ಆಟಗಾರರೆಲ್ಲರೂ ಒಬ್ಬೊಬ್ಬರಾಗಿ ತಮ್ಮ ತೋರಬೆರಳಿನ ತುದಿಯನ್ನು ಹೆಬ್ಬೆರಳ ತುದಿಗೆ ಅಂಟಿಸಿ ನಡುವೆ ಉಂಟಾದ ರಂಧ್ರದಲ್ಲಿ ಉಗುಳುವರು. ಉಗುಳಿದಾಗ ಎಂಜಲು ಯಾರ ಕೈಗೆ ತಾಗುವದೋ ಅವರೇ ಕಳ್ಳರು. ಯಾರ ಕೈಗೂ ತಾಗದೇ ಹೋದರೆ ಇನ್ನೊಮ್ಮೆ ಎಲ್ಲರೂ ಉಗುಳುವರು. ಒಬ್ಬರಿಗಿಂತ ಹೆಚ್ಚು ಜನರ ಕೈಗೆ ಎಂಜಲು ತಾಗಿದರೆ ಹೆಸರಿಡುವ ವಿಧಾನದಿಂದ ಕಳ್ಳನನ್ನು ಹುಡುಕುವರು. ಈ ಕಳ್ಳನೇ ಮುಟ್ಟುವವನು. ಅವನ ಹತ್ತರ ಇತರರು ನಿಂತಲ್ಲಿ ಎಂದಾಗಲೀ ಕುಳಿತಲ್ಲಿ ಎಂದಾಗಲೀ ಹೇಳುವನು. ಮುಟ್ಟುವವ ನಿಂತಲ್ಲಿ ಎಂದು ಹೇಳಿದರೆ ಆಡುವವರೆಲ್ಲ “ಕುಂತಿಕುಂತಿ ಕಾಲೆಗೆಲ್ಲಾ ವರ್ತಿ ಬಂದೋಯ್ತು” ಎನ್ನುತ್ತಾ ನಿಂತುಕೊಳ್ಳುವರು. ಆದರೆ ನಿಂತುಕೊಂಡಾಗ ಮುಟ್ಟುವವರ ಕಡೆಗೆ ಹೆಚ್ಚು ಜಗರೂಕರಾಗಿ ನೋಡುತ್ತಿದ್ದು ಮುಟ್ಟುವವರು ಸಮೀಪ ಬಂದ ಕೂಡಲೆ ಕುಳಿತುಕೊಂಡು ಬಿಡುವರು. ಕುಳಿತುಕೊಂಡಾಗ ಮುಟ್ಟಿದರೆ ಸೋಲಲ್ಲ. ಹೀಗೆ ಮುಟ್ಟುವವರು ಒಬ್ಬರನ್ನು ಮುಟ್ಟುವವರೆಗೂ, ಕುಂತಿಕುಂತಿ ಕಾಲಿಗೆಲ್ಲ ವರ್ತಿ ಬಂದೋಯ್ತು” – ಎನ್ನುತ್ತ ನಿಂತುಕೊಳ್ಳುವದೂ, ನಿಂತವರು ಕುಳಿತುಕೊಳ್ಳುವದೂ ಒಂದೇ ಸವನೆ ನಡೆಯುತ್ತಿರುತ್ತದೆ. ಮೊದಲು ಯಾರನ್ನು ಮುಟ್ಟಲಾಗುವುದೋ ಅವರೇ ಮತ್ತೆ ಮುಟ್ಟುವವರಾಗುತ್ತಾರೆ. ಮುಟ್ಟುವವರು ಇನ್ನೊಬ್ಬರು ಬಂದಾಗ ಅವರಿಗೂ “ಕುಳಿತಲ್ಲಿ ಮುಟ್ಟೀಯೋ ನಿಂತಲ್ಲೋ” ಎಂದು ಕೇಳುವರು. ಆಗ ಮುಟ್ಟುವವರು ತಮಗೆ ಬೇಕಾದ ಸ್ಥಿತಿಯನ್ನು ಸೂಚಿಸಬಹುದು. “ನಿಂತಲ್ಲಿ” ಎಂದು ಉತ್ತರವಿದ್ದರೆ ನಿಂತಿ ನಿಂತಿ ಕಾಲಿಗೆಲ್ಲಾ, ವರ್ತಿ ಬಂದೋಯ್ತು ಅನ್ನುವರು. ಹೀಗೆ ಆಟ ಕ್ರಿಯಾತ್ಮಕವಾಗಿ ಸಾಗುತ್ತದೆ.