ಕೋಡಂಗಿ : ನಿನ್ನ ಕಿವಿಯಾಗೊಂದು ತುರ್ತ ಮಾತು ಹೇಳಿರತೀನಿ
ಏನ ಮಾತು ತೆಗೆ ಅಂತಾ ಅನಬ್ಯಾಡಣ್ಣಾ
ಅಂದರೂ ಅನವೋಲ್ಯಾಕ ಕಿವಿಬಾಗಲಾ ಕಾಯುತಿರಲಿ
ಬಿಟ್ಟಬಿಡು ಅಲ್ಲೇ ಒಂದು ಅರ್ಧಾತಾಸ
ಜಾಸ್ತಿ ಹೊತ್ತು ಬಿಟ್ಟರಬ್ಯಾಡ ತೂಕಡಿಸ್ಯಾವು
ಕಿವಿಯಾಗೇನೆ
ಹೋಗಿ ಸ್ವಲ್ಪ ಮಾತಾಡಿಸಣ್ಣ ಏನ ಬಂದಿರಂತ
ಅವು ನಿನಗೆ ಹೇಳೋದಕ್ಕೆ ಎನೋ ಸುದ್ದಿತಂದಾವಣ್ಣ
ಕೇಳಿ ತಿಳಕೊ ಏನ ಸುದ್ದಿ ಹೇಳ್ರಿ ನಮಗಂತ.

ಕಚ್ಚುವಂಥಾ ಅಧಿಕಾರ ನಾಯಿಯಂಥಾ ನಾಯಿಗಿಲ್ಲ
ಮನಶೇರಿಗಂತು ಸಾಧ್ಯವಿಲ್ಲ ತಿಳಕೊಳ್ಳಣ್ಣಾ
ಕಸಿಯೋವಂಥಾ ಅಧಿಕಾರ ದೇವರಂಥ ದೇವರಿಗಿಲ್ಲ
ಕಳೆದುಕೊಳ್ಳೋ ಅಧಿಕಾರ ಮಾತ್ರ ನಮಗೇ ಐತಣ್ಣಾ.

ಕೋಡಂಗಿ : ಹೋಯ್ ಭಾಗವತರೇ

ಭಾಗವತ : ಯಾಕಯ್ಯಾ ಕೋಡಂಗೀ

ಕೋಡಂಗಿ : ಗೊತ್ತಾಯ್ತಾ ವಿಷಯ?

ಭಾಗವತ : ಏನಪ್ಪಾ?

ಕೋಡಂಗಿ : ನನಗೆ ಅದು ಬಂದು ಬಿಟ್ಟಿತಲ್ಲ.

ಭಾಗವತ : ಏನದು ?

ಕೋಡಂಗಿ : ಅದೇ ಬುದ್ಧಿ.

ಭಾಗವತ : ಯಾವಾಗ ಬಂತು?

ಕೋಡಂಗಿ : ಆಗಲೇ ಸೈತಾನನ್ನ ನೋಡಿದ ಮೇಲೆ.

ಭಾಗವತ : ಸೈತಾನನ್ನ ನೋಡಿದರೆ ಭಯ ಬರತ್ತದೆ; ನಿನಗೆ ಬುದ್ಧಿ ಬಂದಿದೆಯಲ್ಲಯ್ಯಾ.

ಕೋಡಂಗಿ : ನನಗೆ ಬಂದದ್ದೂ ಭಯವೆ. ಆಮೇಲೆ ಅದನ್ನ ಬುದ್ಧಿಯಾಗಿ ಪರಿವರ್ತಿಸಿಕೊಂಡೆ.

ಭಾಗವತ : ಭೇಷ್ ಒಳ್ಳೆ ಕೆಲಸ ಮಾಡಿದೆ. ಹಾಗಿದ್ದರೆ ನನಗಷ್ಟು ಬುದ್ಧಿ ಹೇಳಪ್ಪಾ.

ಕೋಡಂಗಿ : ಕಳ್ಳರನ್ನ ಕಂಡಾಗ ಕೊನೇಪಕ್ಷ ಬೊರಳಬೇಕು.

ಭಾಗವತ : ಸರಿಯೇ.

ಕೋಡಂಗಿ : ವೊವೊವೊವೊ

ಭಾಗವತ : ಯಾಕಯ್ಯಾ ಬೊಗಳಿದೆ?

