ಡುಂಡಿರಾಜ್ ಅವರ ಕವಿತೆ ಚಿರಪರಿಚಿತವಾದದ್ದನ್ನು ಅಪರಿಚಿತ ವಿನೂತನವೆಂಬಂತೆ ಕಟ್ಟಿಕೊಡುವ ಸ್ವರೂಪದ್ದಲ್ಲ; ಅದರ ಬದಲು ನಮಗೆ ಪರಿಚಿತವಾದ ಜಗತ್ತನ್ನು ಅದರ ಅನೇಕ ವೈವಿಧ್ಯಗಳೊಂದಿಗೆ ನಮಗೆ ಇನ್ನೂ ಹತ್ತಿರಕ್ಕೆ ತಂದುಕೊಡುವ ಲವಲವಿಕೆಯ ಕವಿತೆ.

ಡುಂಡಿರಾಜ್ ಅವರಿಗೆ ತಮ್ಮ ಮಿತಿಗಳು ಗೊತ್ತು; ಸಾಮರ್ಥ್ಯವೂ ಗೊತ್ತು.  ಈ ಕಾರಣದಿಂದಲೇ ಅವರಿಗೆ ಕಳೆದ ಒಂದು ದಶಕದ ಕಾಲಮಾನದಲ್ಲಿ ತಮ್ಮ ಕವಿತೆಯನ್ನು ಹೊಳಪುಗುಂದದೆ ನಿರಂತರವಾಗಿ ಉಳಿಸಿಕೊಂಡು ಬರಲು ಸಾಧ್ಯವಾಗಿದೆ.  ಬದುಕಿನ ಆಳ-ನಿರಾಳಗಳನ್ನು, ಜತೆಗೆ ಕೂತು ಮಾತನಾಡಿದಂತಿರುವ ಸಹಜ ಉಕ್ತಿ ವೈಚಿತ್ರ ಗಳ ಮೂಲಕ ತೆರೆದುತೋರುವ ಡುಂಡಿರಾಜ್ ಅವರ ಕವಿತೆ, ಭಾರವಾಗದೆ, ದೂರವಾಗದೆ ಓದುಗರೊಂದಿಗೆ ಸಂವಾದವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ನನ್ನ ಕವಿತೆ ನನ್ನ ಹಾಗೆ, ಎಚ್. ಡುಂಡಿರಾಜ್, ೧೯೯೨