(ಭಾಗವತರಿಗೆ ಅಣಕಿಸಿ ಹಾಡುತ್ತ ಕುಣಿಯುತ್ತ ಪಿಶಾಚಿಯ ಪ್ರವೇಶ)

ಪಿಶಾಚಿ ೧ : ನಗಬೇಕೋ ತಮ್ಮಾ ನಗಬೇಕೊ ||
ಬೆರಳು ಕಣ್ಣಿಗೆ ಚುಚ್ಚಿ ಕಣ್ಣಿನ ಕನಸಿಗೆ
ಗಾಯವಾದುದ ನೋಡಿ ನಗಬೇಕೊ |
ನಕ್ಕರೆ ಕಟ್ಟಿಸಿದ ಚಿನ್ನದ ಹಲ್ಲುಗಳು
ಸಟ್ಟನೆ ಇಡಿದು ಬಿದ್ದಿರಬೇಕೊ ||
ನಮಸ್ಕಾರ. ನಮ್ಮ ಪರಿಚಯ ಮಾಡಿಕೊಡೋದಕ್ಕೆ ಭಾಗವತರು ಹೆದರುತ್ತಾರಾದ್ದರಿಂದ ನನ್ನ ಬಗ್ಗೆ ನಾನೇ ಹೇಳಿಕೊಳ್ಳುತ್ತೇನೆ. ನಾನು ಪಿಶಾಚಿ. ಸೈತಾನನ ಪರಿವಾರದಲ್ಲಿದ್ದವನು. ಸೈತಾನನ ಬಲಭುಜವೋ ಎಡಭುಜವೋ ಅಂತ ಹೇಳಿಕೊಳ್ಳಲಾರೆ. ಆದರೆ ಖಂಡಿತ ಸೈತಾನನ ಕೈ ಬೆರಳಿಗೋ ಕಾಲ್ಬೆರಳಿಗೋ ಸಮನಾಗಬಲ್ಲ ಶಕ್ತಿ ಇದ್ದವನು. ಹೇಳಿಕೊಳ್ಳುವಷ್ಟು ದುಷ್ಟತನ ನನ್ನಲ್ಲಿಲ್ಲ. ಅದಕ್ಕೇ ಸೈತಾನ ದೊರೆ ಮೊದಲೇಟಿಗೆ ನನಗನ ನಂಬೋದೇ ಇಲ್ಲ. ಬೇರೆ ಪಿಶಾಚಿಗಳು ನಿಮ್ಮ ಆನಂದದಲ್ಲಿ ವಿಷ ಬೆರಸಿ ಹುಲಿ ಸಿಂಹ, ದುರ್ದೈವ, ಸೋಲುಗಳಾಗಿ ನಿಮ್ಮನ್ನ ಕಾಡುತ್ತಾರೆ. ನಾನಂಥಾ ಶಕ್ತಿವಂತನಲ್ಲವಾದ್ದರಿಂದ ನೊಣವೋ ಸೊಳ್ಳೆಯೋ ಆಗಿ, ನಿಮ್ಮ ನೆಮ್ಮದಿಯನ್ನು ಕೆಡಿಸಿ, ಕೊನೇಪಕ್ಷ ನಿಮಗೊಂದು ಅಂಟುರೋಗ ಅಂಟಿಸಿ ಜನ್ಮ ಸಾರ್ಥಕ ಮಾಡಿಕೊಳ್ಳೋ ಪೈಕಿ ನಾನು.
ಹೊಲಸು ನಾಲಗೆಯಿಂದ ಹೇಳುತ್ತಿದ್ದೇನೆ ಅಂತ ಹೇಸಿಕೋಬೇಡಿ; ನೀವೆಲ್ಲ ದೊಡ್ಡ ಮನುಷ್ಯರೆ. ನಿಮಗೆ ದೌರ್ಬಲ್ಯಗಳಿವೆ. ಅವುಗಳ ಒಳಗಿನಿಂದ ನಾವು ಪಿಶಾಚಿಗಳು ನಿಮ್ಮನ್ನ ಪ್ರವೇಶಿಸುತ್ತೇವೆ. ಒಮ್ಮೆ ಒಳಕ್ಕಿಳಿದರಾಯ್ತು. ನಿಧಾನವಾಗಿ ದಿನಾ ಇಷ್ಟಿಷ್ಟೆ ಹಬ್ಬುತ್ತೇವೆ. ಮುಂದೊಂದು ದಿನ ಕಿಡಿ ತಾಗಿದರೆ ಮದ್ದಿನ ಭಂಡಾರವಾಗಿ ಸಿಡಿಯುತ್ತೇವೆ. ಇಲ್ಲವೆ ದಿನಾ ಇಷ್ಟಿಷ್ಟೆ ಏಡ್ಸ್ ರೋಗವಾಗಿ ಕೊಲ್ಲುತ್ತೇವೆ.