ಕೋಡಂಗಿ : ಕಳ್ಳರು ಬಂದಿದಾರೆ ಸ್ವಾಮೀ

ಭಾಗವತ : ಯಾರಂತೆ ಹೋಗಿ ವಿಚಾರಿಸಿಕೊಂಡು ಬಾ.

ಕೋಡಂಗಿ : (ಹೋಗಿ ನೋಡಿಬಂದು) ಅದೇ ಆ ಜುಜುಬಿ ಸುಲ್ತಾನ ಅಲ್ಲ ಸೈತಾನ

ಭಾಗವತ : ಯಾಕ್ಬಂದಾನಂತೆ?
(ಹೋಗಿ ಬಂದು) ಅವನಿಗೆ ಹಸಿವಂತೆ. ಸೈತಾನನಾದರೂ ವರ್ಷದಲ್ಲಿ ಒಂದು ದಿವಸ ನಮ್ಮ ನಿಮ್ಮ ಹಾಗೆ ಊಟ ಮಾಡಬೇಕಂತೆ. ಅವನ ದುರ್ದೈವಕ್ಕೆ ಆ ಹಸಿವೆಯ ದಿನ ಇವತ್ತೇ ಅಂತ.

ಭಾಗವತ : ಏನು ಊಟ ಮಾಡ್ತಾನಂತೆ?

ಕೋಡಂಗಿ : ಅದನ್ನೇ ಕೇಳಿದೆ; ದೆವ್ವ ಭೂತ, ಗಾಳಿ, ಪಿಶಾಚಿಗಳ, ಗುರು ಅಲ್ಲವ? ಅದಕ್ಕೆ ಸೆಗಣಿ ತಿಂತೀರಾ ಸ್ವಾಮಿ ಅಂದೆ. ಇಲ್ಲವಂತೆ, ಅನ್ನವೇ ಆಗಬೇಕಂತೆ.

ಭಾಗವತ : ಅದಕ್ಕೇನಂತೆ ಕೊಡೋಣ, ಕರಕೊಂಬಾರಯ್ಯಾ.
(ಕೋಡಂಗಿ ಹೋಗುವನು. ಸೈತಾನ ಈಗ ಬೇರೆ ವೇಷದಲ್ಲಿ ಬರುವನು. ಜನರೂ ಬುರವರು.)

ಸೈತಾನ : ನನಗೀಗೆ ಹಸಿವೆಯಾಗಿದೆ. ಅನ್ನ ಕೊಡಿ. ಪುಕ್ಕಟೆ ಬೇಡ; ಚಿನ್ನದ ನಾಣ್ಯ ಕೊಡುತ್ತೇನೆ.

ಒಬ್ಬ : ಚಿನ್ನ ತಗೋಂಡು ಅನ್ನ ಕೊಡೋದು ಹ್ಯಾಗೆ ಸಾಧ್ಯ? ತೋರಿಸು ನೋಡೋಣ. (ತೋರಿಸುವನು)

ಇನ್ನೊಬ್ಬ : ನಮ್ಮ ರಾಜರು ಮಕ್ಕಳ ಮನರಂಜನೆಗೆ ಆಗಾಗ ಧಾನ್ಯದಿಂದ ಮಡುತ್ತಾರಲ್ಲ, ಅವೇ ಅಲ್ಲವೇ ಇವು?

ಒಬ್ಬ : ಹೌದು, ನನ್ನ ಮನೇಲಿ ಮಕ್ಕಳು ಆಡಿಬಿಟ್ಟ ನಾಣ್ಯಗಳೇ ಬೊಗಸೆ ತುಂಬಾ ಇವೆ.

ಇನ್ನೊಬ್ಬ : ಅವನ್ನ ಇಟ್ಕೊಂಡು ಆಡೋದಕ್ಕೆ ನನಗೆ ಸಣ್ಮಕ್ಕಳೇ ಇಲ್ಲ. ನನ್ನ ಹತ್ತಿರ ಆಗಲೇ ಇಂಥ ನಾಣ್ಯಗಳು ಮೂರಿವೆ. ಹಗಂತ ನೀನು ನಿರಾಸೆ ಹೊಂದುವುದು ಬೇಡ. ದೇವರ ಹೆಸರಲ್ಲಿ ಒಂದು ಹೊತ್ತು ಊಟ ಹಕ್ತೇನೆ ಬಾ.

