ಆಟಗಾರರು ಸಾಲಾಗಿ ಅಥವಾ ವರ್ತುಳಾಕಾರವಾಗಿ ನಿಂತುಕೊಳ್ಳುವರು. ಅವರಲ್ಲಿ ಒಬ್ಬರು ತಮ್ಮನ್ನೂ ಕೂಡಿಸಿಕೊಂಡು ಅಡಂ, ತಡಂ, ತಡತಡ ಬಾಜಾ ಅಕ್ಕಾ-ದಿಕ್ಕಾ-ಲೇಸ್- ಮೂಸ್-ಕರಂ-ದಾಳಿಂ-ಪುಲಾ ಎಂದು ಒಂದೊಂದು ಶಬ್ದದೊಡನೆ ಒಬ್ಬೊಬ್ಬರನ್ನು ಎಣಿಸುತ್ತ ಹೋಗುವರು. ಪುಲಾ ಬಂದವರು ಜೋಡಿ ಜೋಡಿಯಾಗಿ ಒಂದೆಡೆ ನಿಲ್ಲುವರು. ಪ್ರತಿ ಜೋಡಿಯೂ ಕೈಗಿಂಚು ಹಾಕಿಕೊಂಡು ನಿಲ್ಲುವದು. ಕೊನೆಯಲ್ಲಿ “ಪುಲಾ” ಆದವರು ಕಳ್ಳ. ಕಳ್ಳನು ಕೈಗಿಂಚು ಹಾಕಿಕೊಂಡ ಜೋಡಿಯನ್ನು ಮುಟ್ಟಲು ಹೋಗುವನು. ಕೈಗಿಂಚು ಹಾಕಿಕೊಂಡವರು ಆಗಾಗ ಕೈಬಿಡುತ್ತಿರಬೇಕು. ಕೈಬಿಟ್ಟ ಸಂದರ್ಭದಲ್ಲಿಯೇ ತಟ್ಟನೆ ಮುಟ್ಟಬೇಕು. ಮುಟ್ಟಿಸಿ ಕೊಂಡವನೇ ಸೋತವ; ಸೋತವನೇ ಕಳ್ಳ. ಹಳೆಯ ಕಳ್ಳ ಆ ಜೋಡಿಯಲ್ಲಿ ಕೂಡಿ ಕೊಳ್ಳುವನು. ಜೋಡಿ ಕೂಡಿಕೊಳ್ಳಲು ವಿಲಂಬಮಾಡಿದರೆ ಹೊಸ ಕಳ್ಳ ಹಳೆಯ ಕಳ್ಳನನ್ನು ಮುಟ್ಟಿ, ಮತ್ತೆ ಅವನನ್ನು ಕಳ್ಳನನ್ನಾಗಿ ಮಾಡಬಹುದು. ಹೀಗೆ ಬಹಳ ಹೊತ್ತು ಆಟ ನಡೆಯುತ್ತದೆ.