(ಅರಮನೆ. ಬೋಳೇಶಂಕರ, ರಾಣಿ ಊಟದ ಪಂಕ್ತಿಯಲ್ಲಿ ಕೂತಜನ)

ಒಬ್ಬ : (ಬಂದು) ಸ್ವಾಮೀ ನಾವೇನು ಮಾಡಬೇಕೋ ತಿಳಿಯುತ್ತಿಲ್ಲ. ಅವನ್ಯಾವನ್ನೋ ದೊಡ್ಡಮನುಷ್ಯನೇ ಇರಬೇಕು. ಚೆನ್ನಾಗಿ ಉಂಡು ತಿಂದು ಕುಡಿದು ಒಳ್ಳೆ ಬಟ್ಟೆಬರೆಯಲ್ಲಿ ಇರಬೇಕಂತ ಬಯಸುತ್ತಾನೆ. ಆದರೆ ಕೆಲಸ ಮಾಡೋದಿಲ್ಲ. ದೇವರ ಹೆಸರಿನಲ್ಲಿ ಊಟ ಮಾಡೋದಕ್ಕೂ ನಿರಾಕರಿಸಿದ ಪುಕ್ಕಟೆ ಬೇಡ, ಪ್ರತಿಯಾಗಿ ಚಿನ್ನಕೊಡ್ತೇನೆ, ಅನ್ನ ಕೊಡಿ ಅಂತಾನೆ. ನಮ್ಮ ಮಕ್ಕಳ ಹತ್ತಿರ ನೀವು ಧಾನ್ಯದಿಂದ ಮಾಕೊಟ್ಟ ಚಿನ್ನದ ಚೂರುಗಳೇ ಬೇಕಾದಷ್ಟಿವೆ. ಇವನ ಚಿನ್ ತಗೊಂಡೇನು ಮಾಡೋಣ? ಆದರೆ ಹೀಗೇ ಬಿಟ್ಟರೆ ಆತ ಹಸಿವೆಯಿಂದ ಸಾಯೋದಂತೂ ನಿಶ್ಚಿತ.

ಬೋಳೇಶಂಕರ : ಆಗಲೇಳಿ, ನಾವು ಅವನಿಗೆ ಅನ್ನ ಹಾಕಲೇಬೇಕು.

ಇನ್ನೊಬ್ಬ : ಸಾಧ್ಯ, ಅಗೋ ಕೋಡಂಗಿ ಅವನನ್ನ ನಿಮ್ಮಲ್ಲಿಗೇ ಕರೆತರುತ್ತಿದ್ದಾನೆ.
(ಸೈತಾನ ಕೋಡಂಗಿಯ ಜೊತೆ ಬರುತ್ತಾನೆ)

ಬೋಳೇಶಂಕರ : ನೋಡಣ್ಣಾ, ನೀನು ಯಾವುದೇ ಮುಜಗರ ಇಲ್ಲದೆ ನಮ್ಮ ಮನೆಯಲ್ಲಿ ಊಟ ಮಾಡಬಹುದು. ಕೋಡಂಗಿ, ಕರೆದುಕೊಂಡು ಹೋಗಿ ಪಂಕ್ತಿಯಲ್ಲಿ ಕೂರಿಸು.
(ಕೋಡಂಗಿ ಸೈತಾನನನ್ನು ಊಟದ ಪಂಕ್ತಿಯಲ್ಲಿ ಕೂರಿಸುವನು. ರಾಣಿ ಊಟ ಬಡಿಸುತ್ತ ಬರುವಳು. ಸೈತಾನ ಬಂದೊಡನೆ ನಿಲ್ಲುವಳು.)

ರಾಜಕುಮಾರಿ : ಅಯ್ಯಾ ಎಲ್ಲಿ ನಿನ್ನ ಕೈತೋರಿಸು, ನೋಡೋಣ.
(ಸೈತಾನ ಎರಡು ಕೈ ತೋರಿಸುವನು)
ತಪ್ಪು ತಿಳೀಬೇಡಪ್ಪ. ಸ್ವಲ್ಪ ನಿಧಾನಿಸಿ ಆಮೇಲಿನ ಪಂಕ್ತಿಯಲ್ಲಿ ಕೂರು. ಈ ಜನ ಊಟ ಮಾಡಿದಮೇಲೆ ನಿನ್ನ ಸರದಿ.

