ಭಾಗವತ : ಅಣ್ಣತಮ್ಮರು ಸೇರಿ ಗರ್ವಿ ಗಮ್ಮತ್ತಿನಲ್ಲಿ
ಸಂಚ ಮಾಡಿ ಪೂರಾ
ಶಿವಶಿವ | ಸ್ವಂತ ತಮ್ಮನ ಮ್ಯಾಲಾ
ಹರಹರ | ಹಿರಿದಾರ ಹತ್ಯಾರಾ
ಏನಮಾಡಿದಾ, ಬೋಳೇ ಶಂಕರಾ
ಅಂದಾನ ಹರೋಹರಾ
ಬರಿಗೈಲಿ ಮಾಡ್ಯಾನ ನಮಸ್ಕಾರ ||
ದಂಡು ದಳಾಯಿ ಬಂದು
ಹಸಿರ ತುಳಿದರೋ ಹಾಳ ಮಾಡಿ ಪೂರಾ
ಎದ್ದಾವ | ಮುಗಿಲೆತ್ತರ ಧೂಳಾ
ಜನಗಳು | ಆದಾರ ಬೇಖಬರಾ
ಏನ ಮಾಡಿದಾ, ಬೋಳೇಶಂಕರಾ
ಅಂದಾನ ಹರೋಹರಾ
ಬರಿಗೈಲಿ ಮಾಡ್ಯಾನ ನಮಸ್ಕಾರ.

( ಹಾಡು ಮುಗಿಯುತ್ತಿರುವಂತೆ ಸೈನಿಕರು ಈಗ ಸೇನಾಪತಿಯ ವೇಷದಲ್ಲಿರುವ ಸೈತಾನನ ನೇತೃತ್ವದಲ್ಲಿ ಬರುತ್ತಾರೆ.)

ಸೈತಾನ್ : ನಿಂತುಕೊ.
(ಸೈನಿಕರು ನಿಲ್ಲುವರು.)

ನೀವು ಹೋಗಿ ಪ್ರತಿಭಟನೆ ಇದೆಯೋ, ನೋಡಿ. ಬೆಪ್ತಕ್ಕಡಿಯ ಹಳ್ಳಿಗಳಲ್ಲಿ ಇಲ್ಲದ ಪ್ರತಿಭಟನೆ ರಜಧಾನಿಯಲ್ಲಿರಬಹುದು. ಅಲ್ಲಿಲ್ಲದ ಸೈನ್ಯ ಇಲ್ಲಿರಬಹುದು. ಸುಳಿವು ಸಿಕ್ಕ ತಕ್ಷಣವೇ ನಮಗೆ ತಿಳಿಸಿ, ಹೋಗಿ. ಉಳಿದವರು ಕೋವಿಯ ಹಾಡು ಹೇಳಿ.

ಸೈನಿಕರು : ವಿಜಯಲಕ್ಷ್ಮಿ ಒಲಿದು ಬರಲಿ ನಮ್ಮ ಕೋವಿಗೆ
ನುಗ್ಗಿ ನಡೆವ ಒದ್ದುನಡೆವ ಕುಣಿವ ಕೋವಿಗೆ….

ಸೈನಿಕ : (ಬಂದು ನಮಸ್ಕರಿಸಿ) ಸ್ವಾಮೀ ನಾವಿಲ್ಲಿ ಯುದ್ಧ ಮಾಡುವುದು ಸಾಧ್ಯವೇ ಇಲ್ಲ. ಊರಲ್ಲೆಲ್ಲೂ ಸೈನಿಕರ ಸುಳಿವಿಲ್ಲ. ಮಾತ್ರವಲ್ಲ, ಜನ ನಮ್ಮನ್ನ ಹಳೇ ಸ್ನೇಹಿತರಂತೆ ಪ್ರೀತಿಯಿಂದ ನೋಡ್ತಾರೆ. ಊಟ ತಿಂಡಿ ಕೊಡ್ತಾರೆ. ಹಿಂದೆ ಬೋಳೇಶಂಕರನ ಮೆರವಣಿಗೆಯಲ್ಲಿದ್ದವರು ನೀವಲ್ಲವೇ ನೀವಲ್ಲವೇ? ಅಂತ ಗುರುತು ಹಿಡಿಯುತ್ತಾರೆ. ಇಲ್ಲಿ ಯುದ್ಧ ಮಾಡುವುದು ಸಾಧ್ಯವಿಲ್ಲ ಸ್ವಾಮೀ.

