(ಎತ್ತರವಾದ ಗೋಪುರದ ಮೇಲೆ ಸೈತಾನ ನಿಂತಿದ್ದಾನೆ. ಕೆಳಗೆ ಬೋಳೇಶಂಕರ, ರಾಜಕುಮಾರಿ ಮತ್ತು ಜನ)

ಸೈತಾನ : ನನ್ನ ಪ್ರೀತಿಯ ಬೆಪ್ತಕ್ಕಡಿಗಳೇ ಕೇಳಿ. ಮನುಷ್ಯ ಬರೀ ಕೈಯಿಂದಲೇ ಕೆಲಸ ಮಾಡಿ ಬದುಕಬೇಕಾದ್ದಿಲ್ಲ. ನಿಮಗೊಂದು ತಲೆ ಇದೆ-ಅನ್ನೋದನ್ನ ಮರೆಯ ಬೇಡಿ. ದುರ್ದೈವದ ಸಂಗತಿಯೆಂದರೆ ತಲೆ ಖಾಲೀ ಇಟ್ಟುಕೊಳ್ಳೋದೇ ನಿಮ್ಮಲ್ಲಿ ಫ್ಯಾಶನ್ನಾಗಿಬಿಟ್ಟಿದೆ.

ಒಬ್ಬ : ತಲೆಯಿಮದ ಕೆಲಸ ಮಾಡೋದೇನೋ ಸರಿ. ಹಾಗೆ ಕೆಲಸ ಮಾಡುತ್ತ ನಡೀ ಬೇಕಾದರೆ ಕಾಲಿನಿಂದ ನಡೀಬೇಕ? ತಲೆಯಿಮದ ನಡೀಬೇಕ?

ಇನ್ನೊಬ್ಬ : ಹ್ಯಾಗೂ ಆ ದೊಡ್ಡಮನುಷ್ಯ ತೋರಿಸೋನಿದ್ದಾನಲ್ಲವ? ನೋಡೋಣ ಇರು.

ಕೋಡಂಗಿ : ಇದು ತಲೆ ಅಂತ ನನಗೆ ಗೊತ್ತಿದೆಯಲ್ಲ, ಅದೇನೂ ಸಣ್ಣ ಸಾಧನೆ ಅಲ್ಲ. ಆದರೆ ಅದನ್ನು ಉಪಯೋಗಿಸಬೇಕು ಅಂತಾನಲ್ಲ ಅದು ಸಮಸ್ಯೆ.

ಮತ್ತೋಬ್ಬ : ನನ್ನ ಹತ್ತಿರ ಕೈ ಇದೆ, ಉಪಯೋಗಿಸ್ತೀನಿ. ಆ ದೊಡ್ಡ ಮನುಷ್ಯನ ಹತ್ತಿರ ತಲೆ ಇದೆ ಉಪಯೋಗಿಸ್ತಾನೆ. ಇದರಲ್ಲಿ ಭಿನ್ನಾಭಿಪ್ರಾಯ ಯಾಕೆ ಬರಬೇಕು?

ಸೈತಾನ : ಕೆಳಗೆ ಯಾಕೆ ಗಲಾಟೆ ಮಾಡ್ತಿದ್ದೀರಿ?

ಕೋಡಂಗಿ : ಗಲಾಟೆ ಅಲ್ಲ. ನಮ್ಮ ನಮ್ಮ ಅಭಿಪ್ರಯ ಹೇಳ್ತಾ ಇದ್ದೀವಿ. ನಾಲ್ಕು ಜನ ಅಂದಮೇಲೆ ಭಿನ್ನಾಭಿಪ್ರಾಯ ಇರಬಹುದಲ್ಲ?

