ಕವಿತೆ ಎಂದರೆ ಏನು?  ಮೂಲತಃ ಅದೊಂದು ಸಂವಾದ:
ಕಂಡದ್ದರ ಜತೆಗೆ ಮಾತ್ರವಲ್ಲ; ಕಾಣದ್ದರ ಜತೆಗೂ ಕೂಡ.
ಸೃಷ್ಟಿ ಎಂದರೆ ಏನು? ಅದೊಂದು ಬೆರಗು, ಅದೊಂದು ಒಗಟು.

ಈ ಬೆರಗನ್ನು, ಈ ಒಗಟನ್ನು, ಈ ಸಂಚನ್ನು
ಅರ್ಥಮಾಡಿಕೊಳ್ಳಲು ಪ್ರಜ್ಞಾವಂತನಾದ ಮನುಷ್ಯ
ಪಟ್ಟಪಾಡು ಅಷ್ಟಿಷ್ಟಲ್ಲ.  ಆದರೂ ನಮಗೆ
ತಿಳಿದದ್ದಕ್ಕಿಂತ, ತಿಳಿಯದ್ದೇ ಅಗಾಧ.
ಇದು ಪುರಾಣ, ಇದು ಚರಿತ್ರೆ, ಇದು ಕಾವ್ಯ
ಇದು ವಿಜ್ಞಾನ.  ಇದು ತತ್ವಶಾಸ್ತ್ರ.

ಕವಿ ನಾಡಿಗರೂ ಹೊರಟಿರುವುದು ಇದೇ
ಹೆಜ್ಜೆ ಮೂಡದ ಹಾದಿಯಲ್ಲಿ.
ಹಿಂದಿನ ಋಷಿಗಳೂ, ಕವಿಗಳೂ, ವಿಜ್ಞಾನಿಗಳೂ
ತಡಕಾಡಿ ಕಂಡ ವಿಸ್ಮಯದ ನೆನಪುಗಳೂ,
ಪಟ್ಟಪಾಡಿನ ಆರ್ತತೆಗಳೂ, ನಡೆಯಿಸಿದ
ಸಂವಾದದ ಅನುರಣನಗಳೂ, ಸಾಕ್ಷಾತ್ಕಾರದ
ಹೊಳಹುಗಳೂ ಇಲ್ಲಿವೆ:
ಈ ಜಿಜ್ಞಾಸೆಯ ಸ್ವಗತಲಹರಿಗಳಲ್ಲಿ
ಪ್ರಾಚೀನವನ್ನು, ಅರ್ವಾಚೀನವನ್ನು ಒಟ್ಟಿಗೆ ಹಿಡಿದು
ವಿನೂತವನವನ್ನು ನಿರ್ಮಿಸುವ ಅಸ್ತಿತ್ವದ ಶೋಧನೆಯ
ಆತ್ಮಕಥನದಲ್ಲಿ,
ಈ ಹೊತ್ತಿನ ಕನ್ನಡ ಕಾವ್ಯಕ್ಕೆ ಹೊಸ ಸಾಧ್ಯತೆಗಳನ್ನು
ಹುಡುಕುವ ಹಾಗೂ ವಿಸ್ತರಿಸುವ ಪ್ರಯೋಗಗಳಲ್ಲಿ.

ಪಂಚಭೂತಗಳು : ಡಾ. ಸುಮತೀಂದ್ರ ನಾಡಿಗ, ೨೦೦೦