ಸೈತಾನದೊರೆ-ಆಗಲೇ ನೀವು ನೋಡಿದಿರಲ್ಲ ಬೋಳೇಶಂಕರ ಮತ್ತವನ ಅನ್ನಂದಿರಲ್ಲಿ ವಿರಸ ಹುಟ್ಟಿಸಿ ಮೂವರನ್ನೂ ನರಕಕ್ಕೆ ಕರೆದು ತನ್ನಿ ಅಂತ ನಾವು ಮೂವರನ್ನ ಭೂಲೋಕಕ್ಕೆ ಕಳಿಸಿದ್ದಾರೆ. ಬೋಳೇಶಂಕರನ ಅಣ್ಣಂದಿರೇ ವಾಸಿ. ಕೊಳೆತ ಬಲೆಹಾಕಿ ಎಳೆದರೂ ಬರುವಂಥವರು. ನನ್ನ ಅಣ್ಣಂದಿರು ತಲೆ ತುರಿಸಿಕೊಳ್ಳುವ ಮೊದಲೇ ಇವರು ವಶರಾಗಿದ್ದರು. ನನ್ನ ಅಣ್ಣಂದಿರು ಅವರ ಹಿಂದೆ ನಿಲ್ಲುವುದಷ್ಟೇ ತಡ, ನೀವೇ ನೋಡಿದಿರಲ್ಲ ಬೆಟ್ಟದ ತುದಿಯಿಂದ ನೆಗೆದು ಬೀಳೊದಕ್ಕೆ ಹ್ಯಾಗೆ ಚಡಪಡಿಸುತ್ತಿದ್ದರು ಅಂತ. ನನ್ನ ಗಿರಾಕಿ ಇದ್ದಾನಲ್ಲ ಬೆಪ್ತಕ್ಕಡಿ ಬೋಳೇಶಂಕರ, ಮಹಾ ಪಾಕಡಾ. ಆಸ್ತಿ ಭಾಗ ಮಾಡಿಕೊಡೋವಾಗ ಅಣ್ಣತಮ್ಮಂದಿರು ಜಗಳಾಡಿ ಕಣ್ಣು ಕಿವಿ ಕಿತ್ತಾಡುತ್ತಾರೆ ಅಂತ ಅಂದುಕೊಂಡಿದ್ದೆವು. ಈ ಬೆಪ್ತಕ್ಕಡಿ ಅವರು ಕೇಳಿದ್ದನ್ನೆಲ್ಲಾ ಕೊಟ್ಟು ಬಿಟ್ಟನೇ! ಇವನ ಪಂಚೇಂದ್ರಿಯಗಳೋ ಎಲ್ಲರಿಗಿಂತ ಚುರುಕು. ಇವನ ಅಣ್ಣಂದಿರ ಹಿಂದೆ ನನ್ನ ಅಣ್ಣಂದಿರು ಗಾಳಿಯಾಗಿ ನಿಂತಿದ್ದರೆ ಪತ್ತೆ ಮಾಡಿ ಹೇಳಿಯೇ ಬಿಟ್ಟನೆ! ಪಿಶಾಚಿಯಾಗಿ ಇಷ್ಟು ವರ್ಷ ಸರ್ವೀಸಾಯ್ತು, ನನ್ನ ಅನುಭವಕ್ಕೆ ಮಸಿ ಬಳಿಯುವಂಥ ಇಂಥ ಪಾಕಡಾನ್ನ ನಾನಿನ್ನೂ ನೋಡಿರಲಿಲ್ಲವೇ! ಮಾತಿಗೊಮ್ಮೆ ನಾವು ಕೇಳಬಾರದ ಹೆಸರು ಹೇಳೋದೇನು…. ತಂತಾನೇ ಮಾತಾಡಿಕೊಳ್ಳೋದೇನು…. ಅಬ್ಬ…. ಇದೀಗ ಅವನು ಮರದ ನೆರಳಲ್ಲಿಟ್ಟ ರೊಟ್ಟಿ ಕದೀತೀನಿ. ಹಸಿದು ಬಂದು ರೊಟ್ಟಿ ಯಾರು ಕದ್ದರು ಅಂತ ವಾಚಾಮಗೋಚರ ಬೈದಾಡತಾನೆ. ಅಷ್ಟಾದರೆ ಅವನ ಮನಸ್ಸನ್ನು ಅದೇ ಮಾರ್ಗವಾಗಿ  ಪ್ರವೇಶಿಸಿಬಹುದು.
(ರೊಟ್ಟಿ ಕದ್ದು ಅದೃಶ್ಯವಾಗಿ ನಿಲ್ಲುವನು. ಬೋಳೇಶಂಕರ ಹಸಿದು ಉಳೋದನ್ನ ನಿಲ್ಲಿಸಿ ರೊಟ್ಟಿ ಹುಡುಕುವನು.)