ಸೈತಾನ : ಅದನ್ನ ಆಮೇಲೆ ವಿನಿಯೋಗಿಸಿಕೊಳ್ಳಿ. ಮೊದಲು ಲಕ್ಷವಿಟ್ಟು ನನ್ನ ಮಾತು ಕೇಳಿ. ಹತ್ತು ಚೀಲ ಜೋಳ ಅಂದರೆ ಇಬ್ಬರು ರೈತರ ಆರು ತಿಂಗಳ ಶ್ರಮ ಅಲ್ಲವೆ? ತಲೆಯ ಉಪಯೋಗ ಇರೋದೇ ಇಲ್ಲಿ. ನೀವು ನಾಣ್ಯಗಳನ್ನ ಬಳಕೆಗೆ ತಂದರೆ ಹತ್ತು ಚೀಲ ಧಾನ್ಯವನ್ನ ಕೈಬೆರಳೆಣಿಕೆಯಷ್ಟು ನಾಣ್ಯವಾಗಿ ಪರಿವರ್ತಿಸಬಹುದು. ಆ ನಾಣ್ಯಗಳನ್ನ ಚಲಾವಣೆಗೆ ತಂದರೆ ಬೊಗಸೆಯಷ್ಟು ನಾಣ್ಯದಲ್ಲಿ ಸಾವಿರ ಜನರ ಒಂದು ವರ್ಷದ ಶ್ರಮ ಕೊಳ್ಳಬಹುದು. ಶ್ರಮವನ್ನು ಅಗ್ಗವಾಗಿ ಕೊಳ್ಳುವ ಹಾಗೂ ಮಾರುವ ಫ್ಯಾಕ್ಟರಿಗಳನ್ನ ಮಾಡಿ ಜನಕೋಟಿಯನ್ನ ಕೈಯಲ್ಲಿಟ್ಟುಕೊಳ್ಲಬಹುದು. ಇದೆಲ್ಲ ನೀವು ನಿಮ್ಮ ತಲೆಯಲ್ಲಿಯ ಬುದ್ಧಿ ಉಪಯೋಗಿಸೋದರಿಂದ ಸಾಧ್ಯ.

ಮಗುದೊಬ್ಬ : ನಮ್ಮ ಬೋಳೇಶಂಕರ ಮಹಾರಾಜರು ಹೇಳೋದೇನು? ಕೈಯಿಂದ ಕೆಲಸ ಮಾಡೋದರಿಂದ ಬುದ್ಧಿ ಬರತ್ತದೆ, ಬೆವರೂ ಬರತ್ತದೆ. ಬೆವರು ಒರೆಸಿಕೊಮಡು ಬುದ್ಧಿ ಕಲಿಯೋನು ಜಾಣ ಅಂತ ಅಲ್ಲವ? ಅವರ ಮಾತು ತಿಳಿದ ಹಾಗೆ ಈ ದೊಡ್ಡ ಮನುಷ್ಯನ ಮಾತು ತಿಳಿಯೋದಿಲ್ಲವಲ್ಲ, ಯಾಕಿದ್ದೀತು?

ಕೋಡಂಗಿ : ಯಾಕೆಂದರೆ ನಿನಗೆ ತಲೆ ಇದೆ; ಆದರೇನೂ ತಿಳಿಯೋದಿಲ್ಲ ಅದಕ್ಕೆ.

ಒಬ್ಬ : ಈ ದೊಡ್ಡ ಮನುಷ್ಯ ತಲೆಯಿಂದ ಕೆಲಸ ಮಾಡೋದಕ್ಕೆ ಇನ್ನೂ ಸುರು ಮಾಡಿಲ್ಲವೆ?

ಮತ್ತೋಬ್ಬ : ಇನ್ನೂ ಇಲ್ಲ. ಅವನಿನ್ನೂ ಮಾತು ಸುರಿಸುತ್ತಿದ್ದಾನೆ.

ಸೈತಾನ : ಬೆಪ್ತಕ್ಕಡಿ ಬಂಧುಗಳೇ, ನನ್ನ ಮಾತುಗಳನ್ನ ಕೇಳಿ. ನಗರದ ಸುಖಗಳಿಂದ ನೀವೆಲ್ಲ ವಂಚಿತರಾಗಿದ್ದೀರಿ. ನೀವು ಒಮ್ಮೆ ತಲೆಯ ಬೆಲೆ ತಿಳಿದಿರಾದರೆ ದಸ್ವರ್ಗದ ಸುಖಗಳನ್ನ ಸೂರೆ ಮಾಡುವ ಸಿಟಿ ಕಟ್ಟಬಹುದು. ಸುಖಗಳ ಸಂಖ್ಯೆ ಹಾಗೂ ದಾಹಗಳನ್ನು ದಿನದಿನಕ್ಕೆ ಹೆಚ್ಚಿಸುವ ಸಿಟಿ ಕಟ್ಟಬಹುದು. ಶ್ರಮವನ್ನೇ ವಿನಿಯೋಗಿಸೋದು ಅಂದರೆ ನಾಗರಿಕತೆಯನ್ನು ಆದಿಮ ಸ್ಥಿತಿಗೆ ಒಯ್ಯೋದು. ಬಂಧುಗಳೇ ಚರಿತ್ರೆ ಮುಂದೆ ಮುಂದೆ ಹೋಗುತ್ತದೆ; ಹಿಂದೆ ಹಿಂದಲ್ಲ. ನಿಮ್ಮ ಬೆಪ್ತಕ್ಕಡಿ ರಾಜನಿಗೆ ತಲೆ ಇಲ್ಲವಾದುದರಿಂದ ಇವೆಲ್ಲ ಮಾತು ತಿಳಿಯುವುದಿಲ್ಲ. ತನಗಿಲ್ಲದ ತಲೆ ನಿಮಗೂ ಇರದ ಹಾಗೆ ಮಾಡಿದ್ದು ಅವನ ವಿಶೇಷ ಸಾಧನೆ. ಆದರೆ ನೀವು ಜಾಣರಾಗಬೇಕು. ನನ್ನ ಮಾತು ತಿಳಿಯುತ್ತಿವೆಯ?

