ಇಡೀ ಆಧುನಿಕ ಕಾವ್ಯಸಂದರ್ಭದಲ್ಲಿ ಚೆನ್ನವೀರ ಕಣವಿಯವರಷ್ಟು ವಿಪುಲ ಸಂಖ್ಯೆಯ ಸಾನೆಟ್ಟುಗಳನ್ನು ಬರೆದ ಕವಿ ಬೇರೊಬ್ಬರಿಲ್ಲ.  ಬದುಕಿನ ಅನೇಕ ರಸಕ್ಷಣಗಳನ್ನು ಪರಿಭಾವನೆಯ ಧ್ಯಾನಕೇಂದ್ರಕ್ಕೆ ತಂದುಕೊಂಡು, ಅಲ್ಲಿ ನಿಷ್ಪನ್ನವಾಗುವ ಭಾವಾನುಭವಗಳನ್ನು ತಕ್ಕ ಎಚ್ಚರದ ಅಭಿವ್ಯಕ್ತಿಯ ರಚನಾಕೌಶಲದೊಳಗೆ ಮೂರ್ತೀಕರಿಸಿದಂತಿರುವ ಇಲ್ಲಿನ ಸಾನೆಟ್ಟುಗಳ ಸಾವಧಾನಶಿಲ್ಪ ಯಾರನ್ನೂ ಬೆರಗುಗೊಳಿಸುತ್ತದೆ.  ಚಳುವಳಿಗಳ ಮೇಲೆ ಚಳುವಳಿಗಳು ಬಂದುಹೋದ ಕಳೆದ ಐದಾರು ದಶಕಗಳ ಕಾಲಮಾನದ ಉದ್ದಕ್ಕೂ ಸಾನೆಟ್ಟುಗಳನ್ನು ಬರೆಯುತ್ತ ಬಂದ ಕಣವಿಯವರು, ಯಾವ ಕಾರಣಕ್ಕೂ ಸಾನೆಟ್ಟಿನ ಮೂಲ ಆಕೃತಿಯನ್ನು ಸಡಿಲಗೊಳಿಸದೆ, ಸಮಸ್ತ ಲಕ್ಷಣ ಸಮನ್ವಿತವಾಗಿ ಅದನ್ನು ಹರಳುಗೊಳಿಸುವ ಕಲೆಗಾರಿಕೆಯನ್ನು ಕಾಯ್ದುಕೊಂಡು ಬಂದದ್ದು ಒಂದು ವಿಶೇಷದ ಸಂಗತಿಯಾಗಿದೆ.

ಕಣವಿಯವರ ಈ ‘ಸುನೀತ ಸಂಪದ’ವನ್ನು ಓದುವುದೆಂದರೆ, ಶ್ರೇಷ್ಠ ಚಿತ್ರ ಕಲಾವಿದನ ಕಲಾಶಾಲೆಯೊಂದನ್ನು ಪ್ರವೇಶಿಸಿದಂತೆ!  ಭಾಷೆಯನ್ನು ಬಣ್ಣದಂತೆ ಬಳಸಿ ಕಣವಿಯವರ ಪ್ರತಿಭೆ ರೇಖಿಸಿರುವ ಒಂದೊಂದು ಸುನೀತ ಚಿತ್ರವೂ, ನಿಸರ್ಗಪರವಾದ ಅವರ ಮುಗಿಯದ ಬೆರಗನ್ನೂ, ಲೋಕವಾಸ್ತವಗಳ ಬಗೆಗೆ ಅವರು ಸ್ಪಂದಿಸುವ ಪರಿಗಳನ್ನೂ, ಗಂಭೀರವಾದ ಚಿಂತನಶೀಲತೆಯನ್ನೂ, ಬಹುಸಂಖ್ಯೆಯ ವ್ಯಕ್ತಿ ಚಿತ್ರಗಳ ಮೂಲಮಾನದಲ್ಲಿ ಸಾಧಿಸುವ ಮಾನವೀಯ ಬಾಂಧವ್ಯಗಳ ವಿಸ್ತರಣೆಯನ್ನೂ ಮತ್ತು ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಅವರು ನಡೆಯಿಸುವ ಅನುಸಂಧಾನವನ್ನೂ ಪ್ರಕಟಿಸುತ್ತದೆ.

ಸುನೀತ ಸಂಪದ : ಚೆನ್ನವೀರ ಕಣವಿ, ೨೦೦೨