ನೆರೆದ ಆಟಗಾರರೆಲ್ಲ ಅಂಗಳದಲ್ಲಿ ಅಥವಾ ಗದ್ದೆಯ ಬೈಬಲ್ಲಿ ಒಬ್ಬರ ಕೈಯನ್ನು ಇನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ವರ್ತುಳಾಕಾರವಾಗಿ ನಿಲ್ಲುತ್ತಾರೆ. ಹುಲಿಯಾದ ಆಟಗಾರನು ವರ್ತುಳದ ಹೊರಗೂ, ಆಕಳು ಆದವನು ಒಳಗೂ ನಿಂತಿರುತ್ತಾರೆ. ಹುಲಿ ವರ್ತುಳದ ಹೊರಗೆ ಸುತ್ತುತ್ತ “ಅಮ್ಮಮ್ಮಾ ಕವ್ಲಿ ಬಂದಿತ್ತಾ?” ಅನ್ನುತ್ತದೆ. ಆಗ ನಿಂತ ಎಲ್ಲ ಆಟಗಾರರೂ “ಬರೊಕೆಲ್ಲಾ ಬಂದಿತ್ತು, ತಟ್ಟಿ ಮುರ್ಕಂಡ್ ಹೋಯ್ತು” ಅನ್ನುತ್ತಾರೆ. ಹುಲಿ ಮತ್ತೆ ಮತ್ತೆ ಮೇಲಿನಂತೆ ಕೇಳುತ್ತದೆ. ಆಟಗಾರರು ಒಂದೇ ಉತ್ತರ ಹೊಡುತ್ತಾರೆ. ಮೂರು ಬಾರಿ ಅದೇ ಉತ್ತರವನ್ನು ಕೇಳಿದ ಹುಲಿ “ಕವ್ಲೆ” (ಆಕಳು) ಯನ್ನು ಹಿಡಿಯಲು ಪ್ರಯತ್ನಿಸುತ್ತದೆ.

ಹುಲಿ ಒಳಹೊಕ್ಕಲು, ಹೊರಗೆ ಹೋಗಲು ಒಂದು ಅಥವಾ ಎರಡು ಬಾಗಿಲನ್ನು (ಇಬ್ಬರ ನಡುವಿನ ಕಿಂಡಿ) ನಿಗದಿ ಮಾಡಿರುತ್ತಾರೆ. ಆದರೆ ಆಕಳು ಯಾವ ಬಾಗಿಲಿನಿಂದಾದರೂ ಹೋಗಬಹುದು, ಬರಬಹುದು. ಆಕಳು ಹೋಗುವಾಗ ಬರುವಾಗ ಹುಲಿಯ ಬಾಗಿಲಿನವರನ್ನು ಬಿಟ್ಟು ಉಳಿದವರೆಲ್ಲ ಕೈತೋಳುಗಳನ್ನು ತೋರಣದಂತೆ ಎತ್ತಿ ದಾರಿಯನ್ನು ಸುಗಮಗೊಳಿಸುವರು. ಆದರೆ ಹುಲಿ ಅಲ್ಲಿಗೆ ಬಂದ ತಕ್ಷಣ ಅದು ಜಿಗಿಯಲಿಕ್ಕಾಗಲೀ ಹೊಕ್ಕಲಿಕ್ಕಾಗಲೀ ಸಾಧ್ಯವಾಗದಂತೆ ಕೈಗಳನ್ನು ಗಟ್ಟಿಯಾಗಿ ಅಡ್ಡ ಹಿಡಿಯುವರು. ಆದರೂ ಹುಲಿ ಪ್ರಯತ್ನ ಪೂರ್ವಕವಾಗಿ ಕೈಬಿಡಿಸಿ ತನಗೆ ಬೇಕಾದ ಸ್ಥಳಕ್ಕೆ ಆಕಳಿದ್ದಲ್ಲಿಗೆ ಜಿಗಿಯುತ್ತದೆ. ಮತ್ತು ಆಕಳು ಹುಲಿಯಿಂದ ತಪ್ಪಿಸಿಕೊಳ್ಳಲು ಜಾಗರೂಕತೆಯಿಂದ ಪ್ರಯತ್ನಿಸುತ್ತದೆ.

ಹುಲಿ ಆಕಳನ್ನು ಹಿಡಿದು ಮೂರುಸಾರೆ “ಉಪ್ಪುಪ್ಪು” (ತಲೆಯ ಮೇಲೆ ಅಂಗೈಯಿಂದ ಬಡಿಯುವದು) ಮಾಡಿದರೆ ಹುಲಿ ಆಕಳನ್ನು ತಿಂದಿತು ಎನ್ನುತ್ತಾರೆ. ಇಲ್ಲಿಗೆ ಒಂದು ಆಟ ಮುಗಿಯಿತು, ಬೇರೆ ಇಬ್ಬರು ಹುಲಿ ಆಕಳು ಆಗಿ ಹೊಸ ಆಟ ಪ್ರಾರಂಭಿಸುವರು.