ಮತ್ತೋಬ್ಬ : ತಿಳಿಯುತ್ತಿವೆ. ಆದರೆ ನೀವು ತಲೆಯಿಂದ ಕೆಲಸ ಸುರು ಮಾಡೋದು ಯಾವಾಗ?

ಒಬ್ಬ : ಮಾತು ನಿಲ್ಲಿಸಿ ಬೇಗ ಕೆಲಸ ಸುರು ಮಾಡಿ. ನಾವು ನಿಂತು ಬಹಳ ಹೊತ್ತಾಯಿತು. ನಾನಿನ್ನೂ ದನಕ್ಕೆ ನೀರು ಕುಡಿಸಬೇಕು.

ಸೈತಾನ : ಬಂಧುಗಳೆ ನನ್ನ ಮಾತನ್ನು ಕೇಳಿ. ತಾರಾಸಮರದಿಂದ ಮಾನವ ಕೋಟಿಯನ್ನು ಗುಲಾಮರನ್ನಾಗಿಸುವ ಸುಖ ಬೇಕೆ? ಅಂತರಿಕ್ಷದಲ್ಲಿ ತಾರಾನಿವಹಗಳ ಗೂಢ ವರಿಯುತ್ತ ಅಲ್ಲಿಂದಲ್ಲೇ ಇಲ್ಲಿಯ ಇಡೀಮಾನವ ಕುಲ ನಿಮ್ಮ ದಯದಲ್ಲಿ ಬಹುಕುವ ಹಾಗೆ ಮಾಡಬೇಕೆ? ಕೂತಲ್ಲೇ ಬಟನ್ನೊತ್ತಿ ಜಗತ್ತನ್ನು ನಾಶ ಮಾಡಿಸುವ ಇಲ್ಲವೆ ನಿಯಂತ್ರಿಸುವ ಸಾಮರ್ಥ್ಯ ಬೇಕೆ? ಹಾಗಿದ್ದರೆ ಈಗಿ ನಿಂದಲೇ ತಲೆಯನ್ನು ಉಪಯೋಗಿಸುವ ವಿದ್ಯೆ ಕಲಿತುಕೊಳ್ಳಿ.

ಮತ್ತೋಬ್ಬ : ನೀನು ಹೇಳಿಕೊಟ್ಟರೆ ತಾನೆ? ಬರೀ ಭಾಷಣ ಮಾಡುತ್ತಿದ್ದೀಯಪ್ಪ. ನಿನ್ನ ತಲೆ ಕೆಲಸ ನೋಡಿ ನಾನಿನ್ನೂ ಹೊಲಕ್ಕೆ ಹೋಗಬೇಕು. ಬೇಗ ಹೇಳಕೊಡ ಬಾರದೆ?

ಒಬ್ಬ : ತಲೆಯಿಂದ ಕೆಲಸ ಮಾಡೋದಕ್ಕೆ ಮುಂಚೆ ಹೀಗೆ ಭಾಷಣ ಮಾಡಬೇಕೋ ಏನೊ.

ಸೈತಾನ : ನಿಮಗೆ ಹ್ಯಾಗೆ ತಿಳಿಸಿ ಹೇಳಲಿ?

ಮತ್ತೋಬ್ಬ : ನಮಗೆಲ್ಲ ತಿಳಿದಿದೆ. ಈಗ ತಲೆಯಿಂದ ಕೆಲಸ ಮಾಡೋದನ್ನ ತೋರಿಸಪ್ಪ ಅಂದೆ.

