನು ಹೇಳುತ್ತಿರುವುದು ಬಹುಪಾಲು ನಿಮಗಾಗಲೇ ತಿಳಿದಿದೆ ಎಂದು ಭಾವಿಸಿಕೊಂಡು ಮಾತಾಡಿದರೆ ಆಗ, ವೇಷ ಕಟ್ಟುವುದು, ಆಕರ್ಷಕವಾಗಿ ಮಾತಾಡುವುದು, ಕಡಿಮೆಯಾಗುತ್ತೆ. ನಾವು ಅಂತಹ ಸೆಮಿನಾರುಗಳಿಗೆ, ಮಾತುಗಕತೆಗೆ, ತಯಾರಾಗಬೇಕು. ನಾವು ಸಮಾನ ಮನಸ್ಕರು ಮಾತನಾಡುತ್ತಿದ್ದೇವೆ ಅನ್ನುವ ತಿಳುವಳಿಕೆ ಒಳ್ಳೆ ಮಾತುಗಾರಿಕೆಗೆ ಬಹಳ ಮುಖ್ಯ.

ನಾನು ಮತ್ತೊಂದು ಗಮನಿಸಿದ್ದೇನೆ: ಇಲ್ಲವೇ ತೀರ abstract ಆಗಿ ಮಾತನಾಡುತ್ತೇವೆ, ಅಥವಾ ತೀರಾ ವೈಯಕ್ತಿಕವಾಗಿ ಮಾತನಾಡುತ್ತೇವೆ. ಮೊದಲ ರೀತಿಯಲ್ಲಿ, ಮಾತು ಎಲ್ಲೆಲ್ಲಿಗೋ ತಲುಪಿ, ಒಪ್ಪುವ ಅಥವಾ ಒಪ್ಪದೇ ಇರುವುದಕ್ಕೆ ಅತೀತವಾದ ಸ್ಥಿತಿಯೊಂದನ್ನ ತಲುಪಿಬಿಡುತ್ತದೆ. ತೀರ ವೈಯಕ್ತಿಕಗೊಳಿಸಿಬಿಟ್ಟರೆ ಕೂಡಾ ಚರ್ಚೆ ಸಾಧ್ಯವಾಗುವುದಿಲ್ಲ.

ಈಗಂತೂ ನಾನು ಸಾಹಿತ್ಯ ಅಕಾಡೆಮಿಯಲ್ಲಿರುವುದರಿಂದ, ಒಂದುನೂರು ಸೆಮಿನಾರುಗಳಿಗೆ ಹೋಗುತ್ತಿರುತ್ತೇನೆ. ಬೆಂಗಳೂರು, ದೆಹಲಿ ಇಲ್ಲೆಲ್ಲಾ ನಾವು ನೋಡ್ತಾ ಇದೀವಿ: ಎಲ್ಲವೂ ಅರ್ಥಹೀನ; ಸಿಕ್ಕಾಪಟ್ಟೆ ಖರ್ಚು ಬೇರೆ ಆಗಿರುತ್ತೆ; ಪ್ರಯಾಣದ ಭತ್ಯೆಗಳು, ಊಟ ತಿಂಡಿ ಖರ್ಚು. ಹೇಳಿದ್ದನ್ನೇ ಹೇಳ್ತಾ ಇರ್ತೀವಿ, ಬರೆದದ್ದನ್ನೇ ಬರೀತಾ ಇರ್ತೀವಿ, ಹಾಡಿದ್ದನ್ನೇ ಹಾಡ್ತಾ ಇರ್ತೀವಿ.

ನನಗೆ ನೆನಪಿರುವ ಹಾಗೆ, ಅಡಿಗರು ನಾವೆಲ್ಲಾ ಸೇರುತ್ತಿದ್ದಾಗ, ‘ನನಗೆ ಈ ಸಾಲು ಬಹಳ ಇಷ್ ಆಯಿತಯ್ಯ’ ಅಂತ ಹೇಳಿದ ಮಾತ್ರಕ್ಕೆ ಬಹಳ ವಿಷಯ ಹೇಳಿದಂತೆ ಆಗಿಬಿಡುತ್ತಿತ್ತು.

ನಮ್ಮಲ್ಲಿ ಯಾರೇ ಆಗಲಿ, ಸ್ವ ಪ್ರತಿಷ್ಠೆ ಮಾಡಲಿಕ್ಕೆ ಶುರು ಮಾಡಿದರೆ ಇಡೀ ಸೆಮಿನಾರು ಕೆಟ್ಟುಹೋಗಿ ಬಿಡುತ್ತದೆ, ಬರೇ ತನ್ನ ಕಡೆಗೆ ಗಮನವನ್ನ ಸೆಳೆದುಕೊಳ್ಳುವ ಸನ್ನಾಹವಾಗಿ ಬಿಡುತ್ತದೆ. ಹೀಗೆಲ್ಲಾ ಆಗದೆ ಮಾತನಾಡಲಿಕ್ಕೆ ಸಾಧ್ಯವೋ? ಗಂಭೀರವಾಗಿ ಮಾತನಾಡಲಿಕ್ಕೆ ಸಾಧ್ಯವೋ? ಭಿನ್ನಾಭಿಪ್ರಯಗಳನ್ನ ಯಾವ ಅಧೈರ್ಯವೂ ಇಲ್ಲದೇ, ಸ್ವಪ್ರತಿಷ್ಠೆಗಳಿಲ್ಲದೆ ವ್ಯಕ್ತಪಡಿಸಬಲ್ಲೆವೋ? Is talking a spiritual necessity?