ಬೋಳೇಶಂಕರ : ಯಾರ ಕೈ ಕೆಲಸ ಮಾಡಿ ಜಡ್ಡುಗಟ್ಟಿಲ್ಲವೋ ಅವರ ಊಟ ಆಮೇಲೆ. ಕೆಲಸ ಮಾಡಿದವರು ಊಟ ಮಾಡಿದನಂತರ ಸೋಮಾರಿಗಳ ಊಟ. ನನ್ನ ಹೆಂಡತಿ ನಿನಗೆ ಅದನ್ನೆ ಹೇಳಿದಳು. ಯೋಚನೆ ಬೇಡ- ಆಮೇಲಿನ ಸರದಿ ನಿನ್ನದೇ.

ಸೈತಾನ : ನೀವೆಲ್ಲ ಹಂದಿಗಳ ಹಾಗೆ ವಾಸ ಮಡುತ್ತಿದ್ದೀರಿ, ಮನುಷ್ಯರ ಥರ ಜೀವಿ ಸೋದು ಹ್ಯಾಗೆಂದು ನಿಮಗೆ ಗೊತ್ತೇ ಇಲ್ಲ.

ಬೋಳೇಶಂಕರ : ಹೌದ? ಯಾಕಯ್ಯಾ ಹಾಗಂದೆ?

ಸೈತಾನ : ಪ್ರತಿಯೊಬ್ಬನೂ ತನ್ನ ಕೈಯಿಂದಲೇ ಕೆಲಸ ಮಾಡಬೇಕಂತ ಕಾನೂನು ಮಾಡಿದ್ದು ಈ ನಿನ್ನ ಬೆಪ್ತಕ್ಕಡಿ ರಾಜ್ಯದಲ್ಲಿ ಮಾತ್ರ. ಜನ ಕೈಯಿಂದ ಮಾತ್ರ ಕೆಲಸ ಮಾಡಬೇಕೆ? ಬುದ್ಧಿವಂತರು ಯಾವುದರಿಂದ ಕೆಲಸ ಮಾಡ್ತಾರೇಂತ ನಿನಗೇ ನಾದರೂ ಗೊತ್ತಿದೆಯಾ?

ಬೋಳೇಶಂಕರ : ನಾವು ಬೆಪ್ತಕ್ಕಡಿಗಳು. ನಮಗೆ ಹ್ಯಾಗೆ ತಿಳೀಬೇಕು? ನಮ್ಮ ಬಹುಪಾಲಿನ ಕೆಲಸವನ್ನೆಲ್ಲಾ ಕೈಗಳಿಂದ, ಬೆನ್ನಿನಿಂದ ಮಾಡುತ್ತೇವೆ.

ಸೈತಾನ : ನೀವು ಬೆಪ್ತಕ್ಕಡಿಗಳಾಗಿರೋದೇ ಅದಕ್ಕೆ ಕಾರಣ. ಆದರೆ ತಲೆಯಿಂದ ಕೆಲಸ ಮಾಡುವುದು ಹೇಗೆಂದು ನಿಮಗೆ ಹೇಳಿಕೊಡುತ್ತೆನೆ. ಆಗ ನಿಮಗೆ ಗೊತ್ತಾಗುತ್ತದೆ – ಕೈಗಳಿಗಿಂತ ತಲೆಯಿಂದ ಕೆಲಸ ಮಾಡುವುದು ಹೆಚ್ಚು ಲಾಭಕರ ಎಂದು.

ಬೋಳೇಶಂಕರ : ಹಾಗಿದ್ದರೆ ನಾವು ಬೆಪ್ತಕ್ಕಡಿಗಳೆನ್ನುವುದು ನಿಜ ಅಂದಂತಾಯ್ತು.