ಸೈತಾನ : ನಿಮಗೆ ಹೇಳಿಹೇಳಿ ನನ್ನ ತಲೆ ಖಾಲಿ ಆಯಿತಷ್ಟೆ.

ಬೋಳೇಶಂಕರ : ಕೆಲಸಾನೇ ಸುರು ಮಾಡಿಲ್ಲವಲ್ಲ ಮಾರಾಯಾ.

ಸೈತಾನ : ನಿಮಗೆ ಹೇಳಬಹುದು ಅಂತ ಅಂದುಕೊಂಡೆನಲ್ಲ, ನನ್ನ ಮೂರ್ಖತನಕ್ಕೆ ಮಿತಿ ಇದೆಯೆ?

ಕೋಡಂಗಿ : ಅದು ಕೂಡ ನಿನಗೇ ಗೊತ್ತು.

ಸೈತಾನ : ಅಯ್ಯಾ ಅಯ್ಯಾ ಬೆಪ್ತಕ್ಕಡಿಗಳಾ…. (ತಲೆತಲೆ ಚಚ್ಚಿಕೊಳ್ಳುವನು)

ಕೋಡಂಗಿ : ಅಗೋ ನೋಡಿ ತಲೆಯಿಂದ ಕೆಲಸ ಮಾಡೋದಕ್ಕೆ ಶುರು ಮಾಡಿದ !

ಒಬ್ಬ : ಅಗೋ ಅವನ ತಲೆಯಿಂದ ನೆತ್ತರು ಸೋರುತ್ತಿದೆ!

ಬೋಳೇಶಂಕರ : ಅಯ್ಯಾ ಗೆಳೆಯಾ, ಯಾಕಿಷ್ಟು ಚಿತ್ರಹಿಂಸೆ ಮಾಡಿಕೊಳ್ಳುತ್ತೀಯ? ತಲೆಯಿಂದ ಕೆಲಸ ಮಾಡೋದು ಹೀಗೆ ತಾನೆ? ಗೊತ್ತಾಯ್ತು ಬಿಡು. ಇಂಥ ಭಯಂಕರ ವಿದ್ಯೆ ಹೇಳಿಕೊಟ್ಟದ್ದಕ್ಕಾಗಿ ನಿನಗೆ ವಂದನೆಗಳು. ಹೇಳಿಕೊಟ್ಟ ಮಾತ್ರಕ್ಕೆ ನಾವು ತಲೆಯಿಂದ ಕೆಲಸ ಮಾಡಲೇಬೇಕಂತ ಕಡ್ಡಾಯವೇನಿಲ್ಲವಲ್ಲ! ಶಿವ ನಿನಗೆ ಒಳ್ಳೇದ್ಮಾಡಲಿ.

ಸೈತಾನ : ಏನಂದೆ?

ಬೋಳೇಶಂಕರ : ಶಿವ ನಿನಗೆ ಒಳ್ಳೇದ್ಮಾಡಲಿ ಅಂದೆ.

ಸೈತಾನ : ಥೂ ಚಂಡಾಲ ಎಂಥಾ ಮಾತನ್ನಾಡಿದೆ….

ಕೋಡಂಗಿ : ಅಗೋ ಮಿತ್ರಾ, ಅಲ್ಲಿ ನೋಡು ನೆತ್ತರಾಡುವ ಅವನ ಮುಖದಲ್ಲಿ ಕೋರೆ ಹಲ್ಲು ಕೊಂಬು ಮೂಡುತ್ತಿವೆ!

ಬೋಳೇಶಂಕರ : ಇವನು ಹಿಂದಿನ ಪಿಶಾಚಿಗಳು ತಂದೆ ಅಲ್ಲವೇನಯ್ಯಾ?

ಕೋಡಂಗಿ : ಹೌದು! ಶಿವಶಿವ ಶಂಕರ, ಬೋಳೇಶಂಕರ ಬೋಂ ಭೊಂ ಶಂಕರ.

ಜನ : ಬೊಂ ಭೊಂ ಶಂಕರ ಬೋಳೇಶಂಕರ.