ಅಡಿಗರ ನೆನಪು

ನಮಗೆಲ್ಲಾ ವಯಸ್ಸು ಆಗ್ತಾ ಇದೆ. ನಾವೆಲ್ಲಾ ಅನಂತವಾಗಿ ಬದುಕುವವರೇನೂ ಅಲ್ಲ. ಕೆಲವು ಘಟನೆಗಳು ನಡೆದರೆ, ಅವು ನೆನಪಿನಲ್ಲಿ ಉಳಿಯಬೇಕಾದ ಘಟನೆಗಳಾಗಬೇಕಾದರೆ…. ಈ ರೀತಿಯ ಕೊಡುಕೊಳ್ಳುವಿಕೆ ಸಾಧ್ಯವಾಗಬೇಕು.

ಪೂನಾದಲ್ಲಿ ಹೊಸ ಕಾವ್ಯದ ಬಗ್ಗೆ ಒಂದು ಸೆಮಿನಾರು ಆಯಿತು. ದಿವಂಗತ ಪ್ರಭಾಕರ ಪಾಧ್ಯೆ ಏರ್ಪಡಿಸಿದ್ದ ಸೆಮಿನಾರು ಅದು – ಅರವತ್ತರ ದಶಕದ ಕೊನೆಯಲ್ಲಿ ಎಂದು ನೆನಪು. ಅವತ್ತು ಅಡಿಗರು ಬಂದಿದ್ದರು. ಆಗಲೇ ಅವರ ‘ಭೂಮಿಗೀತ’ ಹೊರ ಬಂದಿತ್ತು. ಇಂಡಿಯಾದ ಬೇರೆ ಬೇರೆ ಕಡೆಗಳಿಂದ ಹೊಸ ಕವಿಗಳೆಲ್ಲ ಬಂದಿದ್ದರು. ನನಗೆ ಪೂರ್ತಿಯಾಗಿ ಎಲ್ಲವೂ ನೆನಪಿದೆ, ಯಾರ್ಯಾರು ಮಾತನಾಡಿದರು, ಏನು ಮಾತನಾಡಿದರು ಅನ್ನುವುದು ನೆನಪಿದೆ. ಎಲ್ಲವೂ ಹೊಸದಾಗಿತ್ತು, ಹೊಸ ವಿಚಾರಗಳಿದ್ದವು.

ಈಗ ನೋಡಿ, ಬಂಡಾಯ ಅಂತ ಮಾತನಾಡಲಿಕ್ಕೆ ಆಗ್ತಾ ಇಲ್ಲ, ಹಾಗೇನೆ ನವ್ಯ ಅಂತ ಮಾತನಾಡಲಿಕ್ಕೆ ಆಗ್ತಾ ಇಲ್ಲ. ಹಾಗೆ ಆಗುವುದೂ ಒಳ್ಳೆಯದೇ ಅನ್ನಿ. ಬಾಯಿ ಮುಚ್ಚಿದಂತೆ ಆಗಿದೆ ಅನ್ನಿಸಿದರೆ, ಮತ್ತೆ ಬಾಯಿ ಬಿಡಬೇಕಾಗಿ ಬಂದಾಗ ಅರ್ಥ ಬಂದಿರುತ್ತೆ.

ಒಂದು ದಿನ ನಾವು ಕಾಫಿ ಹೌಸಿನಲ್ಲಿ ಸೇರಿದ್ದೆವು. ಅಡಿಗರು ಸಾಮಾನ್ಯವಾಗಿ ಮಕ್ಕಳಿಗೆ ತಿಂಡಿ ಖರೀದಿ ಮಾಡಲಿಕ್ಕೆ ಅಂಗಡಿಗೆ ಹೋಗುತ್ತಿದ್ದರು. ತಿಂಡಿ ಕಟ್ಟಿಸಿಕೊಂಡು ಬಸ್ಸಿಗೆ ಕಾಯುತ್ತಿರುವಾಗ ಅವರ ಕೈಯಲ್ಲಿ ಒಂದು ಬ್ಯಾಗು ಇರುತ್ತಿತ್ತು. ನನಗೆ ಚೆನ್ನಾಗಿ ನೆನಪಿದೆ. ಇದ್ದಕ್ಕಿದ್ದ ಹಾಗೆ, ‘ನನಗೆ ಇನ್ನು ಮುಂದೆ ಬರೆಯಲಿಕ್ಕೆ ಆಗಲ್ಲ ಅನಿಸಿದೆ’ ಅಂದರು ಅಡಿಗರು. It is impossible, I cannot just write ಅಂತ ಬೇಗ ಬೇಗ ಹೇಳಿಬಿಟ್ಟರು. ಹಾಗೆ ಹೇಳಿದ ಹದಿನೈದು ದಿನದಲ್ಲಿ ‘ಕೂಪ ಮಂಡೂಕ’ ಬರೆದು ಮುಗಿಸಿದ್ದರು.

ತನಗೆ ಇನ್ನೂ ಸೃಜನಾತ್ಮಕತೆ ಸಾಧ್ಯವಿಲ್ಲ ಅಂತ ಅದೆಷ್ಟು ಗಾಢವಾಗಿ, ಎಷ್ಟು ಆಳವಾಗಿ, ಅಡಿಗರಿಗೆ ಅನ್ನಿಸಿಬಿಟ್ಟಿತ್ತು ಅಂದರೆ, ಹಾಗೆ ಅನ್ನಿಸಿದ್ದೇ ಅವರ ಹೊಸ ಪದ್ಯ ಕೂಪಮಂಡೂಕಕ್ಕೆ ಕಾರಣವಾಯಿತು.