ಕಾರವಾರದ ಕರಾವಳೀ ಪರಿಸರದ ಕವಿ ಶ್ರೀ ವಿಷ್ಣುನಾಯ್ಕ ಅವರ ಈ ಒಂಬತ್ತನೆಯ ಕವನ ಸಂಗ್ರಹವು, ಕನಸುಗಳಿಲ್ಲದ ಆದರ್ಶಗಳಿಲ್ಲದ, ಮಹತ್ವಾಕಾಂಕ್ಷೆಯಿಲ್ಲದ ಮತ್ತು ಮಾನವೀಯ ಸಂಬಂಧಗಳು ವಿಚ್ಛಿದ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಇದುವರೆಗಿನ ತನ್ನ ಸಮಾಜಮುಖೀ ಮಾನವೀಯ ಕಾಳಜಿಗಳನ್ನು ದಟ್ಟವಾಗಿ ಉಳಿಸಿಕೊಳ್ಳುತ್ತ ಬೆಳಕಿನ ಕರೆಗೆ ಹಂಬಲಿಸುವ ಆಶಯಗಳ ಪ್ರತಿನಿಧಿಯಾಗಿದೆ.

ಇಂಥ ಒಂದು ಅಸ್ವಸ್ಥ ಜಗತ್ತಿನ ನಡುವೆ, ಬೆಳಕನ್ನು ಕಳೆದುಕೊಂಡ ನಕ್ಷತ್ರಗಳನ್ನು ಕುರಿತು, ಬೇರು ಸಡಿಲಾಗುತ್ತಿರುವ ಹಳೆಯ ಮರಗಳನ್ನು ಕುರಿತು, ರೆಕ್ಕೆ ಮುರಿದುಕೊಂಡ ಪ್ರೀತಿಯನ್ನು ಕುರಿತು, ಹೆದರಿದ ಕಣ್ಣುಗಳ ಹಿಂದಿರುವ ಆತಂಕಗಳನ್ನು ಕುರಿತು, ಹಂಗರಹಳ್ಳಿಯ ಸಂಕೋಲೆಗಳನ್ನು ಕುರಿತು, ಕಳೆದುಹೋಗುತ್ತಿರುವ ಜೀವನೋತ್ಸಾಹಗಳನ್ನು ಕುರಿತು, ಸ್ಪಂದಿಸುವ ವಿಷ್ಣುನಾಯ್ಕರ ಕಾವ್ಯ ನಮ್ಮ ವರ್ತಮಾನದ ಕಟು ವಾಸ್ತವಗಳಿಗೆ ಹಿಡಿದ ಕನ್ನಡಿಯಾಗಿದೆ.

ಆದರೆ ವಾಸ್ತವದ ಅರಿವು ಮತ್ತು ತಲ್ಲಣಗಳಷ್ಟರಲ್ಲೆ ನಿಲ್ಲುವುದು ಕವಿಯ ಕೆಲಸವಲ್ಲ; ಅವುಗಳನ್ನು ಎದುರಿಸುವ ಹಾಗೂ ದಾಟುವ ಮನಃಸ್ಥಿತಿಯೊಂದನ್ನು ನಿರ್ಮಾಣ ಮಾಡುವುದು ಕವಿಯ ಕೆಲಸ.  ವಿಷ್ಣುನಾಯ್ಕ ಅವರ ಕವಿತೆ ಈ ಜವಾಬ್ದಾರಿಯಿಂದ ಹೊರತಾಗಿಲ್ಲ.  ಹೀಗಾಗಿ ಇಲ್ಲಿ ವರ್ತಮಾನದ ಆರ್ತನಾದಗಳ ನಡುವೆಯೂ ಬೆಚ್ಚನೆಯ ಪ್ರೀತಿಗೆ ತುಡಿಯುವ ಹೃದಯವಿದೆ:  ಅಮಾವಾಸ್ಯೆಯ ಕತ್ತಲಿನಲ್ಲೂ ತಡವರಿಸದ ಹೆಜ್ಜೆಗಳಿವೆ; ಕಂಗೆಟ್ಟ ನಾಳೆಗಳನ್ನು ಹೊಸ ಭರವಸೆಗಳಲ್ಲಿ ಮೀಯಿಸುವ ಧೈರ್ಯವಿದೆ; ದೈನಂದಿನ ಸರಳ ಸಾಧಾರಣ ಸಂತೋಷಗಳಿಗೆ ವಿಮುಖವಾಗದ ಜೀವನ ಪ್ರೀತಿಯಿದೆ; ಕತ್ತಲೆಯ ಕೈಗಳನ್ನು ಕಾಲದ ಕಟಕಟೆಯೊಳಗೆ ನಿಲ್ಲಿಸಿ ವಿಚಾರಣೆಗೆ ಗುರಿಪಡಿಸುವ ಕೆಚ್ಚಿದೆ.  ಇದು ವಿಷ್ಣು ನಾಯ್ಕ ಅವರ ಕವಿತೆಯೊಳಗೆ ಗೃಹೀತವಾದ ಕತ್ತಲೆ – ಬೆಳಕುಗಳ ಜಗತ್ತು.

ಬೆಳಕಿನ ಕರೆ : ವಿಷ್ಣು ನಾಯ್ಕ : ೨೦೦೨