ಬೋಳೇಶಂಕರ : ರೊಟ್ಟಿ ಇತ್ತಲ್ಲ! ಹಸಿದವರ್ಯಾರೋ ತಗಂಡು ತಿಂದಿರಬೇಕು. ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ. ಉಳಿದ ಕೆಲಸ ಬೇಗನೆ ಮುಗಿಸಿ ಹೋಗಿ ಉಂಡರಾಯ್ತು.
(ಕೆಲಸಕ್ಕೆ ಹೋಗುತ್ತಾನೆ)

ಪಿಶಾಚಿ ೧ : (ಕಾಣಿಸಿಕೊಂಡು) ಎಲಾ ಅಯೋಗ್ಯ! ಹಸಿದರೂ ಇವನಿಗೆ ಕೋಪ ಬರಲಿಲ್ಲವೆ? ಆಗಲಿ ಬಾಯಾರಿಕೆಗೆ ಈ ವಿಶೇಷ ಪಾನಕ ಕೊಡ್ತೀನಿ. ಕುಡಿದು ಪ್ರಾಣಿಗಳ ಹಾಗೆ ಒದರಾಡುತ್ತ ಉರುಳಾಡೋದನ್ನ ನೋಡಿ ಸಂತೋಷಪಡ್ತೀನಿ.
(ಬೋಳೇಶಂಕರನ ಮುಂದೆ ಪಾನಕ ಇಡುವದು. ಬೋಳೇಶಂಕರ ಬಂದು)

ಬೋಳೇಶಂಕರ : ತುಸು ನೀರಾದರೂ ಕುಡಿಯೋಣ.
(ಶಿವ ಎನ್ನುತ್ತ ಪಿಶಾಚಿ ಇಟ್ಟ ಪಾನಕ ಕುಡಿಯುವನು. ಹೊಟ್ಟೆ ನೋವಾಗಿ ಹಿಡಿದುಕೊಳ್ಳವನು. ಇದನ್ನು ಕಂಡು ಪಿಶಾಚಿಗೆ ಸಂತೋಷವಾಗುತ್ತದೆ. ಬೋಳೇಶಂಕರ ತನಗೇನೂ ಆಗಿಲ್ಲವೆಂಬಂತೆ ಪುನಃ ಕೆಲಸಕ್ಕೆ ಹೋಗುವನು)

ಪಿಶಾಚಿ ೧: ಎಲಾ ಇವನ! ತನ್ನ ಪಾಡಿಗೆ ತಾನು ಪುನಃ ಕೆಲಸಕ್ಕೆ ತೊಡಗಿದನೆ! ಒಂದು ತೊಟ್ಟು ಪಾನಕ ಅಂದರೇ ಒಂದು ನರಕ ಇದ್ದ ಹಾಗೆ. ಅಂಥಾದ್ದರಲ್ಲಿ ಪಾತ್ರೆ ತುಂಬ ಪಾನಕ ಕುಡಿದು ಸುಮ್ಮನೆ ಕೆಲಸ ಮಾಡುತ್ತಿದ್ದಾನೆ!
(ಮನುಷ್ಯರಂತೆ ವೇಷ ಬದಲಿಸಿ ಬೋಳೇಶಂಕರನ ಮುಂದೆ ಹೋಗಿ ನಿಲ್ಲುತ್ತದೆ.)