ಸೈತಾನ : (ತಿರುಗಿ ತಿರುಗಿ) ನಿಲ್ಲಿಸ್ರೋ ನಿಲ್ಲಿಸ್ರೋ. (ಕಿರುಚುತ್ತಲೇ ಅಲ್ಲಿಂದ ನೆಲಕ್ಕೆ ಬೀಳುವನು)

ಬೋಳೇಶಂಕರ : ನೋಡಿದಿರಾ ಬಂಧುಗಳೇ, ತಲೆಯಿಂದ ಕೆಲಸ ಮಾಡಬಹುದು ಅನ್ನೋದನ್ನ ಈ ಮನುಷ್ಯ ತೋರಿದ್ದೇನೋ ಸರಿಯೇ. ಆದರೆ ತಲೆಯಿಂದ ಕೆಲಸ ಮಾಡಿದರೆ- ನೀವೇ ನೋಡಿದರಲ್ಲ-ತಲೆ ಸಿಡಿಯುತ್ತದೆ. ಆದ್ದರಿಂದ ನಾವು ಮೊದಲಿನ ಹಾಗೆ ಕೈ ಮತ್ತು ಬೆನ್ನುಗಲಿಂದ ಕೆಲಸ ಮಾಡೋದೇ ವಸಿ.

ಒಬ್ಬ : ಇದರಲ್ಲಿ ಅನುಮಾನವೇ ಇಲ್ಲ. ನಿಮ್ಮ ತಕರಾರಿಲ್ಲವಾದರೆ ನೀವು ಸೈನಿಕರಿಗೆ ಕಲಿಸಿದ ನಮ್ಮೂರಿನ ಹಾಡು ಹೇಳಬಹುದೊ?

ಬೋಳೇಶಂಕರ : ಆಗಲೇಳಿ, ಅದಕ್ಕೇನಂತೆ

ಇನ್ನೊಬ್ಬ : ಅಲ್ಲಿ ಇಬ್ಬರು ನಿಂತಿದ್ದಾರೆಲ್ಲ ಈ ಕಡೆ ಬೆನ್ನು ತಿರುಗಿಸಿ. ಅವರನ್ನೂ ಸೇರಿಸಿ ಕೊಳ್ಳೋಣವೆ?

ಬೋಳೇಶಂಕರ : ಯಾರವರು?

ಕೋಡಂಗಿ : ರಾಜ್ಯ ಕಳೆದುಕೊಂಡ ನಿನ್ನ ಅಣ್ಣಂದಿರು. ನಿಮ್ಮೂರಿಗೆ ಬರೋಣವೇ ಅಂತ ಕೇಳುತ್ತಿದ್ದಾರೆ.

ಬೋಳೇಶಂಕರ : ಆಗಲೇಳಿ. ಅವರು ನಮ್ಮೊಟ್ಟಿಗಿರಲಿ. ಎಲ್ಲರೂ ಕೂಡಿ ಹಾಡೋಣ. ಎಲ್ಲಿ ಹಡು ಸುರು ಮಾಡಿ.

ಎಲ್ಲರು : ಜಯ ಜಯಾ ಶಿವಪೂರಗೆ
ಹಸಿರಿನ ತವರೂರಿಗೆ
ಹಾಡು ಬೆಳೆವ ಕಾಡಿಗೆ
ನಮ್ಮ ಛಳಿಗೆ ಬಿಸಿಯಾಗುವ
ಯೌವನವನು ಕಾಪಾಡುವ
ಮುಳ್ಳಿನಲ್ಲು ಹೂಹೂಗಳ
ನಗೆಯ ನಗುವ ಸೀಮೆಗೆ
ಜಯ ಜಯ ಶಿವಪೂರಿಗೆ

ಆಳದಲ್ಲಿ ಲಾವಣಿಗಳನುಳ್ಳ
ನದಿಯ ಊರಿಗೆ
ನೀರಿಗಿಂತ ಆಲವಾದ
ಒಲವ ಬಲ್ಲ ಸೀಮೆಗೆ.
ಹಕ್ಕಿಯ ಸಖಿಗೀತಗಳಿಗೆ
ರಾಗ ತಾಳ ಹಾಕಿ ಕುಣಿವ
ಎಳೆಯರಿರುವ ಊರಿಗೆ.
ಸುಕ್ಕಿನ ಗೆರೆ ಸಾಣೆ ಹಿಡಿವ
ಜಾಣ ಮುದುಕರೂರಿಗೆ
ಋತುಮಾನದ ಪೈರು ಬೆಳೆವ
ದಂಟಿಗೆಂಟು ತೆನೆಗಳಿರುವ

ತೆನೆಗೆ ಒಂದು ಹಾಡುವಂಥ
ಹಕ್ಕಿಯಿರುವ ಊರಿಗೆ.
ಜಯ ಜಯ ಶಿವಪೂರಿಗೆ