ಸೈತಾನ : ಇವು ಸೈನಿಕನಾಡುವ ಮಾತುಗಳೇನೋ ಬೇಕೂಫಾ? ಕೈಯಲ್ಲಿ ಬಂದೂಕಿದ್ದರೂ ಒಂದು ಕ್ಷುದ್ರ ಜಗಳ ಕೂಡ ಆಡಿ ಬರದವನು ಸೈನಿಕನೆ?

ಸೈನಿಕ : ನಾವು ಜಗಳದ ಭಾಷೆ ಆಡಿದರೆ ಅವರು ಸ್ನೇಹದ ಭಾಷೆ ಆಡುತ್ತಾರೆ. ನಿಜ ಹೇಳುತ್ತೇನೆ. ಇರುವೆಗೆ ಸಿಟ್ಟಿರಬಹುದು, ಈ ಜನಗಳಲ್ಲಿಲ್ಲ ಸ್ವಾಮೀ.

ಸೈತಾನ : ಅವರ ಮನೆಗಳನ್ನ ಲೂಟಿ ಮಾಡಬೇಕಿತ್ತು.

ಸೈನಿಕ : ಏನು ಕೇಳಿದರೂ ಅವರಾಗೇ ಕೊಡುತ್ತಾರೆ. ನಿರ್ಲಕ್ಷದಿಂದ ಏನನ್ನಾದರೂ ಹಾಳು ಮಾಡಿದರೆ ಒಳ್ಳೆಯ ವಸ್ತುಗಳನ್ನೇಕೆ ಹಾಳುಮಾಡುತ್ತೀರಿ, ನೀವೇ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಮಾತ್ರವಲ್ಲ, ನಿಮ್ಮ ಸ್ವಂತ ದೇಶದಲ್ಲಿ ಜೀವನ ಸಡೆಸೋದು ಕಷ್ಟವಾಗಿದ್ದರೆ ನಮ್ಮ ಜೊತೆಯಲ್ಲೇ ಇದ್ದುಬಿಡಿ ಅನ್ನುತ್ತಾರೆ. ಇಂಥವರ ಜೊತೆ….

ಸೈತಾನ : ಮೂರ್ಖ, ಈ ಜನರ ಒಳ್ಳೆಯತನ ನಿಮ್ಮ ಶೌರ್ಯವನ್ನ ಹೀರದಿರಲಿ. ಅವರನ್ನ ಎಲ್ಲ ಅನುಕೂಲಗಳಿಂದ ದೂರ ಇಡಿ. ಮನೆ ಜನ ದನಗಳಿಗೆ ಬೆಂಕಿ ಹಚ್ಚಿ. ಶಿವಪುರಿಯ ಸತ್ಕೀರ್ತಿಯನ್ನು ಕದಿಯಲಾಗದಿದ್ದರೆ ಕೊನೇಪಕ್ಷ ಅದರ ಮುಖಕ್ಕೆ ಮಸಿಯಾದರು ಬಳಿದು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ.

ಸೈನಿಕ : ಇದು ಸಾಧ್ಯವಾಗದ ಮಾತು ಸ್ವಾಮೀ.

ಸೈತಾನ : ನನ್ನ ಮಾತು ಕೇಳದವರನ್ನು ಸುಡುತ್ತೇನೆ. ಹೂ ತೊಲಗಿ ಈಗಲೇ….
(ಸೈನಿಕರು, ಅವರ ಹಿಂದಿನಿಂದ ಸೈತಾನ ಹೋಗುವರು)