ಪಿಶಾಚಿ ೧ : ನಮಸ್ಕಾರಣ್ಣಾ,

ಬೋಳೇಶಂಕರ : ಶರಣು ಶರಣಾರ್ಥಿ.

ಪಿಶಾಚಿ ೧ : ಏನಣ್ಣಾ ಬೋಳೇಶಂಕರಾ, ದುಡಿದೂ ದುಡಿದೂ ದಣಿದಿದ್ದೀಯಾ, ಒಂದಾಟ ಎರಡು ಎರಡು ಸೇರಿ ಐದಾಗೋ ಆಟ ಆಡೋಣವ?

ಬೋಳೇಶಂಕರ : ಎರಡು ಎರಡು ಸೇರಿ ನಾಲಕ್ಕಾಗಬೇಕು. ಐದಾಗೋದು ಅಂದರೆ…. ನೀನೇನು ಕೆಲಸ ಮಾಡ್ತೀಯ?

ಪಿಶಾಚಿ ೧ : ಕೆಲಸ ಯಾಕೆ ಮಾಡಬೇಕು? ಎರಡು ಎರಡು ಸೇರಿ ಐದೋ ಆರೋ ಆಗೋದಾದರೆ ಕ್ಷಣದಲ್ಲಿ ಎಂಟೋ ಹತ್ತೋ ಗಿಟ್ಟತ್ತೆ ಸಾಲದಾ?

ಬೋಳೇಶಂಕರ : ಹಾಗಾದರೆ ನೀನು ಸಿಟಿಗಳಲ್ಲಿ ರಸ್ತೆ ಪಕ್ಕ ಕೂತು ಇಸ್ಟೀಟೆಲೆ ಹಾಕ್ತಾರಲ್ಲ ಆ ಪೈಕೀನ?

ಪಿಶಾಚಿ ೧ : ಯಾಕಣ್ಣಾ ಹಿಂಗಂತೀಯಾ?

ಬೋಳೇಶಂಕರ : ಯಾಕೆಂದರೆ ನಿನ್ನ ಕೂಡೋ ಆಟ ಅಂಥದ್ದು ಅದಕ್ಕೆ.

ಪಿಶಾಚಿ ೧ : ಬೇಡ ಬಿಡು; ಕಳೆಯೋ ಆಟ ಆಟೋಣವ? ನೋಡಣ್ಣಾ ನಿನ್ನ ಹತ್ತಿರ ಹತ್ತು ರೂಪಾಯಿದೆ. ಐದನ್ನ ನನಕ್ಕೊಟ್ಟರೆ ಎಷ್ಟುಳೀತು ಹೇಳು ನೋಡೋಣ?

ಬೋಳೇಶಂಕರ : ಹತ್ತು. ಹ್ಯಾಂಗಂದರೆ ನಾನು ನಿನಗೆ ಐದು ರೂಪಾಯಿ ಕೊಡೋದಿಲ್ಲ.

ಪಿಶಾಚಿ ೧ : ಕೊಡದಿದ್ದರೆ ನಾನು ಬಂದು ಕದೀತೀನಿ.

ಬೋಳೇಶಂಕರ : ಕದ್ದರೆ ಕೈ ಮುರೀತೀನಿ.

ಪಿಶಾಚಿ ೧ : ಏನಂದೆ?

ಬೋಳೇಶಂಕರ : ಇಲ್ಲಿಂದ ತೊಲಗದಿದ್ದರೆ ಕಾಲು ಮುರೀತೀನಿ. ನಾನೇನಾದರೂ ರಾಜನಾದರೆ ನಿಮ್ಮಂಥ ಸೋಂಬೇರಿಗಳಿಗೆ ಊಟ ಹಾಕೋದೇ ಇಲ್ಲ. ನಿಮ್ಮಂಥ ನರ ಭಕ್ಷಕರು ಇರೋ ದೇಶವನ್ನ ಆ ಶಿವನೇ ಕಾಪಾಡಬೇಕು.
(ಪಿಶಾಚಿ ಅಯ್ಯಯ್ಯೋ ಎಂದು ಕಿವಿಮುಚ್ಚಿಕೊಂಡು ಓಡುತ್ತದೆ.)