ಕನಸುಗಳಿಲ್ಲದ, ಮಹತ್ವಾಕಾಂಕ್ಷೆಯಿಲ್ಲದ, ಸುತ್ತಣ ನಿಸರ್ಗದೊಂದಿಗೆ ಸಂಬಂಧ ಮತ್ತು ಸಂವಾದವನ್ನು ಕಳೆದುಕೊಂಡು ಜಡವಾದ ಈ ಹೊತ್ತಿನ ಸಂದರ್ಭದಲ್ಲಿ, ಶ್ರೀಮತಿ ಸವಿತಾ ನಾಗಭೂಷಣ ಅವರ ಈ ಕವಿತೆಗಳು ತಮ್ಮ ಮೆಲುದನಿಯ ಪ್ರಶಾಂತ ತೇಜಸ್ಸಿನಿಂದ, ಅದಮ್ಯವಾದ ಜೀವನಪ್ರೀತಿಯ ಸ್ವಗತ ಲಹರಿಗಳಂತಿವೆ.
ಸಮಕಾಲೀನ ಕನ್ನಡ ಕವಯಿತ್ರಿಯರ ನಡುವೆ ವಿಭಿನ್ನವೂ ವಿಶಿಷ್ಟವೂ ಆದ ವ್ಯಕ್ತಿತ್ವವನ್ನುಳ್ಳ ಸವಿತಾ ಅವರ ಕವಿತೆ, ಬದುಕನ್ನು ಉತ್ಕಟವಾಗಿ ಪ್ರೀತಿಸುವ ಎಲ್ಲರ ಧ್ವನಿಯೂ ಆಗಿದೆ.
ಈ ಕವಿತೆಗಳ ಹಿಂದೆ ಮುಗ್ಧವಾದ ಅತ್ಯಂತ ನವುರಾದ ಹಾಗೂ ವಿಸ್ಮಯವನ್ನು ನಿರಂತರವಾಗಿ ಕಾಯ್ದುಕೊಂಡ ಮತ್ತು ಆತ್ಮಪ್ರತ್ಯಯದಲ್ಲಿ ನೆಲೆನಿಂತ ಮನಸ್ಸೊಂದಿದೆ. ಆದುದರಿಂದಲೇ ಅದು ಚಂದ್ರನನ್ನು ಈ ಭೂಮಿಗೆ ಕರೆಯಬಲ್ಲದು; ಹಕ್ಕಿಯೊಂದಿಗೆ ಹೂವಿನೊಂದಿಗೆ, ಬೆಟ್ಟದೊಂದಿಗೆ, ಬಾನಿನೊಂದಿಗೆ ಮಾತನಾಡಬಲ್ಲದು. ಸಾಮಾಜಿಕ ವಾಸ್ತವಗಳಿಗೆ ಸ್ಪಂದಿಸಬಲ್ಲದು. ಅಂತರಂಗದ ಆಪ್ತವಾದ ಪಿಸುಮಾತುಗಳಿಗೆ, ಭಯಗಳಿಗೆ, ವಿಷಾದಗಳಿಗೆ, ಕನಸುಗಳಿಗೆ, ಈ ನೆಲದ ತಲ್ಲಣಗಳಿಗೆ, ಅತೀತದ ಹಂಬಲಗಳಿಗೆ, ತನ್ನ ವಿಶಿಷ್ಟವಾದ ರಚನಾಕೌಶಲ್ಯಗಳ ಮೂಲಕ ದನಿಯಾಗಬಲ್ಲದು.
ಇಲ್ಲಿ ಮುಂಬೆಳಗಿನ ಹೊಂಬಿಸಿಲಲ್ಲಿ ಹಚ್ಚಹಸುರಿನ ಮೇಲೆ ಮಿರುಮಿರುಗುವ ಇಬ್ಬನಿಗಳ ಚೆಲುವಿದೆ; ಹರಿದೋಡುವ ಹೊಳೆ – ಹಳ್ಳಗಳ ಲವಲವಿಕೆಯಿದೆ; ನೆಲದಾಳದಲ್ಲಿ ಬೇರನ್ನೂರಿ, ಮೇಲೆ ಕೊಂಬೆರೆಂಬೆಗಳನ್ನು ಚಾಚಿಕೊಂಡ ವೃಕ್ಷಕ್ಕೆ ಇರುವ ದೃಢತೆಯಿದೆ.
ಆಕಾಶಮಲ್ಲಿಗೆ : ಸವಿತಾ ನಾಗಭೂಷಣ, ೨೦೦೦
Leave A Comment