ಸೈತಾನ : ಥೂ ನನಗೆಯಾರದೋ ಹೆಸರಿನಲ್ಲಿ ಊಟ ಬೇಡ್ರಯ್ಯಾ.

ಒಬ್ಬ : ಪ್ರತಿಯಾಗಿ ಏನನ್ನಾದರೂ ತಗೊಂಡು ಬಾ, ಅದಾಗದಿದ್ದಲ್ಲಿ ಒಪ್ಪತ್ತು  ಕೆಲಸ ಮಾಡಿ ಊಟ ಮಡು.

ಸೈತಾನ : ನೀವು ಕೇಳಿದಷ್ಟು ಚಿನ್ನದ ನಾಣ್ಯ ಕೊಡುತ್ತೇನೆ, ಸಾಲದೆ?

ಇನ್ನೊಬ್ಬ : ನಾಣ್ಯ ತಗೊಂಡು ನಾವು ಮಾಡಬೇಕಾದ್ದೇನಿದೆ? ನಮ್ಮಲ್ಲಿ ತೆರಿಗೆಗಳಿಲ್ಲ. ಕೆಲಸದಿಂದ ಕೆಲಸ, ಅನುಕೂಲಗಳನ್ನ ವಿನಿಮಯ ಮಾಡಿಕೊಳ್ತೇವೆ. ಉಪಯೋಗವಿಲ್ಲದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಮಾಡೋದೇನು?

ಸೈತಾನ : ದಯವಿಟ್ಟು ಒಂದು ಉಪಕಾರ ಮಾಡ್ತೀರಾ?

ಒಬ್ಬ : ಖಂಡಿತ, ಅದೇನು ಹೇಳಪ್ಪಾ.

ಸೈತಾನ : ನನ್ನ ಪಾಡಿಗೆ ನನ್ನ ಬಿಟ್ಟು ಹೊರಟ್ಹೋಗ್ತೀರಾ?

ಇನ್ನೊಬ್ಬ :  ಹೋಗೋಣಂತೆ, ಅದೇನು ಅಸಾಧ್ಯದ ಕೆಲಸ ಅಲ್ಲ. ಆದರೆ ನೀನಾದರೂ ಯಾಕೆ ಹಸಿದಿರಬೇಕು?

ಸೈತಾನ : ನನ್ನನ್ನು ಸಾಯೋದಕ್ಕಾದರೂ ಬಿಡರಯ್ಯಾ.

ಇನ್ನೊಬ್ಬ :  ಎಲ್ಲಾದರೂ ಉಂಟೆ? ನೋಡಯ್ಯಾ, ಬದುಕಿನಲ್ಲಿ ಸಾಯೋದೇನು ಹೊಸದೆ? ಹಗೆ ನೋಡಿದರೆ ಬದುಕೂ ಹೊಸದಲ್ಲ. ಎರಡರಲ್ಲಿ ಯಾವುದನ್ನ ಮಾಡಿದರೂ ಊಟ ಮಾಡಿದ ಮೇಲೆ ಮಾಡಬಹುದಲ್ಲ. ನಮ್ಮಲ್ಲಾದರು ಊಟ ಮಾಡು, ಇಲ್ಲವೆ ಬೋಳೇಶಂಕರ ರಾಜರಲ್ಲಾದರೂ ಊಟ ಮಾಡು.

ಸೈತಾನ : ನೀವು ಹೀಗೇ ಮಾತಾಡ್ತಿದ್ದರೆ ನಾನು ಸತ್ತು ಹೋಗ್ತೇನೆ.

ಒಬ್ಬ : ಮಾತಾಡದಿದ್ದರೆ ಬದುಕಿರತ್ತೀಯಪ್ಪ? ಹಾಗೇ ಆಗಲೇಳು, ಮಾತಾಡೋದಿಲ್ಲ.

ಸೈತಾನ : ನೀವಿಲ್ಲೇ ಕೂತಿದ್ರೆ ಸಾಯ್ತೀನಿ.

ಇನ್ನೊಬ್ಬ :  ಆಗಲೇಳು, ನಾವು ಹೊರಟೋಗತೀವಿ, ಆದರೆ ಸಾಯಬೇಡ ಅಷ್ಟೆ. (ಒಬ್ಬನಿಗೆ) ಬಾರಯ್ಯಾ ಮಹಾರಾಜರಲ್ಲಿಗೆ ಹೋಗಿ ಇವನ ವಿಷಯ ಹೇಳೋಣ.