ಹುಲಿಕವ್ಲೆಯ ಆಟದಂತೆಯೇ ಆಟಗಾರರು ವರ್ತುಳಾಕಾರವಾಗಿ ನಿಂತುಕೊಳ್ಳುತ್ತಾರೆ. ವರ್ತುಳ ದೊಡ್ಡದಾಗಲು ಆಟಗಾರರು ತುಸು ಅಂತರ ಬಿಟ್ಟು ನಿಲ್ಲಬೇಕು. ಕೈಗಿಂಚು ಹಾಕಬೇಕಿಲ್ಲ. ಈ ಆಟದಲ್ಲಿ ಹುಲಿಯ ಬದಲಿಗೆ ರಾಕ್ಷಸನಿರುತ್ತಾನೆ. ರಾಕ್ಷಸನು ಎಷ್ಟು ತಲೆಯವನಿರಬೇಕೆಂಬುದನ್ನು ಆಟಗಾರರೇ ನಿರ್ಣಯಿಸುತ್ತಾರೆ. ಹೆಚ್ಚಾಗಿ ಮೂರು ಅಥವಾ ಐದು ತಲೆಯ ರಾಕ್ಷಸನಿರುತ್ತಾನೆ. ಮೂರು ತಲೆಯ ರಾಕ್ಷಸನಾದರೆ ಮೂವರು ಒಬ್ಬರ ಹೆಗಲಮೇಲೆ ಕೈಹಾಕಿ ಗಟ್ಟಿಯಾಗಿ ಒಬ್ಬರನ್ನೊಬ್ಬರು ಹಿಡಿದುಕೊಳ್ಳುತ್ತಾರೆ. ಐದು ತಲೆಯ ರಾಕ್ಷಸನಾದರೆ ಐದು ಜನರು ಮೇಲಿನಂತೆಯೇ ಮಾಡುತ್ತಾರೆ. ರಾಕ್ಷಸನಿಂದ ಹಿಡಿಯಿಸಿಕೊಳ್ಳುವ ಮನುಷ್ಯ ವರ್ತುಳದ ಒಳಗೇ ಇರುತ್ತಾನೆ. ಮನುಷ್ಯನನ್ನು ಹಿಡಿಯಲು ಹೋದಾಗ ರಾಕ್ಷಸರ ದೇಹ ಬಿಡಿಬಿಡಿಯಾಗಬಾರದು. ನಡುವೆ ಇರುವವನು ಮಾತ್ರ ಮನುಷ್ಯನನ್ನು ಮುಟ್ಟಬೇಕು. ಅವನನ್ನು ಮುಟ್ಟಿ ಆದ ಮೇಲೆ, ಮತ್ತೆ ಬೇರೆ ರಾಕ್ಷಸ, ಬೇರೆ ಮನುಷ್ಯ ಒಳಹೊಕ್ಕು ಆಡುತ್ತಾರೆ.