(ಬೋಳೇಶಂಕರ ಮತ್ತು ಜನ)

ಒಬ್ಬ : (ಓಡಿಬಂದುಸ್ವಾಮೀ ನಮ್ಮ ತಪ್ಪಿಲ್ಲದಿದ್ದರೂ ನಿಮ್ಮ ಅಣ್ಣನ ಸೈನಿಕರು ಬಂದು ನಮ್ಮ ಮನೆಗಳಿಗೆ ಬೆಂಕಿಯಿಡುತ್ತಿದ್ದಾರೆ.

ಇನ್ನೊಬ್ಬ : (ಓಡಿಬಂದುಸ್ವಾಮಿ ನಿಮಗೆ ಬೇಕಿದ್ದರೆ ತಗೊಂಡು ಹೋಗಿರೆಂದರೂ ಕೇಳುತ್ತಿಲ್ಲ ಸೈನಿಕರು ದನಗಳನ್ನು ಕಡಿದು ಕಡಿದು ಚೆಲ್ಲುತ್ತಿದ್ದಾರೆ.

ಮತ್ತೊಬ್ಬ : (ಓಡಿಬಂದು) ಸ್ವಾಮೀ ಸೈನಿಕರು ನನ್ನ ತೋಟಕ್ಕೆ ಬಂದು ಬೇಕಾದಷ್ಟು ಎಳ ನೀರು ಕುಡಿದರು. ಬೇಕಿದ್ದರೆ ಇನ್ನೂ ಕುಡಿಯಿರೆಂದೆ. ಸಾಕಾದಷ್ಟು ಕುಡಿದ ಮೇಲೆ ಮರಗಳನ್ನು ಹಾಗೆ ಹಾಗೆ ಕಡಿದು ಉರುಳಿಸುತ್ತಿದ್ದಾರೆ. ನನ್ನ ಹಸಿರು ಗದ್ದೆಗೆ ಬೆಂಕಿಯಿಟ್ಟಿದ್ದಾರೆ.

ಮಗದೊಬ್ಬ : (ಓಡಿಬಂದು) ನಿಮಗೇನು ಬೇಕು ಹೇಳಿ ಎಂದೆವು ಅಥವಾ ಹೆಳದೆಯೇ ತೆಗೆದುಕೊಂಡು ಹೋದರೂ ಸರಿಯೇ ಅಂದೆವು. ಅಥವಾ ನಿಮ್ಮ ಕೋಪಕ್ಕೆ ಕಾರಣವಾದರೂ ಏನೆಂದು ಕೇಳಿದೆವು ಅಥವಾ ನಾವೇನು ಮಾಡಿದರೆ ನಿಮಗೆ ಸಮಾಧಾನವಾಗುತ್ತದೆ-ಅದನ್ನಾದರೂ ಹೇಳಿ ಎಂದೆವು. “ಗೊತ್ತಿದ್ದರೆ ಹೇಳುತ್ತಿರಲಿಲ್ಲವೇನ್ರಯ್ಯಾ” ಅಂತ ಹೇಳಿ ಪುನಃ ಅದೇ ಕಾಯಕ ಸುರು ಮಾಡಿದರು. ಈಗ ಕೂದಲಿಗೊಂದು ಗಾದೆ ಬಲ್ಲ ನೀವೇ ನಮಗೆ ದಾರಿತೋರಬೇಕು.

ಬೋಳೇಶಂಕರ : ಆಗಲೇಳಿ. ಅವರಿಗೆ ಆತ್ಮ ಇಲ್ಲ ಅಂತ ಖಾತ್ರಿಯಾದ ಮೇಲೆ ನಮ್ಮ ಆತ್ಮಗಳನ್ನಾದರೂ ನಾವು ಉಳಿಸಿಕೊಳ್ಳಬೇಕಲ್ಲ.

ಮತ್ತೊಬ್ಬ : ಅಗೋ ಸೈನಿಕರು ಬಂದರು.

ಬೋಳೇಶಂಕರ : ಬರಲೇಳಿ, ಈ ಸಿಪಾಯಿಗಳು ಬಡಪಾಯಿಗಳು, ಇವರಿಗ್ಯಾಕೆ ಹೆದರುತ್ತೀರಿ? (ಜವಾನರು ಬೋಳೇಶಂಕರ ಹಾಗೂ ಅವನ ಜನರನ್ನ ಮಧ್ಯೆ ಹಾಕಿ ಸುತ್ತುವರೆಯುವರು. ತಮ್ಮ ಬಂದೂಕುಗಳನ್ನು ಜನ ಹಾಗೂ ಬೋಳೇಶಂಕರನಿಗೆ ಗುರಿ ಹಿಡಿಯುವರು)

ಆಯ್ತು ಸ್ವಾಮೀ, ನಿಮಗೇನು ಬೇಕು?

ಸೈನಿಕ : ನಿನ್ನ ಹಾಗೂ ನಿನ್ನ ಜನರ ರಕ್ತ.

ಬೋಳೇಶಂಕರ : ಆಗಲೇಳಿ.
ಕಲಕಚಿ ಕಲಕಚಿ ರಿಗಚಿ ಲಂಡೋ ಬರಾಯಾ
ಸಾಲಕುದರಿ ಹನುಮಂತರಾಯಾ ಬಚ್ಚಾಬೋಲ್
ಜವಾನರೆಲ್ಲಾ ಹುಲ್ಲೆಸಳಾಗಿ ನಿಲ್ಲ ಬೇಕಣ್ಣಾ
ನಿಲ್ಲದಿದ್ದರೆ ಎಲ್ಲರ ಶಾಪ ನಿನ್ನ ಮೇಲಣ್ಣಾ

(ಜವಾನರೆಲ್ಲ ಹುಲ್ಲೆಸಳಾಗಿ ಬೀಳುತ್ತಾರೆ. ಸೈತಾನ ಇದನ್ನು ನೋಡಲಾರದೆ ಓಡುತ್ತಾನೆ, ಜನ ಆಶ್ಚರ್ಯದಿಂದ ಹುಲ್ಲೆಸಳನ್ನ ಹಿಡಿದು ನೋಯಿಸ್ತ ಆನಂದಪಡುತ್ತಾರೆ.) ಯಾರು ಹುಲ್ಲೆಸಳಾಗೋದಿಲ್ಲವೋ, ಅವರನ್ನ ಶಿವನ ಹೆಸರಿನಲ್ಲಿ ಕರೆತಂದು ಉಪಚಾರ ಮಾಡಿ.