ಮಾರ್ಗ ಮತ್ತು ದೇಶಿಗಳ ಮುಖಾಮುಖಿ ಹಾಗೂ ಕೊಡು-ಪಡೆಗಳು ಕನ್ನಡ ಕಾವ್ಯ ಪರಂಪರೆಗೆ ಹೊಸತೇನೂ ಅಲ್ಲ.  ಅದರಲ್ಲಿಯೂ ಲಿಖಿತ ಪರಂಪರೆಯ ಪರಿಚಿತ ಪಥಗಳಿಂದ ಹೊರಳಿ, ಅಲಿಖಿತ ಪರಂಪರೆಯ ಜಾಡುಗಳನ್ನು ಹಿಡಿದು, ಅಲ್ಲಿನ ಅನುಭವ ಪ್ರಪಂಚವನ್ನು ತನ್ನ ಅಭಿವ್ಯಕ್ತಿಯ ಮೂಲದ್ರವ್ಯವನ್ನಾಗಿ ಮಾಡಿಕೊಂಡ ಕವಿತೆಗೆ ಇರುವ ಚಹರೆಯೇ ಬೇರೆ.  ಹೀಗೆ ಏಕಕಾಲಕ್ಕೆ ಅಪರಿಚಿತವೂ ವಿನೂತವೂ ಆದ ಚಹರೆಯನ್ನುಳ್ಳ ಕವಿತೆಯನ್ನು ಕಟ್ಟಿದ ಕೆಲವೇ ಕೆಲವರ ಸಾಲಿಗೆ ಸೇರುತ್ತಾರೆ ಸಿದ್ಧರಾಮಯ್ಯನವರು.  ಅವರ ಈ ಕವಿತೆಗಳಲ್ಲಿ ಈ ಮಣ್ಣಿನ ಪದರ ಪದರಗಳಲ್ಲಿ ಮನೆಮಾಡಿರುವ ಜಾನಪದ ಸ್ಮೃತಿಗಳೂ, ಐತಿಹ್ಯ ಹಾಗೂ ಪುರಾಣ ಸ್ಮರಣೆಗಳೂ, ಅನುಭಾವದ ಅನುರಣನಗಳೂ, ಗ್ರಾಮೀಣ ಪರಿಸರದ ದಟ್ಟವಾದ ಅನುಭವಗಳೂ, ಅವರದೇ ಆದ ನುಡಿಗಟ್ಟುಗಳ ಮೂಲಕ ಪುನರ್ಭವಗಳನ್ನು ಪಡೆದುಕೊಳ್ಳುತ್ತ, ತನ್ನ ಪ್ರಾಚೀನತೆಯೊಂದಿಗೆ ಹಾಗೂ ಆಧುನಿಕ ಜಗತ್ತಿನೊಂದಿಗೆ ಸಂವಾದವನ್ನು ನಡೆಯಿಸಿರುವ ಕ್ರಮ ವಿಶೇಷ ರೀತಿಯದಾಗಿದೆ.

‘ಮರುಜೇವಣಿ’ ಎಂದರೆ ನಮ್ಮ ಜಾನಪದ ನಂಬಿಕೆಯ ಪ್ರಕಾರ, ಸತ್ತವರನ್ನು ಬದುಕಿಸುವ ಔಷಧೀಯ ಗುಣ ಉಳ್ಳ ಒಂದು ಸಸ್ಯ ವಿಶೇಷ.  ಸಿದ್ಧರಾಮಯ್ಯನವರ ಕವಿತೆಯ ಹಿಂದೆ ಅಂಥ ಒಂದು ಸಂಜೀವಿನಿಯನ್ನು ಹುಡುಕುವ ಉದ್ದೇಶವಿದೆ.  ಇಂದಿನ ವಾಣಿಜ್ಯ ಸಂಸ್ಕೃತಿಯ ಅಬ್ಬರ ಮತ್ತು ಆಕ್ರಮಣದ ದಿನಗಳಲ್ಲಿ ನಮ್ಮ ಸೃಜನಶೀಲತೆ ವೈಚಾರಿಕತೆ ಹಾಗೂ ದೇಶೀಯತೆಗಳನ್ನು ಪುನಶ್ಚೇತನಗೊಳಿಸುವ ‘ಮರುಜೇವಣಿ’ಯ ಅನ್ವೇಷಣೆಯು ನಮ್ಮ ನಿಮ್ಮೆಲ್ಲರ ಆಶಯವೂ ಆಗಿದೆ.

ಮರುಜೇವಣಿ : ಎಸ್.ಜಿ. ಸಿದ್ದರಾಮಯ್ಯ, ೨೦೦೦