ಸೈತಾನ : ಸಂದೇಹವೇನು? ಕೆಲಸ ಮಾಡಿ ನನ್ನ ಕೈ ಜಿಡ್ಡುಗಟ್ಟಿಲ್ಲವೆಂದು ನನ್ನನ್ನು ಊಟಕ್ಕೆ ಕರೆಸಲಿಲ್ಲ, ಅಲ್ಲವೆ? ಆದರೆ ತಲೆಯಿಂದ ಕೆಲಸ ಮಾಡುವುದು ಅದಕ್ಕಿಂತ ಹೆಚ್ಚು ಕಷ್ಟಕರವಾದದ್ದು. ಕೆಲವು ಸಲ ತಲೆ ಪೂರ್ತಿ ಸಿಡಿದೇ ಹೋಗಬಹುದು.

ಬೋಳೇಶಂಕರ : ಅದೇನೋ ಸರಿಯೇ. ಆದರೆ ಅದ್ಯಾಕಣ್ಣಾ ನಿನಗೆ ನೀನೇ ಅಷ್ಟು ಚಿತ್ರಹಿಂಸೆ ಕೊಟ್ಟುಕೊಳ್ಳುತ್ತೀಯಾ? ತಲೆ ಸಿಡಿದರೆ ಅದೇನು ಸಂತೋಷಕರವೇ? ಕೈ ಬೆರಳುಗಲೀಂದ ಎಷ್ಟು ಹೊತ್ತು ಕೆಲಸ ಮಾಡಿದರೂ ಅವು ಸಿಡಿಯುವುದಿಲ್ಲ ಗೊತ್ತ? ಹಾಗಿದ್ದಾಗ ಕೈಬೆರಳುಗಳನ್ನೇ ಯಾಕೆ ಉಪಯೋಗಿಸಬಾರದು?

ಸೈತಾನ : ತಲೆ ಸಿಡಿದರೂ ಪರವಾಗಿಲ್ಲ. ಬೆಪ್ಪುತಕ್ಕಡಿಗಳಾದ ನಿಮ್ಮ ಮೇಲಿನ ಮರುಕದಿಂದಲೇ ಅದನ್ನೆಲ್ಲಾ ನಾನು ಮಾಡುವುದು. ನಾನು ಅಷ್ಟು ಚಿತ್ರಹಿಂಸೆ ಕೊಟ್ಟಕೊಳ್ಳದಿದ್ದರೆ ನೀವು ಕೊನೆಯವರೆಗೂ ಬೆಪ್ತಕ್ಕಡಿಗಳಾಗೇ ಇರುತ್ತೀರಿ. ಆದರೆ ನಾನು ಸ್ವತಃ ತಲೆಯಿಂದ ಕೆಲಸ ಮಡುವ ಮೂಲಕ ನಿಮಗೆ ಕಲಿಸಿ ಕೊಡಬಲ್ಲೆ.

ಬೋಳೇಶಂಕರ : ಅಗತ್ಯವಾಗಿ ಕಲಿಸಿಕೊಡು ಮಾರಾಯಾ. ಛಳಿಗಾಲದಲ್ಲಿ ನಮ್ಮ ಕೈ ಸೆಟೆದು ಕೊಂಡಾಗ ಕೈಗೆ ಬದಲು ತಲೆಯಿಂದ ಕೆಲಸ ಮಾಡಬಹುದು. ಅಯ್ಯಾ ಕೋಡಂಗಿ, ನಮ್ಮ ರಾಜ್ಯಕ್ಕೊಬ್ಬ ದೊಡ್ಡ ಮನುಷ್ಯ ಬಂದಿದ್ದಾನೆ. ತಲೆಯಿಂದ ಕೆಲಸ ಮಾಡೋದನ್ನ ಕಲಿಸಿಕೊಡ್ತಾನೆ. ಜನ ಎಲ್ಲರೂ ಊರಾಚೆ ಎತ್ತರವಾದ ಗೋಪುರ ಇದೆಯಲ್ಲಾ, ಅಲ್ಲಿ ಸೇರಬೇಕೆಂದು ಡಂಗುರ ಸಾರು.

ಕೋಡಂಗಿ : ಆಗಲಿ.