ಡಾ. ಬಸವರಾಜ ಸಬರದ ಅವರ ಪ್ರಸ್ತುತ ಕವನ ಸಂಕಲನದ ಶೀರ್ಷಿಕೆಯಾಗಿರುವ “ಕೆಂಡಸಂಪಿಗೆ” ವಾಸ್ತವವಾಗಿ ಹೂವೊಂದನ್ನು ಸೂಚಿಸುತ್ತದೆಯಾದರೂ, ಈ ಪದ ಸಮುಚ್ಚಯದೊಳಗಿನ ‘ಕೆಂಡ’ ಮತ್ತು ‘ಸಂಪಿಗೆ’ ಇವುಗಳು, ಕಳೆದ ಮೂರು ದಶಕಗಳ ಕಾಲಮಾನದಲ್ಲಿ ಕನ್ನಡ ಕವಿತೆಯ ಚಹರೆಯನ್ನು ಬದಲಾಯಿಸಿದ ದಲಿತ – ಬಂಡಾಯ ಸಾಹಿತ್ಯದ ಎರಡು ನೆಲೆಗಳ ಪ್ರತೀಕವೂ ಆಗಿವೆ.  ಹೊಸ ಸಾಮಾಜಿಕ – ರಾಜಕೀಯ ಪ್ರಜ್ಞೆಯಲ್ಲಿ ಸ್ಫೋಟಗೊಂಡು ‘ಕೆಂಡ’ವಾದ ಕವಿಯ ಮನಸ್ಸು, ಬದುಕಿನ ಸಮಗ್ರತೆಯೊಂದಿಗೆ ತನ್ನ ಪ್ರೀತಿಯ ಸಂಬಂಧವನ್ನು ಗಾಢವಾಗಿಸಿಕೊಳ್ಳುತ್ತ ‘ಸಂಪಿಗೆಯೂ’ ಆಗುವ ಕ್ರಮ ಅಪೇಕ್ಷಣೀಯವಾದದ್ದೇ.

ಈ ಸಾಹಿತ್ಯ ಸಂದರ್ಭದೊಂದಿಗೆ ಕವಿಯಾಗಿ ಅರಳಿಕೊಂಡು ಬೆಳೆದ ಬಸವರಾಜ ಸಬರದ ಅವರ ಕಾವ್ಯಪ್ರಜ್ಞೆ ಈ ಕವನ ಸಂಕಲನದಲ್ಲಿ, ತನ್ನ ವ್ಯಕ್ತಿತ್ವದ ಮೂಲ ದ್ರವ್ಯವಾದ ಗಾಢ ಸಾಮಾಜಿಕ ಕಾಳಜಿಗಳನ್ನು ಬಿಟ್ಟುಕೊಡದೆ, ಬದುಕಿನ ಬೆರಗಿಗೆ, ಬೆಡಗಿಗೆ, ನಿಗೂಢತೆಗೆ ತೆರೆದುಕೊಳ್ಳುತ್ತ, ತಾತ್ವಿಕವಾದ ಚಿಂತನೆ ಮತ್ತು ಪ್ರಶ್ನೆಗಳ ಮೂಲಕ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತ ಮಾಗುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

ಕನ್ನಡ ಪರಂಪರೆಯ ತತ್ವಪದಕಾರರ, ವಚನಕಾರರ ಹಾಗೂ ಜಾನಪದದ ಸ್ಮೃತಿಗಳನ್ನು ಅರಗಿಸಿಕೊಂಡ ಸಬರದ ಅವರ ಭಾಷೆಯ ಬಳಕೆಯೊಳಗಿನ ಸೃಜನಶೀಲ ಉತ್ಸಾಹ ಮತ್ತು ಲವಲವಿಕೆ, ಇತ್ತೀಚೆಗೆ ಕನ್ನಡ ಕಾವ್ಯಭಾಷೆಗೆ ಪ್ರಾಪ್ತವಾಗಿದ್ದ ಏಕತಾನತೆಯನ್ನು ಮುರಿಯುವುದರಲ್ಲಿ ಯಶಸ್ವಿಯಾಗಿದೆ.  ಒಟ್ಟಾರೆಯಾಗಿ ಇದು ಸಬರದ ಅವರ ಕಾವ್ಯದ ಚಲನಶೀಲತೆಯೊಳಗೆ ಒಂದು ಮುಖ್ಯವಾದ ಹಂತ ಎನ್ನಬಹುದು.

ಕೆಂಡಸಂಪಿಗೆ : ಬಸವರಾಜ ಸಬರದ , ೨೦೦೦